ದಲಿತ ಎಂದರೆ ಮೇಲಿನ ವರ್ಗದವರಿಂದ ತುಳಿತಕ್ಕೆ ಅಥವಾ ಶೋಷಣೆಗೆ ಒಳಗಾದವರು; ಅಕ್ಷರಜ್ಞಾನದ ಸವಲತ್ತುಗಳಿಂದ ವಂಚಿತರಾದವರು; ಸಾಮಾಜಿಕವಾದ ಸ್ಥಾನಮಾನಗಳಿಂದ ನಿರಾಕರಿಸಲ್ಪಟ್ಟವರು; ಅಮಾನವೀಯವಾದ ರೀತಿಯಲ್ಲಿ ಮಾನಸಿಕ ಹಿಂಸೆಗೆ ಒಳಗಾದವರು. ಇವರು ಎಲ್ಲ ದೇಶಗಳಲ್ಲಿಯೂ, ಎಲ್ಲ ಕಾಲದಲ್ಲಿಯೂ ಇದ್ದವರು ಮತ್ತು ಈಗಲೂ ಇರುವವರು. ಆದರೆ, ಈ ದಲಿತ ವರ್ಗ ಹಿಂದೆ ಇದ್ದ ಆ ಸ್ಥಿತಿಯನ್ನು ಕೊಂಚಮಟ್ಟಿಗೆ ದಾಟಿ ಹೊಸ ಎಚ್ಚರಗಳಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ ಮತ್ತು ಸ್ವಾಭಿಮಾನದಿಂದ ಶೋಷಕ ಶಕ್ತಿಗಳ ವಿರುದ್ಧವಾಗಿ ಪ್ರತಿಭಟಿಸಿ ನಿಲ್ಲಬಲ್ಲವರಾಗಿದ್ದಾರೆ ಎನ್ನುವುದು ಚಾರಿತ್ರಿಕವಾಗಿ ಬಹುಮುಖ್ಯವಾದ ಸಂಗತಿಯಾಗಿದೆ. ಅವರ ಈ ಎಚ್ಚರಕ್ಕೆ ಹಿನ್ನೆಲೆಯಾಗಿ ಜಗತ್ತಿನ ಚರಿತ್ರೆಯಲ್ಲಿ, ಅನೇಕ ಬಗೆಯ ಸಾಮಾಜಿಕ ಹಾಗೂ ರಾಜಕೀಯ ಆಂದೋಲನಗಳನ್ನು ಕಾಣಬಹುದಾದರೂ, ಈ ವರ್ಗಕ್ಕೆ ಒಂದು ಆತ್ಮಪ್ರತ್ಯಯವನ್ನೂ, ಪ್ರತಿಭಟನೆಯ ದನಿಯನ್ನೂ, ಸಮಾನತೆಯ ನೆಲೆಯನ್ನೂ ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ ಕರ್ನಾಟಕದಲ್ಲಿ ನಡೆದ ಶರಣ ಚಳುವಳಿ ಗಳಿಸಿಕೊಟ್ಟಿತೆಂಬುದು ತುಂಬ ಮಹತ್ವದ ಘಟನೆಯಾಗಿದೆ.

ವಾಸ್ತವವಾಗಿ ನಾವು ಯಾವುದನ್ನು ಶರಣ ಚಳುವಳಿ ಎಂದು ಕರೆಯುತ್ತೇವೆಯೋ ಅದು, ಭಾರತದ ಮೊಟ್ಟ ಮೊದಲ ಜನತಾ ಚಳುವಳಿ. ಈ ಚಳುವಳಿಯಲ್ಲಿ ಪಾಲುಗೊಂಡವರು ಕನ್ನಡನಾಡಿನ ಶ್ರೀ ಸಾಮಾನ್ಯರು; ಅದರಲ್ಲಿಯೂ ಕೃಷಿಕರು ಮತ್ತು ಕಸುಬುದಾರರು, ಮತ್ತು ಈ ಬಹುಮಟ್ಟಿನ ಅನಕ್ಷರಸ್ಥರನ್ನು, ಈ ಚಳುವಳಿಯೊಳಕ್ಕೆ ಸಂಘಟಿಸಿದವರು, ಅದೇ ಸಮಾಜದ ಮೇಲು ವರ್ಗದಿಂದ ಬಂದ ಬಸವಣ್ಣನವರು. ಅಲ್ಲದೆ ಈ ಚಳುವಳಿ, ಮೂಲಭೂತವಾಗಿ ಸಾಮಾಜಿಕ-ಧಾರ್ಮಿಕ ಸ್ವರೂಪದ್ದು. ಯಾವ ಒಂದು ಧಾರ್ಮಿಕ ನಿಲುವು, ವರ್ಣ ವರ್ಗಗಳ ತರತಮಗಳನ್ನು ನಿರಾಕರಿಸಿ, ಶರಣರಾಗಿರುವುದು ಅಥವಾ ಶಿವಭಕ್ತನಾಗಿರುವುದು-ಎಲ್ಲಕ್ಕಿಂತ ಮಹತ್ವದ್ದು ಎಂಬುದನ್ನು ಪ್ರತಿಪಾದಿಸಿತೋ ಆ ನೆಲೆಯಲ್ಲಿ ಅಂದಿನ ಸಮಾಜ ತನ್ನೆಲ್ಲ ಕೀಳರಿಮೆಗಳಿಂದ, ಭಯಗಳಿಂದ, ಅವೈಚಾರಿಕತೆಗಳಿಂದ ಬಿಡುಗಡೆಯನ್ನು ಪಡೆದುಕೊಂಡಿತು. ಈ ಬಿಡುಗಡೆಯಲ್ಲಿ ಪಾಲುಗೊಂಡವರಲ್ಲಿ ಸಮಾಜದ ಮೇಲ್‌ಸ್ತರದವರ ಜತೆಗೆ, ಅದರ ಕೆಳಗಿನ ಸ್ತರದವರು ಅಥವಾ ಇವತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ದಲಿತರೂ ಇದ್ದಾರೆ.

