ಹುಚ್ಚಿ ಐರ್ಲೆಂಡ್‌ ತಿನ್ನಿಸಿದ ನೋವಿನ ಫಲ ವಿಲಿಯಂ ಬಟ್ಲರ್ ಯೇಟ್ಸ್‌ನ ಕಾವ್ಯ ಎನ್ನುತ್ತಾನೆ ಅವನ ಕಿರಿಯ ಸಮಕಾಲೀನ ಕವಿ ಆಡೆನ್‌. ಅಂಥ ಐರ್ಲೆಂಡಿನಿಂದ ಹುಚ್ಚಳಾದವಳು ಯೇಟ್ಸ್‌ಗೆ ಪುರಾಣದ ಹೆಲನ್‌ನಂತೆ ಕಂಡ, ಜೀವನದುದ್ದಕ್ಕೂ ಅವನನ್ನು ಪೀಡಿಸಿದ ಮಾಡ್‌ಗಾನ್‌, ಐರ್ಲೆಂಡಿನ ಹುಚ್ಚು ಯೇಟ್ಸ್‌ಗೆ ಏರಿದ್ದು ಮಾಡ್‌ಗಾನ್‌ ಮುಖಾಂತರ. ಮಾಡ್‌ಗಾನ್‌ ಕೊನೆಯತನಕ, ಇಳಿವಯಸ್ಸಲ್ಲಿ ಅವನು ಮದುವೆಯಾದ ಮೇಲೂ ಯೇಟ್ಸ್‌ನನ್ನು ಹೆಣ್ಣಾಗಿ ಮಾತ್ರವಲ್ಲ, ತತ್ವವಾಗಿಯೂ ಕಾಡಿದಳು. ಯೇಟ್ಸ್‌ನಲ್ಲಿ ಯಾವುದು ಎಷ್ಟು ಖಾಸಗಿ, ವೈಯಕ್ತಿಕ ಎಂದು ಹೇಳಲು ಸಾಧ್ಯವಿಲ್ಲ. ವೈಯಕ್ತಿಕವೆನ್ನುವುದಕ್ಕೂ ಅವನ ಸಾರ್ವಜನಿಕವಾದ ರಾಜಕೀಯ ಆಸಕ್ತಿಗಳಿಗೂ, ಅವನ ಆಧ್ಯಾತ್ಮಿಕ ತುಯ್ದಾಟಗಳಿಗೂ ನಡುವಿನ ಗೆರೆ ಬಲು ತೆಳುವು. ಇದು ಅವನ ಹೆಗ್ಗಳಿಕೆ ಎಂಬುದನ್ನು ಮರೆಯಬಾರದು. ಅವನ ಇಡೀ ಕಾವ್ಯ ಅವನ ಬದುಕಿನ ಅಂಚಿನಲ್ಲಿ ಬರೆದ ವ್ಯಾಖ್ಯೆ ಎಂಬ ಅಪವಾದವೂ ಇದೆ.

ಈ ಅಪವಾದಕ್ಕೆ ಕಾರಣವೆಂದರೆ ಎಲಿಯಟ್‌ನ ಒಂದು ಪ್ರಬಂಧ ವಿಮರ್ಶಕರ ಮೇಲೆ ಮಾಡಿದ ಪರಿಣಾಮ. ಆದರೆ ಕೃತಿಕಾರ ಕೇವಲ ವೇಗವರ್ಧಕದಂತೆ ತನ್ನ ಕಾವ್ಯದ ರಾಸಾಯನಿಕ ಮಾರ್ಪಾಡಿಗೆ ಕಾರಣನಾಗುತ್ತಾನೆ ಎಂದು ಹೇಳಿದ ಅತಿ ಸಂಕೋಚ ಸ್ವಭಾವದ ಎಲಿಯಟ್‌ ಕೂಡ ಕಣ್ಣು ತಪ್ಪಿಸಿ ತನ್ನ ಒಳಗಿನದನ್ನೇ ಬರೆದುಕೊಂಡದ್ದು. ಆದರೆ ಅವನು ವಾಗ್ವಾದಕ್ಕೆಂದು ಅತಿ ಮಾಡಿ ಹೇಳಿದ ಈ ಒಂದು ಮಾತು ಹಲವರನ್ನು ದಿಕ್ಕುಗೆಡಿಸಿತು.

ಇದು ನಿಜ; ಕವಿ ಸಣ್ಣವನಾದರೆ ಅವನ ವೈಯಕ್ತಿಕ-ಕೇವಲ ವೈಯಕ್ತಿಕ. ಆದರೆ ಅವನ ನೋವು ನಲಿವುಗಳು ಗಾಢವಾದದ್ದಾದರೆ, ಅಂದರೆ ಅವನ ಸ್ಪಂದನಶೀಲತೆಯೇ ವ್ಯಾಪ್ತವಾದದ್ದಾದರೆ, ಅವನ ಸ್ವಂತದ ಒಳ ಬಾಳೇ ಇಡೀ ಜನಾಂಗದ್ದೂ ಆದೀತು. ಯೇಟ್ಸ್‌ನ ಮಾಡ್‌ಗಾನ್‌ ವ್ಯಾಮೋಹ, ತನ್ಮೂಲಕ ಐರ್ಲೆಂಡಿನ ಜೊತೆ ಅವನ ಜಗಳ, ಸಫಲತೆ ಕಾಣದ ಅವನ ಕಾಮ, ಮುದಿತನದಲ್ಲೂ ಪ್ರಾಪ್ತವಾಗದ ವೈರಾಗ್ಯ, ಜೀವಕಾಮಕ್ಕೇ ಅಂಟಿಕೊಂಢ ಮುಕ್ತಿಕಾಮ ಎಲ್ಲವೂ ತೀವ್ರವಾಗಿ ಸದ್ಯದಲ್ಲಿ ಒಂದು ಕಾಲದ ಮತ್ತು ವ್ಯಾಪ್ತಿಯಲ್ಲಿ ಎಲ್ಲ ಕಾಲದ ಕಾವ್ಯವಾಗಿಬಿಡುತ್ತದೆ ಯೇಟ್ಸ್‌ನಲ್ಲಿ. ಯಾವುದೇ ಕಾಲದ ಯಾವ ಕವಿ ಈ ಅರ್ಥದಲ್ಲಿ ರೊಮ್ಯಾಂಟಿಕ್‌ ಅಲ್ಲ?

ಹಲವು ಹಂತಗಳಲ್ಲಿ, ಹಲವು ದಿಕ್ಕುಗಳಲ್ಲಿ ಬೆಳೆಯುತ್ತ ಹೋದ ಕವಿ ಯೇಟ್ಸ್‌ ಎಲಿಯಟ್‌ನಂತೆ ಕೆಲವು ಕೃತಿಗಳಲ್ಲಿ ತನ್ನ ಸಾರಸರ್ವಸ್ವವನ್ನು ಎರಕ ಹೊಯ್ದವನಲ್ಲ-ಧಾರಾಳ ಚೆಲ್ಲಿಕೊಂಡವನು. ಅವನ ಕಾಲ ಕೂಡಾ ಹಾಗಿತ್ತು. ಕಲೆಗಾಗಿ ಕಲೆ ಎಂಬ ವಾದದ ಆಸ್ಕರ್ ವೈಲ್ಡ್‌ಗೂ, ಕೊನೆಯಲ್ಲಿ ಕ್ರಾಂತಿ ಶ್ರದ್ಧೆಯ ಆಡೆನ್‌ನಂಥ ಕವಿಗಳಿಗೂ ತೆರೆದುಕೊಂಡು ಬೆಳೆಯುತ್ತ ಹೋದ ಮನಸ್ಸು ಯೇಟ್ಸ್‌ನದು. ಪ್ರತಿ ಹಂತದ ಅವನ ಕಾವ್ಯದ ಸುರುಳಿಗಳಲ್ಲೂ ಅವನ ಹಿಂದಿನದು ಮುಂದಿನದು ಎರಡೂ ಇರುತ್ತವೆ. ತನ್ನ ಯಾವ ಪ್ರಶ್ನೆಯೂ ಬಗೆಹರಿಯದಷ್ಟು ಕಟುವಾಗುತ್ತ ಗಂಟಾಗುತ್ತ ಅವನು ಬೆಳೆದದ್ದು. ನೊಬೆಲ್‌ ಪ್ರಶಸ್ತಿ ಪಡೆದ ನಂತರವೂ ಅವನಲ್ಲಿ ತಣಿದವನ ಶ್ರೀಮದ್‌ಗಾಂಭೀರ್ಯ ಕಾಣಿಸಲಿಲ್ಲ; ನಾಚಿಕೆ ಇಲ್ಲದ ಶಕ್ತಿಯುತವಾದ ಒರಟುತನ, ಯೌವನದ ಹುಂಬತನ ಅವನಲ್ಲಿ ಮಾಯವಾಗಲಿಲ್ಲ; ಪೂರ್ಣಶುದ್ದಿಯ ಆಸೆಯೂ ಅವನನ್ನು ಬಿಡಲಿಲ್ಲ. ಸಾರ್ವಜನಿಕವಾಗಿ ಸನ್ಮಾನ್ಯ ವ್ಯಕ್ತಿಯೆನ್ನಿಸಿಕೊಂಡು ಐರ್ಲೆಂಡಿನ ಸನೆಟರ್ ಆಗಿದ್ದಾಗಲೂ ಯೇಟ್ಸ್‌ ಹಲವರಂತೆ ಕೇವಲ ‘ಮುಖವಾಣಿ’ಯಾಗಿಬಿಡಲಿಲ್ಲ. ಒಂದು ನಿಲುಗಡೆಗೆ ಬರದಂತೆ, ಬರಲಾರದಂತೆ ಉಳಿದುಕೊಂಡ ಅವನ ಆತ್ಮಶ್ರದ್ಧೆ ಓದುಗರಿಂದ ವಿಶೇಷವಾದ ಪ್ರಾಮಾಣಿಕತೆಯ ನ್ನು ಬೇಡುತ್ತದೆ; ನನ್ನಂತೆ ನೀನೂ ಬತ್ತಲಾಗು ಸಮರ್ಥನೆಗೆ ಹಾತೊರೆಯದಂತೆ ನಿಜಕ್ಕಾಗಿ ಪರದಾಡು ಎನ್ನುತ್ತದೆ. ಮುದಿತನದಲ್ಲಿ ಯೇಟ್ಸ್‌ ಬರೆದ ಕಾವ್ಯ ಹಲವು ಮುದುಕರಿಗೆ, ಅವರು ಪ್ರಾಮಾಣಿಕರಾದರೆ, ನಿಜವಾಗಿ ಅನ್ನಿಸುವಂಥ ಸಂವೇದನೆಯದು. ಆದರೆ ಅವರಿಗೆ ಹಾಗೆ ಬಿಚ್ಚಿಕೊಳ್ಳಲು ಧೈರ್ಯ ಸಾಲದೇ ಹೋಗುತ್ತದೆ ಎಂದು ಬಿಗಿದ ತುಟಿಯ ಎಲಿಯಟ್‌ನೇ ಹೇಳುತ್ತಾನೆ.

ಯೇಟ್ಸ್‌ನ ‘ಈಸ್ಟರ್ ೧೯೧೬’ ಅವನು ಸಾಧಿಸಿಕೊಂಡ ಬಲು ಕಷ್ಟದ ಪ್ರಾಮಾಣಿಕತೆಗೆ ನಿದರ್ಶನವಾಗಿದೆ. ಐರಿಶ್‌ ಕ್ರಾಂತಿಕರರು ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದು ಸತ್ತಿದ್ದಾರೆ. ಸತ್ತವರು ಅಸಾಮಾನ್ಯರೇನೂ ಅಲ್ಲ ಎಂದು ಕವಿ ಯೇಟ್ಸ್‌ಗೆ ನಿತ್ಯ ಜೀವನದ ಸಂದರ್ಭದಲ್ಲಿ ಅವರನ್ನು ಕಂಡ ನೆನಪಿನಿಂದ ಗೊತ್ತಿದೆ. ದೈನಿಕದ ಪರದಾಟದಲ್ಲಿ ಎಲ್ಲರಂತೆ ಶುಷ್ಕಜೀವನ ನಡೆಸುತ್ತಿದ್ದವರೇ ರಾಜಕೀಯ ಕ್ರಾಂತಿಯಲ್ಲಿ ಭಾಗವಹಿಸುವ ಎದೆಗಾರಿಕೆ ತೋರಿಸಿ ಸತ್ತಿದ್ದಾರೆ. ಈ ಸಾವಿನಿಂದಾಗಿ ಅವರು ಬದಲಾಗಿದ್ದಾರೆ. ಅವರ ಮೂಲಕ ಕಾಲ ಬದಲಾಗಿದೆ-ಅಪ್ರತಿಮ ರುದ್ರ ಸೌಂದರ್ಯ ಕಾಲದಲ್ಲಿ ಅವತರಿಸಿದೆ. ಆದರೂ ಕವಿಗೆ ಗೊತ್ತು; ಸತ್ತವರು ನಿತ್ಯ ಜೀವನದಲ್ಲಿ ಎಷ್ಟು ಅಲಪರಾಗಿ ಕಂಡಿದ್ದವರೆಂದು. ಕೆಲವರು ಅಷ್ಟಿಷ್ಟು ಸಂಪನ್ನರೋ, ಶಕ್ತಿಯಿದ್ದವರೋ ಆದರೆ, ಒಬ್ಬಳು ವಿತಂಡವಾದದಲ್ಲಿ ಗಂಟಲು ಕಿರುಚಾಡಿದವಳು. ಇನ್ನೊಬ್ಬ ದುಷ್ಟ ಕುಡುಕ. ತನ್ನ ಪ್ರೇಯಸಿ ಮಾಡ್‌ಗಾನ್‌ನನ್ನು ತನ್ನಿಂದ ಕಸಿದವನು, ಅವಳನ್ನು ಬಳಲಿಸಿದವನು. ಅವನು ಕೂಡಾ ಸಾವಿನಲ್ಲಿ ಬದಲಾಗಿದ್ದಾನೆ. ಹೀಗೆ ಪ್ರತಿ ಸ್ಟಾಂಜಾದ ಪಲ್ಲವಿಯಲ್ಲಿ ಬೆರಗಾಗಿ ನುಡಿಯುವಾಗಲೂ ಅವರ ಇನ್ನೊಂದು ನಿಜ ಕವಿಗೆ ಕಾಣಿಸುತ್ತಲೇ ಇರುತ್ತದೆ. ಎರಡನ್ನೂ ಹೇಳಬೇಕು; ಒಂದು ನಿಜ ಇನ್ನೊಂದನ್ನು ಅಳಿಸಿಹಾಕದಂತೆ ಹೇಳಬೇಕು. ಅವರ ತ್ಯಾಗದಿಂದ ಅವರೂ, ಜೊತೆಗೆ ಕಾಲವೂ, ಗುಣಾತ್ಮಕವಾಗಿ ಬದಲಾಗಿದೆ ಎಂಬುದನ್ನು ರಾಜಕೀಯವಾಗಿ ಗ್ರಹಿಸುವಾಗ ರಾಜಕೀಯವಗಿ ಬೇರೆ ಸತ್ಯಗಳೂ ಕವಿಗೆ ಕಾಣಿಸುತ್ತವೆಯಾದ್ದರಿಂದ ಓದುಗರಿಗೂ ಅವನ್ನು ಕಾಣಿಸಬೇಕು.

