ಎರಡು ತಿಂಗಳುಗಳ ಹಿಂದೆ ನನಗೆ ಹಲ್ಲಿನದೊಂದು ಆಪರೇಷನ್‌ಆಯ್ತು. ಬಹಳ ದಿನಗಳಿಂದ ತಾತ್ಸಾರ ಮಾಡಿದ್ದ ನನಗೆ, ಡಾಕ್ಟರ್ ಮುಂದೆ ಜೀವಕ್ಕೇ ಅಪಾಯವಾಗಬಹುದೆಂಬ ಸೂಚನೆ ಕೊಟ್ಟ ಕೂಡಲೇ ಆ ಹಲ್ಲನ್ನು ತೆಗೆಸುವ ನಿರ್ಣಯ ಮಾಡಿದೆ. ಒಂದು ಹಲ್ಲಿಗೆ ಮೂರು ಹಲ್ಲುಗಳನ್ನು ತೆಗೆಯಬೇಕಾಯ್ತು. ಅದು ವಿಶೇಷವಲ್ಲ. ಆದರೆ ನಮ್ಮ ಮನಸ್ಸಿನ ಕಕ್ಕುಲತೆಯ ಬಗೆಗೆ ಹೇಳಬೇಕು. ಆಪರೇಷನ್‌ಮಾಡುವಾಗ ಕೊಟ್ಟ ಅನಸ್ತೇಷಿಯಾದಿಂದ ಮರವಾಗಿದ್ದ ಕೆನ್ನೆಗಳನ್ನು ಮುಟ್ಟಿದ ಜೂನಿಯರ್ ಡಾಕ್ಟರ್ ಳ ಕೈ ಸ್ಪರ್ಶ ಆ ನೋವಿನಲ್ಲೂ ಒಂದು ಕ್ಷಣ ನನ್ನ ದೇಹ ಮನಸ್ಸುಗಳೆರಡನ್ನೂ ಪುಳಕಿತಗೊಳಿಸಿಬಿಟ್ಟಿತು. ಯಾವ ನಿರೀಕ್ಷೆಯೂ ಇಲ್ಲದ ಮನಸ್ಸಿನ ಇಂತಹ ಕ್ಷಣಗಳು ನಮ್ಮನ್ನು ಜಡದಿಂದ ಚೈತನ್ಯದ ಕಡೆಗೆ ದಾಟಿಸಿಬಿಡುತ್ತದೆಯೇ? ಆಪರೇಷನ್‌ಆದಮೇಲೆ ಡಾಕ್ಟರ್ ಹೇಳಿದಂತೆ ಜೀವಕ್ಕೆ ಅಪಾಯವಿದೆ. ಎಂಬ ಮಾತು ನನ್ನ ಮನಸ್ಸಿನಲ್ಲಿ ಎಷ್ಟು ಅಚ್ಚಳಯದೆ ಕುಳಿತುಬಿಟ್ಟಿತ್ತೆಂದರೆ ಒಂದೊಮ್ಮೆ ಇವ ಡಾಕ್ಟರ್ ರೂಪದಲ್ಲಿ ಬಂದಿರುವ ಮೃತ್ಯುದೇವತೆ ಎನ್ನಿಸಿತ್ತು. ಎಷ್ಟೋ ಬಾರಿ ಬಾಯಿನೀರು ಕೂಡ ರಕ್ತವಾಗಿ ಹರಿಯುತ್ತಿರಬಹುದೇ ಎನ್ನಿಸಿತ್ತು. ಇನ್ನು ನೋವಿನ ಮತು, ಮಾತನಾಡಲಾರದ ಸಂಕಟ….

