ಈ ವರ್ಷದ ಏಪ್ರಿಲ್‌ ತಿಂಗಳಿಂದ ಜೂನ್‌ತನಕ ನಾನು ಬ್ರೆಕ್ಟ್‌ನನ್ನು ಅನುವಾದಿಸಿದೆ. ಇದು ನನಗೆ, ನನ್ನ ಕಾಲದ ರಾಜಕೀಯ-ಸಾಂಸ್ಕೃತಿಕ ಮಾತೆಲ್ಲವೂ ಸೋತ ದಣಿವಿನ ಅಗತ್ಯವೂ ಆಗಿತ್ತು. ಗೆಳತಿ ಅಕ್ಷತಾರ ವಿಶೇಷ ಆಸ್ಥೆಯಿಂದಾಗಿ (ಅಹರ್ನಿಶಿ ಪ್ರಕಾಶನದಿಂದ) ಇದು ಹೊರಬಂತು. ಈ ಮಧ್ಯೆ ನಾನೇ ಕೆಲವು ಕವನಗಳನ್ನು ಬರೆಯತೊಡಗಿದೆ; ಹಿಂದೆ ಬರೆದು ಪ್ರಕಟವಾಗದ ಒಂದೆರಡು ಪದ್ಯಗಳೂ ಇದ್ದವು . ನನ್ನ ಸ್ವಂತ ಕವನಗಳದ್ದೆ ಸಂಕಲನ ‘ಅಭಾವ’ ಎಂಬ ಹೆಸರಿನಲ್ಲಿ ರಿಲ್ಕೆಯ ಈ ಕೃತಿಯ ಜೊಲತೆಗೆ ಪ್ರಕಟವಾಗುತ್ತಿದೆ. ತಲುಪುವ ಗೊತ್ತು ಗುರಿ ಅಸ್ಪಷ್ಟವಾಗಿದ್ದೇ ನನ್ನನ್ನೇ ನಾನು ಹುಡುಕಿಕೊಳ್ಳುವ, ನಿರಾಕರಿಸಿಕೊಳ್ಳುವ, ಪುನಃ ಮಂಕಿನಿಂದ ಹೊರಬರುವ, ಧೋರಣೆಗಳಿಂದ ಪಾರಾಗುವ ಪ್ರಯಾಣ ಯಾವತ್ತಿನಿಂದಲೂ ನನ್ನ ಬರವಣಿಗೆಯ ಕ್ರಮ. ಕಥೆಯೆಂದು ಶುರುವಾದ್ದು ಪ್ರಬಂಧವಾಗುತ್ತದೆ; ಅಥವಾ ಕಾದಂಬರಿಯಾಗುತ್ತದೆ. ಏನೂ ಆಗಲಾರದ ಮೌನದಲ್ಲಿ ಕವಿತೆಯಾಗತೊಡಗುತ್ತದೆ. ಇದು ಭಾಷೆಯಲ್ಲಿ ನಡೆಯುವ ಆಟವೂ ಹೌದು; ಬೇಟವೂ ಹೌದು. ನನ್ನ ಮನಸ್ಸನ್ನೇ ನಾನು ಚುರುಕುಗೊಳಿಸಿಕೊಳ್ಳುವ ಚಿಕಿತ್ಸೆಯ ಗುಣವೂ ಈ ಸತತವೆನ್ನಿಸುವ ಗುಂಗಿಗೆ ಇದೆ. ನನಗೆ ಈ ದಿನಗಳಲ್ಲಿ ಪ್ರಿಯರಾದ ಕೆಲವರ ಜೊತೆ ನಡೆಸುವ ಸಂವಾದಗಳಲ್ಲೂ ನನ್ನ ಈ  ಒಳಗಿನ ಪ್ರಯಾಣ ನಡೆದಿರುತ್ತದೆ. ವೇದಿಕೆಯ ಮೇಲೆ ನಾನು ಆಡುವ ಮಾತುಗಳೂ ಅದೃಷ್ಟವಶಾತ್‌ಈ ಬಗೆಯಲ್ಲಿ ನನಗೆ ನಾನೇ ತೆರೆದುಕೊಳ್ಳುವ ಅವಕಾಶಗಳಾಗುವುದೂ ಉಂಟು.

