ವಿಲಿಯಂ ಬಟ್ಲರ್ ಯೇಟ್ಸ್‌ನನ್ನು ಈ ಶತಮಾನದ ಅತ್ಯುತ್ತಮ ಇಂಗ್ಲಿಷ್‌ ಕವಿ ಎನ್ನುತ್ತಾರೆ. ಎಲಿಯಟ್‌ ಕೂಡ ಅವನನ್ನು ಹಾಗೆಯೇ ತಿಳಿದಿದ್ದ ಎಂಬುದು ಗಮನಾರ್ಹ. ಯಾಕೆಂದರೆ ಈ ಶತಮಾನದ ಅತ್ಯಂತ ಪ್ರತಿಭಾಶಾಲಿ ಲೇಖಕರಲ್ಲಿ ಎಲಿಯಟ್‌ ಮುಖ್ಯನಾದವನು; ಯೇಟ್ಸ್‌ಗಿಂತ ಇವನೇ ದೊಡ್ಡಕವಿ ಎಂಬುದು ಹಲವು ವಿಮರ್ಶಕರ ಮತ. ಇಂಗ್ಲಿಷ್‌ ಭಾಷೆಯ ವಿದ್ಯಾರ್ಥಿಗೆ ಇದೊಂದು ತೊಡಕಿನ ಪ್ರಶ್ನೆ. ಜೀವನದ ಆಸಕ್ತಿಗಳ ಹರಹು ಆಳದಲ್ಲಿ ಯೇಟ್ಸ್‌ನ ವೈವಿಧ್ಯ ಅಸಾಮಾನ್ಯವೆನ್ನಿಸಿದರೆ, ಪಕ್ವ ಮನಸ್ಸಿನ ಏಕಾಗ್ರತೆಯಲ್ಲಿ ಒಂದು ಜನಾಂಗದ ಸಂವೇದನೆಯ ದಿಕ್ಕನ್ನೇ ಬದಲಾಯಿಸಿದ ಪ್ರಭಾವಶಾಲಿಗಳಲ್ಲಿ ಎಲಿಯಟ್‌ನ ಯಶಸ್ಸು ಮಹತ್ವದ್ದು. ಯೇಟ್ಸ್ ತನ್ನ ಆಸಕ್ತಿಗಳನ್ನು ಹಂಚಿ ಹರಡಿಕೊಳ್ಳುತ್ತ ಬರೆದ; ಬರೆಯುತ್ತ ಬದಲಾಗುತ್ತಾ ಹೋದ. ಅವನ ಭಾವನಾಲೋಕದಲ್ಲಿರುವಷ್ಟು ವಿರೋಧಗಳು ಬೇರೆ ಯಾವ ಕವಿಯಲ್ಲೂ ಕಾಣದು. ಆದರು ಇಡಿಯಾಗಿ ಅವನ ಕಾವ್ಯವನ್ನು ನೋಡಿದಾಗ ಈ ವಿರೋಧಗಳನ್ನೆಲ್ಲ ದಕ್ಕಿಸಿಕೊಂಡು ಹೊಂದಿಸಿಕೊಳ್ಳುವ ಸಮಗ್ರತೆ ಒಟ್ಟಂದಗಳು ಅವನ ಕಾವ್ಯಕ್ಕಿದೆ. ಯೇಟ್ಸ್‌ನದು ಹೀಗೆ ಶ್ರೀಮಂತ ಪ್ರತಿಭೆಯಾದರೆ, ಎಲಿಯಟ್‌ನದು ಅತ್ಯಂತ ಸಂಯಮದ, ಎಲ್ಲೂ ವ್ಯಯವಾಗದ, ಒಂದು ದೀರ್ಘ ಧ್ಯಾನವೆನ್ನಿಸುವ ಪ್ರತಿಭೆ.

