ಶಾಂತವೇರಿ ಗೋಪಾಲಗೌಡರು ಅಪರೂಪದ ಒಬ್ಬ ಸಮಾಜವಾದಿ ಧುರೀಣ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಯುವನಾಯಕ, ಪ್ರಚಂಡ ವಾಗ್ಮಿ, ಸರಳ ಬದುಕಿನ ನಿಷ್ಠುರಿ, ಹೋರಾಟವೇ ಪ್ರಾಣವಾಗಿದ್ದ ಚೈತನ್ಯ.

ಮೇಲಿನ ಈ ಮಾತುಗಳಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ ಎಂಬುದಕ್ಕೆ ಅವರನ್ನು ಹತ್ತಿರದಿಂದ ಬಲ್ಲ, ಕೆಲಕಾಲವಾದರೂ ಅವರೊಂದಿಗೆ ನಿಕಟ ಒಡನಾಟಹೊಂದಿದ್ದ ನಾನೇ ಸಜೀವ ಸಾಕ್ಷಿಯಾಗಿದ್ದೇನೆ.

ದೇಶದಲ್ಲಿ ಸಮಾಜವಾದಿ ಪಕ್ಷ ಎರಡು ಹೋಳಾಗಿ ಜಯಪ್ರಕಾಶ ನಾರಾಯಣ್, ಡಾ. ರಾಮಮನೋಹರ ಲೋಹಿಯಾ ಬೇರೆ ಬೇರೆ ಆದಮೇಲೆ ನಾನು, ಡಾ. ಲೋಹಿಯಾರ ಸಂಯುಕ್ತ ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿ, ಆ ಪಕ್ಷದ ರಾಯಚೂರು ಜಿಲ್ಲಾ ಅಧ್ಯಕ್ಷನಾಗಿ, ಆ ಪಕ್ಷದಿಂದಲೇ ಶಾಸನ ಸಭೆಗೆ ಆರಿಸಿಹೋದೆ. ಡಾ. ಲೋಹಿಯಾರ ಈ ಸಮಾಜವಾದಿ ಸಂಘಟನೆಯ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವೊಂದು ೧೯೫೫ರಲ್ಲಿ ಬಳ್ಳಾರಿಯಲ್ಲಿ ಏರ್ಪಾಟಾಗಿದ್ದಾಗ ನನ್ನಂತೆ ಅಲ್ಲಿಗೆ ಆಗಮಿಸಿದ್ದ ಶ್ರೀ ಗೋಪಾಲಗೌಡರನ್ನು ಪ್ರಥಮ ಬಾರಿಗೆ ಅಲ್ಲಿ ಕಂಡೆ. ಕಾಗೋಡು ರೈತರ ಸತ್ಯಾಗ್ರಹದ ಮೂಲಕ ಆಗಲೇ ಗೌಡರು ನಾಡಿನಲ್ಲಿ ಹೆಸರು ಮಾಡಿದ್ದರು. ಅಲ್ಲದೆ ಈ ಚಳುವಳಿಯಲ್ಲಿ ಭಾಗವಹಿಸಿ ಡಾ. ಲೋಹಿಯಾ ಅವರು ಸಹ ಸೆರೆಮನೆವಾಸ ಅನುಭವಿಸಿದ್ದರು. ಅದೇ ಮೊದಲ ಸಲ ಲೋಹಿಯಾ ಅವರನ್ನು ಕಂಡ ಗೌಡರು, ಅವರ ಸಿದ್ಧಾಂತ, ಕಾರ್ಯಕ್ರಮಗಳ ಸೆಳೆತಕ್ಕೆ ಒಳಗಾಗಿದ್ದರು; ಮುಂದೆ ಡಾ. ಲೋಹಿಯಾರ ಸಮಾಜವಾದಿ ಪಕ್ಷವನ್ನೇ ನಾಡಿನಲ್ಲಿ ಭದ್ರವಾಗಿ ಬೆಳೆಸಿದರೆನ್ನಬೇಕು. ಈ ಕಾರ್ಯದಲ್ಲಿ ಅವರೊಂದಿಗೆ ನಾನೂ ಇದ್ದೆ ಎಂಬುದೇ ನನ್ನ ಧನ್ಯತೆ.

ಹೋರಾಟದ ನಿರಂತರತೆ ಪಕ್ಷದ ಕಾರ್ಯಕರ್ತರಲ್ಲಿ ಯಾವತ್ತೂ ಆರದಿರಲಿ ಎಂದು ಸದಾ ಊರೂರು ಸುತ್ತುತ್ತ ಸಂಘಟನೆಗೆ ಶ್ರಮಿಸುತ್ತಿದ್ದ ಶ್ರೀ ಗೋಪಾಲಗೌಡರ ಜೀವನ ಎಷ್ಟು ಸರಳವಾಗಿತ್ತೆಂದರೆ, ಹೆಗಲಲ್ಲಿ ಒಂದು ಚೀಲ, ಚೀಲದಲ್ಲಿ ಹೊದೆಯಲು ಶಾಲು ಒಂದು ಜೊತೆ ಬಟ್ಟೆ, ಕಾರ್ಯಕರ್ತರ ಮನೆಯಲ್ಲೇ ಇಳಿಯುವುದು, ಇರುವ ಊಟವನ್ನೇ ಪರಮಾನ್ನ ಮಾಡಿಕೊಂಡು, ಮುಂದಿನೂರಿಗೆ ಹೊರಡುವುದು. ಖರ್ಚಿಗೆ ಹಣ ಕೇಳುವಂತಿಲ್ಲ. ಅವರಾಗಿ ಒತ್ತಾಯಪಡಿಸಿದರೆ ಮುಂದಿನಊರಿಗೆ ಟಿಕೇಟು ತೆಗೆಸಿಕೊಡು ಎನ್ನುವುದು, ಇಷ್ಟು ಸರಳ. ತಮ್ಮ ಬಟ್ಟೆ ತಾವೇ ತೊಳೆದುಕೊಳ್ಳುವ ಸ್ವಾವಲಂಬಿ ಅವರು. ಅದ್ಭುತ ಜ್ಞಾಪಕಶಕ್ತಿ, ವಿಶಾಲ ಅಂತಃಕರಣ. ಒಮ್ಮೆ ಅವರ ಆತ್ಮೀಯ ತೆಕ್ಕೆಗೆ ಬಂದರೆ ಹೊರಬೀಳುವುದು ಕಠಿಣ. ಬಿಡುವಿಲ್ಲದ ರಾಜಕಾರಣದ ನಡುವೆಯೂ ಆತ್ಮೀಯರ ವೈಯಕ್ತಿಕ ಸಮಸ್ಯೆ ಪರಿಹಾರಕ್ಕೆ ತಿರುಗುವಂತವರು. ವ್ಯವಸ್ಥೆಯೊಂದಿಗೆ ರಾಜೀಯಂತೂ ಎಂದಿಗೂ ಸಾಧ್ಯವಿದ್ದಿಲ್ಲ. ಅವರ ನಿಷ್ಠುರತೆ ಮತ್ತು ಜಾತ್ಯಾತೀತತೆಯನ್ನು ಎತ್ತಿಹೇಳುವ ಎರಡು ಘಟನೆಗಳು ನನ್ನ ಸ್ಮರಣೆಯಲ್ಲಿವೆ:

