. ಎಲ್‌. ನಾಗಭೂಷಣಸ್ವಾಮಿ

ಕವಿತೆಯನ್ನು ಕುರಿತು ಕನ್ನಡಿ-ಕೈದೀವಿಗೆ ಅನ್ನುವ ರೂಪಕಗಳ ಬಳಕೆ ಕನ್ನಡದಲ್ಲಿ ಹಿಂದಿನಿಂದಲೂ ಇದೆ. ಅನುವಾದದ ಸ್ವರೂಪವನ್ನೂ ಇದೇ ರೂಪಕ ವಿವರಿಸುತ್ತದೆ. ಅನುವಾದ ಕನ್ನಡಿ, ಆದರೆ ಅನುವಾದದ ಕನ್ನಡಿಯಲ್ಲಿ ಮತ್ತೊಬ್ಬ ಕವಿಯ ಮುಖ ಕಾಣುವ ಬದಲಾಗಿ ಅನುವಾದಕರ ಮುಖವೇ ಕಾಣುತ್ತದೆ; ಅನುವಾದದ ಕೈ ದೀವಿಗೆಯನ್ನು ಅತ್ತಿತ್ತ ಸರಿಸಿ ಆಡಿಸಿದರೆ ಬೆಳಕಿನ ವರ್ತುಲವೂ ಚಲಿಸುತ್ತಾ ಈಗ ಬೆಳಕಿನಲ್ಲಿದ್ದದ್ದು ಕತ್ತಲಿಗೆ, ಆಗ ಕತ್ತಲಿನಲ್ಲಿದ್ದದ್ದು ಈಗ ಬೆಳಕಿಗೆ ಬರುತ್ತದೆ. ಅನುವಾದ ಬೆಳಗುವ ಅರ್ಥ ವಿಸ್ತಾರದ ಆಚೆಗೆ ಅರ್ಥವಾಗದ, ಅನುಭವಕ್ಕೆ ಬರದ ಕತ್ತಲೆಯ ಮೊತ್ತ ಹಾಗೇ ಇರುತ್ತದೆ. ಒಂದೊಂದು ಅನುವಾದವೂ ಅರ್ಥ-ಅನುಭವಗಳ ಬೆಳಕಿನ ವಲಯದ ಚಲನೆಯ ವಲಯದಲ್ಲಿ ಸುಳಿದು ಹೆಜ್ಜೆ ಹಾಕುವ ಕೆಲಸ.

ಯು.ಆರ್. ಅನಂತಮೂರ್ತಿಯವರು ರಿಲ್ಕ್‌ ಕವಿಯ ಪುಟ್ಟ, ಅಗಾಧ ಕವಿತೆಯೊಂದನ್ನು ಅನುವಾದ ಮಾಡಿದ್ದಾರೆ. ಒಂದು ಅನುವಾದವಲ್ಲ, ಹಲವು. ‘ಕೊನೆಗೂ ನಾನು ಪ್ರಕಟಿಸುತ್ತ ಇರುವ ‘ಗುಲಾಬಿ’ ನನ್ನದು; ಆದರೆ ನನ್ನದು ಮಾತ್ರವಲ್ಲ. (ಗೆಳೆಯರಿಗೆ) ನಾನು ತೋರಿಸಿ ಪಡೆದ ಸಲಹೆಗಳಿಂದ ಇನ್ನೂ ಬದಲಾಯಿಸಿ, ಅಥವಾ ಮುಂದುವರಿಸಿ, ಅಥವಾ ನಿರಾಕರಿಸಿ ಪಡೆದದ್ದು. ಆದರೆ ಇನ್ನೂ ನನ್ನನ್ನು ಕಾಡುವ ಪಾಠ ಇಲ್ಲಿದೆ’ ಎಂದಿದ್ದಾರೆ. ಯಾವ ಅನುವಾದ ಸಮರ್ಪಕ ಅನ್ನಿಸಿತು ಎಂದು ಕೇಳಿದಾಗ ಅವರ ಜೊತೆ ಕವಿತೆಯನ್ನು ಕುರಿತು ನಡೆದ ಚರ್ಚೆ ಭಾಷೆಯಲ್ಲಿ, ಅನುವಾದದಲ್ಲಿ ಆಸಕ್ತಿ ಇರುವ ಯುವ ಕವಿಗಳಿಗೆ ನೆರವಾದೀತು ಅನ್ನಿಸಿ ಈ ಟಿಪ್ಪಣಿ.

ಮೂರು ಸಾಲುಗಳ ಕವಿತೆಯ ಅನುವಾದದ ಸಾಧ್ಯತೆ ಅಸಾಧ್ಯತೆಗಳು ಕುತೂಹಲ ಹುಟ್ಟಿಸಿ, ಕೆರಳಿಸಿ, ಓದುಗರ ಮನಸ್ಸಿನಲ್ಲಿ ಮತ್ತೊಂದೇ ಪ್ರಯತ್ನಕ್ಕೆ ಕಾರಣವಾಗಬಹುದು.

ರೇನರ್ ಮಾರಿಯಾ ರಿಲ್ಕ್‌ ತನ್ನ ಸಮಾಧಿಯ ಮೇಲೆ ಕೆತ್ತಲೆಂದು ಬಯಸಿ ಬರೆದುಕೊಂಡ ಪದ್ಯ ಇದು.