ತಕ್ಷಣ ನೆನಪಿಗೆ ಬಂದಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ೨೪ನೆಯ ವಯಸ್ಸಿನಲ್ಲಿ ಒಂದೇ ದಿನ ತನ್ನ ಬದುಕಿನ ಸರ್ವಸ್ವವೆಂದೇ ನಂಬಿದ್ದ ಮೂರು ಜೀವಗಳು ಯಾವ ಸೂಚನೆಯನ್ನೂ ಕೊಡದೆ ನಡೆದುಬಿಟ್ಟಾಗಿನ ಚಿತ್ರ. ನೋವು ಆರುವ ಮೊದಲೇ ಮರುಮದುವೆ ಮಾಡುವ ಹುನ್ನಾರಕ್ಕೆ ಪ್ರತಿಕ್ರಿಯೆ ನೀಡಲೆಂದು ಬಳ್ಳಾರಿಯ ಡೆಂಟಲ್‌ಕಾಲೇಜಿಗೆ ಹೋಗಿ ಎಲ್ಲ ಹಲ್ಲುಗಳನ್ನು ತೆಗೆಸಿ, ತಲೆ ಬೋಳಿಸಿಕೊಂಡು ‘ಮದುವೆ ಮಾಡುವುದಾದರೆ ಈಗ ಮಾಡಿ’ ಎಂದು ನಿಂತ ನಿಲುವಿದೆಯಲ್ಲಾ ಆ ನೋವು ಸಾಮಾನ್ಯವಾದದ್ದೇ. ಒಂದೆರೆಡು ಹಲ್ಲು ತೆಗೆಸುವಾಗ ಪಟ್ಟ ನೋವೇ ದೊಡ್ಡದೆಂದುಕೊಳ್ಳುವಾಗ, ಅವರ ನೋವು ಎಷ್ಟು ಅಗಾಧವಾದದ್ದಾಗಿರಬಹುದು?

ಆ ಹೊತ್ತಿನಲ್ಲಿ ಮಾತನಾಡದ ನನ್ನ ಸ್ಥಿತಿ ಮೌನ ವ್ರತದಂತೆ ಕಂಡಿತು. ಮಾತಾಡುತ್ತಾ ಆಡುತ್ತಾ ನಾನು ಕಳೆದುಕೊಳ್ಳುವ ಎಲ್ಲವನ್ನು ಯೋಚಿಸುತ್ತಿದ್ದೆ. ನನ್ನ ಹಲವು ಯೋಚನೆಗಳು ಈ ಹೊತ್ತಿನಲ್ಲಿ ಇನ್ನಷ್ಟು ಗಟ್ಟಿಯಾದವು ಅಷ್ಟೆ ಅಲ್ಲ; ನಿಖರಗೊಂಡವು. ಇನ್ನು ಊಟ ತಿಂಡಿಯ ವಿಷಯ ಬಿಡಿ. ಅದೂ ಸಹ ಉಪವಾಸದ ಮಹತ್ವವನ್ನು ಅರಿವಿಗೆ ತಂದಿತು. ತಿನ್ನುಬಾಕರಾದ ನಾವು ನಮ್ಮ ಅಗತ್ಯಕ್ಕೆ ಬೇಕಾದಷ್ಟು, ಬೇಕಾಗುವ ಹಾಗೆ ತಿನ್ನಬೇಕೆಂಬುದನ್ನು ಅಭ್ಯಾಸ ಮಾಡಿಸಿತು. ಈ ಸಂದರ್ಭದಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಹೇಳಿದ ಬನ್ಸಿಲಾಲ್‌ರ ಪ್ರಸಂಗವೂ ನೆನಪಿಗೆ ಬಂತು. ಗಾಂಧೀಜಿಯವರ ಮೇಲಿನ ಅಭಿಮಾನದಿಂದ ಅವರು ಹೋದೆಡೆಯೆಲ್ಲೆಲ್ಲಾ ಗಾಂಧೀಜಿಯವರ ಬಗೆಗೆ ಹೆಚ್ಚು ಉತ್ಸಾಹದಿಂದ ಮಾತನಾಡುತ್ತಿದ್ದರು. ಬನ್ಸಿಲಾಲ್‌. ಬಟ್ಟಂಗಿತನವನ್ನು ಸಹಿಸದ ಗಾಂಧೀಜಿಯವರು ‘ನಿನ್ನ ಬಾಯನ್ನು ಹೊಲಿದುಕೋ’ ಎಂದರು. ಆ ಮಾತನ್ನೇ ವೇದವಾಕ್ಯವೆಂದು ನಂಬಿದ ಬನ್ಸಿಲಾಲ್‌ತಮ್ಮ ಬಾಯನ್ನು ಸೂಜಿ ದಾರ ತೆಗೆದುಕೊಂಡು ಹೊಲಿದುಕೊಂಡರು. ದ್ರವ ಪದಾರ್ಥವನ್ನಲ್ಲದೆ ಬೇರೇನನ್ನು-ಅದೂ ಒಂದು ಹೊತ್ತು ಮಾತ್ರ-ತೆಗೆದುಕೊಳ್ಳುವ ವ್ರತ ಪಾಲಿಸಿದರು. ಕೊನೆಗೆ ಅದೂ ಬೇಡವೆನಿಸಿ ಮೌನವ್ರತದಲ್ಲಿಯೇ ತಮ್ಮ ಜೀವನವನ್ನು ಮುಗಿಸಿದರು. ಹೀಗೆ ಗಾಂಧೀಜಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದರು ಎಂದಾಗ ಗಾಂಧೀಜಿಯವರ ಮಾತಿನ ಪರಿಣಾಮವೂ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದವರ ಮನೋನಿಶ್ಚಯವೂ ಎಷ್ಟು ದೊಡ್ಡದಲ್ಲವೇ? ಅದು ಸಂತರಿಗೆ ಮಾತ್ರ ಸಾಧ್ಯವಿರುವಂತದು. ಗಾಂಧೀಜಿಯಾಗಲೀ, ಬನ್ಸಿಲಾಲರಾಗಲೀ ಹುಟ್ಟುತ್ತಾ ಸಂತರಾದವರಲ್ಲ ಬದುಕುತ್ತಾ ಸಂತರಾದವರು. ಜನರ ಮಧ್ಯೆ ಸಂತರಾದವರು.

