I

ಸ್ಥಳನಾಮಗಳ ಅಧ್ಯಯನದ ಮಹತ್ವ ಏನೆಂಬುದು ನಮ್ಮಲ್ಲಿ ಹೆಚ್ಚಿನವರೆಗೆ ತಿಳಿದಿಲ್ಲ. ಅದಕ್ಕೆ ಕಾರಣವಾದರೋ, ಒಂದನೆಯದಾಗಿ, ನಮ್ಮಲ್ಲಿ ಇಂಥ ಪ್ರಯತ್ನಗಳು ಹೊಸತಾದವು, ಎಲ್ಲೋ ಅಲ್ಲೊಂದು ಇಲ್ಲೊಂದು ಎಂಬಂತೆ ಸಂಶೋಧನೆಗಳು ನಡೆದಿವೆ. ಎರಡನೆಯದಾಗಿ, ನಮ್ಮ ನಿತ್ಯಜೀವದ ಜಂಜಡಗಳಲ್ಲಿ ಸ್ಥಳನಾಮದಂಥ ‘ಸಾಮಾನ್ಯ’ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಲು ನಾವು ತಯಾರಿಲ್ಲ, ಅಲ್ಲದೆ. ನಮಗೆ ಅಷ್ಟು ಸಮಯಾವಕಾಶವೂ ಇರುವುದಿಲ್ಲ. ಆದ್ದರಿಂದ, ಅತ್ಯಂತ ಫಲದಾಯಕವಾದ ಒಂದು ಕುತೂಹಲಕರ ಕ್ಷೇತ್ರವಾಗಿರುವ ಸ್ಥಳನಾಮವು ನಮ್ಮವರ ನಿರಂತರ ಹಾಗೂ ಉದ್ದೇಶಿತ ಅವಜ್ಞೆ ಉಪೇಕ್ಷೆಗಳಿಗೆ ಪಾತ್ರವಾಗಿದೆ ಎಂಬುದನ್ನು ಒಪ್ಪದೆ ವಿಧಿಯಿಲ್ಲ.

ಸ್ಥಳನಾಮಾಧ್ಯಯನವು ಮಬ್ಬುಕವಿದ ಹಲವಾರು ಕ್ಷೇತ್ರಗಳಿಗೆ ಹೊಸ ಬೆಳಕಿನ ಪ್ರವಾಹವನ್ನು ಹರಿಸಬಲ್ಲದು; ನಮ್ಮ ಇತಿಹಾಸದ ‘ಕಪ್ಪುಹಾದಿ’ ಯನ್ನು ಬೆಳಗಿಸಬಲ್ಲದು. ಭೌಗೋಳಿಕವಾಗಿ, ಸಮಾಜಶಾಸ್ತ್ರೀಯವಾಗಿ, ಹೀಗೆ ನಾಲ್ಕಾರು ಕ್ಷೇತ್ರಗಳಿಗೆ ಕೆಲವೊಮ್ಮೆ ಮೂಲಸಾಮಗ್ರಿಯನ್ನೂ, ಇನ್ನು ಕೆಲವೊಮ್ಮೆ ಪೂರಕ ಸಾಮಗ್ರಿಯನ್ನೂ ಒದಗಿಸಬಲ್ಲದೆಂಬುದರಿಂದ, ಸ್ಥಳನಾಮಾಧ್ಯಯನವು ಅನಿವಾರ್ಯವೂ ಕ್ಷಿಪ್ರವೂ ಆಗಿ ನಡೆಯಬೇಕಾಗಿದೆ. ಸ್ಥಳನಾಮವು ಮೂಲತಃ ಒಂದು ಭೌಗೋಳಿಕ ಅಂಶ ಅಥವಾ ಘಟಕ ಎನ್ನಬಹುದು. ಸ್ಥಳನಾಮಗಳು ಪ್ರಾರಂಭದಲ್ಲಿ ಪ್ರಕೃತಿಯ ವರ್ಣನಾತ್ಮಕ ನಾಮವಿಶೇಷಣಗಳಾಗಿದ್ದವು. ಅಲ್ಲದೆ, ಒಂದು ಕಾಲದಲ್ಲಿ ಮಾನವ ಹಾಗೂ ಪ್ರಕೃತಿ ಈ ಎರಡು ಭಿನ್ನ ಶಕ್ತಿಗಳ ನಡುವಣ ಸಂಬಂಧ, ಪರಸ್ಪರ ಹೋರಾಟ ಮುಂತಾದುವನ್ನು ಸೊಗಸಾಗಿ ನಿರೂಪಿಸುತ್ತವೆ. ಕೆಲವೊಮ್ಮೆ ಒಂದು ಪ್ರಕಾರದ ಅಥವಾ ವರ್ಗದ ಹೆಸರುಗಳು ಒಂದೇ ಕಡೆ ಅಥವಾ ಒತ್ತೊತ್ತಾಗಿ ತಾಗಿಕೊಂಡಿರುವುದು ಸಮಾನ ಭೂ ಸನ್ನಿವೇಶವನ್ನು ಸೂಚಿಸುತ್ತದೆ. ಹೀಗೆ ಸ್ಥಳನಾಮಗಳು ಅತ್ಯಂತ ಸಂಪ್ರದಾಯ, ವೈಶಿಷ್ಟ್ಯಗಳನ್ನು ಭಾಷಾಲಕ್ಷಣಗಳನ್ನು ಕಾಯ್ದಿರಿಸಿಕೊಳ್ಳಲು ಸಹಾಯಕವಾಗಿವೆ.

ಸಮಾಜಶಾಸ್ತ್ರೀಯವಾಗಿ ನೋಡಿದಾಗಲೂ ಸ್ಥಳನಾಮವು ಒಂದು ಉಪಯುಕ್ತ ಅಧ್ಯಯನವೆನಿಸುತ್ತದೆ. ಮಾನವಶಾಸ್ತ್ರದ ಹಲವಾರು ಸಿದ್ದಾಂತಗಳು ಸ್ಥಳನಾಮಗಳ ಬೆಳವಣಿಗೆ ಅಥವಾ ಚರಿತ್ರೆಯಿಂದ ದೃಢೀಕರಿಸಲ್ಪಟ್ಟಿವೆ. ಉದಾಹರಣೆಗೆ, ಮಾನವನು ಮೂಲತಃ ಅಲೆಮಾರಿಯಾಗಿದ್ದು, ಕ್ರಮೇಣ ತಾತ್ಪೂರ್ತಿಕ ನೆಲೆಯನ್ನು ಕಂಡುಕೊಂಡದ್ದು, ನಂತರ ವ್ಯವಸಾಯದ ಕಲೆಯನ್ನು ಕಲಿತುಕೊಂಡು, ಪ್ರಕೃತಿಯನ್ನು ತನ್ನ ಉದ್ದೇಶಕ್ಕೆ, ಸ್ವಾರ್ಥಕ್ಕೆ ತಕ್ಕಂತೆ ಬಳಸಿಕೊಂಡದ್ದು, ಜೀವನಾವಶ್ಯಕ ವಸ್ತುಗಳ ಪೂರೈಕೆಯಾದ ಮೇಲೆ, ತನ್ನ ವಿರಾಮಕಾಲದಲ್ಲಿ ದೇವರು, ಧರ್ಮ ಮಾನವ ಸಂಬಂಧ ಮುಂತಾದ ಅಮೂರ್ತ ಹಾಗೂ ತಾತ್ವಿಕ ವಿಷಯಗಳ ಮೇಲೆ ವಿಚಾರ ಮಾಡಹತ್ತಿದ್ದು ; ಈಚೆಗೆ ಆ ಮೂಲಕ ಸಂಸ್ಕೃತಿ, ನಾಗರಿಕತೆ, ವಿಜ್ಞಾನದ ಬೆಳವಣಿಗೆಗೆ ಹಾದಿಮಾಡಿಕೊಟ್ಟಿದ್ದು ಇವೇ ಮುಂತಾದ ಕೆಲವು ಘಟನೆಗಳನ್ನು ನಾವು ಸ್ಥಳನಾಮ ವರ್ಗೀಕರಣದಲ್ಲಿ ಗುರುತಿಸಬಲ್ಲೆವು. ಈ ದೃಷ್ಟಿಯಿಂದ ಯಾವುದು ಪ್ರಾಚೀನ, ಯಾವುದು ಅರ್ವಾಚೀನ ಎಂಬುದನ್ನು ನಿರ್ಣಯಿಸಬಲ್ಲೆವು. ಹಟ್ಟಿ, ಪಾಡಿ, ವಾಡ, ವಾಳ, ಇ. ಪಳ್ಳಿ (ಹಳ್ಳಿ), ಊರು, ಗ್ರಾಮ, ನಗರ ಮುಂತಾದ ವರ್ಗಗಳು ಈ ಬಗೆಯವು. ಇನ್ನೂ, ಸಾಂಸ್ಕೃತಿಕ ವಿಕಾಸದ ಯಾವುದೋ ಒಂದು ಘಟ್ಟದಲ್ಲಿ ತಲೆಯೆತ್ತಿದ ಒಬ್ಬ ಗಣ್ಯವ್ಯಕ್ತಿಯ, ಕುಲದ, ಅಧಿಕಾರಿಗಳ ಹೆಸರನ್ನು ಶಾಶ್ವತಗೊಳಿಸಿದ ಸ್ಥಳನಾಮಗಳು ಕೂಡ ಸಮಾಜಶಾಸ್ತ್ರಕ್ಕೆ ಒಂದು ಕೊಡುಗೆಯಾಗಬಲ್ಲವು. ಒಂದೊಂದು ಜಾತಿ, ವರ್ಗ ನೆಲಸಿದ ಸ್ಥಳಕ್ಕೆ, ಕೇರಿಗೆ ಸ್ಥೂಲವಾಗಿ ಒಂದು ಹೆಸರು ರೂಢಿಯಲ್ಲಿದ್ದುದರಿಂದ ಕೆಲವೊಮ್ಮೆ ಈ ವರ್ಗಗಳ ನಡುವಣ ಸಂಬಂಧ, ವಲಸೆಯ ಮಾರ್ಗ ಮುಂತಾದವನ್ನು ಊಹಿಸಲು ಸಾಧ್ಯಮಾಡಿಕೊಟ್ಟಿವೆ, ಊರಹೆಸರುಗಳು. ಪರ್ಕಳ – ಜಾರ್ಕಳ > ಕಾರ್ಕಳ ಮುಂತಾದ ಸಮಾನ ಉತ್ತರ ಭಾಗದ ಊರುಗಳು ಒಂದೇ ಸಾಲಿನಲ್ಲಿರುವುದು ಪ್ರಾಯಃ ಅವು ಒಂದು ವಲಸೆಯ ಹಾದಿಯಲ್ಲಿ ಇದ್ದುದನ್ನು ಸೂಚಿಸುತ್ತವೆ ಎನ್ನಬಹುದೆನೋ. ಇನ್ನೂ ಕೆಲವು ಸ್ಥಳಗಳ ಹೆಸರು ದೇವರ ಅಥವಾ ಧರ್ಮದ ಹೆಸರಿನ ಹಿನ್ನೆಲೆಯಿಂದ ಹುಟ್ಟಿದುವು.