ರೋಸ್‌, ಓಹ್‌ ಪ್ಯೂರ್ ಕಾಂಟ್ರಡಿಕ್ಷನ್‌, ಜಾಯ್‌
ಆಫ್‌ ಬೀಯಿಂಗ್‌ ನೋ-ಒನ್ಸ್‌ ಸ್ಲೀಪ್‌ ಅಂಡರ್ ಸೋ ಮೆನಿ
ಲಿಡ್ಸ್‌

ಜರ್ಮನ್‌ ಮೂಲ ಹೀಗಿದ:

ರೋಸ್‌, ಓಹ್‌ ರೀನರ್ ವೈಡೆರ್‌ಸ್ಟ್ರಚ್‌, ಲಸ್ಟ್‌
ನೀಮಾನ್‌ಡೆಸ್‌ ಸ್ಕ್ಲಾಫ್‌ ಝ ಸೀಯೆನ್‌ ಉಂಟರ್ ಸೋವಿಯೆಲ್‌
ಲಿನ್‌ಡೆರ್ನ್

ಅನಂತಮೂರ್ತಿಯವರ ಅನುವಾದ:

ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ದೆಯೂ ಆಗದ ಮುದದ
ಅಹಾ ಶುದ್ಧ ವೈರುದ್ಧ್ಯದ
ಗುಲಾಬಿ

ರಿಲ್ಕ್ ಕವಿತೆ ಕನ್ನಡದಲ್ಲಿ ಈ ರೂಪ ತಾಳುವ ಮೊದಲು ಅದೆಷ್ಟೋ ರೂಪಗಳನ್ನು ಧರಿಸಿ, ಬಿಟ್ಟು, ಈಗ ಹೀಗಿದೆ. ಅವುಗಳ ಬಗ್ಗೆ ಹೇಳುವ ಮೊದಲು ಮೂಲ ವಿಗ್ರಹವನ್ನು ನೋಡೋಣ.

ಗುಲಾಬಿಯನ್ನು ಕುರಿತು ಏಳೆಂಟು ಪದ್ಯಗಳನ್ನು ರಿಲ್ಕ್ ಬರೆದಿದ್ದಾನೆ. ರಿಲ್ಕ್ ವಾಸ್ತವದಲ್ಲಿರುವ ವಸ್ತುವನ್ನು ಖಚಿತವಾದ ಕಾವ್ಯವಸ್ತುವಾಗಿಸಿಕೊಳ್ಳಲು ಸತತ ಪ್ರಯತ್ನಪಟ್ಟ ಕವಿ; ಬೇಂದ್ರೆಯವರ ಹುಣಸೆಯ ಮರ, ಬೆಳದಿಂಗಳು, ಬೆಳಗು ಇವೆಲ್ಲ ನಿಜವಾಗಿಯೂ ‘ಇರುವ’ ವಾಸ್ತವದ ವಸ್ತುಗಳಾಗಿದ್ದರೂ ಅವರ ಕಾವ್ಯದಲ್ಲೇ ಭಾಷೆ, ಭಾವಗಳ  ಮೂಲಕ ಖಚಿತವಾದ ಕಾವ್ಯವಸ್ತುಗಳಾಗುತ್ತವೆಯಲ್ಲ ಹಾಗೆ. ಶಿಲ್ಪಿ ರೋಡಿನ್‌ ರಿಲ್ಕ್‌ನ ಗುರು. ಜಗತ್ತಿನಲ್ಲಿ ಇರುವ ವಸ್ತುವನ್ನು ಗಮನದಲ್ಲಿಟ್ಟು ನೋಡು, ಖಚಿತವಾಗಿ, ಸ್ಪಷ್ಟವಾಗಿ ಕಂಡರಿಸು ಅನ್ನುವ ಪಾಠ ಹೇಳಿಕೊಟ್ಟವನು. ಶಿಲ್ಪಿಗೂ, ಕವಿಗೂ ಅವನು ಕಂಡ ವಸ್ತುವೇ ಪರಮ, ಅದನ್ನು ಬೇರೆಯವರಿಗೆ ಕಾಣಿಸುವ ರೀತಿಯೇ ಗುರಿ. ಅನಂತಮೂರ್ತಿಯವರು ಇದನ್ನೇ ‘ವಸ್ತು’ ಮತ್ತು ‘ಪರ ವಸ್ತು’ ಅಂದಿದ್ದಾರೆ ತಮ್ಮ ಟಿಪ್ಪಣಿಯಲ್ಲಿ. ಗುಲಾಬಿಯನ್ನು ಕಾವ್ಯದ ಗುಲಾಬಿ ಮಾಡಿಕೊಳ್ಳಲು ರಿಲ್ಕ್ ಪಟ್ಟ ಪ್ರಯತ್ನಗಳಲ್ಲಿ ಇದು ಇನ್ನೊಂದು, ಬಹುಶಃ ಅವನಿಗೆ ಪ್ರಿಯವಾದ ಕೊನೆಗಾಲದ ಕವಿತೆ.

ಇದು ರಿಲ್ಕ್ ತನ್ನ ಸಮಾಧಿಯ ಮೇಲೆ ಬರೆಯುವುದಕ್ಕೆಂದು ರಚಿಸಿದ್ದು, ಹಾಗೆ ಸಮಾಧಿಯ ಮೇಲೆ ಬರೆದಿದೆ ಕೂಡಾ. ಇದು ಗುಲಾಬಿಯನ್ನು ಕುರಿತ ಕವಿತೆಯೇ? ಗುಲಾಬಿಯನ್ನು ಕುರಿತು ಹೇಳಿದ ಮಾತೇ? ಸ್ವಗತವೇ? ಕವಿಯ ಸಮಾಧಿಯನ್ನು ನೋಡಿದವರಿಗೆ ಬದುಕಿನ ಆ ಬದಿಯಿಂದ ಕವಿ ಹೇಳುವ ಈ ಮಾತು ಎಸೆಯುವ ಸವಾಲೇ? ಗುಲಾಬಿ ಹೂವು ಆಗಿರುವುದರ ಜೊತೆಗೆ ಇನ್ನೂ ಏನೇನನ್ನು ಸೂಚಿಸುತ್ತದೆ? ಜಪಾನಿನ ಹಾಯ್ಕು ಕವಿತೆಗಳ ಪ್ರಭಾವಕ್ಕೆ ಒಳಗಾಗಿದ್ದ ರಿಲ್ಕ್ ಈ ಕಿರು ಕವಿತೆಯನ್ನು ಕೆಣಕುವ ಮುಂಡಿಗೆಯ ಹಾಗೆ ಬರೆದನೇ? ಈ ಕವಿತೆಯ ಬಗ್ಗೆ ನಮ್ಮ ಬುದ್ಧಿ ತಿಳಿಯಬಹುದಾದ ಎಲ್ಲ ವಿವರಗಳೂ ಭಾವವಾಗಿ ಕನ್ನಡ ಓದುಗರನ್ನು ಮುಟ್ಟುವ ಹಾಗೆ ಅನುವಾದಿಸುವುದಕ್ಕೆ ಸಾಧ್ಯವೇ?

