I

ಕನ್ನಡಿಗರಲ್ಲಿ ಜಾಗೃತಿಯನ್ನುಂಟುಮಾಡಲು ವಿದ್ವಾಂಸರು ಅನೇಕ ಮಾರ್ಗಗಳನ್ನು ಅನುಸರಿಸಿದ್ದಾರೆ. ಆದರೆ ಈ ಕಾರ್ಯಕ್ಕೆ ಭಾಷಾಶಾಸ್ತ್ರ ಮತ್ತು ಇತಿಹಾಸವನ್ನು ಬಳಸಿಕೊಂಡು ಜನರಲ್ಲಿ ರಾಜಕೀಯ, ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರಚೋದಿಸಿದವರು ವಿರಳ. ಅಂಥವರಲ್ಲಿ ಶಂಬಾ ಅವರು ಒಬ್ಬರು. ಕನ್ನಡ ನಾಡನ್ನು ಒಗ್ಗೂಡಿಸುವುದಕ್ಕಾಗಿ. ನಾಡು, ನುಡಿಗಳ ಬಗೆಗೆ ಜನರಲ್ಲಿ ಅಭಿಮಾನವನ್ನು ಬಡಿದೆಬ್ಬಿಸುವುದಕ್ಕಾಗಿ, ಕರ್ನಾಟಕದ ಇತಿಹಾಸವನ್ನು, ಭಾಷೆಯ ಸಾಮಾಜಿಕ ಚಹರೆಯನ್ನು ಅವರು ಚೆನ್ನಾಗಿ ಬಳಸಿಕೊಂಡರು. ಈ ಮೂಲಕವಾಗಿ ತಮ್ಮ ಅಧ್ಯಯನಕ್ಕೆ ಒಂದು ತಾತ್ವಿಕ ಹಿನ್ನೆಲೆಯನ್ನು ಒದಗಿಸಿದರು. ಹಾಗೆ ನೋಡಿದರೆ ಅವರು ಇತಿಹಾಸದ ಬಗೆಗೆ ಇದ್ದ ಪ್ರಾಚೀನ ಭಾರತೀಯರ ದೃಷ್ಟಿಯನ್ನು ಅವಗತ ಮಾಡಿಕೊಂಡಿದ್ದರು. ಇತಿಹಾಸದಿಂದ ಅಂದರೆ ಹಿಂದೆ ನಡೆದ ಘಟನೆಗಳಿಂದ ಮುಂದಿನ ಪೀಳಿಗೆಗೆ ಪ್ರಯೋಜನವಾಗಬೇಕು. ಉತ್ತಮ ಪಾಠ, ಮಾರ್ಗದರ್ಶನ ದೊರೆಯಬೇಕು ಎಂಬುದೇ ಆ ದೃಷ್ಟಿ. ಘಟನೆಗೆ ಸಂಬಂಧಿಸಿದ ವ್ಯಕ್ತಿ ಅಥವಾ ತೇದಿಗಳಿಗಿಂತ ಆ ಘಟನೆಯಿಂದ ದೊರೆಯುವ ಪಾಠಕ್ಕೆ ಅವರು ಹೆಚ್ಚು ಮಹತ್ವಕೊಟ್ಟಿದ್ದರು. ಶಂಬಾ ಅವರು ತಮ್ಮ ಐತಿಹಾಸಿಕ ಲೇಖನಗಳಲ್ಲಿ ಈ ದೃಷ್ಟಿಯನ್ನಿಟ್ಟುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹಿಂದೆ ನಡೆದ ಘಟನೆಗಳನ್ನು, ಆಗಿಹೋದ ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಸಾಧನೆಗಳನ್ನು ತ್ಯಾಗವನ್ನು ಎತ್ತಿತೋರಿಸಿ ಆ ಹಿನ್ನೆಲೆಯಲ್ಲಿ ಜನರ ಅಭಿಮಾನವನ್ನು ಕೆರಳಿಸಿ, ಸರಿಯಾದ ದಾರಿಯಲ್ಲಿ ಕಾರ್ಯೋನ್ಮುಖವಾಗುವಂತೆ ಪ್ರೇರೇಪಿಸಿದರು. ಅವರ ಕೃತಿಗಳಾದ ಕನ್ನಡ ನೆಲೆ, ಕಂನುಡಿಯ ಹುಟ್ಟು, ಕಣ್ಮರೆಯಾದ ಕನ್ನಡ ಅವರ ಈ ಉದ್ದೇಶವನ್ನು ಬಹುಮಟ್ಟಿಗೆ ಸಾಧಿಸಿವೆ. ಅವರ ಈ ಕೃತಿಗಳನ್ನು ಆಧರಿಸಿ ಕನ್ನಡ – ಕರ್ನಾಟಕ ಕುರಿತು ಶಂಬಾ ಅವರ ಆಲೋಚನೆಗಳನ್ನು ಈ ಅಧ್ಯಾಯದಲ್ಲಿ ಸಂಗ್ರಹಿಸಿ, ವಿವೇಚಿಸಲಾಗಿದೆ.

ಮೊದಲನೆಯದಾಗಿ ಕನ್ನಡವೆಂದರೇನು? ಈ ಪದವನ್ನು ನಾವೇ ಹಲವಾರು ರೀತಿಯಲ್ಲಿ ಪ್ರಯೋಗಿಸುತ್ತಿದ್ದೇವೆ. ‘ನಾನು ಈ ಪುಸ್ತಕವನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ ಎಂದಾಗ ‘ಕನ್ನಡ’ ಪದವು ಭಾಷೆಯನ್ನು ನಿರ್ದೇಶಿಸುತ್ತಿದೆ. ‘ಇವರು ಕನ್ನಡಿಗರು, ಇವರು ಮರಾಠರು’ ಎಂದು ಮೊದಲಾಗಿ ಹೇಳಿದಾಗ ಇದೇ ಕನ್ನಡ ಪದವು ‘ಜನಾಂಗ – ಜನಪದ ಸೂಚಕವಾಗುತ್ತಿದೆ. ಇದರಂತೆಯೇ, ಅನೇಕ ಸಲ ಈ ಪದವು ‘ಕನ್ನಡದೊಳ್’ ಎಂದು ಮೊದಲಾಗಿ ದೇಶವಾಚಕವಾಗಿ ಪ್ರಾಚೀನ ಕವಿಗಳಿಂದ ಪ್ರಯುಕ್ತವಾದದ್ದನ್ನು ಕಾಣುತ್ತೇವೆ. ಉದಾ. ೯ನೇ ಶತಮಾನದ ನೃಪತುಂಗದೇವನು ತನ್ನ ‘ಕವಿರಾಜ ಮಾರ್ಗ’ ದಲ್ಲಿ ಕನ್ನಡ ನಾಡಿನ ವರ್ಣನೆಯನ್ನು ಮಾಡುವಾಗ ‘ಕಾವೇರಿಯಿಂದಮ್ ಆ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂದೂ, ‘ಅದರೊಳಗಂ ಕಿಸುವೊೞಲ್, ಆ ವಿದಿತ ಮಹಾ ಕೊಪಣನಗರದಾ ಸದಭಿಸ್ತುತಮಪ್ಪ ಒಕ್ಕುಂದದ ನಡುವಣ ನಾಡೆ ಕನ್ನಡದ ತಿರುಳ್’ ಎಂದೂ ದೇಶವಾಚಕವಾಗಿ ಹೇಳುತ್ತಾನೆ. ಇದರಂತೆಯೇ, ೧೨೩೫ರಲ್ಲಿಯ ಆಂಡಯ್ಯನು ‘ಕನ್ನಡಮೆನಿಪ್ಪಾನಾಡು ಚೆಲ್ವಾಯಿತು ಎಂದ ೧೩ನೆಯ ಶತಕದ ಕೇಶಿರಾಜಾದಿಗಳು ತದ್ಧಿತ ಪ್ರತ್ಯಯ ಸಂದರ್ಭದಲ್ಲಿ ಕನ್ನಡಿಗ ಪದವು ಈ ದೇಶವಾಚಕವನ್ನೇ ಸೂಚಿಸುವಂತೆಯೂ ಹೇಳುತ್ತಾರೆ. ಕೆಲವು ವಿದ್ವಾಂಸರ ಪ್ರಕಾರ ‘ಕನ್ನಡ’ ಪದವು ‘ಕುಲ’ ವಾಚಕವಾಗಿಯೂ ಇದೆ. ಯಾಕೆಂದರೆ, ಶ್ರೀ. ಚೆನ್ನಬಸವೇಶ್ವರರು ತೆಂಕಣ ನಾಡಿನ ಕುಲಗಳನ್ನು ಹೇಳುವಾಗ ‘ಕನ್ನಡ, ಕಮ್ಮೆ, ವಾಣಿಜ್ಯ, ತಿಗುಳ’ ಎಂದು ಹೇಳುತ್ತಾರೆ. ಶ್ರೀ ನಿಜಗುಣಶಿವಯೋಗಿಗಳು ‘ವಿವೇಕಚಿಂತಾಮಣಿ’ ಯಲ್ಲಿ ‘ಕನ್ನಡಿಗ ಕುಲ’ ದವನೆಂದು ಹೇಳಿಕೊಳ್ಳುತ್ತಾನೆ. ವಿಜಯನಗರದ ಅಮಾತ್ಯ ಲಕ್ಷ್ಮೀಧರನೂ ‘ಕನ್ನಡಿಗ ಕುಲದವನೇ’. ಶ್ರೀ ವಿದ್ಯಾರಣ್ಯರು ‘ಕನ್ನಡ’ ಕುಲದವರು. ಈಗಲೂ ಮಹಾರಾಷ್ಟ್ರದಲ್ಲಿ ‘ಕಾನಡೆ’ ಮನೆತನಗಳಿವೆ.

ಆದ್ದರಿಂದ, ಕನ್ನಡವೆಂದರೆ ಭಾಷೆ, ಜನ, ದೇಶ ಮತ್ತು ಕುಲ ಎಂಬ ನಾಲ್ಕು ವಿಷಯಗಳನ್ನೂ ಸೂಚಿಸುವಂತಾಯಿತು. ಅಂದಮೇಲೆ ನಿಜವಾಗಿ ಈ ಪದದ ಅರ್ಥವೇನು? ಅದು ಭಾಷೆಯೇ? ಜನವೇ? ನಾಢೇ? ಯಾವುದು? ವಿಚಾರ ಮಾಡಬೇಕು. ಇದರ ಇತ್ಯರ್ಥವಾಗಬೇಕಾದರೆ, ನಾವು ಕನ್ನಡ ಪದದ ನಿರುಕ್ತವನ್ನು ಅರಿತುಕೊಳ್ಳಬೇಕು.

‘ಕನ್ನಡ’ದ ವ್ಯುತ್ಪತ್ತಿ ‘ಕನ್ನಡ’ ಇಲ್ಲವೆ ‘ಕರ್ನಾ(ಣಾ)ಟಕ’ ಈ ಪದಗಳ ವ್ಯುತ್ಪತ್ತಿ ಎಂತು? ಎಂದು ವಿಚಾರಿಸಿದರೆ, ಇದರಲ್ಲಿ ಮೂಲತಃ ಎರಡು ಪಂಗಡಗಳಿವೆ. ಹಲವಾರ ಪ್ರಕಾರ ‘ಕನ್ನಡ’ ಪದವು ಸಂಸ್ಕೃತ ‘ಕರ್ಣಾ(ನಾ)ಟಕ’ ಪದದ ತದ್ಭವವೆಂತಲೂ, ಈ ‘ಕರ್ಣಾ(ನಾ)ಟಕ’ ಪದದ ವ್ಯುತ್ಪತ್ತಿಯೇ ಮುಖ್ಯವಾದುವೆಂತಲೂ ಹೇಳುತ್ತಾರೆ. ಆದ್ದರಿಂದ, ಇವರ ಪ್ರಕಾರ ‘ಕರ್ನಾಟಕ’ ಪದದಿಂದ ಕನ್ನಡವು ಹುಟ್ಟಿಕೊಂಡಿತು. ೧೩ನೆಯ ಶತಮಾನದ ಕೇಶಿರಾಜನು ಕೂಡ, ತನ್ನ ತದ್ಭವ ಪ್ರಕರಣದಲ್ಲಿ ‘ಕರ್ನಾಟಕ’ ಪದದಿಂದಲೇ ‘ಕನ್ನಡ’ ವು ಹುಟ್ಟಿಕೊಂಡಿತೆಂದು ಹೇಳುತ್ತಾನೆ. ಹಾಗಾದರೆ ಈ ‘ಕರ್ನಾಟಕ’ದ ನಿರುಕ್ತವಾದರೂ ಏನು? ಇದನ್ನೂ ಕೂಡ, ಅನೇಕ ವಿಧವಾಗಿ ಪಂಡಿತರು ವಿವರಿಸುತ್ತಾರೆ.