೧೯ನೆಯ ಶತಮಾನದಲ್ಲಿ ೩೫ ವರ್ಷ, ೨೦ನೆಯ ಶತಮಾನದಲ್ಲಿ ೩೯ ವರ್ಷ ಬದುಕಿದ ಕವಿ ಯೇಟ್ಸ್ ಹುಟ್ಟಿದ್ದು ಐರ್ಲೆಂಡಿನಲ್ಲಿ. ಅವನ ಕಾವ್ಯ ಜೀವನದ ಬೆಳವಣಿಗೆಯನ್ನು ಮುಖ್ಯವಾಗಿ ನಾಲ್ಕು ಘಟ್ಟಗಳಲ್ಲಿ ಗುರುತಿಸಬಹುದು. ಮೊದಲನೆಯದು, ಪ್ರೀರ್ಯಾಫಲೈಟ್‌ ಹಾಡಿನ ಬಗೆಯದು. ಬದುಕು ಗೊಂದಲಮಯವಾದದ್ದು, ಒರಟಾದದ್ದು, ಹಸಿಯಾದದ್ದು, ಆದರೆ ಕಲೆಗಾಗಿ ಮುಡಿಪಿಟ್ಟ ಜೀವನ ಪರಿಶುದ್ಧವಾದದ್ದು ಎಂಬ ಆ ಕಾಲದ ನಂಬಿಕೆಯಿಂದ ಹುಟ್ಟಿದ ಸಂವೇದನೆಯಲ್ಲಿ ಯೇಟ್ಸ್ ಬರೆಯಲು ತೊಡಗಿದ. ಅವನ ತಂದೆಯ ಪ್ರಭಾವ ಅವನ ಮೇಲೆ ಗಾಢವಾಗಿತ್ತು. ರಾಜಕೀಯ, ಸಾಮಾಜಿಕ ಗೊಂದಲಗಳಿಗೆ ಕಾವ್ಯದಲ್ಲಿ ಎಡೆಯಿಲ್ಲವೆಂದು ಯೇಟ್ಸ್‌ನ ತಂದೆ ತಿಳಿದಿದ್ದ. ೧೯೦೪ನೆಯ ಇಸವಿತನಕ ಯೇಟ್ಸ್‌ ಜಗತ್ತಿಗೇ ಗೌರವಾನ್ವಿತನಾದ ಕವಿಯೊಬ್ಬ ಹೀಗೆ ಹಸಿಯಾಗಿ, ನಗ್ನವಾಗಿ ತನ್ನ ಮಾನವೀಯ ಸ್ಥಿತಿಯನ್ನು ನಮ್ಮ ಮುಂದಿಡುವುದು ಅಸಾಮಾನ್ಯವಾದದ್ದು ಬಹಳ ಜನರನ್ನು ಘನತೆ ಗೌರವಗಳು ಗೊಡ್ಡುಮಾಡುವಂತೆ ಯೇಟ್ಸ್‌ನನ್ನು  ಮಾಡಲಿಲ್ಲ. ಅವನ ಇಳಿಗಾಲದ ಕಾವ್ಯವನ್ನು ‘ಹುಚ್ಚಿನ ಕಾವ್ಯ’ವೆನ್ನುತ್ತಾರೆ. ಇದೇ ಅವನ ಕಾವ್ಯದ ನಾಲ್ಕನೆಯ ಘಟ್ಟ.

