III

ಶಂಬಾಜೋಶಿ ಅವರು ಸ್ಥಳನಾಮಗಳನ್ನು ಕೇವಲ ರಚನಾತ್ಮಕವಾಗಿ ಮಾತ್ರ ನೋಡುವುದಿಲ್ಲ. ಜನಾಂಗಿಕವಾಗಿಯೂ ಗಮನಿಸುತ್ತಾರೆ. ಸ್ಥಳನಾಮಗಳಿಂದ ಪ್ರಾಗೈತಿಹಾಸಿಕ ಜನರ ಕುರುಹುಗಳನ್ನು ಗುರುತಿಸಲು ತೊಡಗುತ್ತಾರೆ. ಸಿಂದ, ಪಂಜಾಬ ಮುಂತಾದ ಉತ್ತರ ಭಾರತದ ಜನರೊಡನೆ ಕರ್ನಾಟಕದ ಸಂಪರ್ಕ ಸಂಬಂಧಗಳು ಇದ್ದವೆಂದು ಗುರುತಿಸಿದ್ದಾರೆ.

ಕೋಲರೂ ಮುಂಡರೂ

ಭಾರತದಲ್ಲಿ ಆರ್ಯರು ಮತ್ತು ದ್ರಾವಿಡರಿಂದಲೂ ಮೊದಲು ಒಂದು ಜನ ಅಲ್ಲಿ ಇಲ್ಲಿ ಹಬ್ಬಿಕೊಂಡಿದ್ದಿತು. ಅದು ಪೂರ್ವಭಾಗದಿಂದ ಎಂದರೆ ಟಿಬೇಟ, ಬ್ರಹ್ಮದೇಶ, ಬಂಗಾಳದತ್ತಣಿಂದ ಬಂದು ಉಳಿದ ಕಡೆಗೂ ಹಬ್ಬಿದ್ದಿತೆಂದು ಪಾಶ್ಚಿಮಾತ್ಯ ಸಂಶೋಧಕರು ನಿರ್ಣಯಿಸಿದ್ದಾರೆ. ಇದಕ್ಕೆ ಸಾಮಾನ್ಯವಾಗಿ ಎಲ್ಲ ವಿದ್ವಾಂಸರ ಒಪ್ಪಿಗೆಯೂ ದೊರೆತಿದೆ. ಪುರಾತನದ ಈ ಜನಗಳಲ್ಲಿ ಕೋಲರು ಮತ್ತು ಮುಂಡರ ಹೆಸರಿನ ಊರ ಹೆಸರುಗಳು ಕನ್ನಡ ನಾಡಿನಲ್ಲಿ ವಿಶೇಷವಾಗಿವೆ. ಆದರೆ, ಅವನ್ನು ಈವರೆಗೆ ಕೋಲ ಮತ್ತು ಮುಂಡರೆಂದು ವಿವರಿಸಿ ಹೇಳಿದ್ದುದು ಶಂಬಾ ಅವರ ತಿಳುವಳಿಕೆಯಂತೆ ಇದೇ ಮೊದಲನೆಯ ಸಲ, ಕೊಲ್ಲುರು, ಕೋಲಾರಗಳ ಸ್ಥಳಪುರಾಣ ಅಥವಾ ಗ್ಯಾಝಿಟಿಯರುಗಳ ಲೇಖಕರು ಸಹ ಇವು ಕೋಲವೆಂಬ ಜನಗಳ ಕುರುಹುಗಳೆಂದು ಬರೆದಿಲ್ಲ.

ಕೋಲರ ನೆನಹನ್ನು ಕೊಡುವ ಹಲವು ಊರ ಹೆಸರುಗಳು ಕರ್ನಾಟಕದ ತುಂಬ ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದೆ. ಕೊಲ್ಲ, ಕೊಲ್ಲಗಿರಿ, ಕೋಲಾರ, ಕೊಳ್ಳಹಾಳ, ಕೊಲ್ಲೂರು, ಕೋಲ್ಹಾಪುರ, ಕೊಲ್ಲಹಣನಾಡು, ಕೊಲ್ಲಂ, ಕೊಳ್ಳೆಗಾಲ, ಕೊಲ್ಲಿ, ಕೊಲ್ಲಿಪಾಕೆ, ಕೊಲ್ಲಾಳಿ ಮುಂತಾದವು. ಇವುಗಳಲ್ಲಿ ಕೆಲವು ದೇವಿಯ ಸ್ಥಾನಗಳೆಂದು ಸುಪ್ರಸಿದ್ಧವಾಗಿವೆ. ಇದರಂತೆ ಮುಂಡರ ಹೆಸರಿನ ಸಂಬಂಧವುಳ್ಳ ಊರುಗಳಿವು. ಮುಂಡ ಕೂರು, ಮುಂಡರಗಿ, ಮುಂಡಗೋಡು, ಮುಂಡೇವಾಡಿ ಮುಂತಾದವು. ಕೇವಲ ಪಾಶ್ಚಿಮಾತ್ಯ ವಿದ್ವಾಂಸರ ಹೇಳಿಕೆಯ ಮೇಲಿಂದಲೆ ಕೋಲ ಮತ್ತು ಮುಂಡರು ಪ್ರಾಚೀನ ಜನಗಳೆಂದು ನಂಬಬೇಕಾಗಿಲ್ಲ. ದುರ್ಗಾಸಪ್ತಶತಿ, ದೇವಿಪುರಾಣಗಳಲ್ಲಿ ಬಂದ ವರ್ಣನೆಗಳಿಂದಲೂ ಈ ಐತಿಹಾಸಿಕ ಅಂಶಗಳನ್ನು ಸಂಗ್ರಹಿಸಿ ತಿಳಿದುಕೊಳ್ಳಬಹುದಾಗಿದೆ.

ಅದರಂತೆ ಗೌಳಿಗರಾದ ಎಮ್ಮಿಗರು ಕುರುಹುಗಳು ಸ್ಥಳನಾಮಗಳಿಂದ ವ್ಯಕ್ತವಾಗುತ್ತವೆ. ಎಮ್ಮಿಗರು, ಎಮ್ಮಿಗನೂರು, ಎಮ್ಮೆಸಂದಿ. ಬೇಡರ – ಬಿಲ್ಲರು ಅಂಬಿಗರು ಇವರ ವಸತಿ ವಾಚಕಗಳು ಕನ್ನಡ ನಾಡಿನಲ್ಲಿವೆ. ಬೇಡರೂ ಬಿಲ್ಲವರು ಅಂಬಿಗರೂ ಕೋಲರೂ ಧನುರ್ವಿದ್ಯೆಯ ಬಲದಿಂದ ಬದುಕು ನಡೆಸುತ್ತಿದ್ದರೆಂದು ಅವರ ಹೆಸರುಗಳು ಸಾರ್ಥವಾಗಿವೆ. ಇವರು ತುಂಬ ಕಟ್ಟಾಳುಗಳು. ಕರ್ನಾಟಕದ ಪಡೆಯಲ್ಲಿ ಇವರಿಗೊಂದು ಮಹತ್ವದ ಸ್ಥಾನವಿದ್ದಿತು. ಕನ್ನಡ ನಾಡಿನ ರಾಜರಿಗೆ ಹಲವು ದಿಗ್ವಿಜಯಗಳಲ್ಲಿ ಗೆಲುವನ್ನು ತಂದುಕೊಟ್ಟ ಶ್ರೇಯಸ್ಸು ಇವರಿಗಿದೆ. ಬೇಡರು, ಬಿಲ್ಲರು, ಅಂಬಿಗರ ಹೆಸರುಗಳು ಶಾಸನಗಳಲ್ಲಿ ಬರುತ್ತವೆ.

ಇವರ ಹೆಸರಿನ ಬೀಡುಗಳೂ ಉಂಟು. ೧. ಬೇಡಗೆರೆ, ಬೇಡನ ಬಯಲು, ಬೇಡನಕಟ್ಟಿ, ಬೇಡರಬಂಕಿ (ಕಾಡು), ಬೇಡರಹಳ್ಳಿ, ಬೇಡರಪುರ, ಬೇಡರಿಗುಪ್ಪೆ, ಬೇಡಿಪಾಳ್ಯ. ೨. ಬಿಲ್ಲಾಡಿ, ಭಿಲವಡಿ, ಬಿಲ್ಲಟ್ಟಿ, ಬಿಲ್ಲ ಬೆಳಗುಂದ, ಬಿಲ್ಲಕೆರೆ, ಬಿಲ್ಲೂರು ಮುಂತಾದವು. ೩. ಅಂಬಿನಾಡು ಎಂಬೊಂದೆ ಸ್ಥಳವು ಶಾಸನದಲ್ಲಿ ಸಿಕ್ಕುತ್ತದೆ. ಈ ಜನಗಳಲ್ಲಿ ಹಲವಾರು ರಾಜ್ಯಕಟ್ಟಿ ಅರಸುಗೈದುದೂ ಉಂಟು. ಪಾಳೆಯಗಾರ ನಾಯಕರು ಕೆಲವರಾದರು. ಸುರಪುರದ (ನಿಜಾಂ ಕಂ) ನಾಯಕರು ಇತಿಹಾಸ ಪ್ರಸಿದ್ಧರಾಗಿದ್ದಾರೆ.

