ಆಸ್ಪರಾಗಸ್ ಅಥವಾ ಶತಾವರಿ ಬಹುವಾರ್ಷಿಕ ಸೊಪ್ಪು ತರಕಾರಿ ಬೆಳೆಯಾಗಿದೆಯಾದರೂ ಅದರ ಬೇಸಾಯವನ್ನು ಕೆಲವೇ ಕೆಲವು ಜನ ಮಾಡುತ್ತಿದ್ದಾರೆ. ಯೂರೋಪ್ ದೇಶಗಳಲ್ಲಿ ಇದರ ಬೇಸಾಯ, ಬಳಕೆಗಳು ಹೆಚ್ಚು. ಇದರ ಎಳೆಯ ಮೋಸುಗಳು ತಿನ್ನಲು ಉಪಯುಕ್ತ ಭಾಗ. ಸಂಸ್ಕರಿಸಿ ಡಬ್ಬಿಗಳಲ್ಲಿ ದಾಸ್ತಾನು ಮಾಡಿಡುತ್ತಾರೆ. ಹೊರದೇಶಗಳಿಗೆ ರಫ್ತು ಮಾಡಲು ವಿಫುಲ ಅವಕಾಶವಿದೆ.

ಪೌಷ್ಟಿಕ ಗುಣಗಳು : ಆಸ್ಪರಾಗಸ್ ಮೋಸುಗಳು ಪೌಷ್ಟಿಕ ತರಕಾರಿಯಾಗಿವೆ. ಅವುಗಳಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ನಾರು, ಜೀವಸತ್ವಗಳು ಇರುತ್ತವೆ.

೧೦೦ ಗ್ರಾಂ ಮೋಸುಗಳಲ್ಲಿನ ವಿವಿಧ ಪೋಷಕಾಂಶಗಳು

ತೇವಾಂಶ – ೯೫.೦ ಗ್ರಾಂ
ಶರ್ಕರಪಿಷ್ಟ – ೩.೨ ಗ್ರಾಂ
ಪ್ರೊಟೀನ್ – ೨.೨ ಗ್ರಾಂ
ಕೊಬ್ಬು – ೦.೨ ಗ್ರಾಂ
ಖನಿಜ ಪದಾರ್ಥ  – ೧.೨ ಗ್ರಾಂ
ರಂಜಕ – ೦.೦೫೯ ಗ್ರಾಂ
ಕ್ಯಾಲ್ಸಿಯಂ – ೦.೦೨೫ ಗ್ರಾಂ  
ಕಬ್ಬಿಣ – ೦.೯೬೦ ಗ್ರಾಂ
ತಾಮ್ರ – ೦.೦೧೪ ಗ್ರಾಂ  
’ಎ’ ಜೀವಸತ್ವ – ೧೪೦೦ ಐಯು
ಥಯಮಿನ್ – ೦.೧೮೦ ಗ್ರಾಂ  
ರೈಬೊಫ್ಲೇವಿನ್ – ೦.೧೩೦ ಗ್ರಾಂ
’ಸಿ’ ಜೀವಸತ್ವ – ೦.೦೪ ಗ್ರಾಂ
ನಾರು ಪದಾರ್ಥ ೦ ೦.೭ ಗ್ರಾಂ  
ಕ್ಯಾಲೊರಿಗಳು – ೨೬

ಔಷಧೀಯ ಗುಣಗಳು ಮೋಸುಗಳನ್ನು ಸೇವಿಸುತ್ತಿದ್ದಲ್ಲಿ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ. ಜಲೋದರಕ್ಕೂ ಒಳ್ಳೆಯದು. ಮೂತ್ರೋತ್ಪಾದಕ ಗುಣಗಳಿವೆ. ಮೋಸುಗಳನ್ನು ಬೇಯಿಸಲು ಬಳಸಿದ ನೀರನ್ನು ಕುಡಿಯುತ್ತಿದ್ದಲ್ಲಿ ಸಂಧಿವಾತಕ್ಕೆ ಒಳ್ಳೆಯದು. ಮೋಸುಗಳಲ್ಲಿ ಆಸ್ಪರಾಗಸ್ ಎಂಬ ಹರಳು ಪದಾರ್ಥವಿದ್ದು ಮೂತ್ರಪಿಂಡಗಳಿಗೆ ಬಲವನ್ನೊದಗಿಸುತ್ತದೆ. ಇವು ಲಘುವಿರೇಚಕವೂ ಹೌದು. ಅವುಗಳಲ್ಲಿ ಕಾಮೋತ್ತೇಜಕ ಹಾಗೂ ಶಮನಕಾರಕ ಗುಣಗಳಿವೆ. ಇದರ ಬೇರುಗಳನ್ನು ಮದಿರೆಯೊಂದಿಗೆ ಕುದಿಸಿ ತಯಾರಿಸಿದ ಕಷಾಯವನ್ನು ಸೇವಿಸುತ್ತಿದ್ದಲ್ಲಿ ಕಣ್ಣುಗಳ ದೃಷ್ಟಿ ಉತ್ತಮಗೊಳ್ಳುತ್ತದೆ. ಇವುಗಳ ಸೇವನೆ ಹಲ್ಲು ನೋವಿಗೂ ಸಹ ಒಳ್ಳೆಯದು. ಹಿಂದಿನ ಕಾಲದಲ್ಲಿ ರೋಮನ್ನರು ಹಾಗೂ ಗ್ರೀಕರು ಜೇನು ನೊಣ ಮತ್ತು ಇತರ ಕೀಟಗಳು ಕಚ್ಚಿದಾಗ ಇದನ್ನು ಔಷಧಿಯಾಗಿ ಬಳಸುತ್ತಿದ್ದರಂತೆ

