ಬಂಗಾಳ ಭಾರತದ ಆಧುನಿಕ ಚರಿತ್ರೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿದೆ. ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವ ಬೀರಿದ ಹಲವಾರು ಪ್ರತಿಭಾವಂತರಿಗೆ ಜನ್ಮವಿತ್ತಿದೆ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಜಗದೀಶಚಂದ್ರ ಬೋಸ್, ರವೀಂದ್ರನಾಥ ಠಾಕೂರರು ಇಂತಹ ಅಮರ ಚೇತನಗಳ ತವರು ಅದು ಎಂದು ಕೆಲವರು ಗೌರವಿಸುತ್ತಾರೆ. ಮತ್ತೆ ಕೆಲವರಿಗೆ ಅದೊಂದು ರಾಜಕೀಯ ಕ್ರಾಂತಿಕಾರರ ತಾಣ.

ಬಂಗಾಳದ ರಾಜಕೀಯ ಚರಿತ್ರೆಯಲ್ಲಿ ಮತ್ತು ಭಾರತದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಬಂಗಾಳದ ಬೋಸ್ ಮನೆತನ ಅತ್ಯಂತ ಪ್ರಭಾವಯುತವಾದ ಪಾತ್ರವನ್ನು ವಹಿಸಿದೆ. ಅದರಲ್ಲೂ ನೇತಾಜಿ ಸುಭಾಷ್ ಚಂದ್ರ ಬೋಸರು ವಹಿಸಿದ ಪಾತ್ರ ಅತ್ಯಂತ ಗಣನೀಯ ಮತ್ತು ಗಮನೀಯ.

ಭಾರತೀಯರಿಗೆಲ್ಲ ನೇತಾಜಿಯವರ ಹೆಸರು, ಅವರ ಸಾಧನೆ ತಿಳಿದಿದೆ. ಸುಭಾಷ್‌ಚಂದ್ರ ಬೋಸರಂತೆ ಇಡೀ ಭಾರತದ ರಾಜಕೀಯದಲ್ಲಿ ಕೈ ಹಾಕದೆ ತಮ್ಮ ರಾಜಕೀಯ ಚಟುವಟಿಕೆಗಳನ್ನು ಕೇವಲ ಬಂಗಾಳಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದವರು ಅವರ ಅಣ್ಣ ಶರತ್‌ ಚಂದ್ರ ಬೋಸರು. ಇತಿಹಾಸಕಾರರೊಬ್ಬರು ಬರೆದಿರುವಂತೆ “ಶರತ್‌ಚಂದ್ರರು ತಮ್ಮ ಕಾರ್ಯಕ್ಷೇತ್ರವನ್ನು ಇಡೀ ದೇಶಕ್ಕೆ ವ್ಯಾಪಿಸಿದ್ದಲ್ಲಿ, ಅವರು ದೇಶದ ರಾಜಕೀಯ ಬೆಳವಣಿಗೆಯಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸುತ್ತಿದ್ದರು”.

ಧೀರ ಪ್ರತಿಭಾವಂತ

ಶರತ್‌ಚಂದ್ರರದು ಬಹುಮುಖ ಪ್ರತಿಭೆ. ಅವರು ಕಾಂಗ್ರಸ್ಸಿನಲ್ಲಿದ್ದ ವಾಮಪಂಥೀಯರು. ಅಂದರೆ ಸ್ವಾತಂತ್ಯ್ರಗಳಿಸಲು ತೀವ್ರ ಕಾರ್ಯಕ್ರಮಗಳ ಪ್ರತಿಪಾದಕರು. ಸಮಾಜದಲ್ಲಿ ಬದಲಾವಣೆಗಳು ಬೇಗ ಬೇಗ ಆಗಬೇಕು, ಅದಕ್ಕಾಗಿ ಸರ್ಕಾರ ಅಗತ್ಯವಾದ ಕ್ರಮಗಳನ್ನು ವೇಗವಾಗಿ ಕೈಗೊಳ್ಳಬೇಕು ಎಂದು ಅವರ ನಂಬಿಕೆ. ಪ್ರಗತಿಪಂಥದ ವಿಚಾರಧಾರೆ, ಸಮಾಜವಾದಿ ಕಾರ್ಯಕ್ರಮಗಳತ್ತ ಅವರ ಒಲವು. ಅವರು ಕ್ರಾಂತಿಕಾರಕ ಚಟುವಟಿಕೆಗಳಿಗೆ ವಿರೋಧಿಯಾಗಿರಲಿಲ್ಲ. ಈ ಭಾವನೆಗಳೇ ಅವರ ಚಿತ್ತಗಾಂಗ್‌ನ ಮದ್ದುಗುಂಡುಗಳ ಅಪಹರಣಕಾರರಿಗೆ ಉಚಿತವಾಗಿ ವಕಾಲತ್ತು ವಹಿಸಲು ಮುಂದಾಗಲು ಕಾರಣ. ದೇಶದ ಸ್ವಾತಂತ್ಯ್ರವನ್ನು ಅಹಿಂಸೆಯಿಂದ ಸಾಧಿಸಲು ಸಾಧ್ಯವಿಲ್ಲವೆಂದು ನಂಬಿದ್ದ ಬಂಗಾಳದ ಕೆಲ ಕ್ರಾಂತಿಕಾರರು ಸರ್ಕಾರವು ಚಿತ್ತಗಾಂಗ್‌ನಲ್ಲಿದ್ದ ಮದ್ದುಗುಂಡುಗಳನ್ನಿಟ್ಟಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ ಸ್ವಾತಂತ್ಯ್ರ ಘೋಷಿಸಿದ್ದರು. ೧೯೩೦ರ ಏಪ್ರಿಲ್ ೧೮ರ ರಾತ್ರಿ ನಡೆದ ಈ ದಾಳಿಯಲ್ಲಿ ಕ್ರಾಂತಿಕಾರಿಗಳಾದ ಸೂರ್ಯಸೇನ್, ಗಣೇಶಘೋಷ್, ಅನಂತಸಿಂಗ್ ಮುಂತಾದವರು ಭಾಗವಹಿಸಿದ್ದರು. ಇವರ ಮೇಲೆ ಇಂದಿನ ಸರ್ಕಾರ ಮೊಕದ್ದಮೆ ಹೂಡಿದ್ದಿತು. ಶರತ್‌ಚಂದ್ರರು ಇವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ಮುಂದಾದರು. ಇದರಿಂದ ಬ್ರಿಟಿಷ್ ಸರ್ಕಾರಕ್ಕೆ ಅವರ ಮೇಲೆ ಕೋಪ ಬರುತ್ತದೆ ಎಂದು ಅವರಿಗೆ ತಿಳಿದಿತ್ತು. ಭಾರತದಲ್ಲಿಯೂ ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಿದ್ದ ಹಲವರು ನಾಯಕರೇ ಅಹಿಂಸೆಯಿಂದ ಹೋರಾಟ ನಡೆಸಬೇಕು ಎಂದು ಭಾವಿಸಿದ್ದರು. ಆದರೂ ಶರತ್‌ಚಂದ್ರರು ಅವರ ಪರ ವಕೀಲರಾದರು. ಶರತ್‌ಚಂದ್ರರು ತಮ್ಮ ಭಾವನೆಗಳನ್ನು ನಿರ್ಭೀತಿಯಿಂದ ಪ್ರಕಟಿಸುತ್ತಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ತನ್ನ ಪ್ರಭಾವವನ್ನು ಬೆಳೆಸಿಕೊಳ್ಳುತ್ತಿದ್ದ ಕಾಲ ಅದು. ಕಾಂಗ್ರೆಸ್ ವರಿಷ್ಠರೊಡನೆ ಶರತ್‌ಚಂದ್ರರ ಅವಿತರ ಹೋರಾಟ. ಪರಿಣಾಮವಾಗಿ ಅವರ ಬಗ್ಗೆ ಕೆಲವರು ಭ್ರಷ್ಟಾಚಾರದ ಆಪಾದನೆಗಳನ್ನು ಮಾಡಿದರೂ ಅವರು ತಾವು ನಂಬಿದ್ದ ತತ್ವಗಳಿಗಾಗಿ ಹೋರಾಡಿದರು. ಆದರೂ ಬಹು ವರ್ಷಗಳ ಕಾಲ ಕಾಂಗ್ರಸ್ಸನ್ನು ಅವರು ಬಿಡದೆ ಇದ್ದುದು ಒಂದು ಮಹತ್ಸಾಧನೆಯೆಂದೇ ಬೇಳಬೇಕು. ಆದರೆ ವಿರೋಧ ಬಹು ಪ್ರಬಲವಾದಾಗ ಅನಿವಾರ್ಯವಾಗಿ ಅವರು ಕಾಂಗ್ರೆಸ್ಸನ್ನು ಬಿಡಬೇಕಾಯಿತು. ತಮ್ಮ ಆದರ್ಶದ ಮತ್ತು ತತ್ವಗಳ ಪ್ರಚಾರಕ್ಕಾಗಿ ಹೊಸದೊಂದು ಪಕ್ಷ ಕಟ್ಟಿದರು. ಆದರೆ ವಿಧಿ ಅವರನ್ನು ಬಹುಬೇಗ ಕೊಂಡೊಯ್ದಿತು. ಅವರ ಶಕ್ತಿಪೂರ್ಣ ರಾಜಕಾರಣೀಯ ಚಟುವಟಿಕೆಗಳಿಗೆ ಪೂರ್ಣ ವಿರಾಮ ಹಾಕಿತು.

ಶರತ್‌ಚಂದ್ರ ಬೋಸ್‌ ಬಂಗಾಳದ ಮಹಾನಾಯಕ ಚಿತ್ತರಂಜನ್ ದಾಸ್ ರವರ ನಾಯಕತ್ವದಲ್ಲಿ ರಾಜಕೀಯ ಪ್ರವೇಶಿಸಿದರು. ಡಾಕ್ಟರ್ ಬಿ.ಸಿ. ರಾಯ್, ನಳಿನೀರಂಜನ್ ಸರ್ಕಾರ, ನಿರ್ಮಲಚಂದ್ರ ಚಂದರ್ ಮತ್ತು ತುಳಸೀ ಗೋಸ್ವಾಮಿಯವರ ಸಹಪಾಠಿಗಳಾಗಿದ್ದರು. ಸಿ.ಆರ್. ದಾಸ್‌ ರವರ ನಿಧನಾನಂತರ ಬಂಗಾಳದ ರಾಜಕೀಯದಲ್ಲಿ ಇವರು ಅತ್ಯಂತ ಮಹತ್ವಪೂರಿತ ಪಾತ್ರ ವಹಿಸಿದರು. ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಅವಿರತವಾಗಿ ಶ್ರಮಿಸಿದರು.

ರಾಷ್ಟ್ರಮಟ್ಟದಲ್ಲಿ ಗಾಂಧೀಜಿ, ನೆಹರೂ, ರಾಜಾಜಿ, ಸುಭಾಷ್‌ಚಂದ್ರಬೋಸ್‌, ರಾಜೇಂದ್ರಪ್ರಸಾದ್‌ ಇವರ ಜೊತೆ ಸೇರಿ ಕೆಲಸ ಮಾಡಿದರು. ಇವರಲ್ಲಿ ಅನೇಕ ನಾಯಕರೊಡನೆ ಇವರಿಗೆ ಭಿನ್ನಾಭಿಪ್ರಾಯವಿದ್ದರೂ ಅವೆಲ್ಲವನ್ನೂ ಪಕ್ಕಕ್ಕೆ ಸರಿಸಿ ದೇಶದ ಕೆಲಸಮಾಡಿದರು.

 

ಶರತ್‌ ಚಂದ್ರ ಬೋಸರು - ಸಿ.ಆರ್. ದಾಸರು

ಬಾಲ್ಯ ಶಿಕ್ಷಣ

ಶರತ್‌ಚಂದ್ರ ಬೋಸ್‌ರು ೧೮೮೯ರ ಸೆಪ್ಟೆಂಬರ್ ೭ ರಂದು ಕಟಕ್‌ನಲ್ಲಿ ಜನಿಸಿದರು. ಇವರ ತಂದೆ ಜಾನಕೀನಾಥ ಬೋದ್‌ರವರು. ಕಟಕ್‌ನ ಸುಪ್ರಸಿದ್ಧ ವಕೀಲರು. ಅವರ ತಾಯಿ ಪ್ರಭಾವತೀದೇವಿ. ಶರತ್‌ಚಂದ್ರರ ಪತ್ರಿಯ ಹೆಸರು ಬಿಭಾವತೀದೇವಿ. ಜಾನಕೀನಾಥ್ ಅವರಿಗೆ ಹದಿನಾಲ್ಕು ಮಂದಿ ಮಕ್ಕಳು. ಅವರಲ್ಲಿ ಆರು ಹೆಣ್ಣು ಮಕ್ಕಳು.

