ಯೇಟ್ಸ್ ಕಾವ್ಯ ಮತ್ತು ರಾಜಕೀಯ

ಡಬ್ಲ್ಯು.ಬಿ. ಯೇಟ್ಸ್‌ ಎಂಬ ಕವಿ ನಮಗೆ ಗೊತ್ತಿರುವುದು ಸ್ವತಂತ್ರ ಭಾರತದ ಸ್ವಾಭಿಮಾನದ ಹುಡುಕಾಟದಲ್ಲಿ ಅವನಿಗೂ ನಮ್ಮ ರವೀಂದ್ರನಾಥ ಟ್ಯಾಗೋರ್ ರಿಗೂ ಬೆಳೆದ ಸಂಬಂಧದಿಂದ. (ಠಾಕೂರ್ ಆಂಗ್ಲಪ್ರಭಾವದಲ್ಲಿ ಟ್ಯಾಗೋರ್ ಆಗಿ ಮತ್ತೆ ಆಧುನಿಕ ಸ್ವಾತಂತ್ಯ್ರೋತ್ತರ ಭಾರತದಲ್ಲಿ ಸ್ವನಾಮಕ್ಕೆ ಮರಳಿದ್ದಾರೆ ಎನ್ನುವುದು ಈ ದಿನದ ಮಾತಿನ ಸಂದರ್ಭದಲ್ಲಿ ಅಧಿಕ ಪ್ರಸಂಗವಾಗಲಾರದೆಂದು ನಂಬಿ ಮುಂದುವರಿಯುತ್ತೇನೆ) ಠಾಕೂರರ ಗೀತಾಂಜಲಿಯ ಭಾಷಾಂತರಗಳನ್ನು ಓದಿ ಯೇಟ್ಸ್‌ ಎಷ್ಟು ಪುಳಕಿತನಾಗಿದ್ದನೆಂದರೆ ಆ ಪದ್ಯಗಳನ್ನು ಓದುವಾಗ ಅವನಿಗೆ ಕಣ್ಣೀರೇ ಬಂದುಬಿಡುತ್ತಿತ್ತಂತೆ ಎಂಬುದು ನನಗೆ ಹೆಮ್ಮೆಯ ವಿಷಯವಾಗಿತ್ತು. ಬಸ್‌ ಪ್ರಯಾಣದ ವೇಳೆ ಹೀಗಾದಾಗ ಪುಸ್ತಕದಿಂದಲೇ ಮುಖ ಮುಚ್ಚಿಕೊಂಡುಬಿಡುತ್ತಿದ್ದನಂತೆ ಐರಿಷ್‌ ಕವಿ ಯೇಟ್ಸ್‌. ಗೀತಾಂಜಲಿಯ ಇಂಗ್ಲಿಷ್‌ ಭಾಷಾಂತರವನ್ನು ತಿದ್ದಿ ಪ್ರಕಟಣೆಗೆ ಸಿದ್ಧಗೊಳಿಸಿದ್ದೇ ಯೇಟಸ್‌. ಇದು ಪ್ರಕಟವಾದ ನಂತರವೇ ಜಗತ್ತಿಗೆ ಠಾಕೂರ್/ಟ್ಯಾಗೋರ್ ಎಷ್ಟು ದೊಡ್ಡ ಕವಿ ಎಂದು ತಿಳಿಯಿತು. ಅವರಿಗೆ ನೊಬೆಲ್‌ ಬಂತು. ಗಾಂಧೀಜಿಗೆ ‘ಗುರುದೇವ’ನೂ ಸತತ ಟೀಕಾಕಾರರೂ ಆಗಿದ್ದ ಠಾಕೂರರ ಬಗ್ಗೆ ಯೇಟ್ಸ್‌ನ ಉತ್ಸಾಹ ಕೊನೆತನಕ ಹೀಗೇ ಉಳಿದಿತ್ತೆಂದು ಹೇಳಲಾಗದು. ತನ್ನ ಪುಳಕದ ಅನುಭಾವವನ್ನು ಅನುಮಾನಿಸಿದ (ಮುದುಕನಾದರೂ ತಾನು ಕಾಮಿಯಾಗಿಯೂ ಜೀವ ವ್ಯಾಮೋಹಿಯಾಗಿಯೂ ಉಳಿದಿದ್ದೇನೆಂದು ಹೇಳಿಕೊಳ್ಳಬಲ್ಲ ನಿಸ್ಸಂಕೋಚದ ಮನುಷ್ಯ ಯೇಟ್ಸ್‌ ಆದ್ದರಿಂದ) ಸಾರ್ವಜನಿಕ ‘ಗುರುದೇವ’ರಾಗ ತೊಡಗಿದ್ದ ರವೀಂದ್ರರ ತನ್ಮಯತೆ ಕ್ರಮೇಣ ಅವನಿಗೆ ಕೃತಕವೆನ್ನಿಸಿರಬಹುದು. ತಾವು ಕಳೆದುಕೊಂಡ ಭೂತಕಾಲವನ್ನು ಭಾರತದ ವರ್ತಮಾನದಲ್ಲಿ ಕಾಣಲು ಹಂಬಲಿಸಿದ ಹಲವು ಐರೋಪ್ಯರ ಪಾಡು ಇದು.

ಯೇಟ್ಸ್‌ನ ಕಾಲ ೧೮೬೫ ರಿಂದ ೧೯೩೯. ಐತಿಹಾಸಿಕ ಘಟನೆಗಳ ಮೂಲಕ ಈ ಅವಧಿಯನ್ನು ಗ್ರಹಿಸುವುದಾದರೆ ಈತ ಮೊದಲನೆಯ ಮಹಾಯುದ್ಧವನ್ನು ನೋಡಿದ್ದ. ಎರಡನೆಯ ಮಹಾಯುದ್ಧದ ಸಿದ್ಧತೆಯ ಕಾಲದಲ್ಲಿ ಮುದುಕನಾಗಿ ಸತ್ತ. ಆ ಹೊತ್ತಿಗಾಗಲೇ ಅವನಿಗೆ ನೊಬೆಲ್‌ ಪುರಸ್ಕಾರ ದೊರೆತಿತತು. ಯೇಟ್ಸ್‌ ಹುಟ್ಟಿದ್ದು ಕ್ರೈಸ್ತನಾಗಿ. ಆದರೆ ಆತ ತನ್ನ ಮತದಲ್ಲಿ ಇದ್ದ ನಂಬಿಕೆಯನ್ನು ಕಳೆದುಕೊಂಡಿದ್ದ. ಆ ಕಾಲದ ಎಲ್ಲಾ ದೊಡ್ಡ ಲೇಖಕರೂ ಮತ-ಧರ್ಮದಲ್ಲಿ ನಂಬಿಕೆಯನ್ನು ಕಳೆದುಕೊಂಡು, ಮತಾಶ್ರಯವಿಲ್ಲದ ‘ಶಾಶ್ವತ’ದ ಜತೆ ಸಂಬಂಧವನ್ನು ಕಂಡುಕೊಳ್ಳುವುದಕ್ಕೋಸ್ಕರ ಏನೇನೋ ಮಾಡಿದರು. ಯೇಟ್ಸ್‌ ಕೂಡಾ ಈ ದಾರಿಯಲ್ಲಿದ್ದ. ಈ ಹುಚ್ಚು ಹುಡುಕಾಟಗಳು ಅವನನ್ನು ಮಾಟ-ಮಂತ್ರದಲ್ಲಿ ನಂಬಿಕೆ ಬೆಳೆಸಿಕೊಳ್ಳುವ ಮಟ್ಟಕ್ಕೆ ತಂದಿತ್ತು. ಆಗ ತಾನೆ ಥಿಯೋಸಫಿ ಎಂಬ ಹೊಸ ಚಳವಳಿ ಆರಂಭವಾಗಿತ್ತು. ಅದರಲ್ಲಿ ನೇತೃತ್ವ ವಹಿಸಿದ್ದ ಮೇಡಂ ಬ್ಲಾವಟ್ಸ್ಕಿ ಕೂಡಾ ಮಾಟ ಮಂತ್ರದಲ್ಲಿ ನಂಬಿಕೆಯನ್ನು ಮಾಯಾವಿಯಂತೆ ಬೆಳೆಸಿದವಳು. ಮೇಜಿನ ಸುತ್ತ ಕುಳಿತು ಮೇಜಿನ ಮೇಲೆ ಕೈಯಿಟ್ಟು ಧ್ಯಾನ ಮಾಡುತ್ತಿದ್ದಾಗ ಕೈ ತಾನಾಗಿಯೇ ಚಲಿಸಿ ಯಾವುದೋ ಸಂದೇಶಗಳು ದೊರೆಯುತ್ತವೆ; ಹೊಸ ದರ್ಶನಗಳಾಗುತ್ತವೆ ಎಂದುಕೊಂಡಿದ್ದವಳು ಇವಳು, (ಸಿಯಾನ್ಸ್‌ ಎಂಧು ಈ ಆಚರಣೆಯ ಹೆಸರು) ಯೇಟ್ಸ್‌ ಕೂಡಾ ಇದನ್ನೆಲ್ಲಾ ನಂಬಿದ್ದ; ಅಷ್ಟೇ ಸಹಜವಾಗಿ ಅವನ್ನೆಲ್ಲಾ ಅನುಮಾನದಿಂದಲೂ ನೋಡುತ್ತಿದ್ದ. ಏಕೆಂದರೆ ಯೇಟ್ಸ್‌ ಕವಿಯಾಗಿದ್ದ-ಇಂದ್ರಿಯಗಮ್ಯವಲ್ಲದ್ದನ್ನು ಸದ್ಯದ ಜರೂರು ಪಡೆಯಲಾರದ ವಿಚಾರಗಳನ್ನು ಅನುಮಾನಿಸಬಲ್ಲವನಾಗಿದ್ದ. ಆದರೆ ನಂಬುವ ತೆವಲನ್ನು ಕಳೆದುಕೊಳ್ಳಲಾರದವನೂ ಆಗಿದ.

ಯೇಟ್ಸ್‌ನ ಅತಿ ದೊಡ್ಡ ಹುಡುಕಾಟವೆಂದರೆ ಕಾವ್ಯಕ್ಕೆ ಬೇಕಿದ್ದ ರೂಪಕಗಳನ್ನು ಅವನು ಹುಡುಕಿಕೊಂಡ ಕ್ರಮಗಳು. ಇವು ತನ್ನ ಕಾಲದಿಂದಲೇ ಸಿಗುವಂಥವಲ್ಲ ಎಂದು ಅವನು ಭಾವಿಸಿದ್ದ. ಅವನ ಈ ಭಾವನೆಯನ್ನು ಯುರೋಪಿನಲ್ಲಿ ನಡೆದ ಎನ್‌ಲೈಟನ್‌ಮೆಂಟ್‌ ಚಳವಳಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಿತ್ಯವ್ಯವಹಾರದಲ್ಲಿ ಕಾಣುವ ಪ್ರಪಂಚದ ಮುಖಾಂತರವೇ, ವೈಚಾರಿಕ ನೆಲೆಯಲ್ಲಿಯೇ, ತರ್ಕಶುದ್ಧವಾಗಿಯೇ ಏನನ್ನಾದರೂ ಹುಡುಕಬೇಕೆನ್ನುವ ನಂಬಿಕೆ ಈ ಎನ್‌ಲೈಟನ್‌ಮೆಂಟ್‌ನದ್ದು. ಹೀಗೆ ಕೊಡುಕೊಳ್ಳುವ ಐಹಿಕಕ್ಕೆ ಬದ್ಧವಾಗಿರುವ ದಿನಗಳಲ್ಲಿ ಧರ್ಮ ಕೂಡಾ ಚರ್ಚ್‌ನೊಳಗೆ ಬಹಳ ವ್ಯಾವಹಾರಿಕವಾಗಿಯೇ ರೂಪಾಂತರಗೊಳ್ಳತೊಡಗಿತ್ತು. ತರ್ಕ ಮತ್ತು ವ್ಯವಹಾರದ ಜಗತ್ತಿನಲ್ಲಿ ಕಾಣ್ಕೆಗೆ ಅಗತ್ಯವಿರುವ ಕಾವ್ಯದ ರೂಪಕ ಸಾಧ್ಯವೇ?

