ಅಷ್ಟೊಂದು ರೆಪ್ಪೆಗಳ ಒಳಗೆ
ಆದಾರ ನಿದ್ದೆಯೂ ಆಗದ ಮುದದ
ಆಹಾ ಶುದ್ಧ  ವೈರುದ್ಧ್ಯದ
ಗುಲಾಬಿ

ರಿಲ್ಕೆ ಕವಿಯನ್ನು (೧೮೭೫-೧೯೨೬) ಹೂಳಿದ ಜಾಗದಲ್ಲಿರುವ ಒಂದು ಸಾಮಾನ್ಯ ಕಲ್ಲಿನ ಮೇಲೆ ರಿಲ್ಕೆ ಕೆತ್ತಿಸಿಕೊಂಡ ಪದ್ಯ.

ಅದರ ಇಂಗ್ಲಿಷ್‌ ಭಾಷಾಂತರ ಮಿಚೆಲ್‌ನದು ಹೀಗಿದೆ:

Rose, Oh pure contradiction, joy
Of being No-one’s sleep under so many
Lids

ಸ್ಟೀಫನ್‌ ಮಿಚೆಲ್‌ ನನಗೆ ಪ್ರಿಯನಾದ ಅನುವಾದಕ; ತನ್ನೊಳಗೆ ಬರಲಾರದ ರಿಲ್ಕೆಯ ಪದ್ಯಗಳನ್ನು ಆತ ಅನುವಾದಿಸುವುದೇ ಇಲ್ಲ. ನನ್ನ ಅನುಭವದಲ್ಲಿ ಬ್ರೆಕ್ಟ್‌ನನ್ನು ಅನುವಾದಿಸುವಷ್ಟು ಅವಕಾಶ ರಿಲ್ಕೆಯಲ್ಲಿ ಇರುವುದಿಲ್ಲ. ಬ್ರೆಕ್ಟ್‌ನಲ್ಲಿ ಕವನದ ವಸ್ತುವನ್ನು (ಥೀಮನ್ನು) ಸಂಗ್ರಹಿಸಿಯೂ ಹೇಳಬಹುದಾದ ಪದ್ಯಗಳು ಅನುವಾದದಲ್ಲಿ ತೀರಾ ಬಳಲುವುದಿಲ್ಲ. ಆದರೆ ಬೇಂದ್ರೆ ಅಥವಾ ರಿಲ್ಕೆಯಂತಹ ಕವಿಗಳು ಅನುವಾದದಲ್ಲಿ ಕಳಪೆಯಾಗಿ ಕಂಡಾರು. ಅಥವಾ ಪ್ರತಿಭೆಯಿಲ್ಲದ ಕವಿಯೊಬ್ಬ ಅನುಕರಣೆ ಮಾಡಬಲ್ಲ ಕವಿಯಂತೆ ಕಂಡಾರು. ನಾನು ಅನುವಾದಿಸಿದ ಫ್ರೆಂಚ್‌ ಕವಿ ವರ್ಲೆನ್‌ನ ಸಿಂಬಲಿಸ್ಟ್‌ ಕಾವ್ಯಮಾರ್ಗದ ಮ್ಯಾನಿಫೆಸ್ಟೊನಂತಿರುವ ಸಾಲುಗಳಲ್ಲಿ ಆತ ಬಯಸುವಂತೆ ಸಂಗೀತಕ್ಕೆ ಹತ್ತಿರವಾಗುವ ಕವನಗಳು ಇವನವು. ಇಲ್ಲಿನ ಗುಲಾಬಿ ಅದರ ಮುಳ್ಳಿನಲ್ಲಿ ರಿಲ್ಕೆಗೆ ಸಾವನ್ನು ತಂದಿತೆಂದು ಅವನು (ತಪ್ಪಾಗಿ) ಭಾವಿಸುವ ವಿಷವನ್ನೂ, ಜೀವಕಾಮವನ್ನೂ, ಆರ್ಫಿಯಸ್‌ ವ್ಯರ್ಥಹುಡುಕುವ ಯೂರಿಡಿಸ್‌ನನ್ನೂ, ಆರ್ಫಿಯಸ್‌ನನ್ನೂ ಏಕಕಾಲದಲ್ಲಿ ಸಂಕೇತಿಸುವ ವಸ್ತುವೂ ಹೌದು, ಪರವಸ್ತುವೂ ಹೌದು. ಮಾತು ಹಲವು ಅರ್ಥಗಳ ಛಾಯೆಯನ್ನು ಪಡೆದ ನಾದವಾದಾಗ ಈ ಅನುರಣನಗಳು ಕಾವ್ಯದಲ್ಲಿ ಮಾತ್ರ ಸಾಧ್ಯ. ಜರ್ಮನ್‌ನಲ್ಲಿ ಸಾಧ್ಯವಾದ್ದು ಕನ್ನಡದಲ್ಲಿ ಸೂಚ್ಯವಾದರೂ ‘ಅದೇ’ ಅಲ್ಲ. ಹಾಗೆಯೇ ಕನ್ನಡದಲ್ಲಿ ಸಾಧ್ಯವಾದ್ದು ಕನ್ನಡದ ಕಿವಿಗೆ ಮಾತ್ರ ಲಭ್ಯವಾದ್ದು.

