ಶರತ್‌ಚಂದ್ರ – ಬಲು ರಮ್ಯವಾದ ಹೆಸರು. ಬಂಗಾಳಿ ಭಾಷೆಯ ಖ್ಯಾತ ಕಾದಂಬರಿಕಾರರ ಹೆಸರು. ವಂಶದ ಹೆಸರೂ ಕೂಡಿ ಶರತ್‌ಚಂದ್ರ ಚಟ್ಟೋಪಾಧ್ಯಾಯ ಎಂದು ಜನಪ್ರಿಯರಾದರು.

ಹೂಗ್ಲಿ ಜಿಲ್ಲೆಯ ದೇವನಂದಪುರವೆಂಬ ಹಳ್ಳಿಯಲ್ಲಿ ೧೮೭೬ ರಲ್ಲಿ ಹುಟ್ಟಿದರು. ಬಾಲ್ಯದಿಂದಲೇ ಕಡು ಬಡತನದಲ್ಲಿ ಬೆಳೆದು, ಹಣದ ಮುಗ್ಗಟ್ಟಿನ ಕಾರಣ ಜೀವನದ ಉದ್ದಕ್ಕೂ ಕಷ್ಟ ಕಾರ್ಪಣ್ಯ ಅನುಭವಿಸಿದರು. ಹೊಟ್ಟೆಪಾಡಿಗಾಗಿ ಪಡಬಾರದ ಬವಣೆ ಪಡಬೇಕಾಯಿತು.ಇದರಿಂದ ಹೆಚ್ಚಿನ ವಿಧ್ಯಾಭ್ಯಾಸ ಮುಂದುವರಿಸಲಾಗಲಿಲ್ಲ.

ಬಾಲ್ಯ

ಬಾಲ್ಯವನ್ನು ಶರತ್‌ಚಂದ್ರರು ಬಾಗಲಪುರ ಜಿಲ್ಲೆಯಲ್ಲಿ ಮಾವನ ಆಶ್ರಯದಲ್ಲಿ ಕಳೆದರು. ಇಲ್ಲೇ ಸ್ವಲ್ಪ ಪ್ರಾಥಮಿಕ ಶಿಕ್ಷಣ ಪಡೆದು ಆಗಿನ ಮಿಡ್ಲ್ ವರ್ನಾಕ್ಯುಲರ್ ಪರೀಕ್ಷೆಯ ನಂತರ ಎಂಟ್ರೆನ್ಸ ವರ್ಗವನ್ನೂ ದಾಟಿ ಇಂಟರಮಿಡಿಯಟ್ ತರಗತಿಗೆ ಪ್ರವೇಶಿಸಿದರು. ಆದರೆ ಪರೀಕ್ಷೆಗೆ ಕೂಡಲು ಶುಲ್ಕ ಇಪ್ಪತ್ತು ರೂಪಯಿಗಳು ಸಿಕ್ಕದೆ ಅಷ್ಟಕ್ಕೇ ಅವರ ವಿದ್ಯಾಭ್ಯಾಸ ಕೂನೆಗೂಂಡಿತು. ಇದೇ ಸಮಯದಲ್ಲಿ ತಾಯಿಯೂ ತೀರಿಕೂಂಡರು.

ವಿದ್ಯಾರ್ಥಿಯಾಗಿದ್ದಾಗ ಆಟದಲ್ಲಿ ಅಗ್ರಗಣ್ಯರಾಗಿದ್ದರು. ಮಧುರವಾಗೊ ಹಾಡುತ್ತಿದ್ದರಲ್ಲದೆ ಇಂಪಾಗಿ ಕೊಳಲನ್ನು ನುಡಿಸಉತ್ತಿದ್ದರು. ಅವರಿಗೆ ಮೃದಂಗ ನುಡಿಸುವುದೂ ತಿಳಿದಿತ್ತು. ಚಿತ್ರಕಲೆಯನ್ನಂತೂ ಯಾವ ಗುರುವಿನ ಬಳಿಯೂ ಅಭ್ಯಾಸ ಮಾಡದೆ ಕಲಿತಿದ್ದರು. ಬಂದೂಕು ಹಿಡಿದು ಬೇಟೆಯಾಡುವುದೂ ಪ್ರಿಯವಾಗಿತ್ತು. ಕಾಲೇಜಿನಲ್ಲಿ ಓದುತ್ತಿರುವ್ವಾಗ ಸೋದರಮಾವನ ಮಕ್ಕಳಿಗೆ ಪಾಠ ಹೇಳಿಕೂಟ್ಟು, ಅನಂತರ ತಮ್ಮ ಪಾಠ-ಪ್ರವಚನಗಳಲ್ಲಿ ತೋಡತ್ತಿದ್ದರು.

ಬಾಳಿನ ಶಾಲೆಯಲ್ಲಿ ಕಲಿತದ್ದು

ತಂದೆ-ತಾಯಿಯಿಂದ ಶರತ್‌ಚಂದ್ರರಿಗೆ ಆಸ್ತಿಯೇನು ಸಿಕ್ಕಲಿಲ್ಲ. ಅವರ್ದು ಅಲೆಯುವ ಸ್ವಭಾವ. ಹಲವಾರು ಊರುಗಳನ್ನು ಸುತ್ತಿದರು. ಇದರಿಂದ ಹಲವು ಬಗೆಯ ಜನರನ್ನು ಕಾಣುವ ಮತ್ತು ಹಲವು ಬಗೆಯ ಅನುಭವಗಳನ್ನು ಪಡೆಯುವ ಅವಕಾಶವಾಯಿತು. ವಿವಿಧ ಸ್ವಭಾವದವರನ್ನು ಕಂಡರು. ಯಾರನ್ನೂ ತಿರಸ್ಕಾರದಿಂದ ಕಾಣಬಾರದು. ಎಲ್ಲರಲ್ಲೂ ಪ್ರೀತಿ ವಿಶ್ವಾಸವಿಡಬೇಕು. ಯಾರನ್ನು ತಿರಸ್ಕತರೆಂದು, ನಮಗಿಂತ ಕೀಳೆಂದು ಭಾವಿಸುತ್ತೇವೂ ಅಂತಹವರಿಗೂ ಹೃದಯವಿರುತ್ತದೆ. ಅಂತಹವರಿಗೂ ನಮಗಿಂತ ಉನ್ನತ ಸ್ಥಾನದಲ್ಲಿ ಕೂಡಬಲ್ಲ ಸಾಮರ್ಥ್ಯ, ಆಶೆ-ಆಕಾಂಕ್ಷೆ ಇರಬಹುದು ಎಂಬ ತಿಳಿವಳಿಕೆ ಪಡೆದರು. ಈ ಸಿದ್ದಾಂತಗಳು ಸಾಧಾರಣವೆಂದು ತೋರಿದರೂ ಜೀವನದಲ್ಲಿ ಇವುಗಳನ್ನು ಆಚರಣೆಗೆ ತಂದರೇ ಇವುಗಳ ಬೆಲೆ ಸ್ಪಷ್ಟವಾಗಿ ತಿಳಿದು ಬರುವುದು. ಮಾನವತೆಯ ಈ ಮಂತ್ರ ಕರಗತ ಮಾಡಿಕೂಂಡರು ಶರತ್‌ಚಂದ್ರರು. ಸಮಾಜದಲ್ಲಿ ಯಾರು ಹಿಂಸೆ ಮತ್ತು ಕಿರುಕುಳಕ್ಕೆ ತುತ್ತಾಗುತ್ತಿದ್ದರೋ ಅಂಥವರ ಜೀವನವನ್ನು ಆಳವಾಗಿ ಅರ್ಥಮಾಡಿಕೂಂಡು ಅನುಕಂಪ ತೋರಿಸುತ್ತಿದ್ದರು. ಅಂತಹ ದೀನದಲಿತರ ಬಗ್ಗೆ ದಯೆಯಿಲ್ಲದೇ ನಡೆದುಕೂಂಡ ಸಮಾಜದ ಮೇಲಿ ಅಸಮಾಧಾನಗೂಂಡು, “ಯಾವ ಸಮಾಜಕ್ಕೆ ಕ್ಷಮೆ ತೋರುವುದು ಗೊತ್ತಿಲ್ಲವೋ ಯಾರೂಬ್ಬರ ಸುಖ-ದುಃಖ ಗ್ರಹಿಸುವುದನ್ನು ಅರಿತಿಲ್ಲವೋ ಅಂತಹ ಸಮಾಜವನ್ನು ಕಟ್ಟಿಕೂಂಡು ನಮಗೇನಾಗಬೇಕಾಗಿದೆ. ನಾವೇಕೆ ಅಂತಹ ಸಮ್ಮಜಕ್ಕೆ ಗೌರವ ತೋರಬೇಕು?” ಎಂದು ರೂಚ್ಚಿಗೆದ್ದು ಪ್ರಶ್ನಿಸಿದ್ದಾರೆ.

ಶರತ್‌ಚಂದ್ರರ ತಂದೆ ಮತಿಲಾಲ್ ಚಟ್ಟೋಪಾಧ್ಯಾಯ ತಾಯಿ ಭುವನಮೋಹಿನಿ. ಮತಿಲಾಲರು ಒಳ್ಳೆಯ ಸಾಹಿತ್ಯ ಪ್ರೇಮಿಗಳಾಗಿದ್ದರು. ಸಣ್ಣ ಕತೆ, ಕಾದಂಬರಿ, ನಾಟಕ.ಕವಿತೆ ಮುಂತಾದ ಎಲ್ಲಾ ಸಹಿತ್ಯ ವಿಭಾಗಗಳಲ್ಲೂ ಕೈ ಆಡಿಸಿದ್ದರು. “ತಂದೆಯಿಂದ ನನಗೆ ಬಂದದ್ದು ಶಾಂತಿ ಇಲ್ಲದ ಮನಸ್ಸು, ಸಾಹಿತ್ಯದಲ್ಲಿ ಗಾಢವಾದ ಆಸಕ್ತಿ ಇಷ್ಟೇ” ಎಂದು ಹೇಳಿದ್ದಾರೆ ಶರತ್‌ಚಂದ್ರರು.

ಮಂದಿರ

ಶರತ್‌ಚಂದ್ರರು ತಮ್ಮ ೧೭ನೆಯ ವಯಸ್ಸಿನಲ್ಲಿ ಕತೆಗಳನ್ನು ಬರೆಯಲು ಆರಂಭಿಸಿದರು. ಆನಂತರ “ಮಂದಿರ” ಎಂಬ ಕತೆಯನ್ನು ಒಂದು ಕಥಾ ಸ್ಪರ್ಧೆಗೆ ಕಳುಹಿಸಿದರು. ಆದರೆ “ಸುರೇಂದ್ರನಾಥ ಗಂಗೂಲಿ” ಎಂಬ ಹೆಸರಿನಲ್ಲಿ ಕಳುಹಿಸಿದರು. ಈ ಕತೆಗೆ ಪ್ರಥಮ ಬಹುಮಾನ ದೊರೆಯಿತು. ಆದರೆ ಜೀವನದ ಜಿಗುಪ್ಸೆಯಿಂದಲೋ ಬಡತನದ ಅಸಹನೀಯತೆಯಿಂದಲೋ ಕತೆ ಬರೆಯುವುದನ್ನು ಹಲವು ದಿನ ನಿಲ್ಲಿಸಿಬಿಟ್ಟರು.

ತಂದೆಯ ಸ್ವಭಾವದಂತೆಯೇ ಶರತಚಂಡ್ರರ ಸ್ವಭಾವವೂ ಚಂಚಲ. ಒಂದು ಕಡೆ ನಿಂತು ಕೆಲಸ ಮಾಡುವ ಪ್ರವೃತ್ತಿ ಅವರದಲ್ಲ. ಶಿಸ್ತಿನ ಜೀವನವೂ ಅಲ್ಲ. ಒಂದು ಕ್ರಮಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಮಾಡುವವರೂ ಅಲ್ಲ. ಒಬ್ಬ ಜಮಿನ್ದಾರರ ಗುಮಸ್ತೆಯಾಗಿ ಕೆಲವು ದಿನ ಕೆಲಸ ಮಾಡಿದರು. ಅದನ್ನು ಬಿಟ್ಟರು. ತಂದೆ ತೀರಿಕೊಂಡ ಮೇಲೆ ಕಲ್ಕತ್ತೆಗೆ ಬಂದರು. ಅಲ್ಲಿಂಡ ರಂಗೂನಿಗೆ ಹೋದರು.

ಬಡೀ ದೀದಿ”

ಶರತ್‌ಚಂದ್ರರು ರಂಗೂನಿಗೆ ಹೋಗುವ ಮೂದಲು ತಮ್ಮೆಲ್ಲಾ ಕೃತಿಗಳ ಹಸ್ತಪ್ರತಿಗಳನ್ನು ಸ್ನೇಹಿತರ ಬಳಿ ಕೂಟ್ಟು ಹೋಗಿದ್ದರು. ಅವುಗಳ ಪೈಕಿ “ಬಡೀ ದೀದಿ” ಎಂಬ ನೀಳ್ಗತೆಯ ಒಂದು ಪ್ರತಿಯನ್ನು ತಮಗೆ ಬಲು ಪ್ರಿಯರೂ ಮಾವನವರು ಆಗಿದ್ದ ಸುರೇಂದ್ರನಾಥರ ಬಳಿ ಬಿಟ್ಟು ಬಂದಿದ್ದರು.

