ಆದಿಶಂಕರ ಬಾಲ ಭಗವತ್ಪಾದರು
(ತತ್ವಮಸಿ) ದರ್ಶನದಲ್ಲಿ ತಲ್ಲೀನರಾಗಿ
ಅರಣ್ಯವೊಂದರಲ್ಲಿ ನಡೆಯುತ್ತಿದ್ದಾಗ
ಥಟ್ಟನೇ ಎದುರಾದ ಒಬ್ಬ ಚಾಂಡಾಲ

ಕುರುಚಲು ಗಡ್ಡದ ಲ್ಲಿ,
ಹಾಳೆಯ ಟೊಪ್ಪಿ, ಅದೇ ಹಾಳೆಯ ಒಂದು ಕೌಪೀನದ
ಅರೆಬೆತ್ತಲೆಯಲ್ಲಿ ಅವಧೂತನಂತೆ ಅವನ ರೂಪ,
ಎಗ್ಗಿಲ್ಲದೆ ಹೊಳೆಯುವ ಅವನ ಕಣ್ಣಲ್ಲೆ
ಮೃಗದ ಚುರುಕು ಎಚ್ಚರ.

ಹೀಗೊಂದು ದರ್ಶನದಂತೆ ಇದ್ದ ಅವನ ಕಡೆ
ಕಣ್ಣೆತ್ತಿಯೂ ನೋಡದೆ ಶಂಕರರು
ಅಸಡ್ಡೆಯಲ್ಲಿ
ದಾರಿಬಿಡು ಎಂಬ ಎಡಗೈ ಸನ್ನೆಮಾತ್ರ ಮಾಡಿ
ನಂಬೂದರಿ ಬ್ರಾಹ್ಮಣರಿಗೆ ಎಲ್ಲೆಲ್ಲೂ ಸಲ್ಲುವ ಗೌರವ
ಅರಣ್ಯದಲ್ಲೂ ಸಲ್ಲುವುದೆಂಬ ಖಾತ್ರಿಯಿಂದ
ಎರಡು ಹೆಜ್ಜೆ ಮುಂದಿಟ್ಟು ನೋಡಿದರೆ
ಅರೆ,
ನಿಂತೇಬಿಟ್ಟಿದ್ದಾನೆ ಎಟುಕುವಷ್ಟು ದೂರದಲ್ಲಿ.
ತಾನು ಗಕ್ಕನೆ ನಿಂತಿದ್ದೇನೆ ಅವನ ಅಸ್ಪೃಶ್ಯ ನೆರಳಿನಲ್ಲಿ.

ಮಾಡುವುದೇನು ತೋಚದೆ ಬೆಪ್ಪಾದ ಬಾಲತಪಸಿಯ ಕುಂದಿದ ತೇಜಸ್ಸನ್ನು
ಚಾಂಡಾಲ
ಮುಡಿಯಿಂದ ಪಾದದವರೆಗೆ ಮತ್ತೆ ಬೆಳಗಿಸುವಂತೆ ನೋಡುತ್ತ
ನುಡಿದ:
ನೀನೂ ಆತ್ಮ , ನಾನೂ ಆತ್ಮ
ಮೇಲಾರು, ಕೀಳಾರು?
ಹೇಳು.

ಇಂತು ಭಗವತ್ಪಾದರಿಗೆ ಥಟ್ಟನೆ ಜ್ಞಾನೋದಯವಾಯಿತು; ಒಳಹೊರಗಿನ ಭೇದ ಕಳೆದ ಈ ಚಾಂಡಾಲ ಪರಶಿವನೇ ಆಗಿದ್ದ. ಸತ್ಯದರ್ಶನ ಮಾಡಿಸಿ ಮಾಯವಾದ. ನಾವೆಲ್ಲ ಹೀಗೊಂದು ಕಥೆ ಹೇಳುವಾಗ-

ನಮ್ಮ ಕಾಲದ ಪರಮ ಅದ್ವೈತಿ ನಾರಾಯಣಗುರುಗಳು ಈ ವೃತ್ತಾಂತಕ್ಕೆ ಒಂದೇ ಒಂದು ಮಾತು ಸೇರಿಸುತ್ತಾರೆ. ನಿಜದಲ್ಲಿ ಅವನು ಚಾಂಡಾಲನೆ; ಶಿವ ಗಿವ ಅಲ್ಲ. ವೇಷಗೀಷ ಅಲ್ಲ. ಅವನಿಂದ ತನ್ನ ಕತ್ತಲೆ ಕಳೆದುಕೊಂಡ ಭಗವತ್ಪಾದ ಶಂಕರರು ಅವನಲ್ಲು ಶಿವನನ್ನು ಕಂಡರು.

ಅವನು ಚಾಂಡಾಲನೂ ಹೌದು; ಶಿವನೂ ಹೌದು
ಆದಾಗ ಮಾತ್ರ ಅದ್ವೈತ.