ರಿಲ್ಕ್ ಗೆ ಗುಲಾಬಿ ಇಷ್ಟ. ಅವನ ಡೈರಿಯ ಪುಟಗಳ ಮಧ್ಯೆ ಗುಲಾಬಿಯ ರೇಕುಗಳು ಇರುತಿದ್ದವಂತೆ. ಗೆಳೆಯರಿಗೆ ಗುಲಾಬಿ ಇಷ್ಟಪಟ್ಟು ಕೊಡುತಿದ್ದನಂತೆ. ರಿಲ್ಕ್‌ನ ಕೊನೆಯ ದಿನಗಳಲ್ಲಿ ಕೈಗೆ ಗುಲಾಬಿಯ ಮುಳ್ಳು ಚುಚ್ಚಿ, ಗಾಯವಾಗಿ, ಅದು ಒಣಗದೆ, ವಿಷವೇರಿ ಸತ್ತೇನೆಂದು ಆತಂಕಪಟ್ಟಿದ್ದನಂತೆ. ಅವನು ಸತ್ತದ್ದು ಮಾತ್ರ ರಕ್ತದ ಕ್ಯಾನ್ಸರ್ ನಿಂದ. ಆರ್ಫಿಯಸ್‌ ಅನ್ನುವ ಪುರಾಣ ವ್ಯಕ್ತಿತ್ವ ರಿಲ್ಕ್ ನನ್ನು ಸೆಳೆದಿತ್ತು. ನದಿಯ ದೇವ ಮತ್ತು ಸಂಗೀತದ ದೇವಿಯರ ಮಗ, ದಾರ್ಶನಿಕ; ಅವನ ಹಾಡಿಗೆ ಕಲ್ಲು, ಬಂಡೆ, ಮೃಗ, ಪಕ್ಷಿಗಳೂ ಮರುಳಾಗುತ್ತಿದ್ದವು; ತನ್ನ ಹೆಂಡತಿ ಸತ್ತಾಗ ನರಕಕ್ಕೆ ಇಳಿದು, ಸಂಗೀತದ ಬಲದಿಂದ ದೇವತೆಗಳನ್ನು ಒಲಿಸಿ, ಅವಳನ್ನು ಕರೆದುಕೊಂಡು ಬರುವಾಗ ಆಣತಿ ಮೀರಿ ಹಿಂದಿರುಗಿ ನೋಡಿ, ಪ್ರಿಯೆಯನ್ನು ಕಳೆದುಕೊಂಡವನು. ಅವನನ್ನು ಕುರಿತೇ ರಿಲ್ಕ್ ಸಾನೆಟ್ಟುಗಳ ಮಾಲೆ ಮಾಡಿದ್ದಾನೆ. ಕಾವ್ಯ, ಕಲೆ, ವಿಫಲ ಪ್ರಣಯದ ಸಂಕೇತವಾಗಿ ಅವನೂ ಗುಲಾಬಿಯಲ್ಲಿದ್ದಾನೆ. ತನ್ನವಳಾಗಿದ್ದೂ ತನ್ನ ಸುಖಕ್ಕೆ ದಕ್ಕದ ಪ್ರೇಯಸಿ, ಅರ್ಥವಾಗಿಯೂ ಅನುಭವಕ್ಕೆ ದಕ್ಕದ ಕವಿತೆ ಓದುಗರ ಪಾಲಿಗೆ, ಭಾಷೆಗೆ ಒಗ್ಗಿಯೂ ದಕ್ಕದ ಅನುಭವ ಕವಿಯ ಪಾಲಿಗೆ. ರಿಲ್ಕ್ ಮೆಚ್ಚಿದ ಆದರೆ ಪಡೆಯಲಾಗದ ಹೆಣ್ಣುಗಳ ನೆನಪೂ ಇದರಲ್ಲಿ ಇದ್ದೀತು. ರಿಲ್ಕ್ ಚಿಕ್ಕ ಹುಡುಗನಾಗಿದ್ದಾಗ ಅವರ ಅಮ್ಮ ಅವನಿಗೇ ಹುಡುಗಿಯ ವೇಷ ಹಾಕಿ ಸಂತೋಷಪಡುತ್ತಿದ್ದಳಂತೆ. ತಾನೇ ಗಂಡೂ ಹೆಣ್ಣೂ ಆದ ವಿಚಿತ್ರ ಅವನನ್ನು ಕಾಡುತ್ತಿತ್ತು ಅನ್ನುವವರೂ ಇದ್ದಾರೆ.