ಯಾವ ಸಾಮಾಜಿಕ ಸಂದರ್ಭದಲ್ಲಿ ಶರಣ ಚಳುವಳಿ ನಡೆಯಿತೋ ಆ ಸಮಾಜ ಮೂಲಭೂತವಾಗಿ ಸ್ಥಗಿತಗೊಂಡ ಅಥವಾ ಸ್ಥಾವರ ರೂಪದ ಸಮಾಜ. ಈ ಸ್ಥಗಿತತೆಗೆ ಕಾರಣ ಬಹುಕಾಲದಿಂದ ಬಂದ ವರ್ಣವ್ಯವಸ್ಥೆಯೇ ಆಗಿದೆ. ಪುರುಷ ಸೂಕ್ತದ ಪ್ರತಿಮೆಯಲ್ಲಿ ಉಕ್ತವಾಗಿರುವ ಸಮಾಜದ ಶ್ರೇಣೀಕರಣದಲ್ಲಿ ಬ್ರಾಹ್ಮಣನಿಗೆ ಉಚ್ಚಸ್ಥಾನವೂ, ಶೂದ್ರನಿಗೆ ಕನಿಷ್ಠ ಸ್ಥಾನವೂ ನೀಡಲ್ಪಟ್ಟಿದೆ. ಸಮಾಜದ ಮೇಲಿನ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಈ ಮೂರೂ ವರ್ಣಗಳವರು, ಸಮಾಜದ ಬಹು ಸಂಖ್ಯಾತ ದುಡಿಯುವ ವರ್ಗದವರಾದ ಶೂದ್ರರನ್ನು ವ್ಯವಸ್ಥಿತವಾಗಿ ಶೋಷಣೆಗೆ ಗುರಿಪಡಿಸುತ್ತಲೇ ಬಂದಿದ್ದಾರೆ. ಮತ್ತು ನಾಲ್ಕು ವರ್ಣಗಳ ಜತೆಗೆ ಐದನೆಯದಾದ ‘ಪಂಚಮ’ ಎಂದು ಕರೆಯಲ್ಪಡುವ ಅಸ್ಪ ಶ್ಯ ಸಮುದಾಯವೊಂದು ನಿರ್ಮಿತವಾಗಿ ಮೇಲಿನ ನಾಲ್ಕೂ ವರ್ಗಗಳವರಿಂದ ತಿರಸ್ಕಾರಕ್ಕೆ, ಶೋಷಣೆಗೆ ಗುರಿಯಾಗುತ್ತ ಬಂದಿದೆ. ಶೂದ್ರರು ಈ ಶ್ರೇಣೀಕರಣದಲ್ಲಿ ‘ಕನಿಷ್ಠ’ರಾದರೆ, ಈ ಪಂಚಮರು ಅಥವಾ ಅಸ್ಪೃಶ್ಯರು ಅಥವಾ ಹೆಸರು ಹೇಳಲೂ ಅನರ್ಹರೆಂಬುದನ್ನು ಸೂಚಿಸುವ ‘ಅನಾಮಿಕರು’, ‘ಕನಿಷ್ಠತಮ’ರೆಂದು ಹೇಳಬಹುದು. ಹೀಗಾಗಿ ಅಂದಿನ ಸಾಮಾಜಿಕ ವ್ಯವಸ್ಥೆ ಎನ್ನುವುದು ಬ್ರಾಹ್ಮಣನ ಶ್ರೇಷ್ಠತ್ವವನ್ನೂ, ಅಸ್ಪೃಶ್ಯನ ಕನಿಷ್ಠತ್ವವನ್ನೂ ನಿರ್ವಿವಾದವಾಗಿ ಉಳಿಸಿಕೊಂಡ ವ್ಯವಸ್ಥೆಯಾಗಿತ್ತು.