ಒಂದು: ನನ್ನ ಗೆಳೆಯರಿಗೆ ಸಂಬಂಧಿಸಿದ್ದು. ಸ್ವಾತಂತ್ರ್ಯ ಹೋರಾಟದಲ್ಲಿ ನನ್ನ ಜೊತೆಗಿದ್ದ ಚಂದ್ರಯ್ಯ ಎಂಬ ನನ್ನ ಗೆಳೆಯರ ತಮ್ಮನಿಗೆ ಯಾವುದೋ ಕೆಲಸಕ್ಕೆ ಸಂಬಂಧಿಸಿ ಸಚಿವರ ಶಿಫಾರಸ್ಸು ಬೇಕಿತ್ತು. ನಾನು ಶಾಸಕನಾಗಿರುವ ಹೊತ್ತಿಗೆ ಗೌಡರು ವಿರೋಧಪಕ್ಷದ ನಾಯಾಕರಾಗಿದ್ದರು. ಅವರನ್ನು ಹೋಗಿ ಕಂಡೆ. ಅವರು, ಸೌಜನ್ಯದ ನಡುವೆಯೂ ಹೇಳಿದ ಆ ನಿಷ್ಠುರ ಮಾತು: ‘ನಾಗಪ್ಪನವರೆ ನಾನು ಏನು ಎನ್ನುವುದು ನಿಮಗೆ ಗೊತ್ತಿದೆ. ಫೋನ್ ಮಾಡಿದರೆ ಈ ಕ್ಷಣ ಕೆಲಸ ಆಗುತ್ತದೆ. ಆದರೆ ನಮ್ಮ ನೈತಕತೆ? ನೀವು ಹೂಂ ಅಂದರೆ ಮಂತ್ರಿಗಳೊಂದಿಗೆ ಮಾತಾಡುತ್ತೇನೆ’ ಅಂದರು. ನಾನು ಬೇಡವೆಂದು ಬಂದೆ.

ಇನ್ನೊಂದು: ೧೯೭೧ರಲ್ಲಿ ನಡೆದದ್ದು, ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದ ೪೮ ಗಂಟೆಗಳ ಅವಧಿಯಲ್ಲಿ ಶ್ರೀವೀರೇಂದ್ರ ಪಾಟೀಲರೊಡನಿದ್ದವರು ಒಡೆದುಹೋದ ಕಾಂಗ್ರೆಸ್‌ನ ಇನ್ನೊಂದು ಪಾಳಯದಲ್ಲಿ (ಇಂದಿರಾ ಅವರ ಕಾಂಗ್ರೆಸ್ ಆರ್) ದೇವರಾಜ ಅರಸರೊಂದಿಗೆ ನಿಂತಿದ್ದರು. ಬಹುಮತ ಕಳೆದುಕೊಂಡ ಕ್ಷಣದಲ್ಲೇ ಮುಖ್ಯಮಂತ್ರಿ ಪಾಟೀಲರು ಆಗಿನ ರಾಜ್ಯಪಾಲ ಧರ್ಮವೀರ ಅವರಿಗೆ ತಮ್ಮ ರಾಜೀನಾಮೆ ಒಪ್ಪಿಸಿದರು. ನಂತರ ರಾಷ್ಟಪತಿ ಆಳ್ವಿಕೆ ಜಾರಿಗೆ ಬಂತು. ಈ ನಡುವೆ ಸಂಯುಕ್ತ ಸರ್ಕಾರದ ರಚನೆಯ ಪ್ರಯತ್ನವೊಂದು ನಡೆಯಿತು.

ಗೋಪಾಲಗೌಡರು ವಿರೋಧಪಕ್ಷದಲ್ಲಿ ನಮ್ಮ ಪಕ್ಷದ ನಾಯಕರಾಗಿದ್ದರು ಆಗ. ಗೌಡರ ಸಮಾಜವಾದಿ ಪಕ್ಷದಿಂದ ಆರು ಜನ ಆರಿಸಿಹೋಗಿದ್ದೆವು. ರಾಯಚೂರಿನಿಂದ ನಾನು, ಮೈಸೂರಿನಿಂದ ಅಜೀಜ್‌ಸೇಟ್, ಶಿವಮೊಗ್ಗದಿಂದ ಗೋಪಾಲಗೌಡರು (ತೀರ್ಥಹಳ್ಳಿ), ಬಂಗಾರಪ್ಪನವರು (ಸೊರಬ), ಬಸವಣ್ಣೆಪ್ಪ (ಶಿಕಾರಿಪುರ), ಎನ್.ಜಿ. ಹಾಲಪ್ಪ (ಚನ್ನಗಿರಿ).