ಭಾರತೀಯ ವೇದಾಂತದಿಂದ, ಅನುಭಾವದಿಂದ ಪ್ರಭಾವಿತನಾದ ಯೇಟ್ಸ್, ಟಾಗೂರರ ಗೀತಾಂಜಲಿಗೆ ಮುನ್ನುಡಿ ಬರೆದಿದ್ದಾನೆ. ಆದರೆ ಭಾರತೀಯ ಸಂವೇದನೆಯ ಆಕಾರಹೀನತೆ, ಸಂಘರ್ಷದ ಬಗೆಗೆ ಅದು ತಾಳುವ ಉಪೇಕ್ಷೆ ಯೇಟ್ಸ್‌ಗೆ ಕಿರಿಕಿರಿಯುಂಟುಮಾಡಿದ್ದೂ ಇದೆ. ಭಾರತೀಯನೊಬ್ಬ ಅವನ ಬಳಿ ಸಂದೇಶ ಕೇಳಲು ಹೋದಾಗ ಯೇಟ್ಸ್ ಕತ್ತಿಯೊಂದನ್ನು ಹಿರಿದು (ಪ್ರಾಯಶಃ ‘ಜೀವಾತ್ಮ ಸಂವಾದ’ದ ಸೆಟೋನದು) ‘conflict, more conflict’ ಎಂದಿದ್ದನಂತೆ. ಇವನ ಹುಚ್ಚಾಟ, ಹುಡುಗಾಟ, ಅಲೆದಾಟಗಳು ದಿಗ್ಭ್ರಮೆ ಹುಟ್ಟಿಸುತ್ತವೆ. ವೈಜ್ಞಾನಿಕ ಯುಗದ ತಾರ್ಕಿಕತೆ ಮತ್ತು ನಿರೀಶ್ವರವಾದದ ವೈಚಾರಿಕತೆ ತನ್ನ ಕಲ್ಪನೆಯನ್ನು ಸೊರಗುವಂತೆ ಮಾಡಿತು ಎನ್ನುವ ಯೇಟ್ಸ್, ಮಾಂತ್ರಿಕರ ಹಿಂದೆ ಅಲೆದ; ಯಕ್ಷ ಯಕ್ಷಿಣಿಯರನ್ನು ಧ್ಯಾನಿಸಿ ಕರೆದು, ಅವರಿಂದ ತನ್ನ ಕಾವ್ಯಕ್ಕೆ ಸಂಕೇತಗಳನ್ನು ಪಡೆಯುತ್ತಿದ್ದೇನೆಂದು ನಂಬಿದ. ಅವನ ಹೆಂಡತಿ ಅವನ ಪರವಾಗಿ ಬರೆದುಕೊಂಡ ಈ ‘ವಿಷನ್‌’ ಎನ್ನುವ ಪುಸ್ತಕ ಯೇಟ್ಸ್‌ನ ಲೋಕದೃಷ್ಟಿಯನ್ನು ಹೇಳುವ ಪುರಾಣ. ಆದರೆ ತಾನು ಕೇವಲ ವಾಹಕವಾಗಿ ಹೀಗೆ ಪಡೆದೆನೆಂದು ಅವನು ತಿಳಿದಿದ್ದ ದರ್ಶನವನ್ನು ಅನುಮಾನಿಸುತ್ತಲೇ ಉಪಯೋಗಿಸಿಕೊಂಡನೆಂಬುದು ನಮಗೆ ಮುಖ್ಯ. ಈ ಮಾಂತ್ರಿಕತೆಯಲ್ಲಿ ಅವನಿಟ್ಟಿದ್ದ ವಿಶ್ವಾಸ ಹಾಗೂ ಅನುಮಾನ-ಹಲವು ವಿಮರ್ಶಕರಿಗೆ ತಲೆನೋವಿನ ಸಂಗತಿ. ಆದರೆ ಅವುಗಳಿಂದ ಅವನು ಪಡೆದ ಪ್ರೇರಣೆ ಪೋಷಣೆಗಳು ರಕ್ತ ಮಾಂಸ ತುಂಬಿದ ಕಾವ್ಯವಾದಾಗ ಅವನ ಬರವಣಿಗೆ ನಮ್ಮ ಕಾಲದ ವೇದನೆ, ರಾಜಕೀಯ ಕಷ್ಟಗಳು, ಆಧ್ಯಾತ್ಮಿಕ ಸಮಸ್ಯೆಗಳು, ಪ್ರೇಮ ದ್ವೇಷಗಳು-ಎಲ್ಲವನ್ನೂ ಸಾರದಲ್ಲಿ ಹಿಡಿದು ಕೊಡುತ್ತದೆ. ಪಕ್ಕಾ ವಿಚಾರವಾದಿಯಾದ ಇನ್ನೊಬ್ಬ ಐರಿಷ್‌ ಲೇಖಕ ಬರ್ನಾರ್ಡ್ ಶಾನನ್ನು ಒಂದು ಹೊಲಿಗೆಯ ಯಂತ್ರಕ್ಕೆ ಹೋಲಿಸಿದ ಯೇಟ್ಸ್. ಹೀಗೆ ಮಾಂತ್ರಿಕತೆ, ಮೂಢನಂಬಿಕೆ, ಉತ್ಕಟ ಪ್ರೇಮ, ಜಾನಪದ ಕಥೆಗಳು ಇತ್ಯಾದಿಗಳ ಮೂಲಕ ತನ್ನ ಪ್ರಪಂಚದ ರಹಸ್ಯವನ್ನು ರಹಸ್ಯವನ್ನು ಮರಳಿಪಡೆಯಲು ಯತ್ನಿಸುತ್ತಾನೆ. ಆದರೆ ಮರೆಯಬಾರದ ಸಂಗತಿಯೆಂದರೆ-ಇವತ್ತಿನ ಕವಿಯಂತೆಯೇ ಬರೆಯುತ್ತಾನೆ.

