ನಾವೀಗ ಇಪ್ಪತ್ತನೆಯ ಶತಮಾನದಿಂದ ಇಪ್ಪತ್ತೊಂದನೆಯ ಶತಮಾನವನ್ನು ಪ್ರವೇಶಿಸುತ್ತಿದ್ದೇವೆ. ಈ ಇಪ್ಪತ್ತನೆಯ ಶತಮಾನದ ಕೊಟ್ಟ ಕೊನೆಯ ಘಟ್ಟದಲ್ಲಿ ನಿಂತು ಹಿಂದಕ್ಕೆ ಹೊರಳಿ ನೋಡಿದರೆ ಖಂಡಿತವಾಗಿಯೂ ಮನುಕುಲದ ಚರಿತ್ರೆಯಲ್ಲಿ ಈ ಶತಮಾನ ಅತ್ಯಂತ ಉಜ್ವಲವಾದ ಕಾಲಮಾನವಾಗಿದೆ. ವೈಜ್ಞಾನಿಕವಾಗಿ, ವೈಚಾರಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅನೇಕ ಮಹತ್ವದ ಬದಲಾವಣೆಗಳಾಗಿವೆ ಈ ಜಗತ್ತಿನಲ್ಲಿ.

ಒಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ನನಗನ್ನಿಸುವುದೇನೆಂದರೆ ವಸಾಹತುಶಾಹೀ ಸಂದರ್ಭದಲ್ಲಿ ಪಶ್ಚಿಮದ ಪ್ರೇರಣೆ ಪ್ರಭಾವಗಳಿಂದ ಯಾವ ಒಂದು ‘ಪುನರುಜ್ಜೀವನ’ವು ಭಾರತೀಯ ಭಾಷಾಸಾಹಿತ್ಯಗಳಲ್ಲಿ ಸಂಭವಿಸಿತೋ, ಅದು ಕನ್ನಡದಲ್ಲಿಯೂ ಸಂಭವಿಸಿ ‘ನವೋದಯ’            ವೆನ್ನಿಸಿಕೊಂಡಿತೋ. ಅದು ಬಹುಮಟ್ಟಿಗೆ ಪಶ್ಚಿಮದ ಅನುಸರಣ- ವಾಗಲೀ, ಅನುಕರಣವಾಗಲೀ ಆಗದೆ, ಕನ್ನಡದ ಪ್ರಾದೇಶಿಕ ಪ್ರತಿಭೆಗಳು  ಪಶ್ಚಿಮದ ಪ್ರೇರಣೆ ಪ್ರಭಾವಗಳಿಗೆ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳ ಪರಿಣಾಮವಾಗಿದೆ ಎನ್ನುವುದನ್ನು ನಾವು ಈಗ ಮುಖ್ಯವಾಗಿ ಗುರುತಿಸಿಕೊಳ್ಳಬೇಕಾದ ಸಂಗತಿಯಾಗಿದೆ. ಈ ಮೊದಲ ಹಂತದ ಬದಲಾವಣೆಯ ‘ನವೋದಯ’ಸಾಹಿತ್ಯ ಸಂದರ್ಭದಿಂದ ಈ ಹೊತ್ತಿನವರೆಗೆ ಕನ್ನಡ ಸಾಹಿತ್ಯವು, ‘ಪ್ರಗತಿಶೀಲ’ ‘ನವ್ಯ’ ‘ದಲಿತ ಬಂಡಾಯ’ಗಳೆಂದು ಅಧ್ಯಯನದ ಅನುಕೂಲಕ್ಕಾಗಿ ನಾವು ಗುರುತಿಸಬಹುದಾದ ಹಲವು ಚಳುವಳಿಗಳ ಮೂಲಕ ಅತ್ಯಂತ ಚಲನಶೀಲವಾಗಿ ಹಾಗೂ ವೈವಿಧ್ಯಮಯವಾಗಿ ತನ್ನನ್ನು ಪ್ರಕಟಿಸಿಕೊಂಡಿದೆ. ಇಪ್ಪತ್ತನೆ ಶತಮಾನವನ್ನು ಸಾಹಿತ್ಯದ ದೃಷ್ಟಿಯಿಂದ ಚಳುವಳಿಗಳ ಯುಗ ಎಂದು ಕರೆಯಬಹುದು. ಈ ಪ್ರತಿಯೊಂದು ಚಳುವಳಿಯೂ, ಕೇವಲ ಪಾಶ್ಚಾತ್ಯ ಮಾತ್ರವಲ್ಲ, ಅನ್ಯದೇಶಿಯ ಪ್ರೇರಣೆಗಳಿಂದಲೂ ತನಗೆ ಅಗತ್ಯವಾದ ಸೈದ್ಧಾಂತಿಕ ತತ್ವ ಪ್ರಣಾಳಿಗಳನ್ನು ತನ್ನೊಳಗೆ ಅಳವಡಿಸಿಕೊಳ್ಳುತ್ತ ತನ್ನ ಕಾಲ-ದೇಶ- ಪರಿಸರಕ್ಕನುಗುಣವಾದ ‘ಧ್ವನಿ’ಯಾಗುತ್ತ, ಸಾಹಿತ್ಯದ ನಿರಂತರತೆಯನ್ನು ಕಾಯ್ದುಕೊಂಡು ಬಂದ ವೇಗವರ್ಧಕಗಳಂತೆ ವರ್ತಿಸಿವೆ ಎಂದು ಹೇಳಬಹುದು. ಅಷ್ಟೇ ಅಲ್ಲ, ಈ ಎಲ್ಲ ಸಾಹಿತ್ಯ ಚಳುವಳಿಗಳೂ ಅಂದಂದಿನ ಸಾಹಿತ್ಯಕ ಚಾರಿತ್ರಿಕ-ಸಾಂಸ್ಕೃತಿಕ ಒತ್ತಡಗಳ ಪರಿಣಾಮದಿಂದಲೆ ರೂಪುಗೊಳ್ಳುತ್ತ, ಅಂದಂದಿಗೆ ಅಪರಿಚಿತವಾದ ಅನೇಕ ಅನುಭವ ಪ್ರಪಂಚಗಳನ್ನು ಅನಾವರಣಗೊಳಿಸುತ್ತ ಬಂದಿವೆ. ಈ ದೃಷ್ಟಿಯಿಂದ ಸಾಹಿತ್ಯ ಪರಂಪರೆಯ ನಿರ್ಮಾಣ ಮತ್ತು ಮುಂದುವರಿಕೆಗಳ ಹಿನ್ನೆಲೆಯಿಂದ, ಯಾವುದೇ ಗಂಭೀರವಾದ ಬರೆಹಗಾರ ಈ ಚಳುವಳಿಗಳ ಕೊಡುಗೆಗಳನ್ನು ತಕ್ಕ ಜವಾಬ್ದಾರಿ ಹಾಗೂ ಗೌರವಗಳಿಂದ ನೋಡುವುದನ್ನು ಕಲಿಯಬೇಕಾಗಿದೆ. ತನಗೂ ಚಳುವಳಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಳ್ಳುವ ಬರೆಹಗಾರ ಕೂಡಾ, ಅವುಗಳ ಪ್ರಭಾವದಿಂದ ತಾನೂ ಹೊರತಾಗಿದ್ದೇನೆಂದು ಹೇಳಲು ಬರುವಂತಿಲ್ಲ. ಹಾಗೆ ನೋಡಿದರೆ ಈ ಎಲ್ಲ ಚಳುವಳಿಗಳ ಕೇಂದ್ರದಲ್ಲಿ, ಅವುಗಳನ್ನು ಕಟ್ಟಿದ ಹಾಗೂ ಬೆಳಸಿದ ಗಟ್ಟಿಮುಟ್ಟಾದ ಸಾಹಿತಿಗಳು ಇರುವಂತೆಯೇ, ಆಯಾ ಚಳುವಳಿಗಳ ನಂತರ ಅಪ್ರಸ್ತುತವಾದ ಸಾಹಿತಿಗಳೂ ಇದ್ದಾರೆ; ಹಾಗೆಯೇ ಅದರಿಂದ ಹೊರಗೆ ನಿಂತು, ಆಯಾ ಚಳುವಳಿಗಳಿಂದ ತಾವು ಪಡೆದುಕೊಳ್ಳಬೇಕಾದದುದೆಷ್ಟು ಬಿಡಬೇಕಾದುದೆಷ್ಟು ಎಂಬ ವಿವೇಚನೆಯಿಂದ, ಎಲ್ಲ ಚಳುವಳಿಗಳಿಂದಲೂ ತಮ್ಮನ್ನು ಬೆಳೆಯಿಸಿಕೊಂಡ ಸಾಹಿತಿಗಳು ಇದ್ದಾರೆ. ಈಗ ಎಲ್ಲ ಚಳುವಳಿಗಳಿಗೂ ಮುಗಿದು, ಒಂದು ಬಗೆಯ ಹೊಸ ಹುಡುಕಾಟದ ನೆಲೆಯಲ್ಲಿರುವ ಪ್ರಸ್ತುತ ಸಾಹಿತ್ಯ ಕೂಡ ‘ಹಿಂದಣ ಹೆಜ್ಜೆಯ ನೋಡಿ ಕಂಡ’ ಪರಿಣತಿಯಿಂದಲೆ ತನ್ನ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.