ನಾನು ಬರೆಯುವ ಕವನಗಳು ನನ್ನನ್ನು ಇಡಿಯಾಗಿ ಹಿಡಿಯುವುದಿಲ್ಲ ಎನ್ನಿಸಿದಾಗ, ನನಗಿಂತ ಭಿನ್ನರೂ, ಇನ್ನೂ ಹೆಚ್ಚು ಎತ್ತರದಿಂದ, ಎಚ್ಚರದಿಂದ ಕಂಡವರೂ ಅನ್ನಿಸುವ ಕವಿಗಳನ್ನು ಓದುತ್ತೇನೆ. ನನ್ನ ತೆಕ್ಕೆಗೆ, ಭಾಷೆಯ ಮಾಯಾವಿ ಶಕ್ತಿಗೆ ಸಿಗಬಲ್ಲ ಕವನಗಳನ್ನು ಅನುವಾದಿಸುತ್ತೇನೆ. ಮೂಲಕ್ಕೆ ಹೆಚ್ಚು ಹೆಚ್ಚು ಹತ್ತಿರವಾಗುವ ಈ ಪ್ರಯತ್ನ ನನಗೇ ನಾನು ಹತ್ತಿರವಾದಂತೆ ಕಂಡಾಗ ಸಾರ್ಥಕನಾದೆ ಅನ್ನಿಸುತ್ತದೆ-ಬರೆದು, ಹರಿದು ಹಾಕಿದ ಹಲವು ಹಾಳೆಗಳ ನಂತರ. ಮೂಲದ ಕವಿತೆಯನ್ನು ನನ್ನ ಅಗತ್ಯಕ್ಕಾಗಿ ಮೀರುತ್ತಲೇ ವಿಧೇಯನಾಗಿರುವ ಶಿಸ್ತು ಅನುವಾದದ್ದು-ನನ್ನ ಪಾಲಿಗೆ.

ಬ್ರೆಕ್ಟ್‌ನ ನಂತರ ಯಾಕೆ ಇನ್ನೊಬ್ಬ ಜರ್ಮನ್‌ಕವಿ ರಿಲ್ಕೆ ನನ್ನನ್ನು ಕಾಡುತ್ತಿದ್ದಾನೆ ಎಂದು ಆಶ್ಚರ್ಯಪಟ್ಟಿದ್ದೇನೆ. ಇಬ್ಬರೂ ಬೇರೆ ಬೇರೆ. ನನ್ನ ಹಿಂದಿನ ಸಂಕಲನದಲ್ಲೂ (ಈವರೆಗಿನ ಕವಿತೆಗಳು, ೨೦೦೨) ಕೆಲವು ರಿಲ್ಕೆ ಅನುವಾದಗಳು ಇದ್ದವು. ಅವೆಲ್ಲವನ್ನೂ ಈಗ ನಾನು ಕಾಣುವ ಹೊಸ ಚೌಕಟ್ಟಿಗೆ ಒಗ್ಗುವಂತೆ ಮತ್ತೆ ಪ್ರಕಟಿಸುತ್ತಿದ್ದೇನೆ-ಈಚೆಗೆ ಮಾಡಿದ ಕೆಲವು ಹೊಸ ಅನುವಾದಗಳ ಜೊತೆ.

ಮೂಲ ಕವನಗಳ ಲಯದ ಮಾಂತ್ರಿಕ ಗುಣ ತಿಳಿಯಲು ನಾನು ಹಲವು ವರ್ಷಗಳ ಹಿಂದೆ ಟ್ಯೂಬಿಂಗನ್‌ ಎಂಬ (ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಆಧ್ಯಾಪಕನಾಗಿದ್ದಾಗ) ರಿಲ್ಕೆಯ ದೊಡ್ಡ ವಿಮರ್ಶಕರೊಬ್ಬರಿಂದ (ಅವರಿಗೆ ಸುಮಾರು ೮೫ ವರ್ಷ ವಯಸ್ಸು) ರಿಲ್ಕೆಯ ಕವನಗಳನ್ನು ಓದಿಸಿಕೊಂಡು ಕೇಳಿದ್ದೆ.  ನನ್ನ ಕಿವಿಯಲ್ಲಿ ಮಾತ್ರವಲ್ಲ; ಕಣ್ಣೆದುರು ಕೂಡ ‘ಪ್ಯಾಂಥರ್’ ಈಗಲೂ ಗಿರಗಿರನೆ ಸತತ ಪಂಜರದಲ್ಲಿ ಸುತ್ತುತ್ತಲೇ, ಕ್ಷಣ ನಿಂತು ಏನೋ ಕಂಡು (?) ಮತ್ತೆ ಸುತ್ತುತ್ತಲೇ ಇದೆ. ನಾನೂ ನಾಚುತ್ತ ನನ್ನ ಅನುವಾದವನ್ನು ಆ ಹಿರಿಯರಿಗೆ ಓದಿದ್ದೆ. ಕನ್ನಡಿಗನೊಬ್ಬನಿಗೆ ರಿಲ್ಕೆ ಪ್ರಿಯನಾದನೆಂದು ಆ ಹಿರಿಯರು ಸಂತೋಷಪಟ್ಟಿದ್ದರು. ಈ ಚಿರತೆ ಹೀಗೆ ಸುತ್ತುವುದು, ಕ್ಷಣ ನಿಂತು ನೋಡಿ ಮತ್ತೆ ಸುತ್ತುವುದು ರಿಲ್ಕೆಯ ಜರ್ಮನ್‌ನಲ್ಲಿ ಮಾತ್ರ; ಅದು ಕೇವಲ ಅರ್ಥವಾಗುವ ಸಾಹಿತ್ಯವಲ್ಲ. ಒಳಗೆ ಅನುರಣನಗೊಳ್ಳುವ ನಾದೋಪಾಸನೆಯ ಲಯದ ಫಲ ಎಂದು ನಾನು ಹೇಳಿದ್ದೆ. ಇವನು ಅನುವಾದದಲ್ಲಿ ಸಿಗಲಾರ, ಇವರ ಭಾಷೆಯನ್ನು ಕಲಿತು ಮೂಲದಲ್ಲೇ ಓದಬೇಕು ಎನ್ನುವ ವಿನಯ ಅನುವಾದಕನಿಗೆ ಇರಬೇಕು. (ನಮ್ಮಲ್ಲಿ ಬೇಂದ್ರೆ ಬಗ್ಗೆ ಈ ಮಾತನ್ನು ಹೇಳಬಹುದು. ರಿಲ್ಕೆಗಿಂತ ಬ್ರೆಕ್ಟ್‌ಅನುವಾದಕ್ಕೆ ಹೆಚ್ಚು ಲಭ್ಯ ಅನ್ನಿಸಿದೆ ನನಗೆ) ಹೊಸ ಭಾಷೆಯೊಂದನ್ನು ಕಲಿಯಲಾರದ ನನಗಂತೂ ಈ ವಿನಯ ಅತಿ ಅಗತ್ಯ.

