ಯಾರೇ ಆಗಿರು ನೀನು
ಕುಕ್ಕರಿಸಿ ಕೂತಿರಬೇಡ ನಿನ್ನ ಸನಾತನ ಸಜ್ಜು ಶಿಸ್ತಿನ ಕಿರುಕೋಣೆಯಲ್ಲಿ
ನಿನಗೇ ಗೊತ್ತಿರದ ಏನು ಮಣ್ಣು ಇದ್ದೀತು ಅಲ್ಲಿ?
ಮೂದೇವಿ ನಡಿ ಹೊರಗೆ;
ನೋಡು ಮುಸ್ಸಂಜೆ
ಅನಂತದ ಬಯಲಿನಲ್ಲಿ ಯಃಕಶ್ಚಿತ ನಿನ್ನ ಮನೆ.
ಯಾರೇ ಆಗಿರು ನೀನು, ಸುಸ್ತಾಗುವಷ್ಟು
ನೋಡಿ ನೋಡಿಯೇ ದಾಟದ ಎಷ್ಟು ಹೊಸ್ತಿಲು ಸವೆಸಿ
ಆಗಿದ್ದೇನು? ಏ ಮೆಳ್ಳಗಣ್ಣ

ಉಜ್ಜಿಕೊ ಕಣ್ಣ.
ಅಗೋ ದೂರದ ಒಂದೇ ಒಂದು ಕಪ್ಪು ಮರ
ಕೃಷ ಕೋಮಲ ಸಪೂರ, ಒಂಟಿ ಮರ
ನಿಧಾನ, ಬಲುನಿಧಾನ ಎತ್ತಿಕೊ.
ಆಕಾಶಕ್ಕೆ ಅದನ್ನು ಆನಿಸಿ ನಿಲ್ಲಿಸಿಕೊ
ಇದು ಈಗ ನೀನೇ ಕಟ್ಟಿಕೊಂಡ ಹೊಸಲೋಕ,
ಅಗಾಧ ಮೌನದಲ್ಲಿ ಮಾಗಿ ಫಲವಂತವಾಗುವ ಒಂದು ಶಬ್ದದಂತೆ ಅದು
ನಿನ್ನ ಸಂಕಲ್ಪ ಅದರ ಅರ್ಥಗಳನ್ನು ಗ್ರಹಿಸುತ್ತ ಇದ್ದಂತೆ
ಅವು ನಿನ್ನ ಕಣ್ಣುಗಳನ್ನು ಸ್ಫುಟಗೊಳಿಸಿ ಹಿಂದಿರುಗಿಸುತ್ತವೆ

ಮಹಾಶಿಲ್ಪಿ ಕಲೆಗಾರ ರೋಡಿನ್‌ ರಿಲ್ಕೆಗೆ ಹೇಳಿದ್ದು ನೆನಪಾಗುತ್ತದೆ. ಗೋಪಾಲ ಕೃಷ್ಣ ಅಡಿಗರ ‘ದೀಪಾವಳಿ’ ಪದ್ಯವೂ ನೆನಪಾಗುತ್ತದೆ.