ಕರ್ನಾಟಕದ ಪ್ರಮುಖ ಧರ್ಮವೂ, ಭಾರತದ ವಿಶಿಷ್ಟ ಧರ್ಮಗಳಲ್ಲಿ ಒಂದೂ – ಎಂದು ಪರಿಗಣಿತವಾಗಿರುವ ವೀರಶೈವ  ಅಥವಾ ಲಿಂಗಾಯತ ಧರ್ಮದಲ್ಲಿ ‘ಶರಣ’ ಎಂಬ ಮಾತಿಗೆ ವಿಶೇಷವಾದ ಅರ್ಥವಿದೆ. ಅದು ಈ ಧರ್ಮವನ್ನು ಒಪ್ಪಿಕೊಂಡ ಭಕ್ತರನ್ನು ಮಾತ್ರವಲ್ಲದೆ, ಈ ಧರ್ಮವು ಪ್ರವರ್ತನಗೊಂಡ, ಹನ್ನೆರಡನೆಯ ಶತಮಾನದ ಒಂದು ಸಾಮಾಜಿಕ-ಧಾರ್ಮಿಕ ಸ್ವರೂಪದ ಆಂದೋಲನದ ಸಂದರ್ಭದಲ್ಲಿ, ಅಂದಿನ ಶ್ರೇಣಿಕೃತ ವ್ಯವಸ್ಥೆಯ ವಿವಿಧ ಸಾಮಾಜಿಕ ಸ್ತರಗಳಿಗೆ ಸೇರಿದ ಶ್ರೀಸಾಮಾನ್ಯರು, ತಮ್ಮ ಪೂರ್ವ ಚಹರೆಗಳನ್ನು ಕಳೆದುಕೊಂಡು ಸಮಾನತೆಯ ನೆಲೆಯೊಂದರಲ್ಲಿ  ಅವರು ಪಡೆದುಕೊಂಡ ಹೊಸ ವ್ಯಕ್ತಿತ್ವದ ಹೆಸರೂ ಆಗಿದೆ. ಎಂದರೆ ಅವರೆಲ್ಲರೂ ಮೂಲತಃ ಶರಣರು; ಅವರಿಂದ ನಡೆದದ್ದು ಶರಣ ಚಳುವಳಿ, ಈ ಚಳುವಳಿಯ ಸಂದರ್ಭದಲ್ಲಿ ಹುಟ್ಟಿಕೊಂಡದ್ದು ಶರಣ ಸಾಹಿತ್ಯ  ಅಥವಾ ವಚನ ವಾಙ್ಮಯ. ಸ್ವಾರಸ್ಯದ ಸಂಗತಿ ಎಂದರೆ ಬಹು ಸಂಖ್ಯೆಯ ಈ ವಚನಗಳಲ್ಲಿ ‘ಲಿಂಗಾಯತ’, ‘ವೀರಶೈವ’ ಎಂಬ ಪದಗಳನ್ನು ದೀಪ ಹಚ್ಚಿಕೊಂಡು ಹುಡುಕಬೇಕಷ್ಟೇ! ಆದರೆ ಅತ್ಯಂತ ವಿಪುಲವಾಗಿ ಕಾಣಬಹುದಾದ ಪದ ಎಂದರೆ ‘ಶರಣ’ ಎನ್ನುವುದೇ. ಈ ಶರಣ ಚಳುವಳಿಯ ಕೇಂದ್ರ ವ್ಯಕ್ತಿಯಾದ ಬಸವಣ್ಣನವರ ವಚನಗಳಲ್ಲಿ ಉಳಿದೆಲ್ಲ ಪರಿಭಾಷೆಗಳಿಗಿಂತ ‘ಶರಣ’ಎಂಬ ಪದವೇ ವಿಪುಲ ಸಂಖ್ಯೆಯಲ್ಲಿ ದೊರೆಯುತ್ತದೆ.[1]

‘ಶರಣ’ ಎಂದರೆ, ಯಾರು ತನಗಿಂತ ದೊಡ್ಡದಾದುದೊಂದು ಇದೆ ಎಂದು ತಿಳಿದು, ಅದಕ್ಕೆ ವಿನಯದಿಂದ ತಲೆಬಾಗುತ್ತಾನೋ, ಶರಣು ಹೋಗುತ್ತಾನೋ ಅಥವಾ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೋ ಅವನೇ ಶರಣನು. ಹಾಗೆ ನೋಡಿದರೆ ‘ಶರಣ’ ಎಂಬ ಮಾತು ಕಾಣಿಸಿಕೊಳ್ಳುವುದು ಇದೇ ಮೊದಲಸಲವೇನಲ್ಲ. ಎರಡು ಸಾವಿರದ ಆರುನೂರು ವರ್ಷಗಳಿಗೂ ಹಿಂದೆ ಭಗವಾನ್ ಬುದ್ಧನ ಕಾಲದಲ್ಲಿ ಮತ್ತು ಅನಂತರ  ಇದೊಂದು ಮಂತ್ರ ಘೋಷದಂತೆ ಭಾರತದಾದ್ಯಂತ ಮೊಳಗಿದ ಪದ ಇದು: ಬುದ್ಧಂ ಶರಣಂ ಗಚ್ಛಾಮಿ; ಸಂಘಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ. ‘ಬುದ್ಧನಲ್ಲಿ ನಾನು ಶರಣು ಹೋಗುತ್ತೇನೆ, ಸಂಘದಲ್ಲಿ ಶರಣು ಹೋಗುತ್ತೇನೆ, ಅವನ ಧರ್ಮದಲ್ಲಿ ಶರಣು ಹೋಗುತ್ತೇನೆ.’ ಮತ್ತೆ ಶರಣ ಎಂಬ  ಈ ಮಾತು ಹಲವು ಸ್ತರಗಳಲ್ಲಿ ಬಳಕೆಗೊಂಡದ್ದು ಹಾಗೂ ವ್ಯಾಖ್ಯಾನಿತವಾದದ್ದು ಹನ್ನೆರಡನೆಯ ಶತಮಾನದ ಶರಣ ಚಳುವಳಿಯ ಸಂದರ್ಭದಲ್ಲಿ. ಇಲ್ಲಿಯೂ ‘ಶರಣ’ ಎಂಬ ಮಾತು ಈ ಒಂದು ಧರ್ಮವನ್ನು ಒಪ್ಪಿಕೊಂಡವನು ಅಥವಾ ಆಶ್ರಯಿಸಿದವನು ಎಂಬ ಅರ್ಥವನ್ನು ಸೂಚಿಸುವುದರ ಜತೆಗೆ, ಶರಣ ಎನ್ನುವುದು ಒಂದು ವಿಶೇಷ ಅರಿವಿನ ಸ್ಥಿತಿಗೆ ಏರಿದ ಮನಸ್ಸಿನ  ಲಕ್ಷಣಕ್ಕೆ ಸಂಕೇತವಾಗಿದೆ. ಅಷ್ಟೇ ಅಲ್ಲ ಭಕ್ತನಾದವನ ಆಧ್ಯಾತ್ಮಿಕ ವಿಕಾಸದ ಹಾದಿಯಲ್ಲಿ ಆತನ ಸಿದ್ಧಿಯ ಹಿಂದಿನ ಮೆಟ್ಟಿಲಿನ ಹಂತವನ್ನು