ಯೇಟ್ಸ್‌ ಅರ್ಧ ಇಂಗ್ಲಿಷ್‌, ಇನ್ನರ್ಧ ಐರಿಷ್‌. ಇಂಗ್ಲೆಂಡ್‌ ಕೂಡ ಐರಿಷ್‌ ಜನರಿಗೆ ಹೆಚ್ಚು ಸ್ವಾತಂತ್ಯ್ರವನ್ನು ಕಾಲಾನುಕ್ರಮದಲ್ಲಿ ಕೊಡಬಹುದಿತ್ತೇನೊ? ಪ್ರಾಣತ್ಯಾಗದ ಅಗತ್ಯವಿರಲಿಲ್ಲವೇನೋ? (ಭಾರತದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಗೋಖಲೆಯವರ ವಾದ ಹೀಗೇ ಇತ್ತು). ಈ ಅನುಮಾನಕ್ಕೂ ಮಿಗಿಲಾದ ಇನ್ನೊಂದು ಸಂಶಯ ಯೇಟ್ಸ್‌ಗೆ ಇದೆ. ಸತ್ತವರು ತಮ್ಮ ಉತ್ಸಾಹದಿಂದಲೇ ಕುರುಡರಾಗಿ ಹುಂಬರಾಗಿ ಸತ್ತಿರಬಹುದು. ಈ ಅನುಮಾನಗಳನ್ನೆಲ್ಲಾ ಹೇಳಿಕೊಳ್ಳದಿದ್ದರೆ ಪದ್ಯ ವೈಯಕ್ತಿಕವಾಗಿ ಅಪ್ರಾಮಾಣಿಕವಾಗುತ್ತದೆ. ಆದರೆ ಅವರ ಸಾವಿನಿಂದಾಗಿ ತತ್ಕಾಲದಲ್ಲಿ ಸ್ಫೋಟವಾದ ಸತ್ಯವನ್ನೂ ಕವಿ ಹೇಳದೇ ಇರಲಾರ. ಚರಿತ್ರೆಯ ಕಾಲದಲ್ಲಿ ಕ್ರಮೇಣ ವಿಕಾಸವಾಗುವ ಸತ್ಯಗಳು, ಇದ್ದಕ್ಕಿದ್ದಂತೆ ಅವತರಿಸಿ ಪ್ರತ್ಯಕ್ಷವಾಗಲೂಬಹುದು. ಹೀಗೆ ಭಾವನಾತ್ಮಕವಾಗಿ ಅನ್ನಿಸಿದ್ದು, ಜೊತೆಗೇ ಚಿಂತನೆಯ ಅನುಮಾನದಲ್ಲಿ ಹೊಳೆದದ್ದು-ಎರಡನ್ನೂ ಬಿಟ್ಟುಕೊಡದಂತೆ ಬರೆದುಕೊಳ್ಳಲು ಅಗತ್ಯವಾದ ಕಾವ್ಯದ ಭಾಷೆ ರೂಪಗಳು ಪದ್ಯದಲ್ಲಿ ಆಶ್ಚರ್ಯಕರವಾಗಿ ಬಳಸಲ್ಪಟ್ಟಿವೆ. ಸಲೀಸಾದ, ಹಗುರವಾದ ಮಾತುಗಳು ಪಲ್ಲವಿಯಲ್ಲಿ ಉತ್ಕಟವಾಗುತ್ತವೆ. ಬೇಕಾದಲ್ಲಿ-ಅಗತ್ಯವಾದಷ್ಟು ಚಿಂತನಶೀಲವಾಗುತ್ತದೆ. ಇಡೀ ಪದ್ಯದಲ್ಲಿ ನನಗೆ ಅದ್ಭುತವೆನ್ನಿಸುವ ಭಾಗ ಕೊನೆಯ ಕೆಲವು ಸಾಲುಗಳು.

ಇದು ಯೇಟ್ಸ್‌ನಲ್ಲಿ ಮಾತ್ರ ಕಾಣುವ ಒಂದು ವಿಶೇಷ ಶಕ್ತಿ. ತನ್ನ ಸಮಕಾಲೀನರನ್ನೆಲ್ಲ ಅವನು ಪುರಾಣದ ವ್ಯಕ್ತಿಗಳಂತೆ ಭಾವಿಸಿಕೊಳ್ಳಬಲ್ಲ ಮಾಡ್‌ಗಾನ್‌, ಸಿಂಗ್‌, ಲೇಡಿ ಗ್ರೆಗರಿ, ಆಸ್ಕರ್ ವೈಲ್ಡ್‌, ಏಇ-ಎಲ್ಲರೂ ಅವನ ಸೂರ್ಯ ಚಂದ್ರ ವರ್ತುಲಗಳ ವ್ಯವಸ್ಥೆಯಲ್ಲಿ ವಸ್ತುನಿಷ್ಠತೆಯ ಆ ತುದಿಯಲ್ಲೊ, ಆತ್ಮನಿಷ್ಠತೆಯ ಇನ್ನೊಂದು ತುದಿಯಲ್ಲೊ ಅಥವಾ ಅದಿಷ್ಟು ಇದಿಷ್ಟು ಬೆರೆತುಕೊಂಡ ನಡುವಿನಲ್ಲೆಲ್ಲೊ ಇರುವವರಂತೆ ಅವನಿಗೆ ಕಾಣಿಸುತ್ತಾರೆ. ತನ್ನ ನಿತ್ಯದ ಕ್ರಿಯೆಗಳನ್ನೂ ಯೇಟ್ಸ್‌ ನಾಟಕೀಯವಾಗಿ ಕೃತಕವೆನ್ನಿಸುವಂತೆ ಭಾವಿಸಿಕೊಳ್ಳಬಲ್ಲ ಪುರಾತನದ್ದೆಲ್ಲವೂ ಅವನಿಗೆ ಸನಾತನ. ಪೂರ್ವಕಾಲದ ಜಪಾನಿನ ಒಂದು ಕತ್ತಿಯನ್ನು ತೊಡೆಯ ಮೇಲಿಟ್ಟುಕೊಂಡು ಮಾತಾಡುತ್ತಾನೆ. ತನ್ನ ಕನಸಿನ ಟವರನ್ನು ಅವನು ಖರೀದಿ ಮಾಡಿ ಅದರಲ್ಲಿ ಹೋಗಿ ವಾಸ ಮಾಡುತ್ತಾನೆ. ಮುಖವಾಡವನ್ನೆ ಮುಖ ಮಾಡಿಕೊಂಡವನು ಯೇಟ್ಸ್‌. ಉಜ್ವಲ ಪ್ರಭೆಯಲ್ಲಿ ಹೀಗೆ ತೊಯ್ದಿದ್ದಾಗಲೂ ಅವನು ತನ್ನ ತೀರದ ತೀಟೆಗಳನ್ನು ಹೇಳಿಕೊಳ್ಳದೆ ಇರಲಾರ. ಇಂಥ ಯೇಟ್ಸ್‌ ಮಾತ್ರ ಬರೆಯಬಲ್ಲ ಸಾಲುಗಳು ‘ಈಸ್ಟರ್ ೧೯೧೬’ ಪದ್ಯದ ಕೊನೆಯಲ್ಲಿವೆ. ಸತ್ತವರ ಹೆಸರುಗಳನ್ನೇ ಅವನು ಇಲ್ಲಿ ಉತ್ಕಂಠವಾಗಿ ಅದೊಂದು ಮಂತ್ರವೆಂಬಂತೆ ಪಠಿಸುತ್ತಾನೆ.

I write it out in a verse-

Mac Donagh and Mac Bride
And Connolly and Pearse
Now and in time to be,
Wherever green is worn,
Are changed, changed utterly;
A terrible beauty is born.

ಪದ್ಯದಲ್ಲಿ ನಾನು ಹೀಗೆ ಬರೆದಿಡುವೆ:

ಇಂದು, ಮುಂದೆಂದೂ, ಎಲ್ಲೆಲ್ಲಿಯೂ
ಹಸಿರು ತೊಟ್ಟಿರುವ ಎಲ್ಲ ಎಡೆಯಲ್ಲಿಯೂ
ಮ್ಯಾಕ್‌ಡೊನಾಲ್ಡ್‌, ಮ್ಯಾಕ್‌ಬ್ರೈಡ್‌, ಪಿಯರ್ಸ್, ಕೆನೊಲಿ
ಬದಲಾಗಿಹೋದರು ಎಲ್ಲ ಪೂರಾ
ಜನನವಾಗಿದೆ ರುದ್ರ ಚೆಲುವಿಗೀಗ

ಇಂಗ್ಲಿಷಿನಲ್ಲಿ ಕವಿಗೆ ‘ಬಾರ್ಡ್‌’ ಎಂಬ ಒಂದು ಪದವಿದೆ. ಬಾರ್ಡ್ ಜನಾಂಗದ ಮುಖವಾಣಿ. ಈ ಪದ್ಯದಲ್ಲಿ ಯೇಟ್ಸ್‌ ಕವಿಯಾಗಿ ಭಾವನಾತ್ಮಕತೆಯಲ್ಲೂ, ಚಿಂತನಶೀಲತೆಯಲ್ಲೂ ಒಡೆಯುತ್ತಾ ಕಂಡದ್ದನ್ನು ಆವಾಹಿತ ಬಾರ್ಡ್ ಆಗಿ ಮೀರುತ್ತಾನೆ; ಮೀರಿ ಪಡೆದ ರುದ್ರ ಸತ್ಯವನ್ನು ಘೋಷಿಸುತ್ತಾನೆ. ಪದ್ಯದ ಲಯ ಅನುಮಾನದ ಬಳುಕುಗಳಿಗೆ ಹೇಗೋ ಹಾಗೆಯೇ ಉತ್ಕಂಠ ಆರ್ತತೆಗೂ ನಿರಾಯಾಸವಾಗಿ ಹುರಿಯಾಗುತ್ತದೆ. ‘ಹಸಿರು ತೊಟ್ಟಿರುವ ಎಲ್ಲ ಎಡೆಯಲ್ಲಿಯೂ’ ಎಂಬ ಮಾತು ಕ್ರಾಂತಿಕಾರಕ ಐರಿಷ್‌ ಜನರ ಪೋಷಾಕನ್ನು ಸೂಚಿಸುತ್ತದೆ. ಇದು ಸ್ವಲ್ಪ ಡೆಮೋಗಾನನ ಬಾಯ್ಬಡುಕತನವೇನೊ ಎಂದು ಕವಿಗೆ ಆಗದವರು ಹೇಳಿದ್ದಿದೆ. ಬಿಟ್ಟರೆ, ಕವಿ ಇಲ್ಲಿ ಜನಾಂಗದ ಮುಖವಾಣಿಯೆಂಬಂತೆ ಮಾತಾಡುವುದರಿಂದ ತನ್ನ ದುರಂತಪ್ರಜ್ಞೆ ಬಿಟ್ಟುಕೊಡದಂತೆ, ತನ್ನ ವೈರಿಯ ಹೆಸರನ್ನೂ ಹೇಳುತ್ತ ಸ್ತುತಿಪಾಠ ಮಾಡುತ್ತಾನೆ. ಹೀಗೆ ಒಂದು ರಾಜಕೀಯ ಪದ್ಯವನ್ನು ಬರೆಯುವುದು ಬಲು ಕಷ್ಟ. ಅದನ್ನು ರಾಜಕೀಯ ರಣರಂಗದಲ್ಲಿ ಆವೇಶಿತರಾದ ಭಾಗಿಗಳು ಒಪ್ಪುವುದೂ ಕಷ್ಟ . ಯೇಟ್ಸ್‌ನ ಪದ್ಯ ಬ್ರಿಟಿಷರಿಗೆ ಐರಿಷ್‌ ಪರವಾಗಿ ಕಂಡಿತು; ಐರಿಷರಿಗೆ ಅಳೆದು ಹೊಯ್ಯುವ ಲಿಬರಲ್‌ ಭೋಳೇತನವಾಗಿ ಕಂಡಿತು.

ಎಲ್ಲೋ ಓದಿದ ನೆನಪು. ಒಂದು ಪದ್ಯದ ಇರುವಿಕೆಯನ್ನು ತ್ರಿಭುಜವಾಗಿ ಊಹಿಸಿ. ಒಂದು ತುದಿಯಲ್ಲಿ ಅನುಭವದ ವಸ್ತುವೂ, ಇನ್ನೊಂದರಲ್ಲಿ ಕವಿಯೂ, ಮೂರನೆಯದರಲ್ಲಿ ಓದುಗನೂ ಇದ್ದಾನೆ ಎಂದುಕೊಳ್ಳಿ. ಕವಿ ತನ್ನ ಓದುಗರ ಅಪೇಕ್ಷೆಯನ್ನು ತಣಿಸಲೆಂದು ಓದುಗರಿಗೆ ಹತ್ತಿರವಾಗಿ ತನ್ನ ವಸ್ತುವಿನಿಂದ ದೂರವಾಗಿಬಿಡಬಹುದು. ಇದು ತನ್ನ ಕಾಲದಲ್ಲಿ ಜನಪ್ರಿಯನಾಗಲೆಂದು ವಸಾಹತುಶಾಹಿ ಇಂಗ್ಲೆಂಡಿನ ಮುಖವಾಣಿಯಾಗಿಬಿಟ್ಟ ಟೆನಿಸನ್ನಿನ ಕಾವ್ಯ ಮಾರ್ಗ. ಪ್ರಾಮಾಣಿಕತೆಗೆ ಇಲ್ಲಿ ದೋಖಾ. ಇಂಥ ಕಾವ್ಯ ಓದುಗನನ್ನು ಅವನ ಏಕಾಂಗಿತನದಲ್ಲಿ ಮುಟ್ಟುವುದಿಲ್ಲ, ಬೆಚ್ಚಿಸುವುದಿಲ್ಲ. ಸಭಾ ಮರ್ಯಾದೆಗೆ ಹೊಂದಿಕೊಂಡಿರುವ ಕಾವ್ಯ ಈ ಬಗೆಯದು. ಬದಲಾಗಿ, ಕವಿ ತನ್ನ ವಸ್ತುವಿಗೆ ಹತ್ತಿರವಗಿ ಓದುಗನ ಸಾರ್ವಜನಿಕ ಧೋರಣೆಗಳಿಂದಲೂ, ಅಪೇಕ್ಷೆಗಳಿಂದಲೂ ದೂರವಾಗಿಬಿಡಬಹುದು. ಬ್ಲೇಕನ ಕಾವ್ಯ ಈ ಬಗೆಯದು. ಪರಿಣಾಮ: ಸಂವಹನದ ಅಪೇಕ್ಷೆಯೂ ಕವಿಯಲ್ಲಿ ಕಡಿಮೆಯಾಗಿ ಆತ ಅತಿ ಕ್ಲಿಷ್ಟವಾಗಿಬಿಡಬಹುದು . ಆಧುನಿಕ ಕಾವ್ಯ ಅದರ ಅತ್ಯುತ್ತಮ ಸ್ಥಿತಿಯಲ್ಲಿ ಈ ಪಾಡನ್ನು ಅನುಭವಿಸುತ್ತದೆ. ತನ್ನ ವಸ್ತುವಿಗೂ ತನ್ನ ಓದುಗರಿಗೂ ಸಮಾನ ಹತ್ತಿರದಲ್ಲಿರುವ ಸ್ಥಿತಿ ಕ್ಲಾಸಿಕಲ್‌ ಕಾವ್ಯದ್ದು. ವ್ಯಾಸ, ವಾಲ್ಮೀಕಿ, ಕಾಳಿದಾಸರು ಅಂಥ ಪುಣ್ಯವಂತರು. ಯೇಟ್ಸ್‌ ತನ್ ‘ಈಸ್ಟರ್ ೧೯೧೬’ ಕವನದಲ್ಲಿ ಐರಿಷ್‌ ಜನರ ಹುಚ್ಚೆದ್ದ ಕ್ರಾಂತಿಕಾರಕ ಉತ್ಸಾಹಕ್ಕೂ, ತನ್ನ ಸ್ವಂತದ ಅನುಮಾನಗಳಿಗೂ ಅಪಚಾರವಾಗದಂತೆ ಪದ್ಯ ನಿರ್ವಹಿಸಿದ್ದಾನೆ-ಆದರೆ ಓದುಗರಿಗೆ ಮೆಚ್ಚುಗೆಯಾಗುವುದರಲ್ಲಿ ಸೋತಿದ್ದಾನೆ. ಈ ಸೋಲು ರಾಜಕೀಯ ಸಾಹಿತ್ಯದಲ್ಲೇ ಅಪೂರ್ವವಾದ್ದು. ತುಂಬ ಬೆಲೆಯುಳ್ಳದ್ದು.

