ಅನುಬಂಧ : ಕನ್ನಡ ಭಾಷೆಯ ಪ್ರಾಚೀನತೆ

ಕನ್ನಡ ಮತ್ತು ಕರ್ನಾಟಕ : ಇಂದು ಕನ್ನಡ ಮತ್ತು ಕರ್ನಾಟಕ ಶಬ್ದಗಳನ್ನು ನಿರ್ದಿಷ್ಠ ಅರ್ಥದಲ್ಲಿ ಬಳಸಲಾಗುತ್ತಿದೆ. ಹಿಂದೆ ಈ ಶಬ್ದಗಳು ಭಾಷೆ, ಜನಾಂಗ ಅಥವಾ ಜನಪದ ಮತ್ತು ಪ್ರದೇಶವನ್ನು ಸೂಚಿಸುತ್ತಿದ್ದುವು. ಕವಿರಾಜಮಾರ್ಗಕಾರನೇ ಕನ್ನಡ ಶಬ್ದವನ್ನು ಭಾಷೆ ಹಾಗೂ ಪ್ರದೇಶವಾಚಿಯಾಗಿ ಬಳಸಿದ್ದಾನೆ. ‘ಪೞಗನ್ನಡ’, ಎಂದಾಗ ಭಾಷೆಯನ್ನು ಕುರಿತುದಾಗಿದೆ. ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್‌‌‌‌‌ಭಾವಿಸಿದ ಜನಪದಂ’, ‘ಒಕ್ಕುಂದದ ನಡುವಣ ನಾಡೆ ಕನ್ನಡದ ತಿರುಳ್’ ಎಂಬಲ್ಲಿ ಪ್ರದೇಶವಾಚಕವಾಗಿಯೂ ಕವಿರಾಜಮಾರ್ಗಕಾರ ಬಳಸಿದ್ದಾನೆ. ಅಂಡಯ್ಯ ಹೇಳುವ ‘ಕನ್ನಡಮೆನಿಪ್ಪಾ ನಾಡು ಚೆಲ್ವಾಯಿತು’ ಎಂಬಲ್ಲಿಯೂ ಪ್ರದೇಶವೇ ಸೂಚಿತವಾಗಿದೆ. ಅಲ್ಲದೆ ‘ಕನ್ನಡ, ಕಮ್ಮೆ, ತೆಲುಗ, ತಿಗುಳ’ ಎಂಬ ನಿಜಗುಣ ಶಿವಯೋಗಿಗಳ ಪ್ರಯೋಗದಿಂದ ಈ ಶಬ್ದ ಜನಾಂಗ ಅಥವಾ ಕುಲವನ್ನೂ ಸೂಚಿಸುತ್ತಿತ್ತು ಎಂದೂ ಊಹಿಸಲಾಗಿದೆ. ಈಗ ಕನ್ನಡ, ಕನ್ನಡನಾಡು, ಕನ್ನಡಿಗ ಶಬ್ದಗಳು, ಭಾಷೆ, ಪ್ರದೇಶ, ಕುಲ – ಜನ ಅರ್ಥದಲ್ಲಿ ಬಳಕೆಯಾಗುತ್ತಿದೆ. ‘ಕನ್ನಡ – ನಾಡು’ ಶಬ್ದಕ್ಕೆ ಬದಲಾಗಿ ‘ಕರ್ನಾಟಕ’ ಮಾನ್ಯತೆ ಪಡೆದು ರೂಢಿಯಲ್ಲಿದೆ, ಅಧಿಕೃತವಾಗಿ ಪ್ರದೇಶದ ಹೆಸರೂ ಆಗಿದೆ.

ಮಹಾಭಾರತದಲ್ಲಿ ‘ಕರ್ನಾಟ’ ಶಬ್ದವಿದೆ. ಕ್ರಿ. ಶ. ಒಂದನೆಯ ಶತಮಾನದ್ದು ಎನ್ನಲಾದ ಮಾರ್ಕಂಡೇಯ ಪುರಾಣದಲ್ಲಿ ಉಕ್ತವಾಗಿರುವ ದೇಶಗಳಲ್ಲಿ ‘ಕರ್ಣಾಟಕ’ವೂ ಒಂದಾಗಿದೆ. ಸೋಮದೇವನ ಕಥಾಸರಿತ್ಸಾಗರ (ಕ್ರಿ. ಶ. ೫ನೇ ಶತಮಾನ) ದಲ್ಲಿ ಮತ್ತು ವರಹಾಮಿಹಿರನ ಬೃಹತ್ ಸಂಹಿತೆಯಲ್ಲಿ (ಕ್ರಿ. ಶ. ೬ನೇ ಶತಮಾನ) ‘ಕರ್ಣಾಟ’ ಎಂದಿದೆ. ಶೂದ್ರಕನ ಮೃಚ್ಛಕಟಕ ನಾಟಕದಲ್ಲಿ ಒಂದು ಪಾತ್ರವಾದ ಚಂದನಕ ‘ಕರ್ಣಾಟ’ವನ್ನು ಹೇಳುತ್ತಾನೆ. ಗಂಗಭೂಮಿಕ್ರಮನ ಬೆದಕೂರು ಶಾಸನದಲ್ಲಿ ‘ಅಸ್ಯಸೀಮಾ : ಕರ್ನ್ನಾಟಕೇ…’ ಎಂದಿದೆ. ಸಂಸ್ಕೃತದಲ್ಲಿ ಕರ್ಣಾಟ, ಕರ್ಣಾಟಕ ಎಂಬ ಎರಡು ರೂಪಗಳೂ ಇವೆ, ಸಮಾನಾರ್ಥಕವಾಗಿವೆ. ‘ಕರ್ಣೇಷು ಅಟತಿ ಕರ್ಣಾಟಕ’ ಎಂದು ‘ಶಬ್ದರತ್ನಾವಲಿ’ ಮತ್ತು ‘ವಿಶ್ವಗುಣಾದರ್ಶ’ಗಳಲ್ಲಿ ವಿವರಣೆ ಇದೆ. ಎಂದರೆ, ಕಿವಿಗಳಲ್ಲಿ ಬಿದ್ದು ಪ್ರಸಿದ್ಧವಾದದ್ದು. ಸ್ಕಂಧ ಪುರಾಣದಲ್ಲಿ ಕರ್ಣಾಟ ಎಂಬ ರಾಕ್ಷಸನು ವಾಸಿಸುತ್ತಿದ್ದುದರಿಂದ ಈ ಹೆಸರು ಬಂದಿತೆಂದು ಹೇಳಲಾಗಿದೆ. ಪ್ರಾಕೃತದಲ್ಲಿ ‘ಕಣ್ಣಾಡ’ ಎಂಬ ರೂಪ ಬಳಕೆಯಾಗಿದೆ.

ಶಿಲಪ್ಪದಿಗಾರಮ್ (ಕ್ರಿ. ಶ. ೨ನೇ ಶತಮಾನ?) ನಲ್ಲಿ ಚೇರರಾಜ ನೀಲಗಿರಿಯಲ್ಲಿ ‘ಕರುನಾಡರ್’ ಆಡಿದ ಕುಣಿತ ನೋಡಿದನೆಂದಿದೆ. ಪಾಂಡ್ಯರಾಜನ ವೇಳ್ವಿಕುಡಿ ತಾಮ್ರಶಾಸನದಲ್ಲಿ (ಕ್ರಿ. ಶ. ೭೭೦) ‘ಕರುನಾಡಗನ್’ ಶಬ್ದವಿದೆ. ಹೀಗೆ ಮೊದಲು ಪ್ರದೇಶವಾಚಕ, ಅನಂತರ ಭಾಷಾವಾಚಕ, ಜನಾಂಗವಾಚಕವಾಗಿ ಕಣಾಟಕ ಶಬ್ದ ರೂಢಿಯಲ್ಲಿತ್ತು. ಕ್ರಿಸ್ತ ಪೂರ್ವದಿಂದಲೂ ಕನ್ನಡ ಪ್ರದೇಶ ಅಸ್ತಿತ್ವದಲ್ಲಿತ್ತು. ಕನ್ನಡ ಭಾಷೆ ಕ್ರಿಸ್ತಶಕದ ಪ್ರಾರಂಭದಿಂದ ಇದ್ದಿರಬಹುದು.

‘ಕರ್ಣಾಟ’ ಶಬ್ದದಿಂದ ‘ಕನ್ನಡ’ ಬಂದಿರಲಾರದು. ತಮಿೞ್ ದ್ರಾವಿಡವಾದ ಹಾಗೆ ಕನ್ನಡವೇ ಕರ್ಣಾಟಕವಾಗಿರಬೇಕು. ಅಂದರೆ ಕನ್ನಡ ಶಬ್ದದ ಸಂಸ್ಕೃತೀಕರಣ ಕರ್ಣಾಟಕ ಎನ್ನಬಹುದು. ಕರುನಾಡು > ಕರ್ನಾಡು > ಕರ್ಣಾಟ (ರೇಫೆ ಇದ್ದಾಗ ನ – ಣ ಆಗುತ್ತದೆ, ಸಂಸ್ಕೃತದಲ್ಲಿ) ಎಂದು ಆಗಿರಬೇಕು. ಪುನ್ನಾಡು > ಪುನ್ನಾಟವಾಗಿದೆ. ತಮಿಳಿನಲ್ಲಿ ಕರುನಾಡು, ಕರುನಾಡರ್ ಶಬ್ದಗಳಿವೆ. ಕರ್ + ನಾಡು + ಅಗಂ > ಕರ್‌‌‌‌‌‌‌ನಾಡಗಂ ಕರ್ನಾಟಕ ಎಂದಾಗಿರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ.

