ಕರ್ನಾಟಕದ ಶಹನಾಯಿ ಕಲಾವಿದರಲ್ಲೊಬ್ಬರಾಗಿರುವ ಶ್ರೀ ಶರಣಪ್ಪ ಮಾಸ್ಟರ್ ಭಜಂತ್ರಿ ಅವರು ಸುಶ್ರಾವ್ಯವಾಗಿ ಅದನ್ನು ನುಡಿಸಬಲ್ಲ ಕಲಾವಿದರಾಗಿದ್ದಾರೆ. ೧೯೩೫ರಲ್ಲಿ ಜನಿಸಿದ ಶ್ರೀ ಶರಣಪ್ಪ ಮಾಸ್ಟರ್ ನಮ್ಮ ಕರ್ನಾಟಕಕ್ಕೆ ಬಹಳ ಅಪರೂಪವಾದ ಶಹನಾಯ್‌ ವಾದನದಲ್ಲಿ ಸಾಧನೆ ಮಾಡಿದ ಕಲಾವಿದರು. ಶ್ರೀಯುತರಿಗೆ ಸಂಗೀತದಲ್ಲಿ ಪ್ರಾರಂಭಿಕ ಶಿಕ್ಷಣ ದೊರೆತದ್ದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂ. ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ. ನಂತರ ದಿವಂಗತ ಬಿ.ಡಿ. ಭಜಂತ್ರಿ ಹಾಗೂ ದಿವಂಗತ ಮರಿಯಪ್ಪ ರೋಣ ಅವರುಗಳ ಮಾರ್ಗದರ್ಶನದಲ್ಲಿ ಶಹನಾಯ್‌ ವಾದನದಲ್ಲಿ ಸಿದ್ಧಿ ಪಡೆದರು.

ಸತತ ಸಂಗೀತ ವಿದ್ವಾಂಸರ ಒಡನಾಟದಲ್ಲೇ ಬೆಳೆದ ಶರಣಪ್ಪನವರು ಮೈಸೂರು ಅರಮನೆಯ ದಸರಾ ಉತ್ಸವವೂ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತಮಿಳುನಾಡು, ಮುಂಬೈನಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಶಹನಾಯ್‌ ಚಕ್ರವರ್ತಿ ಎಂದೇ ಖ್ಯಾತರಾದ ಭಾರತರತ್ನ ಪಂ. ಬಿಸ್ಮಿಲ್ಲಾ ಖಾನ್‌ ಗದುಗಿಗೆ ಬಂದಾಗ ಅವರ ಎದುರಿನಲ್ಲಿ ಪಂ. ಬಿ.ಡಿ. ಭಜಂತ್ರಿ ಅವರ ಜೊತೆ ಶಹನಾಯ್‌ ಜುಗಲ್‌ಬಂದಿ ನುಡಿಸಿ ಬಿಸ್ಮಿಲ್ಲಾಖಾನರಿಂದ ಮೆಚ್ಚುಗೆ ಪಡೆದ ಹೆಗ್ಗಳಿಕೆ ಶ್ರೀಯುತರದು. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.