ಹೀಗೆ ಯೋಚಿಸುತ್ತಾ ಮನುಷ್ಯ ಸಾವಿನ ಕುರಿತು ಯಾಕೆ ಹೀಗೆ ಆಲೋಚಿಸುತ್ತಾನೆ? ಸಾವು ನಿಶ್ಚಿತವೆಂದು ತಿಳಿದಮೇಲೂ ಅದಕ್ಕೆ ಎದುರಾಗಬೇಕಾದಾಗ ಮನುಷ್ಯ ಯಾಕೆ ವಿಹ್ವಲನಾಗುತ್ತಾನೆ? ಯಾವುದೇ ಕ್ಷಣದಲ್ಲೂ ನಮ್ಮ ಬದುಕು ಕೊನೆಗೊಳ್ಳಬಹುದೆಂದು ಗೊತ್ತಿದ್ದರೂ ಯಾಕೆ ಏನೇನೂ ಮಾಡಲೇಬೇಕಾದ ಕೆಲಸಗಳಿವೆ ಎಂದು ಆತಂಕಗೊಳ್ಳುತ್ತಾನೆ? ನಿಜ ಅಂತಹ ಆತಂಕಗಳು, ನಂಬಿಕೆಗಳು ಇಲ್ಲದಿದ್ದರೆ ನಮ್ಮ ಬದುಕಿನಲ್ಲಿ ಯಾವ ಅರ್ಥವಂತಿಕೆಯೂ ಇರುವುದಿಲ್ಲ, ಸಾರವೂ ಇರುವುದಿಲ್ಲ. ಮನುಷ್ ಯನ ಮನಸ್ಸು ಚಂಚಲವಾದದ್ದು, ಅದನ್ನು ನಿಶ್ಚಲ ಮಾಡಬೇಕು ಎನ್ನುತ್ತಾರೆ. ದೇಹ ಜಡ ಚೈತನ್ಯವಾಗಿಸಿಕೊಳ್ಳಬೇಕು ಎನ್ನುತ್ತಾರೆ. ನಮ್ಮ ಜೀವನದ ಪ್ರಯತ್ನವೆಲ್ಲವೂ ಮನಸ್ಸನ್ನು ಜಡಮಾಡುವ ದೇಹವನ್ನು ಚಂಚಲ ಮಾಡುವ ಪ್ರಕ್ರಿಯೆಯಲ್ಲೇ ಕಳೆದುಹೋಗಿಬಿಡುತ್ತದೆ. ಹಾಗೊಂದುವೇಳೆ ನಾವು ಚಂಚಲ ಮಾಡಲು ಸಾಧ್ಯವೇ? ಚೈತನ್ಯಮಾಡಲು ಸಾಧ್ಯವೇ? ಅದು ನಮ್ಮನ್ನು ಹೇಳದೇ ಕೇಳದೆ ನಿತ್ಯ ಆಗುತ್ತಲೇ ಇರುತ್ತದೆ.

