ಶಾಂತಕವಿ

ಧಾರವಾಡದ ಕೆಂಪುಮಣ್ಣಿನ ಬೀದಿಯಲ್ಲಿ ಒಬ್ಬ ಮುದುಕ ಹಾಡುತ್ತ ನಡೆದಿದ್ದಾನೆ. ಮನೆಮನೆಯ ಮುಂದೆ ಅವನು ನಿಲ್ಲುತ್ತಾನೆ. ಯಾರೇನು ಕೊಟ್ಟರೂ ಅದನ್ನು ತನ್ನ ಜೋಳಿಗೆಗೆ ಹಾಕಿಕೊಳ್ಳುತ್ತಾನೆ. ಕೊಟ್ಟವರನ್ನು ಹಾಡಿ ಹರಸುತ್ತ ಮುಂದೆ ಸಾಗುತ್ತಾನೆ. ಅವನು ಮುದುಕನಾದರೂ ಹರೆಯದ ಹುರುಪು ಅವನಲ್ಲಿ ತುಂಬಿತುಳುಕುತ್ತದೆ.

ಕನ್ನಡ ದಾಸಯ್ಯ ಬಂದಿಹ

ಅವನೇನು ತನ್ನ ಹೊಟ್ಟೆ ಹೊರೆಯುವುದಕ್ಕೆ ಬೇಡು ತ್ತಿರುವನೇ? ತನ್ನ ಮಕ್ಕಳುಮರಿಗಳ ಸಲುವಾಗಿ ಕೈಚಾಚು ತ್ತಿರುವನೇ? ಇಲ್ಲ, ಇಲ್ಲ. ಅವನೊಬ್ಬ ಕನ್ನಡ ದಾಸಯ್ಯ. ತಾನೇ ಕಟ್ಟಿದ ಹಾಡನ್ನು ಅವನು ಎದೆ ತುಂಬಿ ಹಾಡುತ್ತಿದ್ದಾನೆ. ‘ಬೇಡಲು ಕನ್ನಡ ದಾಸಯ್ಯ ಬಂದಿಹ ನೀಡಿರಮ್ಮಾ ತಡ ಮಾಡದಲೆ. ಹಾಡೊಂದನಾತನು ಹೊಸದಾಗಿ ಮಾಡಿಹ ಕೂಡಿರಿ ಕೇಳಿರಿ ಹಾಡುವನು.’

ಕನ್ನಡದ ಕೆಲಸಕ್ಕಾಗಿ ಈ ಹಾಡು ಹೇಳುತ್ತ ಹಣವನ್ನು ಕೂಡಿಸಲು ಹೊರಟಿದ್ದಾನೆ. ಕನ್ನಡ ದಾಸಯ್ಯ. ಅದಾವ ಕೆಲಸ? ಅವನಿಗೇ ಏಕೆ ಅಷ್ಟು ಆತುರ ಎನ್ನುವಿರಾ? ಒಂದು ಕಾಲ ಇತ್ತು. ಆಗ ಕನ್ನಡದ ಮನೆಯಲ್ಲಿಯೇ ಕನ್ನಡದ ಬಗೆಗೆ ಹೀಯಾಳಿಕೆ ಹೆಚ್ಚಾಗಿತ್ತು. ಹೆರವರಿಂದ, ಇಷ್ಟೇ ಏಕೆ ಮನೆಯ ಜನರಿಂದ! ಆಗ ಕನ್ನಡ ಜನರಲ್ಲಿ ತಮ್ಮ ನುಡಿಯ ವಿಷಯದಲ್ಲಿ ಅಭಿಮಾನ ಹುಟ್ಟಿಸಲು ಅಲ್ಲಲ್ಲಿ ಪ್ರಯತ್ನಗಳು ಮೊದಲಾಗಿದ್ದವು. ಅಂಥ ಒಂದು ಪ್ರಯತ್ನವೆಂದರೆ ಎಲ್ಲ ಕಡೆಯ ಕನ್ನಡಿಗರನ್ನು ಒಂದೆಡೆ ಸೇರಿಸುವುದು. ಇದಕ್ಕಾಗಿ ೧೯೧೮ ರಲ್ಲಿ ಧಾರವಾಡದಲ್ಲಿ ನಾಲ್ಕನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನವನ್ನು ಕರೆಯಬೇಕೆಂದು ಗೊತ್ತಾಯಿತು. ಕರೆಯಬೇಕೆನ್ನುವವರಲ್ಲಿ ಹುರುಪು ಉಕ್ಕಿ ಹರಿಯುತ್ತಿತ್ತು. ಆದರೆ ಅದಕ್ಕೆ ಬೇಕಾದ ಹಣವನ್ನು ಎಲ್ಲಿಂದ ತರುವುದು ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಬರಿಗೈಯಿಂದ ಮೊಳಹಾಕುವುದು ಹೇಗೆ ಎಂದು ಅವರು ಸಮ್ಮೇಳನವನ್ನೇ ಮುಂದೆ ಹಾಕುವ ಯೋಚನೆಯಲ್ಲಿದ್ದರು. ಇದು ಕನ್ನಡ ದಾಸಯ್ಯನಿಗೆ ತಿಳಿಯಿತು. ಅವನು ಹೇಳಿದ: “ಹಣದ ಹೊಣೆ ನನ್ನದು. ಉಳಿದೆಲ್ಲ ಸಿದ್ಧತೆಯನ್ನು ಮಾಡಿಕೊಳ್ಳಿರಿ.” ಜಾಣರು ಅಂದು ಅವನ ಮಾತಿಗೆ ನಕ್ಕಿರಬೇಕು. ಆದರೆ ಅವನು ಎದೆಗೆಡಲಿಲ್ಲ. ಕನ್ನಡತಾಯಿಯ ಪ್ರೇರಣೆಯಿಂದ ಹಾಡು ಕಟ್ಟಿದ, ಅದನ್ನು ಹಾಡುತ್ತ ಬೀದಿ ಬೀದಿ ಅಲೆದ.

‘ಕನ್ನಡ ದೇಶದೆ ದೊಡ್ಡವರಾದಿರಿ
ಕನ್ನಡವಿದ್ಯೆಯ ಗಳಿಸಿದಿರಿ
ಕನ್ನಡದಿಂದಲೆ ಸಿರಿವಂತರಾದಿರಿ
ಕನ್ನಡದೇಶದೆ ಹೆಸರಾದಿರಿ
ಅನ್ಯಭಾಷೆಗಳಂತೆ ಕನ್ನಡ ಭಾಷೆಗೆ
ಉನ್ನತಿಕೆಯ ತರಬೇಕೆಂದು
ಹೊನ್ನು ಕೂಡಿಸಲಿಕ್ಕೆ ಬಂದಿಹನಾತನು
ಮನ್ನಿಸಿ ಹಣವನ್ನು ಕೊಡಿರಮ್ಮಾ
ಕಾಸಿಗಲ್ಲವು ನಿಮ್ಮ ಸೋಸಿಗೆ ಬೆಲೆಯಿದೆ
ಕಾಸಲ್ಲವೆ ಕೋಟಿಯ ಮೂಲವು
ಈ ಶಾಸ್ತ್ರವ ಶಾಂತವಿಠ್ಠಲನೋಳ್ ಕಲಿತನು
ಸಾಸಿರವಿರದಂತೆ ತಂದಿಹನು.’

ಈ ಹಾಡಿನ ಪರಿಣಾಮ ಅದ್ಭುತವಾಯಿತು. ಹಣ ಕೂಡಿತು. ಸಮ್ಮೇಳನ ನಡೆಯಿತು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಕಾಲಕ್ಕೆ ವಿದ್ಯಾರಣ್ಯ ಯತಿಗಳು ಚಿನ್ನದ ಮಳೆ ಕರೆಸಿದರಂತೆ. ತನಗೊಂದು ಕಾಸೂ ಬೇಡದೆ ಯತಿಯಂಥ ಕನ್ನಡ ದಾಸಯ್ಯ, ಕನ್ನಡಿಗರ ಹೃದಯ ಸಾಮ್ರಾಜ್ಯದ ಸ್ಥಾಪನೆಗೆ ಹಣದ ಹೊಳೆಯನ್ನೇ ಹರಿಸಿದ.

ಅವನೇ ಶಾಂತಕವಿ! ಕನ್ನಡದ ಸಕ್ಕರಿ

ಶಾಂತಕವಿಗಳ ಮೂಲ ಹೆಸರು ಬಾಳಾಚಾರ್ಯ ಸಕ್ಕರಿ ಎಂದು. ಅವರ ಮನೆತನದ ಮೂಲಪುರುಷರು ಶ್ರೀನಿವಾಸ ತೀರ್ಥರೆಂಬ ದೊಡ್ಡ ಪಂಡಿತರು. ಅವರು ಮಧ್ವಾಚಾರ್ಯರ ಒಂದು ಗ್ರಂಥಕ್ಕೆ ‘ಶರ್ಕರಾ’ ಎಂಬ ಹೆಸರಿನಲ್ಲಿ ಸಂಸ್ಕೃತ ಟೀಕೆಯನ್ನು ಬರೆದರು. ಶರ್ಕರಾ ಅಂದರೆ ಸಕ್ಕರೆ. ಅದು ಸಕ್ಕರಿಯಾಗಿ ಈ ಮನೆತನದ ಅಡ್ಡಹೆಸರಾಯಿತು. ತಮ್ಮ ಮೂಲ ಪುರುಷರು ಸಂಸ್ಕೃತದ ಶರ್ಕರೆಯಾದರೆ ಶಾಂತಕವಿಗಳು ಕನ್ನಡದ ಸಕ್ಕರಿಯಾದರು. ಕನ್ನಡದ ಅಕ್ಕರೆಯಿಂದ ಕೂಡಿ ಹರಳುಗಟ್ಟಿದ ಕಲ್ಲುಸಕ್ಕರಿಯಾದರು.

ಅವರು ಹುಟ್ಟಿದ ಊರು ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಎಂದು ಹೇಳುತ್ತಾರೆ. ಸಾತೇನಹಳ್ಳಿಯ ಪ್ರಾಣದೇವರು, ಅಂದರೆ ಆಂಜನೇಯಸ್ವಾಮಿ, ಸಕ್ಕರಿ ಮನೆತನದ ಕುಲದೇವ ರೆಂಬುದೇನೋ ನಿಜ. ಈ ಪ್ರಾಣದೇವರನ್ನು ಶಾಂತೇಶ ಎಂದು ಕರೆಯುತ್ತಿದ್ದರು. ಅವನ ಪ್ರೇರಣೆಯಿಂದ ತಮ್ಮ ಬರವಣಿಗೆಯೆಲ್ಲ ನಡೆಯಿತು ಎಂದು ‘ಶಾಂತಕವಿ’ ಎಂಬ ಕಾವ್ಯನಾಮವನ್ನು ಬಾಳಾಚಾರ್ಯರು ಇಟ್ಟುಕೊಂಡರು. ‘ಶಾಂತವಿಠ್ಠಲ’, ‘ಶಾಂತೇಶವಿಠ್ಠಲ’ ಎಂಬ ಅಂಕಿತದಿಂದ ತಮ್ಮೆಲ್ಲ ಕೃತಿಗಳನ್ನು ರಚಿಸಿದರು.

ವಿದ್ಯಾಭ್ಯಾಸ

ಶಾಂತಕವಿ ಹುಟ್ಟಿದ್ದು ೧೮೫೬ ರ ಜನವರಿ ತಿಂಗಳ ಮಧ್ಯದಲ್ಲಿ. ಚಿಕ್ಕಂದಿನಲ್ಲಿ ಅವರನ್ನು ಬಾಳ ಎಂದು ಪ್ರೀತಿ ಯಿಂದ ಕರೆಯುತ್ತಿದ್ದರು. ಅದೇ ಮುಂದೆ ಬಾಳಾಚಾರ್ಯ ಎಂದಾಯಿತು. ಬಾಳನ ತಂದೆ ಗೋಪಾಳಾಚಾರ್ಯರು ಮಹಾ ಪಂಡಿತರಾಗಿದ್ದರು. ಆದರೆ ಅವರ ಕಾಲದಲ್ಲಿ ಪಂಡಿತರನ್ನು ಯಾರೂ ಕೇಳುತ್ತಿರಲಿಲ್ಲ. ಪಾಂಡಿತ್ಯಕ್ಕೆ ಬೆಲೆಯಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ಪೇಶ್ವೆಗಳ ಆಳ್ವಿಕೆ ಮುಗಿದು ಬ್ರಿಟಿಷರ ಅರಸೊತ್ತಿಗೆ ಕಾಲಿರಿಸಿತ್ತು. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಕನ್ನಡಿಗರ ಸ್ಥಿತಿಯಾಗಿತ್ತು. ಹೇಗಾದರೂ ಮಾಡಿ ಬದುಕಬೇಕೆಂಬುದೇ ಅವರು ಇಟ್ಟುಕೊಂಡ ಧೋರಣೆಯಾಗಿತ್ತು. ಆಳಲು ಬಂದವರನ್ನು ಬಾಯ್ತುಂಬ ಹೊಗಳಿ ಅವರ ಮುಂದೆ ಕೈ ಚಾಚಿ ಬಾಯ್ತೆರೆದು ಬೇಡುವುದು, ಕೊಟ್ಟದ್ದನ್ನು ಪಾಲಿಗೆ ಬಂದ ಪಂಚಾಮೃತವೆಂದು ತೆಗೆದುಕೊಳ್ಳುವುದು ಅವರ ನೀತಿಯಾಗಿತ್ತು. ಅವರಲ್ಲಿ ಒಗ್ಗಟ್ಟಿರಲಿಲ್ಲ, ಹೆಮ್ಮೆ ಇರಲಿಲ್ಲ. ಅವರಿಗೆ ಹೆರವರು ಹೇಳಿಕೊಟ್ಟ ವಿದ್ಯೆಯೇ ವಿದ್ಯೆ, ಕಲಿಸಿದ ಭಾಷೆಯೇ ಭಾಷೆ. ಹೀಗಿರುವಾಗ ಅವರ ಕವಿಗಳನ್ನು, ಪಂಡಿತರನ್ನು ಯಾರು ಮನ್ನಿಸುವವರು? ಯಾರು ಪೋಷಿಸುವವರು?

