ನನ್ನ ಜತೆಗಾರ ಕವಿಯಾಗಿದ್ದ ಡಾ.ಬಿ.ಸಿ. ರಾಮಚಂದ್ರ ಶರ್ಮರು, ನಾನು ಕಂಡ ಅತ್ಯಂತ ಲವಲವಿಕೆಯ ಹಾಗೂ ಜೀವಂತಿಕೆ ಪುಟಿಯುವ ವ್ಯಕ್ತಿಯಾಗಿ ನನ್ನ ನೆನಪಿನಲ್ಲಿ ಉಳಿದಿದ್ದಾರೆ. ನಾನು ಅವರ ಆಪ್ತ ವಲಯಕ್ಕೆ ಸೇರಿದವನಾಗಿರದಿದ್ದರೂ, ನಮ್ಮಿಬ್ಬರ ಬರವಣಿಗೆಯ ಹಿಂದಿನ ನಿಲುವುಗಳೂ ಕ್ರಮಗಳೂ ಬೇರೆ ಬೇರೆಯಾಗಿದ್ದರೂ, ನಮ್ಮ ನಡುವಣ ಸಮಾನಾಂತರ ಸ್ನೇಹ-ವಿಶ್ವಾಸಗಳಿಗೆ ಯಾವತ್ತೂ ಕೊರತೆಯಿರಲಿಲ್ಲ. ಸುಮಾರು ಅರ್ಧ ಶತಮಾನದ ಕಾಲಮಾನದಲ್ಲಿ ಅವರು ಎಲ್ಲಿಯೇ ಇದ್ದರೂ ನಿರಂತರವಾಗಿ ಬರೆದುಕೊಂಡುಬಂದ ಅವರ ಕಾವ್ಯಪರವಾದ ನಿಷ್ಠೆ ಅಥವಾ ಚೈತನ್ಯ ಅಸಾಧಾರಣವಾದದ್ದು. ಅಷ್ಟು ವರ್ಷಗಳ ಉದ್ದಕ್ಕೂ  ಕತೆ, ನಾಟಕ ಇತ್ಯಾದಿ ಪ್ರಕಾರಗಳ ಜತೆಗೆ ಅವರು ಮುಖ್ಯವಾಗಿ ಬರೆದದ್ದು ಅವರಿಗೇ ವಿಶಿಷ್ಟವಾದ ‘ನವ್ಯಕಾವ್ಯ’ವನ್ನು. ಅವರ ಕಾವ್ಯ ಏಕರೂಪಿಯಾದದ್ದಲ್ಲ; ಅದು ಕಾಲದಿಂದ ಕಾಲಕ್ಕೆ ಬದಲಾಗುತ್ತ, ಹಲವು ಹುಟ್ಟುಗಳನ್ನು ಪಡೆದುಕೊಳ್ಳುತ್ತ, ಜಗತ್ತಿನ-ಅದರಲ್ಲೂ ಪಶ್ಚಿಮದ-ವಿವಿಧ ದೇಶಗಳಲ್ಲಿ ಪಡೆದ ಅಲೆಮಾರಿ ಅನುಭವ ದ್ರವ್ಯವನ್ನು ಕನ್ನಡದ ಸಂವೇದನೆಯೊಳಗೆ ಬೆಸೆಯುತ್ತ, ಕನ್ನಡ ನವ್ಯಕಾವ್ಯದ ಆಯಾಮಗಳನ್ನು ಗಣನೀಯವಾಗಿ ವಿಸ್ತರಿಸಿದೆ.