‘ಮಕ್ಕಳ ಹೆಸರುಗಳು ತಂದೆತಾಯಿಗಳ ಮನೋದೃಷ್ಟಿಯನ್ನು ಬಿಂಬಿಸುತ್ತವೆ’ ಎಂಬಂತೆ, ಸ್ಥಳನಾಮಗಳು ನಾಮದಾತರ ಅರ್ಥಾತ್ ಸ್ಥಳದ ಮೂಲನಿವಾಸಿಗಳ ಜೀವನದ ಯಥಾರ್ಥ ಚಿತ್ರಣ ನೀಡಬಲ್ಲವು. ಏಕೆಂದರೆ, ನಿಜವಾದ ಅರ್ಥದಲ್ಲಿ ಸ್ಥಳನಾಮಗಳಲ್ಲಿ ಕುಚೋದ್ಯವಿಲ್ಲ; ಕಾವ್ಯಾಲಂಕಾರಗಳಿಗೆ, ಕಲ್ಪನೆಗಳಿಗೆ ಎಡೆಯಿಲ್ಲ. ಒಂದು ಸಮಾಜದ ಕಷ್ಟ ಸುಖಗಳ, ಅವರ ಜೀವನದ ಏಳುಬೀಳುಗಳು, ಅವರ ಜೀವನಶ್ರದ್ಧೆ, ಪ್ರಕೃತಿಯೊಡನೆ ಹೋರಾಟ ಮುಂತಾದವನ್ನು ನುಡಿಯುತ್ತವೆ. ಕೆಲವೊಮ್ಮೆ ಇಂಥ ಸ್ಥಳನಾಮಗಳು ರಾಜವಂಶಗಳು, ಅಧಿಕಾರಿಗಳು, ಇವರೊಳಗಣ ಹೋರಾಟ, ಜಯಾಪಜಯಗಳು, ಸ್ಮಾರಕಗಳು ಮುಂತಾದವನ್ನು ಶಾಸನಗಳಷ್ಟೇ ಸಮರ್ಥವಾಗಿ ನುಡಿಯಬಲ್ಲ ‘ಜೀವಂತ ಪಳೆಯುಳಿಕೆ’ ಗಳಾಗಿವೆ. ‘ಚರಿತ್ರೆ ನಿರುತ್ತರವಾಗುವಲ್ಲಿ ಸ್ಥಳನಾಮ ಉಸುರುತ್ತವೆ’ ಎನ್ನುವುದೂ ಇದಕ್ಕೇನೆ. ಮಾನವನ ಆದಿಮ ಜನಾಂಗವು ಮಧ್ಯ ಏಷ್ಯಾದ ಪ್ರದೇಶದಲ್ಲಿದ್ದು ಅಲ್ಲಿಂದ ದೂರದ ಪ್ರದೇಶಗಳಿಗೆ ದಕ್ಷಿಣಭಾರತಕ್ಕೆ ಕೂಡಾ ವಲಸೆ ಬಂದಿರಬೇಕೆಂದು ವಿದ್ವಾಂಸರ ಅಭಿಪ್ರಾಯವಾಗಿತ್ತು. ದ್ರಾವಿಡ ಬುಡಕಟ್ಟಿನ ಮೂಲವನ್ನು ಪತ್ತೆಹಚ್ಚುವಲ್ಲಿ ಭಾಷೆಯ ಇತರ ಪರಿಕರಗಳೊಂದಿಗೆ ಸ್ಥಳನಾಮವೂ ಪ್ರಧಾನ ಸಾಧನವಾಗಿ, ಆಧಾರವಾಗಿ ಪರಿಣಮಿಸಿದೆ. ದ್ರಾವಿಡಭಾಷೆಗಳಿಗೂ ದಕ್ಷಿಣ ಐರೋಪ್ಯ ಭಾಷೆಗಳಿಗೂ (ಮುಖ್ಯವಾಗಿ ಬಾಸ್ಕ್, ಸೆಮಿಟಿಕ್, ಪರ್ಷಿಯನ್, ಇತ್ಯಾದಿ), ವ್ಯಾಕರಣ, ಸಂಬಂಧವಾಚಕ, ವ್ಯಾವಹಾರಿಕಪದಗಳು ಮತ್ತಿತರ ಭಾಷಾವೈಜ್ಞಾನಿಕ ಸೌಮ್ಯ ಸಾಮಿಪ್ಯಗಳಿರುವುದರೊಂದಿಗೆ, ಸ್ಥಳನಾಮರೂಪಗಳಲ್ಲೂ ಸಮಾನತೆಯಿದೆ. ಹಿಂದೆಯೇ ಹೇಳಿದಂತೆ, ಒಂದು ಸಲ ಜನರ ಅಂಗೀಕಾರ ಮುದ್ರೆ ಪಡೆದ ಸ್ಥಳನಾಮ ಅರ್ಥಹೀನವಾದ ಮೇಲೂ ‘ಸ್ಥಿರಪಟ್ಟಿಕೆ’ಯಾಗಿ ಉಳಿದುಬಿಡುವ ಗುಣವುಳ್ಳದ್ದಾದರಿಂದ, ಈ ಆಧಾರವನ್ನು ಸಾಕಷ್ಟು ಪ್ರಾಚೀನತೆಯುಳ್ಳ ಸಾಕ್ಷ್ಯವನ್ನಾಗಿ ತೆಗೆದುಕೊಳ್ಳಬಹುದು. ಚಾರಿತ್ರಿಕ ಅವಶೇಷಗಳು, ದೇಹರಚನೆ ಮುಂತಾದವುಗಳ ಪರಿಶೀಲನೆಯಿಂದ ದ್ರಾವೀಡರ ಮೂಲಜನಾಂಗವು ದಕ್ಷಿಣ ಐರೋಪ್ಯ ಅಥವಾ ಮೆಡಿಟರೇನಿಯನ್ ಪ್ರದೇಶದಲ್ಲೇ ಮೂಲತಃ ನೆಲಸಿದ್ದು (ಸು. ಕ್ರಿ. ಪೂ.) ಐದಾರು ಸಹಸ್ರವರ್ಷಗಳಷ್ಟು ಹಿಂದೆ), ಕಾಲಾಂತರದಲ್ಲಿ, ಪರ್ಸಿಯ, ಬೆಲೂಚಿಸ್ತಾನ, ಅಪಘಾನಿಸ್ತಾನ ಮಾರ್ಗವಾಗಿ ಸಿಂಧೂ ಪ್ರದೇಶ ಮತ್ತು ಉತ್ತರಭಾರತಕ್ಕೆ, ಆರ್ಯರು ಭಾರತಕ್ಕೆ ಬಂದಮೇಲೆ ದಕ್ಷಿಣ ಭಾರತಕ್ಕೆ ವಲಸೆ ಬಂದು ನೆಲೆಗೊಂಡಿರಬೇಕೆಂಬ ತೀರ‍್ಮಾನಕ್ಕೆ ಬರಲಾಗಿದೆ. ಪರ್ಸಿಯ, ಇರಾನ್, ಸ್ಪೆಯಿನಂ, ಫ್ರಾನ್ಸ್ ನಡುವಣ ಪ್ರದೇಶ, ಮೆಸಪೊಟೋಮಿಯ ಮುಂತಾದ ಕಡೆ ಅಸಂಖ್ಯ ದ್ರಾವಿಡ ಸ್ಥಳನಾಮಗಳು ಕಂಡುಬರುತ್ತವೆ.

ಭಾಷಾಶಾಸ್ತ್ರದ ದೃಷ್ಟಿಯಿಂದ ಸ್ಥಳನಾಮಶೋಧನೆಗೆ ಅಗ್ರಮಾನ್ಯತೆ ಸಲ್ಲಬೇಕು. ಕೆಲವೊಮ್ಮೆ ಯಾವ ಗ್ರಂಥಗಳಲ್ಲೂ, ಕೋಶಗಳಲ್ಲೂ, ಆಡುಮಾತಿನಲ್ಲೂ ಉಪಲಬ್ಧವಿರದ ಪ್ರಾಚೀನ ಪದಗಳೂ ಧ್ವನಿಗಳೂ ‘ಸ್ಥಳನಾಮಕೋಶ’ದಲ್ಲಿ ಭದ್ರವಾಗಿ ಅಳವಟ್ಟಿವೆ. ಅವುಗಳ ಅರ್ಥವನ್ನು ಆಯಾಯಾ ಸ್ಥಳದ ಭೂಸ್ಥಿತಿಯ ಪರಿಶೀಲನೆಯಿಂದಲೂ, ಹತ್ತಾರು ದ್ರಾವಿಡ ಭಾಷಾಕೋಶಗಳಲ್ಲಿ ಕಾಣಸಿಗುವ ‘ಸಾಧಿತ’ ಪದಗಳ ತುಲನಾತ್ಮಕ ಅಧ್ಯಯನದಿಂದಲೂ, ಶೋಧಿಸಿ ‘ಸಂಪಾದಿಸಿ’ ದಲ್ಲಿ ಅದೊಂದು ಭಾಷಾವಿಜ್ಞಾನಕ್ಕೆ, ಕೋಶಕ್ಕೆ ಅಮೂಲ್ಯ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ. ಅಂತರ್ಭಾಷಾ ಸಂಬಂಧವನ್ನು ಸೂಚಿಸುವ, ಭೌಗೋಳಿಕವಾಗಿ ಸಿಗುವ ತೌಲನಿಕವಾದ ಸಮರೂಪಗಳನ್ನು ಕಾಲಾನುಕ್ರಮವಾಗಿ ಉಲ್ಲೇಖಿಸುವ,ಹಾಗೂ ಅವುಗಳ ನಿರುಕ್ತಿಯನ್ನು ಇರುವೆಲ್ಲಾ ಆಧಾರಗಳ ಬೆಳಕಿನಲ್ಲಿ ಗುರುತಿಸಿ ವ್ಯಾಖ್ಯಾನಿಸುವ ‘ಸ್ಥಳನಾಮಕೋಶ’ ನಮಗಿಂದು ಅಗತ್ಯವಾಗಿ ಆಗಬೇಕಾದ ಕೆಲಸ. ಇಂಥ ಕೆಲಸ ಪ್ರಾಸಂಗಿಕವಾಗಿ ಒಂದು ಸ್ಥಳೀಯ ನಾಮರೂಪದ ಮೇಲೆ ಅನ್ಯಭಾಷಾ ಪ್ರಭಾವ, ಧ್ವನಿ ವ್ಯತ್ಯಾಸ ಮುಂತಾದವುಗಳನ್ನು ಗುರುತಿಸುವುದೂ ಅವಶ್ಯಕ.