ಇದರಿಂದಾಗಿಯೇ ಯೇಟ್ಸ್‌ಗೆ ಬ್ಲೇಕ್‌ ಹತ್ತಿರವಾದ. ಈ ಹುಚ್ಚುಗಳು ಯಾವ ಮಟ್ಟಕ್ಕೆ ಹೋದವೆಂದರೆ ದೇವದೂತರನ್ನು ಆವಾಹಿಸಿ ಹೊಸ ರೂಪಕಗಳನ್ನು ಪಡೆದುಕೊಳ್ಳುವ ಪ್ರಯತ್ನಕ್ಕೆ ತೊಡಗಿದ. ‘ನಿನ್ನ ಮುಖಾಂತರ ಅದೃಶ್ಯ ಶಕ್ತಿಗಳು ನನ್ನ ಕಾವ್ಯಕ್ಕೆ ಬೇಕಿರುವ ರೂಪಗಳನ್ನು ಕೊಡುತ್ತವೆ. ನಾನು ಅವುಗಳನ್ನು ಕರೆಯುತ್ತೇನೆ. ಅವು ಬಂದು ನಿನಗೆ ಹೇಳಿದ್ದನ್ನು ನೀನು ಬರೆದುಕೊಳ್ಳಬೇಕು’ ಎಂದು ಹೆಂಡತಿಯನ್ನು ಒತ್ತಾಯಿಸುತ್ತಿದ್ದ. ಹೀಗೆ ಗಂಡ ಅದೃಶ್ಯ ಶಕ್ತಿಗಳನ್ನು ಕರೆದಾಗ ಅವಳು ಬರೆದುಕೊಂಡದ್ದು ‘ವಿಶನ್‌’ ಎಂಬ ಪುಸ್ತಕವಾಗಿ ಬಂದಿದೆ. ಈ ಪುಸ್ತಕದ ಬಗ್ಗೆ ಅನೇಕ ವಿವಾದಗಳಿವೆ. ಯೇಟ್ಸ್‌ನ ಹೆಂಡತಿ ತನ್ನ ಗಂಡನ ಮನಸ್ಸನ್ನು ಒಲಿಸಿಕೊಳ್ಳಲೆಂದೇ ತನ್ನ ಮನಸ್ಸಿಗೆ ತೋಚಿದ್ದನ್ನೆಲ್ಲಾ ಬರೆದಿದ್ದಾಳೆ ಎನ್ನುವ ಅನುಮಾನವಿದೆ. ಬಹಳ ಚರ್ಚಾಸ್ಪದವಾದ ಈ ಪುಸ್ತಕದಲ್ಲಿ ಕುತೂಹಲಕಾರಿಯಾದ ‘ರುಪಕ-ದರ್ಶನ’ಗಳೂ ಇವೆ. ಮಾನವ/ದೈವಿಕ , ಇಹ/ಪರ, ಸೂರ್ಯ/ಚಂದ್ರ ಇತ್ಯಾದಿಗಳನ್ನು ಹೆಣೆದು ಚರಿತ್ರೆಯನ್ನು ‘ಬಗೆ’ಯುವ ಬಗೆಗಳ ಪ್ರಸ್ತಾವನೆಗಳು ಇವೆ. ಇದೊಂದು ಹೊಸ ಭಾಷೆಯೇ. ತನ್ನ ಕಾಲವನ್ನೂ, ತನ್ನ ಎಲ್ಲ ಸ್ನೇಹಿತರನ್ನೂ, ಅಮಾವಾಸ್ಯೆ-ಹುಣ್ಣಿಮೆಗಳ ನಡುವಿನ ಚಂದ್ರನ ಅವಿಷ್ಕಾರಗಳಿಗೂ. ಎಷ್ಟು ಸೂರ್ಯ, ಎಷ್ಟು ಚಂದ್ರನ ಅಂಶಗಳ ಆಧಾರದ ಮೇಲೆ ಒಬ್ಬ ವ್ಯಕ್ತಿ ಎಷ್ಟು ವೈಚಾರಿಕ, ಎಷ್ಟು ಒಳನೋಟದ ಕಾಣ್ಕೆಯವ ಎಂಬುದನ್ನು ಅರಿಯುವ ಜ್ಯೋತಿಷ್ಯಶಾಸ್ತ್ರಕ್ಕೂ ಈ ‘ವಿಷನ್‌’ ಪುಸ್ತಕದಲ್ಲಿ ಸೂಚನೆಗಳು ಇವೆ.

ಯೇಟ್ಸ್‌ ಪ್ರಖ್ಯಾತನಾಗುವುದಕ್ಕೆ ಅವನ ಕಾವ್ಯದಂತೆಯೇ ಈ ವಿವಾದಗಳೂ ಕಾರಣವಾಗಿದ್ದವು ಎನ್ನುವುದರಲ್ಲಿ ನಿಜವಿದ್ದರೂ ಅಗೋಚರ ಲೋಕದಿಂದ ಪಡೆದ ಅವನ ದರ್ಶನಗಳಿಗೆ ಸ್ನಾಯುಬಲದ ನಿಜದ ನೆಲೆಯೂ ಇದೆಯೆನ್ನಬೇಕು. ಈನೆಲೆ ಪುಸ್ತಕದ ತತ್ವದಲ್ಲಿ ಇದೆ ಎಂದು ಕವಿ ಹೇಳಿದರೂ, ಕವಿಯ ಸತ್ವದಲ್ಲಿ ಇದೆ ಎಂಬುದು ಯೇಟ್ಸ್‌ನನ್ನು ಮೆಚ್ಚುವವರ ಭಾವನೆ.

ಯೇಟ್ಸ್‌ನ ಸಮಕಾಲೀನನಾದ ಮತ್ತೊಬ್ಬ ದೊಡ್ಡ ಕವಿ ಎಲಿಯಟ್‌. ಕ್ರಿಶ್ಚಿಯನ್‌ ಧರ್ಮದಲ್ಲಿ ಶ್ರದ್ಧಾಪೂರ್ವಕವಾದ ನಂಬಿಕೆಯ ಸಾಕ್ಷಾತ್ಕಾರಕ್ಕಾಗಿ, ತನ್ನ ಬೌದ್ಧಿಕತೆಯಲ್ಲಿ ಸರಳವಾಗಲೂ, ನೇರವಾಗಲೂ, ನಿರಹಂಕಾರಿಯಾಗಲೂ ಶ್ರಮಿಸಿದವನು ಇವನು. (ಸಂಸ್ಕೃತ ಕಲಿತು ಭಾರತೀಯ ದರ್ಶನದಲ್ಲಿ ಪರಿಣಿತನಾಗುವುದರಲ್ಲಿದ್ದ ಎಲಿಯಟ್‌ ಇದರಿಂದಾಗಿ ಕ್ರೈಸ್ತಧರ್ಮದಲ್ಲಿನ ತನ್ನ ಶ್ರದ್ಧೆ ಕಮ್ಮಿಯಾದೀತೆಂದು ಅನುಮಾನಿಸಿ ತನ್ನ ಕಲಿಕೆಯನ್ನೇ ಕೈಬಿಟ್ಟನೆಂದು ಹೇಳುವುದನ್ನು ಕೇಳಿದ್ದೇನೆ). ಎಲಿಯಟ್‌ಗೆ ಕೆಲವೊಮ್ಮೆ ಕಾವ್ಯೋಪಾಸನೆಯನ್ನೇ ಕಸುಬುಮಾಡಿಕೊಂಡ ‘ಡಿಲೆಟಾಂಟೆ’ಯಂತೆಯೂ ಕಾಣುತ್ತ ಇದ್ದ ಯೇಟ್ಸ್‌ನ ಬಗ್ಗೆ ಬಹಳ ಅನುಮಾನಗಳಿದ್ದವು. ಆದರೂ ಆತ ಯೇಟ್ಸ್‌ ಸತ್ತಾಗ, ‘ನಮ್ಮ ಕಾಲದ Greatest poet ಅಂದರೆ ಯೇಟ್ಸ್‌’ ಎಂದಿದ್ದ. ಹೀಗೆನ್ನುವುದು ಕೂಡ ತನ್ನ ವಿನಯದ ಗರಿಮೆಯಂತೆ ಕಂಡೀತೆಂದು ತನ್ನ ಭಾಷಣದಿಂದ ಈ ಕೊನೆಯ ಮಾತನ್ನು ಕೈಬಿಟ್ಟಿದ್ದ. ಎಲಿಯಟ್‌ಗೆ ‘Humility is endless’. ಅವನದೇ ಮಾತು ಇದು.

ಯೇಟ್ಸ್‌ ತನ್ನ ಕೊನೆಗಾಲದ Crazy Jane ಪದ್ಯಗಳಲ್ಲಿ ಒಬ್ಬ ಬೀದಿ ಸೂಳೆ ಕ್ರೈಸ್ತ ಬಿಷಪ್‌ ಒಬ್ಬನನ್ನ ಎದುರಾಗಿ, ಹಾಕುವ ಸವಾಲುಗಳ ಬಗ್ಗೆ ಬರೆಯುತ್ತಾನೆ. ವಿಚಿತ್ರವಾದ ದಾರ್ಶನಿಕ ಪದ್ಯಗಳು ಇವು. ಬಾಯಿಬಡುಕ ನೈತಿಕತೆಯ ಬಿಷಪ್‌ಗೆ ಈ ಹುಲು ದೇಹ ಮೋದಹ ಉನ್ಮಾದದಲ್ಲೂ ಕುಗ್ಗಿದ ಸುಸ್ತಿನಲ್ಲೂ ತಿಳಿಯುವ ಸತ್ಯಗಳೇನೆಂದು ಗೊತ್ತೆ? ಎಂದು ಜೇನ್‌ ಮೂದಲಿಸುತ್ತಾಳೆ. ಮೂತ್ರವಿಸರ್ಜನೆಯ ತಾಣದಲ್ಲೇ ಪ್ರೇಮದೇವತೆ ತನ್ನ ಬಿಡಾರವನ್ನು ಹೂಡಿರುವುದು ನಿನಗೆ ಗೊತ್ತೆ ಎಂದು ಅಣಕಿಸುತ್ತಾಳೆ. ‘Love has pitched his tent/in the place of excrement’ ದೇವರ ಅರಿವಾಗುವುದಾದರೆ ಈ ಕುಗ್ಗುವ ಹಿಗ್ಗುವ ದೇಹದಲ್ಲೆ ಆಗಬೇಕಲ್ಲವೆ. ಅದನ್ನೇಕೆ ನೀನು ಹೀಗೆಳೆಯುತ್ತಿ ಎನ್ನುತ್ತಾಳೆ. ಇಂತಹ ಯೇಟ್ಸ್‌ಗೆ ಪಾಪಪ್ರಜ್ಞೆಯೇ ಮೂಲಧಾರವಾದ ಕ್ರಿಶ್ಚಿಯನ್‌ ಎಲಿಯಟ್‌ ಸ್ಪಂದಿಸಿದ ಕಾಲ ಆಧುನಿಕತೆಯ ಯುಗದ ವಿಶೇಷ.

ಯೇಟ್ಸ್ ಮೊದಲನೆಯದಾಗಿ ಒಬ್ಬ ಐರಿಷ್‌ಮನ್‌. ಹಾಗೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಇತಿಹಾಸವನ್ನು ನೋಡಬೇಕು. ತನ್ನದೇ ಆದ ಸಾಂಸ್ಕೃತಿಕ ಸಂಪತ್ತನ್ನು ಹೊಂದಿದ್ದ ಐರ್ಲೆಂಡ್‌ನ ಮೇಲೆ ಇಂಗ್ಲೆಂಡ್‌ ಅಧಿಪತ್ಯ ಸ್ಥಾಪಿಸಿತು. ಇದು ೧೮೦೦ ರಲ್ಲಿ ನಡೆದ ಘಟನೆ. ಡಬ್ಲಿನ್‌ನಲ್ಲಿದ್ದ ಐರ್ಲೆಂಡ್‌ ಪಾರ್ಲಿಮೆಂಟನ್ನು ವಜಾ ಮಾಡಿ ಆಳುವ ಅಧಿಕಾರವನ್ನು ವೆಸ್ಟ್‌ ಮಿನಿಸ್ಟರ್ ಗೆ ವರ್ಗಾಯಿಸಲಾಯಿತು. ಬ್ರಿಟಿಷರು ತಮ್ಮ ಎಂದಿನ ಒಡೆದು ಆಳುವ ನೀತಿಯ ಭಾಗವಾಗಿ ಐರ್ಲೇಂಡಿನಿಂದಲೇ ನೂರು ಮಂದಿ ಸಂಸದರು ಮತ್ತು ೨೮ ಮಂದಿ ಪಿಯರ್ಸ್(ಲಾರ್ಡ್ಸ್)ಗಳನ್ನು ಆರಿಸಿ ವೆಸ್ಟ್‌ ಮಿನಿಸ್ಟರ್ ನ ಪಾರ್ಲಿಮೆಂಟಸ್‌ಗೆ ಕರೆಯಿಸಿಕೊಂಡರು. ಹೀಗೆ ಇಂಗ್ಲೆಂಡ್‌ನ ಒಂದು ಭಾಗವಾಗಿ ಐರ್ಲೆಂಡ್‌ನ್ನು ವಶಪಡಿಸಿಕೊಳ್ಳುವ ತಂತ್ರ ಕೆಲಮಟ್ಟಿಗೆ ಫಲಿಸಿತು.

ಐರ್ಲೆಂಡ್‌ ಸಂಪೂರ್ಣ ಸ್ವತಂತ್ರವಾಗಬೇಕು ಎನ್ನುವ ಹೋರಾಟ ಇವತ್ತಿಗೂ ಇದೆ. ಹಾಗೆಯೇ ಅದನ್ನು ವಿರೋಧಿಸುವವರೂ ಐರ್ಲೆಂಡ್‌ನ ಒಳಗೇ ಇದ್ದಾರೆ. ಐರ್ಲೆಂಡ್‌ ಸ್ವತಂತ್ರವಾಗಬೇಕೆನ್ನುವ ಹೋರಾಟ ಯೇಟ್ಸ್‌ ಕಾಲದಲ್ಲಿ ಬಹಳ ತೀವ್ರವಾಗಿತ್ತು. ಯೇಟ್ಸ್‌ ಕೂಡಾ ಇದರಲ್ಲಿ ಭಾಗಿಯಾಗಿದ್ದನು. ಐರ್ಲೇಂಡ್‌ನ ಈ ಹೋರಾಟವನ್ನು ನಾವು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಿಂದ ಆರಂಭಿಸಿ, ಈಗ ಕನ್ನಡ, ತಮಿಳು, ಅಸ್ಸಾಮಿ, ತೆಲುಗಿನಂಥ ಭಾಷೆಗಳು ಅನನ್ಯತೆಗೆ ನಡೆಸುತ್ತಿರುವ ಹೋರಾಟಗಳವರೆಗಿನ ಎಲ್ಲದಕ್ಕೂ ಹೋಲಿಸಬಹುದು. ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಯೇಟ್ಸ್‌ನನ್ನು ಅರ್ಥಮಾಡಿಕೊಂಡರೆ ಅವನನ್ನು ನಮ್ಮ ಕವಿಗಳೊಂದಿಗೆ ಹೋಲಿಸುವ ಕ್ರಿಯೆಗೆ ಹೊಸ ರೂಪ ದೊರೆಯುತ್ತದೆ.