ಒಂದು ರಾಷ್ಟ್ರವನ್ನು ಉಳಿಸಲು ಕೂಡ ಸತ್ಯಕ್ಕೆ ಅಪಚಾರವಾಗುವಂತೆ ನಡೆಯಬಾರದು ಎನ್ನುತ್ತಿದ್ದ ಓ ಲಿಯರಿ-ಯೇಟ್ಸ್‌ನ ರಾಜಕೀಯ ಗುರು. ಆಂಗ್ಲೋ ಐರಿಷ್‌ನಾಗಿದ್ದ ಯೇಟಸ್‌ ಪ್ರಾಟಿಸ್ಟೆಂಟ್‌ ಆಗಿ ಹುಟ್ಟಿದವನು. ತನ್ನ ಜನರಲ್ಲಿ ನಯ ನಾಜೂಕು ಇದ್ದರೂ ಪ್ರಾಪಂಚಿಕ ಯಶಸ್ಸಿಗಾಗಿ ಏನನ್ನಾದರೂ ಮಾಡುವವರಾಗಿ ಯೇಟ್ಸ್‌ ಅವರನ್ನು ಕಂಡ. ಕ್ಯಾಥೋಲಿಕರು- ಅಪ್ಪಟ ಐರಿಷ್‌ ಜನ ಸುಲಭವಾಗಿ ಉದ್ರೇಕಿತರಾಗುವ, ನಾಗರಿಕತೆಯ ಸೂಕ್ಷ್ಮಗಳಿಂದ ವಂಚಿತರಾದ ಹುಂಬ ಜನರಾಗಿ ಕಂಡರು. ಉತ್ತಮರಲ್ಲಿ ನಂಬುವ ಆಸ್ಥೆ ಇಲ್ಲ; ಅಧಮರಲ್ಲಿ ಜೀವತೀವ್ರತೆಯಿದೆ ಎನ್ನುವ ಯೇಟ್ಸ್‌ನ ‘ಸೆಕೆಂಡ್‌ ಕಮಿಂಗ್‌’ ಪದ್ಯವನ್ನು ಇಲ್ಲಿ ನೆನೆಯಬಹುದು.

ಯೇಟ್ಸ್‌ನ ಜೀವನದುದ್ದದ ಪ್ರಯತ್ನವೆಂದರೆ ತೀವ್ರ ಭಾವನೆಯ ಐರಿಷ್‌ ಜನರನ್ನು ಐರೋಪ್ಯ ನಾಗರಿಕತೆಯ ಮುಖ್ಯ ಪ್ರವಾಹದೊಳಕ್ಕೆ ತರುವುದೇ ಆಗಿತ್ತು. ಈ ಪ್ರಯತ್ನದ ಫಲವಾಗಿ ಅವನು ಸಿಂಗ್‌ ಎಂಬ ನಾಟಕಕಾರರನ್ನು ಐರ್ಲೆಂಡ್‌ಗೆ ತಂದ. ಐರಿಷ್‌ ನ್ಯಾಷನಲ್‌ ಥಿಯೇಟರನ್ನು ಲೇಡಿ ಗ್ರೆಗರಿಯ ಔದಾರ್ಯದಿಂದ ಕಟ್ಟಿದ. ಆದರೆ ಕೆಥೋಲಿಕ್‌ ಜನರು ತಮ್ಮ ನಂಬಿಕೆಗೆ ಕಿಂಚಿತ್‌ ಊನವಾದರೂ ನಾಟಕಗಳನ್ನು ಒಪ್ಪದವರು ಎಷ್ಟೋ ನಾಟಕಗಳು ದಂಗೆಗಳಾಗಿ ಕೊನೆಯಾದದ್ದಿದೆ. ಆದರೂ ಕೊನೆತನಕ ಯೇಟ್ಸ್‌ ಪ್ರಾಮಾಣಿಕ ಕಲೆಗಾಗಿ ತನ್ನ ಬರವಣಿಗೆಯಲ್ಲಿ ಮಾತ್ರವಲ್ಲದೆ ರಾಜಕೀಯವಾಗಿಯೂ ಹೋರಾಡಿದ. ಐರಿಷ್‌ ಜಾನಪದವನ್ನೇ ಐರೋಪ್ಯ ಮುಖ್ಯ ಪ್ರವಾಹದ ಸಾಂಕೇತಿಕತೆಯಲ್ಲಿ ಬೆಸೆದ. ತಲ್ಲಣಗೊಳ್ಳದೆ ಐರಿಷ್‌ ಜನರ ಸಂವೇದನೆಯ ಜೊತೆ ಗುದ್ದಾಡುತ್ತಲೇ ಕಾವ್ಯದೊಳಗೇ ತನ್ನದೊಂದು ಪ್ರಪಂಚವನ್ನು ಕಟ್ಟಿಕೊಳ್ಳುತ್ತ ಹೋದ.

ಯೇಟ್ಸ್‌ನ ಹೋರಾಟ ಎಷ್ಟು ರಾಜಕೀಯವೋ, ಅಷ್ಟೇ ಯಾವ ರಾಜಕರಾಣವೂ ಇಲ್ಲದ ಮನುಷ್ಯನ ಮೂಲದಲ್ಲಿರುವ ಮುಗ್ಧತೆಯ ಹುಡುಕಾಟವೂ ಆಗಿತ್ತು. ಅಶಾಂತ ಸ್ಥಿತಿಯಲ್ಲೇ ತನ್ನ ಅತ್ಯುತ್ತಮವನ್ನು ಸಾಧಿಸಲು ಹವಣಿಸುವ ರಾಜಕೀಯ ಎಷ್ಟು ಆಕರ್ಷಕವೊ, ಅಷ್ಟೇ ಈ ಶತಮಾನದ ಮುಖ್ಯ ಲೇಖಕರಾದ ಯೇಟ್ಸ್‌ ಆರ್ವೆಲ್ ನಂಥವರಿಗೆ ಯಾವ ರಾಜಕೀಯವೂ ಇಲ್ಲದೆ ಗ್ರಾಮೀಣವೆನ್ನಬಹುದಾದ ಪ್ರಶಾಂತ ಸ್ಥಿತಿ ಕೂಡ ಆದರಣೀಯವಾಗಿರುತ್ತದೆ. ಆರ್ವೆಲ್‌ ತನ್ನ ‘ಕಮಿಂಗ್‌ ಅಪ್‌ ಫಾರ್ ಏರ್’ ಕಾದಂಬರಿಯಲ್ಲಿ ತನ್ನ ಬಾಲ್ಯದ ಮುಗ್ಧ ನೆನಪಿನ ಹಳ್ಳಿಗೆ (ವಿಫಲ) ಹೋಗುತ್ತಾನೆ. ಯೇಟ್ಸ್‌ ‘ಇನ್ನಿಸ್‌ ಫ್ರೀ’ಗಾಗಿ ಹಾತೊರೆಯುತ್ತಾನೆ. ಪ್ರತಿ ಮುಹೂರ್ತವೂ ತನ್ನ ಬದಲಾವಣೆಯಲ್ಲಿ ಮಾತ್ರ ಸಾರ್ಥಕತೆ ಕಾಣದೆ, ಶಾಶ್ವತದ ಸ್ಥಿರ ಕ್ಷಣಗಳಾಗುವ ಧ್ಯಾನದಲ್ಲಿ, ಕಾಲಾತೀತವಾಗುವ ಅವಸ್ಥೆಯಲ್ಲಿ ಸದಾ ಇರಲು ಸಾಧ್ಯವೆ ಎಂಬ ಹುಡುಕಾಟ ಇದು. ಈ ಹುಡುಕಾಟದ ದುರಂತ ಸೋಲುಗಳೇ ಈ ಕಾಲದ ಅತ್ಯುತ್ತಮ ರಾಜಕೀಯ ಸಾಹಿತ್ಯವೂ ಆಗಿದೆ ಎಂಬುದು ಕೂಡ ವಿಶೆಷ.

ಗೆಳೆಯ ನಾಟಕಕಾರ ಸಿಂಗ್ ಬಗ್ಗೆ ಯೇಟ್ಸ್‌ ಹೇಳುತ್ತಾನೆ: ಒಬ್ಬ ಕಡುಬಡವನ ಜೊತೆ ಸಿಂಗ್‌ ಗಂಟೆಗಟ್ಟಲೆ ಪರಮ ವಿಶ್ವಾಸದ ಸಂಗಾತಿಯಾಗಿ ನಡೆದಾಡಿದರೂ, ಒಂದೇ ಒಂದು ಕ್ಷಣ ಈ ಬಡವನಿಗೆ ತನ್ನಿಂದ ಯಾವ ಉಪಕಾರವಾಗಬೇಕೆಂಬ ಯೋಚನೆ ಸಿಂಗ್‌ಗೆ ಹುಟ್ಟುತ್ತಿರಲಿಲ್ಲ. ವರ್ಗಪ್ರಜ್ಞೆಯಿಮದಾಗಿ ಹುಟ್ಟುವ ಧಿಮಾಕಾಗಲೀ, ಕನಿಕರವಾಗಲೀ ಇಲ್ಲದಂತೆ ಕೇವಲ ಮನುಷ್ಯನಾಗಿ ಪ್ರೀತಿಸುವುದು ಸಿಂಗ್‌ಗೆ ಸಾಧ್ಯವೆಂದು ಯೇಟ್ಸ್‌ ಕಾಣುವುದನ್ನಿಲ್ಲಿ ಗಮನಿಸಬೇಕಾದ ಸಂಗತಿ. ಹೀಗೆ ಯೇಟ್ಸ್‌ ರಾಜಕೀಯ ಪ್ರಜ್ಞೆಯೇ ಇಲ್ಲದ ಮುಗ್ಧತೆಗಾಗಿ, ಸಹಜತೆಗಾಗಿ ಹುಡುಕಾಡುವಾಗಲೇ ರಾಜಕೀಯವಾಗಿ ತನ್ನ ಕಾಲಕ್ಕೆ ಸ್ಪಂದಿಸಿದವನು. ಒಂದು ರಾಜಕೀಯ ಪದ್ಯ ಬರೆಯಲು ಹೋಗಿ ‘ಲೀಡಾ ಮತ್ತು ಸ್ವಾನ್‌ ’ ಪದ್ಯ ಬರೆದವನು. ದೇವರಾದ ಸ್ಯೂಸ್‌ ಹಂಸರೂಪಿಯಾಗಿ ಕನ್ನಿಕೆ ಲೀಡಾಳ ಮೇಲೆ ಎಗರಿ ಬಲಾತ್ಕಾರದಿಂದ ಅವಳನ್ನು ಸಂಭೋಗಿಸಿ ಮುಂದಿನ ಇಡೀ ಚರಿತ್ರೆಗೆ ಕಾರಣವಾಗುವ ವರ್ಣನೆ ಇಲ್ಲಿದೆ. ಮುಗ್ಧತೆಯಲ್ಲಿ ಇಡಿಯಾಗಿ ಉಳಿಯುವುದು ಸಾಧ್ಯವಿಲ್ಲ; ಒಡೆಯಲೇಬೇಕು. ಕನ್ನಿಕೆ ಪರಕೀಯವಾದ್ದಕ್ಕೆ ಗರ್ಭ ತೆರೆಯಲೇಬೇಕು. ಇದು ದಯವನಿಯಮ. ಹೀಗೆ-ಗ್ರೀಸಿನ ಪಥನ, ಆಗಮೆಮ್ನನ್‌ ಸಾವು ಇತ್ಯಾದಿ-ಭವಿಷ್ಯಕ್ಕೆ ಈ ವರ್ತಮಾನದಲ್ಲೇ ಬೀಜಾಂಕುರವಾಗಬೇಕು. ಈ ಪದ್ಯ ಪುರಾಣವೊ ಅಥವಾ ಇತಿಹಾಸದ ಬಗ್ಗೆಯೇ ಪರಮ ರಾಜಕೀಯ ಧ್ಯಾನವೊ?

ಯೇಟ್ಸ್‌ ನಂಬಿಕೆಗಾಗಿ ಅಲೆದಾಡಿದ ಕವಿ. ಸ್ವಂತ ವ್ಯಕ್ತಿತ್ವದ ಪೂರ್ಣ ತ್ಯಾಗದಲ್ಲಿ, ತಾನು ಏನೇನೂ ಅಲ್ಲ ಎಂಬ ಅಹಮಿಕೆಯ ನಿರಸನದಲ್ಲಿ ಮೋಹದ ಪ್ರಪಂಚದಿಂದ ಕಳಚಿಕೊಳ್ಳುತ್ತ ಹೋಗುವ ಧ್ಯಾನದ ಆಧ್ಯಾತ್ಮಿಕತೆ ಕ್ರಿಶ್ಚಿಯನ್‌ ಕವಿ ಎಲಿಯಟ್‌ನದಾದರೆ, ವ್ಯಕ್ತಿತ್ವದ ಪೂರ್ಣತೆಯಲ್ಲಿ, ಧನ್ಯತೆಯಲ್ಲಿ ತೇಜಸ್ಸನ್ನೂ ಶಕ್ತಿಯನ್ನೂ ಊರ್ಜಿತಗೊಳಿಸಿಕೊಳ್ಳುತ್ತ ಹೋಗುವ ಹಂಬಲದ ಆಧ್ಯಾತ್ಮಿಕತೆ ಯೇಟ್ಸ್‌ನದು. ಯೇಟ್ಸ್ ತನ್ನ ಮನೋಧರ್ಮದಲ್ಲಿ ಕ್ರಿಶ್ಚಿಯನ್‌ ಅಲ್ಲ-ಭಾರತೀಯವಾದ ಓಜಸ್ಸಿನ ಹಂಬಲದ ವೈದಿಕ ಆಧ್ಯಾತ್ಮಿಕತೆಗೆ ಹತ್ತಿರವಾದವನು. ಥಿಯಾಸಫಿ, ಮದಾಂ ಬ್ಲಾವಟ್‌ಸ್ಕಿ, ಪುರೋಹಿತಸ್ವಾಮಿ, ಯಂತ್ರ ತಂತ್ರಗಳು-ಭೂತಾರಾಧನೆ, ಮಾಂತ್ರಿಕತೆ-ಹೀಗೆ ಐರೋಪ್ಯ ರ‍್ಯಾಶನಾಲಿಟಿಯನ್ನೂ, ಪಾಪಪ್ರಜ್ಞೆಯಿಂದ ಹುಟ್ಟಿದ ಧಾರ್ಮಿಕತೆಯನ್ನೂ ಮೀರಲು ಅವನು ಯತ್ನಿಸಿದ. ತನ್ನದೇ ಪುರಾಣವನ್ನೂ, ಸಿದ್ಧಾಂತವನ್ನೂ ಭೂತದಯೆಯಿಂದ ಪಡೆದೆನೆಂದು ತಿಳಿದು ತನ್ನ ಕಾವ್ಯಕ್ಕೊಂದು ತಾತ್ವಿಕ ಹಂದರ ಸೃಷ್ಟಿಸಿಕೊಂಡ. ಇದನ್ನು ವಿಶನ್‌ ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಿದ. ಈ ಪುಸ್ತಕ ಅಶರೀರ ಶಕ್ತಿಗಳು ತನ್ನ ಹೆಂಡತಿಗೆ ಹೇಳಿ ಬರೆಸಿದ್ದು ಎಂದು ತಿಳಿದ. ತನಗೆ ಅಗತ್ಯವಾದ ಇಮೇಜುಗಳನ್ನು ಅತಿಮಾನುಷ ಶಕ್ತಿಗಳು ದಯಪಾಲಿಸಿವೆ ಎಂದು ಸಂಕೋಚವಿಲ್ಲದೆ ಸಾರಿದ. ಬ್ಲೇಕ್‌ ನಂತರ ಇವನೇ ಹೀಗೆ ಅತಿಮಾನುಷದ ಜೊತೆ ಸಂಪರ್ಕ ಪಡೆದು ಬರೆಯುತ್ತಿದ್ದೇನೆಂದು ತಿಳಿದವನು. ಆದರೆ ಬ್ಲೇಕ್‌ನಂತೆಯೇ ಇವನೂ ದೇವತೆಗಳು ಹೇಳಿ ಬರೆಸಿದ್ದನ್ನು ಕಸುಬುಗಾರ ಕವಿಯಾಗಿ ಸಾಕಷ್ಟು ತಿದ್ದಿಯೇ ಪ್ರಕಟಿಸಿದ. ಅದು ಓದುಗರ ಪುಣ್ಯ.