ಗೌಡರು ನಮ್ಮ ಪಕ್ಷದ ನಾಯಕರಾಗಿದ್ದಾಗ ಮೈಸೂರಿನ ಸಾಹುಕಾರ ಚನ್ನಯ್ಯ ಎಂಬುವರು ಕಾಂಗ್ರೆಸ್‌ನಿಂದ ಸಿಡಿದು ಜನತಾ ಹೆಸರಿನ ಪಕ್ಷ ಕಟ್ಟಿ ೨೦ ಸೀಟುಗಳನ್ನು ಶಾಸನ ಸಭೆಗೆ ಆರಿಸಿ ತಂದಿದ್ದರು. ಪ್ರಜಾ ಸೋಶಿಯಲಿಸ್ಟ್ ಪಕ್ಷ ಎಸ್. ಶಿವಪ್ಪನವರ ನಾಯಕತ್ವದಲ್ಲಿ ಸುಮಾರು ೧೮ ಸೀಟುಗಳನ್ನು ಹೊಂದಿತ್ತು. ಎಲ್ಲರ ಜೊತೆಗೆ ಪಕ್ಷೇತರರ ಬೆಂಬಲವೂ ನಮಗಿದ್ದುದರಿಂದ ಸಹಜವಾಗಿ ಸಂಯುಕ್ತ ಸರ್ಕಾರ ರಚನೆಗೆ ನಾವು ಮನಸ್ಸು ಮಾಡಿದೆವು. ಗೋಪಾಲಗೌಡರು ಮುಖ್ಯಮಂತ್ರಿಗಳಾಗುವುದಾದರೆ ನಾವು ಸಿದ್ದ ಎಂದು ಎಡಪಂಥೀಯ ಎಲ್ಲ ಸ್ನೇಹಿತರೊಂದಿಗೆ ನಾನು ವಿಚಾರ ವಿನಿಮಯ ಆರಂಭಿಸಿದ್ದೆ. ಕಾರಣಾಂತರದಿಂದ ಊರಿಗೆ ಬಂದವನು ಅವಸರವಾಗಿ ನಾನು ಬೆಂಗಳೂರು ತಲುಪುವುದರೊಳಗೇ ವಿಚಾರಗಳು ಬದಲಾಗಿ ಹೋಗಿದ್ದವು. ಗೌಡರು ನನ್ನನ್ನು ಕರೆದು, “ವೀರೇಂದ್ರ ಪಾಟೀಲರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿ, ನಾವೆಲ್ಲ ಬೆಂಬಲಿಸೋಣ’’ ಎಂದರು. ನಾನು ಇದನ್ನು ವಿರೋಧಿಸಿದೆ. “ಎಲ್ಲರ ಬೆಂಬಲ ಇರುವಾಗ ನೀವ್ಯಾಕೆ ನಿರಾಕರಿಸುತ್ತಿದ್ದೀರಿ?’’ ಎಂದೆ. ಅವರದೊಂದೇ ಮಾತು “ನಿಮಗೆ ತಿಳಿಯುವುದಿಲ್ಲ, ನಾನು ಮುಖ್ಯಮಂತ್ರಿಯಾದರೆ ಜನಕ್ಕೆ ಒಳ್ಳೇದು ಮಾಡೋದು ಸಾಧ್ಯವಾಗುವುದಿಲ್ಲ.’’