ಹೀಗೆ ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ’ ಉಳ್ಳ ಈ ವ್ಯವಸ್ಥೆಯನ್ನು ಸ್ವಲ್ಪವೂ ಕದಲಿಸದಂತೆ ಕಾಪಾಡಿಕೊಂಡು ಬರುವುದರಲ್ಲಿ ಪ್ರಭುಶಕ್ತಿ ಹಾಗೂ ಪುರೋಹಿತಶಾಹಿ ಪ್ರವೃತ್ತಿಗಳು -ತುಂಬ ದಕ್ಷತೆಯಿಂದ ವರ್ತಿಸಿದವು. ರಾಜರು-ಮಹಾಜನಗಳು-ಮಠಗಳು ಎಂಬ ತ್ರಿಕೂಟಗಳು ಈ ವ್ಯವಸ್ಥೆಯ ಮುಖ್ಯಶಕ್ತಿಗಳು. ರಾಜರು, ವರ್ಣ ವ್ಯವಸ್ಥೆಯನ್ನು, ಎಂದೂ ಬದಲಿಸದೆ, ಕದಲಿಸದೆ, ‘ಮಹಾಜನಗಳಿಗೆ’ ಎಂದರೆ ಬ್ರಾಹ್ಮಣರಿಗೆ, ಅವರ ಅಗ್ರಹಾರಗಳಿಗೆ, ಅವರು ಮಾಡುವ ಯಜ್ಞ ಯಾಗಾದಿಗಳಿಗೆ, ಅವರ ಪೌರೋಹಿತ್ಯದಲ್ಲಿದ್ದ ದೇವಸ್ಥಾನಗಳಿಗೆ ದಾನ-ದಕ್ಷಿಣೆ-ದತ್ತಿಗಳನ್ನು ಕೊಟ್ಟು ಅವರ ಆಶೀರ್ವಾದವನ್ನು ಪಡೆಯುತ್ತ, ಶೈವ ಹಾಗೂ ಕಾಳಾಮುಖ ಗುರುಗಳು ನಡೆಯಿಸುತ್ತಿದ್ದ ಅನೇಕ ಮಠಗಳಿಗೆ ರಕ್ಷಣೆ ಹಾಗೂ ಗೌರವವನ್ನೂ ಸಲ್ಲಿಸುತ್ತಾ, ಸಮಾಜದ ಇನ್ನಿತರ ವರ್ಣಗಳವರನ್ನು, ಯಾರ‍್ಯಾರು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇರಿಸುತ್ತಾ ಪ್ರಜಾಕ್ಷೇಮಚಿಂತನೆಯಲ್ಲಿ ತೊಡಗಿದ್ದರು. ಮಹಾಜನರು ಮತ್ತು ಮಠಗಳು, ಸಮಾಜದ ಇತರ ವರ್ಣಗಳವರನ್ನು ತಮ್ಮ ಲಾಭಕ್ಕೆ, ದುಡಿಮೆಗೆ ಬಳಸಿಕೊಂಡು ತಮ್ಮ ಸುಖವನ್ನು ನೋಡಿಕೊಂಡರು. ‘ಸರ್ವೇ ಜನಾಃ ಸುಖಿನೋ ಭವಂತು’, ‘ಸರ್ವಂ ಖಲ್ವಿದಂ ಬ್ರಹ್ಮಾ’ ಎಂಬ ಮಂತ್ರಗಳನ್ನು ಹೇಳುತ್ತಾ, ಸಾಮಾಜಿಕ ತರತಮಗಳನ್ನು ಯಥಾಸ್ಥಿತಿಯಲ್ಲಿರಿಸುವ ತಂತ್ರ ಅವ್ಯಾಹತವಾಗಿ ಈ ಸ್ಥಾವರ ಸಾಮಾಜಿಕ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿ ಮುಂದುವರಿದಿತ್ತು.

ಶರಣ ಚಳುವಳಿಯ ಕೇಂದ್ರವ್ಯಕ್ತಿಯಾದ ಬಸವಣ್ಣನವರು ಹುಟ್ಟಿದ್ದು ಇಂಥ ಸ್ಥಾವರ ಸಾಮಾಜಿಕ ವ್ಯವಸ್ಥೆಯಲ್ಲಿ. ಈ ವ್ಯವಸ್ಥೆಯನ್ನು ಕಂಡು ಕಸಿವಿಸಿಗೊಂಡ ಅವರು ಅದನ್ನು ಬದಲಿಸಲು, ಸ್ಫೋಟಕ ಸಾಮಗ್ರಿಯನ್ನಾಗಿ ಬಳಸಿಕೊಂಡದ್ದು ಅಂದಿನ ವರ್ಣವ್ಯವಸ್ಥೆಯ ನಾಲ್ಕು  ಐದನೆಯ ಹಂತದ ಜನಶಕ್ತಿಯನ್ನು, ಅಂದರೆ ಶೂದ್ರ ಹಾಗೂ ಪಂಚಮ ವರ್ಣಗಳ ಶ್ರೀಸಾಮಾನ್ಯರನ್ನು; ಅವತ್ತು ವಿವಿಧ ವೃತ್ತಿಗಳಲ್ಲಿ ತೊಡಗಿದ್ದ ಕಸುಬುದಾರರನ್ನು, ನಿರ್ಲಕ್ಷ್ಯಕ್ಕೆ ಒಳಗಾದ ಅಸ್ಪ ಶ್ಯರನ್ನು. ಅಲ್ಲಮ, ಸಿದ್ಧರಾಮ, ಚೆನ್ನಬಸವ, ಅಕ್ಕಮಹಾದೇವಿ ಇಂಥ ಕೆಲವರನ್ನು ಹೊರತು ಪಡಿಸಿದರೆ, ಈ ಸಂಘಟನೆಯಲ್ಲಿ ಪಾಲುಗೊಂಡವರೆಲ್ಲ ಬಹುಮಟ್ಟಿಗೆ ಅಂದಿನ ಸಮಾಜದ ಕೆಳಗಿನ ಸ್ತರಗಳಿಂದ ಬಂದವರೇ; ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಕಿನ್ನರಿ ಬೊಮ್ಮಯ್ಯ, ಬಹುರೂಪೀ ಚೌಡಯ್ಯ, ತುರುಗಾಹಿ ರಾಮಣ್ಣ, ಕಾಮಾಟಿ (ಕೂಲಿ) ಭೀಮಣ್ಣ, ಕೀಲಾರದ (ಗೋಶಾಲೆಯ) ಭೀಮಣ್ಣ, ಗಾಣದ ಕಣ್ಣಪ್ಪ, ಡಕ್ಕೆಯ ಬೊಮ್ಮಣ್ಣ, ಮೇದರ ಕೇತಯ್ಯ, ಬೊಕ್ಕಸದ ಚಿಕ್ಕಣ್ಣ, ಸುಂಕದ ಬಂಕಣ್ಣ, ಒಕ್ಕಲಿಗರ ಮುದ್ದಣ್ಣ- ಈ ಹೆಸರುಗಳನ್ನು ನೋಡಿದರೆ, ಈ ಜನ ಅಂದಿನ ಸಮಾಜದ ಕೆಳವರ್ಗದವರಾಗಿದ್ದು ಅವರು ಕೈಕೊಂಡ ಕಸುಬುಗಳು ಯಾವುವು ಎನ್ನುವುದು ಸ್ಪಷ್ಟವಾಗುತ್ತದೆ. ಇವರಲ್ಲದೆ ಅಸ್ಪೃಶ್ಯ ಅಥವಾ ಪಂಚಮ ವರ್ಗದಿಂದ ಬಂದವರೂ ಸಾಕಷ್ಟಿದ್ದಾರೆ. ಸಂಬೋಳಿ ನಾಗಿದೇವ, ಮಾದಾರ ಚೆನ್ನಯ್ಯ, ಡೋಹರ (ಚರ್ಮ ಹದಮಾಡುವ) ಕಕ್ಕಯ್ಯ, ಮಾದರ ಧೂಳಯ್ಯ, ಅನಾಮಿಕ ಮಾಚಯ್ಯ, ಉರಿಲಿಂಗ ಪೆದ್ದಿ, ಕಾಳವ್ವೆ-ಈ ಕೆಲವರು ಅಸ್ಪ ಶ್ಯ ಜಾತಿಯಿಂದ ಬಂದವರು. ಇವರ ಜತೆಗೆ ಆಯ್ದಕ್ಕಿ ಲಕ್ಕಮ್ಮ, ಲಿಂಗಮ್ಮ, ಸತ್ಯಕ್ಕ, ಕದಿರ ರೆಮ್ಮವ್ವೆ, ಅಮುಗೆ ರಾಯಮ್ಮ, ಕಾಯಕದ ರೇವಮ್ಮ, ಕೊಟ್ಟಣದ ಸೋಮವ್ವೆ, ಸೂಳೆ ಸಂಕವ್ವೆ -ಮೊದಲಾದ ಸ್ತ್ರೀಯರೂ ಇದ್ದಾರೆ. ಇವರೆಲ್ಲರನ್ನೂ ಸ್ಥೂಲವಾಗಿ ದಲಿತರೆಂದೇ ನಿರ್ದೇಶಿಸಬಹುದು. ಯಾಕೆಂದರೆ ಇವರೆಲ್ಲರೂ ಅಂದಿನ ಸಮಾಜದ ಮೇಲುವರ್ಗದವರಿಂದ ಶೋಷಣೆಗೆ ಒಳಗಾದವರು; ಮೇಲುವರ್ಗದವರಿಗಾಗಿ ವಿವಿಧ ವೃತ್ತಿಗಳ ಮೂಲಕ ದುಡಿಯುತ್ತಾ, ಎಲ್ಲಾ ಬಗೆಯ ಸವಲತ್ತುಗಳಿಂದ ವಂಚಿತರಾಗುತ್ತಾ, ದುಃಖ-ಅವಮಾನಗಳಲ್ಲಿ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡು ಕೊರಗುತ್ತ ಇದ್ದವರು.