ತನ್ನ ಅಂತರ್ಮುಖಿ ಸ್ವಭಾವಕ್ಕೆ ಸಹಜವಾಗಿದ್ದ ಹಕ್ಕಿಯ ಏರುವ ಕ್ರಮದ ಜೊತೆಗೆ ಜೀವನ ಸಂಸರ್ಗದ ಬಂಡಿಯಂತೆಯೂ ತನ್ನ ಕಾವ್ಯವನ್ನು ನಡೆಸಿದ ಯೇಟ್ಸ್ ಎಲ್ಲ ಪ್ರೇರಣೆಗಳಿಗೂ ತನ್ನನ್ನು ಬಿಚ್ಚಿಕೊಳ್ಳುತ್ತಲೇ, ತನಗೆ ಕೇಂದ್ರವಾದುದ್ದನ್ನೂ ಪಡೆದ. ಒಡೆ ಒಡೆಯುತ್ತಲೇ ಇಡಿಯಾದ.

ಯೇಟ್ಸ್ ಮಾನವ ಇತಿಹಾಸವನ್ನು ಒಂದು ಸುತ್ತುವ ಚಕ್ರವಾಗಿ, ಅವನ ಭಾಷೆಯಲ್ಲಿ ಹೇಳುವುದಾದರೆ ಜೈರ್ ಆಗಿ ಕಂಡ. ಚರಿತ್ರೆ ಅವನಿಗೆ ಉಳಿದ ಭೌತವಾದೀ ವಿಚಾರವಾದಿಗಳಿಗೆ ಕಂಡಂತೆ ಏರಿಕೆಯಲ್ಲಿ ಮುಂದುವರಿಯುತ್ತ ಹೋಗುವ ನೇರವಾದ ರೇಖೆಯ ಪ್ರಗತಿಪಥವಾಗಿರಲಿಲ್ಲ. ಎಲ್ಲವೂ ಬಹಿರ್ಮುಖವಾಗಿಬಿಡುವ ಸೂರ್ಯ ಒಂದು ಧ್ರುವವಾದರೆ, ಎಲ್ಲವೂ ಅಂತರ್ಮುಖವಾಗುವ ಚಂದ್ರ ಇನ್ನೊಂದು ಧ್ರುವ. ಎರಡು ತುದಿಗಳಲ್ಲೂ ಜೀವವಿಲ್ಲ. ಪೂರ್ಣಬಹಿರ್ಮುಖವಾದ, ಪೂರ್ಣಅಂತರ್ಮುಖವಾದ ಈ ಎರಡು ಅವಸ್ಥೆಗಳ ನಡುವೆ ಹದಿನೈದು ಚಂದ್ರನ ಸ್ಥಿತಿಗಳಲ್ಲಿ ಅವನು ಚರಿತ್ರೆಯನ್ನಿಟ್ಟು ನೋಡುತ್ತಾನೆ. ಎಲ್ಲರೂ ಸೂರ್ಯ ಚಂದ್ರರ ವೈವಿಧ್ಯದ ಬೆರಕೆಗಳೇ ಎಂದು ತನ್ನ ಗೆಳೆಯರನ್ನೂ ಹಾಗೇ ವಿಂಗಡಿಸುತ್ತಾನೆ. ಸಣ್ಣ ತುದಿಯಿಂದ ದೊಡ್ಡ ಸುರುಳಿಗಳಾಗುತ್ತ ಹೋಗುವ ಜೈರ್ ಈಗ ಸೂರ್ಯಾಭಿಮುಖವಾಗಿದೆ. ಅದರ ಬಹಿರ್ಮುಖತೆಯ ಅಂತಿಮಾವಸ್ಥೆಯಲ್ಲಿ ಮತ್ತೆ ಅದು ಅಂತರ್ಮುಖತೆಗೆ ತಿರುಗಿಬಿಡುತ್ತದೆ. ಅವನು ಹೇಳುವಂತೆ ‘ಈವರೆಗೆ ಬಂದು ಹೋದವೆಲ್ಲವೂ ಮತ್ತೆ ಬರುತ್ತವೆ.’

