ಟಿಪ್ಪಣಿಗಳು

ಕೆಲವು ಮುಖ್ಯ ಪದ್ಯಗಳ ಬಗ್ಗೆ ಅತ್ಯಂತ ಅವಶ್ಯವೆನ್ನಿಸಿದಲ್ಲಿ ಮಾತ್ರ ಈ ಟಿಪ್ಪಣಿಗಳನ್ನು ಕೊಡಲಾಗಿದೆ. ಹಲವು ಕಡೆ Norton Anthologyಯ ಸಹಾಯ ಪಡೆಯಲಾಗಿದೆ. ಯೇಟ್ಸ್ ಬಗ್ಗೆ ಹೆಚ್ಚು ಓದಬಯಸುವವರಿಗೆ ಶಂಕರ ಮೊಕಾಶಿ ಪುಣೇಕರ್ ಇಂಗ್ಲಿಷಿನಲ್ಲಿ ಬರೆದ ಪುಸ್ತಕಗಳಿವೆ. ಯೇಟ್ಸ್ ಬರೆದ  Autobiographies ಅತ್ಯಂತ ಮುಖ್ಯ ಪುಸ್ತಕ. ರಿಚಲ್ಡ್ ಎಲ್‌ಮನ್‌ ಬರೆದ The Identity of Yeats ಉಪಯುಕ್ತ ಪುಸ್ತಕ. ಸಂಪಾದಿತ ಪ್ರಬಂಧಗಳ ಸಂಕಲನ The Permanence of Yeats, ಅನೇಕ ಮುಖ್ಯ ಯೇಟ್ಸ್‌ ಮೇಲಿನ ವಿಮರ್ಶೆಯನ್ನೊಳಗೊಂಡಿದೆ. ಹೆನ್‌ನ The Lonely Tower ಚೆನ್ನಾಗಿದೆ. ಮುಖ್ಯವಾಗಿ ಓದಬೇಕಾದ್ದು ಯೇಟ್ಸ್‌ನ ಇತರ ಪದ್ಯಗಳನ್ನ. ಅವನ ಕಾವ್ಯಪ್ರಪಂಚದಲ್ಲಿ ಪ್ರಾರಂಭದಲ್ಲಿ ಕ್ಲಿಷ್ಟವೆನ್ನಿಸಿದ್ದು ಕ್ರಮೇಣ ಅರ್ಥವಾಗುತ್ತ ಹೋಗುತ್ತದೆ. ಪ್ರತಿ ಪದ್ಯವೂ ಇನ್ನೊಂದನ್ನು ಅರಿಯಲು ಸಹಾಯ ಮಾಡುವಂತೆ ಬೆಳೆದು, ಇವನ ಕಾವ್ಯ ತನ್ನ ವಿಶಿಷ್ಟ ಪ್ರಪಂಚದ ವಿವರಣೆಯನ್ನು ತನ್ನೊಳಗೇ ಅಡಗಿಸಿಕೊಂಡಿದೆ. ಹೊರಗಿನ ಸಹಾಯದಿಂದ ಮಾತ್ರ ಅರ್ಥಪೂರ್ಣವಾಗುವ ಪದ್ಯಗಳ ಕ್ಲಿಷ್ಟತೆಯ ರೀತಿ ಯೇಟ್ಸ್‌ನದಲ್ಲ. ಅವನದು ಸ್ವಯಂಪೂರ್ಣವಾದ ಪ್ರಪಂಚ. ಅವನ ಕವನಗಳು ಸ್ವಯಂಪ್ರಭೆಯುಳ್ಳವು. 

ಆದಮ್ಮಿನಶಾಪ

ಈಡನ್‌ ತೋಟದಿಂದ ಆದಮ್ಮನನ್ನು ಹೊರಗಟ್ಟುವಾಗ ದೇವರು ಅವನನ್ನು ಕಷ್ಟದ ದುಡಿಮೆ ಮೂಲಕ ಜೀವಿಸುವಂತೆ ಶಪಿಸಿದನೆಂದು ಬೈಬಲ್‌ ಹೇಳುತ್ತದೆ.

ಈ ಪದ್ಯದಲ್ಲಿ ಬರುವ ಇಬ್ಬರು ಹೆಂಗಸರು, ಯೇಟ್ಸ್‌ ಪ್ರೀತಿಸುತ್ತಿದ್ದ ಮಾಡ್‌ಗಾನ್‌ ಮತ್ತು ಅವಳ ತಂಗಿ ಕ್ಯಾಥಲೀನ್‌.

