ಮತ್ತವಳು ಕೇವಲ ಬಾಲೆ
ಅವಳ ಚೈತ್ರದ ಶುಭ್ರ ತೆಳುಹೊದಿಕೆಯಿಂದ
ಹೊಮ್ಮಿ ಹೊಳೆಯುವ ಅವಳ ಲಾವಣ್ಯವೇ
ಹೆತ್ತಂತಿರುವ ಅವಳ ನಾದದುಲ್ಲಾಸ
ನಟಿಸಿ, ಸ್ಫೋಟಿಸಿ
ನನ್ನ ಕಿವಿಯೊಳಗೆ ಹಾಸಿ ಮಲಗಿದಳು
ಕೋಮಲೆ, ಸುಮನಸೆ, ಕೇವಲ ಬಾಲೆ.

ಮಲಗಿ ನಿದ್ದೆ ಹೋದಳು ಬಾಲೆ, ಏನದು ನಿದ್ದೆ?
ನನ್ನ ಪಾಲಿಗದು ನನ್ನ ಅಚ್ಚರಿಯ ವಿಶಾಲ ವೃಕ್ಷಗಳು;
ದೂರಾತಿದೂರ ಎನ್ನಿಸುವ ಅಗಮ್ಯದ ಕಾಮನೆಗೆ
ಎಟುಕಿಬಿಟ್ಟ ಪ್ರಸಾದ;
ವಸಂತ ಸಂಭ್ರಮದ ತೋಟ;
ಮರ್ಮ ತಿಳಿಯದಂತೆ ನನ್ನ ಅವಾಕ್ಕಾಗಿಸುವ ಎಲ್ಲ ವಿಸ್ಮಯ

ಜಗತ್ತನ್ನೇ ಅವಳು ನಿದ್ದಿಸಿ ಬಿಟ್ಟಿದ್ದಳು. *
ಗಾನ ದೇವತೆಯೇ ಹೇಳು
ಎಚ್ಚರದ ಅಪೇಕ್ಷೆಯೇ ಹುಟ್ಟದ ಹಾಗೆ ಈ ಮೊದಲ ಗಾಢ ನಿದ್ದೆಯ,
ಕನ್ನಿಕೆಯ ನಾದೋಪಾಸನೆ
ಫಲಿಸಿ ಮಾಗಿದ ಸಿದ್ಧಿಯ
ಗೂಢವೇನು ಹೇಳು. ಕ್ಷಣ ಎದ್ದ ಬಾಲೆ ಮತ್ತೆ ನಿದ್ದೆ ಹೋದಳು ನೋಡು.

ಇನ್ನು ಅವಳ ಸಾವೆಲ್ಲಿ?
ನಿನ್ನ ಗಾನ ಫಲವತ್ತಾದ ಮೇಲೆ ಅದು ನಿನಗೆ ಹೊಳೆದೀತೆ?
ನನ್ನಿಂದ ಅವಳು ಇಂಗಿ ಹೋಗುವಳೆ?
ಕೇವಲ ಬಾಲೆ? …

 

*She slept the world ಎಂಬುದು ಜರ್ಮನ್‌ನಿಂದ ಇಂಗ್ಲಿಷಿಗೆ ಸ್ಟಿಫೆನ್‌ ಮಿಚೆಲ್‌ ಮಾಡಿದ ಭಾಷಾಂತರ. ‘ಅವಳ ನಿದ್ದೆ ಜಗತ್ತಾಯಿತು’ ಎನ್ನಬೇಕೊ? ‘ಅವಳು ಜಗತ್ತನ್ನು ನಿದ್ದಿಸಿದಳು’ ಎನ್ನಬೇಕೊ? ತಿಳಿಯದು. ನಾನು ಬಳಸುವ ಉಳಿದ ಇಬ್ಬರು ಅನುವಾದಕರೂ ಮಿಚೆಲ್‌ನನ್ನೆ ಅನುಸರಿಸಿದ್ದಾರೆ. ನೋಡಿ: Maclntyre. Plulin Jr. ಪದ್ಯದ ಈ ಮಾತನ್ನು ಅನುವಾದಿಸುವಾಗ ಅನಂತ ಕಾಲದ ನಿದ್ರೆಯ ವಿಷ್ಣುಶಯನ ನನಗೆ ನೆನಪಾಯಿತು.

ಈ ಪದ್ಯದ ಬಾಲೆ ರೇವ ಎನ್ನುವ ಹುಡುಗಿ; ಕವಿಗೆ ಪರಿಚಿತನಾದೊಬ್ಬನ ಮಗಳು. ಅದ್ವಿತೀಯ ಸಂಗೀತಗಾರಳೂ, ನರ್ತಕಿಯೂ ಆದ ಇವಳು ಗ್ಲಾಂಡುಲರ್ ಖಾಹಿಲೆಯಿಂದ ಕುರೂಪಗೊಂಡು ಯೌವನದಲ್ಲೇ ಸತ್ತಳು.

ಆದರೆ ಕವಿಗೆ ಇವಳು ರೇವಾನೂ ಹೌದು, ಪುರಾಣದಲ್ಲಿ ಆರ್ಫಿಯಸ್‌ ಪ್ರೀತಿಸುವ, ತನ್ನ ಸಂಗೀತದಿಂದ ಮೃತ್ಯದೇವತೆಗಳನ್ನು ಗೆದ್ದು ನರಕಲೋಕದಿಂದಲೂ ಬೇಡಿ ತರುವ, ಯೂರಿಡಿಸ್‌ ಕೂಡ ಇವಳು. ಮೃತ್ಯದೇವತೆಗಳು ಅವಳನ್ನು ಆರ್ಫಿಯಸ್‌ಗೆ ಒಲಿದು ಕಳುಹಿಸುವಾಗ ಒಂದು ವಚನ ತೆಗೆದುಕೊಂಡಿರುತ್ತಾರೆ. ಹೇಡ್ಸ್‌ನಿಂದ ಭೂಲೋಕ ಸೇರುವತನಕವೂ ತನ್ನ ಬೆನ್ನ ಹಿಂದೆ ನಡೆದುಬಂದ ಪ್ರೇಯಸಿ ಯೂರಿಡಿಸ್‌ನನ್ನು ಅವನು ತಿರುಗಿ ನೋಡಕೂಡದು. ಆದರೆ ಆರ್ಫಿಯಸ್‌ ತಡೆಯಲಾರದೆ ಹಿಂದಕ್ಕೆ ನೋಡಿ ಅವಳನ್ನು ಶಾಶ್ವತವಾಗಿ ಕಳೆದುಕೊಂಡುಬಿಡುತ್ತಾನೆ.

ಕೆಲವೇ ದಿನಗಳಲ್ಲಿ ಆವಾಹಿತನಾದವನಂತೆ ರಿಲ್ಕೆಯು ಈ ಹಲವು ಸಾನೆಟ್ಟುಗಳನ್ನು ರಚಿಸಿದ; ಕೆಲವೊಮ್ಮೆ ಕವಿಗಳನ್ನು ಕವಿಯುವ ಮಂಕಿನಿಂದ ಹೊರಬಂದ. ಆಮೇಲೆ (?) ತನ್ನ ಎಲಿಜಿಗಳನ್ನು ಬರೆದ.

೨೦೦೯