ಶರತ್‌ಚಂದ್ರರು ಕಟಕ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಕಾಲೇಜು ಶಿಕ್ಷಣವನ್ನು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಂದುವರೆಸಿದರು. ಎಂ.ಎ ಪದವಿ ನಂತರ ಬಿ.ಟಿ.ಯನ್ನೂ ಓದಿದರು. ಕಾಲೇಜಿನಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ೧೯೧೧ ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋದರು. ಬ್ಯಾರಿಸ್ಟರ್‌ ಆಗಿ ಭಾರತಕ್ಕೆ ಹಿಂದಿರುಗಿದರು.

ಪತ್ರಿಕೋಧ್ಯಮದ ನಂಟ ವಕೀಲ

೧೯೧೪ ರಲ್ಲಿ ಕಲ್ಕತ್ತ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ವಕೀಲಿಯಲ್ಲಿ ತುಂಬಾ ಯಶಸ್ವಿಗಳಾದರು, ಹಣದ ಸಂಪಾದನೆ ಚೆನ್ನಾಗಿದ್ದಿತು. ಆದರೆ ಭಾರತ ಆಗ ಬ್ರಿಟಿಷರ ಅಧೀನದಲ್ಲಿತ್ತು. ಸ್ವಾತಂತ್ಯ್ರಕ್ಕಾಗಿ ಹೋರಾಟ ಪ್ರಾರಂಭವಾಗಿತ್ತು. ಶರತ್‌ಚಂದ್ರರಿಗೆ ದೇಶದ ರಾಜಕೀಯದ ಕಡೆಗೆ ಮನಸ್ಸು ಎಳೆಯುತ್ತಿತ್ತು. ೧೯೨೩ ರಿಂದ ಸತ್ಯಾಗ್ರಹದಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಸುಪ್ರಸಿದ್ಧ ದೇಶಾಭಿಮಾನಿ ಸಿ.ಆರ್. ದಾಸ್‌ರವರು ೧೯೨೩ ರಲ್ಲಿ ಫಾರ್‌ವರ್ಡ್‌ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದರು. ಈ ಸಂಸ್ಥೆಯಲ್ಲಿಯೇ ೧೯೩೨ರ ವರೆಗೆ ಬೋಸ್‌ರವರು ಕೆಲಸ ಮಾಡಿದರು. “ಫಾರ್‌ವರ್ಡ್‌” ಎಂಬ ಪತ್ರಿಕೆಯನ್ನು ಈ ಸಂಸ್ಥೆಯೇ ಹೊರಡಿಸುತ್ತಿತ್ತು. ಈ ಪತ್ರಿಕೆಯಲ್ಲಿ ದೇಶ ಸ್ವಾತಂತ್ಯ್ರದ ಬಗ್ಗೆಯೂ, ದೇಶದ ಆರ್ಥಿಕ ಕ್ಷೇತ್ರದ ಧೋರಣೆ ಬಗ್ಗೆಯೂ ಲೇಖನಗಳು ಪ್ರಕಟವಾಗುತ್ತಿದ್ದವು. ಈ ಸಂಸ್ಥೆಯ ನಿದೇಶಕರಾಗಿ ಮೋತಿಲಾಲ್ ನೆಹರೂ, ಹಿಮ್ಮತ್ ಸಿಂಗ್‌ ಕಾ ಮತ್ತು ತುಳಸೀ ಗೋಸ್ವಾಮಿಯವರು ಇದ್ದರು. ಈ ಪತ್ರಿಕೆಗೆ ಚಿತ್ತರಂಜನ್ ದಾಸರು ಸಂಪಾದಕರು. ಆದರೆ ಬಹುಮಟ್ಟಿಗೆ ಅದರ ಹೊಣೆ ಹೊತ್ತವರು ಶರತ್‌ಚಂದ್ರರು. ೧೯೨೮ ರಲ್ಲಿ ಅವರು ಇಂಗ್ಲಿಷರ ಆಡಳಿತದಲ್ಲಿದ್ದ ರೈಲ್ವೆ ಕಂಪೆನಿಯನ್ನು ಕಟುವಾಗಿ ಟೀಕಿಸಿದರು. ಸರ್ಕಾರ ಪತ್ರಿಕೆಯನ್ನು ನಿಲ್ಲಿಸಬೇಕೆಂದು ಆಜ್ಞೆ ಮಾಡಿತು. “ಲಿಬರ್ಟಿ” ಎಂಬ ಪತ್ರಿಕೆಯನ್ನು  ಹೊರಡಿಸಿದರು. ಅದು ಕೆಲವು ಕಾಲ ನಡೆದು ನಿಂತುಹೋಯಿತು. ಪತ್ರಿಕೆಗಳಿಗೂ ಶರತ್‌ರವರಿಗೂ ನಂಟು ಹೆಚ್ಚು. ಕಾಂಗ್ರೆಸ್ ಪಕ್ಷ ಹೊರಡಿಸುತ್ತಿದ್ದ “ಅಡ್ವಾನ್ಸ್‌” ಪತ್ರಿಕೆಯ ಹೊಣೆಯನ್ನು ಬಹುಕಾಲ ಹೊತ್ತಿದ್ದರು. ಕಾಂಗ್ರೆಸ್‌ ಬಿಟ್ಟ ನಂತರ ಶರತ್‌ಚಂದ್ರರು ೧೯೪೮ “ದಿ ನೇಷನ್‌” ಎಂಬ ಇಂಗ್ಲಿಷ್ ದಿನಪತ್ರಿಕೆ ಆರಂಭಿಸಿದರು. ಈ ಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಆರ್ಥಿಕ ಮತ್ತು ರಾಜಕೀಯ ನೀತಿಗಳನ್ನು ಟೀಕಿಸುತ್ತಿದ್ದರು.

ಕಲ್ಕತ್ತದ ಜನಜೀವನದಲ್ಲಿ

ಶರತ್‌ಚಂದ್ರರು ಕಲ್ಕತ್ತ ನಗರದ ಜನಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಗರದ ಜನರು ಅಗತ್ಯಗಳ ಪೂರೈಕೆಯ ಹೊಣೆ ಹೊತ್ತಿದ್ದ ಪುರಸಭೆ (ಕಾರ್ಪೊರೇಷನ್‌)ಯನ್ನು ಪ್ರವೇಶಿಸಿದರು. ಕಲ್ಕತ್ತ ಕಾರ್ಪೋರೇಷನ್ನಿಗೆ ಶರತ್‌ರವರನ್ನು ಆಲ್ಡರ್‌ಮನ್‌ರನ್ನಾಗಿ ಆಯ್ಕೆಮಾಡಲಾಗಿದ್ದಿತು. ಕಲ್ಕತ್ತಾ ನಗರದ ಅಭಿವೃದ್ಧಿಗೆ ಇವರು ಸಿ.ಆರ್.ದಾಸ್., ಟಿ.ಸಿ. ಗೋಸ್ವಾಮಿ ಇವರ ಜೊತೆ ಕಾರ್ಪೋರೇಷನ್ನಿನಲ್ಲಿ ದುಡಿದರು. ಪ್ರಥಮ ಬಾರಿಗೆ ಬಂಗಾಳ ವಿಧಾನಸಭೆಗೆ ೧೯೨೯ ರಲ್ಲಿ ಆಯ್ಕೆಯಾದರು. ವಿಧಾನಸಭೆಯಲ್ಲಿ ಅವರ ವಿಚಾರಪೂರಿತ ಸತ್ವಪೂರ್ಣ ಭಾಷಣಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಸೆರೆಮನೆ

ರಾಜಕೀಯವಾಗಿ ಇವರು ಉಗ್ರವಾದಿಗಳೆನ್ನಿಸಿಕೊಂಡಿದ್ದರು. ಬ್ರಿಟಿಷ್‌ ಸರ್ಕಾರದೊಂದಿಗೆ ಸಂಧಾನ, ನಿಧಾನವಾದ ಚಳುವಳಿ ಇವರುಗಳು ಅವರಿಗೆ ಬೇಕಿರಲಿಲ್ಲ. ಜನ ಉಗ್ರವಾಗಿ ಹೋರಾಟಬೇಕು ಎಂದು ಅವರ ನಂಬಿಕೆ. ಬ್ರಿಟಿಷ್ ಸರ್ಕಾರಕ್ಕೆ ಸಹಜವಾಗಿ ಇವರ ಮೇಲೆ ಕೋಪ. ಇವರನ್ನು ೧೯೩೨ರ ಫೆಬ್ರವರಿ ೪ ರಂದು ಯಾವುದೇ ಕಾರಣವಿಲ್ಲದೆ ದಸ್ತಗಿರಿ ಮಾಡಲಾಯಿತು. ಬಂಗಾಳದಲ್ಲಿ ಆಗ ಜಾರಿಯಲ್ಲಿದ್ದ ೧೮೧೮ನೇ ರೆಗ್ಯುಲೇಷನ್ ಶಾಸನದಂತೆ ಯಾರನ್ನು ಬೇಕಾದರೂ ದಸ್ತಗಿರಿ ಮಾಡಲು ಸರ್ಕಾರಕ್ಕೆ ಅವಕಾಶವಿದ್ದಿತು. ಶರತ್‌ರವರ ಈ ಅನ್ಯಾಯದ ದಸ್ತಗಿರಿಯನ್ನು ಪ್ರತಿಭಟಿಸಿ ದೇಶದಾದ್ಯಂತ ಅದರಲ್ಲೂ ಪ್ರಮುಖವಾಗಿ ಬಂಗಾಳದಲ್ಲಿ ಅನೇಕ ಸಭೆಗಳು ನಡೆದವು. ೧೯೩೫ ರ ಜನವರಿ ೩೧ ರಂದು ನಡೆದ ಭಾರಿ ಬಹಿರಂಗ ಸಭೆ ಅವರ ಬಿಡುಗಡೆಗಾಗಿ ಸರ್ಕಾರವನ್ನು ಒತ್ತಾಯಪಡಿಸಿತು. ಬಂಗಾಳದ ವಿಧಾನ ಸಭೆಯು ಮಾಡಿತು. ೫೮ ಮಂದಿ ಸದಸ್ಯರಲ್ಲಿ ೫೪ ಮಂದಿ ಅದನ್ನು ಸಮರ್ಧಿಸಿದರು. ಇವುಗಳ ಪರಿಣಾಮವಾಗಿ ಸರ್ಕಾರ ಮಣಿದು ಅವರನ್ನು ೧೯೩೫ ಏಪ್ರಿಲ್ ೧೫ ರಂದು ಶರತ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಸೆರೆಮನೆಯಲ್ಲಿದ್ದ ಕಾರಣದಿಂದ ಅವರು ವಿಧಾನಸಭೆಗೆ ರಾಜೀನಾಮೆ ನೀಡಬೇಕಾಯಿತು.

ಈ ಸಮಯದಲ್ಲಿ ಬಂಗಾಳ ಕಾಂಗ್ರೆಸ್ಸಿನಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಈ ಭಿನ್ನಾಭಿಪ್ರಾಯ ಪರಿಹರಿಸುವುದರಲ್ಲಿ ಶರತ್ ಪ್ರಮುಖ ಪಾತ್ರವಹಿಸಿದರು.೧೯೪೦ ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಬಂಗಾಳಕ್ಕೆ ತಾತ್ಕಾಲಿಕ ಪ್ರದೇಶ ಕಾಂಗ್ರೆಸ್ ರಚಿಸಲು ತೀರ್ಮಾನಿಸಿತು.

