ವೈಕಂ ಸತ್ಯಾಗ್ರಹಕ್ಕಾಗಿ ಕೇರಳಕ್ಕೆ ಬಂದಿದ್ದ ಗಾಂಧೀಜಿಯನ್ನು
ನಾರಾಯಣ ಗುರುಗಳು ಭೇಟಿಯಾದರು.

ಇಬ್ಬರೂ ಒಂದು ಅಶ್ವತ್ಥವೃಕ್ಷದ ನೆರಳಿನಲ್ಲಿ ಕೂತರು
ಹುಲ್ಲಿನ ಮೇಲೆ, ಹಾಯಾಗಿ.

ನಾರಾಯಣ ಗುರು ಧ್ಯಾನಕ್ಕೆ ಕೂರುವ ಹಠಯೋಗಿಯ ಪದ್ಮಾಸನದಲ್ಲಿ ಕೂತರೆ;
ಗಾಂಧೀಜಿಯೂ ಒಂದು ಮೊಣಕಾಲನ್ನು ಎತ್ತಿ
ಚರಕದಲ್ಲಿ ನೂಲುವಾಗ ಕೂರುವ ಸುಖಾಸನದಲ್ಲಿ ಕೂತರು.

ಗಾಂಧೀಜಿ ಹೇಳಿದರು:
‘ಗುರುಗಳೇ ಎಲ್ಲ ಧರ್ಮಗಳೂ ಒಂದೇ, ಎಲ್ಲ ಮಾನವರೂ ಒಂದೇ ಎಂದು ನೀವು ಅನ್ನುತ್ತೀರಿ; ದೊಡ್ಡ ಮಾತು. ಆದರೆ ಮಾನವರ ನಡುವಿನ ಬಿಕ್ಕಟ್ಟುಗಳು ಭಿನ್ನತೆಗಳು ಅಷ್ಟು ಸುಲಭವಾಗಿ ಮಾಯವಾಗುವುದಿಲ್ಲ. ಇದು ನನ್ನ ಅನುಭವ.’

ಹೀಗೆ ಹೇಳಿದ ಗಾಂಧೀಜಿ ತನ್ನ ಕನ್ನಡಕವನ್ನು ಏರಿಸಿ
ಕೂತಲ್ಲೇ ಬೆರಳೆತ್ತಿ
ಮರದ ವಿಶಾಲವಾದ ರೆಂಬೆಕೊಂಬೆಗಳನ್ನು ಗುರುಗಳಿಗೆ ತೋರಿಸುತ್ತ ವಿನಯದಲ್ಲಿ ಅಂಧರು:

‘ನೋಡಿ ಗುರುಗಳೇ. ಈ ಮರದ ಒಂದು ಎಲೆ ಇನ್ನೊಂದರಂತೆ ಇಲ್ಲ, ನಾವು ಮನುಷ್ಯರೂ ಹಾಗೆಯೇ. ಭಿನ್ನ ಮತದವರೂ ಭಿನ್ನ ಸ್ವಭಾವದವರೂ ಇದ್ದೇ ಇರುತ್ತಾರೆ. ಹೊಂದಿಕೊಂಡು ಬಾಳುವುದು ಹೇಗೆಂಬುದನ್ನು ನಾವು ಕಲಿಯಬೇಕು.’

ಅಕ್ಷರಶಃ ಅದ್ವೈತಿಯಾಗಿದ್ದ ಗುರುಗಳು ನಸುನಕ್ಕರು.
ಕೆಳಗೆ ಬಿದ್ದ ಒಂದು ಎಲೆಯನ್ನು ಎತ್ತಿ
ಕಣ್ಣು ಮುಚ್ಚಿ ಹೇಳಿದರು.

‘ಮಹಾತ್ಮಜಿ ನೋಡುವಾಗ ಒಂದು ಎಲೆಯಂತೆ ಇನ್ನೊಂದಿಲ್ಲ ನಿಜ. ಆದರೆ ಅಗಿದು ಅರಿತಾಗ ರುಚಿಯಲ್ಲಿ ಎಲ್ಲ ಎಲೆಗಳೂ ಒಂದೆ.’

‘ಗುರುಗಳನ್ನು ಶಾಸ್ತ್ರರ್ಥದಲ್ಲಿ ಈ ವಕೀಲ ಗೆಲ್ಲುವುದು ಸಾಧ್ಯವೆ? ನೋಡುವಾಗ ಕಾಣುವುದೂ ನಿಜವೇ , ರುಚಿಯಲ್ಲಿ ಅರಿವಾದ್ದೂ ನಿಜವೇ’
ಎಂದು ಗಾಂಧೀಜಿಯೂ ಬೊಚ್ಚು ಬಾಯಿ ತೆಗೆದು ಗಟ್ಟಿಯಾಗಿ ನಕ್ಕು ಹೇಳಿದರು:

‘ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಹಾಗೇ ಇರಲಿ. ಆದರೆ ಗುರುಗಳು ಖಾದಿಯನ್ನು ತೊಡಬೇಕೆಂದು ನನ್ನದೊಂದು ಸಣ್ಣ -ಪ್ರಾರ್ಥನೆ.’

ಗುರುಗಳು ಅಸ್ತು ಅಂದರು.

೨೦೦೯