ಯೇಟ್ಸ್‌ನನ್ನು ತನ್ನ ಕಾಲದ ಅತ್ಯುತ್ತಮ ಕವಿ ಎಂದು ಹೇಳುವ ತನ್ನ ಪ್ರಬಂಧದಲ್ಲಿ (೧೯೪೦) ಎಲಿಯಟ್ಟನು ಈ ಪದ್ಯದಲ್ಲಿ ಕವಿ ತನ್ನ ಪ್ರಾರಂಭದ ದೆಸೆಯಲ್ಲೂ ಹೇಗೆ ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಮಾತಾಡುವುದರಿಂದಲೇ ಮಾನವನ ಬಗ್ಗೆಯೂ ಮಾತಾಡುವುದು ಸಾಧ್ಯವಾಯಿತೆಂದು ಗುರುತಿಸಿದ್ದಾನೆ. 

ಈಸ್ಟರ್ ೧೯೧೬

೨೪ನೆಯ ಏಪ್ರಿಲ್‌ ೧೯೧೬ ಈಸ್ಟರ್ ನಲ್ಲಿ ಐರಿಷ್‌ ಕ್ರಾಂತಿಕಾರಿಗಳು ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಬಂಡಾಯವೆದ್ದರು. ಈ ಬಂಡಾಯ ವಿಫಲವಾಗಿ ಅದರ ನಾಯಕರನ್ನು ಬ್ರಿಟಿಷ್‌ ಸರ್ಕಾರ ಗಲ್ಲಿಗೇರಿಸಿತು. ಈ ಘಟನೆ ಯೇಟ್ಸ್‌ನನ್ನು ತುಂಬಾ ಕಲಕಿತು. ಈ ಸತ್ತ ನಾಯಕರಲ್ಲಿ ಹಲವರು ಯೇಟ್ಸ್‌ನ ವೈರಿಗಳಾಗಿದ್ದರು-ಉದಾಹರಣೆಗೆ ಮ್ಯಾಕ್‌ಬ್ರೈಡ್‌ ಎಂಬುವನೊಬ್ಬ ಅವನ ಪ್ರೇಯಸಿ ಮಾಡ್‌ಗಾನನನ್ನು ಪ್ರೀತಿಸಿ ನಂತರ ಅವಳನ್ನು ತೊರೆದಿದ್ದ. ಅವನ ಹೆಸರೂ ಪದ್ಯದಲ್ಲಿ ಬರುತ್ತದೆ. ಯೇಟ್ಸ್‌ ತನ್ನ ವೈಯಕ್ತಿಕ ದ್ವೇಷಗಳನ್ನು ಈ ಪದ್ಯದಲ್ಲಿ ಮೀರುತ್ತಾನೆ. ಒಂದು ಸಾರ್ವಜನಿಕ ಘಟನೆಯನ್ನು ಕುರಿತ ಪದ್ಯ ವೈಯಕ್ತಿಕವಾದ ಪ್ರಾಮಾಣಿಕ ಅನುಮಾನಗಳನ್ನು ಒಳಗೊಳ್ಳುತ್ತಲೇ ವೈಯಕ್ತಿಕ ಮಿತಿಗಳನ್ನು ಮೀರುತ್ತದೆ. ಯೇಟ್ಸ್ ಇಲ್ಲಿ ಒಬ್ಬ ವ್ಯಕ್ತಿಯೂ ಹೌದು; ಒಂದು ಜನಾಂಗದ ಮುಖವಾಣಿಯೂ ಹೌದು; ಅರ್ಧ ಐರಿಷ್‌ ಅರ್ಧ ಆಂಗ್ಲನಾಗಿದ್ದರಿಂದ ಕ್ರಾಂತಿಗೆ ವಿರೋಧದ ಬಲಪಂಥೀಯನೂ ಹೌದು. ಹೀಗೆ ಎಲ್ಲವನ್ನೂ ನಿರ್ವಹಿಸುವ ಪದ್ಯದ ಧಾಟಿಯಜ್ಲಿನ ಬೀಸನ್ನು ಗಮನಿಸಿ, ಹರಟೆಯಂತೆ ಕಾಣುವ ಆಡುಮಾತಿನ ಲಯದಿಂದ ಉತ್ಕಟ ಭಾವಗೀತಾತ್ಮಕ ಲಯದವರೆಗೆ ಪದ್ಯ ಸಹಜವಾಗಿ ಏರಿಳಿಯುತ್ತ, ಅನುಮಾನದ ಮೆಲುದನಿಯನ್ನು ಹತ್ತಿಕ್ಕದಂತೆ ಘೋಷವೂ ಆಗುತ್ತದೆ. ಏಕಕಾಲದಲ್ಲಿ ವೈಯಕ್ತಿಕವೂ ಸಾರ್ವತ್ರಿಕವೂ ಆಗುವ ‘ಈಸ್ಟರ್ ೧೯೧೯’ ಅಪೂರ್ವವಾದೊಂದು ರಾಜಕೀಯ ಕವನ.

(೨೦) — ಈಸ್ಟರ್ ಏಸುಕ್ರಿಸ್ತ ಮತ್ತೆ ಎದ್ದು ಬಂದ ದಿನವೂ ಹೌದು; ಐರ್ಲೆಂಡಿನ ಬಂಡಾಯದ ದಿನವೂ ಹೌದು. ಯೇಟ್ಸ್‌ಗೆ ಈ ಎರಡು ಅರ್ಥಗಳಲ್ಲೂ ‘ರುದ್ರ ಚೆಲುವು’ ಅವತ್ತು ಹುಟ್ಟಿದ್ದು.