ಆ ದಿನಗಳಲ್ಲಿ ಸರಳಾದೇವಿ ಚೌಧುರಾಣಿ ಎಂಬುವರು “ಭಾರತಿ” ಎಂಬ ಪತ್ರಿಕೆ ನಡೆಸುತ್ತಿದ್ದರು. ಅವರು ಹೆಚ್ಚಾಗಿ ಲಾಹೋರಿನಲ್ಲಿ ಇರುತ್ತ್ದ್ದ ಕಾರಣ ಸಕಾಲಕ್ಕೆ ಪತ್ರಿಕೆ ಹೂರಬರುತ್ತಿರಲ್ಲಿಲ್ಲ. ಆದ್ದರಿಂದ ಆಕೆ ಸಂಪದಕರ ಸ್ಥಾನಕ್ಕೆ ಸುರೇಂದ್ರ ಮೋಹನ ಮುಖ್ಯೋಪಾಧ್ಯಾಯ ಎಂಬುವರನ್ನು ನೇಮಿಸಿಕೂಂಡರು. ಸುರೇಂದ್ರ ಮೋಹನ ವಿಧ್ಯಾವಂತ, ಪ್ರತಿಭಾವಂತರಾಗಿದ್ದುದಲ್ಲದೆ ಶರತ್‌ಚಂದ್ರರ ಸ್ನೇಹಿತರೂ ಆಗಿದ್ದರು. ತಮ್ಮ ಬಳಿ ಶರತ್‌ಚಂದ್ರರು ಬಿಟ್ಟೌ ಹೋಗಿದ್ದ “ಬಡೀ ದೀದಿ” ಯ ಹಸ್ತಪ್ರತಿಯ ನಕಲನ್ನು ಸರಳಾದೇವಿಗೆ ಕೂಟ್ಟರು. ಓದಿ ಮುಗ್ದಳಾದ ಆಕೆ ಕೂಡಲೇ “ಭಾರತಿ” ಯಲ್ಲಿ ಆ ಕಾದಂಬರಿಯನ್ನು ಧಾರವಾಹಿಯಾಗಿ ಪ್ರಕಟಿಸಲು ತಿಳಿಸಿದರು.

“ಬಡೀ ದೀದಿ” ಮೂರು ಭಾಗಗಳಾಗಿ ಪ್ರಕಟವಾಯಿತು. ಆದರೆ ಕಡೆಯ ಪರಿಚ್ಛೇದ ಕಳೆದುಹೋಯಿತು. ಈಗ ಸುರೇಂದ್ರ ಮೋಹನರಿಗೆ ಕಷ್ಟಕ್ಕಿಷ್ಟುಕೊಂಡಿತು. ಏಕೆಂದರೆ “ಭಾರತಿ”ಯಲ್ಲಿ “ಬಡೀ ದೀದಿ” ಓದಿದ್ದ ಓದುಗರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪೇಟೆಗೆ ಮಾರಾಟಕ್ಕೆ “ಭಾರತಿ” ಬಂದ ತಕ್ಷಣ ಪ್ರತಿಗಳು ಬಿಸಿ ದೋಸೆಗಳಂತೆ ಖರ್ಚಾಗಿ ಬಿಡುತ್ತಿದ್ದವು. ಅದನ್ನು ಹೊಗಳಿ ಓದುಗರು ಪತ್ರದ ಮೇಲೆ ಪತ್ರ ಬರೆದಿದ್ದರು. ಆದರೆ ಕಾದಂಬರಿಯ ಕಡೆಯ ಭಾಗೆವೇ ಕಳೆದುಹೋಯಿತಲ್ಲ!.

ಹೀಗೆ ಸುರೇಂದ್ರ ಮೋಹನರಿಗೆ ಬಲು ಸಂದಿಗ್ಧಕ್ಕಿಟ್ಟುಕೊಂಡಿತು. ದೈವವಶಾತ್ ಅವರಿಗೆ ಸುರೇಂದ್ರನಥರ ಜ್ಞಾಪಕ ಬಂದು “ಭಾರತಿ” ಪತ್ರಿಕಯ ಮಾನ ಉಳಿಸಬೇಕೆಂದೂ ಅವರ ಬಳಿ ಇರುವ “ಬಡೀ ದೀದಿ” ಯ ನಕಲು ಪ್ರತಿ ಕಳುಹಿಸಿಕೊಡಬೇಕೆಂದೂ ಪ್ರಾರ್ಥಿಸಿಕೊಂಡು ಪತ್ರ ಬರೆದರು. ಪ್ರಾರ್ಥನೆ ಕೈಗೂಡಿತು. “ಭಾರತಿ”ಯಲ್ಲಿ “ಬಡೀ ದೀದಿ” ಕೊನೆಯ ಪರಿಚ್ಛೇದವೂ ಪ್ರಕಟವಾಗಿ ಮುಕ್ತಾಯಗೊಂಡಿತು.

ಕೋಲಾಹಲ

ಆಗ ಬಂಗಾಳಿ ಸಾಹಿತ್ಯ ಕ್ಷೇತ್ರದಲ್ಲಿ ಕೋಲಾಹಲ ಎದ್ದಿತು. ಏಕೆಂದರೆ ಕೃತಿ ರಚಿಸಿದವರ ಹೆಸರಿರಲಿಲ್ಲ! “ಇಂತಹ ಸುಂದರ, ಉತ್ಕೃಷ್ಟ ಕೃತಿ ರಚಿಸಿದವರು ಯಾರು? ರಚಿಸಬಲ್ಲ ಅಂತಹ ಪ್ರತಿಭೆ, ಶೈಲಿ ಇರುವುದು ಬಂಗಾಳಿ ಸಾಹಿತ್ಯಕ್ಕೊಂದು ನವಯುಗ ನಿರ್ಮಿಸಬಲ್ಲ ರವೀಂದ್ರನಾಥ ಠಾಕೂರರಿಗೆ ಮಾತ್ರ” ಎಂದು ಜನರು ಹೇಳಲಾರಂಭಿಸಿದರು. ಏತನ್ಮಧ್ಯೆ “ಬಡೀ ದೀದಿ”ಯ ಪ್ರಥಮ ಭಾಗವನ್ನು “ಭಾರತಿ”ಯಲ್ಲಿ ಓದಿದ “ವಂಗದರ್ಶನ” ದ ಸಂಪಾದಕ ಶೈಲೇಶ್‌ಚಂದ್ರ ಮಜುಮ್‌ದಾರರು ಚಕಿತರಾದರು. ಏಕೆಂದರೆ ಅದರಲ್ಲಿ “ಬಡೀ ದೀದಿ”ಯ ಲೇಖಕನ ಹೆಸರಿರಲಿಲ್ಲ. ಇದರ ಮೇಲೆ ಖ್ಯಾತ ಕವಿ ರವೀಂದ್ರನಾಥ ಠಾಕೂರರು ಇವರೊಂದಿಗೆ ತಾನು ಯಾವ ಕಾದಂಬರಿಯನ್ನೂ ಬರೆಯಲ್ಲು ಕೈ ಹಚ್ಚಿಲ್ಲವೆಂದು ತಿಳಿಸಿದ್ದರು. ಹಾಗಿರುವಾಗ ರವೀಂದ್ರನಾಥರ ಶೈಲಿಯ ಧಾಟಿಯಲ್ಲೇ ರಚನಯಾಗಿರುವ “ಬಡೀ ದೀದಿ” ಕಾದಂಬರಿಯ ಕರ್ತೃವಿನ ಹೆಸರು ಪ್ರಕಟವಾಗದೆ ಗೋಪ್ಯವಾಗಿರುವುದನ್ನು ಮತ್ತು ಸಾಹಿತ್ಯಪ್ರಿಯರೂ “ಬಡೀ ದೀದಿ”ಯನ್ನು ಬರೆದವರು ರವೀಂದ್ರನಾಥರೇ ಎಂದು ಸಮರ್ಥಿಸುತ್ತಿರುವುದನ್ನು ಕಂಡು ಶೈಲೇಶಚಂದ್ರರಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ನೇರವಾಗಿ ರವೀಂದ್ರನಾಥರ ಮನೆಗೆ ಬಂದರು. “ಭಾರತಿ”ಯಲ್ಲಿ “ಬಡೀ ದೀದಿ” ಬರೆದ ನೀವು ನಿಮ್ಮ ಹೆಸರು ಕೊಡದೆ ರಹಸ್ಯವಾಗಿಡುವ ಅಗತ್ಯವೇನು? ಎಂದು ಪ್ರಶ್ನಿಸಿ, ತಮ್ಮ ಕೈಯಲ್ಲಿದ್ದ “ಭಾರತಿ”ಯ ಸಂಚಿಕೆಯನ್ನು ರವೀಂದ್ರನಾಥರ ಮುಂದೆ ಹಿಡಿದರು.

ರವೀಂದ್ರನಾಥರಿಗೆ ಆಶ್ಚರ್ಯವಾಯಿತು. ಕುತುಹಲದಿಂದ “ಬಡೀ ದೀದಿ”ಯಲ್ಲಿ ಪ್ರಕಟನೆಯಾಗಿದ್ದಷ್ಟು ಭಾಗವನ್ನು ಓದಿದರು. ತಲೆದೂಗಿದರು. “ಭೇಷ್ ಬಹಳ ಸೊಗಸಾಗಿ ಬರೆದಿದ್ದಾರೆ. ಯಾರೋ ಪುಣ್ಯಾತ್ಮ. ಸತ್ಯವಾಗಿ ನಾನಂತು ಇದನ್ನು ಬರೆದನನಲ್ಲ. ಬರೆದವರು ಯಾರೇ ಆಗಿರಲಿ, ಆತನೊಬ್ಬ ಸತ್ವಶಾಲಿ ಲೇಖಕ. ಆತನ ಇದೊಂದೇ ಕೃತಿ ಪ್ರಕಟಿಸಿ ತೃಪ್ತಿ ಆಯಿತೆಂದುಕೊಳ್ಳಬೇಡಿ. ಹಾಗೆ ಮಾಡಿದಲ್ಲಿ ಬಂಗಾಳಿ ಸಾಹಿತ್ಯ ಕ್ಷೇತ್ರಕ್ಕೇನು, ಭಾರತೀಯ ಸಾಹಿತ್ಯಕ್ಕೇ ಅಪಾರ ನಷ್ಟ” ಎಂದುಕೊಂಡಾಡಿದರು.

ರಂಗೂನಿನಲ್ಲಿ

“ಬಡೀ ದೀದಿ” ಕಾದಂಬರಿಯಿಂದ ಬಂಗಾಳದಲ್ಲಿ ಕೋಲಾಹಲವನ್ನೇ ಎಬ್ಬಿಸಿದ ಶರತ್‌ಚಂದ್ರರು ರಂಗೂನನ್ನು ತಲುಪಿದರು. ರಂಗೂನಿಗೆ ಬಂದಿಳಿದಾಗ ಕೆದರಿದ “ಕ್ರಾಪು”, ಅಸ್ತವ್ಯಸ್ತವಾಗಿ ಬೆಳೆದಿದ್ದ ತಲೆಗೂದಲು, ಕೊಳಕಾದ ಬಟ್ಟೆ ಬರೆ, ಹರಿದು ತೇಪೆ ಹಾಕಿದ್ದ ಅಂಗಿ, ಕಾಲಿಗೊಂದು ಜೂತೆ ಚಪ್ಪಲಿ, ಹೆಗಲ ಮೇಲೆ ವಸ್ತ್ರ- ಇದು ಅವರ ಸ್ವರೂಪ. ಚಿಕ್ಕಪ್ಪ ಆಘೋರನಾಥರ ಮನೆಗೆ ಬಂದರು.

ಶರತ್‌ಚಂದ್ರರು ಹೊಟ್ಟೆಪಾಡಿಗಾಗಿ ರಂಗೂನಿನಲ್ಲಿ ನಿಂತರು. ರಂಗೂನ್ ತಲಿಪಿದಾಗ ಅವರ ಜೇಬಿನಲ್ಲಿ ಕೇವಲ್ ಎರಡು ರೂಪಾಯಿ ಇತ್ತಂತೆ! ಅಘೋರನಾಥರ ಪ್ರಯತ್ನದಿಂದ ಶರತ್‌ಚಂದ್ರರಿಗೆ ಒಂದು ವಾಣಿಜ್ಯ ಸಂಸ್ಥೆಯಲ್ಲಿ ಲೆಕ್ಕಪತ್ರ ಬರಿಯುವ ಗುಮಾಸ್ತನ ನೌಕರಿ ದೊರಕಿತು.

ಈ ಕಾಲದಲ್ಲಿ ಎಲ್ಲಿಯೂ ಹೆಚ್ಚು ದಿನ ಕೆಲಸ ಮಾಡಲಿಲ್ಲ ಶರತ್‌ಚಂದ್ರರು. ಸಾರ್ವಜನಿಕ ಕೆಲಸ ಕಾರ್ಯಗಳ ಇಲಾಖೆ, ರೈಲ್ವೆ ಇಲಾಖೆ-ಹೀಗೆ ಹಲವು ಇಲಾಖೆಗಳ ಲೆಕ್ಕದ ವಿಭಾಗದಲ್ಲಿ ಕೆಲಸ ಮಾಡಿದರು.