ರಾಮಕೃಷ್ಣ ಹೆಗಡೆಯವರು ತಮ್ಮ ಮನೆಯಲ್ಲಿ ಸಭೆ ಕರೆದರು. ಅವರೊಂದಿಗೆ ಕೆ.ವಿ. ಶಂಕರೇಗೌಡರು ಇದ್ದರು. ಗೋಪಾಲಗೌಡರೊಂದಿಗೆ ನಾವು ಕೆಲವರು ಭಾಗವಹಿಸಿದ್ದೆವು. ಗೋಪಾಲಗೌಡರು ತಮ್ಮ ಸರದಿ ಬಂದಾಗ ಎದ್ದುನಿಂತು, ‘ವೀರೇಂದ್ರ ಪಾಟೀಲ ಮುಖ್ಯಮಂತ್ರಿಗಳಾಗಲಿ, ನಮ್ಮ ಪಕ್ಷದಿಂದ ನಾಗಪ್ಪನವರು ಉಪಮುಖ್ಯಮಂತ್ರಿಗಳಾಗಲಿ’ ಎಂದು ತಮ್ಮ ಅಭಿಪ್ರಾಯ ಹೇಳಿದರು. ನನ್ನ ಹೆಸರು, ಹೀಗೆ ಪ್ರಸ್ತಾಪವಾಗುತ್ತದೆ ಎಂದು ನಾನೆಣಿಸಿರಲಿಲ್ಲ. ಹೆಗಡೆ ಮತ್ತು ಶಂಕರೇಗೌಡರು ಇದನ್ನು ಒಪ್ಪಲಿಲ್ಲ. ವೀರೇಂದ್ರ ಪಾಟೀಲ ಮತ್ತು ನಾಗಪ್ಪ ಇಬ್ಬರೂ ಲಿಂಗಾಯಿತರು ಮತ್ತು ಇಬ್ಬರೂ ಹೈದರಾಬಾದ್ ಕರ್ನಾಟಕ ಪ್ರದೇಶದವರು ಎಂದು ಅವರು ಜಾತಿ, ಪ್ರಾಂತದ ನೆವ ಮುಂದೆ ಮಾಡಿದಾಗ ಸಿಟ್ಟಿಗೆದ್ದ ಗೋಪಾಲಗೌಡರು “ಪಾಟೀಲ್ ಲಿಂಗಾಯಿತರೆನ್ನಿ, ಒಪ್ಪುತ್ತೇನೆ. ಆದರೆ ನಾಗಪ್ಪನವರು ಜಾತಿವಾದಿಗಳಲ್ಲ. ಹಾಗಿದ್ದಿದ್ದರೆ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಬೇಕೆನ್ನುವ ನನ್ನ ವಾದವನ್ನು ಅವರು ವಿರೋಧಿಸುತ್ತಿರಲಿಲ್ಲ’’ ಎನ್ನುತ್ತ, “ನಿಮ್ಮ ಜಾತಿ ರಾಜಕಾರಣ ನನಗೆ ಬೇಡ’’ ಎಂದು ಸಭೆ ತೊರೆದು ಹೊರಟುಹೋದರು. ಮುಂದೆ ಸರ್ಕಾರ ಬಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತು.

ಈ ಪ್ರಸಂಗ ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಗೋಪಾಲಗೌಡರ ವ್ಯಕ್ತಿತ್ವದ ಘನತೆ ಏನು ಎಂಬುದಕ್ಕೆ ಈ ಘಟನೆ ಉಜ್ವಲ ಉದಾಹರಣೆಯಾಗಬಲ್ಲುದು. ಅಧಿಕಾರಕ್ಕಾಗಿ ತತ್ವನಿಷ್ಠೆಯನ್ನೇ ಬಲಿಕೊಡುವು ಇಂದಿನ ಕಾಲದಲ್ಲಿ, ಅಧಿಕಾರ ಅರಸಿ ಬಂದಿದ್ದರೂ ವಿನಮ್ರವಾಗಿ ಆಚೆ ಸರಿಯುವ ಗೌಡರ ಆ ಧೀಮಂತಿಕೆ ಇವತ್ತು ಎಷ್ಟು ರಾಜಕಾರಣಿಗಳಲ್ಲಿದೆ?