(೨೧-೭) — ಕೌಂಟಿಸ್‌ ಮಾರ್ಕೀವಿಜ್‌ ಎಂಬಾಕೆ (೧೮೬೮-೧೯೨೭) ಬಂಡಾಯದಲ್ಲಿ ಮುಖ್ಯಪಾತ್ರ ವಹಿಸಿದಳು.

(೨೮-೯) — ಪ್ಯಾಟ್ರಿಕ್‌ ಪರ್ಸ್ (೧೯೭೮-೧೯೧೬); ಡಬ್ಲಿನ್‌ ಹತ್ತಿರ ಶಾಲೆಯೊಂದನ್ನು ತೆರೆದವ. ಕವಿಯಾದ್ದರಿಂದ ರೆಕ್ಕೆ ಕುದುರೆಯನ್ನು, ಅಂದರೆ ಪೆಗಾಸಸ್‌ನ್ನು ಸವಾರಿ ಮಾಡಿದವ.

(೩೦) — ಥಾಮಸ್‌ ಮ್ಯಾಕ್‌ಡೊನಾಗ್‌ (೧೮೭೮-೧೯೧೬); ಕವಿ ಮತ್ತು ನಾಟಕಕಾರ.

(೩೪-೭) — ಮೇಜರ್ ಜಾನ್‌ ಮ್ಯಾಕ್‌ಬ್ರೈಡ್‌-ಯೇಟ್ಸ್‌ ತನ್ನ ಜೀವನದುದ್ದವೂ ಪ್ರೀತಿಸಿದ್ದ ಐರಿಶ್‌ ಬಂಡಾಯಗಾತಿ ಮಾಡ್‌ಗಾನ್‌ಳನ್ನು ಮದುವೆಯಾಗಿ ನಂತರ ಅವಳಿಂದ ಬೇರೆಯಾದವ.

(೭೦) — ಇಂಗ್ಲೆಂಡ್‌ ದೇಶ ಐರ್ಲೆಂಡಿಗೆ ಹೋಂರೂಲನ್ನು ಕೊಡುವ ಭರವಸೆ ನೀಡಿತ್ತು. 

ಮಗಳಿಗಾಗಿ ಪ್ರಾರ್ಥನೆ

ಯೇಟ್ಸ್‌ ಮಗಳು, ಆನ್‌ ಬಟ್ಲರ್ ಯೇಟ್ಸ್‌ ೧೯೧೯ರಲ್ಲಿ ಹುಟ್ಟಿದಳು.

(೪) — ಯೇಟ್ಸ್‌ ಗೆಳತಿ ಲೇಡಿ ಗ್ರೆಗರಿಗೆ ಸೇರಿದವನು. ಇದು ಯೇಟ್ಸ್‌ ವಾಸವಾಗಿದ್ದ ಥೂರ್ ಬ್ಯಾಲಿಲೀ ಎಂಬ ಟವರ್ ಗೆ ಸಮೀಪದಲ್ಲೆ ಇತ್ತು.

(೨೩) — ಹೆಲನ್-ಅಪೂರ್ವ ಚೆಲುವಿನ ಹೆಣ್ಣು. ತನ್ನ ಗಂಡನಾದ ಮೆನಲಾಸ್‌ನನ್ನು ತೊರೆದು ಪ್ಯಾರಿಸ್‌ನನ್ನು ಪ್ರೀತಿಸಿ ಅವನ ಜೊತೆ ಓಡಿಹೋದಳು. ಹೋಮರ್ ಬರೆದ ಮಹಾಕಾವ್ಯ ‘ಇಲಿಯಡ್‌’ನ ನಾಯಿಕೆ ಇವಳು. ಯೇಟ್ಸ್‌ ಮಾಡ್‌ಗಾನ್‌ನನ್ನೂ ಇಲ್ಲಿ ನೆನಸುತ್ತಿರಬಹುದು.

(೨೫-೭) — ವೀನಸ್‌-ಸಮುದ್ರದಿಂದ ಹುಟ್ಟಿದವಳು. ವಲ್ಕನ್‌ ಎಂಬ ದೇವಲೋಕದ ಕಮ್ಮಾರನನ್ನು ಇವಳು ವರಿಸಿದಳು.(೪೦)

(೪೦) — ಲಿನೆಟ್‌-ಒಂದು ಹಾಡುವ ಪಕ್ಷಿ.

(೫೭-೬೨) — ಮಾಡ್‌ಗಾನ್‌-ಈಕೆಯ ಉಗ್ರ ರಾಜಕೀಯ ಧೋರಣೆಗಳು ಮತ್ತು ಹಠಮಾರಿತನದ ಅಭಿಪ್ರಾಯಗಳು ಕ್ರಮೇಣ ಯೇಟ್ಸ್‌ಗೆ ಅಸಹನೆಯ ವಿಷಯಗಳಾದವು. 

