ನಮ್ಮ ದೇಶ ಭಾರತ. ಇದಕ್ಕೆ ‘ಭರತಖಂಡ’, ‘ಭರತ ಭೂಮಿ’ ಎಂದೂ ಹೆಸರುಂಟು. ಹೀಗೆ ಹೆಸರು ಬರಲು ಕಾರಣ ‘ಭರತ’. ಇವನು ಕುರುವಂಶದ ಕುಲದೀಪಕ. ದುಷ್ಯಂತ ಶಕುಂತಲೆಯರ ಪ್ರಿಯಪುತ್ರ. ಇವನು ಇಡೀ ಭಾರತವನ್ನು ಆಳಿದ ಚಕ್ರವರ್ತಿ ಎಂದು ಹೇಳುತ್ತಾರೆ.

ಪುರುವಂಶದ ಅರಸರು ಪ್ರಸಿದ್ಧರಾದವರು. ಇವರಲ್ಲಿ ಅನೇಕರು ರಾಜರ್ಷಿಗಳು. ಭರತನ ತಂದೆಯಾದ ದುಷ್ಯಂತನೂ ಒಬ್ಬ ರಾಜರ್ಷಿ; ತಾಯಿಯಾದ ಶಕುಂತಲೆ ಒಬ್ಬ ರಾಜರ್ಷಿಯ ಮಗಳು. ಶಕುಂತಲೆ ಭರತ ಚಕ್ರವರ್ತಿಯನ್ನು ನಾಡಿಗೆ ನೀಡಿದ ಮಹಾಮಾತೆ.

ಕಣ್ವಾಶ್ರಮ

ರಾಜ ದುಷ್ಯಂತ ಒಮ್ಮೆ ಬೇಟೆಗೆ ಹೊರಟ. ಅನೇಕ ಪ್ರಾಣಿಗಳನ್ನು ಬೇಟೆಯಾಡಿದ. ಕಡೆಗೆ ಒಂದು ಜಿಂಕೆಯ ಬೆನ್ನಟ್ಟಿ ಹೊರಟ. ಪರಿವಾರವೆಲ್ಲ ಹಿಂದೆಯೇ ನಿಂತಿತು. ಈ ಕಾಡಿನಲ್ಲಿ ಬಗೆಬಗೆಯ ಮರಗಳು, ಸಾಧು ಪ್ರಾಣಿಗಳೂ    ದುಷ್ಟ ಪ್ರಾಣಿಗಳೂ ಇದ್ದರೂ ಅವು ಸ್ನೇಹದಿಂದ ಇದ್ದವು. ಅವುಗಳಲ್ಲಿ ಯಾರಿಗೂ ತೊಂದರೆ ಕೊಡದ ಮನೋಭಾವ. ಜಿಂಕೆ ರಾಜನನ್ನು ಇಲ್ಲಿಗೆ ಎಳೆತಂದಿತು.

ಅದು ಆಶ್ರಮದ ವನ. ಆಶ್ರಮವನ್ನು ಸುತ್ತಿ ಹರಿಯುವ ನದಿ ಮಾಲಿನಿಯ ಜುಳುಜುಳು ನಾದ ಕಿವಿಗೆ ಇಂಪು. ನದಿಯ ಸುತ್ತಲೂ ವಿಧವಿಧವಾದ ಮರಗಳು. ಮರಗಳನ್ನು ಆಶ್ರಯಿಸಿರುವ ಹಕ್ಕಿಗಳು; ಅಲ್ಲೆಲ್ಲ ಹರಡಿ ಪ್ರತಿಧ್ವನಿಸುವ ಅವುಗಳ ಚಿಲಿಪಿಲಿ ಧ್ವನಿ. ಹಿತವಾಗಿ ಬೀಸುವ ತಂಗಾಳಿ; ಅದು ಹೊತ್ತು ತರುವ ಸುಗಂಧ; ಹೂವಿಗೆ ಮುತ್ತುವ ದುಂಬಿಗಳ ಝೇಂಕಾರ; ನೆಲದಲ್ಲಿ ಹಸಿರು ಹಾಸಿದಂತೆ ಹುಲ್ಲು; ಅದರ ಮೇಲೆ ಅಲಂಕಾರ ಮಾಡಿದಂತೆ ಉದುರಿರುವ ಹೂವುಗಳು. ಅಲ್ಲಲ್ಲಿ ನಿರ್ಭಯವಾಗಿ ಗರಿಕೆಯನ್ನು ಮೆಲ್ಲುತ್ತಿರುವ ಜಿಂಕೆಗಳು; ಆನಂದದಿಂದ ನರ್ತಿಸುತ್ತಿರುವ ನವಿಲುಗಳು; ಕಾಳನ್ನು ಹೆಕ್ಕುತ್ತಿರುವ ಹಕ್ಕಿಗಳು. ಮುಂದೆ ಹೋದರೆ ಅಲ್ಲಿ ತಪಸ್ಸಿನಲ್ಲಿ ನಿರತರಾಗಿರುವ ಬ್ರಾಹ್ಮಣರು ಕೆಲವರು; ಹೋಮ ಹವನಗಳನ್ನು ಮಾಡುತ್ತಿರುವವರು ಹಲವರು; ವಾದ ವಿವಾದಗಳಲ್ಲಿ ಮುಳುಗಿರುವವರು ಮತ್ತೆ ಕೆಲವರು. ಕೆಲವರು ವೇದಾಧ್ಯಯನ ಮಾಡುತ್ತಿರುವವರು.

ಜಿಂಕೆಯ ಹಿಂದೆ, ಬಿಲ್ಲು ಬಾಣ ಹಿಡಿದು ಬಂದ ರಾಜನನ್ನು ತಡೆದರು ಆಶ್ರಮವಾಸಿಗಳು. “ಆಶ್ರಮದಲ್ಲಿ ಮೃಗವನ್ನು ಕೊಲ್ಲಬಾರದು” ಎಂದು ನಿಷೇದಿಸಿದರು. ರಾಜನು ಅವರ ಆಜ್ಞೆಗೆ ತಲೆಬಾಗಿದ, ಬಿಲ್ಲು ಬಾಣಗಳನ್ನು  ಇಳಿಸಿದ.

ರಾಜನ ಒಳ್ಳೆಯ ಗುಣದಿಂದ ಅವರಿಗೆ ಸಂತೋಷ ವಾಯಿತು. ಅವನು ದುಷ್ಯಂತ ಎಂದು ತಿಳಿದು ಮತ್ತೂ ಹರ್ಷವಾಯಿತು.

ರಾಜಾ ದುಷ್ಯಂತನನ್ನು ತಿಳಿಯದವರಾರು ? ಅವನ ವಂಶ ಹಿರಿಯದು. ಅವನ ಗುಣಗಳೂ ಅಷ್ಟೇ ಹಿರಿಯವು, ಗುರುಹಿರಿಯರಲ್ಲಿ ಗೌರವ, ದೇವರಲ್ಲಿ ಭಯಭಕ್ತಿ, ಸ್ನೇಹಿತರಲ್ಲಿ ಸೌಹಾರ್ದತೆ, ಪತ್ನಿಯರಲ್ಲಿ ಪ್ರೀತಿ, ವಿಶ್ವಾಸ ಗಳು, ಪರಿಜನರಲ್ಲಿ ದಾಕ್ಷಿಣ್ಯ ಮಮತೆ ಇರುವವನು. ಅವನು ಸುಂದರ; ಆರೋಗ್ಯವಂತ, ಸಾಧು ಸ್ವಭಾವ ಉಳ್ಳವನು, ಧರ್ಮಾತ್ಮ, ನಯವಿನಯ ಸಂಪನ್ನ; ಧೀರ, ಶಕ್ತಿವಂತ, ಬುದ್ಧಿವಂತ, ಸತ್ಯವಂತ, ಎಲ್ಲ ವಿದ್ಯೆಗಳನ್ನೂ ತಿಳಿದವನು. ಅವನ ರಾಜ್ಯ ಸುಭಿಕ್ಷವಾಗಿದ್ದಿತು.

ತಾನು ತಲಪಿದುದು ಹಿರಿಯ ತಪಸ್ವಿಗಳಾದ ಕಣ್ವರ ಆಶ್ರಮ ಎಂದು ತಿಳಿದಾಗ ದುಷ್ಯಂತ ಅವರನ್ನು ಕಂಡು ಆಶೀರ್ವಾದ ಪಡೆಯಲು ಬಯಸಿದ. ತನ್ನ ರಾಜಯೋಗ್ಯ ವಾದ ಉಡುಗೆ ತೊಡುಗೆಗಳನ್ನು ಕಳಚಿ, ಸರಳವಾಗಿ ಹೊರಟ.

ಕಣ್ವ ಮಹರ್ಷಿಗಳು ಹತ್ತು ಸಾವಿರ ಶಿಷ್ಯರಿಗೆ ಅನ್ನ, ವಸ್ತ್ರಗಳನ್ನಿತ್ತು ಪೋಷಿಸಿ, ವಿದ್ಯಾಭ್ಯಾಸದ ಹೊಣೆಯನ್ನೂ ಹೊತ್ತಿದ್ದರು. ಇವರಿಗೆಲ್ಲ ವಿದ್ಯೆಯನ್ನು ಕಲಿಸುವ ಶಿಕ್ಷಕರು, ಅಸಂಖ್ಯಾತ ಸಂಶೋಧಕರು, ಅತಿಥಿಗಳು ಇವರೆಲ್ಲರ ಊಟದ ವಾಸದ ವ್ಯವಸ್ಥೆ ಕಣ್ವರ ಜವಾಬ್ದಾರಿಯಲ್ಲಿತ್ತು. ಎಲ್ಲವನ್ನು ನಿರ್ವಹಿಸುವ ಕಣ್ವರು ತಪೋನಿಧಿಗಳು; ಇವರನ್ನು ‘ಕುಲಪತಿ’ ಎಂದು ಕರೆಯುತ್ತಿದ್ದರು. ಇವರ ಗುರುಕುಲವೇ ದೊಡ್ಡ ವಿದ್ಯಾಲಯ, ಧಾರ್ಮಿಕ ಆಧ್ಯಾತ್ಮಿಕ ವಿದ್ಯೆಗಳ ಕೇಂದ್ರ.

ಮುಗ್ದಕನ್ಯೆಯರು

ರಾಜಾ ದುಷ್ಯಂತನು ಆಶ್ರಮಕ್ಕೆ ಬಂದಾಗ ಕಣ್ವರು ಆಶ್ರಮದಲ್ಲಿರಲಿಲ್ಲ. ಪೂಜೆಗಾಗಿ ಸೋಮತೀರ್ಥಕ್ಕೆ ಹೋಗಿದ್ದರು. ಅತಿಥಿಸತ್ಕಾರಕ್ಕಾಗಿ ತಮ್ಮ ಮಗಳನ್ನು ನಿಯೋಜಿಸಿದ್ದರು. ರಾಜ ಆಶ್ರಮದ ಬಳಿ ಬಂದ. ಹತ್ತಿರದಲ್ಲಿಯೇ ಕುಲು ಕುಲು ನಗು ಕೇಳಿಸಿತು; ರಾಜ ಕುತೂಹಲದಿಂದ ಮರದ ಮರೆಯಲ್ಲಿ ನಿಂತನು.

ಮೂವರು ತಾಪಸ ಕನ್ಯೆಯರು, ಕೈಗಳಲ್ಲಿ ಬಿಂದಿಗೆ ಹಿಡಿದು ಗಿಡಗಳಿಗೆ ನೀರೆರೆಯುತ್ತಿದ್ದಾರೆ. ತಪೋವನದ ವೇಷಭೂಷಣಗಳಾದ ನಾರುಡುಗೆ, ತಲೆಯಲ್ಲಿ ಎತ್ತಿ ಕಟ್ಟಿದ ಮುಡಿ; ಪುಷ್ಟಾಲಂಕಾರ. ಯಾವ ಆಭರಣಗಳು ಇಲ್ಲದಿದ್ದರೂ ಸುಂದರಿಯರು. ಇವರ ರೂಪದಿಂದ ರಾಜ ಬೆರಗಾದ. ಒಡವೆಗಳಿಲ್ಲದೆಯೇ ಇವರು ಸಹಜ ಸುಂದರಿ ಯರು. ಇವರಲ್ಲಿ ಒಬ್ಬಳು ಶಕುಂತಲೆ. ಇವಳು ಅನುಪಮ ಸುಂದರಿ; ಕಣ್ವರ ಪುತ್ರಿ. ಕಣ್ವರಿಗೆ ಇವಳ ಮೇಲೆ ಬಹಳ ಪ್ರೀತಿ. ಆಶ್ರಮದ ತರುಲತೆಗಳಲ್ಲಿಯೂ ಅವರಿಗೆ ಹೆಚ್ಚಿನ ಪ್ರೇಮ. ಅದಕ್ಕೆ ಶಕುಂತಲೆಯನ್ನೇ ಗಿಡಬಳ್ಳಿಗಳ ಪೋಷಣೆಗಾಗಿ ನಿಯೋಜಿಸಿದ್ದರು. ಅವಳಿಗೂ ಈ ಕೆಲಸದಲ್ಲಿ ಬಹಳ ಶ್ರದ್ಧೆ, ಆಸಕ್ತಿ. ಅವುಗಳಲ್ಲಿ ಸ್ನೇಹ, ಪ್ರೇಮ. ಅವುಗಳನ್ನು ಸೋದರಿಯರಂತೆ ಕಾಣುತ್ತಿದ್ದಳು. ಆಶ್ರಮದಲ್ಲಿದ್ದ ಎಲ್ಲ ಮರಬಳ್ಳಿಗಳನ್ನೂ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಶಕುಂತಲೆ ಮುಗ್ಧೆ, ಸ್ನೇಹಮಯಿ, ಪ್ರೇಮಮಯಿ. ಅವಳ ಗೆಳತಿಯರು ಅನಸೂಯೆ, ಪ್ರಿಯಂವದೆ. ಇವರೆಲ್ಲರೂ ತಪೋವನದಲ್ಲಿ ಕೂಡಿ ಬೆಳೆದವರು. ಸರಳ ಸ್ವಭಾವದವರು. ಮೋಸವನ್ನು ತಿಳಿಯದವರು.