ತನ್ನ ‘ರೂಪ’ದ ದೃಷ್ಟಿಯಿಂದ ಇಪ್ಪತ್ತನೆ ಶತಮಾನದ ಸಾಹಿತ್ಯವು, ‘ಪದ್ಯ’ದಿಂದ ‘ಗದ್ಯ’ದ ಕಡೆ ಹೊರಳಿದ್ದು ಬಹು ಮುಖ್ಯವಾದ ಬದಲಾವಣೆಯಂತೆ ತೋರುತ್ತದೆ. ‘ಪದ್ಯಂ ವಧ್ಯಂ. ಗದ್ಯಂ, ಹೃದ್ಯಂ’ ಎಂಬ ಮುದ್ದಣನ ಘೋಷಣೆ ವಾಸ್ತವವಾಗಿ ಈ ಪಲ್ಲಟವನ್ನು ಸೂಚಿಸುತ್ತದೆ. ಅದರಲ್ಲೂ ‘ಗದ್ಯ’ ಈ ಕಾಲದ ಪ್ರಧಾನ ಸಾಹಿತ್ಯ ರೂಪವಾಗಿದೆ. ಹಿಂದಿನ ಸಾಹಿತ್ಯದ ಪ್ರಧಾನ ಪ್ರಕಾರವಾದ, ‘ಪದ್ಯ’ ಈ ಹೊಸ ಕಾಲದ ಪ್ರಧಾನ ರೂಪವಾದ ‘ಗದ್ಯ’ಕ್ಕೆ ತನ್ನ ಗದ್ದುಗೆಯನ್ನು ಬಿಟ್ಟುಕೊಟ್ಟ ಮೇಲೆ, ಈ ಗದ್ಯವು ಕಥೆ-ಕಾದಂಬರಿ ಮೊದಲಾದ ಪ್ರಕಾರಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ಹೀಗಾಗಿ ಇಪ್ಪತ್ತನೆ ಶತಮಾನವನ್ನು ಕಾದಂಬರಿಗಳ ಯುಗ ಎಂದು ಕರೆಯಲಾಗಿದೆ. ಒಂದು ಕಾಲಕ್ಕೆ ಸಾಹಿತ್ಯದ ಕೇಂದ್ರವೇ ಆಗಿದ್ದ ಕವಿತೆ, ಈ ಹೊತ್ತು ವಿವಿಧ ಸಾಹಿತ್ಯ ಪ್ರಕಾರಗಳ ನಡುವೆ, ಹತ್ತರ ಜತೆಗೆ ತಾನೂ ಒಂದು ಎಂಬ ಅಪ್ರಮುಖ ನೆಲೆಗೆ ಸರಿದಂತೆ ತೋರುವುದಾದರೂ, ಕಾವ್ಯ ಈ ಹೊತ್ತಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ‘ಕಾವ್ಯ’ವನ್ನು ಬರೆದು ‘ಕವಿ’ ಎನ್ನಿಸಿಕೊಳ್ಳಬೇಕೆಂಬ ಹಂಬಲದ ಆಕರ್ಷಣೆ ಯಾವ ಕಾಲಕ್ಕೂ ಬರಹಗಾರರನ್ನು ಕಾಡುತ್ತಲೇ ಇರುವ ವಿಷಯವಾಗಿದೆ. ಹಿಂದೆ ಉದ್ದಕ್ಕೂ ‘ಮಹಾಕಾವ್ಯ’ ಪದ್ಧತಿಯ ವಸ್ತುನಿಷ್ಠ ಕಾವ್ಯ ಪರಂಪರೆಯ ಬರಹ, ಹೊಸ ಕಾಲದ ಕವಿತೆಯಲ್ಲಿ ವ್ಯಕ್ತಿನಿಷ್ಠ ಕಾವ್ಯ ಪರಂಪರೆಯಾಗಿ ಪರಿವರ್ತಿತವಾದದ್ದರಿಂದ, ಹಿಂದಿನ ಆ ಮಹಾಕಾವ್ಯಗಳ ನಿರ್ಮಿತಿಯ ಬಗ್ಗೆ ಅತಂಹ ಉತ್ತೇಜನಕಾರಿಯಾದ ವಾತಾವರಣವು ಮೊದಮೊದಲಿಗೆ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ಇಡೀ ಜಾಗತಿಕ ವಿಮರ್ಶಾವಲಯದಲ್ಲಿ ಮಹಾಕಾವ್ಯ ನಿರ್ಮಿತಿ ಆಧುನಿಕ ಕಾಲದಲ್ಲಿ ಕಷ್ಟಮಾತ್ರವಲ್ಲದೆ ಅಪ್ರಸ್ತುತವೂ ಹೌದು-ಎಂಬಂಥ ಅಪಸ್ವರಗಳು ಪ್ರಚಲಿತವಾಗಿ ಪಾಶ್ಚಾತ್ಯ ಸಾಹಿತ್ಯದಲ್ಲಿಯಂತೂ ಮಹಾಕಾವ್ಯಗಳ ನಿರ್ಮಿತಿ ಯಾವತ್ತೋ ನಿಂತುಹೋಯಿತು. ಹಾಗೆ ನಿಂತು ಹೋಗಲು ಕಾದಂಬರಿಗಳ ಸಮೃದ್ಧಿಯೂ ಒಂದು ಮುಖ್ಯಕಾರಣವೆಂದು ಹೇಳಬಹುದು. ಕಾದಂಬರಿಗಳನ್ನು, ಹಿಂದಿನ ಮಹಾಕಾವ್ಯಗಳ ಬದಲಿಗೆ, ಈ ಕಾಲಮಾನದ ಅಗತ್ಯದ ಪೂರೈಕೆಗೆ ಬಂದ ಪ್ರಕಾರ ಎಂದೂ, ಕಾದಂಬರಿಗಳು ಶ್ರೀ ಸಾಮಾನ್ಯನ ಮಹಾಕಾವ್ಯವೆಂದು ಹೇಳಲಾಯಿತು. ಇದು ಕಾದಂಬರಿಗಳ ಯುಗ, ಈ ಕಾಲದಲ್ಲಿ ಮಹಾಕಾವ್ಯಗಳು ಅಪ್ರಸ್ತುತ ಎಂದು ತಿಳಿಯಲಾಯಿತು. ಆದರೆ ಭಾರತೀಯ ಸಾರಸ್ವತ ಪ್ರಜ್ಞೆ ಪಶ್ಚಿಮದ ಈ ಘೋಷಣೆಗೆ ಮಾರುಹೋಗಲಿಲ್ಲ. ಭಾರತದ ವಿವಿಧ ಪ್ರತಿಭೆಗಳು, ‘ನವೋದಯ’ದ ಸಂದರ್ಭದಲ್ಲಿಯೇ, ಭಾರತಕ್ಕೆ ವಿಶಿಷ್ಟವಾದ ಮಹಾಕಾವ್ಯ ಪರಂಪರೆಯನ್ನು ಮುಂದುವರಿಸಿದವು. ಬಂಗಾಲಿಯಲ್ಲಿ ಮೈಖೇಲ್ ಮಧಸೂದನ ದತ್ತರು ಬರೆದ ‘ಮೇಘನಾದ ವಧಾ’, ಹಿಂದಿಯಲ್ಲಿ ಮೈಥೀಲೀಶರಣ ಗುಪ್ತರು ಬರೆದ ‘ಸಾಕೇತ’, ತೆಲುಗಿನಲ್ಲಿ ವಿಶ್ವನಾಥ ಸತ್ಯನಾರಾಯಣರು ಬರೆದ ‘ರಾಮಾಯಣ ಕಥಾ ಕಲ್ಪವೃಕ್ಷಮು’, ಇಂಗ್ಲಿಷಿನಲ್ಲಿ ಅರವಿಂದರು‘ಸಾವಿತ್ರಿ’- ಇವುಗಳನ್ನು ಹೆಸರಿಸಬಹುದು. ಕನ್ನಡದಲ್ಲಂತೂ, ನವೋದಯದ ಶಿಖರದಂತಿರುವ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಬಂದ ನಂತರ, ಮಾಸ್ತಿಯವರ ‘ಶ್ರೀ ರಾಮಪಟ್ಟಾಭಿಷೇಕಂ’, ವಿನಾಯಕರ ‘ಭಾರತ ಸಿಂಧು ರಶ್ಮಿ’ ಪು.ತಿ.ನ. ಅವರ ‘ಶ್ರೀ ಹರಿಚರಿತ’, ಭೂಸನೂರು ಮಠ ಅವರ ‘ಭವ್ಯ ಮಾನವ’ ಮತ್ತು ಇದೀಗ (೧೯೯೯) ಪ್ರಕಟವಾಗಿರುವ ‘ಸುಜನಾ’ ಅವರ ‘ಯುಗಾ ಸಂಧ್ಯಾ’-ಎಂಬ ಕೃತಿಗಳು ಮಹಾಕಾವ್ಯ ಪರಂಪರೆಯನ್ನು ಕನ್ನಡದಲ್ಲಿ ಮುಂದುವರಿಸುವ, ದೊಡ್ಡದೊಂದನ್ನು ಹಿಡಿದು ಕಡೆದು ನಿಲ್ಲಿಸುವ ಒಂದು ಮಹಾತ್ವಾಕಾಂಕ್ಷೆಯ ಪ್ರತೀಕವಾಗಿವೆ. ಇಂಥ ಮಹಾತ್ವಾಕಾಂಕ್ಷೆಗೆ ಹೊರತಾದ ಯಾವ ಸಾಹಿತ್ಯವೂ ದೊಡ್ಡದಾಗಿ ಬೆಳೆಯಲು ಸಾಧ್ಯವಿಲ್ಲ. ಮಹತ್ತಾದ ಕಾದಂಬರಿಗಳು, ಮಹಾಕಾವ್ಯಕ್ಕೆ ಪ್ರತಿನಿಧಾನ (Substitute) ವಾಗಬಲ್ಲವೆಂಬ ತಿಳಿವಳಿಕೆ ಸಾಧುವಾದುದಲ್ಲ. ಯಾಕೆಂದರೆ ಸಾಹಿತ್ಯದಲ್ಲಿ ಯಾವ ಒಂದು ಪ್ರಕಾರವೂ ಒಂದು ಮತ್ತೊಂದಕ್ಕೆ Substitute ಅಲ್ಲ; ಒಂದು ಸಾಹಿತ್ಯ ಪ್ರಕಾರ ಮತ್ತೊಂದಕ್ಕೆ ಪೂರಕ ಅಷ್ಟೇ. ಪ್ರತಿಯೊಂದು ಸಾಹಿತ್ಯ ಪ್ರಕಾರಕ್ಕೂ ತನ್ನದೇ ಆದ ಸ್ಥಾನ, ತನ್ನದೆ ಆದ ನಿಯೋಗ (Function) ಉಂಟು.

ಇಪ್ಪತ್ತನೆಯ ಶತಮಾನದ ಮೂರು -ನಾಲ್ಕು ಚಳುವಳಿಗಳ ಮೂಲಕ ತನ್ನ ಸೃಜನಶೀಲತೆಯನ್ನು ಅತ್ಯಂತ ವೈವಿಧ್ಯಮಯವಾಗಿ ಹಾಗೂ ಸಮೃದ್ಧವಾಗಿ ಪ್ರಕಟಿಸಿಕೊಂಡ ಕನ್ನಡ ಕಾವ್ಯವು, ನವ್ಯೋತ್ತರವೆಂದು ಕರೆಯಬಹುದಾದ ದಲಿತ ಬಂಡಾಯ ಚಳುವಳಿಯ ಉತ್ಕರ್ಷದ ನಂತರ, ತನ್ನ ಹೊಸ ಹುಡುಕಾಟದ ಪರಿಣಾಮವಾಗಿ, ಬೇರೊಂದು ಚಿಂತನೆಯನ್ನು ಪ್ರಸ್ತಾಪಿಸುವಂತೆ ತೋರುತ್ತದೆ. ಅದೆಂದರೆ, ಇನ್ನು ಮುಂದಿನ ಸಾಹಿತ್ಯವು, ಇದುವರೆಗಿನ ಹಾಗೆ, ತನ್ನ ಪ್ರೇರಣೆ ಪ್ರಭಾವಗಳಿಗಾಗಿ ಅನ್ಯದೇಶಿಯವಾದ ಮಾದರಿಗಳನ್ನು ಅವಲಂಬಿಸದೆ, ಕಾರಣಾಂತರಗಳಿಂದ ತಾನು ನಿರ್ಲಕ್ಷಿಸಿದ, ತನ್ನ ಚರಿತ್ರೆ, ತನ್ನ ಪುರಾಣ, ತನ್ನ ಜಾನಪದ ಇತ್ಯಾದಿಗಳ ನಿಧಿಯಾದ ತನ್ನ ದೇಶಿಯತೆಯಲ್ಲಿ ಬೇರೂರಿ, ಅಲ್ಲಿಂದಲೆ ತನಗೆ ಬೇಕಾದುದನ್ನು ಪಡೆದುಕೊಳ್ಳಬೇಕೆಂಬ ಕಾಳಜಿಯನ್ನು ಬೆಳಸಿಕೊಳ್ಳಬೇಕಾಗಿದೆ ಎನ್ನುವುದು. ಇದುವರೆಗೂ ಮೌಖಿಕ ಪರಂಪರೆಯೊಳಗಿದ್ದ ಬಹು ಸಂಖ್ಯೆಯ ತತ್ವ ಪದಗಳೂ, ಜಾನಪದ ಮಹಾಕಾವ್ಯಗಳಾದ ‘ಮಲೆ ಮಾದೇಶ್ವರ ಕಾವ್ಯ’ ‘ಮಂಟೆಸ್ವಾಮಿ ಕಾವ್ಯ’ ‘ಜುಂಜಪ್ಪನ ಪುರಾಣ’ ಇಂಥವುಗಳು ಈಗ ಲಿಖಿತ ರೂಪಕ್ಕಿಳಿದು ಪ್ರಕಟವಾಗಿರುವ ಸಂದರ್ಭವೂ, ನಾಳಿನ ಕನ್ನಡ ಕಾವ್ಯದ ದೇಶೀಯತೆಯ ಪರವಾದ ಕಾಳಜಿಗಳಿಗೆ ಕಾರಣವಾಗಿರಬಹುದೆಂಬ ನಿಜಾಂಶವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ದೇಶೀಯಪರವಾದ ಒಂದು ಹೊಸ ಎಚ್ಚರವು ಹುಟ್ಟಿಕೊಂಡಿದೆ ಎಂದು ಹೇಳಬಹುದು. ವಸಾಹತುಷಾಹಿಯ ಕಾರಣದಿಂದಾಗಿ ನಮ್ಮದೇಶೀಯವಾದ ತಿಳಿವಳಿಕೆಯ ಬಗ್ಗೆ, ಭಾರತೀಯವಾದ ಸೃಜನಶೀಲ ಮನಸ್ಸಿನ ಮೇಲೆ ಒಂದು ಮಹಾವಿಸ್ಮ ತಿ ಕವಿದುಕೊಂಡು. ನಾವು ಬಹುಮಟ್ಟಿಗೆ ‘ಪಶ್ಚಿಮ ಬುದ್ಧಿ’ಯಾಗಿ ಬಿಟ್ಟೆವಲ್ಲ ಎಂಬ ಪಶ್ಚಾತ್ತಾಪವೊಂದು ಇತ್ತೀಚಿನ ವಿಮರ್ಶೆಯಲ್ಲಿ  ಒಂದು ಗಟ್ಟಿ ಧ್ವನಿಯಾಗಿ ಪ್ರಸ್ತಾಪಿತವಾಗುತ್ತಿರುವುದನ್ನು ಕೇಳಬಹುದು. ಆದರೆ ಕನ್ನಡದ ಅದರಲ್ಲೂ ನವೋದಯದ ಮುಖ್ಯ ಲೇಖಕರಾದ ಕುವೆಂಪು ಅವರ, ಅದಕ್ಕಿಂತಲೂ ಮಿಗಿಲಾಗಿ ಬೇಂದ್ರೆ, ಪು.ತಿ.ನ. ಅಂಥವರ ಬರಹ ಈ ‘ವಿಸ್ಮೃತಿ’ಯ ‘ಸಿದ್ಧಾಂತ’ವನ್ನು ನಿರಾಕರಿಸುವಷ್ಟು ಶಕ್ತಿಯುತವಾಗಿ, ಪಶ್ಚಿಮದ ಮಾದರಿಗಳನ್ನು ತಿರಸ್ಕರಿಸುತ್ತ ‘ಭಾರತೀಯ’ವಾದದ್ದರ ಪರವಾಗಿ ನಿಂತುಕೊಂಡಿದೆ ಎಂಬುದನ್ನು, ಅವರ ಸಾಹಿತ್ಯದ ಗಂಭೀರವಾದ ಅಧ್ಯಯನವು ಸಾಬೀತುಪಡಿಸುತ್ತದೆ. ಆದರೆ ಎಷ್ಟೋ ಮೌಲಿಕವಾದ ಹಾಗೂ ಇನ್ನೂ ಅನಾವರಣಗೊಂಡು ಕರಗತವಾಗಬೇಕಾದ ದೇಶೀಯವಾದ ತಿಳಿವಳಿಕೆಯೂ, ವಾಙ್ಮಯವೂ ನಾಳಿನ ಸಾಹಿತ್ಯದ ಅನ್ವೇಷಣೆಯ ಹಾದಿಯಲ್ಲಿದೆ ಎಂಬುದಂತೂ ನಿಜ. ಹೀಗೆ ನಾಳಿನ ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕಾದ ಈ ‘ಸತ್ವ’ವನ್ನು ಒಂದರ್ಥದಲ್ಲಿ ‘ಭಾರತೀಯತೆ’ ಎಂದು ಕರೆಯಬಹುದು. ಯಾಕೆಂದರೆ ಭಾರತೀಯತೆ ಅನ್ನುವುದು ಏಕಕಾಲಕ್ಕೆ ಅತ್ಯಂತ ವೈವಿಧ್ಯಮಯವಾದ ಪ್ರಾದೇಶಿಕತೆಗಳ ಒಂದು ಸಮುಚ್ಚಯವೇ ಹೊರತು ಅದರಾಚೆಗೆ ‘ಭಾರತೀಯತೆ’ ಎಂಬ ಮಾತಿಗೆ ಯಾವ ಅರ್ಥವೂ ಇಲ್ಲ. ಯಾಕೆಂದರೆ ಒಬ್ಬ ಕನ್ನಡಿಗ ಏಕಕಾಲಕ್ಕೆ ಕನ್ನಡಿಗನೂ ಹೌದು ಭಾರತೀಯನೂ ಹೌದು. ಆದರೆ ಅದಕ್ಕೆ ಮೊದಲು ಆತ ತನ್ನ ಪ್ರಾದೇಶಿಕತೆಯಲ್ಲಿ ಬೇರೂರಿದ ಕನ್ನಡಿಗನಾಗಲೇಬೇಕು.

