ಮಲ ಮೂತ್ರದ ಗುಹ್ಯದಲ್ಲೆ ಗುಡಿಕಟ್ಟುವ ಪ್ರೀತಿ
ಮುಪ್ಪಿನ ನಿಶ್ಯಕ್ತಿಯಲ್ಲು ಉಳಿದೆ ಬಿಡುವ ಈ ತೀಟೆ
ಬಂಗಾರದ ಪಕ್ಷಿಯಾಗಿ ಚಿರವಾಗುವ ಆಸೆ ಕವಿಗೆ
ಜರಾಶೀರ್ಣ ಏಟ್ಸ್‌ ಋಷಿಗೆ
ಬಯಲಾಗುವ ಆಸೆ
ಹಾಡುವ ಆಸೆ

ರಾತ್ರೆ ಉರಿದ ದೀಪ ಹಗಲು ಮ್ಲಾನವಾಗಿ ಕಂಡ ನೋವು
ಪ್ರಣಯವೀರನಾಗಿ ಸತತ ಹೊಳ್ಳೆ ಕಿಸಿದು ಮೂಸುವಾಸೆ
ಮುಖವಾಡವ ಮುಖ ಮಾಡುವ ಬಣ್ಣವೇಷ ಹಾಕುವಾಸೆ
ರಸವಿಲ್ಲದ ನರವಿಲ್ಲದ ಚತುರೋಕ್ತಿಯ ನಿಗುರು ಕವಿಗೆ

ಸೊರಗಿ ಸೋತು ಬೊಗಳೆಯಾದ ಸಂಪನ್ನರ ನೀತಿ ಗೀತಿ
ಹಳೆಯ ಸರಕು, ಗಬ್ಬು ಜೋಕು ಕಚ್ಚೆ ಹರುಕ ಧೀರ ಖುಷಿಗೆ
ಜೀರ್ಣವಸ್ತ್ರ ಕಳಚುವಾಸೆ ಹೋತದ ಬೆದೆ ಮಹಾಕವಿಗೆ
ಬಂಗಾರದ ಪಕ್ಷಿಯಾಗಿ ಚಿರವಾಗುವ ಆಸೆ ಮುದಿಗೆ

ದಡದಾಚೆಗೆ ತಲುಪುವಾಸೆ ಕಡುಕೋಪದ ಹುಂಬ ಋಷಿಗೆ
ಕೈ ತಟ್ಟಿ ಕುಣಿಯುವಾಸೆ ದುಷ್ಟ ದ್ರಷ್ಟಾರ ಕವಿಗೆ
ಎಲ್ಲ ಏಣಿ ಶುರುವಾಗುವ ಹರಕು ಮುರುಕು ಮೈಯೆಲ್ಲೇ
ಶುರು ಮಾಡುವ ಆಸೆ.

ಹುಚ್ಚು ಮೂಳಿ ಮಹಾಕಾಳಿ ಐರ್ಲೆಂಡಿನ ಚ್ಯವನ ಋಷಿಗೆ
ಹುಟ್ಟುವಾಸೆ, ಹೆಣ್ಣಿನಾಸೆ, ಋಷಿ ಮೂಲದ ತವರಿನಾಸೆ,
ಪಡುವ ಆಸೆ, ಪಡುವ ಪಾಡೆ ಹಾಡಾಗುವ
ಬಂಗಾರದ ಪಕ್ಷಿಯಾಗಿ ಚಿರವಾಗುವ ಆಸೆ.

(ಈವರೆಗಿನ ಕವಿತೆಗಳು – ೨೦೦೨ ಸಂಕಲನದಿಂದ)