ಒಂದು ಸತ್ವ ಪರೀಕ್ಷೆಯ ಕಾಲ

೧೯೩೯ ಕಾಂಗ್ರೆಸ್ಸಿನ ಇತಿಹಾಸದಲ್ಲಿ ಅತ್ಯಂತ ಸಂದಿಗ್ಧ ಕಾಲ. ಕಾಂಗ್ರೆಸ್‌ಪಕ್ಷ ಎರಡಾಗಿ ಒಡೆಯುವ ಪರಿಸ್ಥಿತಿ ಉಂಟಾಯಿತು. ತ್ರಿಪುರಾದಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಗಾಂಧೀಜಿ ನೇತೃತ್ವದಲ್ಲಿ ಬಲಪಂಥೀಯರು ಡಾಕ್ಟರ್‌ ಪಟ್ಟಾಭಿ ಸೀತಾರಾಮಯ್ಯನವರನ್ನು ಅಧ್ಯಕ್ಷತೆಗೆ ನಿಲ್ಲಿಸಿದರು. (ಬಲ ಪಂಥೀಯರು ಸಂಧಾನಗಳಿಗೆ, ಬದಲಾವಣೆಗಳು ನಿಧಾನವಾಗಿ ಆಗಬೇಕೆಂಬ ಅಭಿಪ್ರಾಯಕ್ಕೆ ಬೆಂಬಲ ಕೊಡುತ್ತಿದ್ದರು) ಆದರೆ ಉಗ್ರವಾದಿಗಳು ಶರತ್‌ಚಂದ್ರರ ತಮ್ಮ ಸುಭಾಷ್‌ಚಂದ್ರ ಬೋಸರನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಕಾಂಗ್ರೆಸ್ ಹೋರಾಟಕ್ಕೆ ಹೊಸ ತಿರುವು ಕೊಡುವುದು ಈ ಗುಂಪಿನ ಉದ್ದೇಶ. ಗಾಂಧೀಜಿ ಮತ್ತು ಅವರ ಅನುಯಾಯಿಗಳು ಈ ಪ್ರಯತ್ನವನ್ನು ತಮ್ಮ ನಾಯಕತ್ವಕ್ಕೆ ಒಡ್ಡಿದ ಸವಾಲೆಂದು ಭಾವಿಸಿದರು. ಮಹಾತ್ಮಾಜೀಯವರೇ ಒಂದು ಮನವಿಯನ್ನು ಹೊರಡಿಸಿ ಪಟ್ಟಾಭಿಯವರನ್ನು ಆಯ್ಕೆ ಮಾಡುವಂತೆ ಕೋಡಿದರು. ಪಟ್ಟಾಭಿಯವರು ಚುನಾವಣೆಯಲ್ಲಿ ಸೋತರು. ಈ ಸೋಲು ತಮ್ಮ ಸೋಲೆಂದು ಗಾಂಧೀಜಿ ಬಣ್ಣಿಸಿದರು.

೧೯೩೯ರ ಫೆಬ್ರವರಿ ೯ ರಂದು ತ್ರಿಪುರಾದಲ್ಲಿ ಕಾಂಗ್ರೆಸ್ ಅಧಿವೇಶನ ಸೇರಿತು. ಇದು ಭಾರತದ ಇತಿಹಾಸವನ್ನು ಬದಲಿಸಿದ ಅಧಿವೇಶದನ ಎಂದರೂ ತಪ್ಪಿಲ್ಲ. ಆದರೆ ಅತ್ಯಂತ ವಿಷಾದಕರ ಅಂಶವೆಂದರೆ ಶರತ್ ಬಾಬುಗಳನ್ನು ಬಿಟ್ಟು ಉಳಿದ ಹದಿಮೂರು ಸದಸ್ಯರು ಕಾಂಗ್ರೆಸ್ ಕಾರ್ಯಕಾರೀ ಸಮಿತಿಗೆ ರಾಜೀನಾಮೆ ಇತ್ತಿದ್ದರು. ಜ್ವರದಿಂದ ಸುಭಾಷರ ಅಧ್ಯಕ್ಷ ಭಾಷಣವನ್ನು ಶರತ್‌ಚಂದ್ರ ಬೋಸರೇ ಓದಿದರು. ಇದೇ ಸಭೆಯಲ್ಲಿ ಗೋವಿಂದ ವಲ್ಲಭ ಪಂತರು ಒಂದು ನಿರ್ಣಯ ಮಂಡಿಸಿದರು. ಅದು ಸುಭಾಷರ ಮೇಲೆ ಅವಿಶ್ವಾಸ ತರುವಂತಿದ್ದಿತು. ನಿರ್ಣಯದಲ್ಲಿ ಈ ಸಭೆಗೆ ಗಾಂಧೀಜಿ ನಾಯಕತ್ವದಲ್ಲಿ ನಂಬಿಕೆಯಿದೆ ಎಂದು ಸೂಚಿಸಲಾಗಿತ್ತು. ಅವರ ಉದ್ದೇಶ ಸ್ಪಸ್ಟವಾಗಿತ್ತು. ಶರತ್‌ರು ಈ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು. ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಮಾಡಲಾಗಲಿಲ್ಲ. ಏಪ್ರಿಲ್ ಅಥವಾ ಮೇ ನಲ್ಲಿ ನಡೆಯುವ ಎ.ಐ.ಸಿ.ಸಿ.ಯಲ್ಲಿ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲು ಒಪ್ಪಿದ ನಂತರವೇ ಈ ನಿರ್ಣಯ ಹಿಂದಕ್ಕೆ ಹೋದುದು. ಆದರೆ ಕಾಂಗ್ರೆಸ್‌ ನಾಯಕರ ನಡವಳಿಕೆಯಿಂದ ಬೇಸತ್ತ ಸುಭಾಷ್ ಬೋಸರು ಏಪ್ರಿಲ್ ೨೭ ರಂದು ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. ಸುಭಾಷ್ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡಿದ ಪ್ರಯತ್ನಗಳು ವಿಫಲವಾದುವು. ರಾಜೇಂದ್ರ ಪ್ರಸಾದರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಪ್ರಸಾದರು ಶರತ್‌ರವರನ್ನು ಕಾರ್ಯಕಾರೀ ಸಮಿತಿಗೆ ಸದಸ್ಯರಾಗಲು ಕೋರಿದರು. ಶರತ್‌ ಅದನ್ನು ತಿರಸ್ಕರಿಸಿದರು. ತ್ರಿಪುರಾ ಕಾಂಗ್ರೆಸ್‌ನ ನಡೆವಳಿಕೆಗಳಿಂದ ಅವರ ಮನಸ್ಸು ನೊಂದಿತ್ತು. ಅದನ್ನು ತೋಡಿಕೊಂಡು ಗಾಧೀಜಿಯವರಿಗೆ ಅವರು ಬರೆದರು. ಇಂದಿಗೂ ಅವರು ಹೇಳಿದ ಮಾತುಗಳು ನಿತ್ಯ ಸತ್ಯವಾಗಿವೆ. ಅದರಲ್ಲಿ ಅವರು ತಮ್ಮ ಹೃದಯವನ್ನೇ ತೆರೆದಿಟ್ಟಿದ್ದಾರೆ.

ಗಾಂಧೀಜಿಗೆ ಪತ್ರ

೧೯೩೯ ರಲ್ಲಿ ಭಾರತದಲ್ಲಿ ಮಹಾತ್ಮ ಗಂಧಿಯವರು ತುಂಬ ಗೌರವಗಳಿಸಿ ಪ್ರಭಾವ ಬೀರುತ್ತಿದ್ದ ನಾಯಕರಾಗಿದ್ದರು ಎಂಬುದನ್ನು ನೆನಪಿಡಬೇಕು. ಶರತ್‌ಚಂದ್ರರಿಗೂ ಅವರ ವಿಷಯದಲ್ಲಿ ಹೆಚ್ಚಿನ ಗೌರವವಿತ್ತು. ಆದರೂ ಅವರು ತಮ್ಮ ಪತ್ರದಲ್ಲಿ ತಮ್ಮ ಅಭಿಪ್ರಾಯಗಳನ್ನೂ ಟೀಕೆಗಳನ್ನೂ ಸ್ಪಷ್ಟವಗಿ ನಿರ್ಭಯವಾಗಿ ವ್ಯಕ್ತಪಡಿಸಿದರು. ಅವರು ಹೀಗೆ ಬರೆದರು. “ನಿಮ್ಮ ನೆಚ್ಚಿನ ಶಿಷ್ಯರೆಂದು ಜನ ಯಾರನ್ನು ತಿಳಿದಿದೆಯೋ ಅವರು ತ್ರಿಪುರಾದಲ್ಲಿ ಪ್ರದರ್ಶಿಸಿದ ಸತ್ಯ ಮತ್ತು ಅಹಿಂಸೆಗಳ ಪ್ರದರ್ಶನ, ನಿಮ್ಮ ಮಾತಿನಲ್ಲೆ ಹೇಳುವುದಾದರೆ “ದುರ್ನಾತ ಬಡಿಯುತ್ತಿತ್ತು”. “ಇದೇ ಕಾಗದದಲ್ಲಿ ಶರತ್‌ಚಂದ್ರರು ಒಂದು ಎಚ್ಚರಿಕೆಯ ಮಾತನ್ನು ಹೇಳಿದರು.” “ನಿಮ್ಮ ಪ್ರತಿಷ್ಠೆ ಮತ್ತು ಪ್ರಭಾವದಿಂದ ಕಾಂಗ್ರೆಸ್ಸನ್ನು ನಡೆಸಲು ನಿಮ್ಮ ಬೆಂಬಲಿಗರಿಗೆ ನೀವು ಬಿಡಬಹುದು. ಹಾಗೆ ಮಾಡಿದರೂ ಅದು ನೀವು ಇರುವವರೆಗೆ ಜೀವಂತವಾಗಿರುತ್ತದೆ ಅಷ್ಟೆ.” ಹಲವರು ಕಾಂಗ್ರೆಸ್ ಮಂತ್ರಿಗಳು ನಡೆದುಕೊಂಡ ರೀತಿಯನ್ನು ವಿವರಿಸುತ್ತ ಅವರು ಇಡೀ ಕಾಂಗ್ರೆಸ್ ಮತ್ತು ಭಾರತದ ಕಲ್ಯಾಣವನ್ನು ಕುರಿತು ಅವರು ಯೋಚಿಸಲಿಲ್ಲ. ಅದಕ್ಕಾಗಿ ಕೆಲಸ ಮಾಡಲಿಲ್ಲ ಎಂದು ಹೇಳಿ, ಹೀಗಾದರೆ ಕಾಂಗ್ರೆಸಿನಲ್ಲಿ ಹಿಂಸಾತ್ಮಕ ಶಕ್ತಿಗಳು ಹುಟ್ಟಿಕೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದರು.

ಈ ಪತ್ರ ಶರತ್‌ಚಂದ್ರರ ಪ್ರಾಮಾಣಿಕತೆ, ದೇಶಾಭಿಮಾನ, ನಿರ್ಭಯ ನಡತೆಗಳಿಗೆ ಸಾಕ್ಷಿ. ಗಾಂಧೀಜಿಯವರೇ ತಪ್ಪು ಮಾಡಿದರು ಎಂದು ಅವರಿಗೆ ತೋರಿದಾಗ ಹಾಗೆಂದು ಹೇಳಲು ಶರತ್‌ಚಂದ್ರರು ಹಿಂದೆಗೆಯಲಿಲ್ಲ. “ಅಧ್ಯಕ್ಷರ ಚುನಾವಣೆಯಾದ ನಂತರ ನೀವು ಒಂದು ಹೇಳಿಕೆ ಕೊಟ್ಟು ಪಟ್ಟಾಭಿ ಸೀತಾರಾಮಯ್ಯನವರ ಸೋಲು ನಿಮ್ಮ ಸೋಲು ಎಂದು ಹೇಳಿದ್ದೀರಿ. ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳೆಂದು ನಾನು ಹೇಳಬಯಸುತ್ತೇನೆ. ಇಲ್ಲಿ ನಿಮ್ಮ ನಾಯಕತ್ವದಲ್ಲಿ ವಿಶ್ವಾಸ ಅಥವಾ ಅವಿಶ್ವಾಸದ ಪ್ರಶ್ನೆಯೇ ಇರಲಿಲ್ಲ. ಇದು ಕಾಂಗ್ರೆಸ್ಸಿನ ಆಡಳಿತ ನಡೆಸುತ್ತಿರುವ ಒಂದು ಗುಂಪಿನ ಸೋಲು” ಎಂದು ಗಾಂಧೀಯವರಿಗೆ ಬರೆದರು. “ನಿಮ್ಮ ಆರೋಗ್ಯ ಕೆಡುತ್ತಿದೆ. ಅದು ದೇಶದ ದೌರ್ಭಾಗ್ಯ. ನಿಮ್ಮ ಅನಾರೋಗ್ಯದ ದೆಸೆಯಿಂದ ನೀವೇ ವಿಷಯಗಳನ್ನು ಸ್ವತಃ ತಿಳಿಯಲು ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ನೀವು ನಿಮ್ಮ ಸುತ್ತಮುತ್ತ ಇರುವವರ ಮಾತಿಗೆ ಬಲೆ ಕೊಡಬೇಕಾಗುತ್ತದೆ” ಎಂದರು.