ನಮ್ಮ ಕಲೆ ಸಾಹಿತ್ಯಾದಿಗಳು ತಾವು ನಿಂತ ನೆಲದ ಗುಣಕ್ಕೆ ಬದ್ಧವಾಗುತ್ತ, ಅವು ತಮ್ಮ ಸತ್ವದಲ್ಲಿ ದೇಶೀಯವಾಗುವುದು ಇಂದಿನ ಅಗತ್ಯವಾಗಿದೆ ಎಂಬ ಚಿಂತನೆಗಳು ದಟ್ಟವಾಗುತ್ತಿರುವ ಸಂದರ್ಭದಲ್ಲಿಯೇ, ವಿವಿಧ ಛಾನಲ್‌ಗಳ ಮೂಲಕ ದಿನವೂ ದಾಳಿ ಮಾಡುತ್ತಿರುವ ಜಗತ್ತಿನ ಅಭಿರುಚಿಹೀನ ವಿಕಾರ ಸಂಸ್ಕೃತಿಗಳು, ನಮ್ಮ ದೇಶೀಯ ಸಂಸ್ಕೃತಿಯನ್ನೇ ಧ್ವಂಸಮಾಡುವ ತಲ್ಲಣವನ್ನು ಹುಟ್ಟಿಸುತ್ತ, ಎಲ್ಲ ಬಗೆಯ ಸೃಜನಶೀಲತೆ ಹಾಗೂ ವೈಚಾರಿಕತೆಗಳಿಗೆ ಮಾರಕವಾಗುತ್ತಿರುವುದು ಒಂದು ವಿಪರ‍್ಯಾಸದ ಸಂಗತಿಯಾಗಿದೆ. ಮತ್ತು  ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಬಗ್ಗೆ ವಿಲಕ್ಷಣವಾದ ವ್ಯಾಮೋಹವೊಂದು ಸಾರ್ವತ್ರಿಕ ಪಿಡುಗಿನಂತೆ ವ್ಯಾಪಿಸುತ್ತಿರುವುದು ಗಾಬರಿಗೊಳಿಸುವ ವಿಷಯವಾಗಿದೆ. ಇದರ ಜತೆಗೆ ಜಾಗತೀಕರಣದ ಪರಿಣಾಮವಾಗಿ, ಸ್ವತಂತ್ರ ಭಾರತವು, ಪ್ರಬಲವಾದ ಬಂಡವಾಳಷಾಹೀ ನಿಯಂತ್ರಣ ಹಾಗೂ ಪ್ರಭಾವಗಳಿಗೆ ಒಳಗಾಗುತ್ತ, ಬೇರೊಂದು ನವವಸಾಹತುಷಾಹೀ ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಒಂದು ಚಿಂತನೆ ನೆನಪಿಗೆ ಬರುತ್ತಿದೆ. ಅದು ಹೀಗಿದೆ:

ನಾನು ನನ್ನ ಮನೆಯ ಸುತ್ತಲೂ ಗೋಡೆಗಳನ್ನು ಕಟ್ಟಿಕೊಂಡು
ಎಲ್ಲ ಕಡೆಯ ಕಿಟಕಿ-ಬಾಗಿಲುಗಳನ್ನೂ ಭದ್ರವಾಗಿ ಮುಚ್ಚಿಕೊಂಡು
ಬದುಕುವುದು ನನಗಿಷ್ಟವಿಲ್ಲ.