ಕಿಳ್ಳೀಕೇತರು, ದಾಸರೂ, ಡೊಂಬರೂ ಈ ಜನಾಂಗಗಳು ಕುರುಹುಗಳಿರುವ ಊರುಗಳನ್ನು ಗುರುತಿಸಿದ್ದಾರೆ. ಕಾತರಾಳ, ಕ್ಯಾತನಹಳ್ಳಿ, ಡೊಂಬರಹಳ್ಳಿ, ಡೊಂಬರೂರು, ದಾಸನೂರು, ದಾಸೇಹಳ್ಳಿ, ಆ ಜನಾಂಗದ ಸಂಸ್ಕೃತಿ, ಪುರಾಣ, ನಂಬಿಕೆಗಳ ಬಗ್ಗೆ ವಿವರಣೆ ಕೊಡುತ್ತಾರೆ. ಇವರು ಹಟ್ಟಿಕಾರರಿಂಗಿಂತಲೂ ಮೊದಲು ಈ ನಾಡಿನಲ್ಲಿದ್ದರೆಂದು ಶೋಧಿಸಿದ್ದಾರೆ.

ಪನಿಗಳು ಹಣಬರು ಇವರು ಸಹಿತ ಕನ್ನಡ ನಾಡಿನಲ್ಲಿ ವಾಸಿಸುವ ಪ್ರಾಚೀನ ಜನಾಂಗಗಳು. ಇವರು ಯಾವಾಗಲೂ ಆರ್ಯರ ತುರುಗಳನ್ನು ಓಡಿಸಿಕೊಂಡು ಹೋಗುವ ಕಾಯಕದವರಾಗಿದ್ದರು. ಆ ಪಣಿಗಳ ನೆನೆಹು ಕೊಡುವ ಪಣಿಯಾಡಿ, ಪಣಿಯಾಲ, ಪಣಂಬೂರು ಎಂಬ ಊರುಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿವೆ. ತುರುಗಳನ್ನು ಸಾಕಿಕೊಂಡು ವಾಸಿಸುವ ಜನಾಂಗ ಹಣಬರು. ಅವರು ವಾಸಿಸುವ ಹಟ್ಟಿಗಳೇ ಹಣಬರಹಟ್ಟಿ, ಹಣಬರೂರು ಬೆಳಗಾವಿ ಜಿಲ್ಲೆಯಲ್ಲಿವೆ. ನಾಗರು ಕನ್ನಡ ನಾಡಿನಲ್ಲಿ ಆಗಿಹೋದ ಬಗೆಗೆ ಸಂದೇಹಕ್ಕೆ ಎಡೆಯೇ ಇಲ್ಲ. ನಾಗರಹಳ್ಳಿ, ನಾಗನೂರು, ನಾಗರಬಾವಿ ಮೊದಲಾದವು ಇವರ ಕುರುಹುಗಳು. ಕನ್ನಡ ನಾಡಿನಲ್ಲಿ ಆಳಿದ ಸಿಂದರು ನಾಗವಂಶದವರೆಂದು ನಿಶ್ಚಿತವಾಗಿ ತಿಳಿದಿದೆ. ಸಿಂದನೂರು, ಸಿಂದಿಗಿ, ಸಿಂದಘಟ್ಟ ಮುಂತಾದವು ಇವಕ್ಕೆ ದೃಷ್ಟಾಂತಗಳಾಗಿವೆ.

ಕನ್ನಡ ನಾಡಿನಲ್ಲಿರುವ ಅನೇಕ ಊರುಗಳು ಸಿದ್ದಪುರುಷರ ಪ್ರಭಾವದ ಸೂಚಕವಾಗಿದೆ. ಕುರುವರಿಂದ ಭಾರತ ಸಂಸ್ಕೃತಿಗೆ ಇನ್ನೊಂದು ದೇವತೆಯ ಕಾಣಿಕೆ ದೊರೆತಿದೆಯೆಂದು ಶಂಬಾ ಅವರ ಗ್ರಹಿಕೆ. ಕುರುವರು ವೀರಶಿವನ ಭಕ್ತರು. ಇವರು ವೀರ ‘ನಾಯಕರು’. ಆದಕಾರಣ ಬೀರನಲ್ಲಿ ಭಕ್ತಿ. ಈ ಬೀರನೇ ಮತ್ತೆ ಸಂಸ್ಕೃತ ರೂಪ ತಾಳಿ ಭೈರವೇಶ್ವರವಾಗಿರಬೇಕೆಂದು ಶಂಬಾ ಅವರ ಊಹೆ. ಭೈರವನು ಕ್ಷೇತ್ರಪಾಲಕ ದೇವತೆಯಂತೆ, ಸರಿ. ಇವನು ಊರ ಕಾವಲುಗಾರ. ಆದುದರಿಂದಲೇ ಊರ ಹಳಬ – ಕುರುಬ. ಉಳಿದ ಪ್ರಾಂತಗಳಿಗಿಂತಲೂ ಕನ್ನಡ ನಾಡಿನಲ್ಲಿ ಭೈರವ ಹೆಸರು ಹೆಚ್ಚು ಪ್ರಚಾರದಲ್ಲಿದೆಯೆಂದು ಶಂಬಾ ಅವರ ತಿಳಿವಳಿಕೆಯಾಗಿದೆ. ಹಳೆಯ ಶಾಸನಗಳಲ್ಲಿ ಈ ಹೆಸರು ಸುಮಾರು ೧೦ನೆಯ ಶತಮಾನದಿಂದ ಮುಂದೆ ಅಡಿಗಡಿಗೆ ಬರುತ್ತದೆ. ಭೈರನಹಳ್ಳಿ, ಭೈರಗಿಕೊಪ್ಪ, ಭೈರಾಖ್ಯಪುರ, ಭೈರಾಪುರ, ಭೈರಸಾಂದ್ರ, ಭೈರವಾಡಿ, ಭೈರವಾಪಟ್ಟಣ, ಭೈರನಮಟ್ಟಿ ಮೊದಲಾದ ಊರುಗಳಿವೆ. ಈ ಸಂಪ್ರದಾಯದಲ್ಲಿ ನಾಥ ಪಂಥದ ಪ್ರಭಾವವೂ ಒಂದಿಷ್ಟು ಕಂಡುಬರುವುದು. ಭೈರವಮೂರ್ತಿಯು ನಾಥಯತಿಯ ಒಂದು ಪ್ರತೀಕವೆಂದೂ ಸರಿ.

ಕನ್ನಡನಾಡು ಜೈನಧರ್ಮದ ತವರ್ಮನೆಯಾಗಿತ್ತು. ಊರ ಹೆಸರುಗಳಲ್ಲಿ ಜಿನರಾಳ, ಜೈನಾಪುರ, ಬಸದಿಕೊಪ್ಪ, ಬಸ್ತಿವಾಡ ಮುಂತಾದವು ಜೈನಧರ್ಮದ ಸ್ಪಷ್ಟವಾದ ಕುರುಹುಗಳಾಗಿವೆ. ಇನ್ನು ಕೆಲವು ಹೆಸರುಗಳು ಜೈನವೆಂದು ತಿಳಿಯದಂತಹ ಸ್ಥಿತಿಯು ಬಂದಿದೆ. ಆ ಊರಲ್ಲಿ ಜೈನರ ಕುರುಹುಗಳು ದೊರೆಯದೇ ಇದ್ದರೂ ಊರ ಹೆಸರು ಜೈನರ ಪ್ರಾಚೀನ ವರ್ಚಸ್ಸಿನ ಸಾಕ್ಷಿಯಾಗಿದೆ. ಉದಾಹರಣಾರ್ಥವಾಗಿ ಸವಣೂರು ಇದು ಶ್ರಮಣರ ಊರೆಂದು ಆ ಹೆಸರೇ ಸಾರುತ್ತಲಿದೆ. ಶಿವಸಂಬಂಧದ ಅನೇಕ ಊರುಗಳು ಇಲ್ಲಿಯ ಶೈವಪಂಥದ ಪ್ರಚಾರ, ವಿಸ್ತಾರದ ದ್ಯೋತಕವಾಗಿವೆ. ಶಿವಾಪುರ, ಕಲ್ಮೇಶ್ವರ, ಶಿವನೇರಿದುರ್ಗ ಮುಂತಾದುವು. ಶಂಕರನಾರಾಯನ, ಹರಿಹರ ಎಂಬ ಹೆಸರುಗಳು ಶೈವ ಮತ್ತು ವೈಷ್ಣವ ಪಂಥದ ಸಮನ್ವಯದ ಸೂಚಕಗಳಾಗಿವೆ. ಬೆನಕನಕಟ್ಟಿ, ಗಣೇಶವಾಡಿ ಗಣಪತಿಯ ಉಪಾಸನೆಯ ಸೂಚಕಗಳಾಗಿವೆ. ಯಕ್ಷಪೂಜೆಗೂ ನಮ್ಮಲ್ಲಿ ಸ್ಥಾನವಿದ್ದಿತು ಎಂಬುದಕ್ಕೆ ಜಖಬಾಳ, ಜಕ್ಕಸಾಂದ್ರ, ಜಕ್ಕಲಿ ಮುಂತಾದವು ಯಕ್ಷರ ಸ್ಮಾರಕಗಳಾಗಿವೆ. ಜೈನರಲ್ಲಿ ಯಕ್ಷಿಣಿಯ ಆರಾಧನೆಯಿದೆ. ಮದುವೆ ಮುಂಜಿಗಳ ಮೊದಲು ಅಥವಾ ಮನೆಯಲ್ಲಿ ಅನಿಷ್ಟವು ಒದಗಬಾರದೆಂದು ಬ್ರಾಹ್ಮಣರ ಮನೆಗಳಲ್ಲಿಯೂ ‘ಜಖಣಿ’ ಆರಾಧನೆ ನಡೆಯುವುದು.

