ಇದು ಹಾದಿ: ಒಂದೊ ಎರಡೋ ಮಿಂಚಿನ ಹೆಜ್ಜೆ, ಅದ-
ರಾಚೆಗೇನಿಹುದೋ ಹೋದವನೆ ಬಲ್ಲ. ಕಲ್ಲು
ಮುಳ್ಳಿನ, ಹಾವು ಚೇಳಿನ ಪರಂಪರೆಯು ಸುತ್ತ !
ಬೆಂಕಿಯ ಬೇಲಿ, ಶೂಲದ ಬಾಗಿಲು ! ಅಲ್ಲೊಂದು
ಅಗ್ನಿಯ ಕುಂಡ, ಇಲ್ಲೊಂದು ವಿಷಪಾತ್ರೆ, ಅತ್ತ
ಕಲ್ಲಿನ ಗಾಣ, ಇತ್ತ ಮುಳ್ಳಿನ ಮಕುಟ, ಮತ್ತೆ
ಸಿಡಿಗುಂಡುಗಳ ಧೂಮಜ್ವಲನದ ಮಾಲೆ-ಇವೇ
ಈ ಹಾದಿಯಲಿ ಕೈಮರ ! ಸಾಸಿರಕೆ ಒಬ್ಬರಿ-
ದ್ದಿಹರು ಸಾಸಿಗರಿಲ್ಲಿ ನಡೆದು ಗುರಿ ಕಂಡವರು,
ತಮ್ಮತನವನು ತೇದು ಪರಹಿತವ ತಂದವರು.
ಬೇಕೆ ನಿನಗೀ ಹಾದಿ ? ಕೆಚ್ಚಿಹುದೆ ಎದೆಯಲ್ಲಿ?
ನಚ್ಚಿಹುದೆ ಸತ್ವದಲಿ ಮತ್ತೆ ಶಿವಲೀಲೆಯಲಿ ?
ಬಲು ನೇರ ಬಲು ಧೀರ, ಬಲು ಹರಿತ ಶರಣಪಥ
ಪಾರ್ಥಸಾರಥಿಯಿರಲು ನಡೆಸಿಬಿಡು ನಿನ್ನ ರಥ !