ಪ್ರಗತಿವಾದಿ

ಕಾಂಗ್ರೆಸ್ಸಿನಲ್ಲಿ ಪ್ರಗತಿಪರ ವಿಚಾರವಾದಿಗಳ ಪಕ್ಷ ಶರತ್‌ರವರದು, ಆದರೆ ಬಲಪಂಥೀಯರದು ಈ ಗುಂಪಿನ ಮೇಲೆ ತೀವ್ರದಾಳಿ. ತೀವ್ರಕರ ಕಾರ್ಯಕ್ರಮಗಳನ್ನು ರಾಜಕೀಯವಾಗಿ ತೆಗೆದಕೊಳ್ಳಬೇಕೆಂದಿದ್ದ ಒಂದು ಗುಂಪು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ “ಫಾರ್ವರ್ಡ್‌ ಬ್ಲಾಕ್” ಎಂದು ಕರೆದುಕೊಂಡಿತು. ಇದರ ಅತ್ಯಂತ ಪ್ರಭಾವಶಾಲಿ ಸದಸ್ಯರಾಗಿದ್ದರು ಶರತ್‌. ಸುಭಾಷ್ ಚಂದ್ರ ಬೋಸರ ಆಶೀರ್ವಾದ ಇದಕ್ಕೆ ಇದ್ದುದು ಮತ್ತೊಂದು ವಿಶೇಷ. ೧೯೩೬ರಲ್ಲಿ ಸುಭಾಷ್ ಕಾಂಗ್ರೆಸ್ ಬಿಟ್ಟಾಗ, ಫಾರ್ವರ್ಡ್‌ ಬ್ಲಾಕ್‌ ಒಂದು ಪ್ರತ್ಯೇಕ ಪಕ್ಷವಾಗಿ ಪರಿವರ್ತಿತವಾಯಿತು.

ಹಿಂದೂ-ಮುಸ್ಲಿಂ ಐಕ್ಯತೆ ಬಗ್ಗೆ ಉಚಿತ ಅಭಿಪ್ರಾಯ ಶರತ್‌ ಹೊಂದಿದ್ದರು ಅವರ ವಿಚಾರಧಾರೆ  ಈ ವಿಷಯದಲ್ಲಿ ಸಿ.ಆರ್.ದಾಸ್‌ರವರಿಂದ ಪ್ರೇರಿತವಾಯಿತು. ಸಿ.ಆರ್. ದಾಸ್ ಬಂಗಾಳದ ಮಹಾನಾಯಕರಲ್ಲಿ ಒಬ್ಬರು. ಅವರು ಸ್ವರಾಜ್ಯ ಪಕ್ಷದ ನಾಯಕರಾಗಿದ್ದರು. ಕಲ್ಕತ್ತಾ ಕಾರ್ಪೋರೇಷನ್ ಮೇಯರ್ ಆಗಿದ್ದರು. ಬಂಗಾಳದ ರಾಜಕೀಯದಲ್ಲಿ ಅದ್ವಿತೀಯ ನಾಯಕರು.

ಬಂಗಾಳವನ್ನು ಒಡೆಯುವುದು ಬೇಡ

ಭಾರತಕ್ಕೆ ಸ್ವಾತಂತ್ಯ್ರ ನೀಡಿದಾಗ ಅದನ್ನು ಎರಡು ಭಾಗವಾಗಿ ಒಡೆದು ಪಾಕಿಸ್ತಾನ್ ಎಂಬ ಹೊಸ ದೇಶವನ್ನು ಸೃಷ್ಟಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಬಂಗಾಳದ ಒಂದು ಭಾಗದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು. ಇನ್ನೊಂದರಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು. ಆದುದರಿಂದ ಬಂಗಾಳ ಪ್ರಾಂತವನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಭಾರತಕ್ಕೂ ಇನ್ನೊಂದು ಭಾಗವನ್ನು ಪಾಕಿಸ್ತಾನಕ್ಕೂ ಕೊಡಬೇಕೆಂಬ ಸಲಹೆಯೂ ಬಂದಿತು. ಈ ಸಲಹೆ ಬರುವ ಮೊದಲೇ ಶರತ್‌ಚಂದ್ರರು ಬಂಗಾಳವನ್ನು ಎರಡು ಹೋಳುಗಳಾಗಿ ಮಾಡುವುದು ಕೂಡದು ಎಂದು ವಾದಿಸಿದ್ದರು. ಬಂಗಾಳದಲ್ಲಿ ಹಿಂದೂಗಳು ಮುಸ್ಲಿಮರು ನೂರಾರು ವರ್ಷಗಳಿಂದ ಒಟ್ಟಾಗಿ ಬಾಳಿದ್ದಾರೆ, ಬಂಗಾಳಿ ಇಬ್ಬರಿಗೂ ಭಾಷೆಯಾಗಿದೆ. ಬಂಗಾಳ ಭಾರತಕ್ಕೆ ಸೇರುವುದೂ ಬೇಡ ಪಾಕಿಸ್ತಾನಕ್ಕೆ ಸೇರುವುದೂ ಬೇಡ ಎರಡು ಭಾಗವಾಗುವುದೂ ಬೇಡ. ಇಡೀ ಬಂಗಾಳ ಒಂದು ಸ್ವತಂತ್ರವಾದ ದೇಶವಾಗಲಿ ಎಂಬ ಸಲಹೆಯನ್ನು ಅವರು ಗಾಂಧೀಜಿಯವರ ಮುಂದಿಟ್ಟರು. ಈ ಸಲಹೆಯನ್ನು ಮುಂಸ್ಲಿಂಲೀಗಿನ ಕೆಲವರು ನಾಯಕರೂ ಸಮರ್ಥಿಸಿದರು. ಆದರೆ ಕಾಂಗ್ರೆಸ್‌ ಮತ್ತು ಮುಸ್ಲಿಂ ಲೀಗುಗಳು ಬಂಗಾಳದ ವಿಭಜನೆಗೆ ತೀರ್ಮಾನ ಮಾಡಿದವು. ತಮ್ಮ ಸಲಹೆಯನ್ನು ಕಾಂಗ್ರೆಸ್‌ನಾಯಕರೂ ಸಾಕಷ್ಟು ಗಮನಕೊಟ್ಟು ಪರಿಶೀಲಿಸಲಿಲ್ಲ. ಅದರ ಅನುಕೂಲ ಅನಾನುಕೂಲಗಳನ್ನು ಯೋಚಿಸಿ ತೀರ್ಮಾನ ಮಾಡಲಿಲ್ಲ ಎಂದು ಶರತ್‌ಚಂದ್ರರ ಮನಸ್ಸಿಗೆ ನೋವಾಯಿತು,

 

"ಬೋಸ್‌" ಸಹೋದರರು

ಅಭಿಜಿತ ಬಂಗಾಳದ ಬಗ್ಗೆ ಅವರು ಸಾಕಷ್ಟು ಪತ್ರ ವ್ಯವಹಾರವನ್ನು ಗಾಂಧೀಜಿಯವರೊಂದಿಗೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಚಾರಿತ್ಯ್ರವಧೆ ಪ್ರಯತ್ನವನ್ನು ಕೆಲ ಕಾಂಗ್ರೆಸ್‌ ನಾಯಕರು ಮಾಡಿದುದು ದುರದೃಷ್ಟಕರ. ಅವರು ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನಕ್ಕೆ ತಪ್ಪು ಅರ್ಥ ಕೊಟ್ಟು ಅವರನ್ನು ಕೆಲವರು ವೈಯಕ್ತಿಕವಾಗಿ ಟೀಕಿಸಿದರು.

ಸಂಪೂರ್ಣ ಸ್ವಾತಂತ್ಯ್ರದ ಕನಸು

ಭಾರತ ವಿಭಜಿತವಾಗಿ ಸ್ವಾತಂತ್ಯ್ರಗಳಿಸಿದ್ದು ಅವರಿಗೆ ಸಂತೋಷದಾಯಕವಾಗಿರಲಿಲ್ಲ. ಸ್ವಾತಂತ್ಯ್ರ ಬಂದ ನಂತರ ಭಾರತ ಬ್ರಿಟಿಷ್ ರಾಷ್ಟ್ರದ ಒಕ್ಕೂಟದಲ್ಲಿ ಕಾಮನ್‌ವೆಲ್ತ್‌ನಲ್ಲಿ ಉಳಿಯಬೇಕು ಎಂಬ ಪ್ರಶ್ನೆ ಬಂದಿತು. ಹಿಂದೆ ಬ್ರಿಟನ್ನಿನ ಸಾಮ್ರಾಜ್ಯಕ್ಕೆ ಸೇರಿದ ದೇಶಗಳು ಪರಸ್ಪರ ಸಂಬಂಧವನ್ನು ಉಳಿಸಿಕೊಂಡು ಬರಲು ಮಾಡಿಕೊಂಡ ವ್ಯವಸ್ಥೆ ಇದು. ಭಾರತ ಇದರಲ್ಲಿ ಉಳಿಯುವುದು ಶರತ್‌ಚಂದ್ರರಿಗೆ ಒಪ್ಪಿಗೆ ಇರಲಿಲ್ಲ. ಆದರೆ ಹಾಗೆ ಉಳಿಯಲು ಭಾರತ ಸರ್ಕಾರ ತೀರ್ಮಾನಿಸಿತು. ಇದರಿಂದಲೂ ಅವರಿಗೆ ಸಂತೋಷವಾಯಿತು. ಬ್ರಿಟಿಷ್ ಅಥವಾ ಯಾವುದೇ ರಾಷ್ಟ್ರದ ಪ್ರಭಾವಕ್ಕೆ ಒಳಗಾಗದ ಸ್ವತಂತ್ಯ್ರ ಭಾರತ ಅವರ ಗುರಿಯಾಗಿತ್ತು. ಇಷ್ಟೆಲ್ಲ ಭಿನ್ನಾಭಿಪ್ರಾಯವಿದ್ದರೂ ಅವರು ಕಾಂಗ್ರೆಸ್ಸಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು. ಆದರೆ “ಇನ್ನು ಮುಂದೆ ಸಾಧ್ಯವೇ ಇಲ್ಲ” ಎಂಬ ಸ್ಥಿತಿ ಉಂಟಾಗಿ ಅವರು ೧೯೪೬ ರ ಕೊನೆಯಲ್ಲಿ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದರು.

ಆರ್ಥಿಕವಾಗಿ ರಾಜಕೀಯವಾಗಿ ಅವರಿಗೆ ಸಮಾಜವಾದದಲ್ಲಿ ನಂಬಿಕೆ (ಸಮಾಜವಾದ ಎಂದರೆ ದೇಶದಲ್ಲಿ ಮುಖ್ಯ ಉತ್ಪನ್ನಗಳ ಕೈಗಾರಿಕೆಗಳೆಲ್ಲ ಸರ್ಕಾರದ ವಶದಲ್ಲಿರಬೇಕು, ಇಡೀ ಸಮಾಜಕ್ಕೆ ಸೇರಿರಬೇಕು, ಭಾರಿ ಆದಾಯ ತರುವ ಮತ್ತು ಜನಜೀವನಕ್ಕೆ ಅಗತ್ಯವಾದ ವಸ್ತುಗಳ ತಯಾರಿಕೆಯನ್ನು ಖಾಸಗಿ ಜನರಿಗೆ ಬಿಡಬಾರದು, ಸಮಾಜದಲ್ಲಿ ಶ್ರೀಮಂತರು-ಬಡವರ ನಡುವೆ ಆದಾಯದ ವ್ಯತ್ಯಾಸ ಕಡಿಮೆಯಾಗಬೇಕು, ಕೆಲವರು ಇತರರಿಂದ ದುಡಿಸಿಕೊಂಡು ಲಾಭ ಮಾಡಿಕೊಂಡು ಶ್ರೀಮಂತರಾಗುತ್ತ ಹೋಗಲು ಅವಕಾಶ ಇರಬಾರದು ಎಂಬ ಪಂತದವಾದ. ಭಾರತದ ಬಡತನದ ನಿವಾರಣೆಗೆಸ ಸಮಾಜವಾದವೇ ಮದ್ದು ಎಂಬುದು ಅವರ ನಂಬಿಕೆ. ಅವರ ದೃಷ್ಟಿಯಲ್ಲಿ ಕಾಂಗ್ರೆಸ್ಸಿನ ನೀತಿ ಬ್ರಿಟಿಷ್ ಗುಲಾಮತನದಿಂದ ಇನ್ನೊಂದು ಗುಲಾಮತನಕ್ಕೆ ಒಯ್ಯುತದೆ. ಇದು ದೇಶದ ಆರ್ಥಿಕ ಮತ್ತು ರಾಜಕೀಯ ವಿನಾಶ ಅಷ್ಟೆ. ಈ ಅಭಿಪ್ರಾಯಗಳನ್ನು ಅವರು ೧೯೪೭ ರಲ್ಲಿ ಪ್ರತಿಪಾದಿಸಿದ್ದರು