ಹೀಗೆನ್ನುವಾಗ ಯೇಟ್ಸ್‌ ಭಾರತೀಯ ಆಧ್ಯಾತ್ಮಿಕತೆಯನ್ನು ಶಂಕಾತೀತನಾಗಿ ನಂಬಿದನೆಂದು ತಿಳಿಯಬಾರದು. ರವೀಂದ್ರನಾಥ ಠಾಗೋರರ ಗೀತಾಂಜಲಿಯ ಭಾವಗೀತಾತ್ಮಕತೆಗೆ ಹಿಗ್ಗಿ ಮುನ್ನುಡಿ ಬರೆದವನು, ಅನಂತರ ತಾನು ಪಟ್ಟ ಹಿಗ್ಗನ್ನೇ ಅನುಮಾನಿಸಿದ. ಸಂದೇಶಕ್ಕಾಗಿ ಬಂದ ಭಾರತೀಯನೊಬ್ಬನಿಗೆ ನಾಟಕೀಯವಾಗಿ ಒಂದು ಕತ್ತಿಯನ್ನು ಝಳಪಿಸುತ್ತ Conflict, more conflict ಎಂದಿದ್ದನಂತೆ. ಪೌರಾತ್ಯದ ಮನಸ್ಸಿನ ಪ್ರಶಾಂತ ಸಮಸ್ಥಿತಿಯನ್ನು ಮೆಚ್ಚುತ್ತಲೇ ಅವರಿಗೆ ಟ್ರಾಜಿಕ್‌ ಅನುಭವವಿಲ್ಲ ಎಂದು ಗೊಣಗಿದ. ಜೊತೆಗೇ ಉಪನಿಷತ್ತುಗಳ ಭಾಷಾಂತರದಲ್ಲಿ ಭಾಗವಹಿಸಿದ. ತನಗೆ ಪರಿಚಿತರಾದ ಇಬ್ಬರು ಭಾರತೀಯರಿಂದಲೂ ತನ್ನ ಸಂಸ್ಕೃತಿಗೆ ಅನ್ಯವಾದದ್ದನ್ನು ಕಲಿತುಕೊಂಡ. ಈ ಲೋಕ ದೈವಿಕತೆಯಿಂದ ತೊಯ್ದದ್ದಾಗಿ ಕಾಣಲು ಬೇಕಾದ ಮನಸ್ಥಿಃತಿ ಆಧುನಿಕ ಕ್ರಿಶ್ಚಿಯನ್‌ ನಾಗರಿಕತೆಯಲ್ಲಿ ಅವನಿಗೆ ಸಿಗದಿದ್ದರಿಂದ ಲೌಕಿಕವಾದ್ದಕ್ಕೂ, ಪಾವಿತ್ಯ್ರದ ಅಲೌಕಿಕಕ್ಕೂ ಇರುವ ಅಂತರವನ್ನೇ ತೊಡೆದುಹಾಕುವ ಬೈಜಾಂಟಿಯಂ ಮತ್ತು ಭಾರತೀಯ ನಾಗರಿಕತೆಗೆ ಮರುಳಾದ.

ಯೇಟ್ಸ್‌ನ ಆಧ್ಯಾತ್ಮಿಕತೆಯ ಬಗ್ಗೆ ಹಿಂದೆ ಹೇಳಿದ ಒಂದು ಮಾತನ್ನು ವಿವರಿಸುವುದು ಅಗತ್ಯವೇನೊ, ಅವನಿಗೊಬ್ಬ ಜೀವದ ಗೆಳೆಯನೆಂದರೆ ಅನುಭಾವಿ ಕವಿ ಏಇ. ಯೇಟ್ಸ್‌ ಒಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡುದರ ಪರಿಣಾಮವಾಗಿ ಮುದಿ ವಯಸ್ಸಿನಲ್ಲಿ ಬತ್ತಿ ಹೋಗುತ್ತಿದ್ದ ಅವನ ಕಾಮುಕತೆ ಮತ್ತೆ ಚಿಗುರಿತು. ಗೆಳೆಯ ಏಇ ಕೂಡ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮತ್ತೆ ಮಾತಾಡಲಿ ಎಂದು ಜೀವನ ವಿಮುಖವಾದ ಅವನ ಆಧ್ಯಾತ್ಮಿಕತೆಯನ್ನು ಯೇಟ್ಸ್‌ ಟೀಕಿಸಿದ್ದ. ವ್ಯಕ್ತಿತ್ವವನ್ನು ಒಣಗಿಸಿಕೊಳ್ಳುತ್ತ, ತನ್ಮೂಲಕ ಶುದ್ಧವಾಗುತ್ತ ಪಡೆಯುವ ಆಳವಾದ ಸತ್ಯದ ಸ್ವರೂಪದರ್ಶನದ ಅಪೇಕ್ಷೆ ಯೇಟ್ಸನನ್ನು ಕಾಡಿರಲಿಲ್ಲವೆಂದಲ್ಲ. ಆದರೆ ಕಾಮಸಂಬಂಧವಾದದ್ದೆಲ್ಲ ಮಲಿನ; ಆದ್ದರಿಂದ ಲೌಕಿಕವಾದ್ದು ಮಲಿನ; ಆತ್ಮಕ್ಕೆ ಸಂಬಂಧಿಸಿದ್ದು ಮಾತ್ರ ಪವಿತ್ರ ಎಂದು ತಿಳಿಯುವ ‘ಪ್ರೋಫೇನ್‌’ ಮತ್ತು ‘ಸೆಕ್ರೇಡ್‌’ಗಳ ನಡುವೆ ಸ್ಪಷ್ಟ ಅಂತರವನ್ನು ಒಪ್ಪಿಕೊಳ್ಳುವುದು ಕಷ್ಟವಾದ್ದರಿಂದಲೇ ಅವನು ಕ್ರಿಶ್ಚಿಯನ್‌ ಧರ್ಮಕ್ಕೆ ದೂರವಾಗುತ್ತ ಹೋದದ್ದು. ‘ವೃದ್ಧನಾರೀ ಪತಿವ್ರತಾ’ ಎಂಬ ಇಳಿವಯಸ್ಸಿನ ಸಮಾಧಾನವೂ ಅವನಿಗೆ ಸಿಗದೇಹೋಯಿತು. ಜೊತೆಗೇ ವೃದ್ಧಾಪ್ಯದ ನೈಜತೆಯೂ, ಶಾಶ್ವತವಾದದ್ದನ್ನು ತಲುಪಬೇಕು ಎಂಬ ಆತ್ಮಕಾಮವೂ, ಸಫಲವಾಗದಂತೆ ಸದಾ ಉಳಿದುಬಿಡುವ ಜೀವಕಾಮವೂ ಒಂದು ನಿಲುಗಡೆಗೆ ಬಾರದಂತೆ ಅವನನ್ನು ಕಾಡಿದವು.

ಪ್ರತಿಯೊಬ್ಬನಲ್ಲೂ ಒಂದು ‘ಸ್ವ’ ಹೇಗೆ ಇರುತ್ತದೋ, ಹಾಗೆಯೇ ಅದಕ್ಕೆ ವಿರುದ್ಧವಾದ ಒಂದು ‘ಅ-ಸ್ವ’ದ ಆಕರ್ಷಣೆಯು ಇರುತ್ತದೆ ಎಂದು ತಿಳಿದಿದ್ದ ಯೇಟ್ಸ್‌, ಪೂರ್ಣತೆಗಾಗಿ ಸ್ವಭಾವ ಸಹಜವನ್ನೂ ಸ್ವಭಾವ ವಿರೋಧವನ್ನೂ ಬೆಸೆಯಬೇಕೆಂದು ಹಾತೊರೆದವನು. ತಾನು ಸ್ನೇಹಜೀವಿಯೆಂದೂ, ಒಂಟಿಯಾಗಿ ಇರಲಾರದೆ ಜನಸಂಪರ್ಕಕ್ಕೆ ಸದಾ ಹಾತೊರೆಯುವ ಸಂಘಜೀವಿಯೆಂದೂ ಯೇಟ್ಸ್‌ ತನ್ನನ್ನು ವಿವರಿಸಿಕೊಳ್ಳುತ್ತಾನೆ. ಇದು ಅವನ ‘ಸ್ವಭಾವ’ವಾದರೆ, ಅವನ ಆಸೆ ಮಾತ್ರ ಏಕಾಂಗಿಯಾಗಿ, ನಿಸ್ಸಂಗಿಯಾಗಿ, ಸಂಯಮಿಯಾಗಿ ಸ್ಥಿತಪ್ರಜ್ಞನಾಗಿ ಇರಬೇಕೆಂಬುದು. ಇದೇ ಅವನ ‘ಮಾಸ್ಕ್‌’-ಮುಖವಾಡ. ತನ್ನ ಇರುವಿಕೆಯ ಪೂರ್ಣತೆಗಾಗಿ ಅವನಿಗೆ ಈ ಮುಖವಾಡವೂ ಮುಖವಾಗಿಬಿಡುವುದು ಅಗತ್ಯ.

ಆದರೆ ಏಇಯಂಥವರು ಈ ಬಗೆಯ ಪೂರ್ಣತೆಗೆ-Unity of Being- ಹಂಬಲಿಸಬಾರದು ಎಂದು ಯೇಟ್ಸ್‌ ಹೇಳುತ್ತಾನೆ. ಹೀಗೆ ಹಂಬಲಿಸಬಾರದವರ ಗುಂಪಿನಲ್ಲಿ ಯಾರು ಯಾರನ್ನು ಯೇಟ್ಸ್‌ ಸೇರಿಸುತ್ತಾನೆಂಬುದು ಕುತೂಹಲದ್ದು. ವಿಜ್ಞಾನಿಗೆ Unity of Being ಅನಗತ್ಯ . ಹಾಗೆಯೇ ನೀತಿವಂತನಿಗೂ, ಮಾನವ ಪ್ರೇಮಿಗೂ, ರಾಜಕಾರಣಿಗೂ ಇದು ಅನಗತ್ಯ. ಯಾಕೆಂದರೆ ಇವರೆಲ್ಲರೂ ತಾನು ಏನೇನೂ ಅಲ್ಲ ಎಂಬ ಅಹಮಿಕೆಯ ನಿರಸನದಲ್ಲಿ ನಿಜವಾಗಬೇಕಾದವರು ‘ಮಾಸ್ಕ್’ ಇಂಥವರ ಪಾಲಿಗೆ ಮನೋರೋಗವಾಗಿ ಬಿಡುತ್ತದೆ. ಪ್ರಕೃತಿಯಲ್ಲೋ, ದೇವರಲ್ಲಿ ಒಂದಾಗಬೇಕಾದವರು ಇವರಾದ್ದರಿಂದ ‘ಸ್ವ’ಕ್ಕೆ ಹೊರತಾದದ್ದನ್ನು ಅವರು ಅದುಮಿಡಬೇಕಾಗುತ್ತದೆ. ಹೀಗೆ ಅದುಮಿ ಗೆದ್ದು ತಲುಪುವ ಸ್ಥಿತಿ ಸಂತನದ್ದಾದರೆ, ತನಗೆ ಅನ್ಯವಾದ್ದನ್ನು ಒಳಗೊಳ್ಳುತ್ತ ಋಷಿಯಾಗಬೇಕೆಂಬುದು ಯೇಟ್ಸ್ನ ಆಸೆ. ಅವನ ಬೈಜಾಂಟಿಯಂ ಪದ್ಯದಲ್ಲಿ ಅಗ್ನಿಗೆ ಒಡ್ಡಿಕೊಂಡವರನ್ನು ಯೇಟ್ಸ್‌ Saints ಎನ್ನುವುದಿಲ್ಲ Sages ಎನ್ನುತ್ತಾನೆ.

‘ಓ ಬಿಕ್ಕು, ಆತ್ಮವೂ ದೇಹವೂ ಬೇರೆಬೇರೆಯಲ್ಲ, ಒಂದೇ ಎಂದು
ತಿಳಿದರೂ ಮೋಕ್ಷವಿಲ್ಲ; ಓ ಬಿಕ್ಕು, ಆತ್ಮವೇ ಬೇರೆ ದೇಹವೇ ಬೇರೆ ಎಂದು
ತಿಳಿದಾಗಲೂ ಮೋಕ್ಷವಿಲ್ಲ….’-ಗೌತಮ ಬುದ್ಧ.

ಅಗ್ನಿದಿವ್ಯದಲ್ಲಿ ಸುಟ್ಟು ಶುಭ್ರವಾಗುವ ಆಸೆ ಯೇಟ್ಸ್‌ನ ಕೊನೆಗಾಲದ ಕಾವ್ಯದಲ್ಲಿ ತೀವ್ರವಾಗಿ ಅವನನ್ನು ಕಾಡುತ್ತದೆ. ‘ಬೈಜಾಂಟಿಯಮ್‌ಗೆ ಯಾನ’ ಪದ್ಯದಲ್ಲಿ ದೇಹವೆಂದರೆ ಮುದದಲ್ಲಿ ಕೊಬ್ಬುವ, ಆದರೆ ಮುದಿತನದಲ್ಲಿ ಬೆದರುಗೊಂಬೆಯಂತೆ ಸುಕ್ಕಿ ಸೊರಗುವ ಪಶು. ಹೀಗೆ ಭಾರತೀಯ ಸಂತಕವಿಗೆ ಅನ್ನಿಸಿದ್ದರೆ ಅವನು ಒಂದೋ ನಿರಾಕಾರ, ನಿರ್ಗುಣ ಬ್ರಹ್ಮನಲ್ಲಿ ಐಕ್ಯವಾಗುವ ಮುಕ್ತಸ್ಥಿತಿ ಅಪೇಕ್ಷಿಸುತ್ತಿದ್ದ ಅಥವಾ ಜೈನರಂತೆ ಸಲ್ಲೇಖನ ಸಾವಿಗೆ ಸಿದ್ಧವಾಗುತ್ತ ಒಣಗುತ್ತಿದ್ದ ಅಥವಾ ಭಕ್ತನಂತೆ ಭಗವಂತನ ಪಾದಕ್ಕಾಗಿ ಹಂಬಲಿಸುತ್ತಿದ್ದ. ಯೇಟ್ಸ್‌ನ ಬಯಕೆ ಈ ಬಗೆಯದಲ್ಲವೇ ಅಲ್ಲ ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಬಂಗಾರದ ಪಕ್ಷಿಯಾಗಲು ಅವನು ಅಪೇಕ್ಷಿಸುತ್ತಾನೆ. ಹೇಗೆಂದರೆ, ಜೈವಿಕವಾದ ಹಾಡುವ ಶಕ್ತಿ ಉಳಿದಿರಬೇಕು-ಆದರೆ ಸೊರಗಬಾರದು, ಕಿಲುಬಬಾರದು. ಅದೂ ಯಾರ ಸಂತೋಷಕ್ಕಾಗಿ ಹಾಡುವುದು? ಬೈಜಾಂಟಿಯಮ್ಮಿನ ರಾಜ ರಾಣಿಯರ ಮುದಕ್ಕಾಗಿ!

ಬೈಜಾಂಟಿಯಮ್‌ಗೆ ತನ್ನ ಪ್ರಯಾಣವನ್ನು ಹಾಡಿಕೊಳ್ಳುವ ಅದ್ಭುತವಾದ ಅಚ್ಚುಕಟ್ಟಿನ ಪದ್ಯದಲ್ಲಿರುವ ರೋಷವನ್ನೂ ಆವೇಶವನ್ನೂ ಗಮನಿಸಬೇಕು. ದೇಹತ್ಯಾಗದ ಆಸೆಯೇ ರೋಷದಿಂದ ಹುಟ್ಟಿದ್ದು. ದಧೀಚಿಯ ತ್ಯಾಗವಲ್ಲ ಅದು; ದೇಹವನ್ನು ಆತ್ಮದ ಸೂಕಷ್ಮ ಸಾಧನವಾಗಿ ಹುರಿಮಾಡಿಕೊಳ್ಳುವ ಗಾಂಧಿಯ ಬಯಕೆಯಲ್ಲ ಅದು; ಈ ಬಗೆಯ ರೋಷದ ಮನೋಸ್ಥಿತಿಯಲ್ಲಿ ಜೈನ ಪ್ರಯೋಪವೇಶದ ಸಾವಿಗೆ ಸಿದ್ಧವಾಗುವುದಿಲ್ಲ. ಭಗವಂತನಲ್ಲಿ ಏಕಾಗ್ರಚಿತ್ತನಾಗಲೆಂದು ‘ಅತ್ತಲಿತ್ತ ನೋಡದಂತೆ ಹೆಳವನ ಮಾಡಯ್ಯ ತಂದೆ’ ಎಂಬ ಪ್ರಾರ್ಥನೆಯ ಆರ್ತತೆಯಲ್ಲ ಅದು; ಅದು ಕೇವಲ ರೋಷ. ಇಂಥ ರೋಷದಿಂದ ಹುಟ್ಟುವ ಆಧ್ಯಾತ್ಮಿಕತೆಯೂ ಕ್ಷಣಿಕವಾದದ್ದು.