ಶರತ್‌ಚಂದ್ರರು ಹಗಲೆಲ್ಲಾ ಕಚೇರಿಯಲ್ಲಿ ದುಡಿದು ಸಂಜೆ ಮನೆಗೆ ಹಿಂದಕ್ಕೆ ಬಂದ ಮೇಲೆ ಕತೆ, ಕದಂಬರಿ ಬರುಯುತ್ತಿದ್ದರು. ದೀನದಲಿತರ ಸೇವೆ ಮಾಡುವುದರಲ್ಲಿ ದಿನಗಳನ್ನು ಕಳೆದರು.

ಬರ್ಮಾದಲ್ಲಿ ಶರತ್‌ಚಂದ್ರರಿಗೆ ಬೇರೆ ಬೇರೆ ಸಮಾಜಗಳ ಪರಿಚಯ ಆಯಿತು. ಅಲ್ಲಿಯ ಜನಗಳ ಜೀವನ, ರೀತಿ-ನೀತಿ ಆಚಾರ-ವಿಚಾರ, ನಡೆ-ನುಡಿ ಇವುಗಳನ್ನು ಕಂಡು ಇವರಲ್ಲಿ ಜ್ಞಾನದ ದಾಹ ಮತ್ತಷ್ಟು ಹೆಚ್ಚಾಯಿತು. ಇದರಿಂದ ಆ ಜನಗಳ ಬಗ್ಗೆ ಚಿಂತಿಸುವಂತಾಯಿತು. ಅವರುಗಳ ಇಷ್ಟೋ ಅಜ್ಞಾನ, ಲೋಪದೋಷ, ಮೂಡನಂಬಿಕೆಗಳ ಅನುಭವವಾಯಿತು. ಅಜ್ಞಾನಿ, ಅವಿವೇಕಿ, ಅನಾಥರ ಬಗ್ಗೆ ಹೃದಯದಲ್ಲಿ ಕರುಣೆಯ ಚಿಲುಮೆ ಉಕ್ಕಿ ಹರಿಯಿತು.

ಗ್ರಂಥ ಅಧ್ಯಯನ

ಬಿಡುವು ದೊರೆತಾಗಲೆಲ್ಲಾ ಶರತ್‌ಚಂದ್ರರು ತುಂಬಾ ಗ್ರಂಥಗಳನ್ನು ಓದಿತ್ತಿದ್ದರು. ಸಮಾಜ, ಭೌತ ವಿಜ್ಞಾನ, ದರ್ಶನಶಾಸ್ತ್ರ ಯಾವ ವಿಚಾರವನ್ನೂ ಅಧ್ಯಯನ ಮಾಡದೆ ಬಿಟ್ಟವರಲ್ಲ. ಮಣೀಂದ್ರ ಕುಮಾರ ಮಿತ್ರ ಎಂಬುವರೊಂದಿಗೆ ಪಾಶ್ಚಾತ್ಯ ದಾರ್ಶನಿಕರಿಂದ ಹಿಡಿದು ಎಲ್ಲಬ ಬಗ್ಗೆಯೂ ಆಳವಾದ ಜಿಜ್ಞಾಸೆ ನಡೆಸುತ್ತಿದ್ದರು. ಈ ದರ್ಶನ ಪ್ರೇಮದ ಕಾರಣದಿಂದಲೇ ಒಂದು ದಿನ ಇವರಿಗೆ ರಾಮಕೃಷ್ಣ ಸೇವಾಸಂಸ್ಥೆಯ ಸ್ವಾಮಿ ರಾಮಕೃಷ್ಣರ ಪರಿಚಯಮಾಯಿತು. ಆರಭದಲ್ಲಿ ಅಲ್ಲ್ಲಿನ ಮಿಸ್ರಿಪಲ್ಲಿಯ ನಿವಾಸಿಗಳೂಂದಿಗೆ ಭಜನೆಯಲ್ಲಿ ತೊಡಗಿ ಸ್ವಾಮಿಜಿಯವರೂಂದಿಗೆ ಪರಮಾತ್ಮನ ಬಗ್ಗೆ ಚರ್ಚೆ, ವಿಚಾರ ಮಿನಿಮಯ ನಡೆಸುತ್ತಿದ್ದರು. ಇದರಿಂದ ಇವರಿಗಷ್ಟೇ ವ್ಯಸನ. ಚಿಂತೆಗಳಿದ್ದರೂ ಇವರ ಮನಸ್ಸು ಮೌನವಾಗಿ ಭಗವಂತನ ಶೋಧನೆಯತ್ತ ಹರಿಯುತ್ತಿತ್ತು.

ಕಚೇರಿಯ ಕೆಲಸ ಮುಗಿದನಂತರ ಶರತ್‌ಚಂದ್ರರು ಅಲ್ಲಿಯ ಸುಪ್ರಸಿದ್ಧ “ಬರ್ನಾಡ ಷಾ” ಲೈಬ್ರರಿಗೆ ಹೋಗುತ್ತಿದ್ದರು. ಅಲ್ಲಿ ಒಂದು ಮೂಲೆಯಲ್ಲಿ ಕುಳಿತು ಗಂಟೆಗಟ್ಟಲೆ ಓದುತ್ತಿದ್ದರು. ಇವರ ಮೇಲೆ ಯಾರದೂ ಯಾವ ರೀತಿಯ ನಿರ್ಬಂರ್ಧವು ಇರಲಿಲ್ಲ. ಯಾವ ಕಪಾಟಿನಲ್ಲಿ ಯಾವ ಪುಸ್ತಕವಿಟ್ಟಿದಾರೆ ಎಂಬುದು ಇವರಿಗೆ ಚೆನ್ನಾಗಿ ಗೊತ್ತಿತ್ತು. ಒಂದೊಂದು ಪುಸ್ತಕವನ್ನೂ ತಮ್ಮ ಅಂತರಂಗದ ಸ್ನೇಹಿತನಂತೆ ಪ್ರೀತಿಸುತ್ತಿದ್ದರು. ಅವರಿಗೆ ಆ ದಿನಗಳಲ್ಲಿ ರಷ್ಯಾದೇಶದ ಟಾಲ್ ಸ್ಟಾಯ್ “ಆನಕೆರಿನಿನಾ” ಗ್ರಂಥ ಬಲು ಪ್ರಿಯವಾಗಿ ಅದನ್ನು ಐವತ್ತು ಬಾರಿ ಓದಿದ್ದರಂತೆ. ಈ ಸಾಧನೆಯ ಅಚ್ಚು ಶರತ್‌ಚಂದ್ರರ ಸಾಹಿತ್ಯ ಕೃತಿಗಳ ಮೇಲೆ ಬಿದ್ದಿರುವುದು ಸ್ವಷ್ಟವಾಗುತ್ತದೆ. ಮುಂದೆ ರಂಗೂನನ್ನು ಬಿಟ್ಟು ಕಲ್ಕತ್ತೆಯಲ್ಲೇ ವಾಸವಾಡಲು ಹೋಗಬೇಕಾಗಿ ಬಂದಾಗ ಶರತ್‌ಚಂದ್ರರು, ಈ ಗ್ರಂಥ ಭಂಡಾರಕ್ಕೋಸ್ಕರ ನನಗೆ ರಂಗೂನಿನಲ್ಲೇ ಇರಬೇಕು ಎನ್ನಿಸುತ್ತದೆ. ಕಲ್ಕತ್ತದ ಇಂಪೀರಿಯಲ್ ಲೈಬ್ರರಿ (ಈಗಿನ ನ್ಯಾಷನಲ್ ಲೈಬ್ರರಿ)ಯಲ್ಲಿ ನನಗಿಷ್ಟು ಸ್ವಾತಂತ್ರ್ಯ ಎಲ್ಲಿ ಸಿಕ್ಕುತ್ತದೆ? ಎಂದು ಉದ್ಗಾರವೆತ್ತಿದ್ದರು.

 

ಶರತ್‌ಚಂದ್ರರು ಅಘೋರನಾಥರ ಮನೆಗೆ ಬಂದರು

ಬಾಳಿನಲ್ಲಿ ಬವಣೆ

ಇದ್ದಕ್ಕಿದ್ದಂತೆ ರಂಗೂನಿನಾಲಿ ಪ್ಲೇಗ್ ಕಾಯಿಲೆಯು ಹರಡಿತು. ಊರಿನವರೆಲ್ಲಾ ತಮ್ಮ-ತಮ್ಮ ಮನೆಬಿಟ್ಟು ಪಟ್ಟಣಕ್ಕೆ ಸ್ವಲ್ಪ ದೂರದಲ್ಲಿದ್ದ ಮನೆಗಲಲ್ಲಿ ವಾಸಿಸತೊಡಗಿದರು. ಆದರೆ ಶರತ್‌ಚಂದ್ರರು ಮಾತ್ರ ಊರು ಬಿಡದೆ ಕಛೇರಿಯ ಅಧಿಕಾರಿಗಳ “ಭೋಜನ ಗೃಹ”ದಲ್ಲೇ ಉಳಿದರು. ತಮ್ಮ ಜೀವದ ವಿಷಯವನ್ನು ಲಕ್ಷ್ಯಕ್ಕೆ ತಾರದೆ ಪ್ಲೇಗ್ ಕಾಯಿಲೆಗೆ ತುತ್ತಾದವರ ನೆರವಿಗೆ ವಿಧಾನವನ್ನು ಮೊದಲೇ ಅಭ್ಯಾಸ ಮಾಡಿದ್ದರಿಂದ ವೈಧ್ಯಕೀಯ ಬ್ಯಾಗ್ ಹಿಡಿದು ಮನೆಮನೆಗೂ ಹೋಗಿ ಔಷಧಿ ಕೊಡಬಲ್ಲವರಾಗಿದ್ದರು.

ಮಿಸ್ರಿಪಲ್ಲಿಯ ನಿಮ್ನವರ್ಗದ ಜನಗಳ ಜೂತೆ ಬೆರೆಯುವುದರಲ್ಲಿ ಶರತ್‌ಚಂದ್ರರಿಗೆ ಆನಂದವಿತ್ತು. ಅಲ್ಲಿಯ ಪ್ರಕೃತಿಯ ಸೊಬಗನ್ನು ನೋಡಿ ಆನಂದದಿಂದ ತನ್ಮಯರಾಗುತ್ತಿದ್ದರು. ಅವರ ಆತ್ಮೀಯ ಗೆಳೆಯರು ಅಲ್ಲೀಗೆ ಹೋಗಿ ಅವರೊಡನೆ ಇರುತ್ತಿದ್ದರು. ಅಲ್ಲಿಯ ಕಾರ್ಮಿಕರೇ ಶರತ್‌ಚಂದ್ರರ ಸಂಗಡಿಗರು. ಅವರಿಗೆ ರಜಕ್ಕಾಗಿ ಪ್ರಾರ್ಥನಾಪತ್ರ ಬರೆದುಕೊಡುವುದು, ಅವರು ತಮ್ಮ ಹೆಂಡತಿ-ಮಕ್ಕಳಿಗೆ ಕಾಗದ ಬರೆಯಬೇಕಾದಾಗ ಬರೆದುಕೊಡುವುದು, ಮನಿಯಾರ್ಡರ್ ಫಾರಂ ಭರ್ತಿ ಮಾಡಿಕೊಡುವುದು-ಇವರ ನಿತ್ಯದ ಕೆಲಸವಾಗಿತ್ತು. ಅವರವರ ಜಗಳಗಳು, ಮನಸ್ಥಾಪಗಳನ್ನೆಲ್ಲ ಬಗೆಹರಿಸಿ ಮತ್ತೇ ಸ್ನೇಹದ ವಾತಾವರಣವನ್ನು ಉಂಟುಮಾಡುವವರು ಶರತ್‌ಚಂದ್ರರೇ. ಬೇರೆ ಜಾತಿಗಳ ಕಾರ್ಮಿಕರೊಂದಿಗೆ ಶರತ್‌ಚಂದ್ರರು ಇಷ್ಟರಮಟ್ಟಿಗೆ ಬೆರೆತು ಅವರ ಮನೆಗಳಿಗೆ ಹೋಗಿ ಬರುವುದು ಶರತ್‌ಚಂದ್ರರ ಜಾತಿಯಲ್ಲಿ ಹಲವರಿಗೆ ಸರಿತೋರಲಿಲ್ಲ. ಅವರು ಶರತ್‌ಚಂದ್ರರನ್ನು ತಮ್ಮ ಜಾತಿಯಿಂದ ಬಹಿಷ್ಕರಿಸಿದರು-ಎಂದರೆ ದೂರ ಇಟ್ಟರು. ಅವರು ಶರತ್‌ಚಂದ್ರರನ್ನು ತಮ್ಮವರೆಂದು ಕರೆದುಕೊಳ್ಳಲು ಹಿಂಜರಿದರು. ಪ್ರತಿಷ್ಠಿತ ಜನಗಳ ದೃಷ್ಠಿಯಲ್ಲಂತೂ ಶರತ್‌ಚಂದ್ರರು ಚರಿತ್ರಹೀನರಾದರು. ಉಚ್ಛವರ್ಗದ ಬಂಗಾಳಿಗಳು ಇವರನ್ನು ತಿರಸ್ಕಾರದಿಂದ ಕಾಣತೊಡಗಿದರು.