ಭಾರತ ಸ್ವತಂತ್ರವಾಗುವ ಸ್ವಲ್ಪ ಮೊದಲೇ ಬ್ರಿಟಿಷರು ಭಾರತೀಯ ಮಂತ್ರಿಗಳ ಸರ್ಕಾರಕ್ಕೆ ಬಹುಮಟ್ಟಿನ ಅಧಿಕಾರ ವಹಿಸಿಕೊಟ್ಟರು. ಜವಾಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿ ಆದರು. ತಮ್ಮ ಮಂತ್ರಿಮಂಡಲವನ್ನು ಸೇರುವಂತೆ ಅವರು ಶರತ್‌ಚಂದ್ರರನ್ನು ಆಹ್ವಾನಿಸಿದರು. ಸ್ವಲ್ಪ ಕಾಲ ಶರತ್‌ಚಂದ್ರರು ಮಂತ್ರಿಗಳೂ ಆಗಿದ್ದರು. ಆದರೆ ಕಾಂಗ್ರೆಸಿನದು ಆಮೆ ನಡಿಗೆ, ಅಲ್ಲದೆ ಅದರ ಧೋರಣೆ ಸಾಕಷ್ಟು ಪ್ರಗತಿಪರವಲ್ಲ, ಸಾಮಾನ್ಯ ಜನರ ಸ್ಥಿತಿ ಉತ್ತಮಗೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಅದು ಸಿದ್ಧವಿಲ್ಲ ಎಂದು ಅವರಿಗೆ ತೋರಿತು. ಅವರು ಮಂತ್ರಿ ಮಂಡಲವನ್ನೂ ಕಾಂಗ್ರೆಸನ್ನೂ ಬಿಟ್ಟರು.

ಶರತ್ಚಂದ್ರರ ದೂರದೃಷ್ಟಿ ವಿಫಲ

ಕಾಂಗ್ರೆಸ್‌ ನೀತಿಗಳ ಪರಿಣಾಮವಾಗಿ ಬಂಗಾಳದಲ್ಲಿ ಶರತ್ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಯತು. ಬಂಗಳದ ರಾಜಕೀಯದಲ್ಲಿ ಫಜಲುಲ್‌ಹಕ್ ಎಂಬುವರು ಕೆಲಕಾಲ ಬಹಳ ಪ್ರಮುಖರಾಗಿದ್ದರು. ಅವರು ಕೆಲಕಾಲ ಕಾಂಗ್ರೆಸ್ಸಿನಲ್ಲಿದ್ದರು. ಆದರೆ ಅನಂತರ ಕಾಂಗ್ರೆಸ್ ಬಿಟ್ಟು ಕೇಷಿಕ ಪ್ರಜಾಪಕ್ಷವನ್ನೂಕಟ್ಟಿದರು. ೧೯೩೭ರಲ್ಲಿ ನಡೆದ ಪ್ರಾಂತೀಯ ಪ್ರಜಾಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಇವರ ಪಕ್ಷ ಗಣನೀಯ ಸ್ಥಾನಗಳಿಸಿತ್ತು. ಶರತ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ೬೦ ಸ್ಥಾನಗಳನ್ನು ಗಳಿಸಿತು. ಆಗ ಬಂಗಾಳದಲ್ಲಿ ಮುಸ್ಲಿಂ ಲೀಗ್ ಪ್ರಭಾವ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಫಜಲುಲ್‌ ಹಕ್ಕರು ಕಾಂಗ್ರೆಸಿನ ಜೊತೆಗೆ ಅಲ್ಲಿ ಸರ್ಕಾರ ರಚಿಸಲು ಸಿದ್ಧರಾಗಿದ್ದರು. ಶರತ್ ಚಂದ್ರರಿಗೂ ಇದು ಸರಿ ಎನ್ನಿಸಿತು. ಆದರೆ ಕಾಂಗ್ರೆಸಿನ ನಾಯಕರು ಈ ಸಲಹೆಯನ್ನು ಒಪ್ಪಲಿಲ್ಲ. ಪರಿಣಾಮವಾಗಿ ಹಕ್ ಅವರು ಮುಸ್ಲಿಂ ಲೀಗ್ ಜೊತೆ ಸೇರಿ ಸರ್ಕಾರ ರಚಿಸಿದರು. ಕಾಂಗ್ರೆಸಿನ ಈ ತಪ್ಪಿನ ಪರಿಣಾಮವಾಗಿ ಬಂಗಾಳದಲ್ಲಿ ಹಿಂದೂ-ಮುಸ್ಲೀಮ ಐಕ್ಯತೆಗೆ ಭಂಗ ಬಂದುದೇ ಅಲ್ಲದೆ ಅದು ವಿಭಜಿತವೂ ಆಯಿತು. ಭಿನ್ನಾಭಿಪ್ರಾಯ ತೀವ್ರ ರೀತಿಯಲ್ಲಿ ಬೆಳೆದು ಶರತ್‌ರವರು ತಪ್ಪಾಗಿ ನಡೆದುಕೊಂಡರೆಂದು ಕಾಂಗ್ರೆಸಿನ ನಾಯಕರು ತೀರ್ಮಾನಿಸಿದರು. ಅವರನ್ನು ಕಾಂಗ್ರೆಸ್ ಶಾಸನ ಸಭಾ ಪಕ್ಷದ ನಾಯಕತ್ವದಿಂದ ತೆಗೆದುಹಾಕಲಾಯಿತು. ಶಾಸನ ಸಭೆಯಲ್ಲಿ ಶರತ್‌ಗೆ ಬಹುಮತವಿದ್ದು ಅವರು ರಾಜೀನಾಮೆಯನ್ನು ಕೊಡಲಿಲ್ಲ.

ಈ ಸಮಯದಲ್ಲಿ ನೇತಾಜಿ ಬೋಸ್‌ರವರು ಸೆರೆಮನೆಯಲ್ಲಿದ್ದರು. ಕಾಂಗ್ರೆಸ್ ಪಕ್ಷ ಶರತ್‌ರವರ ಮೇಲೆ ಕ್ರಮ ತೆಗೆದುಕೊಂಡಿದ್ದು ಅವರಿಗೆ ಬಹಳ ಕೋಪವನ್ನುಂಟು ಮಾಡಿತು. ಅಲ್ಲಿಂದಲೇ ಒಂದು ಪತ್ರ ಶರತ್‌ರವರಿಗೆ ಬರೆದು ಅವರು ರಾಜೀನಾಮೆ ನೀಡಬಾರದೆಂದು ಸಲಹೆ ಮಾಡಿದರು. ಮತ್ತು ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆಯೂ ತೀವ್ರ ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವನ್ನು ಒಬ್ಬೊಬ್ಬರೇ ಬಿಟ್ಟು ಅದು ದುರ್ಬಲವಾಗುತ್ತಿದೆ ಎನ್ನಿಸುತ್ತಿತ್ತು ಸುಭಾಷರಿಗೆ.

ಶರತ್‌ಚಂದ್ರ ಬೋಸರು ಕಾಂಗ್ರೆಸ್ಸಿನಲ್ಲಿದ್ದರೂ ಅವರ ಒಲವು ಕ್ರಾಂತಿಕಾರಿಗಳ ಬಗ್ಗೆ ಕಡಿಮೆ ಏನೂ ಇರಲಿಲ್ಲ. ಆದರೆ ಅಹಿಂಸಾತ್ಮಕ ಶಾಂತಿಯುತ ಮಾರ್ಗದಲ್ಲಿ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.

ಸುಭಾಷರು ಕಣ್ಮರೆಯಾದ ಪ್ರಸಂಗ

ನೇತಾಜಿ ಸುಭಾಷ್‌ಚಂದ್ರ ಬೋಸ್‌ ಭಾರತಕ್ಕೆ ಸ್ವಾತಂತ್ಯ್ರವನ್ನು ಹೇಗೆ  ಪಡೆಯಬೇಕು ಎಂದು ಯೋಚಿಸುತ್ತಲೇ ಇದ್ದರು. ಭಾರತದ ಆಚೆ ಹೋಗಿ ಇತರ ರಾಷ್ಟ್ರಗಳ ನೆರವಿನಿಂದ ಭಾರತದ ಸ್ವಾತಂತ್ಯ್ರವನ್ನು ಗಳಿಸಲು ತೀರ್ಮಾನಿಸಿದರು.

ನೇತಾಜಿಯವರು ೧೯೮೧ ರ ಜನವರಿ ೨೭ ರಂದು ತಮ್ಮ ನಿವಾಸದಿಂದ ಅತ್ಯಂತ ಕೌತುಕಮಯ ಸನ್ನಿವೇಶದಲ್ಲಿ ನಾಪತ್ತೆಯಾದರು. ಅವರು ಮಾಯವಾಗುವ ಮೊದಲ ದಿನ ಶರತ್‌ರವರನ್ನು ಭೇಟಿ ಮಾಡಿದ್ದರು.

ಮಹಾತ್ಮಾಜೀಯವರೇ ಶರತ್‌ರವರಿಗೆ ಪತ್ರೆ ಬರೆದು ಸುಭಾಷ್ ಎಲ್ಲಿದ್ದಾರೆ ಎಂದು ಕೇಳಿದಾಗಲೂ, ಆ ಬಗ್ಗೆ ತಮಗೇನೂ ತಿಳಿಯದೆಂದು ತಿಳಿಸಿದ್ದರು. ಹೇಗೆ ಹೋದರು ಎಲ್ಲಿದ್ದಾರೆ ಎಂಬ ಬಗ್ಗೆ ತಾವೂ ಸಾರ್ವಜನಿಕರಷ್ಟೆ ಕತ್ತಲಲ್ಲಿ ಇರುವುದಾಗಿ ಹೇಳಿದರು. ಬಹುಶಃ ಸನ್ಯಾಸಿಯಾಗಿರಬೇಕೆಂದು ಅವರ ಶಂಕೆ ವ್ಯಕ್ತಪಡಿಸಿದ್ದರು. ನೇತಾಜಿಯವರನ್ನು ಹುಡುಕಲು ತೀರ್ಥಕ್ಷೇತ್ರಗಳಿಗೆ ಜನರನ್ನು ಕಳಿಸಿದ್ದರು.

ನೇತಾಜಿ ಕಣ್ಮರೆಯಾದ ಮೇಲೆ ಸರ್ಕಾರದ ವಕ್ರ ದೃಷ್ಟಿ ಶರತ್‌ಚಂದ್ರದ ಮೇಲೆ ಇದ್ದೇ ಇದ್ದಿತು. ಹೇಗಾದರೂ ಅವರನ್ನು ಸೆರೆಮನೆಗೆ ದೂಡುವ ಕಾತರತೆಯಿಂದ ನೆಪಗಳಿಗೆ ಕಾದು ಕುಳಿತಿದ್ದರು.