ಶಕುಂತಲೆ ನವಮಾಲಿಕೆಗೆ ನೀರೆರೆಯುತ್ತಿದ್ದಾಳೆ. ಹೂವಿನ ಮೇಲೆ ಕುಳಿತಿದ್ದ ದುಂಬಿ ಹಾರಿ, ಇವಳ ಮುಖದ ಮೇಲೆರಗಿತು. ಸುಕುಮಾರಿಯಾದ ಶಕುಂತಲೆ ಹೆದರಿ ಓಡಿದಳು. ಭಯದಿಂದ ಅತ್ತ ಇತ್ತ ಹಾರಿದಳು. ದುಂಬಿಯೂ ಎಡೆಬಿಡದೆ ಅವಳ ಹಿಂದೆಯೇ ಹಾರಿತು. ಶಕುಂತಲೆ ಗೆಳತಿಯರನ್ನು ಬೇಡಿದಳು: “ಸಖಿಯರೇ, ಈ ಕೆಟ್ಟ ದುಂಬಿಯಿಂದ ನನ್ನನ್ನು ಕಾಪಾಡಿ,  ಕಾಪಾಡಿ.” ಸಖಿಯರಿಗೆ ಇದು ತಮಾಷೆಯಾಗಿ ಕಂಡಿತು. ಪ್ರಿಯಂವದೆ ಅವಳನ್ನು ಹಾಸ್ಯ ಮಾಡಿದಳು: “ಸಖಿ, ನಿನ್ನ ಮುಖ ಕಮಲದಂತೆ ಸುಂದರವಾಗಿದೆ. ಜೇನನ್ನು ಸವಿಯಲೆಂದು ಅದು ನಿನ್ನ ಹಿಂದೆ ಬರುತ್ತಿದೆ.” ಅನಸೂಯೆ ಸಲಹೆ ನೀಡಿದಳು: “ಆರ್ತರನ್ನು ಕಾಪಾಡುವವನು ರಾಜಾ ದುಷ್ಯಂತ. ಅವನನ್ನೇ ಕರೆ.”

ಈಕೆ ಯಾರು?

ರಾಜ ಅವರನ್ನು ಮಾತನಾಡಿಸಬೇಕೆಂದು ಹಂಬಲಿ ಸುತ್ತಿದ್ದ. ಸರಿಯಾದ ಸಮಯ ಸಿಕ್ಕಿತೆಂದು, ಮರೆಯಿಂದ ಸರಿದು, ಮುಂದೆ ಬಂದ. “ಮುಗ್ಧೆಯರಿಗೆ ಕೇಡುಂಟು ಮಾಡುವವರು ಯಾರು?” ಎಂದು ಕೇಳಿದ. ತಾಪಸ ಕನ್ಯೆಯರಿಗೆ ಆಶ್ಚರ್ಯ. ಕೂಗಿದೊಡನೆ ಬಂದ ಈ ಪುರುಷ ಯಾರು? ಯಾವಾಗ, ಎಲ್ಲಿಂದ, ಹೇಗೆ ಬಂದ? ರಾಜ ಅವರನ್ನು ಕುಶಲಪ್ರಶ್ನೆ ಮಾಡಿದ: “ತಪಸ್ಸು ನಿರ್ವಿಘ್ನವಾಗಿ ನಡೆಯುತ್ತಿದೆಯೇ?” ತಮ್ಮ ಕುತೂಹಲವನ್ನು ಹತ್ತಿಕ್ಕಿ ಅವರು ಕಣ್ವರ ನಿಯಮವನ್ನು ಪಾಲಿಸಲು ಸಿದ್ಧರಾದರು. ಅತಿಥಿ ಸತ್ಕಾರಕ್ಕಾಗಿ ಅರ್ಘ್ಯ, ಪಾದ್ಯ, ಆಹಾರಗಳನ್ನು ತಂದರು. ಅವನನ್ನು ಒಳ್ಳೆಯ ಮಾತುಗಳಿಂದಲೂ ಉಪಚರಿಸಿದರು. ರಾಜ ಇವರ ನಡೆ, ನುಡಿಗಳನ್ನು ಮೆಚ್ಚಿದ. ಸುಂದರನೂ ಗಂಭೀರನೂ ಆದ ಈ ಪುರುಷನನ್ನು ನೋಡಿದೊಡನೆಯೇ ಶಕುಂತಲೆ ಅವನಿಗೆ ಮಾರು ಹೋದಳು. ಆದರೆ ಅವನು ಯಾರೆಂದು ತಿಳಿಯಬೇಕು? ದಿಟ್ಟೆಯಾದ ಅನಸೂಯೆ ಕೇಳಿದಳು, “ತಾವು ಯಾರು? ಯಾವ ರಾಜವಂಶದವರು?” ರಾಜ ನಿಜರೂಪವನ್ನು ಮರೆಮಾಚಿದ. “ನಾನು ಧರ್ಮಾಧಿಕಾರಿ. ಆಶ್ರಮದ ವ್ಯವಸ್ಥೆ ಹೇಗಿದೆ ಎಂದು ತಿಳಿಯಲು ಬಂದಿದ್ದೇನೆ” ಎಂದು ವಿನಯದಿಂದ ಉತ್ತರಿಸಿದ. ರಾಜನಿಗೂ ಶಕುಂತಲೆಯಲ್ಲಿ ಆಸಕ್ತಿ ಉಂಟಾಯಿತು. ‘ಆಕೆ ಯಾರಿರಬಹುದು?’ ಅವರ ಮಾತುಗಳಿಂದ ಅವಳು ಕಣ್ವರ ಪುತ್ರಿಯೆಂದು ತಿಳಿಯಿತು. ‘ಆದರೆ ಕಣ್ವರು ಬ್ರಹ್ಮಚಾರಿಗಳು. ಹೇಗೆ ಇವರ ಮಗಳಾಗುವಳು?’ ಎಂಬ ಸಂದೇಹ ಕಾಡಿತು. ಕಡೆಗೆ ಅನುಸೂಯೆಯನ್ನು ಕೇಳಿದ, “ನಿಮ್ಮ ಗೆಳತಿಯಾದ ಈಕೆ ಯಾರು?”

ಇವಳ ಜನ್ಮವೃತ್ತಾಂತ ಒಂದು ಕುತೂಹಲವಾದ ಕಥೆಯೇ ಸರಿ.

ವಿಶ್ವಾಮಿತ್ರರು ಪ್ರಸಿದ್ಧ ರಾಜರ್ಷಿ. ಒಮ್ಮೆ ಅವರು ಘೋರವಾದ ತಪಸ್ಸಿಗೆ ತೊಡಗಿದರು. ದೇವಲೋಕದಲ್ಲಿದ್ದ ಇಂದ್ರನಿಗೆ ಇದು ತಿಳಿಯಿತು. ಅವನಿಗೆ ತಪಸ್ಸು ಮಾಡುವ ವರನ್ನು ಪರೀಕ್ಷಿಸುವುದೇ ಒಂದು ಹವ್ಯಾಸ. ಇವರನ್ನೂ ಪರೀಕ್ಷಿಸಬೇಕೆಂದು ಯೋಚಿಸಿದ. ಸುಂದರಳಾದ ಮೇನಕೆಯನ್ನು ಕಳಿಸಿದ. ವಿಶ್ವಾಮಿತ್ರರು ಬಹು ದೊಡ್ಡ ತಪಸ್ವಿಗಳು. ಆದರೆ ಅವರು ಮೇನಕೆಯನ್ನು ಕಂಡು ಪ್ರೀತಿಸಿದರು. ಅವರಿಬ್ಬರೂ ಕೆಲವು ಕಾಲ ಸಂಸಾರ ಮಾಡಿದರು. ಮೇನಕೆಗೆ ಒಂದು ಹೆಣ್ಣು ಮಗುವಾಯಿತು. ಆ ಮಗುವೇ ಶಕುಂತಲಾ. ಮೇನಕೆ ಸ್ವರ್ಗಕ್ಕೆ ಹಿಂದಿರುಗಿ ದಳು. ವಿಶ್ವಾಮಿತ್ರರು ತಪಸ್ಸಿಗೆ ಹೊರಟುಹೋದರು. ನೋಡಿಕೊಳ್ಳುವವರಿಲ್ಲದೆ ಮಗು ಒಂಟಿಯಾಗಿ ಉಳಿಯಿತು.

‘ನಿಮ್ಮ ಗೆಳತಿಯಾದ ಈಕೆ ಯಾರು ?’

ಸುತ್ತಲಿದ್ದ ಹಕ್ಕಿಗಳು ಮಗುವನ್ನು ಕಾಪಾಡಲು ಮುಂದೆ ಬಂದವು. ಮಗುವಿನ ಸುತ್ತಲೂ ತಾವೇ ಕೋಟೆ ಯಂತೆ ನಿಂತವು. ಕಾಡಿನಲ್ಲಿದ್ದ ದುಷ್ಟಪ್ರಾಣಿಗಳಿಂದ ಮಗುವನ್ನು ರಕ್ಷಿಸಿದವು. ತಮ್ಮ ಮರಿಗಳಿಗೆ ಆಹಾರ ಕೊಡುವಂತೆ ಮಗುವಿಗೂ ಆಹಾರ ಕೊಡುತ್ತಿದ್ದವು.

ಒಮ್ಮೆ ಅತ್ತ ಬಂದ ಕಣ್ವರು ಆ ಮಗುವನ್ನು ತಾವು ಆಶ್ರಮಕ್ಕೆ ತೆಗೆದುಕೊಂಡು ಹೋಗಿ ಸಾಕಬೇಕೆಂದು ನಿಶ್ಚಯಿಸಿದರು. ಆ ಮಗುವನ್ನು ತಮ್ಮದೆಂದೇ ತಿಳಿದರು.

ಪಕ್ಷಿಗಳಿಗೆ ಸಂಸ್ಕೃತದಲ್ಲಿ ‘ಶಕುಂತ’ ಎಂದು ಹೆಸರು. ಪಕ್ಷಿಗಳು ಕಾಪಾಡಿದ ಮಗುವಿಗೆ ಶಕುಂತಲಾ ಎಂದು ಹೆಸರಿಟ್ಟರು. ಅಂದಿನಿಂದ ಶಕುಂತಲಾ ಕಣ್ವರ ಸಾಕುಮಗ ಳಾದಳು. ಪ್ರಾಣಕ್ಕಿಂತ ಪ್ರಿಯಳಾದ ಪುತ್ರಿಯಾದಳು.

ಈ ವೃತ್ತಾಂತವನ್ನು ದುಷ್ಯಂತ ಶಕುಂತಲೆಯ ಗೆಳತಿಯರಿಂದ ತಿಳಿದ. ಅವರೆಲ್ಲ ಸಂತೋಷದಿಂದ ಮಾತು ಕತೆಯಲ್ಲಿ ಮುಳುಗಿದ್ದರು. ಅಷ್ಟರಲ್ಲಿ ಆಶ್ರಮಕ್ಕೆ ನುಗ್ಗಿದ ಕಾಡಾನೆಯನ್ನು ಓಡಿಸಲು ದುಷ್ಯಂತ ಹೊರಡಬೇಕಾ ಯಿತು. ಆದರೆ ದುಷ್ಯಂತ ಶಕುಂತಲೆಯರ ಮನಸ್ಸು ಒಂದಾಗಿತ್ತು.

ಶಕುಂತಲೆ ದುಷ್ಯಂತನ ಪತ್ನಿ

ಆಶ್ರಮದಲ್ಲಿದ್ದವರೆಲ್ಲ ಸೇರಿ ಒಂದು ಯಾಗವನ್ನು ಮಾಡಬೇಕೆಂದು ಆಲೋಚಿಸಿದರು. ರಾಜನನ್ನು ಯಾಗ ರಕ್ಷಣೆಗಾಗಿ ಆಶ್ರಮದಲ್ಲೇ ನಿಲ್ಲುವಂತೆ ಪ್ರಾರ್ಥಿಸಿದರು. ರಾಜನು ಸಂತೋಷದಿಂದ ಒಪ್ಪಿದ.

