ಕೊನೆಗಾಲ ಸಮೀಪಿಸಿದಂತೆ
ಕಟ್ಟಿದ ಕಾಲು ತೊಡರಿ ಮುಗ್ಗರಿಸಿ ಚಡಪಡಿಸುತ್ತ
ಪ್ರಾರಬ್ಧ ಸವೆಸುವ, ಹಿಡಿದ ಕೆಲಸ ಮುಗಿಸುವ ಕಾಯಕದ
ತವಕ
ವಕ್ರ ಹಂಸದ ಪೆದ್ದುಪಾದದ ಹೆಜ್ಜೆ.

ತಲ್ಲಣಿಸುತ್ತ ಅಧೀರ ಆಯತಪ್ಪಿ ಬಿದ್ದುಬಿಡುವಂತೆ ನೀರಿಗೆ ಹಂಸ
ನಿತ್ಯದ ನೆಲ ಕುಸಿದು
ನಾವು ಸಾಯುವುದು.

ಸ್ಪರ್ಶದುಲ್ಲಾಸಕ್ಕೆ ಅಲೆಯಮೇಲಲೆ ಎದ್ದು
ಮೆದುವಾಗೆತ್ತಿ, ಓಲೈಸಿ, ಒಯ್ಯುವ
ಜಲದ ಗಮಕದ
ಎರಡು ಸೀಳಿನ ಮಧ್ಯ ಅನಾಯಾಸ
ನೀಡಿಕೊಳ್ಳುವ ಹಂಸ

ಬಗೆದೊಲೆಯುತ್ತ, ತಟಸ್ಥ ತೇಲುತ್ತ
ಅಗಾಧ ನೀರವದಲ್ಲಿ ತಲ್ಲ ಈನ.

ಸತತ ಗಮನವೆ ಗಮ್ಯವಾದ ಪರಿವೆಯಲ್ಲಿ ಈಗ
ಹಂಸ
ಸ್ವಸ್ಥ.

೧೮-೩-೮೯
(ಇದುವರೆಗಿನ ಕವಿತೆಗಳು)