ಇಂಥ ಪರಿಸ್ಥಿತಿಯಲ್ಲಿ ಪಂಡಿತ ಗೋಪಾಳಾಚಾರ್ಯರು ಪರಂಪರೆಯನ್ನು ಬಿಡಲಿಕ್ಕಾಗದೆ, ಇಟ್ಟುಕೊಳ್ಳಲೂ ಆಗದೆ ಜೀವನ ಸಾಗಿಸಿದ್ದರು. ಅವರ ಮಕ್ಕಳು ಸಂಸ್ಕೃತದಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಬಾಳಾ ತನ್ನ ಆರನೆಯ ವರ್ಷದಲ್ಲಿ ಕನ್ನಡ ಶಾಲೆಯನ್ನು ಸೇರಿದ, ಸಂಸ್ಕೃತದೊಡನೆ ಕನ್ನಡವನ್ನೂ ಓದಿದ. ಆಗಿನ ಸರ್ಕಾರೀ ಕನ್ನಡ ಶಾಲೆಗಳಲ್ಲಿ ಮರಾಠಿ ಭಾಷೆಗೆ ಮಹತ್ವ. ಧಾರವಾಡ ಜಿಲ್ಲೆಯಲ್ಲಿಯೂ ಕನ್ನಡ ಮಕ್ಕಳು ಮರಾಠಿ ಕಲಿಯುತ್ತಿದ್ದರು. ಏಕೆಂದರೆ ಮರಾಠಿ ಬಲ್ಲವರನ್ನೇ ಸರ್ಕಾರೀ ನೌಕರಿಗಳಲ್ಲಿ ನೇಮಿಸುತ್ತಿದ್ದರು. ವ್ಯಾಪಾರಿಗಳ ಲೆಕ್ಕಪತ್ರಗಳೆಲ್ಲ ಮೋಡಿ ಲಿಪಿಯಲ್ಲಿರುತ್ತಿದ್ದವು.

ಸುದೈವದಿಂದ ಬಾಳ ಮಾತ್ರ ಅಯ್ಯನವರ ಶಾಲೆಯನ್ನು ಸೇರಿ ಅಲ್ಲಿ ಕನ್ನಡ ಭಾಷೆ-ಸಾಹಿತ್ಯಗಳ ಸಂಸ್ಕಾರವನ್ನು ಪಡೆದ. ಕನ್ನಡ ವ್ಯಾಕರಣ ಛಂದಸ್ಸುಗಳ ಪರಿಚಯವನ್ನು ಮಾಡಿಕೊಂಡ. ಅಂದು ಜನಪ್ರಿಯವಾದ ‘ಜೈಮಿನಿ ಭಾರತ’, ‘ರಾಜ ಶೇಖರ ವಿಳಾಸ’ ಮುಂತಾದ ಹಳೆಯ ಕನ್ನಡ ಕಾವ್ಯಗಳನ್ನು ಓದಿ ಮೆಚ್ಚಿದ. ಏಳು ಇಯತ್ತೆಗಳ ಓದಾದ ಮೇಲೆ ನಡೆಯುವ ಮುಲಕೀ ಪರೀಕ್ಷೆಯಲ್ಲಿ ತೇರ್ಗಡೆಯಾದ. ಅಷ್ಟುಹೊತ್ತಿಗೆ ಅವನಿಗೆ ಮನೆಯಲ್ಲಿ ಓದಿದ ಸಂಸ್ಕೃತ, ಶಾಲೆಯಲ್ಲಿ ಓದಿದ ಕನ್ನಡ ಎರಡರಲ್ಲಿಯೂ ತಿಳುವಳಿಕೆ ಬೆಳೆದಿತ್ತು. ತಾಯಿ ಹಾಡುವ ದಾಸರ ಪದಗಳು ಅವನ ಕಿವಿಯಲ್ಲಿ ಗುನುಗುಡುತ್ತಿದ್ದವು. ರಾಮ, ಕೃಷ್ಣರ ಕತೆಗಳು ತಲೆಯಲ್ಲಿ ಸುಳಿಯುತ್ತಿದ್ದವು.

ಅಂದು ಹಳ್ಳಿಗಳಲ್ಲಿ ದೊರೆಯುವ ಮನರಂಜನೆಯ ಕಡೆಗೆ ಅವನ ಮನಸ್ಸಿನ ಎಳೆತ ಹೆಚ್ಚಾಯಿತು. ಬಯಲಾಟ, ಹರಿಕಥೆ ಗಳಿಗೆ ಅವನು ತಪ್ಪದೆ ಹೋಗತೊಡಗಿದ. ಗೊಂಬೆಯಾಟ, ಕಿಳ್ಳಿಕೇತನ ಆಟ ಇವನ್ನು ಕೂಡ ಅವನು ತಾಯಿತಂದೆಗಳ ಕಣ್ಣು ತಪ್ಪಿಸಿ ನೋಡಲು ಹೋಗುತ್ತಿದ್ದ. ಮುಂದೆ ಕವಿ, ಕೀರ್ತನಕಾರ, ನಾಟಕಕಾರನಾಗುವ ಬಾಳನಿಗೆ ಬಾಲ್ಯದಲ್ಲಿಯೇ ದೊರೆತ ಈ ಎಲ್ಲ ಅನುಭವಗಳು ದಾರಿಬುತ್ತಿಯಾದವು. ಅವನ ಪ್ರತಿಭೆಗೆ ಬೇಕಾದ ಪೋಷಣೆ ಅವುಗಳಿಂದ ಸಿಕ್ಕಿತು. ಅವನ ಮನಸ್ಸು ಮನೆತನದ ಬಡತನದಲ್ಲಿಯೂ ಸಾಹಿತ್ಯ ಸಂಸ್ಕಾರ ಗಳಿಂದ ಶ್ರೀಮಂತವಾಯಿತು.

ಶಿಕ್ಷಕ

ಮುಲಕೀ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬಾಳ ಮುಂದೆ ಇಂಗ್ಲಿಷ್ ಕಲಿಯಬಹುದಾಗಿತ್ತು. ಆದರೆ ಬಡತನ ದಿಂದ ಕಲಿಯುವುದಾಗಲಿಲ್ಲ. ಹದಿನಾರು ವರ್ಷದ ಚಿಕ್ಕ ವಯಸ್ಸಿನಲ್ಲಿ ಅವನು ಶಾಲಾ ಮಾಸ್ತರಿಕೆಗೆ ಶರಣು ಹೋಗ ಬೇಕಾಯಿತು. ಮೊಟ್ಟಮೊದಲಿಗೆ ಅವನು ರಾಣೀಬೆನ್ನೂರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹನ್ನೆರಡು ರೂಪಾಯಿ ಸಂಬಳದ ಮೇಲೆ ಶಿಕ್ಷಕನಾದನು. ಬಾಳ ದೊಡ್ಡ ಬಾಲಕ ನಾದರೂ ಇನ್ನೂ ಬಾಳೂಮಾಸ್ತರ ಎಂದು ಕರೆಯಿಸಿಕೊಳ್ಳ ತೊಡಗಿದನು. ಅವನ ವಿದ್ಯಾರ್ಥಿಗಳು ಅವನು ಕಲಿಸುವ ರೀತಿ ಯನ್ನೂ ಕನ್ನಡದ ಅಕ್ಕರೆಯನ್ನೂ ನೋಡಿ ಮೆಚ್ಚಿಕೊಂಡರು. ಅವನು ಬೆಳೆಯುವ ಮಕ್ಕಳಿಗೆ ಬಹಳ ಬೇಕಾದವನಾದನು. ಆದರೆ ತನ್ನೊಡನೆ ಕೆಲಸ ಮಾಡುವ ಉಳಿದ ಶಿಕ್ಷಕರ ಕೂಡ ಹೊಂದಿಕೊಳ್ಳುವುದು ಅವನಿಗೆ ಕಷ್ಟವಾಯಿತು. ಏಕೆಂದರೆ ಅವನದು ಮೊದಲಿನಿಂದಲೂ ಹಟದ ಸ್ವಭಾವ. ತನಗೆ ಸರಿ ಎನಿಸಿದ್ದನ್ನು ಸಾಧಿಸುವಾಗ ಅದರ ಪರಿಣಾಮ ಏನಾದೀತು ಎಂಬುದನ್ನು ಅವನು ಯೋಚಿಸುತ್ತಿರಲಿಲ್ಲ. ಉಳಿದವರು ತಮ್ಮ ಮೇಲಧಿಕಾರಿಗಳ ತಾಳಕ್ಕೆ ಕುಣಿಯುವವರು, ಅವರ ಮರ್ಜಿ ಸಂಪಾದಿಸಿ ತಮ್ಮ ಲಾಭವನ್ನು ಮಾಡಿಕೊಳ್ಳುವವರು. ಈ ಗುಣ ಅವನಲ್ಲಿ ಇರಲಿಲ್ಲ. ಅಂದಿನ ವಿದ್ಯಾ ಇಲಾಖೆಯಲ್ಲಿ ಶಿಕ್ಷಕರ ಮೇಲ್ವಿಚಾರಕರಾದ ಅಧಿಕಾರಿಗಳು ಬಹಳ ದರ್ಪವುಳ್ಳವ ರಾಗಿರುತ್ತಿದ್ದರು. ಅವರ ಲಹರಿಯಂತೆ ನಡೆಯದೆ ಇದ್ದವರು ಮಣ್ಣುಮುಕ್ಕಬೇಕಾಗುತ್ತಿತ್ತು. ಸಾಮಾನ್ಯವಾಗಿ ಅವರೆಲ್ಲ ಮರಾಠಿ ಜನ. ಅವರು ಮರಾಠಿಗರನ್ನಾಗಲೀ ಮರಾಠಿಯನ್ನು ಕಲಿತು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಕನ್ನಡಿಗರನ್ನಾಗಲೀ ಎತ್ತಿಹಿಡಿಯುತ್ತಿದ್ದರು. ಇಂಥವರಿಗೆ ಮಾತ್ರ ಎಲ್ಲ ಸೌಕರ್ಯ ಗಳೂ ಸಿಗುತ್ತಿದ್ದವು. ಕನ್ನಡದ ಉಜ್ವಲ ಅಭಿಮಾನಿಯಾದ ಬಾಳೂಮಾಸ್ತರನ ಮೇಲೆ ಈ ಅಧಿಕಾರಿಗಳ ವಕ್ರದೃಷ್ಟಿ ಇತ್ತು.

ಭಾಷಾದ್ವೇಷ ಹೆಚ್ಚಿಸುವವರು ಯಾರು?

ಒಮ್ಮೆ ಮೊದಲು ತಿಳಿಸದೆ ಮೇಲಿನ ಅಧಿಕಾರಿಗಳು ಬಾಳೂಮಾಸ್ತರರ ಶಾಲೆಗೆ ಭೇಟಿಯಿತ್ತರು. ಆಗ ಅವರು ಶಾಲೆಯಲ್ಲಿ ಇರಲಿಲ್ಲ. ಏನೋ ಜರೂರು ಕೆಲಸವೆಂದು ಹೆಡ್ ಮಾಸ್ತರರಿಗೆ ಹೇಳಿ ಮನೆಗೆ ಹೋಗಿದ್ದರು. ಕೂಡಲೆ ಅಧಿಕಾರಿಗಳು ಅವರನ್ನು ಕರೆಯಿಸಿದರು.

