ಪಾರಿಜಾತದ ಮಧುರ ಈ ನಿಮ್ಮ ವಿನಯ
ಹುಳ ಹುಪ್ಪಟೆಗು ಪ್ರಭು ನಿಮ್ಮ ಸಹವಾಸ
ಪುಟ್ಟ ಬೀಜದ ಒಳಗು ಚಾಚಿ ನಿಮ್ಮಾರಾಮ
ಘನದಲ್ಲಿ ನಿರಂಬಳದ ನಿಮ್ಮ ವಾಸ್ತವ್ಯ
ಸರಳ, ಬಲು ಸರಳ, ಪ್ರಭು ಈ ನಿಮ್ಮ ವಿನಯ.

ಸುರಿದುಬಿಟ್ಟಿರಿ ನಿಮ್ಮ ಸರ್ವಸ್ವ, ಮುದ್ದಾಮಾಗಿ
ಚಿತ್ತೈಸಿದಿರಿ ಇಲ್ಲೆ ಒಗ್ಗಿ ಇರಲು
ಇದ್ದು ಇಲ್ಲದ ಹಾಗೆ ಸೀದ ಒಡನಾಡುವಿರಿ
ತುಡಿದು ಬೇರುಗಳಲ್ಲಿ ತುಂಬಿ ಕಾಂಡ
ಸೂಕ್ಷ್ಮ, ಅತಿ ಸೂಕ್ಷ್ಮ ಪ್ರಭು ಈ ನಿಮ್ಮ ವಿನಯ.

ಖುದ್ದಾಗಿ ನೀವೆ ಹೊರಗಿಣುಕಿದಂತೆ ಚೈತ್ರದ ತೇರು
ಮುಡಿದು ಧಾರಾಳ ಮರದ ತುದಿ ಚಿಗುರು
ಬೆರಗಾದೆ ಇಷ್ಟು ಸರಸದ ನಿಮ್ಮ ಸಂಸರ್ಗಕ್ಕೆ
ನೀವೆ ಪರವಶವಾಗಿ ತೊಡಗಿರುವ ಪರಿಗೆ
ಗೂಢಾತಿಗೂಢ ಪ್ರಭು ಈ ನಿಮ್ಮ ವಿನಯ

..೮೯

 

ಮಿಚೆಲ್‌ ಅನುವಾದಿಸಿದ ರಿಲ್ಕೆಯ ಒಂದು ಪದ್ಯದ ಹೆಸರು `I find you Lord in all Things in all’ ನನ್ನಲ್ಲಿ ಅನುರಣನಗೊಳ್ಳುತ್ತ ಎಷ್ಟು ನನ್ನದೇ ಆಯಿತೆಂದರೆ ನನ್ನದೇ ಪದ್ಯವೆನ್ನುವಂತೆ ಅದು ಹಿಂದೆ ಪ್ರಕಟವಾಯಿತು. ಮತ್ತೆ ರಿಲ್ಕೆ ಓದುತ್ತ ಮೂಲ ತಿಳಿದು ಅದನ್ನು ಇಲ್ಲಿ ಗುರುತಿಸಿದ್ದೇನೆ. ನಾನೇ ಮೂಲ ಮರೆಯುವಷ್ಟು ಕನ್ನಡವಾದ ಈ ಪದ್ಯದ ಮೂಲಧಾತು ಮಿಚೆಲ್‌ನದು. ಇಂಗ್ಲಿಷ್‌ನಲ್ಲಿ ಥಿಂಗ್ಸ್‌ (ಜಡ ಚೇತನಗಳ ನಡುವಿನ ಭಿನ್ನತೆ ಕಳೆದುಕೊಂಡು ಇರುವ ವಸ್ತುಗಳು) ರೋಡಿನ್‌ನನ್ನು ಭೇಟಿಯಾದ ನಂತರ ಕವಿಗೆ ಮುಖ್ಯವಾದವು. ಆಮೇಲೆ ರಿಲ್ಕೆ ಬರೆದ ಅಚ್ಚುಕಟ್ಟಾದ ಕಿರಿ ಕವನಗಳನ್ನು ಥಿಂಗ್ಸ್‌ – ಕವನಗಳು ಎಂದು ಕರೆಯುವುದು ಉಂಟು. ಮಾತಿನಲ್ಲಿ ಉಕ್ಕುವ ಮಹಾಕವಿ ಗಯಟೆಯಿಂದ ಜರ್ಮನ್‌ ಭಾಷೆಯನ್ನು ಪಾರುಮಾಡಿದವನು ರಿಲ್ಕೆ ಎನ್ನುತ್ತಾರೆ.

ಇಂತಹ ಪ್ರಯೋಗಗಗಳನ್ನು ‘ಅನುವಾದ’ ಎಂದು ಕರೆಯುವುದು ಸಾಧ್ಯವೆ?