ರಾಜ ಯಾಗ ರಕ್ಷಣೆಗಾಗಿ ಟೊಂಕಕಟ್ಟಿದ. ಬಿಲ್ಲು ಬಾಣ ಹಿಡಿದು ನಿಂತ. ತಾಪಸಿಗಳ ಯಾಗ ನಿರ್ವಿಘ್ನವಾಗಿ ನೆರವೇರಿತು. ಎಲ್ಲರೂ ರಾಜನನ್ನು ಕೊಂಡಾಡಿದರು. ಕರ್ತವ್ಯವನ್ನು ಪೂರೈಸಿ, ರಾಜ ಶಕುಂತಲೆಗಾಗಿ ಹುಡುಕುತ್ತಿದ್ದ.

ಇತ್ತ ಶಕುಂತಲೆ, ಆಶ್ರಮಕ್ಕೆ ಬಂದಿರುವ ಆಗಂತುಕನಲ್ಲಿ ಅನುರಾಗವಿಟ್ಟಳು.

ರಾಜನಿಗೆ ಇದು ತಿಳಿದು ಸಂತೋಷವಾಯಿತು. ಅವಳನ್ನು ಮದುವೆಯಾಗುವುದಾಗಿ ಹೇಳಿದ. ಆದರೆ ಶಕುಂತಲೆ ಹಿರಿಯರ ಅನುಮತಿ ಇಲ್ಲದೆ ತಾವು ಮದುವೆಯಾಗುವುದು ಸರಿಯಲ್ಲ ಎಂದು ಹೇಳಿದಳು. ರಾಜನು ಶಕುಂತಲೆಯನ್ನು ಸಮಾಧಾನಪಡಿಸಿದ. ತಮ್ಮಿಬ್ಬರ ಮದುವೆಗೆ ಯಾವ ಆಕ್ಷೇಪಣೆಯೂ ಇರುವುದಿಲ್ಲ, ಕಣ್ವರೂ ಒಪ್ಪುತ್ತಾರೆ ಎಂದು ಅವಳನ್ನು ಒಪ್ಪಿಸಿದ. ಶಕುಂತಲೆ ರಾಜನ ಮಾತಿಗೆ ಒಪ್ಪಿದಳು. ಅನಂತರ ದೊರೆ ಅವಳನ್ನು ಮದುವೆಯಾದ.

ದುಷ್ಯಂತ ತನ್ನ ಹೆಸರು ಇರುವ ಮುದ್ರೆಯುಂಗುರ ವನ್ನು ಶಕುಂತಲೆಗೆ ತೊಡಿಸಿದ.

ದುಷ್ಯಂತನಿಗೆ ಆಶ್ರಮದ ಕೆಲಸ ಮುಗಿಯಿತು. ಅವನು ರಾಜಧಾನಿಗೆ ಹಿಂದಿರುಗುವ ಸಮಯ ಸಮೀಪಿಸಿತು. ಶಕುಂತಲೆಯನ್ನು ಅಗಲಬೇಕಾಯಿತು. ಶಕುಂತಲೆ ಖಿನ್ನಳಾದಳು. ದೊರೆಯನ್ನು ಅಗಲಬೇಕಾದ ದುಃಖ ಒತ್ತರಿಸಿತು. ರಾಜ ಅವಳನ್ನು ಸಮಾಧಾನಪಡಿಸಿದ. ಅವಳನ್ನು ತಾನು ಶೀಘ್ರದಲ್ಲಿಯೇ ಕರೆಸಿಕೊಳ್ಳುವುದಾಗಿ ಮಾತುಕೊಟ್ಟ. “ಈ ಉಂಗುರದಲ್ಲಿರುವ ಅಕ್ಷರಗಳನ್ನು ದಿನಕೊಂದರಂತೆ ಎಣಿಸುತ್ತಿರು. ಅಷ್ಟರಲ್ಲಿಯೇ ಪರಿವಾರ ದವರನ್ನು ಕಳಿಸಿ, ರಾಜಯೋಗ್ಯವಾದ ಮರ್ಯಾದೆ ಗಳೊಡನೆ ಕರೆಸಿಕೊಳ್ಳುತ್ತೇನೆ. ಯೋಚಿಸಬೇಡ” ಎಂದು ಸಂತೈಸಿದ; ರಾಜಧಾನಿಗೆ ಹಿಂದುರಿಗಿದ.

ಇತ್ತ, ಶಕುಂತಲೆ ದುಷ್ಯಂತನನ್ನೇ ನೆನೆಸುತ್ತಿದ್ದಾಳೆ, ಅವನ ಮಾತುಗಳನ್ನೇ ಮೆಲುಕುಹಾಕುತ್ತಿದ್ದಾಳೆ; ಅವನು ಕೊಟ್ಟ ಉಂಗುರವನ್ನೇ ನೋಡುತ್ತಿದ್ದಾಳೆ; ಅವಳ ಪ್ರಪಂಚವೆಲ್ಲ ‘ದುಷ್ಯಂತ’ನೆಂದೇ ಆಗಿದೆ. ದುಷ್ಯಂತ ತನ್ನ ಕಡೆಯವರನ್ನು ಇಂದು ಕಳಿಸಿಯಾನು, ನಾಳೆ ಕಳಿಸಿಯಾನು ಎಂದು ಚಿಂತಿಸುತ್ತಿದ್ದಾಳೆ.

ಶಾಪ – ಪರಿಹಾರ

ಆಶ್ರಮಕ್ಕೆ ಅತಿಥಿಗಳು ಬಂದರು. ಅವರು ಮಹಾ ಪ್ರಸಿದ್ಧರಾದ ದುರ್ವಾಸ ಮಹರ್ಷಿ. ಬಹಳ ಕೋಪಿಷ್ಠರು.  ಶಕುಂತಲೆಗೆ ಅವರು ಬಂದಿದ್ದು ತಿಳಿಯಲೇ ಇಲ್ಲ. ಅತಿಥಿ ಸತ್ಕಾರವನ್ನು ನಿರೀಕ್ಷಿಸಿದ್ದ ದುರ್ವಾಸರಿಗೆ ಯಾರೂ ಕಾಣಿಸಲೇ ಇಲ್ಲ. ಆಶ್ರಮದ ಬಾಗಿಲಿಗೆ ಬಂದ ಋಷಿ ‘ನಾನು ಬಂದಿದ್ದೇನೆ’ ಎಂದು ಕೂಗಿ ಹೇಳಿದರು. ಯಾರೂ ಬರಲಿಲ್ಲ. ತಮ್ಮನ್ನು ಸ್ವಾಗತಿಸುವವರೇ ಇಲ್ಲ ಎಂದು ತಿಳಿದ ಋಷಿಗಳಿಗೆ ಒಡನೆಯೇ ಕೋಪ ಉಕ್ಕಿತು. ಸುತ್ತಲೂ ಮತ್ತೊಮ್ಮೆ ನೋಡಿದರು. ದುಷ್ಯಂತನ ಯೋಚನೆಯಲ್ಲಿ ಮುಳುಗಿದ್ದ ಶಕುಂತಲೆ ಕಾಣಿಸಿದಳು. ತಮ್ಮನ್ನು ಆದರಿಸದ, ಅವಳ ಮೇಲೆ ಕೋಪ ಉಕ್ಕಿತು. ಅತಿಥಿ ಸತ್ಕಾರದಿಂದ ವಿಮುಖಳಾದ ಶಕುಂತಲೆಗೆ ಶಾಪವಿತ್ತರು: “ಬಂದ ಅತಿಥಿಯ ಪರಿವೆಯಿಲ್ಲದೆ, ಯಾರನ್ನು ನೆನೆಸುತ್ತಿರು ವೆಯೋ ಅವರು ನಿನ್ನನ್ನು ಮರೆಯಲಿ!”

ಪಾಪ ! ಶಕುಂತಲೆಗೆ ಏನೊಂದು ತಿಳಿಯದು. ಸಖಿಯರು ಸಹ ದೂರದಲ್ಲಿದ್ದರು. ಪೂಜೆಗಾಗಿ ಹೂವನ್ನು ಬಿಡಿಸುತ್ತಿದ್ದರು. ಅವರಿಗೆ ಆಶ್ರಮದ ಬಾಗಿಲಲ್ಲಿ ಕೂಗು ಕೇಳಿಸಿತು. ಓಡಿಬಂದ ಪ್ರಿಯಂವದೆ ಕಂಡದ್ದು-ಕೋಪ ಗೊಂಡು ಧುಮಧುಮಿಸುವ ದುರ್ವಾಸರನ್ನು. ಕ್ಷಣದಲ್ಲೇ ಊಹಿಸಿದಳು ಏನೋ ಅನರ್ಥ ನಡೆದಿರಬೇಕೆಂದು. ಮುನಿ ತಮ್ಮ ಸಖಿಯ ಮೇಲೆ ಮುನಿದಿದ್ದಾರೆ. ಪ್ರಿಯಂವದೆ ಥರಥರ ನಡುಗಿದಳು. ಮುನಿಗೆ ಅತಿಥಿ ಸತ್ಕಾರ ನಡೆದಿರ ಲಾರದು. ಶಕುಂತಲೆಯಿಂದ ಅಪಚಾರವಾಗಿದೆ ಎಂದು ತಿಳಿದಳು. ಮಹರ್ಷಿಯ ಕಾಲು ಹಿಡಿದಳು. ಸ್ವಲ್ಪ ಶಾಂತರಾದ ದುರ್ವಾಸರು ಶಾಪವನ್ನೂ ಅದಕ್ಕೆ ಪರಿಹಾರವನ್ನೂ ಸೂಚಿಸಿದರು. ‘ಅತಿಥಿಯನ್ನೇ ಮರೆತ ಶಕುಂತಲೆಯನ್ನು ಅವಳ ಪ್ರಿಯತಮನೂ ಮರೆಯುತ್ತಾನೆ. ಆದರೆ ಏನಾದರೂ ಗುರುತನ್ನು ಅವನಿಗೆ ತೋರಿಸಿದಲ್ಲಿ ಇವಳ ನೆನಪುಂಟಾಗುತ್ತದೆ’ ಎಂದು ತಿಳಿಸಿ ಹೊರಟರು. ಇದರಿಂದ ಸಖಿಯರಿಗೆ ಸ್ವಲ್ಪ ಸಮಾಧಾನವಾಯಿತು. ಆದರೂ ಗೆಳತಿಯ ಸ್ಥಿತಿಗಾಗಿ ಮರುಗಿದರು.

ಆಶ್ರಮದಿಂದ ಅರಮನೆಗೆ

ಕಣ್ವರು ಸೋಮತೀರ್ಥದಿಂದ ಹಿಂದಿರುಗಿದರು. ಶಕುಂತಲೆಯ ಒಳಿತಿಗಾಗಿಯೇ ಅವರು ತೀರ್ಥಕ್ಕೆ ಹೋಗಿದ್ದುದು. ಅಲ್ಲಿ ಪೂಜೆಯನ್ನು ಮುಗಿಸಿ ಪ್ರಸಾದ ದೊಡನೆ ಬಂದರು. ಶಕುಂತಲೆ ದುಷ್ಯಂತನ ಮಡದಿ ಯಾದುದು ತಿಳಿಯಿತು. ಇದರಿಂದ ಅವರಿಗೆ ಬಹಳ ಸಂತೋಷವಾಯಿತು. ಶಕುಂತಲೆ ಈಗ ಗರ್ಭವತಿ ಯಾಗಿದ್ದಳು. ಅವಳು ಶ್ರೇಷ್ಠ ಚಕ್ರವರ್ತಿಯನ್ನು ಪ್ರಸವಿಸುವ ಳೆಂದು ತಿಳಿದರು. ಅವಳನ್ನು ಸಕಾಲದಲ್ಲಿ ಪತಿಯ ಮನೆಗೆ ಕಳಿಸಲು ಏರ್ಪಾಡು ಮಾಡಿದರು. ಶಕುಂತಲೆಯನ್ನು ರಾಜಧಾನಿಗೆ ಕಳಿಸಲು ತಮ್ಮ ಪ್ರಿಯ ಶಿಷ್ಯರಾದ ಶಾರ್ಙ್ಗರವ, ಶಾರದ್ವತರನ್ನು ನಿಯಮಿಸಿದರು. ಜೊತೆಗೆ ವೃದ್ಧ ತಾಪಸಿ ಯಾದ ಗೌತಮಿಯೂ ಹೊರಟಳು.

ಪತಿಯ ಮನೆಗೆ ಹೊರಡಲಿರುವ ಶಕುಂತಲೆಯನ್ನು ಕಾಣಲು ತಾಪಸಿಯರೆಲ್ಲ ಬಂದರು. ಎಲ್ಲರೂ ಅವಳನ್ನು ಆರ್ಶೀವಾದಿಸಿದರು.

