ಶರೀರವೆಂತೆಂಬುವ ಹೊಲನ ಹಸನು ಮಾಡಿ
ಪರತತ್ವ ಬೆಳೆಯನೆ ಬೆಳೆದುಣ್ಣಿರೊ ||

ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ
ವಿಮಲ ಮಾನಸವ ನೇಗಿಲವನೆ ಮಾಡಿ
ಮಮಕಾರವೆಂದೆಂಬ ಗರಿಕೆಯ ಕಳೆದಿಟ್ಟು
ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ                   || ೧ ||

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ವೃಷ್ಟಿಯ ಬಲದಿ
ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ
ದುರಿತ ದುರ್ಗುಣ ವೆಂಬ ಕಳೆಯನು ಕಿತ್ತು              || ೨ ||

ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ನನೆ ದಣಿದು
ಗುರುಸಿದ್ಧನಡಿಗಳಿಗೆರಗುತ್ತೆ ಭವವೆಂಬ
ಬರವನು ತಮ್ಮ ಸೀಮೆಗೆ ಕಳುಹಿ             || ೩ ||