ಏರೇರುವ ಮರವೇ, ಇಹದಾಚೆ ಭವಿಸಿದ ಸೋಜಿಗವೇ
ಆರ್ಫಿಯಸ್‌ ಹಾಡಿಗೆ ಕಿವಿಯಲ್ಲಿ ಎದ್ದು ನಿಲ್ಲುವ ಮರವೇ
ಸಕಲವೂ ಸುಮ್ಮನೆ ಇರುವಂತಿರುವ ಈ ನೀರವದಲ್ಲೂ
ಉದಯದ ತುಡಿತ, ಕರೆಯುವ ಸನ್ನೆ, ಹೊರಳುವ ಸೂಚನೆ

ಮೇರೆಯಿಲ್ಲದ ಅರಣ್ಯದ ಶೋಭೆಯಲ್ಲಿ
ಬಿಲ, ಗೂಡು , ಗುಹೆಗಹ್ವರಗಳಲ್ಲಿ ಅವಿತಿದ್ದ
ಸಕಲ ಜೀವಜಂತು ತೆವಳಿ ಹೊರಬಂದು ಸುಮ್ಮನೇ ಕಾದವು.
ನಿತ್ಯದ ಗುಟುರು ಗರ್ಜನೆ ಕೇಕೆ ಅಲ್ಪವೆನ್ನಿಸಿ, ಗಂಟಲಲ್ಲೇ ಇಂಗಿದಂತಾದ
ಆ ನಿಗೂಢ ಮೌನ ಭೀತಿಯದಲ್ಲ, ಹೊಂಚುವ ಸಂಚಲ್ಲ, ಪೆಚ್ಚಲ್ಲ
ಆರ್ತವಾದ ನಾದ ನಿರೀಕ್ಷೆ.

ನಾದಕ್ಕೆ ಒಂದು ಹರಕು ಜೋಪಡಿಯ ಆಶ್ರಯವೂ ಇರದಿದ್ದಲ್ಲಿ
ಮೃಗ ಪಕ್ಷಿ ಲೋಕದ
ಗೂಢವಾದ ದಟ್ಟ ಕತ್ತಲಿನ ಆರ್ತತೆ ತೋಡಿಕೊಂಡ ಗುಣಿಯ
ಕಂಪಿಸುವ ಛಾವಣಿಯೊಳಗೆ
ಆಲಿಸುವ ಒಳಗಿವಿಯಲ್ಲಿ
ನೀನು ಗುಡಿಕಟ್ಟಿ ನೆಲೆಸಿದಿ

ಫೆಬ್ರುವರಿ ೧೯೨೨ರಲ್ಲಿ ಎರಡೇ ಎರಡು ವಾರಗಳ ಅವಧಿಯಲ್ಲಿ ರಿಲ್ಕೆ ಎರಡು ಭಾಗಗಳಾಗಿ ಈ ಸಾನೆಟ್ಟುಗಳನ್ನು ಬರೆದ. ಮೊದಲ ಭಾಗದಲ್ಲಿ ೨೬ ಸಾನೆಟ್ಟುಗಳು ಇವೆ; ಎರಡನೆಯ ಭಾಗದಲ್ಲಿ ೨೯ ಸಾನೆಟ್ಟುಗಳು ಇವೆ. ಈ ಪದ್ಯಗಳು ತನ್ನಿಂದ ‘ಬರೆಸಿಕೊಂಡವು’ ಎಂಬ ವಿಸ್ಮಯದಲ್ಲಿ ರಿಲ್ಕೆ ಅವುಗಳ ಹುಟ್ಟನ್ನು ವಿವರಿಸುತ್ತಾನೆ. ಈ ಸಾನೆಟ್ಟುಗಳಿಗಿಂತ ಮುಂಚೆ (?) ಅವನು Duino Elegies ಬರೆದಿದ್ದ. ಬರೆದು ದಣಿದಿದ್ದ; ಖಾಲಿಯಾಗಿದ್ದ. ಈ ಸಾನೆಟ್ಟುಗಳ ಹಿಂದಿರುವ ಪ್ರೇರಣೆ (ನೆವ?) ತಾನು ಒಮ್ಮೆ ಮಾತ್ರ ಕಂಡಿದ್ದ ಪರಿಚಿತನೊಬ್ಬನ ಪ್ರತಿಭಾಶಾಲಿ ಮಗಳ ಸಾವು; ತನಗೆ ಯಾರೋ ಕೊಟ್ಟ ಲೈರ್ ನುಡಿಸುತ್ತಿರುವ ಆರ್ಫಿಯಸ್‌ನ ಚಿತ್ರ; ಹಾಗೂ ಪಾಲ್‌ ವಾಲೆರಿ ಎಂಬ ಫ್ರೆಂಚ್‌ ಕವಿಯ ಒಂದು ಪ್ರಬಂಧ. ನಡುಪ್ರಾಯದಲ್ಲೇ ಕಾಲವದ ವೇರ ಊಕಮಾ ನೋಫ್‌ಗೆ ಈ ಸಾನೆಟ್ಟುಗಳು ಸ್ಮಾರಕವೆಂದು ರಿಲ್ಕೆ ಹೇಳಿಕೊಳ್ಳುತ್ತಾನೆ. ತಾನು ಬರೆದಿದ್ದಲ್ಲ, ಕೇಳಿ ಬರೆಯಿಸಿಕೊಂಡದ್ದು ಎಂದು ಹೇಳುವ ರಿಲ್ಕೆ, ಬ್ಲೇಕನ್ನು ನಮಗೆ ನೆನಪು ಮಾಡುತ್ತಾನೆ. ‘ವಿಷನ್‌’ ಎಂಬ ದಾರ್ಶನಿಕ ಕೃತಿಯನ್ನು ಅಗೋಚರ ಶಕ್ತಿಗಳ ಮುಖೇನ ತನ್ನ ಹೆಂಡತಿಯಿಂದ ಯೇಟ್ಸ್‌ ಪಡೆದ ಬಗೆಯನ್ನೂ ನಾವಿಲ್ಲಿ ನೆನೆಯಬಹುದು.

ಇಲ್ಲಿರುವ ಹೆಣ್ಣು ನಿಜದ ವೇರಾಳೂ ಹೌದು; ಪ್ರೀತಿಸಿ ಪಡೆದು ಕಳೆದುಕೊಂಡ ಆರ್ಫಿಯಸ್‌ನ ಯೂರಿಡಿಸ್‌ ಕೂಡ ಹೌದು.

ಮೊದಲ ಎರಡು ಸಾನೆಟ್ಟುಗಳನ್ನು ಮಾತ್ರ ನಾನು ಇಲ್ಲಿ ಅನುವಾದಿಸಲು ಪ್ರಯತ್ನಿಸಿದ್ದೇನೆ.  ಈ ಸಾನೆಟ್ಟುಗಳಲ್ಲಿ ಎಲ್ಲೆಲ್ಲೂ ರೋಡಿನ್‌ ಬಯಸುವ ಹಾಗೆ ಹೊಳೆಯುವ ವಸ್ತುಗಳೇ (ವಸ್ತು ಪ್ರತಿರೂಪ/ವಿಭಾವ) ಭಾವಗಳನ್ನೂ ನಮಗೆ ಹೊಳೆಯಿಸುತ್ತವೆ.

೨೦೦೯