ಮೇಲಧಿಕಾರಿಗಳು ಕೇಳಿದರು: “ಏನು ಬಾಳೂ ಮಾಸ್ತರ, ಶಾಲೆಯ ಕೆಲಸ ಬಿಟ್ಟು ಮನೆಗೆ ಹೋಗಿದ್ದಿರಾ?”

ಬಾಳೂಮಾಸ್ತರ: ಸ್ವಲ್ಪ ಜರೂರು ಕೆಲಸವಿತ್ತೆಂದು ತಿಳಿಸಿ ಹೋಗಿದ್ದೆ ಸಾಹೇಬರೇ.

ಮೇಲಧಿಕಾರಿ: ನೀವು ಮೇಲಿಂದ ಮೇಲೆ ಇದೇ ಪ್ರಕಾರ ಹೋಗುತ್ತೀರಿ ಎಂದು ನಮ್ಮ ಕಡೆಗೆ ವರದಿ ಬಂದಿದೆ.

ಬಾಳೂಮಾಸ್ತರ: ಅದು ನಿಜವಲ್ಲ ಸಾಹೇಬರೇ.

ಮೇಲಧಿಕಾರಿ: ಅಂದರೆ ನಾನು ಸುಳ್ಳು ಹೇಳುತ್ತಿರುವೆನೇ? ಇಷ್ಟೇ ಅಲ್ಲ, ನೀವು ಶಾಲೆಯಲ್ಲಿ, ಮನೆಯಲ್ಲಿ ಕನ್ನಡದ ಪ್ರಚಾರ ಮಾಡುತ್ತಿದ್ದೀರಿ, ಭಾಷಾ ದ್ವೇಷವನ್ನು ಹಬ್ಬಿಸುತ್ತಿದ್ದೀರಿ ಎಂದು ನಮ್ಮ ಕಿವಿಯ ಮೇಲೆ ಬಿದ್ದಿದೆ.

ಬಾಳೂಮಾಸ್ತರ: ಇದು ಮಾತ್ರ ಅರ್ಧ ನಿಜ ಸಾಹೇಬರೇ. ನಾನು ಕನ್ನಡದ ಪ್ರೇಮವನ್ನು ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡ ನಾಡಿನಲ್ಲಿ ಹುಟ್ಟಿ ಬಂದ ನನ್ನ ಪವಿತ್ರ ಕರ್ತವ್ಯವದು. ಕನ್ನಡದಲ್ಲಿ ಪ್ರೀತಿ ಹುಟ್ಟಿಸಿದೆ ಅಂದರೆ ಭಾಷಾ ದ್ವೇಷವನ್ನು ನಾನು ಹಬ್ಬಿಸಿ ದಂತಾಗುವುದೇ? ಹಾಗೆ ನೋಡಿದರೆ ಮರಾಠಿಯ ಮೋಹದಿಂದ ಹುಚ್ಚೆದ್ದು ಕುಣಿಯುವ ಶಿಕ್ಷಕರೂ ಅವರಿಗೆ ಬೆಂಬಲಕೊಡುವ ಅಧಿಕಾರಿಗಳೂ ಭಾಷಾದ್ವೇಷವನ್ನು ಹೆಚ್ಚಿಸುತ್ತಿದ್ದಾರೆ!

ಮೇಲಧಿಕಾರಿಗಳ ಕಣ್ಣುಗಳು ಕೆಂಪಗಾದವು. ಮೈ ಕೋಪದಿಂದ ನಡುಗಿತು.

 

‘ಕನ್ನಡದಲ್ಲಿ ಪ್ರೀತಿ ಹುಟ್ಟಿಸಿದೆ ಎಂದರೆ ಭಾಷಾದ್ವೇಷವನ್ನು ಹಬ್ಬಿಸಡಿದಂತೆಯೇ ?’

ಮೇಲಧಿಕಾರಿ: ಏನು ನಾನು ಶಿಕ್ಷಕರಿಗೆ ಬೆಂಬಲ ಕೊಟ್ಟು ಭಾಷಾದ್ವೇಷವನ್ನು ಹಬ್ಬಿಸುತ್ತಿರುವೆನೆ? ಎಂಥ ಉದ್ಧಟತನದ ಮಾತಿದು! ನೀವು ಇದರ ಪರಿಣಾಮವನ್ನು ಅನು ಭವಿಸಬೇಕಾಗುತ್ತದೆ.

ಬಾಳೂಮಾಸ್ತರ: ಶಾಂತವೇಶನ ಚಿತ್ತಕ್ಕೆ ಬಂದಂತೆ ಆಗಲಿ.

ಕನ್ನಡವನ್ನು ಪ್ರೀತಿಸಿದ್ದಕ್ಕೆ ಶಿಕ್ಷೆ

ಮೇಲಧಿಕಾರಿಗಳು ಕಾಲುಗಳನ್ನು ಅಪ್ಪಳಿಸುತ್ತ ಹೊರಟು ಹೋದರು. ಎರಡು ದಿನಗಳಲ್ಲಿ ಬಾಳೂಮಾಸ್ತರರನ್ನು ಹಾವೇರಿಗೆ ವರ್ಗ ಮಾಡಿದ ಆಜ್ಞೆ ಬಂದಿತು. ಉಳಿದ ಶಿಕ್ಷಕರಿಗೆ ಸಕ್ಕರೆ ಹಾಕಿ ಹಾಲು ಕುಡಿದಂತಾಯಿತು. ಬಾಳೂಮಾಸ್ತರರು ಶಾಂತೇಶನ ಇಚ್ಛೆಯೆಂದು ಅದಕ್ಕೆ ತಲೆಬಾಗಿದರು. ಹಾವೇರಿ ಯಿಂದ ಒಂದು ವರ್ಷದ ಮೇಲೆ ಧಾರವಾಡಕ್ಕೆ ವರ್ಗವಾಯಿತು. ಮರುವರ್ಷ ಶಿಕ್ಷಕ ತರಬೇತಿಗಾಗಿ ಅವರು ಬೆಳಗಾವಿಗೆ ಹೋದರು. ಈ ಪ್ರಕಾರ ಕನ್ನಡದ ಮೇಲಿನ ಅಭಿಮಾನದಿಂದ ಅವರು ಅನೇಕ ಯಾತನೆಗಳನ್ನು ಅನುಭವಿಸಬೇಕಾಯಿತು. ಆದರೆ ತಮ್ಮ ತತ್ತ್ವವನ್ನು ಅವರು ಬಿಡಲಿಲ್ಲ.

ಬೆಳಗಾವಿಯ ನಾರ್ಮಲ್ ಸ್ಕೂಲಿನಲ್ಲಿ ತರಬೇತಿ ಪಡೆ ಯುತ್ತಿದ್ದಾಗ ಬಾಳೂಮಾಸ್ತರರಿಗೆ ಯೋಗ್ಯ ಕನ್ನಡ ಗುರುಗಳು ದೊರೆತರು. ಅದರಿಂದ ಬೆಳೆಯುವ ಕನ್ನಡ ಸಸಿಗೆ ಸಕಾಲಕ್ಕೆ ನೀರೆರೆದಂತಾಯಿತು. ಆ ಗುರುಗಳೆಂದರೆ ಪಂಡಿತರಾದ ಶಾಂತವೀರ ರಾಚಿದೇವ ಕಿತ್ತೂರ ಎಂಬುವರು. ಹಳೆಯ ಕನ್ನಡ ಕಾವ್ಯಗಳನ್ನು ಅವರು ಆಳವಾಗಿ ಅಭ್ಯಾಸ ಮಾಡಿದ್ದರು. ‘ರಾಜಶೇಖರ ವಿಳಾಸ’ದ ಕೆಲವು ಆಶ್ವಾಸಗಳಿಗೆ ಟೀಕೆಯನ್ನು ಬರೆದಿದ್ದರು. ಅವರ ಕನ್ನಡ ಪಾಠಗಳೆಂದರೆ ವಿದ್ಯಾರ್ಥಿಗಳಿಗೆ ಸಾಹಿತ್ಯದ ಸವಿಯೂಟ. ಬಾಳೂಮಾಸ್ತರರ ಕನ್ನಡ ಅಕ್ಕರೆಯನ್ನು ಕಂಡು ತಮಗೆ ಯೋಗ್ಯ ಶಿಷ್ಯನು ದೊರಕಿದನೆಂದು ಅವರು ಹಿಗ್ಗಿದರು. ಅವನ ಕನ್ನಡ ಓದು ಉತ್ತಮವಾಗಿ ನಡೆಯಲಿ ಎಂದು ಅವನಿಗೆ ಕಿತ್ತೂರ ಗುರುಗಳು ಹುರಿದುಂಬಿಸಿದರು, ನೆರವಾದರು. ಬರಬರುತ್ತ ಅವನು ಕನ್ನಡದಲ್ಲಿ ಕವಿತೆಯನ್ನು ಬರೆಯಬಲ್ಲನೆಂದು ತಿಳಿದು ಗುರುಗಳ ಹೆಮ್ಮೆ ಇಮ್ಮಡಿಯಾಯಿತು.

ಮೊದಲ ಕವನ

ಆ ಶಾಲೆಯಲ್ಲಿ ಒಮ್ಮೆ ಶಿಕ್ಷಣಾಧಿಕಾರಿಗಳ ಸನ್ಮಾನ ಸಮಾರಂಭವಿತ್ತು. ಆ ಅಧಿಕಾರಿಗಳ ಹೆಸರನ್ನು ಸೇರಿಸಿ ಅವರ ಗುಣಗಾನವನ್ನು ಮಾಡುವ ಸ್ವಾಗತಗೀತೆ ಬೇಕಾಗಿತ್ತು. ಕಿತ್ತೂರ ಪಂಡಿತರು ಇಂಥ ಎಷ್ಟೋ ಹಾಡುಗಳನ್ನು ಬರೆದಿದ್ದರು. ಈ ಸಲ ಮಾತ್ರ ಸ್ವಾಗತ ಗೀತೆಯನ್ನು ಬರೆಯುವ ಕೆಲಸವನ್ನು ಬಾಳೂಮಾಸ್ತರರಿಗೆ ವಹಿಸಿಕೊಟ್ಟರು. ಅವರು ಬರೆದು ತಂದುದನ್ನು ತಾವು ತಿದ್ದಿಕೊಡುವುದಾಗಿ ಹೇಳಿದರು. ಬಹುಶಃ ಅವರಲ್ಲಿ ಬರೆಯುವ ಶಕ್ತಿ ಎಷ್ಟಿದೆ ಎಂಬುದನ್ನು ಗುರುಗಳು ಒರೆ ಹಚ್ಚಿ ನೋಡಬೇಕಾಗಿತ್ತು ಎಂದು ಕಾಣುತ್ತದೆ. ಬಾಳೂ ಮಾಸ್ತರರು ಕವಿತೆಯನ್ನು ಬರೆದು ತಂದು ತೋರಿಸಿದರು. ಗುರುಗಳ ಒರೆಗೆ ಚೆನ್ನಾಗಿ ಇಳಿದರು. ಈ ಸ್ವಾಗತ ಗೀತೆಯನ್ನು ಸನ್ಮಾನ ಸಭೆಯಲ್ಲಿ ಬಾಳೂಮಾಸ್ತರರೇ ಹಾಡಿದರು. ನೆರೆದ ಸಭಿಕರೆಲ್ಲ ಅದನ್ನು ಕೊಂಡಾಡಿದರು, ಕಿತ್ತೂರ ಪಂಡಿತರೇ ಅದನ್ನು ಬರೆದಿರಬೇಕೆಂದರು. ಆದರೆ ಅದು ಅವರ ಶಿಷ್ಯನ ರಚನೆ ಎಂದು ತಿಳಿದಾಗ ಎಲ್ಲರಿಗೂ ಆನಂದವಾಯಿತು, ಆಶ್ಚರ್ಯವಾಯಿತು.

ಹೀಗೆ ಹೇಳಿ ಮಾಡಿಸಿದ ಕವಿತೆಯಿಂದ ಮೊದಲಾದ ಶಾಂತಕವಿಗಳ ಕವಿತಾಶಕ್ತಿ ಹೇಳಲಿ ಬಿಡಲಿ ತಾನೇ ತಾನಾಗಿ ಹಾಡುವ ಕೋಗಿಲೆಯಂತೆ ಕುಕಿಲತೊಡಗಿತು. ಕಿತ್ತೂರ ಪಂಡಿತರಿಂದ ತಮಗೆ ದೊರೆತ ಸ್ಫೂರ್ತಿಯನ್ನು ಅವರು ಯಾವಾಗಲೂ ನೆನೆಯುತ್ತಿದ್ದರು.

