ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ
ಆಡಿದೆವು ಅದೂ ಇದೂ ಮಾತು
ಅವನೆಂದ, ‘ಎಂಥಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು’.
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು

ಇದು ಲಂಕೇಶ್‌ ಕಟ್ಟಿಕೊಟ್ಟಿರುವ ಯೇಟ್ಸ್‌ ‘ಮಳ್ಳಿ ಜೇನ್‌ ಬಿಷಪ್‌ ಮಾತಾಡಿದ್ದು’ ಕವಿತೆಯ ಸಾಲುಗಳು. ಇದೇ ಸಾಲುಗಳನ್ನು ಅನಂತಮೂರ್ತಿಯವರು ಹೀಗೆ ಅನುವಾದಿಸುತ್ತಾರೆ’.

ನನ್ನನ್ನು ಹಂಗಿಸಿ ಹೇಳಿದ ಪಾದ್ರಿ
ರಸ್ತೆಯ ಬದಿಯಲ್ಲಿ:
ಜೋತಿವೆ ಮೊಲೆ, ರಸ ಬತ್ತುತ
ಯೋನಿನಾಳದಲ್ಲಿ;
ಪಡಿ ಶ್ರೇಯಸ್ಸನು ಭಗವಂತನ ಸೌಧದಿ
ನೀನಿದಿ ಪ್ರೇಮದ ಬಿಲದಲ್ಲಿ

ಯಾವುದು ಶ್ರೇಷ್ಠ-ಯಾವುದು ಕನಿಷ್ಠ ಎಂದು ಹೇಳಲು ಈ ಸಾಲುಗಳನ್ನು ಉದ್ಧರಿಸಿದ್ದಲ್ಲ. ಒಂದು ಶ್ರೇಷ್ಠಕವಿತೆ ಹೇಗೆ ಬೇರೆಬೇರೆ ಬಗೆಗಳಲ್ಲಿ ತೆರೆದುಕೊಳ್ಳಲು ಸಾಧ್ಯ ಎಂಬುದಕ್ಕೆ ಈ ಅನುವಾದಗಳು ಸಾಕ್ಷಿ. ಲಂಕೇಶರು ಮೂಲ ತಂತು ಹಿಡಿದು ತಮ್ಮದೇ ಪದ್ಯವೆಂಬಂತೆ ಧ್ಯಾನಿಸಿ ಬರೆದರೆ, ಅನಂತಮೂರ್ತಿಯವರು ಮೂಲಕ್ಕೆ ನಿಷ್ಠವಾಗಿ ಕಟ್ಟಿಕೊಡುವ ಪ್ರಯತ್ನಮಾಡುತ್ತಾರೆ. ೨೦-೨೫ ವರ್ಷಗಳ ಹಿಂದಿನ ಅನುವಾದ, ಭಾಷಾಂತರ ಕುರಿತ ಮನಸ್ಥಿತಿಗಳಿಗೂ ಈ ಕವಿತೆಗಳು ಸಾಕ್ಷಿಯಾಗಿವೆ. ನನ್ನ ಕಾಲದ ಯುವ ಕವಿಯೊಬ್ಬ ಅಥವಾ ಹೆಣ್ಣುಮಗಳು ಈ ಕವಿತೆಯನ್ನು ಹೇಗೆ ಕಟ್ಟಿಕೊಡಲು ಸಾಧ್ಯ ಎಂದೂ ಯೋಚಿಸಬೇಕೆನಿಸುತ್ತದೆ. ಹೀಗಾಗಿ ಒಂದು ಕವಿತೆಯ ಗ್ರಹಿಕೆಯೆಂಬುದು ಆಖೈರಾದ, ಈಗಾಗಲೇ ತೀರ್ಮಾನಿಸಲಾದ, ಕಟ್ಟಿಕೊಡಲ್ಪಟ್ಟ, ನಿರ್ದಿಷ್ಟ ನೆಲೆಯ, ಅರ್ಥವಂತಿಕೆಯ ಬರಹವಲ್ಲ. ಕವಿತೆ ಪ್ರೇಮದಂತೆ ಪ್ರತಿಕ್ಷಣವೂ ಹುಟ್ಟಿ ನಮ್ಮ ಕಡೆಗೆ ಪ್ರವಹಿಸುತ್ತಿರುವಂಥದು.

ಈ ಕಾರಣಕ್ಕೆ ಯೇಟ್ಸ್, ಎಲಿಯಟ್‌, ಗಾಲಿಬ್‌, ಕಬೀರ್ ನಮ್ಮವರೇ ಆಗಿಬಿಡುತ್ತಾರೆ; ಪಂಪ ಹೇಳುವಂತೆ ‘ನಿಚ್ಚಂ ಪೊಸತಾಗಿ’. ಅದರಲ್ಲೂ ಯೇಟ್ಸ್‌ನಮ್ಮ ಪೂರ್ವಿಕನಂತೆ ಕಾಣುತ್ತಾನೆ.