(ರ್ಣಾ)ರ್ನಾಟಲ ೧. ಹಲವರ ಪ್ರಕಾರ ‘ತುಂಬಾ ಪ್ರಸಿದ್ಧವಾದ ನಾಡು’ ಎಂಬರ್ಥದಲ್ಲಿ ಈ ‘ಕರ್ಣಾಟಕ’ ಪದವು ಸಿದ್ಧವಾಯಿತು. ‘ಶಬ್ದರತ್ನಾವಲಿ’ಯ ಪ್ರಕಾರ ‘ಕರ್ಣೇಷು ಆಟತಿ, ಪ್ರಭೂತಯಶಸ್ವಿನಃ ಏತದ್ದೇಶಸ್ಥಃ ರಾಜ್ಞಃ ಗುಣಾದಿಕೇರ್ತನೇನ ಸರ್ವೇಷಾಂ ಕಣೇಷು ಭ್ರಮತೀತಿ ಕರ್ಣ + ಅಟ್ + ಅಚ್ ಸ್ವನಾಮ ಖ್ಯಾತದೇಶ ವಿಶೇಷಃ’ ಎಂದು ಅರ್ಥ.

೨. ಕ್ರಿ. ಶ. ೧೩೫೯ರ ಖೇಶವರ್ಣಿ ಎಂಬಜೈನಪಂಡಿತನ ಪ್ರಕಾರ ಭೇದನಾರ್ಥಕ ಕರ್ಣ ಧಾತುವಿನಿಂದ ಈ ಪದವು ಹುಟ್ಟಿತು. ಅಂದರೆ ದಿವ್ಯಭಾಷೆಯಾದ ಕಾರಣ ‘ಕರ್ಣಾಟ’ ಎಂಬ ಹೆಸರು ಬಂದಿತೆಂದು ಇವರ ಅಭಿಪ್ರಾಯ.

೩. ಕ್ರಿ. ಶ. ಸುಮಾರು ೧೭೦೦ರಲ್ಲಿ ಇದ್ದಿರಬಹುದಾದ ‘ವಿಶ್ವಗುಣಾದರ್ಶ’ ದ ಕರ್ತೃ ವೆಂಕಟಾಧ್ವರಿಯ ಪ್ರಕಾರ ಮೇಲಿನ ಮೊದಲನೆಯ ಅಭಿಪ್ರಾಯದಂತೆಯೇ, ಸುಪ್ರಸಿದ್ಧವಾದ ನಾಡು ಎಂದರ್ಥ.

ಕರ್ಣಾಟದೇಶೋಯಃ ಪೂರ್ವಂ ಕರ್ಣದೇಶಮಭೂಯತ್ |
ಏಷ ಸಾಂಪ್ರತಂ ಪಶ್ಯ ಚಕ್ಷುಷೋ ಭೂಷಣಾಯತೇ ||

ಆದರೆ, ಮೇಲಿನ ಅಭಿಪ್ರಾಯಗಳೆಲ್ಲವೂ ಕೇವಲ ಕವಿಕಲ್ಪನೆಗಳೆಂದು ಹೇಳಿ, ಆರ್. ನರಸಿಂಹಾಚಾರ್ಯ ಅವರು ‘ಕನ್ನಡ’ವೇ ಮೂಲಪದವೆಂದು ಸೂಚಿಸುತ್ತಾರೆ. ಯಾಕೆಂದರೆ ‘ಕರ್ಣಾಟ’ವು ಸುಪ್ರಸಿದ್ಧವಾಗಿ ‘ಕರ್ಣಗಳಲ್ಲಿ ಆಟನ’ ಮಾಡುವವರೆಗಾದರೂ, ಈ ದೇಶಕ್ಕೆ ಇದ್ದ ಹೆಸರು ಯಾವುದು ಎಂಬ ಪ್ರಶ್ನೆಗೆ ಇದರಿಂದ ಸಮಾಧಾನವಿಲ್ಲ.

೪. ಈ ‘ಕರ್ನಾಟಕ’ದ ಬಗ್ಗೆಯೇ, ಇನ್ನೂ ಒಂದು ಅಭಿಪ್ರಾಯವೆಂದರೆ ‘ಇದು ಕರ್ಣನ ಅಟನದ ಪ್ರದೇಶ. ಕರ್ಣನು ವನವಿಹಾರಕ್ಕಾಗಿ, ಆಟ ಬೇಟಗಳಿಗಾಗಿ ಈ ಕಾಡಿಗೆ ಬರುತ್ತಿದ್ದನಂತೆ!’.

೫. ಇದರಂತೆಯೇ, ಸ್ಕಂದಪುರಾಣದಲ್ಲೂ ಕೂಡ, ಈ ನಾಡಿನಲ್ಲಿ ‘ಕರ್ಣಾಟ’ ಎಂಬ ರಾಕ್ಷಸನಿದ್ದು, ಅವನು ಬ್ರಾಹ್ಮಣರನ್ನು ಪೀಡಿಸಿ, ಕೊನೆಗೆ ನಷ್ಟ ಹೊಂದಿದನು ಎಂದು ಮೊದಲಾಗಿದ್ದುದರಿಂದ ‘ಕರ್ನಾಟ’ ರಾಕ್ಷಸನಿಂದ ಈ ನಾಡಿಗೆ ಹೆಸರು ಬಂದಿತೆಂದು ಅಭಿಪ್ರಾಯ.

ಆದರೆ, ಈ ಅಭಿಪ್ರಾಯವನ್ನು ನಂಬಬೇಕೆಂದರೆ, ಎರಡು ಪ್ರಶ್ನೆಗಳು ನಮ್ಮನ್ನು ಬಾಧಿಸುತ್ತವೆ. ಒಂದು ಕೇವಲ ಒಬ್ಬ ವ್ಯಕ್ತಿಯ ಇಲ್ಲವೆ ಒಬ್ಬ ರಾಕ್ಷಸನ ಹೆಸರಿನಿಂದ ಈ ರೀತಿ ಒಂದು ಇಡೀ ನಾಡಿಗೇ ಹೆಸರು ಬರಬಹುದೆ? ಹಾಗೆ ಬರುವುದೇ ಆದರೆ, ಈ ‘ಕರ್ಣಾಟ’ ರಾಕ್ಷಸನು ಅಷ್ಟರಮಟ್ಟಿಗೆ ಸುಪ್ರಸಿದ್ಧ ಇಲ್ಲವೆ ಕುಪ್ರಸಿದ್ಧನಾಗಿದ್ದನೇ? ಸ್ಕಂದ ಪುರಾಣವನ್ನು ಬಿಟ್ಟು ಉಳಿದ ಯಾವ ಕಡೆಗೆ ಇಷ್ಟು ದೊಡ್ಡ ರಾಕ್ಷಸನ ವರ್ಣನೆಯಿದೆ? ಇತ್ಯಾದಿ. ಎರಡನೆಯದಾಗಿ, ‘ಕರ್ಣಾಟ’ ನಿಗೇ ಒಂದು ನಾಡು ಹೋಗುವುದಿದ್ದರೆ, ‘ರಾವಣಾದಿ’ ಅಗ್ರೇಸರರ ಗತಿ ಏನು?…

೬. ಆದ್ದರಿಂದ ಮಹಾರಾಷ್ಟ್ರದ ಸುಪ್ರಸಿದ್ಧ ಸಂಶೋಧಕರಾದ ಶ್ರೀ. ರಾಜವಾಡೆ ಅವರು ಹೆಚ್ಚು ಕಡಿಮೆ ಇದೇ ಕಲ್ಪನೆಯನ್ನೇ ಇಟ್ಟುಕೊಂಡರೂ, ಈ ಸಮಾಸದಲ್ಲಿಯ ಆದಿಪದಕ್ಕೆ ಬೇರೆ ಅರ್ಥವನ್ನು ಹಚ್ಚಿದರು. ಅವರ ಪ್ರಕಾರ “ಕರ್ನಾಟಕವೆಂದರೆ ‘ಕರಣರು’ ಮತ್ತು ‘ನಾಟರು’ ಕೂಡಿದ ಜನಾಂಗ” ಎಂದು ಅರ್ಥ. ಯಾಕೆಂದರೆ, ಮನುವು ತನ್ನ ಕಾಲದ ವ್ರಾತ್ಯಕ್ಷತ್ರಿಯರ ಪಂಗಡಗಳನ್ನು ವಿವರಿಸುವಾಗ, ಈ ರೀತಿ ಹೇಳುತ್ತಾನೆ.

ಝಲ್ಲೋ ಮಲ್ಲಶ್ಚ ರಾಜನ್ಯಾತ್ ವ್ರಾತ್ಯಾನ್ನಿಚ್ಛಿವಿರೇವ |
ನಟಶ್ಚ
ಕರಣಶ್ಚೇವ ಖಸೋ ದ್ರವಿಡ ಏವ ||

ಈ ಜನಾಂಗಗಳ ಉಲ್ಲೇಖವು ‘ಯಮ’, ‘ಪಿತಾಮಹ ಮತ್ತು ‘ಮತ್ಸ್ಯಪುರಾಣ’ ಗಳಲ್ಲೂ ಬರುತ್ತದೆ. ಕರ್ಣ ಇಲ್ಲವೆ ಕರಣ + ನಟ, ಕೂಡಿ ‘ಕರ್ಣಾಟ’ ವಾಯಿತೆಂದು ಈ ಅಭಿಪ್ರಾಯ. ಹಾಗಾದರೆ, ಈ ‘ಕರಣ’ ಅಂದರಾದರೂ ಏನು? ಏನು ಕಿವಿಯುಳ್ಳವರೆಂದು ಅರ್ಥವೇ? ಈ ಪ್ರಶ್ನೆಯ ಉತ್ತರಕ್ಕಾಗಿ ನಾವು ಪುನಃ ಶಂಬಾ ಜೋಶಿ ಅವರ ಚಿಂತನೆಗಳನ್ನು ಗಮನಿಸಬೇಕು. ಆದರೆ, ಇನ್ನೂ ಹಲವು ಆಧುನಿಕ ಭಾಷಾಶಾಸ್ತ್ರಜ್ಞರ ಪ್ರಕಾರ ಈ ರೀತಿ ಸಂಸ್ಕೃತ ‘ಕರ್ಣಾಟ’ದಿಂದ ‘ಕನ್ನಡ’ ಪದವು ಹುಟ್ಟಿತೆನಗನುವುದು ಸರಿಯೆನಿಸದ ಮೂಲಕ, ಅವರು ದೇಶ್ಯ ‘ಕನ್ನಡ’ ದಿಂದಲೇ ಸಂಸ್ಕೃತ ‘ಕರ್ನಾಟ’ಕವು ಬಂದಿರಬೇಕೆಂದು ಸಾರುತ್ತಾರೆ. ಈ ಪಂಗಡದವರ ಅಭಿಪ್ರಾಯಗಳನ್ನೂ ನಾವು ಸ್ಥೂಲವಾಗಿ ಈ ರೀತಿ ಶೇಖರಿಸಬಹುದು.