ಐರ್ಲೆಂಡ್‌ ಪಾರ್ಲಿಮೆಂಟನ್ನು ವಜಾಗೊಳಿಸಿದ ಇಂಗ್ಲೆಂಡ್‌ನ ನೀತಿಗೆ ಎರಡು ರೀತಿಯ ವಿರೋಧಗಳು ಐರ್ಲೆಂಡ್‌ನಲ್ಲಿ ಹುಟ್ಟಿಕೊಂಡವು. ‘ನಾವು ಸಂಪೂರ್ಣ ಸ್ವತಂತ್ರರಾಗಬೇಕು; ನಮಗೂ ಬ್ರಿಟನ್‌ಗೂ ಯಾವ ರೀತಿಯ ಸಂಪರ್ಕವೂ ಇರಬಾರದು’-ಇದು ಮೊದಲನೆಯದು. ಈ ನಿಲುವು ಎಷ್ಟು ಅತಿಗೂ ಹೋಗಬಲ್ಲ ನಿಷ್ಠುರದ್ದೆಂದರೆ ೧) ಐರ್ಲೇಂಡಿನ ಮೂಲ ಭಾಷೆಯಾದ ಗೇಲಿಕ್‌ನ್ನೇ ನಾವು ಬಳಸಬೇಕು. ೨) ಇಂಗ್ಲೆಂಡಿನ ಆಟಗಳೆಲ್ಲವನ್ನೂ ಬಿಟ್ಟು ನಮ್ಮದೇ (ದೇಸೀ) ಆಟಗಳನ್ನು ಆಡಬೇಕು. (ಇಲ್ಲಿ ನನಗೆ ಕ್ರಿಕೆಟ್‌ ಆಟವನ್ನೂ, ಇಂಗ್ಲಿಷ್‌ ಭಾಷೆಯ ವ್ಯಾವಹಾರಿಕ ಬಳಕೆಯನ್ನು ವಿರೋಧಿಸಿದ ಲೋಹಿಯಾ ನೆನಪಾಗುತ್ತಾರೆ).

ಇದಕ್ಕೆ ಬದಲಾಗಿ ಇನ್ನೊಂದು ಹೋರಾಟ ಪ್ರಾರಂಭವಾಯಿತು. ತಿಲಕ್‌-ಗೋಖಲೆ ವಾಗ್ವಾದ ಬಲ್ಲವರಿಗೆ ಇದು ಸುಲಭವಾಗಿ ಗ್ರಾಹ್ಯ ಹಾಗೂ practical ಎನ್ನಿಸುವ ವಿಚಾರ. ಇಂಗ್ಲೆಂಡಿನ ಜತೆ ಸಂಪರ್ಕವನ್ನು ಕಳೆದುಕೊಳ್ಳದೆಯೇ ನಮ್ಮ ಸ್ವಾತಂತ್ಯ್ರವನ್ನು ಉಳಿಸಿಕೊಳ್ಳಬೇಕು ಎಂಬ ನಿಲುವು ಇದು (ಐರಿಷ್‌ ದೇಸೀ ಜಾನಪದವನ್ನು ಐರೋಪ್ಯ ಕನ್ನಡಿಯಲ್ಲಿ ನೋಡಬಯಸಿದ ಯೇಟ್ಸ್‌ ಪ್ರಯತ್ನಗಳನ್ನು ಈ ದೃಷ್ಟಿಯಿಂದ ನೋಡಬೇಕು) ಈ ಎರಡೂ ಚಿಂತನೆಗಳ ನಡುವಿನ ಹೊಯ್ದಾಟದಲ್ಲಿ ಯೇಟ್ಸ್‌ನ ಕವಿತೆಗಳು ಹೊರಬಂದವು. ಯೇಟ್ಸ್‌ ಐರ್ಲೆಂಡ್‌ನ ಸ್ವಾತಂತ್ಯ್ರವನ್ನು ಬಯಸುವವನಾಗಿದ್ದ. ಆದರೆ ಇಂಗ್ಲೆಂಡ್‌ನ ಜತೆ ಸಂಪರ್ಕ ಇಟ್ಟುಕೊಳ್ಳಬೇಕು ಎಂಬ ಪ್ರಾಯೋಗಿಕ ನಿಲುವನ್ನು ಹೊಂದಿದ್ದವರ ಬಗ್ಗೆಯೂ ಅವನಿಗೆ ಅಭಿಮಾನವಿತ್ತು. ಇದಕ್ಕೆ ಯೇಟ್ಸ್‌ನ ಸಾಮಾಜಿಕ ಹಿನ್ನೆಲೆ ಕೂಡಾ ಕಾರಣವಾಗಿತ್ತು. ಅವನು ಅರ್ಧ ಐರಿಷ್‌, ಅಧ್ ಆಂಗ್ಲ ಇಬ್ಬರಿಗೂ ಬೇಕಾದ, ಇಬ್ಬರಿಗೂ ಬೇಡವದ ‘ಎಡಬಿಡಂಗಿ’ಯಂತೆ ಕಾಣುವವನು ಎಂದು ಬೇಕಾದರೆ (ನೀವು rationalist-marxist ಆಗಿದ್ದರೆ ಖಂಡಿತ) ಅಂದುಕೊಂಡು ಸಮಾಧಾನಪಟ್ಟುಕೊಳ್ಳುತ್ತೀರಿ. ಅಂತಹ ಸಮಾಧಾನ ಪಡಲಾರದ ಕೆಲವರಿಗೆ ಯೇಟ್ಸ್‌ ಮಹತ್ವದ ಕವಿ.

ಯೇಟ್ಸ್‌ನ ಈ ದ್ವಂದ್ವವನ್ನು ಅರ್ಥಮಾಡಿಕೊಳ್ಳುವುದಕ್ಕೆ ಐರ್ಲೆಂಡ್‌ನಲ್ಲಿ ಹುಟ್ಟಿಕೊಂಡ ಇಂಗ್ಲೆಂಡ್‌ ವಿರೋಧಿ ನಿಲುವಿಗೆ ದೊರೆತ ಪ್ರಾಟಸ್ಟೆಂಡ್‌/ಕ್ಯಾಥೊಲಿಕ್‌ ದ್ವಂದ್ವದ ಆಯಾಮವನ್ನೂ ಗಮನಿಸಬೇಕು. ಇಂಗ್ಲೆಂಡಿನ ಜತೆ ಸಂಪರ್ಕ ಕಳೆದುಕೊಂಡು ಐರ್ಲೆಂಡ್‌ನದ್ದೇ ಭಾಷೆಯಾದ ಗೇಲಿಕ್‌ ಭಾಷೆಯನ್ನು ಮಾತ್ರ ಮಾತನಾಡಬೇಕು ಎಂಬ ಆವದ ಹುಟ್ಟಿಕೊಳ್ಳುವ ಹೊತ್ತಿಗೆ ಕೇವಲ ಗೇಲಿಕ್‌ನನ್ನೇ ಮಾತನಾಡುವವರ ಸಂಖ್ಯೆ ಕಡಿಮೆಯಾಗಿಬಿಟ್ಟಿತ್ತು . ಪ್ರಭುತ್ವ ಭಾಷೆಯಾಗಿದ್ದ ಇಂಗ್ಲಿಷ್‌ ಎಲ್ಲರಿಗೂ ಹತ್ತಿರವಾಗಿತ್ತು. (ಬರ್ಮಿಂಗ್‌ ಹ್ಯಾಂನಲ್ಲಿ ನಾನು ಓದುತ್ತಿದ್ದಾಗ ಕಮ್ಯುನಿಸ್ಟ್‌ ಚಿಂತಕರ ನಡುವೆ ಒಬ್ಬನಾಗಿದ್ದೂ, ಏಕಾಕಿಯಾಗಿದ್ದ ಗ್ರೀಕ್‌ ಪ್ರೊಫೆಸರ್ ಥಾಮ್ಸನ್‌ ಗೇಲಿಕ್‌ ಪರ ಹೋರಾಡಿದವರಲ್ಲಿ ಒಬ್ಬರಾಗಿದ್ದರು). ಒಂದು ಪ್ರದೇಶದ ಜನತೆ ಎರಡು ಭಾಷೆಯನ್ನು ಅರಿತಿದ್ದು ಅದರಲ್ಲಿ ಒಂದು ಭಾಷೆ ಬಹಳ ಪ್ರಬಲವಾಗಿದ್ದು ಹೆಚ್ಚು ಅನುಕೂಲಗಳನ್ನು ತಂದುಕೊಡುತ್ತಿದ್ದರೆ ಪ್ರಬಲವಾದ ಭಾಷೆ ಮಾತ್ರ ಉಳಿದುಕೊಂಡು ಕ್ರಮೇಣ ಮತ್ತೊಂದು ಭಾಷೆ ನಶಿಸತೊಡಗುತ್ತದೆ. ಇಂಗ್ಲಿಷ್‌ ಮತ್ತು ಗೇಲಿಕ್‌ಗಳ ವಿಷಯದಲ್ಲಿ ಸಂಭವಿಸಿದ್ದು ಇದೆ.

ಇಂಥದ್ದೊಂದು ಸಮಸ್ಯೆ ನಮ್ಮೊಳಗೂ ಇದೆ. ಆದರೆ ಐರ್ಲೆಂಡ್‌ನಲ್ಲಿ ಸಂಭವಿಸಿದ್ದು ನಮ್ಮಲ್ಲಿ ಸಂಭವಿಸಲಿಲ್ಲ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಮಾತನಾಡುವವರು ಮತ್ತು ಕನ್ನಡ ಮಾತಾನಾಡುವವರಿದ್ದಾರೆ. ಎಲ್ಲರಿಗು ಕನ್ನಡ ಬರುತ್ತದೆಯಾದರೂ ತುಳು ಮಾತಾನಾಡುವ ಸಂದರ್ಭದಲ್ಲಿ ಕನ್ನಡ ನೆಲೆಸಿಲ್ಲ. ಇದು ಸ್ವಲ್ಪ ಆಶ್ಚರ್ಯದ ವಿಷಯ. ದಕ್ಷಿಣ ಕನ್ನಡಿಗರು ಮುಂಬಯಗೆ ಹೋದರೆ ಅಲ್ಲಿ ಅವರು ತಮ್ಮ ಕನ್ನಡವನ್ನು ಕಳೆದುಕೊಳ್ಳುತ್ತಾರೆಯೇ ಹೊರತು ತುಳುವನ್ನಲ್ಲ. ಕೊಂಕಣಿಯವರೂ ಹಾಗೆ. ದೇಶದ ಎಲ್ಲಿಯೇ ಇದ್ದರೂ ಅವರಲ್ಲಿ ಕೊಂಕಣಿ ಉಳಿದುಕೊಂಡಿರುತ್ತದೆ.

ಐರ್ಲೆಂಡ್‌ನಲ್ಲಿ ಗೇಲಿಕ್‌ನ್ನು ಮಾತ್ರ ಬಳಸಬೇಕಲು ಎನ್ನುವ ಚಳವಳಿಗೆ ಒಂದು ಮತೀಯ ಆಯಾಮವೂ ಇತ್ತು. ಹೀಗೆ ಹೇಳುತ್ತಿದ್ದವರಲ್ಲಿ ಕ್ಯಾಥೊಲಿಕರೇ ಹೆಚ್ಚಾಗಿದ್ದರು. ಆದರೆ ನಾವು ಇಂಗ್ಲೆಂಡಿನ ಜತೆ ಸಂಪರ್ಕ ಕಳೆದುಕೊಳ್ಳಬಾರದು. ನಮ್ಮ ಉದ್ಧಾರಕ್ಕೆ ಈ ಸಂಪರ್ಕ ಅಗತ್ಯ ಎಂದು ಭಾವಿಸುತ್ತಿದ್ದವರಲ್ಲಿ ಪ್ರಾಟಸ್ಟೆಂಟರು ಹೆಚ್ಚಿದ್ದರು. ಯೇಟ್ಸ್‌ ಒಬ್ಬ ಪ್ರಾಟಸ್ಟೆಂಟ್‌. ಆದರೆ ಐರಿಷ್‌ ಸಂಪ್ರದಾಯಗಳ ಬಗ್ಗೆ ಬಹಳ ಮೆಚ್ಚುಗೆ ಇದ್ದವನು. ಅವನ ಎರಡೂ ನಿಲುವುಗಳು ಪ್ರಾಮಾಣಿಕವಾದದ್ದೇ ಆಗಿದ್ದರೂ ಎರಡೂ ಕಡೆಯವರು ಅವನನ್ನು ಅನುಮಾನದಿಂದ ನೋಡಿದರು. ಇದು ಅವನ ಮನೆಯಲ್ಲೇ ಆರಂಭಗೊಂಡಿತು. ಯೇಟ್ಸ್‌ನ ತಂದೆ ಆ ಕಾಲದ ಉತ್ತಮ ಚಿತ್ರಕಾರರಲ್ಲಿ ಒಬ್ಬ. ಅವನು ಬ್ರಿಟಿಷ್‌ ಆಡಳಿತದ ಪರ.

ಆದರೆ ಯೇಟ್ಸ್‌ನ ಒಡನಾಡಿಗಳಲ್ಲಿ, ಗೆಳೆಯರಾಗಿದ್ದವರಲ್ಲಿ,  ಐರ್ಲೇಂಡಿನ ಭಾಷೆ ಗೇಲಿಕ್‌ ಮಾತ್ರ ಇರಬೇಕು; ಐರ್ಲೇಂಡ್‌ನ ಸಾಂಪ್ರದಾಯಿಕ ಆಟಗಳನ್ನು ಮಾತ್ರ ಆಡಬೇಕು ಎಂದೆಲ್ಲಾ ವಾದಿಸುತ್ತಿದ್ದ ಉಗ್ರ ಹೋರಾಟಗಾರರಿದ್ದರು. ಜತೆಗೆ ಅವನ ಅಪ್ಪನಂತೆಯೇ ಯೋಚನೆ ಮಾಡುತ್ತಿದ್ದವರೂ ಇದ್ದರು.

