ವನದುರ್ಗ ಕೋಟೆ
ತಾ. ಶಹಾಪೂರ
ದೂರ : ೨೪ ಕಿ.ಮೀ.

ಶಹಾಪೂರದಿಂದ ನೈರುತ್ಯಕ್ಕೆ ೨೪ ಕಿ.ಮೀ. ದೂರದಲ್ಲಿರುವ ಈ ಕೋಟೆ ಕಾನನದಿಂದ ಕೂಡಿರುವದರಿಂದ ಈ ಕೋಟೆಗೆ ವನದುರ್ಗ ಎಂಬ ಹೆಸರು ಬಂದಿದೆ.  ಕೋಟೆಯ ಮಹಾದ್ವಾರದ ಎರಡು ಬದಿಯಲ್ಲಿ ಐದೈದು ಸಾಲುಗಳಲ್ಲಿರುವ ಸಂಸ್ಕೃತ ಶಾಸನವು ದೇವನಾಗರಿ ಲಿಪಿಯಲ್ಲಿದೆ. ಸುರಪುರದ ದೊರೆ ಪಿಡ್ಡನಾಯಕನು ತನ್ನ ರಾಣಿ ವೆಂಕಮ್ಮಾಂಬಳ ಬಯಕೆಯಂತೆ ಈ ವನದುರ್ಗವನ್ನು ನಿರ್ಮಿಸಿದನು. ಈ ಕೋಟೆಗೆ ಬೃಹತ್ತಾದ ಪ್ರವೇಶ ದ್ವಾರಗಳಿದ್ದರೂ  ತಟ್ಟನೆ ಎದುರಾಗುವ ಅರ್ಧ ಚಂದ್ರಾಕಾರದ ಎತ್ತರದ ಗೋಡೆಗಳು ಶತ್ರುಗಳು ಗಲಿ-ಬಿಲಿಗೊಳ್ಳುವಂತೆ ಮಾಡುತ್ತವೆ.  ಕೋಟೆಯ ಒಳಗೆ ಅಧಿಕಾರಿಗಳಿಗೆ ಹಾಗೂ ಕಾವಲುಗಾರರಿಗೆ ಕಟ್ಟಿಸಿದ ವಸತಿ ಗೃಹಗಳ ಅವಶೇಷಗಳನ್ನು ನೋಡಬಹುದು.

 

ಸಗರಾದ್ರಿ ಬೆಟ್ಟದ ಕೋಟೆ  

ತಾ. ಶಹಾಪೂರ
ದೂರ : ೮ ಕಿ.ಮೀ.

ಪೌರಾಣಿಕವಾಗಿ ಸಗರ ಚಕ್ರವರ್ತಿಯು ಆಳಿದ ಸಗರ ನಾಡಿನ ಕೇಂದ್ರವಾಗಿದ್ದ ಸಗರ ಎಂದು ಮತ್ತು ಇದಕ್ಕೆ ಹತ್ತಿರದ ಬೆಟ್ಟವೇ ಸಗರಾದ್ರಿ ಎಂದು ಐತಿಹ್ಯವಿದೆ. ಸಗರ ಚಕ್ರವರ್ತಿ ನಿರ್ಮಿತ ಕೋಟೆ ಶಹಾಪೂರದ ಕೋಟೆ ಎಂದು ಕೆಲವರು ಕೋಟೆ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಿತಗೊಂಡು ಆದಿಲ್ ಷಾಹಿ ಅರಸರ ಕಾಲದಲ್ಲಿ ಮತ್ತಷ್ಟು ಬಲಿಷ್ಟಗೊಂಡಿತು. ನಾಯಕರ ಆಡಳಿತ ಕಾಲದಲ್ಲಿ ಎರಡು ಸುತ್ತನ್ನು ಸೇರಿಸಿ ದ್ವಾರಗಳನ್ನು ನಿರ್ಮಿಸಲಾಯಿತು. ಸುಮಾರು ೮೦೦ ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿರುವ ಎಂಟು ಸುತ್ತಿನ ಗಿರಿದುರ್ಗವಾಗಿದ್ದು ನೆಲಮಟ್ಟದಿಂದ ಇದು ೬೦೦ ಅಡಿ ಎತ್ತರದಲ್ಲಿದೆ.

 

ಭೀಮರಾಯನ ಗುಡಿ

ತಾ.ಶಹಾಪೂರ
ದೂರ : ೫ ಕಿ.ಮೀ.