ಸಖಿಯರಿಬ್ಬರೂ ಶಕುಂತಲೆಯನ್ನು ಅಲಂಕರಿಸಲು ಬಂದರು. ತಪೋವನದಲ್ಲಿ ಸಿಗುವ ವಸ್ತುಗಳಿಂದಲೇ ಅಲಂಕರಿಸಿದರು. ಅವರು ಪಟ್ಟಣದ ರಮಣಿಯರ ವೇಷ  ಭೂಷಣಗಳನ್ನು ತಿಳಿಯದವರು. ಚಿತ್ರಗಳಲ್ಲಿ ನೋಡಿರು ವಂತೆ ಗೆಳತಿಯನ್ನು ಸಿಂಗರಿಸಿದರು. ಗೆಳತಿಯರ ಪ್ರೀತ್ಯಾದರ ಗಳನ್ನು ಕಂಡು ಶಕುಂತಲೆ ಗದ್ಗಿದಿತಳಾದಳು. ಇಂತಹ ಗೆಳತಿಯನ್ನು ಬಿಟ್ಟುಹೋಗಬೇಕಲ್ಲ ಎಂದು ಸಖಿಯರು ದುಃಖಿಸಿದರು.

ಕಣ್ವರು ಶಕುಂತಲೆಯನ್ನು ಆಶೀರ್ವದಿಸಿದರು. ಇಬ್ಬರೂ ತಾವು ದಿನವೂ ಅರ್ಚಿಸುತ್ತಿದ್ದ ಅಗ್ನಿಯನ್ನು ಪೂಜಿಸುವಂತೆ ಹೇಳಿದರು. ಶಕುಂತಲೆ ಅಗ್ನಿಗೆ ಪ್ರದಕ್ಷಿಣೆ ಬಂದು ತಂದೆಯ ಪಾದಕ್ಕೆರಗಿದಳು. ಶಕುಂತಲೆಗೆ ತವರನ್ನು ಬಿಡುವ ಸಮಯ ನೆನೆದು ದುಃಖ ಉಮ್ಮಳಿಸಿತು. ಕಣ್ವರು ತಮ್ಮ ಮಗಳ ಸ್ವಭಾವವನ್ನು ಚೆನ್ನಾಗಿ ಅರಿತವರು. ಆಶ್ರಮದಲ್ಲಿ ಅವಳು ಗಿಡಗಳಿಗೆ ಮೊದಲು ನೀರೆರೆಯದೆ ಒಂದು ದಿನವೂ ನೀರು ಕುಡಿದವಳಲ್ಲ. ಅವಳು ಅಲಂಕಾರಪ್ರಿಯೆ; ಆದರೂ ಎಷ್ಟೇ ಆಸೆಯಾದರೂ ಒಮ್ಮೆಯೂ ಗಿಡಗಳ ಚಿಗುರನ್ನು ಮುರಿದವಳಲ್ಲ. ಗಿಡಬಳ್ಳಿ ಗಳು ಹೂ ಬಿಟ್ಟರೆ, ಅದೇ ಇವಳಿಗೂ ಹಬ್ಬ. ಇಷ್ಟು ದಿನವೂ ಅಲ್ಲಿ ಆಶ್ರಯ ಪಡೆದಿದ್ದ ಶಕುಂತಲೆ ಪತಿಗೃಹಕ್ಕೆ ತೆರಳಲು ಅಪ್ಪಣೆ ಕೊಡುವಂತೆ ಕಣ್ವರು ವನದೇವತೆಯನ್ನು ಪ್ರಾರ್ಥಿಸಿದರು. ಕಣ್ವರಿಗೆ ಕಣ್ಣಲ್ಲಿ ನೀರು ಉಕ್ಕಿ, ಮಾತ ನಾಡಲು ಕಂಠ ಕಟ್ಟಿತು.

ಶಕುಂತಲೆಗೆ ದುಷ್ಯಂತನನ್ನು ಸೇರುವ ತವಕ ಒಂದು ಕಡೆ. ಇನ್ನೊಂದು ಕಡೆ ತವರನ್ನು ತೊರೆಯಬೇಕಲ್ಲ ಎಂಬ ದುಃಖ! ತಪೋವನವೂ ಸಹ ತನ್ನ ಪ್ರೀತಿಯ ಶಕುಂತಲೆ ತನ್ನನ್ನು ಬಿಟ್ಟು ಹೊರಡುವಳಲ್ಲಾ ಎಂದು ದುಃಖಿಸುವಂತೆ ತೋರುತ್ತಿದೆ. ಅಲ್ಲಿಯ ಪ್ರಾಣಿಗಳೆಲ್ಲ ನಿಶ್ಚಲವಾಗಿದೆ. ಜಿಂಕೆಗಳು ತಿನ್ನುತ್ತಿದ್ದ ಗರಿಕೆಯು ಹಾಗೇ ಬಾಯಲ್ಲಿವೆ. ನವಿಲುಗಳು ನರ್ತಿಸುವುದನ್ನೇ ಮರೆತಿವೆ. ಬಳ್ಳಿಗಳಿಂದ ಎಲೆಗಳು ಉದುರುತ್ತಿವೆ -ಅವುಗಳ ಕಣ್ಣೀರಿನಂತೆ !

ಶಕುಂತಲೆ ಹೊರಡುವ ಸಮಯವಾಯಿತು. ತನ್ನ ಸೋದರಿಯಂತಿದ್ದ ಬಳ್ಳಿಯನ್ನು ಆಲಿಂಗಿಸಿದಳು.

ಆ ಬಳ್ಳಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಖಿಯರನ್ನು ಕೇಳಿಕೊಂಡಳು. ಅವಳ ನೆಚ್ಚಿನ ಮತ್ತೊಂದು ಗೆಳತಿ ಒಂದು ಜಿಂಕೆ. ಅದಕ್ಕೆ ಪ್ರಸವಕಾಲ. ಅದಕ್ಕೆ ಪ್ರಸವವಾದನಂತರ ತನಗೆ ಖಂಡಿತ ತಿಳಿಸಬೇಕೆಂದು ಮತ್ತೆ ಮತ್ತೆ ಕೇಳಿದಳು. ಇನ್ನೊಂದು ಜಿಂಕೆ ಶಕುಂತಲೆಯ ದಾರಿಯಲ್ಲೇ ಅವಳೊಡನೆಯೇ ಬರುತ್ತಿತ್ತು. ಅವಳ ಸೀರೆಯ ಅಂಚನ್ನು ಹಿಡಿದು ಜಗ್ಗುತ್ತಿತ್ತು. ಆ ಜಿಂಕೆ ಅವಳಿಗೆ ಮಗನಂತೆ; ಒಮ್ಮೆ ಗಾಯಗೊಂಡಿದ್ದ ಆ ಜಿಂಕೆಯನ್ನು ಅವಳೇ ಔಷಧಿ ಹಚ್ಚಿ ನೋಡಿಕೊಂಡಿದ್ದಳು.

‘ಹಿಂದಿನ ಜನ್ಮದಲ್ಲಿ ನಾನು ಪಾಪ ಮಾಡಿದ್ದೆ, ಅದರಿಂದಲೇ ದಯಾವಂತನಾದ ನೀನೂ ಹಾಗೆ ನಡೆದೆ.’

ಶಕುಂತಲೆಗೆ ಕಣ್ಣಲ್ಲಿ ನೀರು ತುಂಬಿ ದಾರಿ ಕಾಣದಾಯಿತು.

ಕಣ್ವರು ತಮಗೆ ತಾವೇ ಸಮಾಧಾನ ತಂದು ಕೊಂಡರು. ಶಕುಂತಲೆಗೂ ಸಮಾಧಾನ ಮಾಡಿದರು. ಕಣ್ವರು ದುಷ್ಯಂತನಿಗೆ ಸಂದೇಶವನ್ನು ಕಳಿಸಿದರು: “ನಿನ್ನ ವಂಶವು ಉನ್ನತವಾದದ್ದು, ಶಕುಂತಲೆ ನಿನ್ನನ್ನು ಮನಸಾರೆ ಮೆಚ್ಚಿ ವರಿಸಿದಳು. ಮುಗ್ಧೆಯಾದ ಇವಳನ್ನು ನಿನ್ನ ಪತ್ನಿಯರಲ್ಲಿ ಸಮಾನವಾಗಿ ಕಾಣು. ಉಳಿದದ್ದು ಅವಳ ಭಾಗ್ಯಾಧೀನ.” ಹಾಗೆಯೇ ಶಕುಂತಲೆಗೂ ಬುದ್ಧಿವಾದ ಗಳನ್ನು ಹೇಳಿದರು: “ಪತಿ ಮಂದಿರದಲ್ಲಿ ಗುರು ಹಿರಿಯರ ಸೇವೆ ಮಾಡು. ಸವತಿಯರನ್ನು ಪ್ರಿಯ ಸ್ನೇಹಿತೆಯರಂತೆ ಕಾಣು. ನಿನ್ನ ಗಂಡನು ನಿನ್ನಲ್ಲಿ ಕೋಪಿಸಿದರೂ ನೀನು ಅವನ ಮೇಲೆ ಕೋಪಿಸಬೇಡ. ಸೇವಕರಲ್ಲಿ ನಯವಾಗಿ ವರ್ತಿಸು. ಐಶ್ವರ್ಯವೂ ಪದವಿಯೂ ಸಿಕ್ಕಿದರೂ ಅಹಂಕಾರ ಪಡಬೇಡ. ಗೃಹಿಣಿಯ ಪದವಿಗೆ ತಕ್ಕ ರೀತಿ ಯಲ್ಲಿ ನಡೆ. ಎಲ್ಲರಿಗೂ ಮನವೊಪ್ಪುವಂತೆ ನಡೆದು ಒಳ್ಳೆಯ ಹೆಸರನ್ನು ಸಂಪಾದಿಸು.” ಶಕುಂತಲೆ ಕಣ್ವರನ್ನೂ ಗೆಳತಿಯರನ್ನೂ ಅಲಿಂಗಿಸಿದಳು.

ಸಖಿಯರು ಶಕುಂತಲೆಗೆ ಉಂಗುರವನ್ನು ಭದ್ರವಾಗಿ ನೋಡಿಕೊಳ್ಳುವಂತೆ ಹೇಳಿದರು. “ಸಖಿ, ಉಂಗುರದ ಕಡೆ ಗಮನವಿರಲಿ. ಅಗತ್ಯವಾದರೆ ಇದನ್ನು ರಾಜನಿಗೆ ತೋರಿಸು” ಎಂದರು.

ಶಕುಂತಲೆಗೆ ಏನೋ ಅಪಶಕುನವಾದಂತೆನಿಸಿತು. ಇವರೇಕೆ ಹೀಗೆ ಹೇಳುವರು? ಶಕುಂತಲೆಯ ಅನುಮಾನಕ್ಕೆ ಉತ್ತರವಾಗಿ ಸ್ನೇಹಿತೆಯರು, “ಸ್ನೇಹದಿಂದ ಆ ರೀತಿ ಹೇಳಿದೆವು” ಎಂದರು.

ಶಕುಂತಲೆ ತಂದೆಯನ್ನು ಕೇಳಿದಳು: “ನಾನು ತಪೋವನಕ್ಕೆ ಪುನಃ ಬರುವುದು ಯಾವಾಗ?” ಕಣ್ವರು ನಕ್ಕು ಹೇಳಿದರು: “ಬಹಳ ಕಾಲ ದುಷ್ಯಂತನೊಡನೆ ರಾಜ್ಯವಾಳಿ, ಅನಂತರ ನಿಮ್ಮ ಮಗನಿಗೆ ರಾಜ್ಯವನ್ನು ವಹಿಸಿ, ಅನಂತರ ನೀವಿಬ್ಬರೂ ವಾನಪ್ರಸ್ಥಕ್ಕೆ ಬನ್ನಿ.” ಮತ್ತೆ ಶಕುಂತಲೆ ತಂದೆಗೆ, “ನಿಮ್ಮ ಶರೀರವು ತಪೋ ನುಷ್ಠಾನಗಳಿಂದ ಬಹಳ ಕೃಶವಾಗಿದೆ. ಜೊತೆಗೆ ನನ್ನ ಯೋಚನೆಯನ್ನು ಹಚ್ಚಿಕೊಳ್ಳಬೇಡಿ. ದಯವಿಟ್ಟು ಶರೀರದ ಕಡೆ ಗಮನಿಸಿ” ಎಂದು ಪ್ರಾರ್ಥಿಸಿ ಹೊರಟಳು.

ಈಕೆ ಯಾರು ?

ಇತ್ತ ದುಷ್ಯಂತ ತನ್ನ ರಾಜಕಾರ್ಯಗಳಲ್ಲಿ ನಿರತನಾ ಗಿದ್ದಾನೆ. ಎಲ್ಲವನ್ನೂ ನಿರ್ವಹಿಸುತ್ತಿದ್ದರೂ ಅವನ ಮನಸ್ಸು ಏನೋ ಕಸಿವಿಸಿ. ಅವನಿಗೇ ಅರ್ಥವಾಗದ ಒಳಗುದಿ. ಕಾರಣ ತಿಳಿಯದೆ ಕಳವಳ. ಅದೇ ವೇಳೆಗೆ ಕಣ್ವಾಶ್ರಮದಿಂದ ತಾಪಸಿಗಳು ಬಂದಿರುವರೆಂದು ಸುದ್ದಿ ಬಂತು. ರಾಜನಿಗೆ ಆಶ್ಚರ್ಯ. ಆಶ್ರಮದಲ್ಲಿ ಏನಾದರೂ ತಪೋವಿಘ್ನವೇ? ಯಾವ ಕಾರಣದಿಂದ ಅವರು ಬಂದಿದ್ದಾರೆ ? ಎಂದು ಚಿಂತಿಸಿದನು. ಏನಾದರೂ ಬಂದವರನ್ನು ಸ್ವಾಗತಿಸ ಬೇಕಾದ್ದು ಕರ್ತವ್ಯ. ಅವರನ್ನು ಯಾಗಶಾಲೆಯಲ್ಲಿ ಸ್ವಾಗತಿಸುವುದು ಉಚಿತ ಎಂದು ಪುರೋಹಿತರನ್ನು ಬರಮಾಡಿಕೊಂಡನು. ತಾಪಸಿಗಳನ್ನು ಆದರದಿಂದ ಎದುರುಗೊಂಡನು.