ಅನಂತಮೂರ್ತಿಯವರ ಅನುವಾದ ಗುಲಾಬಿಯನ್ನು ಕುರಿತ ಕವಿತಯಾಗಿದೆ. ಕವಿತೆಯನ್ನು ಮೊದಲು ಹಾಗೆಯೇ ನೋಡೋಣ. ಅನೇಕ ಕಾವ್ಯಪರಂಪರೆಗಳಲ್ಲಿ ಹೂವು ಚೆಲುವಿನ, ಪ್ರೀತಿಯ ಕೋಮಲತೆಯ ಸಂಕೇತವಾಗಿರುವಂತೆಯೇ ಮರ್ತ್ಯತ್ವ, ನಶ್ವರತೆಯ ಸೂಚನೆಯೂ ಆಗಿದೆ. ಗುಲಾಬಿಯನ್ನು ಪ್ಯೂರ್ ಕಾಂಟ್ರಡಿಕ್ಷನ್‌, ಶುದ್ಧ ವೈರುಧ್ಯ ಅಂದಿರುವುದೇಕೆ? ಆ ಮಾತು ಗುಲಾಬಿಗೆ ಅನ್ವಯವಾಗುವ ಹಾಗೆಯೇ ಕವಿತೆಯ ಇತರ ವಿವರಗಳಿಗೂ ವೈರುಧ್ಯದ ರಂಗು ತಂದಿದೆ. ಗುಲಾಬಿಯ ದಳಗಳು ಹೂವಿನ ಅಂತರಂಗವೂ ಬಹಿರಂಗವೂ ಆಗಿರುವ ವೈರುಧ್ಯವಿದೆ. ಚೆಲುವು-ನಶ್ವರತೆಗಳ ವೈರುಧ್ಯವಿದೆ. ಉಳಿದ ಸಾಲುಗಳೊಡನೆ ನೋಡಿದಾಗ ಗುಲಾಬಿ ಮುಚ್ಚಿದ ಕಣ್ಣುಗಳ, ರೆಪ್ಪೆಗಳ ರೂಪವೂ ಆಗಿದೆ. ಮುಚ್ಚಿದ ಕಣ್ಣುನಿದ್ರೆಯೂ ಹೌದು, ಸಾವೂ ಹೌದು, ಎಚ್ಚರವೂ ಹೌದು. ನಿದ್ರೆ ಹೌದಾದರೆ ಗುಲಾಬಿಯ ವೈರುಧ್ಯವನ್ನು, ಕಂಪು, ಚೆಲುವು, ನಯ ಇತ್ಯಾದಿಗಳನ್ನು ಗ್ರಹಿಸುತ್ತಿರುವ ಎಚ್ಚರವೂ ಜೊತೆಗೇ ಇದೆಯಲ್ಲ! ಸಾವು ಎಂದಾದರೆ, ಇಡೀ ಕವಿತೆ ಸತ್ತ ಕವಿ ನುಡಿಯುತ್ತಿರುವ ಜೀವಂತ ಮಾತೂ ಆಗಿದೆಯಲ್ಲಾ!

ಜೊತೆಗೇ ಕನ್ನಡದಲ್ಲಿ ಬಂದಿರುವ ‘ಮುದ’ ಅನ್ನುವ ಮಾತು ನೋಡಿ. ಇಂಗ್ಲಿಷಿನಲ್ಲಿ ಅದು ಜಾಯ್‌ ಎಂದಿದೆ. ಜರ್ಮನ್‌ ಭಾಷೆಯಲ್ಲಿ ಲಸ್ಟ್‌ ಅನ್ನುವ ಪದವಿದೆ. ಜರ್ಮನ್‌ ಬಲ್ಲವರು ಲಸ್ಟ್‌ ಅನ್ನುವುದು ತೀವ್ರ ಕಾಮವೆಂದೇ ಹೇಳುತ್ತಾರೆ. ಗುಲಾಬಿ ಹಾಗೆ ಯೂರೋಪಿಯನ್‌ ಕವಿತೆಗಳಲ್ಲಿ ಗಂಡು ಹೆಣ್ಣಿನ ಕಾಮ, ಪ್ರೇಮಗಳ ಕುರುಹಾಗಿ ಬಳಕೆಯಾಗಿರುವುದು ಇದ್ದೇ ಇದೆ. ‘ಅಷ್ಟೊಂದು ರೆಪ್ಪೆಗಳ ಒಳಗೆ’ ಎಂದು ಕನ್ನಡಕ್ಕೆ ಬಂದಿರುವ ಸಾಲು ‘ಅಂಡರ್ ಸೋ ಮೆನಿ ಲಿಡ್ಸ್’ ಎಂದಿದೆ ಇಂಗ್ಲಿಷಿನಲ್ಲಿ. ಅದು ಕವಿತೆಯ ಕೊನೆಯ ನುಡಿಯೂ ಹೌದು. ಜರ್ಮನ್‌ ಪದ ಲಿನ್‌ಡೆರ್ನ್ ರೆಪ್ಪೆಗಳು ಅನ್ನುವ ಪ್ರಮುಖ ಅರ್ಥ ಹೊಂದಿರುವ ಹಾಗೆಯೇ ಕವಿತೆಯ ಸಾಲುಗಳು ಅನ್ನುವ ಅರ್ಥದ ತೆಳ್ಳನೆಯ ಸೂಚನೆಯನ್ನೂ ಹೊಂದಿದೆ ಅನ್ನುತ್ತಾರೆ ಆ ಭಾಷೆ ಬಲ್ಲವರು. ಮುಚ್ಚಿದ ಕಣ್ಣುಗಳಿಗೆ ದಕ್ಕದ, ಕಣ್ಣುಗಳೊಳಗೇ ಇರುವ ಆದರೆ ಒದಗದ ಅನ್ನುವ ಅರ್ಥ ಹೊಳೆದೀತೇ! ಅಥವಾ ಗುಲಾಬಿಯನ್ನು ಕಾಣುವುದಿದ್ದರೆ ಮುಚ್ಚುವ, ತೆರೆಯುವ ಸಾಮಾನ್ಯ ಕಣ್ಣಿಗಿಂತ ಮನಸಿನ ಕಣ್ಣು ಬೇಕು, ಅ ಮನಸಿನ ಕಣ್ಣೇ ಗುಲಾಬಿ ಅನ್ನುವ ಹೊಳಹು ಇದೆಯೋ? ಜರ್ಮನ್‌ ಕವಿತೆಯಲ್ಲಿರುವ ರೀನರ್ ಅನ್ನುವ ಪದ ಇಂಗ್ಲಿಷಿನಲ್ಲೂ ಕನ್ನಡದಲ್ಲೂ ಕಣ್ಮರೆಯಾಗಿದೆ. ರೀನರ್ ಅನ್ನುವುದು ‘ಬೆರಗು’, ‘ಕುತೂಹಲ’ ಅನ್ನುವ ಅರ್ಥಗಳಿರುವ ಪದ. ಅಷ್ಟೇ ಅಲ್ಲ, ರಿಲ್ಕ್‌ನ ಹೆಸರಿನ ಮೊದಲ ಪದವೂ ಹೌದು! ತನಗೆ ಕಂಡ ಬೆರಗು ಮುಚ್ಚಿದ ಕಣ್ಣುಗಳ ಯಾರಿಗೂ ದಕ್ಕದು, ತಾನು ಕಂಡ ಗುಲಾಬಿಯನ್ನು ಕಾಣಲು ಬೇರೆಯದೇ ಕಣ್ಣು ಬೇಕು, ಆದರೆ ಎಲ್ಲ ಕಣ್ಣುಗಳೂ ಮುಚ್ಚಿವೆ ಅನ್ನುತಿದೆಯೋ ಕವಿತೆ? ಕನ್ನಡ ಅನುವಾದದಲ್ಲಿ ಗುಲಾಬಿ ಮುದವಾಗಿ, ಎಲ್ಲರ ರೆಪ್ಪೆಯೊಳಗಿದ್ದೂ ಅದಾರ ನಿದ್ರೆಯೂ ಆಗದ ಶುದ್ಧವೈರುಧ್ಯವಾಗಿ ಕಾಣುತ್ತದೆ.

