ಹನ್ನೆರಡನೆಯ ಶತಮಾನದಂದು ಕರ್ನಾಟಕದ ಕಲ್ಯಾಣ ಕೇಂದ್ರದಲ್ಲಿ ಸಂಭವಿಸಿದ ಸಾಮಾಜಿಕ ಧಾರ್ಮಿಕ ಸ್ವರೂಪದ ಶರಣ ಧರ್ಮ  ಎನ್ನುವುದು ಅಂದಿನ ಸಮಾಜದ ವಿವಿಧ ಸ್ತರಗಳ ಜನಶಕ್ತಿಯನ್ನು ಮೊಟ್ಟ ಮೊದಲ ಬಾರಿಗೆ ಸಂಘಟಿಸಿ ಒಂದು ವೈಚಾರಿಕ ಸ್ಫೋಟವನ್ನು ತಂದ ಅಪೂರ್ವವಾದ ಐತಿಹಾಸಿಕ ಘಟನೆಯಾಗಿದೆ. ಅಂದು ಬಸವಾದಿ ಶರಣರು ಯಾವ ಒಂದು ಕ್ರಾಂತಿಯನ್ನು ಕರ್ನಾಟಕದ ಚೌಕಟ್ಟಿನಲ್ಲಿ ಮಾಡಿದರೋ ಅದು ಇಂದಿಗೂ ಅನೇಕಾಂಶಗಳಲ್ಲಿ ನಮಗೆ ಪ್ರಸ್ತುತವಾಗಿದೆ ಅನ್ನುವುದೇ ಈ ಮಹಾಪ್ರಯೋಗದ ಮೌಲಿಕತೆಗೆ ಸಾಕ್ಷಿಯಾಗಿದೆ. ಅದನ್ನು ಮಾಡಿದವರು ನಮ್ಮ ನಿಮ್ಮಂತೆ ಬಾಳಿ ಬದುಕಿದ ಮನುಷ್ಯರೇ ಹೊರತು ಕೈಲಾಸದಿಂದ ಇಳಿದು ಬಂದ ದೇವಾನುದೇವತೆಗಳಲ್ಲ. ಅಂದಿನ ಈ ಮನುಷ್ಯರು ತಮ್ಮ ಸಮಕಾಲೀನರಾದ ಮನುಷ್ಯರಿಗಾಗಿ, ಮನುಷ್ಯರ ಜತೆಗೆ ತಮ್ಮನ್ನು ಸಂಗಡಿಸಿಕೊಂಡು ತೀವ್ರವಾಗಿ ಸ್ಪಂದಿಸಿದ್ದರಿಂದ, ಇರುವ ಹಾಗೂ ಸ್ಥಗಿತಗೊಂಡ ವ್ಯವಸ್ಥೆಯನ್ನು ಬದಲಾಯಿಸಿ ಎಲ್ಲರೂ ಸಮಾನವಾಗಿ ವೈಚಾರಿಕವಾಗಿ ಬದುಕುವುದು ಹೇಗೆ, ಮನುಷ್ಯನನ್ನು ಅವನಿರುವ ಯಥಾಸ್ಥಿತಿಯಿಂದ ಪಾರುಮಾಡಿ ಅವನನ್ನು ನಿಜವಾದ ಹಾಗೂ ಸ್ವತಂತ್ರವಾದ ಮನುಷ್ಯನನ್ನಾಗಿ ಮಾಡುವುದು ಹೇಗೆ-ಎಂಬ ಕಾಳಜಿಗಳಿಂದ, ರೂಪುಗೊಂಡದ್ದು ಶರಣಧರ್ಮ.

