ಶಾಂತಕವಿಗಳ ನಿಜನಾಮ ಸಕ್ಕರಿ ಬಾಳಾಚಾರ್ಯ. ಕುಲದೇವ ಶಾಂತೇಶನ ಹೆಸರನ್ನು ಇಟ್ಟುಕೊಂಡು ಶಾಂತಕವಿ ಆದರು. ಜನವರಿ ೧೫ ರ ೧೮೫೬ ರಂದು ಇವರ ಜನನ. ಸ್ಥಳ ಧಾರವಾಡ ಜಿಲ್ಲೆಯ ಸಾತೇನ ಹಳ್ಳಿ. ನಾಟಕ,ಕೀರ್ತನೆ, ಕಥನಕವನಗಳು, ಲಾವಣಿಗಳು ಮೊದಲಾದವುಗಳನ್ನು ಬರೆದು ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿದರು. ಸಾಹಿತ್ಯ ಪ್ರಕಾರಗಳ ವೈವಿಧ್ಯ, ಭಾಷಾವೈವಿಧ್ಯ, ಛಂದೋವೈವಿಧ್ಯ, ಹೀಗೆ ವೈವಿಧ್ಯವೇ ಇವರ ಸಾಹಿತ್ಯದ ಪ್ರಮುಖ ಲಕ್ಷಣವಾಗಿದೆ. ಹಾಡು, ಕುಣಿತ, ಭಾಗವತರಾಟ, ದಾಸರ ಪದಗಳ ಅನುಕರಣಾ ರಚನೆ ಶಾಂತಕವಿಗಳಲ್ಲಿ ಬಾಲ್ಯದಿಂದಲೇ ಕನ್ನಡಾಬಿಮಾನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿದವು.

ಯಕ್ಷಗಾನದ ತಾಳಮದ್ದಳೆಗೆ ತೀರ ಹತ್ತಿರವಾದುದು ಕೀರ್ತನೆ. ಕೀರ್ತನೆಯಲ್ಲಿ ಹಿಮ್ಮೇಳ, ಹಾಡು ಮತ್ತು ಸಂಭಾಷಣೆಯಿಂದೊಡಗೂಡಿದ ಕಥಾಪ್ರಸಂಗ ಕಂಡು ಬರುತ್ತದೆ.

ಇಂತಹವುಗಳನ್ನು ರಚಿಸುವುದರ ಮೂಲಕ ನಾಡು ನುಡಿಗಳ ಮೇಲೆ ಮಮತೆಯನ್ನು ಹುಟ್ಟಿಸಿದರು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಬಗ್ಗೆ ಸ್ವಲ್ಪ ವಿಶೇಷ ಅಬಿಮಾನದಿಂದ ೧೯೧೮ ರಲ್ಲಿ ವಿದ್ಯಾರಣ್ಯ ಕೀರ್ತನೆಯನ್ನು ರಚಿಸಿದರು. ಹೇಳಪ್ಪ ಮತ್ತು ಕೇಳಪ್ಪ ಇವರಿಬ್ಬರ ಸಂಭಾಷಣೆಯ ಮೂಲಕ ವಿಜಯನಗರದ ಕಥೆಯನ್ನು ಇಲ್ಲಿ ಹೇಳಲಾಗಿದೆ.

ಕೀರ್ತನೆಯ ಮೂಲಕ ನಾಟಕ ರಚನೆಯನ್ನು ಪ್ರಾರಂಬಿಸಿದರು. ಉಷಾಹರಣ, ಶ್ರೀಯಾಳ ಸತ್ವ ಪರೀಕ್ಷೆ, ಕೀಚಕ ವಧೆ, ವತ್ಸಲಾಹರಣ, ಸುಧನ್ವ ವಧೆ ಮೊದಲಾದ ಅನೇಕ ನಾಟಕಗಳನ್ನು ರಚಿಸಿದರು. ಕನ್ನಡ ನಾಡಿನಲ್ಲಿ ಕನ್ನಡ ನಾಟಕವನ್ನು ರಚಿಸಿ ಆಡಿಸಿದ್ದರಿಂದ ಇಂದಿಗೂ ಕರ್ನಾಟಕ ನಾಟಕದ ಪ್ರಥಮ ಗುರುವೆಂದು ಕರೆಯುತ್ತಾರೆ ಎಂದು ಇವರೇ ಹೇಳಿಕೊಂಡಿದ್ದಾರೆ. ಕರ್ನಾಟಕ ನಾಟಕ ಕಂಪನಿಯನ್ನು ೧೮೭೪ ರಲ್ಲಿ ಆರಂಬಿಸಿದರು. ಅನೇಕ ನಾಟಕಗಳಪ್ರದರ್ಶನವನ್ನು ನಡೆಸಿದರು. ಜನರಲ್ಲಿ ನಾಟಕ ಕಲೆಯ ಬಗೆಗೆ ಹೊಸ ಅಬಿರುಚಿ ಹುಟ್ಟಿಸುವುದರಲ್ಲಿ ಶಾಂತಕವಿಗಳ ಪಾತ್ರ ಪ್ರಮುಖವಾದುದು. ಸುಂದರ, ಸರಳಶೈಲಿ, ಸ್ವಾರಸ್ಯವಾದ ಸಂಭಾಷಣೆ ಇವರ ನಾಟಕಗಳಲ್ಲಿ ಕಂಡುಬರುವ ವೈಶಿಷ್ಟ್ಯಗಳು.

ಮೇಘದೂತ, ವಿರಹ ತರಂಗ, ಮೊದಲಾದ ಸಂಸ್ಕೃತ ಕೃತಿಗಳನ್ನು ಅನುವಾದಿಸಿ ಆ ಕೃತಿಗಳ ಕಾವ್ಯಗುಣವನ್ನು ಮೆಚ್ಚಿದ ಮೊಟ್ಟಮೊದಲನೆಯ ಕನ್ನಡ ಕವಿ ಶಾಂತಕವಿ. ಶಾಂತಕವಿಗಳ ರಕ್ಷಿಸು ಕರ್ನಾಟಕದೇವಿ ಎಂಬ ಹಾಡು ಮುಂಬಯಿ ಕರ್ನಾಟಕದಲ್ಲಿ ನಾಡಗೀತೆಯಾಗಿತ್ತು. ರಂಗಭೂಮಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಕನ್ನಡ ಭಾಷೆ, ಸಾಹಿತ್ಯ ಮತ್ತು ನಾಟಕವನ್ನು ಶ್ರೀಮಂತಗೊಳಿಸಿದರು.