ರಿಲ್ಕೆ ತನ್ನ ಮರ್ತ್ಯತ್ವವನ್ನು ಒಪ್ಪಿದ್ದ; ತನ್ನ ಜೀವನಯಾನಕ್ಕೆ ಕೊನೆ ಇದೆ ಅನ್ನುವುದನ್ನು ಗ್ರಹಿಸಿದ್ದ; ಕಾವ್ಯಜೀವನದುದ್ದಕ್ಕೂ ಗುಲಾಬಿಯನ್ನು ಗ್ರಹಿಸಲು, ವ್ಯಕ್ತಿಪಡಿಸಲು ಯತ್ನಿಸುತ್ತಲೇ ಇದ್ದ. ಅದೇ ತನ್ನ ಸಂಕೇತವಾಗಿ, ರೂಪಕವಾಗಿ ಇರಲು ಬಯಸಿದ್ದ. ಗುಲಾಬಿಗೆ ಹೇಳುವ ಮಾತು ತನ್ನ ಬದುಕಿನುದ್ದಕ್ಕೂ ತನಗೇ ಹೇಳಿಕೊಂಡದ್ದೂ ಹೌದು. ಅವನ ಕವಿತಯೇ, ಗುಲಾಬಿಯೇ ಅವನ ಬದುಕಿನ ವ್ಯಾಖ್ಯಾನ. ಗುಲಾಬಿ ಅವನ ಸಾಹಿತ್ಯಕ ಅಸ್ತಿತ್ವ.

ಇಡೀ ಕವಿತೆಯನ್ನು ಸ್ವಗತವಾಗಿ ನೋಡಲು ಸಾಧ್ಯ. ಗುಲಾಬಿ ಹಲವು ಶತಮಾನಗಳ ವಿಕಾಸದ ಫಲ. ಗುಲಾಬಿಯ ಈ ಕ್ಷಣದ ಚೆಲುವು ಇತ್ಯಾದಿಗಳ ಹಿಂದೆ ಲಕ್ಷ ಗುಲಾಬಿಗಳ ಪರಂಪರೆಯೇ ಇದೆ, ಇಂದಿನ ಕವಿಯ ಪರಿಣತಿಯ ಹಿಂದೆ ಆ ಭಾಷೆಯ ಸಾವಿರಾರು ವರ್ಷಗಳ ಕಸುವು, ಚೆಲುವು ಎಲ್ಲ ಇರುವ ಹಾಗೆ. ಕವಿಗೆ ಸಾವಿನ ಅರಿವು ಇದೆ, ಬದುಕಿನ ಯಾನ ಮುಗಿಯುತ್ತಿರುವ ಅರಿವು ಇದೆ. ಯಾರೂ ತನ್ನನ್ನು ಇಡಿಯಾಗಿ, ಪೂರ್ತಿಯಾಗಿ, ತಾನು ಇರುವಂತೆ, ತಾನು ಬಯಸುವಂತೆ ಅರ್ಥಮಾಡಿಕೊಳ್ಳಲಾರರು. ಗುಲಾಬಿಯೇ ಆಗಿರುವ ತನ್ನ ಕವಿ ವ್ಯಕ್ತಿತ್ವ ಯಾರದೂ ಅಲ್ಲ. ಜರ್ಮನ್‌ ಭಾಷೆಯ ನೀಮಾನ್‌ಡೆಸ್‌ ಮತ್ತು ಇಂಗ್ಲಿಷಿನ ನೋ ಒನ್ಸ್‌ ಅನ್ನುವ ಪದಗಳ ಮೊದಲಕ್ಷರವನ್ನು ವ್ಯಕ್ತಿಗಳ ಹೆಸರು ಬರೆಯುವ ಹಾಗೆ ದೊಡ್ಡಕ್ಷರ ಬಳಸಿ ಬರೆದಿದ್ದಾನೆ ರಿಲ್ಕ್. ‘ಯಾರೂ ಅಲ್ಲದ’ ಅನ್ನುವ ಅರ್ಥದ ಪದವನ್ನು ವ್ಯಕ್ತಿಯೊಬ್ಬನ ಹೆಸರಾಗಿಸಿ ಕನ್ನಡದಲ್ಲಿ ಹೇಳುವುದು ಕಷ್ಟ . ಅನಂತಮೂರ್ತಿಯವರು ‘ಅದಾರ’ ಎಂದು ಕನ್ನಡಿಸಿದ್ದಾರೆ. ಈಗ ಯಾರೂ ಅಲ್ಲದವನು ಸ್ವತಃ ಕವಿಯೋ, ಇನ್ನೂ ಹುಟ್ಟದಿರುವ ಆದರ್ಶ ಓದುಗನೋ, ಅಜ್ಞಾತ ಸಾಮಾನ್ಯ ಓದುಗರೋ! ಸತ್ಯ ಕವಿ-ಗುಲಾಬಿ ಈಗ ಯಾರೂ ಅಲ್ಲ, ಈಗ ಇಲ್ಲದಿರುವ ಮುಂದೆ ಬರಬಹುದಾದ ಆದರ್ಶ ಓದುಗನಿಗೆ ದಕ್ಕೀತು, ಅಜ್ಞಾತ ಸಾಮಾನ್ಯ ಓದುಗರ ಕಣ್ಣ ರೆಪ್ಪೆ ಮುಚ್ಚಿ ಅವರಿಗೆ ದಕ್ಕಲಾರದಾಗಿದೆ ಅನ್ನುವ ಅಷ್ಟೂ ಅರ್ಥಗಳು ಹೊಳೆದಾವು. ಗುಲಾಬಿ ಯಾರೂ ಅಲ್ಲದವನ ನಿದ್ರೆಯ ಮುದ, ಲಸ್ಟ್‌. ಎಷ್ಟೋ ಜನರ ಕಣ್ಣರೆಪ್ಪೆಯೊಳಗಿದ್ದರೂ ಅವರು ಯಾರಿಗೂ ದಕ್ಕದೆ ಯಾರೂ ಅಲ್ಲದವನಿಗೆ ದಕ್ಕಬಹುದಾದ ಖುಷಿಯ ಮಿಲನ. ಅಂತೆಯೇ ಕನ್ನಡ ಅನುವಾದದಲ್ಲಿ ಆಹಾ ಬೆರಗೇ ಎಂದು ಸ್ವಗತವಾಗಿ ಹೇಳಿಕೊಂಡಂತೆ ಬಂದಿದೆ. ಕವಿತೆಯ ಅನುಭವ ಮುಚ್ಚಿದ ಕಣ್ಣುಗಳ ಅದೆಷ್ಟೋ ಓದುಗರ ರೆಪ್ಪೆಗಳ ಅಡಿಯಲ್ಲಿ ಸುಖಕ್ಕೆ ಒದಗದೆ ಕಳೆದುಹೋಗಿದೆ. ಲಿಡ್ಸ್‌ ಕಣ್ಣರೆಪ್ಪೆಗಳು, ನಿಜ ಓದುಗರ ಮುಚ್ಚಿದ ರೆಪ್ಪೆಗಳು, ಆದರ್ಶ ಓದುಗ ಕಂಡ ಹಾಗೆ, ಕಾಣಬಹುದಾದ ಹಾಗೆ ಕಾಣಲಾಗದೆ ಮುಚ್ಚಿದ ಕಣ್ಣುಳ್ಳವರು. ಆದರ್ಶ ಓದುಗರು ಮನಸ್ಸಿನ ಕಣ್ಣು ತೆರೆದವರು. ಕವಿತೆ ತನ್ನನ್ನು ‘ಸ್ವೇಚ್ಛೆ’ಯಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯನ್ನು ನಟಿಸಿ ತೋರಿಸುವುದು ಮಾತ್ರವಲ್ಲ ಅಂಥ ಸಾಧ್ಯತೆಯನ್ನೇ ಅಲಂಗಿಸಿಕೊಂಡ ಹಾಗಿದೆ ಇದು.