ಕನ್ನಡ ಮೂಲ, ಅದರ ವ್ಯುತ್ಪತ್ತಿ ಈ ಪಂಡಿತರ ಪ್ರಕಾರ ‘ಕನ್ನಡ’ ಸಮಸ್ತ ಪದದಲ್ಲಿಯ ‘ನಡ’ ಇಲ್ಲವೆ ‘ನಾಡು’ ಎಂಬುದೇನೋ ಸರ್ವಗ್ರಾಹ್ಯ. ಆದರೆ, ಈ ಸಮಾಸದ ಪೂರ್ವಪದದ ಬಗ್ಗೆ ಐಕ್ಯಮತವಿಲ್ಲ. ಏಕೆಂದರೆ, ಈ ಪದಕ್ಕೆ ಬೇರೆಬೇರೆ ರೂಪಗಳನ್ನು ಹೇಳಲು ಸಾಧ್ಯವಿದೆಯೆಂದು ಇವರ ಅಭಿಪ್ರಾಯ. ಅವೆಂದರೆ

೧. ಕರ್ + ನಾಡು ಡಾ ಗುಂಡರ್ಟ ಮತ್ತು ಡಾ ಕಾಲ್ಡ್‌‌‌‌‌ವೆಲ್ ಅವರ ಪ್ರಕಾರ ‘ಕನ್ನಡ’ ಪದವು ಕರ್ + ನಾಡು ಅಂದರೆ, ‘ಕರಿಯ ನಾಡಿನ ಭೂಮಿ’ ಎಂಬರ್ಥದಿಂದ ಬಂದಿತು. ಯಾಕೆಂದರೆ, ಕನ್ನಡ ನಾಡಿನ ಬಹುಭೂಮಿಯು, ಡಾ. ಕಾಲ್ಡ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ವೆಲ್ ಅವರ ಪ್ರಕಾರ ಕರಿದಾಗಿದ್ದು, ‘ಹತ್ತಿಯ ಬೆಳೆಗೆ’ ತುಂಬಾ ಅನುಕೂಲವಾದದ್ದಾಗಿದೆ. ಡಾ. ಕಾಲ್ಡ್‌ವೆಲ್ ಅವರು ಈ ಬಗ್ಗೆ ಬರೆದ ಮಾತುಗಳು ಮನನೀಯವಾಗಿವೆ. ಅವರು ಹೇಳುವುದೇನಂದರೆ :

Karnataka is regarded as a Sanskrit word by native pandits, but I agree with Dr. Gundert in preferring to derive it from the Dravidian words as ಕರ್ black ನಾಡು a Country that is the black country a term very suitable to designate the black cotton soil as it is called of the plateau of the Southern Deccan.

ಆದರೆ, ಈ ನಿರುಕ್ತಕ್ಕಿರುವ ಆಕ್ಷೇಪವೆಂದರೆ, ಕರಿನಾಡಿನಲ್ಲಿರುವ ಎಷ್ಟು ನೆಲವಾದರೂ ಕರಿದಾಗಿದೆ? ಇದರಿಂದಲೇ ಈ ನಾಡಿಗೆ ಹೆಸರು ಬರಬೇಕಾಗಿದ್ದರೆ, ಸಂಪೂರ್ಣ ಮೈಸೂರು ಪ್ರಾಂತ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮತಯ್ತು ಧಾರವಾಡ ಜಿಲ್ಲೆಯ ಬಹುಭಾಗಗಳ ಅವಸ್ಥೆ ಏನು? ಇಲ್ಲಿ ಎಲ್ಲ ಕಡೆಗೂ ನಾವು ಕಾಣುವುದೂ ಕರಿಯ ನೆಲವನ್ನಲ್ಲ, ಕೆಂಪು ನೆಲ ಇಲ್ಲವೆ ‘ಮಸಾರಿ’ ಭೂಮಿ. ಈ ರೀತಿ ಪದಸಿದ್ಧಿಯಾಗುವುದೇ ಆದರೆ, ಕರ್ನಾಟಕವು ‘ಕೆನ್ನಾಡು’ ಆಗಬೇಕೇ ವಿನಾ ಕರಿನಾಡಾಗಲಾರದು. ಮೇಲಾಗಿ, ಈ ನೆಲಕ್ಕೂ ‘ಎರೆನೆಲ’ ಎನ್ನುತ್ತಾರೆಯೇ ವಿನ ‘ಕರಿನೆಲ’ ಎನ್ನರು.

೨. ಕರು + ನಾಡು ಕಾಲ್ಡ್‌ವೆಲ್‌‌ರ ಮೇಲಿನ ಅಭಿಪ್ರಾಯವು ಸಮ್ಮತವಾಗದ ಶ್ರೀ ಹಟ್ಟಿಯಂಗಡಿ ನಾರಾಯಣರಾವ್ ಅವರು ಇಡೀ ಕರ್ನಾಟಕವು ಸಮುದ್ರದ ಮಟ್ಟಕ್ಕಿಂತ ತುಂಬಾ ಎತ್ತರದಲ್ಲಿದ್ದು ತಪ್ಪಲು ಭೂಮಿಯಾದದ್ದರ ಮೂಲಕ ಇದನ್ನು ‘ಕರಿ + ನಾಡು’ ಎಂದು ಬಿಡಿಸದೆ ‘ಕರು + ನಾಡು’ ‘ತಪ್ಪಲುಭೂಮಿ’ ಎಂದು ಬಿಡಿಸಬೇಕೆಂದು ಸೂಚಿಸಿದರು.

ಆದರೆ, ಈ ಅಭಿಪ್ರಾಯಕ್ಕೂ ಕೂಡಮೇಲಿನ ಆಕ್ಷೇಪನೇ ಅಂಟಿಕೊಳ್ಳುತ್ತದೆ. ನಾವು ಕರುನಾಡು ಎಂದು ಕರೆದೆವೇನೋ ನಿಜ, ಆದರೆ ಕನ್ನಡದಲ್ಲಿ ಈ ರೀತಿ ‘ಕರುನಾಡಾಗಿರದೆ’ ತಪ್ಪಲು ಪ್ರದೇಶವಾಗಿರದೆ ಇರುವ ಬಯಲು ಸೀಮೆಯ ಗತಿಯೇನು? ಅದೂ ಅಲ್ಲದೆ, ಈ ‘ಕರು + ನಾಡು’ ಪದವು ತಪ್ಪಿಯಾದರೂ ಒಂದು ಸಲವೂ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಇದು ತಮಿಳರು ತಮ್ಮ ಶಬ್ದವನ್ನು ಉಚ್ಚರಿಸುವ ರೀತಿ. ಆದ್ದರಿಂದ, ಕೇವಲ ತಮಿಳರೊಬ್ಬರಲ್ಲೇ ಸಿಗುವ ಈ ಪದದ ರೂಪವನ್ನು ಹಿಡಿದು ನಿರುಕ್ತವನ್ನು ಹೇಳುವುದು ಸರಿಯಾದೀತೇ? ವಿಚಾರಿಸುವುದು. ಇದರ ಬಗ್ಗೆ ಡಾ. ಎಂ. ಎಚ್. ಕೃಷ್ಣ ಅವರು ಬರೆಯುವುದೇನೆಂದರೆ :

Tamil tradition appears to spell the word as `ಕರುನಾಡು….
No instance has been found of the use of this form by
Kannada people themselves…

ಅಂತಲೇ, ಸ್ವತಃ ಹಟ್ಟಿಯಂಗಡಿ ಅವರೇ ಈ ಅಭಿಪ್ರಾಯವನ್ನು ಹೆಚ್ಚು ಮುಂದುವರಿಸಲಿಲ್ಲ.

೩. ಕರ್ + ನಾಡು, ಮಹಾರಾಷ್ಟ್ರ ಗೋವೀದ ಪೈ ರಾ. ಹ. ದೇಶಪಾಂಡೆ ಇತ್ಯಾದಿ ಮೂರನೆಯದಾಗಿ, ಕನ್ನಡ ನಾಡಿನ ವಿದ್ವಾಂಸರಾದ ಶ್ರೀ ಗೋವಿಂದ ಪೈ ಅವರು ಮೇಲಿನ ನಿರುಕ್ತವನ್ನೇ ಹೇಳುತ್ತಿದ್ದರೂ, ಅರ್ಥವನ್ನು ಬೇರೆಯಾಗಿ ಕೊಡುತ್ತಿದ್ದಾರೆ. ಅವರ ಪ್ರಕಾರ, ‘ಕರ್ನಾಡು’ ಕನ್ನಡ ಎಂದರೆ ಕರಂ – ಕರು – ಕಡು ಎಂದರೆ ವಿಸ್ತೀರ್ಣವಾದ ಮಹಾರಾಷ್ಟ್ರವೆಂದರ್ಥ. ಚಾಲುಕ್ಯ ಪುಲಕೇಶಿಯು ‘ತ್ರಯಾಣಾಂ ಮಹಾರಾಷ್ಟ್ರಾಣಾಂ’ ಅಧಿಪತಿಯಾಗಿದ್ದುದು ಈ ಆರ್ಥದಲ್ಲಿ ಹ್ಯುಯೆನ್ತ್ಸಾಂಗನೂ ಇದೇ ಮಾತನ್ನೇ ಹೇಳುತ್ತಾನೆ. ಆದ್ದರಿಂದ ಕರ್ನಾಡು = ಕರು (ಮಹಾ) + ನಾಡು (= ರಾಷ್ಟ್ರ) ಆದ್ದರಿಂದ, ಕರ್ನಾಡು = ಮಹಾರಾಷ್ಟ್ರ. ಇದೇ ಅಭಿಪ್ರಾಯವನ್ನೇ ಶ್ರೀ. ರಾ. ಹ. ದೇಶಪಾಂಡೆ ಅವರು ‘ಕರ್ನಾಟಕ ಸಾಮ್ರಾಜ್ಯ’ದಲ್ಲು (೧೯೨೬), ಮಿ. ಮಾಸ್ಟರ್, I.C.S.,ಅವರೂ (೧೯೨೮) ಹೆಚ್ಚು ಕಡಿಮೆ ಸೂಚಿಸಿದರು.

ಆದರೆ, ಈ ಅಭಿಪ್ರಾಯವನ್ನೂ ಶಂಬಾ ಅವರು ಒಪ್ಪುತ್ತಿಲ್ಲ. ಹಟ್ಟಿಯಂಗಡಿ ಅವರ ಅಭಿಪ್ರಾಯದ ಬಗ್ಗೆ ಕಂಡುಬಂದ ಆಕ್ಷೇಪಗಳೇ ಇಲ್ಲಿಯೂ ಕಂಡುಬರುತ್ತವೆ. ಯಾಕೆಂದರೆ, ಈ ಕರು – ನಾಡು ಎನ್ನುವ ಪದವೇ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಅದು ಕನ್ನಡದ ತಮಿಳ ರೂಪ ಅಷ್ಟೇ. “ಸುಮಾರು ೧೫೦೦ ವರುಷಗಳ ಕನ್ನಡ ಸಾಹಿತ್ಯದಲ್ಲಿ ಎಲ್ಲಿ ಒಂದೆಡೆಗಾದರೂ ‘ಕರು – ನಾಡು’ ಬಂದಿದ್ದರೆ ಆಣೆ” ಎಂದು ಶಂಬಾ ಅವರು ಹೇಳುತ್ತಾರೆ. ಅಲ್ಲದೇ, ಸ್ವತಃ ತಮಿಳಿನಲ್ಲೂ ಕೂಡ ಇದರ ಜೊತೆಗೇ ‘ಕನ್ನಡ’ ಪದಗಳಿವೆ. ಹಟ್ಟಿಯಂಗಡಿಯವರು ಸೂಚಿಸಿದಂತೆ, ಇವಾದರೂ ಸಂಸ್ಕೃತ ‘ಕರ್ಣಾಟ’ ದ ರೂಪಾಂತರಗಳೇ!

೪. ಕಮ್ಮಿತು + ನಾಡು = ಕನ್ನಾಡು. ಆರ್. ನರಸಿಂಹಾಚಾರ್ಯರ ಪ್ರಕಾರ ತಮಿಳು ಮತ್ತು ತೆಲಗು ಜನರು ತಮ್ಮ ಭಾಷೆಗಳನ್ನು ಮಾಧುರ್ಯ ಎನ್ನುವ ಮೂಲದಿಂದ

[ತೆಲಗು, ತೇನೆ ಜೇನು ಇತ್ಯಾದಿ.] ಸೃಷ್ಟಿಸಿಕೊಂಡಂತೆ, ಕನ್ನಡವನ್ನೂ ಮಾಧುರ್ಯ ಮತ್ತು ಪರಿಮಳವಾಚಕವಾದ ಕಮ್ಮಿತು ಪದದಿಂದ ಸಾಧಿಸಿಕೊಳ್ಳಬೇಕು. ಆದ್ದರಿಂದ ಕಮ್ಮಿತು + ನಾಡು = ಕನ್ನಾಡು ಪರಿಮಳ ಯುಕ್ತವಾದ ಭೂಮಿ. ಶ್ರೀ ಆಚಾರ್ಯರ ಪ್ರಕಾರ ಕನ್ನಡ ದೇಶವು ಗಂಧದ ಮರದ ಕಾಡುಗಳಿಗೂ, ಪದ್ಮಾಕರಗಳಿಗೂ ಪ್ರಸಿದ್ಧಿಯನ್ನು ಪಡೆದಿರುವುದರಿಂದ ಈ ವಿಶೇಷಣವು ಅದಕ್ಕೆ ಅನುರೂಪವಾದುದು.