‘ಮನುಷ್ಯ ಬೇರೆಯವರು ನೆನಪಿಸಿಕೊಳ್ಳುವಂತೆ ಬದುಕಬೇಕು, ಏನಾದರೂ ಸಾಧಿಸಬೇಕು’ ಎನ್ನುತ್ತಾರೆ. ಆದರೆ ಸತ್ತವನಿಗೆ ನೀವು ನೆನಪಿಸಿಕೊಳ್ಳುವುದಾಗಲೀ, ನಾವು ಹಾಡಿ ಹೊಗಳುವುದಾಗಲೀ ತಿಳಿಯುತ್ತದೆಯೇ? ಅಥವಾ ನಾವು ತೆಗಳಿಕೊಂಡು ಓಡಾಡಿದರೆ ಏನಾಗುತ್ತದೆ? ಒಂದು ಉದಾಹರಣೆ ಕೊಡುತ್ತೇನೆ. ಕೆಲ ವರ್ಷಗಳ ಹಿಂದೆ ಭಾರತದ ಸುಪ್ರಸಿದ್ಧ ಪತ್ರಿಕೆಯೊಂದು ಶ್ರೇಷ್ಠ ಕವಿಗೆ ಬೇರೆ ಸಂಬಂಧಗಳಿತ್ತು ಎಂದು ದೊಡ್ಡ ವಿಚಾರವನ್ನೇ ಪ್ರಕಟಿಸಿತು. ಹಾಗೆ ಪ್ರಕಟಿಸಿದ ನಂತರ ಆ ಕವಿಯ ಹೆಸರಿಗಾಗಲೀ ಅಥವಾ ಅವರ ಪ್ರತಿಭೆಗಾಗಲೀ ಯಾವ ಊನವೂ ಆಗಲಿಲ್ಲ. (ನಮ್ಮ ದೇಶದ ಬಹು ಸಂಸ್ಕೃತಿಯ ಅಂಶಗಳನ್ನು ಹಾಡಿ ಹೊಗಳುವ ನಾವು ನಮ್ಮ ನಿತ್ಯದ ಸಂಬಂಧದಾಚೆಗೂ ಸಂಬಂಧಗಳಿರುವುದು ಸಹಜ ಎನ್ನುವ ತಿಳುವಳಿಕೆಯನ್ನೇ ಮರೆತುಬಿಡುತ್ತೇವೆ.)