ಈ ನನ್ನ ಮನೆಯ ಮೇಲೆ ಜಗತ್ತಿನ ಎಲ್ಲ ದೇಶಗಳ
ಸಂಸ್ಕೃತಿಯ ಗಾಳಿಗಳೂ ಧಾರಾಳವಾಗಿ ಬೀಸಲಿ
ಆದರೆ ನಾನು ಮಾತ್ರ ಈ ಗಾಳಿಗಳ ದಾಳಿಯಲ್ಲಿ
ಈ ನೆಲದ ಮೇಲೆ ನಿಂತ ಹೆಜ್ಜೆಯಿಂದ
ವಿಚಲಿತನಾಗುವುದನ್ನು ನಿರಾಕರಿಸುತ್ತೇನೆ
.

ಇದು, ಗಾಂಧೀಜಿ ಕನಸುಕಂಡ ಸ್ವತಂತ್ರ ಭಾರತದಲ್ಲಿ ನಿರ್ಮಾಣವಾಗಬೇಕೆಂದು ಅವರು ಆಶಿಸಿದ್ದ ವ್ಯಕ್ತಿತ್ವದ ಒಂದು ಮಾದರಿ. ಈಗ ನಮ್ಮ ಸ್ವತಂತ್ರಭಾರತ ತನ್ನ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನೂ ಗಾಂಧೀಜಿ ಆಶಿಸಿದಂತೆ ಉದಾರವಾಗಿ ತೆರೆದಿದೆ. ಸುತ್ತ ಹತ್ತೂಕಡೆಯ ‘ಸಂಸ್ಕೃತಿಯ’ ಗಾಳಿಗಳೂ ಬೀಸುತ್ತಿವೆ. ‘ಬೀಸುತ್ತಿವೆ’ ಅಲ್ಲ. ನುಗ್ಗುತ್ತಿವೆ! ಈ ಗಾಳಿಗಳ ದಾಳಿಯಲ್ಲಿ, ನಾವು ನಿಂತ ನೆಲದಲ್ಲಿ ಭದ್ರವಾಗಿ ಕಾಲೂರಿ ನಿಲ್ಲಲಾರದೆ ಹೊಯ್ದಾಡುತ್ತಿದ್ದೇವೆ. ನಾವು ಸ್ವತಂತ್ರವಾದ ನಂತರ ಅಂತ್ರಾರಾಷ್ಟ್ರೀಯ ಬಾಂಧವ್ಯಗಳಿಂದ ನಮ್ಮನ್ನು ನಾವು ಬೆಳೆಯಿಸಿಕೊಳ್ಳದೆ, ಬಂಡವಾಳಷಾಹೀ ಪ್ರಭಾವಗಳ ನಿಯಂತ್ರಣಕ್ಕೆ ನಮ್ಮನ್ನು ಒಪ್ಪಿಸಿಕೊಂಡು, ವಾಣಿಜ್ಯ ಸಂಸ್ಕೃತಿಯ ಮಾರುಕಟ್ಟೆಗಳಲ್ಲಿ, ಮಾರಾಟದ ವಸ್ತುವಾಗುವ ಅಪಾಯದಲ್ಲಿದ್ದೇವೆ. ಮನೋರಂಜನಾ ಸಂಸ್ಕೃತಿ ಮತ್ತು ಸುತ್ತ ವಿಜೃಂಭಿಸುತ್ತಿದೆ. ಇಂಥ ಪರಿಸ್ಥಿತಿಯಿಂದ ಪಾರಾಗಿ, ನಾವು ನಿಜವಾದ ವೈಚಾರಿಕತೆಯ ನೆಲೆಯಲ್ಲಿ ಸ್ವತಂತ್ರವಾದ, ಸ್ವಾವಲಂಬಿಯಾದ, ಆತ್ಮಗೌರವವುಳ್ಳ ವಿಶಿಷ್ಟ ವ್ಯಕ್ತಿಗಳಾಗಿ ರೂಪುಗೊಳ್ಳುವುದು ಹೇಗೆ? ಅಂಥ ವ್ಯಕ್ತಿತ್ವಗಳನ್ನು ನಿರ್ಮಾಣ ಮಾಡುವುದು ಹೇಗೆ? ಇದು ಈ ಶತಮಾನದ ಅಂಚಿನಲ್ಲಿ ನಿಂತ ಕಲೆ, ಸಾಹಿತ್ಯ ಇತ್ಯಾದಿಗಳು ಎದುರಿಸಬೇಕಾದ ಪ್ರಶ್ನೆಗಳಾಗಿವೆ.

ಚದುರಿದ ಚಿಂತನೆಗಳು : ೨೦೦೦