ಶಾಂತವೇರಿ ಗೋಪಾಲಗೌಡರು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ನಂತರದಲ್ಲಿ – ಶುದ್ಧ ಆಲೋಚನೆ, ನಡವಳಿಕೆ, ಪ್ರಾಮಾಣಿಕತೆಯಿರುವ ವ್ಯಕ್ತಿಯು ಯಾವ ವರ್ಗ, ಇಲ್ವೆ ಯಾವ ಜಾತಿಯವನೇ ಆಗಿದ್ದರೂ, ಒಂದು ಪ್ರಾಂತ್ಯದ ಮುಖಂಡ ಅಥವಾ ಜನತೆಯ ಪ್ರತಿನಿಧಾಯಿಗಬಹುದು ಎಂದು ಸಾಬೀತಾಯಿತು.

ಶಾಂತವೇರಿಯವರು ಸಾರ್ವಜನಿಕರ ಧ್ವನಿಯಾದ ಮೇಲೆ, ಜೀವನಕ್ಕೂ ಉದ್ಯೋಗಕ್ಕೂ ಬದುಕಿಗೂ – ರಾಜಕೀಯಕ್ಕೂ ನೇರ ಸಂಬಂಧವಿದೆ ಎಂಬ ವಿಚಾರ ಜನರಲ್ಲಿ ಮೂಡಲು ಪ್ರಾರಂಭವಾಯಿತು. ಮೂಢನಂಬಿಕೆಗಳ ಬಗ್ಗೆ, ಜಾತಿ ವರ್ಗಧ ಬಗ್ಗೆ, ಎಲ್ಲ ಬಗೆಯ ಅಸಮಾನತೆಗಳ ಬಗ್ಗೆ ಜನರ ನಡುವೆ ಚರ್ಚೆ ಮತ್ತು ಹೋರಾಟಗಳನ್ನು ಗೋಪಾಲಗೌಡರು ನಡೆಸಿದ್ದರು ಮತ್ತು ಅದರಂತೆ ಬದುಕಿದ್ದರು. ಆ ಕಾಲದ ಅನೇಕ ಯುವಕರು ಇವರ ವೈಚಾರಿಕತೆ ಮತ್ತು ಮಾನವೀಯ ನಡವಳಿಕೆಗಳಿಂದ ಆಕರ್ಷಿತರಾದರು. ವಿಚಾರಕ್ರಾಂತಿ ಮತ್ತು ಸಾಮಾಜಿಕ ಕ್ರಾಂತಿಯನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವ ಗೌಡರ ಹೋರಾಟದ ಬಗೆಯು ಕುತೂಹಲಕರವಾದದ್ದು.

ಗೋಪಾಲಗೌಡರ ಚುನಾವಣೆ ಎಂದರೆ, ಅದೊಂದು ಕ್ಷೇತ್ರಪ್ರವಾಸದ ರೀತಿಯಲ್ಲಿರುತ್ತಿತ್ತು.ನಾನದನ್ನು ಬುದ್ಧಿ ಪ್ರಸಾರ ಯೋಜನೆಯ ಕಾರ್ಯಕ್ರಮ ಎನ್ನುತ್ತಿದ್ದೆ. ಚುನಾವಣಾ ಭಾಷಣಗಳಲ್ಲಿ ಆಯಾ ಪ್ರದೇಶದ ಸಮಸ್ಯೆಗಳನ್ನೇ ಕುರಿತು ಅವರು ಮಾತನಾಡುತ್ತಿದ್ದರು. ನೇರವಾಗಿ ಓಟು ಕೇಳುವುದು ಅವರ ಜಾಯಮಾನವಲ್ಲ. ಈಗಿನ ರಾಜಕಾರಣಿಗಳಿಗೆ ಒಂದು ವ್ಯಕ್ತಿ ಎಂದರೆ ಒಂದು ಓಟಿನ ರೂಪದಲ್ಲಿ ಕಾಣಿಸುತ್ತಾನೆ. ಆದರೆ, ಗೋಪಾಲಗೌಡರಿಗೆ ತನ್ನ ಮತದಾರನು ಮಾನವನಾಗಿ ಮಾತ್ರಕಾಣಿಸುತ್ತಿದ್ದ. ಯಾರಾದರೂ ನೆನಪು ಮಾಡಿದರೆ “ಒಂದು ಓಟು, ಒಂದು ನೋಟು ಎರಡೂ ಬೇಕು’’ ಎಂದು ಹೇಳುತ್ತಿದ್ದರು.

ಸಮಾಜವಾದಿ ಪಕ್ಷದ ಖಜಾಂಚಿ ಗುಂಡುಮನೆ ರಾಮಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಚುನಾವಣಾ ಕಮಿಟಿ ಮಾಡುತ್ತಿದ್ದರು. ಹುಗಲವಳ್ಳಿ ಸುರೇಂದ್ರ ಯಾವಾಗಲೂ ಈ ಕಮಿಟಿಯಲ್ಲಿರುತ್ತಿದ್ದರು. ಎಷ್ಟು ಕಡಿಮೆ ಹಣ ವಸೂಲಾದರೂ ಸರಿಯೆ; ಅದರಲ್ಲೇ ಚುನಾವಣೆಯ ಎಲ್ಲ ಕೆಲಸಗಳೂ ಮುಗಿಯುವಂತೆ ಸುರೇಂದ್ರ ಯೋಜನೆಯನ್ನು ರೂಪಿಸುತ್ತಿದ್ದರು. ಆಗ ಏಳೆಂಟು ಸವಾರಿದಲ್ಲೇ ಚುನಾವಣೆ ಮುಗಿದು ಹೋಗುತ್ತಿತ್ತು. ತೀರ್ಥಹಳ್ಳಿಯ ಸಮಾಜವಾದಿ ಪಕ್ಷದ ಡ್ರೈವರ್ ನರಸಿಂಹ ಚುನಾವಣೆ ಬಂದಾಗ ಗೌಡರಿಗೆ ಕಾರುಕೊಟ್ಟು, ತಾವೇ ಸಾರಥಿಯಾಗಿ ಪ್ರಚಾರ ಭಾಷಣ ನಿರ್ವಹಿಸುತ್ತಿದ್ದರು. ಇದರೊಂದಿಗೆ ಗುಂಡುಮನೆ ರಾಮಕೃಷ್ಣಯ್ಯನವರಕಾರು. ಇಡೀ ಕ್ಷೇತ್ರದಲ್ಲಿ ಗೌಡರ ಪರವಾಗಿ ಓಡಾಡುತ್ತಿದ್ದ ಕಾರುಗಳು ಎರಡೇ; ಹೆಚ್ಚೆಂದರೆ ಆಲಗೇರಿ ತಿಮ್ಮಯ್ಯನವರ ಫೋರ್ಡ್ ಕಾರು ಅಪರೂಪಕ್ಕೆ ಗೌಡರ ಚುನಾವಣಾ ಪ್ರಚಾರಕ್ಕೆ ಬಳಕೆಯಾಗುತ್ತಿತ್ತು.