ಅರಿವು ಮತ್ತು ಜ್ಞಾನ (ತಿಳುವಳಿಕೆ), ಸುಖ ಮತ್ತು ದುಃಖ, ಪರಂಪರೆ ಮತ್ತು ಆಧುನಿಕತೆ, ವೈಚಾರಿಕತೆ ಮತ್ತು ಅನುಭವಗಳ ಕುರಿತು ಯೋಚಿಸುವಾಗಲೆಲ್ಲಾ ನಮ್ಮ ಗ್ರಹಿಕೆಯೇ ತಪ್ಪಾಗಿರುವಂತೆ ಭಾಸವಾಗುತ್ತದೆ. ಯಾಕೆಂದರೆ ಹೀಗೆ ಯಾವ ಸ್ಥಿತಿಗಳೂ ಮೂಲದಲ್ಲಿಯಾಗಲೀ, ಶುದ್ಧತೆಯಲ್ಲಾಗಲೀ, ಭಿನ್ನವಾಗಿಯಾಗಿಯಾಗಲೀ, ಸ್ವಯಂಪೂರ್ಣ ವಾಗಿಯಾಗಲೀ ಇರಲು ಸಾಧ್ಯವೇ ಇಲ್ಲವೇನೋ. ಅದಕ್ಕೇ ಬೇಂದ್ರೆಯವರೂ ಕೂಡ ಜಗತ್ತನ್ನು ತುಂಬಿರುವುದೆಲ್ಲ ಆನಂದ ಎಂದಿದ್ದು (ಹೆಣದ ಮೇಲೆ ನಡೆಯುವಾಗಿನ ದುಃಖದಲ್ಲೂ ಒಂದು ರೀತಿಯ ಆನಂದ ಇರುತ್ತದೆ ಅನ್ನುತ್ತಾರೆ ಅವರು.) ಅದನ್ನೇ ಮುಕುಂದೂರು ಸ್ವಾಮಿಗಳೂ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಚೈತನ್ಯವೆಂದು ಕರೆಯುವುದು. ನನ್ನ ಹಿರಿಯ ಸ್ನೇಹಿತರಾದ ವೆಂಕಟೇಶ ಶಾಸ್ತ್ರಿಗಳು ಅದ್ವೈತದ ಅಹಂ ಬ್ರಹ್ಮಾಸ್ಮಿ ಎನ್ನುವುದನ್ನು ವಿವರಿಸುತ್ತಾ ‘ನೋಡಿ ನಮ್ಮ ಕಣ್ಣಿಗೆ ಕಾಣುವ ಲೋಟ, ತಟ್ಟೆ, ತಂಬಿಗೆ, ಒಲೆಯ ಮೇಲಿಟ್ಟ ಪಾತ್ರೆ ಎಲ್ಲವೂ ಸ್ಟಿಲ್‌ನಿಂದಾದದ್ದೇ. ನಾವು ಅವುಗಳಿಗೆ ನಮ್ಮ ಉಪಯೋಗಕ್ಕೆ ತಕ್ಕಂತೆ ಕೊಟ್ಟ ಹೆಸರುಗಳು. ಆದರೆ ಇವು ಒಂದೇ ಮೂಲದಿಂದ ಬಂದವು. ಹಾಗೆಯೇ ನಾವು ಬೇರೆ ಬೇರೆಯಾಗಿದ್ದರೂ ಬ್ರಹ್ಮದ ರೂಪಗಳು’ ಎಂದಿದ್ದರು. ಆದರೆ ಹಾಗೆ ಸಾರಾ ಸಗಟಾಗಿ ಬ್ರಹ್ಮನೆಂದು ಒಪ್ಪಿಕೊಳ್ಳಲು, ನಿರಾಕರಿಸಲೂ ಆಗದು. ಯಾಕೆಂದರೆ ನಾವು ಬ್ರಹ್ಮಚೈತನ್ಯವಲ್ಲ, ಅದರಿಂದ ಹೊರಟಿರಬಹುದಾದ ನಮ್ಮದೇ ಸ್ವಂತ ಅಸ್ತಿತ್ವವಿರುವ ನಾವೆ. ಹಾಗೆ ನಾವೇ ಎಂದು ಹೇಳುವಾಗ ಕೂಡ ನಮ್ಮದೇ ಸ್ವಂತ, ನಿಖರ, ನಿಶ್ಚಿತವಾದ ರೂಪಿನ ನಾವೂ ಅಲ್ಲ. ಅಂದರೆ ನಾವು ಬ್ರಹ್ಮವೂ ಹೌದು; ಅದೇ ಕಾಲಕ್ಕೆ ಬ್ರಹ್ಮ ಮಾತ್ರ ಅಲ್ಲ ನಾವೂ ಹೌದು.

*

ಅನಂತಮೂರ್ತಿಯವರ ರಿಲ್ಕೆಯ ಕವಿತೆಗಳನ್ನು ಓದುವಾಗ ನನ್ನಲ್ಲಿ ಮೂಡಿದ ವಿಚಾರಗಳಿವು. ಅವರು ಯಾವತ್ತಿನಿಂದಲೂ ಇಂತಹ ಸಂಗತಿಗಳನ್ನು ವಿರುದ್ಧವೆಂಬ ನೆಲೆಯಲ್ಲಿ ನೋಡಿದವರೇ ಅಲ್ಲ. ಅವು ಯಾವತ್ತಿಗೂ ಒಂದೇ ಆಗಿರುವ ಭಿನ್ನ ರೂಪವೆದೋ ಅಥವಾ ಭಿನ್ನತೆಯಲ್ಲೂ ಒಂದಾಗಿವೆ ಎಂದೋ, ಅನ್ಯವಾಗಿಯೂ ಅನನ್ಯವೆಂದೂ, ಒಂದಕ್ಕೊಂದು ಪೂರಕವೆಂದೂ, ಪ್ರೇರಕವೆಂದೂ ಹೇಳುತ್ತಾ ಬಂದವರು. ಆಧುನಿಕತೆಯ ವಿಚಾರವಿರಲಿ, ಪರಂಪರೆಯ ವಿಚಾರವಾಗಿರಲಿ ಅವರದು ನಾಗಾರ್ಜುನನ ಮಾಧ್ಯಮಿಕ ಮಾರ್ಗ. ಈ ಕಾರಣಕ್ಕೇ ಇರಬೇಕು ಅವರ ವಿಚಾರಗಳು ಹಲವರಿಗೆ ಒಪ್ಪಿಕೊಳ್ಳಲಾಗದ, ಗೊಂದಲದ ಮಾತುಗಳಾಗಿ ಕಾಣುತ್ತದೆ. ನಮ್ಮ ಪ್ರಕೃತಿಯಲ್ಲಿರುವ ಜೀವ ವೈವಿಧ್ಯಕ್ಕಿಂತ ಬೇರೆ  ಉದಾಹರಣೆ ಬೇಕೆ? ಅದರಲ್ಲಿಯ ವೈವಿಧ್ಯತೆ , ವೈರುಧ್ಯ, ನಿಜ, ಸುಳ್ಳು, ನಿಶ್ಚಿತತೆ ಅನಿಶ್ಚಿತತೆ…

