ಪ್ರೇತ ಅಗೋಚರ, ಅಗಮ್ಯವಲ್ಲ
ಕಲ್ಪನೆಗಾದರೂ ಸಿಗತ್ತೆ ಅದು
ಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿ
ಎಷ್ಟೇ ನಿಟ್ಟಿಸಿ ನೋಡು, ದೃಷ್ಟಿ
ಕುರುಹಿಲ್ಲದಂತೆ ಕುಸಿದು ಬಿಡುವುದು.

ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚ
ತಲೆಚಚ್ಚಿ ತನ್ನ ರೋಷ ಕಳಕೊಂಡಂತೆ
ಸುಸ್ತಲ್ಲಿ ಸಾಂತ್ವನ, ನಿನಗೆ.

ಇವಳೋ ಬಜಾರಿ, ಹೀಗೆ
ತಾನು ಒಳಪಡಿಸಿಕೊಂಡ ಎಲ್ಲರ ಕಣ್ಣುಗಳನ್ನು
ಮುಚ್ಚಿಟ್ಟಾಳು. ಅವಕಾಶ ಸಿಕ್ಕಾಗ ದುರುಗುಡುತ್ತ
ಅವುಗಳನ್ನು ಒಂದೊಂದಾಗಿ ಪರೀಕ್ಷಿಸುವ ಪ್ರೇಕ್ಷಕಿಯಾದಾಳು
ಅವುಗಳನ್ನು ಸುತ್ತ ಇಟ್ಟುಕೊಂಡು ಗುರುಗುಡುತ್ತ
ಮೈಚಾಚಿ ಮುದುಡಿ ನಿದ್ದೆ ಹೋದಾಳು,

ಥಟ್ಟನೇ ಎದ್ದಾಳು. ಎದ್ದು ತಿರುಗಿದಾಗ
ಧುತ್ತನೆ ಅವಳ ಮೋರೆ ನಿನಗೆ ಎದುರಾಗುವುದಿದೆಯಲ್ಲ
ಆಗ ನೀನು ಬೆಚ್ಚುವಿ.
ಅಗೋ ಅವಳ ಹೊಳೆಯುವ ಪಾಪೆಯಲ್ಲಿ
ನೀನೆಷ್ಟು ಪುಟಾಣಿಯಾಗಿ ನೇತು ಬಿದ್ದಿರುವಿ-

ಪುರಾತನ ನೊಣದಂತೆ

೧೦.೧.೯೨