ಈ ದಿನಗಳಲ್ಲೇ ಶರತ್‌ಚಂದ್ರರು ಚರೀತ್ರಹೀನ ಕಾದಂಬರಿ ರಚಿಸಿದ್ದು. ಭಾರತದಲ್ಲಿ ಇದ್ದಾಗಲೇ ಈ ಪುಸ್ತಕವನ್ನು ಬರಿಯಲು ಪ್ರಾರಂಭಿಸಿದ್ದರು. ಆದರೆ ಅವರಿಗೆ ರಂಗೂನಿನಲ್ಲಿ ದೊರೆತ ಜೀವನಾನುಭವದಿಂದ ಕಾದಂಬರಿ ಒಳ್ಳೆಯ ಕೃತಿಯಾಯಿತು. ದಿನವೆಲ್ಲಾ ದುಡಿದು ರಾತ್ರಿ ದೀಪ ಹೊತ್ತಿಸಿ, ಅದರ ಬೆಳಕಿನಲ್ಲಿ ಬರಿಯಲು ಕುಳಿತುಕೊಳ್ಳುತ್ತಿದ್ದರು. ಅವರ ಸುತ್ತಮುತ್ತಲಿದ್ದವರಿಗೆ ಇದೂಂದು ಪರಿಹಾಸ್ಯ. “ಸಾಹಿತಿ” ಆಗೋ ಕನಸು ಕಾಣ್ತಾ ಇರೋ ಮುಸುಡಿ ನೋಡ್ರೋ! ಎಂದು ಇವರನ್ನು ಹೀಯಾಳಿಸುತ್ತಿದ್ದರು. ಈ ಎಲ್ಲಾ ಕಿರುಕುಳ ಮತ್ತು ಅಡಚಣೆಯಿಂದ ತಪ್ಪಿಸಿಕೊಳ್ಳಲು ಶರತ್‌ಚಂದ್ರರು ಊರಿಗೆ ಸ್ವಲ್ಪ ದೂರದ ಮಿಸ್ರಿಪಲ್ಲಿ ಬಡಾವಣೆಯಲ್ಲಿ ಇರಲು ತೀರ್ಮಾನಿಸಿದರು.

ಸಂದರ್ಭ ಬಂದಾಗ ಶರತ್‌ಚಂದ್ರರು ಜಾವಾ, ಸುಮಾತ್ರಾ, ಬೋರ್ನಿಯೋ ಮುಂತಾದ ದ್ವೀಪಗಳಲ್ಲಿ ಸುತ್ತಾಡಿ ಬರಲು ಹೋಗುತ್ತಿದ್ದರು. ಅಲ್ಲಿಯ ಜನಗಳ ಮಧ್ಯೆ ಅವರ ಬಂಧುವೇ ಆಗಿ ಅವರ ಮನಸ್ಸನ್ನು ಗೆದ್ದಿದ್ದರು.

ಹೀಗೆ ಜೀವನದಲ್ಲೊಂದು ನೆಲೆ, ಗೊತ್ತು-ಗುರಿ ಇಲ್ಲದೆ ಅವರ್ ಬದುಕು ಒಂದು ನಿಲುಗಡೆಗೆ ಬಂದು ನಿಂತಿರಲಿಲ್ಲ. ಬರವಣಿಗೆ, ಗ್ರಂಥಗಳ ಅಧ್ಯಯನ, ಅಲೆದಾಟದಲ್ಲೇ ಕಾಲ ಮತ್ತು ಜೀವನ ಕಳೆದು ಹೋಗಿತ್ತು.

ತಾನಾಗಿ ಬಂದ ಶಾಂತಿ

ಒಂದು ದಿನ ರಾತ್ರಿ ತಡವಾಗಿ ಮನೆಗೆ ಬಂದರು, ಒಳಗಿನಿಂದ ಬಾಗಿಲು ಭದ್ರವಾಗಿ ಮುಚ್ಚಿತ್ತು. ಕುತೂಹಲದೊಂದಿಗೆ ಆಶ್ಚರ್ಯವೂ ಉಂಟಾಯಿತು. ಬಾಗಿಲನ್ನು ಬಲವಾಗಿ ನೂಕಿದರು. ಒಳಗಡೆ ಅಗಣಿ ಹಾಕಿತ್ತು. ಕೂಗಿದರು, ಇನ್ನೂ ಗಟ್ಟಿಯಾಗಿ ಕೂಗಿದರು – “ಯಾರು ಒಳಗಡೆ?” ಎಂದು. ಉತ್ತರವೇ ಇಲ್ಲ. ಸಹನೆ ಮಿರಿತು. ಬಾಗಿಲನ್ನು ಬಡಿದರು. ಬಾಗಿಲು ತೆರೆಯಿತು. ಕಾಲ ಸಪ್ಪಳ ಕೇಳಿಸಿತು. ಒಳಗಡೆ ಕಾಲಿಟ್ಟ ಶರತ್‌ಚಂದ್ರರು ಹೆಣ್ಣೂಂದನ್ನು ಕಂಡು ಆಶ್ಚರ್ಯಗೊಂಡರು. ಅವಳು ಕೊನೆಯ ಬೀದಿಯ ಯಜ್ಞೇಶ್ವರ ಮಿಸ್ರಿಯ ಮಗಳು, ಶಾಂತಿ! ನಡುಗುತ್ತಿದ್ದಳು, ಅವಳ ಕಣ್ಣುಗಳಲ್ಲಿ ಕಣ್ಣೀರಿನ ಕೋಡಿ ಇಳಿದು ಬರುತ್ತಿತ್ತು.

 

ಶರತ್‌ಚಂದ್ರರು ಪ್ಲೇಗ್ ಕಾಯಿಲೆಗೆ ತುತ್ತಾದವರನ್ನು ಉಪಚರಿಸಿದರು

ಶರತ್‌ಚಂದ್ರರು, “ಏನು ವಿಷಯ, ನನ್ನ ಮನೆಗೇಕೆ ಬಂದು ಸೇರಿಕೊಂಡೆ?” ಎಂದು ಕೇಳಿದಾಗ ಪಾಪ  ಆ ಹುಡುಗಿ ಉತ್ತರ ಕೊಡುವ ಸ್ಥಿತಿಯಲ್ಲೇ ಇರಲಿಲ್ಲ. ಇನ್ನೂ ನಡುಗುತ್ತಿದ್ದಳು, ಕಣ್ಣ ತುಂಬ ನೀರು.

ಶರತ್‌ಚಂದ್ರರು ಎಷ್ಟೋ ಸಮಾಧಾನ ಮಾಡಿದ ಅನಂತರ ಹುಡುಗಿ ಹೇಳಿದಳು: “ನಮ್ಮಪ್ಪ ಆ ಹೆಂಡ ಕುಡುಕ, ಜೂಜುಕೋರ, ಮುದುಕ ಫೋಶಾಲನ ಹತ್ತಿರ ಹಣ ಸಾಲ ಮಾಡಿದ್ದಾರೆ. ಅದಕ್ಕೆ ಬದಲು ಅವನಿಗೇ ನನ್ನನ್ನು ಕೊಟ್ಟು ಮದುವೆ ಮಾಡ್ತಾರಂತೆ. ಆಶ್ರಯಕ್ಕೆಂದು ನಿಮ್ಮ ಮನೆಗೆ ಬಂದು ಅವಿತುಕೊಂಡೆ.”

ಅಷ್ಟು ತಿಳಿಸಿದ ಶಾಂತಿ, ಶರತ್‌ಚಂದ್ರರ ಪಾದಗಳಿಗೆ ಎರತಿದಳು. ಶಾಂತಿ ಆಶ್ರಯ ಬೇಡಿ ಬಂದವಳು. ಅವರ ತಂದೆ ಯಜ್ಞೇಶ್ವರ ಮಿಸ್ರಿಯ ಮನೆ ಹೆಂಡ ಕುಡುಕರಿಗೂ ಜೂಜುಕೋರರಿಗೂ ಬಿಡಾರವಗಿದೆಯೆಂದು ಶರತ್‌ಚಂದ್ರರಿಗೆ ತಿಳಿದಿತ್ತು. ಆ ರಾತ್ರಿ ಶಾಂತಿಗೆ ತಮ್ಮ ಮನೆಯಲ್ಲೇ ಆಶ್ರಯ ಕೊಟ್ಟು, ಧೈರ್ಯ ನೀಡಿದರು. ಮನೆಗೆ ಬೀಗ ಹಾಕಿಕೊಂಡು ಶರತ್‌ಚಂದ್ರರು ಸ್ನೇಹಿತನೊಬ್ಬನ ಮನೆಗೆ ಹೋಗೆ ಮಲಗಿ ಬೆಳಗಾಗೆದ್ದು ಬಂದರು.

ಬಾಳಿಗೇ ಬಂದಳು ಶಾಂತಿ

ಶಾಂತಿಯ ಬಗ್ಗೆ ಅವರಿಗೇ ತಿಳಿಯದಂತೆ ಮರುಕ ಮೂಡಿತ್ತು. ನೇರವಾಗಿ ಅವಳ ತಂದೆಯ ಬಳಿ ಹೋಗಿ “ಮುದುಕ ಫೋಶಾಲ್ ಸದಾ ಹೆಂಡಕುಡುದು ಜೀವನ ಕಳೆಯುತ್ತಿದ್ದಾನೆ. ಅವನು ನಿನ್ನ ಮಗಳಿಗೆ ತಕ್ಕ ವರನಲ್ಲ. ಮದುವೆ ಮಾಡಿಕೊಂಡರೆ ಬಹಳ ದಿನಗಳ ಕಾಲ ಶಾಂತಿಯನ್ನು ಬಾಳಿಸಲಾರ” ಎಂದು ತಿಳಿಸಿದರು.

“ಏನು ಮಾಡಲಿ? ನಮ್ಮ ಊರು ಬಿಟ್ಟು ಈ ಊರಿಗೆ ಬಂದು ನೆಲಸಿದೆ. ಬಡತನದಿಂದಾಗಿ ಮಗಳನ್ನು ಸಾಕೋ ಚೈತನ್ಯ ನನಗಿಲ್ಲ. ಒಂದು ಒಳ್ಳೆ ಕಡೆ ಸಂಬಂಧ ಬೆಳೆಸೋಣ ಅಂದ್ರೆ ಹಣ ಇಲ್ಲ. ಹೌದು, ಫೋಶಾಲ್ ಕುಡೀತಾನೆ. ನನ್ನೆಲ್ಲಿ ಇಲ್ವೆ ಆ ಚಟ? ಹೋಗ್ಲಿ, ನನ್ನ ಮಗಳ ಮೇಲೆ ನಿಮಗಷ್ಟು ದಯೆ ಇದ್ರೆ ಈ ಬಡವನ ಮಗಳನ್ನು ನೀವೇ ಮದುವೆ ಮಾಡ್ಕೊಂಡು ನಮ್ಮನ್ನು ಉದ್ಧಾರ ಮಾಡಿ” ಎಂದ ಶಾಂತಿಯ ತಂದೆ. ಶರತ್‌ಚಂದ್ರರು ಗರಬಡಿದವರಂತೆ ನಿಂತು ಬಿಟ್ಟರು.

ಶಾಂತಿಯನ್ನು ತಾವು ಮದುವೆಯಾಗುವ ವಿಚಾರ ಅವರ ತಲೆಗೆ ಬಂದಿರಲಿಲ್ಲ. ಮನಸ್ಸಿನ ಗೊಂದಲದಲ್ಲಿ ಏನೂಂದು ವಿಚಾರವನ್ನೂ ವ್ಯಕ್ತಪಡಿಸದೆ, ಅಲ್ಲಿ ನಿಲ್ಲದೆ ಹೊರಟುಬಿಟ್ಟರು. ಆದರೆ ಶಾಂತಿಗಾಗುವ ಅನ್ಯಾಯ ಸರಿಪಡಿಸುವ ತವಕ ಬೆಳೆಯಿತು ಅವರಲ್ಲಿ. ಅವಳಿಗಾಗಿ ಗಂಡು  ಹುಡುಕಲು ಬಹು ಪ್ರಯತ್ನಪಟ್ಟರು. ಆದರೆ ಎಷ್ಟೇ ಕಷ್ಟಪಟ್ಟರೂ ವರ ಸಿಕ್ಕಲಿಲ್ಲ.

ಒಂದು ದಿನ ಶರತ್‌ಚಂದ್ರರು ನೇರವಾಗಿ ಯಜ್ಞೇಶ್ವರ ಮಿಸ್ರಿಯ ಮನೆಗೆ ಹೋದರು, “ನಿನ್ನ ಮಗಳ ಕೈ ಹಿಡಿಯಲು ಸಿದ್ಧನಿದ್ದೇನೆ” ಎಂದರು. ಶಾಂತಿಯ ತಂದೆಗೆ ಆನಂದವಾಯಿತು.

ಶರತ್‌ಚಂದ್ರರು, “ಆದರೆ ಶಾಂತಿಯನ್ನು ಒಂದು ಮಾತು ಕೇಳಿ ತೀರ್ಮಾನಕ್ಕೆ ಬನ್ನಿ” ಎಂದರು.