ಯೇಟ್ಸ್‌ನಲ್ಲಿ ನಾವು ಮುಖ್ಯವಾಗಿ ಮನಗಾಣಬೇಕಾದ್ದು: ಅವನ ಸಿದ್ಧಾಂತಗಳು ಮುಖ್ಯವಲ್ಲ, ಅವನ ಕಾವ್ಯ ಮುಖ್ಯ. ಬದುಕಿನ ರಹಸ್ಯದಲ್ಲಿ, ಪ್ರಸ್ತುತ ವಾಸ್ತವದಲ್ಲಿ ಅವನನ್ನು ಗಾಢವಾಗಿ ತೊಡಗಿಸುವಂತೆ ಅವನ ಸಿದ್ಧಾಂತಗಳು ದುಡಿಯುತ್ತವೆ. ಆ ಸಿದ್ಧಾಂತಗಳು ಅವನನ್ನು ಅನುಭವದಿಂದ ವಂಚಿಸುವುದಿಲ್ಲ-ಅನುಭವವನ್ನು ಕಾಣುವ ಕಿಂಡಿಗಳಾಗುತ್ತವೆ.

‘ಕಾವ್ಯವನ್ನು ಭಾಷಾಂತರಿಸುವುದು ಅಸಾಧ್ಯ. ಹಾಗೆಯೇ, ಭಾಷಾಂತರಿಸದೇ ಇರುವುದೂ ಅಸಾಧ್ಯ.

ನನ್ನ ಸ್ವಂತ ಪದ್ಯಗಳೆಂದೂ ನನಗೆ ತೃಪ್ತಿಕೊಟ್ಟಿದ್ದಿಲ್ಲ… ನನ್ನ ಕಾವ್ಯಸಂವೇದನೆಯನ್ನು ಭಾಷಾಂತರಗಳ ಮೂಲಕ ನಾನು ವ್ಯಕ್ತಪಡಿಸುತ್ತೇನೆ. ಸ್ವತಃ ಕವಿಗಳಾಗಿದ್ದು ಭಾಷಾಂತರಕಾರರೂ ಆದ ಇತರರಿಗಿಂತ ನನಗೆ ಹೆಚ್ಚಿನ ಅನುಕೂಲತೆಯಿದೆ; ಮೂಲ ಕವನವನ್ನು ಸ್ವಂತದ್ದೆಂಬಂತೆ ಸ್ವಾಧೀನಪಡಿಸಿಕೊಳ್ಳುವ ಪ್ರಲೋಭನೆ ನನ್ನಂಥವರಿಗೆ ಇರುವುದಿಲ್ಲ. ಆದರೆ ತನ್ನದೇ ಆದ ಅಸ್ತಿತ್ವ ಭಾಷಾಂತರಕಾರನ ಸ್ವತ್ತಾಗದಂತೆ ಕವನವನ್ನು ಹೇಗೆ ತರ್ಜುಮೆ ಮಾಡಬೇಕೆಂಬುದೇ ನಾನು ಎದುರಿಸುವ ಬಹುದೊಡ್ಡ ಕಷ್ಟ.