ಲೀಡಾ ಮತ್ತು ಹಂಸ ರೂಪಿಯಾಗಿ ಬಂದ ಸ್ಯೂಸ್

ರಾಜಕೀಯ ಪತ್ರಿಕೆಯೊಂದರ ಸಂಪಾದಕನ ಕೋರಿಕೆ ಮೇಲೆ ಈ ಪದ್ಯವನ್ನು ತಾನು ಬರೆದುದಾಗಿ ಯೇಟ್ಸ್‌ ಹೇಳುತ್ತಾನೆ. ಪದ್ಯದ ಉಗಮ, ಬೆಳವಣಿಗೆಗಳು ಸೃಜನಕ್ರಿಯೆಯ ಗೂಢವನ್ನು ನಮಗೆ ಮನದಟ್ಟು ಮಾಡುತ್ತದೆ ಈ ಪದ್ಯ. ರಾಜಕೀಯವಾದ ಚಿಂತನೆಯಿಂದ ಹುಟ್ಟಿ ಬೆಳೆದು, ಬೇರಿನ್ನೇನೋ ಆಗಿಹೋದ ಈ ಪದ್ಯ ಕುರಿತು ಯೇಟ್ಸ್‌ ಹೇಳುತ್ತಾನೆ: ‘ಹಾಬ್ಸ್‌ನಿಂದ ಪ್ರಾರಂಭವಾಗಿ, ಫ್ರೆಂಚ್‌ ಕ್ರಾಂತಿ ಮತ್ತು ಅದರ ತಾತ್ವಿಕರಿಂದ ಜನಪ್ರಿಯವಾಗಿ ಬೆಳೆದ ವ್ಯಕ್ತಿವಾದ ಮತ್ತು ಪ್ರಜಾತಂತ್ರ ಚಳವಳಿಗಳು ನಮ್ಮ ನೆಲವನ್ನು ಯಾವ ಬೆಳೆಯೂ ಬೆಳೆಯದಂತೆ ಬಂಜರುಗೊಳಿಸಿವೆ-ಎಂಬ ಆಲೋಚನೆ ನನಗೆ ಬಂತು. ಮುಂದೆ ಹೀಗೆ ಯೋಚಿಸಿದೆ: ‘ಈಗ ಇನ್ನೇನೂ ಸಾಧ್ಯವಿಲ್ಲ; ದೈವ ಮೂಲದಿಂದ ಉಗ್ರ ಪ್ರಕಟಣೆಯಾಗಬೇಕು, ಈ ಜುಲುಮೆಯ ಬಳಿಕ ಚಲನೆ ಮೇಲಿಂದಲೇ ಆರಂಭವಾಗಬೇಕು.’ ನನ್ನ ಕಲ್ಪನೆ ಹೀಗೆ ಲೀಡಾ ಮತ್ತು ಹಂಸದ ರೂಪಕದ ಸುತ್ತ ಅಡತೊಡಗಿದ್ದರಿಂದ ಪದ್ಯವನ್ನು ಬರೆಯಲು ಪ್ರಾರಂಭಿಸಿದೆ. ನಾನು ಬರೆಯುತ್ತ ಹೋದಂತೆ ಪಕ್ಷಿ ಮತ್ತು ಕನ್ನಿಕೆ ನನ್ನನ್ನು ಎಷ್ಟು ಆವರಿಸಿಬಿಟ್ಟವೆಂದರೆ, ಎಲ್ಲ ರಾಜಕೀಯವೂ ಪದ್ಯದಿಂದ ಹೊರಟು ಹೋಯಿತು. ರಾಜಕೀಯ ಪತ್ರಿಕೆಯ ಸಂಪಾದಕ ಗೆಳೆಯ ಹೇಳುತ್ತಾನೆ: ‘ಸಾಂಪ್ರದಾಯಿಕ ಓದುಗರು ಪದ್ಯವನ್ನು ತಪ್ಪರ್ಥ ಮಾಡಿಕೊಂಡಾರು.’