ಹೀಗೆ, ಒಂದು ಸ್ಥಳದ ಆತ್ಮವೃತ್ತಾಂತವಾಗಿರುವ, ಅಥವಾ ಅದರ ಬಾಲ್ಯದ ಚರಿತ್ರೆಯನ್ನು ತನ್ನಲ್ಲಿ ಅಚ್ಚೊತ್ತಿಕೊಂಡಿರುವ ಸ್ಥಳನಾಮ ವಿಶೇಷಣಗಳು ಶಾಸನ ಮತ್ತಿತರ ಪ್ರಾಚ್ಯವಸ್ತು ಅಥವಾ ಅವಶೇಷಗಳಂತೆಯೇ ರಕ್ಷಣೆಗೆ ಯೋಗ್ಯವಾದವು. ಉದ್ದೇಶಪೂರ್ವಕವಾಗಿ, ಕೇವಲ ಹೊಸತರ, ಶಿಷ್ಟಾಚಾರದ ಬಯಕೆಯಿಂದ ಊರ ಹೆಸರನ್ನು ಬದಲಿಸುವುದು ಒಳಿತಲ್ಲ. ೧೯೫೩ರಲ್ಲಿ ನಮ್ಮ ದೇಶದಲ್ಲಿ ಒಂದು ರಾಜ್ಯ ಸರ್ಕಾರವು ಕಾರಣವಿಲ್ಲದೆ ಊರ ಹೆಸರನ್ನು ಬದಲಿಸುವುದನ್ನು ನಿಷೇಧಿಸಿ ಕಾನೂನು ಜಾರಿಗೆ ತಂದರೂ, ಇಂದಿಗೂ ಎಲ್ಲ ಕಡೆ ಹೆಸರು ಬದಲಿಸುವುದು ಫ್ಯಾಶನ್ನಾಗಿ ಬಿಟ್ಟಿದೆ. ದೇಶೀ ರೂಪದ ಸ್ಥಾನದಲ್ಲಿ ಸಂಸ್ಕೃತ ರೂಪ ಅಥವಾ ಯಾವುದಾದರೊಂದು ಪೌರಾಣಿಕ ಪ್ರಸಂಗಕ್ಕೆ ಗಂಟುಹಾಕುವ ಸ್ಥಳಪುರಾಣ ಸೃಷ್ಟಿಸಿ ಅದಕ್ಕನುಗುಣವಾಗಿ ಊರ ಹೆಸರನ್ನು ಪರಿಷ್ಕರಿಸುವ ಪಾಠ ಇನ್ನೂ ನಮ್ಮಲ್ಲಿದೆ. ಊರಿನ ನೈಜ ಚಾರಿತ್ರಿಕ ಸ್ಥಾನವನ್ನು ಮರೆಸಿಬಿಡುವ ರಂಜನೀಯವಾದ ಪೌರಾಣಿಕ ಕಥನ ಸೃಷ್ಟಿಸುವುದು ಎಷ್ಟು ದೊಡ್ಡ ಅಪರಾಧವೋ, ಅದಕ್ಕಿಂತಲೂ ದೊಡ್ಡ ಅಪರಾಧ ಇದ್ದ ರೂಪವನ್ನು ಅಳಸಿಹಾಕಿ ಹೊಸರೂಪವನ್ನು ಬಳಸುವುದು. ಚಾರಿತ್ರಿಕ ಸ್ಮಾರಕಗಳ ಸಂರಕ್ಷಣೆಗೆ ಸರಕಾರ ಹೇಗೆ ಪರಿಶ್ರಮ ವಹಿಸುತ್ತದೆಯೋ, ಹಾಗೆಯೇ ಇದೂ ಒಂದು ಅಂಥ ಕ್ಷೇತ್ರವೆಂದು ಮನದಟ್ಟು ಮಾಡಿಕೊಂಡು, ಇದರ ಸಂರಕ್ಷಣೆಗಾಗಿ ಎಲ್ಲ ಪ್ರಯತ್ನ ಮಾಡುವುದಗತ್ಯ. ಅಲ್ಲದೆ, ಚರಿತ್ರೆ ಭಾಷೆಗಳ ಅನುಮಾನಿಗಳು ಪೋಷಕರು, ವಿದ್ವಾಂಸರು, ಸ್ಥಳನಾಮಾಧ್ಯಯನವು ಎಷ್ಟೊಂದು ವ್ಯಾಪಕ ಕ್ಷೇತ್ರ ಎಂಥ ಕನ್ನೆನೆಲ ಎಂಬುದನ್ನು ಮನಗಂಡು, ಅದರ ಪುರೋಭಿವೃದ್ಧಿಗಾಗಿ ಶ್ರಮಿಸಬೇಕಾದುದು ಸಕಾಲಿಕಧರ್ಮವಾಗಿದೆ. ಈ ನಿಟ್ಟಿನಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿನಂತೆ, ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಸ್ಥಳನಾಮಾಧ್ಯಯನದ ಪೂರ್ಣಾವಧಿ ಅಥವಾ ಅಥವಾ ಹವ್ಯಾಸೀ ಸಂಘ ಸಂಸ್ಥೆಗಳು, ಪತ್ರಿಕೆಗಳು, ನಿಯತಕಾಲಿಕಗಳು, ವಿಚಾರಗೋಷ್ಠಿಗಳು ಮುಂತಾದ ಅಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು. ಒಮ್ಮೆ ಒಂದು ಸ್ಥಳದ ಹೆಸರಿನ ಪ್ರಾಚೀನ ಯಥಾರ್ಥರೂಪ ಹಾಗೂ ನಿಷ್ಪತ್ತಿ ತಿಳಿದ ಮೇಲೆ, ಅದೇ ರುಪವನ್ನು ಮತ್ತೆ ವ್ಯವಹಾರದಲ್ಲಿ ತರುವ ವ್ಯಾಪಕವಾದ ಅಧ್ಯಯನ ನಮ್ಮಲ್ಲಿನ್ನೂ ಬರಬೇಕಾಗಿದೆ.

II

ಒಂದು ನಾಡಿನಲ್ಲಿ ಎಷ್ಟು ಊರುಗಳಿವೆಯೋ ಅಷ್ಟು ಹೆಸರುಗಳಿವೆಯಷ್ಟೆ. ಎಷ್ಟೋ ಹೆಸರು ಪುನರಾವರ್ತನೆಯಾಗುವುದೂ ಉಂಟು. ಚೆನ್ನಪಟ್ಟಣ, ಹೊಸಹಳ್ಳಿ, ಅಂಕನಹಳ್ಳಿ, ಹೊಸುರು ಈ ಹೆಸರು ಪಡೆದ ಊರುಗಳು ಹಲವಾರಿವೆ. ಆದರೂ ಈ ಹೆಸರುಗಳ ವೈವಿಧ್ಯ ದಂಗುಬಡಿಸುವಂಥದು. ಆದರೂ ಅವುಗಳ ಉಗಮವಿಕಾಸಗಳ ಹಿನ್ನೆಲೆಯಲ್ಲಿ ಮಾನವನ ಮನೋಧರ್ಮದ ಏಕಸೂತ್ರತೆ ಹರಿಯುತ್ತಿರುವುದರಿಂದ, ಕೆಲವೇ ಕೆಲವು ತತ್ವಗಳ ಪರಿಧಿಯೊಳಗೆ ಅವನ್ನು ಸೀಮಿತಗೊಳಿಸುವುದಾಗಲಿ, ಅವುಗಳ ಬೆಳಕಿನಲ್ಲಿ ಅವನ್ನು ವರ್ಗೀಕರಣ ಮಾಡುವುದಾಗಲಿ ಕಷ್ಟವಾಗಲಾರದು. ನಾಮಗಳ ಪ್ರಥಮ ಘಟಕಗಳು ಹಲವು. ಅಂತ್ಯಘಟಕಗಳು ಅಥವಾ ಸಾಮಾನ್ಯಾಂಶಗಳು ಕೆಲವು. ಅಂದಮೇಲೆ ಅಂತ್ಯ ಘಟಕಗಳ ವರ್ಗೀಕರಣ ಸುಲಭ ಹಾಗೂ ಸರಳ. ಇವನ್ನು ಶಂಬಾ ಜೋಶಿಯವರು ಎರಡು ವರ್ಗಗಳಾಗಿ ವಿಂಗಡಿಸಿದ್ದಾರೆ. ವಸತಿ ಸ್ವರೂಪ ವ್ಯವಸ್ಥೆಗಳನ್ನು ಸೂಚಿಸುವ ಹೆಸರುಗಳನ್ನು ವಸತಿನಾಮಗಳೆಂದೂ, ಆ ವರ್ಗಗಳಿಗೆ ನಾಮಕರಣ ಮಾಡಬಹುದಾಗಿದೆ.ಪಟ್ಟಿ, ಪಾಡು, ನೆಲೆ, ಖೇಡ, ಊರು, ಪೇಟೆ, ಪಟ್ಟಣ, ಮುಂತಾದವನ್ನು ಮೊದಲನೆಯ ವರ್ಗದಲ್ಲಿಯೂ ಮರಡಿ, ಮಾಳ, ಗುಡ್ಡ, ಗಿರಿ, ಬಂಡಿ, ಕೊಂಬು, ಕಳ, ಗುಂದ, ಕೊಪ್ಪ, ಮಡು, ಹಳ್ಳ ಮೊದಲಾದುವನ್ನು ಎರಡನೆಯ ವರ್ಗದಲ್ಲಿಯೂ ಅವರು ಸೇರಿಸುತ್ತಾರೆ. ಜನ ಒಲೆಹೂಡಿ, ನೆಲೆ ನಿಂತ ನಂತರ ಮೊದಲನೆಯ ವರ್ಗದ ಹೆಸರು ರೂಢಿಗೆ ಬಂದರೆ, ಜನ ಊರು ಕಟ್ಟುವುದಕ್ಕೆ ಮುಂಚೆಯೇ ಎರಡನೆಯ ವರ್ಗದ ಹೆಸರುಗಳು ಚಲನೆಯಲ್ಲಿದ್ದುವೆಂದು ಹೇಳಬಹುದಾಗಿದೆ.

ಎಸ್. ಕೆ. ಚಟರ್ಜಿಯವರ ಹೆಸರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡದು. ಅವರ ಗ್ರಾಮನಾಮಗಳನ್ನು ಐದು ಗುಂಪುಗಳಾಗಿ ವಿಂಗಡಿಸಿದ್ದಾರೆ. ೧. ಬುಡಕಟ್ಟು ಅಥವಾ ಜಾತಿಯ ಹೆಸರುಗಳಿಂದ, ೨. ನೈಸರ್ಗಿಕ ಲಕ್ಷಣಗಳ ಹೆಸರುಗಳಿಂದ ೩. ಧಾರ್ಮಿಕ ಸಂಗತಿಗಳಿಂದ, ೪. ವ್ಯಕ್ತಿ ಅಥವಾ ಘಟನೆಗಳ ನಾಮಗಳಿಂದ, ೫. ಹಳೆಯ ಹೆಸರುಗಳ ಪುನರಾವರ್ತನೆಯಿಂದ ಗ್ರಾಮನಾಮಗಳು ಸಿದ್ದವಾಗುತ್ತವೆಂದು ಅವರು ವಿಶದಪಡಿಸಿದ್ದಾರೆ.

ಚಟರ್ಜಿಯವರಂತೆಯೇ ಪುರಾತತ್ವ ಶಾಸ್ತ್ರದಲ್ಲಿ ಖ್ಯಾತನಾಮವಾಗಿರುವ ಸ್ಥಳನಾಮಗಳ ಬಗ್ಗೆ ವ್ಯಾಪಕವಾದ ಸಂಶೋಧನೆ ನಡೆಸಿರುವ ಎಚ್. ಡಿ. ಸಂಕಾಲಿಯಾ ಅವರು ಏಳು ವರ್ಗಗಳನ್ನು ರೂಪಿಸಿದ್ದಾರೆ. ಗ್ರಾಮನಾಮಗಳು ಸಾಧಾರಣವಾಗಿ ೧. ವ್ಯಕ್ತಿಗಳಿಂದ, ೨. ಘಟನೆಗಳಿಂದ, ೩. ಸಂಪ್ರದಾಯ ಮತ್ತು ಮೌಢ್ಯಗಳಿಂದ, ಭೌಗೋಳಿಕ ಲಕ್ಷಣಗಳಿಂದ, ೫. ಹೂ ಹಣ್ಣು ಮರ ಬೆಳೆಗಳಿಂದ, ೬. ಪ್ರಾಣಿ ಪಕ್ಷಿಗಳಿಂದ, ೭. ಹಳೆಯ ಹೆಸರುಗಳಿಂದ ಬಂದುವೆಂದು ಹೇಳುತ್ತಾರೆ.

