ಕರ್ನಾಟಕದ ಗಮಕ ಕಲೆ ಅತ್ಯಂತ ಪ್ರಾಚೀನವಾಗಿದ್ದು ಕಲಾಕ್ಷೇತ್ರದಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ಆದಿಕವಿ ಪಂಪನ ಕಾವ್ಯಗಳಿಂಧ ಹಿಡಿದು ಇಂದಿನ ಆಧುನಿಕ ಕಾವ್ಯರಚನಾ ಕವಿಗಳ ಕಾವ್ಯಗಳು ಜೀವಂತವಾಗಿದ್ದು ಅವಕ್ಕೊಂದು ಶಾಶ್ವತ ಸ್ಥಾನ ಇಂದು ದೊರೆತಿರುವುದು ಕೇವಲ ಗಮಕಿಗಳಿಂದ ಮಾತ್ರ ಎಂದು ಘಂಟಾಘೋಷವಾಗಿ ಹೇಳಬಹುದು. ಈ ಗಮಕ ಕ್ಷೇತ್ರದಲ್ಲಿ ಕಾವ್ಯಗಳಿಗೆ ಜೀವ ತುಂಬಿ ರಸವತ್ತಾಗಿ ತಮ್ಮ ತುಂಬು ಕಂಠಶ್ರೀಯಿಂದ ಜನಮನ ಗೆದ್ದವರೆಂದರೆ ಗಮಕ ಭಗೀರಥರೆನಿಸಿದ ಸಂ.ಗೋ. ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ಮತ್ತು ಕಳಲೆ ಸಂಪತ್ಕುಮಾರಾಚಾರ್ಯರು. ಈ ಭಗೀರಥತ್ರಯರಲ್ಲಿ ಒಬ್ಬರಾದ ಸಂ.ಗೋ. ಬಿಂದೂರಾಯರ ಶಿಷ್ಯೆಯಾಗಿ ಗಮಕ ಕ್ಷೇತ್ರದ ಮೇರುವಾಗಿ ಬೆಳೆದು ರಾಜ್ಯದಾದ್ಯಂತವೇ ಏಕೆ ರಾಷ್ಟ್ರಾದ್ಯಂತ ಗಮಕ ಕೀರ್ತಿ ಪತಾಕೆಯನ್ನು ಹಾರಿಸಿದ ಪ್ರಪ್ರಥಮ ಮಹಿಳಾ ಗಮಕಿ ವಿದುಷಿ ಶಕುಂತಲಾ ಬಾಯಿ ಪಾಂಡುರಂಗರಾವ್‌ ನಮ್ಮ ನಾಡಿನ ಗಮಕ ಭಾಗೀರಥಿ ಎಂದರೆ ಅತಿಶಯೋಕ್ತಿಯೇನಲ್ಲ. ಕಲಾ ಪ್ರಪಂಚದಲ್ಲಿ ಇಂದು ಮಹಿಳೆ ಅತ್ಯುಚ್ಚ ಸ್ಥಾನವನ್ನು  ಏರಿದ್ದಾಳೆ ಎಂದರೆ ತಪ್ಪಲ್ಲ. ಸುಮಾರು ಆರು ದಶಕಗಳ ಹಿಂದೆ ಮಹಿಳೆಯರು ಕಲಾಭ್ಯಾಸವನ್ನು ಮಾಡುವುದಾಗಲೀ, ವೇದಿಕೆಯಲ್ಲಿ ಕಾರ್ಯಕ್ರಮವನ್ನ ನೀಡುವುದಾಗಲೀ ಸಾಧ್ಯವಿರಲಿಲ್ಲ. ಹಾಗೇನಾದರೂ ಧೈರ್ಯದಿಂದ ಮುನ್ನುಗ್ಗಿದ ಮಹಿಳೆಗೆ ಸಮಾಜದ ಬಹಿಷ್ಕರಣವೇ ಪ್ರಾಪ್ತಿ. ಇಂಥ ನಿರ್ಬಂಧಗಳನ್ನು ನಿಗ್ರಹಿಸಿ ಕಲಾರಂಗದಲ್ಲಿ ಮಹಿಳೆ ತನ್ನ ಸ್ಥಾನ ಸಭದ್ರ ನಿಲ್ಲುವಂತೆ ಶ್ರಮಿಸಿದ್ದಾಳೆ. ಇದು ಸಾಧಾರಣ ಸಾಧನೆಯಲ್ಲ. ಸಂಗೀತದಲ್ಲಿ ಡಿ.ಕೆ. ಪಟ್ಟಮ್ಮಾಳ್‌, ನೃತ್ಯದಲ್ಲಿ ರುಕ್ಮಿಣಿದೇವಿ, ಸಮಾಜ ಸೇವೆಯಲ್ಲಿ ಕಮಲಾದೇವಿ, ಗಮಕದಲ್ಲಿ ಶಕುಂತಲಾ ಬಾಯಿ ಪಾಂಡುರಂಗರಾವ್‌ ಅವರುಗಳ ಹೆಸರುಗಳು ಚಿರಸ್ಥಾಯಿಯಾಗಿ ನಿಲ್ಲುವಂಥಾದ್ದು.

ಇವರೆಲ್ಲರೂ ಸಂಪ್ರದಾಯಸ್ಥ ಕುಲೀನ ಮನೆತನದಿಂದ ಬಂದವರಾದರೂ ತಮ್ಮ ದಿಟ್ಟನಿಲುವಿನಿಂದ ಕಲಾಪ್ರಪಂಚದಲ್ಲಿ ಮಹಿಳೆಗೆ ಉನ್ನತ ಸ್ಥಾನ ದೊರೆಯಲು ರೂವಾರಿಗಳೆನಿಸಿದವರು. ಗಮಕ ರಂಗದಲ್ಲಿ ಪ್ರಥಮ ಮಹಿಳಾ ಗಮಕಿಯಾಗಿ ರಾಷ್ಟ್ರದುದ್ದಗಲಕ್ಕೂ ಸಂಚರಿಸಿ ತಮ್ಮ ಕಂಚಿನ ಕಂಠದಿಂದ ಶೋತೃಗಳನ್ನು ತಣಿಸಿದ ಕೀರ್ತಿ ಇವರಿಗೆ ಮೊದಲು ಸಲ್ಲುತ್ತದೆ. ಪ್ರಾಚೀನ ಕಾವ್ಯಗಳೇ ಅಲ್ಲದೆ ಇತ್ತೀಚಿನ ಆಧುನಿಕ ಕಾವ್ಯಗಳೆನಿಸಿದ ಅಂದರೆ ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ-ಕುವೆಂಪುರವರ ರಾಮಾಯಣದರ್ಶನಂ, ಅನಂತಪದ್ಮನಾಭರಾಯರ ಶ್ರೀ ತುಲಸೀರಾಮಾಯಣ, ಕೃಷ್ಣಚರಿತಾಮೃತಮ್‌, ಡಿ.ವಿ.ಜಿಯವರ ರಾಮಪರೀಕ್ಷಣಂ ಇತ್ಯಾದಿ ಕಾವ್ಯಗಳು, ಮಾಸ್ತಿಯವರ ರಚನೆಗಳೇ ಅಲ್ಲದೆ ಇತ್ತೀಚೆಗೆ ಪ್ರಕಟಗೊಂಡ ವಿ.ಕೃ.ಗೋಕಾಕರ ‘ಭಾರತಸಿಂಧುರಶ್ಮಿ’ಯನ್ನು ಪ್ರಥಮ ಬಾರಿಗೆ ವಾಚಿಸಿದ ದಾಖಲೆಯೂ ಶಕುಂತಲಾಬಾಯಿಯವರಿಗೆ ಸಲ್ಲತಕ್ಕದ್ದು.