ಇವತ್ತು ನಾವು ವಸಾಹತೋತ್ತರ ಚಿಂತನೆಯೆಂದು ಯಾವುದನ್ನು ಕರೆಯುತ್ತೇವೆಯೋ ಅಂತಹ ಚಿಂತನಕ್ರಮವನ್ನು ತನ್ನ ಬರಹಗಳ ಮೂಲಕ ತೋರಿಸಿಕೊಟ್ಟವನು ಯೇಟ್ಸ್. ಕನ್ನಡದಲ್ಲಿ ಯೇಟ್ಸ್‌ ಬಗ್ಗೆ ಹೆಚ್ಚು ತಿಳಿದಿದ್ದವರು ಶಂಕರಮೊಕಾಶಿ ಪುಣೇಕರ್. ‘ಯೇಟ್ಸ್‌ನನ್ನು ಇಂಗ್ಲಿಷ್‌ ಕಾವ್ಯಪರಂಪರೆಗಿಂತ ಭಿನ್ನವಾಗಿ ಅಂದರೆ ಐರ್ಲೆಂಡಿನ ಕವಿಯಾಗಿ, ನೋಡುವ ಮೂಲಕ ಬೇರೆಯದೇ ಆದ ಐಡೆಂಟಿಟಿಯನ್ನು ಕಟ್ಟಿಕೊಟ್ಟವರು ಶಂಕರ ಮೊಕಾಶಿ’ ಎಂಬ ರಾಜೇಂದ್ರಚೆನ್ನಿ (ಮಯೂರದ ಸಂದರ್ಶನ) ಅವರ ಮಾತುಗಳನ್ನಿಲ್ಲಿ ಗಮನಿಸಬೇಕು.

ಕನ್ನಡದಲ್ಲಿ ಯೇಟ್ಸ್ ಇಂಗ್ಲಿಷ್‌ನ ಅಥವ ಐರ್ಲೆಂಡಿನ ಕವಿಯಾಗಿ ಬರಲಿಲ್ಲ. ನಮ್ಮೊಳಗನ್ನೆ ಬದಲಾಯಿಸಿದ ಕವಿಯಾಗಿ ಬಂದ ಎನ್ನುವುದು ಸೂಕ್ತ. ಅದು ಕನ್ನಡದ ಭಾಗ್ಯ. ಕನ್ನಡಕಾವ್ಯ ಆಧುನಿಕತೆಯನ್ನು ಒಳಗೊಂಡು ಇತಿಹಾಸ, ಐತಿಹ್ಯ, ಸ್ಥಳೀಯ ಪುರಾಣಗಳನ್ನೂ ತನ್ನ ಆವರಣ ಮಾಡಿಕೊಂಡದ್ದು ವಿಶೇಷ. ಇದು ಅನಂತಮೂರ್ತಿಯವರು ಹೇಳುವ ‘ಜೀರ್ಣಾಗ್ನಿ’ ಇದು ಡಿ.ಆರ್. ಹೇಳುವ ‘ಮಣ್ಣಿನ ಪವಿತ್ರೀಕರಣ’.

ಮತ್ತೆ ಲಂಕೇಶ್‌ ಕವಿತೆಗೆ ಹಿಂದಿರುಗೋಣ.

ಹೆಣ್ಣು ಪ್ರೇಮಕ್ಕೆ ಮನವನೆಟ್ಟರೆ
ಉಬ್ಬಿಹೋಗುವರು ಸೆಡೆದು,
ಕಾಮ ಮಾಡಿದ್ದೇನುಹಾಡಿದ ಡೇರೆ
ಮಲಮೂತ್ರ ಸ್ಥಾನ ಹಿಡಿದು,
ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
ಒಂದಾಗಿಸುವುದು ಹೊಲಿದು

ಉಗುಳು ಮಂತ್ರ ಒಂದೇ ಇರುವ ನಾಲಿಗೆ, ಕಾಮ ಮತ್ತು ಪ್ರೇಮಕ್ಕೆ ನೆಲೆಯಾದ ಯೋನಿ ದೇಹವೂ ದೇವಾಲಯವೂ ಆಗುವುದು ಹೀಗೆ. ನಮ್ಮ ಗ್ರಹಿಕೆಗಳು ವಿರುದ್ಧ ಧ್ರುವಗಳಾಗದೆ ಅನುಸಂಧಾನದ ಮಾರ್ಗಗಳಾಗಿ ಕಾಣುವುದು ಈ ಕಾಲದ ತುರ್ತು.