ಕನ್ನಡ ಕಾವ್ಯಸಂದರ್ಭದಲ್ಲಿ ಶರ್ಮರು ಮಾಡಿದ ಮತ್ತೊಂದು ಮುಖ್ಯವಾದ ಕೆಲಸವೆಂದರೆ, ಕನ್ನಡದಿಂದ ಇಂಗ್ಲಿಷಿಗೆ ಮತ್ತು ಇಂಗ್ಲಿಷಿನಿಂದ ಕನ್ನಡಕ್ಕೆ ಮುಖ್ಯ ಕೃತಿಗಳನ್ನು ಹಾಗೂ ಕೃತಿಕಾರರನ್ನು ಅನುವಾದ ಮಾಡಿದ್ದು. ಮಾಸ್ತಿಯವರ, ಯಶವಂತ ಚಿತ್ತಾಲರು ಕೆಲವು ಸಣ್ಣ ಕತೆಗಳನ್ನು ಮತ್ತು ಕುವೆಂಪು ಅವರ ಬೃಹತ್ ಕಾದಂಬರಿಯಾದ ‘ಕಾನೂರು ಹೆಗ್ಗಡತಿ’ಯನ್ನು (ಅವರ ಶ್ರೀಮತಿಯರಾದ ಪದ್ಮಾ ರಾಮಚಂದ್ರ ಶರ್ಮರೊಡನೆ) ಇಂಗ್ಲಿಷಿಗೆ ಅನುವಾದಿಸುವುದರ ಮೂಲಕ ಈ ಕಾಲಮಾನದ ಅಗತ್ಯವನ್ನು ಪೂರೈಸಿದ್ದಾರೆ. ಅಷ್ಟೇ ಅಲ್ಲ, ೧೯೮೨ರಲ್ಲಿ ಅವರು ಪ್ರಕಟಿಸಿದ ‘ಈ ಶತಮಾನದ ನೂರು ಇಂಗ್ಲಿಷ್ ಕವಿತೆಗಳು’, ಮುಖ್ಯವಾಗಿ ನವ್ಯ ಸಂವೇದನೆಯ-ಟಿ.ಎಸ್. ಎಲಿಯಟ್, ಡಿ.ಎಚ್.ಲಾರೆನ್ಸ್, ಏಟ್ಸ್, ಡಿಲನ್ ಥಾಮಸ್, ಅಡೆನ್, ಸಿಲ್ವಿಯಾ ಪ್ಲಾತ್ ಇತ್ಯಾದಿ ಕವಿಗಳಿಂದ ಆಯ್ದ ನೂರು ಕವಿತೆಗಳ ಕನ್ನಡ ಅನುವಾದಗಳನ್ನು ಒಳಕೊಳ್ಳುವ ಒಂದು ಸಂಗ್ರಹವಾಗಿದೆ. ಶರ್ಮರ ಈ ಅನುವಾದಗಳು, ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಬಂದ ಆಚಾರ್ಯ ಬಿ.ಎಂ.ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ನಂತರ, ಕನ್ನಡದ ಸಂದರ್ಭದಲ್ಲಿ ಕಾಣಿಸಿಕೊಂಡ ಅಷ್ಟೇ ಮಹತ್ವದ ಅನುವಾದ ಪ್ರಯತ್ನಗಳಾಗಿವೆ ಎಂದು ಹೇಳಬಹುದು. ಶರ್ಮರು ಈ ಸಂಕಲನವನ್ನು ಬಿ.ಎಂ.ಶ್ರೀಯವರಿಗೆ ಅರ್ಪಿಸಿರುವುದು ಅರ್ಥಪೂರ್ಣವಾಗಿದೆ.

ಮೊಟ್ಟಮೊದಲಿಗೆ ಶರ್ಮರು ಒಬ್ಬ ಕವಿಯಾಗಿ ನನ್ನ ಗಮನವನ್ನು ಸೆಳೆದದ್ದು  ತಮ್ಮ ‘ಏಳು ಸುತ್ತಿನ ಕೋಟೆ’ (೧೯೫೩) ಎಂಬ ಕವಿತೆಯ ಮೂಲಕ. ಈ ವೇಳೆಗಾಗಲೇ ಅಡಿಗರ ನವ್ಯಕಾವ್ಯದ ದಟ್ಟವಾದ ಪ್ರಭಾವ ವ್ಯಾಪಿಸಿಕೊಳ್ಳತೊಡಗಿತ್ತು.  