ರಿಲ್ಕೆ ಕವಿಯಾಗಿ, ವ್ಯಕ್ತಿಯಾಗಿ ಬ್ರೆಕ್ಟ್‌ಗಿಂತ ಅನ್ಯ ಎಂದೆ. ಈ ಅನ್ಯವೂ ನನ್ನಲ್ಲಿ ಇಣುಕುವ ಒಂದು ಅಗತ್ಯ. ಮತಧರ್ಮಗಳಲ್ಲಿ ಕಳೆದುಹೋಗುವಂತೆ ಕಾಣುವ ದೇವನೊಬ್ಬನ್ನು ಸೃಷ್ಟಿಸಿಕೊಳ್ಳುವ ಅಗತ್ಯ ಇದು. ನೀಚ್ಸೆ ದೇವರು ಸತ್ತ ಎಂದಾಗ  ಏಸುವಿನ ತಂದೆ ಅವನೆದುರು ಇದ್ದ. ಕ್ರೈಸ್ತ ಧರ್ಮವನ್ನು ಅವನು ತೊರೆದಿದ್ದ. ನೀಚ್ಸೆಯಿಂದ ಪ್ರಭಾವಿತನಾದ ರಿಲ್ಕೆ ಕ್ರಿಸ್ತಪೂರ್ವ ಲೋಕದ ಪೇಗನ್‌ದೇವತೆಗಳನ್ನು ಆವಾಹಿಸಿಕೊಳ್ಳುತ್ತಾನೆ; ಹೊಸ ದೇವರನ್ನು ಹುಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾನೆ-ಯೇಟ್ಸ್‌ನಂತೆ.

ಅನುವಾದದ ಕಷ್ಟ ಮತ್ತು ಸುಖ ಎರಡರ ಬಗ್ಗೆಯೂ ನನ್ನ ಮತ್ತು ಗೆಳೆಯ ಓ.ಎಲ್‌. ನಾಗಭೂಷಣಸ್ವಾಮಿ ನಡುವ ನಡೆದೊಂದು ಸಂವಾದದ ಮುಖೇನ ಹೇಳುತ್ತೇನೆ. ರಿಲ್ಕೆ ಗುಲಾಬಿ ಹೂವಿನ ಮುಳ್ಳು ಚುಚ್ಚಿ ಅದು ವಿಷವಾಗಿ ತಾನು ಸತ್ತದ್ದು ಎಂದು ತಿಳಿಯುತ್ತಾನೆ. (ಆದರೆ ಅವನು ಸತ್ತದ್ದು ಲುಕೇಮಿಯಾನಿಂದ) ಅವನು ಬರದ ಮೂರೊ ನಾಲ್ಕೊ ಸಾಲಿನ ಪದ್ಯವೊಂದು ಅವನ ಗೋರಿಯ ಮೇಲಿದೆ. ಈ ಪದ್ಯದ ೫೦ ಅನುವಾದಗಳನ್ನಾದರೂ ನಾನು ಮಾಡಿರಬೇಕು. ಅವುಗಳಲ್ಲಿ ಪರವಾಯಿಲ್ಲ ಎನ್ನಿಸುವ ೧೦ ಅನುವಾದಗಳನ್ನು ನಮ್ಮ ನಡುವೆ ರಿಲ್ಕೆಯನ್ನು ಆಳವಾಗಿ ಅಭ್ಯಾಸಮಾಡಿದ ಓ.ಎಲ್‌.ಎನ್‌.ಗೆ ಕಳುಹಿಸಿದೆ. ಈ ಮೂಲಕ ನಮ್ಮಿಬ್ಬರ ನಡುವೆ ನಡೆದ ಸಂವಾದ ನನ್ನ ಪಾಲಿಗೆ ಮಹತ್ವದ ಅನುಭವ.