ಆದರೆ, ಈ ಮಾತಿನಲ್ಲಿ ಶಾಸ್ತ್ರದಕ್ಕಿಂತ ಅಭಿಮಾನವೇ ಹೆಚ್ಚಾಗಿದೆಯೆಂದು ಹೇಳಬೇಕು. ತೆಲಗು, ತಮಿಳರು ಹಾಗೆ ಹೇಳಿದರೆಂದು ಕನ್ನಡಿಗರೂ ಹಾಗೆ ಹೇಳಿಕೊಳ್ಳುವುದು ಎಷ್ಟರ ಮಟ್ಟಿಗೆ ಸೂಕ್ತ? ಅದೂ ಹೋಗಲಿ, ಇನ್ನೂ ಉಳಿದ ಅನೇಕ ಭಾಷಾಶಾಸ್ತ್ರಜ್ಞರೇ ತೆಲಗು ಪದವು ತ್ರಿ – ಕಲಿಂಕ ತ್ರಿಲಿಂಗ ತೆಲುಗವಾಗಿ ಬಂದಿದೆಯೆಂದು ಹೇಳುತ್ತಾರಲ್ಲ? ಇದರ ಸಮರ್ಥನೆ ಹೇಗೆ? ಆದ್ದರಿಂದ ಈ ನಿರುಕ್ತವೂ ಶಾಸ್ತ್ರಿಯವಾಗದು.

೫. ಕನ್ (= ಕಾಣು; ಒಡಮೂಡು) + ಅಳ್ = ಕನ್ನಳ > ಕನ್ನಡ ಬೇಂದ್ರೆ ಮತ್ತು ಬೆಟಗೇರಿ ಅವರು “ಮನೋಭಾವವನ್ನು ಯಶಸ್ವಿಯಾಗಿ ಒಡಮೂಡಿಸಿ (ಕನ್) ತೋರಿಸುವ” ಭಾಷೆ ಕನ್ + ಅಳ್ = ಕನ್ನಡ ಎಂದು ಸೂಚಿಸಿದರು.

ಈ ಅಭಿಪ್ರಾಯವೂ ಒಪ್ಪಿತವಾಗಿದು. ಯಾಕೆಂದರೆ, ಮೊದಲನೆಯದಾಗಿ “ನುಡಿಯಿಂದ ನಾಡಿಗೆ ಹೆಸರು ಬಂದಿತೆಂಬ ಅಪಸಿದ್ಧಾಂತ” ಮತ್ತು ಎರಡನೆಯದಾಗಿ ಕನ್ನಡದಲ್ಲಿ ‘ಡ’ ಕಾರವು ‘ಳ’ ಕಾರವಾಗಬಹುದೇ ವಿನಾ ತದ್ವಿರುದ್ಧ ಆಗುತ್ತಿಲ್ಲ.

೬. ಕರ್ + ನಾಟ + ಅಕಂ ಬಿ. ಎಂ. ಶ್ರೀ ಅವರ ಪ್ರಕಾರ ಕರ್ನಾಟಕ ಪದವೇ ಮೂಲ. ಅದರ ವಿಗ್ರಹವೆಂದರೆ, ಕರ್ + ನಾಟ + ಅಕಂ (ಅಂದರೆ ಒಳಗೊಂಡದ್ದು ಪ್ರದೇಶ) ಅಂದರೆ, ಒಟ್ಟಾರೆ, ಕರಿಯ ನಾಡನ್ನು ಒಳಗೊಂಡ ಪ್ರದೇಶ ಎಂದರ್ಥ. ಆದರೆ, ಇಲ್ಲೂ ಎರಡು ಆಕ್ಷೇಪಗಳು.

ಮೊದಲನೆಯಾಗಿ, ನಾಡು + ಅಕಂ ಎಂಬ ನಾಡಿನ ಪ್ರದೇಶ ಎಂಬ ದ್ವಿರುಕ್ತಿಯು ಹೆಸರಿಡುವ ಪ್ರಾರಂಭದಲ್ಲೇ ಆಗದು. ಎರಡನೆಯದಾಗಿ, ಇದು ನಾವು ಮೇಲೆ ವಿವರಿಸಿದ ಡಾ. ಕಾಲ್ಡವೆಲ್ಲರ ಅಭಿಪ್ರಾಯದ ಪ್ರತಿರೂಪ! ಆದ್ದರಿಂದ ಆಕ್ಷೇಪಗಳೆಲ್ಲವೂ ಇಲ್ಲಿಯೂ ಅನ್ವಯಿಸುತ್ತವೆ.

೭. ಕಣ್ + ನೀರು > ಕಣ್ಣೀರು > ಕಣ್ಣರ್ – ಫಾದರ್ – ಹೆರ್ಯಾಸ್ ಮೊಹೆಂಜೊದಾರೊ ಮತ್ತು ಹರಪ್ಪಗಳಲ್ಲಿ ಕಂಡುಬರುವ ಸಾಂಸ್ಕೃತಿಕ ಅವಶೇಷಗಳು ಮತ್ತು ಚಿತ್ರಲಿಪಿಗಳ ಮೇಲಿಂದ. ಫಾದರ್ ಹೆರ್ಯಾಸ್ ಅವರು ‘ಕನ್ನಡದ’ ಮೂಲರೂಪವು ‘ಕಣ್‌ನಿರ್‌’, ‘ಕಣ್ಣರ’ ಎಂದು ಇದ್ದಿತೆಂದೂ, ಇದನ್ನೇ ಮೊಹೆಂಜೊದಾರೊ ಚಿತ್ರಲಿಪಿಯಲ್ಲಿ ಈ ರೀತಿ ಸೂಚಿಸಿದರೆಂದೂ ಹೇಳುತ್ತಾರೆ.

The sign used to mention them is a symbol to denote an eye…therefore, in the proto – Dravidian language of Mohenjo – Daro, it will read Kan, eye or to see Therefore it will read Kannan, one who see… thus the complete sign will read Kananir `People who have eyes’,,, The ancient word Kanndigas by which the people of modern Karnataka are mentioned, seems to be a Sanskrit modification of Kananir.

೮. ಹೀಗಾಗಿ, ಈ ‘ಕನ್ನಡ’ ಪದದ ನಿರುಕ್ತದ ಬಗ್ಗೆ ಈ ಮೇಲಿನಂತೆ ಅನೇಕ ಅಭಿಪ್ರಾಯಗಳು ಇದ್ದರೂ, ಇನ್ನೂ ಯಾವ ಅಭಿಪ್ರಾಯವೂ ಸರ್ವಪಂಡಿತ ಮಾನ್ಯತೆಯನ್ನು ಪೆಡೆದೇ ಇಲ್ಲವೆಂದು ಹೇಳಬೇಕು. ಈಗ ಸದ್ಯದ ಮಟ್ಟಿಗೆ, ಶಂಬಾ ಅವರ ಅಭಿಪ್ರಾಯವೇ ಇಂದಿಗೂ ಈ ವಿಷಯದಲ್ಲಿ ಕೊನೆಯ ಮಾತಾಗಿದೆ.

ಶಂಬಾ ಅವರ ಪ್ರಕಾರ ಮೇಲಿನ ಎಲ್ಲ ವಿವರಣೆಗಳಲ್ಲಿಯೂ ಇರುವ ಸಾಮಾನ್ಯ ದೋಷವೆಂದರೆ, ನಾವು ನಮ್ಮ ಹಿಂದಿನ ಸಂಸ್ಕಾರ ಮತ್ತು ಪರಂಪರೆಗಳನ್ನು ಬಿಟ್ಟುದು. ಎಷ್ಟೋ ಸಾವಿರ ವರುಷಗಳಿಂದ ನಡೆದುಬಂದ ಈ ಕನ್ನಡದ ಉಲ್ಲೇಖವು ಎಲ್ಲಿಯಾದರೂ ದೊರಕಲೇಬೇಕು. ಇವರಿಗೆ ಆರ್ಯರ ಸಂಪರ್ಕವು ಬಂದಾಗ, ಇತಿಹಾಸ ಮತ್ತು ಉಲ್ಲೇಖ ಪ್ರಿಯರಾದ ಆರ್ಯರು ಒಂದಿಲ್ಲೊಂದು ರೀತಿಯಿಂದ ಇವರ ವರ್ಣನೆಯನ್ನು ಮಾಡಿರಲೇಬೇಕು. ನಮ್ಮ ಸ್ಮೃತಿ ಪುರಾಣಗಳಲ್ಲಿಯ ಬಹುಮಾತು ಬರಿಯ ‘ಕಥೆ’ ಯಾಗಿರಬಹುದಾದರೂ, ಅವುಗಳಲ್ಲಿ ಸತ್ಯಾಂಶವಿಲ್ಲದೆ ಇಲ್ಲ. ಶಂಬಾ ಅವರೇ ಹೇಳುವಂತೆ “ಇವುಗಳಲ್ಲಿ ಯಾವುದಕ್ಕೂ ಕರ್ಣಾಟದ ಪ್ರಾಚೀನ ಸಾಂಸ್ಕೃತಿಕ ಪರಂಪರೆ, ಇತಿಹಾಸಗಳ ಬೆಂಬಲವಿಲ್ಲ. ಸ್ಮೃತಿ ಮತ್ತು ಪುರಾಣಗಳಲ್ಲಿ ಬಂದಿರುವ ಉಲ್ಲೇಕಗಳನ್ನು ಕೇವಲ ನಿರ್ಲಕ್ಷಿಸಿದರೆ ನಡೆಯದು. ಆದ್ದರಿಂದ ಕನ್ನಡ ಕನ್ನಾಡೆಂದರೆ ‘ಕಣ್ಣರ’ ನಾಡು. ಈ ಕನ್ನಡರೇ ‘ಕಳಭ್ರರು’, ‘ಕಳವರು’, ‘ಕಳ್ಳರು’. ಇವರು ಪ್ರಾಚೀನ ಕಾಲದಲ್ಲಿ ಹಿಂದುಸ್ಥಾನದ ಎಷ್ಟೋ ಭಾಗಗಳನ್ನು ವ್ಯಾಪಿಸಿದ್ದರಿಂದ ಅಲ್ಲಲ್ಲಿ ಇಂದಿಗೂ ‘ಕನ್ನಾಡಿನ’ ಅಂಶವನ್ನು ನಾವು ಕಾಣುತ್ತಿದ್ದೇವೆ.

೯. ಕನ್ನಡ ಭಾಷೆಯ ಬಗೆಗೆ ಕನ್ನಡಿಗರಿಗೆ ಯಾವಾಗಲೂ ಪ್ರೀತಿ – ಅಭಿಮಾನವಿರಬೇಕು ಎಂದು ಶಂಬಾ ಕನಿಕರಿಸುತ್ತಾರೆ.

ಅ. ಬಾಳುವೆಗೂ ಬದುಕಿಗೂ ಮಾತೇ ಮೊದಲು ಮಾತೇ ನಮ್ಮ ಜೀವನದ ಮೂಲಾಧಾರ. ಅಥವಾ ಮಾತೆ ನಮ್ಮ ತಾಯಿ, ಮಾತೆ ನಮ್ಮ ತಂದೆ. ಅಲ್ಲಮನು ಹೇಳುವಂತೆ “ಮಾತೆಂಬುದು ಜ್ಯೋರ್ತಿಲಿಂಗ’ ಎಂದು ಹೇಳಿದ್ದಾನೆ.

ಆ. ನುಡಿಯ ಗುಟ್ಟನ್ನು ಅರಿಯದವರು ನಾಲಗೆಯವರಲ್ಲ, ನಾಲಗೆಯಿಲ್ಲದವರು ಮಾನವರಲ್ಲ.

ಇ. ತಮ್ಮ ನಾಡು – ನುಡಿಯನ್ನು ಕಡೆಗಣಿಸುವುದು, ಅವರ ಮುಂದಿನ ಇಳಿಗಾಲದ ಪೂರ್ವಸೂಚನೆ, ಜನಗಳು ತಮ್ಮ ನುಡಿಯ ಆಳವಾದ ಅರ್ಥ, ಸೊಬಗು ಇಂಪು, ಅದರ ತೂಕ, ಹದ ಮೊದಲಾದ ಸಂಗತಿಗಳನ್ನು ಅರಿತುಕೊಳ್ಳದೆ ಇದ್ದರೆ ಅವರ ಮಾತಿನಲ್ಲಿ ಶಕ್ತಿ ಸಾಲದೆ ಅವರು ಕೈಕೊಂಡು ಕೆಲಸಗಳು ಯಶಸ್ವಿಯಾಗುವುದೇ ಕಷ್ಟವಾಗುವುದು.