ಯೇಟ್ಸ್‌ನ ಆತ್ಮಕಥೆಯಲ್ಲಿ ಅವನು ಎರಡೂ ವಾದಗಳ ಬಗ್ಗೆಯೂ ಹೇಗೆ ಯೋಚಿಸುತ್ತಿದ್ದ ಎಂಬ ವಿವರಗಳು ದೊರೆಯುತ್ತವೆ. ಶೆಲ್ಲಿ ಮತ್ತು ಕೀಟ್ಸ್‌ ಇಬ್ಬರೂ ಇಂಗ್ಲಿಷ್‌ನ ಮಹತ್ವದ ಕವಿಗಳು. ಇವರಿಬ್ಬರು ಯೇಟ್ಸ್‌ನ ಕಾವ್ಯಾತ್ಮಕ ಚಿಂತನೆಗಳಿಗೆ ಹತ್ತಿರವಾಗಿದ್ದವರು ಇವರಿಗೆ ಹೋಲಿಸಿದರೆ ಗೇಲಿಕ್‌ನಲ್ಲಿ ಬರೆಯುತ್ತಿದ್ದ ‘ಪ್ರಮುಖ ಕವಿ’ಗಳು ಜಾಳುಜಾಳಾಗಿ ಬರೆಯುತ್ತಿದ್ದರು. ಈ ಅಂತರವನ್ನು ಪ್ರಯತ್ನಪೂರ್ವಕವಾಗಿ ಮರೆತು ಗೇಲಿಕ್‌ ಕವಿಗಳ ಸ್ಫೂರ್ತಿಯ ಮೂಲಗಳನ್ನು ಹುಡುಕಿ ಯೇಟ್ಸ್‌ ಇಡೀ ಐರ್ಲೇಂಡಿನಲ್ಲಿ ಸಂಚರಿಸುತ್ತಿದ್ದ. ಅವರು ಹುಟ್ಟಿದ ಹಳ್ಳಿಗಳನ್ನು ಹೋಗಿ ನೋಡಿ, ಅವರ ಕವಿತೆಗಳನ್ನು ಕಷ್ಟಪಟ್ಟು ಓದಿ, ಅವುಗಳನ್ನು ಶ್ರಮಪೂರ್ವಕ ಶ್ರದ್ಧೆಯಲ್ಲಿ ಮೆಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದ. ಐರಿಷ್‌ ಸಂಪ್ರದಾಯಗಳ ಕುರಿತು ಅವನಿಗಿದ್ದ ನಿಷ್ಠೆ ಎಷ್ಟೆಂದರೆ ತನಗೆ ಸಾಮಾನ್ಯ ಎನಿಸಿದ್ದನ್ನೂ ಕಷ್ಟಪಟ್ಟು ಮೆಚ್ಚಿಕೊಳ್ಳುವ ಮಟ್ಟದಲ್ಲಿತ್ತು. ಒಂದು ರೀತಿಯಲ್ಲಿ ತನ್ನ ರಾಜಕೀಯ ಮೆಚ್ಚುಗೆಗಳನ್ನು ತನ್ ಕಾವ್ಯದ ಆಸಕ್ತಿಗಳಿಗೂ ಒತ್ತಾಯಪೂರ್ವಕವಾಗಿ ಅನ್ವಯಿಸಿಕೊಳ್ಳಲು ಯೇಟ್ಸ್‌ ಪ್ರಯತ್ನಿಸುತ್ತಿದ್ದ.

ಒಬ್ಬ ದೊಡ್ಡ ಕವಿಗೆ ಅವನ ಸಾಹಿತ್ಯಿಕ ಮೆಚ್ಚುಗೆಗಳು ಮತ್ತು ರಾಜಕೀಯ  ಆಯ್ಕೆಗಳ ಮಧ್ಯೆ ಒಂದು ವ್ಯತ್ಯಾಸ ಉಂಟಾಗಿಬಿಟ್ಟರೆ ಆತ ಅನೇಕ ಸಂಕಟಗಳಿಗೆ ಒಳಗಾಗುತ್ತಾನೆ. ಆತ ರಾಜಕೀಯವಾಗಿ ಯಾವುದೋ ಒಂದನ್ನು ಇಷ್ಟಪಡುತ್ತಿರುತ್ತಾನೆ. ಆದರೆ ಸಾಹಿತ್ಯಕವಾಗಿ ಮತ್ತೊಂದನ್ನು ಇಷ್ಟಪಡುತ್ತಾನೆ. ಇದರಿಂದ ಒಂದು ಬಗೆಯ ಅಪ್ರಾಮಾಣಿಕತೆಯೂ, ಅಥವಾ ‘bad faith’ ಬರವಣಿಗೆಯಲ್ಲಿ ನುಸುಳಿಬಿಡಬಹುದು. ಇದು ಸಾಹಿತ್ಯದ ಅಪ್ರಾಮಾಣಿಕತೆಯಂತೆ ರಾಜಕೀಯ ಅಪ್ರಾಮಾಣಿಕತೆಯೂ ಆಗಬಹುದು. ಅಥವಾ ಈ ಬಗೆಯ ಸಂಕಟವೊಂದು ತನಗಿದೆ ಎಂಬ ಪ್ರಶ್ನೆ ಅವನಿಗೆ ಇದ್ದರೆ ಎರಡರ ಜೊತೆಗೂ ಅವನು ಸೆಣಸಾಡಬಹುದು. ಯೇಟ್ಸ್‌ ತನ್ನ ಎಲ್ಲ ಆಯ್ಕೆಗಳ ಹಿಂದಿದ್ದ ಸಂಕಟಗಳ ಜತೆಗೆ ಸೆಣಸಾಡಿದ. ಯೇಟ್ಸ್‌ನ Easter 1916 ಪದ್ಯ ಓದುವಾಗ ಇದು ಸ್ಪಷ್ಟವಾಗುತ್ತದೆ.

ಕಾವ್ಯದೊಳಗೆ ಕಾಣಿಸಿಕೊಳ್ಳುವ ಒಳತೋಟಿ ಎಂಬುದು ಕೇವಲ ರಾಜಕೀಯ ಮತ್ತು ಕಾವ್ಯದ ಆಸಕ್ತಿಗೆ ಮಾತ್ರ ಸಂಬಂಧಿಸಿರುವುದಲ್ಲ. ಇದು ಅವನ ಬದುಕಿನ ಒಳತೋಟಿಯೂ ಹೌದು. ಮನುಷ್ಯ ಸಂಬಂಧಗಳ ಒಳತೋಟಿಯೂ ಹೌದು.

ಯೇಟ್ಸ್‌ ಕ್ರಾಂತಿಕಾರಿಣಯೊಬ್ಬಳನ್ನು ಪ್ರೀತಿಸಿದ್ದ. ಅವಳ ಹೆಸರು Maud Gonne. ಐರ್ಲೆಂಡ್‌ ಇಂಗ್ಲೆಂಡ್‌ನಿಂದ ಸಂಪೂರ್ಣ ಸ್ವತಂತ್ರವಾಗಬೇಕು ಎಂಬ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ನಾಟಕಮಣಿ ಈಕೆ. ಧೀರೆ, ಆದರೆ ವಿಲಕ್ಷಣ ಹುಚ್ಚಿನ ಹೆಣ್ಣು. ವಿಚಿತ್ರ ಪೋಷಾಕನ್ನು ಧರಿಸಿ, ತಾನು ಹೋದಲ್ಲೆಲ್ಲ ತನಗೆ ಪ್ರಿಯವಾದ ಪ್ರಾಣಿ ಸಂಕುಲವನ್ನೂ ಜೊತೆಯಲ್ಲಿ ಕರೆದುಕೊಂಡು ಓಡಾಡುವ, ಮನಸ್ಸಿಗೆ ಬಂದದ್ದನ್ನು ಮಾಡಿ ಬಿಡುವ ಎಗ್ಗಿಲ್ಲದ ದಿಟ್ಟೆ ಅವಳು.

ಅವಳದು ಕೊಡವು ಪ್ರೇಮವಲ್ಲ: ಕಾಡಿಸುವ ಪ್ರೇಮ. ಯೇಟ್ಸ್‌ನ ಮಾತುಗಳಲ್ಲೇ ಹೇಳುವುದಾದರೆ ಅವಳು ಹೆಲೆನ್‌ನಷ್ಟು ಚೆಲುವೆ. ಹೆಲನ್‌ನಂತೆಯೇ ಕಾಡಿಸಿ ಕೈಕೊಡುವ, ಬಿಡುವೆನೆಂದರೆ ಬಿಡಗೊಡದ, ಪಡೆಯಲೂ ಒಲ್ಲದ ಹೆಣ್ಣು. ಹೋಮರ್ ಕಾವ್ಯದ ಹೆಲೆನ್‌ ಅಂದರೆ ಯೇಟ್ಸ್‌ನಮಟ್ಟಿಗೆ ಅದು Maud Gonne. ಕವಿ ತನ್ನ ಮಗಳಿಗಾಗಿ ಬರೆದ ಪ್ರಾರ್ಥನೆ ಪದ್ಯದಲ್ಲಿ ತನ್ನನ್ನು ಹುಚ್ಚನನ್ನಾಗಿ ಮಾಡಿದ ಹೆಣ್ಣಿನಂತೆ ತನ್ನ ಮಗಳು ತಲೆ ತುಂಬ ಅಭಿಪ್ರಾಯಗಳನ್ನೂ ಧೋರಣೆಗಳನ್ನೂ ತುಂಬಿಕೊಂಡವಳಾಗದಿರಲಿ, ಅವಳು ಚೆಲುವೆಯಾಗಲಿ, ಆದರೆ ತಾನು ಅಪರ ಸುಂದರಿ ಎಂದು ತಿಳಿಯುವಷ್ಟು ಚೆಲುವೆಯಾಗದಿರಲಿ ಎಂದು ಪ್ರಾರ್ಥಿಸುತ್ತಾನೆ. ತೀರಾ ಚೆಲುವೆಯರಲ್ಲದ ಲಾವಣ್ಯವತಿಯರು ಮಾತ್ರ ಪ್ರೀತಿಸುವುದನ್ನು ಕಲಿಯಬಲ್ಲರು ಎಂದು ಯೇಟ್ಸ್‌ನ ಮತ. (ಸ್ತ್ರೀವಾದಿಗಳು ಯೇಟ್ಸ್‌ ಕವಿಯ Prayer for Daughter ಪದ್ಯವನ್ನು ಕೊಂಕಿನ ಅನುಮಾನದಲ್ಲಿ ಓದುತ್ತಾರೆ.)

ಮಾಡ್‌ಗಾನ್‌ ಮತ್ತು ಯೇಟ್ಸ್‌ರ ನಡುವೆ ಸತತವಾದ ‘ಪ್ರೇಮ/ದ್ವೇಷ ದ್ವಂದ್ವದ ತೀರದ ಆಕರ್ಷಣೆಯ ಜಂಜಾಟವಿತ್ತು. ಅವಳು ಯೇಟ್ಸ್‌ನನ್ನು ಚುಚ್ಚುತ್ತಿದ್ದಳು – ‘ನೀನು ಪ್ರಾಟಸ್ಟೆಂಟ್‌, ನಿನಗೆ ಇಂಗ್ಲೆಂಡಿನ ಮೇಲೆಯೇ ಪ್ರೀತಿ. ನಿನಗೆ ನಿನ್ನ ಕಾವ್ಯದ ಮೇಲೆಯೇ ಹೆಚ್ಚು ಮೋಹ. ನಮ್ಮ ಹೋರಾಟದಲ್ಲಿ ನೀನು ಭಾಗಿಯಲ್ಲ’. ಹೀಗೆ ಅವನ ಪಾಲಿಗೆ ಪೀಡಕ ಪ್ರೇಮಿ ಆದವಳು ಅವಳು. (ಯೇಟ್ಸ್‌ನನ್ನು ದ್ವೇಷಿಸುವ ಕುಡುಕನೊಬ್ಬನನ್ನು ಅವಳು ಮದುವೆಯಾದಳು. ಗೋಳಾಡಿ ಅವನನ್ನು ಬಿಟ್ಟಳು. ಇವನ ಬಗ್ಗೆ ಮುಂದೆ ನಾನಲು ಹೇಳುವುದಿದೆ.)

ಯೇಟ್ಸ್‌ ಅವಳ ಯಾವ ಚುಚ್ಚುವಿಕೆಗೂ ಅಂಜುತ್ತಿರಲಿಲ್ಲ. ಅವಳು ಹೋದಲ್ಲಿಗೆ ಇವನೂ ಹೋಗುತ್ತಿದ್ದ. ಅವಳ ಭಾಷಣ ಕೇಳಿ ಜನ ಜಯಕಾರ ಹಾಕುತ್ತಿದ್ದರೆ ಇವನು ಯಾವುದೋ ಮೂಲೆಯಲ್ಲಿ ಸುಮ್ಮನೆ ಕಾಯುತ್ತಿರುತ್ತಿದ್ದ. ಅವಳೂ ಅಷ್ಟೇ-ಚುಚ್ಚುತ್ತಲೇ ಇವನನ್ನು ಇಷ್ಟಪಡುತ್ತಿದ್ದಳು. ಅವಳು ತಾನು ಇಷಟಪಡುವವನನ್ನು ಚುಚ್ಚುವುದಕ್ಕೆ ತನ್ನದೇ ತರ್ಕವೊಂದನ್ನು ಬಳಸುತ್ತಿದ್ದಳು. ‘ನಿನಗೆ ನಾನು ಸುಖವನ್ನು ಕೊಡುವುದಿಲ್ಲ. ಅಂಥ ಸುಖ ಸಿಕ್ಕರೆ ನೀನು ದೊಡ್ಡ ಕವಿಯಾಗುವುದಿಲ್ಲ.  ಕವಿಯಾಗಬೇಕಾದರೆ ನೀನು ಸಂಕಟಪಡಬೇಕು’. ತಾನು ನೀಡುವ ಸಂಕಟದಲ್ಲಿ ಯೇಟ್ಸ್‌ ದೊಡ್ಡ ಕವಿಯಾಗುತ್ತಾನೆ ಎಂಬುದು ಅವಳ ನಂಬಿಕೆ. ಹೀಗಾಗಿ, ಯೇಟ್ಸ್‌ಗೆ ಐರಿಷ್‌ ಸಮಸ್ಯೆ ತನ್ನ ಪ್ರೀತಿಯ ಸಮಸ್ಯೆಯೂ ಆಗಿತ್ತು. ತಾನು ಬರೆಯುತ್ತಿರುವುದು ಪ್ರೇಮದ ಪದ್ಯವೋ ರಾಜಕೀಯ ಪದ್ಯವೋ ಎಂಬ ವ್ಯತ್ಯಾಸವೇ ಇಲ್ಲದಷ್ಟು ಅದು ಹೆಣೆದುಕೊಂಡಿತ್ತು.

ಆದ್ದರಿಂದ ಪರಮ ನಿಷ್ಢುರ ವಿಮರ್ಶಕ ಲೀವಿಸ್‌ ‘ಯೇಟ್ಸ್‌ನ ಕಾವ್ಯ ಸ್ವತಂತ್ರವಾಗಿ ನಿಲ್ಲಲಾರದು. ಅದು ಅವನ ಆತ್ಮಚರಿತ್ರೆಯ ಮಾರ್ಜಿನ್‌ನಲ್ಲಿ ಬರೆದ ಟಿಪ್ಪಣಿ’ ಎಂದೂ ಹೇಳುತ್ತಾನೆ.