IV

ಶಂಬಾ ಅವರು ಸ್ಥಳನಾಮಗಳ ಮೂಲಕ ಈ ನಾಡಿನ ಭೌಗೋಳಿಕ ವಿಚಾರಗಳನ್ನು ಗುರುತಿಸಿದ್ದಾರೆ. ಮಾಡ ಎಂದರೆ ಎತ್ತರ, ಉಪ್ಪರಿಗೆ, ಚಾರಮಾಡಿ ಎಂದು ಮುಂತಾದ ಊರುಗಳಲ್ಲಿ ಮಾಡವು ಕಾಣಿಸಿಕೊಳ್ಳುವುದು. ‘ಮಾಳ’ ಗುಡ್ಡ, ‘ಮಾಳ’ ಮರಡಿ ಎಂಬ ದ್ವಿರುಕ್ತಿಗಳ ಬಳಕೆಯಲ್ಲಿ ಬಂದುದು, ಅಲ್ಲಿ ‘ಮಾಳ’ ಶಬ್ದದ ಮೂಲಾರ್ಥದ ಅರಿವು ಕಡಿಮೆಯಾದುದರ ಕುರುಹು. ಮಾಳದ ಮೂಲಾರ್ಥವು ತಿಳಿದಿದ್ದರೆ ಮತ್ತೆ ಅದರ ಮುಂದೆ ಅದೇ ಅರ್ಥದ ಗುಡ್ಡ ಅಥವಾ ಮರಡಿ ಎಂಬುದನ್ನಿಡುವ ಸಂಭವವಿಲ್ಲ.

ಕುಪ್ಪ, ಕುಪ್ಪೆ, ಗುಪ್ಪೆ, ಕೊಪ್ಪ ಎಂಬುದು ಮಾಲ ಎಂಬರ್ಥದ ಎತ್ತರ ಪ್ರದೇಶವನ್ನು ಸೂಚಿಸುವ ಇನ್ನೊಂದು ನುಡಿಗಡಣ. ‘ಕಪ್ಪು’ ಎಂದರೆ ಪುಂಜೀಕರಣವೆಂದು ಅರ್ಥವಿದೆ, (ಶ. ಮ. ದ) ಕುಪ್ಪೆ, ಕುಪ್ಪ, ಗುಪ್ಪೆ, ಕೊಪ್ಪಗಳು ಮೂಲದಲ್ಲಿ ಗುತ್ತು, ಗುಂಪು, ಗುಡ್ಡು ಎಂಬರ್ಥವುಳ್ಳುಗಳಾಗಿವೆ. ಕೋಪಣನಗರವೆಂದ ಹೆಸರಾಂತ ಕೊಪ್ಪಳದಲ್ಲಿ ಗುಡ್ಡವಿದ್ದುದು ಸರಿಯಾದುದೇ ಆಗಿದೆ. ಸಾಂಗಲಿಯ ಹತ್ತಿರ ‘ಕೂಪವಾಡಿ’ ವೆಂದು ಕರೆಯಲ್ಪಡುವ ಮಾಲವಿದೆ. ಎತ್ತರವಾದ ಈ ಪ್ರದೇಶಕ್ಕೆ ಕುಪ್ಪವಾಡವೆಂದು ನಿಜವಾದ ಹೆಸರು. ಆದರೆ ದ್ವಿತ್ವವನ್ನು ಉಚ್ಚರಿಸಲು ಆರಿಯ ಮಾತಿನವರಿಗೆ ತೊಂದರೆಯಾಗುತ್ತದೆ. ಆದಕಾರಣ ಕಪ್ಪುರ, ಕಾಪೂರವಾದಂತೆ ಕುಪ್ಪವು ಕೂಪವಾಯಿತು. ಕುಪ್ಪಗಲ್ಲು, ತಾಳಗುಪ್ಪೆ, ಇಂತಿವೆಲ್ಲವೂ ಮಾಳದ ನೆಲಗಳು. ಆದರೆ, ಕೊಪ್ಪವೆಂಬುದು ಕೆಲವೆಡೆಗೆ ಊರ ಹರಹು, ನೆರೆಯ ಹಳ್ಳಿ ಎಂಬರ್ಥದಲ್ಲೂ ಬಳಕೆಯಲ್ಲಿ ಬಂದುದು ಕಂಡುಬರುವುದು.

ಕುಮರಿ, ಕುಂಬೆಗಳು ಗುಡ್ಡದ ಪ್ರದೇಶ, ಗುಡ್ಡದ ಬದಿಗೆ ಇರುವ ಊರು ಎಂಬರ್ಥವುಳ್ಳುವುಗಳಾಗಿವೆ. ಕುನ್ದ, ಗುನ್ದ, ಗೊನ್ದಿ, ಗೊಣ್ದಿ, ಕೊನ್ದ, ಎಂಬೀ ಬಳಗದ ನುಡಿಗಳು ಸ್ವಲ್ಪ ಎತ್ತರದ ಪ್ರದೇಶ, ಗುಡ್ಡದ ನೆರೆಯವೂರು ಎಂಬರ್ಥವುಳ್ಳವುಗಳಾಗಿವೆ. ತಮಿಳಿನಲ್ಲಿ ಕನ್‌ಱ ಎಂಬ ಪದವು ಇದೇ ಅರ್ಥವುಳ್ಳದಾಗಿದೆ. ನಮ್ಮ ನಾಡಿನ ಕುನ್ದರ ನಾಡು, ಕುನ್ದರಿಗಿ ಎಂಬ ಸ್ಥಳಗಳು ಕುನ್‌ಱ ಎಂಬ ತಮಿಳ ರೂಪಕ್ಕೆ ಬಹಳ ಹತ್ತಿರದುವುಗಳಾಗಿವೆ.

ಕೂನು ಅಥವಾ ಗೂನು ಎಂದು ಬಾಗಿದ್ದಕ್ಕೆ, ವಕ್ರತೆಗೆ ಹೇಳುವುದುಂಟು. ಕುಳ್‌ ಅಥವಾ ಕುನ್ ಎಂಬುದು ಇದರ ಬೀಜಶಬ್ದ. ಕುಳ್ ಕುಳ್ಳಿ ಗುಳ್ಳಿ ಗುಂಡು, ಗುದ್ದೆ….., ಈ ಗೂನಿನ ಒಳಬದಿಯಿಂದ ನೋಡಿದರೆ ಅದು ತಗ್ಗು ಎಂಬರ್ಥ ಕೊಡುವುದು, ಹೊರಬದಿಯಿಂದ ಎತ್ತರವೆಂದಾಗುವುದು. ಆದುದರಿಂದ ಇದರೊಳಗಿನ ಗುಂಡಿ, ಕುಂಟೆ ಎಂಬೀ ಕೆಲವು ನುಡಿಗಳು ಕೆರೆ, ಕೊಳೆ ಎಂಬರ್ಥವುಳ್ಳವುಗಳಾಗಿವೆ.