ಸೂಚಿಸುತ್ತದೆ. ವೀರಶೈವ ತತ್ವಶಾಸ್ತ್ರದ ಪರಿಭಾಷೆಯಲ್ಲಿ ಈ ಹಂತವನ್ನು ಷಟ್‌ಸ್ಥಲಗಳಲ್ಲಿ ಒಂದಾದ ‘ಶರಣಸ್ಥಳ’ ಎಂದು ನಿರ್ದೇಶಿಸಲಾಗಿದೆ. ಇಂಥ ನೆಲೆಗೆ ಏರಿದ ಶರಣರನ್ನು ಕುರಿತು, ಬಸವಣ್ಣನವರು ವರ್ಣಿಸುವುದು: ‘ಅರಿದರೆ ಶರಣ, ಮರೆದರೆ ಮಾನವ’ ಎಂಬ ಸೂತ್ರಪ್ರಾಯವಾದ ಉಕ್ತಿಯಲ್ಲಿ. ಅರಿಯ ಬೇಕಾದದ್ದು ಯಾವುದನ್ನು? ಮರೆತಿರುವುದು ಯಾವುದನ್ನು? ಇವು ಮುಖ್ಯವಾದ  ಪ್ರಶ್ನೆಗಳು. ಅರಿಯಬೇಕಾದದ್ದು ಇದು: ನಾನು ಯಾರು? ನನಗೂ ಈ ಜಗತ್ತಿಗೂ ಇರುವ ಸಂಬಂಧವೇನು? ನನಗೂ ಈ ಜಗತ್ತಿಗೂ ಮೂಲವಾದದ್ದು ಹಾಗೂ ಮೀರಿರುವುದು ಏನಾದರೂ ಇದೆಯೆ? ಇದ್ದರೆ ಅದರ ಸ್ವರೂಪವೇನು? ಅದನ್ನು ಅರಿಯುವುದು ಅಥವಾ ಅರ್ಥಮಾಡಿಕೊಳ್ಳುವುದು ಹೇಗೆ? ಇದನ್ನೆ ನಮ್ಮಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ ಎಂದು ಹೇಳಲಾಗಿದೆ.  ಈ ಪ್ರಶ್ನೆಗಳ  ಹಾದಿಯಲ್ಲಿ ಮುಂದುವರಿಯುವ ಮನೋಧರ್ಮವನ್ನೆ ಆಧ್ಯಾತ್ಮಿಕ ಪ್ರವೃತ್ತಿ ಎಂದು ಕರೆಯಲಾಗಿದೆ. ಜೀವ-ಜಗತ್ತು-ದೇವರು, ಈ ಮೂರರ ಸಂಬಂಧವನ್ನು ಅರಿಯುವುದೆ ಆಧ್ಯಾತ್ಮ ವಿದ್ಯೆ ಎನ್ನಿಸಿಕೊಳ್ಳುತ್ತದೆ. ವಾಸ್ತವವಾಗಿ ಆಧ್ಯಾತ್ಮ, ಆಧ್ಯಾತ್ಮವಿದ್ಯೆ, ಆಧ್ಯಾತ್ಮಿಕತೆ, ಈ ಪದಗಳು ಹಿಂದೂ ವೈದಿಕ ತತ್ವಜ್ಞಾನದ ಚರ್ಚೆಯ ಸಂದರ್ಭದಲ್ಲಿ ಹುಟ್ಟಿಕೊಂಡವುಗಳು. ಆದರೆ ನಾವು ಯಾವುದನ್ನು ‘ಶರಣಧರ್ಮ’ ಎಂದು ಕರೆಯುತ್ತೇವೆಯೋ ಅದು, ಪರಂಪರಾಗತವಾದ ಹಿಂದೂ ವೈದಿಕ ಧರ್ಮಕ್ಕೆ ಬಸವಾದಿಗಳು ಹನ್ನೆರಡನೆಯ ಶತಮಾನದಂದು ತೋರಿದ ಪ್ರತಿಕ್ರಿಯೆ ಮತ್ತು ಪ್ರತಿಭಟನೆಗಳ ಕಾರಣದಿಂದ ನಿಷ್ಪನ್ನವಾದುದರಿಂದ, ಈ ಧರ್ಮದ ತಾತ್ವಿಕ ನಿಲುವುಗಳನ್ನು ವಿವರಿಸಲು, ಪರಂಪರಾಗತವಾದ ಹಿಂದೂ-ವೈದಿಕ ಧರ್ಮದ ಸಂಸ್ಕೃತ ಭಾಷೆಯ ಪರಿಕರಗಳನ್ನು ನಿರಾಕರಿಸಿ, ತಮ್ಮ ದೇಶೀಯವಾದ ಕನ್ನಡವನ್ನು ಹೊಸ ಧರ್ಮದ ವಿಚಾರಗಳ ಹಾಗೂ ಪ್ರಸಾರದ ಮತ್ತು ತತ್ವಜ್ಞಾನದ ಭಾಷೆಯನ್ನಾಗಿ ಸಜ್ಜುಗೊಳಿಸಿದ್ದು ಒಂದು ಮಹತ್ವದ ಸಾಧನೆಯಾಗಿದೆ. ಅಷ್ಟೇ ಅಲ್ಲ ಶರಣರಿಗೆ ಈ ದೇಶದ ಶ್ರೀ ಸಾಮಾನ್ಯರ ಪರವಾಗಿ ಇರುವ ಕಾಳಜಿಗಳಿಗೆ ಸಾಕ್ಷಿಯಾಗಿದೆ. ಮತ್ತು ಈ ಕ್ರಮ ಭಗವಾನ್ ಬುದ್ಧನ ಜೀವ ಕಾರುಣ್ಯದ  ಪುನರಾವರ್ತನೆಯಾಗಿದೆ. ಬುದ್ಧ ಬಹು ಹಿಂದೆಯೇ ಹೇಳಿದ, ಧರ್ಮ ಇರುವುದು  ‘ಬಹುಜನ ಹಿತಾಯಚ’  ಎಂದು. ಶರಣಧರ್ಮದ ನಿಲುವೂ ಹೀಗೆಯೆ ಬಹುಜನ ಹಿತಕ್ಕೆ ಬದ್ಧವಾದದ್ದು. ಶರಣಧರ್ಮದೊಳಗಿನ ‘ಬಹುಜನ’, ಹಿಂದೂ ಧರ್ಮದ ‘ಮಹಾಜನ’ದಂತೆ, ಅಕ್ಷರಜ್ಞಾನದ ಮತ್ತಿತರ ಸೌಲಭ್ಯಗಳನ್ನು ಪಡೆದ ಕೆಲವೇ ಕೆಲವು ಪ್ರತಿಷ್ಠಿತರ ವರ್ಗವಲ್ಲ. ಶರಣ ಧರ್ಮದ ‘ಬಹುಜನ’ ಅಂದಿನ ಸಮಾಜದ ಹಲವು ಸ್ತರಗಳನ್ನು ಪ್ರತಿನಿಧಿಸುವ, ವಿವಿಧ ಕುಲ ಕಸುಬುಗಳ, ದುಡಿಯುವ ವರ್ಗದ, ಅಷ್ಟೇನೂ ವಿದ್ಯಾವಂತರಲ್ಲದ, ಆದರೆ ವಿಚಾರ ಮಾಡಬಲ್ಲ-ಜನ ಸಮುದಾಯವಾಗಿತ್ತು.