ಉಗಮ ಮತ್ತು ಹಂಚಿಕೆ : ಇದರ ತವರೂರು ಯೂರೋಪಿನ ತೀರ ಪ್ರದೇಶಗಳು, ಮೆಡಿಟರೇನಿಯನ್ ಪ್ರಾಂತ್ಯ, ಏಷ್ಯಾ ಹಾಗೂ ಬ್ರಿಟಿಷ್ ದ್ವೀಪಗಳು. ಮೆಡಿಟರೇನಿಯನ್ ಪ್ರಾಂತ್ಯ, ಏಷ್ಯಾ ಹಾಗೂ ಬ್ರಿಟಿಷ್ ದ್ವೀಪಗಳು. ಮೆಡಿಟರೇನಿಯನ್ ಪ್ರಾಂತ್ಯದಲ್ಲಿ ಇದರ ಬೇಸಾಯ ಸುಮಾರು ೨೦೦೦ ವರ್ಷಗಳಿಂದಲೂ ಇದೆ. ಉತ್ತರ ಭಾರತದಲ್ಲಿ ಇದರ ಬೇಸಾಯ ಸ್ವಲ್ಪ ಮಟ್ಟಿಗೆ ಇದೆ.

ಸಸ್ಯ ವರ್ಣನೆ : ಆಸ್ಪರಾಗಸ್ ಲಿಲಿಯೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಮೂಲಿಕೆ ಸಸ್ಯ. ಇದು ಗಡುತರ ಸಸ್ಯ; ಸುಮಾರು ೧ ರಿಂದ ೧.೫ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಕವಲುಗಳಿರುವುದಿಲ್ಲ. ಕಾಂಡದಲ್ಲಿ ಎರಡು ಭಾಗ; ಒಂದು ಮಣ್ಣೊಳಗೆ ಇರುವ ಭಾಗ ಮತ್ತು ಇನ್ನೊಂದು ಮಣ್ಣಿನಿಂದ ಮೇಲೆ ಕಾಣುವ ಭಾಗ. ಮೊದಲನೆಯನ್ನು ಗುಪ್ತಕಾಂಡ ಎನ್ನುತ್ತೇವೆ. ಅದು ಮೋಟು; ದಪ್ಪನಾಗಿದ್ದು ನೆಲದಲ್ಲಿ ಸಮತಟ್ಟಾಗಿ ಹರಡಿ ಬೆಳೆಯುತ್ತದೆ. ಇದು ಆಹಾರ ಸಂಗ್ರಹಿಸುವ ಭಾಗ. ನೋಡಲು ಕೂಳೆಗಳಂತಿರುತ್ತದೆ. ತಿನ್ನಲು ಉಪಯುಕ್ತವಿರುವ ಭಾಗಕ್ಕೆ ಸ್ಪಿಯರ್ ಅಥವಾ ಮೋಸು ಎಂದು ಹೆಸರು. ಈ ಮೋಸುಗಳನ್ನು ಕೊಯ್ಲು ಮಾಡಿದ ನಂತರ ಉಳಿಯುವ ಮೋಟುಕೊಳೆ ಭಾಗಗಳನ್ನು ’ಸ್ಟಾಕ್ಸ್’ ಎನ್ನುತ್ತಾರೆ. ಚಳಿಗಾಲ ತೀವ್ರವಿದ್ದಲ್ಲಿ ಗಿಡಗಳ ಮೇಲ್ಭಾಗ ಸತ್ತು, ವಸಂತ ಋತು ಪ್ರಾರಂಭವಾದ ಕೂಡಲೇ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ. ಈ ಬೆಳೆಯಲ್ಲಿನ ವೈಶಿಷ್ಟ್ಯತೆಯೆಂದರೆ ಗಂಡು ಮತ್ತು ಹೆಣ್ಣು ಗಿಡಗಳು ಬೇರೆ ಬೇರೆಯಾಗಿ ಇರುವುದು. ಗಂಡು ಗಿಡಗಳು ಸಣ್ಣ ಗಾತ್ರದ ಮೋಸುಗಳನ್ನು ತಳ್ಳುತ್ತವೆ. ತರಕಾರಿಯಾಗಿ ಬಳಸುವ ಮೋಸುಗಳು ೨೦ ರಿಂದ ೪೦ ಸೆಂ.ಮೀ. ಉದ್ದವಿದ್ದು ಮೇಲೆಲ್ಲಾ ರಕ್ಷಾಪತ್ರಗಳನ್ನು ಹೊಂದಿರುತ್ತವೆ. ಅವುಗಳ ಬಣ್ಣ ಬಿಳುಪು, ಬಿಳಿ ಹಸುರು, ದಟ್ಟ ಕೆನ್ನೀಲಿ ಮುಂತಾಗಿ.