ಆಂಧ್ರ ಭಾಷಾ ವಿದ್ವಾಂಸರಾದ ಚಲಕೂರಿ ನಾರಾಯಣರಾಯರು ಹತ್ತೊಂಬತ್ತು ವರ್ಗಗಳನ್ನು ಹೆಸರಿಸುತ್ತಾರೆ. ಮರ ಮತ್ತು ಮರಗಳ ಭಾಗಗಳಿಂದ ಹುಟ್ಟಿದ ಹೆಸರುಗಳನ್ನು ಪ್ರತ್ಯೇಕವಾಗಿ ಗುರುತಿಸುತ್ತಾರೆ. ನೆಲದ ಗುಣದಿಂದ ಹೊರಹೊಮ್ಮುವ ಹೆಸರುಗಳಿಂದ ಕಲ್ಲುಗಳ ಹೆಸರುಗಳನ್ನು ಬೇರ್ಪಡಿಸುತ್ತಾರೆ. ಕಾಲುವೆನಾಲೆಗಳ ಹೆಸರು ಬೇರೆಯಾಗಿ ಕಾಣಿಸಿಕೊಳ್ಳುತ್ತವೆ. ಈ ದೃಷ್ಟಿಯಿಂದ ಅವರ ವರ್ಗಿಕರಣ ಅತಿವ್ಯಾಪ್ತಿ ದೋಷಕ್ಕೊಳಗಾಗುತ್ತದಲ್ಲದೆ, ಅವೈಜ್ಞಾನಿಕವೆಂದು ಹೇಳಬೇಕಾಗುತ್ತದೆ.

ಕೇಂದ್ರ ಶಾಸನ ಇಲಾಖೆಯ ಸಂಶೋಧಕರಾದ ರಾಮಚಂದ್ರಮೂರ್ತಿಯವರ ಪ್ರಕಾರ ಗ್ರಾಮನಾಮ ವರ್ಗಗಳು ಒಂಬತ್ತು. ೧. ಭೌತಿಕ ಮತ್ತು ಭೌಗೋಳಿಕ ಲಕ್ಷಣಗಳಿಂದ, ೨. ಸಸ್ಯಲೋಕ ಹೆಸರುಗಳಿಂದ, ೩. ಪ್ರಾಣಿ ಜಗತ್ತಿನ ಹೆಸರುಗಳಿಂದ, ೪. ಧಾರ್ಮಿಕ ಸಂಗತಿಗಳ ಹೆಸರುಗಳಿಂದ, ೫. ಜನಾಂಗಿಕ ಅಭಿದಾನಗಳಿಂದ, ೬. ಚಾರಿತ್ರಿಕ ವೈಶಿಷ್ಟ್ಯಗಳಿಂದ, ೭. ವ್ಯಾಪಾರ ವಾಣಿಜ್ಯಾದಿ ಸಂಗತಿಗಳಿಂದ, ೮. ಪ್ರಸಿದ್ಧ ನಗರಗಳ ನಾಮಗಳಿಂದ, ೯. ಸಂಕೀರ್ಣ ವಿಷಯಗಳಿಂದ ಗ್ರಾಮಗಳು ಉಗಮಗೊಂಡುವೆಂದು ಪ್ರತಿಪಾದಿಸುತ್ತಾರೆ. ಒಂದೇ ಹೆಸರಿನ ಹಳೆಯ ಮತ್ತು ಹೊಸ ಸ್ಥಳಗಳನ್ನು, ಒಂದೇ ಹೆಸರಿನ ನಾನಾಗಾತ್ರಗಳುಳ್ಳ ಗ್ರಾಮಗಳನ್ನು, ಲೋಹ, ವರ್ಣ, ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ಹೆಸರುಗಳನ್ನು, ಅಂತೆಯೇ ಭಾವನಾಪ್ರಧಾನ ಅಭಿದಾನಗಳನ್ನು ಸಂಕೀರ್ಣ ವರ್ಗದಲ್ಲಿ ಸೇರಿಸುತ್ತಾರೆ.

ಸ್ಥಳನಾಮ ಅಧ್ಯಯನ ಆ ಪ್ರದೇಶದ ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಸ್ವಾರಸ್ಯಕರವಾದ ಅನೇಕ ಸಂಗತಿಗಳನ್ನು ತಿಳಿಸಿಕೊಡುತ್ತದೆ. ಡಾ. ಶಂಬಾ ಅವರು ಸ್ಥಳನಾಮಗಳ ಬಗ್ಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಎಡೆಗಳು ಹೇಳುವ ಕಂನಾಡ ಕತೆ’, ‘ಕಣ್ಮರೆಯಾದ ಕನ್ನಡ’ ಮತ್ತು ‘ಕನ್ನಡದ ನೆಲೆ’, ‘ಮಹಾರಾಷ್ಟ್ರದ ಮೂಲ’ ಇಲ್ಲೆಲ್ಲ ಸ್ಥಳನಾಮಗಳನ್ನು ಕುರಿತು ಸೂಕ್ಷ್ಮವಾದ ಮತ್ತು ವ್ಯಾಪಕವಾದ ವಿವೇಚನೆಯಿದೆ. ಶಂಬಾ ಅವರು ಕನ್ನಡದ ಮೊದಲ ಗಣ್ಯ ಸ್ಥಳನಾಮವಿಜ್ಞಾನಿ. ಈ ಅಧ್ಯಾಯದಲ್ಲಿ ಅವರ ಎಡೆಗಳು ಹೇಳುವ ಕಂನಾಡ ಕತೆಯನ್ನು ಕೇಂದ್ರವಾಗಿಟ್ಟುಕೊಂಡು ಶಂಬಾ ಅವರ ಸ್ಥಳನಾಮ ಕುರಿತು ಚಿಂತನೆಗಳನ್ನು ವಿವೇಚಿಸಲಾಗಿದೆ. ಸ್ಥಳನಾಮಗಳ ಮೂಲಕ ಶಂಬಾ ಅವರ ಕನ್ನಡ ಸಂಸ್ಕೃತಿಯ ಭೌಗೋಳಿಕ ಎಲ್ಲೆಯನ್ನು ಹುಡುಕುತ್ತ ಹೊರಟು ಇತಿಹಾಸ, ಪುರಾಣ, ಜಾನಪದ, ಧರ್ಮ, ಜನಾಂಗವನ್ನು ಸ್ಥಳನಾಮಗಳ ಮೂಲಕ ಗುರುತಿಸುವಂತಹ ಮಹತ್ವದ ಅಧ್ಯಯನ ಮಾಡಿದರು. ಕನ್ನಡ ಸಂಸ್ಕೃತಿಯನ್ನು ಉತ್ತರ ಭಾರತದಲ್ಲಿಯೂ ಹುಡುಕ ಹೊರಡುವ ಶಂಬಾ ಮೂಲತಃ ಸ್ಥಳನಾಮಗಳನ್ನೇ ಪ್ರಮುಖ ಆಕರಗಳನ್ನಾಗಿ ಬಳಸುತ್ತಾರೆ.

ಅವರ ಬರಹಗಳು ಸಂಶೋಧಕರಿಗೆ ಅನೇಕ ಹೊಸ ಹೊಳಹುಗಳ ಕಡೆಗೆ ಕರೆದೊಯ್ಯುತ್ತವೆ. ಇಂತಹ ಎಳೆಗಳಿಂದಲೇ ಮುಂದಿನ ಅಧ್ಯಯನಕ್ಕೆ ಹೆದ್ದಾರಿಯನ್ನು ನಿರ್ಮಿಸುವಂತೆ ಪ್ರೇರೇಪಿಸಿದ್ದಾರೆ.

ಕನ್ನಡ ಸ್ಥಳನಾಮಗಳಲ್ಲಿ ಇತರ ದ್ರಾವಿಡ ಸ್ಥಳವಾಚಿಗಳಂತೆ ಸಾಮಾನ್ಯವಾಗಿ ಎರಡು ಪದಗಳಿರುತ್ತವೆ. ಪೂರ್ವಭಾಗವನ್ನು “ನಿರ್ದಿಷ್ಟ”ವೆಂದು ಉತ್ತರಭಾಗವನ್ನು “ವಾರ್ಗಿಕ” ವೆಂದು ಕರೆಯಬಹುದು. “ಬೆಟ್ಟೂರು” ಎಂಬ ಸರಳ ಉದಾಹರಣೆ ತೆಗೆದುಕೊಳ್ಳೋಣ. ಇದರಲ್ಲಿ ಬೆಟ್ (ಬೆಟ್ಟು) ಎಂಬುದು ನಿರ್ದಿಷ್ಟ ಪದ. ಏಕೆಂದರೆ ಅದು ಆ ಊರಿನ ವೈಶಿಷ್ಟ್ಯವನ್ನು ಹೇಳತಕ್ಕದ್ದು. “ಊರು” ಎಂಬುದು ವಾರ್ಗಿಕ ಪದ. ಏಕೆಂದರೆ ಅದು ಸಾಮಾನ್ಯ ವಾಚಕ. ಮೂರು, ನಾಲ್ಕು, ಐದು, ಆರು ಬದ್ಧ ಮತ್ತು ಸ್ವತಂತ್ರ ಪದಗಳಿರುವ ಹೆಸರುಗಳು ಉಂಟು “ತಿರುಮುಕ್ಕೂಡಲ್ ನರಸೀಪುರ” ಎಂಬ ಹೆಸರಿನಲ್ಲಿ ಕೊನೆಯ ಪಕ್ಷ ಆರು ಪದಗಳಿವೆ. ಕನ್ನಡ ಸ್ಥಳನಾಮಗಳಲ್ಲಿ ನಿರ್ದಿಷ್ಟಗಳನ್ನು ಪಟ್ಟಿ ಮಾಡವುದು ಕಷ್ಟ. ಆದರೆ ಅವುಗಳನ್ನು ಕೆಲವು ಗುಂಪುಗಳಾಗಿ ವಿಂಗಡಿಸಬಹುದು (ಸಸ್ಯಗಳು, ಬೆಟ್ಟ, ಗುಡ್ಡ, ಮರಗಳು, ಮನುಷ್ಯರ ಹೆಸರುಗಳು ಹೂವುಗಳು ಇತ್ಯಾದಿ). ಆದರೆ ವರ್ಗೀಕಗಳ ಸಂಖ್ಯೆ ಸೀಮಿತವಾಗಿರುತ್ತದೆ ಮತ್ತು ಸ್ವಲ್ಪ ಪ್ರಯತ್ನ ಪಟ್ಟರೆ ಅವುಗಳನ್ನು ಪಟ್ಟಿ ಮಾಡಬಹುದು. ಶಂಬಾ ಅವರು ತುಂಬ ಶ್ರಮಪಟ್ಟು ನಿರ್ದಿಷ್ಟ ಮತ್ತು ವಾರ್ಗಿಕಗಳಿಂದ ಕೂಡಿದ ಸ್ಥಳನಾಮಗಳನ್ನು ಪಟ್ಟಿ ಮಾಡಿದ್ದಾರೆ. ಅವರ ವರ್ಗೀಕರಣ ಬಹುಮಟ್ಟಿಗೆ ಸಮಗ್ರವಾಗಿದೆ.