ಕುಂದ, ಗುಂದಗಳು ಇರುವ ಭಾಗದ ನಕ್ಷೆ ತೆಗೆಯಬೇಕು. ಇವು ಕನ್ನಡನಾಡಿನ ಒಂದು ವಿಶಿಷ್ಟ ಭಾಗದಲ್ಲಿಯೇ ಹೆಚ್ಚಾಗಿವೆ. ಕುಂದಾಪುರ, ಕುಂದರಗೆ, ಹುನಗುಂದ, ಮುಳಗುಂದ, ನೀಲಗುಂದ, ನರಗುಂದ ಇಲ್ಲಿ ಎಲ್ಲೆಡೆಗೂ ಕುಪ್ಪ, ಗುಪ್ಪದಂತೆ ಎತ್ತರದ ಪ್ರದೇಶ, ಮರಡಿ, ಗುಡ್ಡವಿದ್ದುದುಂಟು. ಆದರೆ, ರೋಣ ತಾಲೂಕಿನ (ಧಾರವಾಡ ಜಿಲ್ಲೆ) ನಿಡುಗುಂದದಂತಹ ಸ್ವಲ್ಪ ಸ್ಥಳಗಳಲ್ಲಿ ಇದಕ್ಕೆ ಅಪವಾದವನ್ನು ಕಾಣಬಹುದು. ತೀರ ಹತ್ತಿರವಿಲ್ಲದಿದ್ದರೂ ಸಮೀಪದಲ್ಲಿ ಸ್ವಲ್ಪ ಮೇಲೆ ನಿಡುಗುಂದಿಗೆ ಗುಡ್ಡವುಂಟು. ಗುಂಡ, ಗುಡಿ, ಗೊಂದಿಗಳು ನಾಡಿನ ಇನ್ನೊಂದು ನಿಟ್ಟಿನಲ್ಲಿ ಕಾಣಿಸಿಕೊಳ್ಳುವುವು.

ಹೊಲಗಳೆಂದು ಹೇಳುವುದು ಬೆಳುವೊಲದ ವಿಶೇಷ. ಗದ್ದೆ ಮಲೆನಾಡಿನಲ್ಲಿ ಮುಖ್ಯ. ಗದ್ದೆಯೆಂದೊಡನೆ ಅಲ್ಲಿ ಬತ್ತವೆ ಮುಖ್ಯ ಬೆಳೆ. ಮಕ್ಕಿ, ಮೊಗರು, ಹಿತ್ತಲು, ಕಾಡು, ಕಳ ಇವೂ ಮಲೆನಾಡಿನ ಕನ್ನಡ ಜಿಲ್ಲೆಯ ಊರುಗಳೇ, ಖೇಟಗಳು ವಿಜಾಪುರದ ಕಡೆಗೆ ಇರುವುದಾದರೆ ಶೇತ ಕಾರವಾರದಲ್ಲಿ ಪೊಳಲು, ಹೊಳಲು, ಕನ್ನಡನಾಡಿನ ಎಲ್ಲ ಭಾಗದಲ್ಲೂ ಉಂಟು. ಏರಿ, ಕಟ್ಟಿ, ಕೆರೆ, ಕುಂಟೆ, ಕೊಳ, ಕೊಳ್ಳಗಳು ದೇಶದ ವಿಶಿಷ್ಟ ಭಾಗದಲ್ಲಿಯೇ ಉಂಟೆಂದಲ್ಲ. ಆದರೂ ಕುಳಿ – ಗುಳಿ, ಗುಣಿಗಳು ಉತ್ತರ ಕನ್ನಡ ಜಿಲ್ಲೆಯತ್ತ ಹೆಚ್ಚು ಕಾಣುತ್ತವೆ.

ಕೊಂಬು, ಕೋಡುಗಳು ಪರ್ವತದ ಶಿಖರಗಳು, ಬಂಡಿ, ಕಲ್ಲು, ಶಿಲೆಗಳು ಗುಡ್ಡದ ಪ್ರದೇಸವೆಂದು ಅರ್ಥ ಮಾಡಬಹುದಾದರೂ ಇವುಗಳಲ್ಲಿ ಕಲ್ಲು ಎಂಬುದು ಹಲವೆಡೆಗೆ ಅಪವಾದವಾಗಿ ಇದ್ದುದು ಕಂಡುಬಂದಿದೆ. ತೋರಗಲ್ಲು, ತೋರಣಗಲ್ಲುಗಳಲ್ಲಿ ಗುಡ್ಡವಿದ್ದರೆ, ಕೊಳಗಲ್ಲುಗಳಂತಹ ಎಡೆಯಲ್ಲಿ ಕೇವಲ ಬಯಲು ಇದ್ದುದುಂಟು. ಕಲ್ಲು ಎಂದರೆ ಹರಳು ಎಂದರ್ಥ ಮಾಡಬಹುದೇನೊ, ಅಂತಹ ಊರುಗಳಲ್ಲಿ ಮಲೆನಾಡಿನಲ್ಲಿ ಬಯಲ ಊರುಗಳು ಅದೆಷ್ಟೋ ತಲೆದೋರಿದ್ದು ಸಹಜವಾಗಿದೆ.

ಹಳ್ಳ, ಹೊಳೆ, ತೊರೆ, ಕೆರೆ, ಸರೋವರ, ಸಮುದ್ರ, ಸಾಂದ್ರ, ಸಾಗರಗಳಿದ್ದಲ್ಲಿ ಜಲಾಶಯವುಂಟೆಂದು ಹೇಳಬೇಕಾದ ಕಾರಣವಿಲ್ಲ. ಆದರೂ ಸಮುದ್ರ ಮತ್ತು ಸಾಗರಗಳು ನಮ್ಮ ನಾಡಿನ ಕೆಲವೊಂದು ಭಾಗದಲ್ಲಿಯೇ ಇವೆ. ಮೈಸೂರು ಸೀಮೆಯಲ್ಲಿ ಇವು ವಿಫುಲವಾಗಿವೆ. ದ್ವಾರಸಮುದ್ರದ ಮಾದರಿಯಲ್ಲಿ ಉಳಿದ ಸಮುದ್ರಗಳು ತಲೆಯೆತ್ತಿದುವೊ ಎಂಬುದು ಅಭ್ಯಸನೀಯವಾಗಿದೆ. ಇವು ಬಳ್ಳಾರಿ ಜಿಲ್ಲೆಯಲ್ಲಿವೆ. ಧಾರವಾಡ ಜಿಲ್ಲೆಯಲ್ಲಿ ಗದಗ ತಾಲೂಕಿನವರೆಗೆ ಮಲಸಮುದ್ರ ಮುಂತಾದ ಈ ಬಗೆಯ ಹೆಸರುಗಳಿವೆ. ಬೆಳಗಾವ ಜಿಲ್ಲೆಯಲ್ಲಿ ಪರಸಗಡ, ಬೈಲಹೊಂಗಲ ತಾಲೂಕಿನವರೆಗೆ ಅಕ್ಕಿಸಾಗರ ಮುಂತಾದ ಇಂತಹ ಹೆಸರನ್ನು ಕಾಣಬಹುದು. ಇವುಗಳಲ್ಲಿ ಎಷ್ಟೋ ದ್ವಾರಸಮುದ್ರದ ಅನುಕರಣದಿಂದ ಉಳಿದ ಸಮುದ್ರ, ಸಾಗರಗಳು ತಲೆದೋರಿದ್ದರೆ ಅದು ಹೊಯಿಸಳರ ಕಾಲದ ಪ್ರಭಾವವೆಂದು ಹೇಳಬಹುದು !.

ಹಂಪೆಯ ಕೆಸರನ್ನು ಅನುಕರಿಸಿ ಅನೇಕ ಊರುಗಳು ತಲೆಯೆತ್ತಿದ್ದು ಆ ಕ್ಷೇತ್ರದ ಮಹಿಮೆಯೇ ಆಗಿದೆ. ಹಂಪಸಾಗರ (ಧಾ) ಹಂಪಿಹೊಳೆ (ರಾಮದುರ್ಗ), ಹಂಪಾಪಟ್ಟಣ (ಬ), ಹಂಪಸಾಗರ (ಬ), ಹಂಪಾ ದೇವನಹಳ್ಳಿ (ಬ), ಹಂಪಾಪುರ (ಬ), ಮುಂತಾದವುಗಳು ಇದಕ್ಕೆ ನಿದರ್ಶನ. ನಮ್ಮಲ್ಲಿಯ ಉಜ್ಜಯನಿ ಮತ್ತು ಸೋಮನಾಥಪುರಗಳೂ ಆ ಕ್ಷೇತ್ರದ ವಿಷಯಕ್ಕಿದ್ದ ಆತ್ಮೀಯತೆಯನ್ನೇ ಸೂಚಿಸುತ್ತವೆ.