ಶೇಕ್ಸ್‌ಪಿಯರ್ ನನ್ನು ಇಪ್ಪತ್ತು ಅಥವಾ ಮೂವ್ವತ್ತು ವರ್ಷಗಳಿಗೊಮ್ಮೆ ಭಾಷಾಂತರಿಸಬೇಕು. ಯಾಕೆಂದರೆ ಭಾಷೆಯೆಂಬ ಸಾಧನ ಬದಲಾಗುತ್ತಲೇ ಇರುತ್ತದೆ. ಈಗ ನಾವು ಶೇಕ್ಸ್‌ಪಿಯರ್ ನನ್ನು ನೂರು ವರ್ಷಗಳ ಹಿಂದಿಗಿಂತ ಹೆಚ್ಚು ಸಮಂಜಸವಾಗಿ ಭಾಷಾಂತರಿಸಬಲ್ಲೆವು. ಯಾಕೆಂದರೆ ಮಲಾರಾರ್ಮ್, ಲಾಫೋರ್ಜ್‌ನಂಥವರು ಅಲೆಕ್ಸಾಂಡ್ರಿನ್‌ ವೃತ್ತವನ್ನು ಭೇದಿಸಿ ಈ ಶತಮಾನದ ಪ್ರಾರಂಭದಲ್ಲಿ ಸ್ವತಂತ್ರ ಛಂದಸ್ಸನ್ನು ಸೃಷ್ಟಿಸಿದರು. ‘ಗಂಭೀರ ಶೈಲಿ’ಯನ್ನು ಅವರು ತ್ಯಜಿಸಿದ್ದರಿಂದ, ಪ್ರತಿ ಕವಿಯೂ ಭಾಷೆಯನ್ನು ತನ್ನ ಉಸಿರಾಟದ ಸಾಧನ ಮಾಡಿಕೊಳ್ಳುವುದು ಸಾಧ್ಯವಾಯಿತು. ಫ್ರೆಂಚ್‌ ಭಾಷೆ ತನ್ನ ಬಿಗುವನ್ನು ಕಳೆದುಕೊಂಡಿತು….

ಅತೀ ಸರಳವಾದ, ತಿಳಿಯಾದ ‘The sun is above the roof, so blue, so calm’- ಇದು ಭಯಂಕರ ಕಷ್ಟ. ಅಥವಾ ಉದಾಹರಣೆಗೆ ಬ್ಲೇಕ್‌ನ ‘Songs of innocence’. ಬಿಗಿಯಾದ ಬಂಧವಿದ್ದಲ್ಲಿ ನೀವದರ ನೆರವು ಪಡೆಯಬಹುದು; ಏನಿಲ್ಲದಿದ್ದರೂ ಬಂಧವಾದರೂ ಉಳಿದಿರುತ್ತದೆ. ಆ ಕಾರಣದಿಂದಲೇ ಶೇಕ್ಸ್‌ಪಿಯರ್ ಮತ್ತು ಬೈಬಲುಗಳು ಕೆಟ್ಟ ಭಾಷಾಂತರದಲ್ಲೂ ಓದಿಸಿಕೊಂಡುಬಿಡುತ್ತವೆ. ಆದರೆ ತಮ್ಮ ನಾದ ಶಕ್ತಿಯಲ್ಲೆ ಜೀವಿಸುವ ಕೆಲವು ಭಾವಗೀತೆಗಳಿರುತ್ತವೆ; ವಸ್ತು ಮತ್ತು ನಾದ ಇವುಗಳಲ್ಲಿ ಅನ್ಯೋನ್ಯ. ಶಬ್ದಗಳ ಜೊತೆ ಜೊತೆಗೇ ಹುಟ್ಟುವ ಈ ಪದ್ಯಗಳಲ್ಲಿ ನಾದದ ಉತ್ಪನ್ನದಲ್ಲೆ ಕವನದ ಅರ್ಥ  ರೂಪುಪಡೆಯುತ್ತದೆ. ಇನ್ನೊಂದು ಭಾಷೆಯಲ್ಲಿ ಇವಕ್ಕೆ ತತ್ಸಮವೆನ್ನಿಸುವ ರೂಪ ಕೊಡುವುದು ಅಸಾಧ್ಯ. ಆದರೂ ಭಾಷಾಂತರಗಳು ಇಲ್ಲದಿದ್ದಲ್ಲಿ ಪ್ರಪಂಚಕ್ಕೆ ತನ್ನ ಅತ್ಯುತ್ತಮ ಕಾವ್ಯದ ಆಚಾರ್ಯ ಕೃತಿಗಳು ತಿಳಿಯದೇ ಹೋಗಿರುತ್ತಿದ್ದವು.’