ರಾಸ್ ಬಿಹಾರಿ ಬೋಸ್ ಬಂಗಾಳದ ಕ್ರಾಂತಿಕಾರಿಗಳಲ್ಲೊಬ್ಬರು. ಅವರು ಜಪಾನಿಗೆ ಹೋಗಿ ಅಲ್ಲಿಂದ ಭಾರತದ ವಿಮುಕ್ತಿಗೆ ಪ್ರಯತ್ನಿಸುತ್ತಿದ್ದರು. ಐ.ಎನ್.ಎ. (ಇಂಡಿಯನ್ ನ್ಯಾಷನಲ್ ಆರ್ಮಿ) ಎಂಬ ಒಂದು ಸೈನಿಕ ಸಂಘಟನೆ ಮಾಡುತ್ತಿದ್ದರು. ಈ ಸಂಸ್ಥೆಯೊಡನೆ ಶರತ್‌ರವರಿಗೆ ಸಂಪರ್ಕವಿದೆಯೆಂದು ಆಪಾದಿಸಿ ಶರತ್‌ರವರನ್ನು ಭಾರತದ ರಕ್ಷಣಾ ಶಾಸನದ ಪ್ರಕಾರ ೧೯೪೧ ರ ಡಿಸೆಂಬರ್ ೧೧ ರಂದು ಬಂಧಿಸಲಾಯಿತು. ಜಪಾನೀಯರ ಜೊತೆಯಲ್ಲಿ ಶರತ್‌ ಸಂಪರ್ಕವಿದೆಯೆಂಬುದರ ಬಗ್ಗೆ ತಮಗೆ ಖಚಿತ ವರ್ತಮಾನವಿದೆಯೆಂದು ಅಂದಿನ ಬ್ರಿಟಿಷ್ ಸರ್ಕಾರ ತಿಳಿಸಿತು. ಬಂಗಾ, ಬಿಹಾರ, ಅಸ್ಸಾಂ, ಒರಿಸ್ಸಾಗಳಲ್ಲಿ ಇರುವರೆಂದು ಹೇಳಲಾದ ಜಪಾನಿಗಳ ಬೆಂಬಲಿಗರಿಗೆ ಶರತ್ ಮುಖಂಡರೆಂದೂ ಆಪಾದಿಸಲಾಗಿತ್ತು. ಮತ್ತೆ ಅವರ ಬಿಡುಗಡೆಯಾದದ್ದು ೧೯೪೫ರ ಸೆಪ್ಟೆಂಬರ್ ೧೪ ರಂದು. ಜೈಲಿನಿಂದ ಬಿಡುಗಡೆಯಾದ ಕೂಡಲೇ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಬಂಗಾಳದ ವಿಧಾನಸಭೆಗೆ ಆಯ್ಕೆಯಾಗಿ ಪಕ್ಷದ ನಾಯಕರಾದರು.

ಆಗ ಬಂಗಾಳದಲ್ಲಿ ನಡೆಯುತ್ತಿದ್ದ ಲೀಗ್ ರಾಜಕೀಯ ಪ್ರತಿಷ್ಠೆಯನ್ನು ಇಳಿಸಿ, ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲು ತೀವ್ರ ಪ್ರಯತ್ನ ಮಾಡಿದರ.

ಕಾಂಗ್ರೆಸಿನಿಂದ ದೂರ

೧೯೪೬ ರಲ್ಲಿ ಪಂಡಿತ್ ನೆಹರೂರವರು ತಾತ್ಕಾಲಿಕ ಸರ್ಕಾರವನ್ನು ರಚಿಸಿದಾಗ ಅದರಲ್ಲಿ ಶರತ್‌ಚಂದ್ರರು ಕಾಮಗಾರಿ, ಗಣಿ ಮತ್ತು ಇಂಧನ ಖಾತೆ ಮಂತ್ರಿಗಳಾದರು ಆದರೆ ಕೆಲವೇ ವಾರಗಳಲ್ಲಿ ಅವರು ಮಂತ್ರಿ ಪದದಿಂದ ಹೊರಬರಬೇಕಾಯಿತು. ಸೇರಿದ್ದು ಆಗಸ್ಟ್‌ನಲ್ಲಿ, ಬಿಟ್ಟದ್ದು ನವೆಂಬರ್‌ನಲ್ಲಿ. ಮುಸ್ಲಿಂಲೀಗ್ಸ ಕೇಂದ್ರ ಸರ್ಕಾರದಲ್ಲಿ ಸೇರಲು ತೀರ್ಮಾನಿಸಿದಾಗ ಎರಡು ಸ್ಥಾನಗಳನ್ನು ಬಿಟ್ಟುಕೊಡಬೇಕಾಯಿತು. ಶರತ್ ಕೆಲಕಾಲ ಭಾರತದ ರಾಜ್ಯಾಂಗ ಸಭೆಯ ಸದಸ್ಯರಾಗಿದ್ದರು.

ಕಾಂಗ್ರೆಸ್ಸಿನ ಆರ್ಥಿಕ, ಸಾಮಾಜಿಕ ನೀತಿಗಳ ವಿಷಯದಲ್ಲಿ ಅವರಿಗೂ ಕಾಂಗ್ರೆಸ್‌ನ ಗಾಂಧೀವಾದಿ ನಾಯಕರಿಗೂ ತೀವ್ರ ಭಿನ್ನಾಭಿಪ್ರಾಯಗಳು ಇದ್ದೇ ಇದ್ದವು.

ಅವರ ಸ್ವತಂತ್ರ ಬಂಗಾಳದ ಯೋಜನೆ ಕುಸಿದು ಬಿದ್ದಿತ್ತು. ಬಂಗಾಳ ವಿಭಜಿತವಾಗಿ ನೌಖಾಲಿ ಮುಂತಾದ ಕಡೆ ಸಾವಿರಾರು ಜನರ ಕೊಲೆಯಾಗಿತ್ತು. ಈ ಪ್ರದೇಶಗಳಲ್ಲಿ ಶಾಂತಿ ತರಲು ಶಾಂತಿ ಸಮಿತಿ ರಚಿಸಲು ಅವರು ಯೋಚಿಸಿದರು. ಆದರೆ ಅವರ ಪ್ರಯತ್ನಕ್ಕೆ ಪುರಸ್ಕಾರ ಸಿಕ್ಕಿರಲಿಲ್ಲ. ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನ ಪಕ್ಷ ಸಮಾಜವಾದಕ್ಕೆ ಸಾಕಷ್ಟು ಪ್ರಾಧಾನ್ಯ ಕೊಡುತ್ತಿಲ್ಲ ಎಂದು ಶರತ್‌ಚಂದ್ರರಿಗೆ ಎನ್ನಿಸಿತು. ಈ ಎಲ್ಲ ಭಿನ್ನಾಭಿಪ್ರಾಯಗಳಿಂದ ಅವರು ಕಾಂಗ್ರೆಸ್ಸಿಗೆ ೧೯೪೬ ರ ಕೊನೆಯಲ್ಲಿ ರಾಜೀನಾಮೆ ಇತ್ತರು. ತಮ್ಮ ವಿಚಾರಧಾರೆಯನ್ನು ಪ್ರಚಾರ ಮಾಡಲು “ಸಮಾಜವಾದಿ ಗಣತಂತ್ರ ಪಕ್ಷ” ವನ್ನು ಪ್ರಾರಂಭಿಸಿದರು. “ದಿ ನೇಷನ್‌” ಎಂಬ ದಿನಪತ್ರಿಕೆಯನ್ನೂ ಅವರು ಆರಂಭಿಸಿದರು.

೧೯೪೯ರಲ್ಲಿ ಕಲ್ಕತ್ತಾ ಕ್ಷೇತ್ರದಿಂದ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಿತು. ಶರತ್‌ಚಂದ್ರರೂ ಚುನಾವಣೆಗೆ ನಿಂತರು. ಕಾಂಗ್ರೆಸ್ ಅಭ್ಯರ್ಥಿಯನ್ನು ಅತ್ಯಧಿಕ ಬಹುಮತದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು. ಆದರೆ ೧೯೫೦ರ ಫೆಬ್ರವರಿ ೨೦ ರಂದು ಅವರು ಮೃತ್ಯವಶವಾದರು. ಬಂಗಾಳದ ರಾಜಕೀಯ ಕ್ಷೇತ್ರಕ್ಕೆ ಇದರಿಂದ ಭಾರಿ ನಷ್ಟವುಂಟಾಯಿತು ಎಂದರೆ ತಪ್ಪಾಗದು.

ನಿರ್ಭೀತ ಪ್ರಾಮಾಣಿಕ ವ್ಯಕ್ತಿ

ಶರತ್‌ಚಂದ್ರ ಬೋಸರದು ಅತ್ಯಂತ  ನಿರ್ಭೀತ ಮತ್ತು ಧ್ಯೇಯನಿಷ್ಠ ರಾಜಕೀಯವಾಗಿತ್ತು. ತಾವು ನಂಬಿದ ಸತ್ಯಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸುತ್ತಿದ್ದರು. ತಮ್ಮ ವ್ಯಕ್ತಿತ್ವವನ್ನು ದಮನ ಮಾಡಲು ಅಥವಾ ಕುಗ್ಗಿಸಲು ಅವರು ಅವಕಾಶ ಕೊಡಲಿಲ್ಲ.

 

ಶರತ್‌ಚಂದ್ರ ಬೋಸರು-ಗಾಂಧೀಜಿ

ಸ್ವಾತಂತ್ಯ್ರ ಬರುವ ಮುನ್ನ ಬಂಗಾಳದಲ್ಲಿ ನೃಪೇಂದ್ರನಾಥ ಸರ್ಕಾರ್ ಎಂಬುವರಿದ್ದರು. ಅವರು ದೊಡ್ಡ ವಕೀಲರು, ವೃತ್ತಿಯಲ್ಲಿ ಶರತ್‌ಚಂದ್ರರ ನಾಯಕರು. ಅವರು ಕಾಂಗ್ರೆಸ್ಸು ಬ್ರಿಟಿಷ್ ಸರ್ಕಾರವನ್ನು ವಿರೋಧಿಸಿ, ಹರತಾಳವನ್ನು ಆಚರಿಸುವುದು ತಪ್ಪು ಎಂದರು. ಶರತ್‌ಚಂದ್ರರು ಕೆರಳಿದರು, ಜನ ತಮ್ಮ ಅಸಮಾಧಾನವನ್ನು ಸರ್ಕಾರಕ್ಕೆ ತೋರಿಸುವ ಹಕ್ಕಿದೆ ಎಂದು ಪತ್ರಿಕೆಗಳಲ್ಲಿ ವಾದಿಸಿ ನೃಪೇಂದ್ರನಾಥರನ್ನು ಖಂಡಿಸಿದರು. ಸ್ವಾತಂತ್ಯ್ರ ಬಂದ ನಂತರ ರಾಜಾಜಿಯವರನ್ನು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಿತು. ಶರತ್‌ಚಂದ್ರ ಬೋಸರು ಈ ನೇಮಕವನ್ನು ಕಟುವಾಗಿ ವಿರೋಧಿಸಿದರು. ವಿರೋಧಿಸುವಾಗ ಅವರು ಹೇಳಿದ ಮಾತು: “ನಾನು ಹಾಗೂ ರಾಜಾಜಿಯವರು ಸಚಿವ ಸಂಪುಟದಲ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಅವರ ವಿಷಯ ವೈಯಕ್ತಿಕವಾಗಿ ಏನೂ ಆಕ್ಷೇಪಿಸುತ್ತಿಲ್ಲ”. ವೈಯಕ್ತಿಕ ಸ್ನೇಹ ವಿಶ್ವಾಸ ಇವುಗಳಿಂದ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಲು ಅವರು ಎಂದೂ ಹಿಂಜರಿಯಲಿಲ್ಲ

ಶಿಸ್ತು

ಆದರೆ ಎಂದೂ ಅವರು ಕರ್ತವ್ಯನಿಷ್ಠರು. ತಾವು ಒಂದು ಸಂಸ್ಥೆಯಲ್ಲಿ ಇರುವವರೆಗೆ ಅದರ ನಾಯಕರೊಂದಿಗೆ ಏನೇ ಅಭಿಪ್ರಾಯ ವ್ಯತ್ಯಾಸವಿರಲಿ, ಸಂಸ್ಥೆಗಾಗಿ ದುಡಿಯಬೇಕು, ಸಂಸ್ಥೆಯ ಧೋರಣೆ ಒಪ್ಪಿಗೆ ಆಗದಿದ್ದರೆ ಬಿಟ್ಟು ದೂರವಾಗಬೇಕು ಎಂಬುದು ಅವರ ನಿಲುವು. ಕಾಂಗ್ರೆಸಿನ ನಾಯಕರೊಂದಿಗೆ ಅವರಿಗೆ ಬಹುಪಾಲಿ ತೀರ ಭಿನ್ನಾಭಿಪ್ರಾಯವಿತ್ತು. ೧೯೩೬ ರಲ್ಲಿ ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲಿ ಸುಭಾಷ್‌ಚಂದ್ರ ಬೋಸರಿಗೆ ಗಾಂಧೀಯವರಿಂದ ಹಿಡಿದು ಬಹು ಮಂದಿ ಕಾಂಗ್ರೆಸ್‌ ನಾಯಕರು ಅನ್ಯಾಯ ಮಾಡಿದರು ಎಂದು ಅವರಿಗೆ ಎನ್ನಿಸಿತ್ತು. ಆ ವಿಷಯವಾಗಿ ತಮ್ಮ ಬೇಸರವನ್ನು ಗಾಂಧೀಜಿಯವರಿಗೆ ಸ್ಪಷ್ಟವಾಗಿ ಕಾಗದದಲ್ಲಿ ತಿಳಿಸಿದುದನ್ನು ನಾವು ಆಗಲೇ ಕಂಡಿದ್ದೇವೆ. ಇಷ್ಟಾದರೂ ೧೯೪೫ ರಲ್ಲಿ ಬಂಗಾಳದ ವಿಧಾನಸಭೆಗೆ ಚುನಾವಣೆಗಳು ನಡೆದಾಗ ಭಿನ್ನತೆಗಳ ಮಧ್ಯೆಯೂ ಅವರು ಕಾಂಗ್ರೆಸ್ಸಿನ ಯಶಸ್‌ಇಗೆ ಹಗಲೂ ರಾತ್ರಿ ಅಲೆದು ದುಡಿದರು. ಅಲ್ಪ ಸಂಖ್ಯಾತರ ಹಾಗೂ ಹರಿಜನರ ಬೆಂಬಲ ಪಡೆಯಲು ಪ್ರಯತ್ನಿಸಿದರು.