ಇಂಥ ಒಂದು ಬಹುಸಂಖ್ಯಾತ ಶೋಷಿತ ಸಮುದಾಯಕ್ಕೆ ಒಂದು ವ್ಯಕ್ತಿತ್ವವನ್ನೂ, ವಿಚಾರ ಮಾಡುವ ಅವಕಾಶವನ್ನೂ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನೂ ಮತ್ತು ಆತ್ಮಪ್ರತ್ಯಯ ಮೂಲವಾದ ಪ್ರತಿಭಟನೆಯ ಕೆಚ್ಚನ್ನೂ ತಂದು ಕೊಟ್ಟಿದ್ದು ಶರಣ ಚಳುವಳಿ. ಈ ಚಳುವಳಿಯಿಂದ  ನಿಷ್ಪನ್ನವಾದ ಶರಣ ಧರ್ಮ ಮೊದಲು ಮಾಡಿದ ಕೆಲಸವೆಂದರೆ, ಈ ಸಮುದಾಯದವರ ಜಾತಿ ಜನ್ಮಸಂಬಂಧಿಯಾದ ಕೀಳರಿಮೆಗಳನ್ನು ಕಳೆಯುವಂತಹ ಸಮಾನತಾ ನೆಲೆಯೊಂದನ್ನು ಕಲ್ಪಿಸಿದ್ದು. ಈ ನೆಲೆಯಲ್ಲಿ ಎಲ್ಲರೂ ಸಮಾನರು: ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವ  ಭಕ್ತರೆಲ್ಲರೂ’ ಒಂದೇ ಸಮಾನತೆಯ ನೆಲೆಗೆ ಸೇರಿದವರು. ಈ ಒಂದು ಭಾವನೆಯನ್ನು ಗಟ್ಟಿಗೊಳಿಸುವಲ್ಲಿ ವರ್ಣಾಶ್ರಮ ಪ್ರತಿಪಾದನೆಯ ಮೂಲಕ, ತರತಮಗಳನ್ನು ಉಳಿಸಿಕೊಂಡು ಬಂದ ವೇದ-ಶಾಸ್ತ್ರ-ಪುರಾಣ-ಆಗಮಗಳನ್ನು ನಿರಾಕರಿಸಿದ್ದು ಒಂದು ಹೆಜ್ಜೆಯಾದರೆ, ವೃತ್ತಿಗಳ ಆಧಾರದ ಮೇಲೆ ವ್ಯಕ್ತಿಯ ಜಾತಿಯನ್ನು ಸ್ಥಾನಮಾನಗಳನ್ನು ನಿರ್ಣಯಿಸುವ ಕ್ರಮವನ್ನು ವಿರೋಧಿಸಿ ಪ್ರತಿಯೊಂದು ವೃತ್ತಿಯನ್ನು ಕಾಯಕವೆಂದು ಕರೆದು, ಈ ಶರಣ ಧರ್ಮದಲ್ಲಿ ಕಾಯಕವೆಲ್ಲವೂ ಪೂಜ್ಯವೆಂದೂ ಮತ್ತು ಸಮಾಜದ ಸಾಮೂಹಿಕ ಉತ್ಪಾದನೆಗೆ ಹಾಗೂ ಅದರ ಸಮಾನವಾದ ವಿತರಣೆಗೆ ಪ್ರತಿಯೊಬ್ಬರೂ ನಿರ್ವಹಿಸಬೇಕಾದ ಕರ್ತವ್ಯ ಎಂದೂ ಎಣಿಸಿದ್ದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಹೀಗಾಗಿ ಶರಣ ಚಳುವಳಿಯಲ್ಲಿ ತೊಡಗಿಕೊಂಡ ಈ ಶ್ರೀಸಾಮಾನ್ಯರು, ಮನುಷ್ಯ ಮನುಷ್ಯರ ನಡುವಣ ತರತಮಗಳನ್ನು ವೈಚಾರಿಕವಾಗಿ ಚಿಕಿತ್ಸೆಗೆ ಒಳಗು ಪಡಿಸಿದ್ದು ಗಮನಿಸಬೇಕಾದ ಸಂಗತಿಯಾಗಿದೆ. ಅಮುಗೆ ರಾಯಮ್ಮ ಎಂಬ ವಚನಕಾರ್ತಿ-