ಕೊನೆಗೂ ನಾನು ಪ್ರಕಟಿಸುತ್ತಿರುವ ‘ಗುಲಾಬಿ’ ನನ್ನದು; ಆದರೆ ನನ್ನದು ಮಾತ್ರವಲ್ಲ; ಓ.ಎಲ್‌.ಎನ್‌, ಅನಂತರ ಗೆಳೆಯ ವೆಂಕಟೇಶಮೂರ್ತಿ, ಗೆಳೆಯ ತಿರುಮಲೇಶ್‌ಮತ್ತು ವಿವೇಕ ಶಾನಭಾಗರಿಗೆ ನಾನು ತೋರಿಸಿ ಪಡೆದ ಸಲಹೆಗಳಿಂದ ಇನ್ನೂ ಬದಲಾಯಿಸಿ, ಅಥವಾ ಮುಂದುವರಿಸಿ, ಅಥವಾ ನಿರಾಕರಿಸಿ ಪಡೆದದ್ದು. ಆದರೆ ಇನ್ನೂ ನನ್ನನ್ನು ಕಾಡುವ ಪಾಠ ಇಲ್ಲಿದೆ… ಯೂರಿಡಿಸ್‌ನನ್ನು ಪ್ರೀತಿಸಿ, ಪಡೆದು, ಕಳೆದುಕೊಂಡು, ಕೊನೆಗೆ ತಾನೇ ಯೂರಿಡಿಸ್‌ಆಗಿಬಿಡುವ, ಆರ್ಫಿಯಸ್‌, ಅಪೋಲೋ, ಡಯಾನಿಸಿಯಸ್‌ಗೋತ್ರದ ಕವಿಯಾದ ರಿಲ್ಕೆಯ ಗೂಢವಾದ metamprphosis ಕವನ ಇದು.

*

ಆಲನಹಳ್ಳಿಯ ತೋಟದಲ್ಲಿ ನಡೆದೊಂದು ಘಟನೆ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದಿನ ಘಟನೆ ಇದು. ಗೆಳೆಯ ಕವಿ ಮಂಜುನಾಥರು ಈಗಿನಷ್ಟು ಪ್ರಸಿದ್ಧರಲ್ಲದಿದ್ದರೂ ಆಗಲೂ ನನಗಿಂತ ಶುದ್ಧ ಕವಿಮನೋಧರ್ಮದವರೆಂದು ಪ್ರಿಯರು. ಇಡೀದಿನ ಗಿಡ ಮರಗಳ ನಡುವೆ ಸುತ್ತಾಡುತ್ತಾ ಅವರು ಮಾಡಿದ ಕೆಲವು ರಿಲ್ಕೆ ಕವನಗಳನ್ನು ಅವರ ಜೊತೆ ಚರ್ಚಿಸಿದ್ದೆ. ಗೆಳತಿ ಕವಿ ಜೂಡಿತ್‌ಕ್ರೋಲ್‌ಕೊಟ್ಟ ಮಿಚೆಲ್‌ನ ಭಾಷಾಂತರ ನನ್ನ ಬಳಿ ಇತ್ತು. ನನ್ನ ಅನುವಾದಗಳಿಗೂ ಅವರ ಜೊತೆ ನಾನು ಹಂಚಿಕೊಂಡ ಅತೃಪ್ತಿ ಕಾರಣವಾಗಿರಬಹುದು. ‘ದಾವ್‌ದಾ ಜಿಂಗ್‌’ ಕೂಡ ಮಂಜುನಾಥರ ಕೆಲವು ಅನುವಾದಗಳಿಂದ ಪ್ರೇರಿತವಾಗಿ ಬೆಳೆದದ್ದು. ಈಗಂತೂ ಗೆಳೆಯ ಓ.ಎಲ್‌.ಎನ್‌ಮತ್ತು ತಿರುಮಲೇಶರು ರಿಲ್ಕೆಯನ್ನು ಕನ್ನಡದ ಮುಖ್ಯ ಅನುವಾದಿತ ಲೇಖಕನನ್ನಾಗಿ ಮಾಡಿದ್ದಾರೆ. ಓ.ಎಲ್‌.ಎನ್‌. ಮಾಡಿದ ಕವನಗಳ ಅನುವಾದವನ್ನು ನನ್ನದರ ಜೊತೆಯಲ್ಲಿ ಓದಬೇಕು. ರಾಮಾನುಜನ್‌ಹೇಳುತ್ತಿದ್ದರು. ಒಂದು ಕೃತಿಗೆ ‘ದಿ’ (The) ಅನುವಾದ ಇರುವುದಿಲ್ಲ. ಇರುವುದು ‘ಎ’ (A) ಅನುವಾದ ಎಂದು. ಹಲವು ‘ಎ’ ಅನುವಾದಗಳ ಮುಖೇನ ನಾವು ಕವಿಗೆ ಇನ್ನಷ್ಟು ಅನ್ನುವಂತೆ ಹತ್ತಿರವಾಗುತ್ತಾ ಹೋಗುತ್ತೇವೆ.