ಅನಂತರದ ವಿಮರ್ಶಕರು ಕರೆದಂತೆ ಅದು ‘ಅಡಿಗರು ಬರೆಯುವ ಕಾವ್ಯ ಸಂದರ್ಭ’. ಈ ಸಂದರ್ಭದಿಂದ ಬೇರೆಯಾದ ರೀತಿಯಲ್ಲಿ ತಾವು ಬರೆಯುವ ಕ್ರಮವೊಂದನ್ನು ಆವಿಷ್ಕಾರ ಮಾಡಿಕೊಳ್ಳುವುದು ಹೇಗೆ ಎನ್ನುವುದು ಆಗ ತಾನೇ ಕವಿಯಾಗಿ ರೂಪುಗೊಳ್ಳುತ್ತಿದ್ದವರು ಎದುರಿಸಬೇಕಾದ ಸವಾಲಾಗಿತ್ತು. ಅದನ್ನು ಯಶಸ್ವಿಯಾಗಿ ಎದುರಿಸಿದವರಲ್ಲಿ ಮುಖ್ಯರಾದವರು ಶರ್ಮರು. ಮತ್ತು ಈ ಕಾರಣದಿಂದಾಗಿಯೇ ಕನ್ನಡದ ನವ್ಯಕಾವ್ಯಕ್ಕೆ ಎರಡನೆಯದಾರಿಯೊಂದು ನಿರ್ಮಾಣವಾಯಿತು. ಈಗ ಅನ್ನಿಸುತ್ತಿದೆ, ಕನ್ನಡದ ನವ್ಯಕಾವ್ಯಕ್ಕೆ ಮೂರು ಮಾರ್ಗಗಳು ಎಂದು. ಒಂದು ಅಡಿಗರ ಮಾರ್ಗ, ಎರಡನೆಯದು ಶರ್ಮರ ಮಾರ್ಗ, ಮೂರನೆಯದು ಎ.ಕೆ. ರಾಮಾನುಜನ್ ಅವರ ಮಾರ್ಗ.  ಅಡಿಗರ ಹಾಗೂ ರಾಮಾನುಜನ್ ಅವರ ಮಾದರಿಗಳು,  ಅನಂತರದ ಬರಹಗಾರರ ಮೇಲೆ ಮಾಡಿದಷ್ಟು ಪ್ರಭಾವವನ್ನು ಶರ್ಮರ ದ್ವಿತೀಯ ಮಾರ್ಗ ಅಷ್ಟಾಗಿ ಮಾಡಿದಂತೆ ತೋರುವುದಿಲ್ಲ. ಇದು ಹೇಗೇ ಇರಲಿ ಶರ್ಮರ, ಈಗ ಪ್ರಸ್ತಾಪಿಸಿದ ‘ಏಳು ಸುತ್ತಿನ ಕೋಟೆ’ಯಂಥ ಕವಿತೆಯ ಮೂಲಕ ಕನ್ನಡ ಕಾವ್ಯಕ್ಕೆ ‘ಕಾಮದಂಥ’ ವಸ್ತುವನ್ನು ಪರಿಚಯಿಸಿ ಅದರ ಅನೇಕ ಮುಖಗಳನ್ನು ಕುರಿತು, ಇನ್ನೂ ಹಲವು ಸಾರ್ಥಕವಾದ ಕವಿತೆಗಳನ್ನು-ಗೌರಿಶಂಕರ, ಪಾಂಡು-ಮಾದ್ರಿ ಇಂಥ ಕವಿತೆಗಳನ್ನು-ಬರೆದರು. ಶರ್ಮರು ‘ಕಾಮ’ದ ಕವಿತೆಯನ್ನು ಬರೆಯುವ ಹೊತ್ತಿಗಾಗಲೇ ಕನ್ನಡದಲ್ಲಿ ಪ್ರೇಮದ ಕವಿತೆ ನೆಲೆಗೊಂಡಿತ್ತು. ಕೆ.ಎಸ್. ನ. ಅವರ ಪ್ರೇಮ ಕವಿತೆಗಳು, ಬೇಂದ್ರೆ, ಕುವೆಂಪು ಪ್ರೇಮವನ್ನು ಕುರಿತು ಬರೆದ ಕವಿತೆಗಳು ಜನಮನವನ್ನು ಗೆದ್ದುಕೊಂಡಿದ್ದವು. ಆದರೆ ರಾಮಚಂದ್ರ ಶರ್ಮರು, ಕಾಮವನ್ನು ಕುರಿತು ಕುಟುಂಬದ ವ್ಯಕ್ತಿಯಾಗಿ ಬರೆಯುವುದಿಲ್ಲ; ಬೇಂದ್ರೆಯವರ ಹಾಗೆ ಅದನ್ನು ಸೃಷ್ಟಿಯ ಒಂದು ಅದ್ಭುತ ಎಂಬಂತೆ ಚಿತ್ರಿಸುವುದಿಲ್ಲ; ಕುವೆಂಪು ಅವರ ಹಾಗೆ ಅದನ್ನು ಆಧ್ಯಾತ್ಮೀಕರಿಸುವುದೂ ಇಲ್ಲ. ಅದರ ಬದಲು ತಮ್ಮ ಮನಸ್‌ಶಾಸ್ತ್ರೀಯ ಅಧ್ಯಯನದ ತಿಳಿವಳಿಕೆಯ ಹಿನ್ನೆಲೆಯಲ್ಲಿ, ಮನುಷ್ಯನ ಸ್ವಭಾವದ ತಳದಲ್ಲಿದ್ದುಕೊಂಡು ಅವನ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸುವ ಒಂದು ಅದಮ್ಯ ಜೀವಸತ್ವವೆಂಬಂತೆ ಚಿತ್ರಿಸುತ್ತಾರೆ.