ಇವರ ಎಲ್ಲಾ ಏಳಿಗೆಗೆ ಕೀರ್ತಿ ಯಶಸ್ಸಿಗೆ ಕಾರಣರಾದವರು ಈಕೆಯ ಪತಿ ಬಿ.ಶ್ರೀ. ಪಾಂಡುರಂಗರಯರು. ತಮ್ಮ ಸಹಧರ್ಮಿಣಿಯಲ್ಲಿ ಸುಪ್ತವಾಗಿದ್ದ ನಾದಸಸಿಗೆ ನೀರೆರೆದು ಪೋಷಿಸಿ ಬೆಳೆಸಿದವರು. ಪಾಂಡುರಂಗರಾಯರದು ಸ್ನೇಹ ಶೀಲ ವ್ಯಕ್ತಿತ್ವ. ಯಾರೇ ಆಗಲಿ ಅವರ ಭುಜದ ಮೇಲೆ ಕೈ ಹಾಕಿ ಆತ್ಮೀಯ ಗೆಳೆಯರಂತೆ ಮಾತಾನಾಡಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಸಂಮೋಹಕ ಶಕ್ತಿ ಅವರಲ್ಲಿತ್ತು. ಅಲ್ಲಿ ಹಿರಿಯ ಕಿರಿಯ ಎಂಬ ತಾರತಮ್ಯಕ್ಕೆ ಎಡೆಯಿರಲಿಲ್ಲ. ಎಲ್ಲರಲ್ಲೂ ಒಂದೇ ವಿಧವಾದ ಆತ್ಮೀಯತೆ. ಶಕುಂತಲಾಬಾಯಿಯವರ ವಾಚನಕ್ಕೆ ರಾಯರದ್ದೇ ವ್ಯಾಖ್ಯಾನ. ಆಕೆಯ ಗಾನಧಾರೆಗೆ ಪಾಂಡುರಂಗರಾಯರ ವ್ಯಾಖ್ಯಾನದ ವಾಗ್ಝರಿ ಹಾಲು-ಜೇನಿನಂತೆ ಮಿಳಿತವಾಗಿತ್ತು. ಶಕುಂತಲಾಬಾಯಿಯವರದು ಗಂಡುಶಾರೀರ. ಹೇಗೆ ಎಳೆದರೂ ಲೀಲಾಜಾಲವಾಗಿ ಹರಿಯುತ್ತಿತ್ತು ರಸಧಾರೆ. ಬಿಳಿ ಒಂಧನೇ ಮನೆ ಶ್ರುತಿಯಲ್ಲಿ ಸುಲಲಿತವಾಗಿ ಹಾಡುತ್ತಿದ್ದರು. ಇದಕ್ಕೆ ಅವರಿಗೆ ಬಾಲ್ಯದಲ್ಲಿ ದೊರೆತ ಸಂಗೀತ ಶಿಕ್ಷಣ ಭದ್ರ ಬುನಾದಿಯಾಯಿತು. ವಿದ್ವಾನ್‌ ಚಿಂತಲಪಲ್ಲಿ ಕೃಷ್ಣಮೂರ್ತಿಯವರಲ್ಲಿ ಇವರಿಗೆ ಸಾಕಷ್ಟು ಸಂಗೀತ ಪಾಠವಾಗಿತ್ತು.

ಮಹಿಳಾ ಗಮಕಿಯ ಉದಯ: ಶಕುಂತಲಾಬಾಯಿ ಹುಟ್ಟಿದ್ದು ೧೯೨೧ರಲ್ಲಿ. ನಾರಾಯಣಕೆರೆ ವೆಂಕೋಬರಾಯರು ಹಾಗೂ ಸುಂದರಾಬಾಯಿಯವರ ಶ್ರೀಮಂತ ಪುತ್ರಿ. ವೆಂಕೋಬರಾಯರು ರೈಲ್ವೆ ಗಾರ್ಡ್‌ ಆಗಿದ್ದುದರಿಂದ ಅವರನ್ನು ಗಾರ್ಡ್‌‌ವೆಂಕೋಬರಾಯರೆಂದೇ ಎಲ್ಲರೂ ಆತ್ಮೀಯವಾಗಿ ಕರೆಯುತ್ತಿದ್ದರು. ಸುಂದರಾಬಾಯಿಯವರ ಮಲತಮ್ಮನೇ ಪಾಂಡುರಂಗರಾಯರು. ಬಿಂಗೇಪುರದ ಶ್ರೀನಿವಾಸರಾಯರು ಭಾಗೀರಥಮ್ಮನವರ ಏಕೈಕ ಪುತ್ರ. ಸುಂದರಾಬಾಯಿ ಭಾಗೀರಥಿಬಾಯಿಯವರ ಮಲಮಗಳು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕಿಂಡ ರಾಯರಿಗೆ ತಾಯಿ ಹಾಗೂ ಅವರ ಚಿಕ್ಕಮ್ಮನೇ ಆಸರೆ.

ಭಾಗೀರಥಿಬಾಯಿಗೆ ಮೊದಲಿಂದಲೂ ಮಗ ಪಾಂಡುರಂಗನಿಗೆ ಮೊಮ್ಮಗಳು ಶಕುಂತಲೆಯನ್ನೇ ತಂದುಕೊಳ್ಳಬೇಕೆಂಬ ಆಸೆಯಿತ್ತು. ಒಂದು ರೀತಿಯಲ್ಲಿ ರಾಯರು ಶಕುಂತಲೆಗೆ ಸೋದರ ಮಾವ. ಪಾಂಡುರಂಗನಿಗೆ ಹದಿನಾರು ತುಂಬುತ್ತಿದ್ದಂತೆಯೇ ಮದುವೆಯ ತಯಾರಿ ನಡೆಯಿತು. ಆಗ ಶಕುಂತಲೆಗೆ ಎಂಟುವರ್ಷ.ಮದುವೆ ಎಂದರೇನು ಎಂದು ತಿಳಿಯವಷ್ಟು ವಯಸ್ಸೇನಲ್ಲ. ಜೊತೆಗೊಬ್ಬ ಆಟಕ್ಕೆ ಸಿಗುತ್ತಾನೆ  ಎಂಬಷ್ಟೇ ತಿಳಿವಳಿಕೆಯ ಪ್ರಾಯ. ತಂದೆ ತಾಯಿ ತಮಗೆ ಚೊಚ್ಚಲ ಮಗು ಹೆಣ್ಣು ಹುಟ್ಟಿದಾಗಲೇ ಈ ಮಗುವನ್ನು ನಮ್ಮ ‘ಪಾಂಡಣ್ಣ’ನಿಗೇ ಮೀಸಲು ಎಂದು ತೊಟ್ಟಿಲಿಗೆ ಬಾಸಿಂಗ ಕಟ್ಟಿ ಬಿಟ್ಟಿದ್ದರಂತೆ. ಹೀಗೆ ೧೯೩೦ರ ಮೇ ತಿಂಗಳ ೫ನೇ ತಾರೀಖಿನಂದು ಶಕುಂತಲೆ ಪಾಂಡುವಿನ ಬಾಳ ಸಂಗಾತಿಯಾದಳು. ಎಂಟುದಿನಗಳ ಆಗಿನ ಕಾಲದ ಮದುವೆ ಅದ್ದೂರಿಯಿಂದಲೇ ನಡೆಯಿತು.