‘ಜೀವ ಆತ್ಮರ ನಡುವೆ ಸಂವಾದ’ ಪದ್ಯದಲ್ಲೂ ಈ ಬಗೆಯ ದ್ವಂದ್ವವೇ ಇರುವುದು. ಆದರೆ ಈ ಪದ್ಯದಲ್ಲಿ ದೇಹಕ್ಕೆ ವಿರುದ್ಧವಾದ ಆತ್ಮದ ಮಾತು ತಾತ್ವಿಕವಾದ್ದು; ಕೊನೆಯಲ್ಲಿ ಬರುವ ಜೀವಪರವಾದ ಆವೇಶದಿಂದ ಹುಟ್ಟಿದ್ದು. ಮುದಿತನದಲ್ಲಿ ಬರೆದ ಕೆಲವು ಪದ್ಯಗಳಲ್ಲಂತೂ ಕವಿ ನಾಚಿಕೆಯಿಲ್ಲದ ಪೋಲಿಯಾಗಿ ಜೀವಂತಿಕೆಯನ್ನು ಹಾಡಿ ಹೊಗಳುತ್ತಾನೆ. ಈ ಪದ್ಯಗಳಲ್ಲಿ ಕವಿ ಎಲ್ಲ ಸಂಕೋಚಗಳನ್ನೂ ಗಾಳಿಗೆ ಚೆಲ್ಲಿ ಮುಕ್ತನಾದ ಜೀವಿಯಷ್ಟೇ ಶುಭ್ರನಾಗಿಬಿಡುತ್ತಾನೆ. ಎಲ್ಲೆ ಮೀರಿ ಗೆಲುವಿನ ಕೇಕೆ ಹಾಕುತ್ತಾನೆ. ಮುದುಕನ ಈ ಕೇಕೆಯನ್ನು ಕೇಳಿಸಿಕೊಳ್ಳುತ್ತಲೇ ಅವನು ಹೇಳದೇ ಇರುವ ಸತ್ಯಗಳೂ ನಮಗೆ ಕಾಣುತ್ತವೆ. ದುರ್ಬಲನ ಕೇಕೆಯಲ್ಲೇ ದುರಂತ ನಾಯಕನ ಪ್ರತಿಭಟನೆಯೂ ಇದೆ. ನಿಸ್ಸಹಾಯಕತೆಯೂ ಇದೆ, ಜೊತೆಗೇ-ಇದು ಮುಖ್ಯ-ತನ್ನ ಕಾವ್ಯದ ಶಕ್ತಿಯ ಮುಖೇನ ಪ್ರಕೃತಿಯ ಸತ್ಯಗಳನ್ನು ಮೀರುವ ಹುನ್ನಾರವಿದೆ.

ಭಾವನೆಗಳು ತಮ್ಮ ತೀವ್ರಸ್ಥಿತಿಯಲ್ಲಿ ಸದಾ ಸಂಚಾರಿಯಗಿ ತುಯ್ಯುತ್ತಲಿರುವುದು ಮನುಷ್ಯನ ಅಪಕ್ವಸ್ಥಿತಿಗೆ ದ್ಯೋತಿಕವೆನ್ನುವುದರಲ್ಲಿ ಸತ್ಯವಿದೆ. ಆದರೆ ಜೀವ ಹಲವು ಸತ್ಯಗಳನ್ನು ನಾವು ಕಾಣಬಹುದಾದದ್ದು ವಿವೇಕದಲ್ಲಿ ಸಮಚಿತ್ತವಾಗುವ ಸ್ಥಿತಿ ತಲುಪದೇ ಇರುವಾಗ ಎನ್ನುವುದೂ ಸತ್ಯವೆ. ಯೇಟ್ಸ್‌ನದು ಕಲಾವಿದನ ಮಾರ್ಗ. ಅದು ತನ್ನ ಸಾವಯವ ಸೌಷ್ಠವವನ್ನು ಕಳೆದುಕೊಂಡ ಚರಿತ್ರೆಯ ಇವತ್ತಿನ ವಿಘಟನೆಯಲ್ಲಿ ಬದುಕುವ ಕಲಾವಿದನ ಮಾರ್ಗ. ಒಂದೋ ಕೃತಿಯ ಪರಿಪೂರ್ಣತೆ ಅಥವಾ ಬದುಕಿನ ಪರಿಪೂರ್ಣತೆ ಈ ಕಾಲದಲ್ಲಿ ಸಾಧ್ಯ; ಎರಡು ಒಟ್ಟಾಗಿ ಅಲ್ಲ ಎಂದು ಈ ಕಾರಣದಿಂದಲೇ ಯೇಟ್ಸ್‌ ಹೇಳುವುದು. ಯೇಟ್ಸ್‌ನ ಕಲಾವಿದ ಈ ದೃಷ್ಟಿಯಿಂದ ಬಲಿಪಶು.

ಯೇಟ್ಸ್‌ನ ಪದ್ಯಗಳಲ್ಲಿ ಸತ್ಯ ದರ್ಶನವಾಗುವುದು ಬಫೂನರಿಗೆ, ರಂಡೆಯರಿಗೆ, ಉನ್ಮಾನದದ ಮುದಿಯರಿಗೆ, ನಾಗರಿಕತೆಗೆ ಮುಖ ತಿರುಗಿಸಿ ನಡೆದುಬಿಟ್ಟ ಅರಣ್ಯಕರಿಗೆ-ಸಭೆಯ ಗೃಹಸ್ಥರಿಗಂತೂ ಅಲ್ಲವೇ ಅಲ್ಲ. ಮರುಳಿ ಜೇನ್‌ ಧಾರಾಳವಾಗಿ ಪ್ರೇಮಕೊಟ್ಟು ಪಡೆದವಳು. ಬಿಷಪ್ಪಿನ ಮೂತಿ ತಿವಿದು ಅವಳು ಮಾತಾಡುತ್ತಾಳೆ.. ಸಂಗದ ಮುದ ಅವಳಿಗೆ ಗೊತ್ತು. ಬಿಷಪ್‌ನ ಎರಡು ವೈರಾಗ್ಯವನ್ನು ಧಿಕ್ಕರಿಸುವ ಜೇನ್‌ ಅನುರಾಗದ ದಿವ್ಯದಲ್ಲೇ ಶುದ್ಧಳಾದವಳು. ಇಂಥ ಪದ್ಯಗಳಲ್ಲೆಲ್ಲ ಯೇಟ್ಸ್‌ ಟೊಂಕ ಕಟ್ಟಿ ನಿಂತ ಎದುರಾಳಿಯಂತೆ ಮಾತನಾಡುತ್ತಾನೆ. ಈ ಎಲ್ಲ ಪದ್ಯಗಳೂ ವಾಗ್ವಾದಗಳು, ಆತ್ಮಗತ ಧ್ಯಾನವಲ್ಲ. ಉದ್ದೇಶಪೂರ್ವಕವಾದ ಶಾಖ ಈ ಪದ್ಯಗಳಲ್ಲಿರುತ್ತದೆ. ಆವಾಹನೆ, ಉಚ್ಛಾಟನೆ, ಉದ್ದೀಪನ-ಇತ್ಯಾದಿ ಅಗತ್ಯಗಳು ಈ ಪದ್ಯಗಳ ಹುಟ್ಟಿಗೆ ಕಾರಣವಾಗುತ್ತವೆ.

ಹೀಗಲ್ಲದೆ ಇರುವ ಪದ್ಯಗಳು ಯೇಟ್ಸ್‌ನಲ್ಲಿ ಇವೆ. ‘ಸ್ಕೂಲು ಮಕ್ಕಳ ನಡುವೆ’ ಎಂಬ ಒಂದು ಪದ್ಯ. ಈ ಪದ್ಯದ ಕೊನೆಯ ಸಾಳುಗಳು ಯೇಟ್ಸ್‌ ಹುಡುಕುವ ವಿವೇಕದ ಸ್ಥಿತಿಯನ್ನು ಸೂಚಿಸುತ್ತವೆ-ಇಲ್ಲಿ ಗರ್ವವಾಗಲೀ ರೋಷವಾಗಲೀ ಇಲ್ಲ, ಧ್ಯಾನವಿದೆ:

Labour is blossoming or dancing where
The body is not bruised to pleasure soul,
Nor beauty born out of its own despair,
Nor blear-eyed wisdom out of midnight oil.
O chestnut tree, great rooted blossomer,
Are you the leaf, the blossom or the bole?
O body swayed to music, O brightening glance,
How can we know the dancer from the dance?

ಎಲ್ಲಿ ಆತ್ಮಾನಂದಕ್ಕಾಗಿ ಎಷ್ಟೂ ಕಾಯ ನೋಯಬೇಕಿಲ್ಲವೋ,
ಎಲ್ಲಿ ಸೌಂದರ್ಯ ಸ್ವಂತದ ಹತಾಶೆಯ ಹೆತ್ತ ಸೃಷ್ಟಿಯಾಗಿಲ್ಲವೋ,
ಮಬ್ಬುಗಣ್ಣು ವಿವೇಕ ನೆಟ್ಟಿರುಳ ಅಧ್ಯಯನದಿಂದ ಹುಟ್ಟಿಲ್ಲವೋ,
ಅಲ್ಲಿ ಶ್ರಮ ಹೂ ಚಿಮ್ಮಿ ಕುಣಿದು ಕುಕಿಲಿರಿಯುತ್ತದೆ.
ನೀಳ ಚಂಪಕ ಮಹಾವೃಕ್ಷವೆ, ಹೆಬ್ಬೇರ ನೆಮ್ಮಿ ಎದ್ದಿರುವ ಸುಮಜಾಲವೆ,
ನೀನೇನು ಎಲೆಯ, ಹೂವೇ, ಇಲ್ಲ ಕಾಂಡವೆ?
ಗಾನಕ್ಕೆ ತುಯ್ಯುತ್ತಲಿರುವ ಮೈಮಾಟವೆ, ಹೊಳೆವ ಕಣ್ಣೋಟವೆ,
ನೃತ್ಯದಿಂದ ನರ್ತಕನನ್ನು ಬೇರ್ಪಡಿಸಿ ನೋಡುವುದು ಸಾಧ್ಯ ಹೇಗೆ?

ಯೂರೋಪಿನ ಮತ್ತು ಏಷ್ಯಾದ ನಾಗರಿಕತೆಗಳೂ ಯೇಟ್ಸ್‌ನ ಹಲವು ಪದ್ಯಗಳಲ್ಲಿ ಧ್ಯಾನದ ವಸ್ತುಗಳಾಗಿ ಬರುತ್ತವೆ. ‘ದಿ ಸ್ಟಾಚ್ಯೂಸ್‌’ ಎನ್ನುವ ಅವನದೊಂದು ಪದ್ಯ ಫೈಥಾಗರಸ್ಸನ ಅಮೂರ್ತ ಲೆಕ್ಕಾಚಾರವೇ ಶಿಲ್ಪಿಗಳಿಗೆ ಮನುಷ್ಯ ದೇಹದ ಸಹಜ ರೂಪ ಕೆತ್ತುವುದು ಸಾಧ್ಯಗೊಳಿಸಿದ ಮಾತಿನಿಂದ ಪ್ರಾರಂಭವಾಗುತ್ತದೆ. ಹೀಗೆ ಕೆತ್ತಿದ ರೂಪಗಳು ನಿರ್ಜೀವವಾದರೂ, ಅವನ್ನು ಕಾಣುವ ಯುವಜನರ ಕಣ್ಣುಗಳು ಲಂಬಕದಿಂದ (Plummet) ಅಳೆವ ಮುಖಗಳನ್ನೇ ಭಾವನಾತ್ಮಕವಾದ ಕಾಮದಲ್ಲಿ ನಿಜವೆಂದು ಭಾವಿಸಿ, ತಮ್ಮ ಜೀವಂತ ತುಟಿಗಳಿಂದ ಮುತ್ತಿಡುತ್ತವೆ. ಆ ಬಗೆಯ ವಾಸ್ತವ ದೃಷ್ಟಿಯ ಕಲೆಯನ್ನು ಜಾಮಿತಿಯಿಂದ ಸೃಷ್ಟಿಸಿದ ಖಡಾಖಂಡಿತ ದೃಷ್ಟಿಯ ಯೂರೋಪು ಏಷಿಯಾ ಭೂಖಂಡದ Vague immunities-ಅಸ್ಪಷ್ಟ ಅಗಾಧತೆಗಳನ್ನು-ಹಿಮ್ಮೆಟ್ಟುವಂತೆ ಮಾಡಿತು ಎಂದು ಮುಂದೆ ಹೇಳುತ್ತಾನೆ. ಏಷ್ಯಾದ ತೋರವಾದ, ಅಂಗಸೌಷ್ಠವರಹಿತ ಬುದ್ಧನ ಮೂರ್ತಿಯೊಂದು ಅನಂತರ ಪದ್ಯದಲ್ಲಿ ಬರುತ್ತದೆ. ಗ್ರಿಮಾಲ್ಕಿನ್‌ ಎಂಬ ಬೆಕ್ಕು ಬುದ್ಧನ ಶೂನ್ಯದೊಳಕ್ಕೆ ತೆವಳುವಾಗಲೇ ಗಂಟೆ ಜಾಗಟೆ ಶಂಖಗಳು ಶುಭಮುಹೂರ್ತ ಸಾರುತ್ತವೆ. ಈ ಚಿತ್ರದ ನಂತರ ಪದ್ಯದ ಕೊನೆಯಲ್ಲಿ ಐರಿಷ್‌ ಜನರ ಉನ್ಮಾದದ ಮಾತು ಬರುತ್ತದೆ. ವಿವೇಕಶೂನ್ಯವಾದ, ಅತಾರ್ತಿಕವಾದ, ಬುದ್ಧಿಯ ಸಂಯಮವಿಲ್ಲದ ಉನ್ಮಾದ ಇದು. ಐರೋಪ್ಯ ಜನಾಂಗದಲ್ಲಿ ಜನಿಸಿಯೂ ಈಗ ತಮ್ಮ ಪೂರ್ವಿಕರಿಂದ ದೂರವಾಗಿಬಿಟ್ಟು ಐರ್ಲೆಂಡ್‌ಗೆ ಆಕಾರರಹಿತ ಕೆಸರಿನಿಂದ ಮೇಲಕ್ಕೇರಲು-ತಮಗೆ ತಕ್ಕುದಾದ ಕತ್ತಲೆಗೆ ಏರಲು-ಲಂಬಕದಿಂದ ಅಳತೆ ಮಾಡಿದ ಮುಖದ ದರ್ಶನ ಮಾಡಲು ಯೇಟ್ಸ್‌ ಕರೆ ಕೊಡುತ್ತಾನೆ. ಲಂಬಕದಿಂದ ಅಳತೆ ಮಾಡಬಲ್ಲ ಕುಶಲತೆಯಿಂದಾಗಿಯೇ ಯೂರೋಪು ಸಲಾಮಿಸ್‌ ಕದನದಲ್ಲಿ ಆಕಾರರಹಿತ ಏಷ್ಯಾವನ್ನು ಹಿಮ್ಮೆಟಿಸಿದ್ದು ಎಂಬುದು ಯೇಟ್ಸ್‌ನ (ಆ ಕ್ಷಣದ) ನಿಲುವು ಈ ಪದ್ಯದಲ್ಲಿದೆ.