ಹನ್ನೆರಡನೆಯ ಶತಮಾನದ ಆ ಕಾಲದಿಂದ ನಾವು ಈಗ ಬಹುದೂರ ಬಂದಿದ್ದೇವೆ. ಅಥವಾ ‘ಮುಂದುವರಿದಿದ್ದೇವೆ.’ ಹೀಗೆ ‘ಮುಂದುವರಿದ’ ಈ ಕಾಲದವರಾದ ನಮಗೆ ಎಂಟುನೂರು ವರ್ಷಗಳ ಹಿಂದಿನ ಕಾಲದ ಶರಣರ ವಿಚಾರಗಳು ಎಷ್ಟು ಪ್ರಸ್ತುತ ಎಂದು ಕೇಳಿಕೊಳ್ಳುವುದು ಸಹಜವಾದರೂ, ಸರಿಯಾಗಿ ವಿಚಾರ ಮಾಡಿದಲ್ಲಿ, ನಾವು ನಿಜವಾಗಿಯೂ ಆ ಕಾಲಕ್ಕಿಂತ ‘ಆಂತರಂಗಿಕವಾಗಿ’ ಅಷ್ಟೇನೂ ಮುಂದುವರೆದಿದ್ದೇವೆ ಎಂದು ಹೇಳಿಕೊಳ್ಳುವ ಧೈರ‍್ಯ ನಮಗಿಲ್ಲ. ಮೇಲೆ ನಾಗರಿಕರಾಗೇನೋ ಮುಂದುವರಿದಂತೆ ತೋರಿದರೂ, ಒಳಗಿನ ಮನುಷ್ಯ ಅಷ್ಟೇನೂ ಬದಲಾಗಿದ್ದಾನೆ ಎಂದು ಹೇಳಲು ಬಾರದು.

ನಿಜ, ನಾವೀಗ ಇಪ್ಪತ್ತನೆಯ ಶತಮಾನದ ವಿಜ್ಞಾನಯುಗದಿಂದ ಇಪ್ಪತ್ತೊಂದನೆ ಶತಮಾನದೊಳಕ್ಕೆ ಕಾಲಿಡುವ ಮಹತ್ವದ ಕಾಲಘಟ್ಟದಲ್ಲಿ ನಿಂತಿದ್ದೇವೆ. ಇಪ್ಪತ್ತನೆಯ ಶತಮಾನ ಈ ಜಗತ್ತಿನ ಬದುಕಿನಲ್ಲಿ ಮಹತ್ವದ ಪಲ್ಲಟಗಳನ್ನು ತಂದಿದೆ. ಅನೂಹ್ಯವಾದ ವೈಜ್ಞಾನಿಕ ಸಾಹಸಗಳಿಂದಾಗಿ  ಮನುಷ್ಯನ ‘ನಾಗರಿಕತೆ’ಯಲ್ಲಿ ವಿಶೇಷವಾದ ಪ್ರಗತಿಯಾಗಿದೆ. ಆದರೆ ವಿಜ್ಞಾನದ ಸವಲತ್ತುಗಳನ್ನು ನಮ್ಮ ಸುಖ ಸೌಕರ್ಯಗಳಿಗಾಗಿ ಪಡೆದುಕೊಳ್ಳುವುದರಲ್ಲಿ ನಾವು ತಾಳಿದ ಆಸಕ್ತಿಯನ್ನು ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವ ವಿಚಾರದಲ್ಲಿ ನಾವು ತೋರಲಿಲ್ಲ. ಹೀಗಾಗಿ ಸಾಂಪ್ರದಾಯಿಕವಾದ ಅನೇಕ ಅವೈಚಾರಿಕ ಸಂಗತಿಗಳು ಇಂದಿಗೂ ನಮ್ಮ ಬದುಕನ್ನು ಗುತ್ತಿಗೆ ಹಿಡಿದುಕೊಂಡಿವೆ. ಮತ್ತೊಂದೆಡೆ ಈ ಶತಮಾನದಲ್ಲಿ ಭಾರತದ ಜನಶಕ್ತಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಂಘಟಿತಗೊಂಡು ತನ್ನ ಸಂವಿಧಾನದಲ್ಲಿ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಇತ್ಯಾದಿಗಳನ್ನು ಬದುಕಿನ ಮೌಲ್ಯಗಳೆಂದು ಘೋಷಿಸಿಕೊಂಡರೂ, ಸಮಕಾಲೀನ ‘ರಾಜಕಾರಣ’ ಈ ಎಲ್ಲವನ್ನೂ ಹೇಗೆ ಅಪಮೌಲ್ಯೀಕರಣಗೊಳಿಸುತ್ತ ವಿಜೃಂಭಿಸುತ್ತಿದೆ ಅನ್ನುವುದನ್ನು ನೋಡಿದರೆ ಗಾಬರಿಯಾಗುತ್ತದೆ. ದೇಶದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ   ಪರಿಸರ ನಾಶದ ತಲ್ಲಣಗಳು, ಧಾರ್ಮಿಕ ಮೂಲಭೂತವಾದಿಗಳ ಅಬ್ಬರಗಳು, ಭಿನ್ನಾಭಿಪ್ರಾಯಗಳನ್ನು ಗೌರವಿಸದೆ ತನ್ನದೇ ಸರಿ ಎಂದು ವಾದಿಸುವ ಅಸಹನೆ, ಕೆಳವರ್ಗದವರ ಮೇಲೆ ಮೇಲ್‌ವರ್ಗದವರಿಂದ ನಿರಂತರವೂ ನಡೆಯುತ್ತಿರುವ ಹಲ್ಲೆ ಹಾಗೂ ಶೋಷಣೆಗಳು -ಇತ್ಯಾದಿಗಳನ್ನು   ನೋಡಿದರೆ, ಸಮಾನತೆ ಸಹೋದರತೆ ಸಹಿಷ್ಣುತೆ ಸಾಮಾಜಿಕ ನ್ಯಾಯ ಇಂಥ ಮಾತುಗಳಿಗೆ ಏನಾದರೂ ಅರ್ಥ ಉಂಟೆ ಎಂದು ಅನ್ನಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಾವು ಹೊರಳಿ ನೋಡಿದರೆ ಎಂಟು ನೂರು ವರ್ಷಗಳ ಹಿಂದೆ ಬಸವಾದಿ ಶರಣರು ಕರ್ನಾಟಕ ಕೇಂದ್ರದಲ್ಲಿ ನಡೆಯಿಂದ ಸಾಧಿಸಿದ ವೈಚಾರಿಕ ಕ್ರಾಂತಿ ಎಷ್ಟು ಮಹತ್ವದ್ದು ಹಾಗೂ ಎಷ್ಟು ಪ್ರಸ್ತುತವಾದದ್ದು ಎಂದು ಅನ್ನಿಸದೆ ಇರದು.

ಆದರೆ ಗಮನಿಸಬೇಕಾದ ಅಂಶವೊಂದಿದೆ: ಯಾವ ಧರ್ಮದ ಎಲ್ಲ ಅಂಶಗಳೂ ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಹೇಳಲು ಬರುವುದಿಲ್ಲ, ಮತ್ತೆ ಮತ್ತೆ ಸ್ಥಗಿತಗೊಳ್ಳುವುದೇ ಎಲ್ಲ ಧರ್ಮಗಳ ಲಕ್ಷಣವಾಗುವುದರಿಂದ ಮತ್ತೆ ಮತ್ತೆ ಅದನ್ನು ‘ಜಂಗಮ’ ಅಥವಾ ಚಲನಶೀಲಗೊಳಿಸುವ ಪ್ರಯತ್ನಗಳು ನಡೆಯಬೇಕು. ಶರಣಧರ್ಮದ ಎಷ್ಟೋ ಅಂಶಗಳು ಇಂದಿನ ಬದುಕಿಗೆ ಅಪ್ರಸ್ತುತವಾಗಿವೆ; ಎಷ್ಟೋ ಸಂಗತಿಗಳು ಅಪವ್ಯಾಖ್ಯಾನಗೊಂಡಿವೆ. ಆದರೂ ಶರಣ ಧರ್ಮದ ಮಹತ್ವದ ವಿಚಾರಗಳು ಈ ಹೊತ್ತಿಗೆ ಮಾತ್ರವಲ್ಲ, ಎಲ್ಲ ಕಾಲಕ್ಕೂ ಪ್ರಸ್ತುತವಾಗಬಲ್ಲ ಮಹತ್ವವನ್ನು ಪಡೆದುಕೊಂಡಿವೆ ಅನ್ನುವುದು ಹರ್ಷದಾಯಕವಾದ ವಿಚಾರವಾಗಿದೆ.