ಶಕುಂತಲೆಗೆ ಚಿಕ್ಕಂದಿನಿಂದಲೇ ಅವರ ತಾಯಿ ಹಸ ಕರೆವ ಹಾಡು, ದೇವರ ನಾಮಗಳು, ಆರತಿ ಹಾಡು, ಗೌರಿ ಹಾಡು ಮುಂತಾದುವುಗಳನ್ನು ಕಲಿಸಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವೂ ಆಗಿತ್ತು. ದೈವದತ್ತವಾಗಿ ಒದಗಿ ಬಂದ ಸಿರಿಕಂಠ. ಆಕೆ ಸುಲ್ತಾನಪೇಟೆಯ ಆರ್ಯಬಾಲಿಕಾ ಪಾಠಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿನ ಕನ್ನಡ ಅಧ್ಯಾಪಕಿ ಸುಂದರಮ್ಮನವರು ಭಾವಪೂರ್ಣವಾಗಿ ಹಾಡುತ್ತಿದ್ದ ಶಕುಂತಲೆಯ  ಪ್ರತಿಭೆಯನ್ನು ಗುರುತಿಸಿ ನಾಟಕಗಳಲ್ಲಿ ಸೇರಿಸಿಕೊಂಡು ಅಭಿನಯದ ಶಿಕ್ಷಣವನ್ನೂ ನೀಡಿದ್ದರು. ನಾಟಕ ಚಲನಚಿತ್ರ ರಂಗದಲ್ಲಿ ಅಪಾಋ ಹೆಸರು ಮಾಡಿದ್ದ ನಟಿ ಎಂ.ವಿ. ರಾಜಮ್ಮ ಮತ್ತು ಎಸ್‌.ಕೆ. ಪದ್ಮಾದೇವಿ ಇವರ ಸಹಪಾಠಿಗಳಾಗಿದ್ದರು. ಸಂಗೀತದಲ್ಲೂ ಸಾಕಷ್ಟು ಪಾಠವಾಗಿದ್ದರಿಂದ, ಹಾಡಿಕೆಯಲ್ಲೂ ಈಗಾಗಲೇ ಪಕ್ವತೆ ಬಂದಿತ್ತು.

ಆರ್ಯಬಾಲಿಕಾ ಪಾಠಶಾಲೆಯ ಅಧ್ಯಾಪಕಿ ಸುಂದರಮ್ಮನವರು ಮಕ್ಕಳ ಕೈಲಿ ನಾಟಕಗಳನ್ನಾಡಿಸುತ್ತಿದ್ದ ರೀತಿ, ಮಕ್ಕಳು ಅದಕ್ಕೆ ಸ್ಪಂದಿಸುತ್ತಿದ್ದುದು ಮತ್ತು ಅವರಾಡುತ್ತಿದ್ದ ನಾಟಕಗಳ ಬಗ್ಗೆ ಮೈಸೂರು ಅರಮನೆ ತನಕ ಸುದ್ದಿ ಮುಟ್ಟಿ ಆಗಿನ ಆಳರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟದರಸಿ ಬೆಂಗಳೂರಿಗೆ ಆಗಮಿಸಿದ್ದಾಗ ಅರಸರ ಮನವಿಯಿಂತೆ ಅರಮನೆಯಲ್ಲಿ ರಾಣಿಯವರ ಮುಂದೆ ಈ ಮಕ್ಕಳ ನಾಟಕ ಪ್ರದರ್ಶನ ನಡೆದು ಅಮ್ಮನವರ ಪ್ರಶಂಸೆಗೆ ಪಾತ್ರವಾಗಿದ್ದುವು.

ತನ್ನ ಎಂಟನೆಯ ವಯಸ್ಸಿನಲ್ಲೇ ಇಷ್ಟೊಂದು ಪ್ರತಿಭೆ ಹೊಂದಿದ್ದ ಶಕುಂತಲೆ ಮದುವೆ ಸಂದರ್ಭದಲ್ಲಿ ಉರುಟಣೆ ಹಾಡು ಹಸೆಕರೆವ ಹಾಡುಗಳೇ ಅಲ್ಲದೆ ನಾಟಕದ ಕೆಲವು ಕಂದಪದ್ಯಗಳನ್ನು ಹಾಡಿದಾಗ ಪತ್ನಿಯ ಪ್ರೌಢಿಮೆಗೆ ಮುಗ್ಧರಾದ ಪಾಂಡುರಂಗರಾಯರು ಸಂಸಾರ ಬಂಧನದ ಮಧ್ಯೆ ಈಕೆಯ ಕಲೆ ಕಮರುವುದಕ್ಕೆ ಬಿಡಬಾರದು ಎಂದು ಅಂದೇ ನಿರ್ಧರಿಸಿದರಂತೆ.

ಪಾಂಡುರಂಗರಾಯರು ಸ್ವಾತಂತ್ಯ್ರ ಸಂಗ್ರಾಮದಲ್ಲಿ ಧುಮುಕಿ ರಾಜಕೀಯ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪ್ಪಟ ಗಾಂಧೀವಾದಿಯಾಗಿದ್ದರು . ಈಗ ಸಂಸಾರದ ಪೂರ್ಣ ಜವಾಬ್ದಾರಿ ತನ್ನ ಮೇಲೆ ಬಿದ್ದಿದ್ದು ರಾಜಕೀಯ ರಂಗಕ್ಕೆ ವಿದಾಯ ಹೇಳಿ ಸಂಸಾರ ಬಂಧನಕ್ಕೆ ಸಿಲುಕಿದರು ರಾಯರು.

ಹಾಗಾಗಿ ೧೯೩೦ರಲ್ಲಿ ಲಗ್ನವಾದರೂ ನಿಷೇಕದ ಶಾಸ್ತ್ರ ನಡೆದದ್ದು ಏಳು ವರ್ಷಗಳ  ನಂತರ. ಈ ಶಾಸ್ತ್ರವನ್ನು ಮುಗಿಸಿ ಗಾರ್ಡ್‌‌ವೆಂಕೋಬರಾಯರು ಸುಂದರಮ್ಮ ಮಗಳನ್ನು ಗಂಡನ ಮನೆ ತುಂಬಿಸಿ ಬಂದರು.

ಈ ಹೊತ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ಗಮಕ ತರಗತಿಗಳನ್ನು ಆರಂಭಿಸಿ ಭಾರತವಾಚನ ಪ್ರವೀಣ ಬಿಂದೂರಾಯರನ್ನು ಅಧ್ಯಾಪಕರನ್ನಾಗಿ ನೇಮಿಸಿ ಪ್ರಕಟಣೆ ಹೊರಡಿಸಿತ್ತು. ಶಕುಂತಲಾಬಾಯಿಯಲ್ಲಿ ಸುಪ್ತವಗಿದ್ದ ಗಮಕ ಕಲಾ ಪ್ರತಿಭೆಯನ್ನು ಬೆಳಗಿಸಲು ಇದು ಸಕಾಲಿಕವೆಂದು ಯೋಚಿಸಿದ ಪಾಂಡುರಂಗರಾಯರು ಆಕೆಯನ್ನು ಪರಿಷತ್ತಿನ ಗಮಕ ತರಗತಿಗೆರ ಸೇರಿಸಲು ನಿಶ್ಚಯಿಸಿದರು. ಆಗ ಅವರ ಮನೆ ನಗರ್ತಪೇಟೆಯ ದಾಸೋಪಂತ ಗಲ್ಲಿಯಲ್ಲಿತ್ತು.