ಊರ ಹೆಸರಿನ ಮೊದಲ ಭಾಗದಿಂದ ಸೂಚಿತವಾಗುವ ಕೆಲವು ಗುಂಪುಗಳು

. ಪ್ರಾಣಿಗಳಿಂದ ಬಂದುವು

ಆವಿನಹಳ್ಳಿ, ಚಿಕ್ಕಆವಳ್ಳಿ; ಹಿರೇಆವಳ್ಳಿ; ಆವಿನಮಡು; ಆಕಳವಾಡಿ; ತುರುವೆಕೆರೆ; ತುರುವನೂರು; ತುರುಕಾರಶೀಗಿಹಳ್ಳಿ; ಗೋಪಾಡಿ (ದಕ್ಷಿಣಕನ್ನಡ), ಗೋವನಕೊಪ್ಪ, ಗೋಹಳ್ಳಿ, ಗೋಗೇರಿ, ಗೋಗಿ, ಗೋಕಾಳ, ಗೋಕಾಗೆ (ಗೋಕಾಕ), ಗೋಗಟೆ (ಗೋಕಟ್ಟೆ? ಕೊಲ್ಲಾಪುರ), ಗೋಕುಲ, ಗೋವರ್ಧನಗಿರಿ (ಮೈ), ಗೋವಿನದಿನ್ನಿ, ಗೋಕರ್ಣ; ಗೋಪರಾಷ್ಟ್ರ (ತುಳುನಾಡು), ಗೋವೆ; ಗೌಳದಿನ್ನಿ, ಗೌಳಗೇರಿ; ಗೌಹಟ್ಟಿ (ಆಸಾಮ); ಗೌಳದೇಶ (ಬಂಗಾಳ); ಘೋಸ (ಷ) ಬಾಲ (ವಿ); ಎತ್ತಿನಕೊಪ್ಪ, ಎತ್ತೂರು, ಎತ್ತಿನಗುಡ್ಡ, ಎತ್ನಟ್ಟಿ; ನಂದ್ಯಾಲ (ನಂದಿಹಾಳ); ನಂದಿಗ್ರಾಮ, ನಂದಿಗಲ್ಲು; ನಂದೂರಬಾರ; ಬಸಾಪುರ, ಬಸವಾಪಟ್ಟಣ; ಬೈಲಹೊಂಗಲ, ಬೈಲವಾಡ, ಬೈಲೋಬನಹಾಳ (ನಿಜಾಂ); ದನಗಾರಹಟ್ಟಿ (ಬ); ದನಗೂರು (ಮೈ.) ಜತ್ತಿ, ಜತ್ತವಾಡಿ ಮತ್ತು ಜತ್ತಗಾವ (ಎತ್ತು?) ಎಮ್ಮಿಗನೂರು; ಎಮ್ಮಿಗುಡ್ಡ; ಎಮ್ಮೆಹಟ್ಟಿ; ಎಮ್ಮೆಗೊಂಡ (ಕೊಲ್ಲಾಪುರ); ಎಮ್ಮೆದೊಡ್ಡಿ, ಎಮ್ಮರಪಳ್ಳಿ, ಮಹಿಷಪುರ; ಮಸವಡ; ಮಹಿಸವಾಡಗಿ; ಮಹಿಸಾಳ; ಮಣಕವಾಡ; ಜಮ್ಮೆಹಾಳ (ಧಾ); ಮೈಸಳ್ಳಿ (ಮೈ); ಕೊಣ್ಣೂರು (ಕೋಣನೂರು?), ಕೋಣನತಂಬಿಗೆ; ಕೋಣನಕೆರೆ; ಕೋಣನಕುರಿಕೆ; ಕುರಿಗ್ರಾಮ; ಕುರಿಹಟ್ಟಿ; ಕುರಿಯಾಳ; ಕುರಿಗೋವನಕೊಪ್ಪ; ಕುರುಬರಹಟ್ಟಿ; ಕುರಿಗುಡ್ಡ; ಕುರಿಗುಪ್ಪ; ಕುರಿಘಟ್ಟ.

. ಗಿಡಗಂಟಿಗಳಿಂದ ಬಂದ ಹೆಸರುಗಳು

ತೇಗೂರು, ಮುತ್ತಲಗೇರಿ; ಮುಳುಮುತ್ತಲ; ಮತ್ತಿಕಟ್ಟಿ; ಆಲೂರು; ಆಲದಕಟ್ಟಿ; ಹುಣಸೆಕಟ್ಟಿ; (ಹಾಳ; ಊರು;) ಚಿಂಚವಾಡ; ಚಿಂಚಲಿ; ಚಿಂಚಣಿ; ಚಿಂಚೋಳಿ; ಪುಣಚ; ಅಳೀಕಟ್ಟಿ; ಅತ್ತಿ; ಅತ್ತಿಕೊಳ್ಳ; ಉಂಬರವಾಡಿ; ಔದುಂಬರ; ಹಲಸಗಿ; ಹಲಸೂರು; ನೀರಲಕೇರಿ; ನೀರಲಕೊಪ್ಪ; ನೇರಲಗಿ; ನೇರ‍್ಲಿ; ನೇರಳೆ (ಮಹಾರಾ); ಬೇಲೂರು (ಬಿಲ್ವಪುರ); ಬೆಲವಂತ್ರ; ಬೆಳವಡಿ; ಕವಠಕೊಪ್ಪ; ಖವಟಕೊಪ್ಪ; ಬಸರಕೋಡ; ಬಸರೀಕೊಪ್ಪ; ಬಸರೂರು; ಬೇವೂರು; ಬೇವಿನಕಟ್ಟಿ; ನಿಂಬರಗಿ; ನಿಂಬಗಾವ; ನಿಂಬ; ಜಾಲಿಹಾಳ; ಜಾಲಿಕೊಪ್ಪ; ಬಾಬಲಿಕಲ್ಲ (ನಿಜಾಂ); ಸುಹೊನ್ನೆ; ಮಾವಿನಕುರವೆ; ಮಾವನಕೆರೆ; ಅಮಟಿಬೆಟ್ಟ; ಅಮಟಿ; ಅಂಬೋಲಿ; ಅಮಟೂರು; ಅಂಬಡಗಟ್ಟಿ; ಅಂಬೆಗಾಂವ; ಅಂಬೆವಾಡಿ; ಕೇರಕೊಪ್ಪ (ಕ್ಯಾರಕೊಪ್ಪ); ಕೇರಾಡಿ; ಕೇರವಾಡ; ಗೇರಸೊಪ್ಪ; ಬಿದಿರ; ಬಿದರಹಳ್ಳಿ (ಮೂಡುಪಡು); ಬಿದಿರೆ; ಬಿದರೂರು; ವೇಣೂರು; ಬೇಳಗಾಂವಿ; ಗಲಗಲಿ; ಸೀಗಿಹಳ್ಳಿ; ಹೂವಿನಶಿಗ್ಗಲಿ; ಗುಂಜಿ; ಗುಲಗಂಜೀಕೊಪ್ಪ; ಕವಳಿ; ಬೋರಗಾಂವ; ಬಾರಿಬಂಡಿ (ನಿಜಾಂ) ಬೋರಿ ಬದ್ರಿ (ಕೊಲ್ಲಾಪೂರ); ಬೋರಿವಲಿ (ಬೋರಿವಳ್ಳಿ); ಬದ್ರಿ (ಭಾದ್ರಿ?) ಆರಿಕಾಡು (ದಕ್ಷಣಕನ್ನಡ); ನೆಲ್ಲಿಕೇರಿ; ನೆಲ್ಯಾಡಿ; ಕವಳಕಟ್ಟಿ; ಗೋಣೀಬೀಡು; ಚಳ್ಳಗೇರಿ; ಬನ್ನಿಗೋಳ; ಬನ್ನೂರು; ಬನ್ನಿಕೊಪ್ಪ; ಚಂದನಮಟ್ಟಿ; ಚಂದನ; ಹೊಸುರು; ಕಳ್ಳಿಗೆ; ಕಳ್ಳಿಹಾಳ; ತಡಸಿನಕೊಪ್ಪ; ತಡಸ; ಬಸಳೆಗುಂಡಿ; ಲಕ್ಕಿಗುಂಡಿ; ಸರಣಗಿ.

. ದೇಹದ ಅಂಗಾಂಗಗಳಿಂದ ಬಂದ ಹೆಸರು

ಊಗರೂರು; ಉಗುರುಗೊಳ್ಳ; ಉಗರಖೇಡ; ಬೆಳ್ಳುಬ್ಬಿ; ಕಣ್ಣೂರು(?);ನೈನಾಪುರ (ನಯನಪುರ); ಅಲಕಾಪುರ; ಅಮಲಕನೂರು; ಕುಂತಲ; ಕುಂಡಲ; ಕುಂತಲಪುರ; ತಲೆಮೊರಬ; ಮಂಡೆಹಾಳ; ಮಂಡೆಕೋಲು; ತಲೆವಾಯಿ (ಥಾ); ಹಡೆತಲೇ (ಮೈ); ಪೆರವಾಡಿ, ಬೆಳುವಾಯ್ ದಕ್ಷಿಣಕನ್ನಡ, ಮೂಗೂರು, ನಾಸಿಕ, ಹುಲ್ಲೂರು ವಿ., ಹಲ್ಯಾಡಿ (ದಕ್ಷಿಣಕನ್ನಡ); ಕೈಯ್ಯೂರು, ಕೈರಂಗಳ, ಹಾತಕಮಗಲೆ, ಕಂಕಳೆ, ಕಾಲವಾಡ, ಮೊಳಕಾಲ್ಮೂರು, ಬೆನ್ನೂರು, ಮೊಟೆಬೆನ್ನೂರು, ಹೊಟ್ಟೆಹೂಳಿ, ಹೊಟ್ಟಲಕೆರೆ ಸೊಂಟಮುರು, ದಿಂಡವಾಡ, ಧಡೆದಕೊಪ್ಪ, ಮೈರೆ, ಮೈದೂರು.

. ಬಳಗದವರಿಂದ ಬಂದ ಹೆಸರುಗಳು

ಅಬ್ಬಲೂರು, ಅಬ್ಬೆಹಾಳ, ಅಬ್ಬಿ(ಬ್ಬೆ)ಗರೆ, ಅಬ್ಬೊಳ್ಳಿ, ಅಬ್ಬಚ್ಚಿ, ಬಾಪನಹಳ್ಳಿ, ಬಾಪಿನಾಡು, ಬೊಪ್ಪನಹಳ್ಳಿ, ಬಾಪೂರ, ಕುಕನೂರು, ತಮ್ಮನಹಟ್ಟಿ, ಅಣ್ಣೂರು, ಅಣ್ಣೀಗೆರೆ, ಅಕ್ಕದೇವನಹಳ್ಳಿ, ಅಕ್ಕೂರು, ಅಕ್ಕಾಜಿಹಳ್ಳಿ, ಅಕ್ಕಲವಾಡಿ, ಅಕ್ಕಲಕೋಟೆ, ಅಕ್ಕೋಳಿ, ಅಕ್ಕತಂಗಿಯರಹಾಳ, ತಂಗೀಹಳ್ಳಿ (ಚಿಕ್ಕ) ಮಂಗಳೂರು, ಮಕ್ಕಳಗೇರಿ, ಮಕ್ಕಳ, ಮಗನೂರು, ಮದುಮಕ್ಕನಹಾಳ, ಗುಂಡನಹಳ್ಳಿ, ನಲ್ಲೂರು, ಮಾವನೂರು, ಮಲಗಂಡನಕೊಪ್ಪ, ಕಾಂತಾವರ (ದಕ್ಷಿಣಕನ್ನಡ), ಬಾಮಾಪುರ, ಸತೀಗ್ರಾಮ, ಮಾಸತಿ, ಕೆಳದಿ, ನೀರ (ದಕ್ಷಿಣ ಕನ್ನಡ), ಮಾವನಕೊಪ್ಪ, ಅತ್ತೆಬೈಲು, ಕೂಸುಗಲ್ಲು, ಕೂಸನೂರು, ಬಾಲನಹಳ್ಳಿ, ಶಿಶಿವಿಹಾಳ, ಕಂಡಕೂರು, ಮಗನೂರು, ಅಜ್ಜಂಪುರ, ಅಜ್ಜಾವರ.

. ಮನೆಗಳಿಂದ

ಇಲ್, ಮನೆ, ಕೋಣೆ, ಗುಡಿ, ಕಂಬದೂರು, ಕಲಖಂಬ, ಜಂತ್ಲಿ(?), ಅಗಳಿ (ಮಡಗಶಿರಾ), ಚಲಕವಾಡ, ಕೂಂಡಿಕೊಪ್ಪ, ಬಾಗಲ, ಬಾಗಲವಾಡ, ಬಾಗಳಿ, ಬಾಗಲಕೋಟೆ, ಮಾಳೆಕೊಪ್ಪ ಮಳಗಿ (ನಿಜಾಂ), ಹಂಚಿನಾಳ, ಗುಡಿಸಲಕೊಪ್ಪ, ಹಂದ್ರಾಳ (ಬ), ಛಾವಣಿ, ಬೀಡು, ಪಾಳ್ಯ, ವಾಡೆ, ಹುಡೆ, ಕೊತ್ತಳ, ಕೋಟೆ, ದುರ್ಗ.