ಕಾವ್ಯಪುಷ್ಪ; ಅಲಂಕಾರಕ್ಕೆ ಇಟ್ಟ ಪುಷ್ಪಗಳ ಹಿಂದೆ ಮರೆಯಾಗಿರುವ ಕವಿ, ಮರೆಯಾಗಿರುವುದರಿಂದಲೇ ಕಾಡುವ ಕವಿ, ಕಾಣುವುದಕ್ಕೆ ದೇಹದ ಕಣ್ಣಿಗಿಂತ ಮನಸ್ಸಿನ ಕಣ್ಣನ್ನು ಬಯಸುವವನು; ಸಮಾಧಿಯ ಆಚೆಯಿಂದ ಕವಿ ಹೇಳುವ ಮಾತು; ಸಾವನ್ನು ನಿದ್ರೆ (ಅಲ್ಲವೆಂದು ಗೊತ್ತಿದ್ದರೂ) ಅನ್ನುವ ಸಾಂಪ್ರದಾಯಿಕ ಅಲಂಕಾರ; ಮಾತಾಡುತ್ತಿರುವುದರಿಂದ ನಿದ್ರೆ ಅನ್ನುವುದರ ನಿರಾಕರಣೆ ಸಾವಿನಲ್ಲೂ ಬದುಕನ್ನು ಮುಂದುವರೆಸುವ ಆಸೆ; ಆದರೆ ಕವಿವ್ಯಕ್ತಿ ಗುಲಾಬಿಯಾಗಿ ಮಾರ್ಪಾಡಾಗಿದ್ದಾನೆ; ಸಮಾಧಿಯೊಳಗಿರುವ ಕವಿಯ ದನಿ ನಿಸರ್ಗದೊಡನೆ ಒಂದಾದ ಹಾಗೆ; ತನ್ನನ್ನು ತಾನು ಗುಲಾಬಿಯಾಗಿ ಹೆಸರಿಸಿಕೊಳ್ಳುವ, ಗುಲಾಬಿಯನ್ನು ಕುರಿತು ನುಡಿಯುವ ಕ್ರಿಯೆ; ಇಲ್ಲಿ ಕೇಳುಗರಿಲ್ಲ, ಗುಲಾಬಿಯೇ ಕೇಳುಗ, ಗುಲಾಬಿಯೇ ಮಾತುಗ; ಶುದ್ಧ ವೈರುಧ್ಯವನ್ನು ಗ್ರಹಿಸಿದವರು ಯಾರು? ಪ್ರಾಸವಿಲ್ಲದ ಮೂರು ಸಾಲಿನ ಹೈಕು ಥರದ ಅಪರೂಪದ ಪದ್ಯ. ಅರ್ಥ ವಿಸ್ತಾರವನ್ನು ಅನುಭವದ ಅಗಾಧತೆಯನ್ನು ಅನುವಾದದ ಅನುವಾದದ ಮೂಲಕ ಹಿಡಿದು ಕೊಡುವುದು ಕಷ್ಟ. ಆ ಕಷ್ಟವೇ ಮನಸ್ಸು ತುಂಬುವ ಸಫಲತೆ.

೧)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ / ಹಿಗ್ಗಿನ /
ಅಪ್ಪಟ ಅಂತರ್ವಿರೋಧದ
ಗುಲಾಬಿಯೇ

ಅನ್ನುವ ಇನ್ನೊಂದು ಸಾಧ್ಯತೆ ರೆಪ್ಪೆಗಳಿಗೆ, ಹಿಗ್ಗಿಗೆ ಪ್ರಾಮುಖ್ಯಕೊಡುತ್ತದೆ, ಮುಖ್ಯವಾದ ಗುಲಾಬಿ ಕೊನೆಗೆ ಸರಿದು ನಿಲ್ಲುತ್ತದೆ.