ಈಗಾಗಲೇ ಭಾರತ ಕೃಷ್ಣರಾಯರ, ಬಿಂದೂರಾಯರ ಭಾರತವಾಚನಗಳನ್ನು ಕೇಳಿದ್ದ ರಾಯರು ಗಮಕ ಕಲಾಭಿಮಾನಿಯಾಗಿದ್ದರು. ಒಮ್ಮೆ ನಿಟ್ಟೂರು ಶ್ರೀನಿವಾಸರಾಯರ ಮನೆಯಲ್ಲಿ ಬಿಂದೂರಾಯರ ವಾಚನ ಕೇಳಿದ ಪಾಂಡುರಂಗರಾಯರು ಅವರ ವಾಚನ ಶೈಲಿಗೆ ಮಾರು ಹೋಗಿ ಕೊಡಿಸಿದರೆ ಇವರಿಂದಲೇ ಪತ್ನಿಗೆ ಗಮಕ ಶಿಕ್ಷಣವನ್ನು ಕೊಡಿಸಬೇಕೆಂದು ಸಂಕಲ್ಪ ಮಾಡಿಬಿಟ್ಟಿದ್ದರಂತೆ. ಈಗ ‘ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ’ ಅವರ ಸಂಕಲ್ಪ ಪರಿಷತ್ತಿನ ಪ್ರಕಟಣೆಯಿಂದ ಈಡೇರುವಂತಾಯಿತು. ಪತ್ನಿಯ ಸಮ್ಮತಿ ಪಡೆದು ಅವರನ್ನು ಪರಿಷತ್ತಿನ ಗಮಕ ತರಗತಿಗೆ ಸೇರಿಸಿದರು. ಅಲ್ಲಿ ಪಾಠಕ್ಕೆಕ ಬರುತ್ತಿದ್ದವರಲ್ಲಿ ಹತ್ತು ಮಂದಿ ಪುರುಷರು ಈಕೆಯೊಬ್ಬಳೇ ಹೆಣ್ಣು ಮಗಳು ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಡಿ.ವಿ. ಗುಂಡಪ್ಪನವರು ಹಾಗೂ ಇತರ ಪದಾಧಿಕಾರಿಗಳಾಗಿದ್ದ್ ವಿ. ಸೀತಾರಾಮಯ್ಯ, ನಿಟ್ಟೂರು ಶ್ರೀನಿವಾಸರಾಯರು, ಎಂ.ಆರ್. ಶ್ರೀನಿವಾಸಮೂರ್ತಿ, ಎಸ್‌.ವಿ. ರಂಗಣ್ಣ ಸಂದಶ್ನದ ಸಮಯದಲ್ಲಿ ಹಾಜರಿದ್ದು ಶಕುಂತಲಾಬಾಯಿ ಹಾಡುತ್ತಿದ್ದ ರೀತಿಗೆ ಮಾರುಹೋಗಿದ್ದರು. ಹೆಣ್ಣು ಮಗಳು ಏನು ವಾಚನ ಮಾಡುತ್ತಾಳೆ ಎಂಬ ಉಪೇಕ್ಷಾ ಮನೋಭಾವದಿಂದಿದ್ದ ಬಿಂದೂರಾಯರು ತಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕಾಯಿತು. ಜೊತೆಗೆ ಬಂದಿದ್ದ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಅತ್ಯಂತ ಕಿರಿಯ ಹೆಣ್ಣು ಮಗಳು.

ಪರಿಷತ್ತಿನ ಗಮಕದ ಇತಿಹಾಸದಲ್ಲೇ ಗಮಕ ಕಲಿಯಲು ಬಂದ ಪ್ರಥಮ ಮಹಿಳೆ ಈಕೆ. ಮುಂದೆ ಬಿಂದೂರಾಯರು ತಮ್ಮ ಗಮಕ ಕಲಾ ಪಾಂಡಿತ್ಯವನ್ನೆಲ್ಲ ಪೂರ್ಣವಾಗಿ ಈಕೆಗೆ ಧಾರೆಯೆರೆದು ಅವರನ್ನು ‘ಗಮಕ ಶಾರದೆ’ಯನ್ನಾಗಿ ಕಡೆದ ಶಿಲ್ಪಿಯಾದರು. ಕನ್ನಡ ನಾಡಿನಲ್ಲಿ ಹೀಗೊಂದು ಮಹಿಳಾ ಗಮಕಿಯ ಉದಯವಾಯಿತು. ಹೀಗೆ ಛಳಿ ಬಿಟ್ಟು ಗಮಕ ರಂಗಕ್ಕೆ ಧುಮುಕಿ ಇಡೀ ಮಹಿಳಾ ವೃಂದಕ್ಕೆ ಮಾದರಿಯಾದರು ಶಕುಂತಲಾಬಾಯಿ. ಇದನ್ನು ಕಂಡ ಮತ್ತೊಬ್ಬ ಸಾಹಿತಿ ನಾಟಕಕಾರಕ ಸಿ.ಕೆ. ನಾಗರಾಜರಾಯರು ತಮ್ಮ ಪತ್ನಿ ರಾಜಾಮಣಿಯನ್ನು ಗಮಕ ತರಗತಿಗೆ ಸೇರಿಸಿದರು. ಶಕುಂತಲಾಬಾಯಿಗೆ ಜೊತೆಗೊಬ್ಬ ಸಹಪಾಠಿ ದೊರೆತಂತಾಯಿತು. ರಾಜಾಮಣಿಯವರಿಗೆ ವೀಣೆಯೊಂದಿಗೆ ಗಾಯನವೂ ಸೇರಿ ಶಾಸ್ತ್ರೀಯ ಸಂಗೀತ ಪಾಠವಾಗಿತ್ತು. ನಾಗರಾಜರಾಯರು ಪಾಂಡುರಂಗರಾಯರ ಸಹಪಾಠಿ ಹಾಗೂ ಆತ್ಮೀಯ ಗೆಳೆಯರಾಗಿದ್ದರು. ನಿಟ್ಟೂರು ಶ್ರೀನಿವಾಸರಾಯರ ಸೋದರಳಿಯ.

ಟಿ.ಎಸ್‌. ವೆಂಕಣ್ಣಯ್ಯನವರ ಪ್ರಶಂಸೆ: ಬಿಂದೂರಾಯರು ಅತ್ಯಂತ ಮುಂಗೋಪಿ ಜೊತೆಗೆ ನಿಷ್ಠುರವಾದಿ. ಸಮಯ ಪಾಲನೆ ಬಗ್ಗೆ ತುಂಬಾ ಕಟ್ಟುನಿಟ್ಟು. ಹೀಗಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪಾಠಕ್ಕೆ ಹಾಜರಾಗಬೇಕಿತ್ತು. ಅವರಿಗಿಂತ ಮುಂಚೆ ತಾವು ಬಂದು ತಂಬೂರಿ ಶ್ರುತಿ ಮಾಡಿಕೊಂಡು ಕಾಯುತ್ತಿದ್ದರು. ಜೊತೆಗೆ ಗುಂಪಿನ ಪಾಠ ಕ್ರಮವಲ್ಲ ಅವರದ್ದು. ಒಬ್ಬೊಬ್ಬರಿಗೂ ಬಿಡಿ ಬಿಡಿಯಾಗಿ ತುಂಬ ಮುತುವರ್ಜಿಯಿಂದ ಹೇಳಿಕೊಡುತ್ತಿದ್ದರು.