ನಾನು ಕವಿ ರಿಲ್ಕೆಯನ್ನು ಈ ಸಂಕಲನದಲ್ಲಿ ಪ್ರವೇಶಿಸುವುದು ನಾನೇ ಬರೆದ ಮೂರು ದೃಷ್ಟಾಂತ ಕಥನಗಳ ಮೂಲಕ. ಕೊನೆ ಮಾಡುವುದು ರಿಲ್ಕೆಯಲ್ಲಿ ತತ್ಪರರಾದ ಕನ್ನಡ ಲೇಖಕ ಓ.ಎಲ್‌. ನಾಗಭೂಷಣಸ್ವಾಮಿ ಅವರು ನನ್ನ ಜೊತೆ ನಡೆಸಿದ ಸಂವಾದದ ಫಲವಾಗಿ ಬರೆದೊಂದು ಟಿಪ್ಪಣಿಯಿಂದ. ಓ.ಎಲ್‌.ಎನ್‌ರಿಗೆ ಗಾಢವಾಗಿ ಅನುವಾದದ ಬಗ್ಗೆ ಮಾತನಾಡಲು ನಾನೊಂದು ನೆವವಾದೆನೆಂಬುದು ತುಂಬಾ ಸಂತೋಷದ ಸಂಗತಿ.

ಮೊದಲ ಮೂರು ನನ್ನ ಪದ್ಯಗಳು ಅದ್ವೈತಾನುಭವದ ಬಗೆಗೆ ನನ್ನದೇ ಗೀಳಿನ ಪ್ರತಿಕ್ರಿಯೆಗಳಾಗಿವೆ. ನಾರಾಯಣ ಗುರುಗಳಿಗೆ ಚಾಂಡಲ ಸಂಕೇತವಲ್ಲ; ಕಾವ್ಯದ ಪರಿಭಾಷೆಯಲ್ಲಿ ಹೇಳುವುದಾದರೆ ಬರಿಯ ವಿಭಾವವಲ್ಲ. ಶಂಕರರ ಕಣ್ಣನ್ನು ಸತ್ಯಕ್ಕೆ ತೆರೆಯುವವನು ನಿಜದ ಚಾಂಡಾಲ. ಆದರೆ ಸತ್ಯದರ್ಶನವಾದನಂತರ ಮಾತ್ರ ಈ ಚಾಂಡಾಲನೇ ಶಂಕರರಿಗೆ ಪರಶಿವನಾಗುತ್ತಾನೆ. ಇದು ಖರೆ ಅದ್ವೈತ; ಚಾಂಡಾಲನ ವೇಷದಲ್ಲಿ ಶಿವ ಬಂದ ಅಂದುಕೊಳ್ಳುವುದು Bad faith (ಉಡಾಎ) ಅದ್ವೈತ; ಎದುರು ಇರುವ ವಸ್ತುವೇ ಪರವಸ್ತುವೂ ಆಗಬೇಕು. (ಗುರುಗಳ ಹೊಸ ವ್ಯಾಖ್ಯಾನವನ್ನು ನನಗೆ ಹೇಳಿದ್ದು ಗೆಳೆಯ ಇಸ್ಮಾಯಿಲ್‌).