ಚುನಾವಣಾ ಪ್ರಚಾರ ಸಭೆಗಳಿಗೆ ಹೋದಾಗ, ಊಟಕ್ಕಾಗಲಿ ಅಥವಾ ಹಣ ವಸೂಲಿಗಾಗಲಿ, ಗೌಡರು ಎಲ್ಲರ ಮನೆಗೂ ಹೋಗುತ್ತಿರಲಿಲ್ಲ. ತಮ್ಮ ಕಾರ್ಯಕರ್ತರು ಗತ್ತುಪಡಿಸಿದ ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಭಾಗವಹಿಸುತ್ತಿದ್ದರು. ಆಯಾ ಊರಿನ ಜನರ ಮರ್ಜಿಯಂತೆ ಓಟಿನ ಆಸೆಗಾಗಿ ದೇವಸ್ಥಾನ, ಮಸೀದಿ ಅಥವಾ ಚರ್ಚ್‌ಗಳಿಗೆ ಎಂದೂ ಹೋದವರಲ್ಲ.“’ನನಗೆ ಅವರು ಓಟು ಕೊಡದಿದ್ದರೂ ಚಿಂತೆಯಿಲ್ಲ, ನಾನು ಅಲ್ಲಿಗೆ ಬರಲಾರೆ’ ಎಂದು ತಮಗೆ ಹಿಡಿಸದಿದ್ದ ಸ್ಥಳಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಹೇಳಿಬಿಡುತ್ತಿದ್ದರು. ಚುನಾವಣಾ ಪ್ರಚಾರ ಮುಗಿಸಿ ರಾತ್ರಿ ಸರ್ಕೀಟ್‌ಹೌಸ್‌ಗೆ ಹೋಗುವ ಪದ್ಧತಿ ಗೌಡರಿಗಿರಲಿಲ್ಲ. ಅಲ್ಲೇ ಎಲ್ಲಾದರೂ ತಮ್ಮ ಸ್ನೇಹಿತರ ಮನೆಯಲ್ಲಿ ಉಳಿದು, ಮತ್ತೆ ಬೆಳಿಗ್ಗೆ ಪ್ರಚಾರ ಸಭೆಗಳಿಗೆ ಹೊರಡುತ್ತಿದ್ದರು. ಬೇರೆ ಯಾರಾದರೂ ಕಾರು ಇದ್ದವರು ಪ್ರಚಾರಕ್ಕೆಂದು ಬಂದರೆ, “ನಿನಗೆ ಬಿಡುವಿದ್ದರೆ ನಮ್ಮ ಕಾರಿನಲ್ಲೇ ಬಾ ಮಾರಾಯ! ಸುಮ್ನೆ ‘ಕಾರ್‌ಬಾರ್’ ಮಾಡೋದು ಬೇಡ’’ ಎಂದು ನಿಷ್ಠೂರವಾಗಿ ಹೇಳುತ್ತಿದ್ದರು. ಹಾಗಾಗಿ ಡ್ರೈವರ್ ನರಸಿಂಹನ ಕಾರಿನಲ್ಲಿ ಬ್ಲೇಡುಸೆಟ್ಟು ಮುರಿದುಬೀಳುವಂತೆ ಜನ ಹತ್ತುತ್ತಿದ್ದರು.

ಗೋಪಾಲಗೌಡರು ಚುನಾವಣೆಯಲ್ಲಿ ಗೆದ್ದನಂತರ ವಿಜಯೋತ್ಸವದ ಯಾವ ಸಮಾರಂಭದಲ್ಲೂ ಭಾಗವಹಿಸುತ್ತಿರಲಿಲ್ಲ. ತೀರ್ಥಹಳ್ಳಿಯಲ್ಲೊಂದು ಸಭೆ ಅಷ. ಏನಿದ್ದರೂ ಬೆಂಗಳೂರಿನ ವಿಧಾನಸಭೆಯಿಂದಲೇ ಶಾಸಕನಾಗಿ ಮಾಡಬೇಕಾದ್ದನ್ನು, ಮಾಡಿ ತೋರಿಸುತ್ತಿದ್ದರು.

ಗೌಡರು ತಮ್ಮ ಚುನಾವಣಾ ಭಾಷಣಗಳಲ್ಲಿ ಸಮಾಜವಾದ, ಸಮತಾವಾದ, ಗಾಂಧೀವಾದಗಳನ್ನು ಎಳೆ ಎಳೆಯಾಗಿ ಎಲ್ಲರಿಗೂ ಅರ್ಥವಾಗುವಂತೆ ಬಿಡಿಸಿ ಹೇಳುತ್ತಿದ್ದರು. ಗೇಣಿಪದ್ದತಿಯ ಶೋಷಣೆ, ಭೂಮಿ ಕಳಕೊಂಡವರಿಗೆ ಪರಿಹಾರ, ಭ್ರಷ್ಟಾಚಾರದ ಬಗೆಗಳು, ಬಡತನಕ್ಕೆ ಮೂಲಕಾರಣಗಳು, “ಉಳುವವನೇ ನೆಲದೊಡೆಯ ಯಾಕಾಗಬೇಕು?’’ ನೆಹರೂರವರ ಕೈಗಾರಿಕಾನೀತಿ, ಕರ್ನಾಠಕ ಏಕೀಕರಣ-ಇವೆಲ್ಲವನ್ನೂ ಒಳಗೊಂಡು ಆಟಂಬಾಂಬಿನ ದುಷ್ಪರಿಣಾಮಗಳ ತನಕ ಇವರ ಮಾತು ವ್ಯಾಪಿಸಿಕೊಳ್ಳುತ್ತಿತ್ತು. ರಾತ್ರಿ ಹನ್ನೆರಡು ಗಂಟೆ ಆದರೂ ಸರಿಯೇ, ತಮ್ಮ ಭಾಷಣದ ವಿಸ್ತಾರವನ್ನು, ಅದರಗಹನತೆಯನ್ನು ಕಡಿಮೆಮಾಡಿಕೊಳ್ಳುತ್ತಿರಲಿಲ್ಲ. ಮಲೆನಾಡಿನ ಮೂಲೆಯಲ್ಲಿರುವ ಸಣ್ಣ ಹಳ್ಳಿಗಳೂ ಗೋಪಾಲಗೌಡರ ಭಾಷಣವನ್ನು ಕೇಳಿವೆ. ತಮ್ಮ ನೀಳಬಿಳಿಜುಬ್ಬದ ಜೇಬಿಗೆ ಕೈಹಾಕುತ್ತಾ, ಕಾಲರ್ ತಿರುವುದತ್ತಾ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದ ಭೂಮಾಲೀಕರನ್ನು ಕುರಿತು, “ಸುಧಾರಣೆಯಲ್ಲಿ ನೀವೂ ಮುಖ್ಯ; ನೀವೂ ನಮ್ಮೊಡನೆ ಸೇರಿಕೊಂಡರೆ ಸಂಘರ್ಷವಿಲ್ಲದೆ ಸುಖೀಸಮಾಜ ಕಟ್ಟಬಹುದು’’ ಎಂದು ಹಸನ್ಮುಖಿಯಾಗಿ ಹೇಳುತ್ತಿದ್ದರು. ಅಡಿಗರ ಕವಿತೆಗಳನ್ನು ಉದಾಹರಿಸುತ್ತಿದ್ದರು. ಹಳ್ಳಿಯ ಜನತೆ ಬೇಸರ ಪಡದಂತೆ ನವಿರಾಗಿ ಎಲ್ಲವನ್ನೂ ತಿಳಿಸುತ್ತಿದ್ದರು. ನಾನೊಂದು ಸಾರಿ, “ಅಲ್ಲಾಸಾರ್, ರಾತ್ರಿ ಹತ್ತು ಹನ್ನೊಂದು ಗಂಟೆ ಹೊತ್ತಿನಲ್ಲಿ ಭಾಷಣ ಸ್ವಲ್ಪ ಚುಟುಕು ಮಾಡಬಾರದೆ?’’ ಎಂದೆ. ಅದಕ್ಕೆ ಗೌಡರು, “ನೋಡೋ, ಹಳ್ಳಿಜನ ವಿರಾಮವಾಗಿ ವಿಚಾರ ಕೇಳಲಿಕ್ಕೆಂದು ಬರೋದೆ ಕಡಿಮೆ. ಬಂದಾಗ ನಮ್ಮ ತಲೆಯಲ್ಲಿ ಇರೋದನ್ನ, ಸರಿಯೆನ್ನಿಸಿದ್ದನ್ನು ಹೇಳಲೇಬೇಕು. ಅದರಿಂದ ಓಟು ಬರುವುದು ಮುಖ್ಯವಲ್ಲ! ಜನರಿಗೆ ತಿಳುವಳಿಕೆ ಬರೋದು ಮುಖ್ಯ’’ ಎಂದು ಹೇಳಿದರು.

ಗೋಪಾಲಗೌಡರ ಚುನಾವಣಾ ಸಮಯದಲ್ಲಿ ಎಲ್ಲ ಜಾತಿಯವರೂ ಅವರೊಡನೆ ಇರುತ್ತಿದ್ದರು. ತೀರ್ಥಹಳ್ಳಿ ಎಚ್.ವಿ. ರಾಮಯ್ಯನವರ ಪೆಟ್ರೋಲ್ ಬಂಕಿನಲ್ಲಿ, ಗೌಡರ ಹಿಂದಿನ ಸಾರಿಯ ಚುನಾವಣೆಯ ಪೆಟ್ರೋಲ್ ಖರ್ಚಿನ ಬಿಲ್ಲನ್ನು ಮುಂದಿನ ಸಾರಿಯ ಚುನಾವಣೆಯಲ್ಲಿ ತೀರಿಸುವುದು ವಾಡಿಕೆಯಾಗಿತ್ತು. ೧೯೭೨ರಲ್ಲಿ ಗೌಡರು ಅನಾರೋಗ್ಯದಿಂದ ಮಲಗಿದ ಮೇಲೆ, ಕೋಣಂದೂರು ಲಿಂಗಪ್ಪ ಚುನಾವಣೆಗೆ ನಿಂತಾಗ ವಸೂಲಾದ ದುಡ್ಡಿನಲ್ಲಿ ಗೌಡರ ಹಿಂದಿನ ಚುನವಣೆಯ ಪೆಟ್ರೋಲ್ ಸಾಲವನ್ನು ತೀರಿಸಿದ್ದು ನನಗೆ ನೆನಪಿದೆ.

ಪ್ರತಿಸಾರಿ ಶಾಸನಸಭೆ ನಡೆದ ನಂತರ ತೀರ್ಥಹಳ್ಳಿಗೆ ಬಂದಾಗ ಪ್ರವಾಸ ಮಂದಿರದಲ್ಲಿ ಎಲ್ಲ ಸ್ನೇಹಿತರೊಡನೆ ಸೇರುತ್ತಿದ್ದರು. ಈ ಸಾರಿ ಶಾಸನ ಸಭೆಯಲ್ಲಿ ಏನೇನು ಮಾತನಾಡಿದೆ; ಏನೇನು ಮಾತನಾಡಬೇಕಿತ್ತು ಎಂದು ಎಲ್ಲರೊಡನೆಯೂ ಚರ್ಚೆ ಮಾಡುತ್ತಿದ್ದರು. ಈ ಚರ್ಚೆಗಳಲ್ಲಿ ಜಿ. ಸದಾಶಿವರಾಯರು, ಐತಾಳರು, ರಾಜಗೋಪಾಲ ಭಟ್ಟರು, ಪಂಡಿತರು, ಶಂಕರನಾರಾಯಣ ಭಟ್ಟರು, ಟಿ.ಆರ್. ಪುರುಷೋತ್ತಮ, ಹುಗಲವಳ್ಳಿಸುರೇಂದ್ರ, ಗೇರುಗಲ್ಲು ಕರಿಬಸಪ್ಪನವರು, ಮಿಣಕಮ್ಮ ಮುಂತಾದವರು ಸೇರುತ್ತಿದ್ದರು. ಈ ಸಂಪ್ರದಾಯವನ್ನು ಇನ್ನಾವ ಶಾಸಕರಲ್ಲೂ ನಾನು ಕಂಡಿಲ್ಲ.

ಶ್ರೀ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದಾಗ ಗೋಪಾಲಗೌಡರು ಶಾಸಕರಾಗಿದ್ದರು. ಆ ದಿನ ಗೌಡರು ತೀರ್ಥಹಳ್ಳಿ ಟಿ.ಬಿ.ಯಲ್ಲಿ ಉಳಿದುಕೊಂಡಿದ್ದರು. ಅಂದು ತೀರ್ಥಹಳ್ಳಿ ಪುರಸಭಾ ಭವನದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮವಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಶಾಸಕರಾಗಿದ್ದ ಗೋಪಾಲಗೌಡರಿಗೆ ಆಹ್ವಾನವಿರಲಿಲ್ಲ. ಸಭೆಯಲ್ಲಿದ್ದ ಮುಖ್ಯಮಂತ್ರಿಗಳಿಗೆ ಗೋಪಾಲಗೌಡರ ನೆನಪಾಯಿತು. ಅವರೇ ಖುದ್ದಾಗಿ ವಾಹನ ಕಳಿಸಿ ಗೌಡರನ್ನು ಕರೆದುಕೊಂಡು ಬರಲು ತಿಳಿಸಿದರು. ಆದರೆ ಗೌಡರು ಸಭೆಗೆ ಬರಲಿಲ್ಲ. ಮುಖ್ಯಮಂತ್ರಿಗಳ ಕಡೆಯವರಿಗೆ ಗೌಡರು ಕೊಟ್ಟ ಉತ್ತರ ಹೀಗಿತ್ತು; “ಮಂತ್ರಿಗಳು ನಮ್ಮವರೇ. ನಮ್ಮೂರಿಗೆ ಬಂದಿದ್ದಾರೆ ಸಂತೋಷ. ಆದರೆ,ಶಾಸಕ ಕ್ಷೇತ್ರಕ್ಕೆ ಎಷ್ಟು ಮುಖ್ಯವೆಂದು ಉಳಿದವರಿಗೆ ತಿಳಿಯಲಿ. ನಾನು ಬರೋಲ್ಲ ಹೋಗಿ’’ ಎಂದು ಹೇಳಿಕಳಿಸಿದರು.

ಶಸಕರಾಗಿದ್ದ ಗೋಪಾಲಗೌಡರು ಪ್ರತಿಸಾರಿ ತೀರ್ಥಹಳ್ಳಿಗೆ ಬಂದಾಗಲೂ, ಟಿ.ಬಿ.ಗೆ ಎಲ್ಲಾ ಅಧಿಕಾರಿಗಳನ್ನೂ ಕರೆಸುತ್ತಿದ್ದರು. ಏನೇನು ಕೆಲಸಗಳಾಗಿವೆ ಎಂದು ಅಂಕಿ-ಅಂಶಗಳ ಸಮೇತ ಕೇಳುತ್ತಿದ್ದರು. ಪ್ರಗತಿ ತೋರಿಸದಿದ್ದರೆ ಅಥವಾ ಯಾರಾದರೂ ನಿಷ್ಕ್ರಿಯ ಅಧಿಕಾರಿಗಳಿದ್ದರೆ, ಅವರಿಗೆ ತಮ್ಮ ವಾಕಿಂಗ್‌ಸ್ಟಿಕ್ ತೋರಿಸಿ ಕೆಲಸಮಾಡಲು ಹೇಳುತ್ತಿದ್ದರು. ಆಗ ನಾನು ಗಮನಿಸಿದ ಮುಖ್ಯ ವಿಷಯವೆಂದರೆ “ಮನೆ ನಿವೇಶನ ಹಂಚುವಾಗ, ಅವು ಜಾತಿಯ ಕೇರಿಗಳಾಗದಂತೆ ಲಾಟರಿ ಮೂಲಕ ಹಂಚಬೇಕು. ಅದರಿಂದ ಎಲ್ಲ ಜಾತಿವರ್ಗದವರೂ ಕೂಡಿಬಾಳುವಂತಾಗುತ್ತದೆ. ಎಲ್ಲ ಮಕ್ಕಳೂ ಕೂಡಿ ಆಡಿದರೆ ಸಮಾಜ ಮುಂದುವರೆಯುತ್ತದೆ. ಆದ್ದರಿಂದ ಜಾತಿಕೇರಿ ಮಾಡಬೇಡಿ’’ ಎಂದು ರೆವಿನ್ಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಹೇಳುತ್ತಿದ್ದರು.

ಶಾಸನಸಭೆಗೆ ರಜೆಯಿದ್ದಾಗ ಗೋಪಾಲಗೌಡರು ತೀರ್ಥಹಳ್ಳಿಯಲ್ಲಿರುತ್ತಿದ್ದರು. ಇದೇ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿದ್ದ ಕೋಣಂದೂರು ಲಿಂಗಪ್ಪನವರು, ಗೇಣಿದಾರರ ಸಮಸ್ಯೆಗಳನ್ನು ಕುರಿತು ‘ಭಾರಿ’ ಮೆರವಣಿಗೆ ಹಾಗೂ ತಹಶೀಲ್ದಾರರಿಗೆ ಮನವಿಪತ್ರ ಕೊಡುವ ಕಾರ್ಯಕ್ರಮಗಳನ್ನು ಹಾಕಿರುತ್ತಿದ್ದರು. ಕೋಣಂದೂರು ಲಿಂಗಪ್ಪನವರ ‘ಭಾರಿ’ ಮೆರವಣಿಗೆ ಕಾರ್ಯಕ್ರಮಕ್ಕಾಗಿಯೇ, ಮೆರವಣಿಗೆಯ ಖಾಯಂ ಸದಸ್ಯರಾಗಿದ್ದ ನಾವು (ಅಂದರೆಏಳೆಂಟು ಜನ ಮಾತ್ರ) ಸೇರಿದೆವು. ಅದರಲ್ಲಿ ಆರಗದ ಮಿಣಕಮ್ಮನವರೂ ಇದ್ದರು. ನಾಮಫಲಕ ರೆಡಿ, ಮೆರವಣಿಗೆ ರೆಡಿ, ಮನವಿ ಪತ್ರ ರೆಡಿ. ಎಲ್ಲವೂ ರೆಡಿಯಾದ ಮೇಲೆ ಗೋಪಾಲಗೌಡರು ಪಾರ್ಟಿ ಆಫೀಸಿಗೆ ಬಂದರು. ಆದರೆ, ಜನ ಮಾತ್ರ ಸೇರಲಿಲ್ಲ. ಗೌಡರಿಗೆ ಲಿಂಗಪ್ಪ ವಿಷಯ ತಿಳಿಸಿದರು. “ಪರವಾಗಿಲ್ಲ, ನೋಡೋಣ ನಡೆ’’ ಎಂದು ಗೌಡರು ಪಾರ್ಟಿ ಆಫೀಸೀನಿಂದ ಹೊರಗೆ ಬಂದುನಿಂತರು. ಗೌಡರನ್ನು ನೋಡಿ ಕೆಲವರು ಬಂದರು. ಗೌಡರ ಕೈಯಲ್ಲಿ ತಹಸೀಲ್ದಾರರಿಗೆ ಕೊಡಬೇಕಾಗಿದ್ದ ಮನವಿ ಪತ್ರ ಇತ್ತು.ಮನವಿ ಪತ್ರಕ್ಕೆ ಸಹಿಮಾಡಿದವರೂ ಮೆರವಣಿಗೆಗೆ ಬಂದಿರಲಿಲ್ಲ. ಮೆರವಣಿಗೆಯು ಆರಗ ರಸ್ತೆಯಿಂದ ಪ್ರಭಾ ಪ್ರಿಂಟಿಂಗ್ ಪ್ರೆಸ್ ಮುಖಾಂತರ ಮುಂದುವರೆಯಿತು. ಅದರಲ್ಲಿ ನಾವೇ ಮೂರು ಮತ್ತೊಂದು ಜನ. ಗೌಡರು ಅಂದರೆ ಅಲ್ಲಿನ ಪೇಟೆ ಅಂಗಡಿಯವರಿಗೆ ಗೌರವ, ಅವರೆಲ್ಲ ಹೊರಬಂದು ಗೌಡರನ್ನು ಮಾತನಾಡಿಸಿ ಹೋಗುತ್ತಿದ್ದರು. ಗೌಡರು ಮಾತ್ರ ಹಿಂದೆ ತಿರುಗಿ ಒಂದು ಸಾರಿಯೂ ನೋಡಲೇ ಇಲ್ಲ. ತನ್ನ ಹಿಂದೆ ಸಾವಿರಾರು ಜನ ಮೆರವಣಿಗೆಯಲ್ಲಿ ಬರುತ್ತಿದ್ದಾರೆಂದೇ ತಿಳಿದು ಮುಂದೆ ಹೋಗುತ್ತಿದ್ದರು. ಹಿಂದೆ ನೋಡಿದ್ದರೆ ನನಗೆ ಮತ್ತು ಲಿಗಪ್ಪನಿಗೆ ಒದೆತ ಬೀಳುತ್ತಿದ್ದವು.