ಶಾಂತಿಗೆ ಈ ಸುದ್ದಿ ಹರ್ಷ ತಂದಿತು. ಒಂದು ಒಳ್ಳೆಯ ಮುಹೂರ್ತದಲ್ಲಿ ಶರತ್‌ಚಂದ್ರ-ಶಾಂತಿಯರು ಗಂಡ-ಹೆಂಡತಿಯಾದರು. ಅವರಿಬ್ಬರ ಮದುವೆ ಹೇಗೆ ನಡೆಯಿತು, ಮೇಲಿನ ಕುಲದವರೆಂದು ಕರೆಸಿಕೊಂಡಿದ್ದ ರಂಗೂನಿನ ಬಂಗಾಳಿಗರಲ್ಲಿ ಎಷ್ಟು ಜನ ಮದುವೆಗೆ ಬಂದಿದ್ದರು ಎಂಬುದರ ಅಂಕಿ-ಅಂಶ ಯಾರ ಬಳಿಯೂ ಇಲ್ಲ. ವಾಸ್ತವವಾಗಿ ಶರತ್‌ಚಂದ್ರರು ಮದುವೆ ಮಾಡಿಕೊಂಡರು ಎಂಬುದು ಸಹ ಅವರಿಗೆ ಗೊತ್ತಾಗಲಿಲ್ಲ. ಯಾವುದೋ ಕೀಶು ಜಾತಿಯ ಹೆಣ್ಣಿನೂಂದಿಗೆ ಶರತ್‌ಚಂದ್ರರು ಇದ್ದಾರೆ ಎಂಬ ಕುತ್ಸಿತ ಮನೋಭಾವ ತಳೆದರು.

ಏನಾದರಾಗಲಿ, ಶರತ್‌ಚಂದ್ರರ ಅವ್ಯವಸ್ಥಿತ ಜೀವನಕ್ಕೆ ಹೊಸ ತಿರುವಾಯಿತು. ಅವರು ಗೃಹಸ್ಥರಾದರು. ಗೊತ್ತು-ಗುರಿ ಇಲ್ಲದ ಅಲೆದಾಟ, ಸ್ನೇಹಿತರ ಬಳಗದೂಂದಿಗೆ ನಿರಂತರ ಕಾಡುಹರಟೆ, ಕ್ಲಬ್ ಜೀವನ ಎಲ್ಲದಕ್ಕೂ ಕೊನೆಯಾಗಲು ಮದುವೆ ಕಾರಣವಾಯಿತು. ಮುಂದೆ ತಾವಾಯಿತು, ತಮ್ಮ ಮನೆ, ಸಂಸಾರ, ಹೆಂಡತಿ ಶಾಂತಿಯಾಯಿತು.

ಶಾಂತಿ ಇನ್ನಿಲ್ಲ

ಹೀಗೆ ಒಂದು ವರ್ಷ ಕಳೆಯಿತು. ಶಾಂತಿ ಗಂಡು ಮಗುವನ್ನು ಹೆತ್ತಳು. ಮಗುವಿನ ನಗುವಿನಿಂದ ಮನೆ ನಂದಗೋಕುಲದಂತಾಯಿತು. ಆದರೆ ಎರಡು ವರ್ಷವೂ ಕಳೆದಿರಲಿಲ್ಲ. ಮತ್ತೆ ರಂಗೂನ್ ಪಟ್ಟಣಕ್ಕೆ ಪ್ಲೇಗ್ ಮಾರಿ ಕಾಲಿಟ್ಟಿತು. ಎಲ್ಲೆಲ್ಲೂ ಹೆಣಗಳು ಉರುಳಿದವು.

ಒಂದು ಸಂಜೆ ಶರತ್‌ಚಂದ್ರರು ಮನೆಗೆ ಬಂದರು. ಶಾಂತಿಯ ಮೈ ಕಾದ ಕಾವಲಿಯಂತೆ ಸುಡುತ್ತಿತ್ತು. ಇಂತಹ ಜ್ವರವನ್ನು ಅನೇಕ ಬಾರಿ ಶರತ್‌ಚಂದ್ರರು ಕಂಡಿದ್ದರು. ಅನೇಕರಿಗೆ ಕೈಯಾರ ಔಷಧಿ ಕುಡಿಸಿ, ಅವರುಗಳ ಪ್ರಾಣ ಉಳಿಸಿದ್ದರು. ತಮ್ಮ ಹೆಂಡತಿಗೆ ಬಂದಿರುವುದು ಸಾಧಾರಣ ಜ್ವರವಲ್ಲ, ಪ್ಲೇಗ್ ಕಾಯಿಲೆ ಎಂಬ ಸಂದೇಹ ಮೂಡಿತು. ನೇರವಾಗಿ ತಮ್ಮ ಆಪ್ತ ಗೆಳೆಯರಾದ ಗಿರೀಂದ್ರನಾಥ ಸರ್ಕಾರ್ ರವರ ಬಳಿಗೆ ಓಡಿ ಪರಿಸ್ಥಿತಿ ವಿವರಿಸಿದರು.

ಬಡವರ ಬಂಧುವಾದ ಗಿರೀಂದ್ರನಾಥರು ಇಂತಹ ಸಂದರ್ಭಗಳಲ್ಲಿ ರೋಗಿಗಳ ಉಪಚಾರ, ಚಿಕಿತ್ಸೆಗಳಿಗೆ ಹಣ ಕೊಡುತ್ತಿದ್ದರು, ಹಾಗೂ ಕೈಲಾದ ನೆರವು ನೀಡುತ್ತಿದ್ದರು. ರೋಗಿ ತೀರಿಕೊಂಡರೆ ಉತ್ತರಕ್ರಿಯೆಗೆ ನೆರವಾಗುತ್ತಿದ್ದರು. ಅವರು ಶರತ್‌ಚಂದ್ರರನ್ನು ಸಮಾಧಾನಮಾಡಿ ಕಳುಹಿಸಿ, ಕೊಡಲೇ ಪರಿಣತ ಡಾಕ್ಟರ್ ಒಬ್ಬರನ್ನು ಕರೆತಂದರು. ಶಾಂತಿಗೆ ಬಂದಿದ್ದುದು ಪ್ಲೇಗ್ ಕಾಯಿಲೆಯೆಂದೂ ಅವಳು ಉಳಿಯುವ ಸಂಭವವಿಲ್ಲವೆಂದೂ ಅರ್ಥವಾಗಿ ಹೋಗಿದ್ದರೂ ಡಾಕ್ಟರ್ ವಿಚಾರ ಬಾಯಿಬಿಡದೆ ಶಾಂತಿಗೆ ಔಷಧಿ ಕೊಟ್ಟು ಹೊರಟುಬಿಟ್ಟರು. ಶರತ್‌ಚಂದ್ರರಂತೂ ಮಂಕು ಹಿಡಿದವರಂತೆ ಕುಳಿತಿದ್ದರು. ಶಾಂತಿ ಗಂಡನ ದುಃಖ ಅರ್ಥ ಮಾಡಿಕೊಂಡು ಕ್ಷೀಣಸ್ವರದಲ್ಲಿ, “ನನ್ನ ಕೈಹಿಡಿದು ನಿಮಗೆ ಸುಖವಿಲ್ಲ. ಬಹಳ ಕಷ್ಟಕೊಟ್ಟೆ, ಕ್ಷಮಿಸಿ” ಎಂದು ಬಗ್ಗಿ ಶರತ್‌ಚಂದ್ರರ ಪಾದ ಮುಟ್ಟಿ ನಮಸ್ಕರಿಸಿ, ತನ್ನ ಆ ಕೈಗಳನ್ನು ತಲೆಗೆ ಸವರಿಕೊಂಡಳು, ಅಷ್ಟೇ. ಶಾಂತಿಯ ಪ್ರಾಣಪಕ್ಷಿ ಎದೆಗೂಡಿನಿಂದ ಹಾರಿ ಹೋಯಿತು. ಸತ್ತ ಶಾಂತಿಯ ಮುಖ ದಿಟ್ಟಿಸುತ್ತಾ ಮಗುವಿನಂತೆ ಅತ್ತು ಬಿಟ್ಟರು ಶರತ್‌ಚಂದ್ರರು. ಆ ಹೊತ್ತಿನಲ್ಲಿ ಅಕ್ಕಪಕ್ಕದ ಮನೆಯವರಿಂದ ಯಾವ ರೀತಿಯ ಸಹಾಯವೂ ಸಿಗುವಂತಿರಲಿಲ್ಲ. ಪ್ಲೇಗ್ ರೋಗವೆಂದು ತಿಳಿದು ಮುಂದೆ ಬರಲು ಎಲ್ಲರು ಅಂಜುವವರೇ. ಕಡೆಗೆ ಗಿರೀಂದ್ರನಥರ ನೆರವಿನಿಂದ ಹೆಂಡತಿಯ ಹೆಣವನ್ನು ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಶರತ್ ಚಂಡ್ರರು ಸ್ಮಶಾನಕ್ಕೆ ನಡೆದರು. ಅವರೊಂದಿಗೆ ಯಾರೂಬ್ಬರೂ ಇಲ್ಲದಿದ್ದುದನ್ನು ಕಂಡು ಅಲ್ಲೇ ಅಡ್ಡಾಡುತ್ತಿದ್ದ ಸಂಸ್ಯಾಸಿಯೂಬ್ಬ ಚಿತೆಯನ್ನು ಸಿದ್ಧಮಾಡಿಕೊಟ್ಟ. ಶಾಮ್ತಿಯ ದಹನಕ್ರಿಯೆ ಹೀಗೆ ನಡೆಯಿತು.

ಈ ವಿಚಾರ ಶರತ್‌ಚಂದ್ರರ ಆಪ್ತಮಿತ್ರರಿಗೆ ತಿಳಿದಾಗ ಬಹಳ ಮರುಗಿ, ಬಂದು ಕೈಲಾದ ನೆರವು ನೀಡಿದರು. ಈ ಘಟನೆ ನಡೆದ ಕೆಲವು ದಿನಗಳಲ್ಲೇ ಅವರ ವಂಶದ ಕುಡಿಯಾಗಿದ್ದ ಮಗುವು ಪ್ಲೇಗಿಗೆ ತುತ್ತಾಗಿ ಪ್ರಾಣನೀಗಿತು. ಹೀಗೆ ಶರತ್‌ಚಂದ್ರರಿಗೆ ಒಂದಾದ ಮೇಲೆ ಒಂದು ವಿಪತ್ತುಗಳು ಬಂದೊದಗಿದವು. ಈ ಘಟನೆಗಳಿಂದ ಜಿಗುಪ್ಸೆಗೊಂಡ ಅವರು ಸ್ನೇಹಿತರ ಒತ್ತಾಯಕ್ಕೆ ಮಣಿದು ದುಃಖ ಮರೆಯಲು ಊರೂರು ಅಲೆದರು. ಆದರೆ ಅವರ ಚಿತ್ತಕ್ಕೆ ಶಾಂತಿ ಸಿಕ್ಕಲಿಲ್ಲ, ಬರವಣೆಗೆ, ಅಧ್ಯಯನ, ಚಿತ್ರರಚನೆ ಎಲ್ಲವನ್ನೂ ಕಡೆಗಣಿಸಿದರು.

ಮೋಕ್ಷದಾ

ಶಾಂತಿಯ ಮರಣದನಂತರ ಮರುಮದುವೆ ಮಾಡಿಕೊಳ್ಳುವ ಆಲೋಚನೆಯನ್ನೇ ಶರತ್‌ಚಂದ್ರರು ,ಮಾಡಿರಲಿಲ್ಲ. ಅನೇಕ ಕತೆ, ಕಾದಂಬರಿ ರಚಿಸಿದರು. ಕೀರ್ತಿಯ ಜೂತೆ ಐಶ್ವರ್ಯ ಬಂದು ಕೂಡಿಕೊಂಡಿತು. ಅಷ್ಟಾದರೂ ಅಹಂಕಾರ, ಜಂಬ ಪಡಲಿಲ್ಲ, ದುರ್ನಡತಗಳ ದಾರಿ ತುಳಿಯಲಿಲ್ಲ. ಸರಳವಾಗಿಯೇ ನಡೆದುಕೊಳ್ಳುತ್ತಿದ್ದರು. ತಮ್ಮ ಕಣ್ಣ ಮುಂದೆಯೇ ಸಮಾಜದಲ್ಲಿ, ಕೇರಿಗಳಲ್ಲಿ ನಡೆದ ಸತ್ಯಸಂಗತಿಗಳನ್ನೇ ಆಧಾರವಾಗಿಟ್ಟುಕೊಂಡು ಅನೇಕ ಕೃತಿಗಳನ್ನು ಹೆಣೆದರು. ಎಲ್ಲೂ ಯಾವ ಕಡೆಯಲ್ಲೂ ತಮ್ಮ ಜೀವನ ಚರಿತ್ರೆ ಬರೆದುಕೊಂಡವರಲ್ಲ.

ಮತ್ತೂಂದು ಅಪೂರ್ವ ಘಟನೆ ಅವರ ಬಾಳಿನೂಂದಿಗೆ ಬಂದು ಬೆರೆತುಕೊಂಡಿತು. ಅದರಿಂದ ಅವರ ಬಾಳು ಹಸನಾಯಿತು.

