ಪ್ರತಿ ವರ್ಷ ಮಳೆ ಬೆಳೆಯಿಲ್ಲದೆ ಕಂಗಾಲಾಗುತ್ತಿದ್ದ ಕೃಷಿಕರು ಈ ವರ್ಷದ ಅತಿವೃಷ್ಟಿ ಯಿಂದಾಗಿ ಫಸಲು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಾಗೂ ಹೀಗೂ ಬಂದಿರುವ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ. ಈ ಎಲ್ಲ ಹಿಗ್ಗು ಮುಗ್ಗಾಟದಿಂದ ಕೃಷಿಕನ ದೇಹ ಮತ್ತೂ ಕೃಶವಾಗ ತೊಡಗಿದೆ. ದೇಹ ಮನಸ್ಸುಗಳೆರೆಡೂ ದಣಿದಾಗ ಮಾಡುವುದೇನನ್ನು?

ಪ್ರಕೃತಿಯಲ್ಲಿ ದೇಹದ ಆಯಾಸಕ್ಕಿರುವಂತೆಯೇ, ಮಾನಸಿಕ ದಣಿವನ್ನು ದೂರ ಮಾಡಲು,   ಉಲ್ಲಾಸ ಪಡೆಯಲು, ಹಿತ್ತಿಲ ಗಿಡಗಳಿವೆ. ಅವುಗಳನ್ನು ಬಳಸಿಕೊಳ್ಳುವ ಸಹನೆ, ತಿಳಿವಳಿಕೆ ನಮ್ಮಲ್ಲಿರ ಬೇಕು.  ಎಲ್ಲಕ್ಕೂ ಉತ್ತರ ಹಿತ್ತಿಲ ಗಿಡದಲ್ಲೇ? ಎನ್ನಬೇಡಿ. ನಮ್ಮ ದಣಿವನ್ನು ಹೋಗಲಾಡಿಸಿ, ದೇಹಕ್ಕೆ ಚೈತನ್ಯ ಒದಗಿಸಿ, ಅಷ್ಟೋ ಇಷ್ಟೋ ಹಣ ಕಿಸೆಗೆ ಸೇರುವಂತೆ ಮಾಡುವ ಮಾಂತ್ರಿಕ ಗಿಡಗಳು  ನಮ್ಮ ಹಿತ್ತಿಲಲ್ಲಿ ಇರುವಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಸಹ. ನೂರಾರು ವರ್ಷಗಳಿಂದ ನಮ್ಮ ಭಾರತದಲ್ಲಿ ಬೆಳೆಯುತ್ತಿರುವ, ಇಂತಹ ಹಲವಾರು ಗಿಡಗಳಿವೆ. ಅವುಗಳಲ್ಲಿ ಬಳಕೆಯಾಗುತ್ತಿರುವ, ನೂರಾರು ಕಾಯಿಲೆ ಗಳಿಗೆ ಔಷಧವಾಗಬಲ್ಲ ಹಿತ್ತಿಲ ಗಿಡವೇ ‘ಶತಾವರಿ’. ಹಲವು ಮಕ್ಕಳ ತಾಯಿ ಎಂಬ ಹೆಗ್ಗಳಿಕೆ ಇದಕ್ಕೆ.

ಹೆಸರೇ ಹೇಳುವಂತೆ ನೂರಾರು ರೋಗಗಳಿಗೆ ಮದ್ದಾಗ ಬಲ್ಲ ಶತಾವರಿ, ಆಸ್ಪರಾಗೇಸಿ ಸಸ್ಯ ಕುಟುಂಬಕ್ಕೆ ಸೇರಿದ್ದು. ‘ಆಸ್ಪರೇಗಸ್ ರೆಸಿಮೋಸೆಸ್’ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಈ ಗಿಡಕ್ಕೆ ಶತಾವರಿ ಎಂಬುದು ಸಂಸ್ಕೃತದ ನಾಮಧೇಯ.

ಭಾರತದಲ್ಲಿ, ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ, ಹಿಮಾಲಯದ ತಪ್ಪಲಲ್ಲಿ ಬೆಳೆಯುವ ಈ ಗಿಡವನ್ನು ನಮ್ಮ ಹಿತ್ತಿಲಲ್ಲಿ ಸರಾಗವಾಗಿ ಬೆಳೆಯ ಬಹುದು. ಒಂದೆರೆಡು ಮೀಟರ್ ಉದ್ದಕ್ಕೆ ಬೆಳೆಯುವ ಈ ಗಿಡಕ್ಕೆ ಚೂಪಾಗಿ ಉದ್ದಕ್ಕಿರುವ, ಹೊಳೆಯುವ ಎಲೆಗಳು. ಜುಲೈ ತಿಂಗಳಲ್ಲಿ ಅರಳುವ ಪುಟ್ಟ ಬಿಳಿ ಹೂಗಳು ಸೆಪ್ಟೆಂಬರ್ ಹೊತ್ತಿಗೆ ಕಪ್ಪು ಹಣ್ಣುಗಳಾಗುತ್ತವೆ.  ಒಣಗಿದಾಗ ಬೀಜಗಳನ್ನು ಸಂಗ್ರಹಿಸಿಡಬೇಕು, ಮುಂದಿನ ಬಿತ್ತನೆಗಾಗಿ.