ಇಂಥ ಒಂದು ಸಮುದಾಯದ ಭಾಷೆಯನ್ನು, ಹೊಸ ಧರ್ಮದ ಹಾಗೂ ತತ್ವಜಿಜ್ಞಾಸೆಯ ಭಾಷೆಯನ್ನಾಗಿ ರೂಢಿಸುವ ಮಹತ್ ಪ್ರಯತ್ನವೊಂದು ನಡೆದಾಗ, ‘ಆಧ್ಯಾತ್ಮ’ದ ಬದಲು ‘ಅನುಭಾವ’ ಎಂಬ ಮಾತು, ದೇವರು ಅಥವಾ ಪರಬ್ರಹ್ಮದ ಬದಲು ‘ಲಿಂಗ’ ಎಂಬ ಮಾತು, ‘ಮೋಕ್ಷ’ದ ಬದಲು ‘ಲಿಂಗಾಂಗ ಸಾಮರಸ್ಯ’ ಎಂಬ ಮಾತು, ಮತ್ತು ಆ ‘ತುರೀಯಾವಸ್ಥೆ’ ಅಥವಾ ‘ಅನಿರ್ವಚನೀಯ’ದ ಬದಲು ‘ಬಯಲು’ ಅಥವಾ ‘ಶೂನ್ಯಸಂಪಾದನೆ’-ಎಂಬ ಮಾತು ಹುಟ್ಟಿಕೊಂಡದ್ದು ಅಂದಿನ ‘ದೇಸೀಯ ದಂಗೆ’ಯ ಪರಿಣಾಮಗಳೇ. ಈ ಹೊತ್ತು ಈ ಆಧ್ಯಾತ್ಮಿಕ ಅಥವಾ ದೈವೀ ಅನುಭವವನ್ನು ಸೂಚಿಸುವ, mysticism’ ‘mystic’, ‘experience’  ಎಂಬ ಇಂಗ್ಲಿಷ್ ಪದಗಳು ಬಳಕೆಯಲ್ಲಿವೆಯಷ್ಟೆ? ಆದರೆ ನಮ್ಮ ಭಾರತೀಯ ಸಂದರ್ಭದಲ್ಲಿ ಇದಕ್ಕೆ ಸಂವಾದಿಯಾಗಬಹುದಾದ ಸರಿಯಾದ ಪಾರಿಭಾಷಿಕವೊಂದು ಇರದಿದ್ದ ಕಾಲದಲ್ಲಿ, ಹನ್ನೆರಡನೆಯ ಶತಮಾನದಂದು ಶರಣರು, ‘ಅನುಭಾವ’ ಎಂಬ ಪದವೊಂದನ್ನು ನಿರ್ಮಿಸಿ ಆದರ ಅರ್ಥಚ್ಛಾಯೆಗಳನ್ನು ತಮ್ಮ ಸೂಳ್ನುಡಿಗಳ ಅಥವಾ ಸಂವಾದದ ಸಂದರ್ಭದಲ್ಲಿ ವಿವರಿಸುವ ಕ್ರಮ ತುಂಬ ಆಶ್ಚರ್ಯಕರವಾಗಿದೆ. ಶರಣರ ‘ಅನುಭಾವ’ ಎಂಬ ಈ ಪಾರಿಭಾಷಿಕವು, ಇಂಗ್ಲೀಷಿನ mysticismಗೆ ಅತ್ಯಂತ ಸಮರ್ಥವಾದ ಸಂವಾದಿ ಪದವಾಗಿ, ಭಾರತೀಯ ತತ್ವಶಾಸ್ತ್ರ ಪದಕೋಶಕ್ಕೆ ಕನ್ನಡವು ಬಹು ಹಿಂದೆಯೇ ಕೊಟ್ಟ ಕೊಡುಗೆಯಾಗಿದೆ ಎಂದು ಹೇಳಬಹುದು. ಈ ಅನುಭಾವ ಸಾಧನೆಯ ಹಾದಿಯಲ್ಲಿ ಹೊರಟ ವ್ಯಕ್ತಿಯನ್ನು ‘ಶರಣ’ ಎಂದು ಕರೆಯಲಾಗಿದೆ. ಈ ಶರಣರ ‘ಅನುಭಾವ ಸಾಧನೆ’ಯ ಹಿಂದಿರುವ ಚಿಂತನೆಗಳೆ ಶರಣಧರ್ಮದ ಆಧ್ಯಾತ್ಮಿಕ ನಿಲುವುಗಳನ್ನು ಸ್ಪಷ್ಟಪಡಿಸುತ್ತವೆ.

ಶರಣಧರ್ಮದ ಆಧ್ಯಾತ್ಮಿಕ ಅಥವಾ ಆನುಭಾವಿಕ ನಿಲುವಿನ ಮೊದಲ ಲಕ್ಷಣವೆಂದರೆ, ಅದಕ್ಕೆ ಮೊದಲಿನ ಭಾರತದ ಹಲವು ಧರ್ಮಗಳಂತೆ, ಈ ಜಗತ್ತನ್ನು ಅಥವಾ ಲೋಕ ವಾಸ್ತವವನ್ನು ಮಿಥ್ಯೆ ಎಂದೋ ಮಾಯೆ ಎಂದೋ ಭಾವಿಸದೆ ಈ ಜಗತ್ತೂ ಸತ್ಯ ಎಂದು ಅಂಗೀಕರಿಸಿದ ಕ್ರಮ. ಶರಣ ಧರ್ಮದ ಪ್ರಕಾರ ಈ ಜಗತ್ತು ಭಗವಂತನಿಂದ ದತ್ತವಾದ ಒಂದು ವರ. ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ನಿಮ್ಮ ದಾನ’ ಎಂಬ ಜೇಡರ ದಾಸಿಮಯ್ಯನ ಉಕ್ತಿಯಲ್ಲಿ ಈ ನಿಲುವು ಮೊದಲು ಕಾಣಿಸಿಕೊಳ್ಳುತ್ತದೆ. ಹೀಗೆ ಭಗವಂತನಿಂದ ಮನುಷ್ಯನಿಗೆ ದಾನವಾಗಿ ಬಂದ ಜಗತ್ತು ಮಿಥ್ಯೆ ಹೇಗಾದೀತು? ಇಂಥ ‘ದತ್ತ’ವಾದ ಬದುಕಿನಲ್ಲಿ ನೋವು-ದುಃಖ-ಸಂಕಟಗಳಿಲ್ಲವೆಂದೇನೂ ಅರ್ಥವಲ್ಲ. ಇದೊಂದು ದುಃಖ ಭೂಯಿಷ್ಠವಾದ ಜಗತ್ತೇನೋ ಹೌದು. ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎನ್ನುತ್ತಾರೆ ಅಲ್ಲಮಪ್ರಭು. ಆದರೆ ಇಂಥ ಜಗತ್ತನ್ನು ಅದು ಇದ್ದಂತೆಯೇ ಒಪ್ಪಿಕೊಂಡು ಅದನ್ನು ಎದುರಿಸಿ ನಿಲ್ಲಬೇಕು ಎನ್ನುವುದೇ ಇದರ ಹಿಂದಿರುವ ದೈವದ ಸಂಕಲ್ಪವಾಗಿದೆ.