ಮೆರವಣಿಗೆ ಗಾಂಧಿ ಚೌಕ ಸೇರಿತು. ಪೋಲಿಸ್ ಸ್ಟೇಷನ್ ದಾಟಿ, ಎಡಗಡೆ ಮೆಟ್ಟಿಲೇರಿ ತಾಲ್ಲೂಕು ಕಛೇರಿಗೆ ಬಂದೆವು. ಚಳವಳಿ, ಮೆರವಣಿಗೆಯಲ್ಲಿ ಪಳಗಿದ್ದ ನಾವು ಎಂದಿನ ಕ್ರಮದಂತೆ ಪ್ಲಕಾರ್ಡ್, ಬಾವುಟ ಜಗಲಿಯ ಮೇಲಿಟ್ಟೆವು. ಗೌಡರು ಹಿಂದೆ ತಿರುಗಿ “ತಹಸೀಲ್ದಾರ್‌ರವರು ಇದ್ದಾರಾ?’’ ಎಂದು ನಗುತ್ತಾ ಕೇಳಿದರು. ಅಷ್ಟೊತ್ತಿಗೆ ತಹಸೀಲ್ದಾರ್‌ರೇ ಬಾಗಿಲಿಗೆ ಬಂದು ಗೋಪಾಲಗೌಡರನ್ನು ಸ್ವಾಗತಿಸಿ ತಮ್ಮ ಕೊಠಡಿಗೆ ಕರೆದೊಯ್ದರು. ಗೌಡರು ನಮಗೂ ಒಳಗೆ ಬರುವಂತೆ ಹೇಳಿದರು. ತಹಸೀಲ್ದಾರರು ನಮ್ಮನ್ನೆಲ್ಲಾ ನೋಡಿ, “ಯಾಕೋ ಜನ ಕಡಿಮೆ’’ ಎಂದು ಲೋಕಾಭಿರಾಮವಾಗಿ ಹೇಳಿದರು. ಆಗ ಗೌಡರು, “ಜನ ಕಡಿಮೆ ಇಲ್ಲ. ನಮ್ಮ ರೈತರಿಗೆ ಏನಾದರೂ ಕೆಲಸ ಇರ‍್ತವೆ. ದಾರಿಯಲ್ಲಿ ಅಂಗಡಿ ಬದಿನಿಂದಿದ್ರಲ್ಲ! ಅವರೆಲ್ಲ ಈ ಗೇಣಿದಾರರ ಹಕ್ಕಿನ ನ್ಯಾಯ ಕೇಳುವವರೆ, ಭೂಮಾಲೀಕರ ಹೆದರಿಕೆಯಿಂದ, ತಿಳುವಳಿಕೆ ಇಲ್ಲದೆ ನಿಂತಿದ್ದರು ಅಷ್ಟೆ! ಚುನಾವಣೇಲಿ ನಮ್ಮನ್ನ ಗೆಲ್ಲಿಸಿದ್ದೇ ಈ ಕೆಲಸ ಮಾಡೋದಕ್ಕೆ! ಅದೆಲ್ಲ ಇರಲಿ, ಗೇಣಿದಾರರ ಸಮಸ್ಯೆಯನ್ನು ಕಾನೂನಿನಂತೆ ಬಗೆಹರಿಸಿರಿ. ಮತ್ತೆ ಜನರು ಇಲ್ಲಿಯವರೆಗೆ ಬರುವಂತೆ ಮಾಡಬೇಡಿ’’ ಎಂದು ಹೇಳಿ ಹೊರಬಂದರು. ಮೆರವಣಿಗೆಯಲ್ಲಿ ಜನ ಕಡಿಮೆ ಇದ್ದಾರೆಂದು ಬೇಜಾರಿನಲ್ಲಿದ್ದ ನನಗೆ ಮತ್ತು ಕೋಣಂದೂರು ಲಿಂಗಪ್ಪನಿಗೆ, “ಮೆರವಣಿಗೆಯಲ್ಲಿ ಹೊರಟ ಮೇಲೆ ಹಿಂದೆ ಯಾರ‍್ಯಾರು ಇದ್ದಾರೆ ಎಂದು ತಿರುಗಿ ನೋಡಬಾರದು! ಸುತ್ತ ಅಂಗಡಿಕಟ್ಟೆಯಲ್ಲಿ ನಿಂತವರೆಲ್ಲ ನಮ್ಮವರೇ ಎಂದುಕೊಂಡು ಮುಂದೆ ಹೋಗುತ್ತಿರಬೇಕು’’ ಎಂದು ನಗುತ್ತಾ ಹೇಳಿದರು.

