ಜರ್ಮನ್‌ನಲ್ಲಿ ರೈನರ್ ಮರಿಯಾ ರಿಲ್ಕ್ ಎಂಬ ಮಹಾಕವಿ
ಹೇಳಿದ ಒಂದು ನೀತಿ ಕಥೆಯನ್ನು
ಇಂಗ್ಲಿಷಿನಲ್ಲಿ ಸ್ಟೀಫನ್‌ ಮಿಚೆಲ್‌ ಎಂಬ ಸಹೃದಯ ಕೇಳಿಸಿಕೊಂಡು ತನ್ನವರಿಗೆ ಹೇಳಿದ್ದನ್ನು
ಸುಂದರವಾದ ಕಣ್ಣುಗಳ ಅಮೆರಿಕನ್‌ ಕವಿಯೊಬ್ಬಳು ಮೆಚ್ಚಿ
ನನಗೆ ಮನದಟ್ಟುವಂತೆ ಮಾಡಿದ್ದನ್ನು
ಈಗ ಕನ್ನಡದಲ್ಲಿ ಗ್ರಹಿಸಿ, ಹೀಗೆ ಸಂಗ್ರಹಿಸುತ್ತಿದ್ದೇನೆ: ಕೇಳಿಸಿಕೊಳ್ಳಬೇಕು:

ಅವನೊಬ್ಬ ಮಹಾಕವಿ,
ಬಹಳ ಕಾಲ ನೋಡಿ ನೋಡಿ ಕೃತಾರ್ಥನಾದ.
ಅವನ ಧೀರ ನೋಟದ ಒತ್ತಾಸೆಗ
ನಕ್ಷತ್ರಗಳು ಶರಣಾದವು.
ಮತ್ತು, ನಿದ್ದೆಗೆಟ್ಟು ಮಂಡಿಯೂರಿ ಏಕಾಗ್ರವಾದ ಜಾಗರಣೆಯಲ್ಲಿ
ದಿಟ್ಟಿಸಿದ ಅವನ ಹಠದ ಘಾಟು
ಒಂದು ದೇವತೆಯನ್ನು ಅದೆಷ್ಟು ಸುಸ್ತುಪಡಿಸಿತೆಂದರೆ
ತನ್ನ ನಿದ್ದೆಯಲ್ಲದು ನಗಲೇಬೇಕಾಯಿತು.

ಅವನು ಮಹಾಕವಿ, ಶಿಖರಗಳನ್ನು ದುರುಗುಟ್ಟಿ ಅಲ್ಲಾಡಿಸಿ
ಬೀಳಿಸುತ್ತಿದ್ದ, ಹಾಗೆಯೇ ಕ್ಷಣಮಾತ್ರದಲ್ಲಿ ಕಟ್ಟಿಯೂ ಬಿಡುತ್ತಿದ್ದ.

ಹುಲ್ಲುಗಾವಲುಗಳು ಹಗಲಿಗೆ ದಣಿದು, ರಾತ್ರೆ
ಬಾಡಿ ಅವನ ತಂಪಾದ ಅವಗಾಹನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.
ಪ್ರಾಣಿಗಳು ಅವನನ್ನು ನೆಚ್ಚಿ
ತೆರೆದುಕೊಂಡ ಅವನ ದೃಷ್ಟಿಯೊಳಕ್ಕೆ ಮೇಯುತ್ತ ಬಂದವು.
ಬಂಧಿಯಾದ ಸಿಂಹಗಳು
ಊಹಿಸಲೂ ಅಸಾಧ್ಯವಾದ ಸ್ವಾತಂತ್ಯ್ರವನ್ನು ಅವನ ನೋಟದಲ್ಲಿ ಕಂಡವು.
ಅವನ ನೋಟವನ್ನು ಸವಿದ ಪಕ್ಷಿಗಳು
ನಿರಾಯಾಸ ಹಾರಿದವು.
ಹೂವುಗಳು
ಮಕ್ಕಳಿಗೆ ತೋರುವಂತೆ ಬೃಹತ್ತಾಗಿ ಅರಳಿ
ಸತತ ಅವನಿಗೇ ಆಗಿ ನೋಡಿದುವು.