ಕರ್ + ನಾಡುವಿನ ವ್ಯುತ್ಪತ್ತಿ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆರ್. ನರಸಿಂಹಾಚಾರ್ಯರು ಕಮ್ಮಿತು + ನಾಡು = ಕನ್ನಾಡು ಎಂದು ವಿವರಿಸಿದ್ದಾರೆ. ಕಮ್ಮಿತು ಎಂದರೆ ಸುವಾಸನೆ, ಪರಿಮಳ. ಇದು ಅಭಿಮಾನದ ವಿವರಣೆ. (ತೆಲಗು > ತೇನ್ > ಜೇನ್‌ನಿಂದ ಬಂದಿದೆ ಎಂದು ಆಂಧ್ರರು ಹೇಳುತ್ತಾರೆ). ಕನ್ನಾಡು > ಕನ್ನಡು > ಕನ್ನಡ ಆಯಿತು ಎಂದು ಅವರ ಅಭಿಪ್ರಾಯ. ಆದರೆ ಕನ್ನಾಡು ಶಬ್ದ ಎಲ್ಲಿಯೂ ಕಾಣಸಿಗುವುದಿಲ್ಲ, ಉಲ್ಲೇಖಗೊಂಡಿಲ್ಲ. ಶಂಬಾ ಜೋಶಿಯವರು ‘ಕನ್ನಡದ ನೆಲೆ’ಯಲ್ಲಿ ಈ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ. ‘ಕನ್ನಡ’ ದ ಕನ್ (ಕಮ್) ಎಂಬುದು ಜನಾಂಗವಾಚಿ. ಮನುಸ್ಮೃತಿ, ಮತ್ಸಪುರಾಣಗಳ ‘ಕರ್ಣ’ರು ‘ಕನ್’ ಜನಾಂಗದವರು. ವೇದಗಳ ಕಳವರು ಕನ್ನಡದ ಪೂರ್ವಜರು, ಮೂಲದ್ರಾವಿಡರು. ಕನ್ನ ಕಮ್ಮ ಎಂದಾಗಿ ಕನ್ನಡ, ಆಂಧ್ರ, ತಮಿಳರ ಮೊದಲಿಗರು ತಲೆದೋರಿದರು. ಕನ್ನಡಿಗರು ಮೂಲಕನ್ನಡಿಗರು. ಕನ್ ಜನಾಂಗದ ನಾಡು ಕನ್ನಡ. ಆದರೆ ‘ಕನ್’, ‘ಕರ್ಣ ಹೇಗಾಯಿತು?. ರೇಫಕ್ಕೆ ಇವರು ಸಮಾಧಾನ ಹೇಳುವುದಿಲ್ಲ. ಎಂ. ಗೋವಿಂದ ಪೈ ಅವರು ಕರು + ನಾಡು ಎಂದರೆ ದೊಡ್ಡ ದೇಶ ಎಂದು ಹೇಳುತ್ತಾರೆ. ಹಟ್ಟಿಯಂಗಡಿ ನಾರಾಯಣ ರಾಯರು ಕರು + ನಾಡು ಎಂದರೆ ಎತ್ತರದ ಪ್ರದೇಶ ಎನ್ನುತ್ತಾರೆ. ಕರ್ನಾಟಕ ಸಮುದ್ರಮಟ್ಟಕ್ಕಿಂತ ಎತ್ತರದಲ್ಲಿದೆ, ಉಪ್ಪರಿಗೆ ಮನೆಗೆ ಕರುಮಾಡ ಎನ್ನುವಂತೆ ಕರು + ನಾಡುವಿನ ‘ಕರು’ವಿನ ಅರ್ಥ ಸಹ ಎನ್ನುತ್ತಾರೆ. ಡಾ. ಗುಂಡರ್ಟ್ ಮತ್ತು ಡಾ. ಕಾಲ್ಡವೆಲ್ ಅವರು ಕರ್ + ನಾಡು ಎಂದರೆ ಕಪ್ಪುಮಣ್ಣಿನ ನಾಡು ಎಂದು ವ್ಯುತ್ಪತ್ತಿ ಹೇಳದ್ದಾರೆ. ಇಲ್ಲಿಯ ಭೂಮಿ ಹತ್ತಿಯ ಬೆಳೆಗೆ ಹೆಸರಾದದ್ದು. ಡಾ. ಎಂ. ಎಚ್. ಕೃಷ್ಣ ಅವರು ಕರುನಾಡು ಎಂದು ತಮಿಳರರು ಕರೆದದ್ದು. ಕನ್ನಡಿಗರು ತಮ್ಮ ನಾಡನ್ನು ಏನೆಂದು ಕರೆದುಕೊಳ್ಳುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗುವುದಿಲ್ಲ, ಎನ್ನುತ್ತಾರೆ. ಪ್ರ. ಗೋ. ಕುಲಕರಣಿಯವರು ಪರ್ವತ (ಮಲೆ)ಗಳ ಪ್ರದೇಶ ಮಲೆಯಾಳ, ಮೈದಾನಬಯಲು ಪ್ರದೇಶ ತಮಿಳು (ತಱವೀಡು > ತಱಮೀಡ > ತಱಮಿಳ > ತಮಿಳ ಎಂದು ರೂಪ ಸಾಧಿಸಿದ್ದಾರೆ) ನಾಡು, ನೀಲಗಿರಿಯಿಂದ ಗೋದಾವರಿವರೆಗಿನ ಸಾನು(ಕರು) ಪ್ರದೇಶವು ಕರುನಾಡು ಎಂದು ವಿವರಣೆ ನೀಡಿದ್ದಾರೆ.

ಕನ್ನಡ ಹಾಗೂ ಕರ್ನಾಟಕ ಕುರಿತ ಹಲವು ಅಭಿಪ್ರಾಯಗಳನ್ನು ಮೇಲೆ ಹೇಳಿದೆ. ಇಂದಿಗೂ ಆ ವಿಷಯ ಕುರಿತು ಒಮ್ಮತವಿಲ್ಲ.

ಕನ್ನಡ ಭಾಷೆಯ ಪ್ರಾಚೀನತೆ : ಕನ್ನಡ ಪ್ರದೇಶದ ಬಗ್ಗೆ ಮಹಾಭಾರತದ ಸಭಾಪರ್ವ ಹಾಗೂ ಭೀಷ್ಮಪರ್ವಗಳಲ್ಲಿ ‘ಕರ್ಣಾಟ’ ಎಂದು ಉಲ್ಲೇಖಿಸಿರುವುದನ್ನು ಮೇಲೆ ಹೇಳಿದೆ. ಈಗಿರುವ ರೂಪದಲ್ಲಿ ಮಹಾಭಾರತ ಕ್ರಿ. ಪೂ. ೩ನೇ ಶತಮಾನದಿಂದ ಕ್ರಿ. ಶ. ಎರಡನೇ ಶತಮಾನದೊಳಗೆ ಪೂರ್ಣಗೊಂಡಿರಬೇಕೆಂದು ಊಹಿಸಿದ್ದಾರೆ. ಆದರೆ ಕನ್ನಡ ಭಾಷೆ ಮೂಲ ದ್ರಾವಿಡದಿಂದ ಎಂದು ಕವಲೊಡೆಯಿತು ಎಂದು ಸ್ವತಂತ್ರ ಅಸ್ತಿತ್ವ ಪಡೆಯಿತು ಎಂಬುದು ತಿಳಿಯುವುದಿಲ್ಲ. ಭಾಷೆ ಗ್ರಂಥಸ್ಥವಾದಾಗಲೇ ದಾಖಲೆಗಳ ಆಧಾರ ದೊರೆಯುವುದು. ಆದ್ದರಿಂದ ಕನ್ನಡದ ಪ್ರಾಚೀನತೆಯನ್ನು ಶಾಸನ ಹಾಗೂ ಶಾಸನೇತರ ಆಧಾರಗಳಿಂದ ತಿಳಿಯಬೇಕಿದೆ. ಕನ್ನಡ ಪ್ರಾಥಮಿಕ ಅವಸ್ಥಾರೂಪವಂತೂ ತಿಳಿಯುವುದಿಲ್ಲ.

ಹರಪ್ಪಾ – ಮೆಹೆಂಜದಾರೊ ಸಂಸ್ಕೃತಿಗೆ ಸೇರಿದ ಮುದ್ರಿಕೆಗಳಲ್ಲಿ ಕನ್ನಡ ಜನರ ಉಲ್ಲೇಖವಿದೆಯೆಂದೂ, ಅವರು ‘ಕಣನಿರ್’ ಜನಾಂಗದವರೆಂದೂ ಡಾ. ಹೆರಾಸ್ ಹೇಳಿದ್ದಾರೆ. ಆದರೆ ಹರಪ್ಪಾ ಲಿಪಿಯನ್ನು ಓದಲು ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಮಾತ್ರ ಹೇಳಬಹುದು. ಹೆರಸ್ ಅವರದು ಸದ್ಯಕ್ಕೆ ಉಹೆ ಮಾತ್ರ.

ಛಾಂದೋಗ್ಯ ಉಪನಿಷತ್ತಿನಲ್ಲಿ ಚೆನ್ (ಚಂದ್ರ), ಮಡಚಿ (ಮಿಡಿತೆ) ಶಬ್ದಗಳು ಸಿಗುತ್ತವೆ. ಮಹಾಭಾರತ, ಪುರಾಣಗಳಲ್ಲೂ ಕನ್ನಡಿಗರು, ಕರ್ನಾಟಕದ ಪ್ರಸ್ತಾಪವಿರುವುದನ್ನು ನೋಡಿದ್ದೇವೆ. ಟಾಲೆಮಿ ಪ್ರಾಚೀನ ಭಾರತದ ಸ್ಥಳಗಳನ್ನು ಹೇಳಿದ್ದಾನೆ. ಅವುಗಳಲ್ಲಿ ಕೆಲವು ಕನ್ನಡ ಪ್ರದೇಶದ ಸ್ಥಳಗಳೆಂದು ಗೋವಿಂದ ಪೈ ಅವರು ಗುರುತಿಸಿದ್ದಾರೆ. Tabaso ಅಥಣಿ ತಾಲ್ಲೂಕಿನ ತವಸಿ, Inde ಬಿಜಾಪುರದ ಇಂಡಿ, Hippokoure ಹೂವಿನ ಹಿಪ್ಪರಿಗಿ, Modugoulla ರಾಯಚೂರಿನ ಮದ್ಗಲ, Soubottou ಸದವಿ.ಟಾಲೆಮಿಯ ಕಾಲ ಕ್ರಿ. ಶ. ೩ನೇ ಶತಮಾನ.

ಕನ್ನಡ ಸಾಹಿತ್ಯಕ್ಕೆ ಬೌದ್ಧ ಮೂಲ ಹುಡುಕುವ ಪ್ರಯತ್ನವೂ ನಡೆದಿದೆ. ಕ್ರಿ. ಶ. ೪ – ೫ನೇಶತಮಾನದಿಂದಲಾದರೂ ಕನ್ನಡದಲ್ಲಿ ಬೌದ್ಧ ಗ್ರಂಥಗಳ ರಚನೆ ಯಾಗಿರಬೇಕು, ಅವು ನಾಶವಾಗಿರಬೇಕು ಎಂಬ ಅಭಿಪ್ರಾಯವಿದೆ. ಕರ್ನಾಟಕಕ್ಕೆ ಬೌದ್ಧರ ಸಂಪರ್ಕವಿತ್ತೆಂಬುದು ನಿಜ. ಕ್ರಿ. ಪೂ. ದ ಅಶೋಕನ ಶಾಸನಗಳು ಸಿಕ್ಕಿವೆ. ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ಎಮ್ಮೆ ತಮ್ಮನನ ಗುಂಡ (ಗುಡ್ಡ) ಗಳಲ್ಲಿ ಅಶೋಕನಶಾಸನಗಳು ದೊರೆತಿವೆ. ಈ ಪ್ರದೇಶ ಸುವರ್ಣಗಿರಿ ಪ್ರಾಂತಕ್ಕೆ ಸೇರಿದ್ದು, ಇದರ ರಾಜಧಾನಿ ‘ಇಸಿಲ’ ಎಂಬುದಾಗಿತ್ತು. ಆದರೆ ಕನ್ನಡ ವ್ಯವಹಾರ ಭಾಷೆಯಾಗಿತ್ತೆ ಎಂಬುದು ತಿಳಿಯುವುದಿಲ್ಲ.