(International Herald Tribune, 4.3.1981)

ಶೇಕ್ಸ್ ಪಿಯರ್, ಮೆಲ್‌ವಿಲ್‌, ಹಾಪ್‌ಕಿನ್ಸ್, ಎಲಿಯಟ್‌ ಮತ್ತು ಯೇಟ್ಸ್ ರನ್ನು ಫ್ರೆಂಚಿಗೆ ಭಾಷಾಂತರಿಸಿದ ಪಿಯರೆ ಲೇರಿಸ್‌ ಎಂಬಾತನ ಈ ಮಾತುಗಳು ನನ್ನ ಸಾಧನೆ ಮಿತಿಗಳೆರಡರನ್ನೂ ತಿಳಿಯಲು ಉಪಯುಕ್ತವಾಗಿವೆ. ದಟ್ಟವಾದ ಬಂಧ ಮತ್ತು ವಸ್ತುಗಳಿರುವ ಯೇಟ್ಸ್‌ನ ಪದ್ಯಗಳು ನನ್ನ ಭಾಷಾಂತರದ ಮಿತಿಗಳನ್ನು ಮೀರಿ ಉಳಲಿಯುತ್ತವೆಂಬ ಭರವಸೆಯಿದೆ. ‘ಮಗಳಿಗಾಗಿ ಪ್ರಾರ್ಥನೆ’ ಎಂಬಂಥ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪದ್ಯಗಳಲ್ಲಂತು ಯೇಟ್ಸ್‌ಗೆ ತಾನು ಹೇಳಬೇಕೆಂಬುದಕ್ಕೆ ಇಂಗ್ಲಿಷ್‌ಗಿಂತ ಭಾರತೀಯ ಸಂವೇದನೆಯ ಕನ್ನಡವೇ ಹೆಚ್ಚು ಸಮರ್ಪಕವೇನೊ ಎಂದೂ ಅನ್ನಿಸಿದ್ದಿದೆ.

ಅಲ್ಲದೆ ಫ್ರೆಂಚ್‌ ಭಾಷೆಯ ಬಗ್ಗೆ ಪಿಯರೆ ಲೇರಿಸ್‌ ಹೇಳುವಂತೆ, ಕನ್ನಡದಲ್ಲೂ ನವ್ಯ ಚಳವಳಿಯಿಂದಾಗಿ ಹುಟ್ಟಿಕೊಂಡ ಮುಕ್ತ ಛಂದಸ್ಸು, ಮೈ ಚಳಿಬಿಟ್ಟ ಭಾಷಾ ಪ್ರಯೋಗಗಳು (ಇವುಗಳಿಂದಾಗಿ ಶೇಕ್ಸ್‌ಪಿಯರ್, ಗ್ರೀಕ್‌ ನಾಟಕಕಾರರನ್ನು ಕನ್ನಡಕ್ಕೆ ಹತ್ತಿರ ತಂದ ಈಚಿನ ಅನುವಾದಗಳು) ನನ್ನ ಹಿನ್ನೆಲೆಯಲ್ಲಿವೆ. ನನ್ನ ಅನುಕೂಲ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡೇ ಯೇಟ್ಸ್‌ನಲ್ಲಿ ನನಗೆ ಬೇಕೆನ್ನಿಸಿದ್ದನ್ನು ಮಾತ್ರ ಆರಿಸಿದ್ದೇನೆ. ಹೀಗೆ ಆರಿಸುವಾಗ ಅವನ ಪ್ರಾರಂಭದ ಕವನಗಳಿಂದ ಹಿಡಿದು ಅವನ ಕೊನೆಗಾಲದ ಕಾವ್ಯದವರೆಗಿನ ಎಲ್ಲ ಮಾದರಿಗಳನ್ನೂ-ಆತನ ಮೇಜರ್ ಸಾಧನೆಗಳನ್ನು ಬಿಡದಂಥೆ-ಭಾಷಾಂತರಿಸಲು ಯತ್ನಿಸಿದ್ದೇನೆ. (ಲೀಡಾ ಮತ್ತು ಹಂಸರೂಪಿಯಗಿ ಬಂಧ ಸ್ಯೂಸ್‌’ ನಾನು ೧೯೬೭ರಲ್ಲಿ ಮಾಡಿದ ಒಂದು ರೂಪಾಂತರ.)

ಈ ಅನುವಾದದಿಂದ ಪ್ರಚೋದಿತರಾಗಿ ಕನ್ನಡ ಕವಿಗಳು ಯೇಟ್ಸ್‌ನನ್ನು ಇದಕ್ಕಿಂತ ಚೆನ್ನಾಗಿ ಭಾಷಾಂತರಿಸಬಹುದೆಂಬ ಭರವಸೆಯೇ ಈ ಕವನಗಳು ಪ್ರಕಟಣೆಗೆ ಬೇಕಾದ ಧೈರ್ಯವನ್ನು ಕೊಟ್ಟಿದೆ.