ಎಲೆಗಳು ಬಲು ಸೂಕ್ಷ್ಮ. ಅವು ತೆಳುವಾಗಿ, ನವಿರಾಗಿ, ಹಸುರು ಬಣ್ಣದ್ದಿರುತ್ತವೆ. ಪತ್ರ ಹರಿತ್ತು ಇರುವ ಕಾಂಡಗಳು ಮಾತ್ರವೇ ಆಹಾರವನ್ನು ಉತ್ಪಾದಿಸಲು ಸಮರ್ಥವಿರುತ್ತವೆ. ಇದರ ಎಲೆಗಳು ನೋಡಲು ಬಲು ಆಕರ್ಷಕ. ಹೂವು ಗಾತ್ರದಲ್ಲಿ ಬಲು ಸಣ್ಣವು; ಇದರ ಎಲೆಗಳು ನೋಡಲು ಬಲು ಆಕರ್ಷಕ. ಹೂವು ಗಾತ್ರದಲ್ಲಿ ಬಲು ಸಣ್ಣವು; ಬೆಳ್ಳಗಿರುತ್ತವೆ. ಕಾಯಿಗಳು ಸಣ್ಣವಿದ್ದು, ಗುಂಡಗಿರುತ್ತವೆ. ಪ್ರಾರಂಭಕ್ಕೆ ಅವು ಹಸುರು ಬಣ್ಣವಿದ್ದು ಬಲಿತು ಪಕ್ವಗೊಂಡಾಗ ಕೆಂಪು ಬಣ್ಣತಾಳುತ್ತವೆ. ಹಣ್ಣ ರಸವತ್ತಾಗಿದ್ದು ಕಪ್ಪು ಬಣ್ಣದ ಬೀಜವನ್ನು ಹೊಂದಿರುತ್ತವೆ.

ಬೇರುಗಳಲ್ಲಿ ಎರಡು ವಿಧ. ಕೆಲವು ಉಬ್ಬಿ ರಸಭರಿತವಿದ್ದರೆ ಮತ್ತೆ ಕೆಲವು ಸಣ್ಣಗಿದ್ದು ಸುತ್ತ ಹರಡಿರುತ್ತವೆ. ಉಬ್ಬಿದ ಬೇರುಗಳಲ್ಲಿ ಗ್ಲೂಕೋಸ್ ಸಕ್ಕರೆ ಇರುತ್ತದೆ. ಸಣ್ಣ ಬೇರುಗಳನ್ನು ಹೀರು ಬೇರುಗಳು ಎನ್ನುತ್ತಾರೆ. ಬಿಳಿಚಿಕೊಂಡ ಮೋಸುಗಳು ಮುರಿಯಲು ಸುಲಭ. ಅವು ತಿನ್ನಲು ಗರಿಗರಿಯಾಗಿರುತ್ತವೆ.