ಹಣ ಸಂಪಾದನೆಗೆಂದು ಮದಿನಾಪುರದ ಜಿಲ್ಲೆಯವನಾದ ಕೃಷ್ಣದಾಸ ಅಧಿಕಾರಿ ಎಂಬುವನು ಬಂಗಾಳದಿಂದ ರಂಗೂನಿಗೆ ಬಂದು ನೆಲೆಸಿದ್ದ. ಆತನಿಗೆ ಬಣ್ಣ ಕಪ್ಪಾಗಿದ್ದರೂ ಲಕ್ಷಣವಾಗಿದ್ದ. ಮೋಕ್ಷದಾ ಎಂಬ ಮಗಳೂಬ್ಬಳಿದ್ದಳು. ವರದಕ್ಷಿಣೆ ತೆತ್ತು ಮಗಳ ಮದುವೆ ಮಾಡುವಷ್ಟು ಅನೂಕೂಲಸ್ಥನಾಗಿರಲಿಲ್ಲ ಅವನು. ಅವನ ಸ್ಥಿತಿ ಅರಿತುಕೊಂಡಿದ್ದ ಶರತ್‌ಚಂದ್ರರು ಅಗಾಗ ಕೈಲಾದ ನೆರವು ನೀಡುತ್ತಿದ್ದರು. ಸಲಿಗೆ, ವಿಶ್ವಾಸ,ಸ್ನೇಹ ಬೆಳೆಸಿಕೊಂಡಿದ್ದ ಕೃಷ್ಣದಾಸನು ಒಮ್ಮೆ ಶರತ್‌ಚಂದ್ರರೊಂದಿಗೆ, “ನನ್ನ ಮಗಳು ಮದುವೆಗೆ ಬೆಳೆದು ನಿಂತಿದ್ದಾಳೆ. ಅವಳಿಗೇನದರೊಂದು ದಾರಿ ಮಾಡಲು ಪ್ರಯತ್ನಪಟ್ಟೆ. ಜೊತಯಲ್ಲಿಟ್ಟುಕೊಂಡು ಎಲ್ಲೆಲ್ಲಿ ಅಂತ ಅಲೀಲಿ? ನನ್ನ ಮಗಳನ್ನು ನೀವು ಮದುವೆ ಆಗಿ, ನನಗುಪಕಾರ ಮಾಡಿ” ಎಂದು ಬೇಡಿಕೊಂಡ. ಮೂದಲ ಹೆಂಡತಿ ಸತ್ತ ನೆನಪೇ ಇನ್ನೂ ಮಾಸಿರಲಿಲ್ಲ. ಹಾಗಿರುವಾಗ ಶರತ್‌ಚಂದ್ರರು ಈ ಅನಿರೀಕ್ಷಿತ ಒತ್ತಯಕ್ಕೆ ಮಣಿಯುವರೇ?

ಅದೇ ಹೊತ್ತಿನಲ್ಲಿ ಶರತ್‌ಚಂದ್ರರು ಕಾಯಿಲೆ ಬಿದ್ದರು. ಜ್ವರದ ಕಾವು ಏರಿತು. ಆಗ ಮೂಕ್ಷದ ಬಲು ಶ್ರದ್ಧೆ, ವಿಶ್ವಾಸಗಳಿಂದ ಶರತ್‌ಚಂದ್ರರ ಉಪಚಾರ ಮಾಡಿದಳು. ಕೆಲವು ದಿನಗಳಲ್ಲೇ ಶರತ್‌ಚಂದ್ರರು ಗುಣವಾದರು. ಮೋಕ್ಷದಾಳ ಸ್ನೇಹಶೀಲ, ಪ್ರೀತಿ, ಉಪಚಾರದಿಂದ ಮುಗ್ಧರಾದ ಶರತ್‌ಚಂದ್ರರ್ ಅವಳಿಗೆ, “ನೀನು ನಿರ್ಭಾಗ್ಯೆ ಅಲ್ಲ. ನಿನ್ನಲ್ಲಿ ಅಪಾರ ಗುಣ,ಕರುಣೆ ಇದೆ. ನೀನು ಸ್ನೇಹಸಾಗರೆ” ಎಂದು ಹೊಗಳಿದರು. ಅವಳ ಉಪಚಾರದಿಂದ ದಿನದಿನಕ್ಕೆ ಚೇತರಿಸಿಕೊಂಡು ಮೇಲೆದ್ದು ಓಡಾಡುವಂತಾದರು. ತನ್ನ ಮಗಳನ್ನು ಖಂಡಿತ ಶರತ್‌ಚಂದ್ರರು ಮದುವೆಯಾಗುವರೆಂಬ ಭರವಸೆ ಮೂಡಿ ಕೃಷ್ಣದಾಸ ಸಮಯ ನೋಡಿ ಶರತ್‌ಚಂದ್ರರೊಂದಿಗೆ ಪ್ರಸ್ತಾಪವೆತ್ತಿದ. ಅವನಿಗೆ ತೃಪ್ತಿಕರವಾದ ಉತ್ತರ ಸಿಕ್ಕಲಿಲ್ಲ. ನೆರವು ನೀಡಲು ಶರತ್‌ಚಂದ್ರರಲ್ಲಿ ಹಣವಿರಲಿಲ್ಲ.

ಇಂದಿನಿಂದ ನೀನು ಹಿರಣ್ಮಯಿ”

ಒಂದು ದಿನ ಕೃಷ್ಣದಾಸ ಮಗಳನ್ನು ಶರತ್‌ಚಂದ್ರರ ಬಳಿ ಬಿಟ್ಟು ಹೇಳದೆ ಕೇಳದೆ ಊರುಬಿಟ್ಟು ಹೊರಟೆಬಿಟ್ಟ.

ಮೋಕ್ಷದಾಳಿಗೆ ಅತ್ಯಂತ ಕಳವಲವಾಯಿತು. ಶರತ್‌ಚಂದ್ರರಿಗೆ ಕೃಷ್ಣದಾಸನ ನಡತೆ ಬೇಸರ ತಂದಿತು. ಆದರೆ ಅವರು ಮೋಕ್ಷದಾಳಿಗೆ ಧೈರ್ಯ ಹೇಳಿದರು: “ಹೆದರಬೇಡ, ನಿಮ್ಮಪ್ಪನ ಇಷ್ಟದಂತೆ ನಾನು ನಿನ್ನನ್ನು ಕೈ ಹಿಡಿದಿದ್ದೇನೆ. ಆದರೆ ನಿನಗೆ ನಾನು ತಕ್ಕ ಗಂಡನೋ ಅಲ್ಲವೋ ತಿಳಿಯದು” ಎಂದರು. ಅತೀ ಆನಂದದಿಂದ ಮೋಕ್ಷದಾಳ ಕಣ್ಣಂಚಿನಲ್ಲಿ ಕಣ್ಣೀರು ಹರಿಯಿತು. ಬಗ್ಗಿ ಶರತ್‌ಚಂದ್ರರ ಪಾದ ಮುಟ್ಟಿ ಎದ್ದು ಅವಳು,”ಬಡವಳನ್ನು ಉದ್ದಾರ ಮಾಡಿದಿರಿ. ಪುಣ್ಯವಂತೆ ನಾನು” ಎಂದಳು.

ಅವರಿಬ್ಬರ ಮದುವೆ ಸಮಾಜದ ಕಟ್ಟಳೆಯಂತೆಯೇ ನಡೆಯಿತು. ಆದರೆ ಅಗ್ನಿ ಸಾಕ್ಷಿಯಾಗಿ, ಬಾಜಾಬಜಂತ್ರಿಗಳೊಂದಿಗೆ ನಡೆಯಲಿಲ್ಲ. ಅಷ್ಟೇ. ಅದರಿಂದ ಹಲವು ಪ್ರತಿಷ್ಠಿತರಿಗೆ ಈ ಮದುವೆ ಸಮಾಧಾನ ನೀಡಲಿಲ್ಲ. ಸಮಾಜ್, ಪ್ರತಿಷ್ಟಿತ ವ್ಯಕ್ತಿಗಳು ಒಪ್ಪಲಿ ಬಿಡಲಿ, ಆದರೆ ಗಂಡ-ಹೆಂಡತಿಯರಾಗಿ ಅವರಿಬ್ಬರ ಬಾಳುಗಳು ಒಂದಾಗಿ ಹಾಲು-ಜೇನಿನಂತೆ ಬೆರೆತವು. ಶರತ್‌ಚಂದ್ರರು ಹೆಂಡತಿಗೆ, “ಇನ್ನು ಮುಂದೆ ನೀನು ಮೋಕ್ಷದಾಳಲ್ಲ. ಇಂದಿನಿಂದ ನಿನ್ನ ಹೆಸರು ಹಿರಣ್ಮಯಿ” ಎಂದರು. ಇವರಿಬ್ಬರ ದಾಂಪತ್ಯಕ್ಕೆ ಜೀವನ ಹಲವು ವರ್ಷ ಸುಖಮಯವಾಗಿ ಕಳೆಯಿತು. ಅವರಿಗೆ ಮಕ್ಕಳಾಗಲಿಲ್ಲ. ಹಿರಣ್ಮಯಿ ಬದುಕಿದಷ್ಟು ಕಾಲ ಶರತ್‌ಚಂದ್ರರ ಜೀವನ ಸುಖ ಶಾಂತಿಯಿಂದ ಕೂಡಿತ್ತು.

ಇಷ್ಟು ಹೊತ್ತಿಗೆ ಶರತ್‌ಚಂದ್ರರಿಗೆ ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ ಬಡ್ತಿ ಸಿಕ್ಕಿ ತಿಂಗಳಿಗೆ ನೂರು ರೂಪಾಯಿ ಸಂಬಳ ಬರತೊಡಗಿತು. ಪ್ರಕಾಶಕ ಗುರುದಾಸರವರ ಒತ್ತಾಯಕ್ಕೆ ಮಣಿದು ನೌಕರಿ ಬಿಟ್ಟರು. ೧೯೧೬ ರಲ್ಲಿ ಬರ್ಮಾ ಬಿಟ್ಟು ಕಲ್ಕತ್ತೆಗೆ ಬಂದರು.

 

ಚಿತ್ತರಂಜನದಾಸ, ಸುಭಾಷ್ ಚಂದ್ರ ಬೋಸರೊಂದಿಗೆ ಶರತ್‌ಚಂದ್ರರು

ಸಾಹಿತಿಗಳು-ಸ್ವಾತಂತ್ರ್ಯ ಹೋರಾಟಗಾರರು

 

ಕಲ್ಕತ್ತೆಯಲ್ಲಿ, ರವೀಂದ್ರನಾಥ ಠಾಕೂರರ ಮನಯಲ್ಲಿ ಆಗಾಗ ಸಾಹಿತಿಗಳ ಗೋಷ್ಠಿ ಕಲೆಯುತ್ತಿತ್ತು. ಅಲ್ಲಿ ಕಾದಂಬರಿಗಳು, ಕವನಗಳು-ಹೀಗೆ ಎಲ್ಲ ಬಗೆಯ ಕೃತಿಗಳ ಚರ್ಚೆ ನಡೆಯುತ್ತಿತ್ತು. ಅವನೀಂದ್ರನಾಥ, ರವೀಂದ್ರನಾಥ ಠಾಕೂರರಲ್ಲದೆ ಅನೇಕ ಸಾಹಿತಿಗಳು ಕಲೆಯುತ್ತಿದ್ದರು. ಶರತ್‌ಚಂದ್ರರೂ ಬಂದು ಆಗಗ್ಗೆ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು. ಕ್ರಮೇಣ ಶರತ್‌ಚಂದ್ರರಿಗೂ ರವೀಂದ್ರರಿಗೂ ವಿಶ್ವಾಸ ಬೆಳೆಯಿತು. ಶರತ್‌ಚಂದ್ರರಿಗೆ ರವೀಂದ್ರರಲ್ಲಿ ವಿಶೇಷ ಗೌರವ ಭವನೆ, ರವೀಂದ್ರರಿಗೆ ಶರತ್‌ಚಂದ್ರರಲ್ಲಿ ವಾತ್ಸಲ್ಯ.

ಶರತ್‌ಚಂದ್ರರಿಗೆ ಸ್ವಾತಂತ್ರ್ಯ ಹೋರಾಟಗಾರರೆಂದರೆ ತುಂಬಾ ವಿಶ್ವಾಸ ಗೌರವ. ೧೯೨೭ ರಲ್ಲಿ ಬಂಗಾಲದ ಕ್ರಾಂತಿವೀರರ ಬಿಡುಗಡೆಯಾದಾಗ ಅವರಿಗೆ ಹೌರಾದಲ್ಲಿ ಒಂದು ಸತ್ಕಾರ ಕೂಟವನ್ನು ಏರ್ಪಡಿಸಿದರು. ಚಿತ್ತರಂಜನದಾಸ, ಸುಭಾಷ ಚಂದ್ರ ಬೋಸ್ ಇವರೊಂದಿಗೆ ಕೆಲಸ ಮಾಡಿದರು. ೧೯೨೧ ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಶರತ್‌ಚಂದ್ರರು ಹೌರಾ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.