ತಾಲೂಕಾ ಕೇಂದ್ರವಾದ ಶಹಾಪೂರದಿಂದ ಪಶ್ಚಿಮಕ್ಕೆ ೫ ಕಿ.ಮೀ. ದೂರದಲ್ಲಿದೆ. ಇದು ಆಧುನಿಕ ವಸತಿ ನಿಲಯವಾಗಿದೆ.  ಇದನ್ನು ಯು.ಕಿ.ಪಿ. ಕಾಲೋನಿ ಎಂತಲು ಕರೆಯುತ್ತಾರೆ. ಇದು ಅಮಲಾಪೂರ ಕಂದಾಯ ಗ್ರಾಮದ ಸರಹದ್ದಿನಲ್ಲಿದ್ದು ಇಲ್ಲಿಯ ಬಲ ಭೀಮರಾಯನ ದೇವ ಮಂದಿರದಿಂದ ಈ ಹೆಸರು ಬಂದಿದೆ. ಬಲಭೀಮರಾಯ (ಆಂಜನೇಯ)ನನ್ನು ಸ್ಥಳಿಯರು ಆಮ್ಲಪ್ಪ ಮುತ್ಯಾ, ಆಂಬ್ಲಯ್ಯ ಎನ್ನುವರು. ಪ್ರತಿ ವರ್ಷ ಸಂಕ್ರಮಣದಂದು ಇಲ್ಲಿಂದ ಹರಸಗುಂಡಿವರೆಗೆ ಮೂರ್ತಿ ಉತ್ಸವ ಮಾಡಿ ಭೀಮಾ ತೀರದಲ್ಲಿ ಪೂಜಿಸಿ ಜಾತ್ರೆ ಮಾಡುತ್ತಾರೆ. ಈ ದೇವಾಲಯವನ್ನು ಸುರಪುರದ ರಾಜಾ ವೆಂಕಟಪ್ಪನಾಯಕನು ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದನೆಂಬ ಅಭಿಪ್ರಾಯ ಇದೆ. ಈ ದೇವಾಲಯದ ಕೆಲವು ಅವಶೇಷಗಳನ್ನು ನೋಡಿದಾಗ ಈ ದೇವಾಲಯ ೧೦-೧೧ನೇ ಶತಮಾನಕ್ಕೆ ಸೇರಿರುವುದು ಸ್ಪಷ್ಟವಾಗಿದೆ.

ಆಧುನಿಕವಾಗಿ ನಿರ್ಮಿಸಲಾದ ಕೃಷಿ ವಿಶ್ವವಿದ್ಯಾಲಯದ ಕಟ್ಟಡವು ಭವ್ಯವಾಗಿದೆ. ಸುತ್ತಲಿನ ಬಯಲು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹಾಗೂ ಸಂಶೋಧನಾ ಸಳಿಗಳ ಪೋಷಣೆಯ ಮಾದರಿ ನೋಡಬಹುದಾದ ಪ್ರಮುಖ ಸ್ಥಳವಾಗಿದೆ.

 

ನಿಸರ್ಗ ನಿರ್ಮಿತ ಬುದ್ಧನ ರೂಪರೇಷೆ

ತಾ. ಶಹಾಪೂರ
ದೂರ : ೫ ಕಿ.ಮೀ.

 

ಶಹಾಪೂರದಿಂದ ಭೀಮರಾಯಗುಡಿಗೆ ಹೋಗುವ ಹಾದಿಯಲ್ಲಿ ಎಡಕ್ಕೆ ಮಲಗಿರುವ ಸಗರಾದ್ರಿ ಪರ್ವತ ಶ್ರೇಣಿಯಲ್ಲಿ ಮುಗಿಲತ್ತ ಮುಖಮಾಡಿ ಅಂಗಾತ ಮಲಗಿರುವ ನಿಸರ್ಗ ನಿರ್ಮಿತ ಬುದ್ಧನ ರೂಪರೇಷೆ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.  ಅಗಲವಾದ ಹಣೆ, ಚೂಪಾದ ಮೂಗು, ವಿಶಾಲವಾದ ಎದೆಯಂತೆ ಕಾಣುವ ಬುದ್ಧನ ಈ ನಿಸರ್ಗ ರಚನೆಗೆ ನಿಜಕ್ಕೂ ವಿಸ್ಮಯವುಂಟು ಮಾಡುತ್ತದೆ.

ಶಹಾಪೂರ ತಾಲೂಕಿನ ರಾಜಾ ಮುಮ್ಮಡಿ ಪಿಡ್ಡನಾಯಕನ ಕಾಲದಲ್ಲಿ ನಿರ್ಮಿತವಾದ ಹೊಸಕೇರಾ ಕೆರೆಯಂಗಳದ ಅರಮನೆ

ಶಹಾಪೂರ ಬೆಟ್ಟದ ಮೇಲಿನ ಮಂದಾಕಿನಿ ತೀರ್ಥ

 

ಶಿರವಾಳ      

ತಾ.ಶಹಾಪೂರ
ದೂರ : ೧೨ ಕಿ.ಮೀ.