ಈ. ನುಡಿಯೇ ನಾಡಿನ ಉಸಿರು. ಉಸಿರೇ ಪ್ರಾಣ, ಜೀವ, ಕಂನುಡಿಯ ಬದುಕಿರುವವರೆಗೆ ಮಾತ್ರ ಕಂನಾಡು ಬದುಕಿದೆ. ಕಂನುಡಿಯು ಕಂದಿದರೆ, ಕುಂದಿದರೆ ಅಥವಾ ಕಟ್ಟಿದರೆ ಕಂನಾಡೂ ಸೊರಗಿ, ಕೊರಗಿ ಕೊನೆಗೆ ಹೇಳ ಹೆಸರಿಲ್ಲದಂತಾಗುವುದಕ್ಕೆ ಸಂದೇಹವಿಲ್ಲ.

ಉ. ಆದುದರಿಂದ, ಈ ಬಗೆಯಾಗಿ ನಮ್ಮ ನಲವಿಗೆ ಹಾಗೂ ನಮ್ಮ ನಾಡಿನ ಇರುವು ಏಳಿಗೆಗಳಿಗೆ ಕಾರಣವಾಗಿರುವ ನುಡಿಯಗುಟ್ಟನ್ನು ಅರಿಯುವುದು ನಮ್ಮೆಲ್ಲರ ಮೊದಲ ಕೆಲಸವಾಗಿಲ್ಲವೆ. (- ಶಂಬಾ ಕೃತಿ ಸಂಪುಟ-೨ ಕಂನುಡಿಯ ಹುಟ್ಟು (೨೭೧))

೧೦. ಕಂನುಡಿಯ ಹುಟ್ಟು ಈ ಕೃತಿಯ ಹಿಂದೆ ಶಂಬಾ ಅವರಿಗೆ ಕನ್ನಡ ಭಾಷೆಯ ಬಗೆಗಿದ್ದ ಕಳಕಳಿಯನ್ನು ಗಮನಿಸಬೇಕು. “ಮಹನೀಯರೇ, ಕನ್ನಡವನ್ನುಇವೆಲ್ಲ ತೊಂದರೆಗಳೊಳಗಿಂದ ಹೊರದೆಗೆದು ಮುಂದಕ್ಕೆ ತರುವ ಹೊಣೆಯು ನಿಮ್ಮ ತಲೆಯ ಮೇಲೆ ಇದೆ. ನೀವು “ಶಬ್ದ – ಸೃಷ್ಟಿಯ ವಿಧಾತೃಗಳು” ನಿಮ್ಮ ಯೋಗ್ಯತೆಯು ಭೌತಿಕ ಸೃಷ್ಟಿಕರ್ತನಾದ ಬ್ರಹ್ಮನಿಂದಲೂ ಒಂದು ತೂಕ ಹೆಚ್ಚು…. ನಿಮ್ಮ ನಾಲಗೆಯಲ್ಲಿ ಅಮೃತವಿದೆ, ನಿಮ್ಮ ಕೈಯಲ್ಲಿ ಸಂಜೀವನದ ಶಕ್ತಿಯಿದೆ. ನೀವು ಮನಸ್ಸು ಮಾಡಿದರೆ ಆವುದು ಅಸಾಧ್ಯ? ನಿರ್ಜೀವಿಗಳಿಗೆ ಜೀವಕಳೆಯನ್ನಿತ್ತ ನೀವು, ಐದು ಸಾವಿರ ವರುಷಗಳಿಂದಲೂ ಇಂದಿಲ್ಲ ನಾಳೆ ತನಗೆ ಉಜ್ಜ್ವಲವಾದ ಭವಿಷ್ಯತ್ಕಾಲವು ಇದ್ದೇ ಇದೆಯೆಂಬ ನಂಬುಗೆಯಿಂದ ಜೀವ ಹಿಡಿದುಕೊಂಡಿರುವ ಕನ್ನಡಕ್ಕೆ ನವಚೈತನ್ಯ ಎರೆಯಲಾರಿರಾ? ನಿಮ್ಮ ಶಕ್ತಿಯನ್ನು ನೆನೆಯಿರಿ! ನಿಮ್ಮಲ್ಲಿ ನಿಮ್ಮ ನಂಬುಗೆ ಹುಟ್ಟಲಿ! ಪಂಪ – ರನ್ನರಿಂದಲೂ ಮುಂಚೆ, ಅನಾದಿಕಾಲದಿಂದ ಕನ್ನಡವು ಕವಿಗಳಿಗೆ ಜನ್ಮಕೊಡುತ್ತ ಬಂದಿದೆ. ಆ ಅಖಂಡ ಪರಂಪರೆಯು ಸ್ವಲ್ಪ ಹೆಚ್ಚು ಕಡಿಮೆ ಪ್ರಮಾಣದಿಂದ ಇಂದಿನವರೆಗೂ ನಡೆದಿದೆ. ಆದುದರಿಂದಲೇ ಕನ್ನಡವು ಬದುಕಿದೆ. ಏಕೆಂದರೆ ‘ಕವಿ’ ಯ ಹತ್ತಿರ ಸಂಜೀವಿನಿ ಶಕ್ತಿಯ (ಮಂತ್ರವು) ಇದ್ದೇ ಇದೆ ಎಂದು ಪುರಾಣಗಳು ಹೇಳುವುವು. ಓ, ಅಮೃತ ಪುತ್ರರೆ, ಕನ್ನಡದಲ್ಲಿ ಸಂಜೀವನವನ್ನು ಎರೆಯಿರಿ! ಕನ್ನಡದೊಳಗಿನ ಅಮೃತತ್ವವನ್ನು ಜಗತ್ತಿಗೂ ತೋರಿಟ್ಟು ನಮ್ಮ ನುಡಿಗೆ ಮನ್ನಣೆಯನ್ನು ತನ್ನಿರಿ” ಕನ್ನಡ ನಾಡು – ನುಡಿಯ ಸಂವರ್ಧನೆಗೆ ಶಂಬಾ ಅವರ ಈ ಒಕ್ಕಣಿಗೆ ಭಾಷಾಧ್ಯಯನಕಾರರಿಗೆ ಸ್ಫೂರ್ತಿ ಉತ್ಸಹ ನೀಡುತ್ತದೆ.

II

ನಾಡು – ನುಡಿಯ ಬಗ್ಗೆ ಶಂಬಾ ಚಿಂತನೆಯ ಸಾರವನ್ನು ಹೀಗೆ ಕಲೆ ಹಾಕಲಾಗಿದೆ. ಒಬ್ಬ ವ್ಯಕ್ತಿಗೆ ಭೂತ, ವರ್ತಮಾನ ಮತ್ತು ಭವಿಷ್ಯಗಳಲ್ಲಿ ಯಾವುದು ಮಹತ್ವದ್ದೆಂಬ ಪ್ರಶ್ನೆಗೆ ಬಹುಜನ ವರ್ತಮಾನ ಮತ್ತು ಭವಿಷ್ಯಗಳೆಂದು ಉತ್ತರ ಕೊಟ್ಟಾರು. ಎಲ್ಲವೂ ಮುಖ್ಯವೆಂದು ಹೇಳವವರೂ ಇದ್ದಾರೆ. ‘ಭೂತ’ವನ್ನು ಕಟ್ಟಿಕೊಂಡು ನಮಗೇನು ಎಂದು ಹೇಳುವ ಜನ ಸಾಕಷ್ಟು ದೊರಕಿಯಾರು. ವಿಚಾರಮಾಡಿ ನೋಡಿದರೆ, ವರ್ತಮಾನದ ಮಹತ್ವದ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲ, ಆದರೆ ಭವಿಷ್ಯದಷ್ಟೇ ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಮಹತ್ವದ್ದು ಭೂತ ಅಥವಾ ಇತಿಹಾಸವೆಂಬುದು ಹೊಳೆಯುತ್ತದೆ. ಇತಿಹಾಸವಿಲ್ಲದ ಅಥವಾ ಇತಿಹಾಸದ ಅರಿವಿಲ್ಲದ ವ್ಯಕ್ತಿ ತನ್ನನ್ನು ತಾನು ಕಾಲದ ಪ್ರವಾಹದಲ್ಲಿ ಗುರುತಿಸಲು, ಇಟ್ಟು ನೋಡಲು ಅಸಮರ್ಥನಾಗಿ, ನಿದ್ದೆಯಲ್ಲಿದ್ದವನು ಇದ್ದಕ್ಕಿಕ್ಕಂತೆ ಬೇರೊಂದು ಅಪರಿಚಿತ ದೇಶದಲ್ಲಿ ಎಚ್ಚತ್ತವನಂತೆ ದಿಙ್ಮೂಢತೆಯನ್ನು ಅನುಭವಿಸುವುದಲ್ಲದೆ, ಇದಕ್ಕಿದ್ದಂತೆ ತನ್ನ ಹಿಂದಿನ ಎಲ್ಲ ನೆನಪೂ ಮರೆತುಹೋದವನಂತೆ ನಿಷ್ಪ್ರಯೋಜಕನಾಗುತ್ತಾನೆ. ಇತಿಹಾಸಪ್ರಜ್ಞೆ ಜಾಗೃತವಾಗಿರುವ ವ್ಯಕ್ತಿ ಮಾತ್ರ ತಾತ್ಕಾಲಿಕವಾಗಿ ಕೆಳದೆಸೆಯಲ್ಲಿದ್ದರೂ ಒಂದಲ್ಲ ಒಂದು ಸಾರಿ ಮೇಲೇರಬಲ್ಲ, ಏಕೆಂದರೆ ಆ ಪ್ರಜ್ಞೆ ಅವನಿಗೆ ಮುಂದೂಡುವ ಚಾಲಕಶಕ್ತಿಯಾಗಿ ಅವನಲ್ಲಿ ನಿಕ್ಷಿಪ್ತವಾಗಿರುವುದರಿಂದ. ಇತಿಹಾಸ ಇರುವ ವ್ಯಕ್ತಿ ಅಥವಾ ಗುಂಪುಗಳು ಪುರಾಣಗಳ ಸೃಷ್ಟಿಯ ಮೂಲಕ ಆ ಇತಿಹಾಸವನ್ನು ಬಲಪಡಿಸಿಕೊಳ್ಳುತ್ತವೆ. ಇತಿಹಾಸ ಇಲ್ಲದಿರುವ ವ್ಯಕ್ತಿ ಅಥವಾ ಗುಂಪುಗಳು ಪ್ರಯತ್ನಪೂರ್ವಕವಾಗಿ ಇತಿಹಾಸವನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇತಿಹಾಸ ಪ್ರಜ್ಞೆ ಅಥವಾ ಪರಂಪರೆಯ ಪ್ರಜ್ಞೆಯ ಮಹತ್ವವನ್ನು ಎಂದಿನಿಂದಲೂ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಕಂಡುಕೊಂಡೇ ಇದ್ದಾನೆ ಮತ್ತು ಅಂತಹ ಅರಿವು ಮನುಷ್ಯನಿಗೆ ಮಾತ್ರ ಇರುವುದರಿಂದ ಅವನು ‘ಸಂಸ್ಕೃತಿ’ ಯನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಶಂಬಾ ಅವರು ಸಶೋಧನೆ ಮಾಡುತ್ತಿದ್ದ ಈ ಶತಮಾನದ ಆದಿಭಾಗದಲ್ಲಿ ಕರ್ನಾಟಕದಲ್ಲಿ ಎಂತಹ ವಿಸ್ಮೃತಿ ಕವಿದಿತ್ತು! ನೆರೆಯ ಪ್ರಾಂತವಾದ ಮಹಾರಾಷ್ಟ್ರದಲ್ಲಿ ದೂರದ ಬಂಗಾಳದಲ್ಲಿ ಜನ ತಮ್ಮ ಪರಂಪರೆಯ ಬಗ್ಗೆ ಜಾಗೃತರಾಗಿದ್ದುದರಿಂದ ತಮ್ಮ ವರ್ತಮಾನದ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸಬಲ್ಲವರಾಗಿದ್ದರು. ತಮ್ಮ ಹಿಂದಿನ ಸಾಂಸ್ಕೃತಿಕ ನಾಯಕರುನ್ನು ಅವರು ಆರಾಧಿಸುತ್ತ ತಮ್ಮ ಪ್ರಸ್ತುತ ಬದುಕಿನ ವಲಯಗಳನ್ನು ವಿಸ್ತರಿಸಿಕೊಳ್ಳುತ್ತಿದ್ದರು. ಆ ಪ್ರಾಂತಗಳು ಅಖಿಲ ಭಾರತದ ಮಟ್ಟದ ನಾಯಕರನ್ನು ಎತ್ತಿ ಹಿಡಿದಿದ್ದುವು.