ಕುಂತಲ ಪರಮೇಶ್ವರ ಎಂಬ ಬಿರುದು ಹೊಂದಿದ್ದ ಶಾತವಾಹನ ವಂಶದ ಹಾಲರಾಜ ಸಂಕಲಿಸಿದ ಪ್ರಾಕೃತ ‘ಗಾಥಾ ಸಪ್ತಶತಿ’ ಕಾವ್ಯದಲ್ಲಿ ಹಲವು ಕನ್ನಡ ಶಬ್ದಗಳಿವೆ. ಪೊಟ್ಟ (ಹೊಟ್ಟೆ), ತುಪ್ಪ ಪೆಟ್ಟು (ಹೊಡೆ), ತೀರ್ (ಸಮರ್ಥನಾಗು), ರೊಟ್ಟ ಊರೋ (ಊರು) ಇತ್ಯಾದಿ. ಆತನ ಕಾಲ ಕ್ರಿ. ಪೂ. ಒಂದರಿಂದ ಕ್ರಿ. ಶ. ಒಂದನೆಯ ಶತಮಾನ ಎಂದು ಊಹೆ. ಪ್ರಾಕೃತ ಆಡಳಿತ, ವ್ಯವಹಾರ ಭಾಷೆಯಾದ ಆ ಕಾಲದಲ್ಲಿ ಕನ್ನಡ ಸಾಮಾನ್ಯ ಜನರ ಭಾಷೆಯಾಗಿದ್ದಿರಬೇಕು. ಸ್ಥಳೀಯ ಭಾಷೆಯ ಶಬ್ದಗಳು ಪ್ರಾಕೃತದಲ್ಲೂ ಬೆರೆತು ಗ್ರಂಥದಲ್ಲೂ ಕಾಣಿಸಿಕೊಂಡಿರಬೇಕೆಂದು ಗೋವಿಂದ ಪೈ ಅವರಂತೆ ಇತರ ವಿದ್ವಾಂಸರು ಒಪ್ಪುತ್ತಾರೆ. ಆದರೆ ಪೈ ಅವರು ಊಹಿಸಿರುವಂತೆ ಕನ್ನಡ ಗ್ರಂಥಸ್ಥವಾಗಿತ್ತು, ಶ್ರೀಮಂತವಾಗಿತ್ತು ಎಂದರೆ ಅಸಾಧ್ಯದ ಮಾತಾಗುತ್ತದೆ. ಏಕೆಂದರೆ ದಕ್ಷಿಣ ಭಾರತದಲ್ಲಿ ಸಿಗುವ ಕ್ರಿ. ಪೂ. ೩ನೇ ಶತಮಾನದಿಂದ ಕ್ರಿ. ಶ ೪ನೇ ಶತಮಾನದವರೆಗಿನ ಶಾಸನಗಳೆಲ್ಲ ಪ್ರಾಕೃತದಲ್ಲಿವೆ, ಕೆಲವು ಸಂಸ್ಕೃತದಲ್ಲಿವೆ. ದ್ರಾವಿಡ ಭಾಷೆಗಳ ಶಾಸನಗಳೆಲ್ಲ ಕ್ರಿ. ಶ ೫ನೇ ಶತಮಾನದಿಂದ ಈಚಿನವಾಗಿವೆ. ಕನ್ನಡದಲ್ಲಿ ಹಲ್ಮಿಡಿ ಶಾಸನ ಕ್ರಿ. ಶ. ೪೫೦, ತಮಿಳಿನ ದಳವನೂರು ಗುಹಾಶಾಸನಗಳು ಕ್ರಿ. ಶ. ೬೦೦ – ೬೩೦, ತೆಲುಗಿನ ಶಸನ ಕ್ರಿ. ಶ. ೬೩೩ ಇವು ಈಗ ದೊರೆತಿರುವ ಅತ್ಯಂತ ಪ್ರಾಚೀನ ಶಾಸನಗಳು. ಹಲ್ಮಿಡಿ ಶಾಸನ ಗದ್ಯದಲ್ಲಿದೆ ಅಲ್ಲಿ ಸಂಸ್ಕೃತ ಪ್ರಭಾವವನ್ನು ಗುರುತಿಸಬಹುದು. ಆದ್ದರಿಂದ ಕ್ರಿ. ಪೂ. ದಲ್ಲೇ ಕನ್ನಡ ಗ್ರಂಥಸ್ಥವಾಗಿತ್ತು ಎಮಬುದನ್ನು ಒಪ್ಪಲು ಕಷ್ಟ. ತಮಿಳಿನಲ್ಲಿ ಪ್ರಾಚೀನ ಕಾಲದಲ್ಲಿ ‘ಸಂಘಂ’ ಸಾಹಿತ್ಯವಿದ್ದಿತೆಂಬುದಕ್ಕೆ ಐತಿಹಾಸಿಕ ಆಧಾರಗಳಿಲ್ಲ. ಕೇವಲ ಐತಿಹ್ಯವಿದೆ. ಕನ್ನಡದ ಬಗ್ಗೆ ಅಂತಹ ಯತಿಹ್ಯವೂ ಇದ್ದಂತಿಲ್ಲ.

ಈಜಿಪ್ತಿನ ಆಕ್ಸಿರಿಂಕಸ್ ಎಂಬಲ್ಲಿ ದೊರೆತ ಪ್ಯಾಪಿರೈ ಕಾಗದಗಳಲ್ಲಿ ಒಂದು ಗ್ರೀಕ್ ಪ್ರಹಸನವೂ ಸೇರಿದೆ. ಇದರಲ್ಲಿ ಬರುವ ಸಂಭಾಷಣೆಯ ಕೆಲವು ಮಾತುಗಳು ಗ್ರೀಕ್ ಭಾಷೆಯವಲ್ಲ. ಅವು ಕನ್ನಡ ಶಬ್ದಗಳೆಂದು ಟಾ. ಶಾಮಾಶಾಸ್ತ್ರಿಗಳು ಊಹಿಸಿದ್ದರು. ಆರ್. ನರಸಿಂಹಾಚಾರ್ಯರೂ, ಗೋವಿಂದಪೈಗಳು ಅನಂತರ ಆ ಬಗ್ಗೆ ವಿವರವಾಗಿ ಚರ್ಚಿಸಿ ಪ್ರತಿಪಾದಿಸಿದ್ದಾರೆ. ಅವು ತಮಿಳೂ ಆಗಿರಬಹುದು, ಖಚಿತವಾಗಿ ಕನ್ನಡ ಎನ್ನುವಂತಿಲ್ಲ ಎಂದು ಎಸ್. ಶ್ರೀಕಂಠಯ್ಯನವರು ಹೇಳುತ್ತಾರೆ. ಇತ್ತೀಚೆಗೆ ಅದು ತುಳುವಾಗಿರಬಹುದೆಂದು ವಾದವೂ ಎದ್ದಿದೆ. ಪ್ರಹಸನದ ಕಥೆ ಪಶ್ಚಿಮ ಕರಾವಳಿಗೆ ಸಂಬಂಧಿಸಿದುದಾಗಿದೆ. ಮಲ್ಪಿನಾಯಕ ಎಂಬ ಉಲ್ಲೇಖವೂ ಇದೆ. ಆ ಕಾಲಕ್ಕೆ ಗ್ರೀಕರೂ ರೋಮನರೂ ಕನ್ನಡ ನಾಡಿನೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ಆ ಪ್ರಹಸನದ ಕಾಲ ಕ್ರಿ. ಶ. ೧೫೦. ಅಲ್ಲಿ ಇವೆ ಎನ್ನಲಾಗಿರುವ ಕನ್ನಡ ಶಬ್ದಗಳಲ್ಲಿ ಕೆಲವು ಹೀಗಿವೆ. ಕರೆವನೊ, ಲಲ್ಲೆ, ಕೊಡಗೂಸು, ಮೀನಾ, ಅಲ್ಲೆಮ್ಮಕ್ಕ, ಆರ್‌‌‌‌‌ಮಿಂದೈ, ಕಳ್‌ಮಕತಾ, ಮಲ್ಪಿನಾಯಕ, ಹಬ್ಬದ ಎಡೆ (ಆ ಕಾಲಕ್ಕೆ ಪ > ಹ ಆಗಿತ್ತೆ?) ಇತ್ಯಾದಿ.

ಕ್ರಿ. ಪೂ. ೩ನೇ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಪ್ರಾಕೃತ ಶಾಸನದಲ್ಲಿ (ಬ್ರಹ್ಮಗಿರಿ) ‘ಇಸಿಲ’ ಎಂಬ ಪದವಿದೆ. ಇದು ಊರಿನ ಹೆಸರು, ಕರ್ನಾಟಕದಲ್ಲಿತ್ತು ಎಂದು ಡಿ. ಎಲ್. ನರಸಿಂಹಾಚಾರ್ಯರು ಹೇಳುತ್ತಾರೆ. ‘ಇಸಿಲ’ದ ಜ್ಞಾತಿಪದ ‘ಎಸಿಲ’ ಎಂದಿರಬೇಕು. ತಮಿಳಿನ ಎಯಿಲ್ ಅಥವಾ ಎಯಿಲಂ ಕನ್ನಡದಲ್ಲಿ ಎ > ಇ ಆಗಿ ಯಿ > ಸಿ ಆಗಿ ಇಸಿಲ ಎಂದಾಗುತ್ತದೆ. ಎಯಿಲ್‌ಗೆ ತಮಿಳಿನಲ್ಲಿ ಕೋಟೆ ಎಂದರ್ಥ. ಆದ್ದರಿಂದ ಕೋಟೆಯುಳ್ಳ ಅಥವಾ ಕೋಟೆಯೊಳಗಿನ ಊರು ಎಂದರ್ಥ. ಹಾಗಿದ್ದಲ್ಲಿ ಈ ಶಬ್ದವೇ ದಾಖಲಿರುವ ಅತ್ಯಂತ ಪ್ರಾಚೀನ ಕನ್ನಡ ಶಬ್ದವಾಗುತ್ತದೆ.

ಮಾಧವಪುರ ಶಾಸನದಲ್ಲಿ (ಕ್ರಿ. ಪೂ. ೧ನೇ ಶತಮಾನ) ‘ನಾಟಪತಿ’ ಎಂಬ ಶಬ್ದವಿದೆ. ಅದರಲ್ಲಿ ‘ನಾಟ’ವು ನಾಡು ಎಂಬುದರ ಪ್ರಾಚೀನ ರೂಪ. ಕ್ರಿ. ಶ. ೨ನೇ ಶತಮಾನದ ಶತವಾಹನರ ಮಳವಳ್ಳಿ ಶಾಸನದಲ್ಲಿ ‘ಸಂಬಲೀವ ಊರ’ ಎಂಬ ಶಬ್ದವಿದೆ. ಅಲ್ಲಿಯ ‘ಊರ್’ ಖಚಿತವಾಗಿ ಕನ್ನಡ. ಕ್ರಿ. ಶ. ೨ರಿಂದ ೪ನೇ ಶತಮಾನದವರೆಗಿನ ಶಾಸನಗಳಲ್ಲಿ ಕೋಟ್ಟ, ಆಪಿಟ್ಟ, ವೆಟ್ಟಕ್ಕಿ, ವೇಗೂರಂ, ಕುಂದಮುಚ್ಚುಂಡಿ ಶಬ್ದಗಳಿವೆ. ಅವು ಕನ್ನಡ ದ್ರಾವಿಡದಿಂದ ಕವಲೊಡೆದು ಪ್ರತ್ಯೇಕ ಭಾಷೆಯಾಗಿತ್ತೆಂಬುದನ್ನು ಸೂಚಿಸುತ್ತವೆ. ಕ್ರಿ. ಶ. ೨ನೇ ಶತಮಾನದ ಬೌದ್ಧಗ್ರಂಥ ‘ಲಲಿತವಿಸ್ತರ’ ದಲ್ಲಿ ‘ಕನಾರಿ’ ಎಂಬ ಲಿಪಿಯ ಹೆಸರು ಉಕ್ತವಾಗಿದೆ. ಹಲ್ಮಿಡಿ ಶಾಸನಕ್ಕೆ ಎರಡು ಮೂರು ಶತಮಾನಗಳಷ್ಟಾದರೂ ಹಿಂದೆ ಕನ್ನಡ ಗ್ರಾಂಥಿಕ ಭಾಷೆಯಾಗಿದ್ದಿರಬೇಕು ಎಂದೂ ಊಹಿಸಬಹುದು. ಹಲ್ಮಿಡಿ ಶಾಸನದ ನಂತರದ ಶಾಸನಗಳಲ್ಲಿ ವೃತ್ತ, ತ್ರಿಪದಿ, ಛಂದಸ್ಸುಗಳಲ್ಲಿರುವ ಪದ್ಯಗಳನ್ನು ನೋಡಬಹುದು. ಕ್ರಿ. ಶ. ೮೦೦ರ ಸೈಗೊಟ್ಟ ಶಿವಕುಮಾರ ಶಾಸನದ ‘ಗಜಾಷ್ಟಕ’ ಓವನಿಗೆ, ಒನಕೆವಾಡು ಆಗಿ ಜನಪ್ರಿಯವಾಯಿತಂತೆ. ಅಂದರೆ ಆ ಕಾಲಕ್ಕಾಗಲೇ ಜಾನಪದ ಕಾವ್ಯ ಪ್ರಕಾರಗಳು ಕನ್ನಡದಲ್ಲಿದ್ದುವೆಂದು ಹೇಳಬಹುದು. ಒಟ್ಟಿನಲ್ಲಿ ಕನ್ನಡ ಭಾಷೆಯ ಅಸ್ತಿತ್ವವು ಕ್ರಿ. ಪೂ. ಕ್ಕೆ ಹೋಗುತ್ತದೆ.

ಅನುಬಂಧ ೨: ಕರ್ನಾಟಕತ್ವದ ಹುಡುಕಾಟ

ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಪ್ರಭುಗಳಾಗಿ ಆಡಳಿತಶಾಹಿಯನ್ನು ಸ್ಥಾಪಿಸಿದಾಗ ಅದು ಭಾರತೀಯ ಭೌತಿಕ ಬದುಕಿಗೆ ಮಾತ್ರ ಸೀಮಿತವಾಗಲಿಲ್ಲ. ಅದು ಭಾರತೀಯ ಬೌದ್ದಿಕ ವಲಯಕ್ಕೂ ವಿಸ್ತರಿಸಿ ಹತ್ತು ಹಲವು ವಿಚಾರಗಳು ಭಾರತೀಯರನ್ನು ಸುತ್ತುವರೆದವು. ಇವು ಮೊದಲಿಗೆ ಪರಿಣಾಮಕಾರಿಯಾಗಿ ಸಂಭವಿಸಿದ್ದು, ಭಾರತದ ಮೇಲ್ಮಧ್ಯಮ ವರ್ಗದ ಜನರಲ್ಲಿ. ಇವರಿಗೆ ಪೋಷಕವಾಗಿ ನಿಂತಿದ್ದು ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ.

ಭಾರತದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಆರಂಭಿಸಿದ ಲಾರ್ಡ್ ಮೆಕಾಲೆ ಭಾರತದ ಶಾಲೆಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಸೇವೆ ಸಲ್ಲಿಸುವ ಗುಮಾಸ್ತ ದರ್ಜೆಯ ವ್ಯಕ್ತಿಗಳನ್ನು ರೂಪಿಸುವ ಕಾರ್ಖಾನೆಗಳನ್ನಾಗಿ ಮಾರ್ಪಡಿಸಿದ್ದನು. ಇದರಲ್ಲಿ ಇಂಗ್ಲೆಡಿನ ಇತಿಹಾಸ ಮತ್ತು ಸಾಹಿತ್ಯವನ್ನು ಬೋಧಿಸಲಾಗುತ್ತಿತ್ತು. ಇದರಿಂದ ಇಂಗ್ಲಿಷ್ ಆಳ್ವಿಕೆಯ ಬಗ್ಗೆ ನಿಷ್ಠೆ ಮತ್ತು ಆಂಗ್ಲ ಸಂಸ್ಕೃತಿಯ ಹರಡುವಿಕೆ ಎರಡೂ ಒಟ್ಟಿಗೆ ಆಗುವುದೆಂದು ಭಾವಿಸಿದ್ದನು. ಇದು ಆಂಶಿಕವಾಗಿ ಸಾಧಿತವಾಯಿತು. ಆದರೆ ಈ ಶಿಕ್ಷಣದ ಮೂಲಕವೇ ಭಾರತೀಯ ಪುನರುತ್ಥಾನ ಮತ್ತು ವಾಸ್ತವಕತೆಯ ಅರಿವು ಉಂಟಾದುದು.

ಇಂಗ್ಲಿಷ್ ಕಲಿತ ವಿದ್ಯಾವಂತರು ಪಾಶ್ಚಾತ್ಯ ರಾಷ್ಟ್ರಗಳ ಇತಿಹಾಸ ಮತ್ತು ಸಾಹಿತ್ಯಗಳನ್ನು ಓದಿಕೊಂಡರು. ಫ್ರಾನ್ಸ್, ಇಟಲಿಗಳ ಕ್ರಾಂತಿ ಚಿತ್ರಣಗಳು ಕಣ್ಮುಂದೆ ತೆರೆದುಕೊಂಡವು. ಎಡ್‌ಮಂಡ್ ಬರ್ಕ್, ಹರ್ಬಟ್ ಸ್ಪೆನ್ಸರ್, ಜಾನ್ ಸ್ಟೊಯರ್ಟ್ ಮಿಲ್, ಲಾಕ್, ವಾಲ್ಟೇರ್, ರೊಸೊ, ಥಾಮಸ್ ಪೆಯಿನಂ, ಮ್ಯಾಝಿನಿ, ಕೆವೂರ್ ಮೊದಲಾದವರ ಚಿಂತನೆಗಳನ್ನು ತಮ್ಮದನ್ನಾಗಿಸಿಕೊಂಡರು. ಇವರ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃಭಾವ, ಪ್ರಜಾಸತ್ತೆ ಮೊದಲಾದ ಉದಾತ್ತ ವಿಚಾರಗಳು ತಮ್ಮನ್ನು ಪ್ರಚೋದಿಸಿದವು. ಇವುಗಳ ಮೂಲಕ ಭಾರತಕ್ಕೆ ಬ್ರಿಟಿಷರ ಕೊಡುಗೆ, ಅದರ ಹಿಂದಿನ ಹುನ್ನಾರಗಳು ಮತ್ತು ವಾಸ್ತವದ ಗುಲಾಮಗಿರಿ ಇವು ಅರಿವಿಗೆ ಬಂದವು. ಅವರ ಮಿಗಿಲಾದ ಕೊಡುಗೆಯ ಹಿನ್ನೆಲೆಯಲ್ಲಿ ತಮ್ಮತನದ ಜಾಗೃತಿ ಉಂಟಾಯಿತು. ಈ ನೆಲೆಯಲ್ಲಿ ಸ್ವಂತಿಕೆಯ ಹುಡುಕಾಟ ಮೊದಲಾಯಿತು. ಮಾನಸಿಕ ವಸಾಹತುಶಾಹಿಯಿಂದ ಭಾರತೀಯರನ್ನು ಬಿಡುಗಡೆಗೊಳಿಸಲು ಸಾಂಸ್ಕೃತಿಕ ಪಾರಂಪರಿಕ ಮೂಲಗಳಿಗೆ ಹೋಗಿ, ಅವನ್ನೂ ಅಸ್ತ್ರಗಳನ್ನಾಗಿ ಮಾರ್ಪಡಿಸಿ ಬ್ರಿಟಿಷಶಾಹಿಗೆ ಪ್ರತಿರೋಧವೊಡ್ಡುವ ಕ್ರಿಯೆ ಅನಿವಾರ್ಯವೆನಿಸಿತು. ಈ ಹಿನ್ನೆಲೆಯಲ್ಲಿ ಭಾರತೀಯ ಸಂಧರ್ಭದಲ್ಲಿ ಬಂಗಾಳದಲ್ಲಿ ರಾಜಾರಾಂ ಮೋಹನರಾಯ, ಮಹಾರಾಷ್ಟ್ರದಲ್ಲಿ ಎಂ. ಜಿ. ರಾನಡೆ, ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ದಯಾನಂದ ಸರಸ್ವತಿ, ದಕ್ಷಿಣ ಭಾರತದಲ್ಲಿ ಅನಿಬೆಸೆಂಟ್, ವಿವೇಕಾನಂದ ಮೊದಲಾದವರು ಅನುಕ್ರಮವಾಗಿ ಬ್ರಹ್ಮಸಮಾಜ, ಪ್ರಾರ್ಥನಾ ಸಮಾಜ, ಆರ್ಯ ಸಮಾಜ, ಥಿಯಾಸಫಿಕಲ್ ಸೊಸೈಟಿ, ರಾಮಕೃಷ್ಣ ಮಿಷನ್ ಇವನ್ನು ಸ್ಥಾಪಿಸಿದರು. ಇವುಗಳು ಬ್ರಿಟಿಷ್‌ಶಾಹಿಗೆ ವ್ಯತಿರಿಕ್ತವಾಗಿ ನಿಲ್ಲಬೇಕಾಗಿದ್ದರಿಂದ ವೈದಿಕ ಮೂಲದ ಬೇರುಗಳಾದ ವೇದಾಂತಗಳವರೆಗೆ ಸಾಗಿ, ಅಲ್ಲಿ ಆರಂಭಗೊಂಡ ಅದರ ಪಾರಂಪರಿಕ ಉತ್ತಮ ವಿಚಾರಗಳನ್ನು ಜನರಲ್ಲಿ ಬಿತ್ತುವ ಕಾರ್ಯವನ್ನು ಮಾಡಲಾರಂಭಿಸಿದರು. ಇದರೊಂದಿಗೆ ತಮ್ಮ ಧರ್ಮದ ಕೊಳೆಯನ್ನು ತೊಡೆಯಲು ಯತ್ನಿಸಿದರು. ಇದರ ಮೂಲಕ ಭಾರತೀಯ ಪ್ರಾಚೀನ ಪರಂಪರೆಯು ಅನಾವರನವಾಗುತ್ತಾ ಬಂದಿತು. ಇದನ್ನು ತಿಳಿಸುವ ಮೂಲಕ ತಮ್ಮ ಪರಂಪರೆಗಳ ಬಗೆಗೆ ಗೌರವವನ್ನು ಮೂಡಿಸುವ ಕ್ರಿಯೆಯಲ್ಲಿ ಈ ಸಂಸ್ಥೆಗಳು ಕಾರ್ಯೋನ್ಮುಖಗೊಂಡವು. ಇದು ಹಿಂದೂ ಜನರಲ್ಲಿ ಈ ವಿಚಾರಗಳು ಪರಿಣಾಮಕಾರಿ ಬದಲಾವಣೆಗಳನ್ನು ತಂದವು. ಈ ವಿಚಾರಗಳ ಮೂಲಕ ಪ್ರಾಚೀನ ಭವ್ಯ, ಶ್ರೀಮಂತ ಪರಂಪರೆಯನ್ನು ತಮ್ಮದೆಂದು ಭಾವಿಸಿದ ಭಾರತೀಯರು ಸ್ವಾಭಿಮಾನವನ್ನು ತಳೆದರು. ಇದಕ್ಕೆ ಪರ್ಯಾಯವಾಗಿ ತಮ್ಮ ಮೇಲೆ ಹೇರಿದ್ದ ಗುಲಾಮಗಿರಿಯನ್ನು ಕುರಿತು ಚಿಂತನೆ ನಡೆಸಲು ಅನುವಾದರು.

ಹೀಗೆ ಭಾರತೀಯ ಸಂದರ್ಭದಲ್ಲಿ ಹಲವು ಸಮಾಜ ಸುಧಾರಕರು ನಡೆಸಿದ ಸಾಂಸ್ಕೃತಿಕ ಚಳುವಳಿಗಳು ಬ್ರಿಟಿಷ ವಸಾಹತುಶಾಹಿಯಿಂದ ಮಾನಸಿಕವಾಗಿ ಮುಕ್ತರನ್ನಾಗಿಸಲು ಬಹುವಾಗಿ ಶ್ರಮಿಸಿದವು. ವಿಪರ್ಯಾಸವೆಂದರೆ, ಈ ಸುಧಾರಕರು ಪಾಶ್ಚಾತ್ಯ ಶಿಕ್ಷಣವನ್ನು ಪಡೆದಿದ್ದವರೇ ಆಗಿರುವುದು. ಇದಕ್ಕೆ ಸಮಾನಾಂತರವಾಗಿ ಸರ್ ಸೈಯದ್ ಅಹ್ಮದ್ ಖಾನ್ ಅಂತಹವರು ಮುಸಲ್ಮಾನರಲ್ಲಿ ನವಜಾಗೃತಿಯನ್ನು ಮೂಡಿಸಲು ಉದ್ಯುಕ್ತರಾದರು.

ಇಂತಹ ಸಾಂಸ್ಕೃತಿಕ ನೆಲೆಯನ್ನು ಭಿತ್ತಿಯಾಗಿಸಿಕೊಂಡಿದ್ದ ದಾದಾಬಾಯಿ ನವರೋಜಿ, ಡಬ್ಲ್ಯು. ಸಿ. ಬ್ಯಾನರ್ಜಿ, ಸುರೇದ್ರನಾರ್ಥ್ ಬ್ಯಾನರ್ಜಿ, ಫಿರೋಜ್ ಷಾ ಮೆಹ್ತಾ, ಗೋಖಲೆ, ತಿಲಕ್, ಅರವಿಂದ ಘೋಷ್, ಬಿಪಿನ್ ಚಂದ್ರಪಾಲ್ ಮೊದಲಾದವರು ತಮ್ಮ ಓರಿಯಂಟ ಲಿಸ್ಟ್ ಚಿಂತನೆಗಳಿಂದ ಭಾರತೀಯರನ್ನು ಭಾರತೀಯರನ್ನು ಮಾನಸಿಕವಾಗಿ ಮುಕ್ತಗೊಳಿಸಲು ಯತ್ನಿಸಿದರು. ಜೊತೆಜೊತೆಯಾಗಿ ರಾಷ್ಟ್ರೀಯತೆನ್ನು ಪೋಷಿಸುತ್ತಾ ಸಮಷ್ಟಿ ಭಾರತವು ಅದರಲ್ಲಿ ಧುಮುಕುವಂತೆ ಮಾಡಿದರು. ಈ ಹಿನ್ನೆಲೆಯಲ್ಲಿ ವಿವೇಕಾನಂದ ಹಿಂದೂ ಧರ್ಮ ಪ್ರಾಚೀನತೆ, ಸಂಸ್ಕೃತಿ ಸಂಪನ್ನತೆ, ಭವ್ಯತೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ‘ವೀರವಾಣಿ’ ಯನ್ನು ನೆನಪಿಸಿಕೊಳ್ಳಬಹುದು. ಚಿಕಾಗೋದಲ್ಲಿ ಮಾಡಿದ ಜಗತ್ಪ್ರಸಿದ್ಧ ಭಾಷಣ ಈ ಹಿನ್ನೆಲೆಯಲ್ಲಿಯೇ ಇಲ್ಲಿ ಮುಖ್ಯವಾಗುವುದು. ಇವರನ್ನು ಹೊರತುಪಡಿಸಿದ ಇತರೆ ಭಾಷಣಕಾರರಲ್ಲಿ, ಕವಿಗಳಲ್ಲಿ, ಇತಿಹಾಸಕಾರರಲ್ಲಿ, ಸಮಾಜಸುಧಾರಕರಲ್ಲಿ ಪ್ರಾಚೀನ ಭಾರತವು ವೈಭವದ ನೆಲೆಯಲ್ಲಿ ಅಂಕುರಿಸಿತು. ಐತಿಹಾಸಿಕ ಮತ್ತು ಪೌರಾಣಿಕ ಸಂಕೇತಗಳು ಜೀವತಳೆದು ವಿಜೃಂಭಿಸಿದವು. ಶಕ್ತಿ ದೇವತೆಗಳು, ರಾಮಾಯಣ, ಮಹಾಭಾರತಗಳು, ಪುರಾಣಗಳು, ವೇದಗಳು, ಉಪನಿಷತ್ತುಗಳು ಜನಮನದಲ್ಲಿ ನಲಿದಾಡಲು ಶುರುವಾದವು. ಚಾರಿತ್ರಿಕ ಪ್ರತಿಮೆಗಳಾದ ಮಹಾರಾಜರ ಚರಿತ್ರೆಗಳು, ಯುದ್ಧಗಳು, ವೈಭವೀಕೃತ ಸಾಮ್ರಾಜ್ಯಗಳು ಇತಿಹಾಸದ ವಸ್ತುಗಳಾಗಿ ಮಾತ್ರವಲ್ಲ ಭಾರತೀಯ ಹೊಸ ಬದುಕನ್ನು ಸೂರೆಗೊಂಡವು. ಪ್ರಾಚೀನ ಸಾಹಿತ್ಯ ಸಂಪತ್ತಿನ ವಕ್ತಾರರಾದ ಕಾಳಿದಾಸ, ಬಾಣ, ಮಾಘ, ಭಾರವಿ, ಭಕ್ತಿ ಪಂಥದ ಅಕ್ಷರ ವಕ್ತಾರರು, ಧರ್ಮಜಾಗೃತಿ ಕಥನಗಳು ಇವೆಲ್ಲವೂ ಸಮಷ್ಠಿ ರೂಪದ ಸ್ವಾಭಿಮಾನವನ್ನು ಉದ್ದೀಪಿಸುವ ನೆಲೆಗಳಲ್ಲಿ ಪರಿಣಾಮಕಾರಿ ಅಂಶಗಳಾದವು. ಇವುಗಳ ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದವು – ಪದ್ಯಗಳು. ರಾಷ್ಟ್ರಕವಿಗಳಾದ ಇಕ್ಬಾಲ್, ರವೀಂದ್ರನಾಥ ಠಾಕೋರ್, ಬಂಕಿಮಚಂದ್ರ ಚಟರ್ಜಿ ಮೊದಲಾದವರ ರಚನೆಗಳು ಅಂದು ಪ್ರಸಿದ್ಧವಾಗಿ ಭಾರತೀಯರು ತಾವೇ ತಮ್ಮ ಪ್ರಾಚೀನ ಪರಂಪರೆಯ ಭವ್ಯತೆಯನ್ನು ಹಿಂದಿರುಗಿ ನೋಡಿಕೊಳ್ಳುವಂತೆ ಪ್ರೇರಣೆಯನ್ನು ನೀಡಿತು.

ಈ ಹಿನ್ನೆಲೆ ಕರ್ನಾಟಕದ್ದೂ ಆಯಿತು. ಅದರಿಂದ ಕನ್ನಡದ ಇತಿಹಾಸಕಾರರು, ಸಂಶೋಧಕರು, ಸಾಹಿತಿಗಳು, ಸಮಾಜ ಸುಧಾರಕರು, ರಾಜಕೀಯ ನಾಯಕರು ಮೊದಲಾದವರು ಈ ಹಿನ್ನೆಲೆಯಲ್ಲಿಯೇ ತಮ್ಮ ಚಿಂತನೆಗಳನ್ನು ಪ್ರಕಟಿಸಿದರು. ಇವರಲ್ಲಿ ಸ್ವಲ್ಪಮಟ್ಟಿಗೆ ಭಿನ್ನವಾಗಿ ನಿಂತವರೆಂದರೆ ಶಂಬಾಜೋಶಿ ಮೊದಲಾದ ಕೆಲವರು ಮಾತ್ರ. ಬ್ರಿಟಿಷ್ ವಸಾಹತುಶಾಹಿಗೆ ಪ್ರತಿರೋಧವಾಗಿ ಕನ್ನಡಿಗರು ಸ್ವಂತಿಕೆಯ ಹುಡುಕಾಟದಲ್ಲಿ ತೊಡಗಿದರು. ವಿವಿಧ ಕ್ಷೇತ್ರಗಳಲ್ಲಿ ಈ ಪ್ರಕ್ರಿಯೆ ತೀವ್ರಗತಿಯಲ್ಲಿ ಸಾಗಿತು. ಇತಿಹಾಸ ಕ್ಷೇತ್ರದ ಮಟ್ಟಿಗೆ ರಾ. ಹ. ದೇಶಪಾಂಡೆ ಅವರು ‘ಕರ್ನಾಟಕ ಸಾಮ್ರಾಜ್ಯ’ವನ್ನು ಬರೆಯತೊಡಗಿದರು. ಸರಿ ಸುಮಾರು ಇದೇ ಸಂದರ್ಭದಲ್ಲಿ ರಾಜಪುರೋಹಿತರು ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಒಂದು ಚಿಕ್ಕ ಹೊತ್ತಿಗೆಯನ್ನು ಹೊರತಂದರು. ನೆಲಮಂಗಲ ಲಕ್ಷ್ಮಿನಾರಾಯಣ ಮತ್ತು ಪಂಚಮುಖಿಯವರು ಕೂಡಿ ‘ಕರ್ನಾಟಕದ ಅರಸು ಮನೆತನಗಳು’ ಎಂಬ ಕೃತಿಯನ್ನು ೧೮೪೬ರಲ್ಲಿ ಹೊರತಂದರು. ಇದೇ ವರ್ಷ ಡಾ. ಮುಗಳಿ ಅವರು Heritage of Karnataka ಎಂಬ ಕೃತಿಯನ್ನು ಇಂಗ್ಲಿಷ್‌ನಲ್ಲಿ ತಂದರು.

ಹೀಗೆ ಕನ್ನಡ ನಾಡಿನ ಹಲವು ಇತಿಹಾಸಕಾರರು ವಾಸ್ತವದ ಅಗತ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕದ ಚರಿತ್ರೆಗಳನ್ನು ಬರೆದರು. ಇವುಗಳಲ್ಲಿ ರಾಜ ಮಹಾರಾಜರ ಚರಿತ್ರೆಗಳು, ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯ ಇವೇ ಮೊದಲಾಗಿ ಲಿಖಿತಗೊಂಡಿವೆ. ಇಲ್ಲಿಯ ಬರವಣಿಗೆ ಸಹಜವಾಗಿಯೇ ವೈಭವದ ಬಣ್ಣದಿಂದ ಮೂಡಿದೆ. ಕನ್ನಡಿಗರನ್ನು ತಮ್ಮ ಪ್ರಾಚೀನ ಪರಂಪರೆಯ ಬಗೆಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಈ ಕೃತಿಗಳು ಸಫಲವಾಗಿವೆ. ಅಂದಿನ ಕನ್ನಡ ದೇಶೀ ರಾಜರುಗಳ ರಾಜ್ಯಗಳ ಗಡಿಗಳನ್ನು ನಿರ್ಧರಿಸುವಾಗ ಇತಿಹಾಸಕಾರರು ಉತ್ಸಾಹ ಚಿತ್ತರಾಗುತ್ತಾರೆ. ಹೀಗೆ ಈ ಕೃತಿಗಳು ಹಲವು ನೆಲೆಗಳಲ್ಲಿ ಓರಿಯಂಟಲಿಸ್ಟ್ ಬರಹಗಳಾಗಿ, ಅಂದಿನ ಕನ್ನಡ ಜನತೆಗೆ ಸ್ವಂತಿಕೆಯ ಅರಿವನ್ನು ತಂದುಕೊಟ್ಟು, ರಾಷ್ಟ್ರೀಯ ಮತ್ತು ಉಪರಾಷ್ಟ್ರೀಯತೆಯ ಹೋರಾಟಗಳಲ್ಲಿ ತೊಡಗಿಸಲು ಪರಿಣಾಮಕಾರಿ ಪಾತ್ರವಹಿಸಿ, ತಮ್ಮ ಆಶಯವನ್ನು ಈಡೇರಿಸಿಕೊಂಡವು.

ಇಂತಹ ಇತಿಹಾಸ ಕೃತಿಗಳಿಗಿಂತ ಸ್ವಲ್ಪಮಟ್ಟಿಗೆ ಭಿನ್ನವಾದವು ಆಲೂರು ವೆಂಕಟರಾಯರ ಕೃತಿಗಳು. ಇವರು ಬರೆದ ಕರ್ನಾಟಕ ಗತವೈಭವ ಎಂಬ ಕೃತಿಯೂ ಕರ್ನಾಟಕ ಇತಿಹಾಸವನ್ನು ಕುರಿತದ್ದೆ. ಆದರೆ ಇದರಲ್ಲಿ ಕರ್ನಾಟಕ ಪರಂಪರೆಯನ್ನು ಅತ್ಯಂತ ಉತ್ಕರ್ಷದ ಆವಸ್ಥೆಯಲ್ಲಿ ಚಿತ್ರಿಸಿದ್ದಾರೆ. ಇದು ಬರಹಗಾರನ ಉದ್ದೇಶಕ್ಕೆ ಅನುಸಾರವಾಗಿಯೇ ಇದೆ. ಆದ್ದರಿಂದ ಈ ಕೃತಿ ಅಲ್ಪಕಾಲದಲ್ಲಿಯೇ ಜನಪ್ರಿಯತೆಯನ್ನು ಗಳಿಸಿ, ಸೀಮಿತ ಅವಧಿಯಲ್ಲಿ ಹಲವು ಬಾರಿ ಪ್ರಮಾಣ ಕಂಡ ಮೊದಲ ಕರ್ನಾಟಕ ಇತಿಹಾಸ ಗ್ರಂಥವೆನಿಸಿತು.

ಇಲ್ಲಿಯ ಬರವಣಿಗೆ ಚಲನಚಿತ್ರದ ದೃಶ್ಯಗಳಂತೆ ಆಕರ್ಷಕವಾಗಿ ಸಾಗುತ್ತದೆ. ಹಿಂದಿನ ಕನ್ನಡ ಅರಸರ ಕಥನಗಳು, ಕರ್ನಾಟಕ ಸಾಮ್ರಾಜ್ಯಗಳು, ಅವುಗಳ ವಿಸ್ತಾರ, ಕನ್ನಡ ಭಾಷಾ ಸಾಹಿತ್ಯಗಳ ಶ್ರೀಮಂತಿಕೆ ಈ ಮೊದಲಾದ ವಿಚಾರಗಳನ್ನು ಸ್ವಲ್ಪಮಟ್ಟಿಗೆ ಉತ್ಪ್ರೇಕ್ಷೆಯ ನೆಲೆಯಲ್ಲಿಯೇ ಚಿತ್ರಿಸಿದ್ದಾರೆ. ಆದ್ದರಿಂದ ಓದುಗರು ಆಕರ್ಷಿತರಾಗಿ, ಅಂದಿನ ಸಂದರ್ಭದಲ್ಲಿ ಇದು ಪೂರ್ಣ ನಿಜವೆಂದೇ ಭಾವಿಸಿ ತಮ್ಮತನವನ್ನು ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಬ್ರಿಟಿಷ್‌ಶಾಹಿಗೆ ಎದರು ನಿಲ್ಲುವಂತಾಯಿತು. ಮಾನಸಿಕ ದಾಸ್ಯದಿಂದ ಹೊರ ಬರುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಪಾತ್ರ ನಿರ್ವಹಿಸಿದ ಈ ಕೃತಿ ಕನ್ನಡಿಗರ ಹೋರಾಟಕ್ಕೆ ಕೈಪಿಡಿಯಾಯಿತು.