ನಿನ್ನಂಥವರು ಮಾಡಬೇಕು

ಬಾಳೂಮಾಸ್ತರರನ್ನು ತರಬೇತಿಯ ನಂತರ ಗೋವನ ಕೊಪ್ಪ ಶಾಲೆಗೆ ಹಾಕಿದರು. ಅಲ್ಲಿಂದ ಕೆಲವು ತಿಂಗಳಾದ ಮೇಲೆ ಗದುಗಿನ ಶಾಲೆಗೆ ವರ್ಗಾಯಿಸಿದರು. ಅಲ್ಲಿರುವಾಗ ಯಾವುದೋ ಕೆಲಸಕ್ಕಾಗಿ ಗದಗಿನ ಬಳಿ ಇರುವ ಮುಳಗುಂದ ಎಂಬ ಹೆಸರಿನ ಹಳ್ಳಿಗೆ ಹೋದರು. ಅಲ್ಲಿ ಅವರು ಒಂದು ರಾತ್ರಿ ಶ್ರೀಮಂತರೊಬ್ಬರ ಮನೆಯಲ್ಲಿ ಈಶ್ವರಶಾಸ್ತ್ರಿಗಳೆಂಬ ವಿದ್ವಾಂಸರ ಕೀರ್ತನೆಯನ್ನು ಕೇಳಲು ಕುಳಿತುಕೊಂಡರು. ಅಂದಿನ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಕೀರ್ತನಕಾರರು ಹೆಚ್ಚಾಗಿ ಮರಾಠಿ ಭಕ್ತಿಗೀತೆಗಳನ್ನೂ ಮರಾಠಿ ಶ್ಲೋಕಗಳನ್ನೂ ಹೇಳುವ ರೂಢಿಯಿತ್ತು. ಕೇಳುವವರೂ ಅದೇ ವಾತಾವರಣದಲ್ಲಿ ಬೆಳೆದವರಾದ್ದರಿಂದ ಅದೆಲ್ಲ ಅವರಿಗೆ ಸಹಜವೆನಿಸುತ್ತಿತ್ತು.

ಹೀಗೆ ಹೆಸರಿಗೆ ಕೀರ್ತನ ಕನ್ನಡದಲ್ಲಿ, ಆದರೆ ಕೀರ್ತನವೆಲ್ಲ ನಡೆದದ್ದು ಹೆಚ್ಚಾಗಿ ಮರಾಠಿಯಲ್ಲಿ! ಇದನ್ನು ಕೇಳಿ ಬಾಳೂಮಾಸ್ತರರಿಗೆ ತಡೆದುಕೊಳ್ಳುವುದಾಗಲಿಲ್ಲ. ಕೀರ್ತನವು ನಡೆದಿರುವಾಗಲೇ ಅವರು ಹುಬ್ಬುಗಂಟು ಹಾಕಿದರು, ತಮ್ಮಷ್ಟಕ್ಕೆ ಏನೋ ವಟವಟಿಸಿದರು. ಕೀರ್ತನ ಮುಗಿದು ಆರತಿ ಎತ್ತುವುದೊಂದೇ ತಡ, ಬಾಳೂಮಾಸ್ತರರು ಶಾಸ್ತ್ರಿಗಳತ್ತ ಧಾವಿಸಿ ಹೋಗಿ, “ಇದೆಂಥ ಕನ್ನಡ ಕೀರ್ತನ, ಭಡಜಿಯವರೇ?” ಎಂದು ಗುಡುಗುಹಾಕಿದರು. ಚಿಕ್ಕ ವಯಸ್ಸಿನವರಾದ ತಾವು ಒಬ್ಬ ವಯಸ್ಸಾದ ವಿದ್ವಾಂಸರನ್ನು ಕುರಿತು ಈ ರೀತಿ ಅಬ್ಬರಿಸಿದೆನಲ್ಲ ಎಂಬ ಎಚ್ಚರವೇ ಅವರಿಗೆ ಉಳಿಯಲಿಲ್ಲ. ಶಾಸ್ತ್ರಿಗಳು ಆ ತರುಣನನ್ನು ಒಂದು ಕ್ಷಣ ದುರುಗುಟ್ಟಿ ನೋಡಿದರು, ಆದರೆ ಸಿಟ್ಟಿಗೇಳಲಿಲ್ಲ. ಗಂಭೀರವಾಗಿ ಹೇಳಿದರು: “ನಮ್ಮಂಥವರ ಕೀರ್ತನ ಅಂದರೆ ಹೀಗೆ ಇರೋದು ನೋಡಪ್ಪ.”

ಬಾಳೂಮಾಸ್ತರರು ಇನ್ನೂ ಆವೇಶದಲ್ಲಿಯೇ ಇದ್ದರು.

“ಅಲ್ಲ ಶಾಸ್ತ್ರಿಗಳೇ, ಕನ್ನಡ ಕೀರ್ತನೆಯಿಂದು ಹೇಳಿ ಅದರಲ್ಲಿ ಮರಾಠಿ ಶ್ಲೋಕ, ಹಾಡುಗಳನ್ನು ಹೇಳುತ್ತ ಹೋದರೆ ವಿಚಿತ್ರವೆನಿಸುವುದಿಲ್ಲವೇ? ರಸಭಂಗವಾಗುವುದಿಲ್ಲವೇ?

ಕನ್ನಡದಲ್ಲಿ ಉತ್ತಮವಾದ ಶ್ಲೋಕಗಳಿಲ್ಲವೇ? ಶರಣರ ವಚನಗಳಿಲ್ಲವೇ? ದಾಸರ ಪದಗಳಿಲ್ಲವೇ? ಸರ್ವಜ್ಞನ ಸೂಕ್ತಿಗಳಿಲ್ಲವೇ? ಅವನ್ನು ನೀವು ಹೇಳಬಹುದಲ್ಲ?”

“ಹೇಳಬಹುದಪ್ಪ. ಆದರೆ ನಮಗೆ ಅವುಗಳ ಪರಿಚಯವಿಲ್ಲ.”

“ಪರಿಚಯ ಮಾಡಿಕೊಳ್ಳಬೇಕು ಶಾಸ್ತ್ರಿಗಳೇ.”

“ಅಯ್ಯೋ, ಈ ಮುಪ್ಪಿನ ಕಾಲಕ್ಕೆ ನಾವೇನು ಪರಿಚಯ ಮಾಡಿಕೊಳ್ಳುತ್ತೇವೆ? ನಿನ್ನಂಥ ತರುಣರು ಹೊಸಹೊಸ ಕನ್ನಡ ಕೀರ್ತನೆಗಳನ್ನು ಬರೆಯಬೇಕು. ಅವನ್ನು ಹಾಡಿ ತೋರಿಸಬೇಕು. ಅವನ್ನು ಕೇಳಿ ನಾವೂ ಸಂತೋಷ ಪಡಬಹುದು.”

 

ಹಾಡುತ್ತ ಕನ್ನಡ ದಾಸಯ್ಯ ಬೀದಿಬೀದಿಯಲ್ಲಿ ಅಲೆದ.

ಮಾಡಿ ತೋರಿಸಿದ ತರುಣ

 

ಶಾಸ್ತ್ರಿಗಳ ಈ ಸೂಚನೆ ಬಾಳೂಮಾಸ್ತರರಿಗೆ ಸರಿಯೆಂದು ಕಂಡಿತು. ತಾನೇ ಒಂದು ಕನ್ನಡ ಕೀರ್ತನೆಯನ್ನು ಬರೆದು ಅದನ್ನು ಹಾಡಿ ತೋರಿಸಬೇಕೆಂಬ ತವಕ ಅವರಲ್ಲಿ ಮೊಳೆತು ಮರವಾಯಿತು. ‘ಮುಕುಂದ ದಾನಾಮೃತ’ ಎಂಬ ಹೆಸರಿನಲ್ಲಿ ಶಾಂತಕವಿಗಳು ಪದ್ಯಕಾವ್ಯವನ್ನು ಸರಸರನೆ ಬರೆದರು. ಅದೇ ಅವರ ಮೊದಲ ಕಾವ್ಯ ಮತ್ತು ಕೀರ್ತನವಾಯಿತು. ಮರುವಾರ ಅದನ್ನು ತೆಗೆದುಕೊಂಡು ಅವರು ಮುಳಗುಂದಕ್ಕೆ ಹೋಗಿ ಈಶ್ವರ ಶಾಸ್ತ್ರಿಗಳ ಕೈಯಲ್ಲಿ ಕೊಟ್ಟರು. ಅದನ್ನು ನೋಡಿ ಶಾಸ್ತ್ರಿಗಳು ಬಹಳ ಸಂತೋಷಪಟ್ಟರು. ಈ ಹೊಸ ಕೀರ್ತನ ಕಾರನ ಅಚ್ಚಗನ್ನಡದಲ್ಲಿಯ ಕೀರ್ತನಗಳನ್ನು ಊರ ಹಿರಿಯರು ಏರ್ಪಡಿಸಿದರು.

ಒಂದು ಆದಿತ್ಯವಾರ ಸಂಜೆಯ ಹೊತ್ತು. ಶ್ರೀಮಂತರ ಮನೆಯ ದೊಡ್ಡ ಪಡಸಾಲೆಯಲ್ಲಿ ಕುತೂಹಲದಿಂದ ಜನ ಸೇರಿದರು. ಶಾಂತಕವಿಗಳು ತಾವು ಹೊದ್ದುಕೊಂಡ ಉತ್ತರೀಯವನ್ನು ಟೊಂಕಕ್ಕೆ ಸುತ್ತಿ ಕೈಯಲ್ಲಿ ತಾಳ ಹಿಡಿದು ಕೀರ್ತನ ಹೇಳಲು ಪ್ರಾರಂಭಿಸಿದರು. ಈ ಹೊಸ ಬಗೆಯ ಕೀರ್ತನವು ಹುಸಿಯಾಗುವುದೆಂದು ತಿಳಿದವರು ಕೂಡ ಮೂರು ಗಂಟೆಯ ಕಾಲ ನಡೆದ ಕೀರ್ತನವನ್ನು ಮಂತ್ರ ಮುಗ್ಧರಾಗಿ ಕೇಳಿದರು. ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡದಲ್ಲಿ ವಾರ್ಧಕಷಟ್ಪದಿಯ ನುಡಿಗಳು, ದಾಸರ ಪದಗಳು ಶಾಂತ ಕವಿಗಳ ನಾಲಿಗೆಯ ಮೇಲೆ ನಲಿದಾಡುತ್ತ ಬಂದವು. ಕೀರ್ತನವು ಮುಗಿದ ಮೇಲೆ ಸಭಿಕರ ಪರವಾಗಿ ವಸ್ತ್ರವನ್ನೂ ಫಲತಾಂಬೂಲವನ್ನೂ ಕೊಟ್ಟು ಕೀರ್ತನ ಕಾರರನ್ನು ಗೌರವಿಸ ಲಾಯಿತು. ಈಶ್ವರಶಾಸ್ತ್ರಿಗಳಂತೂ ಬಾಳಾಚಾರ್ಯರನ್ನು ಅಪ್ಪಿಕೊಂಡು, “ಕನ್ನಡದಲ್ಲಿ ಇಂಥ ಸುಂದರ ಕೀರ್ತನೆಯನ್ನು ಮಾಡಿ ನೀವು ಹೊಸ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದೀರಿ. ಭಗವಂತನು ನಿಮ್ಮನ್ನು ಅನುಗ್ರಹಿಸಲಿ; ಮುಂದೆಮುಂದೆ ಕರೆದೊಯ್ಯಲಿ” ಎಂದು ಆಶೀರ್ವಾದ ಮಾಡಿದರು.

ಇದರಿಂದ ಶಾಂತಕವಿಗಳಿಗೆ ಶಾಂತೇಶನ ಕೃಪೆಯಿಂದ ತಮ್ಮಲ್ಲಿ ಸಹಜ ಕವಿತ್ವವಿರುವುದೆಂಬ ಅರಿವಾಯಿತು. ತಾವು ಕೀರ್ತನಗಳನ್ನು ರಚಿಸಿ ಅವನ್ನು ಮಾಡಬಲ್ಲೆವೆಂಬ ಆತ್ಮವಿಶ್ವಾಸವೂ ಅವರಲ್ಲಿ ಮೂಡಿತು. ಆದರೆ ಇವೆಲ್ಲ ಕನ್ನಡದ ಸೇವೆಗೆ ಸಾಧನ ಸಂಪತ್ತಾಗಬೇಕು ಎಂಬುದೇ ಅವರ ಅಪೇಕ್ಷೆಯಾಗಿತ್ತು.