ಊರ ಹೆಸರುಗಳಿಂದ ಕೆಲವೆಡೆಗೆ ನೆಲದ ಸ್ಥಿತಿ ತಿಳಿಯುತ್ತದೆ. ಕರ್ಲಕೊಪ್ಪ, ಎರೆಗಟ್ಟಿ, ಕರೆಕಟ್ಟಿಗಳು ಆ ಭೂಮಿಯನ್ನು ವರ್ಣಿಸುತ್ತವೆ. ಕೆಸರಕೋಡಿ, ಕೆಸರಕೊಪ್ಪ, ಕೊಳಚಿ, ಜಲದುರ್ಗ, ಸುವಳ ಹಳ್ಳಿಗಳು ತಾವಿದ್ದ ಎಡೆಯ ಬಗೆಯ ಸೂಚಕವಾಗಿವೆ. ಉಪ್ಪೂರು, ಉಪ್ಪಿನ ಅಂಗಡಿ, ಉಪ್ಪಿನ ಬೆಟ್ಟಗೆರೆಯಂತಹ ಎಡೆಗಳಲ್ಲಿ ಉಪ್ಪು ತೆಗೆವ ಕೆಲಸ ನಡೆಯುತ್ತಿದ್ದಿತೇನೋ. ವಿಚಾರಾರ್ಹವಾದ ವಿಷಯ.

ಈ ಬಗೆಯಾಗಿ ಪ್ರಾಕೃತಿಕ ಸ್ವರೂಪದಂತೆ, ಊರ ಹೆಸರುಗಳಿಂದ ರಾಜಕೀಯ ಭೂಗೋಲವೂ ಗೊತ್ತಾಗುವುದು. ನಗರ, ಪೇಟೆ, ಪಟ್ಟಣ, ಅಂಗಡಿ, ಎಂಬ ಹೆಸರಿನ ಊರುಗಳು ಒಂದು ಕಾಲಕ್ಕೆ ವ್ಯಾಪಾರದ ಸ್ಥಳಗಳೆಂದು ಸಾಮಾನ್ಯವಾಗಿ ಹೇಳಿದರೆ ವಿಶೇಷ ತಪ್ಪಾಗಲಾರದು. ಅಂಗಡಿಗಳೆಂಬುವು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಂಡುಬರುತ್ತವೆ. ಉಪ್ಪಿನಂಗಡಿ, ಬೆಳ್ತಂಗಡಿ, ಹಟ್ಟಿಯಂಗಡಿ ಮುಂತಾದವು.

ಕೆಲವು ಊರ ಹೆಸರುಗಳು, ತಮ್ಮ ನೆರೆಹೊರೆಯಲ್ಲಿರುವ ಭೂಗತ ಸ್ವಾಭಾವಿಕ ದ್ರವ್ಯದ ಸಂಶೋಧನಕ್ಕೆ ಸೂಚನೆಯನ್ನು ಕೊಡುತ್ತವೆ. ಭದ್ರಾವತಿಯ ಕಬ್ಬಿಣದ ಕಾರಖಾನೆಯು ಉಗಮವು ಇದೇ ತೆರನಾಗಿ ಆಗಿದೆಯೆಂದು ಕೇಳಿದ್ದೇವೆ. ಭದ್ರಾವತಿಯ ಮೊದಲಿನ ಹೆಸರು ಬೆಂಕೀಪುರವೆಂದಿತ್ತು. ಬೇಂಕೀಪುರವೆಂದು ಹೆಸರು ಬರಲು ಏನಾದರೂ ವಿಶೇಷ ಕಾರಣವಿರಬೇಕೆಂದು ನಡೆಸಿದ ಸೂಕ್ಷ್ಮ ನಿರೀಕ್ಷಣೆಯೆ ಮುಂದೆ ಇಂದಿನ ಭವ್ಯವಾದ ಔದ್ಯೋಗಿಕ ಕೇಂದ್ರ ನಿರ್ಮಾಣಕ್ಕೆ ಕಾರಣವಾಯಿತು. ಕೆಮ್ಮಣ್ಣಗುಂಡಿಯ ಮಾಳದಿಂದ ಕಬ್ಬಿಣದ ಅದಿರು ದೊರೆತು ಭಾರತದಲ್ಲಿ ಅದ್ವಿತೀಯವಾದ ಕಾರಖಾನೆಯು ನಡೆದಿದೆ.

ಪ್ರಾಚೀನ ಕಾಲದಲ್ಲಿ ಹೊಳೆಗಳ ರೇವೆಯಲ್ಲಿ ಬಂಗಾರವನ್ನು ಸೋಸುವುದು ನಡೆಯುತ್ತಿದ್ದಿತಂತೆ. ಹೊಳೆಗಳು ಹರಿಯುತ್ತ ಬರುವಾಗ ಹಲವೆಡೆಗೆ ಬಂಗಾರದ ಸೂಸು ಕಣಗಳನ್ನು ತಂದು ಮಳಲಿನಲ್ಲಿ ಬಿಡುವುದುಂಟು. ಈ ಕಾರಣದಿಂದಲೋ ಏನೋ ಕನ್ನಡ ನಾಡಿನ ಕೆಲವು ಹೊಳೆಗಳಿಗೆ ಸುವರ್ಣಾವತಿ, ಹೇಮಾವತಿ ಎಂಬೀ ಬಗೆಯ ಹೆಸರುಗಳಿವೆ. ಹಟ್ಟಿಯಲ್ಲಿ ಚಿನ್ನದ ಅತಿಪುರಾತನ ಗಣಿಗಳಿವೆ. ಹಟ್ಟಿಯಲ್ಲಿ ಹುಟ್ಟಿದ ವಸ್ತುವೆಂದು ಬಂಗಾರಕ್ಕೆ ‘ಹಾಟಕ’ ವೆಂಬ ಹೆಸರು ಬಂದುದುಂಟು. ಕೊಡಗಿನ ಹರಿಂಗಿ ಎಂಬ ಹೊಳೆಗೆ ಒಂದು ಭಾಗದಲ್ಲಿ ಹಟ್ಟಿ ಹೊಳೆ ಮತ್ತೊಂದು ಭಾಗದಲ್ಲಿ ಸುವರ್ಣಾವತಿ ಎಂಬ ಹೆಸರುಂಟು. ಈ ಹೊಳೆಗಳಲ್ಲಿ ಸೋಸಿದರೆ ಬಂಗಾರವು ಈಗಲೂ ಹೊರಡುವುದೇ ಎಂಬುದು ನೋಡಬೇಕಾದ ಸಂಗತಿ.

V

‘ಪಟ್ಟಿ’ – ಪಾಡಿಯು ನಮ್ಮ ನಾಡಿನ ಮೊದಲಿಗರ ಆರಂಭದ ಪಾಡು ಸೂಚಿಸುವ ಪದವಾಗಿರುವಂತೆ ‘ಕುಡಿ’ ಅಥವಾ ‘ಕುಡು’ ಎಂಬುದು ಅದರ ಮುಂದಿನ ಘಟ್ಟವನ್ನು ನಿರ್ದೇಶಿಸುವ ಶಬ್ದವಾಗಿದೆ. ‘ಪಟ್ಟಿ’ (ಹಟ್ಟ) ಯಲ್ಲಿ ದನಗಾರಿಕೆಯ ಪಾಡಿನ ಧ್ವನಿಯಿದ್ದರೆ, ‘ಕುಡಿ’ ಅಥವಾ ‘ಕುರುಡು’ ಎಂಬಲ್ಲಿ ‘ಒಕ್ಕಲು’ ತನದ ಆರಂಭವನ್ನು ಹೇಳುವ ಅರ್ಥವು ಅಡಕವಾಗಿದೆ. ಒಕ್ಕಲಿಕ್ಕು ಎಂದರೆ ಕಡಿ, ಕತ್ತರಿಸು, ಕುಟುಕು, ಕುಟ್ಟು, ತುಂಡರಿಸಿ, ಉಳಿಯಲಿಕ್ಕೂ, ಬೆಲೆಯಲಿಕ್ಕೂ ಇಂಬನ್ನು ಮಾಡಿಕೊಂಡ ಸೂಚನೆಯು ಕುಡು ಅಥವಾ ಒಕ್ಕಲು ಎಂಬ ಮಾತಿನಲ್ಲಿ ದೊರೆಯುತ್ತಲಿದೆ. ಆದುದರಿಂದಲೇ ‘ಕುಡುವ’ ಎಂದರೆ ಒಕ್ಕಲು, ಒಕ್ಕಲು ಎಂದರೆ ಕುಡುವ. ಕುಡುವರೆ ನಮ್ಮ ನಾಡಿನ ‘ಕುಳಗಳು’. ಕುಟುಂಬಿ ಎಂಬ ಸಂಸ್ಕೃತ ರೂಪದ ಮೂಲವು ಕುಡು ಎಂಬುದರಲ್ಲಿದೆ. ಕುಣಬಿ, ಕುಳಬಿ ಎಂದು ಮರ್ಹಾಟಿಯಲ್ಲಿ ಒಕ್ಕಲಿಗರ ಹೆಸರು. ಗುಜರಾತಿನಲ್ಲಿ ಇದುವೇ ಕುಣಬಿ ಎಂದಾಗಿದೆ. ‘ಕೃಷೀವಳಂ, ಕರ್ಷಕಂ ಕುಟುಂಬಿ ಎನಿಕ್ಕುಂ’ ಎಂದು ಅಭಿಧಾನ ವಸ್ತುಕೋಶದಲ್ಲಿ ಹೇಳಿದೆ. ಆದಕಾರಣ ಕುಟುಂಬಿ ಎಂಬುದರ ಮೂಲ ರೂಪವು ಕುಡುಒಕ್ಕಲು ಎಂಬುದೇ ಆಗಿದೆ.