ಯೇಟ್ಸ್‌ನ ಗೊಂದಲಗಳನ್ನು ಅರ್ಥಮಾಡಿಕೊಳ್ಳಲು ಈ ಪದ್ಯ ಬಹಳ ಮುಖ್ಯ. ಆಕಾರ, ವಿವೇಕ, ಹದ, ನಾಗರಿಕತೆಗಳನ್ನು ಬಯಸುವ ಯೇಟ್ಸ್‌ ಯೂರೋಪಿನ ಪರವಾಗಿಯೂ, ನಿರಾಕಾರವಾದ ಉಮ್ಮಳಿಸುವ ಪ್ರಾಣಶಕ್ತಿಯನ್ನು ಹುಡುಕುವ ಯೇಟ್ಸ್‌ ಏಷ್ಯಾದ ಪರವಾಗಿಯೂ ವಾದಿಸುವಂತೆ ಕಾಣಿಸುತ್ತದೆ. ಕೊನೆಗೂ ಯೇಟ್ಸ್‌ ಎಲ್ಲಿ ನಿಲ್ಲುತ್ತಾನೆ? ಎಂದು ಹೇಳುವುದು ಸುಲಭವಲ್ಲ. ಅವನ ದೇಹಾತ್ಮಗಳ ಜಗಳ, ವಿಫಲ ಪ್ರಣಯ, ಪಾವಿತ್ಯ್ರದ ಹುಡುಕಾಟ, ಜಿತೇಂದ್ರಿಯನಾಗಬೇಕೆಂಬ ಆಶಯ ಹೀಗೆ ಎಲ್ಲವೂ ಏಷ್ಯಾ ಯೂರೋಪು ದ್ವಂದ್ವದಲ್ಲಿ ಗಂಟಾಗಿಬಿಡುತ್ತವೆ. ವಸ್ತುನಿಷ್ಠತೆಯ ಪಶ್ಚಿಮ, ಆತ್ಮನಿಷ್ಠತೆಯ ಪೂರ್ವ, ಆಕಾರ-ನಿರಾಕಾರ, ಸೂರ್ಯ-ಚಂದ್ರ, ವಿಜ್ಞಾನಿ-ಕವಿ, ಋಷಿ-ಸಂತ, ಮರುಳಿಜೇನ್‌-ಬಿಷಪ್‌ ಹೀಗೆ ದ್ವಂದ್ವಗಳಲ್ಲೆ ಹುಟ್ಟುವ ಅವನ ಕಾವ್ಯದ ಉದ್ದೇಶ ಸತ್ಯದ ಆವಿಷ್ಕಾರವೇ. ಸತ್ಯವನ್ನು ಅರಿಯುವುದು ಸಾಧ್ಯವಿಲ್ಲ; ಕಲಾಕೃತಿಯಲ್ಲಿ ಅದನ್ನು ಮೂಡಿಸಬಹುದು ಎಂದು ಯೇಟ್ಸ್‌ ತಿಳಿದಿದ್ದ. ನಮ್ಮ ಕಾಲದಲ್ಲಿ ಕಾವ್ಯಕ್ರಿಯೆಗೆ-ಅದು ಹುಟ್ಟಿ ಬೆಳೆಯುವಾಗ ಕವಿಯನ್ನೇ ಮೀರುವ ಅದರ ಕ್ರಮಕ್ಕೆ-ಇದರಿಂದಾಗಿ ವಿಶೆಷ ಮಹತ್ವ ದಕ್ಕಿದೆ.

ಒಂದು ವಿಷಯವನ್ನು ನಾವು ಮರೆಯಬಾರದು. ತನ್ನ ಪದ್ಯ ಸ್ಟಾಚ್ಯೂಸ್‌ನಲ್ಲಿ ಕವಿ ಒಲಿದಂತೆ ಕಾಣುವ ಯೂರೋಪು ಕ್ರಿಸ್ತಪೂರ್ವ ಯೂರೋಪು, ಗ್ರೀಸರ ಯೂರೋಪು-ಕ್ರೈಸ್ತ ಸಂತರ ಯೂರೋಪಲ್ಲ. ಈ ಆಯ್ಕೆಯಲ್ಲಿ ಒಂದು ವಿಶೇಷ ವಿಚಾರವಿದೆ. ಅದರ ಬಗ್ಗೆ ಕೆಲವು ಮಾತುಗಳು ಅಗತ್ಯ.

ತತ್ವಜ್ಞಾನಿ ಹೆಗೆಲ್‌ ಪ್ರಕಾರ ಚರಿತ್ರೆಯ ಪ್ರಾರಂಭದಲ್ಲಿ ಬೋಧವಾದ ವಿಚಾರ ದ್ವಂದ್ವಗಳಲ್ಲಿ ಒಡೆಯುತ್ತ, ಕ್ರಮೇಣ ಸತ್ಯವನ್ನು ಅಂಶ ಅಂಶವಾಗಿ ಒಳಗೊಳ್ಳುತ್ತ, ಮೇಲೇರುತ್ತ, ಮತ್ತೆ ಮತ್ತೆ ಭಾಗವಾಗುತ್ತ ಇತಿಹಾಸದ ನಮ್ಮ ಈ ಆಧುನಿಕ ಘಟ್ಟದಲ್ಲಿ ಯೂರೋಪಿನಲ್ಲಿ, ಅದೂ ಜರ್ಮನಿಯಲ್ಲಿ-ಸತ್ಯದರ್ಶನದ ಪರಮೋಚ್ಛ ಸ್ಥಿತಿ ಮುಟ್ಟುತ್ತದೆ. ಇದಕ್ಕೆ ವಿರೋಧವಾದ ಇನ್ನೊಂದು ವಿಚಾರವಿದೆ. ಚರಿತ್ರೆಯ ಕಾಲದಲ್ಲಿ ಬೋಧವಾದ ಜ್ಞಾನಕಾಲ ಹರಿದಂತೆ ಹಲವು ದಿಕ್ಕುಗಳಲ್ಲಿ ಬೆಳೆದೀತು. ಹೀಗೆ, ಈಗ ಯಾವುದೋ ಒಂದು ದಿಕ್ಕಿನಲ್ಲಿ ಬೆಳೆದು ಪಕ್ವವಾದ ಸ್ಥಿತಿ ಅದರ ಒಂದು ಮಗ್ಗಲು-ಕೇವಲ ಒಂದು ಮಗ್ಗಲು ಅಷ್ಟೆ. ಮೂಲದಲ್ಲೇ ಮತ್ತೆ ಅದನ್ನು ಗ್ರಹಿಸಿ, ಬೋಧವಾದ ಜ್ಞಾನದ ಮತ್ತೊಂದು ಸಾಧ್ಯತೆಯನ್ನು ಕಂಡುಕೊಳ್ಳುವುದೇ ನಿಜವಾದ ಸೃಜನಶೀಲತೆ. ನಾವು ಆದಿಮ ಎಂದು ತಿಳಿದಿರುವ ಮೂಲದಲ್ಲೇ ನಿಷ್ಕಪಟವೂ, ಶುದ್ಧವೂ, ದೇದೀಪ್ಯಮಾನವೂ ಆದ ಜೀವಂತಿಕೆಯಿರುವುದು-ಬೆಳವಣಿಗೆಯ ಸಾಧ್ಯತೆಯೂ ಮೂಲದಲ್ಲೇ ಅಡಗಿರುವಂಥದು. ಚರಿತ್ರೆ ಯ ತಪ್ಪುಗಳನ್ನು ಮನುಷ್ಯ ಕಳಚೆಸೆದು, ಸೃಜನಶೀಲವಾದ, ಗುರುತುಗಳೇ ಇಲ್ಲದ ಇನ್ನೊಂದು ಯಾತ್ರೆಗೆ ತಯಾರಾಗುವುದು. ಹೀಗೆ ಮೂಲದ ದಿವ್ಯಸ್ಪರ್ಶಕ್ಕೆ ಅಣಿಯಾದಾಗ.

ಹೆಗೆಲ್‌ವಾದಿಗಳು ಮತ್ತು ಮಾರ್ಕ್ಸ್‌ವಾದಿಗಳು ಈಗಿರುವ ಘಟ್ಟದಿಂದ ಮುಂದೆ ಹೋಗುವುದು ಮಾತ್ರ ಸಾಧ್ಯ; ಹಾಗೆ ಹೋಗುವುದೂ ಅಗತ್ಯ, ಕಲ್ಯಾಣದಾಯಕ ಎನ್ನುವವರು. ಆದರೆ ಯೇಟ್ಸ್‌ನಂತಹ ಋಷಿಕವಿಗಳು ಈಗ ಇರುವುದನ್ನು ಕಳಚಿ ಎಸೆಯದೇ ಇಲ್ಲಿಂದ ಮುಂದೆ ಏನೇನೂ ಇಲ್ಲ ಎನ್ನುವವರು. ಅದಕ್ಕಾಗಿ ಸತ್ಯದ ಶುಭ್ರವೂ ಸಾಚವೂ ಆದ ಅವತಾರದ ಘಳಿಗೆಗಳು ಇತಿಹಾಸದ ಯಾವ ಘಟ್ಟದ್ದೇ ಆಗಿರಲಿ, ಈಗಲೂ ಪ್ರಸ್ತುತ, ಸತ್ಯ ಎಂದು ತಿಳಿದವರು. ವಿಕಾಸದಲ್ಲಿ ಸತ್ಯ ಬೆಳೆಯುತ್ತದೆ ಎಂದು ಮಾರ್ಕ್ಸ್ ಮತ್ತು ಹೆಗೆಲ್‌ ಬೇರೆ ಬೇರೆ ಕ್ರಮದಲ್ಲಿ-ಒಬ್ಬ ಆತ್ಮನಿಷ್ಠ ವಿಚಾರವಾಗಿ ಮತ್ತೊಬ್ಬ ವಸ್ತುನಿಷ್ಠ ಸಾಮಾಜಿಕ, ಆರ್ಥಿಕ ಸ್ಥಿತಿಯಾಗಿ ತಿಳಿದವರಾದರೆ, ಸತ್ಯ ಯಾವ ಕ್ಷಣದಲ್ಲಾಗಲೀ ಅವತರಿಸುತ್ತದೆ ಎಂದು ತಿಳಿದಿರುವನು ಯೇಟ್ಸ್‌. ಮಾರ್ಕ್ಸ್ ಮತ್ತು ಹೆಗೆಲ್ಲರಿಗೆ ಚರಿತ್ರೆಯ ಕಾಲ ಮುನ್ನುಗ್ಗುವ ರೇಖೆಯಾದರೆ, ಯೇಟ್ಸ್‌ನಿಗೆ ಮತ್ತು ಎಲ್ಲ ಅನುಭಾವಿಗಳಿಗೆ ಕಾಲ ವರ್ತುಳವಾದ್ದು. ಯೇಟ್ಸ್‌ ಇದನ್ನೇ ‘ಜೈರ್’ ಎಂದು ತನ್ನ ಹಲವು ಪ್ರಸಿದ್ಧ ಪದ್ಯಗಳಲ್ಲಿ ಸಂಕೇತಿಸುತ್ತಾನೆ.

ಆಧುನಿಕ  ಯುರೋಪಿನ ತರ್ಕಬದ್ಧ ವೈಚಾರಿಕತೆಯನ್ನು ಯೇಟ್ಸ್‌ ಶಾಪವೆಂದು ತಿಳಿದವನು. ಬರ್ನಾರ್ಡ್‌‌ಷಾನ ನಾಟಕ ನೋಡಿ ಬಂದ ಕವಿಗೆ ನಾಟಕಕಾರ ನಗುನಗುತ್ತಲೇ ಹೊಲಿಯುವ ಹೊಲಿಗೆಯಂತ್ರದಂತೆ ಕಂಡು ಕಾಡಿದನಂತೆ. ಲಾಕ್‌ ಎಂಬ ತತ್ವಜ್ಞಾನಿಯ ಫ್ರೆಂಚ್‌ ಭಾಷಾಂತರಕಾರನೊಬ್ಬ ಲಾಕ್‌ಗೆ ಒಂದು ಪ್ರಶ್ನೆ ಹಾಕಿದ. ಅಂತರ್ಗತವಾದ ಹುಟ್ಟುಗುಣ ಎಂಬುದೊಂದು ಇಲ್ಲವೇ? ಹಕ್ಕಿ ಹೇಗೆ ಗೂಡು ಕಟ್ಟುತ್ತದೆ? ಲಾಕ್‌ ಕೊಟ್ಟ ಉತ್ತರ ಇದು: ‘ನನ್ನ ಪುಸ್ತಕದ ಶೀರ್ಷಿಕೆಯೇ ಮನುಷ್ಯನ ತಿಳಿವಳಿಕೆಯನ್ನು ಕುರಿತ ತಾತ್ವಿಕ ಪ್ರಬಂಧ, ಪ್ರಾಣಿಯದ್ದಲ್ಲ.’ ಭಾಷಾಂತರಕಾರ ಈ ಉತ್ತರದಿಂದ ತೃಪ್ತನಾದ. ಆದರೆ ಯೇಟ್ಸ್ ಮೆಚ್ಚಿದ ದಾರ್ಶನಿಕ ಕವಿ ಹೆನ್ರಿಮೂರ್ ಗಾದರೋ ಪಕ್ಷಿಯಲ್ಲಿ ಅಂತರ್ಗತವಾದ ಶಕ್ತಿಯೇ ಎಲ್ಲ ಜೀವಂತಿಕೆಯ ಸಲೆಯಾದ ಸನಾತನ ‘ಅನಿಮಾ ಮಂಡಿ’ಯ ಸತ್ಯವನ್ನೂ, ಸೃಷ್ಟಿ ರಹಸ್ಯವನ್ನೂ ಸಾರುವಂತೆ ತೋರಿತು.

ಇಲ್ಲೇ, ಈ ಕ್ಷಣದಲ್ಲೇ, ಈ ದೇಹದಲ್ಲೇ ಶಾಶ್ವತವಾದ್ದನ್ನು ಹುಡುಕಿದ ದೈವಿಕ ಹುಚ್ಚರ ಸಾಲಿಗೆ ಸೇರಿದವನು ಯೇಟ್ಸ್‌. ನನ್ನ ದಾರ್ಶನಿಕ ಗೆಳೆಯ ಶ್ರೀ ರಾಮಚಂದ್ರ ಗಾಂಧಿಯ ವಿಚಾರಧಾರೆಯನ್ನು ನೋಡಿದಾಗ ಏಟ್ಸ್ ನನ್ನೂ ಒಬ್ಬ ತಾಂತ್ರಿಕನೆಂದು ತಿಳಿಯಬಹುದು. ಊನವೆಂದು ಕಾಣುವುದನ್ನೇ ಪ್ರಯೋಜನಕಾರಿಯಾಗಿ ಪರಿವರ್ತಿಸಿಕೊಳ್ಳುವುದು ತಂತ್ರದ ಮಾರ್ಗ. ಅಹಮಿಕೆಯಲ್ಲಿ ಸೊಕ್ಕುವ ಅಹಂ ‘ಸೋಹಂ’ ಎಂಬ ಅರಿವಿಗೆ ಪರಿವರ್ತಿತವಾಗುವಂತೆ; ಈ ದೇಹದ ಕಾಮುಕತೆಯೇ ಏಕಾಗ್ರ ಪೂಜೆಯಾಗುವಂತೆ; ಭಾರತೀಯ ಬಡಜನರ ದುರ್ಬಲತೆಯ ಗಾಂಧೀಜಿಯ ಅಹಿಂಸಾ ಮಾರ್ಗದಲ್ಲಿ ಶಕ್ತಿಯಾಗುವಂತೆ ಅಡಚಣೆಯಲ್ಲೇ ಬಿಡುಗಡೆ ಹುಡುಕುವ ತಾಂತ್ರಿಕನಾಗಿ ಲಾರೆನ್ಸ್‌ ತನ್ನ ಅರಿವಿನ ಮೂಲವನ್ನು ತನ್ನದೇ ದೇಹದ ಸೂರ್ಯನಾಡಿಯಲ್ಲಿ ಗುರುತಿಸಿಕೊಂಡ. ಬಲಸನ್ತದ ತೊಟ್ಟಿನ ಬುಡವೇ ದೈವಶ್ರದ್ಧೆಯ ಜಾಗ ಎಂದು ಲೂಥರ್ ತಿಳಿದಿದ್ದು ದಾರ್ಶನಿಕ ವಿಟ್‌ಗನ್‌ ಸ್ಟೇನ್‌ನ ಕುತೂಹಲ ಕೆರಳಿಸಿತು. ಪರಮ ಅದ್ವೈತಿ ರಮಣ ಮಹರ್ಷಿಗಳಿಗೆ ಆತ್ಮದ ಸ್ಥಾನ ಎದೆಯ ಬಲಭಾಗ, ಜೈವಿಕ ಹೃದಯ ಬಡಿದುಕೊಳ್ಳುವ ಎಡಭಾಗವಲ್ಲ ಎನ್ನುವುದು ರಾಮಚಂದ್ರ ಗಾಂಧಿಯ ವಿಚಿತ್ರವಾದ ಒಂದು ಧ್ಯಾನಕ್ಕೆ ಎಡೆಮಾಡಿಕೊಡುತ್ತದೆ. ಯೇಟ್ಸ್‌ನ ವಿದ್ಯಾರ್ಥಿಗಳಿಗಂತೂ ಮರುಳಿ ಜೇನ್‌ ಬಿಷಪ್‌ನ ಮೂತಿ ತಿವಿದು ಹೇಳುವ ಒಂದು ಮಾತು ಬಹಳ ಮಹತ್ವದ್ದು;

Love has pitched his mansion
in the place of excrement.

ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನ
ಉಚ್ಚೆಯ ಬಚ್ಚಲಲ್ಲಿ

ದಿವ್ಯ ಪ್ರೇಮದ ಆಸ್ಥಾನವೇ ಉಚ್ಚೆ ಹುಯ್ಯುವ ಜಾಗ. ಆತ್ಮದ ವೃದ್ಧಿಗೆ ಅಡ್ಡಿಯೆಂದು ಕಾಣವು-ಯೇಟ್ಸ್‌ಗೇ ಹಲವು ಸಾರಿ ಹಾಗೆ ಕಂಡ-ಕಾಮ ತೃಪ್ತಿಯ ಸಾಧನವನ್ನೇ ದಿವ್ಯದ ಸನ್ನಿಧಿಯಾಗಿ ಕಂಡು ಆತ್ಮ ಮತ್ತು ದೇಹದ ಜಗಳವನ್ನು ತಾಂತ್ರಿಕನಾಗಿ ಮೀರಿಬಿಡುತ್ತಾನೆ.

ಮನುಷ್ಯನಿಗೆ ತೀವ್ರವಾದ ಭಾವನೆಯಲ್ಲಿ ಹೊಳೆಯುವುದನ್ನು ಕೃತಕವಾಗದಂತೆ ಹೇಳುವ ಬಲು ಕಷ್ಟದ ಕಸುಬುಗಾರಿಕೆಯನ್ನು ಜೀವನದುದ್ದಕ್ಕೂ ಯೇಟ್ಸ್‌ ಕಲಿಯುತ್ತ ಹೋದ. ನಾವು ಯಾವ ಮಾತುಗಳಲ್ಲಿ ನಿಜವಾಗಿ ಯೋಚಿಸುತ್ತೇವೆಯೋ, ಭಾವಿಸುತ್ತೇವೆಯೋ, ಆ ಮಾತುಗಳಲ್ಲೇ, ಆಪ್ತ ಸ್ನೇಹಿತನಿಗೆ ಕಾಗದ ಬರೆದಂತೆ ಪದ್ಯ ಬರೆಯಬೇಕು ಎಂಬುದು ಈ ಪ್ರಯತ್ನ. ಸೊಗಸುಗಾರಿಕೆಯಲ್ಲಿ ಈ ಭಾವನೆಗಳನ್ನು ನಾವು ಚಂದಗೊಳಿಸಲು ಯತ್ನಿಸಬಾರದು. ಯಾಕೆಂದರೆ ಗೊಂದಲದ ನಮ್ಮ ಬದುಕೇ ಈ ಮಾತುಗಳಿಗೆ ಶಕ್ತಿ ತರುವುದು. ನಾಟಕದಲ್ಲಿ ಒಂದು ಪಾತ್ರ ಮಾತಾಡಿದಾಗ ಕಾಣುವ ಸಹಜತೆ, ವೈಯಕ್ತಿಕ ಮಾತಿನ ಸಹಜತೆ, ವಾಚಾಳಿಯ ಮೋಸದ ಉದ್ದೀಪನೆಯಿಂದಲೂ, ತೋರುಗಾಣಿಕೆಯಿಂದಲೂ ಕಾವ್ಯವನ್ನು ರಕ್ಷಿಸೀತು ಎಂದು ಯೇಟ್ಸ್‌ ವಾದಿಸಿದ. ಹೀಗೆ ಬರೆದದ್ದು ಪುಣ್ಯವಶದಿಂದ ದೊಡ್ಡ ಕಾವ್ಯವಾದರೂ ಆಗಬಹುದು. ಆಗದೇ ಹೋದಾಗಲೂ ಅದು ಕೇವಲ ಸಾಹಿತ್ಯದ ಥೀಮ್‌ ಮಾತ್ರವೇ ಆಗಿ ಉಳಿದಿರುವುದಿಲ್ಲ.

ಹೀಗೆ ಬರೆಯಲೆಂದು ಯೇಟ್ಸ್‌ ಕಾವ್ಯದ ಲಯವನ್ನು, ಛಂದಸ್ಸನ್ನು ಸಡಿಲಗೊಳಿಸಿದ. ಯಾಕೆಂದರೆ ರೆಟರಿಕ್‌ನಿಂದ ಅವನಿಗೆ ಬಿಡುಗಡೆ ಬೇಕಿತ್ತು.  ಯಾಕೆ ಅವನು ರೆಟರಿಕ್‌ನಿಂದ ಬಿಡುಗಡೆಯನ್ನು ಬಯಸಿದನೆಂಬುದು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಅತ್ಯಗತ್ಯವಾದ ಬುದ್ಧಿವಾದವಾಗಬಹುದು. ರೆಟರಿಕ್‌ ಇದ್ದಲ್ಲೆಲ್ಲ ಗುಂಪಿನ ‘ಎಮೋಶನ್‌’ ಇರುತ್ತದೆ. ತೋರುಗಾಣಿಕೆ ಇರುತ್ತದೆ. ಅವನ ಖ್ಯಾತ ಪದ್ಯ Lake Isle of Innis free ಬಗ್ಗೆ ಅವನು ಹೇಳುವುದನ್ನು ಕೇಳಿ. ‘ಈಗ ತಾನದನ್ನು ಬರೆದಿದ್ದರೆ ‘Arise and Go’ ಎಂಬ ಕೃತಕ ಭಾವುಕತೆಯ ಮಾತು ಪದ್ಯದಲ್ಲಿ ಇರುತ್ತಿರಲಿಲ್ಲ’ ಎನ್ನುತ್ತಾನೆ ಕವಿ. ಹೀಗೆ ಕುಮ್ಮಕ್ಕಿರುವ ಪದಪುಂಜಗಳನ್ನೇ ಅನುಮಾನಿಸುವ ಯೇಟ್ಸ್‌ನ ಕಾವ್ಯವ್ರತ ನಿಷ್ಠರುವಾದ್ದು, ಕಠಿಣವಾದ್ದು.

ಎಷ್ಟು ನಿಷ್ಠುರ ಎಂದರೆ, ಅವನ ಕೊನೆಗಾಲದ ಒಂದು ಪದ್ಯದಲ್ಲಿ-Circus Animal’s Desertion-ಯಾವ ಸ್ವಸಮರ್ಥತೆಗೂ ಎಡೆಯಿಲ್ಲದಂತೆ ಅವನು ಬತ್ತಲೆ ನಿಂತ. ಹಾಗೆ ನಿಂತ ಅವನ ಕಾಲದ ಇನ್ನೊಬ್ಬ ಕವಿ, ಪ್ರಾಯಶಃ ಎಲಿಯಟ್‌ ಬಿಟ್ಟರೆ, ಬೇರಾರೂ ಇಲ್ಲ ಎನ್ನಬಹುದು. ತನಗೆ ಖ್ಯಾತಿ ತಂದ ಎಲ್ಲ ಸಂಕೇತಗಳೂ ತಾನು ಹೇಳಿದಂತೆ ಕುಣಿಯುತ್ತಿದ್ದ ಸರ್ಕಸ್‌ ಪ್ರಾಣಿಗಳಂತೆ ಅವನಿಗೆ ಕಾಣುತ್ತವೆ. ಜೀವನದ ಶಾಖದಿಂದ, ಕುದಿಯಿಂದ ಬಂದ ಸಂಕೇತಗ ಳೂ ಈಗ ಜೀವಂತಿಕೆಯ ಸ್ಪರ್ಶದಿಂದ ಅವನನ್ನು ವಂಚಿಸುತ್ತಿವೆ, ಕೃತಕ ಬೊಂಬೆಗಳಾಗಿವೆ. ಅವನ ಸೃಜನಶೀಲತೆ ಕಾವ್ಯದ ಹುಡುಕಾಟದಲ್ಲೇ ಬತ್ತಿಹೋಗಿದೆ. ಬರೆಯುವುದೇ ಜೀವಂತ ಬರಹಕ್ಕೂ ಹಾಗೂ ಬದುಕುವುದಕ್ಕೂ ಮಾರಕವಾಗುವ ಪ್ಯಾರಡಾಕ್ಸ್‌ ಇಲ್ಲಿದೆ. ಆದ್ದರಿಂದ ಏರುವ ಎಲ್ಲ ಏಣಿಗಳೂ ಶುರುವಾಗುವ ಹೃದಯದ `rag and bone’ ಶಾಪಿನಲ್ಲಿ ಮತ್ತೆ ಕುಕ್ಕರಿಸುತ್ತೇನೆ ಎಂದು ಕವಿ ಹೇಳುತ್ತಾನೆ:

Those masterful images because complete
Grew in pure mind but out of what began?
A mound of refuse or the sweeping of a street,
Old kettles, old bottles, and a broken can;
Old iron, old bones , old rags, that raving slut
Who keeps the till. Now that my ladder’s gone
I must lie down where all the ladders start
in the foul rag and bone shop of the heart.

ಸರ್ವ ಸ್ವತಂತ್ರ ಆ ಪರಿಪೂರ್ಣ ಪ್ರತಿಮೆಗಳು
ಪರಿಶುದ್ಧ ಮನದಲ್ಲಿ ಬೆಳೆದರೂ ಮೊದಲಲ್ಲಿ ಎಲ್ಲಿಂದ ಮೊಳೆತವು?
ಎಸೆದ ‘ಬಿಸಾಕು’ಗಳ ತಿಪ್ಪೆ, ರಸ್ತೆಯ ಕಸದ ಗುಪ್ಪೆ,
ಹಳೆಸೀಸೆ, ಹಳೆಕಟಲು, ಸುಲಿದ ಬಾಳೆಯ ಸಿಪ್ಪೆ,
ಹಳೆಜಂಕು, ಮೂಳೆ, ಕೊಳೆಚಿಂದಿ, ಮುರುಕು ಗೊಮಬೆ,
ಅಂಗಡಿಗಲ್ಲಕ್ಕೆ ಕೂತು ಕೂಗುವ ಗಲ್ಲಿಯ ರಂಬೆ.
ಈಗ ಏಣಿಯೇ ಇಲ್ಲ, ಕೆಳಗೆ ಮಲಗುವುದಷ್ಟೆ, ಎಲ್ಲ ಏಣಿಗಳೂ ಶುರುವಾಗುವಲ ಲಿ,
ಚಿಂದಿ, ಮೂಲೆಗಳು ತುಂಬಿರುವ ಹೃದಯದ ಕೊಳೆ ಕಿರಾಣಿಯಂಗಡಿಯಲ್ಲಿ.

ಈ ಪದ್ಯ ೧೯೩೯ನೆಯ ಇಸವಿಯದು. ಯೇಟ್ಸ್‌ ಸತ್ತ ವರ್ಷ ಅದು. ಯಾವುದು ಅಪರಿಪೂರ್ಣತೆಗೆ ಕಾರಣ ಎಂದು ಅನ್ನಿಸುತ್ತದೋ, ಅಲ್ಲೇ ಮರುಹುಟ್ಟಿನ ಸಾಧ್ಯತೆಯೂ ಇರುವುದು ಎಂದು ತಿಳಿಯುವ ಈ ಕೊನೆಗಾಲದ ಯೇಟ್ಸ್‌ ತಂತ್ರ ಮತ್ತು ತಾಂತ್ರಿಕತೆಯ ಹುಸಿ ನಿಜ ಎರಡನ್ನೂ ತಿಳಿದವನು.

ಇಷ್ಟೆಲ್ಲ ಹೇಳಿದ ಮೇಲೆ ಯೇಟ್ಸ್‌ ಸಾಯುವುದಕ್ಕೆ ಒಂದು ವರ್ಷ ಹಿಂದೆ (೧೯೩೮) ಬರೆದ Three Bushes ಪದ್ಯವನ್ನು ವಿವರವಾಗಿ ವಿಶ್ಲೇಷಿಸುವುದು ಅನಗತ್ಯವೇನೋ. ಲಾರೆನ್ಸ್‌ನಂತೆ, ತನ್ನ ಇಳಿಗಾಲದಲ್ಲಿ ಮುಚ್ಚು ಮುಜುಗರವಿಲ್ಲದೆ ಲೈಂಗಿಕತೆಯನ್ನು ಒಪ್ಪಿಕೊಂಡು ನೇರ, ಧೀರ ಮಾತಾಡುವ ಯೇಟ್ಸ್‌ ಬದುಕಿನಲ್ಲೇ ಆತ್ಮ ಮತ್ತು ದೇಹಗಳ ಸಂಗ ಕಾಣಲಾರದೆ, ಸಾವಿನ ಪರ್ಯಾವಸಾನದಲ್ಲಿ ಅದನ್ನು ಕಂಡ. ಬ್ಯಾಲೆಡ್‌ನ ಹಗುರಾದ ಓಟದ ಧಾಟಿಯಲ್ಲಿ ಮೂಡಿದ ದುರಂತ ಪ್ರಜ್ಞೆಯ ಕಾಣಿಕೆ ಅದು. ಪ್ರವಾದಿಯ ಆತುರದಲ್ಲಿದ್ದ ಲಾರೆನ್ಸ್‌ ಮನುಷ್ಯನ ಈ ಮಿತಿಗಳನ್ನು ಕಾಣಲಾರದೇ ಹೋದ. ಲಾರೆನ್ಸ್‌ ಸೆಟೆದವನು; ಯೇಟ್ಸ್‌ ಬಳುಕಬಲ್ಲವನು.

ಇಂಥ ಒಬ್ಬ ಕವಿಯನ್ನು, ಅವನ ಮುಖ್ಯ ಪದ್ಯಗಳ ಮುಖೇನ ಕನ್ನಡಕ್ಕೆ ತರಲು ಕವಿ ಲಕ್ಷ್ಮೀನಾರಾಯಣಭಟ್ಟರು ಮುಂದಾಗಿದ್ದಾರೆ. ಅವರ ಸಾಹಸವನ್ನು ತೃಪ್ತಿದಾಯಕ ಎಂದು ಹೇಳುವುದು, ಇನ್ನೆಷ್ಟು ಚೆನ್ನಾಗಿ ಅವರು ಅನುವಾದಿಸಿದ್ದರೂ, ಸಾಧ್ಯವಿಲ್ಲ. ಮೂಲಕವಿಯನ್ನು ಮೆಚ್ಚಿರುವುದು ನಿಜವಾದರೆ ವಿಮರ್ಶಕನಿಗಾಗಲೀ ಭಾಷಾಂರಕಾರನಿಗಾಗಲೀ ಈ ವಿನಯ, ಈ ಅತೃಪ್ತಿ ಇದ್ದೇ ಇರುತ್ತದೆ. ಬೇರೆ ಯಾವ ಮಾತುಗಳಲ್ಲೂ ಅಂದುಕೊಳ್ಳಲಾರದಂತೆ ಬರೆದದ್ದೇ ಕಾವ್ಯ ಎನ್ನುವುದಾದರೆ ಕಾವ್ಯವನ್ನು ಭಾಷಾಂತರಿಸುವುದು ಸಾಧ್ಯವೇ ಇಲ್ಲ. ಆದರೆ ನಾವು ಮೆಚ್ಚಿದ್ದನ್ನು ಭಾಷಾಂತರಿಸಬೇಕೆಂಬ ಆಸೆಯಿಂದ ದುಡುಕದೇ ಇರುವುದು ಕೂಡಾ ಸಾಧ್ಯವಲ್ಲ. ಹೀಗೆ ದುಡುಕಿದವರ ಗುಂಪಿನಲ್ಲಿ ಲಕ್ಷ್ಮೀನಾರಾಯಣಭಟ್ಟರು ಕೊಂಚ ನನ್ನಿಂದಲೂ ಪ್ರೇರಿತರಾದಂತೆ ತೋರುವುದರಿಂದ ವೈಯಕ್ತಿಕವಾದ ಸಂತೋಷದಲ್ಲಿ ಕೆಲವು ಮಾತುಗಳನ್ನು ಹೇಳುತ್ತಿದ್ದೇನೆ.

ಈ ಹಿಂದೆ ನಾನು ಹೇಳಿದ್ದೆಲ್ಲವೂ ಯೇಟ್ಸ್‌ನನ್ನು ಭಾಷಾಂತರಿಸುವುದು ಎಷ್ಟು ಕಷ್ಟ ಎಂಬುದನ್ನು ಮನದಟ್ಟು ಮಾಡುವಂಥ ಮಾತುಗಳಾಗಿವೆ. ಅದರ ಹಿನ್ನೆಲೆಯಲ್ಲಿ ಭಟ್ಟರನ್ನು ಓದಬೇಕಾಗಿದೆ. ಹೀಗೆ ಓದುವಾಗ ನನಗಾದ ಒಂದು ಅನುಭವವನ್ನು ಪಾಠಕರ ಮುಂದಿಡುತ್ತಿದ್ದೇನೆ.