ಗೋಪಾಲಗೌಡರಿಗೆ ಅವಕಾಶವಿಹೀನರು ಮತ್ತು ತಬ್ಬಲಿ ಜಾತಿಗಳ ಪರವಾಗಿ ಇದ್ದ ಕಾಳಜಿಗಳು ಎಂತಹವು ಎದಕ್ಕೆ ಅವರು ಒಂದುಕಡೆ ಹೇಳಿದ್ದ ಮಾತು ನೆನಪಾಗುತ್ತಿದೆ; ಯಾರಾದರೂ “ಹರಿಜನ- ಗಿರಿಜನರಿಗೆ ಕೊಡುತ್ತಿರುವ ಸೌಲಭ್ಯಗಳು ಅತಿಯಾಯಿತು’’ ಎಂದು ಹೇಳುವಾಗ ಅವರನ್ನು ಕುರಿತು “ಯಾರದೋ ದುಡ್ಡು; ಯಾರದೋ ಕಾಸು’’ ಎಂದು ಅವಮಾನಕರವಾಗಿ ಯಾರಾದರೂ ನಿಂದಿಸುತ್ತಿದ್ದರೆ, “ನೀವು ಹೊಳೆ ದಾಟಿದ್ದೀರಿ; ಅವರಿನ್ನೂ ಹೊಳೆಯ ಈಚೆ ದಡದಲ್ಲಿದ್ದಾರೆ. ಓಟದ ಸ್ಪರ್ಧೆ ಇಟ್ಟು, ಗುರಿಮುಟ್ಟು ಅಂತ ಹೇಳಿದರೆ, ಯಾರು ಮೊದಲು ಗುರಿಮುಟ್ಟುತ್ತಾರೆ ಹೇಳಿ ಸ್ವಾಮಿ! ಅವರೂ ನಿಮ್ಮ ಹಾಗೆ ಹೊಳೆದಾಟಲಿ; ಆಮೇಲೆ ನೋಡುವಿರಂತೆ!’’ ಎಂದು ಹೇಳಿದ್ದರು. ಪೋಸ್ಟಲ್ ಇನ್ಸ್‌ಪೆಕ್ಟರ್‌ರವರಾದ ಪಿ. ರಾಮಣ್ಣ ಮತ್ತು ಪಿ. ನಾರಾಯಣ ಅವರ ಸಹೋದರಿ ಹಿರಿಯಕ್ಕನವರನ್ನು ಗೌರವದಿಂದ ಸಂಬೋಧಿಸುತ್ತಿದ್ದುದು ಮಾತ್ರವಲ್ಲದೆ, ಬೇರೆಯವರೊಂದಿಗೆ ಚರ್ಚೆಮಾಡುತ್ತಿದ್ದಾಗ, ಅವರು ಬಂದರೆ, “ಬನ್ನಿ ಕುಳಿತುಕೊಳ್ಳಿ. ನೀವೂ ಇದನ್ನೆಲ್ಲಾ ಕೇಳಬೇಕು’’ ಎಂದು ಗೌರವವಾಗಿ ಕರೆಯುತ್ತಿದ್ದರು. ಸಂಘಟನೆಯಲ್ಲಿ ಮಹಿಳೆಯರನ್ನು, ಅದರಲ್ಲೂ ಕೆಳವರ್ಗದ ಮಹಿಳೆಯರನ್ನು ಸದಸ್ಯರನ್ನಾಗಿಸಲು ಒತ್ತಾಯಿಸುತ್ತಿದ್ದರು. “ಮಹಿಳಾ ಸದಸ್ಯರಿಲ್ಲದಿದ್ದರೆ ಆ ಸಮಿತಿ ಅಥವಾ ಸಂಘ ಸಂಸ್ಥೆಗಳಿಗೆ ಬೆಲೆಯೇ ಇಲ್ಲ!’’ ಎನ್ನುತ್ತಿದ್ದರು.

ಗೋಪಾಲಗೌಡರು ಉದ್ದನೆಯ ಜುಬ್ಬಹಾಕಿ, ಅತಿ ಉದ್ದವಾದ ತೋಳನ್ನು ತುದಿಯಲ್ಲಿ ಮಡಚುತ್ತಿದ್ದರು. ನಾವೆಲ್ಲಾ ಆ ರೀತಿ ಮಡಚುವುದು ಒಂದು ಶೋಕಿಯೆಂದು ತಿಳಿದಿದ್ದೆವು. ನಾನೂ ಅದೇ ರೀತಿ ಜುಬ್ಬ ಹೊಲೆಸಲು ಅವರ ಬಟ್ಟೆ ಹೊಲೆಯುತ್ತಿದ್ದ ತೀರ್ಥಹಳ್ಳಿಯ ನಾರಾಯಣ ಶೆಟ್ಟಿಯವರನ್ನು ಕೇಳಿದೆ. ನಾರಾಯಣ ಶೆಟ್ಟರು ನಗುತ್ತಾ, “ಅಲ್ಲಾ ಶಾಮಣ್ಣಾ, ಗೋಪಾಲಗೌಡರು ಯಾವಾಗ ಬಟ್ಟೆ ತಂದುಕೊಟ್ಟು ಜುಬ್ಬಾ ಹೊಲೆಸಿದ್ದರು? ಅವರಿಗೆ ಬಟ್ಟೆತಂದು ಹೊಲೆಸಿದ ಅನುಭವವೇ ಇಲ್ಲ! ನಾನು ಹರಿದುಹೋದ ಅವರ ಜುಬ್ಬ ಹೊಲೆದುಕೊಟ್ಟಿರಬಹುದು. ಯಾರ‍್ಯಾರೋ ಅವರಿಗೆ ರೆಡಿಮೇಡ್ ಜುಬ್ಬ ತಂದುಕೊಡ್ತಾರೆ. ಅವೊಂದಕ್ಕೂ ಅಳತೆ ಸರಿ ಇರಲ್ಲ. ಅದಕ್ಕೆ ಜುಬ್ಬಾದ ತೋಳನ್ನು ತುದಿಯಲ್ಲಿ ಮಡಚಿಕೊಳ್ಳೋದು. ನೀವೆಲ್ಲಾ ಅದೊಂದು ಫ್ಯಾಶನ್ ಅಂದುಕೊಂಡರೆ ನಾನೇನು ಮಾಡೋದು!’’ ಎಂದಾಗ, ನನಗೊಂದು ರೀತಿಯಲ್ಲಿ ಆಳದಲ್ಲಿ ನೋವುಂಟಾಯಿತು. ಹಾಗೆಂದು ಗೋಪಾಲಗೌಡರು ಎಂದೂಬ ಕೊಳಕಾದ ಬಟ್ಟೆ ಹಾಕಿದವರಲ್ಲ. ಇಸ್ತ್ರಿಮಾಡಿದಬ್‌ಬಾವನ್ನೇ ನೀಟಾಗಿ ಹಾಕಿಕೊಂಡು ಟಾಕು-ಟೀಕಾಗಿ ಓಡಾಡುತ್ತಿದ್ದರು. ಆವೊತ್ತು ಟೈಲರ್ ನಾರಾಯಣ ಶೆಟ್ಟರುಹೇಳದಿದ್ದರೆ ನನಗೂ ನಿಜಸ್ಥಿತಿ ತಿಳಿಯುತ್ತಿರಲಿಲ್ಲ.