ಸಸ್ಯಾದಿಗಳಿಂದ ಆಹಾರವನ್ನು ಪಡೆದುಕೊಳ್ಳುವ ವಿಚಾರದಲ್ಲಿ ಪ್ರಗತಿಯಾದಂತೆ ಪಟ್ಟಿಕಾರರು ಹಲವರು ಅಲೆಯುವುದನ್ನು ತೊರೆದು ಕಾಡು ಕಡಿದು, ಅಲ್ಲಲ್ಲಿ ಒಕ್ಕಲಾಗಿ ನಿಲ್ಲಲಾರಂಭಿಸಿದರು. ಈ ಕಾಲದಲ್ಲಿ ಕಟ್ಟಿಕೊಂಡ ಬೀಡುಗಳೆ ಕುಡಿ (ಗುಡಿ)ಗಳು. ‘ಪಟ್ಟಿ’ ಯಂತೆ ‘ಕುಡಿ’ ಯೂ ನಮ್ಮ ನಾಡಿನ ಪ್ರಾಚೀನ ಇತಿಹಾಸವನ್ನು ಹೇಳುವ ಅತ್ಯಂತ ಮಹತ್ವದ ಪದವಾಗಿ.

ಕುಡಿ (ಗುಡಿ, ಗುಡಿಸಲು) ವಾಸಕ್ಕೆ ಯೋಗ್ಯವಾದ ಪ್ರಾಥಮಿಕ ಸ್ಥಿತಿಯ ಗುಡಾರ ಅದುವೆ ಬಿಡಾರ, ಇಲ್, ಕೋಣೆ, ಮನೆ ಎಂಬಿವೆ ಮೊದಲಾದವು. ಕುಡಿ, ಗುಡಿಗಿಂತಲೂ ಮುಂದಿನ ಕಾಲದ ವಿಶೇಷ ಪ್ರಕಾರದ ಪ್ರಶಸ್ತವಾದ ಬಿಡಾರಗಳೆಂದು ಆ ಪದಗಳೇ ಹೇಳುತ್ತವೆ. ಪಟ್ಟಿ ಪಾಡಿ ಎಂದರೆ ಪಟ್ಟುಕೊಂಡಿರುವ ಸ್ಥಳ, ದನದ ಹಕ್ಕಿ ಎಂದು ಇಷ್ಟೆ ಒಮ್ಮೆ ಆರಂಭದಲ್ಲಿ ಅರ್ಥವಿದ್ದರೂ ಅದುವೆ ವಾಡಿ, ವಾಡಾ, ವಾಡೆ ಎಂಬ ರೂಪದಲ್ಲಿ ಕನ್ನಡನಾಡಿನ ಉತ್ತರ ಮೇರೆಯಲ್ಲಿಯೂ ಮಹಾರಾಷ್ಟ್ರದಲ್ಲೂ ವಿಶಾಲವಾದ ವಾಸಸ್ಥಾನ, ಮಹ(ಡಿ) ಮನೆ – ವಠಾರು (ಪಾಟರು = ವಾಡಿ) ಓಣಿ ಎಂಬರ್ಥದಲ್ಲಿ ರೂಢವಾಗಿದೆ. ಅದರಂತೆ ಗುಡಿಸಲೆಂಬಲ್ಲಿ ಪ್ರಾಥಮಿಕ ರೂಪದಲ್ಲಿ ಕಾಣಿಸಿಕೊಳ್ಳುವ ಕುಡಿಯೇ ಮುಂದೆ ಕಾಲಕ್ರಮದಲ್ಲಿ ‘ಗುಡಿ’ ಎಂಬಲ್ಲಿ (ದೇವಾಲಯದ) ಹೆಚ್ಚಿನ ಪ್ರಾಶಸ್ತ್ಯ, ಪಾವಿತ್ರ್ಯಗಳನ್ನು ಪಡೆದುದನ್ನು ಕಾಣಬಹುದು.

ನಮ್ಮ ನಾಡಿನ ಊರುಗಳಲ್ಲಿ ಪಾಡಿಯು ಅತಿಪುರಾತನದ್ದು. ಅದರ ತರುವಾಯದ್ದು ಕುಡಿ ಗುಡಿ, ಆದರೆ, ಪಾಡಿ ಮತ್ತು ಕುಡಿ ಎಂಬ ಎಲ್ಲ ಊರುಗಳೂ ಒಂದೇ ಕಾಲಕ್ಕೆ ತಲೆಯೆತ್ತಿದುವು, ಎಲ್ಲವೂ ಅಷ್ಟೇ ಪ್ರಾಚೀನವೆಂದು ಮಾತ್ರ ಭಾವಿಸಲಾಗದು. ಕುಡಿ, ಕುಡು ಎಂಬುದರ ಕೋಡು ಎಂದರೆ ಪರ್ವತದ ಶಿಖರ, ಕೊಂಬು ಎಂಬರ್ಥದ ಊರುಗಳನ್ನು ಬಿಟ್ಟರೆ ಉಳಿದುವು ಕುಡಿ, ಗುಡಿ, ಕೊಡು, ಗೊಡು, ಕೋಡು, ಗೋಡು ಎಂಬುವೆಲ್ಲವು ಒಂದೇ ಬಳಗದುವು ಎಂದು ಹೇಳಲು ಅಡ್ಡಿಯಿಲ್ಲ. ಇಂತಹ ಊರುಗಳು ನಮ್ಮ ನಾಡಿನ ಎಲ್ಲ ಭಾಗದಲ್ಲೂ ಇವೆ. ಕುಡಚಿ, ಗೊಡಚಿ (ಪಟ್ಟಣ) ಕುಡಿ, (ಚಿಕ್ಕ ಮತ್ತು ಹಿರಿಯ) ಕೋಡಿ, ಗುಡಿ, ಗೇರಿ, – ಬಂಡಿ, – ಸಾಗರ, – ಊರ, – ಪಾಡಿ ಮೊದಲಾದವು ಇದಕ್ಕೆ ನಿದರ್ಶನ. ಪಾಡಿಗಳು, ನಂದಗ್ರಾಮಗಳು, ಗೋಪಾಡಿಗಳು, ಕುರಿಗ್ರಾಮಗಳು ಮೊದಲಾದುವು ನಮ್ಮ ನಾಡಿಗರ ಹಟ್ಟಿಕಾರ ದನಗಾರಿಕೆಯ ಸೂಚಕವಾಗಿರುವಂತೆ ಕುಡಿ, ಗುಡಿಗಳು ನಮ್ಮ ಕುಡು ಒಕ್ಕಲರ ಆರಂಭವನ್ನು ಹೇಳುವ ಊರುಗಳಾಗಿವೆ. ಹಟ್ಟಿಕಾರರು ಒಕ್ಕಲಾದ ಬಳಿಕ ನೇಗಿಲ ಯೋಗಿಗಳಾದ ಈ ಕುಡುವರಿಂದಲೇ ನಮ್ಮ ನಾಡಿನ ಮುಂದಿನ ಏಳ್ಗೆಗೆ ಆರಂಭವಾಯಿತು.