ಒಮ್ಮೆ ಲೀ ರೀತಿ ಗಮಕ ತರಗತಿ ನಡೆಯುತ್ತಿದ್ದಾಗ ಮೈಸೂರಿನಿಂದ ಬಂದಿದ್ದ ಪ್ರೊ. ಟಿ.ಎಸ್‌. ವೆಂಕಣ್ಣಯ್ಯನವರು ಬಿಂದೂರಾಯರನ್ನು  ನೋಡಲು ನೇರವಾಗಿ ತರಗತಿ ನಡೆಯುತ್ತಿದ್ದ ಕೋಣೆಗೆ ಬಂದರು. ಇಬ್ಬರೂ ಚಿತ್ರದುರ್ಗದವರೇ ತಳುಕಿನಲ್ಲೇ ಜನಿಸಿದವರು. ಆತ್ಮೀಯ ಗೆಳೆಯರು. ಪಾಠ ನಡೆಯುತ್ತಿದ್ದುದರಿಂದ ಜೊತೆಗೆ ಗಮಕಾಸ್ತಿಯುಳ್ಳವರಾದ್ದರಿಂದ ಮೌನವಾಗಿ ವಿದ್ಯಾರ್ಥಿಗಳು ಹಾಡುವುದನ್ನು ಕೇಳುತ್ತಾ ಕುಳಿತರು. ಪಾಠಕ್ರಮದ ಕುರಿತು ತಮ್ಮ ತೃಪ್ತಿ ವ್ಯಕ್ತ ಪಡಿಸಿದರು. ಅದರಲ್ಲೂ ಅವರ ಗಮನ ವಿಶೇಷವಾಗಿ ಶಕುಂತಲಾಬಾಯಿಯ ಹಾಡಿನ ವೈಖರಿಯ ಕಡೆ ಹೋಗಿ ಹುಡುಗಿಯಾದರೂ ಯಾವ ಅಳುಕೂ ಇಲ್ಲದೆ ಹಾಡುತ್ತಿದ್ದ ರೀತಿ ಆಕೆಯ ಮನೋಧರ್ಮಕ್ಕೆ ಮಾರುಹೋಯಿತು. ತಳುಕಿನ ಈ ಹಿರಿಯ ಚೇತನದ ಮನಸ್ಸಿಗೆ ಮುದ ನೀಡಿತು . ಆಕೆಯ ಪೂರ್ವಾಪರಗಳನ್ನು ವಿಚಾರಿಸಿ “ಈಕೆಯಲ್ಲಿ ನಾಡಿನ ಉದ್ದಾಮ ಗಮಕಿಯಾಗುವ ಎಲ್ಲ ಲಕ್ಷಣಗಳಿವೆ. ಚೆನ್ನಾಗಿ ಮುತುವರ್ಜಿಯಿಂದ ಪಾಠ ಹೇಳಿಕೊಡಿ” ಎಂದು ಉದ್ಗರಿಸಿದರಂತೆ. ಹಿರಿಯರ ವಾಣಿ ಹುಸಿಯಾಗಲಿಲ್ಲ. ಪಾಂಡುರಂಗರಾಯರ ಉತ್ತೇಜನ ತಮ್ಮ ಸತತ ಪರಿಶ್ರಮದ ಫಲವಾಗಿ ಮುಂದೆ ಈಕೆ ನಾಡಿನ ಪ್ರಸಿದ್ಧ ಗಮಕಿಯಾದರು. ಅಂದಿನಿಂದ ಇಂದಿನವರೆಗೆ ಅಂದರೆ ೮೦ರ ಹರೆಯದಲ್ಲೂ ಕುಗ್ಗದ ಹಿಂಗದ ಕಂಠಶ್ರೀಯೊಂದಿಗೆ ಯಶಸ್ಸಿನ ಸೋಪಾನವನ್ನೇರುತ್ತಲೇ ಇದ್ದಾರೆ. ಎಂದೂ ಹಿಂದಿರುಗಿ ನೋಡಿದವರಲ್ಲ. ಈಗ ತಮಗೆ ಬೆಂಗಾವಲಾಗಿ, ವ್ಯಾಖ್ಯಾನಕಾರರಾಗಿ, ಬಾಳ ಸಂಗಾತಿಯಾಗಿ ಉತ್ತೇಜಿಸುತ್ತಿದ್ದ ಪತಿ ಪಾಂಡುರಂಗರಾಯರು ಸನಿಹದಲ್ಲಿಲ್ಲ ಎಂಬ ಕೊರತೆಯೊಂದನ್ನು ಬಿಟ್ಟರೆ ಆಕೆಯ ಗಮಕ ಕಲೆಗೆ ಯಾವ ಕುಂದೂ ಬಂದಿಲ್ಲ.

ಮೊದಲ ಕಾರ್ಯಕ್ರಮ: ಪರಿಷತ್ತಿನ ಗಮಕ ತರಗತಿಗೆ ಸೇರಿದ ಆರು ತಿಂಗಳಿಗೆ ಅದು ನಡೆಸುತ್ತಿದ್ದ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದರು ಶಕುಂತಲಾಬಾಯಿ.

ಮನೆಯಲ್ಲಿ ಪ್ರತಿದಿನ ರಾತ್ರಿ ಶ್ರುತಿ ಶುದ್ಧವಾಗಿ ಅಭ್ಯಾಸ ಮಾಡುತ್ತಿದ್ದುದನ್ನು ಎಂದೂ ತಪ್ಪಿಸಿದವರಲ್ಲ. ಇದನ್ನು ತಪ್ಪದೆ ಗಮನಿಸುತ್ತಿದ್ದವರು ಪಕ್ಕದ ಮನೆಯಲ್ಲಿದ್ದಕ ಆರ್. ಕಲ್ಯಾಣಮ್ಮನವರು. ಶಿಶು ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಮಕ್ಕಳ ಮಂಟಪ ಕಟ್ಟಿ. ‘ಸರಸ್ವತಿ’ ಎಂಬ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಪಾಂಡುರಂಗರಾಯರಿಗೆ ಶಿಶು ಸಾಹಿತ್ಯದಲ್ಲಿ ಆಸಕ್ತಿಯುಂಟು ಮಾಡಿದವರು. ಅವರ ‘ಸುಳ್ಳಿನ ಸೋಲು’ ಎಂಬ ಮಕ್ಕಳ ನಾಟಕವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.

ಶಕುಂತಲಾಬಾಯಿಯವರ ಪ್ರತಿಭೆಯನ್ನು ಗುರುತಿಸಿದ ಕಲ್ಯಾಣಮ್ಮನವರು ಇದು ನಾಲ್ಕುಗೋಡೆಗಳ ಮಧ್ಯೆ ಕೊಳೆಯುವ ಪ್ರತಿಭೆಯಲ್ಲ, ಸಾರ್ವಜನಿಕ ವೇದಿಕೆಗೆ ಬಂದು ಪ್ರಚಾರಕ್ಕೆ ದಾರಿಯಾಗಬೇಕು ಎಂಧು ನಿಶ್ಚೈಸಿ ತಮ್ಮ ಸಹಾನುವರ್ತಿಯಾಗಿದ್ದ ಟಿ.ಎಂ. ಆರ್. ಸ್ವಾಮಿಯವರನ್ನು  ಮಧ್ಯವರ್ತಿಯಾಗಿ ಮಾಡಿಕೊಂಡು, ಸಂಪ್ರದಾಯಸ್ಥ ಮನೆಯ ಸೊಸೆಯಾಗಿದ್ದ ಶಕುಂತಲಾಬಾಯಿ ಮೊದಲು ನಿರಾಕರಿಸಿದರೂ ಅನಂತರ ಅತ್ತೆ ಚಿಕ್ಕತ್ತೆಯರನ್ನು ಒಡಂಬಡಿಸಿ ಈಕೆ ಪ್ರಪ್ರಥಮವಾಗಿ ವೇದಿಕೆ ಏರುವಂತೆ ಮಾಡುವಲ್ಲಿ ಯಶಸ್ವಿಯಾದರು.