ಉತ್ತರ ಕರ್ನಾಟಕ ರಾಜಕೀಯವಾಗಿ ಬೊಂಬಾಯಿ ಪ್ರಾಂತದ ಭಾಗವಾಗಿದ್ದು, ಸಾಂಸ್ಕೃತಿಕವಾಗಿ ತನ್ನತನದ ಅರಿವಿಲ್ಲದೆ ಸಂಪೂರ್ಣ ನಿರ್ಜೀವವಾಗಿತ್ತು. ವಾಸ್ತವವಾಗಿ ಎರಡು ಸಾವಿರ ವರ್ಷಗಳ ಸುದೀರ್ಘವಾದ ಕರ್ನಾಟಕದ ಇತಿಹಾಸವೆಂದರೆ ಉತ್ತರ ಕರ್ನಾಟಕದ ಇತಿಹಾಸ. ಹಿಂದಿನ ಕರ್ನಾಟಕದ ಸಾರ್ವಭೌಮರು ಆಳಿದ್ದು ಅಲ್ಲಿ, ಅತ್ಯಂತ ಶ್ರೇಷ್ಠ ಕವಿಗಳೂ ಸಂತರೂ ಧಾರ್ಮಿಕ ಚಳುವಳಿಗಳು ಉಗಮಗೊಂಡದ್ದು ಅಲ್ಲಿ, ಶಿಲ್ಪ ಕಲಾಕೇಂದ್ರಗಳಿದ್ದುದು ಅಲ್ಲಿ, ಅಷ್ಟೇ ಅಲ್ಲ, ಸಾವಿರ ವರ್ಷಗಳ ಹಿಂದೆ ಕನ್ನಡಕ್ಕೆ ಶಿಷ್ಟ ಭಾಷೆಯ ಮಾದರಿಯನ್ನೊದಗಿಸಿದ ಪುಲಗೆರೆ ಪ್ರದೇಶವೂ ಅಲ್ಲಿಯದೇ. ಮುಂದೆ ಇತಿಹಾಸದ ದಿಕ್ಕು ಬದಲಾಯಿಸಿತು. ರಾಜಕೀಯವಾಗಿ ಸಾಂಸ್ಕೃತಿಕವಾಗಿ ಮಹಾರಾಷ್ಟ್ರದ ಬಾಲಂಗೋಚಿಯಂತೆ ಬದುಕುತ್ತಿದ್ದ ಉತ್ತರ ಕರ್ನಾಟಕದ ಶಂಬಾ ಅವರ ಮನಸ್ಸಿನಲ್ಲಿ ‘ಕನಾಟಕತ್ವ’ದ ಭಾವನೆ ಉದ್ಭೋದಗೊಂಡ ಘಟನೆ ಸುಮಾರು ಕ್ರಿ. ಶ. ೩೫೦ರಲ್ಲಿ ದೂರದ ಕಂಚಿಯಲ್ಲಿ ಪಲ್ಲವರಿಂದ ಅಪಮಾನಿತವಾಗಿ ಅಭಿಮಾನ ಎಚ್ಚರಗೊಂಡು ಶರ್ಮನು ವರ್ಮನಾಗಿ ಪರಿವರ್ತನೆಗೊಂಡ ಮಯೂರವರ್ಮನ ಘಟನೆಗೆ ಸಂವಾದಿಯಾದುದು. ಶಂಬಾ ಅವರು ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಇದ್ದ ತಾತ್ಸಾರ‍ಮನೋಭಾವವನ್ನು ತಮ್ಮ ಜೀವನ ಸ್ಮೃತಿಗಳಲ್ಲಿ ಸವಿಸ್ತಾರವಾಗಿ ವರ್ಣಿಸಿ, ಅದು ತಮ್ಮಲ್ಲಿನ ಅಭಿಮಾನವನ್ನು ಕುದುರಿಸಲು ಹೇಗೆ ಕಾರಣವಾಯಿತು ಎಂದುದನ್ನು ವರ್ಣಿಸಿದ್ದಾರೆ. ಉತ್ತರ ಕರ್ನಾಟಕದ ಬ್ರಾಹ್ಮಣರು ಕನ್ನಡಿಗರಿಗಿಂತ ಶ್ರೇಷ್ಠರೆನ್ನಿಸಿಕೊಂಡಿದ್ದ ಮರಾಠಿಗರೊಡನೆ ಸ್ನೇಹಕ್ಕೆ ಹಾತೊರೆಯುತ್ತಿದ್ದಂತೆ, ಲಿಂಗಾಯತರೊಡನೆ ಅಲ್ಲವೆಂದು ನಿಸ್ಸಂಕೋಚವಾಗಿ ನುಡಿದಿದ್ದಾರೆ. ಮರಾಠಿ ಭಾಷೆಯಲ್ಲಿ ಲಿಂಗ ಪ್ರತ್ಯಯದ ತೊಡಕಿಲ್ಲದಿದ್ದರೆ ಎಷ್ಟೋ ಜನ ಪೂರ್ಣ ಮರಾಠಿಗರಾಗುತ್ತಿದ್ದರು. “ಆ ತೊಡಕೇ ನಮ್ಮ ಕನ್ನಡವನ್ನು ರಕ್ಷಿಸುವ ಕೋಟೆಯಾಗಿತ್ತು.” ಕರ್ನಾಟಕತ್ವದ ಶೋಧಕ್ಕೆ, ಕರ್ನಾಟಕವೇ ನನ್ನ ದೇಶಸೇವೆಯ ಭೂಮಿ ಎಂಬ ನಿರ್ಧಾರಕ್ಕೆ ಬರಲು ಮರಾಠಿಗರ ಉಪೇಕ್ಷೆ ಕಾರಣವೆಂಬುದನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

ಕನ್ನಡ ಜನರ ಆಲಸ್ಯಕ್ಕೆ ತಮ್ಮತನದ, ತಮ್ಮ ಪರಂಪರೆಯ ಅರಿವಿನ ಅಭಾವವೇ ಕಾರಣವೆಂಬುದನ್ನು ಶಂಬಾ ಗುರುತಿಸಿದ್ದು ಬಹುಮಹತ್ವದ ಸಂಗತಿ. ಅವರನ್ನು ಆ ಇತಿಹಾಸದ ಶೋಧಕ್ಕೆಗಂಭೀರವಾಗಿ ತೊಡಗಿಸಿದ ಸನ್ನಿವೇಶವನ್ನು ವಿವರಿಸಿದ್ದಾರೆ. ಮರಾಠಿಗರು ತಮ್ಮ ಭಾಷೆಯನ್ನು ಪ್ರೀತಿಸುತ್ತಾರೆ. ಆ ಕಾರಣ ನಾವೂ ನಮ್ಮ ಭಾಷೆಯನ್ನು ಪ್ರೀತಿಸಬೇಕೆಂಬ ಸಂಗತಿ ಶಂಬಾ ಅವರಿಗೆ ಮೊದಮೊದಲು ಆಳವಾದ ವಿಚಾರಗಿರಲಿಲ್ಲ. ಕರ್ನಾಟಕಕ್ಕೆ ಒಂದು ನಿಜವಾದ ಪರಂಪರೆಯಿದೆಯೇ? ಇದ್ದರೆ ಅದು ಎಂತಹುದು? ಕನ್ನಡಿಗರ ವಿಸ್ಮೃತಿಗೆ ಇತಿಹಾಸದ ಅಭಾವ ಕಾರಣವೇ, ಅಥವಾ ಇತಿಹಾಸವಿದ್ದರೂ ಅದರ ಅರಿವಿನ ಅಭಾವ ಕಾರಣವೇ? ಇದು ಅವರ ಮನಸ್ಸನ್ನು ಆ ಕಾಲದಲ್ಲಿ ಬಹುವಾಗಿ ಬಾಧಿಸಿತು. ಅವರು ಆ ಕಾಲದಲ್ಲಿ ಕಂಡುಕೊಂಡ ಸತ್ಯವೆಂದರೆ ಎರಡನೆಯದು ಪರಂಪರೆಯಿದೆ, ಆದರೆ ಅರಿವು ಕನ್ನಡಿಗರಿಗಿಲ್ಲ.

ಕರ್ನಾಟಕವು ಶಂಬಾ ಅವರಿಗೆ ಬರಿಯ ನೆಲ, ಜಲ, ಸಸ್ಯ, ಜನ ಅಲ್ಲ, ಅದೊಂದು ಅತ್ಯಂತ ಪವಿತ್ರವಾದ ಭಾವನೆ. ಉನ್ನತವಾದ ಆಲೋಚನೆ, ಮಧುರವಾದ ಕನಸು, ಉಪಾಸ್ಯ ದೇವತೆ. ಆದರೆ ಕರ್ನಾಟಕವೆಂಬ ಉಪಾಸ್ಯ ದೇವತೆ ಅವರನ್ನು ಭಾಷಾಂಧರನ್ನಾಗಿ ಮಾಡಲಿಲ್ಲ. ಕರ್ನಾಟಕದಲ್ಲಿ ಭಾರತವನ್ನು, ಭಾರತದಲ್ಲಿ ವಿಶ್ವವನ್ನು ಕಂಡರು. ಕರ್ನಾಟಕ ದೇವಿಯ ಉಪಾಸನೆಯ ಬಲದಿಂದ ಈ ಮೂರು ಜಗತ್ತುಗಳ ಕಲ್ಯಾಣವನ್ನು ಕನ್ನಡಿಗರು ಸಾಧಿಸಬಲ್ಲರೆಂಬ ಭರವಸೆ ಎನಗಿದೆ ಎಂದು ಶಂಬಾ ಹೇಳಿದ್ದಾರೆ.