*

ನಮ್ಮ ಗುರುದೇವರ ಜತೆಗೆ ಹೋಲಿಸಿದರೆ ಯೇಟ್ಸ್‌ ತೋರಿಸಿದ ಧೈರ್ಯ ಎಂಥದ್ದು ಎಂದು ಅರ್ಥವಾಗುತ್ತದೆ. ರವೀಂದ್ರನಾಥ ಠಾಕೂರರು ಬಹಳ ಗಂಭೀರನಾದ ಮನುಷ್ಯ. ಅವರೆಷ್ಟು ಗಂಭೀರ ಎಂದರೆ ಅವರು ಬಿಟ್ಟ ಉದ್ದಕೂದಲು, ಹಾಕುತ್ತಿದ್ದ ಬಟ್ಟೆ ಎಲ್ಲದರಲ್ಲೂ ಒಬ್ಬ ಋಷಿಯಂತೆ ಕಾಣಿಸುತ್ತಿದ್ದರು. ಇಂತಹ ಪೋಷಾಕಿನ ಕವಿ ಏನು ಬರೆದರೂ ಅದು ಸಂದೇಶವಾಗತೊಡಗಿತು – ಬಂಗಾಳದ ಒಂದು ಸಿಹಿಯ ಹೆಸರೂ ಸಂದೇಶ್‌ – ಹೀಗೆ ಬರೆಹ ಸಂದೇಶವಾದ ತಕ್ಷಣ ಒಂದು ಅಪ್ರಾಮಾಣಿಕತೆಯಾಗಿ ಕಾಡುತ್ತದೆ.

ಠಾಕೂರರಿಗೂ ಒಂದು ಸಮಸ್ಯೆ ಇತ್ತು. ಅವರು ತಮ್ಮ ಅತ್ತಿಗೆಯನ್ನು ಉತ್ಕಟವಾಗಿ, ಗುಪ್ತವಾಗಿ, ಪ್ಲೇಟೋನಿಕ್‌ ಆಗಿ ಪ್ರೀತಿಸಿದದರು. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಈ ಸಂಕಟವನ್ನು ಅವರಿಗೆ ಯಾರಲ್ಲಿಯೂ ತೋಡಿಕೊಳ್ಳೊಲೋ, ಅದನ್ನು ಅಭಿವ್ಯಕ್ತಿಪಡಿಸಲೋ ಪ್ರಾಯಶಃ ಸಾಧ್ಯವಾಗಲೇ ಇಲ್ಲ. ಅವರಿಗಿದ್ದ ಗುರುದೇವನೆಂಬ ಗೌರವವೇ ಅವರನ್ನು ಕೆಲವು ಸತ್ಯಗಳಿಂದ ದೂರವಿಟ್ಟಿದ್ದವು. ಆಶ್ಚರ್ಯವೆಂದರೆ ಗಾಂಧಿ ಕೂಡಾ ಇಂಥದ್ದೇ ಹಂತವನ್ನು ತಲುಪಿದರೂ ಎಲ್ಲಾ ಸತ್ಯಗಳನ್ನೂ ಸತ್ಯವಾಗಿಯೇ ಬರೆದರು. ಅವರು ಮುದುಕರಾಗಿದ್ದಾಗ ತನ್ನಲ್ಲಿನ್ನೂ ಕಾಮ ಉಳಿದಿದೆಯೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳುವುದಕ್ಕೋಸ್ಕರ ಹುಡುಗಿಯರ ಜತೆ ಬೆತ್ತಲೆ ಮಲಗುವುದಕ್ಕೆ ಶುರು ಮಾಡಿದರು. ಆಗ ಕೃಪಲಾನಿ ‘ನಿನ್ನನ್ನು ನೀನು ಪರೀಕ್ಷೆ ಮಾಡಿಕೊಳ್ಳುತ್ತಿದ್ದೀಯಾ. ಆದರೆ ಹೆಣ್ಣು ಮಗಳ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದೀಯಾ’ ಎಂದು ಪ್ರಶ್ನಿಸಿ ಅದನ್ನು ನಿಲ್ಲಿಸುವಂತೆ ಮಾಡಿದರು. ಇವೆಲ್ಲಾ ಜನರಿಗೆ ಗೊತ್ತಾಗುವಂತೆಯೇ ನಡೆಯಿತು. ಆದರೆ ಠಾಕೂರರ ವಿಷಯದಲ್ಲಿ ಇಂಥದ್ದೇನೂ ಸಂಭವಿಸಲಿಲ್ಲ. ಗುರುದೇವರು ತಮ್ಮ ಸಂಕಟಗಳನ್ನು ಅಭಿವ್ಯಕ್ತಿಸಿದ್ದು ಅವರ ಪೇಟಿಂಗ್‌ಗಳಲ್ಲಿ, ಬರೆಹದಲ್ಲಿ ಕಾಣಿಸುತ್ತಿದದ ಸಂದೇಶದ ಅಪ್ರಾಮಾಣಿಕತೆಯನ್ನು ಅವರು ಚಿತ್ರಗಳಲ್ಲಿ ತೊಡೆಯಲು ಪ್ರಯತ್ನಿಸಿದರು.

ಯೇಟ್ಸ್‌ ಹೀಗಾಗಲಿಲ್ಲ. ಅವನು ತನ್ನ ಕೊನೆಗಾಲದಲ್ಲಿ ಬರೆದ ಪದ್ಯದಲ್ಲಿ ತನ್ನನ್ನು Wicked old man ಎಂದು ಕರೆದುಕೊಳ್ಳುತ್ತಾನೆ. ಇದನ್ನು ಓದಿದ ಎಲಿಯಟ್‌ ‘ನಮಗಾರಿಗೂ ನಮ್ಮ ಇಳಿವಯಸ್ಸಿನಲ್ಲಿ ಹೇಳಿಕೊಳ್ಳಲು ಧೈರ್ಯ ಇಲ್ಲದೇ ಇರುವುದನ್ನೆಲ್ಲಾ ಈ ಯೇಟ್ಸ್‌ ಬರೆಯುತ್ತಾನೆ’ ಎಂದು ಒಂದು ಕಡೆ ಹೇಳಿದ್ದಾನೆ. ಇಲ್ಲಿಯೂ ಯೇಟ್ಸ್‌ ಎರಡು ಅಭೀಪ್ಸೆಗಳ ಮಧ್ಯೆ ತೊಳಲಾಡುತ್ತಾನೆ. ಒಂದು, ಯಯಾತಿಯ ರೀತಿಯಲ್ಲಿ ಯುವಕನಾಗಿಬಿಡುವ ಯೌವ್ವನದ ಆಸೆ. ಇನ್ನೊಂದು ಅಳಿದುಹೋಗುವ ಈ ದೇಹದಲ್ಲಿ ಇದ್ದೇನು ಪ್ರಯೋಜನ? ನಾನು ಶಾಶ್ವತವಾದ ಆತ್ಮ ಆಗಬೇಕು ಎಂಬ ಅಭೀಪ್ಸೆ. ಅವನದೇ ಪ್ರತಿಮೆಯಲ್ಲಿ ಹೇಳಬೇಕೆಂದರೆ ಒಂದು ಬಂಗಾರದ ಪಕ್ಷಿಯಾಗಬೇಕಲು ಎಂಬ ಆಸೆ. ಏಕೆಂದರೆ ಈ ಬಂಗಾರದ ಪಕ್ಷಿಗೆ ಮುಪ್ಪು ಬರುವುದಿಲ್ಲ. ಪಕ್ಷಿ ಹೊಳಪು ಕಳೆದುಕೊಳ್ಳುವುದಿಲ್ಲ. ಹಾಗೆಯೇ ಅದು ಬೆದರುವುದೂ ಇಲ್ಲ. ಯೇಟ್ಸ್‌ನ ಎಲ್ಲ ಅತ್ಯುತ್ತಮ ಪದ್ಯಗಳಲ್ಲಿ ಈ ಎರಡೂ ಆಸೆಗಳು ಒಂದಕ್ಕೊಂದು ವಿರುದ್ಧವಾಗಿ ಬರುತ್ತವೆ.

ಇಲ್ಲೇ ಯೇಟ್ಸ್‌ನ ಕಾವ್ಯಭಾಷೆಯ ಬಗ್ಗೆ ಒಂದೆರಡು ಮಾತು ಹೇಳಿ ಮುಂದುವರಿಯಬೇಕು ಯೇಟ್ಸ್‌ಗೆ ಒಂದು ನಂಬಿಕೆ ಇತ್ತು. ಅದೇನೆಂದರೆ ನಾವು ಧೀಮಂತವಾಗಿ ಆಲೋಚನೆ ಮಾಡಬೇಕು. ಆದರೆ ಸಾಮಾನ್ಯರ ಭಾಷೆಯಲ್ಲಿ ಬರೆಯಬೇಕು. ಇದು ಅವನು ಕಂಡುಕೊಂಡ ಸತ್ಯ. ಅರಿಸ್ಟಾಟಲ್‌ನಿಂದ ಆರಂಭಿಸಿ ಎಲ್ಲರ ತಾತ್ವಿಕತೆಯಲ್ಲೂ ಇರುವ ವಿಷಯಗಳೆಲ್ಲಾ ಇರಬೇಕು. ಆದರೆ ಅದನ್ನೆಲ್ಲ ಆಡುವ ಮಾತು ತಾತ್ವಿಕತೆಯಲ್ಲೂ ಇರುವ ವಿಷಯಗಳೆಲ್ಲಾ ಇರಬೇಕು. ಆದರೆ ಅದನ್ನೆಲ್ಲ ಆಡುವ ಮಾತು ಸಾಮಾನ್ಯರದ್ದಾಗಿರಬೇಕು. ಒಂದು ನಾಟಕದಲ್ಲಿ ಒಂದು ಪಾತ್ರ ಮಾತನಾಡುತ್ತಿದ್ದರೆ ನಮಗೆ ಆ ಮಾತು ಬಹಳ ಇಷ್ಟವಾಗುತ್ತದೆ. ಯಾಕೆಂದರೆ ಅದು ಒಂದು ಪಾತ್ರದ ಬಾಯಿಂದ ಬರುತ್ತದೆ. ಅದರಿಂದ ಕಾವ್ಯ ಓದುವಾಗ ಇದು ಯಾರೋ ಒಬ್ಬ ಮನುಷ್ಯನಿಂದ ಬಂದಿದೆ ಎನಿಸಬೇಕು. ಒಬ್ಬ ವ್ಯಕ್ತಿಯ ನುಡಿಯಾಗಿ ಬರಬೇಕು. ಆದರೆ ಯೇಟ್ಸ್‌ನ ಅಪ್ಪ ಹೇಳುತ್ತಿದ್ದುದೇ ಬೇರೆ. ಕಾವ್ಯ ಹೀಗೆಲ್ಲಾ ವೈಯಕ್ತಿಕವಾಗಬಾರದು. impersonal ಆಗಿರಬೇಕು.

ನಮ್ಮಲ್ಲೂ ಹಾಗೇ ಇತ್ತು. ಇಂಪರ್ಸನಲ್‌ ಆಗಿರಬೇಕು ಎಂದರೆ, ನಾವು ‘ಸಂಸ್ಕೃತ’ದಲ್ಲಿ-ಅಥವಾ ಸಂಸ್ಕೃತವೇ ಎಂದು ಭಾಸವಾಗುವ ಭಾಷೆಯಲ್ಲಿ-ಬರೆಯಬೇಕು- ದೇವೀ ಭುವನ ಮನಮೋಹಿನಿ, ನಿರ್ಮಲ ಸೂರ್ಯ ಕರೋಜ್ವಲ ಧರಣಿ, ಜನಕ ಜನನಿ ಜನನಿ-ಎಷ್ಟು ಚೆನ್ನಾಗಿದೆ ಇದು. ಆದರೆ ಇದು ಯಾರದ್ದಾದರೂ ಬಾಯಲ್ಲಿ ಬಂದಿರಬಹುದು ಎನಿಸುವುದೇ ಇಲ್ಲ.. ಇದು ಮಾತಾಡಿದ್ದು ಎನಿಸಬೇಕಾದರೆ ಬೇಂದ್ರೆಯ ಹಾಗೆ ಬರೆಯಬೇಕಾಗುತ್ತದೆ. ಆದರೆ ಕೆಲವು ಸಾರಿ ಈ ಎರಡೂ ಬಗೆಯವೂ ಸೇರಿಯೂ ಕಾವ್ಯ ಹುಟ್ಟುತ್ತದೆ. ಅದು ಎಲ್ಲರದ್ದೂ ಅನ್ನಿಸುವ ಒಂದು ಧ್ವನಿಯ ಜೊತೆ ಜೊತೆಯಲ್ಲೇ ನನ್ನದು ಎನಿಸುವ ಒಂದು ಧ್ವನಿ- ಈ ಎರಡೂ ಸೇರಿಯೂ ಕಾವ್ಯ ಬರುತ್ತದೆ. ಕಾವ್ಯವನ್ನು ಓದುವಾಗಿ ಕಿವಿಯಲ್ಲೇ ಗ್ರಹಿಸಬಹುದಾದ, ‘ಕೃತಕ’ವನ್ನು ಹಾಗೆನ್ನಿಸದಂತೆ ಭಾವೋತ್ಕಟತೆಯಲ್ಲಿ ಸಹಜಗೊಳಿಸಬಲ್ಲ ಪ್ರತಿಭೆಯಿದು-ಶ್ರಾವಣ ಪ್ರತಿಭೆಯಿದು. ಇದು ‘ವಾಕ್‌’-ಪದಜೋಡಣೆಯ ವಾಕ್ಯವಲ್ಲ.

ನನಗೆ ಗೊತ್ತಿರುವಂತೆ ತನ್ನನ್ನು ತಾನೇ ನಿರ್ದಯವಾಗಿ ನಿರಾಕರಿಸಿಕೊಂಡು ಕಾವ್ಯದ ಭಾಷೆ ತನ್ನ ನಿಜದ ಭಾಷೆಯಾಗುವಂತೆ ಸತ್ತು ಹುಟ್ಟಿದ ಕವಿಗಳೆಂದರೆ ಇಬ್ಬರು-ಅಡಿಗರು  ಮತ್ತು ಯೇಟ್ಸ್‌.