ಒಟ್ಟಾರೆ ಇದರಲ್ಲಿ ಚಾರಿತ್ರಿಕ ಸಂಗತಿಗಳು ಯಾವ ನೆಲೆಯಲ್ಲಿಯೇ ಮೂಡಿರಲಿ ಕನ್ನಡಿಗರ ಸ್ವಂತಿಕೆ ಮತ್ತು ಅದರ ಪರಂಪರೆಯನ್ನು ತಿಳಿಸುವಲ್ಲಿ ಇದು ವಹಿಸಿದ ಮಹತ್ತರ ಪಾತ್ರವನ್ನು ಬೇರೆ ಯಾವುದೇ ಇತಿಹಾಸ ಗ್ರಂಥವೂ ಮಾಡಲಿಲ್ಲ ಎಂಬುದು ಇಲ್ಲಿಯ ಮುಖ್ಯ ಸಂಗತಿ. ಇದೇ ನಿಟ್ಟಿನಲ್ಲಿ ಆಲೂರರು ‘ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ’, ‘ಕರ್ನಾಟಕ ವೀರ ರತ್ನಗಳು’, ‘ಕರ್ನಾಟಕತ್ವದ ಸೂತ್ರಗಳು’, ‘ಕರ್ನಾಟಕತ್ವದ ವಿಕಾಸ’ ಹೀಗೆ ಹಲವು ಮಹತ್ತರ ಕೃತಿಗಳನ್ನು ಬರೆದು ಕನ್ನಡಿಗರಿಗೆ ಪರೋಕ್ಷವಾಗಿ ‘ಕಾಂತಾ ಸಂಮಿತತಯೋಪದೇಶಯುಜೇ’ ಎಂಬ ಅರ್ಥದಲ್ಲಿ ಬೋಧಿಸಿದರು. ಧಾರವಾಡವನ್ನು ಕೇಂದ್ರ ಮಾಡಿಕೊಂಡ ಇವರು ‘ಕರ್ನಾಟಕ ಕುಲಪುರೋಹಿತ’ ರು ಎಂದು ಖ್ಯಾತರಾದರು. ಅಷ್ಟೇ ಅಲ್ಲದೆ ‘ಕರ್ನಾಟಕತ್ವ’ ಎಂಬ ಶಬ್ದವನ್ನು ರೂಪಿಸಿದವರೇ ಇವರು. ಇವರ ಕೃತಿಗಳು ಕರ್ನಾಟಕ ಏಕೀಕರಣದ ಅನಂತರದಲ್ಲಿ ಹೆಚ್ಚು ಪ್ರಸ್ತುತತೆ ಕಳೆದುಕೊಂಡರೂ ಅವು ರಚನೆಯಾದ ಸಂದರ್ಭದಲ್ಲಿ ಅವುಗಳ ಪ್ರಸ್ತುತತೆ ಮತ್ತು ಪರಿಣಾಮಕಾರಿ ಪಾತ್ರ ಅತ್ಯಂತ ಮಹತ್ವದ್ದು ಆಗಿದೆ.

ಹೀಗೆ ವಸಾಹತುಶಾಹಿ ಸಂದರ್ಭದಲ್ಲಿ ಕರ್ನಾಟಕತ್ವವನ್ನು ಕುರಿತು ಮಾತನಾಡುವಾಗ ಆಲೂರು ವೆಂಕಟರಾಯರಿಗೆ ಹಲವು ಸಾಲುಗಳು ಮೀಸಲಾಗುವುದು ಔಚಿತ್ಯಪೂರ್ಣವೆನಿಸಿದೆ. ಇದೇ ಸಂದರ್ಭದಲ್ಲಿ ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ದೇಶೀ ಸಂಶೋಧಕರು ಕರ್ನಾಟಕ ಪರಂಪರೆಯ ಹುಡುಕಾಟದಲ್ಲಿ ತೊಡಗಿದ್ದರು. ಅವರಲ್ಲಿ ಮುಖ್ಯರಾದವರು ಆರ್. ನರಸಿಂಹಚಾರ್, ಎಂ. ಗೋವಿಂದಪೈ, ಮುಳಿಯ ತಿಮ್ಮಪ್ಪಯ್ಯ, ಬಿ. ಎಂ. ಶ್ರೀ., ಬೇಟಗೇರಿ ಕೃಷ್ಣಶರ್ಮ, ದ. ರಾ. ಬೇಂದ್ರೆ, ಶಂಬಾ ಜೋಶಿ, ಕೆ. ವೆಂಕಟರಾಮಪ್ಪ ಮೊದಲಾದವರು. ಇವರು ಕನ್ನಡ ಭಾಷೆಯ ಪ್ರಾಚೀನತೆ, ಕನ್ನಡ, ಕರ್ಣಾಟಕ, ಕರ್ನಾಟಕ, ಕರ್ನಾಟ, ಕರ್ಣಾಟ, ಕುಂತಳ, ಮಹಿಷ ಮಂಡಲ, ಕಂನಾಡು, ಕಂನುಡಿ, ಕರುನಾಡು ಹೀಗೆ ಕನ್ನಡಕ್ಕೆ ಸಂಬಂಧಿಸಿದ ಹಲವು ನಿರುಕ್ತಿಗಳ ಬಗೆಗೆ ಶೋಧನೆಯಲ್ಲಿ ತೊಡಗಿ ವಿವಿಧ ಸಿದ್ಧಾಂತಗಳನ್ನು ಮಂಡಿಸುತ್ತಾರೆ. ಇವರಲ್ಲಿ ಸ್ವಲ್ಪಮಟ್ಟಿಗೆ ಭಿನ್ನವಾಗಿ ನಿಂತವರೆಂದರೆ ಶಂಬಾ ಅವರು. ಶಂಬಾ ಅವರು ಆಲೂರಿಗೆ ಪರ್ಯಾಯವಾಗಿ ನಿಲ್ಲುತ್ತಾರೆಂದು ಹೇಳಬಹುದು. ಇವರು ಅಕಾಡೆಮಿಕ್ ಶಿಸ್ತನ್ನು ಬಿಟ್ಟು ಅನ್ಯಶಿಸ್ತುಗಳ ಮೂಲಕ ಕನ್ನಡ ಸಂಸ್ಕೃತಿ ಮತ್ತು ಪರಂಪರೆ ಹಾಗೂ ಅದರ ಪ್ರಾಚೀನ ಕುರುಹುಗಳನ್ನು ಕುರಿತು ಸಂಶೋಧನೆ ಮಾಡುತ್ತಾ ಸಾಗುತ್ತಾರೆ. ಸ್ಥಳನಾಮಗಳು, ಜನಾಂಗೀಯ ಅಧ್ಯಯನ, ಭಾಷಿಕ ಸಂಕೇತಗಳ ಇವುಗಳಲ್ಲಿ ಪೂರಕವಾಗಿ ಪುರಾಣಗಳು, ವೇದಗಳು, ಉಪನಿಷತ್ತುಗಳನ್ನು ಬಳಸುತ್ತಾರೆ. ಹೀಗೆ ಕನ್ನಡದ ಚರಿತ್ರೆಯನ್ನು ಕಟ್ಟುವಾಗ ವೇದಗಳ ಕಾಲಕ್ಕೂ ಸಾಗಿ ಕನ್ನಡದ ಸೂಕ್ಷ್ಮ ಎಳೆಗಳನ್ನು ಅಲ್ಲಿ ಕಾಣಲು ಯತ್ನಿಸುತ್ತಾರೆ. ಇಂತಹ ಕ್ರಿಯೆಯಲ್ಲಿ ಏನೇ ಮಿದ್ದರೂ ಶಂಬಾ ಅವರೊಬ್ಬರನ್ನು ಮಾತ್ರ ಓದಿದಾಗ ಅದು ಪೂರ್ಣ ಸತ್ಯವೆಂದೇ ಭಾಸವಾಗಿ ಮೈರೋಮಾಂಚನಗೊಳ್ಳುತ್ತದೆ. ಇದು ಇವರ ಶೈಲಿ. ಈ ನಿಟ್ಟಿನಲ್ಲಿ ‘ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ’ ಭಾಗ ೧, ೨, ‘ಕಣ್ಮರೆಯಾದ ಕನ್ನಡ’, ‘ಮಹಾರಾಷ್ಟ್ರದ ಮೂಲ’, ‘ಕಂನುಡಿಯ ಹುಟ್ಟು’, ‘ಕಂನಟದ ನೆಲೆ’, ‘ಕಂನುಡಿಯ ಜೀವಾಳ’, ‘ಮರಾಠಿ ಸಂಸ್ಕೃತಿ’ ಮೊದಲಾದ ಕೃತಿಗಳನ್ನು ಬರೆಯುತ್ತಾರೆ. ಇವು ಕೂಡ ಕನ್ನಡಿಗರ ಸ್ವಂತಿಕೆಯ ಹುಡುಕಾಟದಲ್ಲಿ ಮಹತ್ತರ ಪಾತ್ರವನ್ನು ವಹಿಸಿದವು.

ಹೀಗೆ ವಸಾಹತುಕಾಲದಲ್ಲಿ ಕರ್ನಾಟಕತ್ವವನ್ನು ರೂಪಿಸುವ ನಿಟ್ಟಿನಲ್ಲಿ ಸ್ವಂತಿಕೆಯ ಹುಡುಕಾಟದಲ್ಲಿ ತೊಡಗಿ, ಅದರ ಪ್ರಾಚೀನ ವಿವರಗಳನ್ನು ಕಟ್ಟಿಕೊಟ್ಟು ಕನ್ನಟಿಗರ ಮೇಲೆ ಮಹತ್ವದ ಪ್ರಭಾವವನ್ನು ಬೀರಿದವರೆಂದರೆ ಸಂಶೋಧನ ನೆಲೆಯ ಎರಡು ವಿಶಿಷ್ಟ ದಿಕ್ಕುಗಳಾದ ಆಲೂರು ಮತ್ತು ಶಂಬಾ ಅವರು. ಇವರಿಬ್ಬರೂ ಉಳಿದ ಇತಿಹಾಸಕಾರರು ಮತ್ತು ಶಂಬಾ ಅವರು. ಇವರಿಬ್ಬರೂ ಉಳಿದ ಇತಿಹಾಸಕಾರರು ಮತ್ತು ಸಂಶೋಧಕರಿಗಿಂತ ಪರಿಣಾಮಕಾರಿ ಪಾತ್ರವನ್ನು ವಹಿಸಿದ್ದು ಸ್ವತಃ ‘ಗೆಳೆಯರ ಗುಂಪಿ’ ನ ಕಾರ್ಯಕಾರಿ ಸದಸ್ಯರಾದ ಇವರು ಧಾರವಾಡವನ್ನು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡದ್ದು ಒಂದು ವಿಶೇಷ.