ಬಸವಣ್ಣನವರು ಹೇಳುವಂತೆ ಈ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ.’ ಬದುಕಿನ ಈ ಕಮ್ಮಟದಲ್ಲಿ ಮನುಷ್ಯನ ವ್ಯಕ್ತಿತ್ವ ‘ಕಡಿಹಕ್ಕೆ ಬಡಿಹಕ್ಕೆ’ ಸಿಕ್ಕು ತನ್ನ ಡೊಂಕುಗಳನ್ನು ಸರಿಪಡಿಸಿಕೊಂಡು ‘ಶರಣ’ನಾಗಬೇಕು. ಈ ಬದುಕನ್ನು ಮನುಷ್ಯ ಹೇಗೆ ಸ್ವೀಕಾರ ಮಾಡಬೇಕು ಎನ್ನುವುದನ್ನು ಕುರಿತು ಅಲ್ಲಮಪ್ರಭು ಮಂಡಿಸುವ ರೂಪಕ ಇದು: ‘ಕೊಟ್ಟ ಕುದುರೆಯನೇರಲರಿಯದೆ, ಮತ್ತೊಂದ ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲ.’ ಬದುಕು, ನಮಗೆ ದತ್ತವಾದ(ಕೊಟ್ಟ) ಕುದುರೆ. ಇದನ್ನು ಏರಿ ಸವಾರಿ ಮಾಡಿ ಪಳಗಿಸಿಕೊಳ್ಳ ಬೇಕಾದದ್ದು ಸವಾರನ ಕರ್ತವ್ಯ. ಹೀಗೆ ಕೊಟ್ಟ ಕುದುರೆಯನ್ನು ಏರಲರಿಯದವರು ‘ವೀರರೂ ಅಲ್ಲ, ಧೀರರೂ ಅಲ್ಲ.’ ಇದು ಬದುಕನ್ನು ಒಂದು ಕೊಡುಗೆ ಎಂಬಂತೆ, ಸಂಸ್ಕಾರ ಕ್ಷೇತ್ರವೆಂಬಂತೆ, ಸವಾಲು ಎಂಬಂತೆ ಒಪ್ಪಿಕೊಳ್ಳಬೇಕು ಎಂಬ ವಾಸ್ತವ ಪ್ರಜ್ಞೆಯನ್ನೂ ಧೈರ್ಯವನ್ನೂ ಒಂದು ಮೌಲ್ಯವೆಂಬಂತೆ ಪ್ರತಿಪಾದಿಸುವುದು ಶರಣಧರ್ಮದ ಆಧ್ಯಾತ್ಮಿಕ ನಿಲುವುಗಳಲ್ಲಿ ಒಂದು.

ಹೀಗೆ, ಇಹದ ಬದುಕನ್ನು ತನ್ನ ಅನಿವಾರ್ಯವೆಂಬಂತೆ ಒಪ್ಪಿಕೊಂಡ ಶರಣಧರ್ಮದ ಜೀವನ ಶ್ರದ್ಧೆ ಯಾವತ್ತೂ ‘ಪರ’ವನ್ನು ಕುರಿತ  ಆಕರ್ಷಣೆ ಅಥವಾ ದ್ವಂದ್ವಗಳಿಂದಾಗಿ ಹೊಯ್ದಾಡಲಿಲ್ಲ ಎಂಬುದು ಒಂದು ವಿಶೇಷದ ಸಂಗತಿಯಾಗಿದೆ. ಯಾಕೆಂದರೆ ಬಹುತೇಕ ಧರ್ಮಗಳ ಹಾಗೆ ಪರಲೋಕ ಅಥವಾ ಸ್ವರ್ಗನರಕಾದಿಗಳ ಕಲ್ಪನೆಗೆ ಕಟ್ಟುಬೀಳದೆ ಈ ಲೋಕದ ಬದುಕನ್ನು ಮುಖ್ಯವೆಂದು ಈ ಧರ್ಮ ಪರಿಗಣಿಸುತ್ತದೆ. ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಅನೇಕ ಪ್ರಮುಖ ಧರ್ಮಗಳು, ಮನುಷ್ಯನ ಬದುಕನ್ನು ‘ಇಹ’ ಮತ್ತು ‘ಪರ’ ಎಂದು ವಿಭಾಗಿಸಿ, ಪರಲೋಕ ಸಾಧನೆಯೇ ಜೀವನದ ಮಹೋದ್ದೇಶವೆಂಬ ನಿಲುವನ್ನು ಎತ್ತಿ ಹಿಡಿಯುತ್ತಾ, ವಾಸ್ತವ ಬದುಕಿನ ಜೀವನ ಪ್ರೀತಿಯನ್ನೂ ಹಾಗೂ ಬದುಕನ್ನೆದುರಿಸುವ ಧೈರ್ಯವನ್ನು ಕುಂಠಿತಗೊಳಿಸಿವೆ ಎಂದೇ ಹೇಳಬೇಕಾಗಿದೆ. ‘ಪರ’ದೊಂದಿಗೆ ಹೆಣೆದುಕೊಂಡ ಸ್ವರ್ಗ-ನರಕಗಳ ಕಲ್ಪನೆಗಳು  ಒಂದು ರೀತಿಯಲ್ಲಿ ಮನುಷ್ಯನ ಬದುಕಿನ ನೈತಿಕತೆಯನ್ನು ನಿಯಂತ್ರಿಸುವಂತೆ ತೋರಿದರೂ, ಮನುಷ್ಯರಿಗೆ ಸ್ವರ್ಗವನ್ನು ಕುರಿತ ಆಕರ್ಷಣೆಗಳೂ, ನರಕವನ್ನು ಕುರಿತು ಇರುವ ಭಯಗಳೂ-ಎಲ್ಲ ದೇಶಗಳಲ್ಲೂ ಸಾಮಾನ್ಯ ಜನರ ನಂಬಿಕೆಗಳನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಶೋಷಣೆಗೆ ಗುರಿಪಡಿಸುವ ಪುರೋಹಿತಶಾಹೀ  ತಂತ್ರಗಳಿಗೆ ಅವಕಾಶ ಮಾಡಿಕೊಟ್ಟಿವೆ ಎಂಬ ಸಂಗತಿಯನ್ನು ತಳ್ಳಿ ಹಾಕುವಂತಿಲ್ಲ. ಇಂಥ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶರಣ ಧರ್ಮವು ಪರಲೋಕದ ಕಲ್ಪನೆಯನ್ನು ಸಾರಾಸಗಟಾಗಿ ನಿರಾಕರಿಸುತ್ತ, ಸ್ವರ್ಗ-ನರಕಗಳೇನಿದ್ದರೂ, ಮನುಷ್ಯರು ತಮ್ಮ ಲೋಕವ್ಯವಹಾರದ ನೆಲೆಗಳಲ್ಲಿ ತಮ್ಮ ದೈನಂದಿನ ನಡವಳಿಕೆಗಳ ಮೂಲಕ ತಾವೇ ಸೃಷ್ಟಿಸಿಕೊಳ್ಳಬಹುದಾದ ಎರಡು ವಾಸ್ತವ ಸ್ಥಿತಿಗಳೇ ಹೊರತು ಬೇರೆ ಅಲ್ಲ -ಎಂಬ ವಿಚಾರವನ್ನು ಎತ್ತಿ ಹಿಡಿಯುತ್ತ, ಸಾಂಪ್ರದಾಯಿಕವಾದ ಸ್ವರ್ಗ-ನರಕಗಳ ಕಲ್ಪನೆಯನ್ನು ಹೀಗೆ ಬೌದ್ಧಿಕ ಚಿಕಿತ್ಸೆಗೆ ಒಳಪಡಿಸುತ್ತ ಮನುಷ್ಯ ಮೂಲತಃ ಈ ನೆಲಕ್ಕೆ ಸಂಬಂಧಿಸಿದವನು ಎಂಬ ಅಸ್ತಿತ್ವವಾದೀ ತತ್ವಜ್ಞಾನವನ್ನು ಪ್ರತಿಪಾದಿಸುತ್ತದೆ.[2]