*

ಮೇಲಿನದು ಕೇವಲ ವಿನಯದ ಮಾತಲ್ಲ. ಯಾಕೆಂದರೆ ನಾನು ಸುಮಾರು ಹದಿಮೂರು ವರ್ಷಗಳಿಂದ ಪದ್ಯ ಬರೆದಿಲ್ಲ. ಈ ಅತೃಪ್ತಿಯೇ ಯೇಟ್ಸ್‌ನನ್ನು ಭಾಷಾಂತರಿಸುವಂತೆ ಪ್ರೇರೇಪಿಸಿರಬೇಕು. ಮುಖ್ಯವಾಗಿ, ಸೀನಿಯರ್ ಎಂ.ಎ. ಮಾಡುತ್ತಿರುವ ನನ್ನ ಈ ವರ್ಷದ ಇಂಗ್ಲಿಷ್‌ ವಿದ್ಯಾರ್ಥಿಗಳು ಈ ಭಾಷಾಂತರಗಳಿಗೆ ಪ್ರೇರಣೆಯೆಂಬುದನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಕೆಲವು ವರ್ಷಗಳಿಂದ ಕ್ಲಾಸಿನಲ್ಲಿ ಯೇಟ್ಸ್‌ನನ್ನು ಪಾಠ ಹೇಳುತ್ತಿರುವ ನನ್ನಲ್ಲಿ ಮೊದಲಬಾರಿಗೆ ‘ಕ್ರೇಜಿ ಜೇನ್’ ಪದ್ಯವನ್ನು ಭಾಷಾಂತರಿಸಬೇಕೆಂಬ ಆಸೆ ಹುಟ್ಟಿತು. ಆ ಪದ್ಯದ ಸುಮಾರು ನಲವತ್ತು ಪಾಠಗಳನ್ನಾದರೂ ತಯಾರಿಸಿರಬೇಕು. ಆದರೆ ಬರೆಯುತ್ತ, ಹೊಡೆದು ಹಾಕುತ್ತ, ಮತ್ತೆ ಬರೆಯುತ್ತ ಹೋದಂತೆ ನನ್ನಲ್ಲಿ ಅಡಗಿದ್ದ ಕಾವ್ಯದ ಸೂಕ್ಷ್ಮಶರೀರದ ಬಗೆಗಿನ ಅಲ್ಪ ಸ್ವಲ್ಪ ಜ್ಞಾನ ಎಚ್ಚರಗೊಂಡಿತು. ಕ್ಲಾಸಲ್ಲಿ ಯೇಟ್ಸ್‌ನನ್ನು ಪಾಠಮಾಡುವಾಗ ಯೇಟ್ಸ್‌ನ ಮಾತುಗಳಿಗೆ ಕನ್ನಡದಲ್ಲಿ ತತ್ಸಮವಾದದ್ದನ್ನು ವಿದ್ಯಾರ್ಥಿಗಳ ಜೊತೆ ಚರ್ಚಿಸಲು ಪ್ರಾರಂಭಿಸಿದೆ. ನನಗೂ ನನ್ನ ವಿದ್ಯಾರ್ಥಿಗಳಿಗೂ ನಡುವೆ ನಡೆಯುತ್ತಿದ್ದ ಗುಣಾಕಾರದಂಥ ಈ ಕೆಲಸ ನನ್ನನ್ನು ಯೇಟ್ಸ್ ಭಾಷಾಂತರದಲ್ಲಿ ತತ್ಪರನನ್ನಾಗಿ ಮಾಡಿತು. ಅದರ ಫಲವಾಗಿ ದಿನಕ್ಕೊಂದು ಪದ್ಯದಂತೆ ನಾನು ಭಾಷಾಂತರಿಸುತ್ತ ಹೋದೆ. ನನ್ನ ಭಾಷಾಂತರದ ಬೆಲೆಯೇನೇ ಇರಲಿ, ಈ ಅನುಭವ ನನಗೆ ಅಮೂಲ್ಯವಾದ್ದು.

(‘ರುಜುವಾತು’ – ಏಪ್ರಿಲ್-ಜೂನ್, ೧೯೮೧)