‘ಮುಕುಂದ ದಾನಾಮೃತ’ದಿಂದ ಬಾಳೂಮಾಸ್ತರರು ಶಾಂತಕವಿಗಳೆಂದೂ ಕನ್ನಡ ಕೀರ್ತನಕಾರರೆಂದೂ ಹೆಸರಾದರು. ಅವರಿಂದ ರಸಿಕಮಿತ್ರರು ಹೊಸಹೊಸ ಕೀರ್ತನಗಳನ್ನೂ ಕಾವ್ಯಗಳನ್ನೂ ಬಯಸಿದರು. ಕನ್ನಡ ಸರಸ್ವತಿ ಅವರ ನಾಲಿಗೆಯ ಮೇಲೆ ಗೆರೆಯೆಳೆದಳು. ಸರಿ, ‘ರಾವಣ ವೇದವತಿ’, ‘ಶ್ರೀಮತೀ ಸ್ವಯಂವರ’, ‘ಹರಿಮಿತ್ರೋಪಾಖ್ಯಾನ’, ‘ಸ್ಯಮಂತ ಕೋಪಾಖ್ಯಾನ’, ‘ಗಜೇಂದ್ರ ಮೋಕ್ಷ’ ಈ ಮುಂತಾದ ಪುರಾಣ ಕಥೆಗಳು ಒಂದರ ಮೇಲೊಂದು ಅವರ ವಾಣಿಯಲ್ಲಿ ಕೀರ್ತನಗಳಾಗಿ ಮೆರೆದವು. ಅವನ್ನು ಹಾಡುತ್ತಹಾಡುತ್ತ ಶಾಂತಕವಿಗಳು ಏಕಕಾಲಕ್ಕೆ ಭಗವಂತನಲ್ಲಿ ಮತ್ತು ಕನ್ನಡ ತಾಯಿಯಲ್ಲಿ ಭಕ್ತಿ- ಇವುಗಳ ಪ್ರಚಾರ ಮಾಡಿದರು.

‘ಉಷಾಹರಣ’

ಶಾಂತಕವಿಗಳಲ್ಲಿ ಹುದುಗಿದ್ದ ಇನ್ನೊಂದು ಗುಣವು ಇದ್ದಕ್ಕಿದ್ದ ಹಾಗೆ ಪ್ರಕಟವಾಯಿತು. ಸಣ್ಣವನಿದ್ದಾಗ ಅವರು ನೋಡಿದ ಬಯಲಾಟ ಮುಂತಾದ್ದರ ಪರಿಣಾಮ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ತಮ್ಮ ಕೀರ್ತನಗಳಲ್ಲಿ ನಾಟಕದ ದೃಶ್ಯವನ್ನು ಕಣ್ಣಮುಂದೆ ನಿಲ್ಲಿಸುವಂತೆ ಅವರು ಬಣ್ಣಿಸುತ್ತಿರುವುದನ್ನು ನೋಡಿದ ಗೆಳೆಯರು, “ನೀವು ನಾಟಕವನ್ನೇಕೆ ಬರೆಯ ಬಾರದು?” ಎಂದು ಕೇಳಿದರು. “ನಾಟಕವನ್ನು ಆಡುವವರು ಮುಂದೆ ಬಂದರೆ ಬರೆದು ಕೊಡುತ್ತೇನೆ” ಎಂದರು. ಗೆಳೆಯರು ನಾಟಕವಾಡಲು ಸಿದ್ಧರಾದರು. ಬಾಣಾಸುರನ ಕಥೆಯ ಆಧಾರದ ಮೇಲೆ ಶಾಂತಕವಿಗಳು ‘ಉಷಾಹರಣ’ವೆಂಬ ನಾಟಕವನ್ನು ಬರೆದರು, ಗೆಳೆಯರಿಗೆ ಓದಿ ತೋರಿಸಿ ಅವರ ಮೆಚ್ಚುಗೆ ಪಡೆದರು.

ಮುಂದೆ ಅದನ್ನು ರಂಗಭೂಮಿಯ ಮೇಲೆ ಪ್ರದರ್ಶನ ಮಾಡುವ ಉದ್ದೇಶದಿಂದ ಪಾತ್ರಗಳ ಹಂಚಿಕೆ ಆಯಿತು; ತಾಲೀಮು ಪ್ರಾರಂಭವಾಯಿತು. ಬೆಳಗಿನಿಂದ ಸಂಜೆಯವರೆಗೆ ಶಾಲೆಯಲ್ಲಿ ಮಾಸ್ತರಿಕೆ ಕೆಲಸ. ಸಾಯಂಕಾಲ ಮತ್ತು ರಾತ್ರಿ ಆ ಸಂಗೀತ ನಾಟಕದ ತಾಲೀಮು. ಅದನ್ನು ಹೇಳಿಕೊಡುವವರೂ ಅವರೇ. ಅಂದು ನಾಟಕ ಬರೆಯುವವರ ಮತ್ತು ಮಾಡುವವರ ಬಗ್ಗೆ ಜನರಲ್ಲಿ ಆದರವಿರಲಿಲ್ಲ. ಅವರು ಕೀಳು ಮಟ್ಟದವರೆಂದು ಶಿಷ್ಟ ಸಮಾಜವು ತಿರಸ್ಕರಿಸುತ್ತಿತ್ತು. ಬಾಳಾಚಾರ್ಯರು ನಾಟಕ ಬರೆದು ಕಲಿಸುವುದನ್ನು ನೋಡಿ ಅವರ ಬಗ್ಗೆ ಈ ಸಮಾಜದಲ್ಲಿ ತುಚ್ಛಭಾವ ಉಂಟಾಯಿತು. ಮನೆಯ ಹಿರಿಯರು ಕೂಡ ಇಂಥ ಹೀನ ಕೆಲಸಕ್ಕೆ ನಿಂತದ್ದಕ್ಕಾಗಿ ಬಾಳಾಚಾರ್ಯರಿಗೆ ಛೀ ಥೂ ಹಾಕಿದರು. ‘ಇವನು ಬಯಲಾಟದ ಜನರ ಕೂಡ ಕೂಡಿಕೊಂಡು ತಮ್ಮ ಮನೆಯ ಮಾನವನ್ನು ಕಳೆಯುತ್ತಿದ್ದಾನೆ’ ಎಂದು ಆಡಿಕೊಂಡರು. ಆದರೆ ಶಾಂತಕವಿಗಳು ಅದರಿಂದ ಹಿಂಜರಿಯಲಿಲ್ಲ; ಶಾಂತವಾಗಿಯೇ ಎಲ್ಲ ವಿರೋಧವನ್ನು ಎದುರಿಸಿದರು.

‘ಉಷಾಹರಣ’ ಹೊಸ ಕಾಲದ ಮೊದಲನೆಯ ನಾಟಕ ವೆಂದು ಗದಗಿನ ರಂಗಭೂಮಿಯ ಮೇಲೆ ಕಾಣಿಸಿಕೊಂಡಿತು. ಅದನ್ನು ನೋಡಿದವರು ಸಂತೋಷದಿಂದ ಕುಣಿದಾಡಿದರು. ಅದರ ಸಂಗೀತವನ್ನು ಕೇಳಿ ತಣಿದರು. ಮತ್ತೆ ಮತ್ತೆ ಈ ನಾಟಕವನ್ನು ಜನ ನೋಡಿದರು, ನಲಿದರು. ನಾಟಕದ ಜನರೊಂದಿಗೆ ಸೇರಿಕೊಂಡ ಬಗ್ಗೆ ಶಾಂತಕವಿಗಳನ್ನು ನಿಂದಿಸಿದ ಹಿರಿಯರು ಕೂಡ ತಮ್ಮನ್ನು ತಾವು ನಿಂದಿಸಿಕೊಂಡರು; ತಮ್ಮ ಅಭಿಪ್ರಾಯಗಳನ್ನು ಬದಲಿಸಿದರು. ಒಂದರ ಮೇಲೊಂದು ಕೀರ್ತನಗಳನ್ನು ಬರೆದಂತೆ ಶಾಂತಕವಿಗಳು ‘ಶ್ರೀಯಾಳ ಸತ್ವಪರೀಕ್ಷೆ’, ‘ಕೀಚಕವಧೆ’, ‘ವತ್ಸಲಾಹರಣ’, ‘ಸುಂದೋಪ ಸುಂದವಧೆ’ ಮುಂತಾದ ನಾಟಕಗಳನ್ನು ಬರೆದರು. ಕೀರ್ತನ ದಂತೆಯೆ ಅವರ ನಾಟಕದ ವಿಷಯವೂ ಪೌರಾಣಿಕವಾಗಿತ್ತು. ವಿಷಯದ ಆಯ್ಕೆಯಲ್ಲಿ ಹೊಸತನವೇನೂ ಇರಲಿಲ್ಲ. ಆದರೆ ಅದನ್ನು ಬರೆಯುವುದರಲ್ಲಿ ಒಂದು ಹೊಸ ಹುಮ್ಮಸ್ಸಿತ್ತು, ಕನ್ನಡದ ಕೆಚ್ಚಿತ್ತು. ಅಂದಿನ ಜನಕ್ಕೆ ಅಂಥ ಪ್ರಚೋದನೆ ಬೇಕಾಗಿತ್ತು.

ಧಾರವಾಡ, ಬೆಳಗಾವಿ ಮುಂತಾದ ಅನೇಕ ಊರುಗಳಲ್ಲಿ ‘ಉಷಾಹರಣ’ ನಾಟಕದ ಪ್ರಯೋಗಗಳಾದವು. ಈ ನಾಟಕವು ಬೆಳಗಾವಿಯಲ್ಲಿ ಆದಾಗ ನಾಟಕಕಾರರನ್ನು ಜನರು ಅದ್ಭುತವಾದ ರೀತಿಯಲ್ಲಿ ಸನ್ಮಾನಿಸಿದರು. ಅವರಿಗೆ ಜರತಾರಿಯ ರುಮಾಲನ್ನು ಅರ್ಪಿಸಿದರು. ಅದೇ ವರ್ಷ ಧಾರವಾಡದಲ್ಲಿಯೂ ಅವರ ಸತ್ಕಾರವಾಯಿತು. ಆಗ ಸಾರ್ವಜನಿಕರು ಅವರಿಗೆ ಒಂದು ಕೈಗಡಿಯಾರವನ್ನು ಕಾಣಿಕೆಯಾಗಿ ಕೊಟ್ಟರು. ನಾಟ್ಯರಸಿಕರು ಅವರಿಗೆ ನಾಟಕದಲ್ಲಿ ಉಪಯೋಗಿಸುವ ಭರ್ಜರಿ ಉಡುಪುಗಳನ್ನು ನೀಡಿದರು.

ಕೇವಲ ಇಪ್ಪತ್ತೈದು ವರ್ಷದ ತರುಣ ನಾಟಕಕಾರರೂ ಕವಿಗಳೂ ಆದ ಶಾಂತಕವಿಗಳನ್ನು ಕುರಿತು ಹಲವು ಪತ್ರಿಕೆಗಳಲ್ಲಿ ಮೆಚ್ಚಿಕೆಯ ಬರಹಗಳು ಬಂದವು.

ಕಷ್ಟ ಬಂದರೂ ನಾಟಕ ಬಿಡಲಿಲ್ಲ

ಆದರೆ ಅವರ ಏಳಿಗೆಯನ್ನು ನೋಡಿ ಜೊತೆಯ ಶಿಕ್ಷಕರನೇಕರಿಗೆ ಹೊಟ್ಟೆಕಿಚ್ಚು. ಕನ್ನಡ-ಮರಾಠಿ ವಾದವನ್ನು ಬೆಳೆಸುತ್ತಿರುವರೆಂದು ಅವರ ಬಗ್ಗೆ ಗುಲ್ಲೆಬ್ಬಿಸಿದರು; ಮೇಲಾಧಿಕಾರಿಗಳ ಕಿವಿ ಚುಚ್ಚಿದರು. ಅದರ ಪರಿಣಾಮವಾಗಿ ಶಾಂತಕವಿಗಳನ್ನು ಗದಗಿನಿಂದ ಏಳೆಂಟು ಮೈಲಿ ದೂರದಲ್ಲಿರುವ ಹೊಂಬಳವೆಂಬ ಊರಿಗೆ ವರ್ಗ ಮಾಡಿದರು. ಆದರೂ ಅವರ ನಾಟಕದ ಹುಚ್ಚು ಹೋಗಲಿಲ್ಲ. ಸಂಜೆಯವರೆಗೆ ಶಾಲೆಯ ಕೆಲಸ ಮಾಡಿ ಹೊಂಬಳದಿಂದ ದಿನಾಲು ಗದಗಿಗೆ ನಡೆದುಹೋಗಿ ನಾಟಕದ ಅಭ್ಯಾಸದಲ್ಲಿ ತೊಡಗುತ್ತಿದ್ದರು. ತಿರುಗಿ ರಾತ್ರಿ ಹತ್ತರಮೇಲೆ ಹೊಂಬಳಕ್ಕೆ ಹಿಂದಿರುಗುತ್ತಿದ್ದರು. ತಮಗೆ ಹೋಗಿ ಬರಲು ವಾಹನವಾಗಲೆಂದು ಅವರು ಒಂದು ಎಮ್ಮೆಯನ್ನೂ ಕೊಂಡಿದ್ದರೆಂದು ಹೇಳುತ್ತಾರೆ! ಅವರ ಕಲಾಸಕ್ತಿ ಅಷ್ಟು ತೀವ್ರವಾಗಿತ್ತು.