ಇದೇ ಸಂದರ್ಭದಲ್ಲಿ ಬ್ರಿಟಿಷ್ ವಿದ್ವಾಂಸರು ಹಾಕಿಕೊಟ್ಟ ಮಾರ್ಗದಲ್ಲಿ ಎಸ್. ಜಿ. ನರಸಿಂಹಚಾರ್, ಎಂ. ಎ. ರಾಮಾನುಜ ಅಯ್ಯಂಗಾರ್, ಶಿ. ಶಿ. ಬಸವನಾಳ, ಎ. ಆರ್. ಕೃಷ್ಣಶಾಸ್ತ್ರಿ, ಫ. ಗು. ಹಳಕಟ್ಟಿ, ತೀನಂಶ್ರೀ, ಡಿ. ಎಲ್. ನರಸಿಂಹಾಚಾರ್ ಮೊದಲಾದವರು ಕನ್ನಡ ಗ್ರಂಥ ಸಂಪಾದನೆಯಲ್ಲಿ ತೊಡಗಿ ನೂರಾರು ಸಂಖ್ಯೆಯ ಪ್ರಾಚೀನ, ಮಧ್ಯಕಾಲೀನ ಕೃತಿಗಳನ್ನು ಬೆಳಕಿಗೆ ತಂದರು. ಈ ಕಾರ್ಯದಲ್ಲಿ ಮಠಗಳು, ವಿಶ್ವವಿದ್ಯಾಲಯಗಳು, ಸರಕಾರಿ ಸಂಸ್ಥೆಗಳು ಹೇರಳವಾಗಿ ಧನವ್ಯಯ ಮಾಡಿ. ಇದರಿಂದ ಕನ್ನಡಿಗರು ಸಾಂಸ್ಕೃತಿಕವಾಗಿ ಏಕೀಕೃತ ನೆಲೆಯವರೆಂಬ ಹಳೆಯ ಭಾವನೆಯನ್ನು ಗಟ್ಟಿಯಾಗಿ ಪುನರ್‌‌‌‌‌‌‌‌‌‌‌‌‌‌‌‌ರೂಪಿಸಿಕೊಂಡರು.

ಈ ಕಾಲದಲ್ಲಿ ಸ್ವಂತಿಕೆಯನ್ನು ರೂಪಿಸುವ ಮತ್ತು ಅದರ ಮೂಲಕ ರಾಷ್ಟ್ರೀಯ ಮತ್ತು ಉಪರಾಷ್ಟ್ರೀಯತೆಯನ್ನು ಹೋರಾಟಗಳಲ್ಲಿ ಕನ್ನಡಿಗರನ್ನು ತೊಡಗಿಸುವ ನಿಟ್ಟಿನಲ್ಲಿ ಇಂತಹ ಸಾಹಿತ್ಯ ಕೃತಿಗಳಂತೆ ಹಲವು ಪತ್ರಿಕೆಗಳು ಮಹತ್ತರ ಪಾತ್ರವಹಿಸಿದವು. ಅವುಗಳಲ್ಲಿ ಮುಖ್ಯವಾದವು ಧಾರವಾಡದ ‘ವಾಗ್ಭೂಷಣ’, ‘ಜಯಂತಿ’, ‘ಜಯಕರ್ನಾಟಕ’, ‘ಜೀವನ’, ಮೈಸೂರಿನ ‘ಪ್ರಬುದ್ಧ ಕರ್ನಾಟಕ’ ಹಾಗೂ ಇತರೆ ಭಾಗಗಳಲ್ಲಿ ‘ಶರಣ ಸಾಹಿತ್ಯ’, ‘ಶಿವಾನುಭವ’, ‘ಕರ್ಮವೀರ’ ಮೊದಲಾದವು. ಈ ಪತ್ರಿಕೆಗಳು ಹಲವು ಪ್ರಸಿದ್ಧ ಬರಹಗಾರರ ಸಂಪಾದಕತ್ವದಲ್ಲಿ ಮುನ್ನಡೆದವು. ಉದಾಹರಣೆಗೆ ಬೆಟಗೇರಿ ಕೃಷ್ಣಶರ್ಮ, ಆಲೂರು ವೆಂಕಟರಾವ್, ಎ. ಆರ್. ಕೃಷ್ಣಶಾಸ್ತ್ರಿ, ಶಿ. ಶಿ. ಬಸವನಾಳ ಮೊದಲಾದವರು ಈ ಪತ್ರಿಕೆಗಳನ್ನು ನಡೆಸಿ ಕನ್ನಡಿಗರ ತನವನ್ನು ರೂಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿದರು. ರಾಷ್ಟ್ರೀಯ ಮತ್ತು ಕನ್ನಡಪರ ಹೋರಾಟಗಾರರ ಮುಖವಾಣಿಗಳಾಗಿ ಇವುಗಳಲ್ಲಿ ಹೆಚ್ಚಿನವು ಕಾರ್ಯನಿರ್ವಹಿಸಿದವು. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಪುಟಗಳು ಮೀಸಲಾಗಿದ್ದವು. ಇದರಲ್ಲಿ ಹಲವು ವಾಗ್ವಾದಗಳು ಜರುಗಿದ್ದು ಇದೆ.

ಹೀಗೆ ಹಲವು ತೆರನ ಪಾತ್ರ ನಿರ್ವಹಿಸಿದ ಈ ಪತ್ರಿಕೆಗಳು ವಸಾಹತು ಸಂದರ್ಭದಲ್ಲಿ ‘ಕರ್ನಾಟಕತ್ವ’ ವನ್ನು ಪ್ರಚುರಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದವು. ಇಂತಹ ಪಾತ್ರವನ್ನು ನಿರ್ವಹಿಸಿದವರಲ್ಲಿ ಇನ್ನು ಕೆಲವು ಮುಖ್ಯರೆಂದರೆ ಸಿದ್ದಪ್ಪ ಕಂಬಳಿ, ತಮ್ಮಣ್ಣ ಚಿಕ್ಕೋಡಿ ಮೊದಲಾದವರು. ಇವರು ಕರ್ನಾಟಕ ಏಕೀಕರಣಕ್ಕೆ ಒತ್ತಾಸೆಯಾಗಿ ನಿಂತು ಕೆಲಸ ಮಾಡಿದವರು. ರಾಜಕೀಯ ವಲಯದಲ್ಲಿ ಡಾ. ಹರ್ಡೀಕರ್, ದಿವಾಕರ್, ರಾಮಕೃಷ್ಣ ಕಾರಂತ, ಅಣ್ಣಾ ಗುರೂಜಿ, ಶಾಂತನಾಥ ಇಂಗಳೆ, ಜಿನರಾಜ ಹೆಗ್ಡೆ, ಚನ್ನಪ್ಪ ವಾಲಿ, ಓಂಕಾರ ಮಠ, ಹಳ್ಳಿಕೇರಿ ಗುದ್ಲೆಪ್ಪ, ಅಳವಂಡಿ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಪೂಣಚ್ಚ ಇವರು ಮುಖ್ಯರು.

ಹೀಗೆ ಎಲ್ಲಾ ವಲಯದ ಅಸಂಖ್ಯ ಜನರು ಕ್ರಿಯಾಶೀಲರಾಗಿ ದುಡಿದು ಹಲವು ಭಾಷಣಗಳನ್ನು ಸಹ ಮಾಡಿದ್ದಾರೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ಇಂದು ಬರಹ ರೂಪದಲ್ಲಿ ದೊರೆಯುತ್ತವೆ. ಅವುಗಳಲ್ಲಿ ಮುಖ್ಯವಾದವುಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳ ಭಾಷಣಗಳು. ಇವನ್ನು ಅನುಲಕ್ಷಿಸಿ ಇಲ್ಲಿ ಪ್ರಾತಿನಿಧಿಕ ಚರ್ಚೆ ಬೆಳೆಸಬಹುದು.

ಸ್ವಾತಂತ್ರ್ಯಪೂರ್ವ ಅಥವಾ ಕರ್ನಾಟಕ ಏಕೀಕರಣ ಪೂರ್ವ ಸಂದರ್ಭದಲ್ಲಿ ಅಥವಾ ವಸಾಹತು ಸಂದರ್ಭದಲ್ಲಿ ಇವರ ಭಾಷಣಗಳ ಆಶಯಗಳು ಸಾಮಾನ್ಯವಾಗಿ ರಾಷ್ಟ್ರಪ್ರೇಮಕ್ಕಿಂತ ನಾಡಪ್ರೇಮಕ್ಕೆ ಹೆಚ್ಚಾಗಿ ಸಂಬಂಧಿಸಿವೆ. ಆದ್ದರಿಂದಲೇ ಎಚ್. ವಿ. ನಂಜುಂಡಯ್ಯ, ಆರ್. ನರಸಿಂಹಾಚಾರ್, ರೊದ್ದ ಶ್ರೀನಿವಾಸರಾರ್, ಬೆನಗಲ್ ರಾಮರಾವ್, ಆಲೂರು ವೆಂಕಟರಾವ್, ಬಿ. ಎಂ. ಶ್ರೀ, ಶಂಬಾ ಮೊದಲಾದವರ ಭಾಷಣಗಳಲ್ಲಿ ಕನ್ನಡ ಭಾಷೆ ಮತ್ತು ನಾಡುಗಳ ಪ್ರಾಚೀನತೆ, ಸಾಹಿತ್ಯ ಸಂಪತ್ತು, ಶಾಸನ ಸಂಪತ್ತು, ಸಾಮ್ರಾಜ್ಯಗಳ ಚರಿತ್ರೆ, ಭಾಷಾತತ್ವಗಳು, ಕನ್ನಡ – ಸಂಸ್ಕೃತಗಳ ಸಂಬಂಧಾಂತರ ಮೊದಲಾದ ಚರ್ಚೆಗಳು ಹೇರಳವಾಗಿವೆ. ಇದಕ್ಕೆ ಆ ಕಾಲದ ಚಾರಿತ್ರಿಕ ಸಂದರ್ಭದ ಅನಿವಾರ್ಯತೆ. ಕನ್ನಡದ ಇತಿಹಾಸ ಮತ್ತು ಸಾಹಿತ್ಯಗಳ ಪುನರ್ ನಿರ್ಮಾಣ ಮತ್ತು ದಾಸ್ಯದಿಂದ ಬಿಡುಗಡೆ ಹಾಗೂ ಕನ್ನಡಿಗರ ಅಖಂಡತೆ ಈ ತುರ್ತಿನ ವಿಚಾರಗಳು ಅಂದು ಕನ್ನಡಿಗರನ್ನು ಕಾಡುತ್ತಿದ್ದುದರಿಂದ, ಅವರ ಅನಧಿಕೃತ ಶಾಸಕರುಗಳಾದ ಸಾಹಿತಿಗಳು ಸಹಜವಾಗಿಯೇ ಆ ವಿಚಾರಗಳನ್ನು ಕುರಿತು ಚಿಂತನೆ ನಡೆಸಬೇಕಿದ್ದಿತು. ಈ ಹಿನ್ನೆಲೆಯಲ್ಲಿ ಇವರ ಭಾಷಣಗಳು ಮೂಡಿವೆ. ಈ ನಿಟ್ಟಿನಲ್ಲಿ ಅಧಿಕ ಭಾಷಣಗಳನ್ನು ಮಾಡಿ ನಾಡಿನ ಉದ್ದಗಲಕ್ಕೂಜನರನ್ನು ಜಾಗೃತರನ್ನಾಗಿ ನಿಟ್ಟಿನಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ ಮುಖ್ಯರಲ್ಲಿ ಬಿ. ಎಂ. ಶ್ರೀ ಅವರೂ ಒಬ್ಬರು. ವಾಸ್ತವವಾಗಿ ಸಾಹಿತ್ಯ ಜಿಜ್ಞಾಸುಗಳಾಗಿದ್ದ ಇವರು ಕನ್ನಡ ನಾಡು ಮತ್ತು ನುಡಿಗಳ ದುಃಸ್ಥಿತಿಯನ್ನು ಕಂಡು ಅದಕ್ಕಾಗಿ ಟೊಂಕ ಕಟ್ಟಿ ನಿಂತುದು ಇಂದು ಇತಿಹಾಸದ ಮಾತಾಗಿದೆ.

ಹೀಗೆ, ಸಭೆ ಸಮಾರಂಭಗಳಲ್ಲಿ ಜರುಗುತ್ತಿದ್ದ ಹಲವಾರು ಭಾಷಣಗಳು ಸ್ವಂತಿಕೆಯ ಬಗೆಗೆ ಅರಿವನ್ನು ಮೂಡಿಸುವಲ್ಲಿ ಸಾಮಾನ್ಯ ಕನ್ನಡಿಗರ ನೆಲೆಯಲ್ಲಿ ಮಹತ್ತರ ಪರಿಣಾಮವನ್ನು ಉಂಟು ಮಾಡಿದವು. ಇದರ ಜೊತೆಗೆ ಸಾಹಿತಿಗಳಾದವರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಇದೇ ಕಾರ್ಯವನ್ನು ಮತ್ತೊಂದು ರೀತಿಯಲ್ಲಿ ಮಾಡಿದರು.

