ಪುರಾತನ ಸಾಲವೃಕ್ಷಗಳು ಎತ್ತಿ ಕೊಟ್ಟ ಕಡು ನೀಲಿ ಬಟ್ಟೆಬರೆ
ತೊಟ್ಟಿತು ಸಂಜೆ. ಮುಸ್ಸಂಜೆ.
ನಿಧಾನ ಕಾಣುವಿ ನೀನು
ಲೋಕ ಕವಲಾಗಿ ನಿನ್ನ ಬಿಟ್ಟು ಚಲಿಸುತ್ತಿದೆ
ಊರ್ಧ್ವಮುಖಿ ಒಂದು; ಕುಸಿಯುವ ಇನ್ನೊಂದು

ನೀನೊ ಎರಡಕ್ಕೂ ಪೂರ್ತಿ ಸಲ್ಲದವನಾಗಿ
ನೀರವ ಕತ್ತಲಿನ ಮನೆಯಾತನೂ ಆಗದೆ,
ದೇವಕಾಮದ ಅನಂತ ದೀಕ್ಷೆಯ ನಕ್ಷತ್ರವಾಗುತ್ತಲೂ ಏರದೆ

ಬಗೆಯೇ ಹರಿಯದ ಗಂಟುಗೋಜಲಿನ ಬಾಳ
ಅಗಾಧತೆಯಲ್ಲಿ, ಭೀತಿಬವಣೆಗಳಲ್ಲಿ, ಮಾಗುವ ಮಹತ್ತಿನಲ್ಲಿ
ಏನಾದರೂ ಬಂದಿಮಾತ್ರ ಆಗದ, ಅರ್ಥದ ಸಿದ್ಧಿಯೂ ಫಲಿಸದ
ನಿನ್ನಲ್ಲಿ ‘ಅದು’ ಕೆಲವೊಮ್ಮೆ ಕಲ್ಲು
ಕೆಲವೊಮ್ಮೆ ನಕ್ಷತ್ರ