ಕುಡಿಯ ಬಳಿಕ ಪೊಲ, ಪೊೞಲಗಳು ಬೆಳೆದುಬಂದವು. ಪೊಳಲುಗಳು ಪ್ರಾಚೀನತೆಗೆ ಮುದಿಪೊಳಲು = ಮುದುವೊಳಲು (ಮುಧೋಳ) ಎಂಬ ಊರುಗಳೇ ಸಾಕ್ಷಿ. ನಿಜಾಂ ಕರ್ನಾಟಕ, ಉತ್ತರ ಕರ್ನಾಟಕಗಳಲ್ಲಿ ಕೂಡಿ ಮುದಿವೊಳಲುಗಳು ಮೂರು ನಾಲ್ಕು ಇವೆ. ಪೊಲ (ಹೊಲ), ಪೊಳಲು (ಹೊಳಲು) ಗಳಂತೆ ತೋಟ, ಪಟ್ಟಿ, ಗದ್ದೆ ಊರುಗಳೂ, ಇವೆಲ್ಲ ಕುಡಿಯ ಮುಂದಿನ ವಿಕಾಸದ ಎಡೆಗಳು. ಹೊಲ ಎಂಬುದರ ಮೂಲ ರೂಪವು ಪುಲ. ಪುಲ ಎಂದರೆ ಪುಲ್ ಹುಲ್ಲು ಬೆಳೆವ ಭೂಮಿ. ನೀರಿನ ಎಡೆಯ ಪ್ರದೇಶವೆಂದರ್ಥವಾಗುವುದು. ಪೊಳಲು ಎಂದರೂ ಹೀಗೆಯೆ, ಅದರಲ್ಲೂ ಔಚಿತ್ಯವುಂಟು. ‘ಪೊೞಲ್’ ಎಂದರೆ ತಮಿಳಿನಲ್ಲಿ ತೋಟ, ಬನವೆಂದರ್ಥವಿದೆ.

ಕೆರೆ, ಕಟ್ಟಿ, ಕುಂಟೆ, ಗುಂಟೆ, ಕೊಳ, ಹೊಳ, ಹಳ್ಳ, ಕೆರೆ, ತೊರೆ, ಝರಿ, ಬಾವಿ, ಹೊಂಡ, ಮೊದಲಾದವು. ಇವು ಒಕ್ಕಲತನಕ್ಕೂ ಇರುವುದಕ್ಕೂ ಅನುಕೂಲವಾದ ಜಲಾಶಯಗಳ ಗುಂಟ ಊರುಗಳು ಹೇಗೆ ಬೆಳೆದುವೆಂಬುದನ್ನು ತೋರಿಸುತ್ತವೆ. ಗುಡಿಗೆರೆ (ಕುಡಿಕೆರೆ) ಗುಡಿಗುಂಟೆ (ಕುಡಿಕುಂಟ),ಗುಡಿಸಾಗರಗಳು ಇದಕ್ಕೆ ನಿದರ್ಶನ. ಪಟ್ಟಿ ಎಂಬುದಕ್ಕೆ ತೋಟವೆಂಬರ್ಥವೂ ದೊರೆಕೊಂಡುದು ಈ ಕಾಲದಲ್ಲಿಯೇ ಪೊಳಲು ಎಂಬುದು ಈ ಮಾತನ್ನು ಪುಷ್ಟೀಕರಿಸುತ್ತದೆ.

ಪಟ್ಟಿ > ಪಾಡಿ – ಪಾಡ – ವಾಡ – ಬಾಡ ಇವೆಲ್ಲ ‘ಪುಡು’ ಧಾತುವಿನಿಂದ ಉತ್ಪನ್ನಗೊಂಡಂತಹ ಪದಗಳೇ. ಪಟ್ಟಿಯಲ್ಲಿದ್ದವ ಪಟ್ಟಲ > ಪಾಟೀಲ : ಗೌಡ > ಗೌಳ – ಗೋವಳ : ವಟ (ಮರ) > ವಡ ವಾಡಿಗಳು ಎಂದು ಶಂಬಾ ಅವರು ಅಭಿಪ್ರಾಯ ಪಡುತ್ತಾರೆ. ಈ ಮೂಲಕ – ಪಟ್ಟಿ: – ಪಾಡಿ, – ವಾಡ – ಹಟ್ಟಿ ಮೊದಲಾದ ಗ್ರಾಮನಾಮದ ರೂಪಗಳು ಜನಾಂಗಗಳ ವಾಸಸ್ಥಾನ ಸೂಚಕಗಳಾಗಿವೆ. – ಪಟ್ಟಿ ಮತ್ತು – ಹಟ್ಟಿ ಎಂಬುದು ಹಟ್ಟಿಕಾರ ಇಲ್ಲವೇ ದನಗಾಹಿ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ, ಶಂಬಾ. ಅಂದರೆ ಇವರು ಒಂದು ನಿರ್ದಿಷ್ಟ ಜನಾಂಗ ಹಟ್ಟಿ ಅಥವಾ ಪಾಡಿಯಲ್ಲಿ ವಾಸಿಸುತ್ತಿತ್ತು ಎಂದು ಖಚಿತಪಡಿಸುವುದಿಲ್ಲ. ಆದರೂ ದನಗಾಹಿಗಳೂ ಎನ್ನುವ ಗೋವಳಿಗರು ಅಥವಾ ಗೊಲ್ಲರು ಎಂಬುದು ಇದರಿಂದ ವ್ಯಕ್ತವಾದರೆ, ಹಟ್ಟಿಕಾರನೆಂದರೆ ಕುರುಬನೂ ಇರಬಹುದೆಂಬ ಅನುಮಾನ ಬರುತ್ತದೆ. ತನ್ನ ಮೂಲವೃತ್ತಿಯಾದ ಕುರಿ ಸಾಕಾಣಿಕೆಯಿಂದ ಬೆಟ್ಟ, ಗುಡ್ಡಗಳ ಅಂಚಿನಲ್ಲಿ ಹಟ್ಟಿಯನ್ನು ನಿರ್ಮಿಸಿಕೊಂಡು ನೆಲೆಸಿರಬೇಕು. ಗೊಲ್ಲರೂ ಈ ಬಬಗೆಯ ಹಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ. “ದನಗಳ ದೊಡ್ಡಿಯ ಪಕ್ಕದಲ್ಲಿ ಕಟ್ಟಿಕೊಂಡ ಹಟ್ಟಿಕಾರರ ನೆಲೆಗಳಿಗೆ ಹಟ್ಟಿ” ಎಂದು ಕರೆಯುತ್ತಾರೆ ಎಂಬ ಅಭಿಪ್ರಾಯವಿದೆ. ಈ ಹಟ್ಟಿಯ ಕುಲದೇವತೆ ವೀರದೇವರು, ಬೀರದೇವರು, ಅವನೇ ಹಟ್ಟಿನಾಡಿನ ಹಾಟಕೇಶ್ವರ. ಹಟ್ಟಿನಾಡಿನ ಹಟ್ಟಿಕಾರರೇ ಕನ್ನಡನಾಡಿನ ವೀರಕ್ಷತ್ರಿಯರು, ಶೈವ ವೀರರು ಎನ್ನುವ ಶಂಬಾ ಅವರು ರುದ್ರ, ಶಿವನ ಅನುಯಾಯಿಗಳಾದ ಒಂದು ಪಂಗಡ ಹೆಸರು ವೀರಶೈವ ಎಂಬುದಕ್ಕೆ ಕಾರಣಗಳನ್ನು ತಿಳಿಸುತ್ತಾರೆ. ಕರ್ನಾಟಕದ ಮೂಲನಿವಾಸಿಗಳೆಂದು ಭಾವಿಸಿರುವ ಕುರುಂಬರು ಕಾವೇರಿಯಿಂದ ಹಿಡಿದು ಗಂಗೆಯವರೆಗೂ, ನೀಲಗಿರಿಯಿಂದ, ರಾಜಸ್ಥಾನದವರೆಗೂ ವ್ಯಾಪಿಸಿದ್ದರು. ಈ ಮರವರು (ಜಾಡರು) ಮತ್ತು ಕುರುಂಬರೆಂದು ಪಂಗಡಗಳಲ್ಲಿ ಒಡೆದಿದ್ದ ಹಟ್ಟಿಕಾರ ದನಗಾರರು ಕಂದಮಿಳ ಜನಾಂಗದವರು. ಇವರು ಕಂನುಡಿ ಶಾಖೆಗೆ ಸೇರಿದವರೆಂದೂ, ಪಟ್ಟಿಗಾರರು, ಹಟಗಾರರೆಂದು, ನೇಕಾರರಿಗೆ ಹೆಸರಿದೆಯೆಂದು ಶಂಬಾ ಜನಾಂಗದ ಬಗ್ಗೆಯೂ ಹೇಳುತ್ತಾರೆ.