ಹೊಂಬಳದಿಂದ ವರ್ಗವಾಗಿ ಮೊದಲು ಶಿಗ್ಗಾವಿ, ಬಳಿಕ ಬಂಕಾಪುರಗಳಿಗೆ ಅವರು ಹೋದರು. ಈ ಅಲೆದಾಟದಲ್ಲಿ ನಾಟಕವಾಡುವ ಗದಗಿನ ಗುಂಪಿನಿಂದ ಅವರು ದೂರವಾದರು. ನಾಟಕ ಬರೆಯುವ ಮತ್ತು ಆಡಿಸುವ ಅವರ ಉತ್ಸಾಹಕ್ಕೆ ತಡೆಹಾಕಿದಂತಾಯಿತು. ಆದರೆ ಅವರು ಒಂದರಮೇಲೊಂದು ಕೃತಿಯನ್ನು ರಚಿಸಿದರು. ಉದಾರರಾದ ಸಿರಿವಂತರ ಸಹಾಯ ದಿಂದ ಕೆಲವು ಬೆಳಕು ಕಂಡವು.

ಅಗಡಿಯಲ್ಲಿ

೧೮೮೬ ರಲ್ಲಿ ಅವರ ನಾಟಕ ಕಲೆಗೆ ಮತ್ತೆ ಚಿಗುರು ಬಿಡುವ ಕಾಲ ಬಂತು. ನೌಕರಿಯಲ್ಲಿ ಅಲ್ಲಿಂದಿಲ್ಲಿಗೆ ಅಲೆಯುತ್ತ ಅವರು ಅಗಡಿಗೆ ಬಂದರು. ಅದು ಹಳ್ಳಿ, ಆದರೂ ಶೇಷಾಚಲ ಸದ್ಗುರುಗಳು ಇದ್ದ ಪವಿತ್ರ ಸ್ಥಳ. ಊರಲ್ಲಿ ನಾಟಕವೆಂದರೆ ಬಾಯಿಬಿಡುವ ಅನೇಕ ರಸಿಕರಿದ್ದರು. ಹೆಸರಾಂತ ನಾಟಕ ಕಾರರಾದ ಬಾಳಾಚಾರ್ಯ ಸಕ್ಕರಿಯವರು ತಮ್ಮ ಹಳ್ಳಿಗೆ ವರ್ಗವಾಗಿ ಬಂದಿರುವರೆಂದು ತಿಳಿದು ಹಿರಿಯರೂ ಹರೆಯದವರೂ ಕೂಡಿಯೇ ಹಿರಿಹಿರಿ ಹಿಗ್ಗಿದರು. ನಾಟಕ ಆಡಲು ತರುಣ ನಟರು ಮುಂದೆ ಬಂದರು. ಅವರಿಗೆ ಬಾಳಾಚಾರ್ಯರು ನಾಟ್ಯಾಚಾರ್ಯರಾದರು. ಅವರ ‘ಉಷಾಹರಣ’ ನಾಟಕವನ್ನು ಮತ್ತೆ ಆಡಿದರು. ಅದನ್ನು ನೋಡಿ ರಸಿಕರು ಖುಷಿಯಾದರು.

ಆಚಾರ್ಯರಿಗೆ ಅಗಡಿಯಲ್ಲಿ ಗದಗಿನ ದಿನಗಳು ನೆನಪಾದವು. ಈ ಹುರುಪಿನಲ್ಲಿ ‘ಚಿತ್ರಸೇನ ಗಂಧರ್ವ’, ‘ವಿರಾಟಪರ್ವ ಕೀಚಕ ವಧೆ’ ನಾಟಕಗಳನ್ನು ಬರೆದರು. ಅವುಗಳ ಪ್ರಯೋಗಗಳು ಅಗಡಿಯಲ್ಲಿಯಂತೂ ಸರಿಯೆ, ರಾಣೀಬೆನ್ನೂರು, ಬ್ಯಾಡಗಿ, ಹಾವೇರಿ ಮೊದಲಾದ ಸುತ್ತಲಿನ ಊರುಗಳಲ್ಲಿ ಆಗಿ ಜನರನ್ನು ತಣಿಸಿದವು. ನಾಟಕಗಳನ್ನು ಮಾತ್ರವಲ್ಲ ಕಾವ್ಯ-ಕೀರ್ತನಗಳನ್ನೂ ಅಗಡಿಯಲ್ಲಿರುವ ಕಾಲದಲ್ಲಿ ಆಚಾರ್ಯರು ಬರೆದರು. ಶ್ರೀಮಂತ ನಾಗನಗೌಡರ ಪ್ರೋತ್ಸಾಹದಿಂದ ಕಾಳಿದಾಸನ ‘ಋತುಸಂಹಾರ’ ಮುಂತಾದ ಕಾವ್ಯಗಳನ್ನು ಭಾಷಾಂತರಿ ಸಿದರು. ‘ಗಜೇಂದ್ರಮೋಕ್ಷ’ ಎಂಬ ಕೀರ್ತನವು ಸಿದ್ಧವಾಯಿತು. ಅದನ್ನು ಅವರು ಹಾಡಿ ತೋರಿಸುವಾಗ ಇಡೀ ಚಿತ್ರವು ಕಣ್ಣಮುಂದೆ ಕಟ್ಟಿದಂತಾಗುತ್ತಿತ್ತು. ಅವರ ಈ ಕೀರ್ತನವನ್ನು ಕೇಳಿದವರು ಬಹುಕಾಲ ಅದನ್ನು ನೆನಸಿ ಮೆಲಕು ಹಾಕುತ್ತಿದ್ದರು.

ನೀನು ನಿಜವಾಗಿ ಸಕ್ಕರಿಯೇ

ಅಗಡಿಯ ವಾಸದಲ್ಲಿ ಶಾಂತಕವಿಗಳಿಗೆ ಮರೆಯಲಾಗದ ಒಂದು ಅನುಭವವುಂಟಾಯಿತು. ಅವರು ಕಲಿಸುತ್ತಿದ್ದ ಶಾಲೆಯ ಪಕ್ಕದ ಅಂಗಡಿಯಲ್ಲಿ ಒಂದು ದಿನ ತಮ್ಮ ವಿವಿಧ ಪ್ರಕಾರದ ಸಂಗೀತದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಅದರಲ್ಲಿ ನಾಟಕದ ಹಾಡುಗಳಿದ್ದವು, ಬಯಲಾಟದ ಪದಗಳಿದ್ದವು,

ಭಕ್ತಿಯ ಗೀತಗಳಿದ್ದವು. ಒಂದೇ ಸಮನೆ ಮೂರು ಗಂಟೆ ಈ ಕಾರ್ಯಕ್ರಮವು ನಡೆದಿತ್ತು. ಜನರು ಗೊಂಬೆಯಂತೆ ಕುಳಿತು ಕಿವಿತೆರೆದು ಕೇಳುತ್ತಿದ್ದರು. ಇದೇ ಹೊತ್ತಿಗೆ ಶೇಷಾಚಲ ಸದ್ಗುರುವಿನ ಭೆಟ್ಟಿಗಾಗಿ ಅಗಡಿಗೆ ಬಂದ ಶರೀಫ ಸಾಹೇಬರು ದಾರಿಯಲ್ಲಿ ಹೋಗುತ್ತ ಏನೋ ಸಂಗೀತ ಕೇಳಿ ಅಂಗಡಿಯ ಕಟ್ಟೆಯ ಮೇಲೆ ಕುಳಿತು ಕೇಳಿದರು. ಕೇಳುತ್ತ ಅವರೂ ಮೈಮರೆತರು. ಎಲ್ಲ ಮುಗಿದ ಮೇಲೆ ಬಾಳಾಚಾರ್ಯರನ್ನು ಗಟ್ಟಿಯಾಗಿ ಅಪ್ಪಿಕೊಂಡು, “ಸಕ್ಕರಿಯಪ್ಪ, ನೀನು ನಿಜವಾಗಿ ಸಕ್ಕರಿಯೇ” ಎಂದು ಕೊಂಡಾಡಿದರು. ಹೀಗೆ ಶರೀಫ ಸಾಹೇಬರಂಥ ಸಂತರಿಂದ ಶಾಂತಕವಿಗಳಿಗೆ ಉತ್ತೇಜನ ಆಶೀರ್ವಾದ ದೊರೆತವು.

ಒಂಬತ್ತು ವರ್ಷ ಅವರು ಅಗಡಿಯಲ್ಲಿ ಬಹಳ ಸುಖ ಸಂತೋಷದಲ್ಲಿ ಕಳೆದರು. ಎಲ್ಲ ವರ್ಗದ ಜನರಿಗೆ ಬೇಕಾದವರಾದರು, ಹಬ್ಬಹುಣ್ಣಿಮೆಗಳಲ್ಲಿ ಮೇಲಾಗಿ ಪಾಲುಗೊಂಡರು. ಹೋಳೀಹಬ್ಬದಲ್ಲಿ ಯುವಕರ ಖುಷಿಗಾಗಿ ದುಂದುಮೆಯ ಪದಗಳನ್ನು ರಚಿಸಿ ಹಾಡಿದರು. ಮೊಹರಮ್ ಹಬ್ಬಕ್ಕಾಗಿ ಅಲಾಯಿ ಪದಗಳನ್ನು ಬರೆದುಕೊಟ್ಟರು. ಬೇರೆಬೇರೆ ವಿಷಯಗಳನ್ನು ಕುರಿತು ಲಾವಣಿ ಪದಗಳನ್ನು ಕಟ್ಟಿದರು. ಅವರನ್ನು ಬೀಳ್ಕೊಡುವಾಗ ಅಗಡಿಯ ಜನರು ಕಣ್ಣೀರಿಟ್ಟರು. ಅವರಿಗೋಸ್ಕರ ತಮ್ಮ ಪ್ರೀತಿ-ಆದರಗಳನ್ನು ಕೃತಿಯಲ್ಲಿ ತೋರಿಸಲು ಅವರಿಗೆ ಒಂದು ಮನೆ, ಹನ್ನೆರಡು ಎಕರೆಯ ಜಮೀನು ಇವನ್ನು ಕೊಂಡು ಅರ್ಪಿಸಿದರು. ನೌಕರಿಯಿಂದ ನಿವೃತ್ತರಾದ ಮೇಲೆ ಅವರು ಅಗಡಿಗೆ ಬಂದು ಅಲ್ಲಿಯೇ ನೆಲೆಸಬೇಕೆಂದು ಅವರನ್ನು ಕೇಳಿಕೊಂಡರು.

ಬಡತನ-ಕಷ್ಟಗಳು

ಒಂದೆರಡು ವರ್ಷಗಳಲ್ಲಿ ಕೋಳಿವಾಡದಿಂದ ಅವರಿಗೆ ಹುಬ್ಬಳ್ಳಿಗೆ ವರ್ಗವಾಯಿತು. ಅಲ್ಲಿ ಕನ್ನಡ ಶಾಲೆಯ ಹೆಡ್ ಮಾಸ್ತರರಾಗಿ ನೇಮಕವಾದರು. ಇಷ್ಟಾದರೂ ಅವರಿಗೆ ಈ ಮಾಸ್ತರಿಕೆಯಿಂದ ಯಾವ ಹೆಚ್ಚಿನ ಘನತೆ-ಗೌರವಗಳೂ ಸಿಗಲಿಲ್ಲ. ಅವರ ಪ್ರತಿಭೆ ಮತ್ತು ವಿದ್ವತ್ತುಗಳನ್ನು ವಿದ್ಯಾಖಾತೆ ಮನ್ನಿಸಲಿಲ್ಲ. ಕೊನೆಯವರೆಗೂ ಬಾಳಾಚಾರ್ಯರು ಬಡತನದಲ್ಲಿಯೇ ಕಾಲ ಕಳೆಯಬೇಕಾಯಿತು. ಅವರ ಹೆಂಡತಿ ರಂಗೂಬಾಯಿ ಅದರಲ್ಲಿಯೇ ಆನಂದವನ್ನು ಕಾಣುತ್ತಿದ್ದಳು. ತನಗೆ ಗೊತ್ತಿರುವ ಗಿಡಮೂಲಿಕೆಯ ಔಷಧಗಳನ್ನು ಕೊಟ್ಟು ಸುತ್ತ ಮುತ್ತಲಿನ ರೋಗಿ ಜನಕ್ಕೆಲ್ಲ ಸಹಾಯ ಮಾಡುತ್ತಿದ್ದಳು.