ತಳಿ ಅಭಿವೃದ್ಧಿ : ಇದರ ಸುಧಾರಣೆಗೆ ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ ಬಹುಹಿಂದಿನಿಂದಲೂ ಪ್ರಯತ್ನಗಳನ್ನು ನಡೆಸಲಾಗಿದೆ. ಪೂರ್ವಕಾಲದಲ್ಲಿ ಆಸ್ಪರಾಗಸ್ ಆಕ್ಯೂಟಿಫೋಲಿಯಸ್ ಎಂಬ ಪ್ರಭೇದದ ಸಸಿಗಳ ಮೋಸುಗಳನ್ನು ತರಕಾರಿಯಾಗಿ ಬಳಸುತ್ತಿದ್ದರು. ಇದು ಕಾಡು ಬಗೆ; ಮುಳ್ಳುಗಳಿಂದ ಕೂಡಿರುತ್ತದೆ. ಹೆಚ್ಚು ಬಳಕೆಯಲ್ಲಿದ್ದ ಪ್ರಭೇದವೆಂದರೆ ಆಸ್ಪರಾಗಸ್ ಅಫಿಷಿನ್ಯಾಲಿಸ್ ತಳಿ ಅಲ್ಟಿಲಿಸ್. ಇದು ಹದಿನಾರು – ಹದಿನೇಳನೆಯ ಶತಮಾನದಲ್ಲಿ ಬಹಳ ಜನಪ್ರಿಯ ಪ್ರಭೇದವಾಗಿತ್ತು. ಕಾಲ್ಚಿಸಿನ್ ರಾಸಾಯನಿಕ ಪದಾರ್ಥದಿಂದ ಉಪಚರಿಸಿದಾಗ ದೊಡ್ಡ ಗಾತ್ರದ ಎಲೆಗಳು ಹಾಗೂ ಪತ್ರ ರಂಧ್ರಗಳು ಸಾಧ್ಯವೆಂದು ತಿಳಿದುಬಂದಿದೆ. ಸತತ ಪ್ರಯತ್ನಗಳಿಂದಾಗಿ ಹಲವಾರು ಉತ್ತಮ ತಳಿಗಳು ಬೇಸಾಯಕ್ಕೆ ಬಂದಿವೆ.

ಹವಾಗುಣ : ಇದು ಸಮಶೀತೋಷ್ಣ ವಲಯದ ತರಕಾರಿ ಬೆಳೆ, ಹಗಲು ಬೆಚ್ಚಗಿದ್ದು, ರಾತ್ರಿ ತಂಪಾಗಿದ್ದರೆ ಸೂಕ್ತ. ತಂಪು ಹವೆಯಲ್ಲಿ ಮೋಸುಗಳು ಉತ್ತಮ ಗುಣ ಹೊಂದಿರುತ್ತವೆ. ಎತ್ತರದ ಪ್ರದೇಶಗಳಾದಲ್ಲಿ ಸೂಕ್ತ. ಉಷ್ಣತಾಮಾನ ೧೮ ರಿಂ ೨೫ ಸೆ. ಇದ್ದರೆ ಅನುಕೂಲ. ಹೆಪ್ಪುಗಟ್ಟುವ ಚಳಿ ಇದ್ದರೆ ಮಣ್ಣಿನಿಂದ ಹೊರಗೆ ಕಾಣುವ ಸಸ್ಯಭಾಗಗಳು ಸತ್ತು ಮತ್ತೆ ಬಿಸಿಲು ಏರಿದಂತೆಲ್ಲಾ ಹೊಸ ಚಿಗುರು ಇಣುಕುತ್ತದೆ. ಮೈದಾಣ ಪ್ರದೇಶಗಳಲ್ಲಿ ಹೆಚ್ಚಿನ ಶ್ರದ್ಧೆ ಅಗತ್ಯ.

ಭೂಗುಣ : ಇದಕ್ಕೆ ಆಳವಾದ ಹಾಗೂ ಸಾವಯವ ಪದಾರ್ಥ ಹೆಚ್ಚಾಗಿರುವ ಭೂಮಿ ಬಹುವಾಗಿ ಒಪ್ಪುತ್ತದೆ. ನೀರು ಬಸಿಯುವ ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಮಣ್ಣಿನ ರಸಸಾರ ೬ ರಿಂದ ೭ ಇದ್ದಲ್ಲಿ ಉತ್ತಮ. ಲವಣಬಾಧಿತ ಮಣ್ಣುಗಳಲ್ಲಿ ಸಹ ಇದನ್ನು ಬೆಳೆಯಬಹುದು. ಮಣ್ಣಿನಲ್ಲಿ ಸ್ವಲ್ಪ ಸುಣ್ಣಾಂಶ ಇದ್ದರೆ ಲಾಭದಾಯಕ

ತಳಿಗಳು : ಬೇಸಾಯದಲ್ಲಿ ಹಲವಾರು ತಳಿಗಳಿವೆ. ಅವುಗಳನ್ನೆಲ್ಲಾ ಎರಡು ಗುಂಪುಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ನೀಲಿ ಬಣ್ಣದ ಮೋಸುಗಳನ್ನು ಉತ್ಪಾದಿಸುವ ತಳಿಗಳು ಹಾಗೂ ಇತರ ಬಣ್ಣಗಳ ಮೋಸುಗಳನ್ನು ಉತ್ಪಾದಿಸುವ ತಳಿಗಳು.

ಸಸ್ಯಾಭಿವೃದ್ಧಿ : ಇದನ್ನು ಬೀಜ ಬಿತ್ತಿ ಇಲ್ಲವೇ ಬೇರುಗಳನ್ನು ನೆಟ್ಟು ವೃದ್ಧಿ ಮಾಡಬಹುದು. ಬೀಜ ಸುಮಾರು ಮೂರು ವರ್ಷಗಳವರೆಗೆ ಜೀವಂತವಿದ್ದು ಮೊಳೆಯಬಲ್ಲವು. ಇದು ನಿಧಾನದ ಪದ್ಧತಿಯಾಗಿದೆ. ಒಂದು ವೇಳೆ ಬೀಜ ಬಿತ್ತುವುದಿದ್ದಲ್ಲಿ, ಅವುಗಳನ್ನು ಒಟ್ಲು ಪಾತಿಗಳಲ್ಲಿ ೩೦ ಸೆಂ.ಮೀ. ಅಂತರದ ಸಾಲುಗಳಲ್ಲಿ ತೆಳ್ಳಗೆ ಬಿತ್ತಿ ನೀರು ಕೊಡಬೇಕು. ಅವು ಸುಮಾರು ೧೫-೨೦ ದಿನಗಳಲ್ಲಿ ಮೊಳೆಯುತ್ತವೆ. ಬಿತ್ತುವ ಮುಂಚೆ ಅವುಗಳನ್ನು ನೀರಿನಲ್ಲಿ ೩-೪ ತಾಸುಗಳ ಮಟ್ಟಿಗೆ ನೆನೆಸಿಟ್ಟರೆ ಅವು ಬೇಗ ಮೊಳೆಯಬಲ್ಲವು. ಎಂಟರಿಂದ ಹತ್ತು ಕಿ.ಗ್ರಾಂ ಬೀಜವಾದರೆ ಒಂದು ಹೆಕ್ಟೇರು ವಿಸ್ತೀರ್ಣಕ್ಕಾಗುವಷ್ಟು ಸಸಿಗಳು ಸಿಗುತ್ತವೆ. ಬಿತ್ತನೆಗೆ ಮೈದಾನ ಪ್ರದೇಶಗಳಲ್ಲಿ ಜುಲೈ ನವೆಂಬರ್ ಮತ್ತು ಬೆಟ್ಟ ಪ್ರದೇಶಗಳಲ್ಲಿ ಏಪ್ರಿಲ್ -ಜೂನ್ ಉತ್ತಮವಿರುತ್ತವೆ.

ನಿರ್ಲಿಂಗ ವಿಧಾನ ಸುಲಭ ಹಾಗೂ ಸಸಿಗಳು ಬೇಗ ಬೆಳೆಯುತ್ತವೆ. ತಾಯಿ ಗಿಡಗಳ ಬೇರು ಕವಲುಗಳನ್ನು ಬೇರ್ಪಡಿಸಿ ನೆಡುವುದು ಸಾಮಾನ್ಯ. ಅವುಗಳನ್ನು ಚೆನ್ನಾಗಿ ಸಿದ್ದಗೊಳಿಸಿದ ಭೂಮಿಯಲ್ಲಿ ನಾಟಿ ಮಾಡಬೇಕು.

ಭೂಮಿ ಸಿದ್ಧತೆ ಮತ್ತು ನಾಟಿ : ೯೦ ಸೆಂ.ಮೀ. ಅಗಲ ಮತ್ತು ೪೫ ಸೆಂ.ಮೀ. ಆಳ ಕಂದಕಗಳಲ್ಲಿ ೧೫ ಸೆಂ.ಮೀ. ಗಳಷ್ಟು ಮೇಲ್ಮಣ್ಣು ಮತ್ತು ೭.೫ ಸೆಂ.ಮೀ. ಗಳಷ್ಟು ತಿಪ್ಪೆಗೊಬ್ಬರ ಹರಡಿ ಅವುಗಳ ಮೇಲೆ ತೆಳ್ಳಗೆ ಮರಳನ್ನು ಹರಡಬೇಕು. ಎಲೆಗೊಬ್ಬರವಿದ್ದರೆ ಇನ್ನೂ ಉತ್ತಮ. ಚೆನ್ನಾಗಿರುವ ಸಸಿಗಳನ್ನು ಮಾತ್ರವೇ ನಾಟಿ ಮಾಡಲು ಬಳಸಬೇಕು. ಮಳೆ ಇಲ್ಲದಿದ್ದರೆ ತೆಳ್ಳಗೆ ನೀರು ಕೊಟ್ಟು ಅನಂತರ ೩೦-೪೫ ಸೆಂ.ಮೀ. ಗೊಂದರಂತೆ ಸಸಿಗಳನ್ನು ಸಾಲಾಗಿ ನೆಡಬೇಕು. ನಾಟಿಗೆ ಚಳಿಗಾಲ ಹೆಚ್ಚು ಸೂಕ್ತ. ಆ ಸಮಯಕ್ಕೆ ಸಸಿಗಳ ವಯಸ್ಸು ಕಡೇ ಪಕ್ಷ ೪-೫ ತಿಂಗಳಷ್ಟಿದ್ದು, ೨೦ ಸೆಂ.ಮೀ.ಗಳಷ್ಟಾದರೂ ಎತ್ತರವಿರಬೇಕು.