‘ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ
ಶ್ರುತಿ ಸ್ಮ ತಿಗಳಲ್ಲಿ ನುಡಿವುದು ಪುಸಿ’

ಎಂದು ದಿಟ್ಟತನದಿಂದ ಘೋಷಿಸುತ್ತಾಳೆ. ವೇದಶಾಸ್ತ್ರಾಗಮಗಳಲ್ಲಿ ಹೇಳಿರುವುದೆಲ್ಲ ‘ಸುಳ್ಳು’ ಎಂದು ಯಾಕೆ ಹೇಳುತ್ತಾಳೆಂದರೆ, ಎಲ್ಲರೂ ಮೂಲತಃ ಸಮಾನರು ಎಂಬ ಸತ್ಯವನ್ನು ಅವುಗಳು ಮರೆ ಮಾಡುವುದರಿಂದ. ನಿಜವಾಗಿ ನೋಡಿದರೆ-

‘ಬ್ರಾಹ್ಮಣ ಮೊದಲು ಶ್ವಪಚ ಕಡೆಯಾಗಿ
ಎಲ್ಲರಿಗೂ ಜನನವೊಂದೇ,
ಆಹಾರ ನಿದ್ರೆ ಭಯ ಮೈಥುನ ಒಂದೇ
ಪುಣ್ಯ ಪಾಪ ಒಂದೇ ಸ್ವರ್ಗ ನರಕ ಒಂದೇ
ಬೇರೆಂಬ ಭಂಗಿತರು ನೀವು ಕೇಳಿರೋ
ಅರಿವೇ ಸತ್ಕುಲ, ಮರೆವೇ ದುಷ್ಕಲ’

ಎಂದು ಹಾವಿನಹಾಳ ಕಲ್ಲಯ್ಯ ಹೇಳುತ್ತಾನೆ. ಮಾದಾರ ಚನ್ನಯ್ಯನೆಂಬ ಮತ್ತೊಬ್ಬ ಶರಣ:

‘ವೇದಶಾಸ್ತ್ರಕ್ಕೆ ಹಾರುವನಾಗಿ
ವೀರವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು ವ್ಯಾಪಾರದೊಳಗಾಗಿ ವೈಶ್ಯನಾಗಿ
ಕೃಷಿಯ ಮಾಡುವಲ್ಲಿ ಶೂದ್ರನಾಗಿ
ಇಂತೀ ಜಾತಿ ಗೋತ್ರದೊಳಗಾಗಿ ನೀಚ ಶ್ರೇಷ್ಠ
ಎಂಬ ಎರಡು ಕುಲವಲ್ಲದೆ
ಹೊಲೆ ಹದಿನೆಂಟು ಜಾತಿ ಎಂಬ ಕುಲವಿಲ್ಲ’

ಎಂದು ಹೇಳುತ್ತಾನೆ.

ಈ ಕೆಲವು ಉಕ್ತಿಗಳನ್ನು ನೋಡಿದರೆ ದಲಿತ ವಚನಕಾರರು ಎಷ್ಟು ಧೈರ್ಯದಿಂದ, ಹಿಂದೂಧರ್ಮದ ವರ್ಣಾಶ್ರಮ ವ್ಯವಸ್ಥೆಯನ್ನು ನಿರಾಕರಿಸುತ್ತ, ಕುಲ ಹಾಗೂ ಜಾತಿಗಳ ಬಗ್ಗೆ  ತಮ್ಮ ಕಾಲಕ್ಕೆ ಅಗತ್ಯವಾದ ಹಾಗೂ ನಿಜವಾದ ವ್ಯಾಖ್ಯಾನವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಶರಣ ಧರ್ಮದ ಸಂದರ್ಭದಲ್ಲಿ ದಲಿತರಿಗೆ ಉಂಟಾದ ಹೊಸ ಪ್ರಜ್ಞೆಯ ಸ್ವರೂಪವನ್ನು, ಅವರ ಈ ವೈಚಾರಿಕ ನಿಲುವುಗಳು ಸ್ಪಷ್ಟಪಡಿಸುತ್ತವೆ.

