ಅಲ್ಲಿ ಇಲ್ಲಿ ಸುತ್ತಿ ಸುಳಿದು ಕಡೆಗೆ ನಿನ್ನ ಮಡಿಲಿಗೆ
ಹತ್ತು ದಿಕ್ಕಿಗಲೆದ ಹಕ್ಕಿ ಕಡೆಗೆ ಮರದ ಹಕ್ಕೆಗೆ.

ಗುಡ್ಡವಾಗಿ ಬೆಟ್ಟವಾಗಿ ನಾನು ನಿಂತು ಮೆರೆಯಲು,
ನೀಲ ವ್ಯೋಮ ವಕ್ಷವಾಗಿ ನಿನ್ನ ಒಲವು ತಬ್ಬಲು-

ಹಳ್ಳವಾಗಿ ಹೊಳೆಗಳಾಗಿ ನಾನು ಮೊರೆದು ಹರಿಯಲು,
ನಿನ್ನ ಕಡಲ ತಾಯಿಮಡಿಲು ತೂಗಿ ಲಾಲಿ ಹಾಡಲು-

ಮೊರೆವ ಕಡಲ ತೆರೆಗಳಾಗಿ ನಾನು ಮಲೆತು ನುಗ್ಗಲು,
ನಿನ್ನ ಅಡಿಯ ಮಳಲ ತಡಿಯು ಅಂಕೆಯಲ್ಲ್ಲಿ ನಿಲಿಸಲು –

ತಾರೆಯಾಗಿ ಗ್ರಹಗಳಾಗಿ ನಾನು ದಿನವು ಭ್ರಮಿಸಲು
ನಿನ್ನ ಮೌನ ನಮ್ಮೆದೆಗಳ ಕೋದು ಮಾಲೆಗೈಯಲು-

ಸ್ವರ ತರಂಗವೇರಿ ನಡೆದ ಹಾಡು ಮತ್ತೆ ಕಡೆಯಲಿ
ಪಲ್ಲವಿಗೇ ಬರುವ ತೆರದಿ ಶರಣು ನಿನ್ನ ಅಡಿಯಲಿ.