ಧರ್ಮ ಹಾಗೂ ದೇವರ ಕಲ್ಪನೆಗಳು ಮುಖ್ಯವಾಗಿ ಮನುಷ್ಯನ  ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳು. ಆದ ಕಾರಣ ಮನುಷ್ಯ  ಒಬ್ಬ ವ್ಯಕ್ತಿಯಾಗಿ, ಕುಟುಂಬದ ಜೀವಿಯಾಗಿ ಸಮಾಜ ಒಂದರ ಸದಸ್ಯನಾಗಿ ಬದುಕಬೇಕಾದರೆ ಯಾವ ಯಾವ ಲೌಕಿಕ, ನೈತಿಕ ಮತ್ತು ಆಧ್ಯಾತ್ಮಿಕ ವಿಚಾರಗಳೂ ನಂಬಿಕೆಗಳು ನಿಲುವುಗಳೂ ಅಗತ್ಯವೋ ಅವನ್ನೆಲ್ಲ ರೂಪಿಸುವ ಒಂದು ಶಕ್ತಿಯೇ ಧರ್ಮ. ಅಂದರೆ ಮೊದಲು ಅದು ಒಳ್ಳೆಯ ಸಾಮಾಜಿಕ ಮನುಷ್ಯನನ್ನು ನಿರ್ಮಾಣ ಮಾಡಬೇಕು. ಯಾಕೆಂದರೆ ‘Religion is Man making’. ಹಾಗಾದಾಗ ಅದು ಎಲ್ಲ ವರ್ಗಗಳ ಶ್ರೇಯಸ್ಸನ್ನು ಸಾಧಿಸುವಂತಾಗುತ್ತದೆ. ಇದು ಒಂದು ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿ. ಎಲ್ಲರ ಶ್ರೇಯಸ್ಸನ್ನು ಸಾಧಿಸಬೇಕಾದರೆ ಒಂದು ಸಮಾಜದ ಎಲ್ಲರನ್ನೂ ತನ್ನವರೆಂದೂ ಸಮಾನರೆಂದೂ ಪರಿಗಣಿಸುವ ಉದಾರತೆ ಬೇಕು. ಮತ್ತು ಸಾಮಾಜಿಕ ತಾರತಮ್ಯಗಳ ಹಿಂದಿರುವ ಕಾರಣಗಳನ್ನು ಪ್ರಶ್ನಿಸುವ ಪ್ರತಿಭಟಿಸುವ ವೈಚಾರಿಕತೆ ಬೇಕು. ಈ ಮೂರು ಏಕಕಾಲಕ್ಕೆ ಕಾಣಿಸಿಕೊಂಡದ್ದು ಕರ್ನಾಟಕದ ಪ್ರಮುಖ ಧರ್ಮವಾದ, ಭಾರತದ ವಿಶಿಷ್ಟ ಧರ್ಮವಾದ ಶರಣಧರ್ಮದಲ್ಲಿ. ಅದಮ್ಯವಾಗಿ, ಜೀವನವನ್ನು ಪ್ರೀತಿಸುವ, ವರ್ಣಭೇದ, ವರ್ಗಭೇದ, ಲಿಂಗಭೇದಗಳನ್ನು ನಿರಾಕರಿಸುವ, ವೈಚಾರಿಕ ಎಚ್ಚರದಲ್ಲಿ ತನ್ನ ಅಂತರಂಗ- ಬಹಿರಂಗಗಳನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಮತ್ತು ಆ ಪರಾತ್ಪರದ ಶರಣನಾಗುವುದರಲ್ಲಿಯೇ ಸಾರ್ಥಕತೆಯಿದೆ ಎಂದು ನಂಬುವ ನವಮಾನವ ನಿರ್ಮಿತಿಯ ಪರಿಣಾಮವೆ ಶರಣಧರ್ಮ.

ಈ ದಿನ ಅನೇಕ ಮಹತ್ವದ ಚಳುವಳಿಗಳಲ್ಲಿ ‘ಜಾತಿವಿನಾಶ ಚಳುವಳಿ’ಯೂ ಒಂದು. ಗಾಂಧಿ, ಅಂಬೇಡ್ಕರ್, ಲೋಹಿಯಾ ಇತ್ಯಾದಿ ಮಹಾನ್ ವ್ಯಕ್ತಿಗಳ ವಿಚಾರಧಾರೆಯಿಂದ ಸ್ಫೂರ್ತಿಗೊಂಡ ಅನೇಕ ಸಂಘಟನೆಗಳೂ ಹಾಗೂ ಬುದ್ಧಿಜೀವಿ ತಂಡಗಳೂ ಜಾತಿ-ವಿನಾಶ ಆಂದೋಲನವನ್ನು ಹಮ್ಮಿಕೊಂಡಿವೆ. ಹಾಗೂ ಈ ಜಾತಿ ವಿನಾಶಕ್ಕೆ ಅಂತರ ಜಾತಿಯ ವಿವಾಹಗಳು ಬಹುಮುಖ್ಯವಾದ ಸಾಧನೆಗಳೆಂದು  ಅವುಗಳನ್ನು ಪ್ರೋತ್ಸಾಹಿಸುತ್ತಿವೆ. ಅದರೆ ಹನ್ನೆರಡನೆಯ ಶತಮಾನದಷ್ಟು ಹಿಂದೆ ಬಸವಾದಿ ಶರಣರು ಈ ದಿಕ್ಕಿನಲ್ಲಿ ನಡೆಯಿಸಿದ ಪ್ರಯತ್ನಗಳೂ, ಅವರ ವಿಚಾರಗಳೂ ಹಾಗೂ ಪ್ರಯೋಗಗಳೂ ಎಷ್ಟು ಮಹತ್ವದವುಗಳೆಂಬುದನ್ನು ನಮ್ಮಇಂದಿನ ಸುಧಾರಕರೂ ಚಳುವಳಿಗಾರರೂ ಗಮನಿಸುವುದು  ಅಗತ್ಯವಾಗಿದೆ.