ಯೇಟ್ಸ್‌ ಪ್ರಕಾರ ಹಂಸದಿಂದ ಲೀಡಾಳ ಬಲಾತ್ಕಾರ ಸಂಭೋಗ ಒಂದು ಹೊಸಯುಗದ ಹುಟ್ಟಿಗೆ ನಾಂದಿಯಾಗುತ್ತದೆ. ಕ್ರಿಸ್ತನ ಹುಟ್ಟನ್ನು ಕನ್ನಿಕೆಯಾದ ಮೇರಿಗೆ ಮುಂದಾಗಿ ಪಾರಿವಾಳ ಪ್ರಕಟಿಸಿದ್ದು ಇನ್ನೊಂದು ಹೊಸಯುಗದ ಪ್ರಾರಂಭಕ್ಕೆ ಇಂಥದೇ ನಾಂದಿ. ಪುರಾಣ ಹೇಳುವಂತೆ ಗ್ರೀಕರ ದೇವಾಧಿದೇವ ಸ್ಯೂಸ್‌ ಹಂಸರೂಪಿಯಾಗಿ ಬಂದು ಲೀಡಾಳನ್ನು ಬಲಾತ್ಕಾರವಾಗಿ ಸಂಭೋಗಿಸಿದ್ದರ ಪರಿಣಾಮವಾಗಿ ಎರಡು ಮೊಟ್ಟೆಗಳು ಹುಟ್ಟಿಕೊಂಡವು. ಒಂದು ಮೊಟ್ಟೆಯಿಂದ ಹೊರಬಂದವರು, ಹೆಲನ್‌ ಮತ್ತು ಕ್ಲೈಟಮ್‌ನೆಸ್ಟ್ರಾ. ಹೆಲೆನ್‌ ತನ್ನ ಗಂಡ ಮೆನಲಾಸ್‌ನನ್ನು ತೊರೆದು ಪ್ಯಾರಿಸ್‌ ಜೊತೆ ಓಡಿ ಹೋಗಿ ಟ್ರೋಜನ್‌ ಯುದ್ಧಕ್ಕೆ ಕಾರಣಳಾದಳು; ಕ್ಲೈಟಮ್‌ನೆಸ್ಟ್ರಾ, ಮೆನಲಾಸ್‌ನ ಸೋದರ ಆಗಮೆಮ್‌ನನ್ನು ಮದುವೆಯಾಗಿ. ಅವನು ಯುದ್ಧಕ್ಕೆ ಯೋದಾಗ ಇನ್ನೊಬ್ಬನ ಜೊತೆ ಸಂಗಮಾಡಿ, ಗಂಡ ಮರಳಿದ ಮೇಲೆ ಅವನನ್ನು ಕೊಲೆ ಮಾಡಿದಳು.

ಪದ್ಯದಲ್ಲಿ ವರ್ಣಿತವಾಗುವ ಸಂಭೋಗದ ಹಿಂಸೆ ಮತ್ತು ಜುಲುಮೆಗಳು ನಂತರದ ಹತ್ಯಾಕಾಂಡಕ್ಕೆ ಮುನ್ಸೂಚನೆಗಳಾಗಿವೆ; ಅಲ್ಲದೆ ಬಲಾತ್ಕಾರದಿಂದ ದೇವಾಧಿದೇವನೇ ಲೀಡಾನ ಕನ್ನಿಕತ್ವವನ್ನು ಕಳೆಯುವುದು ಇತಿಹಾಸದ ಅನಿವಾರ್ಯತೆಗಳಿಂದ ನಾವು ಹೊರಗುಳಿಯುವಂತಿಲ್ಲವೆಂಬುದನ್ನು ಧ್ವನಿಸುವಂತಿದೆ. ದೇವರಿಗೆ ಮಾತ್ರ ಸಾಧ್ಯವಾದ ಜ್ಞಾನ ಮತ್ತು ಶಕ್ತಿಗಳ ಸಂಯೋಗ ಮರ್ತ್ಯರಿಗೆ ಅಸಾಧ್ಯವೆಂದೂ, ಅದೇ ನಮ್ಮ ಇತಿಹಾಸದ ದುರಂತದ ಮೂಲವೆಂದೂ ಪದ್ಯ ಸೂಚಿಸುವಂತಿದೆ. 