ಮತ್ತೊಂದು ಮುಖ್ಯವಾದ ಸಂಗತಿ ಎಂದರೆ, ಯಾವುದೇ ಕಾರಣಗಳನ್ನು ಮುಂದೆ ಮಾಡಿ, ಈ ಲೋಕ ಜೀವನದಿಂದ ವ್ಯಕ್ತಿಗಳನ್ನು ವಿಮುಖರನ್ನಾಗಿ ಮಾಡುವ ಸನ್ಯಾಸ-ವೈರಾಗ್ಯ-ತಪಸ್ಸುಗಳನ್ನು ಶರಣಧರ್ಮ ಮುಖ್ಯವೆಂದು ಭಾವಿಸುವುದಿಲ್ಲ. ಬಸವಾದಿಗಳ ಕಾಲಕ್ಕೆ ಹಿಂದೆ ಇದ್ದ  ಭಾರತದ ಬಹುತೇಕ  ಧರ್ಮಗಳು ವಿಶೇಷವಾಗಿ ನಿವೃತ್ತಿಯನ್ನು ಅಥವಾ ಸಂಸಾರ ವಿಮುಖತೆಯನ್ನು ಒತ್ತಿ ಹೇಳಿದ ಧರ್ಮಗಳು. ‘ಈ ಲೋಕದ ಕರ್ತವ್ಯ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷಗಳ ಕಾಲ ಬದುಕೋಣ’ (ಈಶವ್ಯಾಸ)- ಎಂಬ ಜೀವನ ಪ್ರೀತಿಯ ಮಾತನ್ನು ಹೇಳಿದ ಹಿಂದೂ ಧರ್ಮವೇ, ಈ ಸಂಸಾರದ ಬಗ್ಗೆ  ಮತ್ತು ಸಂಸಾರದ ಮುಖ್ಯಭಾಗವಾದ  ಹೆಣ್ಣಿನ ಬಗ್ಗೆ ಒಂದು ಬಗೆಯ ತಿರಸ್ಕಾರದ ಧೋರಣೆಗಳನ್ನು ಏರುದನಿಯಲ್ಲಿ  ಹೇಳಿಕೊಂಡು ಬಂದದ್ದು  ಮಾತ್ರವಲ್ಲದೆ, ಮುಖ್ಯವಾಗಿ ಪುರುಷ ಪ್ರಧಾನ ದೃಷ್ಟಿಕೋನಗಳನ್ನು  ಎತ್ತಿ ಹಿಡಿಯುತ್ತ, ಬ್ರಹ್ಮಚರ್ಯ, ಗೃರ್ಹಸ್ಥ-ವಾನಪ್ರಸ್ಥ-ಮತ್ತು ಸನ್ಯಾಸ- ಎಂಬ ಜೀವನ ಕ್ರಮವನ್ನು ರೂಢಿಸುತ್ತ, ಗಂಡಸರಿಗಿರುವ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕೆ, ಹೆಣ್ಣು ಬಾಧ್ಯಸ್ಥಳಲ್ಲವೆಂಬಂತೆ ನಡೆದುಕೊಂಡದ್ದು ಒಂದು ವಿಪರ್ಯಾಸವಾಗಿದೆ. ಇನ್ನು ಜೈನ, ಬೌದ್ದ ಧರ್ಮಗಳಂತೂ ನಿವೃತ್ತಿಮಾರ್ಗವನ್ನೇ-ಅಂದರೆ ಸಂಸಾರಕ್ಕೆ ವಿಮುಖವಾದ ಜೀವನ ಕ್ರಮವನ್ನು ವೈಭವಿಸುತ್ತ, ಅತ್ಯಂತ ಕಠಿಣವಾದ ವ್ರತಗಳ ಪರಿಪಾಲನೆಯನ್ನೇ ಆಧ್ಯಾತ್ಮ ಸಾಧನೆಯೆಂಬಂತೆ ಬಿಂಬಿಸುತ್ತ-ಮಹಿಳೆಯರು ಸುಲಭವಾಗಿ ಪಾಲುಗೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದುವು. ಹೀಗಾಗಿ ಈ ಕೆಲವು ಧರ್ಮಗಳ ಪಾಲಿಗೆ ಸಂಸಾರವೆಂಬುದೊಂದು ಘನಘೋರ ವಿಷಯಾರಣ್ಯ; ಮತ್ತು ಹೆಣ್ಣು, ಹೊನ್ನು-ಮಣ್ಣುಗಳ ಪ್ರಲೋಭನ ಪ್ರಪಂಚ; ಈ ಹೆಣ್ಣು-ಹೊನ್ನು-ಮಣ್ಣುಗಳೆಂಬ ‘ಮಾಯೆ’ಯಿಂದ ಪಾರಾಗುವುದೇ ಮೋಕ್ಷ. ಇಂಥ ಪಾರಂಪರಿಕವಾದ ಗ್ರಹಿಕೆಯನ್ನು ಒರೆಗೆ ಹಚ್ಚಿ, ಅದರ ಪೊಳ್ಳುತನವನ್ನು ಬಯಲಿಗೆಳೆದವರು ಅಲ್ಲಮಪ್ರಭು. ‘ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆ ಅಲ್ಲ; ಹೊನ್ನುಮಾಯೆ ಎಂಬರು, ಹೊನ್ನುಮಾಯೆ ಅಲ್ಲ; ಮಣ್ಣುಮಾಯೆ ಎಂಬರು, ಮಣ್ಣು ಮಾಯೆ ಅಲ್ಲ, ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ’. ಇದು ಮಾಯೆಯನ್ನು ಕುರಿತು ಅತ್ಯಂತ ದಿಟ್ಟತನದ ಹಾಗೂ ಚೇತೋಹಾರಿಯಾದ ವ್ಯಾಖ್ಯಾನ. ಇಂಥ ನಿಲುವಿಗೆ ‘ಮಠವೇಕೋ ಪರ್ವತವೇಕೋ ಜನವೇಕೋ ನಿರ್ಜನವೇಕೋ ಚಿತ್ತ ಸಮಾಧಾನ ಉಳ್ಳ ಶರಣಂಗೆ?’ (ಅಲ್ಲಮ) ಇದು ಸಂಸಾರದ ನಡುವೆ ಇದ್ದುಕೊಂಡೇ ‘ಚಿತ್ತಸ್ವಾಸ್ಥ್ಯ’ವನ್ನು ಸಾಧಿಸುವ ಕಲೆಗಾರಿಕೆ. ಮನುಷ್ಯನು  ತನ್ನ ಚಿತ್ತದ ಸಮಾಧಾನವನ್ನು ಸಾಧಿಸುವುದೆ ಆಧ್ಯಾತ್ಮದ ಮೊದಲ ಲಕ್ಷಣ. ಈ ಬಗೆಯ ಚಿತ್ತ ಸಮಾಧಾನವನ್ನು ಸಂಸಾರದ ಜೀವನವು ಕೆಡಿಸುತ್ತದೆಂದೂ, ಆದ ಕಾರಣ ಸಾಧಕನು ಜನಸಂಸರ್ಗ ದೂರವಾದ ಕಾಡುಮೇಡುಗಳಿಗೆ ಹೋಗುವುದೇ ಸರಿಯಾದ ಕ್ರಮ -ಎಂಬ ನಿವೃತ್ತಿ ಧರ್ಮಗಳ ಈ ತಿಳಿವಳಿಕೆಗೆ ಸಂಪೂರ್ಣ ವಿರುದ್ಧವಾದ ನಿಲುವು ಶರಣ ಧರ್ಮದ್ದು. ಆದ ಕಾರಣವೇ ಬಸವಾದಿ ಶರಣರಿಂದ ಪ್ರವರ್ತನಗೊಂಡ ಈ ಶರಣ ಧರ್ಮ, ವ್ಯಕ್ತಿಯಾದವನು ಸಂಸಾರದೊಳಗೆ ಇದ್ದುಕೊಂಡೇ, ಶಿವಯೋಗವನ್ನು