ಮಾರ್ಕೆಟ್ಟಿನ ಚೌಕದಲ್ಲಿ
ಬಂಡಿಗಾಲಿ ತೇರಿನಲ್ಲಿ
ಶನಿದೇವರ ವಿಗ್ರಹ !
ತಿರುಪೆಯವರ ಸಾಲಿನಲ್ಲಿ
ತಂದಿವನನು ನಿಲಿಸಬಹುದೆ
ಯಾರಿಗೀ ದುರಾಗ್ರಹ ?

ನೀಲಿಯ ಮೈ, ಕೆಂಪು ಕಣ್ಣು,
ಜಂಜುಕೇಶ, ಉರಿವ ಮೀಸೆ,
ಬಿಲ್ಲು ಬಾಣ ಕೈಯೊಳು,
ಕಾಲಿನ ಬಳಿ ಕರಿಯ ಕಾಗೆ ;
ದರ್ಪ ದೌಷ್ಟ್ಯ ಕೋಟಲೆಗಳ
ಮೂರ್ತಿಯೆ ಇದು ದಿಟದೊಳೂ.

ಮೊಳಗುತಲಿದೆ ವಾದ್ಯ ಮುಂದೆ,
ತುಂಬುತಲಿದೆ ಒಂದು ತಟ್ಟೆ
ಕಾಣಿಕೆಗಳ ಹಣದಲಿ,
ತೆರೆದ ಬೀದಿ ಗದ್ದಲದಲಿ
ಒಣಗುತಿಹುದು ಶನಿದೇವರು
ಹಾಳು ಸುರಿವ ಬಿಸಿಲಲಿ !

ಮಾರ್ಕೆಟ್ಟಿನ ಚೌಕದಲ್ಲಿ
ತಿರುಪೆಯವರ ಸಾಲಿನಲ್ಲಿ
ಶನಿದೇವರ ವಿಗ್ರಹ !
ಶನಿಗು ಕೂಡ ಶನಿಕಾಟವೆ
ಹೀಗೆ ಇಲ್ಲಿ ನಿಲ್ಲುವುದಕೆ,
ಯಾರಿಗೀ ದುರಾಗ್ರಹ !