ಗೊಬ್ಬರ : ಈ ಬೆಳೆಗೆ ಅಧಿಕ ಪ್ರಮಾಣದ ಗೊಬ್ಬರ ಬೇಕು. ಹೆಕ್ಟೇರಿಗೆ ೨೦-೩೦ ಟನ್ ತಿಪ್ಪೆಗೊಬ್ಬರ, ೫ ಟನ್ ಹಸುರೆಲೆ ಗೊಬ್ಬರ, ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳು ಮತ್ತು ಅಡುಗೆ ಉಪ್ಪುಗಳನ್ನು ಕೊಡಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ೧೭೫೦ ಕಿ.ಗ್ರಾಂ.ಗಳಷ್ಟು ಮೋಸುಗಳನ್ನು ಉತ್ಪಾದಿಸಲು ಅದು ಒಂದು ವರ್ಷದ ಅವಧಿಯಲ್ಲಿ ೪೪ ಕಿ.ಗ್ರಾಂ. ಸಾರಜನಕ, ೧೨.೫ ಕಿ.ಗ್ರಾಂ ರಂಜಕ ಹಾಗೂ ೪೦೬ ಗ್ರಾಂ ಪೊಟ್ಯಾಷ್ ಸತ್ವಗಳನ್ನು ಹೀರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ತಿಪ್ಪೆಗೊಬ್ಬರದ ಜೊತೆಗೆ ಹೆಕ್ಟೇರಿಗೆ ೫೦-೬೦ ಕಿ.ಗ್ರಾಮ. ಸಾರಜನಕ, ೨೫ ಕಿ.ಗ್ರಾಂ ರಂಜಕ ಮತ್ತು ೫೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಒದಗಿಸುವುದರ ಜೊತೆಗೆ ಪ್ರತಿ ಚದರ ಮೀಟರ್ ಒಂದಕ್ಕೆ ಅರ್ಧದಿಂದ ಒಂದು ಕಿ.ಗ್ರಾಂ. ಅಡುಗೆ ಉಪ್ಪನ್ನು ಕೊಡಬಹುದು. ರಾಸಾಯನಿಕ ಗೊಬ್ಬರಗಳನ್ನು ಎರಡು ಸಮ ಕಂತುಗಳಲ್ಲಿ ಕೊಡಬೇಕು. ಗೊಬ್ಬರಗಳನ್ನು ಕೊಡುವ ಸಮಯಕ್ಕೆ ಮಣ್ಣು ಹಸಿಯಾಗಿರುವುದು ಬಹುಮುಖ್ಯ.

ನೀರಾವರಿ : ಮಳೆ ಇಲ್ಲದ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಕೊಡಬೇಕಾಗುತ್ತದೆ; ಮಣ್ಣು ಹಸಿಯಾಗಿರಬೇಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ಹಾಕಬೇಕು. ಕಳೆಗಳ ಹತೋಟಿಗೆ ಸಾಲುಗಳ ನಡುವೆ ಕಪ್ಪು ಪ್ಲಾಸ್ಟಿಕ್ ಹಾಳೆಯನ್ನು ಹರಡುವುದು ಇಲ್ಲವೇ ೨.೫ ಸೆಂ.ಮೀ. ಮಂದ ಇರುವಂತೆ ಮರದ ಪುಡಿ ಹರಡುವುದು ಬಲು ಪರಿಣಾಮಕಾರಕವೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಅದರಿಂದ ಮಣ್ಣಲ್ಲಿ ತೇವ ಹೆಚ್ಚು ಕಾಲ ಉಳಿಯುತ್ತದೆ. ಸಾಲುಗಳ ಎರಡೂ ಮಗ್ಗುಲಲ್ಲಿನ ಮಣ್ಣನ್ನು ಉದ್ದಕ್ಕೆ ಏರು ಹಾಕಿದರೆ ಬುಡದಿಂದ ಹೊರಟ ಮೋಸುಗಳಿಗೆ ಬೆಳಕು ಸಿಗದಂತಾಗಿ ಅವು ಬಿಳಿಚಿಕೊಂಡು ತಿನ್ನಲು ಗರಿಗರಿಯಾಗಿರುತ್ತವೆ. ಸುಮಾರು ೩೦ ಸೆಂ.ಮೀ. ಎತ್ತರ ಇರುವಂತೆ ಏರು ಹಾಕಬೇಕಾಗುತ್ತದೆ. ಅದರಿಂದ ಅವುಗಳ ಗುಣಮಟ್ಟ ಉತ್ತಮಗೊಳ್ಳುವುದು.