ಯೇಟ್ಸ್‌ನ ಗೆಳೆಯರಲ್ಲಿ ತುಂಬಾ ವೈಚಾರಿಕವಾಗಿ, ತಾರ್ಕಿಕವಾಗಿ ಚಿಂತಿಸಬಲ್ಲವರು, ಅತ್ಯುತ್ತಮ ವಿದ್ಯಾಭ್ಯಾಸ ಪಡೆದವರು-ಸಾಮಾನ್ಯವಾಗಿ ಪ್ರಾಟಸ್ಟೆಂಟರು. ಇವರಲ್ಲಾ ಇಂಗ್ಲೆಂಡ್‌ನ ಜತೆಗಿನ ತಮ್ಮ ಸಂಬಂಧವನ್ನು ಬಹಳ ಪ್ರಾಕ್ಟಿಕಲ್‌ ಆದ ಮಟ್ಟದಲ್ಲಿ ಗ್ರಹಿಸುತ್ತಿದ್ದವರು. ತುಂಬಾ ಭಾವುಕರಾಗಿ ಯೋಚಿಸುತ್ತಿದ್ದ ಅವನ ಗೆಳೆಯರೆಲ್ಲಾ ಕ್ಯಾಥಿಲಿಕರು. ಐರಿಷ್‌ ಸಂಸ್ಕೃತಿಯ ಕುರಿತ ಭಾವುಕ ನಿಲುವುಗಳನ್ನು ಹೊಂದಿದ್ದ ಇವರು ಇಂಗ್ಲೆಂಡನ್ನು ಮೂರ್ಖ ಎನಿಸುವಷ್ಟು ತೀಕ್ಷ್ಣವಾಗಿ ವಿರೋಧಿಸುತ್ತಿದ್ದರು.

ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು. ಒಂದು ಕಡೆ ಜಾಣರಾದ ಅಪ್ರಾಮಾಣಿಕರು, ಮತ್ತೊಂದು ಕಡೆ ಮೂರ್ಖ ಭಾವುಕರು. ಈ ಜಾಣರೇಕೆ ಅಪ್ರಮಾಣಿಕರು ಅಂದರೆ ಅವರ ಆಸೆಯಲ್ಲಾ ಇಂಗ್ಲೆಂಡನ್ನು ಮೆಚ್ಚಿಸಿ ಮೇಲೆ ಏರುವುದರಲ್ಲಿತ್ತು. ಈ ಭಾವುಕರು ಎಳ್ಳಷ್ಟೂ ತಾರ್ಕಿಕವಲ್ಲದ ವಾದವೊಂದಕ್ಕೆ ತಮ್ಮ ಸರ್ವಸ್ವವನ್ನೂ ಕಳೆದುಕೊಳ್ಳಲು ಸಿದ್ಧರಾಗಿದ್ದ ಮೂರ್ಖರಾಗಿದ್ದರು. ಯೇಟ್ಸ್‌ಗೆ ಅಪ್ರಾಮಾಣಿಕರಲ್ಲಿದ್ದ ಜಾಣತನವೂ ಮೂರ್ಖರಲ್ಲಿದ್ದ ಪ್ರಾಮಾಣಿಕತೆಯೂ ಅರ್ಥವಾಗುತ್ತಿದ್ದವು. ಇಬ್ಬರಿಗೂ ಇದನ್ನು ಅರ್ಥಮಾಡಿಸಲಾರದ ಒಳತೋಟಿಯೇ ಅವನ ರಾಜಕೀಯ ಪ್ರಜ್ಞೆಯ ತಿರುಳು.

ಮತ್ತೂ ಹೇಳಬೇಕೆಂದರೆ, ಇವನೆಷ್ಟು ದಾರ್ಶನಿಕನೋ ಅಷ್ಟೇ ಲೌಕಿಕ. ತನಗೆ ನೊಬೆಲ್‌ ಬಂದಾಗ ಈ ಐರಿಷ್‌ ಕವಿ ಕೇಳಿದ ಮೊದಲ ಪ್ರಶ್ನೆ ಅದೆಷ್ಟು ದುಡ್ಡು ಕೊಡುತ್ತಾರೆ ಎಂಬುದಾಗಿತ್ತು ಎಂದು ಓದಿದ ನೆನಪು ನನಗೆ. ಮಹಡಿಯಲ್ಲಿ ಅತಿಥಿಗಳಿಗೆ ಟೀ ಮಾಡಿಕೊಟ್ಟು ಗಸಿಯನ್ನು ರಸ್ತೆಯಮೇಲೆ ಯಾರೂ ಇಲ್ಲವೆಂದು ಖಾತ್ರಿ ಮಾಡಿಕೊಂಡು ಸುರಿದುಬಿಡುತ್ತಿದ್ದನಂತೆ ಈ ಮಹಾ ಸೊಗಸುಗರ ಕವಿ…

ಕವಿತೆಯ ಭಾಷೆಯ ಕುರಿತಂತೆ ಯೇಟ್ಸ್‌ಗೆ ಇದ್ದ ನಿಲುವು. ವಿರೋಧಾಭಾಸ ಎನಿಸಬಹುದಾದರು, ಇಹದ ನಿಷ್ಠೆಯದು. ಸದ್ದಯದ ತುರ್ತಿನದು. ಸೌಂದರ್ಯಾರಾಧಕ ನಿಲುವಿನ ಚಿತ್ರಕಾರನಾಗಿದ್ದ ಯೇಟ್ಸ್‌ನ ಅಪ್ಪ ಕವಿಗಳು ಸಾಮಾನ್ಯರ ಭಾಷೆಯಲ್ಲಿ ಬರೆಯಬಾರದು ಎಂದು ತಿಳಿದಿದದ ಘನವಾದ ಭಾಷೆಯಲ್ಲೇ ಬರೆಯಬೇಕು ಎಂಬುದು ಅವನ ನಿಲುವು. ಯೇಟ್ಸ್‌ ಸಾಮಾನ್ಯರ ಭಾಷೆಯಲ್ಲಿ ಬರೆಯಬೇಕೆಂದು ವಾದಿಸತೊಡಗಿದ್ದೇ ಅಪ್ಪನಿಗೆ ಮಗ ಎಲ್ಲೋ ಒಂದು ಕಡೆ ತನ್ನ ದಿವ್ಯವಾದ ಕೆಲಸದಿಂದ ಹಿಂದೆಗೆಯುತ್ತಿದ್ದಾನೆ ಎನಿಸುತ್ತಿತ್ತು. ಈ ಕಾರಣಕ್ಕಾಗಿಯೇ ಅಪ್ಪ ಮಗನ ಮಧ್ಯೆ ದೊಡ್ಡ ಜಗಳಗಳು ನಡೆಯುತ್ತಿದ್ದವು. ಮಗನಿಗೆ ಒಮ್ಮೆ ಮಹಾಕೋಪದಲ್ಲಿ ಹೊಡೆಯಲೂ ಹೊರಟಿದ್ದ ಈ ಅಪ್ಪ.

ಯೇಟ್ಸ್‌ ಹುಟ್ಟಿದ್ದ ಕುಲ ಒಂದು ಕಾಲದ ಶ್ರೀಮಂತರದ್ದು. ಆದರೆ ವರ್ತಮಾನದಲ್ಲಿ ಬಡವ. ಅವನು ಲಂಡನ್‌ನಲ್ಲಿ ಇದ್ದ ದಿನಗಳಲ್ಲಿ ಹೊಸ ಕಾಲುಚೀಲಗಳನ್ನು ಕೊಂಡುಕೊಳ್ಳಲೂ ಆಗದೆ ಹರಿದ ಕಾಲುಚೀಲಗಳಿಗೆ ಅವನ ಅಮ್ಮನಿಂದ ತೇಪೆ ಹಾಕಿಸಿ ತೊಡುತ್ತಿದ್ದ.  ಆಗ ಅವನಿಗೆ ನಿತ್ಯವೂ ಬ್ರಿಟಿಷ್‌ ಮ್ಯೂಸಿಯಂಗೆ ಹೋಗಬೇಕಿತ್ತು. ಅದು ಅವನು ವಾಸಿಸುತ್ತಿದ್ದ ಸ್ಥಳದಿಂದ ಏಳೆಂಟು ಮೈಲು ದೂರದಲ್ಲಿತ್ತು. ಬಸ್‌ನಲ್ಲಿ ಹೋದರೆ ತನ್ನಲ್ಲಿದ್ದ ಪುಡಿಗಾಸೂ ಮುಗಿದುಹೋಗುತ್ತದೆ ಎಂಬ ಭಯದಿಂದ ನಡೆದೇ ಮ್ಯೂಸಿಯಂ ತಲುಪುತ್ತಿದ್ದನಂತೆ. ಆದರೂ ಆತ ಅರಿಸ್ಟ್ರೋಕ್ರಾಟ್‌. ಒಂದು ಕಡೆ ಅವನು ಅರಿಸ್ಟ್ರೋಕ್ರಸಿಯನ್ನು ತಾನು ಇಷ್ಟಪಡುತ್ತೇನೆ ಎಂದೂ ಹೇಳಿದ್ದಾನೆ . ಅವನು ಹೇಳುತ್ತಿದ್ದುದು-ಮೇಲೇರುತ್ತಾ ಹೋಗುವ ಮಧ್ಯಮ ವರ್ಗದ ಆಸೆಬುರುಕುತನವನ್ನು ಇಷ್ಟಪಡುತ್ತೇನೆ ಎಂದಲ್ಲ. ಯಾವ ಆಸೆಗಳೂ ಇಲ್ಲದೆ ಯಾವುದೋ ಪುರಾತನವಾದ ಉದಾತ್ತ ಮೌಲ್ಯಗಳಲ್ಲಿ ನಂಬಿಕೆ ಇರುವ ದೊಡ್ಡಸ್ತಿಕೆಯನ್ನು.

ಈ ಇಷ್ಟವೂ ಅವನಿಗೂ ಆಗಿನ ಆಧುನಿಕರಿಗೂ ನಡುವಿನ ವೈರ್ಯಕ್ಕೆ ಕಾರಣವಾಯಿತು. ಯೇಟ್ಸ್‌ನ ಬದುಕು ಮತ್ತು ರಾಜಕೀಯ ನಿಲುವುಗಳ ಬಗ್ಗೆ ಮೇಲೆ ಹೇಳಿದ ವಿಷಯಗಳೆಲ್ಲದರ ಅಂಶವೂ Easter, 1916 ಪದ್ಯದಲ್ಲಿದೆ.

*

Easter, 1916 ಇಂಗ್ಲಿಷ್‌ ಭಾಷೆಯಲ್ಲಿರುವ ಅತ್ಯುತ್ತಮ ರಾಜಕೀಯ ಪದ್ಯಗಳಲ್ಲಿ ಒಂದು. ಐರ್ಲೇಂಡ್‌ಗೆ ಸಂಪೂರ್ಣ ಸ್ವಾತಂತ್ಯ್ರ ಬೇಕು ಎಂದು ವಾದಿಸುತ್ತಿದ್ದ ಉಗ್ರಗಾಮಿಗಳು ಅಂಚೆ ಕಚೇರಿಯೊಂದರ ಮೇಲೆ ದಾಳಿ ನಡೆಸಿದರು. ಇದರಲ್ಲಿ ಯೇಟ್ಸ್‌ಗೆ ಬೇಕಾದವರು ಬಹಳಷ್ಟು ಮಂದಿ ಇದ್ದರು. ಅವನು ಬಹುವಾಗಿ ಪ್ರೀತಿಸಿದದ Maud Gonne ಕೂಡಾ ಈ ಸಂಚಿನಲ್ಲಿ ಪಾಲುದಾರಳು. ಅದು ಮೊದಲನೆಯ ಮಹಾಯುದ್ಧದ ಕಾಲ. ಆ ಯುದ್ಧಕಾಲದ ಎಮರ್ಜೆನ್ಸಿ ಕಾನೂನುಗಳನ್ನು ಇಂಗ್ಲಿಷ್‌ ಪ್ರಭುತ್ವ ಬಳಸಿಕೊಂಡು ಅಂಚೆ ಕಚೇರಿಯನ್ನು ಆಕ್ರಮಿಸಿದವರು ರಾಜದ್ರೋಹವೆಸಗಿದ್ದಾರೆಂದು ಆರೋಪಿಸಿ ಅವರನ್ನೆಲ್ಲ ಗಲ್ಲಿಗೇರಿಸಿತು. ಆ ಹೊತ್ತಿನಲ್ಲಿ ಯೇಟ್ಸ್‌ ಬರೆದದ್ದು Easter,  ೧೯೧೬.

ಈ ಪದ್ಯವನ್ನು ನಾನು ಮೊದಲು ಇಂಗ್ಲಿಷಿನಲ್ಲೇ ಉದ್ಧರಿಸಿ ಮಾತನಾಡುತ್ತೇನೆ. ಲೋಕಾಭಿರಾಮವಾಗಿ ಕವಿತೆ ಪ್ರಾರಂಭವಾಗುತ್ತದೆ. ಸರ್ವೇಸಾಮಾನ್ಯರಾದ ಹುಲುಮಾನವರ ಬಗ್ಗೆ, ಸಜ್ಜನಿಕೆಯ ಉದಾಸೀನದಲ್ಲಿ-

I have met them at close of day
Coming with vivid faces
From counter or desk among grey
Eighteenth-century houses.
I have passed with a nod of the head
Or polite meaningless words,
Or have lingered awhile and said
Polite meaningless words.
And thought before I had done
Of a mocking tale or a gibe
To please a companion
Around the fire at the club,
Being certain that they and I
But lived where motley is worn:
All changed, changed utterly:
A terrible beauty is born.