ರಾಜನಿಗೆ ಆಶ್ಚರ್ಯ. ತಾಪಸಿಗಳ ಜೊತೆ ರೂಪಸಿ ಯೊಬ್ಬಳು ಬರುವಂತಿದೆ. ಹಣ್ಣೆಲೆಗಳ ಜೊತೆ ಚಿಗುರೆಲೆ ಸೇರಿದಂತಿದೆ. ಆಶ್ರಮವಾಸಿಗಳಿಗೆ ಹೆಣ್ಣೊಬ್ಬಳ ಸಹವಾಸ ಹೇಗಾದೀತು? ಆಕೆಯನ್ನು ನೋಡಲು ಕುತೂಹಲ. ಆದರೆ ಪರಸ್ತ್ರೀಯನ್ನು ನೋಡಬಾರದೆಂದು ಹಿಂಜರಿದನು.

ಬಂದ ಆಶ್ರಮವಾಸಿಗಳು ರಾಜನಿಗೆ ಆಶೀರ್ವದಿ ಸಿದರು. ರಾಜ ತಾಪಸಿಗಳ ಕುಶಲವನ್ನು ವಿಚಾರಿಸಿದನು. “ಕಣ್ವರು ಕ್ಷೇಮವೇ? ತಪಸ್ಸು ನಿರ್ವಿಘ್ನವಾಗಿ ನಡೆಯುತ್ತಿ ದೆಯೇ? ನನ್ನಿಂದ ಏನಾದರು ಆಗಬೇಕಾಗಿದೆಯೇ?” ಎಂದು ವಿನಮ್ರನಾಗಿ ಕೇಳಿದನು. ಕಣ್ವಾಶ್ರಮದಿಂದ ಬಂದ ಶಾರ್ಙ್ಗರವ ಶಾರದ್ವತರು ಹೀಗೆ ಹೇಳಿದರು: “ತಪಸ್ಸಿನಿಂದ ಸಿದ್ಧಿಪಡೆದ ಕಣ್ವರು ತಮ್ಮ ಕ್ಷೇಮವನ್ನು ತಾವೇ ನೋಡಿಕೊಳ್ಳಬಲ್ಲರು. ಅವರು ಸಂದೇಶವನ್ನು ಕಳಿಸಿದ್ದಾರೆ. ‘ಪೂಜ್ಯನಾದ ನೀನು ನನ್ನ ಪುತ್ರಿಯನ್ನು ಪ್ರೇಮಿಸಿ ಮುದುವೆಯಾದೆ. ನೀನು ಪುರುಶ್ರೇಷ್ಠ. ಅವಳೂ ಸುಗುಣಿ. ಇಬ್ಬರೂ ಅನುರೂಪ ದಂಪತಿಗಳಾಗಿದ್ದೀರಿ. ಸುಖವಾಗಿ ಬಾಳಿ’ ಎಂದು ಆಶೀರ್ವದಿಸಿದ್ದಾರೆ.”

ಜೊತೆಯಲ್ಲಿ ಬಂದ ಗೌತಮಿಯೂ ಹೇಳಿದಳು: “ನಿಮ್ಮದು ಗಾಂಧರ್ವ ವಿವಾಹ. ಆದರೂ ಈಗ ಹಿರಿಯರ ಅನುಮತಿಯಿಂದ ಸುಖವಾಗಿ ಬಾಳಿ.”

ರಾಜನಿಗೆ ಇವರ ಮಾತುಗಳಿಂದ ಆಶ್ಚರ್ಯ. ‘ಇವರಾಡುವ ಮಾತೇನು? ಇವಳಾರು? ನನಗೂ ಇವಳಿಗೆ ಇರುವ ಸಂಬಂಧವೇನು? ನಾನೇಕೆ ಇವಳನ್ನು ಸ್ವೀಕರಿಸ ಬೇಕು?’ ಪಾಪ! ಅವನಿಗೆ ಕಣ್ವರ ನೆನಪೂ ಸಹ ಇಲ್ಲ. ತಾನು ಅಲ್ಲಿಗೆ ಹೋದುದೂ ನೆನಪಿಲ್ಲ. ಇವಳನ್ನು ಕಂಡದ್ದಂತೂ ಇಲ್ಲವೇ ಇಲ್ಲ. ಹಾಗಿರುವಾಗ ತನ್ನನ್ನೂ ಇವಳನ್ನೂ ಪತಿಪತ್ನಿಯರೆಂದು ಹೇಳುತ್ತಾರೆ. ಇವಳು ಗರ್ಭಿಣಿ ಬೇರೆ. ಪರಸ್ತ್ರೀಯಂತಿ ರುವ ಇವಳನ್ನು ಹೇಗೆ ಪರಿಗ್ರಹಿಸುವುದು? ಎಂದು ಪರಿಪರಿಯಾಗಿ ಚಿಂತಿಸಿದನು.

ದುರ್ವಾಸರ ಶಾಪ  ರಾಜನ ಮೇಲೆ ಪರಿಣಾಮ ಬೀರಿತ್ತು. ಆದರೆ ದುಷ್ಯಂತನಿಗೆ ಏನೂ ತಿಳಿಯದು. ತಾಪಸಿಗಳಿಗೂ ಇದರ ಸುಳಿವಿಲ್ಲ.

ಶಕುಂತಲೆಗೆ ಸಿಡಿಲು

ರಾಜ ಅವರ ಮಾತನ್ನು ನಯವಾಗಿ ತಿರಸ್ಕರಿಸಿದ. “ನಾನು ಈ ಪೂಜ್ಯಳನ್ನು ಮದುವೆಯಾಗಿದ್ದೇನೆಯೇ?”  ಎಂದು ಕೇಳಿದ. ಶಾಙ್ಗರವನಿಗೆ ಕೋಪ ಉಕ್ಕಿತು. “ಮುನಿಗಳು ಸುಳ್ಳಾಡುವರೇ? ಅವನ ಮಾತನ್ನು ತಿರಸ್ಕರಿಸಿ, ಅವಮಾನಿಸಬಹುದೇ? ದೊರೆಯೇ, ನೀನು ಧರ್ಮಿಷ್ಠ. ಧರ್ಮದಂತೆ ನಡೆಯಬೇಕು. ಕೊಟ್ಟ ಮಾತನ್ನು ನಡೆಸ ಬೇಕು” ಎಂದು ಬುದ್ಧಿ ಹೇಳಿದ. ದುಷ್ಯಂತನಿಗೆ ಅಸಮಾ ಧಾನ-ಇಲ್ಲದ ಆರೋಪವನ್ನು ಹೋರಿಸುವಂತಿದೆ ಎಂದು.

ಶಕುಂತಲೆಯ ಹೃದಯ ಜೋರಾಗಿ ಬಡಿಯುತ್ತಿತ್ತು. ತನ್ನ ಹೆದರಿಕೆ ನಿಜವಾಗುವಂತಿದೆ. ಆರ್ಯಪುತ್ರ ತನ್ನನ್ನು ಮರೆತನೆ ! ಅವನ ಪ್ರೇಮವೆಲ್ಲಿ ಹೋಯಿತು? ಒಲುಮೆಯ ನುಡಿಗಳೆಲ್ಲಿ? ತನ್ನನ್ನು ಕಾಣದಂತೆ ಮಾತನಾಡುವನಲ್ಲ. ಅಥವಾ ತನ್ನ ಪ್ರೇಮವನ್ನು ಪರೀಕ್ಷಿಸುತ್ತಿರುವನೇ? ಬಗೆಬಗೆಯಾಗಿ ಚಿಂತಿಸಿದಳು.

ಶಕುಂತಲೆಯ ಜೊತೆಗೆ ಬಂದವರಿಗೂ ರಾಜನಿಗೂ ಚರ್ಚೆಯಾಯಿತು. ಒಬ್ಬರ ಮಾತಿಗೆ ಒಬ್ಬರು ಒಪ್ಪುವುದಿಲ್ಲ. ದುಷ್ಯಂತ ಸತ್ಯಸಂಧ-ಅವನ ತಪ್ಪು ಇಲ್ಲ. ಮುಗ್ಧರಾದ ಆಶ್ರಮವಾಸಿಗಳ ತಪ್ಪೂ ಇಲ್ಲ. ಬೇರೆ ದಾರಿಯೇ ಕಾಣದೆ ಗೌತಮಿ ಸಲಹೆ ನೀಡಿದಳು, “ಲಜ್ಜೆಯನ್ನು ಬಿಡು ಮಗಳೆ. ನಿನ್ನ  ಅವಕುಂಠನವನ್ನು ತೆಗೆ. ನಿನ್ನ ನೆನಪಾಗುವುದೋ ನೋಡೋಣ.” ದುಷ್ಯಂತ ಶಕುಂತಲೆಯ ರೂಪರಾಶಿ ಯನ್ನು ನೊಡಿದ. ಇವಳನ್ನು ತನ್ನ ಧರ್ಮಪತ್ನಿಯೆನ್ನು ತ್ತಾರೆ. ಅವರ ಮಾತಿನಂತೆ ಒಂದು ವೇಳೆ ಇವಳನ್ನು ಮದುವೆಯಾಗಿದ್ದು, ಇವಳನ್ನು ಬಿಟ್ಟರೆ, ಪತ್ನಿಯನ್ನು ತ್ಯಜಿಸಿದಂತೆ ಆಗುತ್ತದೆ. ಇವಳ ಪರಿಚಯವಿಲ್ಲದಿದ್ದರೂ ಇವಳನ್ನು ಪರಿಗ್ರಹಿಸಿದರೆ, ಇನ್ನೊಬ್ಬನ ಹೆಂಡತಿಯನ್ನು ಪರಿಗ್ರಹಿಸಿದಂತೆ ಆಗುತ್ತದೆ. ರಾಜ ಧರ್ಮಸಂಕಟದಲ್ಲಿ ಸಿಕ್ಕಿಬಿದ್ದ.

ಶಾರ್ಙ್ಗರವ, ಶಾರದ್ವತರು ರಾಜನ ತೀರ್ಮಾನಕ್ಕಾಗಿ ಕಾದರು. ರಾಜ ತಲೆಬಾಗಿದ, “ಮುನಿಕುವರರೇ, ಎಷ್ಟು ನೆನೆಸಿಕೊಂಡರೂ ಇವಳನ್ನು ಕಂಡ ನೆನಪೇ ಬಾರದು. ದಯವಿಟ್ಟು ಕ್ಷಮಿಸಿ” ಎಂದ. ತಾಪಸಿಗಳು ಚಕಿತರಾದರು. ಶಕುಂತಲೆ ಮೂಕಳಾದಳು. ಹಾಗೇ ಕುಗ್ಗಿಹೋದಳು. ಒಂದೇ ಮಾತಿನಲ್ಲಿ ದೊರೆ ತನ್ನನ್ನು ತಿರಸ್ಕರಿಸಿಬಿಟ್ಟ. ಅವಳು ಅನೇಕ ಆಶೆಗಳನ್ನು ಹೊತ್ತು ಬಂದವಳು. ಪತಿಗೃಹದಲ್ಲಿ ಬಾಳುವ ಹೊಂಗನಸನ್ನು ಕಟ್ಟಿದ್ದಳು. ಅವಳ ಆಸೆಗಳು ಅಲ್ಲೇ ಮುರುಟಿ ಬಿದ್ದವು. ರಾಜನನ್ನು ಹೇಗೆ ಒಪ್ಪಿಸುವುದು? ಅವನಿಗೆ ತನ್ನ ಧ್ವನಿಯ ನೆನಪಾದರೂ ಆಗುವುದೇ ನೋಡೋಣ ಎಂದು ಧೈರ್ಯವಹಿಸಿ ಕೇಳಿದಳು – “ದೊರೆಯೇ! ನನ್ನನ್ನು ಮರೆತಿರೇನು? ನಮ್ಮ ವಿವಾಹ ವಾದದ್ದೂ ನೆನಪಿಲ್ಲವೇ? ನನ್ನಲ್ಲಿ ಅನುಮಾನವೇ? ನಿಮ್ಮ ಕುರುಹಾಗಿ ನೀವೇ ನೀಡಿದ ಈ ಉಂಗುರವನ್ನಾದರೂ ನೋಡಿ!” ಎಂದು ಕೈನೀಡಿದಳು. ಬರಿದಾದ ಬೆರಳು! ಶಕುಂತಲೆ ನಿಶ್ಚಲಳಾದಳು; ದಿಗ್ಭ್ರಾಂತಳಾದಳು. ಗೌತಮಿಗೆ ಆಶ್ಚರ್ಯ. ಶಾರ್ಙ್ಗರವ, ಶಾರದ್ವತರು ಮೌನಿಗಳು. ಎಂತಹ ಅವಮಾನ! ಶಕುಂತಲೆಗೆ, ಭೂಮಿ ಬಾಯಿತೆರೆದು ತನ್ನನ್ನು ನುಂಗಬಾರದೇ ಎನ್ನಿಸಿತು.