ಈ ಕವನದ ಹಲವು ಅನುವಾದಗಳನ್ನು ಮಾಡಿ ನಾನು ಗೆಳೆಯ ಓ.ಎಲ್‌.ಎನ್‌ಗೆ ಕಳಿಸಿದೆ. ನಾನು ಮಾಡಿದ್ದು ಹಲವಾರು. ಅವುಗಳಲ್ಲಿ ಆಗಬಹುದು ಎಂಬ ಕೆಲವು ಅನುವಾದಗಳನ್ನು ಆಯ್ದು ಟೀಕಿಸುವಂತೆ ಕೇಳಿ ನಾನು ಬರೆದ ಪತ್ರಕ್ಕೆ ಗೆಳೆಯ ಓ.ಎಲ್‌.ಎನ್‌. ತಮ್ಮದೇ ಅನುವಾದಗಳ ಮೂಲಕ ಮೊದಲು ಉತ್ತರಿಸಿದರು. ಅವರಿಗೂ ಅವರ ಅನುವಾದ ಸಾಲದು ಎನ್ನಿಸಿದಾಗ ಅವರು ಬರೆದ, ನನ್ನ ಪಾಲಿಗೆ ಅನುವಾದವೆಂಬ ಪ್ರಕ್ರಿಯೆ ಬಗ್ಗೆ ಕನ್ನಡದಲ್ಲಿ ಇರುವ ಒಂದು ಮುಖ್ಯ ಲೇಖನ ಮುಂದಿನ ಟಿಪ್ಪಣಿಯ ರೂಪದಲ್ಲಿದೆ. ( ಈ ಟಿಪ್ಪಣಿಯ ನಂತರವೂ ನಮ್ಮ ನಡುವಿನ ವಾಗ್ವಾದ ಬಗೆಹರಿದಿಲ್ಲ.) ನಾನು ಕಳುಹಿಸಿದ ಕೆಲವು ಅನುವಾದ ಅಭ್ಯಾಸಗಳು ಇಲ್ಲಿವೆ.

೧)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ
ಹಿಗ್ಗಿನ
ಅಪ್ಪಟ ಅಂತರ್ವಿರೋಧದ
ಗುಲಾಬಿಯೇ

೨)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ
ಅಸಲೀ ಅಂತರ್ವಿರೋಧದ ಚೆಲುವಿನ
ಗುಲಾಬಿಯೇ

೩)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ
ಅಪ್ಪಟ ಅಂತರ್ವಿರೋಧದ ಚಂದದ
ಗುಲಾಬಿಯೇ

೪)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ ಚಂದದ
ಅಪ್ಪಟ ಇಬ್ಬಗೆಯ ಹೊಳಹಿನ
ಗುಲಾಬಿಯೇ

೫)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ ಚೆಲುವಿನ
ಅಪ್ಪಟ ಇಬ್ಬಗೆಯ ಸೆಳವಿನ
ಗುಲಾಬಿಯೇ