ಕೃತಿಗಳು, ಅವುಗಳ ಹಿರಿಮೆ

ಬರ್ಮಾದಲ್ಲಿ ಮತ್ತು ಬಂಗಾಲದಲ್ಲಿ ಶರತ್‌ಚಂದ್ರರು ಮಧ್ಯಮ ವರ್ಗದ ಜನ ಮತ್ತು ಹಳ್ಳಿಯ ರೈತರು, ಕೂಲಿಗಾರರು ಇವರ ಜೀವನವನ್ನು ಹತ್ತಿರದಿಂದ ಕಂಡರು. ಮನುಷ್ಯ ಸಮಾಜದಲ್ಲಿ ಬದುಕುತ್ತಾನೆ, ಹಗೇಯೇ ಬದುಕಬೇಕು. ಒಬ್ಬಂಟಿಯಾಗಿ ಇರುವ ಹಾಗಿಲ್ಲ. ಅಲ್ಲವೆ? ಸಮಾಜ ಹಲವು ಕಟ್ಟುಪಾಡುಗಳನ್ನು ವಿಧಿಸುತ್ತದೆ. ಹೀಗೆ ಮಾಡಬಹುದು, ಹಾಗೆ ಮಾಡಬಾರದು, ಈ ತಪ್ಪಿಗೆ ಈ ಶಿಕ್ಷೆ-ಎಂದೆಲ್ಲ ಸ್ವಾರ್ಥ, ಎಷ್ಟು ಕ್ರೌರ್ಯ ಇದೆ? ನಮಗೆ ಬೇಕಾದದ್ದು ಸಿಕ್ಕರೆ ಸಾಕು, ಯಾರಿಗೇನಾದರೆ ನಮಗೇನು ಎಂದು ಜನ ಮೋಸ, ಕಳ್ಳತನ, ಕೊಲೆ ಎಲ್ಲ ಮಾಡುವುದಿಲ್ಲವೆ? ಸಮಾಜದ ಕಟ್ಟುಪಾಡುಗಳನ್ನೆಲ್ಲ ತೆಗೆದು ಹಾಕಿದರೆ-ಎಷ್ಟು ಜನ ಒಳ್ಳೆಯವರಾಗಿಯೇ ಇರುತ್ತಾರೆ?

ಇದು ವ್ಯಕ್ತಿ-ಸಮಾಜದ ಸಂಬಂಧದ ಒಂದು ಮುಖ. ನಮ್ಮಲ್ಲಿ ಎಷ್ಟೋ ಜನ ಕಳ್ಳತನ ಮಾಡದೆ ಇರುವುದಕ್ಕೆ, ಮೋಸ ಮಾಡದೆ ಇರುವುದಕ್ಕೆ ಸಮಾಜ ಕಾರಣ. ಇದನ್ನು ಶರತ್‌ಚಂದ್ರರು ಗುರುತಿಸಿದರು. ಅವರ ಕಾದಂಬರಿಯೊಂದರಲ್ಲಿ ಒಬ್ಬ ಮನುಷ್ಯ ಬಂಗಾಳದಿಂದ ಬರ್ಮಾಕ್ಕೆ ಬಂದು ಅನೇಕ ವರ್ಷ ವಾಸಿಸಿದ್ದಾನೆ, ಬರ್ಮಾ ದೇಶದ ಹೆಂಗಸನ್ನು ಮದುವೆಯಾಗಿದ್ದಾನೆ. ಕೆಲವು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಬೇಕು ಎಂದು ಅವನ ಆಸೆ. ಆ ಹೆಂಗಸಿಗೆ, ’ನಮ್ಮ ಊರಿನಿಂದ ಸುದ್ದಿ ಬಂದಿದೆ, ನಾನು ಈಗಲೇ ಹಿಂದಕ್ಕೆ ಹೋಗಬೇಕಗಿದೆ,’ ಎಂದು ಹೇಳಿ ಹೊರಡುತ್ತಾನೆ. ಅವಳೂ ಅವಳ ಮಕ್ಕಳೂ ಅವನನ್ನು ಬೀಳ್ಕೂಳ್ಳಲು ಬಂದಿದ್ದಾರೆ. ಅವರಿಗೆ ನಿಜವಾಗಿ ದುಃಖ ಇವನು ದುಃಖವಾದಂತೆ ನಟಿಸುತ್ತಾನೆ. ಒಳಗೊಳಗೇ ಅವರನ್ನು ನೋಡಿ ನಗುತ್ತಾನೆ.

ಆದರೆ ವ್ಯಕ್ತಿ-ಸಮಾಜಗಳ ಇನ್ನೊಂದು ಮುಖವೂ ಇದೆ. ಸಮಾಜದಲ್ಲಿ ಪದ್ದತಿಗಳು, ಸಂಪ್ರದಾಯಗಳು ಬೆಳೆದು ಬರುತ್ತವೆ. ನ್ಯಾಯವೋ ಅನ್ಯಾಯವೋ ಈ ಪದ್ಧತಿಗಳನ್ನು, ಸಂಪ್ರದಾಯಗಳನ್ನು ಒಪ್ಪದೆ ಹೋದರೆ ಸಮಾಜ ಶಿಕ್ಷೆ ಕೊಡುತ್ತದೆ. ಈ ಪದ್ಧತಿಗಳಿಂದ, ಸಮಾಜದಾಯಗಳಿಂದ ಎಷ್ಟೋ ಜನಕ್ಕೆ ಅನ್ಯಾಯವಾಗುವುದುಂಟು.

ಉದಾಹರಣೆಗೆ, ನಮ್ಮ ಸಮಾಜದಲ್ಲಿ ಅನೇಕ ಪದ್ಧತಿಗಳಿಂದ ಹೆಂಗಸರಿಗೆ ತುಂಬಾ ಅನ್ಯಾಯವಾಗಿದೆ. ಶರತ್‌ಚಂದ್ರರು ತಮ್ಮ ಕತೆ-ಕಾದಂಬರಿಗಳಲ್ಲಿ ಸಂಸಾರದ ಜೀವನವನ್ನೂ ಅದರ ಕಷ್ಟ ಸುಖಗಳನ್ನೂ ಚಿತ್ರಿಸಿದ್ದಾರೆ. ಹೆಂಗಸರ ವಿಷಯದಲ್ಲಿ ಅವರಿಗೆ ಬಹು ಗೌರವ. ಅವರ ಕಷ್ಟಗಳನ್ನು ಕಂಡು, ಅದರಲ್ಲಿಯೂ ವಿಧವೆಯರ ಕಷ್ಟಗಳನ್ನು ಕಂಡು ಅವರಿಗೆ ತುಂಬಾ ಮರುಕ. ಅವರಿಗಾಗಿರುವ ಅನ್ಯಾಯವನ್ನು ಓದುಗರ ಮನಸ್ಸು ಕರಗುವಂತೆ, ಅವರು ಯೋಚನೆ ಮಾಡುವಂತೆ ಚಿತ್ರಿಸಿದ್ದಾರೆ. ಅವರು ಯೋಚನೆ ಮಾಡುವಂತೆ ಚಿತ್ರಿಸಿದ್ದಾರೆ. ಶ್ರೀಕಾಂತ ಅವರ ಒಂದು ಸೊಗಸಾದ ಕಾದಂಬರಿ. ಇಲ್ಲಿ ರಾಜಲಕ್ಷ್ಮಿ ಎಂಬುವಳನ್ನು ಅವಳ ಬಾಲ್ಯದ ಸಂಗಾತಿ “ಶ್ರೀಕಾಂತ” ಪ್ರೀತಿಸುತ್ತಾನೆ. ಆದರೆ ಅವಳು ವಯಸ್ಸಾದವನು ಒಬ್ಬನನ್ನು ಮದುವೆ ಆಗಬೇಕಾಗುತ್ತದೆ. ಸ್ವಲ್ಪ ಕಾಲದ ನಂತರ ಗಂಡನನ್ನು ಕಳೆದುಕೊಳ್ಳುತ್ತಾಳೆ. ಸಂಗೀತ ಕಚೇರಿ ಮಾಡಿ ಜೀವನ ನಡೆಸುತ್ತಾಳೆ. ಜನರಿಗೆ ಅವಳು ವಿಧವೆ ಎಂಬ ಕಾರಣದಿಂದ, ಸಂಗೀತದಿಂದ ಹೊಟ್ಟೆ ಹೊರೆಯುತ್ತಾಳೆ ಎಂಬ ಕಾರಣದಿಂದ ಅವಳಿಗೆ ಅವನಲ್ಲಿ ಪ್ರೇಮ. ಆದರೆ ಅವರ ಮದುವೆಗೆ ಸಮಾಜ ಅಡ್ಡ ಬರುತ್ತದೆ, ವಿಧವೆ ಮತ್ತೆ ಮದುವೆಯಾಗಕೂಡದು ಎನ್ನುತ್ತದೆ. ಅವಳ ಮತ್ತು ಅವನ ಜೀವನವೆಲ್ಲ ದುಃಖಮಯ-ಸಮಾಜದ ತಪ್ಪು ನಿಯಮದಿಂದ. ಅಲ್ಲದೆ ಶರತ್‌ಚಂದ್ರರು ತಮ್ಮ ಕಾದಂಬರಿಗಳಲ್ಲಿ ಸಮಾಜ ಗಂಡಸಿಗೊಂದು ನಿಯಮ, ಹೆಂಗಸಿಗೊಂದು ನಿಯಮ ಹೇಗೆ ಮಾಡುತ್ತದೆ ಎಂದು ತೋರಿಸುತ್ತಾರೆ. ಗಂಡಸೊಬ್ಬ ಹೆಂಗಸೊಬ್ಬಳನ್ನು ತೋರಿಸುತ್ತಾರೆ. ಗಂಡಸೊಬ್ಬ ಹೆಂಗಸೊಬ್ಬಳನ್ನು ಮದುವೆಯಾಗುತ್ತಾನೆ ಎಂದು ನಂಬಿಸಿ, ಅಮೇಲೆ ಮದುವೆಯಾಗದೆ ಹೋಗಬಹುದು. ಅಥವಾ ಅವಳಿಗೆ ಅವಮಾನ ಮಾಡಬಹುದು. ಇಂತಹ ಸಂದರ್ಭದಲ್ಲಿ ಹೆಂಗಸನ್ನು ಸಮಾಜ ತಿರಸ್ಕಾರದಿಂದ ಕಾಣುತ್ತದೆ, ಅವಳು ಪಾಪಿ ಎನ್ನುತ್ತದೆ. ಗಂಡಸಿಗೆ ಶಿಕ್ಷೆ ಇಲ್ಲ. ಇದು ಅನ್ಯಾಯ. ಮನಸ್ಸು ಶುದ್ಧವಾಗಿರುವುದು ಮುಖ್ಯ. ಹೆಂಗಸು ತಿಳಿಯದೆ ಅಥವಾ ದುರ್ಬಲಳಾಗಿ ಮೋಸ ಹೋದರೆ ಅವಳು ಪಾಪಿಯಲ್ಲ ಎಂದು ಪ್ರತಿಪಾದಿಸಿದರು ಶರತ್‌ಚಂದ್ರರು ಅವರ ಕಾದಂಬರಿಗಳಲ್ಲಿ ದೇವತೆಯಂತಹ ತಾಯಿ, ಪ್ರೇಮಮಯಿಯಾದ ಅಕ್ಕ, ಕರುಣಾಮಯಿಯಾದ ಹೆಂಡತಿ, ತ್ಯಾಗಮಯಿಯಾದ ತಂಗಿ ಮುಂತಾದ ಪಾತ್ರಗಳು ಕಾಣಿಸಿಕೊಂಡಿವೆ. ಇದಲ್ಲದೆ ಬಂಗಾಳದ ಗ್ರಾಮಿಣ ಸಮಾಜದ ಸ್ವಾರ್ಥಪರತೆ, ಕುತಂತ್ರ, ಕುಟಿಲತೆ, ಪ್ರೀತಿಹೀನತೆಯ ಅನೇಕ ಪ್ರಸಂಗಗಳನ್ನೂ ತಮ್ಮ ಕಾದಂಬರಿಗಳಲ್ಲಿ ಬಯಲಿಗೆಳೆದಿದ್ದಾರೆ. ಕಳ್ಳತನ, ಜೂಜು, ವಂಚನೆ, ಅಸೂಯೆ, ದ್ವೇಷಗಳಿಂದ ಮನೆಗೆ ಬೆಂಕಿ ಹಚ್ಚುವುದು, ಸುಳ್ಳುನಿಂದನೆ, ಹೆಣ್ಣಿನ ಅಪಮಾನ ನಡೆಸಿ ಬಲಿಷ್ಟರು ಹಳ್ಳಿಯನ್ನು ಯಾವ ರೀತಿ ನರಕವನ್ನಾಗಿ ಮಾಡಿರುತ್ತಾರೆ ಎಂಬುದನ್ನು ಯಾವ ರೀತಿ ನರಕವನ್ನಾಗಿ ಮಾಡಿರುತ್ತಾರೆ ಎಂಬುದನ್ನು ಚಿತ್ರಿಸಿದ್ದಾರೆ. “ಪಳ್ಳಿ ಸಮಾಜ” (ಹಳ್ಳಿಯ ಸಮಾಜ) ಎಂಬ ಕಾದಂಬರಿಯಲ್ಲಿ ಹಳ್ಳಿಯ ಜನರ ಬಡತನ, ಅಜ್ಞಾನ,ಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದಾರೆ. ಈ ಜನರಿಗೆ ಪದ್ದತಿ, ರೂಡಿ ಬಹು ಮುಖ್ಯ. “ಇತರರು ಏನನ್ನುವರೋ!” ಎಂಬ ಭಯ, ಹಿಂದಿನ ಪದ್ಧತಿಯನ್ನು ಬಿಡಲಾರದ ಭಯ. ಇವುಗಳಿಂದ ಹಳ್ಳಿಯ ಎಷ್ಟೋ ಜನ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿದರೂ ಇತರರು ಆಕ್ಷೇಪಿಸುತ್ತಾರೆ ಎಂಬ ಭಯದಿಂದ ದೂರವಾಗುತ್ತಾರೆ. “ಪಥೇರ್ ದಾಬಿನ” (ಮಾರ್ಗದ ಹಕ್ಕು ) ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕ್ರಾಂತಿವೀರನ ಕತೆ. ಇದು ಪುಸ್ತಕ ರೂಪದಲ್ಲಿ ಬಂದಾಗ ಬ್ರಿಟಿಷ್ ಸರ್ಕಾರ ಇದನ್ನು ಯಾರೂ ಓದಕೂಡದು ಎಂದು ಅಪ್ಪಣೆ ಮಾಡಿತು.