ದೈತ್ಯ ಪ್ರತಿಭೆಯ ಫ್ರೆಂಚ್‌ಶಿಲ್ಪಿ ರೋಡಿನ್‌ಆತ್ಮರತನಾಗಿದ್ದ ರಿಲ್ಕೆಗೆ ‘ಹೊರಗೆ ಹೋಗಿ ಏನನ್ನಾದರೂ ದಿಟ್ಟಿಸುತ್ತಾ ಕೂತಿರು. ನೀನು ನೋಡುವ ವಸ್ತು ನಿನಗೆ ಹೊಳೆಯುವಂತಾಗಲಿ; ಹೊಳೆಯುವಂತಾದ ವಸ್ತು, ನಿನಗೆ ನಿನ್ನ ಒಳಗಿನದನ್ನು ಹೊಳೆಯಿಸಲಿ’ ಎಂದಿದ್ದನಂತೆ. ಇದರ ಫಲವಾಗಿ ರಿಲ್ಕೆ ‘ಮೃಗಶಾಲೆಯಲ್ಲಿ’ ಎನ್ನುವ ಪದ್ಯವನ್ನು ಬರೆದು ತನ್ನ ಆತ್ಮರತಿಯಿಂದ ಬಿಡುಗಡೆ ಪಡೆದದ್ದು.

ನೋಡಿದ ವಸ್ತು ಅದಾಗಿಯೇ ಜೀವಂತವಾಗಿರಬೇಕು. ಶಂಕರರು ಕಂಡ ಚಾಂಡಾಲನಂತೆ. ಈ ಚಾಂಡಾಲನೂ ಕಳೆಗುಂದಿದ ಬಾಲ ಸನ್ಯಾಸಿಯನ್ನು ಅಪಾದಮಸ್ತಕ ನೋಡುವ ಪರಿಯಲ್ಲಿ ಮತ್ತೆ ತೇಜಸ್ವಿಯಾಗುವಂತೆ ಮಾಡುತ್ತಾನೆ. ಈ ವರ್ಣನೆ ರಿಲ್ಕೆ ತನ್ನ ಒಳಹೊರಗುಗಳನ್ನು ಬೆಸೆಯುವ ಹೊಯ್ದಾಟವನ್ನು ನನ್ನ ಪಾಲಿಗೆ ತಿಳಿಯುವಂತೆ ಮಾಡುತ್ತದೆ. ಹಾಗೆಯೇ ಗಾಂಧಿ ಮರದ ಎಲೆಗಳನ್ನು ನೋಡಿ ಕಂಡ ರೂಪ ಭಿನ್ನತೆಯನ್ನು ಗುರುಗಳು ರುಚಿ ತಿಳಿದು ಮೀರು ಎನ್ನುತ್ತಾರೆ. ಆಗ ಎಲ್ಲ ಒಂದೇ ರುಚಿ-ಕಹಿ, ಹುಳಿ ಅಥವಾ ಸಪ್ಪೆ. ಅದ್ವೈತದಲ್ಲಿ ನಾಟಕಕ್ಕೆ ಎಡೆಯಿಲ್ಲ.

ಆದರೆ ಇಹದ ಲೌಕಿಕ ಸತ್ಯಗಳೂ ಭಿನ್ನತೆಗಳೂ ನಮಗೆ ಎದುರಾಗುತ್ತಲೇ ಇರುತ್ತವೆ ಅಲ್ಲವೆ? ಗಾಂಧಿಯೂ ಬೇಕು ನಮಗೆ; ಅದ್ವೈತ ಋಷಿಗಳಾದ ನಾರಾಯಣಗುರು, ರಮಣರಂಥವರೂ ಬೇಕು. ನಮ್ಮ ಒಳಗಿನ ಸತ್ಯವನ್ನೇ ಅರಿಯಲು-ರಿಲ್ಕೆಯೂ ಬೇಕು; ಬ್ರೆಕ್ಟ್‌ನೂ ಬೇಕು-ನಮಗೆ ಮಾತ್ರವಲ್ಲ, ಪರಸ್ಪರ ಅವರಿಗೂ. ತುಳಸಿದಾಸರೂ ಬೇಕು; ಕಬೀರನೂ ಬೇಕು, ದಾಸ್ತೊವಸ್ಕಿಯೂ ಬೇಕು; ಟಾಲ್‌ಸ್ಟಾಯನೂ ಬೇಕು. ವಿಭಾವವೂ ಬೇಕು; ಸಂಚಾರಿ ಭಾವಗಳೂ ಬೇಕು ಕವಿತೆಗೆ.

