ಕನ್ನಡ ತನ್ನ ಒಳಗೆ ಸಾಹಿತ್ಯದ ವಿಶ್ವವನ್ನೇ ಧಾರಣೆ ಮಾಡಬೇಕೆಂಬ ನಮ್ಮ ಪೂರ್ವಸೂರಿಗಳ ಆಶಯ ಕ್ರಮೇಣ ನಿಜವಾಗುತ್ತ ಹೋಗುತ್ತಿದೆ. ಯೇಟ್ಸ್ ಕವಿ ಕನ್ನಡದೊಳಕ್ಕೆ ಹಲವರ ಭಾಷಾಂತರಗಳ ಮೂಲಕ, ಅವನಿಂದ ಪ್ರೇರಿತರಾಗಿ ಸ್ವತಃ ಬರೆದವರ ಮೂಲಕ ಬಂದಿದ್ದಾನೆ. ನಾನು ಮಾಡಿದ ಈ ಬಗೆಯ ಪ್ರಯತ್ನವನ್ನೆಲ್ಲ ಒಟ್ಟುಗೂಡಿಸಿ ಸಂಪಾದಿಸಿದವರು ನನ್ನ ಕ್ರಿಯಾಶೀಲ ಯುವ ಗೆಳೆಯರಾದ ಶ್ರೀ ನ. ರವಿಕುಮಾರ್ ರವರು. ಸಂಪಾದಿಸಿದ್ದಷ್ಟೇ ಅಲ್ಲ, ಈ ಪುಸ್ತಕವನ್ನು ಅಚ್ಚುಕಟ್ಟಾಗಿ ನನಗೆ ಇಷ್ಟವಾಗುವಂತೆ ಪ್ರಕಟಿಸುತ್ತಲೂ ಇದ್ದಾರೆ. ಇವರಿಗೆ ನಾನು ಋಣಿ.

ಕವಿ ಯೇಟ್ಸ್ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ತಿಳಿದಿದ್ದ; ಅಪೂರ್ವವಾದ ಅನನ್ಯತೆಯಲ್ಲಿ ಚಿಂತಿಸಬಲ್ಲವರಾಗಿದ್ದ ದಿವಂಗತ ಶಂಕರ ಮೊಕಾಶಿ ಪುಣೇಕರ್ ನೆನಪಿಗೆ ಈ ಪುಸ್ತಕವನ್ನು ಅರ್ಪಿಸುತ್ತಿದ್ದೇನೆ.

ಯು.ಆರ್. ಅನಂತಮೂರ್ತಿ