 

ಇಲ್ಲಿನ ತನಕ ತಮ್ಮ ಗುರುಗಳಂತೆ ಕುಮಾರವ್ಯಾಸನ ಭಾರತಕ್ಕೇ ಅಂಟಿಕೊಂಡಿದ್ದ ಶಕುಂತಲಾಬಾಯಿಯವರನ್ನು ಹೊಸ ಪ್ರಯೋಗಕ್ಕೆ ಪ್ರೇರೇಪಿಸಿದರು ಯಜಮಾನರು. ಪಾಂಡುರಂಗರಾಯರ ಸಲಹೆಯಂತೆ ಚಾಮರಸನ ಪ್ರಭುಲಿಂಗ ಲೀಲೆಯಿಂದ ‘ಮಹದೇವಿಯಕ್ಕನ ವಿರಕ್ತಿ’ ಎಂಬ ಪ್ರಸಂಗವನ್ನೇ ತಯಾರಿ ಮಾಡಿಕೊಂಡು ತಾವೇ ಸ್ವತಃ ರಾಗಗಳನ್ನು ಅಳವಡಿಸಿ ಹಾಡಿ ವಿದ್ವಜ್ಜನರ ಪ್ರಶಂಸೆಗೆ ಪಾತ್ರರಾದರು. ಹೀಗೆ ಈ ದಂಪತಿಗಳು ಇತರ ಕಾವ್ಯದ ಕಡೆಗೂ ಗಮನ ಹರಿಸಲು ಪುಷ್ಟಿ ನೀಡಿತು.

ಕನ್ನಡ ತಾಯ್‌ ನೋಟ-ಶಕುಂತಲೆಯ ಮಾಟ!: ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರಿಗೆ ಅರಮನೆಯಿಂದ ಪ್ರತಿಷ್ಠಿತ ‘ರಾಜಸೇವಾಸಕ್ತ’ ಬಿರುದು ಪ್ರಶಸ್ತಿ ದೊರೆಯಿತು. ಇದಕ್ಕೆ ಕೆಲವು ದಿನ ಮುಂಚೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಪದವಿಯನ್ನು ಪೂಜ್ಯ ಡಿ.ವಿ.ಜಿ. ಯವರಿಂದ ವಹಿಸಿಕೊಂಡಿದ್ದರು. ಇದರ ಕುರುಹಾಗಿ ಕಲ್ಯಾಣಮ್ಮನವರು “ಶ್ರೀ”ಯವರ ಗೌರವಾರ್ಥ ಒಂದು ಸನ್ಮಾನ ಸಮಾರಂಭ ಏರ್ಪಡಿಸಿ ಅಂದು ಶಕುಂತಲಾಬಾಯಿ ವಾಚನ ಮಾಡುವಂತೆ ಕೋರಿದ್ದರು. ಇದು ನಡೆದದ್ದು ೧೯೩೮ರಲ್ಲಿ.

ಸರಿ: ಇಲ್ಲಿ ಪಾಂಡುರಂಗರಾಯರು ಮತ್ತೊಂದು ಪ್ರಯೋಗ ನಡೆಸಿದರು. ಹೇಗೂ ‘ಶ್ರೀ’ ಅವರ ಗೌರವಾರ್ಥ ಕಾರ್ಯಕ್ರಮ. ಅಂದ ಮೇಲೆ ‘ಶ್ರೀ’ ಅವರ ರಚನೆಯನ್ನೇ ಏಕೆ ಹಾಡಬಾರದು? ಎಂದು ಯೋಚಿಸಿ ‘ಕನ್ನಡ ಬಾವುಟ’ದಲ್ಲಿ ಪ್ರಕಟಗೊಂಡಿದ್ದ ‘ಕನ್ನಡ ತಾಯ್‌ನೋಟ’ ಕಾವ್ಯವನ್ನು ಆಯ್ಕೆ ಮಾಡಿಕೊಂಡು ಅದನ್ನು ಗಮಕ ಶೈಲಿಗೆ ಹೊಂದುವಂತೆ ಅಭ್ಯಸಿಸಿ ವಾಚನಕ್ಕೆ ಅಳವಡಿಸಿಕೊಂಡರು. ಇದು ಸುಮಾರು ೨೦ ನಿಮಿಷಗಳ ಅವಧಿಯ ಪ್ರಯೋಗ. ಸನ್ಮಾನ ಸಮಾರಂಭ ೨೬.೧೦.೧೯೩೮ರಂದು ಮೈಸೂರು ಸ್ಕೌಟ್‌ ಹೆಡ್‌ಕ್ವಾರ್ಟರ್ಸ್‌ ಸಭಾಂಗಣದಲ್ಲಿ ಏರ್ಪಾಡಾಗಿತ್ತು. ಶ್ರೀಗಳವರ ಅಭಿಮಾನಿಗಳ ಮಹಾಪೂರವೇ ಅಲ್ಲಿ ಹರಿದಿತ್ತು. ಸಾಂಪ್ರದಾಯಿಕವಾಗಿ ಪ್ರಾರ್ಥನೆ, ಸ್ವಾಗತ ಇತ್ಯಾದಿಗಳು ನಡೆದು ಶಕುಂತಲಾಬಾಯಿಯವರನ್ನು ವೇದಿಕೆಗೆ ಭಾರತವಾಚನಕ್ಕಾಗಿ ಬರಮಾಡಿಕೊಂಡರು. ಎಲ್ಲರೂ ಇವರು ಭಾರತವಾಚನವನ್ನೇ ಮಾಡುತ್ತಾರೆ ಎಂದು ಕಾತರದಿಂದ ನಿರೀಕ್ಷಿಸುತ್ತಿದ್ದರೆ ಅಲ್ಲಿದ್ದವರಿಷ್ಟೇ ಅಲ್ಲ ‘ಶ್ರೀ’ಯವರೂ ಅಚ್ಚರಿ ಪಡುವಂತೆ ‘ಕನ್ನಡ ತಾಯ್‌ ನೋಟ’ವನ್ನು  ಆರಂಭಿಸುವುದರ ಮೂಲಕ ಒಂದು ಮಾಟವನ್ನೇ ಮಾಡಿಬಿಟ್ಟರು.