ಗಾಂಧೀಜಿಯೊಡನೆ ಭೇಟಿ

೧೯೪೭ ಆಗಸ್ಟ್‌ ೩೧ ರಂದು ಕಲ್ಕತ್ತಾದ ಹೈದರಿ ಮ್ಯಾನ್‌ಷನ್‌ನಲ್ಲಿ ಕೆಲವು ಮುಸ್ಲಿಮರ ಕೊಲೆಯಾಯಿತು. ನೌಖಾಲಿಯಲ್ಲಿ ಹಿಂದುಗಳ ಮೇಲೆ ಭಯಂಕರ ಅತ್ಯಾಚಾರ ನಡೆಯುತ್ತಿತ್ತು. ಈ ಹಿಂಸಾಕಾಂಡ ನಿಲ್ಲಿಸಲು ಶರತ್‌ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಕೆಲವು ರಾಜಕೀಯ ಶಕ್ತಿಗಳು ಈ ಕೊಲೆಗಳ ಹಿಂಸಾಚಾರಗಳ ಹಿಂದೆ ಶರತ್ ಸಂಬಂಧದ ಫಾರ್‌ವರ್ಡ್‌ ಬ್ಲಾಕ್‌ನ ಕೈವಾಡ ಇದೆಯೆಂಬ ಸುದ್ಧಿಯನ್ನು ಹಬ್ಬಿಸಿದರು. ಗಾಂಧೀಜಿಯವರ ಮನಸ್ಸನ್ನು ಕೆಡಿಸಿದರು.

ಗಾಂಧೀಜಿ ಆಗ ಕಲ್ಕತ್ತಾದಲ್ಲಿದ್ದು ಕೊಂಡು ಗಲಭೆಗಳನ್ನು ತಡೆಯಲು ಪ್ರಯತ್ನಿಸಿದರು. ಕಲ್ಕತ್ತಾ ಕೊಲೆಗಳು ಅವರಿಗೆ ತೀವ್ರ ನೋವನ್ನುಂಟು ಮಾಡಿ ಅವರು ೧೯೪೭ರ ಸೆಪ್ಟೆಂಬರ್ ೧ರಿಂದ ಉಪವಾಸ ಆರಂಭಿಸಿದರು. ಗಾಂಧೀಜಿ ಕಲ್ಕತ್ತದಲ್ಲೇ ಇದ್ದರೂ ಶರತ್ ಅವರನ್ನು ಭೇಟಿಯಾಗಿರಲಿಲ್ಲ. ಆದರೆ ಗಾಂಧೀಜಿ ಉಪವಾಸ ಆರಂಭಿಸಿದ ನಂತರ ಅವರು ಗಾಂಧೀಜಿಯವರನ್ನು ಕಾಣಲು ಹೋದರು. ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಗಾಂಧೀಜಿಯವರಿಗೆ ವಿವರಿಸಿ ಸಮರ್ಥಿಸಿಕೊಂಡರು. ಗಾಂಧಿಯವರ ಹೇಳಿಕೆಗಳ ಬಗ್ಗೆ ತಮ್ಮ ಪೂರ್ಣ ಅಸಮ್ಮತಿಯನ್ನು ತೋರಲು ಹಿಂದೆಗೆಯಲಿಲ್ಲ. ಗಾಂಧೀಜಿ ಶರತ್ ಮಧ್ಯೆ ನಡೆದ ಮಾತುಕತೆಗಳು ಅವರ ವ್ಯಕ್ತಿತ್ವಕ್ಕೆ ಒಂದು ಕನ್ನಡಿ ಹಿಡಿದಂತಿದೆ.

ಗಾಂಧೀಜಿ: ನೀವು ನನ್ನನ್ನು ಕಾಣಲು ಬರಲು ನಾನು ಉಪವಾಸ ಮಾಡಬೇಕಾಯಿತೇ?

ಶರತ್: ನಿಮಗೆ ನನ್ನ ವಿಷಯದಲ್ಲಿ ಆಸಕ್ತಿ ಇಲ್ಲ ಎಂದು ನನ್ನ ಭಾವನೆ. ಅದಿರಲಿ, ತಮಗೆ ನಾನು ಹೆಚ್ಚು ತೊಂದರೆ ಕೊಡುವುದಿಲ್ಲ. ತಾವು ಮಾತುಕತೆಯಾಡಬಹುದೇ?

ಗಾಂಧೀಜಿ: ನಾನು ಯಾವ ಉದ್ದೇಶಕ್ಕಾಗಿ ಉಪವಾಸ ಮಾಡುತ್ತಿದ್ದೇನೋ ಅದರ ಸಾಧನೆಗಾಗಿ ಮಾತನಾಡಲೇ ಬೇಕು.

ಶರತ್: ನಾನು ಬಂಗಾಳದ ವಿಭಜನೆಯ ವಿರೋಧಿ ಎಂಬುದು ನಿಮಗೆ ತಿಳಿದೇ ಇದೆ. ಅದರಲ್ಲಿ ಏನೂ ರಹಸ್ಯವಿಲ್ಲ. ನಾನು ಮುಚ್ಚು ಮರೆಯಿಲ್ಲದೆ ಮಾತನಾಡುವವನು. ಈಗಾಗಲೇ ನಾನು ತಿಳಿಸಿದಂತೆ ನಿಮಗೆ ನನ್ನಿಂದ ಉಪಯೋಗವಿಲ್ಲ ಎಂಬ ಭಾವನೆ ಇರುವುದರಿಂದ ಈ ಮೊದಲೇ ಬಂದು ನಿಮ್ಮನ್ನು ಕಾಣಲಿಲ್ಲ.

ಗಾಂಧೀಜಿ: ಎಲ್ಲ ಪಕ್ಷದ ಪ್ರತಿನಿಧಿಗಳು ನಿಮ್ಮನ್ನು ಏಕೆ ಕರೆಸಲಿಲ್ಲ ಎಂದು ಕೇಳುತ್ತಿದ್ದಾರೆ. ಅವರಿಗೆ ನಾನು ಹೇಳಿದ್ದೇನೆ, ಶರತ್‌ರವರಿಗೆ ನನ್ನ ಬಾಗಿಲು ಸದಾ ತೆರೆದಿದೆ ಹಾಗೂ ಅವರಿಗೆ ಸರಿ ತೋರಿದಾಗ ಬರುತ್ತಾರೆಂದು. ಅನೇಕರು ಗಲಭೆಗಳ ಹಿಂದೆ ಫಾರ್‌ವರ್ಡ್‌ ಬ್ಲಾಕ್‌ ಕೈವಾಡ ಇದೆ ಎಂದು ಹೇಳುತ್ತಿದ್ದಾರೆ.

ಶರತ್: ನೀವು ನನಗೆ ಅನ್ಯಾಯ ಮಾಡಿದ್ದೀರಿ. ನಿಮ್ಮ ಪ್ರಾರ್ಥನಾ ಸಭೆಗಳಲ್ಲಿ ನಾನು ಅಕ್ರಮವಾಗಿ ಹಣಗಳಿಸಿ ನೀರಿನಂತೆ ವ್ಯಯ ಮಾಡುತ್ತೇನೆ ಎಂದು ಹೇಳಿರುವಿರಂತೆ.

ಗಾಂಧೀಜಿ: ಅದು ತಪ್ಪಾಗಿದ್ದಲ್ಲಿ ನೀವು ನನ್ನ ಬಳಿ ಬಂದು ಸಂಶಯಗಳನ್ನು ಪರಿಹರಿಸಬೇಕಾಗಿತ್ತು. ಅದು ನಿಮ್ಮ ಕರ್ತವ್ಯವಲ್ಲವೆ? ನನ್ನ ಹೇಳಿಕೆ ಸರಿಯಾಗಿಲ್ಲದಿದ್ದಲ್ಲಿ ನಿರಾಧಾರವಾಗಿದ್ದಲ್ಲಿ ನನಗೆ ನೀವು ತಿಳಿಸದೇ ಹೋದರೆ ಸ್ನೇಹದ ಅರ್ಥವಾದರೂ ಏನು? ನೀವು ಖುದ್ದು ವಿವರ ತಿಳಿಸಿದ್ದಲ್ಲಿ ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದೆ. ಅದೇ ನಿಜವಾದ ಸ್ನೇಹದ ರಹಸ್ಯ.

ಶರತ್: ಆಗಿಹೋದದ್ದು ಆಗಿ ಹೋಯಿತು. ಈಗ ಫಾರ್ವರ್ಡ್‌ ಬ್ಲಾಕ್ ಬಗ್ಗೆ  ತಮ್ಮ ದೂರೇನು?

ಗಾಂಧೀಜಿ: ಹಿಂದೂ-ಮುಸ್ಲಿಂ ಗಲಭೆಗಳಲ್ಲಿ ಫಾರ್ವರ್ಡ್‌ ಬ್ಲಾಕ್‌ ಕೈವಾಡ ಇದೆಯೆಂದು ಹಲವರು ಹೇಳುತ್ತಾರೆ. ಈ ಆಪಾದನೆಗಳನ್ನು ನಿಮಗೆ ತಿಳಿಸಬೇಕಾದುದು ನನ್ನ ಕರ್ತವ್ಯ ಎಂದು ತಿಳಿದಿದ್ದೇನೆ.

ಶರತ್: ಅದು ಸರಿ ಎಂದು ತೋರಿದರೆ ನೀವು ಅದನ್ನು ನಂಬಬಹುದು. ಆದರೆ ವಾಸ್ತವಿಕವಾಗಿ ನನ್ನ ಮೇಲೆ ನಿಮಗೆ ದೂರು ಕೊಟ್ಟವರೇ ಈ ದುರಂತದ ಹಿಂದೆ ಇದ್ದಾರೆ. ಅವರು ಸಿಖ್ಖರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ. ಪಂಜಾಬ್ ಸುಡುತ್ತಿರುವಾಗ ತೆಪ್ಪಗೆ ಕುಳಿತಿರುವುದು ಸರಿಯಲ್ಲ ಎಂದು ಹೇಳುತ್ತಾ ಅವರನ್ನು ಕೆಣಕುತ್ತಿದ್ದಾರೆ. ಅವರ ಹೆಸರುಗಳನ್ನು ಬೇಕಾದರೆ ಹೇಳಬಲ್ಲೆ.

ಗಾಂಧೀಜಿ: ಪರಸ್ಪರ ದೋಷಾರೋಪಗಳು ಮತ್ತು ದೂಷಣೆಗಳಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಈ ನನ್ನ ಉಪವಾಸ ಎಲ್ಲರ ಹೃದಯ ಪರಿಶೋಧಿಸಿಕೊಳ್ಳಲು ಎಂದರು.

ಅವರ ಮಾತುಕತೆ ಇಲ್ಲಿಗೆ ಮುಗಿಯಿತು. ಶರತ್ ಹಿಂದೂ -ಮುಸ್ಲಿಂ ಸೌಹಾರ್ದಕ್ಕೆ ತಮ್ಮ ಪ್ರಯತ್ನ ಮುಂದುವರೆಸಿದರು. ಸೆಪ್ಟೆಂಬರ್ ೪ ರಂದು ಗಾಂಧೀಜಿ ಭಾರತೀಯ ಜನತೆಯ ಕೋರಿಕೆಗೆ ಮಣಿದು ತಮ್ಮ ಉಪವಾಸ ಮುಕ್ತಾಯಗೊಳಿಸಿದರು.