ಕೊಯ್ಲು ಮತ್ತು ಇಳುವರಿ : ಸಸಿಗಳನ್ನು ನೆಟ್ಟ ಮೊದಲ ಆರು ತಿಂಗಳವರೆಗೆ ಅಷ್ಟೊಂದು ಬೆಳವಣಿಗೆ ಇರುವುದಿಲ್ಲ. ಎರಡು ವರ್ಷಗಳವರೆಗೆ ಮೋಸುಗಳನ್ನು ಕೊಯ್ಲು ಮಾಡಬಾರದು. ಕೊಯ್ಲು ಮಾಡುವ ಸಮಯಕ್ಕೆ ಏರಿಸಿದ ಮಣ್ಣನ್ನು ಹಿಂದಕ್ಕೆಳೆದು, ಚೂಪು ಅಲುಗಿನ ಹಾರೆಯ ನೆರವಿನಿಂದ ಮೋಸುಗಳ ಬುಡಕ್ಕೆ ಕಚ್ಚು ಕೊಟ್ಟು ಕತ್ತರಿಸಿ ತೆಗೆಯಬೇಕು. ಅವುಗಳನ್ನು ತೊಳೆದರೆ ಅಂಟಿಕೊಂಡಿರುವ ಮಣ್ಣು ತೊಳೆದುಹೋಗುತ್ತದೆ. ಹೆಕ್ಟೇರಿಗೆ ೪ ಟನ್ನುಗಳಷ್ಟು ಮೋಸುಗಳು ಸಾಧ್ಯ.

ಸಂಗ್ರಹಣೆ ಮತ್ತು ಮಾರಾಟ : ಕೊಯ್ಲು ಮಾಡಿದ ಮೋಸುಗಳನ್ನು ವಿವಿಧ ಶ್ರೇಣಿಗಳಾಗಿ ವರ್ಗೀಕರಿಸಿ ಮಾರಾಟ ಮಾಡುವುದು ಲಾಭದಾಯಕ. ಆದರೆ ನಮ್ಮಲ್ಲಿ ಈ ವ್ಯವಸ್ಥೆ ಇನ್ನೂ ಬರಬೇಕಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಮೋಸುಗಳನ್ನು ಏಳು ವರ್ಗಗಳಾಗಿ ವಿಂಗಡಿಸಿ ಮಾರಾಟ ಮಾಡುತ್ತಾರೆ. ಅವುಗಳೆಂದರೆ ಕೊಲೊಸಲ್, ಜುಂಬೊ, ಎಕ್ಸ್‌ಟ್ರಸೆಲೆಕ್ಟ್, ಸೆಲೆಕ್ಟ್, ಎಕ್ಸ್‌ಟ್ರಫ್ಯಾನ್ಸಿ, ಫ್ಯಾನ್ಸಿ ಮತ್ತು ಕ್ರುಕ್ಸ್. ಪ್ರತಿ ವರ್ಗದ ಮೋಸು ಒಂದು ಕಿ.ಗ್ರಾಂ ತೂಕ ಇರುತ್ತವೆ; ಸಂಖ್ಯೆ ವ್ಯತ್ಯಾಸಗೊಳ್ಳುತ್ತದೆ. ಉದಾಹರಣೆಗೆ ಕೊಲೆಸಲ್ ವರ್ಗದಲ್ಲಿ ಒಂದು ಕಿ.ಗ್ರಾಂ.ಗೆ ೧೪ ಕ್ಕಿಂತ ಹೆಚ್ಚು ಮೋಸುಗಳು ಇರುವುದಿಲ್ಲ. ಜಂಬೊದಲ್ಲಿ ೧೫ ರಿಂದ ೨೦, ಎಕ್ಸ್‌ಟ್ರ ಸೆಲೆಕ್ಟ್‌ನಲ್ಲಿ ೨೧ ರಿಂದ ೨೮, ಸೆಲೆಕ್ಟ್‌ನಲ್ಲಿ ೯ ರಿಂದ ೪೨, ಫ್ಯಾನ್ಸಿಯಲ್ಲಿ ೬೮ ರಿಂದ ೧೦೦ ಹಾಗೂ ಕ್ರುಕ್ಸ್ ವರ್ಗದಲ್ಲಿ ಉಳಿದ ಮೋಸುಗಳನ್ನೆಲ್ಲಾ ಸೇರಿಸಿ, ಜೋಡಿಸಿ, ಕಂತೆ ಕಟ್ಟಿರುತ್ತಾರೆ.