*

ರಿಲ್ಕೆಯ ಕವಿತೆಗಳು ಇಲ್ಲಿವೆ. ಆದರೆ ಅವು ಕೇವಲ ರಿಲ್ಕೆಯ ಅನುವಾದಗಳು ಮಾತ್ರ ಅಲ್ಲ, ನಮ್ಮ ಕಾಲಕ್ಕೆ ನಮ್ಮ ಕಾಲಕ್ಕೆ ನಮ್ಮ ಅವಶ್ಯಕತೆಗಳಿನಗುಣೌಆಗಿ ಮಾಡಿಕೊಂಡ ಅನುವಾದಗಳು. ಅಥವಾ ಅವು ಅನುವಾದ ರೂಪದಲ್ಲಿರುವ ಅವತಾರಗಳೂ ಆಗಿಬಿಡಬಹುದು…. ಹಾಗಾದಾಗಲೇ ಅಲ್ಲವೇ ಕವಿತೆ…

ಇಂಥದೇ ವಿಚಾರಗಳ ಹೊಸ ಲೋಕವೊಂದನ್ನು ಶ್ರೀ ಓ ಎಲ್‌ ನಾಗಭೂಷಣಸ್ವಾಮಿಯವರು ನಮ್ಮ ಮುಂದೆ ತೆರೆದಿಡುತ್ತಾರೆ. ಗುಲಾಬಿಯ ಅನುವಾದದ ಹಿನ್ನೆಲೆಯಲ್ಲಿ ಅವರ ವಿಚಾರಗಳು ಸೃಜನಶೀಲ ಪ್ರಕ್ರಿಯೆಯನ್ನು ಗ್ರಹಿಸುವ ಬಹಳ ಮುಖ್ಯ ಲೇಖನವಾಗಿದೆ.