. ದಿನಸುಗಳ ಹೆಸರುಗಳಿಂದ

ಅಂಬಲಿಕೊಪ್ಪ, ಗಂಜಿ, ಗಂಜೀಗಟ್ಟಿ, ಉಪ್ಪಿನಬೆಟಗೇರಿ, ಚಟ್ನಿಹಾಳ, ಸಕ್ಕರೆಪಟ್ಟಣ (ಮೈ), ಗುಳವಾಡಿ, ಬೆಲ್ಲಾಳ (ದಕ್ಷಿಣಕನ್ನಡ); ಬೆಲ್ಲಾ ಹುಣಸಿ (ಬ.), ರೇವಡಿಹಾಳ, ಕಡಬಿ ತಿಳಗೂಳ (ವಿ.), ಕಡಬಿನಕಟ್ಟೆ, ಮಂಡಗಿಹಳ್ಳಿ, ಹಿಟ್ಟಿಹಳ್ಳಿ, ಹಾಲಾಡಿ, ಹಾಲಕೆರೆ, ಹಾಲಬಾವಿ, ಹಾಲೇರಿ (ಕೊಡಗು), ಪಾಲಾರ (ನದಿ), ಹಾಲಳ್ಳಿ, ಹಾಲಭಾವಿ, ದೂದೀಹಳ್ಳಿ, ದೂದಿಹಾಳ, ದೂಧಸಾಗರ, ಧೂಧನಿ, ಹಾಲವರ್ತಿ (ಮೈ), ಮೊಸರುಗುಪ್ಪಿ, ಮಜ್ಜಿಗೆಪುರ, ಬೆಣ್ಣೀಹಳ್ಳ, ಬೆಣ್ಣಿಹಾಳ, ಬೆಣ್ಣೂರು, ತುಪ್ಪಲಕಟ್ಟಿ, ತೆಲಗಿ, ತೈಲಗೆರೆ, ತೇಲಗಾವ, ಕಲ್ಯ, ಮದ್ಯ, ಇಡ್ಯ, ಶರೇವಾಡ (ಥಾ), ಇನ್ನ, ಈರ, ನಂಜಿನಗೂಡು (ಮೈ), ಅಮೃತಪುರ (ಮೈ).

. ಬಣ್ಣಗಳಿಂದ

ಕೆಂಪವಾಡ, ಕೆಂದೂರು (ಪುಣೆ ಜಿಲ್ಲಾ), ಕೆಮ್ಮನಗುಂಡಿ, ಕಿಸುಕಾಡು, ಕಿಸುವೊಳಲು, ಕಿಸುವಾಡ, ಕಿಸುಗುಂಡಿ (ಈಗ ತಾಂಮ್ರಗುಂಡಿ), ಚೆಂದೂರ, ಶೇಂದೂರ, ಶಿನ್‌ಥೂ, ಕಾವೇರಿ, ಚಂದ್ರಭಾಗಾ, ನೀಲವಾಡ, ನೀಲಗುಂದ, ನಲಾವರ, ನೀಲೇಶ್ವರ, ಹಳದಿಪುರ, ಹಳದಪೂರ, ಅರಸಿನಗೇರಿ (?), ಬೆಳ್ಳೂರು, ಬೆಳ್ಳಂಪಳ್ಳಿ, ಬೆಳ್ಳಟ್ಟಿ, ಬೆಳ್ಳ, ಕರಿಯೂರು, ಕರಿಕಟ್ಟೆ, ರಬ್ಬುಕವಿ.

. ಹರಳುಗಳಿಂದ

ಮಾಣಿಕನಗರ, ರತ್ನಪುರ, ವಜ್ರಳ್ಳಿ, ಹವಳಗೋಡು, ಹರಳೂರು, ಹವಳಖೋಡ (ವಿ).

. ಬಂಗಾರದಿಂದ

ಚಿನ್ನಮುಳಗುಂದ, ಸೊನ್ನ, ಸೊನ್ನಲಿಗೆ, ಹೊನವಾಡ, ಹೊನ್ನಾಳಿ, ಹೊನ್ನಹೊಳೆ (ಸುವರ್ಣಾವತಿ), ಕನಕಾಪುರ, ಹೇಮರಗಿ, ಹೇಮವಾಡಿಗಿ, ಬಂಗಾರಗುಂಡ, ಹಾಟಕ (ಹಟ್ಟೆಯಲ್ಲಿ ಹುಟ್ಟಿದ್ದು).

೧೦. ಅಂಕೆಗಳಿಂದ

ಪುಂಜ, ಹೊನ್ನೆಹಳ್ಳಿ, ಒಂದೂರು (ಕೊಲ್ಹಾಪುರ), ಓರಳ್ಳಿ, ಒರಕಲ್‌ಗುಡ್ಡ, ಒರೂರು, ಒರ‍್ಕಾಡಿ, ಒಕ್ಕುಂದ, ಎಕ್ಕುಂಡಿ, ಏಕಲಾಸಪುರ, ಏಕಲೂರು, ಏಕಸಂಬೆ, ಇಪ್ಪಡಿ, ಇಕ್ಕೇರಿ, ಎರಡ್ಕಳ್ಳಿ, ಜೋಡುಹಟ್ಟಿ.

 ೧೧. ಗ್ರಹಾದಿಗಳಿಂದ

ನೇಸರಗಿ, ಭಾನಾಪುರ, ಹಿರೇಭಾಸ್ಕರ, ಇಂದೂರು, ಚಂದ್ರವಳ್ಳಿ, ಸೋಮಾಪುರ, ಸೋಮನಕೊಪ್ಪ, ಮಂಗಳೂರು, ಮಂಗಳವಾಡ, ಗಳಗಟ್ಟಿ, ಬುಧಗಾಂವ, ಬುದನೂರು, ಗುರುಪುರ, ಶನಿವಾರ ಸಂತೆ, ಉಡುಪಿ, ತಾರಾಪುರ (ವಿಜಾ), ಗಗನಚುಕ್ಕಿ, ಬಾರಚುಕ್ಕಿ (ಜೋಗು ಮೈ).

೧೨. ಮಳೆ ಮಿಂಚು

ಮುಗಿಕೊಪ್ಪ, ಕಾರಕಡ, ಕಾರಕಳ, ಕಾರ್‌ನಾಡ, ಆಣೆಕಲ್ (ಮೈ.), ಮಂಜುಗುಣಿ (ಕಾ.), ಮಂಜಿರಾಬಾದ (ಮೈ.), ಬಿಸಿಲುಕೊಪ್ಪ, ಬೇಗೂರು, ಬೇಸಗೆಗುಡ್ಡ, ಬೆಂಕಿಕೊಡ್ಲು, ಬೆಂಕಿಪುರ, ಬೆಂಕಿಕೊಪ್ಪ, ಉರವಕೊಂಡ, ಅನಲಗಾಲ, ಅನಲಗೋಡು, ಅಗ್ನಿಕುಂಡಲು, ದೀಪದಹಳ್ಳಿ, ಮಿಂಚಿನಾಳ (ವಿ.), ಮಿಂಚೇರಿ (ಬ.), ಸಿಡ್ಲಘಟ್ಟ, ಬೂದಿಹಾಳ, ಬೂದೀಕೋಟೆ.

೧೩. ದಿಕ್ಕುಗಳಿಂದ

ಮೂಡುಬಿಡಿರೆ, ಮೂಡಲಗಿ, ಉದಯಾವರ, ಉದಯಗಿರಿ, ಪಡುಬಿದಿರೆ, ಪಡುವಲ ಪಟ್ಟಣ, ಬಡಗಮಿಜಾರ, ತೆಂಕ ಕಾರಂದೂರು (ದಕ್ಷಿಣ ಕನ್ನಡ), ಮೇಗೂರು, ಮ್ಯಾಕಲ ಮರಡಿ, ಮ್ಯಾಗೇರಿ, ಮೇಲೂರು, ಕೆಳಗಲ್ಲು, ಕೆಳಗಿನಮನೆ, ಕೆಲಗಿನ ಇಡುಗಂಜಿ, ನಿಟ್ಟೂರು, ……ಒಂಕಿಹಾಳ, ಬಂಕಾಪುರ, ಕಡೆಹಳ್ಳಿ, ಕಡಕೊಳ್ಳ, ಕಡೆಗಾವ (ಸಾತಾರಾ), ನಡುವಿನ ಹಳ್ಳಿ, ಅಂತರವಳ್ಳಿ, ಅಂತರಗಾವ (ನಿ), ಕೆಲಗೆರೆ, ಎಡೂರು, ಎಡೆಹಳ್ಳಿ, ಬಲಗೋಡು, ಬಲಕುಂದಿ, ತಳಕಲ್ಲು, ತಳಕಾಡು, ತಲ್ಲೂರು.

೧೪. ನೆಲದಿಂದ

ಬೈಲಕೆರೆ, ಬೈಲೂರು, ಬೆಟ್ಟದಹಾಳ, ಬೆಟಸೂರು, ಬೆಟದೂರು, ಬೆಟ್ಟಗೆರೆ, ಕುಮಶಿ, ಕುಂಬೆ, ಚಿಕ್ಕುಂಬೆ, ಹಿರೆಕುಂಬೆ, ಆಗುಂಬೆ, ಕುಂದರಗಿ, ಕುಂದರನಾಡು, ಬೆಳುವೊಲ, ಮಲೆನಾಡು, ಕರ್ಲಕೊಪ್ಪ, ಎರೆಗಟ್ಟಿ, ಕಲ್ಲಹಳ್ಳಿ, ಗುಡದೂರು, ಮಣ್ಣೂರು, ಮಳಲವಾಡಿ, ಮರಳದಿನ್ನಿ (ನಿ.), ಮಳವಲಿ (ಮಹಾರಾಷ್ಟ್ರ), ಧೂಳಖೇಡ (ವಿ.), ಧೂಳಿಕೊಪ್ಪ (ಧಾ.), ಕೆಸರಕೋಡಿ, ಕೆಸರಕೊಪ್ಪ (ವಿ.), ಹುದಲಿ (ಬೆ.), ಕೊಳಚಿ (ರಾಮದುರ್ಗ), ಗೊಬ್ಬರಗುಂಪಿ, ಜಲದುರ್ಗ (ನಿ.), ಜಲಗಡ್ಡೆ (ವಿ.), ಸವುಳಹಳ್ಳಿ (ನಿ.).

೧೫. ಬೇಸಾಯದಿಂದ

ನೇಗಿನಹಾಳ (ಬೆ, ವಿ.), ಉತ್ತನಾಳ (ವಿ.), ಭಾಂಡಿವಾಡ (ಧಾ.), ಕೂಂಟೆ, ಕೂಂಟಿಗೆ, ಕೊಂಟೋಜಿ (? ಧಾ. ವಿ.).

೧೬. ಕಾಲದಿಂದ

ಹಳನಾಡ (ದಕ್ಷಿಣ ಕನ್ನಡ), ಹಳೇಬೀಡು, ಮುದೇನೂರು (ರಾ.), ಮುತ್ತಗಿ, ಮುದುವೊಳಲು (ಮುಧೋಳು), ಮುದುಗಲ್ಲು (ನಿ.), ಮುತ್ತೂರು (ದಕ್ಷಿಣಕನ್ನಡ), ಮುನವಳ್ಳಿ, ಪುತ್ತೂರು, ಹೊಸಹಟ್ಟಿ, ಹೊಸೂರು, ಹೊಸವಾಡ, ಹೊಸದುರ್ಗ, ಹೊಸಕೋಟೆ, ಹೊಸಾಳ (ದಕ್ಷಿಣಕನ್ನಡ).

