ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ನಮ್ಮ ಹಿರಿ ಕಿರಿಯ ವಿದ್ಯಾರ್ಥಿಗಳ ಒಂದು ಸುದೀರ್ಘ ಪಟ್ಟಿಯೇ ಇದೆ. ಅವರ ಕಾರ್ಯಕಲಾಪಗಳ ವಿವರ ಸಾಮಾನ್ಯವಾಗಿ ಈಗ ಎಲ್ಲರಿಗೂ ತಿಳಿದಿದೆ. ಆದರೂ ಚಳವಳಿಯಲ್ಲಿ ಭಾಗವಹಿಸಿ ಹಗಲಿರುಳೆನ್ನದೆ ದುಡಿದು ನಡುಹರೆಯದಲ್ಲೇ ಆರೋಗ್ಯವನ್ನು ಕಳೆದುಕೊಂಡ ಮತ್ತು ಅಸುನೀಗಿದ ಕೆಲವರನ್ನು ಇಲ್ಲಿ ಸ್ಮರಿಸಬಹುದಾಗಿದೆ.

ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕನಾಗಿದ್ದ ನಾನು ೧೯೪೨ರ ಆಗಸ್ಟ್ ೯ ರಂದು “ವಿದ್ಯಾರ್ಥಿಗಳು ಯಾರೂ ಚಳವಳಿಗೆ ಸೇರಬೇಡಿ, ನಿಮ್ಮ ಕಾಲ ಬರುತ್ತದೆ, ಕಾದಿರಿ’’ ಎಂದು ತರಗತಿಯಲ್ಲಿ ಹೇಳಿದೆ. ಆ ದಿವೇ “ಕ್ವಿಟ್ ಇಂಡಿಯಾ’’ ಚಳವಳಿ ಆರಂಭ. ವಿದ್ಯಾರ್ಥಿ ಗೋಪಾಲ ಗುಂಡಿನಂತೆ ಸಿಡಿದೆದ್ದು “ಏನ್ ಸಾರ್, ನೀವೊಬ್ಬರಾದರೂ ನಮಗೆ ನೆರವಾಗಿದ್ದೀರಿ ಎಂದು ತಿಳಿದಿದ್ದೆವು. ನೀವೂ ಇಷ್ಟೇನಾ! ಸ್ವರಾಜ್ಯ ಮೇಲಿನಿಂದ ಧುಮುಕುತ್ತದೆಯೇ? ನಾವು ನೋಡಿಕೊಳ್ಳುತ್ತೇವೆ ಬಿಡಿ’’ ಎಂದು ಬಿಟ್ಟ. ನನ್ನ ಮಾತಿನ ವ್ಯಾಖ್ಯೆ ವಿವರಣೆ ಅವನಿಗೆ ಹಿಡಿಸಲಿಲ್ಲ. “ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇಮೃಗಾಃ’’ ಈ ಮಾತು ನನಗೆ ಜ್ಞಾಪಕಕ್ಕೆ ಬಂದಿತು. ಈ ಹುಡುಗರನ್ನು ತಡೆಯಲಾಗುವುದಿಲ್ಲ. ತಪ್ಪು ಅವರದ್ದಲ್ಲ; ‘ಕ್ವಿಟ್ ಇಂಡಿಯಾ’ ಚಳವಳಿಯನ್ನು ಒಪ್ಪಿದ ಹಿರಿಯರೆಲ್ಲರ ಕರ್ತವ್ಯ, ಮೊದಲು ಬ್ರಿಟಿಷರ ಆಡಳಿತದ ಎಲ್ಲ ಭಾಗಗಳನ್ನು ರಾಷ್ಟ್ರೀಕರಿಸುವುದು-ಉಪಾಧ್ಯಾಯರು ತಂತಮ್ಮ ಶಾಲೆಗಳನ್ನು ರಾಷ್ಟ್ರೀಕರಿಸಬೇಕು ಇಲ್ಲದಿದ್ದರೆ ಬಹಿಷ್ಕರಿಸಬೇಕು. ಉಪಾಧ್ಯಾಯರು ಇದಕ್ಕೆ ಹಿಂಜರಿಯುವುದಾದರೆ ವಿದ್ಯಾರ್ಥಿಗಳಾದರೂ ಶಾಲೆ ಬಿಡುವುದು ಸೂಕ್ತ. ಇಷ್ಟು ತದನಂತರದ ವಿಚಾರದಿಂದ ನನಗೆ ಹೊಳೆಯಿತು. ಇದು ಗೋಪಾಲನ ಸವಾಲಿನಿಂದ ತೋರಿದ ನೀತಿ, ಅವನು ಕಲಿಸಿದ ಪಾಠ.

ಚಳವಳಿ ಕಾಲದಲ್ಲೊಮ್ಮೆ ಅವನು ಅತ್ಯಂತ ಕೃಶನಾಗಿ, ಕಣ್ಣು ಹಳದಿಯಾಗಿ ಕಾಮಾಲೆಯ ಚಿಹ್ನೆ ತೋರಿ ಬಳಲಿದ್ದನ್ನು ಕಂಡಾಗ “ಮೊದಲು ನಿನ್ನ ಆರೋಗ್ಯದ ಕಡೆ ಗಮನವಿಡು’’ ಎಂದು ಎಚ್ಚರಿಸಿದ್ದೆ. ಮುಂದಿನ ವಿಚಾರ ಎಲ್ಲರಿಗೂ ತಿಳಿದದ್ದೆ. ಕೆಚ್ಚಿನ ಕನ್ನಡಾಭಿಮಾನಿ, ವಾಗ್ಮಿ, ಯಶಸ್ವಿ ಶಾಸಕ, ಚರ್ಚಾಪಟು, ಉತ್ತಮ ಸಂಘಟಕ, ಪ್ರಬಲ ವಿರೋಧ ಪಕ್ಷೀಯ. ಸ್ವಾತಂತ್ರ್ಯ ಬಂದಮೇಲೂ ಸಮಾಜವಾದದ ಸಾಧನೆಯಲ್ಲಿ ಹೋರಾಡಿ ಕೆಲವು ಸಲ ಸೆರೆಮನೆಗೆ ತೆರಳಿ, ಮತ್ತೆ ಮತ್ತೆ ಆರೋಗ್ಯಕ್ಕೆ ಎರವಾಗಿ ಈಗ ರುಗ್ಣಾವಸ್ಥೆಯಲ್ಲಿರುವ ಗೋಪಾಲಗೌಡರು ಇಷ್ಟು ಪ್ರಬಾವಶಾಲಿಯಾದರೂ ಇರುವುದಕ್ಕೆ ಒಂದು ಮನೆ, ಎರಡು ಎಕರೆ ಹೊಲ ಸಹ ಮಾಡಿಕೊಂಡಿಲ್ಲ. ಎಂಬುದನ್ನು ನೆನೆದಾಗ ಸಂಕಟವಾಗುತ್ತದೆ. ದೇವರು ಅವರಿಗೂ ಅವರ ಕುಟುಂಬ ವರ್ಗಕ್ಕೂ ಆಯುರಾರೋಗ್ಯಾದಿಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.