ಬೈಜಾಂಟಿಯಂಗೆ ಯಾನ

ಬೈಜಾಂಟಿಯಂನ್ನು ಈಗ ಕಾನ್‌ಸ್ಟಾತಿನೋಪಲ್‌ ಎಂದೂ ಇಸ್ಟಾನ್‌ಬುಲ್‌ ಎಂದೂ ಕರೆಯುತ್ತಾರೆ. ಯೇಟ್ಸ್‌ಗೆ ಬೈಜಾಂಟಿಯಂ ಆತ್ಮದ ನಗರ; ಇದರ ಶೈಲೀಕರಣವನ್ನೂ, ಸ್ಥೈರ್ಯವನ್ನೂ ಯೇಟ್ಸ್‌ ಮೆಚ್ಚಿಕೊಂಡಿದ್ದ. ‘ವಿಶನ್‌’ (೧೯೩೭) ಎಂಬ ಪುಸ್ತಕದಲ್ಲಿ ಈ ಪ್ರಾಚೀನ ನಗರ ಕುರಿತು ಹೀಗೆ ಹೇಳುತ್ತಾನೆ: ‘ಪುರಾತನ ಕಾಲದಲ್ಲಿ ಒಂದು ತಿಂಗಳು ಕಳೆಯುವ ಅವಕಾಶ ಸಿಕ್ಕಲ್ಲಿ ನಾನು ಬೈಜಾಂಟಿಯಂಗೆ ಹೋಗಬಯಸುವೆ. ಜಸ್ಟಿನಿಯನ್‌ ದೊರೆ ಸೆಂಟ್‌ ಸೋಫಿಯಾ ಚರ್ಚನ್ನು ಕಟ್ಟಿ ಪ್ಲೇಟೋನ ಅಕಡೆಮಿಯನ್ನು ಮುಚ್ಚುವ ಮುಂಚಿನ ಕಾಲ ನನಗೆ ಪ್ರಿಯಾವಾದ್ದು. ನನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬಲ್ಲ ಒಬ್ಬ ದಾರ್ಶನಿಕ ಕುಶಲ ಕರ್ಮಿಯೊಬ್ಬನನ್ನು ನಾನು ಒಂದು ಚಿಕ್ಕ ಮದಿರೆಯ ಅಂಗಡಿಯಲ್ಲಿ ಭೆಟ್ಟಿಯಾದೇನು; ಪ್ಲಾಟಿನಸ್‌ನಂಥ ತತ್ವಶಾಸ್ತ್ರನಿಗಿಂತ ಹೆಚ್ಚು ಹತ್ತಿರದಲ್ಲಿ ಅಲೌಕಿಕವಾದ್ದು ಅವನಿಗೆ ಎಟುಕುತ್ತಿರುತ್ತದೆ. ನನ್ನ ಪ್ರಕಾರ ಲಿಖಿತ ಚರಿತ್ರೆಯ ಯಾವ ಕಾಲದಲ್ಲೂ ಕಾಣಸಿಗದ, ಆದರೆ ಬೈಜಾಂಟಿಯಂನ ಪ್ರಾರಂಭದಲ್ಲಿ ಮಾತ್ರ ಇದ್ದ ಗುಣ ಇದು; ಅಲ್ಲಿ ಧಾರ್ಮಿಕ, ಕಲಾತ್ಮಕ, ವ್ಯಾವಹಾರಿಕ ಸತ್ಯಗಳು ಏಕತ್ರ ಸಂಧಿಸಿದ್ದವು, ಮತ್ತು ವಾಸ್ತುಶಿಲ್ಪಿಯೂ, ಕುಶಲಕರ್ಮಿಯೂ ಸಾಮಾನ್ಯರಿಗೂ, ಅಸಾಮಾನ್ಯರಿಗೂ ಒಟ್ಟಾಗಿ ಅರ್ಥವಾಗುವಂತಿದ್ದರು. ವರ್ಣ ಚಿತ್ರಕಾರ, ಮೊಸಾಯಿಕ್‌ ಕಾರ್ಮಿಕ, ಚಿನ್ನಬೆಳ್ಳಿಗಳಲ್ಲಿ ಕೆಲಸ ಮಾಡುವ ಅಕ್ಕಸಾಲಿಗ, ಧರ್ಮ ಗ್ರಂಥಗಳನ್ನು ಹೊಳಪಲ್ಲಿ ಮುದ್ರಿಸುವಾತ-ಎಲ್ಲರೂ ಸರ್ವಗ್ರಾಹ್ಯವಾದಂಥ, ಇಡೀ ಜನಾಂಗದ ದರ್ಶನವನ್ನು ವ್ಯಕ್ತಪಡಿಸುವಂಥ ಕೆಲಸದಲ್ಲಿ ಯಾವ ಸ್ವಮನಸ್ಕತೆಯಾಗಲೀ, ವೈಯಕ್ತಿಕ ರೂಪ ನಿರ್ಮಾಣದ ಅಗತ್ಯವಾಗಲೀ ಇಲ್ಲದಂತೆ ತೊಡಗಿರುತ್ತಿದ್ದರು… ಅವರು ಎಲ್ಲವನ್ನು ಒಂದು ಬೃಹತ್‌ ರೂಪದಲ್ಲಿ ನೇಯಬಲ್ಲವರಾಗಿದ್ದರು… ಆದರೆ ಹಲವರು ಒಟ್ಟಾಗಿ ಮಾಡಿದ ಕೃತಿ ಒಬ್ಬನ ಕೃತಿಯಂತಿರುತ್ತಿತ್ತು. ಕಟ್ಟಡ, ಚಿತ್ರ, ಲೋಹದ ದಿನಬಳಕೆಯ ವಸ್ತುಗಳು-ಎಲ್ಲವೂ ಒಂದೇ ಪ್ರತಿಮೆಯಾಗಿರುತ್ತಿದ್ದುವು.’

ಈ ಪದ್ಯದಲ್ಲಿ ಯೇಟ್ಸ್‌ ಯುವಕರ ಪ್ರಪಂಚವಾದ ಐರ್ಲೆಂಡನ್ನು ತೊರೆದು, ಪುರಾತನ ನಗರವಾದ ಬೈಜಾಂಟಿಯಂಗೆ ಬಂದಿದ್ದಾನೆ. ವೃದ್ಧನಾದವನು ಅತ್ತಲೂ ಅಲ್ಲ, ಇತ್ತಲೂ ಅಲ್ಲ; ಯುವಕರು ಪ್ರೀತಿಯಲ್ಲಾದರೂ ಮೈಮರೆತರೆ ಮುದುಕ ಕೇವಲ ಒಂದು ಬೆದರು ಬೊಂಬೆ.