೧೭. ಚಿಕ್ಕ, ಹಿರೆ, ಸಣ್ಣ, ದೊಡ್ಡ

ಚಿಕ್ಕಪಡಸಲಗಿ, ಹಿರೇಪಡಸಲಗಿ, ಚಿಕ್ಕೊಪ್ಪ, ಹಿರೇಕೊಪ್ಪ, ಚಿಕ್ಕಕೆರೆಯೂರು, ಹಿರೆಕೆರೆಯೂರು, ಪೆರೂರು, ಪೆರಿಯಾ (ದಕ್ಷಿಣ ಕನ್ನಡ), ಪೆರಿಯಾಪಟ್ಟಣ, ಹೆರೆ, ಹೇರವಾಡ, ದೊಡ್ಡಬಳ್ಳಾಪುರ, ದೊಡ್ಡಬಿದಿರೆ, ದೊಡಏರಿ, ದೊಡ್ಡಘಟ್ಟ, ದೊಡ್ಡಬೆಟ್ಟ (ನೀಲಗಿರಿ), ಬಂಬಲಗಿ, ಬಂಬಲವಾಡ (ಬೆ.).

೧೮. ಕೂಡಿಕೆಯಿಂದ

ಕೂಡಲ, ಕೂಡ್ಲ, ಕೂಡಲಿಗೆ, ಸಂಗಮ, ಸಂಗಮೇಶ್ವರ, ಸಂಗವಳ್ಳಿ, ಸಂಗಾಪುರ, ಕೂಡಿಗೆ ತಸಂಗಿ (ಸಾಂ.), ಶ್ರೀಸಂಗಿ (ಶಿರಸಂಗಿ), ಗೊಳಸಂಗಿ, ಅಸಂಗಿ (ಜಂ.), ತಳಸಂಗಿ (ಸಾಂ.), ಅಹಿರಸಂಗ, ಸಂಗಳ (ಸಾಂಗಳ = ಸಾಂಗಲಿ).

೧೯. ದೇತಾದಿಗಳಿಂದ ಬಂದುವು

ರಾಮಾಯಣದಿಂದ

ರಾಮದುರ್ಗ, ರಾಮತೀರ್ಥ, ರಾಮನಾಳ, ರಾಮನಕೊಪ್ಪ, ರಾಮಗಿರಿ, ರಾಮಾಪುರ, ಲಕ್ಷ್ಮಾಪುರ, ಲಕಮಾಪುರ, ಲಕಮನಹಳ್ಳಿ, ಲಕ್ಷ್ಮಣತೀರ್ಥ ಮುಂ.

ಭರತನಳ್ಳಿ, ಭರತೂರು, ಭತರನೂರ (ನಿಜಾಂ), ಜನಕನಭಾವಿ (ವಿ.), ಸೀತಿಮನೆ, ಸೀತಿಭಾವಿ, ಸೀತಿಬೆಟ್ಟ, ಹನುಮಾಪುರ, ಹನುಮಸಾಗರ, ಹನುಮಂತಗಡ, ಹನುಮನಹಾಳ, ಆಂಜನೇರಿ, ಅಂಜನಿ (ಸಾಂ.), ಪಂಪಾ (ಹಂಪೆ), ಅವನಿ (ಹಂಪೆಯಂತೆ ಇಲ್ಲಿ ರಾಮಾಯಣದ ಹಲವು ಕುರುಹುಗಳುಂಟು).

ಮಹಾಭಾರತದಿಂದ

ಕೃಷ್ಣಾಪುರ, ಯದುಗಿರಿ, ಕಂಸನಪಳ್ಳಿ, ರುಕ್ಮಾಪೂರ (ನಿಜಾಂ), ಕೊಂತಿಹಳ್ಳಿ, ಕುಂತಿದಿಬ್ಬ, ಪಾಂಡವಗಡ, ಧರ‍್ಮಾನದಿ, ಧರ‍್ಮಾವರಂ, ಧರ‍್ಮಾಪುರ, ಭೀಮನಹಳ್ಳಿ, ಭೀಮಗಡ; ಅರ್ಜುನಗಿ, ಅರ್ಜುನವಾಡ, ಅರ್ಜುನಬೆಟ್ಟಹಳ್ಳಿ, ಪಾರ್ಥನಹಳ್ಳಿ, ಸಹದೇವಪುರ (ಸಾದಳಿ, ಮೈ.) ಕರ್ಣಕುಪ್ಪೆ (ನಿಜಾಂ), ಬಭ್ರುವಾಡೆ (ಉತ್ತರಕನ್ನಡ), ವಿದುರೂರು (ಗೋರಿಬಿದನೂರು), ವಿದುರಾಶ್ವತ್ಥ, ಏಕಛತ್ರ (ಬೋಧನ, ನಿ.), ವಿರಾಟನಗರ (ಹಾನಗಲ್ಲು).

೨೦. ಜನಗಳಿಂದ ಬಂದ ಹೆಸರುಗಳು

ಪುರಾತನ

ಕೋಲಾರ; ಕೊಲ್ಹಾರ; ಕೊಲ್ಲಾಪುರ; ಕೊಲ್ಲೂರು; ಕೋಳಟ್ಟಿ (ಸಾಲೆಂ); ಮುಂತಾದುವು ಕೋಲೆರಿಯನ್ ಜನರ ಕರುಹುಗಳು. ಬಿಲ್ಲವಾಡಿ (ಭಲವಡಿ); ಬಿಲ್ಲಾಡಿ (ದಕ್ಷಿಣ ಕನ್ನಡ) ಇವು ಬಿಲ್ಲವರ (ಭಿಲ್ಲರ) ನೆಲೆ ಹೇಳುವುವು; ಮುಂಡರಗಿ; ಮುಂಡೇವಾಡಿ; ಮುಂಡಕೂರು; ಮುಂಡಗನೂರು ಮುಂತಾದವು ಮುಂಡ ಜನರವು. ಕಾತರಾಳ; ಕ್ಯಾತನಹಳ್ಳಿ; ಕ್ಯಾತಸಾಂದ್ರ; ಕಾತನಡೋಣಿ (ವಿ.) ಮುಂತಾದವು (ಕಿಳ್ಳಿ) ಕೇತರ ನೆನಹನ್ನು ಕೊಡುವುವು. ನಾಗರಗಾಳಿ; ನಾಗನೂರು; ನಾಗಪುರ; ನಾಗಲಾವಿ; ನಾಗರಾಳ; ನಾಗರಹಾಳ; ನಾಗರಖಂಡ ಮುಂತಾದವು ನಾಗರ ನೆಲೆಯನ್ನು ಹೇಳುವುವು.

ಟಿಕ್ಕಳಕಿ, ಟಾಕಳಿ; (ಟಿಕ್ಯುರು?); ಬೇಡರಹಟ್ಟಿ…… ಪಣಿಯಾಡಿ (ದಕ್ಷಿಣಕನ್ನಡ) ಹಣಬರಹಟ್ಟಿ (ಬೆ.), ಹಣಬನೂರು (ಬೆ.), ಪಣಿಯಾಲ (ದಕ್ಷಿಣಕನ್ನಡ); ಪಟ್ಟಿಗಳು = ಪಟ್ಟಿಲರು = ಹಟ್ಟಿಕಾರರು; ಯಾದವಾಡ; ಯಾದಗಿರಿ; ಯಾದಗಿ; ಯಾದಗೊಪ್ಪ; ದನಗಾರ; ಹಟ್ಟಿ; ತುರುಕೇವಾಡಿ; ತುರ‍್ವಗಲ್ಲು; (ಇದರೊಡನೆ ಗೊಲ್ಲ ಗೌಳ ಕುರುಬರ ಊರುಗಳನ್ನು ನೆನೆದುಕೊಳ್ಳಬೇಕು.) ಅಲ್ಲದೆ ಕನ್ನ; ಕಣ್ಣರ; ಊರು; ಏರಿ; ವಾಡಿ; ಪುರ; ಸಾಂದ್ರ; ವಾಡ; ಪೇಟೆ; ನಾಡು; ದೇಶ ಮುಂತಾದವುಗಳು ಕಂನಾಡ ಮೊದಲಿಗರ ಎಡೆಗಳು. ಮಲ್ಲಾಳ, ಮಲ್ಲೂರು, ಮಲ್ಲಾಪುರ, ಮಲಿಕಾಪೂರ; ಮೈಲಾರ; ಮಲ್ಹಾರ; ಮಲ್ಲಾಳ; ಮುಂತಾದ ಮಲ್ಲಜನರ ಊರುಗಳು. ಕಮ್ಮರಪಳ್ಳಿ, ಕಮ್ಮಗಾವ; (ಖಾಮಗಾಂವ); ಕಮ್ಮನಾಡುಗಳು ಕಮ್ಮರವು. ಅಹಿರಸಂಗ; ಅಹಿರವಾಡ (ಅಭೀರಪಲ್ಲಿ); ಅಭೀರರ ಸುಳುವು ದೋರುವುವು.

ಐತಿಹಾಸಿಕ

ಸಾತವಾಹನಿಹರ; ಸಾತವಾಹನಿರರ; (ಬಳ್ಳಾರಿ ಜಿಲ್ಲೆ) ಸಾತನೂರು; (ಬಳ್ಳಾರಿ ಜಿಲ್ಲೆ); ಗಂಗವಾಡಿ; ನೊಳಂಬವಾಡಿ; ನೊಣಬೂರು (ವೈ.); ಬಾಣವರ (?); ರಟ್ಟಪಾಡಿ; ರಟ್ಟಾಡಿ; (ದಕ್ಷಿಣ ಕನ್ನಡ); ರಟ್ಟೆಹಳ್ಳಿ, ರಾಠೋಡಾ (ರಟ್ಟಿವಾಡಾ ? ನಿಜಾಂ); ಲಾಲವಾಡಿ; ಲಾಟವಡೆ; ಲಾಟಗಾವ (ಕೊಲ್ಲಾ); ಲಾತೂರು (ಲಟ್ಟಲೂರು, ನಿಜಾಂ) ಲಾಟ; ಸೌರಾಷ್ಟ್ರ (ಗುಜರಾತ); ರಾಢ (ಬಂಗಾಳ); ಲಟ್ಟೇರಿ; ಲಾಡವಾಡಿ; ಲಾಡವರಂ (ತಮಿಳನಾಡು); ರಡ್ಡಿಹಳ್ಳಿ (ಶೇಲಂ); ಚಳುಕಿ (ಚಲುಕ್ಯ? ಬಳಗಾಂವ ಜಿ); ಸಿಂದಗಿ; ಸಿಂದಮುನ್ನವಳ್ಳಿ; ಸಿಂದಿಕುರುಬೆಟ್ಟ; ಸಿಂಧನೂರು; ಸಿಂದಘಟ್ಟ (ಮೈ.), ಸಿಂದವಾಡಿ; ಸಿಂದಯನಹಳ್ಳಿ; (ಸಾಲೆಂ); ಹೊಯಸಳಕಟ್ಟೆ, (ಮೈ.), ಚೋಳಪುರ (ಮೈ.).