ಇಲ್ಲಿ ಯೇಟ್ಸ್‌ ಹೇಳುವುದನ್ನು ನೋಡಿ: ಪ್ರತಿ ಸಂಜೆ ಅವರು ಸಿಗುತ್ತಿದ್ದರು, ಅವರ ಮುಖ ಗೆಲುವಿನಿಂದ ಇರುತ್ತಿತ್ತು. ಎಲ್ಲಿಂದ ಬರುತ್ತಿದ್ದರು ಅಂದರೆ ಯಾವುದೋ ಬ್ಯಾಂಕ್‌ನ ಕೌಂಟರ್ ನಿಂದ; ಇವರೆಲ್ಲರೂ ಸಾಮಾನ್ಯ ಗುಮಾಸ್ತರು. ೧೮ನೆಯ ಶತಮಾನದ ಕಂದುಬಣ್ಣದ ಆಫೀಸುಗಳಿಂದ ಬರುವವರು ಇವರು. ನನಗೆ ಎದುರಾದಾಗ ನಾನು ಅವರ ಹತ್ತಿರ ‘ಪೊಲೈಟ್‌ ಮೀನಿಂಗ್‌ಲೆಸ್‌ ವರ್ಡ್ಸ್‌’ ಆಡುತ್ತಿದ್ದೆ. ಇದು ಬಹಳ ಮುಖ್ಯವಾದ ಸಾಲು. ಇಲ್ಲಿ ಯಾರು ಯಾರನ್ನಾದರೂ ಕಂಡಾಗ ಏನನ್ನುತೀವಿ? ಕಾಫಿ ಆಯ್ತಾ, ಊಟಾ ಆಯ್ತಾ,  ಅಲ್ಲಿ ಗುಡ್‌ ಮಾರ್ನಿಂಗ್‌, ಹ್ಯಾವ್‌ ಎ ಗುಡ್‌ ಡೇ ಎನ್ನುತ್ತಾರೆ. ಇವೆಲ್ಲಾ ಪೊಲೈಟ್‌ ಆದರೆ ಅರ್ಥವಿಲ್ಲದ ಪದಗಳು. ಇವಕ್ಕೆ ನಿಜವಾದ ಅರ್ಥವೇನೂ ಇಲ್ಲ. (ಕಾಫಿ ಆಯ್ತಾ ಅಂತ ಯಾರಾದ್ರೂ ಕೇಳಿದರೆ ಆಗದೇ ಇದ್ದರೂ ನಾವು ಆಯಿತು ಎಂದು ಉತ್ತರಿಸಿಬಿಡುತ್ತೇವೆ. ಊಟ ಆಗದೇ ಇದ್ದರೂ ಆಯಿತು ಎನ್ನುತ್ತೇವೆ. )

ಒಂದೊಂದು ಸಾರಿ ಅವರು ಎದುರಾದಾಗ ಯೇಟ್ಸ್‌ ನಿಲ್ಲುತ್ತಿದ್ದ. ನಿಂತು ಏನೋ ಒಂದು ಕತೆ ಹೇಳುತ್ತಿದ್ದ ಅಥವಾ ತಮಾಷೆ ಮಾಡುತ್ತಿದ್ದ. ಅವರಿಗೆ ಸಂತೋಷವಾಗಲಿ ಎಂದು, ಅಥವಾ ಕ್ಲಬ್‌ಗೆ ಹೋಗಿ ಅಲ್ಲಿ ಅಗ್ಗಿಷ್ಠಿಕೆ ಎದುರು ಕುಳಿತು ಅವರ ಜತೆ ಹರಟೆ ಹೊಡೆಯುತ್ತಿದ್ದ. ಎಲ್ಲರ ಹಾಗೆ ಕವಿಯೂ ಕೂಡಾ ಒಂದು ಫೂಲ್ಸ್‌ ಕ್ಯಾಪ್‌ ತೊಟ್ಟಿದ್ದ. ಹೀಗೇ ಎಲ್ಲರೂ ಅದೂ-ಇದೂ ಮಾತಾಡಿಕೊಂಡು ಕೋಡಂಗಿಗಳ ಹಾಗೆ ಇದ್ದುಬಿಟ್ಟವರು. ಅವರೂ ಹೇಗೆ ಬಳುಕು ಥಳುಕಿನ ಲೋಕಾಭಿರಾಮಿ ಸದ್‌ಗೃಹಸ್ಥರೋ ತಾನೂ ಹಾಗೆ ಎಂದುಕೊಂಡಿದ್ದ. ಆದರೆ ಕೊನೆಯ ಎರಡು ಸಾಲುಗಳನ್ನು ನೋಡಿ-All changed , changed utterly. A terrible beauty is born.

ಒಂದೊಂದು ಸಾರಿ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದವರು ನಮ್ಮ ಹಾಗೆಯೇ ನಮ್ಮ ಜತೆ ಇದ್ದವರು ಇದ್ದಕ್ಕಿದ್ದಂತೆಯೇ ಬದಲಾಗಿ ತಮ್ಮನ್ನು ತಾವು ಹುತಾತ್ಮರಾಗಿಸಿಕೊಂಡು ನಮ್ಮಲ್ಲಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಅರೇ ಅವನೇ ಇವನಾ?’ ಎಂದು ನಾವಂದು ಕೊಳ್ಳುವಂತೆ ನನ್ನ ಜತೆ ಕಾಫಿ ಕುಡಿಯುತ್ತಾ ತಿಂಡಿ ತಿನ್ನುತ್ತಾ ಹರೆಟೆ ಹೊಡೆಯುತ್ತಾ ಇದ್ದವನು, ಪೋಲಿ ಮಾತುಗಳಿಗೆ ನಗುತಿದ್ದವನು ಯಾಕೆ ಹೀಗಾದ? ಒಂದು ಘನವಾದ ಸೌಂದರ್ಯ ಹುಟ್ಟಿತು. ಇಲ್ಲಿ ಸೌಂದರ್ಯ ಪದ ಬಹಳ ಅರ್ಥದಲ್ಲಿ ಬಳಕೆಯಾಗಿದೆ. ಅಕಸ್ಮಾತ್ತೆಂದು ನಮಗೆ ಅನ್ನಿಸುವಂತೆ, ಉದಕದಲ್ಲಿನ ಅಗ್ನಿಯಂತೆ ಅವತರಿಸಿಬಿಡುವ ದಿಗ್ಭ್ರಾಂತಿಯಲ್ಲಿ ನಮಗೆ ಎದುರಾಗಿ ನಮ್ಮನ್ನು ಬೆಚ್ಚಿಸಿ ತೋರುವ ಸತ್ಯದ ಬಗ್ಗೆ ಕವಿ ಇಲ್ಲಿ ಮಾತಾಡುತ್ತಿದ್ದಾನೆ.

That woman’s days were spent
In ignorant good will,
Her nights in argument
Until her voice grew shrill.
What voice more sweet than hers
When young and beautiful.
She rode to harriers?

ಆ ಹೆಂಗಸು ಎಲ್ಲರನ್ನೂ ಪ್ಲೀಸ್‌ ಮಾಡಿಕೊಂಡು ಇರುತ್ತಿದ್ದವಳು. ಅವರು ಕೆಲವು ರಾತ್ರಿಗಳು ಎದುರಾಳಿಗಳ ಜೊತೆ ಪ್ಯಾಶನೇಟ್‌ ಆಗಿ ವಾದಿಸುವಾಗ ಅವಳ ಧ್ವನಿ ಕೀರಲಾಗುತ್ತಿತ್ತು. ಆಕೆ ಎಷ್ಟು ಚೆಲುವೆಯಾಗಿದ್ದಳು.

ಅತಿರೇಕದ ನಿಲುವಿನವರ ಬಗ್ಗೆ ಯೇಟ್ಸ್‌ ಅನುಮಾನಪಡುತ್ತಿದ್ದ ತಾನೂ ಅವರಂತೆಯೇ ಅತಿರೇಕಿಯೂ ಆಗಿದ್ದ.

This man had kept a school
And rode our winged horse.
This other his helper and friend
was coming into his force;
He might have won fame in the end,
So sensitive his nature seemed,
So daring and sweet his thought.

ಇವನು ತನಗೆ ಇಷ್ಟವಾದವನು; ಆದರೆ ಮುಂದಿನವರು ತನ್ನ ಪ್ರಿಯತಮೆಯನ್ನು ಕದ್ದವನು; ಹಿಂಸೆ ಕೊಟ್ಟವನು:

This other man I had dreamed
A drunken, vain-glorious lout.
He had done most bitter wrong
To some who are near my heart,
Yet I number him in the song;

ಕೊನೆಯ ಸಾಳು ಕವಿ-ಅಹಮಿನದೆ? ನನಗೆ ಆಗೀಗ ಹಾಗೆನ್ನಿಸುತ್ತದೆ; ಆದರೆ ಹಾಗೆ ಮಾತಾಡಬಲ್ಲ ಸ್ವಾತಂತ್ಯ್ರವನ್ನು ನಮ್ಮಿಂದ ಕವಿ ಬಯಸುತ್ತಾನೆ.  ಇವನು ಹಾಡುವ ಕವಿ; ಸಮುದಾಯದ ಕವಿ.

He, too, has resigned his part
In the casual comedy;
He, too, has been changed in his turn,
Transformed utterly:
A terrible beauty is born.

ಮುಂದಿನ ಸಾಲುಗಳಲ್ಲಿ ಕವಿ ತಾತ್ವಿಕವಾಗಿ ಮಾತಾಡುತ್ತಾನೆ. ಎಲ್ಲ ಬಗೆಯ ಏಕೋದ್ದೇಶದ ತೀವ್ರ ನಿಲುವುಗಳನ್ನು ಸಂಶಯದಿಂದ ನೋಡುತ್ತಾನೆ. ಮಾನವ ಪ್ರೀತಿಯಿಂದ ಹುಟ್ಟಿದ ರಾಜಕಾರಣವೇ – paradoxically – ಜೀವವಿರೋಧಿಯಾದೀತು. ಜೀವದ ಸತ್ಯ ಚಂಚಲವಾದ್ದು. ಜೀವಂತವಾದದ್ದೆಲ್ಲವೂ ಹರಿಯುವ ನೀರಿನಂತೆ ಚಲನಶೀಲವಾದ್ದು.

Hearts with one purpose alone
Through summer and winter seem
Enchanted to a stone
To trouble the living stream.
The horse that comes from the road.
The rider, the birds that range
From cloud to tumbling cloud,
Minute by minute change;
A shadow of cloud on the stream
Changes minute by minute;
A horse-hoof slides on the brim.
Where long-legged moor-hens dive,
And hens to moor-cocks call.
Minute by minute they live:
The stone’s in the midst of all.

Too long a sacrifice
Can make a stone of the heart.
O when may it suffice?
That is heaven’s part, our part
To murmur name upon name,
As a mother names her child
When sleep at last has come
On limbs that had run wild.
What is it but nightfall?
No, no, not night but death;
Was it needless death after all?

ಕೊನೆಯ ಸಾಲಿನ ಅನುಮಾನ ಗಮನಿಸಿ, ಕವಿಯ ಜೀವವನ್ನೇ ಅಲ್ಲಾಡಿಸಿದ ಬಲಿದಾನ ಅನಗತ್ಯವಾಗಿತ್ತೆ? ಕ್ರಾಂತಿಕಾರಿಗೆ ಮಿಡಿಯುವ ಕವಿ ಸುಧಾರಣಾವಾದಯಂತೆಯೂ ಮಾತಾಡುತ್ತಾನೆ.

For England may keep faith
For all that is done and said.

ಮತ್ತೆ ಹಿಂದೆಗೆದು ಹುತಾತ್ಮರ ಕನಸಿಗೆ ಮಿಡಿಯುತಾನೆ.

We know their dream; enough
To know they dreamed and are dead.

ಥಟ್ಟನೇ ಮತ್ತೆ ಅನುಮಾನಿಸುತ್ತಾನೆ:

And what if excess of love
Bewildered them till they died?

ಈ ಎಲ್ಲ ಒಳತೋಟಿಗಳನ್ನೂ ಮೀರಿ ಅವನು ಮಾತಾಡುವ ಬಗೆಯನ್ನೇ ಮುಂದಿನ ಸಾಲುಗಳಲ್ಲಿ ಗಮನಿಸಬೇಕು. ಇದು ವೈಚಾರಿಕತೆಗೆ ದಕ್ಕದ ಕೀರ್ತನೆ, ಸ್ತುತಿ. ಅನುಮಾನದ ‘ಸಂಚಾರಿ’ ಭಾವಗಳನ್ನು ಮೀರಿದ ‘ಸ್ಥಾಯಿ.’

I write it out in a verse –
MacDonagh and MacBride
And Connolly and Pearse
Now and in time to be,
Wherever green is worn,
Are changed, changed utterly:
A terrible beauty is born.

ಕವಿ ತನ್ನ ವೈಯಕ್ತಿಕ ಅನುಮಾನಗಳನ್ನು (ಇವು ತೆವಲುಗಳಾಗಿರಬಾರದು; ಅಭಿಪ್ರಾಯಗಳಾಗಿರಬಹುದು) ಗೆಲ್ಲುವುದು bard ಆಗಿ. ಇಂಗ್ಲಿಷಿನಲ್ಲಿ ಬಾರ್ಡ್ ಸಮುದಾಯದ ವಾಣಿಯಾಗುವ ಕವಿ. ಅವನು ತನ್ನ ಸಮುದಾಯಕ್ಕೆ ಅನ್ಯನಲ್ಲ. ಆದರೆ ಆಧುನಿಕ ಕವಿ ಅನ್ಯ, ಏಕಾಕಿ, ಏಕಾಂಗಿ ಘೋಷಿಸಲಾರ ತನ್ನೊಳಗೇ ಮಾತಾಡಿಕೊಳ್ಳುವ ‘ಸ್ವಗತ’, ಈ ಸ್ವಗತ ನಮಗೆ ಕೇಳಿಸುವಂತೆ ಇರುತ್ತದೆ. ಕೇಳಬೇಕೆಂಬ ಉದ್ದೇಶವೂ ಈ ಮಾತುಗಳಿಗೆ ಇರುವುದಿಲ್ಲ. ಆದ್ದರಿಂದಲೇ ಈ ಮಾತಿಗೆ ಇರುವ ಅಪ್ಪಟತನ ‘ಘೋಷ’ಕ್ಕೆ ಇರಲಾರದೆಂದು ಆಧುನಿಕರ ಮತ.

ಯೇಟ್ಸ್‌ ಈ ಪದ್ಯದಲ್ಲಿ ಮಾತ್ರ ತನ್ನೆಲ್ಲ ಅನುಮಾನಗಳನ್ನು ಸೂಚಿಸುತ್ತಲೇ – ಸಂಚಾರೀ ಭಾವದಲ್ಲಿ ಅತ್ತಿತ್ತ ಅಲೆಯುತ್ತಲೇ – ಕೊನೆಯಲ್ಲಿ ತನಗಾಗದವರನ್ನು ಮಂತ್ರೋಕ್ತ ಎನ್ನಿಸುವಂತೆ, ನಾಮಸ್ಮರಣೆ ಮಾಡುವವನಂತೆ ಅವರ ಹೆಸರು ಕರೆಯುತ್ತಲೇ ಅವರು ಲೋಕಾತೀತರಾದದ್ದನ್ನು ಘೋಷಿಸುತ್ತಾನೆ. ಘೋಷ ಸ್ತುತಿಯಾಗುತ್ತದೆ. ಇವರಲ್ಲಿ ತನ್ನ ಮಾಡ್‌ ಗಾನ್‌ನನ್ನು ತನ್ನಿಂದ ಕಸಿದುಕೊಂಡು ಹಿಂಸಿಸಿದವನೂ ಇದ್ದಾನೆ. ‘Yet I number him in my song’ ಎಂದು ಕವಿ ಹೇಳುವುದನ್ನು ಕೊಂಚ ಕಸಿವಿಸಿಯಲ್ಲಿ ನಾವು ಗಮನಿಸಿದ್ದೇವೆ ಇದು ಕೇವಲ ಔದಾರ್ಯವೋ? ಅಚ್ಚರಿಯೋ?

ಮೀರುವುದು, transcend ಆಗುವುದು ಎಂದರೆ ಏನೆಂಬುದನ್ನು (ಕವಿ ತನ್ನ ಅನುಮಾನಗಳನ್ನು ಮೀರುವುದು. ಹುತಾತ್ಮರು ತಮ್ಮ ನಿತ್ಯದ ‘ದೈನಿಕ’ ಕ್ಷುದ್ರತೆ ಮೀರುವುದು. ಮೀರಿ ಬದಲಾಗಿಬಿಡುವುದು) ನಮ್ಮ ಗಮನಕ್ಕೆ ಒಡ್ಡುವ ಪ್ರಾಮಾಣಿಕತೆಯ ಅಗ್ನಿದಿವ್ಯ ಇಲ್ಲಿದೆ. ಈ ಭಯಂಕರ ಸಾವು ಅನಗತ್ಯವಾಗಿತ್ತೇನೊ ಎನ್ನುವ ಲಿಬರಲ್‌ ರಾಜಕೀಯ ಚಿಂತನೆಗೂ ಈ ಪ್ರಾಮಾಣಿಕತೆಯಲ್ಲಿ ಜಾಗವಿದೆ ಎಂಬುದೇ ಓದುಗನಿಗೆ ಅಚ್ಚರಿಯ ವಿಷಯವಾಗುತ್ತದೆ ಎಂದು ನಾನು ತಿಳಿದಿದ್ದೇನೆ. ಇಂಥಲ್ಲಿ ಪಾಡೂ ಇದೆ ಹಾಡೂ ಇದೆ.

ನೀಟ್ಷೆ-ಕಾವ್ಯದಲ್ಲಿ ಎರಡು ಧಾರೆಗಳನ್ನು ಗುರುತಿಸುತ್ತಾನೆ. ಮೊದಲನೆಯದು ದೇವತೆ ಅಪೋಲೋಗೆ ಸೇರಿದ್ದು. ಇದು ಪ್ರಜ್ಞಾಪೂರ್ವಕವಾದ ವೈಚಾರಿಕತೆಗೆ ಸೇರಿದ್ದು. ಎರಡನೆಯದು ಉತ್ಕಟತೆಯಲ್ಲಿ ಮೈಮರೆಯುವ ದೇವತೆ ಡಯೋನಿಸಿಸ್‌ಗೆ ಸೇರಿದ್ದು. ವೈಚಾರಿಕತೆಗೆ ಅತೀತವಾದ್ದು. ಈ ಕವನದಲ್ಲಿ ಅನುಮಾನಿಸುವ ಅಪೋಲೋ, ಉತ್ಕಟ ಘೋಷದ ಡಯಾನಿಸಸ್‌ ಇಬ್ಬರೂ ಇದ್ದಾರೆ.

ಆಧುನಿಕ ಕವಿ ಯೇಟ್ಸ್‌ ಪುರಾತನ Bard ನಂತೆ ಘೋಷಿಸುತ್ತಾನೆ. ಅಂದರೆ ತನ್ನ ಅನುಮಾನಗಳು ಮುಖ್ಯವಲ್ಲ ಎಂದು ತಿಳಿಯಲು ಹಾತೊರೆಯುವಂತೆ, ಹಾತೊರೆದು ಗೆದ್ದವನಂತೆ ಘೋಷಿಸುತ್ತಾನೆ. ಇದು ನನ್ನ ಪಾಲಿಗೆ ಅದ್ಭುತವೆನ್ನಿಸಿದೆ. ‘ಎನೇ ಇರಲಿ; ಬಲಿದಾನದ ಮೂಲಕ ನಿತ್ಯದ ಹಸಿರಿನಂತೆ ಉಳಿಯುವವರು, ನಾನು ಮೂರ್ಖರೆಂದು ತಿಳಿದಿದ್ದ ಇವರು; ನಿಜದಲ್ಲಿ ಮೂರ್ಖರೂ ಆಗಿದ್ದ ಇವರು’ ಎನ್ನುವುದೂ ನಮಗೆ ನಿಜವೆನ್ನಿಸುವಂತೆ ಉತ್ಕಟಗೊಳ್ಳುತ್ತಾನೆ. ಸಮುದಾಯದ ವಾಣಿ, ಆತ್ಮದ ಅನುಮಾನದ ಮಾತು ಹೆಣೆದುಕೊಂಡೇ ಒಟ್ಟೊಟ್ಟಾಗಿಯೇ ನಮಗೆ ಎದುರಾಗುತ್ತದೆ.

ಆದರೆ ಸಮಕಾಲೀನಳಾದ ಅವನೆ ಪ್ರಿಯತಮೆ ಮಾಡ್‌ಗಾನ್‌ಗೆ ಈ ಪದ್ಯದಲ್ಲಿ ಯೇಟ್ಸ್‌ ಬ್ರಿಟಿಷರ ಪರ ಎನ್ನಿಸಿತು. ಬ್ರಿಟಿಷರಿಗೆ ಅವನು ರಾಜದ್ರೋಹಿಗಳನ್ನು ಓಲೈಸಿದ ಎನ್ನಿಸಿತು. ತತ್ಕಾಲಕ್ಕೂ ಶಾಶ್ವತಕ್ಕೂ ಒಟ್ಟಾಗಿ ಸಲ್ಲಲೆಂದು ಬರೆಯುವ ಲೇಖನ ಪಾಡು. ಹಾಡಾಗುವ ಪಾಡು(?) ಈ ಪದ್ಯದಲ್ಲಿ ಇದೆ.

ಆದ್ದರಿಂದಲೇ ನನ್ನ ಪಾಲಿಗೆ ಕವಿಗೂ ರಾಜಕೀಯಕ್ಕೂ ಇರುವ ಸಂಬಂಧದ ಬಗ್ಗೆ ಇದೊಂದು ಅನನ್ಯ ಕೃತಿ.

ಈ ಪದ್ಯದ ಜೊತೆ ಕನ್ನಡದ ಶ್ರೇಷ್ಢ ಪದ್ಯಗಳಲ್ಲಿ ಒಂದಾದ ಕಂಬಾರರ ‘ಮರೆತೇನೆಂದರೆ ಮರೆಯಲಿ ಹ್ಯಾಂಗಾ/ಮಾವೊತ್ಸೆ ತುಂಗ’ ಪದ್ಯವನ್ನು ಓದಬೇಕು. ಇದೂ ರಾಜಕೀಯ ಪದ್ಯವೇ. ಆದರೆ ಕಂಬಾರರ ಜಾನಪದ ಧಾಟಿಯಿಂದಾಗಿ ಇಲ್ಲಿ ಸ್ಥಾಯಿ ಯಾವುದು ಸಂಚಾರಿ ಯಾವುದು ಹೇಳಲಾಗದು. ಮಾವೋ ಬಗ್ಗೆ ಬೆರಗಿನ ಆರಾಧನಾ ಭಾವದ ಮಾತುಗಳೇ ಹಾಸ್ಯದ ಮಾತುಗಳೂ ಆಗುತ್ತವೆ. ಕೋಡಂಗಿಯೊಬ್ಬ ಹೊಗಳುತ್ತಲೇ ತೆಗಳುವ, ತೆಗಳುವುದೂ ಹೊಗಳಿಕೆಯಂತೆ ಕಾಣುವ ಈ ಪದ್ಯದ ಧಾಟಿ ಅಪೂರ್ವವಾದುದು. ಮೌಖಿಕ ಸಂಪ್ರದಾಯದಲ್ಲಿ ಸಾಧುವಾದ, ಸಾಧ್ಯವೂ ಆದ ಬೆರಗಿನಂತೆ ಕಾಣುವ ಸ್ಥಾಯಿ ಈ ಪದ್ಯದಲ್ಲಿ ಎಲ್ಲ ಅನುಮಾನಗಳನ್ನೂ ಸಹಜವೆಂಬಂತೆ ನುಡಿಯುತ್ತದೆ. ನಾನು ಚೀನೀ ಲೇಖಕರೊಬ್ಬರಿಗೆ ಹೇಳಿದ್ದೆ-ಮಾವೋ ಸಾಂಸ್ಕೃತಿಕ ಕ್ರಾಂತಿಯಲ್ಲಿ ನರಳಿದ ಲೇಖಕನೊಬ್ಬನಿಗೆ- ‘ನಮ್ಮ ಕಂಬಾರರಂತೆ ಮಾವೋ ಬಗ್ಗೆ ಒಬ್ಬ ಚೀನೀ ಲೇಖಕನಿಗೆ ಬರೆಯುವುದು ಸಾಧ್ಯವಾದರೆ ಅವನು ಬಿಡುಗಡೆ ಪಡೆದಂತೆ. ಹೊಗಳಿಕೆ, ಹೀಯಾಳಿಕೆಗಳ ತುದಿಗಳಲ್ಲಿ ಅವರು ಕಾಣುವ ಮಾವೋ ನಮ್ಮ ಜಾನಪದ ಧಾಟಿಯಲ್ಲಿ ಎರಡೂ ಆಗಿರದ, ಒಬ್ಬ ಪುರಾಣದ ಪಾತ್ರವಾಗಿಬಿಡುತ್ತಾನೆ. ಇಲ್ಲ ಸಂಚಾರೀಭಾವದ ಕೊಂಕು ಮಾತುಗಳು ಬೆರಗಿನ ಮಾತುಗಳೂ ಆಗಿ ಯಾವುದು ಸ್ಥಾಯಿ ಯಾವುದು ಸಂಚಾರಿ ಎಂದು ವಿಂಗಡಿಸಲಾರದಂತೆ ಹೆಣೆದುಕೊಂಡಿವೆ.

ಹಳದಿ ಬಿತ್ತಿದಿ ಹಳದಿಯ ಬೆಳೆದಿ
ಮುಳ್ಳ ಬೇಲಿಗೂ ಹೂವಿನ ಹಳದಿ
ಬಣ್ಣದ ಹೆಸರು ಬದಲು ಮಾಡಿದಿ
ಕಣ್ಣ ಕಾಮಾಲೆ ತಿಳಿಯದೆ ಹೋದಿ
ಮರೆತೇನಂದರ ಮರೆಯಲಿ ಹೆಂಗಾ ||

ಹಸಿದ ಹುಬ್ಬಿನ ತಿರುಕರ ಅರಸಾ
ಡೊಳ್ಳ ಹೊಟ್ಟಿಯ ಹಸಿದವರರಸಾ
ದಿನಾ ಹುಟ್ಟಿದಿ ದಿನಕೊಮ್ಮಿ ಸತ್ತಿ
ಸುದ್ದಿಯ ಕಣ್ಣ ಒದ್ದಿ ಮಾಡಿದಿ
ಗ್ಲೋಬಿನರ್ಧಕ ಸಾಯೊದ ಕಲಿಸಿ
ಸ್ವಥಾ ಸಾಯಲಿಕೆ ಬಾರದೆ ಹೋದಿ
ಕಟ್ಟಿದ ಗೋಡೆಯ ಕಳಸವೇರಿತೊ
ಬದುಕಿದ ಜೀವ ಕಥೆಯಾಗಿತ್ತೊ
ಬಟಾ ಬಯಲಿನಾಗ ಮಟಾ ಮಾಯಾಗಿ
ಬೆಂಕಿ ಆರಿ ಬರಿ ಬೆಳಕುಳಿದಿತ್ತೊ

ಆದರೆ ಯೇಟ್ಸ್‌ ಕವಿ ಸಂಕಟದ ಮಾತುಗಳಲ್ಲಿ ಕಂಡುಕೊಂಡ ಬೆರಗಿನ ಸ್ಥಾಯಿಯನ್ನು ಕಂಬಾರರು ಒಂದು ಜಾನಪದ performance ಮಾಡಿಬಿಡುತ್ತಾರೆ. ಈ ವ್ಯತ್ಯಾಸವೂ ಕಾಲಕ್ಕೆ ಎದುರಾಗಬೇಕಾದ ಲೇಖಕನಿಗೆ ಮುಖ್ಯವಾದ್ದು. ನನ್ನ ಆಯ್ಕೆ ಯೇಟ್ಸ್‌ನ ಆಧುನಿಕ ವೈಚಾರಿಕತೆಯದು. ಕಂಬಾರರನ್ನು ಮೆಚ್ಚುತ್ತಲೇ ನಾನು ಹೇಳುವ ಮಾತು ಇದು.

—-
(ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಮಾಡಿದ ಪಾಠ (೨೦೦೬) – ಬರಹಕ್ಕೆ ರೂಪಾಂತರ: ಗೆಳೆಯ ಇಸ್ಮಾಯಿಲ್‌.)