ಅನಂತಮೂರ್ತಿಯವರು ಈ ಕವಿತೆಗಳನ್ನು ಅನುವಾದಿಸಿದ ಪ್ರಕ್ರಿಯೆಯ ಕುರಿತು ಕೆಲ ಮಾತುಗಳನ್ನು ಹೇಳಬೇಕಿದೆ. ಒಂದು ಪದ್ಯದ ಅನುವಾದ ಮುಗಿದ ಮೇಲೆ ಓ.ಎಲ್‌.ಎನ್‌ರಿಗೊ, ತಿರುಮಲೇಶ್‌ರಿಗೊ, ವಿವೇಕ ಶಾನಭಾಗರಿಗೋ ಕಳುಹಿಸುತ್ತಾರೆ. ಅವರು ಓದಿ ಪ್ರತಿಕ್ರಿಯಿಸುತ್ತಾರೆ. ಇನ್ನಷ್ಟು ಜನರಿಗೆ ಓದಿ ಹೇಳುತ್ತಾರೆ. ಅಥವಾ ಅವರಿಗೆ ಪದ್ಯ ಕಳಿಸಿ, ಅವರಿಂದಲೇ ಓದಿಸಿ ಕೇಳುತ್ತಾರೆ. ಯಾರು ಏನೇ ಹೇಳಿದರೂ ಕೇಳಿಸಿಕೊಂಡು ಅದನ್ನು ಮತ್ತೂ ತಿದ್ದಲು ಆರಂಭಿಸುತ್ತಾರೆ. ಮತ್ತೆ ಅವರ ಬಳಗಕ್ಕೆ ಓದುತ್ತಾರೆ. ಈ ಪ್ರಕ್ರಿಯೆಯಲ್ಲಿ ಕೇವಲ ಅನಂತಮೂರ್ತಿಯವರಷ್ಟೆ ಅಲ್ಲ. ಪಾಲ್ಗೊಂಡ ಎಲ್ಲರಲ್ಲೂ ಧನ್ಯತೆಯ ಭಾವ ಹುಟ್ಟುತ್ತದೆ. ಶಬ್ದ, ಕವಿತೆ, ಭಾವ, ಅನುವಾದದ ಕುರಿತು ಅನಂತಮೂರ್ತಿಯವರು ಕಲಿಸುತ್ತಾ, ಕಲಿಯುತ್ತಾ, ‘ಬೆಳ’ಗುತ್ತಾ, ಬೆಳೆಯವ ಪರಿ ಇದು. ರಿಲ್ಕೆ ಬಗೆಗಿನ ಗೀಳು ಅವರನ್ನು ಎಷ್ಟು ಆವರಿಸಿತ್ತೆಂದರೆ – ಈ ಸಂಕಲನ ಮುದ್ರಣಕ್ಕೆ ಹೋಗುವ ಕಡೆಯ ಗಳಿಗೆಯವರೆವಿಗೂ ಪದ್ಯಗಳನ್ನು ತಿದ್ದುತ್ತಾ ಬೆಳೆಸುತ್ತಾ ಹೋದರು. ಕೊನೆ ಕೊನೆಗೆ ಅವರು ರಿಲ್ಕ್‌ ಅನೇಕ ಪದ್ಯಗಳನ್ನು ಲೀಲಾಜಾಲವಾಗಿ ಅನುವಾದಿಸುತ್ತಾ ಹೋದರು. ಈ ಸಂಕಲನ ಮುದ್ರಣವಾಗುತ್ತಿರುವ ಸಮಯದಲ್ಲಿ ಕೂಡ ಅವರು ಅನುವಾದಿಸಿರುವ ‘ದೇವಕಾಮ’ ಕವಿತೆಯನ್ನು ಅನುವಾದಿಸಿ, ತಿದ್ದಿ, ಅದಕ್ಕೆ ಟಿಪ್ಪಣಿ ಬರೆದು ಕಳುಹಿಸಿದರು. ಅದಕ್ಕಾಗಿಯೇ ಈ ಕವನದ ಪುಟಸಂಖ್ಯೆಯನ್ನು ೪೬ಎ, ೪೬ಬಿ ಎಂದು ನೀಡಬೇಕಾಯ್ತು. ಈ ವಯಸ್ಸಿನಲ್ಲಿಯೂ, ಅವರ ಅನಾರೋಗ್ಯದ ನಡುವೆ ಕೂಡ ಅವರು ಇಂತಹ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದು ಆಶ್ಚರ್ಯವೇ ಸರಿ.

*

ಈ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿ ಅವರಿಗೆ, ಪ್ರೀತಿಯಿಂದ ಯಾವತ್ತೂ  ನಗುಮುಖದಲ್ಲಿಯೇ ಮನೆಗೆ ಬರಮಾಡಿಕೊಳ್ಳುವ ಶ್ರೀಮತಿ ಎಸ್ತರ್ ಅವರಿಗೆ, ಹಿಂದಿನ ಯೇಟ್ಸ್‌ ಕುರಿತ ಪುಸ್ತಕದ ಬಗ್ಗೆ ಮಾತನಾಡಿದ ಶ್ರೀ ರಾಜೇಂದ್ರ ಚೆನ್ನಿ ಮತ್ತು ಚಿತ್ರದುರ್ಗದ ಗೆಳೆಯರಿಗೆ ವಿಶೇಷವಾಗಿ ವೀರೇಂದ್ರಕುಮಾರ್ ಅವರಿಗೆ ಮತ್ತು ಹಿಂದೂ ಪತ್ರಿಕೆಯಲ್ಲಿ ಬರೆದು ಈ ಮಾಲಿಕೆಯನ್ನು ಮುಂದುವರೆಸಲು ಸೂಚಿಸಿದ ಶ್ರೀ ಸಿ.ಎನ್‌. ರಾಮಚಂದ್ರನ್‌ ಅವರಿಗೆ, ಈ ಕೆಲಸದಲ್ಲಿ ಪಾಲ್ಗೊಂಡ ಎಲ್ಲರಿಗೆ ಅಭಿನವ ಋಣಿ.

. ರವಿಕುಮಾರ
ಅಭಿನವದ ಪರವಾಗಿ