ರಾಜನ ಮುಖದಲ್ಲಿ ನಗೆ ಮಿಂಚಿತು. ಎಲ್ಲರೂ ಸೇರಿ ತನಗೆ ಮೋಸಮಾಡುತ್ತಿದ್ದರು. ತನ್ನನ್ನು ಅಧರ್ಮಿಯನ್ನಾಗಿಸುತ್ತಿದ್ದರು. ಈಗ ತನ್ನ ಮಾತೇ ಗೆದ್ದಿತು.

ಗೌತಮಿ ಹೇಳಿದಳು, “ಶಕ್ರತೀರ್ಥಕ್ಕೆ ನಮಸ್ಕರಿಸು ವಾಗ ಬೆರಳಿನಿಂದ ಜಾರಿರಬೇಕು.” ಇದು ಸತ್ಯವಾದರೂ ರಾಜನಿಗೆ ಸುಳ್ಳಾಗಿಯೇ ಕಂಡಿತು. “ಹೆಂಗಸರು ಮೋಸ ಗಾರರು. ಅವರಿಗೆ ಜನ್ಮತಃ ಚತುರತೆ ಇದೆ. ಅದರಲ್ಲೂ ತಿಳಿದವರು ಇನ್ನೂ ಹೆಚ್ಚಾಗಿ ಅನ್ಯಾಯ ಮಾಡುತ್ತಾರೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಮಾತನಾಡುತ್ತೀರಿ” ಎಂದು ಟೀಕಿಸಿದ.

ಕರೆದೊಯ್ದ ಬೆಳಕು

ಶಕುಂತಲೆಯ ಮನಸ್ಸಿಗೆ ನೋವಾಯಿತು. “ಇಲ್ಲಿಯೂ ಅದೃಷ್ಟವು ಕೈಕೊಟ್ಟಿತು. ಹೋಗಲಿ, ಇನ್ನೊಂದು ನಿದರ್ಶನವನ್ನು ಕೊಡುತ್ತೇನೆ” ಎಂದು ಆಶ್ರಮದಲ್ಲಿ ನಡೆದ ಪ್ರಸಂಗವನ್ನು ನೆನಪಿಗೆ ತಂದಳು. ಒಮ್ಮೆ ದುಷ್ಯಂತನು ತಾವರೆಯ ಎಲೆಯನ್ನೇ ದೊನ್ನೆಯಂತೆ ಮಾಡಿಕೊಂಡು ನೀರು ಕುಡಿಯುತ್ತಿದ್ದ. ದೀರ್ಘಾಪಾಂಗ ಎಂಬ ಜಿಂಕೆ ನೀರಿಗಾಗಿ ಬಂತು. ಆದರೆ ದೊನ್ನೆ ದುಷ್ಯಂತನ ಕೈಲಿದ್ದು ದರಿಂದ, ಅಪರಿಚಿತನನ್ನು ನೋಡಿ ಹಿಂದಿರುಗುವು ದರಲ್ಲಿತ್ತು. ಅಷ್ಟರಲ್ಲೇ ಶಕುಂತಲೆ ಆ ದೊನ್ನೆಯನ್ನೆತ್ತಿ ಕೊಂಡಳು. ಒಡನೆಯೇ ಬಾಯಾರಿದ ಜಿಂಕೆ ಅವಳ ಕೈಯಿಂದ ನೀರು ಕುಡಿಯಿತು. ಆಗ ದುಷ್ಯಂತನು, “ಎಲ್ಲವೂ ಸಮಾನ ವಸ್ತುಗಳಲ್ಲಿ ಪ್ರೀತಿ ತೋರುವುದು. ಇಬ್ಬರೂ ಆಶ್ರಮವಾಸಿಗಳಾದ್ದರಿಂದ ನಿನ್ನ ಕೈಲಿ ನೀರು ಕುಡಿಯಿತು” ಎಂದು ಹಾಸ್ಯಮಾಡಿದ. ಇದನ್ನೇ ಜ್ಞಾಪಿಸಿದಳು ಶಕುಂತಲೆ. ‘ಊಹೂಂ !’ ರಾಜ ತಲೆಯಾಡಿಸಿದ. ತಾನು ಆಶ್ರಮಕ್ಕೆ ಹೋಗಿದ್ದರಲ್ಲವೇ ಹೀಗೆ ನಡೆಯುವುದು! ಪಾಪ! ಅವನಿಗೆ ಆಶ್ರಮಕ್ಕೆ ಹೋದ ನೆನಪೇ ಇಲ್ಲ. ಗೌತಮಿಗೂ ಸಹನೆ ಮೀರಿತು. “ಅರಸನೇ, ನಾವು ತಪೋವನದಲ್ಲಿ ಇರುವ ವರು. ಇವಳೂ ಅಲ್ಲೆ ಬೆಳೆದವಳು. ಇವಳಿಗೆ ಸುಳ್ಳು, ಮೋಸಗಳೊಂದೂ ತಿಳಿಯದು” ಎಂದಳು. ರಾಜ ಶಕುಂತಲೆಯ ಮುಖ ನೋಡಿ, ಹೌದು ಮುಗ್ಧೆಯಂತೆ ಕಾಣುತ್ತಾಳೆ. ಅವಳ ಮುಖದಲ್ಲೂ ರೋಷ ಕಾಣುತ್ತಿದೆ. ರಾಜನಿಗೆ ತನ್ನ ಮೇಲೆ ಅನುಮಾನ ! ‘ನಾನೇ ದಾರಿ ತಪ್ಪುತ್ತಿರುವೆನೇ ? ಸಾಧ್ಯವೇ ಇಲ್ಲ. ದುಷ್ಯಂತನೆಂದಿಗೂ ಅನ್ಯಾಯವೆಸಗುವುದಿಲ್ಲ. ಆತ್ಮವಂಚನೆ ಮಾಡುವುದಿಲ್ಲ. ಅವನ ನಡತೆ ಲೋಕಪ್ರಸಿದ್ಧವಾದದ್ದು’ ಎಂಬ ಆತ್ಮ ಭರವಸೆ, ದೃಢನಂಬಿಕೆ ಅವನದು.

ಶಕುಂತಲೆ ಕಾದು ನೋಡಿದಳು. ಉಕ್ಕಿದ ಕೋಪದಲ್ಲಿ ರಾಜನನ್ನು ನಿಂದಿಸಿದಳು : “ಹುಲ್ಲುಮುಚ್ಚಿದ ಬಾವಿಯಂತೆ ಕಾಣುತ್ತೀಯೆ ! ನಯವಂಚಕ ! ಆಗ ಒಳ್ಳೆಯ ಮಾತು ಗಳಿಂದ ಮರುಗೊಳಿಸಿ, ಈಗ ಏನೂ ಅರಿಯದವನಂತೆ ಇರುವೆಯಾ?” ರಾಜ ಮಾತೇ ಆಡಲಿಲ್ಲ. ರಾಜನ ಮೌನವನ್ನು ಶಾರ್ಙ್ಗರವ, ಶಾರದ್ವತರು ಸಹಿಸದಾದರು. “ಇವು ಹೇಗಿದ್ದರೂ ಇವಳ ಯಜಮಾನ. ಇವಳನ್ನು ಸ್ವೀಕರಿಸುವ ಅಥವಾ ಬಿಡುವ ಅಧಿಕಾರ ಇವನಿಗಿದೆ. ಇವನು ತನ್ನ ಇಷ್ಟದಂತೆ ನಡೆಯಲಿ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸಿಯಾಯಿತು” ಎಂದು ಹೊರಟೇಬಿಟ್ಟರು.

ಆಶ್ರಮವಾಸಿಗಳೂ ಗೌತಮಿಯೂ ಹೊರಟರು. ಶಕುಂತಲೆ ತುಂಬಿದ ಕಣ್ಣೀರಿನೊಡನೆ ನೋಡುತ್ತಲೇ ಇದ್ದಳು. ರಾಜನಿಗೆ ಈ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದೇ ತೋಚಲಿಲ್ಲ. ರಾಜ ಪುರೋಹಿತರ ಸಲಹೆ ಕೇಳಿದ. ಪುರೋಹಿತರು ಇಕ್ಕಟ್ಟನ್ನು ಬಗೆ ಹರಿಸಿದರು: “ಇವಳಿಗೆ ಪ್ರಸವವಾಗುವವರೆಗೂ ನನ್ನ ಮನೆಯಲ್ಲಿರಲಿ. ಹುಟ್ಟುವ ಮಗುವು ಗಂಡಾಗಿದ್ದು, ಚಕ್ರವರ್ತಿ ಲಕ್ಷಣಗಳುಳ್ಳದ್ದಾಗಿದ್ದರೆ ಆಗ ಇವಳನ್ನು ತಮ್ಮ ಅಂತಃಪುರಕ್ಕೆ ಸೇರಿಸಿಕೊಳ್ಳಬಹುದು.” ಶಕುಂತಲೆಗೆ ಬೇರೆ ದಾರಿಯೇ ಕಾಣಲಿಲ್ಲ. ತನ್ನ ಅದೃಷ್ಟಕ್ಕಾಗಿ ನೊಂದು ಕೊಂಡಳು. ಪುರೋಹಿತರನ್ನು ಹಿಂಬಾಲಿಸಿದಳು.

ಶಕುಂತಲೆ ಸ್ವಲ್ಪ ದೂರ ಹೋಗುವಷ್ಟರಲ್ಲೇ ಆಕಾಶದಿಂದ ಒಂದು ಬೆಳಕು ಭೂಮಿಗೆ ಇಳಿಯಿತು. ಹಠಾತ್ತಾಗಿ ಶಕುಂತಲೆಯನ್ನು ತನ್ನೊಡನೆ ಒಯ್ದಿತು. ಪುರೋಹಿತರು ರಾಜನಿಗೆ ಈ ಸುದ್ಧಿ ತಿಳಿಸಿದರು. ಎಲ್ಲರಿಗೂ ಆಶ್ಚರ್ಯ!

‘ದೊರೆಯೆ ! ನನ್ನನ್ನು ಮರೆತಿರೇನು ?’

 ಎಂತಹ ಅನ್ಯಾಯ ಮಾಡಿದೆ !

ಒಂದು ದಿನ ರಾಜನಿಗೆ ಶಕುಂತಲೆಯ ನೆನಪು ಬರುವಂತಹ ಪ್ರಸಂಗ ನಡೆಯಿತು. ನಗರಾಧಿಕಾರಿಗಳು ಒಬ್ಬ ಬೆಸ್ತನನ್ನು ಹಿಡಿದು ತಂದರು. ಅವನ ಬಳಿ ರಾಜ ಮುದ್ರೆಯಿದ್ದ ಒಂದು ಉಂಗುರವಿದ್ದಿತು. ಅವನನ್ನು ಉಂಗುರದ ಕಳ್ಳನೆಂದು ಹಿಡಿದಿದ್ದರು. ಆದರೆ ಆ ಬೆಸ್ತ ತಾನು ಪ್ರಾಮಾಣಿಕನೆಂದು ಹೇಳುತ್ತಿದ್ದ. ರಾಜನ ಬಳಿಗೆ ಅವನನ್ನು ಕರೆತಂದರು. ರಾಜ ಆ ಉಂಗುರವನ್ನು ನೋಡಿದೊಡನೆ ಅದು ತನ್ನ ಉಂಗುರವೆಂದು ಗುರುತಿಸಿದ. ಕೂಡಲೇ ಶಕುಂತಲೆಯ ನೆನಪಾಯಿತು. ಬೆಸ್ತನನ್ನು ಬಂಧನದಿಂದ ಬಿಡಿಸಿದ. ಅವನಿಗೆ ಇದು ಹೇಗೆ ಸಿಕ್ಕಿತು ಎಂದು ಯೋಚಿಸಿದ. ಬೆಸ್ತ ತನಗೆ ಉಂಗುರ ಸಿಕ್ಕಿದ ರೀತಿಯನ್ನು ತಿಳಿಸಿದ.

ಆ ಬೆಸ್ತ ಶಕ್ರಾವತಾ ತೀರ್ಥದ ಬಳಿ ವಾಸ ಮಾಡುತ್ತಿದ್ದ. ಅಲ್ಲಿ ಮೀನು ಹಿಡಿದು ಮಾರುವುದೇ ಅವನ ವೃತ್ತಿ. ಒಂದು ದಿನ ಅವನ ಬಲೆಗೆ ಒಳ್ಳೆಯ ಮೀನೊಂದು ಬಿತ್ತು. ಅದನ್ನು ಕುಯ್ದಾಗ, ಅದರ ಹೊಟ್ಟೆಯಲ್ಲಿ ಈ ಉಂಗುರ ಇದ್ದಿತು. ಅದನ್ನು ಮಾರಲೆಂದು ಮಾರುಕಟ್ಟೆಗೆ ತಂದ. ಅಲ್ಲಿಯೇ ನಗರಾಧಿಕಾರಿಗಳು ಅವನನ್ನು ಹಿಡಿದದ್ದು. ರಾಜ ಅವನಿಗೆ ಆ ಉಂಗುರದ ಬೆಲೆಯಷ್ಟು ಹಣವನ್ನು ಬಹುಮಾನವಾಗಿ ನೀಡಿದ.