ಸಾಧಿಸುತ್ತ, ಈ ಸಂಸಾರವನ್ನು ಮೀರಿ ನಿಲುವುದು ಹೇಗೆ- ಎಂಬುದನ್ನು ಕುರಿತು ಚಿಂತಿಸಿದ ಧರ್ಮವಾಗಿದೆ. ಈ ಚಿಂತನೆಯ ಪರಿಣಾಮವಾಗಿ ನಿಷ್ಟನ್ನವಾದ ಸೂತ್ರವೆಂದರೆ: ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ (ಜೇಡರ ದಾಸಿಮಯ್ಯ)-ಎನ್ನುವುದು. ಅಂದರೆ ಶರಣನ ಭಕ್ತಿ ಸಾಧನೆಯ ಮೂಲ, ‘ಸತಿಪತಿಗಳೊಂದಾದ’ ಸಂಸಾರವೇ. ಈ ಹಿನ್ನೆಲೆಯಿಂದ ಹೇಳುವುದಾದರೆ ಶರಣ ಧರ್ಮ ಪ್ರತಿಪಾದಿಸುವುದು ವಿರಾಗಿಗಳ ಅಥವಾ ಸನ್ಯಾಸಿಗಳ ಧರ್ಮವನ್ನಲ್ಲ; ಸಂಸಾರಿಗಳ ಧರ್ಮವನ್ನು. ಅದು ಎಂದೂ ಸನ್ಯಾಸವನ್ನು ಸಂಸಾರಕ್ಕೆ ವಿರೋಧಿಯಾದುದೆಂದಾಗಲೀ, ದೊಡ್ಡದೆಂದಾಗಲೀ ಪರಿಗಣಿಸಲಿಲ್ಲ. ಬದಲು ಈ ಲೋಕವನ್ನು ಹಾಗೂ ಅದರ ಕೇಂದ್ರವಾದ ಸಂಸಾರವನ್ನು ತನ್ನ ಅಸ್ತಿತ್ವದ ಮೊದಲ ನೆಲೆಯನ್ನಾಗಿ ಒಪ್ಪಿಕೊಳ್ಳುತ್ತದೆ. ಹಾಗೆ ನೋಡಿದರೆ ಹನ್ನೆರಡನೆಯ ಶತಮಾನದ ಶರಣ ಚಳುವಳಿಯಲ್ಲಿ ತೊಡಗಿಕೊಂಡವರೆಲ್ಲ -ಅಲ್ಲಮ, ಸಿದ್ಧರಾಮ ಇಂಥ ಕೆಲವರನ್ನು ಹೊರತುಪಡಿಸಿದರೆ- ಸಂಸಾರಿಗಳೇ, ಗೃಹಸ್ಥರೇ. ಕಾರಣಾಂತರದಿಂದ ಕಟ್ಟಿಕೊಂಡ ಗಂಡನನ್ನು ಬಿಟ್ಟು, ಶ್ರೀಶೈಲದ ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಅಕ್ಕಮಹಾದೇವಿಯ ನಿಲುವೂ,ಉದಾತ್ತವಾದ ದಾಂಪತ್ಯಜೀವನದ ಕಲ್ಪನೆಯನ್ನೇ ಎತ್ತಿ ಹಿಡಿಯುತ್ತದೆ. ಹೀಗಾಗಿ ‘ಸತಿಪತಿಗಳೊಂದಾದ’ ಸಂಸಾರವನ್ನು ತಮ್ಮ ಅಸ್ತಿತ್ವದ ಮೊದಲ ಘಟಕವನ್ನಾಗಿ ಒಪ್ಪಿಕೊಂಡು, ಇಡೀ ಸಮಾಜವನ್ನೆ ಪರಿವರ್ತಿಸಿದ ಶರಣಧರ್ಮ ಮೂಲತಃ ಕುಟುಂಬ ಕೇಂದ್ರಿತವಾದದ್ದು. ಅಷ್ಟೇ ಅಲ್ಲ, ಕುಟುಂಬದೊಳಗಿನ ಸತಿ-ಪತಿ ಎಂಬ ಭೇದವು ಕೂಡ ಕೇವಲ ಹೊರಗಿನ ತೋರಿಕೆಯದೇ ಹೊರತು, ತತ್ವಶಃ ಅವರಿಬ್ಬರ ನಡುವೆ ಯಾವ ವ್ಯತ್ಯಾಸಗಳೂ ಇಲ್ಲ- ಎಂಬ ವಿಚಾರವು ಮುನ್ನೆಲೆಗೆ ಬಂದದ್ದು ಮಹತ್ವದ ಸಂಗತಿಯಾಗಿದೆ. ‘ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು; ನಡುವೆ ಸುಳಿವಾತ್ಮನು ಗಂಡೂ ಅಲ್ಲ, ಹೆಣ್ಣೂ ಅಲ್ಲ’ (ಜೇಡರ ದಾಸಿಮಯ್ಯ)- ಎಂದು ಆತ್ಮದ ಪ್ರಾಮಾಣ್ಯದ ಮೂಲ  ಮಾನದಲ್ಲಿ ಸ್ತ್ರೀ ಪುರುಷರ ಸಮಾನತೆಯನ್ನು ಎತ್ತಿ ಹಿಡಿದದ್ದು ಜಗತ್ತಿನ ಧಾರ್ಮಿಕ ಚರಿತ್ರೆಯಲ್ಲೇ ಅತ್ಯಂತ ಅಪರೂಪದ ಸಂಗತಿಯಾಗಿದೆ. ಭಾರತದ ಸಂದರ್ಭದಲ್ಲಂತೂ ಮಹಿಳೆಗೆ ಯಾವತ್ತಿನಿಂದಲೋ ನಿರಾಕರಿಸಲ್ಪಟ್ಟ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಅಧಿಕಾರಗಳನ್ನು ಮರಳಿ ತಂದುಕೊಟ್ಟು, ಪುರುಷರೊಂದಿಗೂ ಸರಿಸಮಾನವಾಗಿ ನಿಲ್ಲಬಲ್ಲಂಥ ಘನತೆ ಗೌರವಗಳ ಸಮಾನತೆಯ ನೆಲೆಯೊಂದನ್ನು ನಿರ್ಮಿಸಿದ್ದು ಶರಣಧರ್ಮವೇ ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ. ಅಷ್ಟೇ ಅಲ್ಲ, ಈ ಸಮಾನತೆಯ ನೆಲೆಯಲ್ಲಿ ಗಂಡ-ಹೆಂಡಿರಿಬ್ಬರನ್ನೂ ‘ಶರಣ-ಶರಣೆ’ಯರನ್ನಾಗಿ ಪರಿಗಣಿಸಿದ ಈ ಧರ್ಮ, ‘ಶರಣ ಸತಿ- ಲಿಂಗಪತಿ’-ಎಂಬ ಮತ್ತೊಂದು ಆಧ್ಯಾತ್ಮಿಕ ಸಂಸಾರದ ಪರಿಕಲ್ಪನೆಯನ್ನು ಮಂಡಿಸುತ್ತದೆ. ಇದರ  ಪ್ರಕಾರ ಆ ‘ಲಿಂಗ’ ಅಥವಾ ಪರಾತ್ಪರ ವಸ್ತುವೇ ನಿಜವಾದ ಪತಿ; ಇನ್ನುಳಿದವರೆಲ್ಲರೂ ಸತಿ ಅಥವಾ ಹೆಣ್ಣು. ಒಟ್ಟಾರೆಯಾಗಿ ಶರಣಧರ್ಮ ಲೌಕಿಕವಾಗಿ ಹಾಗೂ ಪಾರಮಾರ್ಥಿಕವಾಗಿ ಕಟ್ಟಿಕೊಡುವುದು ಕುಟುಂಬದ ಕಲ್ಪನೆಯನ್ನೆ. ಹೀಗಾಗಿ ಶರಣಧರ್ಮದ ತಾತ್ವಿಕ ತಳಹದಿಯೇ ಈ ಜೀವ-ದೇವರ ಸಂಸಾರದ ಪ್ರತೀಕವಾಗಿದೆ.