ಶರಣ ಧರ್ಮ ಮುಖ್ಯವಾಗಿ ವಿರೋಧಿಸಿದ್ದು ಹಿಂದೂ ಧರ್ಮದ ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯನ್ನು. ಮೇಲೆ ಮಾತ್ರ ‘ಸರ್ವೇಜನಾ ಸುಖಿನೋ ಭವಂತು’, ‘ಸರ್ವಂ ಖಲ್ವಿದಂ ಬ್ರಹ್ಮಾ’ ಎಂಬ ಹುಸಿಘೋಷಣೆಗಳಿಂದ ಜಗತ್ತನ್ನು ಮೋಸಗೊಳಿಸುತ್ತ, ಒಳಗೆ ಮಾತ್ರ ಚಾತುರ್ವರ್ಣ ಪದ್ಧತಿಯನ್ನು ಬಲವಾಗಿ ಸಮರ್ಥಿಸುತ್ತಾ ಹಾಗೂ ಉಳಿಸಿಕೊಳ್ಳುತ್ತ ಬಂದ ಹಿಂದೂ ಧರ್ಮದ ತಂತ್ರವನ್ನು ವಚನಕಾರರೂ ಅತ್ಯಂತ ತೀವ್ರವಾಗಿ ಪ್ರತಿಭಟಿಸಿದರು. ಹಿಂದೂ ಧರ್ಮಕ್ಕೆ ಕಾಲದಿಂದ ಕಾಲಕ್ಕೆ ಭಾಷ್ಯಗಳ ಮೇಲೆ ಭಾಷ್ಯವನ್ನು ಬರೆದ ಆಚಾರ್ಯರಾರೂ ಈ ಶ್ರೇಣೀಕರಣ ವ್ಯವಸ್ಥೆಯನ್ನು, ಬುದ್ಧನ ಹೊರತು, ಪ್ರಶ್ನಿಸಲೇ ಇಲ್ಲ. ಯಾರ‍್ಯಾರು ಯಾವ್ಯಾವುದು ಎಲ್ಲೆಲ್ಲಿ ಇರಬೇಕೋ ಅದು ಅಲ್ಲಲ್ಲೆ ಇರುವುದೇ ಧರ್ಮ ಎಂದು ವ್ಯಾಖ್ಯಾನ ಬರೆಯುವುದರಲ್ಲಿಯೆ ಈ ಮಹಾ ಆಚಾರ್ಯರುಗಳ ‘ವೈಚಾರಿಕತೆ’ಯು ಪರ‍್ಯಾವಸಾನಗೊಂಡಿತು. ಯಾಕೆಂದರೆ ಮನುಷ್ಯರೆಲ್ಲ ಮೂಲತಃ ಸಮಾನರು  ಅನ್ನುವುದನ್ನು ಒಪ್ಪುವ ಒಂದು ಉದಾರತೆಯೆ ಅವರಲ್ಲಿರಲಿಲ್ಲ. ಹೀಗೆ ಯಾವ ಧಾರ್ಮಿಕ ನಿಲುವು ಕೆಲವರ ಹಿತಾಸಕ್ತಿಗಳನ್ನು ಮಾತ್ರ ಕಾಯುತ್ತ ಇನ್ನುಳಿದ ಸ್ತರಗಳವರನ್ನು ಶೋಷಣೆಗೆ ಗುರಿಪಡಿಸುತ್ತ ಅಮಾನವೀಯವಾಗಿದೆಯೋ ಅದನ್ನು ಸ್ಫೋಟಿಸಿ ‘ವರ್ಣಸಂಕರ’ದ ಮೂಲಕ ಈ ಶ್ರೇಣೀಕರಣ ವ್ಯವಸ್ಥೆಯನ್ನು ಮುರಿಯುವ ಮೊದಲ ಕಾರ‍್ಯ ನಡೆದದ್ದು ಶರಣಧರ್ಮದಿಂದ. ಈ ಬಗೆಯ ಸ್ಫೋಟಕ್ಕೆ ಬಸವಣ್ಣನವರು