ನೋಡುವುದರಲ್ಲೆ ಇಂಥ ಒಬ್ಬ ನುರಿತ ಕುಶಲಿ
ಇದ್ದಾನೆಂಬ ಸುದ್ದಿ ಹರಡಿದ್ದೇ
ಸುಲಭವಾಗಿ ಕಣ್ಣಿಗೆ ಬೀಳದ ವಿಶೇಷ ಪ್ರಾ ಣಿಗಳು
ಚುರುಕಾದವು
ಹೆಂಗಸರು ಪುಳಕಗೊಂಡರು.

ಹೀಗೆ ನೋಡುವುದೇ ಕಸುಬಾಗಿಬಿಟ್ಟ ಅವನು
ತನ್ನ ಮನೆಯಿಂಧ ದೂರವಿದ್ದಾಗ, ಒಂದು ದಿನ
ಆದರವಿಲ್ಲದ ಕಾರಿಡಾರುಗಳ
ಯಾವುದೋ ಹೊಟೇಲಿನ
ಯಾವುದೋ ಕೋಣೆಯಲ್ಲಿ
ಮಂಕಾಗಿ ಕೂತಿದ್ದಾಗ,
ಅವನ ಕಣ್ಣಿಗೆ ಬೀಳದಿದ್ದ ಒಂದು ಕನ್ನಡಿಯಲ್ಲಿ
ಆ ಕೋಣೆ, ಕೋಣೆಯಲ್ಲಿ ಮಂಕಾಗಿ ಕೂತ ಅವನು
ಪ್ರತಿಫಲಿಸಿದ್ದು, ಇದು ಅಸಂಖ್ಯವಾಗಿ ಪ್ರತಿಫಲಿಸುತ್ತ ಹೋದದ್ದು

ಮಲಗಲೆಂದು ಕಾಲು ಚಾಚಿದಾಗ ಅವನಿಗೆ ಕಾಣಿಸಿ
ಅದೇ ಅದೇ ಕಾಣಿಸುತ್ತಲೇ ಇರಲು
ಮಲಗಿದ ಹಾಸಿಗೆ ಮುಳ್ಳಾಗಿ

ಅಶರೀರ ವಾಣಿಯೊಂದು ಕೇಳಿಸಿತು:

‘ನಿನ್ನ ಹಠಕ್ಕೆ ಶರಣಾದವು ನಿನಗೆ ತಿಳಿಯವು.
ನೋಡಲ್ಪಟ್ಟವು ಪ್ರೀತಿಯಲ್ಲಿ ಬೆಳೆಯಲು ಬಯಸುತ್ತವೆ.
ಪ್ರಕೃತಿಯ ಅಸಂಖ್ಯ ಧಾತುಗಳಿಂದ ಪಡೆದ ಹೆಣ್ಣನ್ನು ನೀನು ಪ್ರೀತಿಸಲಿಲ್ಲ.
ತೀವ್ರತೆ ಮಹತ್ತಾಗುವ ಮಾರ್ಗದಲ್ಲಿ ತ್ಯಾಗ ಇದೆ.’

ಈ ಒಣ ಮಾತುಗಳು ಮಹಾಕವಿ ತಿಳಿಯದಂಥವೆ? ಆದರೆ,
ಕಣ್ಣುಮುಚ್ಚಿ, ತನ್ನ ಒಳಗಿನ ಹೆಣ್ಣನ್ನು ಮೂಸಲು, ಮುಟ್ಟಿ
ತಡವಲು ಪ್ರಯತ್ನಿಸುತ್ತ
ಈಗ ಮಾತು ಬಾರದವನಾಗಿ ಭರವಸೆಯಲ್ಲಿ ಕಾದಿದ್ದಾನೆ.

೧೧..೯೨
(
ಇದುವರೆಗಿನ ಕವಿತೆಗಳು)