ಶರಣ ಧರ್ಮದ ಮುಖ್ಯ ಸಾಧನೆ ವರ್ಣಮೂಲವಾದ ತರತಮಗಳನ್ನು ಹೋಗಲಾಡಿಸುವುದು. ವೀರಶೈವನಾಗುವುದೆಂದರೆ ಜಾತಿಯ ಗಡಿಗಳನ್ನು ಮೀರಿ ಸಮಾನತೆಯ ನೆಲೆಯಲ್ಲಿ ನಿಲ್ಲುವುದು ಎಂದು ಅರ್ಥ. “ಚತುರ್ವರ್ಣಾತೀತನೆ ವೀರಶೈವ ನೋಡಾ” ಎಂದು ಸಿದ್ಧರಾಮನು ಹೇಳುವ ಮಾತು ಇದನ್ನು ದೃಢಪಡಿಸುತ್ತದೆ. ‘ಚತುರ್ವರ್ಣಾತೀತ’ವಾಗುವುದು ಎಂದರೆ, ಪರಂಪರಾಗತವಾದ ನಾಲ್ಕು ವರ್ಣಗಳನ್ನು ಮೀರುವುದು ಎಂದು ಮಾತ್ರವಲ್ಲ, ಈ ನಾಲ್ಕು ವರ್ಣಗಳನ್ನು ಒಡೆದು, ಅವೆಲ್ಲವನ್ನೂ ಬೇರೊಂದು ರೀತಿಯಲ್ಲಿ ಕೂಡಿಸುವುದು, ಒಂದು ವರ್ಣ ಮತ್ತೊಂದು ವರ್ಣದ ಜತೆ ಬೆರೆತು ಅವರೆಲ್ಲರೂ ತಮ್ಮ ಮುನ್ನಿನ ಕುಲದ ಕುರುಹುಗಳನ್ನು ಕಳೆದುಕೊಳ್ಳುವುದು ಎಂದು ಅರ್ಥ. ಬಸವಣ್ಣನವರು ತಮ್ಮ ಒಂದೆರಡು ವಚನಗಳಲ್ಲಿ-

‘ಕುಲವನರಸುವರೆ ಶರಣರಲ್ಲಿ
ವರ್ಣ ಸಂಕರವಾದ ಬಳಿಕ?’
………………………………
‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ಕೂಡಲ ಸಂಗನ ಶರಣರೇ ಕುಲಜರು’

ಎಂದು ಹೇಳಿದ್ದಾರೆ. ಈ ಎರಡು ಉಕ್ತಿಗಳೂ ತುಂಬ ಮಹತ್ವದವುಗಳಾಗಿವೆ. ವೈದಿಕ ಧರ್ಮ ಒಂದು ಜಾತಿ ಮತ್ತೊಂದು ಜಾತಿಯೊಂದಿಗೆ ಬೆರೆಯುವುದನ್ನು ‘ವರ್ಣಸಂಕರ’ ಎನ್ನುತ್ತದೆ. ‘ವರ್ಣಸಂಕರ’ ಎನ್ನುವುದು ಹಿಂದೂಧರ್ಮದ ಪ್ರಕಾರ ಒಂದು ಮಹಾಪಾಪ; ದೊಡ್ಡ ಅನಾಹುತ; ಅದರಿಂದ ಧರ್ಮನಾಶ ಎಂದು ತಿಳಿಯಲಾಗಿದೆ. ಪ್ರತಿಯೊಂದು ವರ್ಣವೂ, ಚಾತುರ್ವರ್ಣದ ಚೌಕಟ್ಟಿನಲ್ಲಿ ಸುಭದ್ರವಾಗಿರುವುದೇ ಧಾರ್ಮಿಕ ಕ್ಷೇಮಕ್ಕೆ ಅತ್ಯಗತ್ಯ; ಅದರ ಬದಲು ಒಂದು ವರ್ಣ ಮತ್ತೊಂದರ ಜತೆ ಬೆರೆಯುವುದು ಅಥವಾ ವರ್ಣ ಸಂಕರವಾಗುವುದು ಹಾನಿಕರ; ಧರ್ಮಗ್ಲಾನಿಯ ಲಕ್ಷಣ. ಇದು ‘ವರ್ಣ ಸಂಕರ’ವನ್ನು ಕುರಿತ ವೈದಿಕ ಧರ್ಮದ ನಿಲುವು. ಆದರೆ ವೈದಿಕ ಧರ್ಮವನ್ನು ಪ್ರಶ್ನೆ ಮಾಡಿದ, ಪ್ರತಿಭಟಿಸಿದ ಬಸವಣ್ಣನವರ ಪ್ರಕಾರ ‘ವರ್ಣ ಸಂಕರ’ ಅತ್ಯಗತ್ಯವಾದದ್ದು, ಜಾತಿ ಜಾತಿಗಳ ನಡುವಣ ತರತಮಗಳ ನಿರ್ಮೂಲನಕ್ಕೆ. ಅದರಿಂದ  ‘ವರ್ಣ ಸಂಕರ’ವಾಗುವುದು ಅಥವಾ ‘ಚಾತುರ್ವರ್ಣಾತೀತ’ವಾಗುವುದು ಒಂದು ಹೊಸ ಸಾಮಾಜಿಕ-ಧಾರ್ಮಿಕ ಪರಿವರ್ತನೆಯ ಲಕ್ಷಣವಾಗಿರುವಾಗ, ಹೀಗೆ ‘ವರ್ಣಸಂಕರ’ವಾದ ಬಳಿಕ, ಮತ್ತು ಆ ಮೂಲಕ ಶರಣರಾದ ಬಳಿಕ, ಅದರಲ್ಲಿ ಅವರ ಹುಟ್ಟಿನಿಂದ ಬಂದಂಥ ‘ಜಾತಿ’ಗಳನ್ನು ಹುಡುಕಬಾರದೆಂಬುದು ಬಸವಣ್ಣನವರ ನಿಲುವಾಗಿದೆ. ಹಾಗೆಯೇ ವ್ಯಕ್ತಿ ವ್ಯಕ್ತಿಗಳ ನಡುವೆ ತರತಮಗಳನ್ನು ಹುಡುಕದೆ ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ಕೂಡಲ ಸಂಗನ ಶರಣರಾಗುವುದಕ್ಕಿಂತ ‘ಬೇರೆಯ ಶ್ರೇಷ್ಠವಾದ ಕುಲ ಯಾವುದೂ ಇಲ್ಲ. ಈ ದೃಷ್ಟಿಯಿಂದ ಹೇಳುವುದಾದರೆ, ಇರುವುದು ಎರಡೇ ವರ್ಗ : ‘ಸತ್ಕುಲ’, ‘ದುಷ್ಕುಲ’; ‘ನೀಚ’, ‘ಶ್ರೇಷ್ಠ’; ‘ಶಿವಭಕ್ತ’, (ಅದಕ್ಕೆ ಹೊರತಾದ) ‘ಭವಿ’.

