ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿ
ಹುರಿನಿಂತ ಛಲದಲ್ಲಿ ದುರುಗಟ್ಟಿತು,
ಕ್ಷಣಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿ
ಗೆದ್ದ ಭ್ರಮೆ ಕಳಕೊಂಡು ಕವಿತೆಯಾಯ್ತು
ಅನ್ಯಕ್ಕೆ ಎಡೆಯಿರುವ ವಿನಯವಾಯ್ತು.

ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್‌ ಛಲದ
ಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇ
ತನ್ನಷ್ಟೆ ತಾನಾಗಿ ಇರುವ ಬೆಕ್ಕಿನ ಸ್ವಾಸ್ಥ್ಯ
ಕವಿಯ ಅಸ್ವಸ್ಥತೆಯ ಪ್ರತಿಮೆಯಾಯ್ತು
ಬೆಕ್ಕು ಬೆಕ್ಕೇ ಆಗಿ ಉಳಿಯದಂತಾಯ್ತು.

ಪ್ರತಿಮೆಯೂ ತಾಯೆಂದು, ಸಿಗಲೊಲ್ಲೆ ಏಕೆಂಧು
ಬಿಕ್ಕಿ ಬಿಕ್ಕೀ ಅಳುವ ಪರಮಹಂಸರಿಗೊ
ತಾಯಿ ಸಾಕ್ಷಾತ್ಕರಿಸಿ ಕೆಂಪುನಾಲಗೆ ತೋಚಿ
ಸದ್ದಿರದೆ ಎದುರಾದ್ದು… ಬೆಕ್ಕೆ ಆಗಿ
ಬೆಕ್ಕು ಬೆಕ್ಕಾಗಿದ್ದೆ ಬಲು ಮುದ್ದು ತಾಯಿ.

೮-೧-೧೯೯೨
(ಮಿಥುನ ಸಂಕಲನದಿಂದ)