ವಿಜಯನಗರ ಪತನವಾಗಿ ಅದು ಹಾಳು ಹಂಪಿಯಾದಾಗ ಕನ್ನಡ ತಾಯಿ ಭುವನೇಶ್ವರಿಯ ಅಳಲೇ ಈ ಕಾವ್ಯದ ಕಥಾವಸ್ತು. ಶಕುಂತಲಾಬಾಯಿಯವರ ಕಂಠದಿಂದ ಹೊರಟ ಪದ್ಯದ ಸಾಲುಗಳಲ್ಲಿ ತಾಯಿ ಭುವನೇಶ್ವರಿಯ ಅಳಲು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ತಾವೇ ಸ್ವತಃ ಭುವನೇಶ್ವರಿಯಾಗಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೋ ಎನ್ನುವಷ್ಟು ಮಾರ್ದವತೆಯಿಂದ ಕೂಡಿತ್ತು. ‘ಶ್ರೀ’ಯವರು ತಮ್ಮನ್ನು ತಾವೇ ಮರೆತು ಆಲಿಸುತ್ತಿದ್ದರು. ಗಾಯಕಿ ಕಾವ್ಯದಲ್ಲೇ ಲೀನವಾಗಿ ಬಿಟ್ಟಿದ್ದರು. ತಮ್ಮ ರಚನೆಯಲ್ಲಿ ಇಂಥ ಮಾರ್ದವತೆಯಿದೆ ಎಂಬ ಅರಿವು ಮೂಡಿದ್ದೆ ಈ ವಾಚನ ಕೇಳಿದ ನಂತರ. ‘ರವಿ ಕಾಣದ್ದನ್ನ ಕವಿ ಕಿಂಡ-ಕವಿ ಕಾಣದ್ದನ್ನ ಗಮಕಿ ಕಂಡ’ ಎಂಬ ನಾಣ್ಣುಡಿ ಇಲ್ಲಿ ಸ್ಪಷ್ಟವಾಗಿತ್ತು. ‘ಶ್ರೀ’ಯವರು ಬಾಷ್ಪಪೂರಿತರಾಗಿದ್ದರು.

“ಚೆಲುವೆಯರ ಚೆನ್ನಿಗರಾ, ಹಿರಿಯ ತಾಯ್‌ ಮಕ್ಕಳಿರಾ ಒಡಹುಟ್ಟಿದವರಾ

ಒಸಗೆ ನುಡಿ ಕೇಳಿದಿರಾ, ತಾಳಿದಿರಾ ಎದೆಯಲ್ಲಿ ತಾಳಿ ಬಾಳುವಿರಾ”

ಒಕ್ಕೂರಲೆಲ್ಲರೂ ಕೂಗಿ ಈ ಒಕ್ಕೂಗ, ಈ ಹಿರಿಯ ಕೂಗ,

ಸಿರಿಗಡನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ತಾಯ್‌ ಬಾಳ್ಗೆ-ಗೆಲ್ಗೆ

ಎಂಧು ಉಚ್ಚ ಕಂಠದಿಂದ ಹಾಡಿ ತಂಬೂರಿಯನ್ನೇ ಕೆಳಗಿಟ್ಟಾಗ ಸಭೆ ಅದ್ಭುತ ಕರತಾಡನದೊಂದಿಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿತು. ಇದು ಸಾಕಷ್ಟು ಪ್ರಚಾರಗೊಂಡು ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ ಕರ್ನಾಟಕ ಸಂಘ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸ್ಥಾಪಿತವಾಗಿದ್ದ ಖಾಸಗಿ ಆಕಾಶವಾಣಿ ಕೇಂದ್ರ ಹಾಗೂ ಇತರ ಅನೇಕ ಸಂಘ ಸಂಸ್ಥೆಗಳಿಂದ ‘ಕನ್ನಡ ತಾಯ್‌ ನೋಟದ’ ವಾಚನಕ್ಕೆ ಆಹ್ವಾನಗಳು ಬಂದವು.

ಆ ಹೊತ್ತಿಗೆ ‘ಶ್ಲೋಕ ಸಂಗೀತ’ರೆಂದು ಪ್ರಸಿದ್ಧರಾಗಿ ಶ್ರೀಯವರ, ವೀ.ಸೀ.ಯವರ ಕವನಗಳನ್ನೇ ಹಾಡಿ ಹೆಸರು ಗಳಿಸಿದ್ದ ಕಳಲೆ ಸಂಪತ್ಕುಮಾರಾಚಾರ್ಯರು ಈಕೆಯ ಕಂಠದ ಮುಂದೆ ನನ್ನ ಶಾರೀರ ಏನೂ ಅಲ್ಲ ಅಂತ ಉದ್ಗರಿಸಿ ತಮ್ಮ ಪ್ರಶಂಸೆ ವ್ಯಕ್ತ ಪಡಿಸಿದರಂತೆ.

ಕೇವಲ ಮೈಸೂರು ಬೆಂಗಳೂರುಗಳಲ್ಲದೆ ಮದರಾಸು, ದೆಹಲಿ, ಮುಂಬೈಗಳಲ್ಲೂ ಈಕೆಯ ಕಂಠದ ಮೂಲಕ ‘ಕನ್ನಡ ತಾಯ್‌’ ವಿಜೃಂಭಿಸಿದಳು. ಈ ನಿಟ್ಟಿನಲ್ಲಿ ತಾಯಿ ಭುವನೇಶ್ವರಿಗೆ ಸ್ವಲ್ಪ ಮಟ್ಟಿಗಾದರೂ ಸಮಾಧಾನ ತಂದಿರಬಹುದು.

ಹೀಗೆ ಭಾರತ ವಾಚನಕ್ಕೆ ಅಂಟಿಕೊಳ್ಳದೆ ಶಕುಂತಲಾಬಾಯಿ ಆದಿಕವಿ ಪಂಪನಿಂದ ಹಿಡಿದು ಎಲ್ಲ ಛಂದಸ್ಸುಗಳ ಕಾವ್ಯಗಳನ್ನು ವಾಚಿಸುವುದರ ಮೂಲಕ ಕಾವ್ಯವಾಚನಕ್ಕೆ ಒಂದು ಹೊಸ ಆಯಾಮವನ್ನೇ ಸೃಷ್ಟಿಸಿದರು. ಅದಕ್ಕೆ ಪತಿ ಪಾಂಡುರಂಗರಾಯರ ಒತ್ತಾಸೆ ಬಹುಮುಖ್ಯವಾದುದು.

ಕುವೆಂಪು ಅವರ ರಾಮಾಯಣ ದರ್ಶನಂ ಗಮಕ ಲೋಕಕ್ಕೆ: ಕುವೆಂಪುರವರ ‘ರಾಮಾಯಣ ದರ್ಶನಂ’ ಅವರ ಮೇರು ಕೃತಿ. ಅದರ ರಚನೆಯ ಕಾಲದಲ್ಲೇ ಮೊಟ್ಟ ಮೊದಲು ಕೃಷ್ಣಗಿರಿ ಕೃಷ್ಣರಾಯರು ಹಾಡಿ ಇದು ಗಮಕಕ್ಕೆ ಅಳವಡುತ್ತದೆ ಎಂದು ತೋರಿಸಿಕೊಟ್ಟವರು. ಇದಕ್ಕೆ ಜೀವ ತುಂಬಿದವರು ಶಕುಂತಲಾಬಾಯಿ. ಇದು ಅವರ ಅಚ್ಚುಮೆಚ್ಚಿನ ಕಾವ್ಯ. ಸ್ವತಃ ಪುಟ್ಟಪ್ದನವರೇ ಅವರಿಂದ ವಾಚನ ಮಾಡಿಸಿ ಕೇಳಿ ಆನಂದಪಟ್ಟು ತಮ್ಮ ಸ್ವಹಸ್ತಾಕ್ಷರವಿರುವ ಗ್ರಂಥವನ್ನು ಶಕುಂತಲಾಬಾಯಿಗೆ ನೀಡಿದ್ದಾರೆ. ಅಂತೆಯೇ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ‘ಗೋಲ್ಕೊಥಾ’ ಕಾವ್ಯವನ್ನು ಸಹ ಅವರ ಸಮ್ಮುಖದಲ್ಲೇ ವಾಚನ ಮಾಡಿ ಅವರಿಂದ ‘ನೀವು ನನ್ನ ಕಾವ್ಯಕ್ಕೆ ಧ್ವನಿಕೊಟ್ಟಿರಿ, ನನ್ನದು ಲೇಖನಿ ಮಾತ್ರ ಧ್ವನಿ ನಿಮ್ಮದು’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬಿ.ಎಂ. ಶ್ರೀಯವರಂತೂ ಅವರ ವಾಚನ ಕೇಳಿ “ಶಕುಂತಲಾಬಾಯಿ ನಿಜಕ್ಕೂ ಶ್ರೇಷ್ಟಗಮಕಿ, ಕರ್ನಾಟಕದ ದೊಡ್ಡ ಆಸ್ತಿ. ಈ ಆಸ್ತಿಗೆ ಪಾಂಡುರಂಗರಾವ್‌ ಟ್ರಸ್ಟಿ” ಎಂದು ಉದ್ಗರಿಸಿದರಂತೆ.