ಕನ್ನಡ ಕಥಾ ಸಾಹಿತ್ಯದ ಗಳಗನಾಥ, ದೇವುಡು ನರಸಿಂಹಶಾಸ್ತ್ರೀ, ಮಾಸ್ತಿ ಮೊದಲಾದವರು ಹಲವಾರು ಚಾರಿತ್ರಿಕ ಕಾದಂಬರಿಗಳನ್ನು ಬರೆದರು. ಈ ನಿಟ್ಟಿನಲ್ಲಿ ಮಾಧವ ‘ಕರುಣಾವಿಲಾಸ’, ‘ಮಯೂರ’, ‘ಕನ್ನಡಿಗರ ಕರ್ಮಕಥೆ’, ‘ಚೆನ್ನಬಸವ ನಾಯಕ’, ‘ಚಿಕವೀರ ರಾಜೇಂದ್ರ’ ಮೊದಲಾದ ಕೆಲವು ಕಾದಂಬರಿಗಳನ್ನು ಹೆಸರಿಸಬಹುದು. ಇಂತಹ ಕೃತಿಗಳಿಗೆ ನೃಪತುಂಗ, ಬಸವಣ್ಣ, ಅಕ್ಕಮಹಾದೇವಿ, ಟಿಪ್ಪು, ಕೃಷ್ಣದೇವರಾಯ ಮೊದಲಾದವರು ವಸ್ತುವಾದದ್ದಿದೆ. ಆದರೆ ಇಂತಹ ಕೃತಿಗಳು ಸಣ್ಣಕತೆಯ ಕ್ಷೇತ್ರದಲ್ಲಿ ಬಾರದಿರುವುದು ಕುತೂಹಲಕರ ಸಂಗತಿ.

ಕಾದಂಬರಿ ದೀರ್ಘವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ. ಇಂತಹ ಕೃತಿಗಳಲ್ಲಿ ಚಿತ್ರಿತವಾಗಿರುವ ಕನ್ನಡನಾಡಿನ ‘ವೈಭವ’ಯುತ ಇತಿಹಾಸವು ಸಹಜವಾಗಿಯೇ ಸಹೃದಯನಲ್ಲಿ ಪರಿಣಾಮ ಬೀರುವುದರಲ್ಲಿ ಆಶ್ಚರ್ಯವಿಲ್ಲ. ಚಾರಿತ್ರಿಕ ಒತ್ತಡದಿಂದ ಮೂಡಿಬಂದ ಕೃತಿಗಳು ಇವು ಆದದ್ದರಿಂದ ಇವುಗಳ ಓದುಗರ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಾಗಿತ್ತು.

ಇದೇ ನಿಟ್ಟಿನಲ್ಲಿ ಹಲವು ನಾಟಕಗಳು ಪ್ರಯೋಗಗೊಂಡವು. ಅಂತಹ ನಾಟಕಗಳಲ್ಲಿ ವೃತ್ತಿರಂಗಭೂಮಿ ನೆಲೆಯ ‘ವಿದ್ಯಾರಣ್ಯ’ ಮತ್ತು ‘ಎಚ್ಚಮ ನಾಯಕ’ ಮುಖ್ಯವಾದವುಗಳು. ಇವುಗಳ ಮೂಲಕ ಹಿಂದಿನ ಮಹಾಸಾಮ್ರಾಜ್ಯವಾದ ವಿಜಯನಗರದ ಗತ ನೆನಪನ್ನು ಮರುಕಳಿಸುತ್ತಾರೆ. ಎಚ್ಚಮನಾಯಕನ ಸಂದರ್ಭದಲ್ಲಿ ಆನೆಗೊಂದಿಯ ನೆನಪಾಗುತ್ತದೆ. ಇವುಗಳ ಜೊತೆಗೆ ಹವ್ಯಾಸಿ ನೆಲೆಯ ಗರುಡ ಸದಾಶಿವರಾಯರ ‘ಕನ್ನಡ ಕಡುಗಲಿ’, ಗುಬ್ಬಿ ಕಂಪನಿಯ ‘ಕರ್ಣಾಟಕ ಸಾಮ್ರಾಜ್ಯ’, ನರಸಿಂಹ ಲಕ್ಷ್ಮಣ ಹೆಗಡೆಯವರ ‘ಸಂಗೀತ ಕರ್ನಾಟಕ ನಾಟಕಗಳು’, ಎಂ. ಆರ್. ಶ್ರೀ. ಅವರ ‘ನಾಗರೀಕ’, ಶಿರಹಟ್ಟಿ ಲಕ್ಕಪ್ಪನ ‘ಕನ್ನಡಿಗನ ಕಲಿತನ’, ಒಡ್ಡರ್ ಬರೆದ ‘ಕರ್ಣಾಟಕದ ಏಕೀಕರಣ’, ಹೊಸುರು ಗೋವಿಂದನ ‘ಕರ್ನಾಟಕ ರಾಜ್ಯ ಸೂರ್ಯೋದಯ’, ನಾಗಪ್ಪ ಶೆಟ್ಟರ ‘ಕನ್ನಡಮ್ಮನ ಕೆರೆ’, ಮುಗಳಿ ಅವರ ‘ಏಕೀಕರಣ’ ಮೊದಲಾದ ನಾಟಕಗಳು ಕನ್ನಡಿಗರನ್ನು ಎಚ್ಚರಿಸಿದವು. ಇವುಗಳ ಮೂಲಕ ಪ್ರಾಚೀನ ಕರ್ನಾಟಕದ ವೈಭವ ಮತ್ತು ಅದರ ಮೂಲಕ ವಾಸ್ತವದ ಅರಿವನ್ನು ತಂದು ಕೊಡುವ ಆಶಯ ಈ ನಾಟಕಗಳಲ್ಲಿ ವ್ಯಕ್ತವಾಗಿದೆ. ಹಿಂದೆ ಗೋದಾವರಿವರೆಗೂ ಚಾಚಿಕೊಂಡಿದ್ದು ಕನ್ನಡ ದೇಶ ಕಿರಿದಾದುದರ ಬಗೆಗಿನ ವಿವೇಚನೆ ‘ಕನ್ನಡಮ್ಮನ ಕೆರೆ’ಯಲ್ಲಿ ವ್ಯಕ್ತವಾಗಿದೆ.

ಒಟ್ಟಾರೆ ಎಲ್ಲಾ ನಾಟಕಗಳ ವಸ್ತು ಕನ್ನಡ ಭಾಷೆ, ಸಂಸ್ಕೃತಿ, ಅದರ ಪ್ರಾಚೀನತೆ, ಶ್ರೀಮಂತಿಕೆ ಮತ್ತು ವರ್ತಮಾನದ ದೈನ್ಯತೆ ಇವುಗಳೇ ಆಗಿವೆ. ಇವುಗಳ ಮೂಲಕ ಕನ್ನಡಿಗರು ತಮ್ಮ ಐತಿಹಾಸಿಕತೆಯನ್ನು ಸುಲಭವಾಗಿ ಮನಗಂಡರು. ಈ ನಿಟ್ಟಿನಲ್ಲಿ ಆಲೋಚನಾ ಪರರಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಗಗಳನ್ನು ಒಂದೆಡೆ ತರುವ ಚಳುವಳಿಗೆ ಒತ್ತಾಸೆಯಾಗಿ ನಿಂತರು. ಇಂದಿನ ಸಮೂಹ ಮಾಧ್ಯಮಗಳು ಅಂದು ಇಲ್ಲವಾದ ಕಾರಣ ನಾಟಕಗಳು ಪರಿಣಾಮಕಾರಿ ಕಲಾಮಾಧ್ಯಮಗಳಾಗಿದ್ದವು. ಈ ನೆಲೆಯಲ್ಲಿ ಅಭಿವ್ಯಕ್ತಿ ಪಡೆದ ಈ ನಾಟಕಗಳು ಜನಮನದ ಆಳಕ್ಕೆ ಸುಲಭವಾಗಿ ಇಳಿದವು.

ಈ ನಿಟ್ಟಿನಲ್ಲಿ ಲಾವಣಿಕಾರರ, ಕವಿಗಳ ಪ್ರಯತ್ನಗಳೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿವೆ. ಕನ್ನಡಪರವಾದ ಯಾವುದೇ ಸಭೆ ಸಮಾರಂಭಗಳು ಆರಂಭವಾಗುವ ಮುನ್ನ ಆ ವೇದಿಕೆಗಳಲ್ಲಿ ಮೊದಲು ಕನ್ನಡ ನಾಡಿನ ಚಾರಿತ್ರಿಕೆಯನ್ನು ವಸ್ತುವನ್ನಾಗಿ ಹೊಂದಿದ್ದ ಲಾವಣಿಗಳನ್ನು ಹಾಡಿಸುತ್ತಿದ್ದರು. ಇವು ಜನರನ್ನು ಸುಲಭವಾಗಿ ಪ್ರಚೋಜಿಸಿ, ಕನ್ನಡಪರವಾದ ವಾತಾವರಣವನ್ನು ಮೂಡಿಸುತ್ತಿದ್ದವು. ಅನಂತರವೇ ಭಾಷಣ ಇತ್ಯಾದಿಗಳು ನಡೆಯುತ್ತಿದ್ದದ್ದು. ಹೀಗೆ ಲಾವಣಿಗಳು ಕನ್ನಡಿಗರು ತಮ್ಮ ಸ್ವಂತಿಕೆಯನ್ನು ಗುರುತಿಸಿಕೊಂಡು, ಕರ್ನಾಟಕತ್ವವನ್ನು ಜಾಗೃತಗೊಳಿಸಿಕೊಂಡು ಬ್ರಿಟಿಷರ ವಸಾಹತುಶಾಹಿ ನೀತಿಗೆ ಪ್ರಬಲ ಪ್ರತಿರೋಧವೊಡ್ಡಲು ಧೀಃಶಕ್ತಿಯನ್ನು ನೀಡಿದವು. ಇದೇ ಕಾರ್ಯವನ್ನು ಮತ್ತೊಂದು ನೆಲೆಯಲ್ಲಿ ಸಾಧಿಸಿದುದು, ಕವಿತೆಗಳು.

ಹೀಗೆ, ವಸಾಹತುಶಾಹಿ ಸಂಸ್ಕೃತಿಯ ಸಂದರ್ಭದಲ್ಲಿ ಬ್ರಿಟಿಷರ ಕೊಡುಗೆಯನ್ನು ಮನಗಂಡ ಭಾರತೀಯರು ಹೊಸ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಲು ಮುಂದಾಗಿ, ವಿಭಿನ್ನ ವಲಯಗಳಲ್ಲಿ ಅದಕ್ಕೆ ಅಭಿವ್ಯಕ್ತಿ ನೀಡುತ್ತಾ ಬಂದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸಕಾರರು, ಸಂಶೋಧಕರು, ಭಾಷಣಕಾರರು, ನಾಟಕಕಾರರು, ಕವಿಗಳು, ಇತರೆ ಸಾಹಿತಿಗಳು, ಪತ್ರಕರ್ತರು ಹೀಗೆ ಹಲವು ಶಿಸ್ತುಗಳ ವಕ್ತಾರರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯನ್ನು ಕ್ರಿಯಾಶೀಲರಾಗಿ ಕನ್ನಡ ಪರಂಪರೆಯ ಬಗೆಗೆ ಹುಡುಕಾಟ ನಡೆಸಿ, ಅದರಿಂದ ಹಲವು ಮಹತ್ವದ ಸಂಗತಿಗಳನ್ನು ಹೊರತೆಗೆದರು. ಇದರಿಂದ ಪ್ರಭಾವಿತರಾದ ಕನ್ನಡಿಗರು ಏಕಕಾಲಕ್ಕೆ ಕರ್ನಾಟಕತ್ವ ಮತ್ತು ಭಾರತೀಯತೆಗಳನ್ನು ಮೈಗೂಡಿಸಿಕೊಂಡು ತಮ್ಮ ಗುರಿಯತ್ತ ಸಾಗಿದರು.