(೪) — ಸಾಲ್ಮನ್‌, ಒಂದು ಬಗೆಯ ಮೀನು, ಮೊಟ್ಟೆಯಿಡುವ ಕಾಲದಲ್ಲಿ ಪ್ರವಾಹಕ್ಕೆ ಇದಿರಾಗಿ ಈಜಿ ಹೋಗುತ್ತದೆ;ಮ್ಯಕೆರಲ್‌ ಎಂಬ ಇನ್ನೊಂದು  ಬಗೆಯ ಮೀನು ಸಮುದ್ರದ ಆಳಕ್ಕಿಳಿದು ಮೊಟ್ಟೆಯಿಡುತ್ತದೆ. ಇಲ್ಲಿ ಬರುವ ಯುವಕರು ಪಕ್ಷಿಗಳು ಮೀನುಗಳು ಕೇವಲ ಕಾಮ ಕೇಳಿಯಲ್ಲಿ ತೊಡಗಿವೆಯೆಂಬುದನ್ನು ಗಮನಿಸಬೇಕು. ಜೀವಂತಿಕೆಯಿದ್ದಲ್ಲಿ ಜ್ಞಾನವಿಲ್ಲ. ಆದರೆ ಜೀವಂತಿಕೆಯೂ ಇರದ ವೃದ್ಧ, ಜ್ಞಾನಿಯಾದರೂ ಆಗಬೇಕು.

(೧೧-೧೩) — ಸತ್ತ ಸೋದರನೊಬ್ಬನ ಆತ್ಮ ಆನಂದದಲ್ಲಿ ಚಪ್ಪಾಳೆ ತಟ್ಟುತ್ತ ಸ್ವರ್ಗಾರೋಹಣ ಮಾಡುವುದನ್ನು ಬ್ಲೇಕ್‌ ತನ್ನ ಕಾಣ್ಕೆಯೊಂದರಲ್ಲಿ ಕಂಡಿದ್ದ.

(೧೯) — ಇಲ್ಲಿ ಬರುವ ಭ್ರಮಕ, ಯೇಟ್ಸ್‌ನ ಜೈರ್.

(೨೯) — ಬೈಜಾಂಟಿಯಂನ ಚಕ್ರವರ್ತಿಯ ಅರಮನೆಯಲ್ಲೊಂದು ಚಿನ್ನ ಬೆಳ್ಳಿಗಳಿಂದ ಮಾಡಿದ ವೃಕ್ಷವಿತ್ತು, ಅದರ ಮೇಲೆ ಕೃತಕ ಪಕ್ಷಿಗಳು ಕೂತು ಹಾಡುತ್ತಿದ್ದವು-ಎಂದು ಯೇಟ್ಸ್‌ ಈ ಕವನದ ಟಿಪ್ಪಣಿಯಲ್ಲಿ ಹೇಳಿದ್ದಾನೆ.

ಯೇಟ್ಸ್‌ನ ಅತ್ಯಂತ ಮುಖ್ಯಪದ್ಯವಾದ ಇದರ ಬಗ್ಗೆ ಎಡ್ಗರ್ ಓಲ್ಸನ್‌ ಎಂಬಾತ ಬರೆದ ವಿಮರ್ಶೆ ಗಮನಾರ್ಹವಾಗಿದೆ. ನೋಡಿ: The Permanence of Yeats. (edited) 

ಜೀವಾತ್ಮ ಸಂವಾದ

ಯೇಟ್ಸ್‌ನ ಮುಖ್ಯ ವಸ್ತುವಾದ ರಾಗ-ವಿರಾಗಗಳ ನಡುವಿನ ಒಳತೋಟಿ ಕವನದ ವಸ್ತು. ಮುದುಕನಾದ ಯೇಟ್ಸ್ ತನ್ನ ತೊಡೆಗಳ ಮೇಲೆ ಒಂದು ಕತ್ತಿಯನ್ನಿಟ್ಟುಕೊಂಡು ವಾದಿಸುತ್ತಿದ್ದಾನೆ- ಆತ್ಮದ ಜೊತೆ. ಜಪಾನಿ ಸ್ನೇಹಿತ ಸೇಟೋ ಎಂಬುವನು ಕೊಟ್ಟ ಈ ಕತ್ತಿ ೫೦೦ ವರ್ಷಗಳ ಹಿಂದಿನದು-ಮೊಂಟಶೀಗಿ ಎಂಬಾತನಿಗೆ ಸೇರಿದ್ದು. ಕಸೂತಿ ವಸ್ತ್ರ ಅದರ ಕೈಪಿಡಿಗೆ ಸುತ್ತಿದೆ. ಹೀಗೆ ಈ ಖಡ್ಗ ಜೀವನದ ಎರಡು ಮುಖ್ಯ ಆಸಕ್ತಿಗಳಾದ ಪ್ರೇಮ ಮತ್ತು ಸಮರಗಳ ಸಂಕೇತವಾಗುತ್ತದೆ.
ಈ ಪದ್ಯದಲ್ಲಿ ಆತ್ಮ ಮತ್ತು ದೇಹಗಳ ಜಗಳ ಪಡೆಯುವ ನಿರ್ಣಯವನ್ನು ‘ಬೈಜಾಂಟಿಯಂಗೆ ಯಾನ’ ಪದ್ಯದ ನಿರ್ಣಯದ ಜೊತೆ ಹೋಲಿಸಿ. ಈ ದ್ವಂದ್ವ ಯೇಟ್ಸ್‌ಗೆ ಕೇಂದ್ರವಾದ್ದು. 