ರಾಷ್ಟ್ರೀಯ ಕಾರ್ಯಕ್ರಮದಲ್ಲಿ: ಆಕಾಶವಾಣಿ ಕಲಾವಿದೆಯಾಗಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೆಹಲಿ ಆಕಾಶವಾಣಿಯಿಂದ ಗಮಕವಾಚನ ಮಾಡಿದ ಪ್ರಥಮ ಗಮಕ ವಿದುಷಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಂತೆಯೇ ಭೀಮಕವಿ ವಿರಚಿತ “ರಾಘವೇಂದ್ರ ಗುರೂಜಿ” ಎಂಬ ಕಾವ್ಯಕ್ಕೆ ಕಂಠದಾನ ಮಾಡಿ ಗ್ರಾಮಫೋನ್‌ ಕಂಪನಿಯೊಂದರಲ್ಲಿ ಹಾಡಿದ ಮತ್ತೊಬ್ಬ ಮಹಿಳಾ ಗಮಕಿ ಎನಿಸಿಕೊಂಡಿದ್ದಾರೆ. ಈ ಮೊದಲು ಗ್ರಾಮಫೋನ್‌ ಕಂಪೆನಿಗೆ ಕಾವ್ಯವಾಚನ ಮಾಡಿದವರೆಂದರೆ ಹಾಡಿನ ನಾಗಮ್ಮನವರು.

ಪ್ರಶಸ್ತಿ ಗೌರವ, ಸನ್ಮಾನಗಳು: ವಿದುಷಿ ಶಕುಂತಲಾಬಾಯಿಯವರನ್ನು ಗೌರವಿಸದ, ಸನ್ಮಾನಿಸದ ಸಂಸ್ಥೆಗಳು ರಾಷ್ಟ್ರದಲ್ಲೇ ಇಲ್ಲವೆಂದರೆ ಅತಿಶಯೋಕ್ತಿಯೇನಲ್ಲ. ಆಸೇತು ಹಿಮಾಚಲದವರೆಗೂ ಇವರ ಕೀರ್ತಿ ಪಸರಿಸಿದೆ. ದೆಹಲಿ, ಕಲ್ಕತ್ತ, ಮುಂಬೈ, ವಾರಣಾಸಿ, ತಿರುಪತಿ, ಹೈದರಾಬಾದ್‌,ಚೆನ್ನೈನ ಅನೇಕ ಸಂಸ್ಥೆಗಳು ಇವರ ಕಾವ್ಯರಸಧಾರೆಗೆ ಮೆಚ್ಚಿ ಗೌರವಿಸಿ ಸನ್ಮಾನಿಸಿವೆ.

೧೯೬೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೬ರಲ್ಲಿ ರಾಜೋತ್ಸವ ಪ್ರಶಸ್ತಿ, ೨೦೦೧ರಲ್ಲಿ ಪ್ರತಿಷ್ಠಿತ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರಶಸ್ತಿ ಇವರಿಗೆ ಸಂದಿದೆ. ಬೆಂಗಳೂರಿನ ಎಲ್ಲ ಪ್ರತಿಷ್ಠಿತ ಗಮಕ ಸಂಗೀತ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ನಡೆಸುವ ಗಮಕಗೋಷ್ಠಿಗೆ ೧೯೭೯ರಲ್ಲಿ ಅಧ್ಯಕ್ಷರಾಗಿ ಇವರನ್ನು ಆಯ್ಕೆ ಮಾಡಿ ಗೌರವಿಸಿದೆ.

ಗಮಕ ಶಾರದೆ: ಶಕುಂತಲಾಬಾಯಿಯವರಿಗೆ ಅರವತ್ತು ವರ್ಷ ತುಂಬಿದಾಗ ಅವರ ಅಭಿಮಾನಿಗಳು, ಶಿಷ್ಯವರ್ಗದವರೂ ಸೇರಿ ಒಂದು ಅಭಿನಂದನಾ ಗ್ರಂಥವನ್ನು ಹೊರತಂದು ಆಕೆಯನ್ನು ಗಮಕ ಶಾರದೆ ಎಂದು ಗೌರವಿಸಿದ್ದಾರೆ. ಸಾಹಿತಿಗಳು ಇವರನ್ನು ಸಹೃದಯ ಶ್ರೀಯಾಗಿ ಕಂಡರೆ, ಗಮಕಿಗಳು ಗಮಕ ಶ್ರೀಯಾಗಿ ಕೊಂಡಾಡಿದ್ದಾರೆ. ಬಂಧುವರ್ಗದವರಿಗೆ ಬಂಧುಶ್ರೀಯಾಗಿ ಪತಿ ಪಾಂಡುರಂಗರಾಯರಿಗೆ ಆತ್ಮಶ್ರೀಯಾಗಿ ಈ ಗ್ರಂಥದಲ್ಲಿ ವಿಜೃಂಭಿಸಿದ್ದಾರೆ.

ಈಗ ಎಂಬತ್ತೆರಡರ ಹೊಸ್ತಿಲಿನಲ್ಲಿರುವ ಶಕುಂತಲಾಬಾಯಿ ಮಗ ಮೋಹನರವ್‌, ಸೊಸೆ ಶೈಲಶ್ರೀ, ಹೆಣ್ಣುಮಕ್ಕಳು,ಅಳಿಯಂದಿರು ಮೊಮ್ಮಕ್ಕಳ ಮಧ್ಯೆ ಇದ್ದು ತಮ್ಮ ಗಮಕ ಕಲಾರಾಧನೆಯನ್ನು ಮಾಡುತ್ತಿದ್ದಾರೆ. ಆದರೆ ಅವರ ಗಮಕ ಕಲೆಯ ಸ್ಪೂರ್ತಿ ಚೇತನ, ಗಮಕವೆಂಬ ಆಸ್ತಿಯ ಟ್ರಸ್ಟಿ      ಪಾಂಡುರಂಗರಾಯರು ಈಗ ಇಲ್ಲ. ಅವರ ಉತ್ತೇಜನ, ಸ್ಫೂರ್ತಿ ಇವರ ಗಮಕ ಕಲೆಯ ಅಡಿಗಲ್ಲಾಗಿ ಅವರ ಕಂಠಶ್ರೀಯಲ್ಲಿ ಚಿರಂತನವಾಗಿ ನಿಂತಿದೆ.

“ಗಮಕ ಸರಸ್ವತಿ ಗೆಲ್ಗೆ; ಗಮಕ ಶಾರದೆ ಬಾಳ್ಗೆ”.