ಬಸವಾದಿಗಳು ಕಟ್ಟಲು ಪ್ರಯತ್ನಪಟ್ಟ ಈ ಸಂಸಾರ ಧರ್ಮ ಹೇಗೆ ಗಂಡು-ಹೆಣ್ಣುಗಳ ನಡುವಣ ತರತಮಗಳನ್ನು ನಿರಾಕರಿಸಿ ಆಧ್ಯಾತ್ಮಿಕ ಸಮಾನತೆಯನ್ನು ಪ್ರತಿಪಾದಿಸಿತೋ, ಹಾಗೆಯೇ ಸಾಮಾಜಿಕ ನೆಲೆಯ ವರ್ಣಭೇದಗಳನ್ನೂ ತಿರಸ್ಕರಿಸುತ್ತದೆ. ಬಹುಕಾಲದಿಂದ ನೆಲೆನಿಂತ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ‘ವರ್ಣಸಂಕರ’ದ ಸಿಡಿಮದ್ದಿನಿಂದ ಸ್ಫೋಟಿಸುತ್ತ. ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ’ ಉಳ್ಳ ಸಮಾಜದ ವಿವಿಧ ಸ್ತರಗಳವರನ್ನು ‘ಶರಣ’ರನ್ನಾಗಿ ಪರಿವರ್ತಿಸಿದ್ದು ಸಾಮಾನ್ಯವಾದ ಸಂಗತಿಯಲ್ಲ. ಅಧ್ಯಾತ್ಮ ಎಂದರೆ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ಒಂದು ಮನೋಧರ್ಮ ಎನ್ನುವುದಾದರೆ, ಶರಣ ಧರ್ಮವು ಆ ಕಾಲದ ಮಟ್ಟಿಗಾದರೂ ಇಂಥ ಒಂದು ಪ್ರಯೋಗವನ್ನು ಮಾಡಿ ತೋರಿಸಿದ್ದು ಮಹತ್ವದ ಸಂಗತಿಯಾಗಿದೆ.

ಕುಟುಂಬ ಕೇಂದ್ರಿತ ನಿಲುವಿನ ಶರಣ ಧರ್ಮದ ಮೂಲಕ ಬಸವಾದಿಗಳು ಕಟ್ಟಲು ಆಶಿಸಿದ್ದು ‘ಮಹಾಮನೆ’ಯನ್ನು; ಮಹಾಮಠವನ್ನಲ್ಲ. ಬಸವಾದಿ ಶರಣರನ್ನು ಕುರಿತು ಹುಟ್ಟಿಕೊಂಡ ಕಾವ್ಯ-ಪುರಾಣಗಳಲ್ಲಿ ಕಾಣಿಸಿಕೊಳ್ಳುವುದು ‘ಮಹಾಮನೆ’ಯ ಚಿತ್ರವೇ. ಅಸಂಖ್ಯಾತ ಶರಣಗಣಗಳು ಶಿವಪೂಜಾ ಸಂಭ್ರಮದಲ್ಲಿ ತೊಡಗಿಸಿಕೊಂಡದ್ದು ಈ ಮಹಾಮನೆಯಲ್ಲೇ; ‘ಮಹಾನುಭಾವ ಪ್ರಸಂಗ’ಗಳೆಂದು ಕರೆಯಲಾದ ಆನುಭಾವಿಕ ಚರ್ಚೆ ಹಾಗೂ ಚಿಂತನೆಗಳನ್ನು ಅಂದಿನ ಶರಣರು ನಡೆಯಿಸಿದ್ದು ಈ ಮನೆಯಲ್ಲೇ. ಕಲ್ಯಾಣ ಕ್ರಾಂತಿಯ ಕೇಂದ್ರವಾದದ್ದು ಈ ಮಹಾಮನೆಯೇ. ಇದು ಸಂಸಾರಿಗಳ ಮನೆಯನ್ನು ಶಿವಯೋಗದ ಮಹಾಮನೆಯನ್ನಾಗಿ ಪರಿವರ್ತಿಸುವ ಪವಾಡ. ಹೀಗೆ ಮನೆಗಳನ್ನು ಮಹಾಮನೆಗಳನ್ನಾಗಿ ಮಾಡಬೇಕೆನ್ನುವುದೆ ಶರಣರ ಹಾಗೂ ಶರಣ ಧರ್ಮದ ಉದ್ದೇಶ. ಮನೆಗಳನ್ನು ಹೀಗೆ ‘ಮಹಾಮನೆ’ಗಳನ್ನಾಗಿ ಮಾಡಬೇಕಾದರೆ ಮನೆಯೊಳಗೆ ನಿಜವಾಗಿಯೂ ಇರಬೇಕಾದ ಮನೆಯೊಡೆಯ ನಿರಂತರವಾಗಿ ಇರುವಂತೆ ನೋಡಿಕೊಳ್ಳಬೇಕು.[3] ಇಲ್ಲದಿದ್ದರೆ ‘ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಸಂದೇಹಕ್ಕೆ ಆಸ್ಪದವಾಗುತ್ತದೆ ಮನೆಯ ಸ್ಥಿತಿ! ಇಂಥ ಆಧ್ಯಾತ್ಮ ರಿಕ್ತತೆಯ ಪ್ರತೀಕವಾದ ಮನೆ, ಮಹಾಮನೆಯಾಗಬೇಕಾದರೆ ಅದರೊಳಗಿನ ಶರಣ, ಸತಿಯಾಗಬೇಕು. ಲಿಂಗ ಪತಿಯಾಗಬೇಕು. ಆ ಮನೆಯೊಳಗಿರುವವರೆಲ್ಲ ಬಂಧುಬಳಗದವರಾಗಬೇಕು. ಇಂಥ ಒಂದು ಸಂಸಾರದ ಕಲ್ಪನೆಯನ್ನು ಶರಣ ಧರ್ಮ ಕಟ್ಟಿಕೊಟ್ಟದ್ದರಿಂದಲೇ, ಶರಣರ ಸೂಳ್ನುಡಿಗಳಾದ ವಚನಗಳೊಳಗಿನ ಸಂಬೋಧನೆಯ ಹಾಗೂ ಸಂವಾದದ ಭಾಷೆ ಪ್ರೀತಿ-ವಿಶ್ವಾಸ-ಬಾಂಧವ್ಯಗಳ ನುಡಿಗಟ್ಟುಗಳಿಂದ ತುಂಬಿಕೊಂಡಿದೆ. ಅವ್ವ, ಅಣ್ಣ, ಅಕ್ಕ, ಅಯ್ಯ ಎಂಬ ಅಕ್ಕರೆಯ ಸಂಬೋಧನೆಗಳು ಶರಣರ ವ್ಯವಹಾರದಲ್ಲಿ ಸಮೃದ್ಧವಾಗಿ ಬಳಕೆಯಾಗುತ್ತ ಅವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರೆಂಬ ಭಾವನೆಯನ್ನು ದೃಢಪಡಿಸುತ್ತವೆ. ಪ್ರಾಸಂಗಿಕವಾಗಿ ಉಲ್ಲೇಖಿಸುವುದಾದರೆ; ‘ಅಕ್ಕ ಕೇಳವ್ವ ನಾನೊಂದ ಕನಸಕಂಡೆ’ ‘ಉದಮದದ ಯೌವನವನೊಳಕೊಂಡ ಸತಿ ನೀನು, ಇತ್ತಲೇಕೆ ಬಂದೆಯವ್ವಾ’, ‘ತೊರೆಯ ಮೀವ ಅಣ್ಣಗಳಿರಾ, ತೊರೆಯಿಂ ಭೋ’, ‘ನಾ ತಿರುಗುವ ರಾಟೆಯ ಕುಲಜಾತಿಯ ಕೇಳಿರಣ್ಣಾ’ -ಇಂಥ ಕೆಲವನ್ನು ಗಮನಿಸಬಹುದು. ಅಷ್ಟೆ ಅಲ್ಲ, ಈ ಶರಣರು ತಮ್ಮ ತಮ್ಮ ಇಷ್ಟದೈವಗಳ ಜತೆಗೆ ಮಾತನಾಡುವ ಕ್ರಮ ಕೂಡ, ಈ ಬಗೆಯ ಬಾಂಧವ್ಯದ ಸ್ಪರ್ಶದಿಂದ ಕೂಡಿದೆ. ದೇವರು ಎಂಬುದು ತಮ್ಮಿಂದಾಚೆಯ ಬಹುದೂರದ ಅಥವಾ ಅತಿ ಎತ್ತರದ ‘ಪರವಸ್ತು’ವೋ, ‘ಪ್ರಭುಶಕ್ತಿ’ಯೋ ಎಂಬಂತೆ ಗೃಹೀತವಾಗದೆ, ದೇವರು ಕೂಡಾ ತಮ್ಮವನೇ, ತಮಗೆ ಹತ್ತಿರದವನೇ, ತಮ್ಮ ಕುಟುಂಬದೊಳಗಿನ ಒಬ್ಬನೇ, ತಮ್ಮ ಅನುಭಾವದ ಗಮ್ಯ ಹೇಗೋ ಹಾಗೆ, ತಮ್ಮ ದೈನಂದಿನ ಬದುಕಿನ ನೆನಹಿನಲ್ಲಿಯೂ ಹಾಸುಹೊಕ್ಕಾದವನು -ಎಂಬ ಆತ್ಮೀಯತೆಯೊಂದು ಶರಣರ ದೈವೀ ವ್ಯವಹಾರದ ಭಾಷೆಯೊಳಗೆ ಪ್ರಕಟವಾಗುತ್ತದೆ: ‘ಕೂಡಲಸಂಗಮದೇವ ಕೇಳಯ್ಯ’ ‘ಅಯ್ಯಾ ನೀನು ಕೇಳಿದರೆ ಕೇಳು, ಕೇಳದಿದ್ದರೆ ಮಾಣು, ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’, ‘ನೀನು ಕಲ್ಲಾದರೆ ನಾನೇನಪ್ಪೆನಯ್ಯಾ’, ‘ನೀನೊಮ್ಮೆ ತನ್ನಂತೆ ಒಡಲುಗೊಂಡು ನೋಡಾ’, ‘ಅಗಮ್ಯ, ಅಪ್ರಮೇಯ, ಅಗೋಚರ ಲಿಂಗವೆ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ’ -ಇಂಥ ಆತ್ಮೀಯ ಸಂಬೋಧನೆಗಳಲ್ಲಿ ಕಾಣುವ ದೇವರು, ಪುರಾಣಗಳ ದೇವರಲ್ಲ, ಶಾಸ್ತ್ರಗಳ ದೇವರಲ್ಲ, ದೇವಸ್ಥಾನಗಳಲ್ಲಿ ಸಾಂಪ್ರದಾಯಿಕವಾಗಿ ಪೂಜೆಗೊಳ್ಳುತ್ತಿದ್ದ ದೇವರಲ್ಲ, ರಾಜ ಮತ್ತು ಪುರೋಹಿತ ಶಾಹಿಯ ಪ್ರತಿನಿಧಿಗಳಾದ ದೇವಸ್ಥಾನಗಳಿಂದ ಬಿಡುಗಡೆಗೊಂಡು ಪ್ರತಿಯೊಬ್ಬ ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಂಡು, ಭಕ್ತನ ಮನೆಯೊಳಗೆ ನೆಲೆಗೊಂಡ ಮನೆಯೊಡೆಯನಾದ ಇಷ್ಟಲಿಂಗವಾದ ದೇವರು. ಶರಣ ಧರ್ಮದ ಆಧ್ಯಾತ್ಮದ ನಿಲುವುಗಳಲ್ಲಿ ಪರಂಪರಾಗತವಾದ ದೇವರ ಕಲ್ಪನೆಗೆ ಒದಗಿದ ಈ ರೂಪಾಂತರವೂ ವಿಶಿಷ್ಟವಾದದ್ದು.

ಮಹಾಮನೆ (ಅಕ್ಟೋಬರ್ ೨೦೦೨)

* * *


[1] ಶ್ರೀ ಎಸ್.ಆರ್. ಗುಂಜಾಳ : ಬಸವಣ್ಣನವರ ವಚನ ಪದ ಪ್ರಯೋಗ ಕೋಶ (೧೯೭೩)

ಪ್ರ. ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ. ಉಳವಿ ರಸ್ತೆ, ಧಾರವಾಡ-೩. ಬಸವಣ್ಣನವರ ಸುಮಾರು ೯೫೦ ವಚನಗಳಲ್ಲಿನ ವಿವಿಧ ನುಡಿಗಟ್ಟುಗಳನ್ನು ಪಟ್ಟಿ ಮಾಡಿರುವ ಈ ಪದಕೋಶದಲ್ಲಿ, ೨೩೦ ವಚನಗಳಲ್ಲಿ ‘ಶರಣ’ ಎಂಬ ಪದ ಹಲವು ಅರ್ಥಚ್ಛಾಯೆಗಳಲ್ಲಿ ಕಾಣಿಸಿಕೊಂಡಿದೆ.

[2] ‘ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ?’
ಈ ಲೋಕದೊಳಗೆ ಮತ್ತೆ ಅನಂತಲೋಕ. ವ. ೧೩೯ (ಬ.ವ.)
‘ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ
ಸತ್ಯವ ನುಡಿವುದೆ ದೇವಲೋಕ, ಮಿಥ್ಯವ ನುಡಿವುದೆ ಮರ್ತ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೇ ನರಕ. ವ. ೨೩೯ (ಬ.ವ.)
‘ಅಯ್ಯಾ’ ಎಂದರೆ ಸ್ವರ್ಗ, ‘ಎಲವೋ ಎಂದಡೆ ನರಕ’ ವ. ೨೪೦ (ಬ.ವ.)
ಪ್ರ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು (೧೯೯೩)

[3] `      ಮನೆಯೊಳಗೆ ಮನೆಯೊಡೆಯ ಇದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ, ಕೂಡಲ ಸಂಗಮದೇವಾ, ಬ.ವ. ೯೭ (ಕ.ಸಂ.ನಿ. ೧೯೯೩)