೨)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ
ಅಸಲೀ ಅಂತರ್ವಿರೋಧದ ಚೆಲುವಿನ
ಗುಲಾಬಿಯೇ

ಅನ್ನುವ ಇನ್ನೊಂದು ಅನುವಾದ ಅಂತರ್ವಿರೋಧಕ್ಕೆ ಪ್ರಾಮುಖ್ಯ ನೀಡಿ, ರಿಲ್ಕ್ ಬಳಸಿಲ್ಲದ ಚೆಲುವಿನತ್ತ ಗಮನಸೆಳೆಯುತ್ತದೆ.

೩)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ
ಅಪ್ಪಟ ಅಂತರ್ವಿರೋಧದ ಚಂದದ
ಗುಲಾಬಿಯೇ

೪)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ ಚಂದದ
ಅಪ್ಪಟ ಇಬ್ಬಗೆಯ ಹೊಳಹಿನ
ಗುಲಾಬಿಯೇ

೫)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ರೆಯೂ ಆಗದ ಚೆಲುವಿನ
ಅಪ್ಟಟ ಇಬ್ಬಗೆಯ ಸೆಳವಿನ
ಗುಲಾಬಿಯೇ

ಈ ಮೂರೂ ಅನುವಾದಗಳಲ್ಲಿ ಚಂದ, ಚೆಲುವು ಗಮನಸೆಳೆಯುತ್ತವೆ, ಕಾಂಟ್ರಡಿಕ್ಷನ್‌ ಅನ್ನು ಇಬ್ಬಗೆ ಹೊಳಹು/ಸೆಳೆವು ಎಂದು ಚೆಲುವಿನ ಮುಂದುವರಿಕೆಯಾಗಿಯೇ ಕಾಣಲಾಗಿದೆ.

೬)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ದೆಯೂ ಆಗದ ಮುದದ
ಅಪ್ಪಟ ಇಬ್ಬಗೆಯ ಸೆಳವಿನ, ಹೊಳಹಿನ
ಗುಲಾಬಿಯೇ

೭)       ಅಷ್ಟೊಂದು ರೆಪ್ಪೆಗಳ ಒಳಗೆ
ಅದಾರ ನಿದ್ದೆಯೂ ಆಗದ ಮುದದ (ಸುಖದ?)
ಅಪ್ಪಟ ಇಬ್ಬಗೆಯ ಸೆಳೆತದ
ಗುಲಾಬಿಯೇ

ಈ ಎರಡು ಅನುವಾದಗಳಲ್ಲಿ ಮುದ ಅಥವ ಸುಖಕ್ಕೆ ಪ್ರಾಮುಖ್ಯ ಸಂದಿದೆದ. ಅನಂತಮೂರ್ತಿಯವರು ಮಾಡಿರುವ ಅಷ್ಟೂ ಪ್ರಯತ್ನಗಳಲ್ಲಿ ಸಮಾಧಿಯಮೇಲಿನ ಬರಹವಾಗಿ, ಕವಿ-ಕಾವ್ಯ-ಓದುಗ ಸಂಬಂಧದ ಸಂದಿಗ್ಧವಾಗಿ ಕವಿತೆ ಮೂಡಿಸುವ ಭಾವಗಳು ಬೆರೆಯಲು ಸಾಧ್ಯವಾಗಿಲ್ಲ. ನಮ್ಮ ಹಳೆಯ ಪಂಡಿತರು ಹೇಳುವ ಶ್ಲೇಷೆ ಅನ್ನುವ ರೀತಿಯ ಮಾತು ಕವಿತೆಯಲ್ಲಿರುವಾಗ ಅನುವಾದ ಮಾಡುವುದು ಅಸಾಧ್ಯ. ಕೆಲವು ಅರ್ಥ ಸಾಧ್ಯತೆಗಳನ್ನು ಬಿಡಬೇಕು, ಇನ್ನು ಕೆಲವನ್ನು ಹೇಳಬೇಕು. ಅನಂತಮೂರ್ತಿಯವರು ಮಾತಾಡುತ್ತಾ ಹೇಳಿದ ಹಾಗೆ ಅನುವಾದ ಕೊನೆಗೂ ಏನನ್ನು, ಎಷ್ಟನ್ನು ಬಿಡುತ್ತೇವೆ ಅನ್ನುವ ತೀರ್ಮಾನ.