ವಾಸ್ತವವಾಗಿ, ಪ್ರಾಂತಾಭಿಮಾನವನ್ನು ಸಂಕುಚಿತ ದೃಷ್ಟಿಯೆಂದು ಹೇಳುತ್ತ ರಾಷ್ಟಾಭಿಮಾನವನ್ನು ಎತ್ತಿಹಿಡಿಯುವ ಪರಿಪಾಠಿ ಒಂದು ಕರ್ನಾಟಕದಲ್ಲಿ ಈಗಲೂ ಇದೆ. ರಾಷ್ಟ್ರೀಯತೆ ಎಂಬುದು ಒಂದು ಅಮೂರ್ತ ಕಲ್ಪನೆ. ಒಂದು ಜನ ಒಂದು ರಾಷ್ಟ್ರಕ್ಕೆ ಸೇರಿರುವ ಭಾವನೆಯೇ ರಾಷ್ಟ್ರೀಯತೆ. ಆ ಭಾವನೆಯಲ್ಲಿ ರಾಷ್ಟ್ರದ ವಿಷಯದಲ್ಲಿ ನಿಷ್ಠೆ, ಅದರ ಇತಿಹಾಸ ಸಂಸ್ಕೃತಿಗಳ ಬಗ್ಗೆ ಅಭಿಮಾನ ಮತ್ತು ಸ್ವಾತಂತ್ರ‍್ಯಾಪೇಕ್ಷೆಗಳು ಸಮಾವೇಶವಾಗಿರುತ್ತವೆ. ಸಮಾನ ಸಂಸ್ಕೃತಿ, ಸಮಾನ ಪರಂಪರೆ, ಸಮಾನ ಆಡಳಿತಗಳು ರಾಷ್ಟೀಯತೆಯ ಲಕ್ಷಣಗಳು. ಒಂದು ರಾಷ್ಟ್ರದಲ್ಲಿ ಒಂದು ಭಾಷೆಯಿದ್ದರೆ ಆಗ ಸಮಸ್ಯೆಯೇ ಇಲ್ಲ, ಸಮಾನಭಾಷೆ ರಾಷ್ಟ್ರೀಯತೆಯ ಇನ್ನೊಂದು ಲಕ್ಷಣವಾಗಿರುತ್ತದೆ. ಆದರೆ ಭಾರತದಂತಹ ಪ್ರಬುದ್ಧಗೊಂಡ ಬಹುಭಾಷೆಗಳ ದೇಶದಲ್ಲಿ, ಒಂದೊಂದು ಭಾಷೆಯನ್ನಾಡುವ ಪ್ರದೇಶವೂ ಒಂದೊಂದು ರಾಷ್ಟ್ರವಾಗಬಲ್ಲ ಯೋಗ್ಯತೆಯಿರುವ ಕಡೆ, ಸಮಾನಭಾಷೆಯ ಕಲ್ಪನೆ ಬೇರೆಯಾಗಬೇಕಾಗುತ್ತದೆ. ಇಲ್ಲಿ ಆಯಾ ಪ್ರಾಂತದ ಭಾಷೆಯೇ ವಾಸ್ತವತೆಯಾಗಿರುತ್ತದೆ ಮತ್ತು ಅದನ್ನು ಮನಸಾರೆ ಪ್ರೀತಿಸುವುದೂ ರಾಷ್ಟ್ರೀಯತೆಯೇ, ಈಚಿನ ಲೇಖಕರೊಬ್ಬರೂ ಹೇಳಿರುವಂತೆ ಅದು ಉಪರಾಷ್ಟ್ರೀಯತೆಯೂ ಅಲ್ಲ, ಅದೂ ಅಚ್ಚ ರಾಷ್ಟ್ರೀಯತೆಯೇ. ಈ ಬಗ್ಗೆ ಶಂಬಾ ಅವರಿಗೆ ಬಹುಸ್ಪಷ್ಟ ಕಲ್ಪನೆಗಳಿದ್ದವು. ಅವರು ಎರಡು ಬಗೆಯ ಪರಸ್ಪರ ಭಿನ್ನವಲ್ಲದ ರಾಷ್ಟ್ರೀಯತ್ವಗಳನ್ನು ಗುರುತಿಸಿಕೊಂಡರು. ರಾಜಕೀಯ ಸ್ವಾತಂತ್ರ್ಯವೇ ಮುಖ್ಯ ಲಕ್ಷಣವುಳ್ಳ ಪ್ರಾದೇಶಿಕ, ಎಂದರೆ ಭೌಗೋಳಿಕ ರಾಷ್ಟ್ರೀಯತ್ವ. ಇದು ದೇಹವಿದ್ದಂತೆ.ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಂಗ್ರಾಮವನ್ನು ಹೂಡಿ ಪಡೆಯಬೇಕಾದ್ದು ಅಗತ್ಯ. “ಸ್ವಾತಂತ್ರ್ಯ ಸಂಗ್ರಾಮವೇ ನಮ್ಮ ಯುಗ ಧರ್ಮವು”. ಇನ್ನೊಂದು ಸಾಂಸ್ಕೃತಿಕ ಸ್ವಾತಂತ್ರ್ಯ ಮುಖ್ಯ ಲಕ್ಷಣವಾಗಿರುವ ಸಾಂಸ್ಕೃತಿಕ ರಾಷ್ಟ್ರೀಯತ್ವ. ಇದೇ ‘ಕರ್ನಾಟಕತ್ವ’. ಇದು ಆತ್ಮವಿದ್ದಂತೆ. ಭಾರತೀಯರಾಗಿ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳುವುದೆಂದರೆ ಕರ್ನಾಟಕತ್ವವನ್ನು ಉಳಿಸಿಕೊಳ್ಳುವುದು, ಬೆಳೆಸಿಕೊಳ್ಳುವುದು. ಕರ್ನಾಟಕತ್ವದ ಮುಖ್ಯ ಅಂಗಗಳು ‘ಕನಾಟಕ ವಾಙ್ಮಯ’, ಇತಿಹಾಸ, ಏಕೀಕರಣ, ವಿಶ್ವವಿದ್ಯಾಲಯ ‘ಸಣ್ಣಪುಟ್ಟ ಚಳುವಳಿಗಳು’ ಎಂದರ್ಥ.

ಶಂಬಾ ಅವರನ್ನು ಇಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ರಾಜಕೀಯ ಸ್ವಾತಂತ್ರ್ಯ ಸುಲಭವಾಗಿ ಕಣ್ಣಿಗೆ ಕಾಣುವಂತಹುದು, ಅದು ಹೊರಗಿನದು. ಆದರೆ ಅದಕ್ಕಿಂತ ಸೂಕ್ಷ್ಮ ತಮವಾದ, ಹೃದಯ ಭಾವನೆಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಸ್ವಾತಂತ್ರ್ಯವು ಭಾರತದ ಬೇರೆ ಬೇರೆ ಜನ ಮಾನಸಿಕವಾಗಿ ಪಡೆಯುವ ಸ್ವಾತಂತ್ರ್ಯವನ್ನು ಹೇಳುತ್ತದೆ. ಕನ್ನಡಿಗನಿಗೆ ಭಾರತದ ಭಾಷೆ ಎಂದರೆ ಕನ್ನಡ, ಭಾರತದ ಇತಿಹಾಸವೆಂದರೆ ಕರ್ನಾಟಕದ ಇತಿಹಾಸ, ಕರ್ನಾಟಕದಂತಹ ಪ್ರಾಂತಗಳ ಇತಿಹಾಸ ಸೇರಿ ಭಾರತದ ಇತಿಹಾಸ ನಿರ್ಮಾಣವಾಗುತ್ತದೆ. ಕರ್ನಾಟಕದ ಇತಿಹಾಸ ಎಂಬುದು ಒಂದು ಮೂರ್ತವಸ್ತು, ಭಾರತದ ಇತಿಹಾಸ ಎಂಬುದು ಒಂದು ಅಮೂರ್ತವಸ್ತು, ಆದ್ದರಿಂದ ಕನ್ನಡಿಗನಿಗೆ ಭಾರತ ಅರ್ಥವಾಗುವುದು ಅವನ ಭಾಷೆಯಿಂದಲೇ, ಅವನ ಬದುಕಿನ ಜೀವನ ವಿಧಾನದಿಂದಲೇ. ಶಂಬಾ ಅವರು ತೀರ ಸ್ಪಷ್ಟವಾಗಿ ಹೇಳಿದ್ದಾರೆ. “ನನಗೆ ಹಟ್ಟಿ – ವಾಡಿ ಪಾಡಿ – ನಾಡು ಕರ್ನಾಟಕತ್ವಕ್ಕೂ ವಿಶೇಷ ಭೇದ ತೋರುವುದಿಲ್ಲ.” ಇಷ್ಟು ಸ್ಪಷ್ಟವೂ ಸರಳವೂ ಆಗಿರುವ ಸಂಗತಿಯನ್ನು ಶಂಬಾರ ಕಾಲದ ಜನ ಅಲ್ಲ; ಇಂದಿನವರೂ ಅರ್ಥಮಾಡಿಕೊಳ್ಳದಿರುವುದು, ಅರ್ಥಮಾಡಿಕೊಳ್ಳಲು ಬಯಸದಿರುವುದು ಆಧುನಿಕ ಭಾರತದ, ಕರ್ನಾಟಕದ ರಾಜಕೀಯ, ಶೈಕ್ಷಣಿಕ ದುರಂತಗಳಲ್ಲಿ ಒಂದು.