ನಾನೂ ರಾಮಚಂದ್ರ ಶರ್ಮರೂ ಆಗಾಗ ‘ಆಲ್ ಇಂಡಿಯಾ ರೇಡಿಯೋದ’ ಕಾವ್ಯವಾಚನ ಕಾರ್ಯಕ್ರಮಗಳ ಕಾರಣದಿಂದ, ಬೆಂಗಳೂರು ಮತ್ತು ಧಾರವಾಡಗಳಲ್ಲಿ ಭೆಟ್ಟಿಯಾಗುತ್ತಿದ್ದುದುಂಟು. ಪ್ರೊ. ವಿ. ಸೀತಾರಾಮಯ್ಯನವರು ಆಗ ಬೆಂಗಳೂರು ಆಕಾಶವಾಣಿಯಲ್ಲಿ ಸಾಹಿತ್ಯ ಸಲಹೆಗಾರರು. ವಿ.ಸೀ. ಯವರಿಗೆ ರಾಮಚಂದ್ರ  ಶರ್ಮರನ್ನು ಕುರಿತು ತುಂಬ ವಿಶ್ವಾಸ. ಒಮ್ಮೆ ಆಕಾಶವಾಣಿಯಿಂದ ಒಂದು ಸೂಚನೆ ಬಂತು, ನನ್ನನ್ನೂ ಒಳಗೊಂಡಂತೆ ಕೆಲವು ಕವಿಗಳಿಗೆ- ‘ಬುವಿ ನೀಡಿದ ಸ್ಫೂರ್ತಿ’ ಎಂಬ ವಿಷಯವನ್ನು ಕುರಿತು ಒಂದು ಪದ್ಯ ಬರೆದುಕೊಡಿ ಎಂದು. ನಾನೂ, ಕಣವಿ, ಶರ್ಮರೂ, ಬಹುಶಃ ಅಡಿಗರೂ, ಈ ಕರೆಗೆ ಪ್ರತಿಕ್ರಿಯಿಸಿದಂತೆ ನೆನಪು. ಸ್ವಾರಸ್ಯದ ಸಂಗತಿ ಎಂದರೆ, ಇದರಿಂದಾಗಿ ಕನ್ನಡ ಕಾವ್ಯ ಸಂದರ್ಭದಲ್ಲಿ ಮೂರು ಪ್ರಮುಖ ವಸ್ತುಗಳು ಕಾವ್ಯ ಜಗತ್ತನ್ನು ಪ್ರವೇಶಿಸಿದವು. ಒಂದು ಭೂಮಿ ಮತ್ತು ಮನುಷ್ಯ, ಎರಡನೆಯದು ಕಾಮ ಮತ್ತು ಮನುಷ್ಯ, ಮೂರನೆಯದು ಕಾಲ ಮತ್ತು ಮನುಷ್ಯ. ಆಕಾಶವಾಣಿ ಸೂಚಿಸಿದ ಮೊದಲ ವಸ್ತು ಶರ್ಮರಲ್ಲಿ ‘ಬುವಿ ನೀಡಿದ ಸ್ಫೂರ್ತಿ’ (೧೯೫೪)  ಎಂಬ ಕವಿತೆಯಾಯಿತು. ಇದೇ ಕಾಲದಲ್ಲಿ ನಾನು ‘ಹುಟ್ಟಿದ ಹಬ್ಬ’ (ನನಗೂ ಈ ಜಗತ್ತಿಗೂ ಇರುವ ಸನಾತನ ಸಂಬಂಧವನ್ನು ಕುರಿತು) ಬರೆದೆ;  ಕಣವಿಯವರು ‘ಮಣ್ಣಿನ ಮೆರವಣಿಗೆ’ ಬರೆದರು; ಅಡಿಗರು ‘ಭೂಮಿಗೀತ’ ಬರೆದರು. ಅಡಿಗರ ‘ಭೂಮಿಗೀತ’ವೇ ಈ ಸರಣಿಯಲ್ಲಿ ಮಹತ್ತಾದ ಕವಿತೆ. ‘ಕಾಲ ಮತ್ತು ಮನುಷ್ಯ’ನನ್ನು ಕುರಿತು ಈ ಕಾಲದಲ್ಲಿ, ಕಣವಿಯವರು ‘ಕಾಲ ನಿಲ್ಲುವುದಿಲ್ಲ’ ಬರೆದರು; ನಾನು ‘ಮಬ್ಬಿನಿಂದ ಮಬ್ಬಿಗೆ’ ಬರೆದೆ; ಕೆ.