ಈ ದಂಪತಿಗಳಿಗೆ ಮೂರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಾದರೂ ಮುಪ್ಪಿನ ಕಾಲಕ್ಕೆ ಕೈಗೆ ಬಂದವನು ಹನುಮಂತಾಚಾರ್ಯನೆಂಬ ಚೊಚ್ಚಲು ಮಗನೊಬ್ಬನೇ. ಅವನು ಸ್ವಲ್ಪ ಇಂಗ್ಲಿಷ್ ಕಲಿತು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು. ಬಾಳಾಚಾರ್ಯರು ೧೯೧೨ ರಲ್ಲಿ ನಿವೃತ್ತರಾದ ಮೇಲೆ ಧಾರವಾಡದಲ್ಲಿ ಅವನ ಹತ್ತಿರ ಇರುತ್ತಿದ್ದರು. ಅವರಿಗೆ ದೊರೆತ ನಿವೃತ್ತಿವೇತನ ತಿಂಗಳಿಗೆ ಹನ್ನೊಂದು ರೂಪಾಯಿ ಮಾತ್ರ. ಆ ಕಾಲದಲ್ಲಿ ಅದೇ ಹೆಚ್ಚಿನದು.

ಹಣಕ್ಕಿಂತ ಹೆಚ್ಚಾಗಿ ಅವರಿಗೆ ಶಾಂತಿ, ಸಮಾಧಾನ ಬೇಕಾಗಿತ್ತು. ಅದು ಅವರಿಗೆ ದೊರೆಯಲಿಲ್ಲ. ನಿವೃತ್ತರಾದ ಮೇಲೆ ನಾಲ್ಕು ವರ್ಷದೊಳಗೆ ಅವರ ಹೆಂಡತಿ ತೀರಿಕೊಂಡರು. ಅದರಿಂದ ಅವರು ಒಬ್ಬಂಟಿಗರಾದರು. ಯಾವುದೇ ಕಿರಿಕಿರಿಯ ಕಾರಣದಿಂದ ಬೇರೆ ಮನೆಯಲ್ಲಿ ಇರಹೋದವರು ಮತ್ತೆ ಮಗನ ಹತ್ತಿರ ಇರಬಂದರು. ಆದರೆ ಹಿಂದಿನ ಕಹಿ ಕಳೆಯಲಿಲ್ಲ. ಪಡಸಾಲೆಯಲ್ಲಿಯೇ ಊಟ ತರಿಸಿಕೊಂಡು ಕಾಲ ನೂಕಿದರು. ಅಂಥ ಹಟದ ಮತ್ತು ಸ್ವಾಭಿಮಾನದ ಸ್ವಭಾವ ಅವರದು.

ಮತ್ತೆ ಕನ್ನಡದ ಕಿಂಕರ, ಶಕ್ತಿ

ಈ ಹೊತ್ತಿಗೆ ಅವರು ಅರವತ್ತರ ವಯಸ್ಸನ್ನು ದಾಟಿದ್ದರು. ಧಾರವಾಡದಲ್ಲಿ ಸ್ವದೇಶಿ ಚಳವಳಿಯ ಮಾತು ಕೇಳಿ ಬರುತ್ತಿದ್ದವು. ಕನ್ನಡ-ಮರಾಠಿ ವಾದವು ತಲೆಯೆತ್ತಿತ್ತು; ಆಗಾಗ ಅದು ಕಾವೇರುತ್ತಿತ್ತು. ಆಲೂರ ವೆಂಕಟರಾಯರು, ಮುದ ವೀಡು ಕೃಷ್ಣರಾಯರು, ಕಡಪಾ ರಾಘವೇಂದ್ರ ರಾಯರು ಮುಂತಾದ ತರುಣರು ಕನ್ನಡದ ಬಾವುಟವನ್ನು ಧಾರವಾಡದಂಥ ಗಂಡುಮೆಟ್ಟಿನ ನೆಲದಲ್ಲಿಯೂ ಗಟ್ಟಿಯಾಗಿ ಊರಿಸಲು ಹೋರಾಟ ಮಾಡಬೇಕಾಗಿತ್ತು.

ಇಂಥ ಕಾಲಕ್ಕೆ ಆಲೂರ ವೆಂಕಟರಾಯರು ಬರೆದ ‘ಕರ್ನಾಟಕ ಗತವೈಭವ’ ಪುಸ್ತಕದ ಕರಡುಪ್ರತಿಗಳು ತಮ್ಮ ನೆರೆಹೊರೆಯಲ್ಲಿದ್ದ ನರಗುಂದಕರ ರಾಮರಾಯರ ಮನೆಯಲ್ಲಿ ಬಾಳಾಚಾರ್ಯರ ಕಣ್ಣಿಗೆ ಬಿದ್ದವು. ಅವನ್ನು ಒಂದೆರಡು ದಿನಗಳಲ್ಲಿ ಓದಿ ಮುಗಿಸಿದರು; ರೋಮಾಂಚಿತರಾದರು. ಮುಪ್ಪಿನಲ್ಲಿಯೂ ಅವರಲ್ಲಿ ಹೊಸ ಹುಮ್ಮಸು ಉಕ್ಕಿಬಂತು. ಮತ್ತೆ ಅವರು ಕನ್ನಡ ಸೇವೆಗೆ ಕಂಕಣ ಕಟ್ಟಿದರು.

ಆಲೂರ ವೆಂಕಟರಾಯರ ‘ವಿದ್ಯಾರಣ್ಯ ಚರಿತ್ರೆ’ ಮತ್ತು ’ಕರ್ನಾಟಕ ಗತವೈಭವ’ ಈ ಪುಸ್ತಕಗಳನ್ನು ಆಧಾರವಾಗಿರಿಸಿಕೊಂಡು ‘ವಿದ್ಯಾರಣ್ಯ ಚರಿತ್ರ’ ಎಂಬ ಕೀರ್ತನವನ್ನು ರಚಿಸಿದರು. ಮೂಲೆಗೆ ಎಸೆದಿದ್ದ ತಾಳ ಮತ್ತು ಗೆಜ್ಜೆಗಳನ್ನು ಮತ್ತೆ ಎತ್ತಿಕೊಂಡರು. ರಾಷ್ಟ್ರಭಕ್ತಿಯ ಸಂದೇಶವನ್ನು ಸಾರುವ ಕೀರ್ತನಕಾರರಾಗಿ ಹೊರಟರು. ಭಾರತ ಸ್ವಾತಂತ್ರ್ಯಕ್ಕೆ ಹೋರಾಡಬೇಕು, ಕನ್ನಡ ನಾಡು-ನುಡಿಗಳ ಅಭಿಮಾನ ತಾಳಬೇಕು ಎಂಬುದನ್ನು ‘ವಿದ್ಯಾರಣ್ಯ ಚರಿತ್ರ’ ಕಥೆಯ ಮೂಲಕ ಆವೇಶಯುತವಾಗಿ ಅವರು ಪ್ರಚಾರ ಮಾಡಿದರು.

ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಿಗೆಲ್ಲ ಹೋಗಿ ತಮ್ಮ ಸಂದೇಶವನ್ನು ಬೀರಿದರು. ಇದು ಬರೀ ಕೀರ್ತನವಾಗಿರಲಿಲ್ಲ. ಜನರಲ್ಲಿ ಹೊಸ ಚೈತನ್ಯವನ್ನು ತುಂಬುವ ಉಜ್ವಲ ಕಾವ್ಯವಾಗಿತ್ತು. ಕನ್ನಡ ಜನತೆಗೆ ಅದು ಕರ್ತವ್ಯದ ಕಹಳೆ ಯನ್ನೂದಿತು. ಅದ್ಭುತ ಪರಿಣಾಮ ವನ್ನುಂಟುಮಾಡಿತು. ಇದರಿಂದ ಜನ ಸ್ಫೂರ್ತಿ ಪಡೆದರು. ಜನರಿಂದ ಕವಿ ಸ್ಫೂರ್ತಿ ಪಡೆದನು.

ಮುಪ್ಪಿನಲ್ಲಿಯೂ ಹರೆಯ ಮರುಕಳಿಸಿ ಬಂದಂತೆ ಶಾಂತಕವಿಗಳು ಹಗಲಿರುಳು ಕನ್ನಡ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡರು ದುಡಿಯಹತ್ತಿದರು. ಇದೇ ಸಮಯದಲ್ಲಿ ಧಾರವಾಡದಲ್ಲಿ ಸಮ್ಮೇಳನವನ್ನು ಸೇರಿಸಬೇಕೆಂದು ಸಂಕಲ್ಪ ಮಾಡಿದಾಗ ಕನ್ನಡ ದಾಸಯ್ಯನಾಗಿ ಹಾಡುಕಟ್ಟಿ ಜೋಳಿಗೆ ಹಿಡಿದರು, ಹಣ ಕೂಡಿಸಿದರು. ಅವರಿಗೆ ತಮ್ಮ ಜೀವನ ಸಾರ್ಥಕವಾಯಿತೆಂದು ಅನಿಸಿತು.

’ಮೆರವಣಿಗೆ ಮಿಗಿಲಾಯ್ತು ! ಸಾಹಸವು ಹಿರಿದಾಯ್ತು!
ಧರೆಯೊಳುದಿಸಿದ ಕಾರ್ಯ ಸಫಲವಾಯ್ತು
ಪರಮಕರ್ನಾಟಕದ ಕೀರ್ತಿ ವಿಸ್ತರವಾಯ್ತು
ಹರುಷ ನಿರ್ಭರವಾಯ್ತು ಶಾಂತೇಶಗೆ’

ಎಂದು ತಮ್ಮೊಳಗೇ ಅಂದುಕೊಂಡು ತೃಪ್ತಿಯನ್ನು ಹೊಂದಿದರು.

೧೯೨೦ ರ ಮಾರ್ಚ್ ತಿಂಗಳಲ್ಲಿ ಮಗನಒತ್ತಾಯದಿಂದ ಹುಬ್ಬಳ್ಳಿಯಲ್ಲಿರುವ ಅವನ ಮನೆಗೆ ಹೋದವರು ಒಂದು ರಾತ್ರಿ ತಮಗೆ ಇಷ್ಟವಾದ ಅಡಿಗೆಯನ್ನು ಸೊಸೆಯ ಕೈಯಿಂದ ಮಾಡಿಸಿಕೊಂಡು ಊಟಮಾಡಿ ಮಲಗಿದರು, ಹಾಗೆಯೇ ಕೊನೆಯುಸಿರೆಳೆದರು. ಮಾರ್ಚ್ ಹದಿನಾರ ರಂದು ಹೀಗೆ ತೀರಿಕೊಂಡರು.

 

ರಾಷ್ಟ್ರಭಕ್ತಿಯ ಸಂದೇಶವನ್ನು ಸಾರುವ ಕೀರ್ತನಕಾರರಾದರು.

ಸಾತ್ವಿಕ ಹಟ

ಶಾಂತಕವಿಗಳು ಮರಾಠೀಮಯವಾದ ಕನ್ನಡ ಕೀರ್ತನ ವನ್ನು ಕೇಳಿ ಕಸಿವಿಸಿಗೊಂಡು ಒಂದು ಬಗೆಯ ಸಾತ್ವಿಕ ಹಟದಿಂದ ಅಚ್ಚಗನ್ನಡ ಕೀರ್ತನವೆಂದು ‘ಮುಕುಂದ ದಾನಾಮೃತ’ವೆಂಬ ತಮ್ಮ ಮೊದಲನೆಯ ಕಾವ್ಯವನ್ನು ರಚಿಸದರೆಂದು ಹಿಂದೆ ಹೇಳಿದೆ. ಕನ್ನಡಕ್ಕಾಗಿ ಅದೇ ಕಸಿವಿಸಿ, ಕಳಕಳಿಯಿಂದ ಕಾವ್ಯ, ಕೀರ್ತನ, ನಾಟಕಗಳನ್ನು ಅವರು ಪುಟಗಟ್ಟಲೆಯಾಗಿ ಬರೆದರು. ಎಷ್ಟೆಂದು ಕೇಳುವಿರ? ೧೮೭೫ ರಿಂದ ೧೮೮೫ರ ವರೆಗೆ ಅವರು ೬೫ ಪುಸ್ತಕಗಳನ್ನು ಬರೆದರು. ಆಮೇಲೆಯೂ ಅವರ ಲೆಕ್ಕಣಿ ನಿಲ್ಲಲಿಲ್ಲ. ಅಗಡಿಗೆ ವರ್ಗವಾಗಿ ಹೋದ ಮೇಲೆಯೂ ಅವರು ಕೆಲವು ನಾಟಕಗಳನ್ನು ಬರೆದ ವಿಚಾರವನ್ನು ತಿಳಿಸಿದೆ. ಅವರು ಬರವಣಿಗೆಯೆಂದರೆ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡುವ ಒಂದು ಸವಾಲೆಂದು ತಿಳಿದು ಬರೆದರು. ಕನ್ನಡ ಜನರಲ್ಲಿ ಕನ್ನಡದ ಬಗ್ಗೆ ಹೆಮ್ಮೆ ಹುಟ್ಟಿಸಲು ಬರೆದರು. ತಮ್ಮದು ಚೆನ್ನಾಗಿರದಿದ್ದರೆ ಅದನ್ನು ನೋಡಿ ಕೆರಳಿಯಾದರೂ ತಮಗಿಂತ ಹೆಚ್ಚಿನ ಪಂಡಿತರೂ ಪ್ರತಿಭಾವಂತರೂ ಕನ್ನಡದಲ್ಲಿ ಬರೆಯಲಿ ಎಂದು ಬರೆದರು.