ನನಗೆ ಅನ್ನಿಸುವುದು ಹೀಗೆ, ಗುಲಾಬಿ ಎಂದು ಶುರುವಾಗಬೇಕು, ಜರ್ಮನ್‌ ಭಾಷೆಯಲ್ಲಿರುವ ಹಾಗೆಯೇ ರೆಪ್ಪೆಗಳ ಅಡಿಯಲ್ಲಿ ಎಂದೇ ಮುಗಿಯಬೇಕು, ಹಾಗೆ ಮುಗಿದು ಮತ್ತೆ ಮೊದಲ ಸಾಲಿನ ಗುಲಾಬಿ ಅನ್ನುವಲ್ಲಿಗೆ ಓದುಗರನ್ನ ತಿರುಗಿ ಕರೆದುಕೊಂಡು ಹೋಗಬೇಕು. ಹಾಗೆ ಒಂದೊಂದು ಬಾರಿ ತಿರುಗಿ ಓದಿದಾಗಲೂ ಕವಿ, ಗುಲಾಬಿ, ಓದುಗ, ಚೆಲುವು, ನಿದ್ರೆ, ಸಾವು, ಭಾಷೆ ಇವೆಲ್ಲದರ ಕಾಂಟ್ರಡಿಕ್ಷನ್‌ (ಡಿಕ್ಷನ್‌ ಅನ್ನುವಲ್ಲೇ ಭಾಷೆ ಇದೆ, ವಿರೋಧವೂ ಇದೆ!). ಜರ್ಮನ್‌ ಭಾಷೆಯ Widerspruch=appea, oppositions, objections, protest, contradiction, argument, oxymoron ಅನ್ನುವ ಅರ್ಥಗಳಿವೆ ಅನ್ನುತ್ತದೆ ನಿಘಂಟು. ಜರ್ಮನ್‌ ಭಾಷೆಯಲ್ಲಿ ಆ ಪದ ಯಾವ ವಲಯದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೋ ಗೊತ್ತಿಲ್ಲ. ಆದರೆ ವೈರುಧ್ಯ ಅನ್ನುವುದಂತೂ ಕಾಂಟ್ರಡಿಕ್ಷನ್‌ ಅನ್ನುವ ಇಂಗ್ಲಿಷ್‌ ಪದಕ್ಕೆ ಸಮಾನಾರ್ಥಕವಾಗಿ ಇಟ್ಟಂತೆ ತೋರುತ್ತದೆ. ಅದು ಕನ್ನಡ ಕವಿತೆಯ ‘ಪದಾರ್ಥ’ ಆಗುವುದೇ ಇಲ್ಲ. ಅನಂತಮೂರ್ತಿಯವರೇ ಈ ಕವನದ ಬೇರೆ ರೂಪಗಳಲ್ಲಿ ಇಬ್ಬಗೆಯ ಸೆಳೆವು ಇತ್ಯಾದಿಯಾಗಿ ಪ್ರಯತ್ನಿಸಿದ್ದಾರೆ. ನನಗೊಮ್ಮೆ ಶುದ್ಧ ತದ್ವಿರುದ್ಧ ಅನ್ನಬಹುದೇ ಅನ್ನುವ ಯೋಚನೆ ಹೊಳೆದಿತ್ತು. ಈ ಬಳೆಯಲ್ಲಿರುವ ‘ದ’ಕಾರದ ಒಳ ಅನುಪ್ರಾಸದ ಕಾರಣಕ್ಕೆ ಇರಬಹುದು. ಆದರೂ ಅದೂ ಸರಿಯಲ್ಲ. ಇಂಗ್ಲಿಷಿನ ಪದ, ಜರ್ಮನ್‌ ಮೂಲದ ವಿವಿಧಾರ್ಥ ಈ ಎಲ್ಲ ಜಟಿಲ ಹೆಣಿಗೆ ಮನಸ್ಸಿಗೆ ಬರುವಂತೆ ಒಂದು ನುಡಿ ಬೇಕು. ಹಾಗೆ ಇರುವ ಅನುವಾದ ಮಾಡುವುದಕ್ಕೆ ನನಗೆ ಸಾಧ್ಯವೇ ಆಗಿಲ್ಲ.

ಯಾರೂ ಅಲ್ಲದವನಿಗೆ ಯಾವ ಹೆಸರೂ ಇರಲು ಸಾಧ್ಯವಿಲ್ಲ. ಆದರೂ ಯಾರೂ ಅಲ್ಲದವನು ಅನ್ನುವುದೇ ಒಂದು ಹೆಸರಾಗಿಬಿಡುತ್ತದೆ; ಹೆಸರಿಲ್ಲದ ಅನ್ನುವುದೇ ಒಂದು ಹೆಸರಾಗಿಬಿಡುತ್ತದಲ್ಲ, ಹಾಗೆ. ಇದು ಇನ್ನೂ ದೊಡ್ಡ, ಕಾವ್ಯವೆಲ್ಲದರ ಭಾಷೆಯೆಲ್ಲದರ ವೈರುಧ್ಯ. ಇದೆ ಎಂದು ಹೊಳೆಯುವ, ಹೆಸರಿಲ್ಲದ ‘ವಸ್ತು’ವಿಗ ಶಿವನೆಂದು ಕರೆದು, ಅದು ಹೆಸರಾಗಿ, ಅದರಾಚೆಗೆ ಇರುವ ಪರ-ಶಿವನೆಂದು, ಅದೂ ಹೆಸರಾಗಿ, ಪರಾತ್‌ಪರ-ಶಿವನೆಂದು ಅದೂ ಇನ್ನೊಂದು ಹೆಸರಾಗಿ ಅವ್ಯಕ್ತವೆನ್ನುವುದೂ ಹೆಸರಾಗಿ ವ್ಯಕ್ತವಾಗುತ್ತಾ ಮತ್ತೆ ಅದೆಲ್ಲ ಅನ್ನುವ ಕೊನೆಯಿರದ ಕಾಂಟ್ರಡಿಕ್ಷನ್‌ ವ್ಯಕ್ತ-ಅವ್ಯಕ್ತವನ್ನು ವ್ಯಕ್ತಗೊಳಿಸುವ ಭಾಷೆಯ ತೊಡಕು. ಈ ಕವಿತೆಯ ಒಂದೊಂದು ಪದವೂ ಒಂದೊಂದು ಕಾಂಟ್ರಡಿಕ್ಷನ್‌. ಅನಂತಮೂತಿಯವರ ಚಂಡಾಲಶಿವ ಮತ್ತು ಗಾಂಧಿ-ನಾರಾಯಣಗುರು ಅವರನ್ನು ಕುರಿತ ಕವಿತೆಗಳ ಜೊತೆಯಲ್ಲಿಟ್ಟು ನೋಡಿದಾಗ ಅವರು ಗ್ರಹಿಸಿರುವ ರಿಲ್ಕ್ ಕವಿತೆಯ ಕಾಂಠ್ರಡಿಕ್ಷನ್‌ನ ಒಂದು ಅಯಾಮ ಓದುಗರ ಗಮನಕ್ಕೆ ಬರುತ್ತದೆ.

ರಿಲ್ಕ್ ನ ಈ ಕವಿತೆ ಯೇಟ್ಸ್‌ನ ಮೇಲೆ ಪ್ರಭಾವ ಬೀರಿ ಅವನೂ ತನ್ನ ಒಂದು ಚರಮವಾಕ್ಯವನ್ನು, ‘ಅಂಡರ್ ಬೆನ್‌ ಬುಲ್‌ಜೆನ್‌’, ಬರೆದ ಅನ್ನುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.