ಇವರ ನೀಳ್ಗತೆಗಳ ಪೈಕಿ “ಬಿಂದುವಾಸಿನಿಯ ಮಗ” ಸರ್ವೋತ್ಕೃಷ್ಟ ಕೃತಿ. ಹಣವಂತರ ಮನೆಯಲ್ಲಿ ಹುಟ್ಟಿದ ಬಿಂದುವಾಸಿನಿಗೆ ಶ್ರೀಮಂತಿಕೆಯ ಪೊಗರು, ಗರ್ವ. ಗಂಡನ ಮನೆಗೆ ಕಾಲಿಟ್ಟ ನಂತರ ಮನೆಮಂದಿಯೆಲ್ಲರ ಮೇಲಿನ ಅವಳ ಕಠೋರ ದರ್ಪ ಎಲ್ಲರನ್ನೂ ಚಿಟ್ಟು ಹಿಡಿಸಿತು. ಓರಗಿತ್ತಿ ಅನ್ನಪೂರ್ಣೆಯ ಮುವಿನ ಮೇಲೆ ಇವಳಿಗೆ ವಾತ್ಸಲ್ಯ, ಮಮತೆ ಬೇರೂರುತ್ತದೆ. ಕಡೆಗೆ ಆ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆಕೆಗೆ ಕೋಪ ಬರುತ್ತದೆ. ಇದರಿಂದ ಮನೆಯೇ ಇಬ್ಬಾಗವಾಗುತ್ತದೆ. ಅವಳಿಗೆ ಮೂರ್ಛೆಯ ರೋಗ ಬರುತ್ತದೆ. ಮತ್ತೆ ಮಗುವನ್ನು ಕರೆತಂದಾಗ ಇವಳ ಕಾಯಿಲೆ ಸಂಪೂರ್ಣವಾಗಿ ಗುಣವಾಗಿ ಎರಡು ಮನೆ ಒಂದಾಗುತ್ತದೆ. ನೋವು ಬಿಂದುವಾಸಿನಿಯ ಅಹಂಕಾರವನ್ನು ತಗ್ಗಿಸುತ್ತದೆ. ಅವಳೂ ಬುದ್ಧಿ ಕಲಿಯುತ್ತಾಳೆ.

ಕತೆಯ ಕಡೆಯಲ್ಲಿ ಹೃದಯ ಭಾರವಾದರೂ ಮನಸ್ಸಿನಲ್ಲಿ ಒಂದು ಬಗೆಯ ಸಮಾಧಾನವೂ ಆಗುತ್ತದೆ.

ಶರತ್‌ಚಂದ್ರರ ಮತ್ತೊಂದು ಮಹೋನ್ನತ ಕೃತಿ ದೇವದಾಸ ಈ ಕಾದಂಬರಿಯು ಇವರ ಪ್ರತಿಭೇಗೆ ನಿದರ್ಶನ. ಚಿತ್ತದ ದುರ್ಬಲತೆಯೇ ಇದರ ಕಥಾವಸ್ತು. ಬಾಲ್ಯದಲ್ಲಿ ಪಾರ್ವತಿ-ದೇವದಾಸ್ ಒಂದೇ ಶಾಲೆಯಲ್ಲಿ ಒಟ್ಟಿಗೆ ಒದಿ, ಅವರಿಬ್ಬರಲ್ಲಿ ಅಲ್ಲೇ ಪ್ರೀತಿ-ಸ್ನೇಹ ಬೆಳೆದು,ದೊಡ್ದವರಾಗಿ ಬೆಳೆದು ನಿಂತ ಮೇಲೆ ಸಾಮಾಜಿಕ ಕಾರಣಗಳು ಅವರನ್ನು ಬೇರೆ ಬೇರೆ ಮಾಡಿದವು. ‘ಚರಿತ್ರ ಹೀನ’ ಇವರ ಬಹು ಪ್ರಸಿದ್ಧ ಕಾದಂಬರಿ ಕಿರಣ್ಮಯಿ ಎಂಬುವಳು ಉಪೇಂದ್ರ ಎನ್ನುವವನನ್ನು ಪ್ರೀತಿಸುತ್ತಾಳೆ.ಸಾವಿತ್ರಿ ಎಂಬುವಳು ಸತೀಶ್ ಎನ್ನುವವನನ್ನು ಪ್ರೀತಿಸುತ್ತಾಳೆ. ಈ ಎರಡು ಕತೆಗಳು ಸೇರಿ ಕಾದಂಬರಿಯ ವಸ್ತುವಾಗಿದೆ. ಕಿರಣ್ಮಯಿ ಬಹು ಕುತೂಹಲಕರವಾದ ವ್ಯಕ್ತಿ. ಸಮಾಜದ ರೂಡಿ ಎಂದರೆ ಲಕ್ಷ್ಯ ವಿಲ್ಲ, ಜನರ ನಂಬಿಕೆಗಳೆಂದರೆ ಹಾಸ್ಯ. ತಾನು ಋಷಿಯಾಗಿರಬೇಕು, ಸುಖಪಡಬೇಕು ಎಂದಷ್ಟೇ ಆಸೆ.

ಶರತ್‌ಚಂದ್ರರ ಹಲವು ಕಾದಂಬರಿಗಳು ಇಂಗ್ಲಿಷ ಪ್ರೆಂಚ್, ಇಟಾಲಿಯನ್ ಹಾಗೂ ಅನೇಕ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ. ಅನೇಕ ಕಾದಂಬರಿಗಳು ಹಿಂದಿ, ಬಂಗಾಳಿ, ತಮಿಳು, ತೆಲಗು ಭಾಷೆಯಲ್ಲಿ ಚಲನಚಿತ್ರ ರೂಪ ಕಂಡಿವೆ.

ಶರತ್‌ಚಂದ್ರರಿಗೆ ೧೯೨೩ರಲ್ಲಿ ಕಲ್ಕತ್ತ ವಿಷ್ವವಿದ್ಯಾನಿಲಯ “ಜಗತ್ತಾರಿಣಿ” ಪದಕವನ್ನು ಕೊಟ್ಟು ಗೌರವಿಸಿತು. ೧೯೨೫ ರಲ್ಲಿ ಕಾನ್ ಪುರದಲ್ಲಿ ಸೇರಿದ್ದ ವಂಗಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಆದರೆ ಕಾಯಿಲೆಯಿಂದಾಗಿ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ೧೯೨೮ ರ ಜನವರಿ ೧೬ರಂದು ಅವರು ತೀರಿಕೊಂಡರು.

೧೯೨೦ರಲ್ಲಿ ಶರತ್‌ಚಂದ್ರರು ಯುವಕ ಪರಿಷತ್ತಿನ ಅಧ್ಯಕ್ಷಸ್ಥಾನದಿಂದ, “ಪರಕೀಯರ ಆಡಳಿತ ನಮ್ಮಗಳನ್ನು ಶಕ್ತಿ ಇಲ್ಲದವರಂತೆ ಮಾಡಿದೆ, ನಿಜ. ಆದರೆ ನಮ್ಮ-ನಮ್ಮ ಭಿನ್ನ-ಭಿನ್ನ ಭಾವನೆಗಳೇ ಇನ್ನೂ ಹೆಚ್ಚಾಗಿ ನಮ್ಮನ್ನು ಶಕ್ತಿ ಹೀನರನ್ನಾಗಿ ಮಾಡಲು ಕಾರಣವಾಗಿದೆ. ನಮ್ಮ ಏಳಿಗೆಗೆ ಇದು ಕಂಟಕಪ್ರಾಯವಾಗಿದೆ. ಈ ಸಮಾಜ ನಿಷ್ಕರುಣೆಯಿಂದ ತುಂಬಿದೆ. ಜಾತಿ-ಜಾತಿಗಳಲ್ಲಿ ದ್ವೇಷ ತುಂಬಿದೆ. ಹೆಂಗಸರನ್ನು ಈ ಸಮಾಜ ಕಡೆಗಣಿಸಿರುವುದು ನಮ್ಮ ದುರ್ದೆಶೆಗೆ ಕಾರಣ ” ಎಂದರು.

ವಾಸ್ತವಿಕತೆ – ಕಲೆ 

ಶರತ್‌ಚಂದ್ರರ ಕಾದಂಬರಿಗಳ ದೃಷ್ಟಿಯನ್ನು ಈ ಮಾತುಗಳು ಹೇಳುತ್ತವೆ. ತಮ್ಮ ಜಾತಿಯ ಕೆಲವರು, ಹಲವರು ಸಂಪ್ರದಾಯವಂತರು ಆಕ್ಷೇಪಿಸಿದರೂ ಕೂಲಿ ಮಾಡುವವರು, ದೀನದರಿದ್ರರು ಇವರೊಡನೆ ಅವರು ಬೆರೆತರು. ಎರಡು ಬಾರಿ ಮದುವೆಯಾದದ್ದೂ ಕಷ್ಟದಲ್ಲಿದ್ದ ಹುಡುಗಿಯರನ್ನೆ. ರವೀಂದ್ರನಾಥ ಠಾಕೂರರು ಬಂಗಾಳಿ ಭಾಷೆಯಲ್ಲಿ ವಾಸ್ತವಿಕ ಕಾದಂಬರಿಗಳನ್ನು-ಸುತ್ತಲಿನ ಜೀವನವನ್ನು ಚಿತ್ರಿಸುವ ಕಾದಂಬರಿಗಳನ್ನು- ಬರೆದರು. ಶರತ್‌ಚಂದ್ರರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಸಮಾಜದಲ್ಲಿ ಅನ್ಯಾಯಕ್ಕೆ ಸಿಕ್ಕಿದವರು, ಕಡೆಗೆ ನೂಲಿಸಿಕೊಂಡವರು, ತಮ್ಮ ಸ್ಥಿತಿಯನ್ನು ಹೇಳಿ ಕೊಳ್ಳುವುದಕ್ಕೆ-ಹೋರಾಡುವುದಕ್ಕೆ ಶಕ್ತಿ ಇಲ್ಲದವರು, ಸಂಪ್ರದಾಯ- ಕಟ್ಟಳೆಗಳಿಂದ ಅನ್ಯಾಯಕ್ಕೆ ಒಳಗಾದವರು-ಇವರ ಸ್ಥಿತಿಯನ್ನು ವಾಸ್ತವಿಕವಾಗಿ, ಅವರ ನೋವೇ ಭಾಷೆಯಲ್ಲಿ ರೂಪ ತಾಳುವಂತೆ ಚಿತ್ರಿಸಿದರು. ಸಮಾಜ ಒಪ್ಪದಿದ್ದರೂ ಅನ್ಯಾಯವಾದ ಕಟ್ಟಳೆಗಳನ್ನು ಮಿರಿದವರ ವಿಷಯದಲ್ಲಿ ಅವರಿಗೆ ತುಂಬಾ ಸಹಾನುಭೂತಿ.

ಶರತ್‌ಚಂದ್ರರು ಹುಟ್ಟು ಕತೆಗಾರರು. ಕತೆ ಅಥವಾ ಕಾದಂಬರಿ ಪ್ರಾರಂಭವಾದಾಗಿನಿಂದ ಓದುವವರ  ಮನಸ್ಸನ್ನು ಸೆರೆ ಹಿಡಿಯುವಂತೆ ಸ್ವಾರಸ್ಯವಾಗಿ ಕತೆಯನ್ನು ಹೇಳಿಕೊಂಡು ಹೋಗುತ್ತರೆ.

ಬದುಕಿದ್ದಾಗ ಶರತ್‌ಚಂದ್ರರು ಅಸಾಧಾರಣವಾದ ಜನಪ್ರಿಯತೆಯನ್ನು ಸಂಪಾದಿಸಿದರು. ಇಂದೂ ಅವರು ಬಡವರಿಗಾಗಿ, ಹಿಂದುಳಿದವವರಾಗಿ, ಅನ್ಯಾಯಕ್ಕೆ ಸಿಕ್ಕಿ ತುಳಿಸಿಕೊಳ್ಳುವವರಗಾಗಿ ತೋರಿದ ಸಹಾನುಭೂತಿ ಕತೆ ಹೇಳುವ ಅವರ ಕಲೆ ಶರತ್‌ಚಂದ್ರರ ಹೆಸರನ್ನು ಭಾರತದಲ್ಲೆಲ್ಲ ಹಸಿರಾಗಿಟ್ಟಿವೆ.