ನನ್ನ ಪುಣ್ಯ, ಅಂತಹ ವಿಶಾಲ ಮನೋಭಾವದ, ನಾಡಿನ ಒಳ್ಳೆಯದರ ಮುಂದೆ ಇನ್ನೇನನ್ನೂ ಲೆಕ್ಕಿಸದ ನಾಯಕ, ಮಾರ್ಗದರ್ಶಿ ನನಗೆ ಸಿಕ್ಕಿದ್ದರು. ಅವರ ಆತ್ಮೀಯತೆ ಅಂತಃಕರಣ ನನ್ನನ್ನು ಮೂಕನನ್ನಾಗಿಸಿತ್ತು. ಉದ್ದಕ್ಕೂ ನನ್ನನ್ನು ಹುರಿದುಂಬಿಸುತ್ತಲೇ ಬಂದರು. ವಿಶ್ವಾಸದಿಂದ ಏನೆಲ್ಲ ನನ್ನೊಂದಿಗೆ ಚಿಂತಿಸಿದರು. ಶಾಸಕನಾಗಿದ್ದ ಅವಧಿಯಲ್ಲಿ ನಾನು ಚಟುವಟಿಕೆಯಿಂದ ಇದ್ದಿದ್ದರೆ ಅದಕ್ಕೆ ಅವರೇ ಪ್ರೇರಣೆ ಎನ್ನಬೇಕು.

ಹಳೇ ಮೈಸೂರಿನ ಬಹುತೇಕ ಒಕ್ಕಲಿಗ ಮುಂದಾಳುಗಳು ಕರ್ನಾಟಕ ಏಕೀಕರಣವನ್ನು ವಿರೋಧಿಸಿದ ಸಂದರ್ಭದಲ್ಲಿ ಗೋಪಾಲಗೌಡರು ಶಾಸನಸಭೆಯ ಒಳ ಹೊರಗೆ ಏಕೀಕರಣದ ಮಹತ್ವವನ್ನು ವಿವರಿಸಿದರು. ೧೯೫೭ರ ಚುನಾವಣೆಯನ್ನು ಸೋತ ಸಂದರ್ಭದಲ್ಲಿ ನೇಪಥ್ಯಕ್ಕೆ ಸರಿಯದೆ ರೈತರ, ಕಾರ‍್ಮಿಕರ ಸಂಘಟನೆಗಳಿಗೆ ನಾಡಿನುದ್ದಗಲ ಸಂಚರಿಸಿದರು. ಅವರ ಕಾಲದಲ್ಲಿಯೇ ಅವರ ಹಲವು ಕನಸುಗಳು ನನಸಾಗಿವೆ. ನನಸಾಗದ ಅವರ ಹೋರಾಟವೆಂದರೆ ಶಿಕ್ಷಣ, ಆಡಳಿತ, ಶಾಸಕಾಂಗ-ನ್ಯಾಯಾಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡವೇ ಮಾಧ್ಯಮವಾಗಬೇಕು ಎಂಬುದು. ಇದರ ಜವಾಬ್ದಾರಿ ಸರ್ಕಾರ ಮತ್ತು ಜನತೆಯ ಮೇಲಿದೆ.

ತತ್ವನಿಷ್ಠ ರಾಜಕಾರಣ, ಸಮಾಜವಾದ, ಕನ್ನಡದ ಸಾರ್ವಭೌಮತ್ವ, ಭಾಷೆ-ಸಾಹಿತ್ಯಗಳ ಅಭಿವೃದ್ಧಿ-ಇವೇ ಮೊದಲಾಗಿ ಅವಿಶ್ರಾಂತ ದುಡಿದ ಶ್ರೀ ಗೋಪಾಲಗೌಡರು ತಮ್ಮ ೪೯ನೆಯ ವಯಸ್ಸಿನಲ್ಲಿ ಯಾವ ಆಸ್ತಿಯನ್ನೂ ಮಾಡದೆ, ಯಾರ ಮರ್ಜಿಯಲ್ಲೂ ಬಾಳದೆ, ಸರ್ವಸಮಾನತೆಯ ಆ ಹೋರಾಟವನ್ನೇ ನೆನೆಯುತ್ತ ಬಾಳು ಮುಗಿಸಿದರು. ಎಂದಿಗೂ ಅವರು ನಮಗೆ ಆದರ್ಶ ಎಂಬ ಮಾತು ಕ್ಲೀಷೆಯಾದರೂ ನಿಗಿನಿಗಿ ಸತ್ಯ.