ಹತ್ತು ವರ್ಷಗಳವರೆಗೆ ಲಾಭದಾಯಕ ಇಳುವರಿ ಸಿಗುತ್ತಿರುತ್ತದೆ. ಮೋಸುಗಳು ಬಹುಬೇಗ ಕೆಟ್ಟು ಹಾಳಾಗುತ್ತವೆ. ಅವುಗಳನ್ನು ೨ ಸೆ. ಮತ್ತು ಶೇಕಡಾ ೯೫-೯೮ ಸಾಪೇಕ್ಷ ಆರ್ದ್ರತೆಗಳಲ್ಲಿ ದಾಸ್ತಾನು ಮಾಡಿದ್ದೇ ಆದರೆ ಒಂದು ವಾರದವರೆಗೆ ಅವು ಚೆನ್ನಾಗಿರಬಲ್ಲವು. ಮೋಸುಗಳನ್ನು ೨೦ ಪಿಪಿಎಂ ಸಾಮರ್ಥ್ಯದ ಬೆಂಜಿಲ್ ಅಮೈನೊಪ್ಯೂರೈನ್ ದ್ರಾವಣದಲ್ಲಿ ೧೦ ನಿಮಿಷಗಳ ಕಾಲ ಅದ್ದಿ ಇಟ್ಟಲ್ಲಿ ಅವು ಹತ್ತು ದಿನಗಳವರೆಗೆ ಚೆನ್ನಾಗಿರಬಲ್ಲವು ಎಂಬುದಾಗಿ ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಉದ್ದೇಶಕ್ಕೆ ಸಕ್ಸೀನಿಕ್ ಆಮ್ಲ ಸಹ ಉಪಯುಕ್ತ.

ಕೀಟ ಮತ್ತು ರೋಗಗಳು ಕೀಟ ಮತ್ತು ಇತರ ಉಪದ್ರವಗಳ ಪೈಕಿ ದುಂಬಿ ಮತ್ತು ಜರಿ ಮುಖ್ಯವಾದುವು. ಇವು ಮೋಸುಗಳ ಬುಡದಲ್ಲಿ ಕಚ್ಚಿ ತೂತು ಮಾಡಿ, ಮೊಟ್ಟೆಯಿಡುತ್ತವೆ. ಹಾನಿಗೀಡಾದ ಮೋಸುಗಳು ಡೊಂಕುಡೊಂಕಾಗಿ ನೋಡಲು ವಿಕಾರವಾಗಿರುತ್ತವೆ. ಅವುಗಳ ಹತೋಟಿಗೆ ಶೇಕಡಾ ೦.೭೫  ರೊಟಿನಾನ್ ಸಿಂಪಡಿಸಿದಲ್ಲಿ ಸಾಕು.

ರೋಗಗಳಲ್ಲಿ ತುಕ್ಕು, ಬಾಡುವ ರೋಗ ಮತ್ತು ಬೇರು ಕೊಳೆಯುವ ರೋಗ ಮುಖ್ಯವಾದುವು. ಮೇರಿವಾಷಿಂಗ್‌ಟನ್ ತಳಿ ತುಕ್ಕು ರೋಗಕ್ಕೆ ನಿರೋಧಕವಿದೆ. ಬಾಡುವ ರೋಗಕ್ಕೆ ಫ್ಲ್ಯುಸೇರಿಯಂ ಪ್ರಭೇದದ ರೋಗಾಣುಗಳು ಕಾರಣವಿರುತ್ತವೆ. ಈ ರೋಗಕ್ಕೆ ತುತ್ತದ ಮೋಸುಗಳ ಬಣ್ಣ ಕಳೆದುಕೊಳ್ಳುತ್ತವೆ. ಬೆಳೆ ಪರಿವರ್ತನೆ ಅನುಸರಿಸಿದಲ್ಲಿ ಇದನ್ನು ಹೋಗಲಾಡಿಸಬಹುದು. ಬೇರು ಕೊಳೆಯುವ ರೋಗಕ್ಕೆ ಫ್ಲ್ಯುಸೇರಿಯಂ, ರೈಜಾಕ್ಟೋನಿಯ, ಜಾಂಥೊಸೋಮ ಮುಂತಾದ ಪ್ರಭೇದಗಳ ರೋಗಾಣುಗಳು ಕಾರಣವಿರುತ್ತವೆ. ಸೂಕ್ತ ಶಿಲೀಂಧ್ರನಾಶಕ ಸಿಂಪಡಿಸಿ ಇದನ್ನು ಹೋಗಲಾಡಿಸಬಹುದು.

ಬೀಜೋತ್ಪಾದನೆ : ಹೊಸ ತಳಿ ಅಥವಾ ಮಿಶ್ರ ತಳಿಗಳನ್ನು ವೃದ್ಧಿಪಡಿಸುವುದಿದ್ದಾಗ ಬೀಜೋತ್ಪದನೆ ಇರುತ್ತದೆ.

* * *