ಬೆಸ್ತನನ್ನು ಕಳಿಸಿ, ಅನಂತರ ದುಷ್ಯಂತ ಆ ಉಂಗುರವನ್ನು ಮತ್ತೆಮತ್ತೆ ನೋಡತೊಡಗಿದ. ಅದನ್ನು ನೋಡಿದ ತಕ್ಷಣವೇ ಅವನಿಗೆ ಶಕುಂತಲೆಯ ನೆನಪು ಉಂಟಾಯಿತು. ಅವನಿಗೇ ಆಶ್ಚರ್ಯ! ‘ಆಗ ತಾನೇಕೆ ಹಾಗೆ ವರ್ತಿಸಿದೆ? ಈಗ ಇದನ್ನು ನೋಡಿದನಂತರ ನೆನಪಾಗಿದೆ!’ ಈಗ ಮೊದಲಿನಿಂದ ನಡೆದುದೆಲ್ಲವೂ ನೆನಪಾಯಿತು.

ರಾಜ ತನ್ನ ವರ್ತನೆಗೆ ತಾನೇ ನಾಚಿಕೆಗೊಂಡ. ಅವಳ ಮುಗ್ಧ ಮುಖವೇ ಮುಂದೆಬಂದು ನಿಂತಂತಾ ಯಿತು. ತನ್ನಿಂದ ಅವಳಿಗೆ ಅನ್ಯಾಯವಾಯಿತು. ತಾನು ಅವಳೊಡನೆ ನಡೆದುಕೊಂಡ ರೀತಿಗಾಗಿ ಪಶ್ಚಾತ್ತಾಪಪಟ್ಟ.

ಅವನಿಗೆ ಯಾವುದರಲ್ಲೂ ಉತ್ಸಾಹವಿಲ್ಲ. ರಾಜ ಕಾರ್ಯಗಳನ್ನೂ ನಿರ್ವಹಿಸಲಾರ. ಎಲ್ಲವನ್ನು ಮಂತ್ರಿಗಳಿಗೆ ಒಪ್ಪಿಸಿಬಿಟ್ಟ. ಅವನಿಗೆ ಯಾವಾಗಲೂ ಶಕುಂತಲೆಯದೇ ಧ್ಯಾನ. ಆ ಉಂಗುರವನ್ನೇ ನೋಡುತ್ತಿರುತ್ತಾನೆ. ‘ಶಕುಂತಲೆ ಹೇಳಿದ ಮಾತು ಸತ್ಯ. ಅವಳು ನದಿಗೆ ನಮಸ್ಕರಿಸುವಾಗ ಇದು ಜಾರಿ ಬಿದ್ದಿರಬೇಕು. ಅನಂತರ ಮೀನಿನ ಹೊಟ್ಟೆ ಸೇರಿರಬೇಕು’ ಎಂದು ಊಹಿಸಿದ. ಅವಳಿಗಾಗಿ ತಪಿಸಿದ. ‘ತಾನು ಮಾತುಕೊಟ್ಟಂತೆ ನಡೆದು ಕೊಳ್ಳಲಿಲ್ಲ. ಸುಳ್ಳು ಹೇಳಿ, ಮೋಸ ಮಾಡಿದಂತಾಯಿತು. ಈಗ ಅವಳ ಅವಸ್ಥೆ ಏನಾಗಿರಬಹುದು ? ತನ್ನಂತೆಯೇ ಅವಳೂ ವಿರಹದಿಂದ ಬೆಂದಿರಬಹುದು. ತನ್ನ ಅದೃಷ್ಟಕ್ಕಾಗಿ ದುಃಖಿಸುತ್ತಿರಬಹುದು. ತನಗಾದ ಅವಮಾನಕ್ಕಾಗಿ ಕೊರಗುತ್ತಿರಬಹುದು. ತನ್ನ ಬಗ್ಗೆ ಏನು ತಿಳಿದಳೋ ? ಕೈಗೆ ಸಿಕ್ಕಿದ ರತ್ನವನ್ನು ಕಾಲಿನಿಂದ ಒದ್ದೆನಲ್ಲ !’ ಎಂದು ಪರಿಪರಿಯಾಗಿ ದುಃಖಿಸಿದ.

ಶಕುಂತಲೆಯ ಚಿಂತೆಯಲ್ಲೇ ರಾಜ ಬಡವಾದ. ಅವನಿಗೆ ಊಟ, ನಿದ್ರೆ ಯಾವುದೂ ಬೇಡವಾಯಿತು. ಅವಳು ಸಿಕ್ಕಿದರೆ ಸಾಕು ಎಂದು ಹಂಬಲಿಸತೊಡಗಿದ.

ಇಂದ್ರನ ಸಖ

ಅತ್ತ ಸ್ವರ್ಗದಲ್ಲಿ ದೇವತೆಗಳಿಗೂ ರಾಕ್ಷಸರಿಗೂ ಯುದ್ಧ ಪ್ರಾರಂಭವಾಯಿತು. ಪುರುವಂಶದ ಅರಸರು, ಇಂದ್ರನಿಗೆ ಆಗಾಗ ಯುದ್ಧದಲ್ಲಿ ಸಹಾಯ ಮಾಡುತ್ತಲೂ ಇದ್ದರು. ಇಂದ್ರನಿಂದ ದುಷ್ಯಂತನಿಗೆ ಕರೆ ಬಂತು. ದುಷ್ಯಂತ, ತನ್ನ ದುಃಖವನ್ನು ಒತ್ತಟ್ಟಿಗಿಟ್ಟು ಧೈರ್ಯ ತಂದುಕೊಂಡ. ಇಂದ್ರನ ಸಹಾಯಕ್ಕಾಗಿ ಸ್ವರ್ಗಕ್ಕೆ ತೆರಳಿದ. ಯುದ್ಧದಲ್ಲಿ ತನ್ನ ಅಸೀಮ ಪರಾಕ್ರಮವನ್ನು ತೋರಿದ. ರಾಕ್ಷಸರನ್ನು ಹೊಡೆದಟ್ಟಿದ. ಇಂದ್ರನಿಗೆ ಬಹಳ ಸಂತೋಷವಾಯಿತು. ಅವನನ್ನು ಆಲಿಂಗಿಸಿ, ಅಭಿನಂದಿಸಿದ. ಅವನಿಂದಲೇ ತಮಗೆ ವಿಜಯಶ್ರೀ ಒಲಿದಿದ್ದು ಎಂದು ಕೃತಜ್ಞತೆಯನ್ನು ಅರ್ಪಿಸಿದ. ಮರ್ಯಾದೆಗಳೊಡನೆ ಅವನನ್ನು ಕಳಿಸಿಕೊಟ್ಟ.

ದುಷ್ಯಂತ ಹಮವತ್ಪರ್ವತದ ಬಳಿ ಬರುತ್ತಿದ್ದಾಗ ಉನ್ನತವಾದ ಹಿಮಾಲಯದ ಹಿನ್ನೆಲೆಯಲ್ಲಿ ಒಂದು ಪ್ರಶಾಂತವಾದ ಆಶ್ರಮ ಗೋಚರಿಸಿತು. ಅದು ಪೂಜ್ಯರಾದ ಮಾರೀಚ ಮಹರ್ಷಿಗಳ ಪುಣ್ಯಾಶ್ರಮವೆಂದು ತಿಳಿಯಿತು. ಅವರ ದರ್ಶನವನ್ನು ಪಡೆಯಬೇಕೆಂದು ಆಶ್ರಮವನ್ನು ಪ್ರವೇಶಿಸಿದ. ಆ ಸ್ಥಳಕ್ಕೆ ಬಂದೊಡನೆ, ಅವನಿಗೆ ಒಂದು ಸುಂದರ ವಿಚಿತ್ರ ಅನುಭವ ಉಂಟಾಯಿತು.

ಈ ಹುಡುಗ ಯಾರು

ದಾರಿಯಲ್ಲೇ ಒಬ್ಬ ಸುಂದರ ಬಾಲಕ ಎದುರಾದ, ನೋಡಿದೊಡನೆ ಮತ್ತೊಮ್ಮೆ ನೋಡಬೇಕೆಂದೆನಿಸುವ ಆಕರ್ಷಕ ಮುಖ ; ಸಾಹಸಿಯಂತೆ ಕಾಣುವ ಅವನ  ಕೈಲಿ ಸಿಂಹದ ಮರಿ ! ಹಾಲು ಕುಡಿಯುತ್ತಿದ್ದ ಮರಿಯನ್ನು, ತಾಯಿಯಿಂದ ಬಿಡಿಸಿ ಕರೆತಂದಿದ್ದಾನೆ ಆ ಧೈರ್ಯಶಾಲಿ ತುಂಟ! ಅವನಿಗೆ ಅದರೊಡನೆ ಆಡಲು ಆಸೆ. ಅದರ ಹಲ್ಲುಗಳನ್ನು ಎಣಿಸಬೇಕೆಂಬ ಕುತೂಹಲ. ಮರಿಯ ಹಿಂದೆ ಓಡಿಬರುವ ಸಿಂಹಿಣಿ. ಅದನ್ನು ಹಾಗೆಯೇ ನಿಲ್ಲೆಂದು ಎತ್ತಿದ ಕೈ! ಅವನ ಹಿಂದೆ ಇಬ್ಬರು ತಾಪಸಿಯರು ಓಡಿಬರುತ್ತಿದ್ದಾರೆ. ಎಷ್ಟಾದರು ಸಿಂಹದಿಂದ ಅಪಾಯವೇ! ಹೇಗೆ ಈ ತುಂಟನನ್ನು ತಡೆಯುವುದು ಎಂದು ಅವರ ಯೋಚನೆ. “ಮಗೂ! ಆಶ್ರಮದ ಪ್ರಾಣಿಗಳನ್ನು ಹಿಂಸಿಸಬಾರದು, ಬಿಡು ಬಿಡು!” ಎಂದು ಕೂಗಿದರು ತಾಪಸಿಯರು. ಅವರ ಮಾತಿಗೆ ಲಕ್ಷ್ಯವೇ ಇಲ್ಲ. ಯಾವ ಪ್ರಾಣಿಗೂ ಹೆದರದವನು. ಸಿಂಹವೇ ಏಕೆ ಹುಲಿ, ಚಿರತೆ, ಹಂದಿ, ಆನೆ ಯಾವುದನ್ನೇ ಆಗಲಿ ಎದುರಿಸಬಲ್ಲೆನೆಂಬ ಕೆಚ್ಚೆದೆ, ಧೈರ್ಯ! ಅದಕ್ಕೇ ಆಶ್ರಮವಾಸಿಗಳು ಅವನಿಗೆ ’ಸರ್ವದಮನ’ ಎಂಬ ಹೆಸರನ್ನಿಟ್ಟಿದ್ದರು. ಹೆಸರಿಗೆ ತಕ್ಕಂತೆ ಸಾಹಸ, ಗಾಂಭೀರ್ಯಗಳಿಂದ ಕೂಡಿದ ಮುಖ. ರಾಜನಿಗೆ ಆ ಪುಟ್ಟನ ಮೇಲೆ ಪ್ರೀತಿ ಉಕ್ಕಿತು. ಅವನನ್ನು ತಬ್ಬಿ ಮುದ್ದಾಡಬೇಕೆನಿಸಿತು.

ಒಬ್ಬ ತಾಪಸಿ ಅವನಿಗೆ ಬೇರೆ ಅಟಿಕೆಯನ್ನು ತರಲೆಂದು ಹೊರಟಳು. ಮತ್ತೊಬ್ಬಾಕೆ ಅವನನ್ನು ಒಲಿಸಲು ಯತ್ನಿಸಿದಳು: “ನಿನಗೆ ಬೇರೆ ಆಟಿಕೆಯನ್ನು ಕೊಡುತ್ತೇನೆ. ಇದನ್ನು ಬಿಡು ಮಗೂ.” ಬಾಲಕ ಕೈ ನೀಡಿದ “ಎಲ್ಲಿ. ಈಗಲೇ ತಾ ನೋಡೋಣ.” ನೀಡಿದ ಕೈಲಿ ಚಕ್ರವರ್ತಿಯ ಚಿಹ್ನೆಗಳಿದ್ದವು. ತಾಪಸಿ ರಾಜನಿಗೆ ಹೇಳಿದಳು: “ದಯಮಾಡಿ ಇವನಿಗೆ ಬುದ್ಧಿ ಹೇಳಿರಿ. ಈ ಸಿಂಹದ ಮರಿಯನ್ನು ಬಿಡಿಸಿರಿ.” ರಾಜ ಮುಂದೆ ಬಂದ. “ಮಗೂ, ನೀನು ಋಷಿ ಕುಮಾರ, ಆಶ್ರಮದಲ್ಲಿರತಕ್ಕವನು. ನಿನಗೆ ಇದು ತರವಲ್ಲ. ಬಿಡು ಆ ಸಿಂಹವನ್ನು” ಎಂದು ಹೇಳಿದ. ತಾಪಸಿ ಹೇಳಿದಳು: “ಅವನು ಋಷಿಕುವರನಲ್ಲ. ಪರುವಂಶದವ.”

ಅವನು ತನ್ನ ವಂಶದವನೇ! ಹಾಗಾದರೆ ಯಾರೆಂದು ತಿಳಿಯುವ ಕುತೂಹಲ ರಾಜನಿಗೆ. “ಅವನ ಪೂಜ್ಯ ತಂದೆ ಯಾರೆಂದು ತಿಳಿಯಬಹುದೇ?” ವಿನಯದಿಂದ ಕೇಳಿದ ರಾಜ. ತಾಪಸಿ ಹೇಳಲಿಲ್ಲ. “ತನ್ನ ಧರ್ಮಪತ್ನಿಯನ್ನೇ ತೊರೆದವನ ಹೆಸರನ್ನು ಹೇಳಲಾರೆವು” ಎಂದಳು.

ದುಷ್ಯಂತನಿಗೆ ಮತ್ತೆ ಆಶ್ಚರ್ಯ – ತನ್ನನ್ನೇ ಕುರಿತು ಹೇಳುವಂತಿದೆ. ಅಷ್ಟರಲ್ಲೇ ಇನ್ನೊಬ್ಬ ತಾಪಸಿ ಕುಮಾರನಿಗೆ ಅಟಿಕೆ ತಂದಳು. “ಮಗೂ ! ಇದೋ ಶಕುಂತ ಲಾವಣ್ಯವನ್ನು ನೋಡು” ಎಂದಳು. “ಎಲ್ಲಿ ನನ್ನ ಅಮ್ಮ? ತೋರಿಸು” ಓಡಿಬಂದ ಬಾಲಕ. ತಾಪಸಿಯರು ಜೋರಾಗಿ ನಕ್ಕುಬಿಟ್ಟರು. “ಅಯ್ಯೋ ಮಗು ಮೋಸಹೋದೆಯಾ! ಈ ಮಣ್ಣಿನ ಹಕ್ಕಿಯ (ಸುಣ್ಣದ ನವಿಲಿನ) ಸೌಂದರ್ಯ ವನ್ನು ನೋಡು ಎಂದರೆ ನಿನ್ನ ತಾಯಿಯ ಹೆಸರನ್ನು ಹೇಳಿದೆನೆಂದುಕೊಂಡೆಯಾ!” ಎಂದಳು ಆ ತಾಪಸಿ.

ದುಷ್ಯಂತನಿಗೆ ಮತ್ತೊಂದು ಸೂಚನೆ ಸಿಕ್ಕಿತು. ಅವನಿಗೂ ಏನೋ ಸಂದೇಹ. ಒಗಟಿನಂತಹ ವಾತಾ ವರಣ. ಅಷ್ಟರಲ್ಲೇ ತಾಪಸಿಯರು ಏನೋ ಹುಡುಕುತ್ತಿದ್ದರು. ಸಿಂಹದೊಡನೆ ಆಡುವಾಗ ಮಗುವಿನ ಕೈಯಲ್ಲಿನ ರಕ್ಷಾಬಂಧ ಬಿದ್ದುಹೋಗಿತ್ತು. ಅದು ದುಷ್ಯಂತನ ಕಣ್ಣಿಗೆ ಬಿತ್ತು. ಅವನು ಅದನ್ನು ಎತ್ತಿಕೊಳ್ಳಲುಹೋದ. ಅದನ್ನು ನೋಡಿದ ತಾಪಸಿಯರು ಕೂಗಿಕೊಂಡರು: “ಬೇಡ, ಅದನ್ನು ಮುಟ್ಟಬೇಡಿ.” ಅಷ್ಟರಲ್ಲಿ ರಾಜ ಅದನ್ನು ಕೈಯಲ್ಲಿ ತೆಗೆದುಕೊಂಡಾಗಿತ್ತು. ಕುಮಾರನಿಗೆ ಕಟ್ಟಿಯೂ ಆಗಿತ್ತು. ತಾಪಸಿಯರು ಹಾಗೆಯೇ ಬೆರಗಾಗಿ ನಿಂತರು. ರಾಜನು ಪ್ರಶ್ನಿಸಿದಾಗ ಅವರಿಂದ ತಿಳಿದ ಸಮಾಚಾರದಿಂದ ಅವನಿಗೆ ಮತ್ತೂ ಸಂತೋಷ ಆಶ್ಚರ್ಯ ಉಂಟಾಯಿತು.

ಆ ರಕ್ಷಾಬಂಧ ‘ಅಪರಾಜಿತೆ’ ಎಂಬ ಮೂಲಿಕೆ ಯಿಂದ ಮಾಡಲ್ಪಟ್ಟಿದ್ದು. ಅದನ್ನು ಮಾರೀಚ ಋಷಿಗಳು, ಆ ಮಗುವಿಗೆ ಚಾತಕರ್ಮದ ಸಮಯದಲ್ಲಿ ಕಟ್ಟಿದ್ದರು. ಅದಕ್ಕೆ ಒಂದು ನಿಯಮವಿತ್ತು. ಆ ಬಂಧವು ಕಳಚಿ, ನೆಲದಲ್ಲಿ ಬಿದ್ದದ್ದೇ ಆದರೆ, ಅದನ್ನು ಅವನ ತಾಯಿ ತಂದೆಯರು ಮಾತ್ರ ಮುಟ್ಟಬಹುದು; ಎತ್ತಿ ಕಟ್ಟಬಹುದು. ಬೇರೆಯವರು ಅದನ್ನು ಮುಟ್ಟಿದರೆ ಅದು ಹಾವಾಗಿ ಕಚ್ಚುವುದು. ಇದನ್ನು ಕೇಳಿದ ರಾಜ ಮತ್ತೆ ಅವರನ್ನು ಪ್ರಶ್ನಿಸಿದ: “ಹಿಂದೆ ಯಾವಾಗಲಾದರೂ ಈ ರೀತಿ ನಡೆದಿದೆಯೆ ?” ತಾಪಸಿಯರು ಹೇಳಿದರು: “ಅನೇಕ ಬಾರಿ ನಡೆದಿದೆ. ಇದು ಸತ್ಯ.” ಈಗ ರಾಜನಿಗೆ ಸಂದೇಹ ಉಳಿಯಲಿಲ್ಲ. ತಾಪಸಿಯರೂ ನಡೆದ ವಿಷಯವನ್ನು ಶಕುಂತಲೆಗೆ ತಿಳಿಸಲು ಓಡಿದರು, ದುಷ್ಯಂತನೂ ಯೋಚಿಸುತ್ತಿದ್ದ: “ಶಕುಂತಲೆ ಇಲ್ಲೇ ಇರಬೇಕು. ಇವನೇ ನನ್ನ ಪುತ್ರ.” ಅವನನ್ನು ಮುದ್ದಿಸಬೇಕೆಂದು ಹೋದ. ಆ ಬಾಲಕ ದಿಟ್ಟತನದಿಂದ, “ನೀನು ಯಾರು? ನನ್ನನ್ನೇಕೆ ಮುಟ್ಟುತ್ತೀಯೆ? ನನ್ನ ತಂದೆ ದುಷ್ಯಂತ, ನೀನಲ್ಲ!” ಎಂದಾಗ ದುಷ್ಯಂತನಿಗೆ ಇನ್ನೂ ಪ್ರೀತಿ ಉಕ್ಕಿತು.

ಮರಳಿದ ಭಾಗ್ಯ

ಆ ವೇಳೆಗೆ ಶಕುಂತಲೆ ಬಂದಳು. (ಅವಳನ್ನು ತಾಯಿ ಮೇನಕೆ ಕರೆದುಕೊಂಡು ಬಂದು ಈ ಆಶ್ರಮದಲ್ಲಿ ಬಿಟ್ಟಿದ್ದಳು.) ಗಂಡನನ್ನು ನೋಡಿ ಅವಳಿಗೆ ಬಾಯಿಯಿಂದ ಮಾತು ಹೊರಡಲಿಲ್ಲ. ‘ಆರ್ಯಪುತ್ರನಿಗೆ ಜಯವಾಗಲಿ’ ಎನ್ನಲು ಹೋದಳು. ಕಣ್ಣೀರು ತುಂಬಿ ಕೊರಳಸೆರೆ ಬಿಗಿಯಿತು. ದುಷ್ಯಂತ ಅವಳ ಕ್ಷಮೆ ಬೇಡಿದ. ಅವಳು, “ಹಿಂದಿನ ಜನ್ಮದಲ್ಲಿ ನಾನೇ ಏನೋ ಪಾಪ ಮಾಡಿದ್ದೆ. ಆದ್ದರಿಂದ ದಯಾವಂತನಾದ ನೀನೂ ಹಾಗೆ ನಡೆದು ಕೊಂಡೆ” ಎಂದು ಸಮಾಧಾನ ಮಾಡಿದಳು.

ಹಾಗೆಯೇ ಅವಳ ದೃಷ್ಟಿ, ದುಷ್ಯಂತನ ಕೈಲಿದ್ದ ಉಂಗುರದ ಕಡೆ ಹೋಯಿತು. ದುಷ್ಯಂತನ ಕೈಲಿ ಉಂಗುರ! ತಾನು ಕಳೆದುಕೊಂಡ ಉಂಗುರ ಇವನ ಬಳಿ ಹೇಗೆ ಬಂತು ಎಂದು ಆಶ್ಚರ್ಯ. ರಾಜನೇ ಎಲ್ಲವನ್ನು ಹೇಳಿದ ಅದು ತನಗೆ ಶಕ್ರತೀರ್ಥದ ಬೆಸ್ತನಿಂದ ಸಿಕ್ಕಿದ್ದು, ಅನಂತರವೇ ಅವಳ ನೆನಪು ಉಂಟಾದದ್ದು. ಆಗ ಶಕುಂತಲೆಗೆ ಗೆಳತಿಯರಾಡಿದ ಮಾತುಗಳೂ ನೆನಪಿಗೆ ಬಂದವು.

ದುಷ್ಯಂತನೂ ಈ ಪುಣ್ಯಾಶ್ರಮದಲ್ಲಿ ತನಗೆ ಪತ್ನೀ ಪುತ್ರರು ಸಿಕ್ಕಿದ್ದಕ್ಕೆ ಸಂತೋಷಪಟ್ಟ. ಅವರೊಡನೆಯೇ ಪೂಜ್ಯರಾದ ಮಾರೀಚ ಋಷಿಗಳನ್ನು ದರ್ಶಿಸಲು ಹೊರಟ.

ಮಾರೀಚ ಮಹರ್ಷಿಗಳು ತಮ್ಮ ಪತ್ನಿಯಾದ ಅದಿತಿ ಯೊಡನೆ ಪೀಠದಲ್ಲಿ ಕುಳಿತಿದ್ದರು. ದುಷ್ಯಂತ, ಶಕುಂತಲೆ ಸರ್ವದಮನರೊಡನೆ ಅವರಿಗೆ ನಮಸ್ಕರಿಸಿದ. ಋಷಿಗಳು ಅವರೆಲ್ಲರನ್ನೂ ಹರಸಿದರು. ದುಷ್ಯಂತ, ತನ್ನಿಂದ ಶಕುಂತಲೆಗೆ ಆದ ಅನ್ಯಾಯಕ್ಕಾಗಿ ಮಹರ್ಷಿಗಳಲ್ಲೂ ಕ್ಷಮೆ ಬೇಡಿದ. ಮಾರೀಚರು ಅವನಿಗೆ ಸಮಾಧಾನ ಮಾಡಿದರು. “ಅದು ನಿನ್ನಿಂದಾದ ತಪ್ಪಲ್ಲ. ಅದಕ್ಕೆ ಕಾರಣ ದುರ್ವಾಸರ ಶಾಪ” ಎಂದು ಎಲ್ಲವನ್ನೂ ತಿಳಿಸಿದರು.

ಇದನ್ನು ಕೇಳಿ ದುಷ್ಯಂತ_ಶಕುಂತಲೆಯರಿಗೆ ಸಮಾಧಾನವಾಯಿತು. ಶಕುಂತಲೆ, “ತನ್ನ ಪತಿ ತಿಳಿದೂ ತಪ್ಪು ಮಾಡಲಿಲ್ಲ, ತನ್ನ ಹಿರಿಮೆಯನ್ನು ಕಾಪಾಡಿಕೊಂಡ” ಎಂದು ಸಂತೋಷಪಟ್ಟಳು.

ಶಕುಂತಲೆ, ದುಷ್ಯಂತನ ನೆಚ್ಚಿನ ಮಡದಿಯಾಗಿ, ಭರತನ ಮೆಚ್ಚಿನ ಮಾತೆಯಾಗಿ ನಾಡಿನ ಆದರ್ಶ ರಮಣಿಯಾದಳು.

ಭರತನಂತಹ ವೀರನನ್ನು ನಾಡಿಗೆ ನೀಡಿ ಕೀರ್ತಿ ಗಳಿಸಿದಳು.