ಅವರು ಒಮ್ಮೆ ಹೇಳಿದರು: ‘ಎಲೊ, ಕನ್ನಡ ಭಾಷೆಯ ಅಭಿಮಾನಿಗಳಿರಾ! ಯಾವುದಾದರೂ ಒಂದು ಭಾಷೆಯು ಊರ್ಜಿತ ಸ್ಥಿತಿಗೆ ಬಂತೆಂದು ಹೇಳಬೇಕಾದರೆ ಅದರಲ್ಲಿ ಸರ್ವ ವಿಷಯಗಳ ಬಗ್ಗೆ ಗ್ರಂಥಗಳಿರಬೇಕು. ಮೊದಲು ನಮ್ಮ ದೇಶದ ಹಿರಿಯರು ಮಾಡಿದ ಅಸಾಧಾರಣ ಪ್ರಯತ್ನದಿಂದ ಸಂಸ್ಕೃತ ಭಾಷೆಯಲ್ಲಿ ಸರ್ವ ವಿಷಯಗಳಲ್ಲಿ ಆಗಿನ ಸುಧಾರಣೆಯನ್ನು ಅನುಸರಿಸಿದ ಪುಷ್ಕಳ ಗ್ರಂಥಗಳಿವೆ. ನಮ್ಮ ಕನ್ನಡ ಹಿರಿಯರಾದರೂ ತಮ್ಮ ಕಾಲದಲ್ಲಿಯ ಸಮಾಜದ ಸುಧಾರಣೆಗನುಸಾರವಾಗಿ ಪದ್ಯ ಗ್ರಂಥಗಳನ್ನು ರಚಿಸಿ ಹೆಸರು ಪಡೆದರು. ಅವರಿಂದ ಅನಂತರ ಯಾರೂ ನಮ್ಮ ಕನ್ನಡ ಭಾಷೆಯ ವಿಷಯದಲ್ಲಿ ಪ್ರಯತ್ನ ಮಾಡದಿದ್ದುದರಿಂದ ಈಗ ಅದು ಕೀಳು ಸ್ಥಿತಿಯಲ್ಲಿರುವುದು.

ಈ ಸಂಗತಿಯು ಯಕಃಶ್ಚಿತರೂ ಅಲ್ಪ ಮತಿಗಳೂ ದರಿದ್ರರೂ ಉದರದಾಸರೂ ಆಗಿರುವ ನಮ್ಮಂಥವರಿಗೂ ಸಹ ತಿಳಿಯುತ್ತದೆ. ಹೀಗಿದ್ದು ದೊಡ್ಡವರೂ ಬುದ್ಧಿವಂತರೂ ಸಂಪನ್ನರೂ ಸರಸ್ವತೀ ಸಮಾನರೂ ಆಗಿರುವ ಪಂಡಿತರ ಲಕ್ಷ್ಯವು ಈ ಸಂಗತಿಯ ಕಡೆಗೆ ಇಲ್ಲವೇ ಇಲ್ಲ. ಇರಲಿ, ಎಷ್ಟು ಮಾಡಿದರೂ ಅವರು ಪಂಡಿತರೇ ಪಂಡಿತರು. ಅವರಂತೆ ನಮ್ಮಿಂದ ಹ್ಯಾಗೆ ಆದೀತು? ಅವರ ಮುಗುಳು ನಗೆಯ ಒಂದೆರಡು ಶಬ್ದಗಳಿಂದ ಆದಷ್ಟು ಕಾರ್ಯವು ನಮ್ಮಂಥವರ ಇಡೀ ಜೀವಿತದಿಂದಲೂ ಆಗಲಿಕ್ಕಿಲ್ಲ. ಆದರೆ ಅಂಥ ಅರಸು ಪಂಡಿತರನ್ನು ಅಣಕಿಸಿ, ಅವರಲ್ಲಿ ಗ್ರಂಥ ರಚನೆಯ ಈರ್ಷೆಯನ್ನು ಉತ್ಪನ್ನ ಮಾಡುವ ಮಂದ ವಿಚಾರದಿಂದ, ಕನ್ನಡ ಭಾಷೆಯನ್ನು ಊರ್ಜಿತಗೊಳಿಸುವ ಅಭಿಲಾಷೆಯವರಾದ ನಾವು ಕನ್ನಡ ಭಾಷೆಯಲ್ಲಿ ೬೩ ಗ್ರಂಥಗಳನ್ನು ರಚಿಸಿರುವೆವು.’ ಈ ಅವರ ಹೇಳಿಕೆಯಲ್ಲಿ ಕನ್ನಡದಲ್ಲಿ ಅಪಾರ ಗ್ರಂಥಗಳು ಬರಬೇಕೆಂದು ಕನವರಿಕೆ, ತಮ್ಮ ಯೋಗ್ಯತೆಯ ಬಗ್ಗೆ ಕೀಳರಿಮೆಯೆನ್ನುವಷ್ಟು ವಿನಯ, ಪಂಡಿತರ ವಿಷಯದಲ್ಲಿ ಆದರ, ಅವರ ಪ್ರಚೋದನೆಗಾಗಿ ತಾವು ಬರೆಯುತ್ತಿರುವೆವೆಂಬ ಭಾವ, ಇವೆಲ್ಲ ಎದ್ದು ಕಾಣುತ್ತದೆ.

ಕೃತಿಗಳು

ಅವರ ೬೫ಕ್ಕೂ ಮೇಲ್ಪಟ್ಟ ಕೃತಿಗಳಲ್ಲಿ ಅಚ್ಚಾಗಿರುವುವು ಕೆಲವು ಮಾತ್ರ. ಅವು ಕೂಡ ಈಗ ದೊರೆಯುವುದು ಅಪರೂಪ. ಕೆಲವು ಹಸ್ತಪ್ರತಿಗಳೇ ಕೈಬಿಟ್ಟುಹೋಗಿವೆ.

ಈ ಮೊದಲು ಅವರ ಪ್ರಕಟಿತವಾದ ಕೃತಿಗಳೆಂದರೆ ‘ವಿರಹತರಂಗ’ (೧೮೮೫), ‘ಸೀತಾರಣ್ಯ ಪ್ರವೇಶ ನಾಟಕ’ (೧೮೮೬), ‘ಮೇಘದೂತ’ (೧೮೯೨), ‘ವಿದ್ಯಾರಣ್ಯ ಚರಿತ್ರ’ (೧೯೧೯), ‘ಸ್ಯಮಂತಕಮಣಿ’, ‘ಸುರತ ಸುಧನ್ವಾರ್ಜುನ ಕಾಳಗ’. ಇವಿಷ್ಟು ಈಗ ಓದಲಾದರೂ ದೊರೆತಿವೆ. ಶಾಂತಕವಿ ಸೃಷ್ಟಿಯಲ್ಲಿ ಐದಾರು ಸಂಸ್ಕೃತ ಕಾವ್ಯ ನಾಟಕಗಳ ಭಾಷಾಂತರಗಳು. ಉಳಿದುವೆಲ್ಲ ಹೆಚ್ಚಾಗಿ ಪೌರಾಣಿಕ ವಿಷಯಗಳನ್ನು ಕುರಿತ ಕಾವ್ಯ, ಕೀರ್ತನ, ನಾಟಕ. ‘ವಿದ್ಯಾರಣ್ಯ ಚರಿತ್ರ’ ಒಂದು ಮಾತ್ರ ಐತಿಹಾಸಿಕ ಕಾವ್ಯ. ಅವರ ಸಾಹಿತ್ಯ ಕೋಶದಲ್ಲಿ ವೈವಿಧ್ಯವಿದೆ. ಅಲಂಕಾರ ಶಾಸ್ತ್ರವನ್ನು ಕುರಿತು ಅವರು ಬರೆದಿದ್ದಾರೆ. ಕನ್ನಡ ದಾಸಯ್ಯನ ಪದಗಳಿವೆ, ಕನ್ನಡಿಗರಿಗೆ ಸವಾಲುಗಳಿವೆ, ದುಂದುಮೆ ಹಾಡುಗಳಿವೆ. ಅವರೇ ಹೇಳಿರುವಂತೆ ಅವಸರದ ರಚನೆಯಿಂದ ಕೆಲವದರಲ್ಲಿ ಸಾಹಿತ್ಯ ದೃಷ್ಟಿಯಿಂದ ಗುಣದ ಮಟ್ಟ ಏರಿಲ್ಲ. ತೀರ ಸಾಮಾನ್ಯವೆಂಬ ಬರವಣಿಗೆಯೂ ಇದೆ. ಆದರ ಕೆಲವು ಕೃತಿಗಳಲ್ಲಿ ಅವರ ಪ್ರತಿಭೆ ಎತ್ತರಕ್ಕೆ ಹೋಗಿದೆ. ಅವರ ಮೊದಲನೆಯ ಕೃತಿಯಾದ ‘ಮುಕುಂದ-ದಾನಾಮೃತ’ದಲ್ಲಿಯೆ ಅವರ ಕವಿತಾ ಶಕ್ತಿ ವಾರ್ಧಕ ಷಟ್ಪದಿಯ ವಿಸ್ತಾರದಲ್ಲಿ ಸಲೀಲವಾಗಿ ಸಾಗಿದೆ.

‘ವಿದ್ಯಾರಣ್ಯ ಚರಿತ್ರ’ದಲ್ಲಿ ಶಾಂತಕವಿಗಳು ತಮ್ಮ ದೇಶಭಕ್ತಿ ಯನ್ನೂ ಕನ್ನಡಾಭಿಮಾನವನ್ನೂ ಮೊಳಗಿಸಿದ್ದಾರೆ. ಅದರಲ್ಲಿ ಬಂದಿರುವ ‘ಜಯಜಯ ಭುವನೇಶ್ವರಿ’, ‘ನಮ್ಮದೀ ಭರತ ಭೂಮಿ’ ಮತ್ತು ‘ರಕ್ಷಿಸು ಕರ್ನಾಟಕ ದೇವಿ’ ಈ ಹಾಡುಗಳು ಸ್ವಾತಂತ್ರ್ಯ ಸಂಗ್ರಾಮದ ಕಾಲಕ್ಕೆ ಮತ್ತು ಕರ್ನಾಟಕ ಏಕೀಕರಣ ಸಮರದಲ್ಲಿ ರಾಷ್ಟ್ರಗೀತೆಗಳಾಗಿ ಜನರಲ್ಲಿ ಹೊಸ ಚೈತನ್ಯ ಹುಟ್ಟಿಸಿದವು. ‘ಇಳಿಯುತಿದೆ ಪಾತಾಳಖಾತಕೆ ಬೆಳೆದ ಭಾರತ ದೇಶವು ಕಳಚುತಿವೆ ಧರ್ಮಾಲಯದ ಹೊಂಗಳಸ, ಕನ್ನಡಿ, ಧ್ವಜಗಳು’ ಎಂಬ ಗೀತೆಯಂತೂ ಭಾರತ ದೇಶದ ಅಂದಿನ ಅವನತಿಯನ್ನು ಸರಿಯಾಗಿ ಬಣ್ಣಿಸಿತು. ಅವರ ಗೀತೆಯ ಕೆಳಗಿನ ಸಾಲುಗಳಂತೂ ಯಾವಾಗಲೂ ತ್ಯಾಗಪೂರ್ವಕ ವಾದ ದೇಶಕಾರ್ಯಕ್ಕೆ ಚಿರಂತನ ಸ್ಫೂರ್ತಿಯನ್ನು ನೀಡುತ್ತವೆ.

‘ಏಳು ಸಾಯಣ ಕಟ್ಟು ಗ್ರಂಥವನೇಳು ಪಂಪಾಕ್ಷೇತ್ರಕೆ
ಗಾಳಿಗಂಟುಗಳೋದಿದೇತಕೆ ಏಳು ಈ ಕ್ಷಣಮಾತ್ರಕೆ
ಲಕ್ಷ ಶಾಸ್ತ್ರಗಳೇಕೆ ಸಾಯನ ಲಕ್ಷ ಸೂತ್ರಗಳೇತಕೆ
ಮೋಕ್ಷ ಸಂಪಾದನಕೆ ನಿಶ್ಚಯ ಮೋಕ್ಷ ಕೇಳು ಸ್ವತಂತ್ರಕೆ.’

ಇಚಿಥ ಕೃತಿಗಳನ್ನು ರಚಿಸಿ ಬಡತನದಲ್ಲಿ ತಾವು ಶಾಂತಿಯನ್ನು ಪಡೆಯದಿದ್ದರೂ ನಾಡಿಗೆ ಶಾಂತಿಯ ದಾರಿಯನ್ನು ತೋರಿಸಿ ಶಾಂತರಾಗಿ ಹೋದರು ಶಾಂತ ಕವಿಗಳು!