ಶತಾವರಿ ಗಿಡ

ಬೀಜ ಅಥವ ಸಕ್ಕರ‍್ಸ್ ಗಳಿಂದ ಹೊಸ ಗಿಡ ಮಾಡಿಕೊಳ್ಳ ಬಹುದು. ಹದವಾದ ಮಣ್ಣಿನಲ್ಲಿ ೬೦ ಸೆಂ ಮಿ ಅಂತರದ ಏರುಮಡಿಗಳಲ್ಲಿ ಬಿತ್ತನೆ ಮಾಡಿ. ಹಬ್ಬುವ ಗುಣದ ಬಳ್ಳಿಯಾದ್ದರಿಂದ ೪-೬ಅಡಿ ಎತ್ತರದ ಕೋಲುಗಳನ್ನು ಆಧಾರವಾಗಿ ಕೊಡುವುದು ಸೂಕ್ತ. ಚೆನ್ನಾಗಿ ಹಬ್ಬಿದ ಬಳ್ಳಿಯಿಂದ ೫೦೦-೬೦೦ಗ್ರಾಂ ಗೆಡ್ಡೆಗಳು ದೊರೆಯಲು ೧ ರಿಂದ ೨ ವರ್ಷಗಳು ಬೇಕು. ನೋಡಲು ಕ್ಯಾರೆಟ್ ಗೆಡ್ಡೆಗಳಂತೆ ತೋರುವುದು. ಆದರೆ ಬಣ್ಣ ಮಾತ್ರ ಮಾಸಲು.

ಶತಾವರಿ ನೂರಾರು ರೋಗಗಳಿಗೆ ಮದ್ದಾಗ ಬಲ್ಲದು. ಸುಮ್ಮನೆ ಬೆಳೆದಾಗ ಬಳಸಲು ತಿಳಿಯದಿದ್ದರೆ ಮಾರಾಟ ಮಾಡುವುದು ಕಷ್ಟ.  ಹಾಗೇ ಒಪ್ಪಂದ ಕೃಷಿಯಿಂದ (ಕಾಂಟ್ರಾಕ್ಟ್ -ಫಾರ್ಮಿಂಗ್) ಬೆಳೆದರೆ  ಆದಾಯವನ್ನೂ ತರಬಲ್ಲದು.  ಮನೆಗೊಂದು ಶತಾವರಿ ಇದ್ದರೆ ರೋಗಗಳೆಲ್ಲ ಹರಿದಾರಿ ದೂರ. ಡಾ: ಅನ್ನಪೂರ್ಣ ಆಯುರ್ವೇದ ತಜ್ಞೆ. ಶತಾವರಿಯ ಬಗ್ಗೆ ಅಪರಿಮಿತ ಪ್ರೀತಿ, ಹೆಮ್ಮೆ. ಅವರ ಮಾತುಗಳಿಂದ ಎಲ್ಲರಿಗೂ ಉಪಯೋಗವಾಗ ಬಹುದು.

ದೇಹದಲ್ಲಿ ಉಂಟಾಗುವ ಅಸಿಡಿಟಿಗೆ, ಧ್ವನಿ ಗಡಸಾದಾಗ, ಮುಟ್ಟಿನ ತೊಂದರೆಗಳಿಗೆ, ತಾಯಿಗೆ ಹಾಲು ಕ್ಷೀಣಿಸಿದಾಗ, ಮತ್ತು ದೇಹದ  ರೋಗ ನಿರೋಧಕ ಶಕ್ತಿ ಹೆಚ್ಚಿಸಲು  ಶತಾವರಿ ಗೆಡ್ಡೆಗಳನ್ನು ಸಂಸ್ಕರಿಸಿ ಔಷಧಗಳನ್ನು ತಯಾರಿಸಲಾಗುತ್ತದೆ. ಈ ಔಷಧಗಳಿಗೆ ಬೇಡಿಕೆಯೂ ಬಹಳಷ್ಟಿದೆ.

ಶತಾವರಿ ಗೆಡ್ಡೆಗಳು.

ಗಂಟಲಿನ ಉರಿ, ಧ್ವನಿ ಗಡಸಾದಾಗ, ಒಂದು ಚಮಚ ಶತಾವರಿ ಪುಡಿಗೆ ಜೇನುತುಪ್ಪ ಬೆರೆಸಿ ಊಟವಾದ ಮೇಲೆ ತಿಂದರೆ ಗುಣ ಕಾಣುತ್ತದೆ.

ಕಾಲುಗಳಲ್ಲಿ ಉರಿ ಇದ್ದಾಗ ಗೆಡ್ಡೆಗಳ ರಸವನ್ನು ಬೆಳಗ್ಗೆ ಮತ್ತು ರಾತ್ರೆ ಹಚ್ಚಿದರೆ ತೊಂದರೆ ಕಮ್ಮಿಯಾಗುತ್ತದೆ.

ಅಸಿಡಿಟಿ ಉಂಟಾದಾಗ ಇದರ ರಸಕ್ಕೆ ಸಕ್ಕರೆ ಬೆರೆಸಿ ಬೆಳಗ್ಗೆ ಸಂಜೆ ಒಂದು ವಾರ ಕುಡಿಯ ಬೇಕು.

ನಿಯಮಿತವಾಗಿ ಶತಾವರಿಯನ್ನು ಬಳಸಿದಾಗ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

(ಚಿತ್ರಗಳು : ಎ ಆರ್ ಎಸ್ ಶರ್ಮ)