ಬಳಸಿಕೊಂಡದ್ದು ಅಂದಿನ ವರ್ಣವ್ಯವಸ್ಥೆಯ ನಾಲ್ಕನೆ (ಶೂದ್ರ) ಹಾಗೂ ಐದನೆ(ಅಂತ್ಯಜ) ಜನಶಕ್ತಿಯನ್ನು; ಅಂದರೆ ಅಂದಿನ  ಬಹುಸಂಖ್ಯಾತ ಕಸುಬುದಾರರನ್ನು, ಕೃಷಿಕಾರರನ್ನು, ನಿರ್ಲಕ್ಷಿತರನ್ನು, ಶೋಷಿತರನ್ನು ಮತ್ತು ಮಹಿಳೆಯರನ್ನು. ಸಿದ್ಧರಾಮ, ಅಲ್ಲಮಪ್ರಭು, ಚೆನ್ನಬಸವ, ಮಹಾದೇವಿ- ಹೀಗೆ ಇನ್ನೂ ಕೆಲವರನ್ನು ಹೊರತುಪಡಿಸಿದರೆ ಇನ್ನುಳಿದವರೆಲ್ಲ ಕೆಳವರ್ಗದವರೆ, ಅದರಲ್ಲೂ ಬಹುತೇಕ ಅನಕ್ಷರಸ್ಥರೆ. ಇಂಥ ಒಂದು ಸಮುದಾಯವನ್ನು ನವಸಮಾಜ ನಿರ್ಮಾಣದ ವೈಚಾರಿಕ ಕ್ರಾಂತಿಗೆ ಸಜ್ಜುಗೊಳಿಸಿದ ಕ್ರಮವಂತೂ ಚಾರಿತ್ರಿಕವಾಗಿ ಅಪೂರ್ವವಾದ ಸಂಗತಿಯಾಗಿದೆ. ಅದಕ್ಕಾಗಿ ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯನ್ನಾಗಿ, ವಿಚಾರದ ಭಾಷೆಯನ್ನಾಗಿ, ಸಂವಹನದ ಭಾಷೆಯನ್ನಾಗಿ ರೂಢಿಸಿದ್ದರಿಂದ ಕನ್ನಡ ಭಾಷೆಗೆ ದೊರೆತ ಸೃಜನಶೀಲತೆ ಹಾಗೂ ತತ್ಪರಿಣಾಮವಾದ ‘ವಚನ’ ಎಂಬ ಅಭಿವ್ಯಕ್ತಿ ಪ್ರಕಾರದ ಆವಿಷ್ಕಾರಗಳು-ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ, ಜಾಗತಿಕ ಸಾಹಿತ್ಯಕ್ಕೆ ಅಪೂರ್ವವಾದ ಕೊಡುಗೆಗಳಾಗಿವೆ. ಕನ್ನಡನಾಡಿನಲ್ಲಿ ಕನ್ನಡದ ಸ್ಥಾನಮಾನಗಳಿಗೆ ಹಾಗೂ ಕನ್ನಡ ಮಾಧ್ಯಮಕ್ಕೆ ಹೋರಾಡುವ ದುಃಸ್ಥಿತಿಯಲ್ಲಿರುವ ನಮಗೆ ಕನ್ನಡ ಮಾಧ್ಯಮವು ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದರೆ ಅದು ಹನ್ನೆರಡನೆಯ ಶತಮಾನದಲ್ಲಿಯೆ ಎಂಬ ಸಂಗತಿ ದಂಗುಬಡಿಸುತ್ತದೆ.