ಶರಣ ಚಳುವಳಿಯ ಈ ಹೊಸ ಧಾರ್ಮಿಕ ನಿಲುವುಗಳಲ್ಲಿ ಅಂದಿನ ಬಹು ಸಂಖ್ಯಾತ ದಲಿತರು ತಮ್ಮ ಹೊಸ ಹುಟ್ಟುಗಳನ್ನು ಪಡೆದುಕೊಂಡರು. ತುಂಬ ಧೈರ್ಯದಿಂದ ಸಾಂಪ್ರದಾಯಿಕವಾದ ನಂಬಿಕೆಗಳನ್ನು, ಆಚಾರ ವಿಚಾರಗಳನ್ನು ಪ್ರಶ್ನೆ ಮಾಡಿದರು. ತಮ್ಮ ತಮ್ಮ ವೃತ್ತಿಗಳ ಮೂಲಕ ಬಂದ ಕೀಳರಿಮೆಯನ್ನು ಕಳೆದುಕೊಂಡು ‘ಕಾಯಕ ಜೀವಿ’ಗಳಾದರು. ಮತ್ತು ತಮ್ಮ ತಮ್ಮ ಅಂತರಂಗದ ಅನುಭವಗಳನ್ನು ತಮ್ಮಕಾಯಕದ ಪ್ರತೀಕಗಳ ಮೂಲಕ ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ಗಳಿಸಿಕೊಂಡರು. “ತಡೆನೆಲೆಯಿಲ್ಲದ ಮಹಾನದಿಯಲ್ಲಿ ಒಡಲಿಲ್ಲದಂಬಿಗ ಬಂದಿದ್ದೇನೆ. ಹಿಡಿವ ಬಿಡುವ ಮನವ ಬೆಲೆಗೊಟ್ಟೊಡೆ ಕಡೆ ಹಾಯಿಸುವೆ ಈ ಮಹಾ ಹೊಳೆಯ” ಎಂದು ಅಂಬಿಗರ ಚೌಡಯ್ಯನೂ, ‘ಅಂಗದ ಬೊಕ್ಕಸಕ್ಕೆ ಚಿದ್ ಘನ ಲಿಂಗವೆಂಬ ಬೀಗ, ಎಸಳ ತೆಗೆವುದಕ್ಕೆ ಕೈಯ್ಯ ಕಾಣೆ’, ಎಂದು ಬೊಕ್ಕಸದ ಚಿಕ್ಕಣ್ಣನೂ- ಹೇಳಿಕೊಳ್ಳುವುದಕ್ಕೆ ಸಾಧ್ಯವಾದದ್ದು, ಈ ಚಳುವಳಿಯ ಸಾಧನೆಯಾಗಿದೆ.

ಈ ಅನುಭಾವಿಕ ಎಚ್ಚರದೊಂದಿಗೆ, ಈ ದಲಿತ ಶರಣರು ತಮ್ಮ ಸುತ್ತಣ ಸಮಾಜವನ್ನೂ, ಅದರ ಅವ್ಯವಸ್ಥೆಗಳನ್ನೂ ಕುರಿತು ನಿರ್ಭೀತಿಯಿಂದ ವಿಮರ್ಶೆ ಮಾಡುವ ಕೆಚ್ಚನ್ನೂ ಪಡೆದುಕೊಂಡರೆಂಬುದು ವಿಶೇಷದ ಸಂಗತಿಯಾಗಿದೆ. ಯಾವ ಜನ ಶತಮಾನಗಳ ಕಾಲ ಮೂಕವಾಗಿ, ದೀನವಾಗಿ, ಸದ್ದಿಲ್ಲದೆ, ತಮ್ಮ ವೇದನೆಗಳನ್ನು, ಸಿಟ್ಟುಗಳನ್ನು ಹೇಳಿಕೊಳ್ಳಲು ಅವಕಾಶವಿಲ್ಲದಂತಹ ಶೋಷಣೆಗೆ ಒಳಗಾಗಿದ್ದರೋ, ಅದೇ ಜನ ವೈದಿಕ ಧರ್ಮದ ಪುರೋಹಿತಷಾಹೀ ಕುತಂತ್ರಗಳನ್ನೂ, ಜಾತಿ ವ್ಯವಸ್ಥೆಗಳನ್ನೂ ಧೈರ್ಯದಿಂದ ವಿಮರ್ಶಿಸಿದ ಹಾಗೆ, ತಾವು ಪ್ರವೇಶಿಸಿದ ಹೊಸ ಧರ್ಮದ ‘ಪುರೋಹಿತಷಾಹಿ’ಯನ್ನೂ ಸಾಮಾಜಿಕ ಅಸಾಂಗತ್ಯಗಳನ್ನು ವಿಮರ್ಶೆಗೆ ಗುರಿಪಡಿಸಿದರೆಂಬುದು, ಗಮನಿಸಬೇಕಾದ ಸಂಗತಿಯಾಗಿದೆ. ಅಕ್ಕಮ್ಮ ಎಂಬ ಮಹಿಳೆ ‘ಗುರುವಾದರೂ ಆಚಾರಭ್ರಷ್ಟನಾದಡೆ, ಅನುಸರಿಸಲಾಗದು’ ಎನ್ನುತ್ತಾಳೆ. ‘ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಕಂಡರೆ ನಾಚಿತೆನ್ನ ಮನವು’ ಎನ್ನುತ್ತಾಳೆ ಅಮುಗೆ ರಾಯಮ್ಮ. ‘ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ ಅವನ ಮನೆಯಲ್ಲಿ ಉಣಬಾರದೆಂದು ಅಕ್ಕಿಯ ಕಣಕವ ತಕ್ಕೊಂಡು ಹೋಗುವ ಗುರುವನು ಕಂಡರೆ ಕೆಡವಿ ಹಾಕಿ, ಮೂಗು ಕೊಯ್ದು ಇಟ್ಟಿಗೆಯಲ್ಲಿ ಒರಸಿ, ನಿಂಬೆಹುಳಿ ಹಿಂಡಿ ಪಡುವಲ ಗಾಳಿಗೆ ಹಿಡಿ’ -ಎನ್ನುತ್ತಾನೆ ಅಂಬಿಗರ ಚೌಡಯ್ಯ.