ಗ್ರಾಮ, ಊರು, ಪುರ ಎಂಬುವು ಅಷ್ಟು ಪುರಾತನವಲ್ಲವೆನ್ನುವ ಶಂಬಾ ಅವರು ಮಾನವನು ಪ್ರಾಥಮಿಕ ಸ್ಥಿತಿಯಲ್ಲಿ ಆಹಾರ ಸಂಚಯನಕ್ಕಾಗಿ ಅಲೆಮಾರಿಯಾಗಿದ್ದು ಅವನ ವಸತಿ ಸೂಚಕವಾಗಿದ್ದ ಹೆಸರೇ ಹಟ್ಟಿ ಎಂದು ವಾದಿಸುವರು. ಈ ಶಬ್ದವು ದನಗಾರಿಕೆಯ ಬಾಳಿನ ದ್ಯೋತಕವಾಗಿದೆಯೆಂಬುದರಲ್ಲಿ ಸಂದೇಹವಿಲ್ಲ. ಹಟ್ಟಿಗಳೇ ನಮ್ಮ ನಾಡಿನ ಆರಂಭ ಕಾಲದ ವಸತಿಗಳೆಂದು ಶಂಬಾ ಊಹಿಸುತ್ತಾರೆ. ಅದೇನೇ ಇದ್ದರೂ ಹಟ್ಟಿಯೆಂಬ ವಾರ್ಗಿಕವನ್ನೊಂದಿದ ಸ್ಥಳನಾಮಗಳು ಬಹುತೇಕ ಪ್ರಾಚೀನವಾಗಿದ್ದು, ಅಲ್ಲಿ ಕುರುಬರು, ಗೊಲ್ಲರು ಆರಂಭದಲ್ಲಿ ವಾಸಿಸುತ್ತಿದ್ದಿರಬೇಕು. ಕಾಲಕ್ರಮೇಣ ಅನೇಕ ಹಿಂದುಳಿದ ಸಮುದಾಯಗಳು ಈ ಹಟ್ಟಿಗಳನ್ನು ನಿರ್ಮಿಸಿಕೊಂಡಿರಬೇಕೆನ್ನಬಹುದು.

ಹೀಗೆ ಸ್ಥಳನಾಮಗಳ ಅಧ್ಯಯನದ ಮೂಲಕ ಅದರಲ್ಲಿಯೂ ವಾರ್ಗಿಕಗಳಿಂದ ಒಂದು ಭೌಗೋಳಿಕ ಪರಿಸರದ ಜನಾಂಗಿಕ ಸಾಂಸ್ಕೃತಿಕ ಅಧ್ಯಯನ ಮಾಡಲು ಸಾಧ್ಯವಿದೆ. ಡಾ. ಶಂಬಾ ಜೋಶಿಯವರು ಈ ಪ್ರಯತ್ನಕ್ಕೆ ಮೊದಲ ಅಧ್ಯಯನಕಾರರಾಗಿ ನಿಂತರು. ಶಂಬಾ ಅವರು ಕೇವಲ ವಾರ್ಗಿಕಗಳಿಂದಲೇ ಕರ್ನಾಟಕ ಸಂಸ್ಕೃತಿಯನ್ನು ಪುನಾರಚಿಸಲು ಹೊರಟದ್ದು ಸಾಮಾನ್ಯ ಸಂಗತಿಯಲ್ಲ, ವಿಂಧ್ಯ, ಗೋದಾವರಿ ನಾಡುಗಳಲ್ಲಿಯೂ ಉತ್ತರ ಭಾರತದಲ್ಲಿಯೂ ಕಂನಾಡಿನ ಸುಳಿವನ್ನು ಸ್ಥಳನಾಮಗಳ ಮೂಲಕ ಗುರುತಿಸುವ ಶಂಬಾ ಪ್ರತಿಯೊಂದಕ್ಕೂ ಭಾಷಿಕ, ಬೌಗೋಳಿಕ, ಜನಾಂಗಿಕ ಅಂತಃಪ್ರಮಾಣಗಳನ್ನು ಒದಗಿಸುತ್ತಾರೆ.

ಕೆಲವು ವಾರ್ಗಿಕಗಳ ಮೂಲಕ ಜನಾಂಗಿಕ ಅಂಶವನ್ನೂ, ಕನ್ನಡನಾಡಿನ ಮೂಲನಿವಾಸಿಗಳನ್ನು ಗುರುತಿಸುವಾಗ ಶಂಬಾ ಅವರು ಅನೇಕ ಗೊಂದಲಗಳನ್ನು ಸೃಷ್ಟಿಸುತ್ತಾರೆ. ಹಟ್ಟಿಯಲ್ಲಿ ವಾಸಿಸುವರನ್ನು ದನಗಾರರೆಂದೂ, ಗೌಳಿಗರು, ಗೌಡರೆಂದೂ, ನೇಕಾರರೆಂದೂ, ಕುರುಂಬರು, ಕಂದಮಿಳರೆಂದೂ ಹೇಳಿಬಿಡುತ್ತಾರೆ. ಇದರಲ್ಲಿ ಯಾರ ನೆಲೆ ಎಂಬ ಬಗೆಗೆ ಖಚಿತವಾಗಿ ಹೇಳುವುದಿಲ್ಲ. ಒಟ್ಟಾರೆ ದನಗಾರರು, ಗೌಳಿಗರು, ನೇಕಾರರು ಎಂಬ ವೃತ್ತಿಯನ್ನು ಸೂಚಿಸುವ ಜನಾಂಗದ ಬಗೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಆ ಮೂಲಕ ಸಮುದಾಯಗಳ ಅಧ್ಯಯನಕ್ಕೆ ಎಳೆಗಳನ್ನು ಸೂಚಿಸುತ್ತಾರೆ. ಇದರಂತೆ ನಾಡ ಗೌಡರಾಗಿ ರಾಷ್ಟ್ರೀಕರು, ರಡ್ಡೇರು, ರಟ್ಟರೆಂದು ಹೆಸರಾದ ಕಾಲದ ಇವರು ನೆನಹು ಕೊಡುವ ಹಲವು ಊರುಗಳು ನಮ್ಮ ನಾಡಿನಲ್ಲಿವೆ. ಲಟ್ಟಲೂರು (ಲಾತೂರು), ರಟ್ಟೆಹಳ್ಳಿ, ರಡ್ಡೇರಹಟ್ಟಿ, ರಟ್ಟಾಡಿ (ದಕ್ಷಿಣಕನ್ನಡ) ರಟ್ಟಿಪಾಡಿ, ಲಾಟವಾಡಿ, ಲಾಟಗಾವ ಮೊದಲಾದವು ಈ ಬಗೆಯವು.

ಸ್ಥಳನಾಮಗಳು, ಕಾವ್ಯ, ಶಾಸನಗಳಂತೆ ಒಂದು ಪ್ರದೇಶದ ಜನಾಂಗದ ಸಾಂಸ್ಕೃತಿಕ ಅಧ್ಯಯನಕ್ಕೆ ಪ್ರಮುಖ ಆಕರ ಸಾಮಗ್ರಿಗಳಾಗುತ್ತವೆಂದು ವಿದ್ವಾಂಸರು ಕಂಡುಕೊಂಡಿದ್ದಾರೆ. ಇವುಗಳ ಮೂಲಕ ಭಾಷಿಕ ಮತ್ತು ಸಾಮಾಜಿಕ ಸ್ತರಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇತ್ತೀಚೆಗೆ ಒಂದು ಶೈಕ್ಷಣಿಕ ಶಿಸ್ತಾಗಿ ಬೆಳೆಯುತ್ತಲಿದೆ. ಶಂಬಾ ಅವರು ಸ್ಥಳನಾಮ ಅಧ್ಯಯನಕ್ಕೆ ಭಾಷಾಶಾಸ್ತ್ರ, ಭೂಗೋಳ, ಜಾನಪದ, ಇತಿಹಾಸ, ಸಮಾಜಶಾಸ್ತ್ರ ಇತ್ಯಾದಿಗಳ ಸಹಾಯ ಪಡೆದು ಕರ್ನಾಟಕ ಸಂಸ್ಕೃತಿಯ ಪುನಾರಚನೆಗೆ ಪ್ರಯತ್ನಿಸಿದ್ದಾರೆ. ಸ್ಥಳನಾಮ ಅಧ್ಯಯನಕ್ಕೆ ಭಾಷೆ – ಸಮಾಜ – ಸಂಸ್ಕೃತಿ ಹಿನ್ನೆಲೆಯಲ್ಲಿ ವಿವೇಚಿಸಿ ಆ ಕ್ಷೇತ್ರಕ್ಕೆ ಹೊಸ ಮುಖವನ್ನು ನೀಡಿದ ಕೀರ್ತಿ ಶಂಬಾ ಜೋಶಿ ಅವರಿಗೆ ಸಲ್ಲುತ್ತದೆ. ಅವರ ‘ಎಡೆಗಳು ಹೇಳುವ ಕಂನಾಡ ಕತೆ’ ಈ ಶಾಸ್ತ್ರದ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಸ್ಥಳನಾಮಗಳ ಬಗ್ಗೆ ಅಧ್ಯಯನ ಮಾಡುವವರ ಆ ಕೃತಿಯಿಂದಲೇ ಸ್ಪೂರ್ತಿ, ಪ್ರೇರಣೆ ಪಡೆಯಬೇಕಾಗಿದೆ ಎಂಬುದು ಬಹುಮಟ್ಟಿಗೆ ನಿರ್ವಿವಾದವಾಗಿದೆ.