ಶಹಾಪೂರ ಬೆಟ್ಟದ ಮಧ್ಯದಲ್ಲಿರುವ ಕಮಲದ ಹೂಗಳನ್ನು ಒಳಗೊಂಡ ಕೆರೆ.

ಶಹಾಪೂರ ಬೆಟ್ಟದಲ್ಲಿ ವಿಶೇಷವಾಗಿ ಉದ್ಭವಿಸುವ ಜಲಪಾತ (ಮೌನೇಶ್ವರ ಕೋಳ)

ಶಿರವಾಳವು ಪ್ರಾಚೀನ ಶಾಸನಗಳಲ್ಲಿ “ಶ್ರೀವೊಳಲು”, “ಸಿರಿವೊಳಲು”, “ದಕ್ಷಿಣ ಕಾಶಿ”, “ಧರ್ಮದ ಮನೆ”, “ಆದಿ ಪಟ್ಟಣ” ಎಂದೆಲ್ಲಾ ಹೊಗಳಿಸಿಕೊಂಡಿರುವ ಇದು ಹಿಂದೆ ಸಗರನಾಡಿಗೆ ಸೇರಿತ್ತು.  ಈ ಊರು ಶಾತವಾಹನ ಕಾಲದಷ್ಟು ಪುರಾತನದು. ಶಿರವಾಳ ಹಾಗೂ ನೆರೆಹೊರೆ ಗ್ರಾಮದಲ್ಲಿರುವ ಶಾಸನಗಳಿಂದ ಹಿಂದೆ ಶಿರವಾಳದಲ್ಲಿ ಕದಂಬೇಶ್ವರ, ಎರೆಹೇಶ್ವರ, ಚಟ್ಟೇಶ್ವರ, ಸದ್ಧಸಾತೇಶ್ವರ, ಅಲ್ಮೇಶ್ವರ, ಮಹದೇವ, ಸೋಮೇಶ್ವರ, ಶಾಂತೀಶ್ವರ, ಮುಂತಾದ ದೇವಾಲಯಗಳಿದ್ದ ಅಂಶ ಗೊತ್ತಾಗುತ್ತದೆ. ಅವುಗಳನ್ನು ಇಂದು ಖಚಿತವಾಗಿ ಗುರುತಿಸಲಾಗಿದೆ. ಊರಲ್ಲಿಂದು ಸುಮಾರು ೨೦ ಪ್ರಾಚೀನ ದೇಗುಲಗಳಿದ್ದು “ನಾಗಯ್ಯ ಮತ್ತು ನನ್ನಯ್ಯ ಗುಡಿ ಸಂಕೀರ್ಣವು ಪ್ರಾಚೀನದ್ದಾಗಿದೆ.  ಈ ಗುಡಿಯ ಗರ್ಭಗೃಹಗಳಲ್ಲಿ ಶಿವಲಿಂಗಗಳಿದ್ದು ಲಲಾಟದಲ್ಲಿ ಗಜಲಕ್ಷ್ಮಿಯನ್ನುಳ್ಳ ತ್ರಿಶಾಖಾಲಂಕೃತ ದ್ವಾರ ಬಂಧಗಳಿವೆ. ಬೃಹತ್ತಾದ ನವರಂಗದ ಕಂಬಗಳು ಆಕರ್ಷಕವಾಗಿದ್ದು, ಸಭಾಮಂಟಪದಲ್ಲಿ ಸುಂದರವಾದ ಶಿವ ತಾಂಡವ ಶಿಲ್ಪವಿರುವ ಜಾಲಾಂದ್ರವು ಬೆಳಕನ್ನು ಒದಗಿಸುವ ವ್ಯವಸ್ಥೆ ಗಮನಾರ್ಹವಾಗಿದೆ.  ಶಿವಲಿಂಗದ ಪಕ್ಕದಲ್ಲಿರುವ ನಾಲ್ಕುವರೆ ಅಡಿ ಎತ್ತರದ ಅಷ್ಟಭುಜ ಹರಿಹರ ಶಿಲ್ಪವಿದೆ. ಶಿಲ್ಪದ ಬಲಗೈಯಲ್ಲಿ ತ್ರಿಶೂಲ ಆಭಯ ಹಾಗೂ ಬಾಣಗಳಿದ್ದು ಎಡಗೈಯಲ್ಲಿ ಚಕ್ರ, ಶಂಖ, ಬಿಲ್ಲು ಗಧೆಗಳನ್ನು ಧರಿಸಿದ್ದು ವಿಶಿಷ್ಟವಾಗಿದೆ.