ಹೀಗೆ ನಿಜವಾದ ಮನುಷ್ಯರನ್ನಾಗಿ ಮಾಡಲು ಮೊದಲು ನಿಜವಾದ ಭಾರತೀಯರನ್ನಾಗಿ ಮಾಡಬೇಕು, ನಿಜವಾದ ಭಾರತೀಯರನ್ನಾಗಿ ಮಾಡಬೇಕಾದರೆ ನಿಜವಾದ ಕನ್ನಡಿಗರನ್ನಾಗಿ ಮಾಡಬೇಕು, ಈ ಉದ್ದೇಶದಿಂದ ಶಂಬಾ ಅವರು ಜನಜಾಗೃತಿಯನ್ನು ಕೈಗೊಂಡರು. ಅದಕ್ಕೆ ಮುನ್ನ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಾವು ಜಾಗೃತರಾಗುವ ಅಗತ್ಯ ಮೂಡಿತು. ಅವರು ಆ ಹೊತ್ತಿಗೆ ಪ್ರಕಟವಾಗಿದ್ದ ನೂರಾರು ಗ್ರಂಥಗಳನ್ನೂ ಶಾಸನಗಳನ್ನೂ ಓದಿದರು. ಪ್ರೌಢ ಪತ್ರಿಕೆಗಳ ಲೇಖನಗಳ ಅಭ್ಯಾಸ ನಡೆಸಿದರು ಭಂಡಾರ್ಕರರ Early History of the Deccan, ಫ್ಲೀಟರ Dynasties of the Kanarese Districts, ಎಪಿಗ್ರಫಿಯ ಕರ್ನಾಟಿಕ ಸಂಪುಟಗಳು, ಹಳಗನ್ನಡ ಕಾವ್ಯಗಳು ಇತ್ಯಾದಿ ಆಕರಗಳನ್ನು ಸವಿಮರ್ಶಕವಾಗಿ ಓದಿದರು. ಅವರು ತಮ್ಮ ಕನ್ನಡ ನೆಲೆ, ಕಣ್ಮರೆಯಾದ ಕನ್ನಡಗಳನ್ನು ಓದಿದವರಿಗೆ ಅವರು ಒಬ್ಬ ಇಂಡಾಲಜಿ ಸಂಶೋಧಕನಂತೆ ಅಭ್ಯಾಸ ಮಾಡಿರುವುದನ್ನು ಕಾನಬಹುದು. ೧೯೩೭ರ ಹೊತ್ತಿಗೆ ಕರ್ನಾಟಕಾಧ್ಯಯನದ ವಿಸ್ತಾರ ಮಿತಿಗಳ ಸಮಗ್ರ ಸಮೀಕ್ಷೆ ಅಲ್ಲುಂಟು. ಕರ್ನಾಟಕ ಮತ್ತು ಹೊರಭಾಗಗಳಲ್ಲಿ ಅವರು ನಡೆಸಿದ ಪ್ರವಾಸದಿಂದ ಒಂದು ಸಂಗತಿಯನ್ನು ಬಹುಶಃ ಮೊಟ್ಟಮೊದಲ ಬಾರಿಗೆ ಕಂಡುಕೊಂಡರು. ನಿಜವಾದ ಕರ್ನಾಟಕ ಇಂದು ಕುಗ್ಗಿದೆ. ಗೋದಾವರಿಯ ಸುತ್ತಮುತ್ತಣ ನಾಡು ಕನ್ನಡವೆಂಬ ಸಂಗತಿ ನಾಂದೇಡ್ ಜಿಲ್ಲೆಯ ಶಾಸನಗಳು ಪ್ರಕಟವಾಗಿ ಶಂಬಾ ಅವರ ಮಾತು ಬಹುನಿಜವೆಂದು ತೋರಿಬಂದಿದೆ. ಪುಣೆ ಹತ್ತಿರದ ಕೆಂದೂರು ಎಂಬ ಹಳ್ಳಿ, ಎಲ್ಲೋರ ಇರುವ ಕನ್ನಡ ಎಂಬ ಹೆಸರು ತಾಲ್ಲೂಕು, ಮಹಾರಾಷ್ಟ್ರದ ನೂರಾರು ಕನ್ನಡ ಸ್ಥಳನಾಮಗಳು ಮಹಾರಾಷ್ಟ್ರದ ಶೇಕಡ ಐವತ್ತರಷ್ಟು ಸ್ಥಳನಾಮಗಳು ಕನ್ನಡವೆಂದು ರಾಜವಾಡೆಯಂತಹ ಮಹಾರಾಷ್ಟ್ರ ಇತಿಹಾಸಕಾರರು ಒಪ್ಪಿದ್ದಾರೆ. ಇವೆಲ್ಲ ಇಂದಿನ ಮಹಾರಾಷ್ಟ್ರದ ಬಹುಭಾಗ ಹಿಂದೊಮ್ಮೆ ಕರ್ನಾಟಕವೇ ಆಗಿತ್ತೆಂಬ ಸಂಗತಿಯನ್ನು ಎತ್ತಿತೋರುತ್ತವೆ. ಡಾ. ಶಂಬಾ ಜೋಶಿಯವರ ಈಚಿನ ಸಂಶೋಧನೆಗಳಿಂದ ಇದು ಇನ್ನೂ ಸ್ಥಿರಪಟ್ಟಿದೆ. ತಿಳಕರಂತಹವರು ಹೇಳಿದ್ದಾರೆ. “ಮಹಾರಾಷ್ಟ್ರ ಬಾರೆ ಅಲ್ಲ, ಕರ್ನಾಟಕ ಬೇರೆ ಅಲ್ಲ, ಎರಡರಲ್ಲಿಯೂ ಒಂದೇ ರಕ್ತವು ಆಡುತ್ತದೆ, ಎರಡೂ ದೇಶಗಳ ಭಾಷೆಯೂ ಮುಂಚೆ ಒಂದೇ, ಅಂದರೆ ಕನ್ನಡವಿತ್ತು. ಭಾಷೆಯ ವಿಷಯದಲ್ಲಿ ಮಹಾರಾಷ್ಟ್ರವು ತನ್ನ ಮೊದಲ ಭಾಷೆಯನ್ನು ಬಿಟ್ಟು ಮರಾಠಿಯಾಗಿದೆ”. ಇಂದಿನ ಮರಾಠಿ ಜನರಿಗೆ ತಮ್ಮ ನಿಜವಾದ ಭಾಷೆಯನ್ನು ಕಳೆದುಕೊಂಡ ಬಗ್ಗೆ ನೋವಿನ ಮಾತಿರಲಿ, ತಮ್ಮ ಪಿತೃಗಳ ಭಾಷೆಯ ಬಗ್ಗೆ ದ್ವೇಷವೇ ಇರುವುದು ಮನುಷ್ಯ ಸ್ವಭಾವದ ವಿರೋಧಗಳಲ್ಲೊಂದು. ಸಾವಿರ ವರ್ಷಗಳ ಹಿಂದೆ ಇಂದಿನ ಮಹಾರಾಷ್ಟ್ರವನ್ನು ಆಳುತ್ತಿದ್ದ ದೊರೆಗಳು ನಿಜವಾಗಿ ಮರಾಠಿ ಆಡುತ್ತಿದ್ದರೇ? ಖಚಿತವಿಲ್ಲ, ಬಹುಶಃ ಕನ್ನಡ ಮಾತನಾಡುತ್ತಿದ್ದರು. ಕನ್ನಡಕ್ಕೆ ಹೋಲಿಸಿದರೆ ಮರಾಠಿ ತೀರ ಈಚಿನ ಭಾಷೆ, ಮಹಾರಾಷ್ಟ್ರದ ಇತಿಹಾಸವು ಕಾಲ ಮತ್ತು ಸಿದ್ದಿಗಳಲ್ಲಿ ಚಿಕ್ಕವಾದರೂ, ಕರ್ನಾಟಕದ ಇತಿಹಾಸಕ್ಕೆ ಅದನ್ನು ಏನೂ ಹೋಲಿಸಲಿಕ್ಕಾಗದು. ಕರ್ನಾಟಕ ವಿಸ್ತಾರವಾಗಿತ್ತು, ನಿಜ. ಶಂಬಾ ಅವರು ಕ್ರಿ. ಶ. ೬ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಕರ್ನಾಟಕವು ದಕ್ಷಿಣ ಭಾರತದ ರಾಜಕೀಯ ಸಾಂಸ್ಕೃತಿಕ ಮುಖಂಡತ್ವವನ್ನು ವಹಿಸಿದ್ದನ್ನು ಎತ್ತಿಹಿಡಿದಿದ್ದಾರೆ. ದೇಶವಿಸ್ತಾರವೊಂದೇ ಅಲ್ಲ, ಸಾಂಸ್ಕೃತಿಕ ಮಹತ್ವವೂ ಕರ್ನಾಟಕವನ್ನು ಭಾರತದ ಅಗ್ರಗಣ್ಯ ಭಾಗವನ್ನಾಗಿ ಮಾಡಿದ್ದಿತೆಂದು ನಿಸ್ಸಂಕೋಚವಾಗಿ ಸಾರಿದ್ದಾರೆ. ಕರ್ನಾಟಕದಲ್ಲಿ ಅತಿಶ್ರೇಷ್ಠ ಕವಿಗಳು, ದಾರ್ಶನಿಕರು, ಶೂರರು, ರಾಜನೀತಿ ಕುಶಲರು ಕಾಣಿಸಿಕೊಂಡರು. ಇಲ್ಲಿನ ದೇವಾಲಯಗಳು ಅತಿಸುಂದರ, ಅಕ್ಕಾದೇವಿ, ಮೈಳಲದೇವಿಯಂತಹ ಶೂರೆಯರು ಇಲ್ಲಿದ್ದರು. ನೂರಾರು ಸಾಧು ಸಂತರು ಮೆರೆದ ನಾಡು ಇದು. ಇದನ್ನೆಲ್ಲ ಹೇಳುತ್ತಿದ್ದರೆ, ಅಪನಂಬಿಕೆ ತೋರುವವರನ್ನು ಶಂಬಾ ಅವರು ಕನಿಕರಿಸುತ್ತಾರೆ. ಕರ್ನಾಟಕ ಸಂಸ್ಕೃತಿ ಮರಾಠಿ ಸಂಸ್ಕೃತಿಗಿಂತ ಅಂತಸ್ಸತ್ವದಲ್ಲಿ ಬಲಿಷ್ಠವಾದುದು ಮತ್ತು ಸಮೃದ್ಧವಾದುದು ಎಂಬ ವಿಶ್ವಾಸ ಶಂಬಾ ಅವರಿಗಿದ್ದರೂ, ತಮ್ಮ ಕಾಲದ ಮರಾಠಿಗಳ ಅತಿಪ್ರಚಾರದಿಂದಾಗಿ ಅವರ ಶ್ರೇಷ್ಠತೆಯನ್ನು ಒಪ್ಪಿಕೊಂಡಿದ್ದ ಕನ್ನಡಿಗರಿಗೆ ಸ್ವಲ್ಪವಾದರೂ ಆತ್ಮವಿಶ್ವಾಸ ಮೂಡಲಿ ಎಂಬ ಆಸೆಯಿಂದ “ಪುಲಕೇಶಿ, ಗೋವಿಂದ, ನೃಪತುಂಗ, ತೈಲಪವಿಕ್ರಮ ಇವರೆ ತಮ್ಮ ಶಿವಾಜಿ ಬಾಜೀರಾಯ ಮುಂತಾದವರು ವಿದ್ಯಾರಣ್ಯರೇ ನಮ್ಮ ರಾಮದಾಸರು ಗಿರಿಯಮ್ಮನೇ ನಮ್ಮ ಮುಕ್ತಾಬಾಯಿ…” ಎಂದು ಹೇಳುವುದನ್ನು ನೋಡಿದರೆ, ಅಂದಿನ ಕನ್ನಡಿಗರ ಬಗ್ಗೆ ಕನಿಕರ ಮೂಡುತ್ತದೆ.

ಕ್ರಿ. ಶ. ೧೯೩೭ರಿಂದ ಈಚೆಗೆ ಎಷ್ಟೋ ಘಟನೆಗಳು ನಡೆದಿವೆ. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದಿತು. ಭಾಷಾವಾರು ಪ್ರಾಂತಗಳಾಗಿ ಕರ್ನಾಟಕಕ್ಕೆ ‘ವಿಶಾಲ ಮೈಸೂರು’ ಎಂಬ ನಾಮಕರಣವಾಯ್ತು. ವಿಶಾಲ ಮೈಸೂರಿಗೆ ‘ಕರ್ನಾಟಕ’ ಎಂಬ ನಾಮಕರಣವೂ ಆಯ್ತು (೧೯೭೨). ಕನ್ನಡ ಆಡಳಿತದ ಭಾಷೆ ಎಂದು ಘೋಷಿತವಾಯಿತು. ಶಾಲೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ ಜಾರಿಗೆ ಬಂದಿತು. ಹಿಂದೆ ದ್ವಿತೀಯ ಭಾಷೆ ಎನ್ನಿಸಿಕೊಂಡಿದ್ದ ಕನ್ನಡಕ್ಕೆ ಪ್ರಥಮ ಭಾಷೆ ಎನ್ನುವ ನಾಮಕರಣ ಪ್ರಾಪ್ತವಾಯಿತು. ಈ ಅಪೂರ್ಣ ಪಟ್ಟಿಯೇನೋ ಮೇಲ್ನೋಟಕ್ಕೆ ಕನ್ನಡಕ್ಕೆ ಒದಗಿರುವ ಯಶಸ್ಸುಗಳ ಮಾಲಿಕೆಯನ್ನೇ ಒಳಗೊಂಡಿರುವಂತೆ ಕಾಣಿಸಿದರೂ, ೧೯೩೭ರಲ್ಲಿ ಶಂಬಾ ಅವರ ಕನ್ನಡಿಗರನ್ನು ಕುರಿತಂತೆ ಆಡಿರುವ ಮಾತುಗಳು ಇಂದು ನಿಜವಾಗಿಯೇ ಉಳಿದಿರುವುದು ಒಂದು ವಾಸ್ತವ ಸಂಗತಿ. ಶಂಬಾ ಅವರು ಇಂದು ಪ್ರಸ್ತುತವಾಗುವುದು ಇದೇ ಕಾರಣಕ್ಕಾಗಿ.

ಶಂಬಾ ಅವರಿಂದ ಕನ್ನಡಿಗರು ಸ್ಪೂರ್ತಿ ಪಡೆಯುವುದು ಸಾಕಷ್ಟಿದೆ. ಮಾದ್ಯಮದ ಭಾಷೆಯಾಗಿ ಇಂಗ್ಲಿಷ್, ಆಡಳಿತದ ಭಾಷೆಯಾಗಿ ಹಿಂದಿ, ಪ್ರಥಮ ಭಾಷೆಯಾಗಿ ಸಂಸ್ಕೃತ, ಹೊರಗಿನಿಂದ ಬಂದು ನೆಲಸಿರುವವರ ಭಾಷೆಯಾಗಿ ತಮಿಳು ಇವುಗಳ ಮುಂದೆ ಕನ್ನಡ ತತ್ತರಿಸಿದೆ. ಶಂಬಾ ಅವರು ಸಮಕಾಲೀನ ಕನ್ನಡಿಗರಂತೆಯೇ ಇಂದೂ ಕನ್ನಡಿಗರು ಬಹುತೇಕ ಸ್ವಸ್ಥಚಿತ್ತರಾಗಿ ಕುಳಿತಿದ್ದಾರೆ, ಮಲಗಿದ್ದಾರೆ. ಕನ್ನಡದ ವಿಷಯವನ್ನುನಮ್ಮ ಜನದ ಹತ್ತಿರಕ್ಕೆ ಕೊಂಡೊಯ್ದು, ಅದನ್ನು ಅವರು ಕೈಗೆತ್ತಿಕೊಳ್ಳುವಂತೆ ಮಾಡುವ ತನಕ ಬಹುಶಃ ಅದರ ಏಳಿಗೆಯಿಲ್ಲ. ಕನ್ನಡದ ಸಮಸ್ಯೆ ಜನರ ಅನ್ನ, ವಸತಿ, ಉದ್ಯೋಗಗಳಂತಹ ಆರ್ಥಿಕ ಸಂಗತಿಗಳ ಜೊತೆ ಸೇರಿಕೊಳ್ಳದೆ, ಕೇವಲ ಸಾಂಸ್ಕೃತಿಕ ವಲಯದಲ್ಲೇ ಉಳಿಯುವುದಾದರೆ, ಜನ ಕನ್ನಡದ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇಂಗ್ಲಿಷ್, ಹಿಂದಿ, ಸಂಸ್ಕೃತಗಳಿಗೆ ನಾವು ಸರಿಯಾದ ಸ್ಥಾನ ಕಲ್ಪಿಸಿ ಅದನ್ನು ಆಯಾ ಜಾಗದಲ್ಲಿ ಇಡಲಾರದೆ ಹೋದರೆ ಅವು ಕನ್ನಡ ಜನತೆಯ ಭಾಷೆಯ ಶೋಷಣೆಯ ಕಾರ್ಯವನ್ನು ಇನ್ನೂ ಪ್ರಬಲವಾಗಿ ಮುಂದುವರಿಸುವ ಸೂಚನೆಗಳಿವೆ. ಕನ್ನಡ ಅಭಿಮಾನದ ಬಗ್ಗೆ ಇಷ್ಟು ದಿನ ಎಷ್ಟೋ ಜನ ಬಗೆ ಬಗೆಯಾಗಿ ಹೇಳಿದರೂ ಜನರ ಮನಸ್ಸಿಗೆ ಏಕೆ ಬಂದಿಲ್ಲವೆಂಬುದನ್ನು ಗಂಭೀರವಾಗಿ ಪರ್ಯಾಲೊಸಬೇಕಾಗಿದೆ. ಕನ್ನಡ – ಕರ್ನಾಟಕ ಕುರಿತು ಶಂಬಾ ಅವರ ವಿಚಾರಗಳು ತುಂಬ ಪ್ರಗತಿಪರವಾಗಿವೆ.