ನಿಜದ ಚಾಂಡಾಲ ಶಿವನಾಗುವುದು. ಮರ ಒಂದು ರುಚಿಯಾಗಿಯೂ, ಭಿನ್ನತೆಗಳನ್ನು ಏಕತ್ರಗೊಳಿಸಿಕೊಂಡ ವೈಭವವಾಗಿಯೂ ನಮಗೆ ಏಕಕಾಲದಲ್ಲಿ ಕಾಣುವುದು ಸಂತನ ಕಣ್ಣಿನಲ್ಲಿ ಮಾತ್ರವಲ್ಲ, ವ್ಯಾಮೋಹಿಯಾದ ಕವಿಯ ಕಣ್ಣಿನಲ್ಲೂ. ಗತಿಸಿದ ಪರಿಚಯದ ಯಾವಳೋ ಒಬ್ಬ ಹುಡುಗಿ, ರೇವಾ ಅನ್ನುವ ಹೆಸರಿನ ಬಲು ಚೆಂದದ ಹುಡುಗಿ, ರಿಲ್ಕೆಗೆ ‘ಏರೇರುವ ಮರ’. ತನ್ನ ಕಿವಿಯಲ್ಲೇ ಇರುವ ಮರ. ಆರ್ಫಿಯಸ್‌ನರಕ ಹೊಕ್ಕು ತರುವ, ಅನುಮಾನಿಸಿ ಹಿಂದೆ ನೋಡಿ ಕಳೆದುಕೊಳ್ಳುವ ಯೂರಿಡಿಸ್‌ಕೂಡ.

ಮುಂದೆ ನಡೆಯಬೇಕೆಂದೇ ಹೀಗೆ ಎತ್ತೆತ್ತಲೋ ವಾಲುವುದು, ಎಡವಿ ಕಾಣುವುದು, ಸತ್ಯದ ಮಾತಿಗೆಂದು ಉಗ್ಗುವುದು ಕಾವ್ಯದ ಕಾಯಕ; ಮಾತಿನ ವ್ಯವಸಾಯ.

ತಿರುಮಲೇಶ, ಪರಮಹಂಸ, ರಿಲ್ಕೆ-ಈ ಮೂವರೂ ಒಂದು ಬೆಕ್ಕನ್ನು ವಿಭಿನ್ನವಾಗಿ ಕಂಡ ಬಗ್ಗೆ ಇನ್ನೊಂದು ಪದ್ಯವಿದೆ. ಬೆಕ್ಕು ತನ್ನಲ್ಲೇ ಇನ್ನೊಂದು ನಿಜವಾಗಿ, ತನಗೆ ಅನ್ಯವೆಂಬ ದ್ವೈತಾನುಭವ ತಿರುಮಲೇಶರದು. ರಿಲ್ಕೆಗೆ ಅದು ಸಾಂಕೇತಿಕವಾಗಿ ಬೆಕ್ಕೇ ಆಗಿ ಉಳಿಯದೆ ಮಾಯವಾಗಿಬಿಡುತ್ತದೆ. ಆದರೆ ರಿಲ್ಕೆ ತನ್ನ ಎಲ್ಲ ಕವನಗಳಲ್ಲೂ ಸಾಧಿಸಲು ನೋಡುವುದು ಇದಕ್ಕೆ ವಿರುದ್ಧವಾದ್ದು. ರೋಡಿನ್‌ನಿಂದ ಕಲಿತ ಪಾಠ ಅದು, ಇನ್ನೊಂದು ಪದ್ಯದಲ್ಲಿ-ನೋಡಿ ನೋಡಿ ಪ್ರೀತಿಸದೆ ಪ್ರಪಂಚಕ್ಕೆ ಎದುರಾಗುವ, ‘ಸಾಕ್ಷಿ’ ಮಾತ್ರ ಆಗಿಬಿಡುವ ಸ್ವಾನುರಕ್ತ ಕವಿಯೆಂದೂ ನಾನು ರಿಲ್ಕೆಯನ್ನು ಟೀಕಿಸಿಕೊಂಡಿದ್ದೇನೆ. ಇದು ನನ್ನ ಒಳಗಿನ ಶೋಧದ ಪಯಣವೂ ಹೌದು.

ಪರಮಹಂಸರಿಗೆ ಪ್ರಸಾದವನ್ನು ಸ್ವೀಕರಿಸುವ ತಾಯಿಯೇ ಬೆಕ್ಕಾಗಿ ಬಂದಿದ್ದಾಳೆ. ಬೆಕ್ಕೇ ತಾಯಿಯಾಗುತ್ತಾಳೆ. ಈ ಸ್ಥಿತಿಯಲ್ಲಿ ಕಾವ್ಯವೆಂಬ ಪ್ರತ್ಯೇಕ ಸಂಗತಿಯಿರುವುದಿಲ್ಲ. ಎಲ್ಲವೂ ಕಾವ್ಯವೇ. ಗುಲಾಬಿ ತನ್ನ ಶುದ್ಧ ವೈರುದ್ಧ್ಯವನ್ನು ಮೀರಿರುತ್ತದೆ.