ಈ ಬಗೆಯ ಧೈರ್ಯ ಮತ್ತು ಆತ್ಮಪ್ರತ್ಯಯ ಅಂದಿನ ಶೂದ್ರರಿಗೆ ದಲಿತರಿಗೆ ಬಂದದ್ದು ಸಾಮಾನ್ಯವಾದ ಸಂಗತಿಯಲ್ಲ. ಆದರೆ ಈ ಜನ ಈ ಧಾರ್ಮಿಕ ಸಾಮಾಜಿಕ ಚಳುವಳಿಯಲ್ಲಿ  ಸಕ್ರಿಯವಾಗಿ ಭಾಗವಹಿಸಲು ಮತ್ತು ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಾದದ್ದು, ಈ ಶರಣ ಧರ್ಮ ಜನಸಾಮಾನ್ಯರ ಭಾಷೆಯಾದ ಕನ್ನಡವನ್ನು ತನ್ನ ವಿಚಾರದ ಭಾಷೆಯನ್ನಾಗಿ ಅಳವಡಿಸಿಕೊಂಡಿದ್ದರಿಂದ ಎಂಬುದನ್ನು ಮರೆಯಬಾರದು.

ಅಷ್ಟೇ ಅಲ್ಲ. ಈ ಚಳುವಳಿಯ ಕೇಂದ್ರವ್ಯಕ್ತಿಗಳಾದ ಬಸವಣ್ಣ ಮತ್ತಿತರರು, ತಮ್ಮ ಮುಚ್ಚುಮರೆಯಿಲ್ಲದ ನಡವಳಿಕೆಯ ಮೂಲಕ, ಅದಮ್ಯವಾದ ಜೀವನಪ್ರೀತಿಯ ಮೂಲಕ, ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರನೂ ಒಂದೇ ಎಂಬೆ’ ಎಂಬ ನಿಲುವಿನ ಮೂಲಕ ಅಂದಿನ ಬಹುಸಂಖ್ಯಾತ ಜನ ಸಾಮಾನ್ಯರಿಂದ ‘ಇವ ನಮ್ಮವ ಇವ ನಮ್ಮವ’ ಎಂದು ಅಂಗೀಕೃತರಾದ ಕಾರಣ, ಅಂದು ಒಂದು ಹೊಸ ಸಾಮಾಜಿಕ-ಧಾರ್ಮಿಕ  ಚಳುವಳಿ ರೂಪುಗೊಳ್ಳಲು ಸಾಧ್ಯವಾಯಿತು. ಆದರೆ ಈ ಚಳುವಳಿಯ ‘ದಲಿತ ಪ್ರಜ್ಞೆ’, ಇವತ್ತಿನ ‘ದಲಿತ ಪ್ರಜ್ಞೆ’ಗೆ ಹೋಲಿಸಿದರೆ, ಅನ್ಯಾಯಗಳ ಹಾಗೂ ಶೋಷಣೆಗಳ ವಿರುದ್ಧ ಹೋರಾಡುವ ಆರ್ಥಿಕ-ರಾಜಕೀಯ ಸ್ವರೂಪದ್ದಾಗಿರದೆ, ಬಹು ಮಟ್ಟಿಗೆ ಧಾರ್ಮಿಕ-ಆಧ್ಯಾತ್ಮಿಕ ಸ್ವರೂಪದ್ದಾಗಿದೆ-ಎಂಬುದು ನಿಜ. ಆದರೆ ಶರಣ ಧರ್ಮ ಹನ್ನೆರಡನೆಯ ಶತಮಾನದಷ್ಟು ಹಿಂದೆ, ಸಹಸ್ರಾರು ವರ್ಷಗಳಿಂದ, ಹಿಂದೂಧರ್ಮದ ವರ್ಣವ್ಯವಸ್ಥೆಯ ಯಮಭಾರದ ಕೆಳಗೆ ಬಿಡಿಸಿಕೊಳ್ಳಲು ಬಾರದಂತೆ, ಶೋಷಣೆಗೆ ನಿರ್ಲಕ್ಷ್ಯಕ್ಕೆ ಒಳಗಾದ ಈ ದೇಶದ ಕೆಳಗಿನ ಸ್ತರದ ಬದುಕಿಗೆ, ಹೊಸ ಎಚ್ಚರವನ್ನೂ, ಆತ್ಮಪ್ರತ್ಯಯವನ್ನೂ ಪ್ರತಿಭಟನೆಯ ದನಿಗಳನ್ನೂ ಮೊಟ್ಟ ಮೊದಲಿಗೆ ತಂದು ಕೊಟ್ಟಿತೆಂಬುದು ಸಾಮಾನ್ಯವಾದ ವಿಚಾರವಲ್ಲ.

ಉಪನ್ಯಾಸ ಸಂಚಯ (೧೯೯೧)

* * *