ಎಸ್.ನ. ‘ಗಡಿಯಾರದಂಗಡಿಯಲ್ಲಿ’ ಬರೆದರು; ಗಂಗಾಧರ ಚಿತ್ತಾಲರು ‘ಹರಿವ ನೀರಿದು’ ಬರೆದರು; ಅಡಿಗರು ‘ಭೂತ’ ಬರೆದರು. ನವ್ಯರೂ ನವ್ಯರಲ್ಲದವರೂ ನಿರ್ವಹಿಸಿದ ಈ ವಸ್ತು ಪ್ರಪಂಚಗಳಲ್ಲಿ, ಶರ್ಮರು ಮುಖ್ಯವಾಗಿ ‘ಕಾಮ’ದಂಥ ವಸ್ತುವನ್ನು ಅನೇಕ ಕವಿತೆಗಳಲ್ಲಿ ನಿರ್ವಹಿಸುತ್ತ, ಅಡಿಗರಿಗಿಂತ ಮತ್ತು ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ಈ ನಡುವೆ ಶರ್ಮರು ಈ ದೇಶವನ್ನು ಬಿಟ್ಟು ಹೋದರು. ಆಗಾಗ ಬಂದು ಹೋಗುತ್ತ, ತಮ್ಮ ಹೊಸ ಸಂಕಲನಗಳನ್ನು ಪ್ರಕಟಿಸುತ್ತ ಕನ್ನಡ ಓದುಗರ ನೆನಪಿನ ಒಂದು ಭಾಗವಾದರು. ನಾನು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕನಾಗಿದ್ದ ಅಷ್ಟು ಕಾಲವೂ, ಅವರು ಈ ದೇಶಕ್ಕೆ ಬಂದಾಗ, ಅಧ್ಯಯನ ಕೇಂದ್ರಕ್ಕೆ ಬಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮತ್ತು ಹೊಸ ಕವಿತೆಗಳನ್ನು ಓದಿದ ಹಲವು ಸಂದರ್ಭಗಳು ಇನ್ನೂ ನನ್ನ ನೆನಪಿನಲ್ಲಿವೆ. ಸಾಹಿತ್ಯವನ್ನು ಕುರಿತು ಅವರದೆ ಆದ ನಿಲುವುಗಳು ಮತ್ತು ಆ ಕಾರಣದಿಂದ ಹಲವು ವೇದಿಕೆಗಳಲ್ಲಿ ತೋರುತ್ತಿದ್ದ ಪ್ರತಿಕ್ರಿಯೆಗಳ ಚಕಮಕಿಗಳೂ ಪತ್ರಿಕೆಯ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಕನ್ನಡದಲ್ಲಿ ಬರೆಯುವ ಲೇಖಕನಿಗೆ, ಇಪ್ಪತ್ತನೆ ಶತಮಾನದ ಸಾಹಿತ್ಯದ ಪರಿಚಯವಿದ್ದರಷ್ಟೇ ಸಾಕು; ಪಂಪ-ರನ್ನ-ಕುಮಾರವ್ಯಾಸರು ಯಾಕೆ ಬೇಕು ಎಂಬರ್ಥದ ಪರಂಪರೆಯ ನಿರಾಕರಣೆಯ ಅವರ ಅಭಿಪ್ರಾಯಗಳು, ಒಬ್ಬ ಬರೆಹಗಾರನಾಗುವುದೆಂದರೆ ತನ್ನ ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಪರಂಪರೆಯೊಳಗೆ ಪ್ರವೇಶಿಸುವುದು ಮತ್ತು ಅದರೊಂದಿಗೆ ಅನುಸಂಧಾನ ನಡೆಯಿಸುವುದು ಎಂದು ತಿಳಿದ ನನ್ನಂಥವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದದ್ದು ಸಹಜವೇ ಆಗಿದೆ. ಅವರು ಮಾಡುತ್ತಿದ್ದ ಮತ್ತೊಂದು ಜಗಳ, ಕವಿತೆಯನ್ನು ಹಾಡುವ ವಿಷಯವನ್ನು ಕುರಿತದ್ದು. ಕವಿತೆಯನ್ನು ಸಂಗೀತಕ್ಕೆ ಅಳವಡಿಸಲೇಬಾರದೆಂಬುದು ಅವರ ಹಠ. ಈ ವಿಚಾರದಲ್ಲಿ ಅವರಿಗೂ ಡಾ. ಎನ್.ಎಸ್. ಲಕ್ಷಿ ನಾರಾಯಣ ಭಟ್ಟರಿಗೂ ಮುಗಿಯದ ಜಗಳ. ‘ಕಾವ್ಯವನ್ನು ಸಂಗೀತದ ಸಾಹಚರ್ಯದಿಂದ ಪಾರು ಮಾಡಬೇಕು’-ಎಂಬ ನವ್ಯ ಕಾವ್ಯದ ನಿಲುವಿನ ನಿರಂತರ ಪ್ರತಿಪಾದಕರು ಶರ್ಮರು. ನಾನು ಈ ನಿಲುವನ್ನು ಶರ್ಮರಿಗೆ ಸಂಗೀತದ ಬಗ್ಗೆ  ವಿರೋಧವಿತ್ತು  ಎಂದೇನೂ  ವ್ಯಾಖ್ಯಾನಿಸುವುದಿಲ್ಲ. ಬಹುಶಃ  ಎಂಥ ಕಳಪೆಯಾದ ಕವಿತೆಯೂ ಸಂಗೀತಕ್ಕೆ ಅಳವಡುವುದರ ಮೂಲಕ ಅದ್ಭುತವಾದ ಕವಿತೆ ಎಂಬ ಭ್ರಮೆ ಹುಟ್ಟಿಸುವುದರ ಮೂಲಕ ಜನಪ್ರಿಯವಾಗುವ ಅಪಾಯವನ್ನು ಅವರು ವಿರೋಧಿಸುತ್ತಿದ್ದರು ಎಂದು ತಿಳಿಯುತ್ತೇನೆ. ಜತೆಗೆ ಶರ್ಮರು ಯಾವತ್ತೂ ‘ಜನಪ್ರಿಯ’ವಾಗಿ ಕಾಣಿಸಿಕೊಳ್ಳುವ ವಿಧಾನಗಳನ್ನು ತಿರಸ್ಕರಿಸುವ ಸ್ವಭಾವದ- ವರಾಗಿದ್ದರು. ಅವರ ಈ ಹಲವು ತಕರಾರುಗಳ ನಡುವೆಯೂ ತಮ್ಮ ಮಾತಿನ ಚಾತುರ್ಯದಿಂದ ಮತ್ತು ಹಾಸ್ಯ ಪ್ರಜ್ಞೆಯಿಂದ ಒಂದು ಬಗೆಯ ಆತ್ಮೀಯತೆಯನ್ನು ಹುಟ್ಟಿಸುತ್ತಿದ್ದರು. ‘ನಾನು ಎಷ್ಟಾದರೂ ‘ಹೇಸರಗತ್ತೆ’ ರಾಮಚಂದ್ರ ಶರ್ಮ’ ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳುತ್ತಿದ್ದರು.

ಶರ್ಮರು ‘ಹೇಸರಗತ್ತೆ’ ರಾಮಚಂದ್ರ ಶರ್ಮರಾದದ್ದು ಅವರ ಕಾವ್ಯಜೀವನದ ಪ್ರಮುಖ ದ್ವಿತೀಯಘಟ್ಟ. ಶರ್ಮರ ಕಾವ್ಯ ತನ್ನ ಹಿಂದಿನ ವಾಚಾಳಿತನದಿಂದ ಪಾರಾಗಿ, ಪ್ರತೀಕಗಳಲ್ಲಿ ಗಟ್ಟಿಗೊಳ್ಳುತ್ತ, ತನ್ನ ಪರದೇಶೀ ಹಾಗೂ ಸ್ವದೇಶೀ ಅನುಭವಗಳ ಮುಖಾಮುಖಿಯ ಆತಂಕಗಳನ್ನು ಅಭಿವ್ಯಕ್ತಿಸುವ ‘ಹೇಸರಗತ್ತೆ’ ಕವನ ಸಂಕಲನದ ಕವಿತೆಗಳ ವಸ್ತುಪ್ರಪಂಚ ಬಹುಶಃ ಕನ್ನಡಕ್ಕೇ ಹೊಸದೆನ್ನಬಹುದು. ಆಧುನಿಕ ಪಶ್ಚಿಮದೊಂದಿಗೆ ದೈನಂದಿನ ಅನುಸಂಧಾನ ನಡೆಯಿಸುತ್ತ, ಪಶ್ಚಿಮದ ಐತಿಹ್ಯಗಳನ್ನು ಪುರಾಣಗಳನ್ನು ತಮ್ಮ ಪ್ರಜ್ಞೆಯ ಮೂಲಕ ಒಳಕೊಳ್ಳುತ್ತ, ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಅಭಿವ್ಯಕ್ತಿಗೆ ಬಳಸಿಕೊಳ್ಳುತ್ತ, ಅನ್ಯದೇಶೀಯ ಲೋಕಾನುಭವಗಳನ್ನು ಅರಗಿಸಿಕೊಳ್ಳುತ್ತ, ಪ್ರತೀಕನಿಷ್ಠ ಕವಿತೆಯನ್ನು ಈ ಹಂತದಲ್ಲಿ ಶರ್ಮರು ಕಟ್ಟತೊಡಗಿದರು. ಅದೇ ಸಂದರ್ಭದಲ್ಲಿ ಅಡಿಗರು ಹೆಚ್ಚು ಆಳವಾಗುತ್ತ ಆರ್ಷೇಯ ಪರಂಪರೆಯೊಳಗೆ ಬೇರೂರತೊಡಗಿದರೆ, ಶರ್ಮರು ಗತಕಾಲದ ಬಗ್ಗೆ, ಪ್ರಾಚೀನ ಪರಂಪರೆಯ ಬಗ್ಗೆ ಸಂದೇಹವಾದಿಯಾಗಿ ರೂಪುಗೊಳ್ಳತೊಡಗಿದರು. ಅಷ್ಟೇ ಅಲ್ಲ, ಶರ್ಮರು ಕನ್ನಡದ ಕೆಲವೇ ಕೆಲವು ನಿರೀಶ್ವರವಾದಿ ಬರಹಗಾರರ ನಡುವೆ, ಎದ್ದು ಕಾಣುವಂಥವರು. ಪ್ರತ್ಯೇಕವಾಗಿ  ಹೇಳಬೇಕಾದ ಮಾತೆಂದರೆ, ಅವರ ಕವಿತೆಯ ತೃತೀಯಘಟ್ಟವೆನ್ನಬಹುದಾದ ಸಾನೆಟ್ಟುಗಳ ‘ಸಪ್ತಪದಿ’ಯ ಜಗತ್ತನ್ನು ಕುರಿತು. ಸಾನೆಟ್ ಎಂಬುದು ನವೋದಯ ಸಂದರ್ಭದ ನಯ-ನವುರು-ಗಾಂಭೀರ್ಯ- ವೈಚಾರಿಕತೆಗಳಿಗೆ ಹೇಳಿ ಮಾಡಿಸಿದ ಒಂದು ಪಶ್ಚಿಮದ ಪ್ರಕಾರ. ನವೋದಯ ಸಂದರ್ಭದಲ್ಲಿ, ಅಂದಿನ ಎಲ್ಲ ಕವಿಗಳ ನಿರ್ವಹಣೆಗೆ ಒಳಗಾಗಿ ಸಮೃದ್ಧಿಯನ್ನು ಪಡೆದ ಈ ಸಾನೆಟ್ ಎಂಬ ರೂಪ, ನವ್ಯರ ಕಾಲದಲ್ಲಿ ಒಂದು ಬಗೆಯ ನಿರ್ಲಕ್ಷ ಕ್ಕೆ ಗುರಿಯಾಯಿತು. ಗೋಪಾಲಕೃಷ್ಣ ಅಡಿಗರಂಥವರೂ ತೀರಾ ಪರಿಮಿತವಾದ ಸಾನೆಟ್ ಬರೆದು ಕೈತೊಳೆದುಕೊಂಡರು. ಇಂಥದನ್ನು ಶರ್ಮರು ಹಿಡಿದು ಅದಕ್ಕೊಂದು ಹೊಸ ಹುಟ್ಟನ್ನು ಕೊಟ್ಟದ್ದು ವಿಶೇಷದ ಸಂಗತಿಯಾಗಿದೆ. ಅವರ ಮೊದಲ ಕವನ ಸಂಕಲನದಲ್ಲೇ ಐದು ಸಾನೆಟ್‌ಗಳಿವೆ. ಅವರ ‘ಮಾತು-ಮಾಟ’ (೧೯೮೪)ದಲ್ಲಿ ಹದಿನೈದು ಸಾನೆಟ್‌ಗಳಿವೆ. ಕೇಂದ್ರ ಸಾಹಿತ್ಯ  ಅಕಾಡೆಮಿಯ ಪ್ರಶಸ್ತಿ ಪಡೆದ ‘ಸಪ್ತಪದಿ’ (೧೯೯೭)ಯಲ್ಲಿ ಮೂವತ್ತು ಸಾನೆಟ್‌ಗಳಿವೆ.  ಅಂದರೆ ಸುಮಾರು ಅರವತ್ತು ಸಾನೆಟ್. ನವ್ಯರಲ್ಲಿ ಯಾರೂ ಶರ್ಮರಷ್ಟು ಬಹುಸಂಖ್ಯೆಯ ಸಾನೆಟ್‌ಗಳನ್ನು ಬರೆಯಲಿಲ್ಲ. ಶರ್ಮರು ತಮ್ಮ ನವ್ಯ ಪ್ರಜ್ಞೆಯಲ್ಲಿ, ಪರಂಪರಾಗತವಾದ ಸಾನೆಟ್‌ಗಳನ್ನು ಹಿಡಿದು ಬರೆಯುವಾಗ, ಅದರ ಸಾಂಪ್ರದಾಯಿಕ ಚಹರೆ ಹಾಗೂ ಬಂಧಗಳನ್ನು ಮುರಿಯಲಿಲ್ಲ. ಆದರೆ ಅವರು ಬರೆದ ಸಾನೆಟ್ಟುಗಳು, ಅದುವರೆಗೆ ಬಂದ ಸಾನೆಟ್‌ಗಳಿಗಿಂತ ಭಿನ್ನ ಎನ್ನುವ ಹಾಗೆ ತಮ್ಮ ವೈಚಾರಿಕತೆಯ ಆಕೃತಿಗಳನ್ನಾಗಿ ಅವುಗಳನ್ನು ರೂಪಿಸಿದರು. ಮುಖ್ಯವಾಗಿ ತಮ್ಮ ಸೃಜನಶೀಲತೆಯನ್ನು ಕುರಿತು ಅವರು ಬರೆದ ಸಾನೆಟ್‌ಗಳು ತುಂಬ ಗಮನಾರ್ಹವಾಗಿವೆ ಮತ್ತು ದಾಂಪತ್ಯವನ್ನು ಕುರಿತು ಅವರ ‘ಸಪ್ತಪದಿ’ಯ ಸಾನೆಟ್ಟುಗಳು, ಬೇಂದ್ರೆಯವರ ‘ಸಖೀಗೀತ’ದ ನಂತರ, ಅದೇ ವಸ್ತುವನ್ನು ನಿರ್ವಹಿಸಿದ ಶ್ರೇಷ್ಠ ರಚನೆಯಾಗಿವೆ. ಇವುಗಳಲ್ಲಿ ಕಂಡುಬರುವ ರಚನಾಕೌಶಲ, ಮಾತಿನ ಮಿತವ್ಯಯ-ಶರ್ಮರು ಕವಿತೆಯನ್ನು ಗಂಭೀರವಾದ ಕಲೆಗಾರಿಕೆ ಎಂದು ಕಾಯ್ದುಕೊಂಡು ಬಂದ ಕಾವ್ಯಶ್ರದ್ಧೆಯ ಪರಿಣತಿಗೆ ಸಾಕ್ಷಿಯಾಗಿದೆ. ಶರ್ಮರ ಪಾಲಿಗೆ ‘ಒಂದೊಂದು ಕವನವೂ ಭರವಸೆಯ ವ್ಯವಸಾಯ’. ಶರ್ಮರ ಕವಿತೆ ವಸ್ತು ಮತ್ತು  ರೂಪಗಳೆರಡರಲ್ಲೂ ಕನ್ನಡದ ಪ್ರಧಾನ ಧಾರೆಗಿಂತ ಭಿನ್ನವೆನ್ನಿಸುವ ಕಾವ್ಯ. ಇನ್ನು ನಮ್ಮ ಸಂವಾದವೇನಿದ್ದರೂ ಅದರೊಂದಿಗೆ.

೨೦೦೫