ಈ ಒಂದು ಸಂಘಟನೆಯಿಂದ ಶರಣಧರ್ಮ ಪರಂಪರಾಗತವಾದ ವರ್ಣವ್ಯವಸ್ಥೆಯನ್ನು ಮುರಿದು ‘ವರ್ಣಸಂಕರ’ದ ಮೂಲಕ ಹೊಸ ಧಾರ್ಮಿಕ ನೆಲೆಯೊಂದನ್ನು ನಿರ್ಮಾಣ ಮಾಡಿತು. ‘ಕುಲವನರಸುವರೆ ಶರಣರಲ್ಲಿ ವರ್ಣಸಂಕರವಾದ ಬಳಿಕ’ ಎಂದು ಬಸವಣ್ಣನವರು ಕೇಳುವ ಪ್ರಶ್ನೆ ಈ ನೆಲೆಯದೆ. ಹಿಂದೂ ಧರ್ಮದ ಪ್ರಕಾರ ‘ವರ್ಣ ಸಂಕರ’ ಒಂದು ಮಹಾ ಅನಾಹುತ. ವರ್ಣಸಂಕರದಿಂದ ಧರ್ಮಗ್ಲಾನಿ. ಆದರೆ ಬಸವಣ್ಣನವರಿಗೆ ಅದು ಜಾತಿಯ ಶ್ರೇಣೀಕರಣವನ್ನು ಮುರಿದು ಸಮಾನತೆಯನ್ನು ನೆಲೆಗೊಳಿಸುವ ಸಾಧನ. ಅವರೇ ನಿಂತು ಮಾಡಿಸಿದ ‘ಅಂತರ್ಜಾತೀಯ ವಿವಾಹ’ ಈ ವರ್ಣಸಂಕರ ಪ್ರಯತ್ನದಲ್ಲಿ ಒಂದು ದಿಟ್ಟ ಹೆಜ್ಜೆ.

ದೇವಸ್ಥಾನಗಳನ್ನು ನಿರಾಕರಿಸಿ, ದೇವರ  ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಳಿಸಿ, ದೇಹವನ್ನೇ ದೇವಾಲಯವನ್ನಾಗಿ ಮಾಡಿದ, ಪುರೋಹಿತಶಾಹಿ ಕಲ್ಪಿಸಿದ ಸ್ವರ್ಗ ನರಕಾದಿ ಶೋಷಕ ತಂತ್ರಗಳನ್ನು ಖಂಡಿಸಿ ಇಹದ ಬದುಕಿನ ಮೇಲಿನ ಪ್ರೀತಿಯನ್ನು ರೂಢಿಸಿದ, ಅನೇಕ ಅವೈಚಾರಿಕವಾದ ಆಚರಣೆಗಳನ್ನೂ ಮೂಢನಂಬಿಕೆಗಳನ್ನು ತಿರಸ್ಕರಿಸಿದ, ವೃತ್ತಿಯ ತಾರತಮ್ಯಗಳ ಮೇಲಿನಿಂದ ಮನುಷ್ಯನ ಸಾಮಾಜಿಕ ಅಂತಸ್ತನ್ನು ಪರಿಗಣಿಸದೆ ಕಾಯಕವೆಲ್ಲವೂ ಪೂಜ್ಯವೆಂದು, ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರೂ ಒಂದೇ ಎಂಬೆ’ ಎಂಬ ನಿಲುವನ್ನು ಪ್ರತಿಪಾದಿಸುತ್ತ ಶ್ರೀ ಸಾಮಾನ್ಯರಲ್ಲಿ ವೈಚಾರಿಕತೆಯನ್ನು ಪ್ರತಿಭಟನೆಯ ಕೆಚ್ಚನ್ನೂ, ಆತ್ಮಗೌರವವನ್ನೂ ಪ್ರಚೋದಿಸಿದ ಶರಣಧರ್ಮದ ವಿಚಾರಗಳಿಗೆ ಸಮಕಾಲೀನರಾದ ನಾವೇ ಅಪ್ರಸ್ತುತರಾಗಿ ಬಿಟ್ಟಿದ್ದೇವೋ ಎನ್ನಿಸುವಂಥ ಸ್ಥಿತಿಯಲ್ಲಿದ್ದೇವೆ.

ಚದುರಿದ ಚಿಂತನೆಗಳು (೨೦೦೦)

* * *