ಸಮಾಜವಾದಿ ಯುವಜನ ಸಭಾದ ತೀರ್ಥಹಳ್ಳಿ ಶಾಖೆಯಿಂದ ಅಧ್ಯಯನ ಶಿಬಿರವೊಂದನ್ನು ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿತ್ತು. ಅದೇ ಶಿಬಿರದಲ್ಲಿ ಕೋಣಂದೂರು ಲಿಂಗಪ್ಪ ಸಂಗ್ರಹಿಸಿದ್ದ “ಶಾನಸ ಸಭೆಯಲ್ಲಿ ಶಾಂತವೇರಿ’’ ಕೃತಿಯನ್ನು ಗೋಪಾಲಗೌಡರಿಂದಲೇ ಬಿಡುಗಡೆ ಮಾಡಿಸುವ ಕಾರ್ಯಕ್ರಮವಿತ್ತು. ಜೆ.ಎಚ್. ಪಟೇಲ್, ಎಂ.ಡಿ. ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಜಿ. ಸದಾಶಿವರಾಯರು, ಶಂಕರನಾರಾಯಣ ಭಟ್ಟರು ಮುಂತಾದವರು ಶಿಬಿರದಲ್ಲಿ ಭಾಗವಹಿಸಿದ್ದರು.

ಶಿಬಿರದ ಕಾರ್ಯಕರ್ತರ ಸಭೆಯಲ್ಲಿ ಎಂ.ಡಿ. ನಂಜುಂಡಸ್ವಾಮಿಯವರು, “ಮುಖಂಡ- ಮುಖಂಡತ್ವ’’ ಎಂದರೆ, ಯಾರು ಯಾವ ರೀತಿಯಲ್ಲಿ ಇರಬೇಕೆಂದು ಹೇಳುತ್ತಾ, “ಯಾವಾಗಲೂ ಒಂದು ಸಂಘಟನೆಗೆ ತತ್ವ, ಸಿದ್ಧಾಂತಗಳೇ ನಾಯಕ! ವ್ಯಕ್ತಿಗಳಲ್ಲ. ಆದ್ದರಿಂದ, ಯುವಜನರು ಸಂಘಟನೆಯ ಮುಂಚೂಣಿಯಲ್ಲಿರುವ ನಾಯಕರು ತತ್ವ ಹೀನರಾದರೆಂದು ಭ್ರಮನಿರಸನರಾಗುವುದು ಬೇಡ. ಸಂಘಟನೆಯ ಸಿದ್ಧಾಂತದಡಿಯಲ್ಲಿ, ಅದಕ್ಕೆ ಅನುಗುಣವಾಗಿ ನಡೆದುಕೊಂಡು ಹೋಗಲು ಯಾವ ಅಡ್ಡಿಯೂ ಇಲ್ಲ’’ ಎಂದು ವಿಷಯ ಮಂಡಿಸಿದರು. ಇದರ ಮೇಲೆ ಸಾಕಷ್ಟು ಚರ್ಚೆ ನಡೆದು ಗೊಂದಲವೂ ಆಯಿತು. ಆ ಚರ್ಚೆಯಲ್ಲಿ ಗೋಪಾಲಗೌಡರು ಇರಲಿಲ್ಲ. ಸಭೆಯ ಅಧ್ಯಕ್ಷತೆಯನ್ನು ಜಿ. ಸದಾಶಿವರಾಯರು ವಹಿಸಿದ್ದರು. ಚರ್ಚೆಯಲ್ಲಿ ಇದೇ ಸರಿಯಾದ ವಿಚಾರವೆಂದು ಎಲ್ಲರೂ ಒಪ್ಪಿದರು. ಬೇರೆ ವಿಷಯಗಳ ಬಗ್ಗೆಯೂ ಸಾಮೂಹಿಕ ಚರ್ಚೆ ನಡೆದು ಅಂದಿನ ಸಭೆ ಮುಕ್ತಾಯಗೊಂಡಿತು.

ಅದರ ಮಾರನೆಯ ದಿನ “ಶಾಸನ ಸಭೆಯಲ್ಲಿ ಶಾಂತವೇರಿ’’ ಕೃತಿ ಬಿಡುಗಡೆ ಮಾಡಲು ಬರಬೇಕಾಗಿದ್ದ ಗೋಪಾಲಗೌಡರ ಬಳಿ ಕೆಲವು ಹಿರಿಯ ಕಾರ್ಯಕರ್ತರು ಹೋಗಿ, “ಶಾಂತವೇರಿಯವರು ನಾಯಕರಲ್ಲ ಎಂದು ಯುವಜನ ಸಭಾದವರು ಚರ್ಚೆಮಾಡಿದರು; ಗೌರವವಿಲ್ಲದವರ ಬಳಿ ಹೋಗಿ ಪುಸ್ತಕವನ್ನು ಬಿಡುಗಡೆ ಮಾಡಿದರೆ ಏನರ್ಥ?’’ ಎಂದು ಚೆನ್ನಾಗಿ ಚಾಡಿಹೇಳಿದರು. ಮಾರನೆಯ ದಿನ ಪುಸ್ತಕ ಬಿಡುಗಡೆಗೆ ಗೋಪಾಲಗೌಡರು ಮತ್ತು ಕೆಲವು ಹಿರಿಯರು ಬರುವುದಿಲ್ಲವೆನ್ನುವುದು ನನಗೆ ತಿಳಿಯಿತು. ಕೂಡಲೇ ನಾನು ಗೌಡರ ಬಳಿ ತಪ್ಪು ಮಾಹಿತಿ ಹೇಳಿದವರಾರೆಂದು ಪತ್ತೆಮಾಡಿ, ಈ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಪೂರ್ಣಚಂದ್ರ ತೇಜಸ್ವಿಯವರೊಡನೆ, ಹಿರಿಯರಾದ ಜಿ. ಸದಾಶಿವರಾಯರನ್ನು ಕರೆದುಕೊಂಡುಪ ಗೋಪಾಲಗೌಡರಲ್ಲಿಗೆ ಬಂದೆ. ಸಿಟ್ಟಾಗಿದ್ದ ಗೋಪಾಲಗೌಡರಿಗೆ ಮತ್ತು ಶಂಕರನಾರಾಯಣ ಭಟ್ಟರಿಗೆ, ಜಿ. ಸದಾಶಿವರಾಯರೇ ಮುಂದಾಗಿ, ಚರ್ಚೆಯಲ್ಲಿ ನಡೆದ ಸತ್ಯಾಂಶವೇನು ಎಂಬುದನನು ವಿವರವಾಗಿ ತಿಳಿಸಿದರು. ಇದರಿಂದಾಗಿ ವಾತಾವರಣ ತಿಳಿಯಾಯಿತು. ಮಾರನೆಯ ದಿನ ಗೋಪಾಲಗೌಡರೇ ಪುಸ್ತಕವನ್ನು ಸಂತೋಷವಾಗಿ ಬಿಡುಗಡೆ ಮಾಡಿದರು. ಸಭೆಯಲ್ಲಿ ಲವಲವಿಕೆಯಿಂದ ಮಾತಾಡಿದರು. ಇದೇ ಗೋಪಾಲಗೌಡರ ತೀರ್ಥಹಳ್ಳಿಯ ಕಡೆಯ ಭೇಟಿ. ಅಲ್ಲಿಂದ ಬೆಂಗಳೂರಿಗೆ ಹೋದವರು ಆಸ್ಪತ್ರೆ ಸೇರಿದರು.