೨೧. ವ್ಯವಸಾಯ, ಉದ್ಯೋಗ, ಅಧಿಕಾರಗಳಿಂದ

ಅರಸನಹಾಳು (ಬ); ರಾಜನಾಳ (ವಿ); ರಾಜೂರು; ರಾಮಮನೆ; ರಾಯಾಪೂರ; ರಾಯರಹೂಪಳ್ಳಿ (ಹುಬ್ಬಳ್ಳಿ); ರಾಜೋಳಿ (ನಿಜಾಂ); ಅರಸಿಬೀದಿ (ವಿ); ಅರಸಿಕೆರೆ (ಮೈ.); ಪಟ್ಟದಕಲ್ಲು, ಶಾಹಾಪೂರ, ಪಾಚ್ಛಾಪೂರ; ಸುಲ್ತಾನಪೇಟೆ; ಬೇಗಂ ಪೇಟೆ; ಸಾವಂತವಾಡಿ (ಸಾಮಂತ); ಗಾಝಿಪೂರ; ಹೆಗ್ಗಡೆದೇವನಕೋಟೆ (ಮೈ.), ಹೆಗಡೆ; ಹೆಗಡಿಹಾಳ (ವಿ.); ವಝೀರಗಾವ (ನಿಜಾಂ); ದಣ್ನಾಯಕನಕೆರೆ (ಬ); ನಾಯಕವಾಡಿ; ನಾಯಕನೂರು; ನಾಯಕನಕೊಪ್ಪ; ಝಂಜುರವಾಡ (ಬೆ.), ಬಂಟವಾಳ, ವೀರಾಪುರ; ರಾಣಾಪುರ; ರಾಣೆಬೆನ್ನೂರು; ಬಹಾದ್ದೂರಬಂಡಿ; ಬಾದರದಿನ್ನಿ (ವಿ); ದಳವಾಯಿಹಳ್ಳಿ (ಸಾಲೆಂ); ದಂಡು ಕಾರನಹಳ್ಳಿ (ಸಾಲೆಂ); ಮಾನ್ಯದಹಳ್ಳಿ (ಸಾಲೆಂ); ಒಡೇರಹಳ್ಳಿ, ಒಡೇರಕೊಪ್ಪ; ಗೌಡನಹಟ್ಟಿ; ಗೌಡವಾಡ (ಸಾಲೆಂ); ಶೆಟ್ಟೆಹಳ್ಳಿ (ಸಾಂ.) ಶೆಟ್ಟೆಗಳಕೊಪ್ಪ (ಮೈ.); ಶೆಟ್ಟಿಹಳ್ಳಿ (ಸಾಲೆಂ); ಬಣಿಜರಹಳ್ಳಿ (ಸಾಲೆಂ); ಸೂಳಿಭಾವಿ; ಮಂಗಸೂಳಿ (ಬೆ.); ಹಾದರಗೇರೆ; ಸೂಳಿಕೆರೆ; ಸೂಳಿಕುಂಟೆ; ಸುಳ್ಳ ಮತ್ತು ಸುಳ್ಯ (ಸೂಳ್ಯ?); ಪಾತ್ರೆಬೂದಿಹಾಳ (ಬ.); ಗಣಿಕೆಹಾಳು (ಬ.), ರಂಭಾಪುರ; ಅಪ್ಪರಗೊಂಡ (ಉತ್ತರಕನ್ನಡ); ಗಂಧರ‍್ವಪುರ (ಬೆ.); ಕಂಬಾರಗಣಿವೆ; ಕುಂಬಾರಹಳ್ಳಿ (ಶೇಲಂ); ಸೋನಾರಹಳ್ಳಿ (ಶೇಲಂ); ನಾವದಗಿ (ವಿ); ನಾವಲಗಟ್ಟಿ (ಬೆ.); ಅಗಸಬಾಳ (ವಿ); ಅಗಸನಹಳ್ಳಿ; ಮಡಿವಾಳ (ಮೈ.), ಗಾಣಿಗಪುರ (ಸೊ.); ತೊಪ್ಪೂರ್; ಗಾಣಿಗರಹಳ್ಳಿ (ಸಾಲೆಂ); ಜಾಡಹಳ್ಳಿ; ಕಟಕನಹಳ್ಳಿ (ವಿ.); ಮೇದರಹಳ್ಳಿ; ಹೇಳವನಕಟ್ಟೆ.

ಊರ ಹೆಸರಿನ ಕೊನೆಯ ಭಾಗದಿಂದ ಸೂಚಿತವಾಗುವ ಗುಂಪುಗಳು

ಇವುಗಳಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಗುಂಪುಗಳನ್ನು ಮಾಡಬಹುದು. ೧. ಊರ (ವಸತಿಕ್ರಮ, ಸಾಂಸ್ಕೃತಿಕ ಹಿನ್ನೆಲೆಯನ್ನು ಸೂಚಿಸುವ) ಇತಿಹಾಸದರ್ಶಕ ಪದಗಳು; ೨. ಊರ ಭೌಗೋಳಿಕ ಸ್ಥಿತಿಗತಿಗಳನ್ನು ಹೇಳುವಂತಹ ಪದಗಳು.

ಮೊದಲನೆಯ ಬಗೆಯವು

೧. ಪಟ್ಟಿ, ಪಾಡಿ, ಹಟ್ಟಿ, ಹಾಳ, ಹಳ್ಳಿ, ಬಾಡು, ಬಾಳು, ವಾಡ, ವಾಡಿ….ದೊಡ್ಡಿ;

೨. ಕೂಡಿ, ಗೂಡಿ, ಗೂಡು……..ಗುಳಿ ಗೂಳಿ……….

೩. ಇಲ್, ನೆಲೆ, ಕೋಣೆ, ಮನೆ, ಮಾಡ, ಮಳಿಗೆ, ಅಂಗಡಿ, ಬೀಡು………..ಖೇಡ…….ಗ್ರಾಮ, ಗಾವ, ಗಾವಿ……….

೪. ಊರು, ನಟ್ಟ, ನಾಡು, ಪುರ, ವರ, ಪೇಟೆ, ಪಟ್ಟಣ, ಈಶ್ವರ…….

೫. ಕೋಟೆ, ಹುಡೆ (ಹುಡ್ಯ); ದುರ್ಗ, ಗಡ, ಬಾಯಿ, ಬಾಗಿಲ…..

೬. ಪರಿಗೆ, ಹರವಿ, ಬಡ್ನಿ, ಬಡಾವಣೆ……….

ಎರಡನೆಯ ಬಗೆಯವು

೧ತಿಟ್ಟೆ, ಮಿಟ್ಟೆ, ದಿನ್ನೆ, ದಿಬ್ಬ, ಏರಿ, ಮರಡಿ, ಮಾಡ, ಮಾಳ, ಮಟ್ಟಿ….

೨. ಮಾಳ, ಮಲೆ, ಗುಡ್ಡ, ಬೆಟ್ಟ, ಗಿರಿ, ಪರ್ವತ…..ಪಹಾಡ….

೩. ಕಂಡಿ (ಖಂಡಿ; ಖಿಂಡಿ); ಕಣಿವೆ; ಘಟ್ಟ

೪. ಬಂಡಿ; ಕಲ್ಲು; ಶಿಲೆ….. ಕೊಂಬು; ಕೋಡು…..

೫. ಬಯಲು (ಬೈಲು); ಕಾಡು; ಕಳ; ಅಂಗಳ……ಹಿತ್ತಲು;

೬. ಗುತ್ತ, ಕುಪ್ಪ, ಗುಪ್ಪ, ಕೊಪ್ಪ….ಕಮರಿ, ಕುಂಬಿ, ಏರಿ, ಕುಂದ, ಗುಂದ, ಕೊಂಡ, ಗೊಂಡ, ಗೊಂಡಿ, ಗೊಂದಿ, ಕುಂದರ;

೭. ಪೊಲ; ಪೊಳಲು; ಹೊಲ; ಶೇತ; ಖೇಟ; ತೋಟ; ಗದ್ದೆ; ಮಕ್ಕಿ;

೮. ಏರಿ; ಒಡ್ಡು; ಕಟ್ಟೆ; ಕೆರೆ; ಕುಂಟೆ; ಗುಂಟೆ; ಕೊಳ; ಕೊಳ್ಳ; ಹೊಂಡ; ಬಾವಿ; ಕುಳಿ ಗುಳಿ; ಗುಣಿ; ದೋಣಿ; ಮಡು;

…..ಕೋಡಿ, ಹಳ್ಳ, ಹೊಳೆ, ತೊರೆ, ಸರೋವರ, ಸಮುದ್ರ, ಸಾಂದ್ರ, ಸಾಗರ…. ಇವಲ್ಲದೆ ಅಜೆ, ಅಂಜೆ, ಆಜೆ, ಉಂದ, ಉಂತೆ, ತೋಡು, ಓಡು, ಕುರಕಿ, ಮಂಗಲ, ಮೊಗರು ಮುಂತಾದವುಗಳೂ ಉಂಟು.

ಈ ಹೆಸರುಗಳಲ್ಲಿ ಪೂರ್ವಪದವು ಹಲವೆಡೆಗೆ ಸಂಸ್ಕೃತವಾಗಿದ್ದರೂ ಉತ್ತರಪದವು ಸಾಮಾನ್ಯವಾಗಿ ಕನ್ನಡದ್ದೇ ಆಗಿರುತ್ತದೆ. ಪುರ, ಗ್ರಾಮ (ಗಾವ, ಗಾವಿ), ಅಗ್ರಹಾರ, ವರ, ಈಶ್ವರ, ಗಿರಿ, ದುರ್ಗ ಇಂತಹ ಕೆಲವನ್ನುಳಿದರೆ ಎಲ್ಲವೂ ದೇಸೀಯವೆ ಆಗಿವೆ. ನದಿ ಮತ್ತು ಪರ್ವತಗಳ ಹೆಸರುಗಳು ಮಾತ್ರ ಹೆಚ್ಚಾಗಿ ಸಂಸ್ಕೃತ ಭಾಷೆಯವೇ ಆಗಿವೆ. ಇಷ್ಟಾದರೂ ವರ್ಗೀಕರಣ ಸಮಸ್ಯೆ ಬಗೆಹರಿದಂತೆ ಕಾಣುವುದಿಲ್ಲ. ಅರ್ಥಬಾಹುಳ್ಯ ವೈವಿಧ್ಯಗಳಿಂದಾಗಿ ಆ, ಈ ವರ್ಗಗಳಿಗೆ ಸೇರದ ಹಲವು ಹೆಸರು ಅವುಗಳ ಹೊರಗುಳಿಯುತ್ತವೆ. ಕೆಲವು ಸಾರಿ ಯಾವ ಅರ್ಥಗ್ರಾಹ್ಯ, ಯಾವುದು ತ್ಯಾಜ್ಯ ಎಂಬ ಸಂದೇಹಕ್ಕೆ ಎಡೆಯಾಗುವುದುಂಟು. ಮುಂಡ ಎಂಬುದು ಶಿವನ ಹೆಸರೂ, ಜನಾಂಗದ ಹೆಸರೊ? ಹೊನ್ನೂರು ದೇವರ ಹೆಸರೊ, ವ್ಯಕ್ತಿಯ ಹೆಸರೊ, ಲೋಹದ ಹೆಸರೊ, ಈ ಎಲ್ಲ ಅನುಮಾನಗಳು ಮೂಡುತ್ತವೆ. ನಿಘಂಟುಗಳಿಂದಲೂ ಕರಾರುವಕ್ಕಾದ ಅರ್ಥ ಸಿಗಲಾರದು. ಬೇರೆ ಬೇರೆ ಆಕರಗಳ ನೆರವನ್ನು ಪಡೆದು ಸಂದೇಹಗಳು ಪರಿಹರಿಸಿಕೊಳ್ಳಬೇಕಾಗುತ್ತದೆ. ಆದರೂ ಶಂಬಾ ಜೋಶಿಯವರ ವರ್ಗೀಕರಣ ತತ್ವಗಳನ್ನು ಕೆಲವು ಬದಲಾವಣೆಗಳೊಡನೆ ಸ್ವೀಕರಿಸಬಹುದೆಂದು ತೋರುತ್ತದೆ.