Crazy Jane talks to the Bishop ನನಗೆ ಪ್ರಿಯವಾದ ಪದ್ಯ. ಭಟ್ಟರ ಅನುವಾದ ಓದುತ್ತಿದ್ದಂತೆ ನಾನು ಮಾಡಿದ ಅನುವಾದ ನನಗೆ ಹಿತವಾಗಿ ಕಾಣಿಸಲಿಲ್ಲ. ಭಟ್ಟರದೂ ಒಪ್ಪಿಗೆಯಾಗಲಿಲ್ಲ. ನನ್ನ ಬಗ್ಗೆಯೇ ನನಗೆ ಅತೃಪ್ತಿ ತಂದ ಭಟ್ಟರು ಅದಕ್ಕೆ ತಾವೇ ಪಕ್ಕಾಗಿಬಿಟ್ಟರು. ಮತ್ತೆ ಪದ್ಯವನ್ನು ಅನುವಾದಿಸಲು ಕೂತು ಸುಮಾರು ಐವತ್ತು ಭಾಷಾಂತರಗಳನ್ನು ಮಾಡಿದ್ದೇನೆ. ಇನ್ನೂ ನಾನು ತೃಪ್ತನಾಗಿಲ್ಲ. ಭಟ್ಟರ ಎಲ್ಲ ಅನುವಾದವೂ ಈ ಬಗೆಯ ಪುನರ್‌ರಚನೆಗೆ ಕಾರಣವಾದರೆ ಯೇಟ್ಸ್‌ ಕನ್ನಡದ ಒಬ್ಬ ಮಹತ್ವದ ಕವಿಯಾಗಿಬಿಟ್ಟಾನು. ಅವನನ್ನು ಹೊಗಳುವ, ಹೊಕ್ಕು ಪಡೆಯುವ ಹಲವು ದಿಕ್ಕುಗಳು ಹುಟ್ಟಿಕೊಂಡಾವು. ಖಂಡಿತ ಭಟ್ಟರ ಪ್ರಯತ್ನ ಈ ಬಗೆಯಲ್ಲಿ ಯೇಟ್ಸ್‌ನ ಎಂದೂ, ಯಾರಿಗೂ ಸಿಗದ, ಆದರೆ ಅಗತ್ಯವಾದ ಪರಿಪೂರ್ಣ ಓದಿಗೆ ಕಾರಣವಾಗಬಹುದು ಎಂಬುದಂತೂ ನಿಜ.

ಭಟ್ಟರ ಅನುವಾದರನ್ನು ‘ಸಾಹಸ’ ಎಂದು ನಾನು ಕರೆಯಲು ಇನ್ನೊಂದು ಕಾರಣವಿದೆ. ಯೇಟ್ಸ್‌ನ ಎಲ್ಲ ಮುಖ್ಯ ಕಠಿಣ ಪದ್ಯಗಳನ್ನೂ ಅವರು ಅನುವಾದಿಸಿದ್ದಾರೆ. ಕನ್ನಡ ಕಾವ್ಯದ ಪುನರ್ಜೀವನಕ್ಕೆ ಕಾರಣವಾದ ಬಿಎಂಶ್ರೀಯವರ ಇಂಗ್ಲಿಷ್‌ ಗೀತಗಳು ಸಂಕಲನದಲ್ಲಿ ಆ ಹಿರಿಯಕವಿ ಇಂಥ ಸಾಹಸಕ್ಕೆ ಕೈ ಹಾಕಲಿಲ್ಲ. ಇಂಗ್ಲಿಷಿನ ಮೈನರ್ ಪದ್ಯಗಳನ್ನು ಅನುವಾದಿಸಿದರು. ಆದರೆ ಅವರ ಅನುವಾದ ಎಷ್ಟು ಬಗೆಯ ಹೊಸ ಲಯಗಳನ್ನು ಸೃಷ್ಟಿಸಿತೆಂದರೆ ಕನ್ನಡದ ಅಂದಿನ ಮುಂದಿನ ಹಲವು ಕವಿಗಳಿಗೆ ಬಿಎಂಶ್ರೀ ಆಶ್ರಯದಾತರಾದರು. ಈ ದೃಷ್ಟಿಯಿಂದ ಲಕ್ಷ್ಮೀನಾರಾಯಣಭಟ್ಟರ ಅನುವಾದ ಕನ್ನಡ ಕಾವ್ಯ ರಚನೆಯ ದಿಕ್ಕನ್ನು ಬದಲಾಯಿಸುವಂಥದಲ್ಲ; ಮಹತ್ವಪೂರ್ಣವೆಂಬಂತೆ ವಿಸ್ತರಿಸುವುವಂಥದೂ ಅಲ್ಲ. ಕವಿಯ ಆಶ್ರಯಕ್ಕೆ ಹತ್ತಿರವಾಗಿದ್ದು, ಜೊತೆಗೇ ಕನ್ನಡ ಭಾಷೆಯ ರುಚಿ ಕೆಡದಂತೆ ಅನುವಾದಿಸಬೇಕಾದ್ದರಿಂದ ಭಟ್ಟರು ಶ್ರದ್ಧೆಯ ಜತೆ ಪ್ರತಿಭೆಯನ್ನು ಬೆಸೆಯಲು ಹೆಣಗಿದ್ದಾರೆ-ಅದೂ ಯೇಟ್ಸ್‌ನನ್ನು ಘನ ಪದ್ಯಗಳಲ್ಲಿ ಈ ಬೆಸುಗೆಯನ್ನು ಸಾಧಿಸಿದ್ದಾರೆ. ಇಂಗ್ಲಿಷಿನಲ್ಲಿ ಯೇಟ್ಸ್‌ನ್ನು ಓದಲಾರದವರು ಕೂಡ ಇವನೊಬ್ಬ ಮಹಾಕವಿ ಎಂದು ಅರಿಯುವಂತೆ ಭಾಷಾಂತರಿಸಿದ್ದಾರೆ. ಇದು ಭಟ್ಟರ ಕಾವ್ಯ ಪ್ರೀತಿಯ ಶ್ರಮದಿಂದ ಸಾಧ್ಯವಾದದ್ದು.

ನಾನು ಭಾಷಾಂತರಿಸಿದ ಕೆಲವು ಪದ್ಯಗಳನ್ನು ಭಟ್ಟರೂ ಭಾಷಾಂತರಕ್ಕೆ ಎತ್ತಿಕೊಂಡಿದ್ದಾರೆ. ಇಲ್ಲಿ ನನ್ನ ಜೊತೆ ನಡೆದಾಡುವಂತೆ ತೋರುತ್ತಲೇ ಭಟ್ಟರು ತೆಗೆದುಕೊಳ್ಳುವ ಕೆಲವು ತಿರುವುಗಳು ನನಗೆ ಸಂತೋಷಕೊಟ್ಟಿವೆ. ಭಾಷಾಂತರದ ಕಾರ್ಯ ಒಂದು ಸಹಯೋಗವಾದ್ದರಿಂದ ಯೇಟ್ಸ್‌ನಿಗೆ ಕನ್ನಡ ಇನ್ನಷ್ಟು ಹೆಚ್ಚು ಹತ್ತಿರವಾಗಬಹುದಾದ ಭರವಸೆ ಇಂಥ ಕಡೆಗಳಲ್ಲಿ ಮೂಡುತ್ತದೆ.

ಭಾಷಾಂತರಕಾರನಿಗೆ ಯೇಟ್ಸ್‌ ಸವಾಲಾಗಲು ಒಂದು ಕಾರಣವಿದೆ. ಯೇಟ್ಸ್‌ನ ಸಿಂಟ್ಯಾಕ್ಸ್‌ ಆಡುವ ಭಾಷೆಯದೇ. ಶಬ್ದಗಳನ್ನು ಅವನು ಪರಿಣಾಮಕ್ಕಾಗಿ ಹಿಂದು ಮುಂದು ಮಾಡುವುದಿಲ್ಲ. ಸಹಜತೆಯಿಂದ ಉತ್ಪನ್ನವಾಗುವ ಶಕ್ತಿಗಳನ್ನೆಲ್ಲ ಭಾಷೆಗೆ ಹೀಗೆ ಅವನು ಉಳಿಸಿ, ಜೀವಂತ ವ್ಯಕ್ತಿಯೊಬ್ಬ ಮಾತಾಡುತ್ತಿರುವ ಭಾಸವನ್ನು ಉತ್ಕಟ ಕ್ಷಣಗಳಲ್ಲೂ ಉಳಿಸಿಕೊಂಡಿರುತ್ತಾನೆ. ಆದರೆ ಲಯದ ವಿಷಯದಲ್ಲಿ ಮಾತ್ರ ಅವನದು ಮುಕ್ತ ಛಂದಸ್ಸು ಅಲ್ಲವೇ ಅಲ್ಲ. ಅವನ ಸ್ಟಾಂಜಾಗಳು ತಮ್ಮ ಅಚ್ಚುಕಟ್ಟಿನಲ್ಲಿ ಶಿಲ್ಪದ ಸ್ಥಿರತೆಯನ್ನೂ ಮಾತಿನ ಬಳುಕುಗಳನ್ನೂ ಅಭಿನ್ನವೆಂಬಂತೆ ಪಡೆದಿರುತ್ತವೆ. ಭಾಷಾಂತರದಲ್ಲಿ ಈ ಎರಡನ್ನೂ ಒಟ್ಟಾಗಿ ಸಾಧಿಸುವುದು ಬಲುಕಷ್ಟ. ಲಯಬದ್ಧವಾಗಿದ್ದಾಗ ಅದಕ್ಕೆ ಮಾತಿನ ಬಳುಕು ಇಲ್ಲದೇ ಹೋದೀತು. ಯಾವ ಮಾತಿಗೆ ಎಲ್ಲಿ, ಎಷ್ಟು ಒತ್ತು ಕೊಟ್ಟು ಓದಬೇಕೆಂಬುದನ್ನು ಒತ್ತಾಯಿಸದಂತೆ ಲಯ ಯಾಂತ್ರಿಕವಾಗಿಬಿಡಬಹುದು. ಹಾಗೆಯೇ ಬಿರುಸಾದ ಮಾತಿನಲ್ಲಿ ಬದ್ಧಲಯದ ಸಂಗೀತವಿಲ್ಲದೇ ಹೋಗಬಹುದು. ಲಕ್ಷ್ಮೀನಾರಾಯಣಭಟ್ಟರು ಈ ಹೊಂದಾಣಿಕೆಯಲ್ಲಿ ಎಲ್ಲ ಕಡೆಯು ಯಶಸ್ವಿಯೆಂದು ಹೇಳುವಂತಿಲ್ಲ. ಆದರೆ ಯೇಟ್ಸ್‌ನ ಘನವಾದ ಪದ್ಯಗಳನ್ನೆಲ್ಲ ಕಿವಿಗೆ ಹಿತವಾಗುವಂತೆ, ಆಯ ತಪ್ಪದಂತೆ ಅರ್ಥಕ್ಕೆ ನಷ್ಟವಾಗದಂತೆ ಅವರು ನಿರ್ವಹಿಸಿದ್ದಾರೆ. ಅನಿವಾರ್ಯವಾದ ಅತೃಪ್ತಿಯ ಭಾವನೆಯಲ್ಲೂ ಈ ಮೆಚ್ಚುಗೆಯ ಮಾತನ್ನು ಆಡದಿರುವುದು ಅಭಿಮಾನ ಕೃಪಣತೆಯಾದೀತು. ಬೈಜಾಂಟಿಯಮ್‌ನಂತಹ ಯೇಟ್ಸ್‌ನ ಘನವಾದ ಕೃತಿಗಳನ್ನು ಭಟ್ಟರು ಅನುವಾದಿಸಿದ ಕ್ರಮವನ್ನು ಸಂಪೂರ್ಣ ಮೆಚ್ಚಲಾರದ ವಿಮರ್ಶಕ ಸ್ವತಃ ಕವಿಯೂ ಆದಲ್ಲಿ, ಆ ಪದ್ಯವನ್ನು ಅವನು ಮತ್ತೆ ಅನುವಾದಿಸಲು ಈ ಅತೃಪ್ತಿ ಕಾರಣವಾದಲ್ಲಿ, ಅದು ಕನ್ನಡದ ಪುಣ್ಯ. ಅಂಥ ಪುಣ್ಯದಲ್ಲಿ ಲಕ್ಷ್ಮೀನಾರಾಯಣಭಟ್ಟರೂ ಪಾಲುದಾರರೇ.

ನಾನು ಬೇಕೆಂದೇ ಭಟ್ಟರ ಅತ್ಯುತ್ತಮ ಅನುವಾದಗಳೆಂದು ನನಗೆ ಅನ್ನಿಸಿದವನ್ನು ಬೊಟ್ಟು  ಮಾಡಿ ತೋರಿಸಿ ವಿಶ್ಲೇಷಿಸುತ್ತಿಲ್ಲ. ಅದಕ್ಕೆ ಕಾರಣವಿದೆ. ಅವರ ಅನುವಾದಗಳು ಪ್ರಕಟಗೊಳ್ಳುವ ಹೊತ್ತಿಗೆಯಲ್ಲೇ ಓದುಗನ ಇಷ್ಟ ಅನಿಷ್ಟಗಳನ್ನು ರೂಪಿಸುವ ಪ್ರಯತ್ನ ನಾನು ಮಾಡಬಾರದು. ನಾನು ಈ ಅನುವಾದಗಳನ್ನು ಓದಿ ಹಿಗ್ಗಿದ್ದೇನೆ-ಎರಡು ಅರ್ಥಗಳಲ್ಲೂ; ಇನ್ನಷ್ಟು ಆಳವಾಗಿ ಅರಿಯುವುದರಲ್ಲಿ ಮತ್ತು ಅನುಭವಿಸುವುದರಲ್ಲಿ-ಎಂಬುದನ್ನು ಸೂಚಿಸುವುದಷ್ಟೇ ಈ ದೀರ್ಘ ಮುನ್ನುಡಿಯ ಉದ್ದೇಶ.

ತನಗೆ ಅತ್ಯಂತ ಕಷ್ಟವಾದ್ದನ್ನು ಹತಾಶನಾಗದಂತೆ ಸಾಧಿಸುವುದರಲ್ಲಿ ತನ್ನ ಜೀವನದ ಧನ್ಯತೆಯಿದೆಯೆಂದು ಯೇಟ್ಸ್‌ ತಿಳಿದಿದ್ದ. ವ್ಯಕ್ತಿಯ ಬಗ್ಗೆ ಇದು ಎಷ್ಟು ನಿಜವೋ,  ರಾಷ್ಟ್ರಜೀವನದ ಬಗ್ಗೆಯೂ ನಿಜ ಎಂದು ನಂಬಿದ ಯೇಟ್ಸ್‌ ಜೀವನದುದ್ದಕ್ಕೂ ಸಮುದಾಯದ ಜೊತೆಯೂ ತನ್ನ ಹೃದಯದ ಜೊತೆಯೂ ಸೆಣೆಸಾಡಿದ. ಹಲವು ದಿಕ್ಕುಗಳಲ್ಲಿ ಬೆಳೆಯುತ್ತಿರುವ ಕನ್ನಡ ಸಾಹಿತ್ಯಕ್ಕೆ ಯೇಟ್ಸ್‌ನಂತಹ ಜೀವಂತ ಋಷಿಯೊಬ್ಬನನ್ನು ಅವನ ಅತಿ ಮುಖ್ಯ ಕೃತಿಗಳ ಮುಖೇನ ಪರಿಚಯಿಸುತ್ತಿರುವ ಶ್ರೀ ಲಕ್ಷ್ಮೀನಾರಾಯಣ ಭಟ್ಟರನ್ನು ಅವರ ಎಲ್ಲ ಓದುಗರ ಪರವಾಗಿ ನಾನು ಅಭಿನಂದಿಸುತ್ತೇನೆ.*


* ಡಾ.ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟರ ಚಿನ್ನದ ಹಕ್ಕಿ (೧೯೯೦) (ಯೇಟ್ಸ್‌ ಕವನಗಳ ಭಾಷಾಂತರ ಸಂಕಲನ)ದ ಮುನ್ನುಡಿ.