೬)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ದೆಯೂ ಆಗದ ಮುದದ
ಅಪ್ಪಟ ಇಬ್ಬಗೆಯ ಸೆಳವಿನ, ಹೊಳಹಿನ,
ಗುಲಾಬಿಯೇ

೭)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ದೆಯೂ ಆಗದ ಮುದದ (ಸುಖದ?)
ಅಪ್ಪಟ ಇಬ್ಬಗೆಯ ಸೆಳೆತದ
ಗುಲಾಬಿಯೇ

೮)       ಎಷ್ಟೊಂದು ರೆಪ್ಪೆಗಳಿದ್ದೂ
ಯಾರ ನಿದ್ರೆಗೂ ಒದಗದ
ಗುಲಾಬಿಯ ಗುಟ್ಟಿನ ಸ್ವಸ್ಥವೇ

೯)       ಎಷ್ಟೊಂದು ರೆಪ್ಪೆಗಳಲ್ಲಿ
ಯಾರ ನಿದ್ರೆಯೂ ಆಗಲೊಲ್ಲದ
ಗುಲಾಬಿಯ ಭವವೇ

೧೦)     ಎಷ್ಟೊಂದು ನಿದ್ರೆಯ ರೆಪ್ಪೆಗಳಿದ್ದೂ
ಯಾರ ನಿದ್ರೆಯೂ ಆಗದ
ತನಗೆ ತಾನೆ ವಿರೋಧಿಯಾದ
ಗುಲಾಬಿಯ ಸೊಗಸೇ

ರಿಲ್ಕೆಯನ್ನ ಅನುವಾದಿಸಲು ನಾನು ಬಳಸಿದ ಪುಸ್ತಕಗಳು ಇವು:

1. The Selected poetry of Rainer Maria Rilke, edited and translated by Stephen Mitchell , Vintage Books.

(೧೯೮೫ರಲ್ಲಿ ಅಮೆರಿಕನ್‌ ಕವಿ, ಗೆಳತಿ ಜೂಡಿತ್‌ ಕ್ರೋಲ್‌ ನನಗೆ ಈ ಪುಸ್ತಕ ಕೊಟ್ಟು ಓದಿಸಲು ಶುರುಮಾಡಿದ್ದನ್ನು ನೆನೆಯುತ್ತೇನೆ. ಆಗ ನಾನು ಅಯೊವಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಇದ್ದೆ. ಈ ಕವಿ ಗೆಳತಿಗೆ ಕೃತಜ್ಞ)

2. Rilke, Sonnets to Orpheus. With English Translation by C.F. Macintytre ಇವನು ರಿಲ್ಕೆಯ ಅನುಭಾವವನ್ನು ಅನುಮಾನದಿಂದ ನೋಡುತ್ತಾನೆ. ಕವನಗಳನ್ನು ಮೆಚ್ಚುವಾಗಲೂ ಕವಿಯ ಭಾಷೆ ಅನಗತ್ಯ ತೊಡಕುಗಳನ್ನು ತಂದೊಟ್ಟುತ್ತದೆ ಎನ್ನುತ್ತಾನೆ. ಮಿಚೆಲ್‌ಗೆ ರಿಲ್ಕೆ ಗುರುವಾದರೆ ಮಾಕಿಂಟಯರ್ ಗೆ ರಿಲ್ಕೆ ಕೊಂಚ ಆತ್ಮರತನಾದ ಮ್ಯಾಜಿಕಲ್‌ ಕವಿ; ಮಿಸ್ಟಿಕಲ್‌ ಕವಿ ಅಲ್ಲ.

3. Rainer Maria Rilke, Duino Elegies and the Sonnets to Orpheus, translated by A. Poulin. Jr.

ಎಲ್ಲಿಯೂ ದುಡುಕದ, ಮೀರಲು ಯತ್ನಿಸದ, ವಿನಯಶೀಲ ಅನುವಾದ. ಕನ್ನಡದಲ್ಲಿ ಅನುವಾದಿಸುವಾಗ ಉಪಯುಕ್ತ.