ಗೋಪಾಲಗೌಡರು ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಅನಾರೋಗ್ಯದಿಂದ ಮಲಗಿದ್ದರು. ತೀರ್ಥಹಳ್ಳಿಯ ಅಧ್ಯಯನ ಶಿಬಿರಕ್ಕೆ ಅವರನ್ನ ಕರೆಯಲು ಗೆಳೆಯರೊಂದಿಗೆ ಹೋಗಿದ್ದೆ. ಹೋಗುವಾಗ ಗೌಡರ ಚಿಕ್ಕ ಮಕ್ಕಳಿಗೆಂದು ಬಿಸ್ಕತ್ ಮತ್ತು ಚಾಕಲೇಟ್ ತೆಗೆದುಕೊಂಡು ಹೋಗಿದ್ದೆ. ಗೌಡರು ನಮ್ಮನ್ನು ನೋಡಿ ಒಳಗೆ ಕರೆದು, ನನ್ನ ಕೈನೋಡಿ, “ಏನದು?’’ ಎಂದರು. “ಮಕ್ಕಳಿಗೆ ಬಿಸ್ಕತ್ ಅಷ್ಟೆ!’’ ಅಂದೆ. “ಇವೆಲ್ಲಾ ಕೆಟ್ಟ ಅಭ್ಯಾಸ. ನೀನಿವತ್ತು ತಂದುಕೊಡ್ತಿಯಾ, ಅವು ತಿಂತಾವೆ! ಇದೇ ಅಭ್ಯಸ ಮುಂದುವರೆದು ಮನೆಗೆಯಾರು ಬಂದರೂ, ಮಕ್ಕಳು ಅಭ್ಯಾಸ ಬಲದಿಂದ ಅವರ ಕೈ ನೋಡುತ್ತವೆ. ಇಲ್ಲಿಗೆ ಬರೋರೆಲ್ಲಾ ತರೋದಿಲ್ಲ! ಆಗ ಬಿಸ್ಕತ್‌ಗಾಗಿ ನಮ್ಮ ಹತ್ರ ಹಠ ಶುರುಮಾಡ್ತವೆ. ನಾನೆಲ್ಲಿ ಕೊಡಿಸಲಿ ಮಾರಾಯ! ಆದ್ದರಿಂದ ಈ ಅಭ್ಯಾಸ ಬಿಡು, ಇವೆಲ್ಲ ನಮ್ಮಂತವರಿಗಲ್ಲ!’’ ಎಂದು ಗೋಪಾಲಗೌಡರು ಹೇಳಿದ ಮಾತು ಈವೊತ್ತಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದಂತೆ ಉಳಿದಿದೆ.

ಕರ್ನಾಟಕದಲ್ಲಿ ಡಾ. ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡರ ಚಿಂತನೆ ಮತ್ತು ಸಮಾಜವಾದಿ ಹೋರಾಟದಿಂದ ನಿಜವಾದ ಭೂ ಸುಧಾರಣೆಜಾರಿಗೆ ಬರಲು ಸಾಧ್ಯವಾಯಿತು; ವಿಕಾರರೂಪದಲ್ಲಾದರೂ ಭೂಮಿ ಮರುಹಂಚಿಕೆಯಾಯಿತು. ಇವೆಲ್ಲಾ ಸಾಧ್ಯವಾಗಿದ್ದು “ಕಾಗೋಡು ಚಳುವಳಿ’’ಯ ಮೂಲಕ. ಕಾಂಗ್ರೆಸ್‌ನವರು ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳಾದ, ಕುಟುಂಬಕ್ಕೊಂದು ಸೂರು, ದುಡಿಯುವ ಕೈಗಳಿಗೆ ಕೆಲಸ, ಮೀಸಲಾತಿ, ಕಡ್ಡಾಯ ಕನ್ನಡ, ಕರ್ನಾಟಕದ ಏಕೀಕರಣ, ಸಹಕಾರಿ ಆಂದೋಲನ ಮುಂತಾದವುಗಳೆಲ್ಲ ಸಮಾಜವಾದಿ ಹೋರಾಟಗಾರರು ಚಿಂತಿಸಿ ಚಳವಳಿ ನಡೆಸಿದ್ದರ ಫಲ.

ಕರ್ನಾಟಕದಲ್ಲಿ ರೈತ ಚಳವಳಿ, ದಲಿತ ಚಳವಳಿ, ಗ್ರಾಹಕ ಚಳವಳಿಗಳಂತಹವು ನಡೆಯುತ್ತಲೇ ಇವೆ. ಇವೆಲ್ಲದಕ್ಕೂ ಗೋಪಾಲಗೊಡರ ಸೈದ್ಧಾಂತಿಕ ಹೋರಾಟದ ಬುತ್ತಿಯೇ ಕಾರಣವಾಗಿದೆ. ಈಗಲೂ ಕರ್ನಾಟಕದಲ್ಲಿ ಅಂದಿನ ಹೋರಾಟದ ಮುಖ್ಯ ಸೆಲೆಯೊಂದು ಚಲಿಸುತ್ತಲೇ ಇದೆ; ಮೇಲೆ ಬಂದು ಬುಗ್ಗೆಯಾಗಿ ಉಕ್ಕಲು ಸಮಯ ಕಾಯುತ್ತಿದೆ.

ಶಾಂತವೇರಿ ಗೋಪಾಲಗೌಡರ ಊರಾದ ಆರಗದಲ್ಲಿ ಅವರ ಹಿರಿಯರು ಅವರಿಗೆ ಬಿಟ್ಟುಹೋಗಿರುವ ಆಸ್ತಿ ಅಂದರೆ, ಹುಲ್ಲಿನ ಸಣ್ಣಮನೆ (ಈಗ ಅದು ಬಿದ್ದುಹೋಗಿದೆ); ಇನ್ನೊಂದು ಎದತ್ತರದ ಹಳೆಯ ತೆಂಗಿನ ಮರ. ಗೌಡರ ಬಿದ್ದುಹೋಗಿರುವ ಹುಲ್ಲಿನಮನೆ, ತೆಂಗಿನಮರ ನೋಡಿದಾಗಲೆಲ್ಲ ನನಗೆ ಕುವೆಂಪು ಅವರ “ಅನಿಕೇತನ’’ ಪದ್ಯ ನೆನಪಿಗೆ ಬರುತ್ತದೆ. ಈ ಅರ್ಥದಲ್ಲಿ ಗೋಪಾಲಗೌಡರು ಅನಿಕೇತನರೆ!