ಶ್ರೀ ಅನಂತಮೂರ್ತಿಯವರು ಯೇಟ್ಸ್ ಕುರಿತು ಬರೆದ ಕವಿತೆ ಈ ಚಿಂತನೆಗಳೆಲ್ಲವನ್ನು ಸಮರ್ಥವಾಗಿ ಹಿಡಿದಿಟ್ಟಿದೆ. ಆ ಪದ್ಯದ ಮೊದಲ ಸಾಲುಗಳು ಹೀಗಿವೆ:

ಮಲಮೂತ್ರದ ಗುಹ್ಯದಲ್ಲಿ ಗುಡಿಕಟ್ಟುವ ಪ್ರೀತಿ
ಮುಪ್ಪಿನ ನಿಶ್ಯಕ್ತಿಯಲ್ಲು ಉಳಿದೆಬಿಡುವ ತೀಟೆ
ಬಂಗಾರದ ಪಕ್ಷಿಯಾಗಿ ಚಿರವಾಗುವ ಆಸೆ ಕವಿಗೆ
ಜರಾಶೀರ್ಣ ಏಟ್ಸ್ ಋಷಿಗೆ
ಬಯಲಾಗುವ ಆಸೆ
ಹಾಡುವ ಆಸೆ

*

ಯೇಟ್ಸ್‌ನ ಕಾವ್ಯ ಕುರಿತ ಪರಿಚಯ, ಪ್ರವೇಶಿಕೆ, ವಿಶ್ಲೇಷಣೆ ಮತ್ತು ಅವನ ಕವಿತೆಗಳ ಅನುವಾದ ಇಲ್ಲಿದೆ. ಅನಂತಮೂರ್ತಿಯವರು ಕಾವ್ಯವನ್ನು ಕುರಿತು ಚಿಂತಿಸುವಾಗಲೆಲ್ಲ ಯೇಟ್ಸ್‌, ಬ್ಲೇಕ್‌, ಎಲಿಯಟ್‌, ಅಡಿಗರನ್ನು ಉದಾಹರಿಸುತ್ತಾರೆ. (ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟರು ಅನುವಾದಿಸಿರುವ ಯೇಟ್ಸ್ ಮತ್ತು ಎಲಿಯಟ್‌ರ ಎರಡು ಸಂಪುಟಗಳ ಕಾವ್ಯ ಬಿಟ್ಟರೆ ನಮ್ಮ ಕಾಲದಲ್ಲಿ ಪಾಶ್ಚಾತ್ಯ ಕಾವ್ಯವನ್ನು ಈ ಪ್ರಮಾಣದಲ್ಲಿ ಅನುವಾದಿಸಿರುವವರು, ಧ್ಯಾನಿಸಿರುವವರು ಕಡಿಮೆ.)

ಬ್ಲೇಕ್‌ ಕಾವ್ಯ ಮತ್ತು ಅವನ ಕಾವ್ಯಚಿಂತನೆ ಕನ್ನಡಕ್ಕೆ ಬರಬೇಕು. ಹಾಗೆಯೇ ಎಲಿಯೆಟ್‌, ಆಡೆನ್‌, ಲೋರ್ಕಾ, ರಿಲ್ಕೆ ಹೀಗೆ…. ಸಣ್ಣ ಪ್ರಮಾಣದಲ್ಲಾದರೂ ಆ ಕನಸು ಸಾಧ್ಯವಾಗಬೇಕೆಂಬುದು ಅಭಿನವದ ಹಂಬಲ. ಹೀಗಾಗಿ ಈ ಮಾಲಿಕೆ.

ವಿದ್ಯಾರ್ಥಿಗಳಿಗೂ ಕಾವ್ಯಾಸಕ್ತರಿಗೂ ಉಪಯೋಗವಾಗಬಲ್ಲ ಇಂತಹ ಪ್ರಯತ್ನಗಳು ಕನ್ನಡದಲ್ಲಿ ಯೇಟ್ಸ್‌ನಂತಹ ಮಹಾಕವಿಯನ್ನು ಪೂರ್ಣಪ್ರಮಾಣದಲ್ಲಿ ಪರಿಚಯಿಸಲಾಗದಿದ್ದರೂ ಅಂತಹ ಪ್ರಯತ್ನಗಳಿಗೆ ಪ್ರೇರಕವಾಗಲಿ ಎಂಬ ಆಶಯ ಅಭಿನವದ್ದು.

ಈ ಪುಸ್ತಕ ಮಾಲಿಕೆಯ ಬಗ್ಗೆ ಆಸಕ್ತಿ ವಹಿಸಿ ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿ ಅವರಿಗೆ, ಸಹಕರಿಸಿದ ಶ್ರೀಮತಿ ಎಸ್ತರ್ ಅವರಿಗೆ, ಬೇರೆ ಬೇರೆ ರೀತಿಯಲ್ಲಿ ನೆರವಾದ ಶ್ರೀಮತಿ ಎಂ.ಎಸ್‌. ಆಶಾದೇವಿ, ಸಿರಾಜ್‌ ಅಹಮದ್‌, ಅವಿನಾಶ್‌ ಟಿ., ಮುಂತಾದ ಗೆಳೆಯರಿಗೆ, ಹಿರಿಯರಿಗೆ ಅಭಿನವ ಋಣಿ.

. ರವಿಕುಮಾರ
(ಅಭಿನವದ ಪರವಾಗಿ)