ಎಳೆ ಬೆಳುದಿಂಗಳು ಮರದಡಿ ಬರೆದಿರೆ
ನೆಳಲಿನ ಚಿತ್ತಾರ
ಬಾನೊಳು ಚದುರಿರೆ ಕಿರು ಮಿರು ತಾರಗೆ
ಇರುಳಿನ ಸಿಂಗಾರ
ಸಪ್ತಮಿ ಚಂದ್ರನ ತೃಪ್ತಿಯ ನಗೆಯಲಿ
ಬಾನೇ ಬಂಗಾರ !
ಬರೆದೊಲು ಕೊರೆದೊಲು ಇರುಳಿನ ಸ್ತಬ್ಧತೆ-
ಗಾಗಿವೆ ತರು ನಿಕರ
ಪ್ರಶಾಂತ ನಿರ್ಮಲ ಧ್ಯಾನ ದಿಗಂಬರ
ಶಾರದ ಯೋಗಿವರ
ಕರುಣೆಯೊಳೆತ್ತಿರೆ ಇರವಿನ ಭಾರವೆ
ತಾನಾಗಿದೆ ಹಗುರ !