ನಮ್ಮ ಕಾಲ ಮಾತ್ರ ಅಂಥವರನ್ನು ಮನೋವಿಶ್ಲೇಷಣೆ ಮಾಡುವ ಕುರ್ಚಿಯ ಮೇಲೆ ಕೂರಿಸಿ ಆರೈಕೆ ಮಾಡುತ್ತದೆ. ಆದರೆ ದೊಡ್ಡ ಕವಿಗಳಂತೂ ‘ಅದೃಷ್ಟ’ದಿಂದ ಒದಗುವ ಕಾಣ್ಕೆಗಳನ್ನು ನಿರಾಕರಿಸುವುದಿಲ್ಲ. ಗೇಬ್ರಿಯಲ್‌ಎಂಬ ಏಂಜಲ್‌ತನ್ನ ಕಿವಿಯಲ್ಲಿ ಹೇಳಿದ್ದನ್ನು ತಾನು ಬರೆದುಕೊಂಡೆ ಎನ್ನುವ ಬ್ಲೇಕ್‌ಹೀಗೆ ಪಡೆದಿದ್ದನ್ನೂ ಕವಿಯ ಕಮ್ಮಟದಲ್ಲಿ ತಿದ್ದಿದ್ದಾನೆ. ರಿಲ್ಕೆಯೂ ತನ್ನ ಆರ್ಪಿಯಸ್‌ಸಾನೆಟ್ಟುಗಳು ತನ್ನಿಂದ ಎರಡು ವಾರಗಳ ಕಾಲದಲ್ಲಿ ತಾವಾಗಿಯೇ ಬರೆಸಿಕೊಂಡವು ಅನ್ನುತ್ತಾನೆ. ಕೆಲವನ್ನು ಅವನು ತಿದ್ದಿದ್ದರೆ ಒಳ್ಳೆಯದಾಗುತ್ತಿತ್ತು ಎನ್ನುವ ವಿಮರ್ಶಕರಿದ್ದಾರೆ. ಯೇಟ್ಸ್ ತನ್ನ ವಿಷನ್ಸ್‌ಪುಸ್ತಕವನ್ನು ಹೆಂಡತಿಯ ಮೂಲಕ ಅದೃಶ್ಯ ಲೋಕದಿಂದ ಪಡೆದೆ ಎನ್ನುತ್ತಾನೆ. ಇವೆಲ್ಲ ನಡೆದಿರೋದು ರ‍್ಯಾಷನಲ್‌ವೆಸ್ಟ್‌ನಲ್ಲಿ.

ಇದೊಂದು ನನ್ನ ಲಹರಿಯ ಪ್ರವೇಶ ರಿಲ್ಕೆಗೆ.

ಈ ಏಪ್ರಿಲ್‌ನಿಂದ ತತ್ಪರವಾಗಿ ಅನಾರೋಗ್ಯದಲ್ಲು ಕೆಲಸಮಾಡಲು ಸಹಾಯವಾಗಿ ಬಂದಿರುವುದು ಭಾರತದ ಸಾಹಿತ್ಯ ಅಕಾಡಮಿಯವರು ನನಗೆ ಆರು ತಿಂಗಳ ಅವಧಿಗೆಂದು ಕೊಟ್ಟಿರುವ ಫೇಲೋಶಿಪ್‌. ಇದು ನಾನು ಕೇಳದೇ ಪಡೆದದ್ದು. ಈ ಔದಾರ್ಯಕ್ಕಾಗಿ ನಾನು ಅಕಾಡಮಿಗೂ, ಅದರ ಕಾರ್ಯದರ್ಶಿ ಶ್ರೀ ಅಗ್ರಹಾರ ಕೃಷ್ಣಮೂರ್ತಿಗಳಿಗೂ ಕೃತಜ್ಞನಾಗಿದ್ದೇನೆ.

ನಾನು ಬರೆದ ಎಲ್ಲವನ್ನೂ ಓದುವವರು ಗೆಳೆಯ ಅಭಿನವ ರವಿಕುಮಾರ. ನನಗೆ ಬಹು ಪ್ರಿಯರಾದವರು. ಅವರೇ ಈ ಕವಿತೆಗಳನ್ನು ಪ್ರಕಟಿಸುತ್ತಿದ್ದಾರೆ. ಇವರ ಉತ್ಸಾಹ, ಪುಸ್ತಕ ಪ್ರೀತಿ ಕನ್ನಡದಲ್ಲಿ ಮಹತ್ವದ ಪ್ರಕಟಣೆಗಳು ಸಾಧ್ಯವಾಗುವಂತೆ ಮಾಡಿದೆ.

ಯು.ಆರ್. ಅನಂತಮೂರ್ತಿ
೧ ಆಗಸ್ಟ್‌೨೦೦೯
೪೯೮, ೬ನೆಯ ‘ಎ’ ಮುಖ್ಯರಸ್ತೆ
ರಾಜಮಹಲ್‌ವಿಲಾಸ ಎರಡನೆಯ ಹಂತ
ಬೆಂಗಳೂರು – ೫೬೦೦೯೪