ಹಲವು ಕ್ಷೇತ್ರಗಳಲ್ಲಿ

ಶರತ್‌ರವರ ಸೇವೆಯ ಮುದ್ರೆ ಬಂಗಾಳದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿತ್ತು. ತಮ್ಮ ರಾಜಕೀಯ ಮಾರ್ಗದರ್ಶಿ ಸಿ.ಆರ್. ದಾಸ್ ಸ್ಮಾರಕ ಸಮಿತಿಯಲ್ಲಿ ಅವರ ಸೇವೆ ಮರೆಯಲಾಗದಂತಹರು. ಶರತ್‌ರ ಕಾರ್ಯವ್ಯಾಪ್ತಿ ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ಅಭಿಪ್ರಾಯ ಕೊಡುತ್ತಿದ್ದರು. ಮುಖ್ಯವಾಗಿ ಹಿರಾಕುಡ್ ಮತ್ತು ಮಹಾನದಿ ಯೋಜನೆಗಳ ಬಗ್ಗೆ ಸಲಹೆಗಳನ್ನಿತ್ತಿದ್ದರು.

ಇಂಗ್ಲಿಷರು ಭಾರತವನ್ನು ಆಳುತ್ತಿದ್ದಾಗ ಭಾರತದಿಂದ ಸಾಲವಾಗಿ ಹಣ ಪಡೆದಿದ್ದರು. ಇವನ್ನು ಸ್ಟರ್ಲಿಂಗ್ ಸಾಲಗಳೆಂದು ಕರೆಯಲಾಗುತ್ತಿತ್ತು. ಬಲವಂತದಿಂದ ಇದನ್ನು ಪಡೆಯಲಾಗಿದ್ದು ಅದನ್ನು ಹಿಂದಕ್ಕೆ ಕೊಡುವ ಬಗ್ಗೆ ವಾದ-ವಿವಾದ ನಡೆಯುತ್ತಿತ್ತು. ಈ ಬಗ್ಗೆ ಬಹಳ ಸಡಿಲವಾಗಿ ಕೆಲವರು ಮಾತನಾಡಿ ಭಾರತ ಈ ಹಣವನ್ನು ಕೈಬಿಡಬೇಕೆಂಬ ವಾದವನ್ನು ಮಂಡಿಸಿದರು. ಶರತ್‌ರವರು ಈ ವಾದವನ್ನು ಖಂಡಿಸಿ, “ಭಾರತ ಹದಿನೇಳು ವರ್ಷಗಳು ಕಷ್ಟಪಟ್ಟು ಸಂಗ್ರಹಿಸಿದ ಈ ಹಣವನ್ನು ಬಿಡುವಂತೆ ಹೇಳಿದರೆ ಯಾವ ಸ್ವಾಭಿಮಾನೀ ರಾಷ್ಟ್ರವೂ ಒಪ್ಪುವುದಿಲ್ಲ” ಎಂದರು. ಈ ಹಣವನ್ನು ಕೈ ಬಿಡಲು ಯಾರಾದರೂ ಬೆಂಬಲಿಸಿದರೆ ಅವರನ್ನು ದೇಶದ ಶತ್ರುಗಳೆಂದು ಪರಿಗಣಿಸಬೇಕೆಂದೂ ಅವರು ಹೇಳಿದರು. ಈ ರೀತಿಯ ಅಪಪ್ರಚಾರ ನಿಲ್ಲಿಸಲು ಇಂಗ್ಲೆಂಡಿನ ಸರ್ಕಾರಕ್ಕೆ ಪತ್ರ ಬರೆಯುವಂತೆ ಸರದಾರ್‌ ಪಟೇಲರಿಗೆ ಸೂಚಿಸಿದರು. ಪಟೇಲರು ಶರತ್‌ರ ಅಭಿಪ್ರಾಯಕ್ಕೆ ಪೂರ್ಣ ಮನ್ನಣೆಯಿತ್ತರು.

ರಾಜಕೀಯ ಖೈದಿಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ೧೯೩೭ರ ಮಾರ್ಚಿನಲ್ಲಿ ಒಂದು ಸಮ್ಮೇಳನ ಏರ್ಪಡಿಸಲಾಗಿತ್ತು. ಶರತ್‌ರು ಅದರ ಅಧ್ಯಕ್ಷತೆ ವಹಿಸಿದ್ದರು. ಈ ಸಮ್ಮೇಳನದಲ್ಲಿ ಅನೇಕ ಉಪಯುಕ್ತ ತೀರ್ಮಾನಗಳು ಆದವು.

ಬಂಗಾಳದಲ್ಲಿ ಸೆಣಬಿನ ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳ, ಪರಿಹಾರಕ್ಕೂ ಅವರು ಶ್ರಮಿಸಿದರು. ಜಾತೀಯತೆ, ಮತೀಯ ಭಾವನೆಗಳಿಂದ ಅವರು ಬಹು ದೂರವಿದ್ದರು. ಹಿಂದೂಗಳಲ್ಲಿ ಕೆಲವರು ಜಾತೀಯ ಭಾವನೆ ಇಟ್ಟುಕೊಂಡಿದ್ದುದು ಅವರಿಗೆ ಬೇಸರದ ವಿಷಯವಾಗಿತ್ತು. ಸಂದರ್ಭ ಸಿಕ್ಕಿದಾಗಲೆಲ್ಲ ಅದನ್ನು ಖಂಡಿಸುತ್ತಿದ್ದರು.

ಬ್ರಿಟಷರಿಗೆ ವಿರೋಧ

೧೯೩೧ ರಲ್ಲಿ ಇಂಗ್ಲೆಂಡು ಭಾರತಕ್ಕೆ ಸೈಮನ್ ಕಮೀಷನ್ ಎಂಬ ಆಯೋಗವನ್ನು ಕಳುಹಿಸಿತು. ಇದರಲ್ಲಿ ಭಾರತದ ಪ್ರತಿನಿಧಿಗಳು ಯಾರೂ ಇರಲಿಲ್ಲ. ಇದು ಬರುವುದು ಭಾರತೀಯರಿಗೆ ಬೇಕಿರಲಿಲ್ಲ. ಆದರೆ ಭಾರತೀಯರು ಎಷ್ಟೇ ವಿರೋದಿಸಿದರೂ ಆಯೋಗದವರು ಬಂದಾಗ ಅದರ ವಿರುದ್ಧ ಭಾರಿ ಪ್ರತಿಭಟನೆಯನ್ನು ಏರ್ಪಡಿಸುವುದರಲ್ಲಿ ಶರತ್‌ಚಂದ್ರರು ಬಂಗಾಳದಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೪೬ ರಲ್ಲಿ ಕಮಿಷನ್ ಭಾತರಕ್ಕೆ ಬಂದಿತು. ಭಾರತಕ್ಕೆ ಸ್ವಾತಂತ್ಯ್ರ ಕೊಡುವ ವಿಷಯದಲ್ಲಿ ಈ ಆಯೋಗದ ಸದಸ್ಯರು ಕೆಲವು ಸಲಹೆಗಳನ್ನು ಕೊಟ್ಟರು. ಈ ಸಲಹೆಗಳು ಭಾರತೀಯರ ಆತ್ಮಗೌರವಕ್ಕೆ ಹೊಂದುವುದಿಲ್ಲ ಎಂದು ಶರತ್‌ ಬೋಸರಿಗೆ ತೋರಿತು. ಬ್ರಿಟಿಷ್ ಸರ್ಕಾರದ ಆಶ್ರಯದಲ್ಲಿ ಸ್ವಲ್ಪ ಮಟ್ಟಿನ ಸ್ವಾತಂತ್ಯ್ರ ಪಡೆದು ಭಾರತೀಯರು ಬಾಳುವುದು ಅವರಿಗೆ ಇಷ್ಟವಿರಲಿಲ್ಲ ಈ ಸಲಹೆಗಳನ್ನು ತಿರಸ್ಕರಿಸುವಲ್ಲಿ ಅವರು ಮೊದಲಿಗರಾಗಿದ್ದರು. ಪೂರ್ಣ ಸ್ವರಾಜ್ಯವಾದಿಗಳಾಗಿದ್ದ ಅವರು ಬ್ರಿಟಿಷರ ಆಶ್ರಯದಲ್ಲಿಯೇ ಸ್ವಾತಂತ್ಯ್ರ ನೀಡುವುದನ್ನು ತೀವ್ರವಾಗಿ ವಿರೋಧಿಸಿದರು.

ಧೀರ ತ್ಯಾಗಿ

ಭಾರತದ ಇಪ್ಪತ್ತನೆಯ ಶತಮಾನದ ಚರಿತ್ರೆಯಲ್ಲಿ ಬೋಸ್ ಸಹೋದರರ ಪಾತ್ರ ವಿಶಿಷ್ಟವಾದದ್ದು, ದೇಶ ಎಂದೂ ಕೃತಜ್ಷತೆಯಿಂದ ಸ್ಮರಿಸಬೇಕಾದದ್ದು, ಎರಡು ಸಿಂಹಗಳು ಈ ಅಣ್ಣತಮ್ಮಂದಿರು. ಶರತ್‌ಚಂದ್ರರು ತಮಗಾಗಿ ಏನನ್ನೂ ಬಯಸಲಿಲ್ಲ. ಕಾಂಗ್ರೆಸ್ ಅಧಿವೇಶನಗಳಿಗೆ ಹೋದಾಗ ಇತರ ಹಲವರು ನಾಯಕರು ಶ್ರೀಮಂತರ ಮನೆಗಳಲ್ಲಿ ಇಳಿದುಕೊಳ್ಳುತ್ತಿದ್ದರು. ಶರತ್‌ಚಂದ್ರರು ಎಂದೂ ತಮ್ಮ ಪರಿಚಿತರಾದ ಸಾಮಾನ್ಯ ವರ್ಗದವರ ಮನೆಗಳಲ್ಲಿಯೇ ಅತಿಥಿಯಾಗುತ್ತಿದ್ದರು. ಅವರಿಗೆ ಬೇಕಾಗಿದ್ದುದು ಎರಡೇ; ಭಾರತ ಬೇರೆ ಯಾವ ದೇಶಕ್ಕೂ ತಲೆಬಾಗದ, ಯಾವ ದೇಶದ ಪ್ರಭಾವಕ್ಕೂ ಸಿಕ್ಕದ ಸರ್ವಸ್ವಾತಂತ್ರ ದೇಶವಾಗಬೇಕು, ಮತ್ತು ಸ್ವತಂತ್ರ ಭಾರತದಲ್ಲಿ ನಿಜವಾದ ಸಮಾಜವಾದ ಕಾರ್ಯಗತವಾಗಿ, ಶ್ರೀಮಂತರ ಆಸ್ತಿಪಾಸ್ತಿಗಳು, ಪ್ರಭಾವ ಕಡಿಮೆಯಾಗಬೇಕು. ಸಾಮಾನ್ಯ ಜನರ ಸ್ಥಿತಿ ಉತ್ತಮವಾಗಬೇಕು. ಈ ಉದ್ದೇಶಗಳ ಸಾಧನೆಗಾಗಿ ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿಯನ್ನೇ ಬಿಟ್ಟರು, ಸೆರೆಮನೆ ಕಂಡರು, ಉಚ್ಚ ರಾಷ್ಟ್ರನಾಯಕರು ಎನ್ನಿಸಿಕೊಂಡವರೊಡನೆ ಸ್ಪಷ್ಟವಾಗಿ ಮಾತನಾಡಿ ವಿರೋಧ ಕಟ್ಟಿಕೊಂಡರು. ಬಹು ವರ್ಷ ತಾವು ಯಾವ ಪಕ್ಷಕ್ಕಾಗಿ ದುಡಿದರೋ ಆ ಕಾಂಗ್ರೆಸ್ ಪಕ್ಷವನ್ನೇ ಬಿಟ್ಟರು, ಮಂತ್ರಿ ಪದವಿ ಬಿಟ್ಟರು, ವಯಸ್ಸಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಕಾಲದಲ್ಲಿ ಹೊಸ ಪಕ್ಷ ಕಟ್ಟಿದರು, ಪತ್ರಿಕೆ ಪ್ರಾರಂಭಿಸಿದರು. ವಿಶ್ರಾಂತಿ ಇಲ್ಲದೆ ಅಲೆದರು. ಅವರ ಪ್ರೀತಿಯ ತಮ್ಮ ಸುಭಾಷರು ದೂರದೇಶಕ್ಕೆ ಹೋದರು, ಅವರು ತೀರಿಕೊಂಡರು ಎಂಬ ಸುದ್ಧಿಯೂ ಬಂತು. ಏನೇ ಆದರೂ ಕಡೆಯ ಘಳಿಗೆಯವರೆಗೆ ಶರತ್‌ಚಂದ್ರ ಬೋಸರು ಧೀರರಾಗಿ ಬದುಕಿದರು, ದೇಶಕ್ಕಾಗಿ ಬದುಕಿದರು.