ಕಂಬಿಗಳೆ ಇನ್ನು ಇನ್ನೂ ಕಂಬಿಗಳೆ
ಸುತ್ತುತ್ತಿರಲು ತೋರಿ ತೋರಿ ಜಡ್ಡಾದ ತನ್ನ
ದೃಷ್ಟಿಯಲ್ಲೀಗ ಬರಿಕಂಬಿಗಳೆ. ಸಹಸ್ರಾರು
ಕಂಬಿಗಳೀಚೆ, ಒಳಗೂ, ತನಗೆ ನಿಟ್ಟಿಲ್ಲವಾಗಿ
ಪರವಶನ ಈ ನೃತ್ಯ ಸಾಗುವುದು ವಿದ್ಯುಕ್ತವೆಂಬಂತೆ.

ಮಂಡಳದ ಮಧ್ಯ ಬಿಂದುವಲ್ಲೊಂದು ಗರ ಬಡಿದ ದೈತ್ಯಛಲ
ಗವ್ವೆಂದು ಉಳಿದಿದೆಯಾಗಿ, ಕೆಲವು ಕ್ಷಣ ಮಾತ್ರ ಪಾಪೆಯ ಪರದೆ
ಎತ್ತುವುದುಂಟು ನೀರವದಲ್ಲಿ, ಆಗ ಆ ಬಿಂಬ
ಒಳ ನುಗ್ಗುವುದು, ಬಿಗಿದ ಸ್ನಾಯುಗಳಲ್ಲಿ ಸರ‍್ರ ಹರಿಯುವುದು.
ಧುಮ್ಮಿಕ್ಕುವುದು ಗುಂಡಿಗೆಯಲ್ಲಿ. ಮತ್ತೆ ಅಡಗುವುದು.

(ರಿಲ್ಕ್ ಪದ್ಯದ ಭಾವಾಂತರ)
(
ಇದುವರೆಗಿನ ಕವಿತೆಗಳು)

ರಿಲ್ಕೆಯ ಮೇಲೆ ಗಾಢವಾದ ಪ್ರಭಾವ ಫ್ರೆಂಚ್‌ಶಿಲ್ಪಿ ರೋಡಿನ್‌ (೧೮೪೬-೧೯೧೭)ನದು. ಆತ್ಮರತನಾಗಿ, ತೆಳವುಆದ ವ್ಯಾಕುಲದ ಭಾವನೆಗಳನ್ನು ರೊಮಾಂಟಿಕ್‌ ಕವಿಗಳಂತೆ ಬರೆದುಕೊಂಡಿದ್ದ ರಿಲ್ಕೆ ಏನು ಬರೆಯಲೂ ತೋಚದ ದಣಿವಿನಲ್ಲಿದ್ದಾಗ ಫ್ರಾನ್ಸ್‌ಗೆ ಬಂದು ರೋಡಿನ್‌ನನ್ನು ಭೇಟಿಯಾದ. ರಿಲ್ಕೆಯ ಜೀವನವನ್ನೇ ಬದಲಾಯಿಸಿದ ಭೇಟಿ ಇದು. ರಿಲ್ಕೆಗೆ ಆಗ ೨೭ ವರ್ಷ. ಹಠಯೋಗಿಯಂತೆ ಸತತ ತನ್ನ ಪಾಡಿಗೆ ತನಗೆ ಸರಿಕಂಡಂತೆ ಶಿಲ್ಪಕಲೆಯಲ್ಲಿ ತೊಡಗಿಕೊಂಡಿದ್ದ ರೋಡಿನ್‌, ಸ್ಫೂರ್ತಿಯನ್ನು ನಂಬಿದವನಲ್ಲ; ಕಾಯಕದಲ್ಲಿ ಶ್ರದ್ಧೆಯಿದ್ದವನು. ರೋಡಿನ್‌ ಮೇಲೊಂದು ಪುಸ್ತಕ ಬರೆಯಲು ಹೋಗಿದ್ದ ರಿಲ್ಕೆ, ಅವನ ಕಸುಬುಗಾರಿಕೆಯ ಗುಣಗಳನ್ನು ಕಂಡು ರೋಮಾಂಚಿತನಾದ. ರೋಡಿನ್‌ ಒಂದು ಶಿಲ್ಪವನ್ನು ರಚಿಸಿದರೆ ಅದರ ಮೈ ಜೀವಂತವೆನ್ನುವಂತೆ ಹೊಳೆಯಬೇಕು. ಹೀಗೆ ಪ್ರಾಣಧಾರಣೆ ಮಾಡಿದ ವಸ್ತು ಮಾತ್ರ ಪರವಸ್ತುವೂ ಆಗಿ ಹೊಳೆಯುತ್ತಲೇ ಇನ್ನೇನನ್ನೊ ನಮಗೆ ಹೊಳೆಯಿಸುತ್ತದೆ.

ಒಳಗಿನ ತಿರುಳಿನಷ್ಟೇ ಹೊರಗಿನ ತೊಗಟೆಯೂ ಮುಖ್ಯವೆನ್ನುವುದು, ತೊಗಟೆಯಿಂದಲೇ ತಿರುಳನ್ನು ಬಗೆಯುವುದು, ನೋಡುವ ಎಚ್ಚರದಿಂದ ಕಲಾವಿದ ಪಡೆಯುವ ಭಾಗ್ಯದ ಫಲ. ರೋಡಿನ್‌ನ ಈ ಸತತ ಸಾಧನೆಯ ಕಸುಬುಗಾರಿಕೆ ಕಂಡು ರಿಲ್ಕೆ ತನ್ನ ಸೊಗಸಿನ ಆತ್ಮರತಿಯಿಂದ ಬಿಡುಗಡೆ ಪಡೆದ. ಇದರ ಫಲ ಅವನ ‘ವಸ್ತು ಪದ್ಯಗಳು’. THINGS ಅವನ ಪಾಲಿಗೆ ಮುಖ್ಯವಾದ ಶಬ್ದವೂ ಕಾಣ್ಕೆಯ ಆಗರವೂ ಆಯಿತು.

ರೋಡಿನ್‌ ಒಮ್ಮೆ ಬೆಳಗಿನಝಾವ ರಿಲ್ಕೆಯನ್ನು ಮೃಗಶಾಲೆಗೆ ಕಳುಹಿಸಿದ. ‘ಏನನ್ನಾದರೂ ತತ್ಪರವಾಗಿ ದಿಟ್ಟಿಸಿ ನೋಡು; ನಿನಗೇ ಅದು ಹೊಳೆಯುವಷ್ಟು ಕಾಲ ನೋಡು’ ಪಂಜರದಲ್ಲಿ ಸುತ್ತುವ ಚಿರತೆಯೊಂದನ್ನು ನೋಡಿದ್ದರ ಫಲವಾಗಿ ಹೊಮ್ಮಿದ ಈ ಪದ್ಯ ಮುಂದಿನ ಅವನ ಎಲ್ಲ ಕೃತಿಗಳಿಗೂ ನಾಂದಿಯಾಯಿತು.