ಆಯ್ಕೆ

ಬದುಕು ಮತ್ತು ಕೃತಿ ರಚನೆ ಎರಡರಲ್ಲೂ ಪಡೆವ ಸಾಫಲ್ಯ ಅನ್ಯೋನ್ಯವಾದ್ದು ಎಂದು ಹಿಂದಿನವರು ನಂಬಿದ್ದರು. ಆದರೆ ವ್ಯಗ್ರವಾದ ಆಧುನಿಕ ಕಾಲದ ಕವಿಯ ದೃಷ್ಟಿಯಲ್ಲಿ ಬಲಿ ಪಶುವಾಗದ ಹೊರತು ಕವಿಗೆ ಸಾರ್ಥಕ ಕವನ ರಚಿಸುವುದು ಅಸಾಧ್ಯ. ಬಾದಲೇರ್, ಯೇಟ್ಸ್‌, ರಿಂಬೊ ಅಂಥವರು ಒಂದು ದೃಷ್ಟಿಯಲ್ಲಿ ಗಿನಿಪಿಗ್‌ ಆಗಿ ಬರೆದವರೇ. 

ಮರುಳಿ ಜೇನ್‌ ಪಾದ್ರಿಗೆ

ಒಬ್ಬಳು ಹುಚ್ಚಿ ಮೇರಿ ಎಂಬ ಹೆಂಗಸನ್ನು ಮಾದರಿಯಾಗಿಟ್ಟುಕೊಂಡು ಯೇಟ್ಸ್‌ ಮರುಳಿ ಜೇನ್‌ನನ್ನು ಸೃಷ್ಟಿಸಿದ. ವೈರಾಗ್ಯದ ಪರವಾಗಿ ವಾಲಿದ್ದ ಯೇಟ್ಸ್‌ನ ಕೊನೆಗಾಲದ ಕಾಮದ ಪರವಾದ ಈ ನಿಲುವು, ಮುದಿತನದ ಆಕ್ರೋಶ ಎಲ್ಲವನ್ನೂ ಈ ಪದ್ಯದಿಂದ ಪ್ರಾರಂಭವಾಗುವ ಅನೇಕ ಪದ್ಯಗಳಲ್ಲಿ ಕಾಣಬಹುದು. ‘ಪರಮಧೂರ್ತ ಹುಂಬ ಮುದುಕ’ ಈ ಬಗೆಯ ‘ಹುಚ್ಚಿನ ಕಾವ್ಯ’ಕ್ಕೆ ಸೇರಿದ್ದು.

(೧೧-೧೩) — ಕಾಮೋದ್ರೇಕ ಶಮನದ ಸ್ಖಲನೋತ್ತರ ಸ್ಥಿತಿಯೂ ಮರಣ ಕಲಿಸುವ ಸತ್ಯವನ್ನು ಹೊಳೆಯಿಸಬಲ್ಲದು. 

ರಾಜಕೀಯ

ಯೂರೋಪ್‌ ಭಯಂಕರವಾದ ರಾಜಕೀಯ ತಿಕ್ಕಾಟಗಳಿಗೆ ಪ್ರವೇಶಿಸುತ್ತಿದ್ದ ಕಾಲದಲ್ಲಿ ತುಂಬ ರಾಜಕೀಯವಾಗಿಯೂ ಯೋಚಿಸಿದ್ದ ಮುದುಕನಾದ ಯೇಟ್ಸ್‌ನ ಈ ಪ್ರಾಮಾಣಿಕ ಅನ್ನಿಸಿಕೆಯನ್ನು ಗಮನಿಸಬೇಕು.

(೫) — ‘ಬಹೂದಕ’ ಎಂದರೆ ಬಹಳ ಊರಿನ ನೀರು ಕುಡಿದವನು ಎಂದರ್ಥ. ‘ಶ್ರೀ ರಾಮಕೃಷ್ಣ ವಚನವೇದದಲ್ಲಿ’ ಈ ಪದಪ್ರಯೋಗವಿದೆ.